Tuesday 26 January 2016

ಚಿತ್ರ ಮಂದಿರದಲ್ಲಿ

ಚಿತ್ರಮಂದಿರದಲ್ಲಿ...
ಆತ ನೆಲದ ಮೇಲೆ ನಡೆದು ಬರುತ್ತಿದ್ದ. ಹಾಕಿದ್ದ ಬೂಟುಗಳು ನೆಲವನ್ನು ಸ್ಪರ್ಶಿಸಿದ ಕೂಡಲೇ ಬೆಂಕಿಯ ಕಿಡಿಗಳು ಸಿಡಿಯುತ್ತಿದ್ದವು. ನನ್ನ ಪಕ್ಕದಲ್ಲಿ ಕುಳಿತ್ತಿದ್ದ ರಾಜೀವ ಈ ದೃಶ್ಯ ನೋಡಿದ ಕೂಡಲೇ ಒಮ್ಮೆ ಹೌಹಾರಿದ. ಹಿಂದಿನಿಂದ ಜನರ ಸೀಟಿ ಹೊಡೆಯುವ ಸದ್ದು ಜೋರಾಗಿ ಕೇಳಿಸುತ್ತಿತ್ತು. ಆ ಹೀರೋ ಮತ್ತೆ ಒಬ್ಬನನ್ನು ಹಿಡಿದು ಚಚ್ಚಿದ. ಆತ ಹೊಡೆದ ರಭಸಕ್ಕೆ ನೆಲ ಕುಸಿದು ಹೋಯಿತು. ಮುಖಕ್ಕೆ ಮತ್ತೊಂದು ಏಟು ಕೊಟ್ಟ , ಮೂವತ್ತೆರಡು ಹಲ್ಲುಗಳು ಠಣ್..ಣ..ಣ..ಣ..ಣ ಸದ್ದು ಮಾಡುತ್ತಾ ನೆಲಕ್ಕರುಳಿದವು
.
"ಅಯ್ಯೊಯ್ಯೋ ನನ್ನಿಂದ ನೋಡಲಾಗದು... ನೋಡಲಾಗದು, ಈ ಪರಿಯ ಹೊಡೆತಗಳು ನನ್ನಿಂದ ಅರಗಿಸಿಕೊಳ್ಳಲು ಆಗದು"

ರಾಜೀವ ಈ ದೃಶ್ಯ ನೋಡಿದ ಕೂಡಲೇ ತನಗೇ ಏಟು ಬಿದ್ದಂತೆ ಕಿರುಚಿಕೊಂಡ.

"ಅಯ್ಯೋ.... ಇದು ಸಿನಿಮಾ ಮಾರಾಯ ಕೂತ್ಕೊ"
ಎಂದು ರಾಜೀವನ ಕೈಹಿಡಿದು ಕೂರಿಸಿಕೊಂಡೆ.

