Sunday, 31 January 2016

ಚಾಂದಿನಿ

ಚಾಂದಿನಿ. (Small story )

ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಅಲ್ಲೇ ಇರುವ ಒಂದು ದೊಡ್ಡ ಮರದ ಕೆಳಗೆ ನಿಂತಿದ್ದೆ. ಸ್ವಲ್ಪ ದೂರದಲ್ಲಿಯೇ ಚಾಂದಿನಿಯ ಮನೆ ಕಾಣುತ್ತಿತ್ತು.
"ಛೇ ಇನ್ನೆರಡು ನಿಮಿಷವಾದರೂ ಮಳೆ ತಡವಾಗಿ ಬಂದಿದ್ದರೆ ಇಷ್ಟರಲ್ಲಿಯೇ ಅವಳ ಮನೆ ಸೇರಿ ಬಿಡುತ್ತಿದ್ದೆ."
ಎಂದು ಮನದಲ್ಲೇ ಅತೃಪ್ತಿಯಿಂದ ಹೇಳಿಕೊಂಡೆ.

ಚಾಂದಿನಿಯನ್ನು ನೋಡದೇ ಆಗಲೇ ಒಂದು ವರ್ಷ ಆಗಿ ಹೋಗಿತ್ತು.
" ಧಡ್...ಧಡಲ್....."
ಆಕಾಶದಲ್ಲಿ ಗುಡುಗಿನ ಸದ್ದು ಮೊಳಗಿತು. ಆ ಶಬ್ಧಕ್ಕೆ ನನ್ನ ಎದೆಯೊಮ್ಮೆ ಝಲ್ಲೆಂದಿತು...
ಹೌದು ....
ಚಾಂದಿನಿ ಮೊದಲ ಸಲ ಸಿಕ್ಕಾಗಲೂ ಇದೇ ರೀತಿಯ ಮಳೆಯಿತ್ತು..!! ಅಂದು ಆ ಮಿಂಚಿನ ಬೆಳಕಲ್ಲಿ ಅವಳ ಮುಖ ಇನ್ನಷ್ಟು ಮುದ್ದಾಗಿ ಕಾಣುತ್ತಿತ್ತು. ನಾನು ಈ ಮಳೆಯನ್ನು ನೋಡುತ್ತಲೇ ನನಗೆ ಹಿಂದಿನ ಘಟನೆಗಳು ನೆನಪಿಗೆ ಬರಲಾರಂಬಿಸಿದವು......
ಕಾಲೇಜಿನ ದಿನಗಳವು...ನನಗೆ ಬಿ,ಎಡ್, ಸೀಟು ಸಿಕ್ಕಿದ್ದು ಚಿತ್ರದುರ್ಗದಲ್ಲಿ.ಕಾಲೇಜಿನಲ್ಲಿ ಎಲ್ಲರೂ ಹೊಸಬರೇ, ನನಗೆ ಮೊದಲ ದಿನ ಪರಿಚಯವಾಗಿದ್ದು ಲೋಕೇಶ್..ಈತ ಗುಲ್ಬರ್ಗದವನು.ಅಸಾಮಿ ಸ್ವಲ್ಪ ಐಲು-ಬೈಲು.ಹುಡುಗಿಯರನ್ನು ಕಂಡರೆ ಜೊಲ್ಲು ಸುರಿಸುತ್ತಾನೆ ಎಂಬ ವಿಷಯ ಒಂದೆರಡು ದಿನದ ಗೆಳೆತನದಲ್ಲೇ ತಿಳಿಯಿತು.
ಒಂದು ದಿನ ನಾನು ಮತ್ತು ಲೋಕಿ ಸಿಟಿಯಿಂದ ಹಾಸ್ಟಲ್ ಕಡೆಗೆ ಮರಳುವಾಗ ದಾರಿಯಲ್ಲಿ ಮಳೆಗೆ ಸಿಕ್ಕಿಕೊಂಡೆವು.ಮಳೆ ಜೋರಾಯಿತು.ಪೆಟ್ರೊಲ್ ಬಂಕ್ ನ ಪಕ್ಕದಲ್ಲಿನ ಮರದ ಕೆಳಗೆ ಓಡಿದೆವು. ಅಲ್ಲಿ ಆಗಲೇ ಕೆಲವರು ಮಳೆಯಲಿ ಅರ್ದಂರ್ಬರ್ದ ತೋಯ್ದು ಮರದ ಕೆಳಗೆ ನಿಂತಿದ್ದರು. ಲೋಕಿ ಕಣ್ ಸನ್ನೆ ಮಾಡಿ ತನ್ನ ಬಲಗಡೆ ನಿಂತಿದ್ದ ಹುಡುಗಿಯನ್ನು ತೋರಿಸಿ
"ಅವಳು ಚಾಂದಿನಿ ಅಂತ ...ನಮ್ ಕಾಲೇಜೇ ಕಣೋ.. ಮಲೆನಾಡಿನವಳು ಶಿವಮೊಗ್ಗ ಹತ್ತಿರದ ಹಳ್ಳಿಯಿಂದ ಬಂದಿದ್ದಾಳೆ"
ಎಂದು ನನ್ನ ಕಿವಿಯ ಹತ್ತಿರ ಬಂದು ಹೇಳಿದ.
ನೋಡಲು ಸುಂದರವಾಗಿದ್ದಳು. ನಾನು ಕಾಲೇಜ್ ಸೇರಿ ಒಂದು ತಿಂಗಳಾಗಿದ್ದರೂ ಇವಳು ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ಕೈಯಲ್ಲಿ ಚಾರ್ಟ್ ಪೇಪರ್ ನಲ್ಲಿ ಡ್ರಾಯಿಂಗ್ ಮಾಡಿದ ಟೀಚಿಂಗ್ ಏಯ್ಡ್ ನ ಚಿತ್ರಗಳನ್ನು ಸುರುಳಿಯಾಗಿ ಸುತ್ತಿ ಹಿಡಿದುಕೊಂಡಿದ್ದಳು. ಮಳೆಯಲ್ಲಿ ತೋಯ್ದು ಹೋಗದಂತೆ ತನ್ನ ವೇಲ್ ನಿಂದ ಮುಚ್ಚಿಕೊಂಡಿದ್ದಳು. ಮಳೆ ಜಾಸ್ತಿ ಯಾಗುತ್ತಲೇ ಇತ್ತು. ಎಡಗೈಯಲ್ಲಿ ಹಿಡಿದಿದ್ದ ಕೆಲವು ಪುಸ್ತಕಗಳನ್ನು ಈಗ ತಾನೆ ಖರೀದಿಸಿದಂತಿತ್ತು. ಮಳೆಯಲ್ಲಿ ತೋಯದಂತೆ ರಕ್ಷಿಸಲು ಚಡಪಡಿಸುತ್ತಿದ್ದಳು.
"ಪ್ಲೀಸ್..ಈ ಬ್ಯಾಗ್ ತಗೋಳಿ, ನಾನು ನಿಮ್ಮ ಕಾಲೇಜ್ ನವನೇ..ನಾಳೆ ಕಾಲೇಜ್ ಗೆ ಬರುವಾಗ ತಂದುಕೊಡಿ."
ನನ್ನ ಹೆಗಲ ಮೇಲಿದ್ದ ಬ್ಯಾಗನ್ನು ಅವಳಿಗೆ ಕೊಟ್ಟು ಹೇಳಿದೆ. ನನ್ನ ಬ್ಯಾಗ್ ಪಡೆಯದೇ ಅವಳಿಗೆ ಬೇರೆ ವಿಧಿಯಿರಲಿಲ್ಲ.
"ಥ್ಯಾಂಕ್ಸ್.... ನಿಮ್ಮ ಹೆಸರು ಪ್ರಕಾಶ್ ಅಲ್ವಾ....?"
ಎಂದಳು
ನನಗೆ ಆಶ್ಚರ್ಯವಾಯಿತು
"ಹೌದು"
ಎಂದು ಸುಮ್ಮನಾದೆ
ನನಗಿಂತ ಮೊದಲೇ ಅವಳು ನನ್ನನ್ನು ಕಾಲೇಜಿನಲ್ಲಿ ನೋಡಿದ್ದಳು ಎಂದು ಕಾಣುತ್ತದೆ.
ಅದು ನಮ್ಮಿಬ್ಬರ ಮೊದಲ ಸ್ನೇಹದ ಪರಿಚಯ....ಆಗ ಲೋಕಿ ಸುಮ್ಮನೆ ತೆಪ್ಪಗೆ ನಿಂತಿದ್ದ.....!!!!
ಮುಂದೆ ಟೀಚಿಂಗ್ ಪ್ರಾಕ್ಟಿಸ್ ಅಂತ ಶಾಲೆಯೊಂದಕ್ಕೆ ಕಳುಹಿಸಲು ಹನ್ನೆರಡು-ಹನ್ನೆರಡು ಪ್ರಶಿಕ್ಷಣಾರ್ಥಿಗಳ ತಂಡವನ್ನು ರಚಿಸಿದ್ದರು. ನಾನಿರುವ ತಂಡದಲ್ಲಿ ಚಾಂದಿನಿ ಸಹ ಇದ್ದಳು.ನಮ್ಮ ಸ್ನೇಹ ಗಾಡವಾಗಿ ಬೆಳೆದಿದ್ದು ಇಲ್ಲಿಯೇ....
ಒಮ್ಮೆ ಲೋಕಿ ಚಾಂದಿನಿಯನ್ನು ಮಾತನಾಡಿಸಲು ಹೋಗಿ ಅವಮಾನಗೊಂಡಿದ್ದ.ಅವಳು ಲೋಕನೊಡನೆ ಮಾತನಾಡಿಸಲು ಸ್ವಲ್ಪವೂ ಆಸಕ್ತಿ ತೋರಲಿಲ್ಲ. ಲೋಕಿ ಆ ಅವಮಾನದ ಸಿಟ್ಟನ್ನು ನನ್ನ ಮೇಲೆ ತೋರಿಸಲಾರಂಬಿಸಿದನು. ನನ್ನ ಮತ್ತು ಚಾಂದಿನಿಯ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ. ಈ ವಿಷಯ ಚಾಂದಿನಿವರೆಗೂ ಸುದ್ಧಿಯಾಗಿ ಹೋಯಿತು. ಲೋಕಿ ಮತ್ತು ನನ್ನ ಸ್ನೇಹ ಅಂದೇ ಕೊನೆಯಾಯಿತು. ಈ ಘಟನೆಯಿಂದ ನನಗೆ ಅತೀವ ನೋವಾಯಿತು. ಆಗ ಚಾಂದಿನಿ ನನ್ನ ಪರವಾಗಿ ನಿಂತಿದ್ದಳು.
"ಯಾರೊಡನೆ ಪ್ರೀತಿ ಮಾಡ್ಬೇಕು ಅಂತ ನನಗೆ ಚನ್ನಾಗಿ ಗೊತ್ತಿದೆ.. ನಮ್ಮ ಬಗ್ಗೆ ಏನಾದರೂ ಮಾತನಾಡಿದರೆ ನಾನು ಕಂಪ್ಲೇಂಟ್ ಮಾಡ್ಬೇಕಾಗುತ್ತೆ,...ಹುಷಾರ್...!!!"
ಎಂದು ಲೋಕಿಯನ್ನು ಚಾಂದಿನಿ ಸರಿಯಾಗಿ ಕ್ಲಾಸ್ ತೆಗೆದು ಕೊಂಡಿದ್ದಳು...
ಲೋಕಿ ಚಾಂದಿನಿಯನ್ನು ಪ್ರೀತಿಸಲು ನಾನಾ ಕಸರತ್ತುಗಳನ್ನು ನಡೆಸಿದ್ದ. ಅವಳನ್ನು ಓಲೈಸಿಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು.ಕೊನೆಗೆ ಲೋಕಿಯ ಈ ಸಿಟ್ಟು ಚಾಂದಿನಿಯ ಸ್ನೇಹ ಗಳಿಸಿದ್ದ ನನ್ನ ಮೇಲೆ ತಿರುಗಿತ್ತು.
ಅನಾವಶ್ಯಕವಾದ ಈ ಜಗಳಗಳು ನನಗೆ ಬೇಡವಾಗಿ ಹೋಗಿತ್ತು. ಸ್ವಲ್ಪ ದಿನ ಚಾಂದಿನಿ ಗೆಳೆತನವೂ ಬೇಡ ವೆನಿಸಿತು.ಯಾರೊಡನೆ ಮಾತನಾಡದೇ ಓದಿನ ಕಡೆ ಗಮನ ಹರಿಸಿದ್ದೆ.ಚಾಂದಿನಿ ಒಂದೆರಡು ಬಾರಿ ಮಾತನಾಡಲು ಬಂದಾಗ ನಾನೇ ನಿರಾಕರಿಸಿದೆ....
ಕಾಲೇಜಿನ ಪರೀಕ್ಷೆಗಳು ಮುಗಿದು ನಾವು ನಮ್ಮ ನಮ್ಮ ಮನೆಗೆ ಹೊರಟಿದ್ದೆವು. ಎಲ್ಲರ ಆಟೋಗ್ರಾಫ್ ಪಡೆದಿದ್ದೆ. ಕೊನೆಗೆ ಚಾಂದಿನಿಯದ್ದೂ ಪಡೆದೆ.ಅವಳಿಗೆ ನನ್ನ ಮೇಲೆ ಕೋಪವಿತ್ತು. ಕಾಲೇಜಿನ ನೆನಪುಗಳೊಡನೆ ಮನೆ ಮನೆಗೆ ಹಿಂದಿರುವಾಗ ಎಲ್ಲರ ಹೃದಯದಲ್ಲಿ ನೋವು ತುಂಬಿ ಕೊಂಡಿತ್ತು. ಚಾಂದಿನಿ ಕಣ್ಣುಗಳು ಆ ದಿನ ತುಂಬಿ ಬಂದಿದ್ದವು...
"ಐ ಆಮ್ ಸಾರಿ...."
ಎಂದು ಹೇಳಿದೆ
ಅವಳ ತುಟಿ ಕಂಪಿಸುತ್ತಿತ್ತು. ನಾಲಿಗೆ ಮಾತನಾಡಲು ಸಹಕರಿಸುತ್ತಿರಲಿಲ್ಲ.....
ಕಣ್ಣುಗಳು ಏನೋ ಹೇಳ ಹೊರಟಿದ್ದವು...ಅವಳ ಕಣ್ಣ ಭಾಷೆಯನ್ನು ನಾನು ಆ ದಿನ ಸ್ಪಷ್ಟವಾಗಿ ಓದಿದ್ದೆ.........
ಹಿಂದಿನ ಈ ಘಟನೆ ಹಾಗೆ ಕಣ್ಣ ಮುಂದೆ ಹಾದು ಹೋದಂತಾಯಿತು.ಅಷ್ಟರಲ್ಲಿ ಮಳೆ ಕಡಿಮೆಯಾಗಿತ್ತು.ಚಾಂದಿನಿಯ ಜೊತೆ ಮಾತನಾಡುವ ತವಕ ಹೆಚ್ಚಾಯಿತು. ಅವಳ ಮನೆಯತ್ತ ಹೆಜ್ಜೆ ಹಾಕಿದೆ. ಚಾಂದಿನಿ ಕೊಟ್ಟ ಮನೆಯ ವಿಳಾಸ ಸರಿಯಾಗಿತ್ತು. ಕಾಲಿಂಗ್ ಬೆಲ್ ಒತ್ತಿದ ಕೂಡಲೇ ಸುಮಾರು ಐವತ್ತು ವರ್ಷದ ಹೆಂಗಸು ಬಾಗಿಲು ತೆರೆದಳು
" ಚಾಂದಿನಿ ಮನೆ ಇದೆನಾ..ನಾನು ಅವಳ ಕಾಲೇಜ್ ಸಹಪಾಠಿ..ಇಲ್ಲೇ ಭದ್ರಾವತಿಯಲ್ಲಿ ನಮ್ಮಣ್ಣನ ಮದುವೆ ಇದೆ. ಕರೆಯೋಣ ಅಂತ ಬಂದೆ"
"ಹೌದು ಒಳಗೆ ಬನ್ನಿ "
ಆ ಹೆಂಗಸು ಒಳಗೆ ಕೂರಿಸಿದಳು
" ಕಾಫಿ...??? ಟೀ...? "
ಎಂದು ಕೇಳಿದಳು
ನಾನು ಏನೂ ಬೇಡವೆಂದೆ...
ಆದರೂ ಅಡಿಗೆ ಮನೆಯತ್ತ ಹೋದಳು. ನನ್ನ ಕಣ್ಣುಗಳು ಚಾಂದಿನಿಯನ್ನು ಹುಡುಕಿದವು. ಎಲ್ಲಿಯೂ ಕಾಣಲಿಲ್ಲ.
ಅವಳನ್ನು ಕಾಣಲು ಮನಸು ಹಾತೊರೆಯುತ್ತಿತ್ತು.
ಮತ್ತೆ ಸುತ್ತಲೂ ಹುಡುಕಿದೆ. ತಕ್ಷಣ ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೊವೊಂದು ನನ್ನ ಗಮನ ಸೆಳೆಯಿತು. ಅದು ಚಾಂದಿನಿಯದೇ, ಆದರೆ ಹೂವಿನ ಹಾರದಿಂದ ಶೃಂಗರಿಸಲಾಗಿತ್ತು.ಒಂದು ಕ್ಷಣ ಗರ ಬಡಿದವನಂತೆ ಸ್ಥಬ್ಧನಾಗಿಹೋದೆ. ಅಷ್ಟರಲ್ಲಿ ಆ ಹೆಂಗಸು,
" ಶಿವಮೊಗ್ಗದ ಶಾಲೆಯೊಂದಕ್ಕೆ.ಟೇಚರ್ ಆಗಿ ಕೆಲಸಕ್ಕೆ ಹೋಗುವಾಗ ಆರು ತಿಂಗಳ ಹಿಂದೆ ಆಕ್ಸಿಡೆಂಟ್ನಲ್ಲಿ ಕೊನೆಯುಸಿರೆಳೆದಳು"
ಹಾಗೆ ಹೇಳಿ ಆ ಹೆಂಗಸು ಬಿಕ್ಕಿ ಬಿಕ್ಕಿ ಅತ್ತಳು.
ನನ್ನ ಕಣ್ಣುಗಳು ತುಂಬಿ ಬಂದವು.ಆಕೆ ಕೊಟ್ಟ ಚಹದ ಕಪ್ಪನ್ನು ಅಲ್ಲೇ ಅನಾಥವಾಗಿ ಬಿಟ್ಟು ಹೊರಬಂದೆ
"ದಢ್ ....ದಢಾಲ್...."
ಗುಡುಗಿನ ಸದ್ದು ಮತ್ತೊಮ್ಮೆ ನನ್ನ ಎದೆ ನಡುಗಿಸಿತು...
ಮಳೆಯಲ್ಲಿ ನೆನೆಯುತ್ತಿದ್ದರೂ ಅದರ ಪರಿವೆ ಇಲ್ಲದಂತೆ ಹೆಜ್ಜೆ ಹಾಕುತ್ತಿದ್ದೆ.........


