Friday, 22 January 2016

ಮುರ್ಗಿ ಕೆ ಅಂಡೆ

ಮುರ್ಗಿ ಕೆ ಅಂಡೆ..ಅದು ಎಂಬತ್ತರ ದಶಕ. ನಾನು ಆಗ ಐದನೇ ತರಗತಿ ಓದುತ್ತಿದ್ದೆ. ಭಾನುವಾರ ಬಂತೆಂದರೆ ಸಾಕು ರಮಾನಂದ ಸಾಗರರ ರಾಮಾಯಣ ಧಾರಾವಾಹಿ ನೋಡಲು ನಾನು ನನ್ನ ಸಮ ವಯಸ್ಕರ ಹುಡುಗರನ್ನು ಕಟ್ಟಿಕೊಂಡು ಬ್ಲ್ಯಾಕ್ ಅಂಡ್ ವೈಟಿನ ಡಬ್ಬಾ ಟಿ.ವಿ ಯ ಮುಂದೆ ಕುಳಿತುಕೊಳ್ಳುತ್ತಿದ್ದೆವು. ರಾಮಾಯಣ ಪ್ರಾರಂಭವಾದ ಕೂಡಲೇ ದೊಡ್ಡವರೆಲ್ಲಾ ಗರ ಬಡಿದವರಂತೆ ಬಾಯಿ ದೊಡ್ಡದಾಗಿ ಬಿಟ್ಟುಕೊಂಡು ಟಿ.ವಿ. ನೋಡುತ್ತಿದ್ದರು. ಆದರೆ ನಮ್ಮಂತ ಮಕ್ಕಳಿಗೆ ರಾಮಾಯಣಕ್ಕಿಂತ ಹೆಚ್ಚಾಗಿ ಮಧ್ಯೆ ಮಧ್ಯೆ ಪ್ರಸಾರವಾಗುತ್ತಿದ್ದ ' ಅಡ್ವರ್ ಟೈಸ್ ಮೆಂಟ್' (ಜಾಹಿರಾತು) ಗಳೇ ಹೆಚ್ಚು ಖುಷಿ ಕೊಡುತ್ತಿದ್ದವು. 'ಫ್ರೆಷ್ಕಾ' ಸೋಪಿನ ಜಾಹಿರಾತು ಬಂದ ಕೂಡಲೇ 'ಹೋ......' ಎಂದು ಕೂಗುತ್ತಿದ್ದವು. 'ಪ್ರಾಮಿಸ್' ಟೂತ್ ಪೇಸ್ಟಿನ ಜಾಹಿರಾತು ಬಂದಕೂಡಲೇ ನಾವೂ ನಮ್ಮ ಹಲ್ಲುಗಳನ್ನು ತೋರಿಸಿ ಕಿಸಿ ಕಿಸಿ ನಗುತ್ತಿದ್ದೆವು ಅಮುಲ್ ಜಾಹಿರಾತು ಬಂದ ಕೂಡಲೇ ನಮ್ಮ ಬಾಯಲ್ಲಿ ನೀರು ಸುರಿಸಿಕೊಳ್ಳುತ್ತಾ ನಾಲಿಗೆಯಿಂದ ತುಟಿಯನ್ನೊಮ್ಮೆ ಸವರಿಕೊಳ್ಳುತ್ತಿದ್ದವು. ಆ ಪರಿಯಾಗಿ ಜಾಹಿರಾತುಗಳು ನಮ್ಮ ಮನಸನ್ನು ಸೂರೆಗೊಳಿಸಿದ್ದವು. ನಾವು ಆಟ ಆಡುವಾಗಲೂ ಜಾಹಿರಾತಿನ ಹಾಡುಗಳನ್ನೇ ಗುನುಗಿಕೊಳ್ಳುತ್ತಿದ್ದವು.
ಒಮ್ಮೆ ಗೋಲಿ ಆಟವಾಡುತ್ತಿದ್ದೆ. ಗೋಲಿಗಳನ್ನು ಗೆದ್ದ ಖುಷಿಗಾಗಿ ಜಾಹಿರಾತಿನ ಗೀತೆಯೊಂದನ್ನು ಗುನುಗಲಾರಂಭಿಸಿದೆ. ಸಂತೋಷವಾಗಿದ್ದಾಗ ನಮಗೆ ಅರಿವಿಲ್ಲದಂತೆ ಹಾಡುಗಳು ಹೊರಬರಲಾರಂಭಿಸುತ್ತವೆ.