ಈ ತರಹದ ದೃಶ್ಯಗಳು ಸಿನಿಮಾದ ಉದ್ದಕ್ಕೂ ಆಗಾಗ ಕಾಣುತ್ತಲೇ ಇದ್ದವು.. ಪ್ರೇಕ್ಷಕರಿಂದ ಸಿಳ್ಳೆ ಕೇಕೆಗಳು ಬರುತ್ತಲೇ ಇದ್ದವು.
"ನಮಗೆ ವಾಸ್ತವಕ್ಕಿಂತಲೂ ಕಲ್ಪನೆಯೇ ಸುಖ ಕೊಡುತ್ತದೆಯಲ್ಲವೇ...?"
ಜನರ ಉತ್ಸಾಹ ಕಂಡು ರಾಜೀವ ನನ್ನ ಹತ್ತಿರ ಹೇಳಿದ. ರಾಜೀವನ ಮಾತು ನನಗೂ ಸರಿಯೆನಿಸಿತು. ಸಿನಿಮಾ ನೋಡುತ್ತಲೇ ನಾವು ಕತೆಯೊಳಗೆ ಮುಳುಗಿಬಿಡುತ್ತೇವೆ. ಪರದೆಯ ಪ್ರತಿಯೊಂದು ದೃಶ್ಯಗಳು ನಮ್ಮ ಪಕ್ಕದಲ್ಲೇ ನಡೆಯುತ್ತಿವೆ ಎಂಬಂತೆ ಭಾವಿಸುತ್ತೇವೆ. ನಾವೇ ನಾಯಕ ಎಂದೇ ಕಲ್ಪಿಸಿಕೊಂಡು ಪರಕಾಯ ಪ್ರವೇಶ ಮಾಡಿ ಬಿಡುತ್ತೇವೆ...ಅವನ ಒಳ್ಳೆಯ ಗುಣವನ್ನು ಕಂಡು ನಾವೇ ನಾಯಕರಾಗಿ ಬಿಡುತ್ತೇವೆ. ನಾಯಕನ ರೋಷ ಕಂಡು ನಮ್ಮ ಮೈಯ ರಕ್ತವೂ ಬಿಸಿಯಾಗಿ ಬಿಡುತ್ತದೆ. ನಾಯಕನಂತೆ ನಾವೂ ಆದರ್ಶವನ್ನು ಮೆರೆಯಬೇಕೆಂದು ಯೋಚಿಸುತ್ತೇವೆ. ಸಿನಿಮಾ ಎಂಬ ಕಾಲ್ಪನಿಕ ಜಗತ್ತನ್ನು ನಿಜವೇ ಎಂಬಂತೆ ಕೆಕ್ಕರಿಸಿ ನೋಡುತ್ತೇವೆ. ಕಲ್ಪನೆಯೇ ಒಂದು ರೀತಿ ಸುಖ ಕೊಡುತ್ತಿರುತ್ತದೆ.

ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮಂಜ ಸಿನಿಮಾ ನೋಡುವುದರಲ್ಲಿ  ತಲ್ಲೀನನಾಗಿದ್ದನು. ಇಳಿ ವಯಸ್ಸಿನ ತಂದೆ ತಾಯಿಯರನ್ನು ನೋಡಿಕೊಳ್ಳಲಾಗದೇ ಹೆಂಡತಿ ಮಾತು ಕೇಳಿ ಮಂಜ ಬೇರೆ ಮನೆ ಮಾಡಿಕೊಂಡಿದ್ದ. ಪಾಪ ಆ ತಂದೆ ತಾಯಿಗಳು ಇರುವ ಒಬ್ಬ ಮಗನನ್ನು ಬಿಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಮಂಜನ ತಂದೆ ತಾಯಿಗಳು ಬಡತನದಲ್ಲೇ ಜೀವನ ಸಾಗಿಸಿ ಮಂಜನನ್ನು ಕಷ್ಟಪಟ್ಟು ಬೆಳಸಿದ್ದರು. ಕೂಲಿ ನಾಲಿ ಮಾಡಿ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಸರ್ಕಾರಿ ಕೆಲಸವನ್ನೂ ಕೊಡಿಸಿದ್ದರು. ಇದಾವುದರ ಪರಿವೇ ಇಲ್ಲದೇ ಮಂಜ ಸಿನಿಮಾದಲ್ಲಿ ತಲ್ಲೀನನಾಗಿದ್ದ. ಹೀರೋ ತನ್ನ ತಾಯಿಯ ಮುಡಿಗೆ ಕೈ ಹಾಕಿದ ವಿಲನ್ ನನ್ನು ಚಚ್ಚಿ ಹಾಕಿದಾಗ ಮಂಜ ರೋಮಾಂಚಿತಗೊಂಡು ಸೀಟಿ ಹೊಡೆಯುತ್ತಿದ್ದ. ಹೀರೋ ತನ್ನ ತಾಯಿಯನ್ನು ದೇವರಂತೆ ಪೂಜಿಸುತ್ತಿದ್ದ. ತಾಯಿ ಮಗನ ಭಾವನಾತ್ಮಕ ಸನ್ನಿವೇಶ ಬಂದಾಗ ಮಂಜನ ಕಣ್ಣುಗಳು ಒದ್ದೆಯಾಗುತ್ತಿದ್ದವು. ಮಂಜನನ್ನು ಕಂಡು ನನಗೆ ಸೋಜಿಗವೆನಿಸಿತು. ಮಂಜನ ಮುಖವನ್ನೇ ನೋಡುತ್ತಿದ್ದೆ.  ಸಿನಿಮಾ ಬಿಟ್ಟು  ಮಂಜ ನನ್ನ ಕಡೆಗೆ ತಿರುಗಿ ನೋಡಿದ.