.-ಪ್ರಕಾಶ್ ಎನ್ ಜಿಂಗಾಡೆ

Friday, 29 January 2016

ಬದನೆಕಾಯಿ ಪುರಾಣ

ಬದನೆಕಾಯಿ ಪುರಾಣ.ನಮ್ಮೂರು ಬಸವಾಪಟ್ಟಣದಲ್ಲಿ ಹೊರಬೀಡನ್ನು ನಾವು ಜಾನಪದ ಹಬ್ಬದಂತೆ ಆಚರಿಸುತ್ತೇವೆ. ಆ ದಿನ ನಾವು ದುರ್ಗಮ್ಮ ದೇವಿಯ ಬೆಟ್ಟದಡಿ ಬಿಡಾರಗಳನ್ನು ಹಾಕಿ ಒಂದು ದಿನ ವಾಸಮಾಡುತ್ತೇವೆ. ರಾತ್ರಿಯಾದ ಕೂಡಲೇ ಬೆಟ್ಟದ ಮೇಲೆ ದೀಪ ಹಚ್ಚಿ ಬರುತ್ತೇವೆ. ಆ ದಿನ ಎಲ್ಲರ ಬಿಡಾರದಲ್ಲೂ ಮೂಲೆ ಮೂಲೆಗಳಿಂದ ಬೀಗರ ದಂಡು ಬಂದು ಸೇರಿರುತ್ತದೆ. ಮಧ್ಯಾಹ್ನ ಊಟದ ಸಮಯ ಬಂತೆಂದರೆ ಸಾಕು ನನಗೆ ಏನೋ ಒಂದು ರೀತಿಯ ಮಜ ಸಿಗುತ್ತಿತ್ತು.....!! ಬಗೆ ಬಗೆಯ ಭಕ್ಷ್ಯ ಭೋಜನಗಳು. ರೊಟ್ಟಿ ಹಲವು ವಿಧದ ಪಲ್ಯಗಳು ಇರುತ್ತಿದ್ದವು. ಅದರಲ್ಲಿ ಪ್ರಮುಖ ಆಕರ್ಷಣೆ ಎಂದರೆ ಬದನೆಕಾಯಿ ಪಲ್ಯ. ಬದನೆಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ..? ಉತ್ತರ ಕರ್ನಾಟಕದ ಬದನೆಕಾಯಿ ಎಣ್ಣೆಗಾಯ ಪಲ್ಯ ಮತ್ತು ರೊಟ್ಟಿಯ ರುಚಿ ಇರುವಂತೆ ನಮ್ಮ ಹೊರಬೀಡಿನಲ್ಲಿಯೂ ಇದರ ರುಚಿ ಇರುತ್ತದೆ. ಭದ್ರಾವತಿಯಿಂದ ಬಂದ ಕುಮಾರ್ ಮಾಮನಿಗಂತೂ ಬದನೆಕಾಯಿ ಎಣ್ಣೆಗಾಯಿ ಪಲ್ಯ ಎಂದರೆ ಜೀವ. ಹೊರಬೀಡಿಗೆ ಬರುವ ಮುನ್ನವೇ ನನ್ನ ತಾಯಿಗೆ ಬದನೇಕಾಯಿ ಪಲ್ಯ ಮಾಡಲೇಬೇಕು ಎಂದು ಬೇಡಿಕೆ ಇಡುತ್ತಿದ್ದರು. ಈ ಹಬ್ಬದಲ್ಲಿ ಎಲ್ಲರ ಮನೆಯಲ್ಲೂ ಬದನೆಕಾಯಿ ಎಣ್ಣೆಗಾಯಿ ಪಲ್ಯ ಇದ್ದೇ ಇರುತ್ತೆ.ಊಟದ ಸಮಯದಲ್ಲಿ ನಾನು ಎಲ್ಲರ ಟೆಂಟ್ ಗೆ ನುಗ್ಗಿ ವಿಧ ವಿಧವಾದ ಬದನೆಕಾಯಿ ಪಲ್ಯಗಳ ರುಚಿ ಸವಿಯುತ್ತಿದ್ದೆ. ಒಂದೊಂದು ಬಿಡಾರದಲ್ಲಿ ಒಂದೊಂದು ತರಹದ ರುಚಿ...ಆಹಾ ಬದನೆಯದು ಏನು ಮಜಾ ಅಂತಿರಾ.... ಬಲ್ಲವನೇ ಬಲ್ಲ ಬೆಲ್ಲದ ರುಚಿಯ...!!! ಅಲ್ಲವೇ...?

ಹೀಗೆ ಬದನೆಕಾಯಿಯ ರುಚಿಯನ್ನು ಸವಿಯುವಾಗಲೇ ನನ್ನ ಸ್ನೇಹಿತ ವಾಗೀಶ ಹಿಂದಿನಿಂದ ಬಂದು ಹೆಗಲ ಮೇಲೆ ಕೈ ಹಾಕಿದ.
"ಎಲ್ಲೊ...ನನಗೆ ಬರಬೇಕಾದ ದುಡ್ಡು..? ಮೊನ್ನೆಯೇ ಕೊಡ್ತೀನಿ ಅಂದೆ... ಹೇಳೋದು ವೇದಾಂತ ತಿನ್ನೋದು ಬದನೆಕಾಯಿ"
ಅಂತ ಗಾದೆ ಮಾತನ್ನು ಹೋಲಿಸಿ ನನಗೆ ಬೈಯ್ದ.
ಅಂದರೆ ಇವನು ಹೇಳಿದ ಈ ಗಾದೆಯಲ್ಲಿ ಬದನೆಕಾಯಿ ಒಂದು ವ್ಯರ್ಥವಾದ ತರಕಾರಿ ಎಂದಾರ್ಥ. ಈ ಪಾಪಿ... ನಾನು ಬದನೆಕಾಯಿನ್ನು ತಿನ್ನುವಾಗಲೇ ಈ ಮಾತನ್ನು ಹೇಳಿದ್ದರಿಂದ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ನನಗೆ ಬೈಯ್ದರೆ ಸಹಿಸಿಕೊಳ್ಳ ಬಹುದಿತ್ತು. ಆದರೆ ನಾವು ತಿನ್ನುವ ತರಕಾರಿನ್ನು ಹೀಯಾಳಿಸಿ ಮಾತನಾಡುವುದು ಯಾವ ನ್ಯಾಯ ನೀವೆ ಹೇಳಿ...?
ನನ್ನ ಇನ್ನೊಬ್ಬ ಗೆಳೆಯ ಇದ್ದಾನೆ. ಸ್ವಲ್ಪ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡವನು. ಕುಡಿತ, ಬೀಡಿ, ಸಿಗರೇಟು ಇವನಿಗೆ ದಿನನಿತ್ಯದ ಹವ್ಯಾಸವಾಗಿತ್ತು. ಒಮ್ಮೆ ನಾನು ಇವನಿಗೆ ಈ ಅಬ್ಯಾಸಗಳನ್ನು ಬಿಟ್ಟುಬಿಡುವಂತೆ ಒಂದ್ಹತ್ತು ನಿಮಿಷ ಬುದ್ಧಿವಾದ ಹೇಳಿದೆ. ನನ್ನ ಮಾತಿಗೆ ಈ ಕುಡುಕ ಏನಂದ ಗೊತ್ತೆ...?
" ಲೇ.... ಪ್ರಕಾಶ , ಸಾಕು ಮುಚ್ಚೊ ...ನಿನ್ನ ಈ ಪುಸ್ತಕದ ಬದನೆಕಾಯಿ ಪುರಾಣವನ್ನು"
ಅಂದರೆ ಅವನ ಪ್ರಕಾರ ನಾನು ಹೇಳಿದ ಬುದ್ಧಿ ಮಾತುಗಳು ಪುಸ್ತಕದ ಬದನೆಯಾಯಿಯ ಹಾಗೆ ವ್ಯರ್ಥವಾದವುಗಳು....!!!
ಈ ರೀತಿ ಪ್ರತಿ ಸಾರಿ ಮಾತನಾಡುವಾಗಲೂ ಬದನೆಕಾಯಿಯನ್ನು ವ್ಯೆರ್ಥ ತರಕಾರಿ ಎಂಬಂತೆ.. ಉಪಯೋಗಕ್ಕೆ ಬಾರದು ಎಂಬಂತೆ ಬಳಸಿಕೊಳ್ಳುತ್ತೇವೆ. ಆದರೆ ಬದನೆಕಾಯಿ ನನಗೆ ಪ್ರಿಯವಾದುದರಿಂದ ಇಂತಹ ಮಾತುಗಳು ಸ್ವಲ್ಪವೂ ಹಿಡಿಸುತ್ತಿರಲಿಲ್ಲ.ಇಷ್ಟೇ ಅಲ್ಲದೇ ಮುಜಾಹಿದ್ ಎಂಬ ನನ್ನ ಒಬ್ಬ ಮುಸಲ್ಮಾನ ಗೆಳೆಯನೂ ಸಹ ಮಾತನಾಡುವಾಗ " ಚುಪ್ ..ಬೈಟ್ರೆ.. ಉಸ್ ಮೆ ಕ್ಯಾ ಹೈ ಬೈಂಗನ್" ಎಂದು ಹೇಳುತ್ತಿದ್ದ.
ಹೀಗೆ ಬದನೆಕಾಯಿಯನ್ನು ಎಲ್ಲರೂ ವ್ಯೆರ್ಥ ಎಂದು ಬಿಂಬಿಸುವುದರ ಐತಿಹ್ಯವಾದರೂ ಏನು...? ಅಥವಾ ಬದನೆಕಾಯಿಯನ್ನು ವಿರೋಧಿಸುವವರು ಈ ತರಹ ಗಾದೆಗಳನ್ನು ಸೃಷ್ಟಿಸಿ ಜನಗಳ ಮುಂದೆ ಹರಿಯ ಬಿಡುತ್ತಿದ್ದಾರೆಯೆ.....? ಬದನೆಕಾಯಿಯ ಮಾನ ಮರ್ಯಾದೆಯನ್ನು ಹರಾಜು ಹಾಕುವ ಇಂತಹ ಮೋಸದ ಜಾಲವನ್ನು ಭೇಧಿಸಲೇ ಬೇಕು... ಬದನೇಕಾಯಿಗೆ ಆಗುತ್ತಿರುವ ಈ ಅಪಮಾನವನ್ನು ತಡೆಯಲೇ ಬೇಕು ಎಂದು ತೀರ್ಮಾನಿಸಿಕೊಂಡೆ. ನನಗೆ ಬದನೆಕಾಯಿ ಪ್ರಿಯವಾಗಿದ್ದರಿಂದ . ಜನರು ಬದನೇಕಾಯಿಗೆ ಮಾಡುತ್ತಿದ್ದ ಈ ರೀತಿಯ ಅವಮಾನವನ್ನು ನನ್ನ ಅವಮಾನವೆಂದೇ ಭಾವಿಸಿದೆ...
ಅಂದೇ ಬದನೆಯ ಬಗ್ಗೆ ಇತಿಹಾಸವನ್ನೊಮ್ಮೆ ಕೆಣಕುತ್ತಾ ಹೋದೆ. ಬದನೆಯು ಹೆಚ್ಚಿನ ನಾರಿನಾಂಶವಿರುವ ತರಕಾರಿ. ಇದರಲ್ಲಿ ಪೊಟಾಷಿಯಂ, ಮ್ಯಾಂಗನೀ್ಸ್, ತಾಮ್ರ, ಮೆಗ್ನಿಷಿಯಂ, ವಿಟಮಿನ್ ಬಿ 1, 3, 6 ಪೋಲೇಟ್ ಹೇರಳವಾಗಿರತ್ತದೆ. ಇಷ್ಟೊಂದು ಅಂಶಗಳಿರುವ ಈ ಬದನೆ ಆರೋಗ್ಯಕ್ಕೂ ಒಳ್ಳೆಯದು. ಈಗ ಹೇಳಿ ಮಾತು ಮಾತಿಗೂ ನಾವು ಬದನೆಯನ್ನು ತೆಗಳುವುದು ತಪ್ಪಲ್ಲವೇ....?
ವರಹಮಿಹಿರನ 'ಬೃಹತ್ ಸಂಹಿತೆ' ಎಂಬ ಗ್ರಂಥದಲ್ಲಿ ಬದನೇಕಾಯಿ ಪ್ರಸ್ತಾಪ ಬರುತ್ತದೆ. ಸುರಪಾಲ ಎಂಬ ವಿದ್ವಾಂಸ ಬರೆದಿರುವ ಆಯುರ್ವೇದದ ಗ್ರಂಥದಲ್ಲಿ ಬದನೇಕಾಯಿಯನ್ನು ಔಷಧಿಯಾಗಿ ಬಳಸುವ ಕ್ರಮವನ್ನು ಹೇಳಿಕೊಂಡಿದ್ದಾನೆ. ಶ್ರೀವಾದಿರಾಜರು ತಾವು ಬರೆದ 'ತೀರ್ಥಪ್ರಬಂಧ' ಕೃತಿಯಲ್ಲಿ ಬದನೆಕಾಯಿ ವಿಷಯವನ್ನು ಕುರಿತು ಬರೆದಿದ್ದಾರೆ.
ಒಮ್ಮೆ ಶ್ರೀ ವಾದಿರಾಜರು ತೀರ್ಥಯಾತ್ರೆಯನ್ನು ಮಾಡುತ್ತಾ ನವದ್ವೀಪದ ಗಂಗಾಸಾಗರಕ್ಕೆ (ಇದು ಈಗಿನ ಪಶ್ಚಿಮ ಬಂಗಾಳದ ಪ್ರದೇಶ) ಬಂದರಂತೆ. ಅಲ್ಲಿ ಬೆಳೆದ ಬದನೆಯನ್ನು ಸವಿದು, ಸಂತೋಷಗೊಂಡು ಬದನೆಯ ಬೀಜವನ್ನು ಕರ್ನಾಟಕದ ಉಡುಪಿ ಕ್ಷೇತ್ರಕ್ಕೂ ತಂದರಂತೆ. ಅಲ್ಲಿ ವಾದಿರಾಜರು ಪ್ರತಿದಿನವೂ ಹಯಗ್ರೀವನಿಗೆ ಬದನೆಯನ್ನೇ ನೈವೇದ್ಯವಾಗಿಟ್ಟು ಪೂಜೆ ಮಾಡುತ್ತಿದ್ದರಂತೆ. ಬದನೆಯ ಶ್ರೇಷ್ಟತೆ ಬಗ್ಗೆ ಅನುಮಾನ ಪಟ್ಟ ಬ್ರಾಹ್ಮಣರು ಬದನೆಗಳಿಗೆ ವಿಷ ಹಾಕಿದರಂತೆ. ಆದರೂ ಸಹ ವಾದಿರಾಜರು ಬದನೆಯನ್ನು ನೈವೇದ್ಯಕ್ಕೆ ಬಳಸುವುದನ್ನು ಬಿಡಲಿಲ್ಲವಂತೆ. ಬದನೆ ನಾವು ಅಂದು ಕೊಂಡಂತೆ ವ್ಯೆರ್ಥ ತರಕಾರಿಯಾಗಿದ್ದರೆ ಶ್ರೀ ವಾದಿರಾಜರು ಇದನ್ನು ನೈವೇದ್ಯಕ್ಕೆ ಬಳಸುತ್ತಿದ್ದರೆ.. ? ವಾದಿರಾಜರಿಗೆ ತಿಳಿದ ಬದನೆಯ ಮಹತ್ವ ನಮಗೆ ಇನ್ನೂ ತಿಳಿಯಲಿಲ್ಲವೇಕೆ....? ಬದನೆಯನ್ನು ತಿಂದು ಖುಷಿಪಟ್ಟ ನಾವು ಮತ್ತೆ ಬದನೆಯನ್ನೇ ತೆಗಳುತ್ತೇವೆ. ಅಂದು ದೇವರಿಗೆ ಸಮರ್ಪಿಸುತ್ತಿದ್ದ ಈ ಬದನೆಯ ಬಗ್ಗೆ ಈ ರೀತಿಯ ಅಸಡ್ಡೆ ಮಾತುಗಳನ್ನು ಆಡಬಹುದೇ...? ನಮ್ಮಂತಹ ಬದನೆ ಪ್ರಿಯರಿಗೆ ಈ ವಿಷಯ ಎಷ್ಟೊಂದು ನೋವು ಕೊಡುತ್ತದೆ ಎಂದು ಯಾರಾದರೂ ಯೋಚಿಸಿದ್ದಿರಾ.....!!??
ಆಮೇಲೆ ವಾದಿರಾಜರು ಆ ಬದನೆಯ ಮಹತ್ವವನ್ನು ಅಲ್ಲಿಯ ಬ್ರಾಹ್ಮಣರಿಗೂ ತಿಳಿಸಿ ಅದರ ರುಚಿಯನ್ನು ಸವಿಯುವಂತೆ ಮಾಡಿದರಂತೆ. ಅಂದು ವಾದಿರಾಜರಿಂದ ಪಡೆದ ಬೀಜಗಳನ್ನೇ ಬ್ರಾಹ್ಮಣರು ಅಲ್ಲಿಯ ಸಮುದ್ರ ತೀರದ ಪ್ರದೇಶವಾದ 'ಮಟ್ಟು' ಎಂಬ ಊರಿನಲ್ಲಿ ಬೆಳೆಯಲಾರಂಬಿಸಿದರು. ಈಗಲೂ ಈ ಬದನೆ "ಮಟ್ಟುಗುಳ್ಳ" ಎಂದೇ ಪ್ರಸಿದ್ಧಿ ಪಡೆದಿದೆ. ಬೇರೆ ಬದನೆಗಿಂತ ಈ "ಮಟ್ಟುಗುಳ್ಳ" ದ ರುಚಿ ವಿಶಿಷ್ಟ ಎಂದು ಹೇಳಲಾಗುತ್ತದೆ. ಯಾವಗಲಾದರೂ ಉಡುಪಿಗೆ ಹೋದರೆ ಈ ಮುಟ್ಟುಗುಳ್ಳ ಬದನೆಯನ್ನು ತಿನ್ನಿ ಬದವೆಯ ಮಹತ್ವ ಗೊತ್ತಾಗುತ್ತೆ....!!
ಬದನೆಯ ಮಹತ್ವವನ್ನು ಸರಿಯಾಗಿ ತಿಳಿದಿದ್ದವನು ನಮ್ಮ ಶ್ರೀಕೃಷ್ಣದೇವರಾಯ. ಆತ ಬದನೆಯನ್ನು ಇಷ್ಟಪಟ್ಟು ತನ್ನ ತೋಟದಲ್ಲಿಯೇ ಬೆಳಸಿದ್ದನಂತೆ. ಬದನೆಯ ರುಚಿ ಇತರರಿಗೆ ತಿಳಿಸಲೆಂದೇ ಶ್ರೀಕೃಷ್ಣದೇವರಾಯನು ತನ್ನ ಆಸ್ಥಾನದ ಎಲ್ಲಾ ಸದಸ್ಯರಿಗೂ ಭೋಜನಾಕೂಟವನ್ನು ಏರ್ಪಡಿಸಿದ್ದನು. ಆಸ್ಥಾನಿಕರೆಲ್ಲರೂ ಬದನೆಯ ರುಚಿಯನ್ನು ಸವಿದು ಬೆರಗಾಗಿ ಹೋದರು. ಎಲ್ಲರ ಬಾಯಲ್ಲೂ ಬರೀ ಬದನೆಯ ಮಾತೇ ಮಾತು. ತೆನಾಲಿರಾಮನು ತಾನು ತಿಂದುಂಡ ಬದನೆಯ ರುಚಿಯನ್ನು ತನ್ನ ಹೆಂಡತಿಯ ಬಳಿ ಅತ್ಯಾನಂದದಿಂದ ಹೇಳಿಕೊಂಡ. ಬದನೆಯ ಸ್ವಾದ ಬಾಯಲ್ಲಿ ನೀರು ಬರಿಸುವಷ್ಟು ವರ್ಣನೆ ಮಾಡಿದ್ದೇ ಮಾಡಿದ್ದು. ಹೆಂಡತಿ ಸುಮ್ಮನೇ ಬಿಟ್ಟಾಳೇ...? ತನಗೂ ಕೃಷ್ಣದೇವರಾಯನ ತೋಟದ ಬದನೆ ಬೇಕೇ ಬೇಕು ಎಂದು ಹಠ ಹಿಡಿದು ಕುಳಿತಳು. ಆದರೆ ಸೈನಿಕರ ಕಣ್ಣು ತಪ್ಪಿಸಿ ರಾಯನ ತೋಟದ ಬದನೆ ಕದಿಯುವುದು ತೆನಾಲಿರಾಮನಿಗೆ ಕಷ್ಟವಾಗಿತ್ತು. ಹೇಗೋ ಕದ್ದು ಹೆಂಡತಿಗೆ ತಿನ್ನಿಸಿದ ಅನ್ನಿ....