"ಮುರ್ಗಿ ಕೆ ..... ಮುರ್ಗಿ ಕೆ ... ಮುರ್ಗಿ ಕೆ ...ಅಂಡೆ.
ಜಾನ್ ಮೇರಿ... ಜಾನ್ ಮೇರಿ... ಮುರ್ಗಿ ಕೆ ಅಂಡೆ" ಎಂದು ಹಾಡಿಕೊಂಡೆ

ಅದು ಆ ದಿನದ ಕೋಳಿ ಮೊಟ್ಟೆಯ ಪ್ರಸಿದ್ಧ ಜಾಹಿರಾತಿನ ಹಾಡು. ಬಹಳ ಜನಪ್ರಿಯ ಹಾಡು. ಈ ಹಾಡನ್ನು ಹಾಡುತ್ತಲೇ ಖುಷಿಯಿಂದ ಆಟದಲ್ಲಿ ತಲ್ಲೀನ ನಾಗಿದ್ದೆ... ಹಿಂದಿನಿಂದ ನನ್ನ ಬೆನ್ನಿಗೆ ಯಾರೋ ಹೊಡೆದಂತಾಯಿತು. ತಿರುಗಿ ನೋಡಿದೆ

ಅವನು ನನ್ನ ಸ್ನೇಹಿತ... ಮುರ್ಗಿ...!!!

ಮುರ್ಗಿ ಎಂದರೆ ಮುರುಗೇಶ್ ಅಂತ.. ನಾವು ನಮ್ಮ ಗೆಳೆರನ್ನು ಪೂರ್ಣ ಹೆಸರಿನಿಂದ ಯಾವತ್ತೂ ಕರೆದವರಲ್ಲ... ಹೆಸರು ಎಷ್ಟೇ ಉದ್ದವಾಗಿದ್ದರೂ ಎರಡಕ್ಷರಕ್ಕೆ ಬದಲಿಸಿ ವಕ್ರ ವಕ್ರವಾಗಿ ಹೇಳುತ್ತಿದ್ದೆವು.
ನರೇಂದ್ರನಿಗೆ.... ನಾರ,
ಕೊಟ್ರೇಶಪ್ಪನಿಗೆ. ...ಕೊಟ್ರಿ, ಪಂಡರೕಿ ನಾಥನಿಗೆ.. ಪಂಡ್ರಿ
ನನ್ನ ಪ್ರಕಾಶ್ ಎಂಬ ಹೆಸರಿಗೆ.... ಪಕ್ಕ
ಹೀಗೆ............

"ಯಾಕೋ ಹೊಡೆದೆ"

ನಾನು ಮುರ್ಗಿಯನ್ನು ಪ್ರಶ್ನಿಸಿದೆ

" ನನ್ ಮಗನೇ ಅವಾಗಿಂದ ಕೇಳ್ತಾ ಇದ್ದೀನಿ... ಮುರ್ಗಿ ಕೆ ಅಂಡೆ ಅಂತೆ.... ಮುರ್ಗಿ ಕೆ ಅಂಡೆ ನನ್ನೇ ಗೇಲಿ ಮಾಡ್ತೀಯಾ.?"
ಹಾಗೆ ಹೇಳ್ತಾ ಇನ್ನೊಂದು ಏಟು ಹಾಕಿದ

"ಲೋ... ಮುರ್ಗಿ,... ಮುರ್ಗಿ ಕೆ ಅಂಡೆ ಅನ್ನೋದು ಜಾಹಿರಾತಿನ ಹಾಡು ಕಣೋ.... ಅದು ಹಿಂದಿ ಭಾಷೆಯದು ..ಅಂದರೆ ಅದು ಕೋಳಿ ಮೊಟ್ಟೆ ಜಾಹಿರಾತು. ನಿನಗೆ ಹೀಯಾಳಿಸಿದ್ದಲ್ಲ . ನಿನ್ನನ್ನು ಹಾಗೆ  ಕರೆದದ್ದಲ್ಲ"
ಎಂದೆ

ನಮ್ಮ ಮುರ್ಗಿಗೆ ಹಿಂದಿ ಭಾಷೆ ಬರುವುದಿರಲಿ, ಆ  ಭಾಷೆಯ ಗಂಧ ಗಾಳಿಯೂ ಅವನಿಗೆ ಗೊತ್ತಿರಲಿಲ್ಲ. ನಾನು ಎಷ್ಟೇ ಹೇಳಿದರೂ ಆತ ನನ್ನ ಮಾತನ್ನು ಆತ ಕೇಳಲು ಸಿದ್ಧನಿರಲಿಲ್ಲ.