"ಯಾಕೊ....? ಏನಾಯ್ತೋ..?"

ಎಂದು ಮಂಜ ನನ್ನನ್ನು ಪ್ರಶ್ನಿಸಿದ. ನಾನು ಒಂದೆರೆಡು ನಿಮಿಷದ ವರೆಗೆ ಮಂಜನ ಮುಖವನ್ನೇ ನೋಡುತ್ತಿದುದರಿಂದ ಆತ ಅನುಮಾನಗೊಂಡು ಈ ಪ್ರಶ್ನೆಯನ್ನು ಕೇಳಿದ್ದ. ನಾನು ಕಕ್ಕಾ ಬಿಕ್ಕಿಯಾಗಿ ಏನೂ ಮಾತನಾಡದೇ ಮತ್ತೆ ಪರದೆಯ ಕಡೆಗೆ ನೋಡಿದೆ.

ಸಿನಿಮಾದಲ್ಲಿ ನಾಯಕನಿಗೆ ನಾಯಕಿ ಸಿಗದಂತಾದಳು. ಅಣ್ಣ, ತಂದೆ, ಬಂಧುಗಳ ಕುತಂತ್ರದಿಂದ ನಾಯಕ ಎಷ್ಟೇ ಹೋರಾಡಿದರೂ ನಾಯಕಿಗೆ ಇನ್ನೊಂದು ಮದುವೆಯ ಸಿದ್ಧತೆ ನಡೆದಿತ್ತು. ನಾಯಕನ ತೊಳಲಾಟವು ಸಿನಿಮಾವನ್ನು ನೋಡುತ್ತಿದ್ದ ಪ್ರೇಕ್ಷಕರ ಕರುಳು ಕಿವುಚುವಂತಿತ್ತು. ನನ್ನ ಬಲಬಾಗದಲ್ಲಿ ಕುಳಿತಿದ್ದ ರವಿ ಈ ದೃಶ್ಯ ನೋಡಿ ಕಣ್ಣೕರನ್ನು ತುಂಬಿಕೊಂಡ.

"ಏನಾಯ್ತೋ.. ರವಿ"
ಎಂದೆ.

"ಪಾಪ ಹೀರೋ..ನೋಡೊ ಎಂಥ ಸ್ಥಿತಿ...?"

ಎಂದು ದುಃಖಿಸುತ್ತಾ ತನ್ನ ಕಣ್ಣಾಲಿಯನ್ನು ಒರೆಸಿಕೊಂಡ.

ನನಗೆ ರವಿಯ ನಡತೆ ಕಂಡು ಆಶ್ಚರ್ಯವಾಯಿತು. ತನ್ನ ತಂಗಿಯನ್ನು ಪ್ರೀತಿಸಿದ್ದಕ್ಕೆ ರಘು ಎಂಬ ಹುಡುಗನಿಗೆ ರಕ್ತ ಸೋರುವಂತೆ ಹೊಡೆದಿದ್ದು ಇದೇ ರವಿನಾ...? ಎಂದೆನಿಸಿತು.