ಬದನೆಯ ಸ್ವಾದ ತೆನಾಲಿರಾಮನಿಗೂ ಕೃಷ್ಣದೇವರಾಯನಿಗೂ ಮೋಡಿ ಮಾಡಿತ್ತು ಎನ್ನುವುದಾದರೆ ಬದನೆ ರುಚಿಯಾದ ತರಕಾರಿ ಎಂದು ನಾವು ಒಪ್ಪಲೇ ಬೇಕು.ಆದರೂ ಕೆಲವರು ಬದನೆಯನ್ನು ತಿನ್ನಲು ಹಿಂದುಮುಂದು ನೋಡುತ್ತಾರೆ. ಬೇರೆಯವರ ವಿಷಯವೇಕೆ ಬದನೆಯನ್ನು ಹೆಚ್ಚಾಗಿ ಮನೆಗೆ ತಂದರೆ ನನ್ನವಳು ಅಡಿಗೆ ಮಾಡದೇ ನನಗೆ ಉಪವಾಸ ಹಾಕಿಬಿಡುತ್ತಾಳೆ. ಬದನೆಯ ಬಗ್ಗೆ ಈ ತಿರಸ್ಕಾರವೇಕೆ ಎಂದು ಯೋಚಿಸಿದೆ ಬಹುಷಃ ಅದರಲ್ಲಿರುವ ನಂಜಿನ ಅಂಶವೇ ಜನರನ್ನು ಭಯ ಭೀತಗೊಳಿಸಿರಬಹುದೇ.....?
ನಮ್ಮ ಸೃಷ್ಟಿಕರ್ತ ಬ್ರಹ್ಮನಿಗೆ ಬದನೆ ಇಷ್ಟವಾಗಿರುವಾಗ ಈ ಹುಲುಮಾನವರದೇನು ಲೆಕ್ಕ ....? ಎಂದು ಧೈರ್ಯ ತಂದುಕೊಂಡೆ. ಬ್ರಹ್ಮನಿಗೆ ಬದನೆಯ ರುಚಿ ಇಷ್ಟವಾಗಿ ಇದಕ್ಕೆ ಕಿರೀಟವನ್ನು ತೊಡಿಸಿ ಭೂಲೋಕದ ಜನರು ಸವಿಯಲೆಂದು ಭೂಮಿಗೆ ತಂದು ಬಿಟ್ಟನಂತೆ. ಈ ಕಿರೀಟವಿರುವುದರಿಂದಲೇ ಬದನೆಯನ್ನು ತರಕಾರಿಗಳ ರಾಜ ಎಂದು ಕರೆಯುವರು.... ಈಗ ನೀವು ನನ್ನ ಮಾತನ್ನು ಒಪ್ಪಲೇ ಬೇಕು... ..? ಒಪ್ಪುತ್ತೀರಿ ಅಲ್ಲವೇ...?
ತಮಿಳಿನ ಜನಪದ ಕತೆಯೊಂದು ಹೀಗೆ ಹೇಳುತ್ತದೆ. ಒಮ್ಮೆ ರಾಜನೊಬ್ಬನ ಬಳಿ ಹೊಸದಾಗಿ ಬಾಣಸಿಗನೊಬ್ಬನು ನೇಮಕವಾದನಂತೆ. ಆತ ರಾಜನಿಗಾಗಿ ವಿಶೇಷ ಆಸಕ್ತಿಯನ್ನು ವಹಿಸಿ ಬದನೇಕಾಯಿಯ ಖಾದ್ಯವೊಂದನ್ನು ತಯಾರಿಸಿದನಂತೆ. ಈ ಹೊಸ ಖಾದ್ಯವನ್ನು ಸವಿದ ರಾಜನು ಇದರ ಪ್ರಸ್ತಾಪವನ್ನು ಸಭೆಯ ಮುಂದೆ ತಂದು ಬದನೆ ಕುರಿತು ಚರ್ಚಿಸಿದನಂತೆ. ಆಸ್ಥಾನದ ಹೊಗಳು ಭಟ್ಟರು ರಾಜನಿಂದ ಮೆಚ್ಚುಗೆಯನ್ನು ಪಡೆಯಲು ಬದನೆಕಾಯಿಯನ್ನು ಪ್ರಶಂಸಿದರಂತೆ.
"ಹೌದು ಮಹಾಸ್ವಾಮಿ.... ಈ ಬದನೆ ಬ್ರಹ್ಮನಿಗೂ ಪ್ರಿಯವಾದುದು. ಅದಕ್ಕಾಗಿಯೇ ಬ್ರಹ್ಮ ಅದರ ತಲೆಯ ಮೇಲೆ ಕಿರೀಟವನ್ನಿಟ್ಟಿದ್ದಾನೆ"
ಹೊಗಳು ಭಟ್ಟರ ಪ್ರಶಂಸೆಯಿಂದ ಪ್ರಸನ್ನನಾದ ರಾಜ ಬದನೆಯ ಖಾದ್ಯವನ್ನು ಹೊಟ್ಟೆ ಬಿರಿಯುವಂತೆ ತಿಂದನಂತೆ. ಸಂಜೆಯಾಗುವಷ್ಟರಲ್ಲಿ ರಾಜನಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಬದನೆಗೆ ಹಿಡಿ ಶಾಪವನ್ನು ಹಾಕಲಾರಂಭಿಸಿದನು. ಬದನೆಯನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ ಹೊಗಳು ಭಟ್ಟರಿಗೆ ತಮ್ಮ ತಪ್ಪಿನ ಅರಿವಾಯಿತು. ಮತ್ತೆ ರಾಜನ ಬಳಿಗೆ ಹೋಗಿ ತಮ್ಮ ವರಾತವನ್ನು ಬದಲಿಸಿ
"ಮಹಾರಾಜರೇ.... ಈ ಬದನೆಯನ್ನು ಕಂಡರೆ ಬ್ರಹ್ಮನಿಗೂ ಇಷ್ಟವಿರಲಿಲ್ಲ. ಅದಕ್ಕೆ ಅದರ ತಲೆಯ ಮೇಲೆ ಮುಳ್ಳನ್ನಿರಿಸಿದ್ದಾನೆ"
ಎಂದರಂತೆ
ಗಡದ್ದಾಗಿ ಹೊಟ್ಟೆ ಬಿರಿಯುವಂತೆ ತಿಂದು ಬದನೆಕಾಯಿಯನ್ನು ತೆಗಳುವುದು ಯಾವ ನ್ಯಾಯ ಹೇಳಿ....? ನನಗಂತೂ ಇದರಲ್ಲಿ ರಾಜನದೇ ತಪ್ಪು ಕಾಣುತ್ತದೆ. ಬದನೆಕಾಯಿ ಅತಿಯಾಗಿ ತಿಂದು ರಾಜ ಸಭಿಕರ ಮುಂದೆನೇ ಹೊಟ್ಟೆನೋವು ಎಂದು ಹತ್ತಾರು ಬಾರಿ ಪಾಯಿಖಾನೆಗೆ ಹೋಗಿಬಂದು ತನ್ನ ಮರ್ಯಾದೆಯನ್ನು ಕಳೆದುಕೊಂಡರೆ ಅದು ಬದನೇಕಾಯಿಯದು ತಪ್ಪೇ... ? ಅತಿಯಾದರೆ ಅಮೃತವೂ ವಿಷ ಎಂದು ಹಿರಿಯರು ಹೇಳಿದ್ದು ರಾಜನಿಗೆ ಗೊತ್ತಿಲ್ಲವೆಂದು ಕಾಣುತ್ತದೆ. ರಾಜನಂತಹ ಜನರು ಇಂದಗೂ ಈ ಬದನೆಯ ಬಗ್ಗೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದೆನಿಸಿತು.
ದಕ್ಷಿಣ ಕನ್ನಡದಲ್ಲಿ ಭತ್ತದ ನಾಟಿ ಮಾಡುವ ಸಂದರ್ಭದಲ್ಲಿ ನಮ್ಮ ರೈತ ಹೆಂಗಸರೆಲ್ಲಾ ಸೇರಿ "ಗೋವಿಂದ ಬದನೆ, ಗೋವಿಂದ ಬದನೆ" ಎಂದು ಹಾಡುತ್ತಾರೆ. ಇದನ್ನೇ ಜನಪದ ಸಾಹಿತ್ಯದಲ್ಲಿ 'ಕಬಿತಗಳು' ಎಂದು ಕರೆಯುತ್ತಾರೆ. ಈ ಕಬಿತದಲ್ಲಿ ಕ್ರೈಸ್ತ ಹೆಗಸೊಬ್ಬಳು ಬದನೆ ಬೀಜವನ್ನು ನೆಟ್ಟು, ಗೊಬ್ಬರ ಹಾಕಿ, ನೀರುಣಿಸಿ, ಬದನೆಯನ್ನು ಬೆಳೆಸುತ್ತಿದ್ದಳು. ತಾನೇ ಬೆಳೆದ ಬದನೆಯನ್ನು ಊರೂರು ಸುತ್ತಿ ಮಾರಾಟ ಮಾಡುತ್ತಿದ್ದಳು.ಇಂತಹ ಜನಪದದ ಕಬಿತದಲ್ಲಿ ಬದನೆಯ ಮಹತ್ವವನ್ನು ಹೇಳಿದ್ದಾರೆ. ಬದನೆ ನೀವಂದುಕೊಂಡಂತೆ ವ್ಯೆರ್ಥ ತರಕಾರಿಯಾಗಿದ್ದರೆ ನಮ್ಮ ರೈತ ಹೆಂಗಸರು ಬದನೆಯನ್ನು ಕುರಿತು ಹೊಲಗದ್ದೆಗಳಲ್ಲಿ ಹಾಡಿಕೊಳ್ಳುತ್ತಿದ್ದರೆ....?
ಬದನೆಯಲ್ಲಿ ಇರುವಷ್ಟು ವೈವಿದ್ಯತೆಗಳು ಬೇರೆ ತರಕಾರಿಗಳಲ್ಲಿದ್ದರೆ ಹೇಳಿ ಬಿಡಿ ನೋಡೋಣ. ಬಣ್ಣ, ರುಚಿ, ಗಾತ್ರಗಳಲ್ಲಿ ಬದನೆಯನ್ನು ಮೀರಿಸುವ ಇನ್ನೊಂದು ತರಕಾರಿ ಇದೆಯೇ....? ಚೋಳ ಬದನೆ, ಬಿಳಿ ಬದನೆ, ಗುಂಡು ಬದನೆ, ಮುಳ್ಳುಗಾಯಿ, ಕೆಂಪು ಬದನೆ, ಕರಿ ಬದನೆ, ಪಟ್ಟೆ ಬದನೆ, ಬಾಸಲ ಬದನೆ, ಕಡಬಟ್ಲ ಬದನೆ, ಹಸಿರು ಬದನೆ, ಬೆಳವಂಕಿ ಬದನೆ, ಗೋರಬಾಳೆ ಬದನೆ, ಪೇರಂಪಳ್ಳಿ ಬದನೆ, ಮುಸುಕು ಬದನೆ, ಕೊತ್ತಿನ ತಲೆ ಬದನೆ, ಈರಂಗನೆ ಬದನೆ.......... ಅಬ್ಬಬ್ಬ.....!!!! ಒಂದೇ... ಎರಡೇ....!!! 