" ನನ್ನೇ ಗೇಲಿ ಮಾಡ್ತಿಯೇನೋ... ಮುರ್ಗಿ ಕೆ ಅಂಡೆಯಂತೆ"
ಎಂದು ಬಯ್ಯುತ್ತಾ  ಮತ್ತೆ ಇನ್ನೆರಡು ಏಟು ಹಾಕಿದ

"ಲೋ... ಮುರ್ಗಿ ನೀನೇನು ಮೊಟ್ಟೆ ಇಡ್ತಿಯೋನೋ.. ಯಾಕೋ ಈ ತರ ಆಡ್ತೀಯಾ....? ಮುರ್ಗಿ ಅಂದರೆ ನೀನಲ್ವೋ ಹಿಂದಿ ಭಾಷೆಯಲ್ಲಿ 'ಕೋಳಿ'ಅಂತ ಅರ್ಥ.  ಇದು ರಾಮಾಯಣದ ಮಧ್ಯೆ ಬರೋ ಜಾಹಿರಾತು ಕಣೋ"
ಮತ್ತೊಮ್ಮೆ ಅವನಿಗೆ ಸಮಜಾಯಿಸಲು ಪ್ರಯತ್ನಿಸಿದೆ....

"ಹಿಂದಿ ಯಂತೆ ...ಹಿಂದಿ" ಎನ್ನುತ್ತಾ ಅಟ್ಟಿಸಿ ಕೊಂಡು ಮತ್ತೆ ಹೊಡೆಯಲು ಬಂದ. ನಾನು ಸಿಗಲೇ ಇಲ್ಲ. ಅಟ್ಟಿಸಿಕೊಂಡು ಓಡಿ ಸುಸ್ತಾದ ಬಳಿಕ. ನನ್ನನ್ನೇ ಕೋಪದಿಂದ ಹಂಗಿಸಲು ಶುರು ಮಾಡಿದ..

" ನನಗೇ... ಮುರ್ಗಿ ಕೆ ಅಂಡೆ,...ಮುರ್ಗಿಕೆ ಅಂಡೆ ಅಂತ ಹೀಯಾಳಿಸುತ್ತೀಯಾ...ನನಗೂ ಬರುತ್ತೆ. ಪಕ್ಕಿ ಕೆ... ಪಕ್ಕಿ ಕೆ ... ಪಕ್ಕಿ ಕೇ....ಅಂಡೆ"

ಎಂದು ನನ್ನ ಪ್ರಕಾಶ್ ಎಂಬ ಹೆಸರನ್ನು ಅಪಭ್ರಂಶಗಳಿಸಿ 'ಪಕ್ಕಿ ಕೆ ಅಂಡೆ' ಎಂದು ಹಾಡ ತೊಡಗಿದ. ಅವನ ಹಾಡು ಎರಡು ಮೂರು ಬೀದಿಗೆ ಕೇಳಿಸುವಷ್ಟು ಜೋರಾಗಿತ್ತು. ಮುರ್ಗಿಯು ಹೇಳಿದ ಆ ಹಾಡು ಕೇಳಿ ನನಗೆ ನನಗೆ ನಗು ತಡೆಯಲಾಗಲಿಲ್ಲ......ಆತನಿಗೆ ಹಿಂದಿ ಅರ್ಥವಾಗದಿದ್ದಕ್ಕೆ ನನ್ನ ಹೆಸರಿನಲ್ಲಿ ಹಾಡೊಂದು ಸೃಷ್ಟಿಸಿ,  ನನ್ನ ಜೊತೆ ಜಗಳ ತೆಗೆದು ಇಷ್ಟೊಂದು ಹಾಸ್ಯ ಮತ್ತು ಅವಾಂತರ ಸೃಷ್ಟಿಸಿದ್ದ....!!