"ನಿನ್ನ ತಂಗಿಯನ್ನು ಚಿಕ್ಕಂದಿನಿಂಲೂ ಪ್ರಿತಿಸುತ್ತಿದ್ದೀನಿ ಕಣೊ"
ಎಂದು ರಘು ಪರಿ ಪರಿಯಾಗಿ ಬೇಡಿಕೊಂಡಿದ್ದರೂ ರವಿ ಮತ್ತಷ್ಟು ಏಟುಗಳನ್ನು ನೀಡಿ ಮನೆಗೆ ಕಳುಹಿಸಿದ್ದ. ಆದರೆ ಇದೇ ದೃಶ್ಯ ಪರದೆ ಮೇಲೆ ಬಂದಾಗ ರವಿ ಕರಗಿ ಕಣ್ಣೀರಿಟ್ಟ. 
ತಂದೆ ತಾಯಿಯರ ಮೇಲಿದ್ದ ಮಂಜನ ನಿಷ್ಕರುಣೆ ಪ್ರೀತಿ...
ಪ್ರೀತಿಯ ವಿಷಯದಲ್ಲಿ ರವಿಗಿದ್ದ ಕ್ರೂರತನ...
 ಸಿನಿಮಾ ನೋಡುವಾಗ ಎಲ್ಲಿ ಹೋಗಿದ್ದವು... ?  ನಿಜವಾಗಲೂ ಅವರು ಕರುಣಾಮಯಿಗಳಾ....?  ಅಥವಾ ಸಿನಿಮಾದ ದೃಶ್ಯಗಳನ್ನು ಮಾತ್ರ ಕರುಣಾಮಯಿಗಳಾಗುತ್ತಾರಾ...?  ಎಂಬ ಪ್ರಶ್ನೆ ಮೂಡಿತು..
ಸಿನಿಮಾದ ಕೊನೆಯಲ್ಲಿ ನಾಯಕ ನಾಯಕಿಯದು ದುರಂತ ಅಂತ್ಯ. ಪ್ರೀತಿಯಲ್ಲಿ ಸೋತವರ ದುಃಖದ ದುರಂತ. ನಾಯಕಿಯ ಹೆಣದ ಮುಂದೆ ಹೆತ್ತವರದು ಕರುಳು ಹಿಂಡುವಂತಹ ಆಕ್ರಂದನ. ಆ ಗೋಳಿನ ದೃಶ್ಯದ ನಡುವೆ ಹೆತ್ತವರಿಗೆ ನಾಯಕಿಯ ಮುದ್ದಾದ ಮುಖ ಕಣ್ಣ ಮುಂದೆಯೇ ಆಗಾಗ ಬಂದು ಹೋಗುತ್ತಿತ್ತು. ನಾಯಕನ ಆದರ್ಶ ಗುಣಗಳನ್ನು ಅಲ್ಲಿ ನೆರೆದಿದ್ದ ಜನ ಹೊಗಳುತ್ತಿದ್ದರು... ಪ್ರೀತಿಯನ್ನು ವಿರೋಧಿಸಿದ ಖಳನಾಯಕರಿಗೆ ಹಿಡಿಶಾಪ ಹಾಕುತ್ತಿದ್ದರು. ಈ ದೃಶ್ಯ ನೋಡುತ್ತಿದ್ದ ನಮಗೆ ಬದುಕು ಇಷ್ಟೇನಾ... ಪ್ರೀತಿಯನ್ನು ಗೌರವಿಸುವ ಸಮಾಜ ನಮ್ಮದಲ್ಲವೇ ...? ಎಂದೆನಿಸಿತು. ಇರುವ ಅಲ್ಪ ಸಮಯದ ಈ ಬದುಕಿನಲ್ಲಿ ದ್ವೇಷವನ್ನು ತ್ಯಜಿಸಿ ಪ್ರೀತಿಯನ್ನು ಯಾಕೆ ಬಯಸಬಾರದು..?  ಎಲ್ಲರೊಂದಿಗೆ ಪ್ರೀತಿ ಮತ್ತು ಸುಖವಾಗಿ ಬದುಕಲು ಸಾಧ್ಯವಿಲ್ಲವೇ...? ಒಮ್ಮೆ ಪ್ರೀತಿಯನ್ನು ಗೌರವಿಸಿ ನೋಡಿ... ಎಲ್ಲರ ಬದುಕು ಸುಖಮಯವಾಗಿರುತ್ತೆ. ಎಂಬ ಸಂದೇಶ ದೊಂದಿಗೆ ಸಿನಿಮಾ ಮುಕ್ತಾಯ ವಾಯಿತು.
ಪ್ರೀತಿ, ವಿಶ್ವಾಸ, ಸ್ನೇಹ ಇವು ಬದುಕಿನ ಉತ್ತಮ ಅಂಶಗಳು. ಇವುಗಳನ್ನು ಮರೆತವನು ಪ್ರಾಣಿಯಂತೆ, ಎಂಬ ಸಂದೇಶ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಚಿತ್ರ ನೋಡಿದವರೆಲ್ಲರಿಗೂ ನಾವು ಬದುಕಿದರೆ ಒಗ್ಗಟ್ಟಿನಿಂದ ಬದುಕಬೇಕು ಎಂದೆನಿಸಿತು. ನಾನು ಕೂಡಲೇ ರಾಜೀವನ ಪಕ್ಕದಲ್ಲಿ ಕುಳಿತ್ತಿದ್ದ ನವೀನನನ್ನು ದುಃಖದಿಂದ ಅಪ್ಪಿಕೊಂಡೆನು. ನಾವಿಬ್ಬರೂ ಹುಟ್ಟಿದಂದಿನಿಂದಲೂ ಗೆಳೆಯರು. ಯಾವುದೋ ಕ್ಷುಲ್ಲಕ ಕಾರಣದಿಂದ ಐದು ವರ್ಷ ಮಾತನಾಡಿರಲಿಲ್ಲ. ಅವನೇ ಮೊದಲು ಮಾತನಾಡಿಸಲಿ ಎಂಬ ಈಗೋ ನಮ್ಮಿಬ್ಬರಲ್ಲೂ ಇತ್ತು. ಅದೇಕೋ ಕಾಣೆ ಈ ದಿನ ನಾನು ನನ್ನಲ್ಲಿರುವ ಈಗೋ..ಬಿಟ್ಟು ನವೀನನ್ನು ಅಪ್ಪಿಕೊಂಡೆ. ಅವನೂ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ದುಗುಡದಿಂದ ಬಿಸಿಯುಸಿರನು ಬಿಡುತ್ತಿದ್ದ. ಪ್ರೀತಿಸುವ ಜನರು ನಮ್ಮ ಸುತ್ತಲೂ ಇರುವಾಗ ನಾವು ನಮ್ಮ ನಮ್ಮ 'ಈಗೋ'ಎಂಬ ಭಾವನೆ ಮತ್ತು ಅಹಂಕಾರವನ್ನು ಬೆಳೆಸಿಕೊಂಡಿರುತ್ತೇವೆ.ನಾನೇ ದೊಡ್ಡವನು, ನಾನೇನು ಕಡಿಮೆ ಎಂಬ ಸೊಕ್ಕು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಇಂತಹ ಗುಣಗಳಿಂದ ಕ್ಷಣ ಕಾಲದ ಮಾನವ ಜೀವನದಲ್ಲಿಯ ಮಧುರ ಕ್ಷಣಗಳನ್ನು ದೂರಮಾಡಿ ಕೊಳ್ಳುತ್ತಿದ್ದೆವೆನೋ ಎಂದೆನಿಸಿವುದು. 