ಇಂತಹ ವೈವಿದ್ಯದ ಬದನೆಯನ್ನು ತಿನ್ನುವುದು ಬಿಟ್ಟು ನಾವು ಪಾಶ್ಚ್ಯಾತ್ಯರ ಆಹಾರವನ್ನು ತಿನ್ನಲು ಹೊರಟಿದ್ದೇವೆ.... ಎರೆ ಹುಳದಂತಿರುವ ನೂಡಲ್ಸ್ ಗೆ ಮುಗಿಬೀಳುತ್ತೇವೆ. ಆ ಪಿಡ್ಜಾನೋ..? ಚಪಾತಿಯ ಮೇಲೆ ಯಾರೋ ವಾಂತಿ ಮಾಡಿಕೊಂಡಿರುವಂತೆ ಕಾಣುತ್ತದೆ. ಎರಡು ಬ್ರೆಡ್ ಗಳ ನಡುವೆ ಸೊಪ್ಪು ಸೆದೆಯನ್ನು ಜೋಡಿಸಿರುವ ಬರ್ಗರ್, ಸ್ಯಾಂಡ್ವಿಚ್ ಗಳು....ಯಾವುದು ಬೇಕು ಯೋಚಿಸಿ. ಆಯ್ಕೆ ನಿಮ್ಮದು...!!
ಏಕೆಂದರೆ ಬದನೆ ಭಾರತದ ಮೂಲ ಬೆಳೆ. ಕ್ರಿ.ಶ. ಐದನೇ ಶತಮಾನದಲ್ಲಿ ಚೈನಾಕ್ಕೆ, ನಂತರ ಆಫ್ರಿಕಾಕ್ಕೆ, ಹದಿನಾಲ್ಕನೇ ಶತಮಾನದಲ್ಲಿ ಇಟಲಿಗೆ ಪ್ರವೇಶ ಪಡೆದವು. ಈಗ ಪ್ರಪಂಚದಾದ್ಯಂತ ಬದನೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ವಿದೇಶಿಯರಿಗೂ ಇಷ್ಟವಾಗುತ್ತಿದೆ ಎಂದರೆ ನಮಗೂ ಇಷ್ಟವಾಗಲೇಬೇಕು. ಏಕೆಂದರೆ ನಾವು ವಿದೇಶಿಯರನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದೇವೆ ಅಲ್ಲವೇ.....?
ಬೇಕಾದಾಗ ಹೊಗಳಿ ತಿನ್ನುವುದು. ಬೇಡವಾದಾಗ ಅದನ್ನು ಜರಿಯುವುದು ಮಾನವನ ಹುಟ್ಟುಗುಣವಲ್ಲವೇ. ಬದನೆಯು ನನ್ನಲ್ಲಿ ಹೀಗೆ ಹಲವು ಯೋಚನೆಗಳನ್ನು ಮನದಲ್ಲಿ ಮೂಡಿಸುತ್ತಿರುವಾಗಲೇ ಅಮ್ಮ ಬಂದು ನಾನು ಬರೆಯುತ್ತಿರುವ ಪೆನ್ನು ಪೇಪರನ್ನು ಕಿತ್ತು ಕೊಂಡಳು.
"ಹರೋಸಾಗರದ ಬಾಬುಕಾಕ, ವಿಠ್ಠು, ಸೋನು, ನಾಗ್ಯ, ಸಾಕ್ರೆ ಅನಂತ, ಎಲ್ಲರೂ ನಿನ್ನ ದುರ್ಗಮ್ಮನ ಗುಡ್ಡದ ಮೇಲೆ ದೀಪ ಹಚ್ಚಲು ಕರೆಯುತ್ತಿದ್ದಾರೆ. ನೀನು ನೋಡಿದ್ರೆ ಈ ಹೊರಬೀಡಲ್ಲೂ ಬರೀತಿದ್ದೀಯ. ಅದೇನು ಬರೀತ್ತಿದ್ದಿಯೋ ಬದನೆಕಾಯಿ ಪುರಾಣನ..."
ಎಂದು ಗೊಣಗಿದಳು.....
ಅರೆ.... !!! ಮತ್ತೆ ಬದನೆಕಾಯಿಗೆ ಅವಮಾನನಾ.....?
ಎಂದುಕೊಂಡೆ
ಸುಮ್ಮನೆ ಎದ್ದು ಬೆಟ್ಟದ ಕಡೆಗೆ ಹೊರಟೆ.
                                                                             -ಪ್ರಕಾಶ್ ಎನ್ ಜಿಂಗಾಡೆ

Tuesday, 26 January 2016

ಚಿತ್ರ ಮಂದಿರದಲ್ಲಿ

ಚಿತ್ರಮಂದಿರದಲ್ಲಿ...
ಆತ ನೆಲದ ಮೇಲೆ ನಡೆದು ಬರುತ್ತಿದ್ದ. ಹಾಕಿದ್ದ ಬೂಟುಗಳು ನೆಲವನ್ನು ಸ್ಪರ್ಶಿಸಿದ ಕೂಡಲೇ ಬೆಂಕಿಯ ಕಿಡಿಗಳು ಸಿಡಿಯುತ್ತಿದ್ದವು. ನನ್ನ ಪಕ್ಕದಲ್ಲಿ ಕುಳಿತ್ತಿದ್ದ ರಾಜೀವ ಈ ದೃಶ್ಯ ನೋಡಿದ ಕೂಡಲೇ ಒಮ್ಮೆ ಹೌಹಾರಿದ. ಹಿಂದಿನಿಂದ ಜನರ ಸೀಟಿ ಹೊಡೆಯುವ ಸದ್ದು ಜೋರಾಗಿ ಕೇಳಿಸುತ್ತಿತ್ತು. ಆ ಹೀರೋ ಮತ್ತೆ ಒಬ್ಬನನ್ನು ಹಿಡಿದು ಚಚ್ಚಿದ. ಆತ ಹೊಡೆದ ರಭಸಕ್ಕೆ ನೆಲ ಕುಸಿದು ಹೋಯಿತು. ಮುಖಕ್ಕೆ ಮತ್ತೊಂದು ಏಟು ಕೊಟ್ಟ , ಮೂವತ್ತೆರಡು ಹಲ್ಲುಗಳು ಠಣ್..ಣ..ಣ..ಣ..ಣ ಸದ್ದು ಮಾಡುತ್ತಾ ನೆಲಕ್ಕರುಳಿದವು
.
"ಅಯ್ಯೊಯ್ಯೋ ನನ್ನಿಂದ ನೋಡಲಾಗದು... ನೋಡಲಾಗದು, ಈ ಪರಿಯ ಹೊಡೆತಗಳು ನನ್ನಿಂದ ಅರಗಿಸಿಕೊಳ್ಳಲು ಆಗದು"

ರಾಜೀವ ಈ ದೃಶ್ಯ ನೋಡಿದ ಕೂಡಲೇ ತನಗೇ ಏಟು ಬಿದ್ದಂತೆ ಕಿರುಚಿಕೊಂಡ.

"ಅಯ್ಯೋ.... ಇದು ಸಿನಿಮಾ ಮಾರಾಯ ಕೂತ್ಕೊ"
ಎಂದು ರಾಜೀವನ ಕೈಹಿಡಿದು ಕೂರಿಸಿಕೊಂಡೆ.

ಈ ತರಹದ ದೃಶ್ಯಗಳು ಸಿನಿಮಾದ ಉದ್ದಕ್ಕೂ ಆಗಾಗ ಕಾಣುತ್ತಲೇ ಇದ್ದವು.. ಪ್ರೇಕ್ಷಕರಿಂದ ಸಿಳ್ಳೆ ಕೇಕೆಗಳು ಬರುತ್ತಲೇ ಇದ್ದವು.
"ನಮಗೆ ವಾಸ್ತವಕ್ಕಿಂತಲೂ ಕಲ್ಪನೆಯೇ ಸುಖ ಕೊಡುತ್ತದೆಯಲ್ಲವೇ...?"
ಜನರ ಉತ್ಸಾಹ ಕಂಡು ರಾಜೀವ ನನ್ನ ಹತ್ತಿರ ಹೇಳಿದ. ರಾಜೀವನ ಮಾತು ನನಗೂ ಸರಿಯೆನಿಸಿತು. ಸಿನಿಮಾ ನೋಡುತ್ತಲೇ ನಾವು ಕತೆಯೊಳಗೆ ಮುಳುಗಿಬಿಡುತ್ತೇವೆ. ಪರದೆಯ ಪ್ರತಿಯೊಂದು ದೃಶ್ಯಗಳು ನಮ್ಮ ಪಕ್ಕದಲ್ಲೇ ನಡೆಯುತ್ತಿವೆ ಎಂಬಂತೆ ಭಾವಿಸುತ್ತೇವೆ. ನಾವೇ ನಾಯಕ ಎಂದೇ ಕಲ್ಪಿಸಿಕೊಂಡು ಪರಕಾಯ ಪ್ರವೇಶ ಮಾಡಿ ಬಿಡುತ್ತೇವೆ...ಅವನ ಒಳ್ಳೆಯ ಗುಣವನ್ನು ಕಂಡು ನಾವೇ ನಾಯಕರಾಗಿ ಬಿಡುತ್ತೇವೆ. ನಾಯಕನ ರೋಷ ಕಂಡು ನಮ್ಮ ಮೈಯ ರಕ್ತವೂ ಬಿಸಿಯಾಗಿ ಬಿಡುತ್ತದೆ. ನಾಯಕನಂತೆ ನಾವೂ ಆದರ್ಶವನ್ನು ಮೆರೆಯಬೇಕೆಂದು ಯೋಚಿಸುತ್ತೇವೆ. ಸಿನಿಮಾ ಎಂಬ ಕಾಲ್ಪನಿಕ ಜಗತ್ತನ್ನು ನಿಜವೇ ಎಂಬಂತೆ ಕೆಕ್ಕರಿಸಿ ನೋಡುತ್ತೇವೆ. ಕಲ್ಪನೆಯೇ ಒಂದು ರೀತಿ ಸುಖ ಕೊಡುತ್ತಿರುತ್ತದೆ.

ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮಂಜ ಸಿನಿಮಾ ನೋಡುವುದರಲ್ಲಿ  ತಲ್ಲೀನನಾಗಿದ್ದನು. ಇಳಿ ವಯಸ್ಸಿನ ತಂದೆ ತಾಯಿಯರನ್ನು ನೋಡಿಕೊಳ್ಳಲಾಗದೇ ಹೆಂಡತಿ ಮಾತು ಕೇಳಿ ಮಂಜ ಬೇರೆ ಮನೆ ಮಾಡಿಕೊಂಡಿದ್ದ. ಪಾಪ ಆ ತಂದೆ ತಾಯಿಗಳು ಇರುವ ಒಬ್ಬ ಮಗನನ್ನು ಬಿಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಮಂಜನ ತಂದೆ ತಾಯಿಗಳು ಬಡತನದಲ್ಲೇ ಜೀವನ ಸಾಗಿಸಿ ಮಂಜನನ್ನು ಕಷ್ಟಪಟ್ಟು ಬೆಳಸಿದ್ದರು. ಕೂಲಿ ನಾಲಿ ಮಾಡಿ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಸರ್ಕಾರಿ ಕೆಲಸವನ್ನೂ ಕೊಡಿಸಿದ್ದರು. ಇದಾವುದರ ಪರಿವೇ ಇಲ್ಲದೇ ಮಂಜ ಸಿನಿಮಾದಲ್ಲಿ ತಲ್ಲೀನನಾಗಿದ್ದ. ಹೀರೋ ತನ್ನ ತಾಯಿಯ ಮುಡಿಗೆ ಕೈ ಹಾಕಿದ ವಿಲನ್ ನನ್ನು ಚಚ್ಚಿ ಹಾಕಿದಾಗ ಮಂಜ ರೋಮಾಂಚಿತಗೊಂಡು ಸೀಟಿ ಹೊಡೆಯುತ್ತಿದ್ದ. ಹೀರೋ ತನ್ನ ತಾಯಿಯನ್ನು ದೇವರಂತೆ ಪೂಜಿಸುತ್ತಿದ್ದ. ತಾಯಿ ಮಗನ ಭಾವನಾತ್ಮಕ ಸನ್ನಿವೇಶ ಬಂದಾಗ ಮಂಜನ ಕಣ್ಣುಗಳು ಒದ್ದೆಯಾಗುತ್ತಿದ್ದವು. ಮಂಜನನ್ನು ಕಂಡು ನನಗೆ ಸೋಜಿಗವೆನಿಸಿತು. ಮಂಜನ ಮುಖವನ್ನೇ ನೋಡುತ್ತಿದ್ದೆ.  ಸಿನಿಮಾ ಬಿಟ್ಟು  ಮಂಜ ನನ್ನ ಕಡೆಗೆ ತಿರುಗಿ ನೋಡಿದ.

"ಯಾಕೊ....? ಏನಾಯ್ತೋ..?"

ಎಂದು ಮಂಜ ನನ್ನನ್ನು ಪ್ರಶ್ನಿಸಿದ. ನಾನು ಒಂದೆರೆಡು ನಿಮಿಷದ ವರೆಗೆ ಮಂಜನ ಮುಖವನ್ನೇ ನೋಡುತ್ತಿದುದರಿಂದ ಆತ ಅನುಮಾನಗೊಂಡು ಈ ಪ್ರಶ್ನೆಯನ್ನು ಕೇಳಿದ್ದ. ನಾನು ಕಕ್ಕಾ ಬಿಕ್ಕಿಯಾಗಿ ಏನೂ ಮಾತನಾಡದೇ ಮತ್ತೆ ಪರದೆಯ ಕಡೆಗೆ ನೋಡಿದೆ.

ಸಿನಿಮಾದಲ್ಲಿ ನಾಯಕನಿಗೆ ನಾಯಕಿ ಸಿಗದಂತಾದಳು. ಅಣ್ಣ, ತಂದೆ, ಬಂಧುಗಳ ಕುತಂತ್ರದಿಂದ ನಾಯಕ ಎಷ್ಟೇ ಹೋರಾಡಿದರೂ ನಾಯಕಿಗೆ ಇನ್ನೊಂದು ಮದುವೆಯ ಸಿದ್ಧತೆ ನಡೆದಿತ್ತು. ನಾಯಕನ ತೊಳಲಾಟವು ಸಿನಿಮಾವನ್ನು ನೋಡುತ್ತಿದ್ದ ಪ್ರೇಕ್ಷಕರ ಕರುಳು ಕಿವುಚುವಂತಿತ್ತು. ನನ್ನ ಬಲಬಾಗದಲ್ಲಿ ಕುಳಿತಿದ್ದ ರವಿ ಈ ದೃಶ್ಯ ನೋಡಿ ಕಣ್ಣೕರನ್ನು ತುಂಬಿಕೊಂಡ.

"ಏನಾಯ್ತೋ.. ರವಿ"
ಎಂದೆ.

"ಪಾಪ ಹೀರೋ..ನೋಡೊ ಎಂಥ ಸ್ಥಿತಿ...?"

ಎಂದು ದುಃಖಿಸುತ್ತಾ ತನ್ನ ಕಣ್ಣಾಲಿಯನ್ನು ಒರೆಸಿಕೊಂಡ.

ನನಗೆ ರವಿಯ ನಡತೆ ಕಂಡು ಆಶ್ಚರ್ಯವಾಯಿತು. ತನ್ನ ತಂಗಿಯನ್ನು ಪ್ರೀತಿಸಿದ್ದಕ್ಕೆ ರಘು ಎಂಬ ಹುಡುಗನಿಗೆ ರಕ್ತ ಸೋರುವಂತೆ ಹೊಡೆದಿದ್ದು ಇದೇ ರವಿನಾ...? ಎಂದೆನಿಸಿತು.