ಮೊದಲ ಸಲ ದೂರದರ್ಶನ ಬಂದಾಗ ಹಿಂದಿ ಭಾಷೆಯ ನ್ಯಾಷನಲ್ ಚಾನಲ್ ಬಿಟ್ಟರೆ ಈಗಿನಂತೆ ನೂರಾರು ಚಾನಲ್ ಗಳಿರಲಿಲ್ಲ. ಹಿಂದಿ ಭಾಷೆ ಬಂದರೇನು ಬಿಟ್ಟರೇನು ಅನಿವಾರ್ಯವಾಗಿ ನಾವು ಕಣ್ಣು ಬಾಯಿ ಬಿಟ್ಟುಕೊಂಡು ಅದೇ ಚಾನಲ್ ನೋಡುತ್ತಿದ್ದೆವು. ಹಿಂದಿ ಭಾಷೆಯ ಅಲ್ಪ ಜ್ಞಾನವೂ ಇರದ ನಮ್ಮಂತ ಹಳ್ಳಿಯ ಜನಗಳಿಗೆ ಟಿ.ವಿ.ಯ ಕಾರ್ಯಕ್ರಮಗಳು ಅರ್ಥವಾಗುತ್ತಿದುದು ಸಹ ಅಷ್ಟಕಷ್ಟೆ.. ಮುರ್ಗಿಯಂತಹ ಸಾಕಷ್ಟು ಜನ ನಮ್ಮ ಹಳ್ಳಿಯಲ್ಲಿದ್ದರು.........
ಮುರ್ಗಿ ಎಂದರೆ ಕೋಳಿ ಎಂದು..  ಅಂದು ನಾನು ಯಾವ ಮುರ್ಗಿಗೆ ನಾನು ಸಮಜಾಯಿಸಲು ಪ್ರಯತ್ನಿಸಿದ್ದೆನೋ..?   ಯಾರು ಆ ದಿನ ಹಿಂದಿ ಪದದ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸದೇ ಹುಂಬನಂತೆ ವರ್ತಿಸಿದನೋ...?  ಅದೇ ಮುರ್ಗಿ ಈಗ ಹಿಂದಿ ಪಂಡಿತ..... ಆ ಮಹಾಶಯ ಈಗ ಎ.ಪಿ. ಮುರುಗೇಶ್ ಹಿಂದಿ ಉಪನ್ಯಾಸಕನಾಗಿ ಬದಲಾಗಿದ್ದ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಹಿಂದಿ ಹೆಚ್,ಓ,ಡಿ, ಬೇರೆ. ಸಾವಿರಾರು ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಜ್ಞಾನವನ್ನು ಧಾರೆಯೆರೆಯುತ್ತಿದ್ದ....
 ಅತ ಇಪ್ಪತ್ತು ವರ್ಷಗಳ ನಂತರ ನನಗೆ ಮಲ್ಲೇಶ್ವರಂ ಮಾರ್ಕೇಟ್ ನಲ್ಲಿ ಸಿಕ್ಕಿದನು. ಒಬ್ಬರನ್ನೊಬ್ಬರು ನೋಡಿದ ಕೂಡಲೇ ಬಾಲ್ಯದ ಗೆಳೆತನದ ಪ್ರೀತಿ ಇಬ್ಬರಲ್ಲೂ ಉಕ್ಕಿ ಹರಿಯಿತು. ಜನಜಂಗುಳಿಯ ಆ ಮಾರುಕಟ್ಟೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡೆವು. ಗೆಳೆತನದ ಪ್ರೀತಿ ಹೆಚ್ಚಾಗಿ ನನ್ನನ್ನು ಅವನ ಮನೆಗೂ ಕರೆದುಕೊಂಡು ಹೋದ. ಮನೆ ಸುಂದರವಾಗಿ ಕಟ್ಟಿದ್ದ. ಗೇಟನ್ನು ತಳ್ಳಿ ಒಳ ಹೋಗುವಾಗ ಆತನ ಮನೆಯ ಮಂದೆ ಹಾಕಿದ್ದ ಬೋರ್ಡ್ ಕಾಣಿಸಿತು.

"ಎ,ಪಿ, ಮುರುಗೇಶ್ ಹಿಂದಿ ಪಂಡಿತರು ಮತ್ತು  ಪ್ರಾಂಶುಪಾಲರು. ಎಂ, ಎ,  ಪಿ,ಹೆಚ್,ಡಿ'