"ನಿನ್ನ ತಂಗಿಯನ್ನು ಚಿಕ್ಕಂದಿನಿಂಲೂ ಪ್ರಿತಿಸುತ್ತಿದ್ದೀನಿ ಕಣೊ"
ಎಂದು ರಘು ಪರಿ ಪರಿಯಾಗಿ ಬೇಡಿಕೊಂಡಿದ್ದರೂ ರವಿ ಮತ್ತಷ್ಟು ಏಟುಗಳನ್ನು ನೀಡಿ ಮನೆಗೆ ಕಳುಹಿಸಿದ್ದ. ಆದರೆ ಇದೇ ದೃಶ್ಯ ಪರದೆ ಮೇಲೆ ಬಂದಾಗ ರವಿ ಕರಗಿ ಕಣ್ಣೀರಿಟ್ಟ. 
ತಂದೆ ತಾಯಿಯರ ಮೇಲಿದ್ದ ಮಂಜನ ನಿಷ್ಕರುಣೆ ಪ್ರೀತಿ...
ಪ್ರೀತಿಯ ವಿಷಯದಲ್ಲಿ ರವಿಗಿದ್ದ ಕ್ರೂರತನ...
 ಸಿನಿಮಾ ನೋಡುವಾಗ ಎಲ್ಲಿ ಹೋಗಿದ್ದವು... ?  ನಿಜವಾಗಲೂ ಅವರು ಕರುಣಾಮಯಿಗಳಾ....?  ಅಥವಾ ಸಿನಿಮಾದ ದೃಶ್ಯಗಳನ್ನು ಮಾತ್ರ ಕರುಣಾಮಯಿಗಳಾಗುತ್ತಾರಾ...?  ಎಂಬ ಪ್ರಶ್ನೆ ಮೂಡಿತು..
ಸಿನಿಮಾದ ಕೊನೆಯಲ್ಲಿ ನಾಯಕ ನಾಯಕಿಯದು ದುರಂತ ಅಂತ್ಯ. ಪ್ರೀತಿಯಲ್ಲಿ ಸೋತವರ ದುಃಖದ ದುರಂತ. ನಾಯಕಿಯ ಹೆಣದ ಮುಂದೆ ಹೆತ್ತವರದು ಕರುಳು ಹಿಂಡುವಂತಹ ಆಕ್ರಂದನ. ಆ ಗೋಳಿನ ದೃಶ್ಯದ ನಡುವೆ ಹೆತ್ತವರಿಗೆ ನಾಯಕಿಯ ಮುದ್ದಾದ ಮುಖ ಕಣ್ಣ ಮುಂದೆಯೇ ಆಗಾಗ ಬಂದು ಹೋಗುತ್ತಿತ್ತು. ನಾಯಕನ ಆದರ್ಶ ಗುಣಗಳನ್ನು ಅಲ್ಲಿ ನೆರೆದಿದ್ದ ಜನ ಹೊಗಳುತ್ತಿದ್ದರು... ಪ್ರೀತಿಯನ್ನು ವಿರೋಧಿಸಿದ ಖಳನಾಯಕರಿಗೆ ಹಿಡಿಶಾಪ ಹಾಕುತ್ತಿದ್ದರು. ಈ ದೃಶ್ಯ ನೋಡುತ್ತಿದ್ದ ನಮಗೆ ಬದುಕು ಇಷ್ಟೇನಾ... ಪ್ರೀತಿಯನ್ನು ಗೌರವಿಸುವ ಸಮಾಜ ನಮ್ಮದಲ್ಲವೇ ...? ಎಂದೆನಿಸಿತು. ಇರುವ ಅಲ್ಪ ಸಮಯದ ಈ ಬದುಕಿನಲ್ಲಿ ದ್ವೇಷವನ್ನು ತ್ಯಜಿಸಿ ಪ್ರೀತಿಯನ್ನು ಯಾಕೆ ಬಯಸಬಾರದು..?  ಎಲ್ಲರೊಂದಿಗೆ ಪ್ರೀತಿ ಮತ್ತು ಸುಖವಾಗಿ ಬದುಕಲು ಸಾಧ್ಯವಿಲ್ಲವೇ...? ಒಮ್ಮೆ ಪ್ರೀತಿಯನ್ನು ಗೌರವಿಸಿ ನೋಡಿ... ಎಲ್ಲರ ಬದುಕು ಸುಖಮಯವಾಗಿರುತ್ತೆ. ಎಂಬ ಸಂದೇಶ ದೊಂದಿಗೆ ಸಿನಿಮಾ ಮುಕ್ತಾಯ ವಾಯಿತು.
ಪ್ರೀತಿ, ವಿಶ್ವಾಸ, ಸ್ನೇಹ ಇವು ಬದುಕಿನ ಉತ್ತಮ ಅಂಶಗಳು. ಇವುಗಳನ್ನು ಮರೆತವನು ಪ್ರಾಣಿಯಂತೆ, ಎಂಬ ಸಂದೇಶ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಚಿತ್ರ ನೋಡಿದವರೆಲ್ಲರಿಗೂ ನಾವು ಬದುಕಿದರೆ ಒಗ್ಗಟ್ಟಿನಿಂದ ಬದುಕಬೇಕು ಎಂದೆನಿಸಿತು. ನಾನು ಕೂಡಲೇ ರಾಜೀವನ ಪಕ್ಕದಲ್ಲಿ ಕುಳಿತ್ತಿದ್ದ ನವೀನನನ್ನು ದುಃಖದಿಂದ ಅಪ್ಪಿಕೊಂಡೆನು. ನಾವಿಬ್ಬರೂ ಹುಟ್ಟಿದಂದಿನಿಂದಲೂ ಗೆಳೆಯರು. ಯಾವುದೋ ಕ್ಷುಲ್ಲಕ ಕಾರಣದಿಂದ ಐದು ವರ್ಷ ಮಾತನಾಡಿರಲಿಲ್ಲ. ಅವನೇ ಮೊದಲು ಮಾತನಾಡಿಸಲಿ ಎಂಬ ಈಗೋ ನಮ್ಮಿಬ್ಬರಲ್ಲೂ ಇತ್ತು. ಅದೇಕೋ ಕಾಣೆ ಈ ದಿನ ನಾನು ನನ್ನಲ್ಲಿರುವ ಈಗೋ..ಬಿಟ್ಟು ನವೀನನ್ನು ಅಪ್ಪಿಕೊಂಡೆ. ಅವನೂ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ದುಗುಡದಿಂದ ಬಿಸಿಯುಸಿರನು ಬಿಡುತ್ತಿದ್ದ. ಪ್ರೀತಿಸುವ ಜನರು ನಮ್ಮ ಸುತ್ತಲೂ ಇರುವಾಗ ನಾವು ನಮ್ಮ ನಮ್ಮ 'ಈಗೋ'ಎಂಬ ಭಾವನೆ ಮತ್ತು ಅಹಂಕಾರವನ್ನು ಬೆಳೆಸಿಕೊಂಡಿರುತ್ತೇವೆ.ನಾನೇ ದೊಡ್ಡವನು, ನಾನೇನು ಕಡಿಮೆ ಎಂಬ ಸೊಕ್ಕು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಇಂತಹ ಗುಣಗಳಿಂದ ಕ್ಷಣ ಕಾಲದ ಮಾನವ ಜೀವನದಲ್ಲಿಯ ಮಧುರ ಕ್ಷಣಗಳನ್ನು ದೂರಮಾಡಿ ಕೊಳ್ಳುತ್ತಿದ್ದೆವೆನೋ ಎಂದೆನಿಸಿವುದು. 

ಇದೇ ನೀತಿಯನ್ನು ಮಂಜ ಮತ್ತು ರವಿಗೆ ಹೇಳಿದಾಗ ನನ್ನ ಮಾತನ್ನು ನಿರ್ಲಕ್ಷಿಸಿದ್ದರು.. ಅವರಲ್ಲಿ ನನಗಿಂತ ಹೆಚ್ಚಿನ 'ಈಗೋ' ಮನೆ ಮಾಡಿತ್ತು. ಸಾಕಿದ್ದ ತಂದೆ ತಾಯಿಯರನ್ನು ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದ ಮಂಜ,....ತನ್ನದೇ ದೂರದ ಸಂಬಂದಿ ರಘುವಿನ ಪ್ರೀತಿಯನ್ನು ತಿರಸ್ಕರಿಸಿದ ರವಿ,.... ಇಬ್ಬರ ಈ ದ್ವೇಷಕ್ಕೆ ಕಾರಣವೇ ಇರಲಿಲ್ಲ.

"ಅದೆಲ್ಲಾ... ಸಿನಿಮಾ ಏನ್ಬೇಕಾದರೂ ಕಲ್ಪನೆ ಮಾಡ್ಕೊಂಡು ತೋರಿಸುತ್ತಾರೆ. ಹಾಗಂತ ವಾಸ್ತವದಲ್ಲಿ ಇರೋಕಾಗುತ್ತಾ. ಸಿನಿಮಾದಲ್ಲಿ ತೋರಿಸಿದರೆಂದ ಮಾತ್ರಕ್ಕೆ ನನ್ನ ತಂಗಿಯನ್ನು ಆ ಬಡವ ರಘುವಿಗೆ ಕೊಡಲು ಸಾಧ್ಯವಿಲ್ಲ. ತಂಗಿ ಸುಖವಾಗಿರಬೇಕೆಂಬ ಆಸೆ ನನಗೂ ಇದೆ"
ರವಿ ನನ್ನ ಮಾತನ್ನು ತಿರಸ್ಕರಿಸಿ ಹೇಳಿದ

"ಲೋ... ಪ್ರಕಾಶ .. ವಾಸ್ತವನೇ ಬೇರೆ ಕಲ್ಪನೆಯೇ ಬೇರೆ. ಕಾಲ್ಪನಿಕ ಕತೆಗಳನ್ನು ನಾವು ತಲೆಗೆ ಹಚ್ಚಿಕೊಂಡು ಜೀವನ ನಡೆಸಬಾರದು"

ಮಂಜನೂ ಸಹ ರವಿ ಹೇಳಿದಂತೆಯೇ ಸಮರ್ಥಿಸಿಕೊಂಡನು....
"ಕಲ್ಪನೆ ವಾಸ್ತವಗಳಿಗೆ ತೀರ ಹತ್ತಿರದ ಸಂಬಂದವಿದೆ.... ಎಷ್ಟೋ ಕಲ್ಪನೆಗಳು ಮನುಷ್ಯನ ವಾಸ್ತವ ಜೀವನದೊಂದಿಗೆ ಬೆಸೆದುಕೊಂಡಿವೆ. ಹಾಗೆ ನೋಡಿದರೆ ಮನುಷ್ಯನ ಜೀವನ ಪ್ರಾರಂಭವಾಗೋದೇ ಕಲ್ಪನೆಗಳಿಂದ. ಮಗು ಹುಟ್ಟಿದಾಗ ರಾಮ ನಂತಲೋ.. ಕೃಷ್ಣನಂತದಹುದೋ ಮಗು ಹುಟ್ಟಲಿ ಎಂದು ಪುರಾಣ ಪಾತ್ರಗಳನ್ನು ಕಲ್ಪಿಸಿಕಳ್ಳುತ್ತೇವೆ... ಮಗು ಊಟ ಮಾಡಲು ಹಠ ಹಿಡಿದಾಗ ಚಂದಮಾಮನನ್ನು ತೋರಿಸಿ ಏನೇನೋ ಕಲ್ಪನೆಗಳನ್ನು ಮಗುವಿನ ಮನಸ್ಸಿನಲ್ಲಿ ತುಂಬುತ್ತೇವೆ. ಮಗು ಶಾಲೆಗೆ ಹೋಗುವಾಗ ಶಿಕ್ಷಕರು ಪಂಚತಂತ್ರದ ಕತೆಯನ್ನು ಹೇಳಿ ವಾಸ್ತವ ಜೀವನವನ್ನು ಕಾಲ್ಪನಿಕ ಪಾತ್ರದೊಂದಿಗೆ ಬೆರೆಸುತ್ತಾರೆ... ಕವಿಗಳು ಗೀಚಿದ ಕಾಲ್ಪನಿಕ ಕತೆಗಳನ್ನು ಹೇಳಿ ವಿದ್ಯಾರ್ಥಿಗಳಲ್ಲಿ ನೀತಿಯನ್ನು ಬಿತ್ತುತ್ತಾರೆ.. ಇನ್ನೂ ದೊಡ್ಡವರಾಗಿ ದಾಯಾದಿ ಕಲಹ ಆರಂಭವಾದಾಗ ಮಹಾಭಾರತ ಕತೆಯನ್ನು ಉದಾಹರಿಸಿ ಸರಿ ದಾರಿಗೆ ತರುತ್ತೇವೆ. ರಾಮಾಯಣದ ಪಾತ್ರಗಳನ್ನು ಉದಾಹರಿಸಿ ಒಳ್ಳೆಯ ದಾರಿ ತೋರಿಸುತ್ತೇವೆ... ನೀತಿ ರಾಮನಂತಿರಲಿ. ಗುರುಭಕ್ತಿ ಏಕಲವ್ಯನಂತಿರಲಿ. ಪಿತೃಭಕ್ತಿ ಶ್ರವಣ ನಂತಿರಲಿ. ದಾನ ಕರ್ಣನಂತಿರಲಿ. ಎಂಬ ಟ್ಯಾಗ್ ಲೈನ್ ಹಾಕಿಕೊಂಡು ಕಾಲ್ಪನಿಕ ಪಾತ್ರವನ್ನೇ ಅನುಸರಿಸಲು ಪ್ರಯತ್ನಿಸುತ್ತೇವೆ.  ರಾಕ್ಷಸರನ್ನು ಕೊಂದ ಕತೆಗಾಗಿ ಅಭ್ಯಂಜನ ಸ್ನಾನ ಮಾಡಿ ಹಬ್ಬ ಆಚರಿಸುತ್ತೇವೆ... ಎಲ್ಲಾ ಧರ್ಮ, ಎಲ್ಲಾ ಸಮುದಾಯಗಳು ಸರಿಯಾದ ಮಾರ್ಗಗಳನ್ನು ಹಾಕಿಕೊಂಡು ಮುನ್ನಡೆಯುತ್ತಿರುವುದು ಈ ತರಹದ ಕಲ್ಪನೆಯ ಆಧಾರದ ಮೇಲೆಯೇ.... ಕೆಲವೊಂದು ಸಾರಿ ಈ ಕಲ್ಪನೆಗಳೇ ವಾಸ್ತವವಾಗಿ ಬರುತ್ತವೆ.. ಇವುಗಳು ಕಲ್ಪನೆಗಳೋ...? ವಾಸ್ತವವೋ....? ಎನ್ನುವಷ್ಟು ಗೋಜಿಗೆ ನಾವೇ ಸಿಕ್ಕಿಕೊಳ್ಳುತ್ತೇವೆ. ಕಾಲ್ಪನಿಕ ಸಿನಿಮಾವನ್ನು ನೋಡಿದಾಗ ನೀವು ಸಹ ನಿಮ್ಮ ಜೀವನವನ್ನು ವಾಸ್ತವದ ಓರೆಗಲ್ಲಿಗೆ ಹಚ್ಚಿ ನೋಡಿಕೊಳ್ಳುವುದಿಲ್ಲವೇ.....? "
ರವಿ ಮತ್ತು ಮಂಜ ಮೌನವಾಗಿ ನನ್ನ ಮಾತುಗಳನ್ನು ಆಲಿಸುತ್ತಿದ್ದರು.
ಸಿನಿಮಾದಲ್ಲಿ  ತಾಯಿ ಪ್ರೀತಿಯ ದೃಶ್ಯ ಬಂದಾಗ ಮಂಜ ನೀನು ಭಾವುಕನಾಗಲಿಲ್ಲವೇ ? ನಿಜ ಹೇಳು.... ತಂದೆ ತಾಯಿ ಎಂಬ ದೇವರು ಕಣ್ಣ ಮುಂದೆಯೇ ಇದ್ದರು. ಆದರೂ ಸಹ ಬಣ್ಣ ಹಚ್ಚಿ ಅಭಿನಯಿಸಿದ ತಂದೆ ತಾಯಿಗಳೆಂಬ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಪ್ರಭಾವ ಬೀರಿದ್ದೇಕೆ. ಅಲ್ಲಿರುವ ಪಾತ್ರಗಳು ಸಹ ನಮ್ಮ ಜೀವನದಲ್ಲಿ ನಡೆಯುತ್ತಿರುವ ಪಾತ್ರದ ಪ್ರತಿಬಿಂಬಗಳೇ ಆಗಿವೆ... ಜೀವನ ಬೇರೆ ಅಲ್ಲ ಸಿನಿಮಾದ ಪಾತ್ರ ಬೇರೆ ಅಲ್ಲ. ಸಿನಿಮಾದಲ್ಲಿರುವ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವೇಕೆ ಪ್ರಯತ್ನಿಸುವುದಿಲ್ಲ... ಸಿನಿಮಾದ ತಂದೆ ತಾಯಿಗಳನ್ನು ನೋಡಿ ನಮ್ಮ ಮನಸ್ಸು ಕರಗಿತು. ನಿಜವಾದ ತಂದೆ ತಾಯಿಗಳ ಮೇಲೆ ಕರುಣೆ ಯಾಕೆ ಇಲ್ಲವಾಯಿತು..?"
ಮಂಜ ಮಾತನಾಡಲಿಲ್ಲ..
  ಮಂಜನಂತೆಯೇ ರವಿಯೂ ಸಹ  ಪ್ರೀತಿ ವಿಷಯ ಬಂದಾಗ ಕಣ್ಣುಗಳು ತಂಬಿ ಬಂದವು...? ಸಿನಿಮಾ ಒಂದು ಕತೆ,  ಕಲ್ಪನೆ ಅಂತ ನಿಮಗೆ ಅನಿಸಿದ್ದರೆ ನಿಮ್ಮಲ್ಲಿ ಏಕೆ ಈ ಬದಲಾವಣೆಯಾದವು ...? ಸಿನಿಮಾದ ಆದರ್ಶಗಳನ್ನು ಮಾತ್ರ ಮೆಚ್ಚಿ. ಚಿತ್ರ ಮಂದಿರದಿಂದ ಹೊರ ಬರುವಾಗ ಆ ಆದರ್ಶಗಳನ್ನು ಅಲ್ಲೇ ಬಿಟ್ಟು ಬರುವುದೇಕೆ..? ಅವು ವಾಸ್ತವದಲ್ಲಿ ಅನುಸರಿಸಲು ಅರ್ಹವಾಗಿಲ್ಲವೇ..?  ಸಿನಿಮಾ ಎನ್ನುವುದು ಒಂದು ಕಲ್ಪನೆಯಿರಬಹುದು...ಆದರೆ ಅಲ್ಲಿಯ ಪಾತ್ರಗಳು ನಮ್ಮ ಸುತ್ತಮುತ್ತಲಿನವು. ಕತೆ ಕಲ್ಪನೆಯಾಗಿರಬಹುದು ಆದರೆ ಎಲ್ಲೋ ಯಾರದೋ ಜೀವನದಲ್ಲಿ ನಡೆದಂತವುಗಳೇ.. ಆದರೆ  ಅವುಗಳೆಲ್ಲವೂ ವಾಸ್ತವದ ಪ್ರತಿಬಿಂಬಗಳೇ ಆಗಿವೆ"
ನನ್ನ ಸುಧೀರ್ಘ ಭಾಷಣಕ್ಕೆ ರವಿ, ಮಂಜ, ಮೌನವಾಗಿಯೇ ಇದ್ದರು. ಎಲ್ಲರೂ ಚಿತ್ರಮಂದಿರದಿಂದ ಬಂದಾಗ ಏನೋ ಹೊತ್ತು ಬಂದೆವು ಎನ್ನುವಷ್ಟು ಭಾರವೆನಿಸಿತು. ಹಲವು ವರ್ಷಗಳ ಕಾಲ ಮಾತು ಬಿಟ್ಟಿದ್ದ ನವೀನ ನನ್ನ ಕೈ ಹಿಡಿದುಕೊಂಡೇ ಹೊರಬಂದ. ನನ್ನ ಗೆಳೆತನ ಅವನ ಸ್ನೇಹ ಎಂಬ ಮುಷ್ಠಿಯಲ್ಲಿ ಭದ್ರವಾಗಿತ್ತು.....
ಸುಮಾರು ಹದಿನೈದು ದಿನ ಕಳೆದಿರಬಹುದು. ದೇವಸ್ಥಾನಕ್ಕೆ ಹೋದಾಗ ಮಂಜನ ಹಂಡತಿ ತನ್ನ ಅತ್ತೆ ಮಾವಂದಿರ ಜೊತೆಗೆ ನಗು ನಗುತ್ತಾ ಪೂಜೆ ಮುಗಿಸಿ ಹೋಗುತ್ತಿರುವುದನ್ನು ನೋಡಿದೆ. ಒಡೆದು ಹೋದ ಮನೆ, ಮನಗಳು ಒಂದಾದಂತೆ ಕಂಡವು. ದೇವಾಲಯದ ಒಳ ಹೊಕ್ಕಾಗ ರಘು ಮತ್ತು ರವಿಯ ತಂಗಿ ದೇವರಿಗೆ ಕೈ ಮುಗಿದು ನಿಂತಿದ್ದರು. ಪ್ರೇಮಿಗಳು ಒಂದಾದ ಹಾಗೆ ಕಂಡರು..

"ಪ್ರಕಾಶಣ್ಣ....... ನನ್ನ ಮದುವೆ ಫಿಕ್ಸ್ ಆಯಿತು.ಕೊನೆಗೂ ಮನೆಯವರಿಂದ ಒಪ್ಪಿಗೆ ಸಿಕ್ಕಿತು. ಅದಕ್ಕೆ ಪೂಜೆ ಮಾಡಿಸಲೆಂದು ಬಂದೆವು"

ರವಿಯ ತಂಗಿ ಸುಮ ಸಂತೋಷದಿಂದಲೇ ಈ ವಿಷಯವನ್ನು ಹೇಳಿದಳು. ಹಾಗೆ ಹೇಳುವಾಗ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ........
-                                                                                        - ಪ್ರಕಾಶ್ ಎನ್ ಜಿಂಗಾಡೆ.

Monday, 25 January 2016

ಗುಬ್ಬಚ್ಚಿಗಳು

ಗುಬ್ಬಚ್ಚಿಗಳು....


ನಮ್ಮ ಮನೆಯ ಕರಿ ಹಂಚಿನ ಸೂರಿನಲ್ಲಿ ಗುಬ್ಬಚ್ಚಿಯೊಂದು ಗೂಡು ಕಟ್ಟುತ್ತಿತ್ತು. ಗುಬ್ಬಚ್ಚಿಯು ಚೀಂವ್... ಚೀಂವ್...ಎಂದು ಪಟ ಪಟನೆ ರೆಕ್ಕೆ ಬಡಿಯುತ್ತಾ ನಮ್ಮ ಕಣ್ಣ ಮುಂದೆನೇ ಹಾದು ಹೊಗುತ್ತಿದ್ದರೆ ನನಗೆ ಒಂದು ರೀತಿಯ ಆನಂದ ಸಿಗುತ್ತಿತ್ತು. ಗುಬ್ಬಚ್ಚಿ ಗೂಡು ಹೆಣೆಯುವುದನ್ನು ನೋಡುವುದೇ ಒಂದು ಕುತೂಹಲ.ತನ್ನ ಕೊಕ್ಕಿನಿಂದ ಒಂದೊಂದೇ ಹುಲ್ಲಿನ ಗರಿಗಳನ್ನು ತಂದು ಸೂರಿನಡಿಯಲ್ಲಿ ಸೇರಿಸಿ ಗೂಡು ಕಟ್ಟುತ್ತಿತ್ತು. ಶಾಲೆಯಿಂದ ಬಂದ ಕೂಡಲೇ ನಾನು ಗುಬ್ಬಚ್ಚಿಯ ಗೂಡಿನ ಬಳಿ ಹೋಗಿ ಎಷ್ಟು ಮೊಟ್ಟೆ ಇಟ್ಟಿದೆಯೆಂದು ಪ್ರತಿದಿನ ಹೋಗಿ ನೋಡುತ್ತಿದ್ದೆವು. ಒಂದೊಂದು ಸಾರಿ ಗುಬ್ಬಚ್ಚಿಯೂ ಸಹ ಗೂಡಲ್ಲೇ ಇರುತ್ತಿತ್ತು. ನಾನು ಅದಕ್ಕೆ ಏನೂ ತೊಂದರೆ ಮಾಡದಂತೆ ಹಾಗೆಯೇ ಹಿಂದೆ ಸರಿಯುತ್ತಿದ್ದೆನು. ಹದಿನೈದು ದಿನಗಳ ಹಿಂದೆ ಗುಬ್ಬಚ್ಚಿ ಗೂಡು ಕಟ್ಟುತ್ತಿದ್ದಾಗ ನಾನು ಗುಬ್ಬಚ್ಚಿಗೆ ಸಹಾಯ ಮಾಡಲೆಂದೇ ಸಿದ್ದಣ್ಣನ ಕಣದಲ್ಲಿರುವ ಬಣವೆಯಿಂದ ಒಂದು ಹಿಡಿ ಹುಲ್ಲನ್ನು ತಂದು ಗುಬ್ಬಚ್ಚಿ ಗೂಡುಕಟ್ಟುತ್ತಿದ್ದ ಸ್ಥಳದ ಹತ್ತಿರಕ್ಕೆ ತಂದು ಇಟ್ಟೆವು. ಪಾಪ ಗುಬ್ಬಚ್ಚಿ ಬಹು ದೂರ ಹಾರಿ ಹೋಗಿ ಕಷ್ಟಪಟ್ಟು ಹುಲ್ಲನ್ನು ತಂದು ಗೂಡನ್ನು ಕಟ್ಟುತ್ತಿತ್ತು. ಈಗ ಗುಬ್ಬಚ್ಚಿಗೆ ಸ್ವಲ್ಪ ಅನುಕೂಲವಾಗಬಹುದೆಂದು ಭಾವಿಸಿದೆನು. ಆದರೆ ಗುಬ್ಬಚ್ಚಿ ನಾನು ತಂದ ಹುಲ್ಲನ್ನು ಮುಟ್ಟಲೇ ಇಲ್ಲ ಮತ್ತೆ ಬಹು ದೂರ ಹಾರಿಕೊಂಡೇ ಹುಲ್ಲನ್ನು ತರುತ್ತಿತ್ತು. ಗುಬ್ಬಚ್ಚಿಗೆ ನನ್ನ ಸಹಾಯ ಬೇಕಾಗಿರಲಿಲ್ಲ. ಇಲ್ಲೇ ಹತ್ತಿರದಲ್ಲಿ ಹುಲ್ಲು ಇದ್ದರೂ ಗುಬ್ಬಚ್ಚಿ ಹೀಗೇಕೆ ಮಾಡುತ್ತಿದೆ. ಅದಕ್ಕೆ ಮಾನವನ ಸಹಾಯ ಬೇಕಿಲ್ಲವೇ..? ಎಂದೆನಿಸಿತು.... 
ಒಂದು ದಿನ ಅಮ್ಮ ಸೂರಿನಲ್ಲಿರುವ ಗುಬ್ಬಚ್ಚಿ ಗೂಡನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಳು. ನಾನು ಗುಬ್ಬಚ್ಚಿ ಗೂಡು ಬೇಕೇ ಬೇಕೆಂದು ಹಟ ಹಿಡಿದೆ.
"ನಾಳೆ ಸರ್ಕಾರದಿಂದ ರೈತ ಹಿತರಕ್ಷಣ ಸಮಿತಿಯವರು ವ್ಯವಹಾರದ ಮಾತುಕತೆ ನಡೆಸಲು ನಮ್ಮ ಮನೆಗೆ ಬರುತ್ತಿದ್ದಾರೆ. ತುಂಬಾ ದೊಡ್ಡ ಮನುಷ್ಯರು.ಕಾರಿನಲ್ಲಿ ಬರುತ್ತಾರೆ. ಅವರ ಮುಂದೆ ಈ ಗಲೀಜು ಇದ್ದರೆ ಏನಂದುಕೊಳ್ಳುತ್ತಾರೆ. ನನಗೂ ಸಹ ದಿನಾ ಈ ಗುಬ್ಬಚ್ಚಿಯ ಪಿಕ್ಕೆಗಳನ್ನು ಗುಡಿಸಿ ಸಾಕಾಗಿದೆ"
ಎಂದು ಗೊಣಗಿದಳು.
ನಾನು ಗುಬ್ಬಚ್ಚಿ ಬೇಕೇ ಬೇಕು ಎಂದು ಹಠ ಹಿಡಿದು ಅಳಲು ಪ್ರಾರಂಭಿಸಿದೆ. ಅಮ್ಮ ನನ್ನ ಹಠಕ್ಕೆ ಮಣಿದು ಇನ್ನು ಮಂದೆ ನಿನ್ನ ಈ ಗುಬ್ಬಚ್ಚಿ ಗೂಡನ್ನು ತೆಗೆದು ಹಾಕುವುದಿಲ್ಲ ಎಂದು ಮಾತು ಕೊಟ್ಟ ಮೇಲೆ ಅಳುವುದನ್ನು ನಿಲ್ಲಿಸಿದೆ. ಅಂದಿನಿಂದ ನಾನು ಗುಬ್ಬಚ್ಚಿಗೆ ಇನ್ನೂ ಹತ್ತಿರವಾದೆ. ಪ್ರತಿನಿತ್ಯ ಗುಬ್ಬಚ್ಚಿಯನ್ನು ನೋಡುವುದು. ಅದರೊಡನೆ ಮಾತನಾಡುವುದು.ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂತೋಷ ಪಡುವುದು, ಹೀಗೆ ದಿನವೂ ನಡೆಯುತ್ತಿತ್ತು. ಮೂರು ತಿಂಗಳಲ್ಲೇ ನನ್ನ ಮತ್ತು ಗುಬ್ಬಚ್ಚಿಯ ಸ್ನೇಹ ಗಾಢವಾಗಿ ಬೆಳೆಯಿತು. ಗುಬ್ಬಚ್ಚಿಯೂ ಸಹ ನನ್ನ ಪ್ರೀತಿಗೆ ಸ್ಪಂದಿಸುತ್ತಿತ್ತ....
ಆ ದಿನ ಅಪ್ಪ ತುಂಬಾ ದುಃಖದಿಂದ ಇದ್ದರು. ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಬಂದ ರೈತ ಹಿತರಕ್ಷಣ ಸಮಿತಿಯವರು ಅಪ್ಪನಿಗೆ ಹಣಕಾಸಿನ ವಿಷಯದಲ್ಲಿ ಪಂಗನಾಮ ಹಾಕಿದ್ದರು . ಈ ಸಮಿತಿಯವರು ರೈತರು ನಮ್ಮಲ್ಲಿ ಹಣ ಹೂಡಿದರೆ ಮೂರು ತಿಂಗಳಲ್ಲೇ ಎರಡರಷ್ಟು ಹಣ ಕೊಡುತ್ತೇವೆ ಎಂದು ನಮ್ಮ ಊರಿನಲ್ಲಿ ಸುದ್ಧಿ ಹಬ್ಬಿಸಿದ್ದರು. ನಮ್ಮ ಪಕ್ಕದ ಮನೆಯ ಸಿದ್ದಣ್ಣ ಹತ್ತು ಸಾವಿರ ಹಣ ಹೂಡಿದ್ದರು. ಮೂರು ತಿಂಗಳಲ್ಲಿ ಸಿದ್ದಣ್ಣನಿಗೆ ಇಪ್ಪತ್ತು ಸಾವಿರ ಹಣ ಬಂದಿತ್ತು. ಈ ವಿಷಯ ತಿಳಿದ ಅಪ್ಪನಿಗೆ ತುಂಬಾ ಖುಷಿಯಾಯಿತು. ಎರಡು ವರ್ಷದಿಂದ ಅಮ್ಮನಿಗೆ ಎರಡೆಳೆಯ ಅವಲಕ್ಕಿ ಸರ ಮಾಡಿಸಲೆಂದು ಅಪ್ಪ ಹತ್ತು ಸಾವಿರ ಹಣ ಕೂಡಿಟ್ಟಿದ್ದರು.ಸಿದ್ದಣ್ಣ ಹೇಳಿದ್ದರಿಂದ ಅಪ್ಪ ಹತ್ತು ಸಾವಿರ ರೂಪಾಯಿಗಳನ್ನು ರೈತ ಹಿತರಕ್ಷಣ ಸಮಿತಿಯಲ್ಲಿ ಹೂಡಿದ್ದರು. ಕಾರಿನಲ್ಲಿ ಬಂದ ಆ ದೊಡ್ಡ ಮನುಷ್ಯರು ಅಪ್ಪನಿಂದ ಹಣ ಪಡೆದು ಇಪ್ಪತ್ತು ಸಾವಿರ ರೂಪಾಯಿಗಳು ಎಂದು ಬರೆದು ಅವರೇ ಸಹಿ ಹಾಕಿದ ಬಾಂಡ್ ಪತ್ರವನ್ನು ನೀಡಿದ್ದರು. ಈಗ ಆ ಪತ್ರ ನೀಡಿ ನಾಲ್ಕು ತಿಂಗಳಾಗಿತ್ತು. ಆದರೆ ಅಪ್ಪ ಹೂಡಿದ ಹಣಕ್ಕೆ ಪಂಗನಾಮ ಹಾಕಿದ್ದರು. ತುಂಬಾ ಕಡೆ ವಿಚಾರಿಸಿದಾಗ ಸರ್ಕಾರದಲ್ಲಿ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಆ ರೀತಿಯ ಯಾವುದೇ ಸಮಿತಿ ಸರ್ಕಾರದಲ್ಲಿ ಇಲ್ಲವೇ ಇಲ್ಲ ಎಂಬ ವಿಷಯ ತಿಳಿಯಿತು. ಅಪ್ಪನ ತರ ನಮ್ಮ ಹಳ್ಳಿಯಲ್ಲಿ ಹತ್ತಾರು ಜನ ಹಣ ಕಳೆದು ಕೊಂಡಿದ್ದರು.ಬಹು ದಿನಗಳಿಂದ ಎರಡೆಳೆಯ ಅವಲಕ್ಕಿ ಸರದ ಆಸೆ ಇಟ್ಟುಕೊಂಡು ಏನೆನೋ ಕಲ್ಪನೆ ಕಟ್ಟಿಕೊಂಡಿದ್ದ ಅಮ್ಮನಿಗೆ ಈ ವಿಷಯ ತಿಳಿದಾಗ ದುಃಖದಿಂದ ಕಣ್ಣೀರು ಹಾಕಿದ್ದಳು. 
ನಾನು ಪ್ರತಿದಿನ ಗುಬ್ಬಚ್ಚಿಗಾಗಿ ತೆಂಗಿನ ಚಿಪ್ಪಿನಲ್ಲಿ ನೀರು ಹಾಕಿ ಕುಡಿಯಲೆಂದೇ ಗೂಡಿನ ಪಕ್ಕದಲ್ಲಿ ಇಡುತ್ತಿದ್ದೆ. ಅಮ್ಮ ಅತ್ತ ಆ ದಿನ ಗುಬ್ಬಚ್ಚಿ ನಾನಿಟ್ಟ ನೀರು ಕುಡಿಯಲೇ ಇಲ್ಲ. ನನ್ನ ಕಣ್ಣ ಮುಂದೆಯೇ ನಮ್ಮ ಮನೆಯ ದೂರದಲ್ಲಿಯೇ ಇರುವ ಹೊಂಡದಿಂದ ಗುಬ್ಬಚ್ಚಿಯು ನೀರು ಕುಡಿದು ಬಂದಿತ್ತು ನನಗೆ ಗುಬ್ಬಚ್ಚಿಯ ಮೇಲೆ ಕೋಪ ಬಂದಿತು. ಈ ವಿಷಯ ಅಮ್ಮನ ಮುಂದೆ ಹೇಳಿಕೊಂಡು ನಾನೂ ದುಃಖಿಸಿದೆ..
" ನಿನ್ನೆ ಮಳೆ ಬಂದಿದೆಲ್ಲಾ ಮಗು, ಅದಕ್ಕೆ ಗುಬ್ಬಚ್ಚಿಯು ಪರಿಸರದಲ್ಲಿ ಸಿಗುವ ನೀರನ್ನೇ ಕುಡಿಯುತ್ತಿದೆ. ಹೊಂಡ ಬತ್ತಿ ಹೋದಾಗ ಮತ್ತೆ ನೀನಿಟ್ಟ ನೀರನ್ನೇ ಕುಡಿಯುತ್ತದೆ ಬಿಡು" ಎಂದು ನನ್ನನ್ನು ಸಮಾಧಾನ ಪಡಿಸಿದಳು.
"ಯಾಕಮ್ಮಾ ಗುಬ್ಬಚ್ಚಿಗೆ ನನ್ನ ಸಹಾಯ ಬೇಡವಾಯಿತಾ...?" ಎಂದು ನಾನು ಮುಗ್ದವಾಗಿ ಪ್ರಶ್ನಿಸಿದೆ.
"ಇಲ್ಲ ಮಗು ಗುಬ್ಬಚ್ಚಿಗಳು ಮನುಷ್ಯರಂತಲ್ಲ.ಮನುಷ್ಯರು ಬೀಸುವ ಜಾಲಕ್ಕೆ ಸುಲಭವಾಗಿ ಗುಬ್ಬಚ್ಚಿಗಳು ಸುಲಭವಾಗಿ ಬಲಿಯಾಗುವುದಿಲ್ಲ. ದುರಾಸೆ ಪಟ್ಟು ಇನ್ನೊಬ್ಬರ ಸಹಾಯ ಅಂತ ಬೇಡೋದು ಮನುಷ್ಯನೊಬ್ಬನೆ ಮಗು.... ಗುಬ್ಬಚ್ಚಿಗಳು ತಾವೇ ಕಷ್ಟಪಟ್ಟು ಆಹಾರ ನೀರನ್ನು ತಾವೇ ಸಂಪಾದಿಸಿಕೊಳ್ಳುತ್ತವೆ. ನಾವು ಹಾಗಲ್ಲ ಪುಕ್ಕಟ್ಟೆ ಏನೋ ಸಿಗುತ್ತೆ ಎಂದಾಕ್ಷಣ ಆಸೆ ಪಟ್ಟು ಜೊಲ್ಲು ಸುರಿಸುತ್ತೇವೆ. ಗುಬ್ಬಚ್ಚಿಯದೇ ಸರಿಯಾದುದು. ನೀನೂ ಗುಬ್ಬಚ್ಚಿಯ ಈ ನೀತಿಯನ್ನು ಕಲಿತು ಕೋ......"
ಅಮ್ಮ ಹೇಳಿದ ಈ ಮಾರ್ಮಿಕ ನುಡಿಗಳು ಅಂದು ನನಗೆ ಅರ್ಥವಾಗಲೇ ಇಲ್ಲ. ಸುಮ್ಮನೆ 'ಹೂಂ..' ಎಂದು ತಲೆ ಅಲ್ಲಾಡಿಸಿದೆ.
ಬಾಲ್ಯದ ಅಂದಿನ ಈ ಘಟನೆ ಮತ್ತೆ ನೆನಪಾದದ್ದು ಮೊನ್ನೆ ದಿನ ... ರಾತ್ರಿ ಊಟಮಾಡಿ ಮಲಗಿದ್ದೆ. ರಾತ್ರಿ ಸುಮಾರು ಒಂದು ಗಂಟೆಯಾಗಿರಬಹುದು. ನನ್ನ ಮೊಬೈಲ್ ಚಿಕ್ಕದಾಗಿ ರಿಂಗಣಿಸಿತು. ನಿದ್ದೆ ಕಣ್ಣಿನಿಂದಲೇ ಮೊಬೈಲನ್ನು ಎತ್ತಿಕೊಂಡೆ. ನನ್ನ ಮೈಲ್ ಇನ್ ಬಾಕ್ಸ ನಲ್ಲಿ ಹೊಸದೊಂದು ಮೇಲ್ ಬಂದಿತ್ತು. ಅದರಲ್ಲಿ
" ನಾನು ಎಡ್ವಿನ್ ರಾಸೋ..... ಇಂಡಿಯಾದವನು, ಎನ್,ಆರ್,ಐ..... ನನ್ನ ಅಂಕೌಟ್ ನಲ್ಲಿರುವ ಹತ್ತು ಕೋಟಿ ಹಣವನ್ನು ನಿಮಗೆ ವರ್ಗಾಯಿಸಬೇಕೆಂದಿದ್ದೇನೆ.... ಇಲ್ಲಿ ನನಗೆ ತೆರಿಗೆ ಕಟ್ಟುವ.... ಬ್ಲ್ಯಾಕ್ ಹಣ ಹೊಂದಿದ ,.ಇತ್ಯಾದಿ ತರಹದ ಸಮಸ್ಯೆಗಳಿವೆ. ನೀವು ಹಣ ವರ್ಗಾಯಿಸಲು ನಿಮ್ಮ ಬ್ಯಾಂಕ್ ನ ಡಿಟೈಲ್ಸ ನನಗೆ ಮೇಲ್ ಮಾಡಿ... ನನಗೆ ಸಹಾಯ ಮಾಡಿದರೆ ಶೇ ಐವತ್ತು ಹಣ ನಿಮಗೂ ಸಿಗುತ್ತದೆ"
ಈ ಮೇಲ್ ಓದಿದ ಕೂಡಲೆ ನನಗೆ ಸಂತೋಷವಾಯಿತು.
ಐದು ಕೋಟಿ ಹಣ ನನ್ನದಾಗುತ್ತದೆಯೆಂದು ನಾನು ಕಲ್ಪನಾ ಲೋಕದಲ್ಲಿ ತೇಲಿ ಹೋದೆ... ಹಾಗೆಯೇ ಮತ್ತೆ ನಿದ್ರೆ ಆವರಸಿತು. ಅದೇ ನೆನಪಲ್ಲಿ ಮಲಗಿದ್ದರಿಂದ ರಾತ್ರಿ ಕನಸಿನಲ್ಲಿ ದೊಡ್ಡದಾದ ಬಂಗಲೆಯಲ್ಲಿ ವಾಸವಾಗಿದ್ದೆ. ಆಳು ಕಾಳುಗಳು ನನ್ನ ಸೇವೆಯಲ್ಲಿ ನಿರತರಾಗಿದ್ದರು. ನಾಲ್ಕೈದು ಕಾರುಗಳು ನನ್ನ ಮನೆಯ ಮುಂದೆ ನಿಂತಿದ್ದವು......
ಬೆಳಗ್ಗೆಯಾಯಿತು. ಇನ್ನೂ ರಾತ್ರಿ ಬಂದ ಮೇಲ್ ಬಗ್ಗೆನೇ ಯೋಚಿಸುತ್ತಿದ್ದೆ. ತಕ್ಷಣ ಆಗ ನೆನಪಿಗೆ ಬಂದಿದ್ದು. ನನ್ನ ಗುಬ್ಬಚ್ಚಿಗಳು..... ಆ ದಿನ ಅಮ್ಮ ಹೇಳಿದಂತೆ
"ದುರಾಸೆ ಪಟ್ಟು ಇನ್ನೊಬ್ಬರ ಸಹಾಯಕ್ಕೆ ಹಾತೊರೆಯುವುದು ಮನುಷ್ಯನೇ ಹೊರತು ಗುಬ್ಬಚ್ಚಿಗಳಲ್ಲ."
ಎಂಬ ಮಾತುಗಳು ಸಹ ನೆನಪಿಗೆ ಬಂದಿತು. ಅಪ್ಪ ಇದೇ ರೀತಿ ಹತ್ತು ಸಾವಿರ ರೂಪಾಯಿಗಳನ್ನು ಕಳೆದು ಕೊಂಡಿದ್ದು ಕಣ್ಣ ಮುಂದೆಯೇ ಬಂದು ಹೋಯಿತು. ಯಾರೋ ಕೊಡುವ ಐದು ಕೋಟಿಗೆ ಆಸೆ ಪಟ್ಟು ಕಷ್ಟ ಪಟ್ಟು ದುಡಿದು ಸಂದಾದಿಸಿದ ಹಣ ಕಳೆದು ಕೊಳ್ಳುವುದು ಬೇಡವೆನಿಸಿತು. ಗುಬ್ಬಚ್ಚಿಗಳಂತೆ ಕಷ್ಟ ಪಟ್ಟು ದುಡಿದು ಗಳಿಸಬೇಕು ಎಂದುಕೊಂಡೆ. ಇದೇ ದುರಾಸೆಯ ಯೋಚನೆಯಲ್ಲಿದ್ದ ನಾನು ಅದರಿಂದ ಹೊರ ಬರಲು ಎಫ್,ಎಂ, ರೇಡಿಯೋ ಆನ್ ಮಾಡಿದೆ... ಸುಂದರವಾದ ಗೀತೆಯೊಂದು ನನ್ನ ಮನಸ್ಸನ್ನು ಮುದಗೊಳಿಸಿತು
"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ... ಹಾಡೋಣ ನಾವು ಇಂದು ಕುಚಿ..ಕುಚಿ.........."
ಈ ಹಾಡು ಕೇಳಿ ಮತ್ತೆ ಗುಬ್ಬಚ್ಚಿಗಳು ನೆನಪಾದವು. ಗುಬ್ಬಚ್ಚಿ ಗೂಡಿನಂತಿರುವ ನನ್ನ ಸುಂದರ ಸಂಸಾರದಲ್ಲಿ ದರಾಸೆಯಿಂದಲೂ.... ಮೋಸದ ಜಾಲದಿಂದಲೂ ಕೂಡಿದ ಈ ತರಹದ ಹಣಕ್ಕೆ ಆಸೆ ಪಡಬಾರದೆಂದುಕೊಂಡೆನು......
                                                                                  - ಪ್ರಕಾಶ್ ಎನ್ ಜಿಂಗಾಡೆ