ಎಂದು ಬರೆದಿತ್ತು

ಆ ಬೋರ್ಡ್ ನೋಡಿ ನಾನು ಮೂಕನಾಗಿ ಹೋದೆ. 
ಅಂದಿನಿಂದ ಇಬ್ಬರಲ್ಲೂ ಮತ್ತೆ ಸಂಪರ್ಕ ಬೆಳೆಯಿತು.
ನಾನೂ ಸಹ ಶಾಲೆಯಲ್ಲಿ ಕೆಲಸ ಮಾಡುತ್ತಿದುದರಿಂದ ನನಗೆ ತಿಳಿಯದ ಹಿಂದಿ ಪದಗಳ ಅರ್ಥ ಅವನಿಂದ ಕೇಳಿ ತಿಳಿಯುತ್ತಿದ್ದೆ. ಅಂದಿನಿಂದ ಎಷ್ಟೋ ಸಲ ಹಿಂದಿ ಪದಗಳ ಅರ್ಥ ತಿಳಿಯದಿದ್ದಾಗ ನನಗೆ ಫೋನ್ ಮೂಲಕವೇ ಹೇಳಿ ಕೊಡುತ್ತಿದ್ದ. 
ಅಂದು ಕೆಲಸವಿರಲಿಲ್ಲ ಮುರ್ಗಿಯನ್ನು ಸತಾಯಿಸಬೇಕೆನಿಸಿತು. ನನ್ನ ಆ ಬಾಲ್ಯದ 'ಮುರ್ಗಿ ಕೆ ಅಂಡೆ'  ಘಟನೆ ಮತ್ತೆ ನೆನಪಾಯಿತು. ಫೋನ್ ಮಾಡಿದೆ..

"ಪಂಡಿತರೇ... ಪ್ಲೀಸ್ ....ಮುರ್ಗಿ ಕೆ ಅಂಡೆ ಪದದ ಅರ್ಥ ಹೇಳುವಿರಾ....??" ಎಂದೆ

"ಲೇ.... ಪಕ್ಕಿ ಲೋಫರ್ ನನ್ಮಗನೆ.... ನಿನಗೆ ನಿಮ್ ಮನಿಗೇ ಬಂದು ಅಟ್ಟಾಡಿಸಿಕೊಂಡು ಹೊಡಿತೀನಿ ಕಣ್ಲೆ...ಮತ್ತೆ ಗೇಲಿ ಮಾಡ್ತಿಯಾ....?" ಎಂದ

"ಲೇ.... ಮುರ್ಗಿ ಈಡಿಯಟ್ ಕೋತಿ ನನ್ ಮಗನೇ.. ಕಾಲೇಜಿಗೆ ಬಂದು 'ಮುರ್ಗಿ ಕೆ ಅಂಡೆ' ಕತೆ ನೀಮ್ ಸ್ಟೂಡೆಂಟ್ ಗಳಿಗೆ ಮತ್ತು ನಿನ್ನ ಸ್ಟ್ಯಾಫ್ ಗೆ ಹೇಳ್ಲಾ....?" ಎಂದೆ

"ಲೋ....ಪಕ್ಕ... ಈಗ ನಾನು ಪ್ರಿನ್ಸಿಪಲ್ ಆಗಿದಿನಿ ಕಣೊ ಸ್ವಲ್ಪ ಮರ್ಯಾದೆನಾದ್ರೂ ಕೊಡೊ....!!"
ಎಂದ...
ನಮ್ಮ ಹಳ್ಳಿ ಭಾಷೆಯ ಬೈಗುಳಗಳು ಇನ್ನೂ ಸ್ವಲ್ಪ ಹೊತ್ತು ಫೋನ್ ಮೂಲಕವೇ ಪರಸ್ಪರ ವಿನಿಮಯಗೊಂಡವು. ತುಂಬಾ ದಿನಗಳ ನಂತರ ಆ ಬೈಗುಳಗನ್ನು ಕೇಳಿಕೊಂಡು ಇಬ್ಬರೂ ಧನ್ಯರಾದೆವು. ಒಂದು ಕ್ಷಣ ಬೆಂಗಳೂರಿನ 'ಹಾಯ್.. ಬಾಯ್' ಅನ್ಯೋ ಕೃತಕ ಜೀವನದಿಂದ ಬಾಲ್ಯದ ಸಹಜ ಜೀವನದತ್ತ ಹೋದೆವು ಎಂದೆನಿಸಿತು...
ಸಹಜ ಹಳ್ಳಿ ಭಾಷೆಯು ನಮ್ಮನ್ನು ಕರ್ಣಾನಂದವಾಗಿಸಿತು...

ಇಬ್ಬರೂ ನಗುತ್ತಲೇ ತಮಾಷೆ ಮಾಡಿಕೊಂಡು ಫೋನ್ ಕೆಳಗಿಟ್ಟೆವು ....
- ಪ್ರಕಾಶ್ ಎನ್ ಜಿಂಗಾಡೆ

No comments:

Post a Comment