Friday, 22 January 2016

ಮುರ್ಗಿ ಕೆ ಅಂಡೆ

ಮುರ್ಗಿ ಕೆ ಅಂಡೆ..ಅದು ಎಂಬತ್ತರ ದಶಕ. ನಾನು ಆಗ ಐದನೇ ತರಗತಿ ಓದುತ್ತಿದ್ದೆ. ಭಾನುವಾರ ಬಂತೆಂದರೆ ಸಾಕು ರಮಾನಂದ ಸಾಗರರ ರಾಮಾಯಣ ಧಾರಾವಾಹಿ ನೋಡಲು ನಾನು ನನ್ನ ಸಮ ವಯಸ್ಕರ ಹುಡುಗರನ್ನು ಕಟ್ಟಿಕೊಂಡು ಬ್ಲ್ಯಾಕ್ ಅಂಡ್ ವೈಟಿನ ಡಬ್ಬಾ ಟಿ.ವಿ ಯ ಮುಂದೆ ಕುಳಿತುಕೊಳ್ಳುತ್ತಿದ್ದೆವು. ರಾಮಾಯಣ ಪ್ರಾರಂಭವಾದ ಕೂಡಲೇ ದೊಡ್ಡವರೆಲ್ಲಾ ಗರ ಬಡಿದವರಂತೆ ಬಾಯಿ ದೊಡ್ಡದಾಗಿ ಬಿಟ್ಟುಕೊಂಡು ಟಿ.ವಿ. ನೋಡುತ್ತಿದ್ದರು. ಆದರೆ ನಮ್ಮಂತ ಮಕ್ಕಳಿಗೆ ರಾಮಾಯಣಕ್ಕಿಂತ ಹೆಚ್ಚಾಗಿ ಮಧ್ಯೆ ಮಧ್ಯೆ ಪ್ರಸಾರವಾಗುತ್ತಿದ್ದ ' ಅಡ್ವರ್ ಟೈಸ್ ಮೆಂಟ್' (ಜಾಹಿರಾತು) ಗಳೇ ಹೆಚ್ಚು ಖುಷಿ ಕೊಡುತ್ತಿದ್ದವು. 'ಫ್ರೆಷ್ಕಾ' ಸೋಪಿನ ಜಾಹಿರಾತು ಬಂದ ಕೂಡಲೇ 'ಹೋ......' ಎಂದು ಕೂಗುತ್ತಿದ್ದವು. 'ಪ್ರಾಮಿಸ್' ಟೂತ್ ಪೇಸ್ಟಿನ ಜಾಹಿರಾತು ಬಂದಕೂಡಲೇ ನಾವೂ ನಮ್ಮ ಹಲ್ಲುಗಳನ್ನು ತೋರಿಸಿ ಕಿಸಿ ಕಿಸಿ ನಗುತ್ತಿದ್ದೆವು ಅಮುಲ್ ಜಾಹಿರಾತು ಬಂದ ಕೂಡಲೇ ನಮ್ಮ ಬಾಯಲ್ಲಿ ನೀರು ಸುರಿಸಿಕೊಳ್ಳುತ್ತಾ ನಾಲಿಗೆಯಿಂದ ತುಟಿಯನ್ನೊಮ್ಮೆ ಸವರಿಕೊಳ್ಳುತ್ತಿದ್ದವು. ಆ ಪರಿಯಾಗಿ ಜಾಹಿರಾತುಗಳು ನಮ್ಮ ಮನಸನ್ನು ಸೂರೆಗೊಳಿಸಿದ್ದವು. ನಾವು ಆಟ ಆಡುವಾಗಲೂ ಜಾಹಿರಾತಿನ ಹಾಡುಗಳನ್ನೇ ಗುನುಗಿಕೊಳ್ಳುತ್ತಿದ್ದವು.
ಒಮ್ಮೆ ಗೋಲಿ ಆಟವಾಡುತ್ತಿದ್ದೆ. ಗೋಲಿಗಳನ್ನು ಗೆದ್ದ ಖುಷಿಗಾಗಿ ಜಾಹಿರಾತಿನ ಗೀತೆಯೊಂದನ್ನು ಗುನುಗಲಾರಂಭಿಸಿದೆ. ಸಂತೋಷವಾಗಿದ್ದಾಗ ನಮಗೆ ಅರಿವಿಲ್ಲದಂತೆ ಹಾಡುಗಳು ಹೊರಬರಲಾರಂಭಿಸುತ್ತವೆ.

"ಮುರ್ಗಿ ಕೆ ..... ಮುರ್ಗಿ ಕೆ ... ಮುರ್ಗಿ ಕೆ ...ಅಂಡೆ.
ಜಾನ್ ಮೇರಿ... ಜಾನ್ ಮೇರಿ... ಮುರ್ಗಿ ಕೆ ಅಂಡೆ" ಎಂದು ಹಾಡಿಕೊಂಡೆ

ಅದು ಆ ದಿನದ ಕೋಳಿ ಮೊಟ್ಟೆಯ ಪ್ರಸಿದ್ಧ ಜಾಹಿರಾತಿನ ಹಾಡು. ಬಹಳ ಜನಪ್ರಿಯ ಹಾಡು. ಈ ಹಾಡನ್ನು ಹಾಡುತ್ತಲೇ ಖುಷಿಯಿಂದ ಆಟದಲ್ಲಿ ತಲ್ಲೀನ ನಾಗಿದ್ದೆ... ಹಿಂದಿನಿಂದ ನನ್ನ ಬೆನ್ನಿಗೆ ಯಾರೋ ಹೊಡೆದಂತಾಯಿತು. ತಿರುಗಿ ನೋಡಿದೆ

ಅವನು ನನ್ನ ಸ್ನೇಹಿತ... ಮುರ್ಗಿ...!!!

ಮುರ್ಗಿ ಎಂದರೆ ಮುರುಗೇಶ್ ಅಂತ.. ನಾವು ನಮ್ಮ ಗೆಳೆರನ್ನು ಪೂರ್ಣ ಹೆಸರಿನಿಂದ ಯಾವತ್ತೂ ಕರೆದವರಲ್ಲ... ಹೆಸರು ಎಷ್ಟೇ ಉದ್ದವಾಗಿದ್ದರೂ ಎರಡಕ್ಷರಕ್ಕೆ ಬದಲಿಸಿ ವಕ್ರ ವಕ್ರವಾಗಿ ಹೇಳುತ್ತಿದ್ದೆವು.
ನರೇಂದ್ರನಿಗೆ.... ನಾರ,
ಕೊಟ್ರೇಶಪ್ಪನಿಗೆ. ...ಕೊಟ್ರಿ, ಪಂಡರೕಿ ನಾಥನಿಗೆ.. ಪಂಡ್ರಿ
ನನ್ನ ಪ್ರಕಾಶ್ ಎಂಬ ಹೆಸರಿಗೆ.... ಪಕ್ಕ
ಹೀಗೆ............

"ಯಾಕೋ ಹೊಡೆದೆ"

ನಾನು ಮುರ್ಗಿಯನ್ನು ಪ್ರಶ್ನಿಸಿದೆ

" ನನ್ ಮಗನೇ ಅವಾಗಿಂದ ಕೇಳ್ತಾ ಇದ್ದೀನಿ... ಮುರ್ಗಿ ಕೆ ಅಂಡೆ ಅಂತೆ.... ಮುರ್ಗಿ ಕೆ ಅಂಡೆ ನನ್ನೇ ಗೇಲಿ ಮಾಡ್ತೀಯಾ.?"
ಹಾಗೆ ಹೇಳ್ತಾ ಇನ್ನೊಂದು ಏಟು ಹಾಕಿದ

"ಲೋ... ಮುರ್ಗಿ,... ಮುರ್ಗಿ ಕೆ ಅಂಡೆ ಅನ್ನೋದು ಜಾಹಿರಾತಿನ ಹಾಡು ಕಣೋ.... ಅದು ಹಿಂದಿ ಭಾಷೆಯದು ..ಅಂದರೆ ಅದು ಕೋಳಿ ಮೊಟ್ಟೆ ಜಾಹಿರಾತು. ನಿನಗೆ ಹೀಯಾಳಿಸಿದ್ದಲ್ಲ . ನಿನ್ನನ್ನು ಹಾಗೆ  ಕರೆದದ್ದಲ್ಲ"
ಎಂದೆ

ನಮ್ಮ ಮುರ್ಗಿಗೆ ಹಿಂದಿ ಭಾಷೆ ಬರುವುದಿರಲಿ, ಆ  ಭಾಷೆಯ ಗಂಧ ಗಾಳಿಯೂ ಅವನಿಗೆ ಗೊತ್ತಿರಲಿಲ್ಲ. ನಾನು ಎಷ್ಟೇ ಹೇಳಿದರೂ ಆತ ನನ್ನ ಮಾತನ್ನು ಆತ ಕೇಳಲು ಸಿದ್ಧನಿರಲಿಲ್ಲ.

" ನನ್ನೇ ಗೇಲಿ ಮಾಡ್ತಿಯೇನೋ... ಮುರ್ಗಿ ಕೆ ಅಂಡೆಯಂತೆ"
ಎಂದು ಬಯ್ಯುತ್ತಾ  ಮತ್ತೆ ಇನ್ನೆರಡು ಏಟು ಹಾಕಿದ

"ಲೋ... ಮುರ್ಗಿ ನೀನೇನು ಮೊಟ್ಟೆ ಇಡ್ತಿಯೋನೋ.. ಯಾಕೋ ಈ ತರ ಆಡ್ತೀಯಾ....? ಮುರ್ಗಿ ಅಂದರೆ ನೀನಲ್ವೋ ಹಿಂದಿ ಭಾಷೆಯಲ್ಲಿ 'ಕೋಳಿ'ಅಂತ ಅರ್ಥ.  ಇದು ರಾಮಾಯಣದ ಮಧ್ಯೆ ಬರೋ ಜಾಹಿರಾತು ಕಣೋ"
ಮತ್ತೊಮ್ಮೆ ಅವನಿಗೆ ಸಮಜಾಯಿಸಲು ಪ್ರಯತ್ನಿಸಿದೆ....

"ಹಿಂದಿ ಯಂತೆ ...ಹಿಂದಿ" ಎನ್ನುತ್ತಾ ಅಟ್ಟಿಸಿ ಕೊಂಡು ಮತ್ತೆ ಹೊಡೆಯಲು ಬಂದ. ನಾನು ಸಿಗಲೇ ಇಲ್ಲ. ಅಟ್ಟಿಸಿಕೊಂಡು ಓಡಿ ಸುಸ್ತಾದ ಬಳಿಕ. ನನ್ನನ್ನೇ ಕೋಪದಿಂದ ಹಂಗಿಸಲು ಶುರು ಮಾಡಿದ..

" ನನಗೇ... ಮುರ್ಗಿ ಕೆ ಅಂಡೆ,...ಮುರ್ಗಿಕೆ ಅಂಡೆ ಅಂತ ಹೀಯಾಳಿಸುತ್ತೀಯಾ...ನನಗೂ ಬರುತ್ತೆ. ಪಕ್ಕಿ ಕೆ... ಪಕ್ಕಿ ಕೆ ... ಪಕ್ಕಿ ಕೇ....ಅಂಡೆ"

ಎಂದು ನನ್ನ ಪ್ರಕಾಶ್ ಎಂಬ ಹೆಸರನ್ನು ಅಪಭ್ರಂಶಗಳಿಸಿ 'ಪಕ್ಕಿ ಕೆ ಅಂಡೆ' ಎಂದು ಹಾಡ ತೊಡಗಿದ. ಅವನ ಹಾಡು ಎರಡು ಮೂರು ಬೀದಿಗೆ ಕೇಳಿಸುವಷ್ಟು ಜೋರಾಗಿತ್ತು. ಮುರ್ಗಿಯು ಹೇಳಿದ ಆ ಹಾಡು ಕೇಳಿ ನನಗೆ ನನಗೆ ನಗು ತಡೆಯಲಾಗಲಿಲ್ಲ......ಆತನಿಗೆ ಹಿಂದಿ ಅರ್ಥವಾಗದಿದ್ದಕ್ಕೆ ನನ್ನ ಹೆಸರಿನಲ್ಲಿ ಹಾಡೊಂದು ಸೃಷ್ಟಿಸಿ,  ನನ್ನ ಜೊತೆ ಜಗಳ ತೆಗೆದು ಇಷ್ಟೊಂದು ಹಾಸ್ಯ ಮತ್ತು ಅವಾಂತರ ಸೃಷ್ಟಿಸಿದ್ದ....!!

ಮೊದಲ ಸಲ ದೂರದರ್ಶನ ಬಂದಾಗ ಹಿಂದಿ ಭಾಷೆಯ ನ್ಯಾಷನಲ್ ಚಾನಲ್ ಬಿಟ್ಟರೆ ಈಗಿನಂತೆ ನೂರಾರು ಚಾನಲ್ ಗಳಿರಲಿಲ್ಲ. ಹಿಂದಿ ಭಾಷೆ ಬಂದರೇನು ಬಿಟ್ಟರೇನು ಅನಿವಾರ್ಯವಾಗಿ ನಾವು ಕಣ್ಣು ಬಾಯಿ ಬಿಟ್ಟುಕೊಂಡು ಅದೇ ಚಾನಲ್ ನೋಡುತ್ತಿದ್ದೆವು. ಹಿಂದಿ ಭಾಷೆಯ ಅಲ್ಪ ಜ್ಞಾನವೂ ಇರದ ನಮ್ಮಂತ ಹಳ್ಳಿಯ ಜನಗಳಿಗೆ ಟಿ.ವಿ.ಯ ಕಾರ್ಯಕ್ರಮಗಳು ಅರ್ಥವಾಗುತ್ತಿದುದು ಸಹ ಅಷ್ಟಕಷ್ಟೆ.. ಮುರ್ಗಿಯಂತಹ ಸಾಕಷ್ಟು ಜನ ನಮ್ಮ ಹಳ್ಳಿಯಲ್ಲಿದ್ದರು.........
ಮುರ್ಗಿ ಎಂದರೆ ಕೋಳಿ ಎಂದು..  ಅಂದು ನಾನು ಯಾವ ಮುರ್ಗಿಗೆ ನಾನು ಸಮಜಾಯಿಸಲು ಪ್ರಯತ್ನಿಸಿದ್ದೆನೋ..?   ಯಾರು ಆ ದಿನ ಹಿಂದಿ ಪದದ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸದೇ ಹುಂಬನಂತೆ ವರ್ತಿಸಿದನೋ...?  ಅದೇ ಮುರ್ಗಿ ಈಗ ಹಿಂದಿ ಪಂಡಿತ..... ಆ ಮಹಾಶಯ ಈಗ ಎ.ಪಿ. ಮುರುಗೇಶ್ ಹಿಂದಿ ಉಪನ್ಯಾಸಕನಾಗಿ ಬದಲಾಗಿದ್ದ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಹಿಂದಿ ಹೆಚ್,ಓ,ಡಿ, ಬೇರೆ. ಸಾವಿರಾರು ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಜ್ಞಾನವನ್ನು ಧಾರೆಯೆರೆಯುತ್ತಿದ್ದ....
 ಅತ ಇಪ್ಪತ್ತು ವರ್ಷಗಳ ನಂತರ ನನಗೆ ಮಲ್ಲೇಶ್ವರಂ ಮಾರ್ಕೇಟ್ ನಲ್ಲಿ ಸಿಕ್ಕಿದನು. ಒಬ್ಬರನ್ನೊಬ್ಬರು ನೋಡಿದ ಕೂಡಲೇ ಬಾಲ್ಯದ ಗೆಳೆತನದ ಪ್ರೀತಿ ಇಬ್ಬರಲ್ಲೂ ಉಕ್ಕಿ ಹರಿಯಿತು. ಜನಜಂಗುಳಿಯ ಆ ಮಾರುಕಟ್ಟೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡೆವು. ಗೆಳೆತನದ ಪ್ರೀತಿ ಹೆಚ್ಚಾಗಿ ನನ್ನನ್ನು ಅವನ ಮನೆಗೂ ಕರೆದುಕೊಂಡು ಹೋದ. ಮನೆ ಸುಂದರವಾಗಿ ಕಟ್ಟಿದ್ದ. ಗೇಟನ್ನು ತಳ್ಳಿ ಒಳ ಹೋಗುವಾಗ ಆತನ ಮನೆಯ ಮಂದೆ ಹಾಕಿದ್ದ ಬೋರ್ಡ್ ಕಾಣಿಸಿತು.

"ಎ,ಪಿ, ಮುರುಗೇಶ್ ಹಿಂದಿ ಪಂಡಿತರು ಮತ್ತು  ಪ್ರಾಂಶುಪಾಲರು. ಎಂ, ಎ,  ಪಿ,ಹೆಚ್,ಡಿ'

ಎಂದು ಬರೆದಿತ್ತು

ಆ ಬೋರ್ಡ್ ನೋಡಿ ನಾನು ಮೂಕನಾಗಿ ಹೋದೆ. 
ಅಂದಿನಿಂದ ಇಬ್ಬರಲ್ಲೂ ಮತ್ತೆ ಸಂಪರ್ಕ ಬೆಳೆಯಿತು.
ನಾನೂ ಸಹ ಶಾಲೆಯಲ್ಲಿ ಕೆಲಸ ಮಾಡುತ್ತಿದುದರಿಂದ ನನಗೆ ತಿಳಿಯದ ಹಿಂದಿ ಪದಗಳ ಅರ್ಥ ಅವನಿಂದ ಕೇಳಿ ತಿಳಿಯುತ್ತಿದ್ದೆ. ಅಂದಿನಿಂದ ಎಷ್ಟೋ ಸಲ ಹಿಂದಿ ಪದಗಳ ಅರ್ಥ ತಿಳಿಯದಿದ್ದಾಗ ನನಗೆ ಫೋನ್ ಮೂಲಕವೇ ಹೇಳಿ ಕೊಡುತ್ತಿದ್ದ. 
ಅಂದು ಕೆಲಸವಿರಲಿಲ್ಲ ಮುರ್ಗಿಯನ್ನು ಸತಾಯಿಸಬೇಕೆನಿಸಿತು. ನನ್ನ ಆ ಬಾಲ್ಯದ 'ಮುರ್ಗಿ ಕೆ ಅಂಡೆ'  ಘಟನೆ ಮತ್ತೆ ನೆನಪಾಯಿತು. ಫೋನ್ ಮಾಡಿದೆ..

"ಪಂಡಿತರೇ... ಪ್ಲೀಸ್ ....ಮುರ್ಗಿ ಕೆ ಅಂಡೆ ಪದದ ಅರ್ಥ ಹೇಳುವಿರಾ....??" ಎಂದೆ

"ಲೇ.... ಪಕ್ಕಿ ಲೋಫರ್ ನನ್ಮಗನೆ.... ನಿನಗೆ ನಿಮ್ ಮನಿಗೇ ಬಂದು ಅಟ್ಟಾಡಿಸಿಕೊಂಡು ಹೊಡಿತೀನಿ ಕಣ್ಲೆ...ಮತ್ತೆ ಗೇಲಿ ಮಾಡ್ತಿಯಾ....?" ಎಂದ

"ಲೇ.... ಮುರ್ಗಿ ಈಡಿಯಟ್ ಕೋತಿ ನನ್ ಮಗನೇ.. ಕಾಲೇಜಿಗೆ ಬಂದು 'ಮುರ್ಗಿ ಕೆ ಅಂಡೆ' ಕತೆ ನೀಮ್ ಸ್ಟೂಡೆಂಟ್ ಗಳಿಗೆ ಮತ್ತು ನಿನ್ನ ಸ್ಟ್ಯಾಫ್ ಗೆ ಹೇಳ್ಲಾ....?" ಎಂದೆ

"ಲೋ....ಪಕ್ಕ... ಈಗ ನಾನು ಪ್ರಿನ್ಸಿಪಲ್ ಆಗಿದಿನಿ ಕಣೊ ಸ್ವಲ್ಪ ಮರ್ಯಾದೆನಾದ್ರೂ ಕೊಡೊ....!!"
ಎಂದ...
ನಮ್ಮ ಹಳ್ಳಿ ಭಾಷೆಯ ಬೈಗುಳಗಳು ಇನ್ನೂ ಸ್ವಲ್ಪ ಹೊತ್ತು ಫೋನ್ ಮೂಲಕವೇ ಪರಸ್ಪರ ವಿನಿಮಯಗೊಂಡವು. ತುಂಬಾ ದಿನಗಳ ನಂತರ ಆ ಬೈಗುಳಗನ್ನು ಕೇಳಿಕೊಂಡು ಇಬ್ಬರೂ ಧನ್ಯರಾದೆವು. ಒಂದು ಕ್ಷಣ ಬೆಂಗಳೂರಿನ 'ಹಾಯ್.. ಬಾಯ್' ಅನ್ಯೋ ಕೃತಕ ಜೀವನದಿಂದ ಬಾಲ್ಯದ ಸಹಜ ಜೀವನದತ್ತ ಹೋದೆವು ಎಂದೆನಿಸಿತು...
ಸಹಜ ಹಳ್ಳಿ ಭಾಷೆಯು ನಮ್ಮನ್ನು ಕರ್ಣಾನಂದವಾಗಿಸಿತು...

ಇಬ್ಬರೂ ನಗುತ್ತಲೇ ತಮಾಷೆ ಮಾಡಿಕೊಂಡು ಫೋನ್ ಕೆಳಗಿಟ್ಟೆವು ....
- ಪ್ರಕಾಶ್ ಎನ್ ಜಿಂಗಾಡೆ

Wednesday, 13 January 2016

ಜೇಡನ ಬಲೆ


ಜೇಡನ ಬಲೆ


ಎಂತಹ ವಕ್ರ ವಿನ್ಯಾಸದ ವರ್ತುಲ
ಹದವಾದ ಮೃದುವಾದ ರೇಷಿಮೆ ನೂಲಿನಲಿ
ರೇಖೆಗಳು ತ್ರಿಕೋನಗಳು ವಕ್ರ ರೂಪಗಳು
ರೇಖಾಗಣಿತ ಸೂತ್ರಕೂ ಮೀರಿ ನಿಂತಿಹದು
ಗೀಚಿ ಬರೆದ ಸುಂದರ ವೃತ್ತವದು
ದೇವರು ನೀಡಿದ ಸುಂದರ ಕಲೆಯದು

ಎಲ್ಲಾ ವೀರ ಅಭಿಮನ್ಯುಗಳು ಆರಂಭದಲಿ
ಬಲೆಯಲಿ ನುಗ್ಗುವರು ನಚ್ಚುವರು
ಯಾರಿಹರಿಲ್ಲಿ ಸವ್ಯಸಾಚಿ
ಕೌರವರ ವಿದ್ರೋಹದ ಜಾಲವಿದು
ಭೇದಿಸಲಾಗದ ಚಕ್ರವ್ಯೂಹವಿದು
ರಚನೆಯಾದ ಮೋಸದ ಖೆಡ್ಡವಿದು...

ಹೊಂಚುಹಾಕುತಿಹುದು ಕೆಡವಿ ತಿನ್ನಲು ಮಿಕವನು
ಬಲೆಯಲಿ ಸಿಲುಕಿಸಿ ಸಾಯಿಸಿ
ಒದ್ದಾಡಿಸಿ ಅಟ್ಟಾಡಿಸಿ
ನರನರ ನರಳಿಸಿ
ಕಾಯಿಸಿ ಬೇಯಿಸಿ
ಬಲಿ ಪಡೆಯಿತು ಸ್ವಾರ್ಥದ ಬಯಕೆಗೆ....

ಖೆಡ್ಡ ಎಂದೆನೇ..? ಯಾವುದು ಖೆಡ್ಡ...?
ಅದಕ್ಕೆ ಅದರದೇ ಪ್ರಕೃತಿ ನಿಯಮವೂ
ಅದೇ ನೀತಿ ಅದೇ ಹೊಟ್ಟೆಪಾಡಿನ ಧರ್ಮವು..
ಧರ್ಮ ಕರ್ಮ ನೀತಿ ನಿಯಮ ಮೀರುವವನು
ದೇವರು ಎಳೆದ ಗೆರೆಯನು ದಾಟುವವನು
ಮಾನವ ಮಾತ್ರ, ಅವನದ್ದೇ ಷಡ್ಯಂತ್ರದ ವ್ಯೂಹ

ರಾಜನೊಬ್ಬ ಕಲಿಯಲಿಲ್ಲವೇ ಯಶಸ್ಸಿನ ಪಾಠವ
ಮರಳಿ ಯತ್ನಿಸು.. ಮರಳಿ ಯತ್ನಿಸು...
ಗಾಂಭಿರ್ಯಕ್ಕೆ ಆನೆ, ಶೌರ್ಯಕ್ಕೆ ಸಿಂಹ
ನಿಯತ್ತಿಗೆ ನಾಯಿ, ಸತ್ಯಕ್ಕೆ ಗೋವು
ಮರಳಿ ಯತ್ನಕ್ಕೆ ಜೇಡ
ಮಾನವನೆಲ್ಲಿಗೆ ಸಲ್ಲುವನು.....?
- ಪ್ರಕಾಶ್.ಎನ್.ಜಿಂಗಾಡೆ