ಇದೇ ನೀತಿಯನ್ನು ಮಂಜ ಮತ್ತು ರವಿಗೆ ಹೇಳಿದಾಗ ನನ್ನ ಮಾತನ್ನು ನಿರ್ಲಕ್ಷಿಸಿದ್ದರು.. ಅವರಲ್ಲಿ ನನಗಿಂತ ಹೆಚ್ಚಿನ 'ಈಗೋ' ಮನೆ ಮಾಡಿತ್ತು. ಸಾಕಿದ್ದ ತಂದೆ ತಾಯಿಯರನ್ನು ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದ ಮಂಜ,....ತನ್ನದೇ ದೂರದ ಸಂಬಂದಿ ರಘುವಿನ ಪ್ರೀತಿಯನ್ನು ತಿರಸ್ಕರಿಸಿದ ರವಿ,.... ಇಬ್ಬರ ಈ ದ್ವೇಷಕ್ಕೆ ಕಾರಣವೇ ಇರಲಿಲ್ಲ.

"ಅದೆಲ್ಲಾ... ಸಿನಿಮಾ ಏನ್ಬೇಕಾದರೂ ಕಲ್ಪನೆ ಮಾಡ್ಕೊಂಡು ತೋರಿಸುತ್ತಾರೆ. ಹಾಗಂತ ವಾಸ್ತವದಲ್ಲಿ ಇರೋಕಾಗುತ್ತಾ. ಸಿನಿಮಾದಲ್ಲಿ ತೋರಿಸಿದರೆಂದ ಮಾತ್ರಕ್ಕೆ ನನ್ನ ತಂಗಿಯನ್ನು ಆ ಬಡವ ರಘುವಿಗೆ ಕೊಡಲು ಸಾಧ್ಯವಿಲ್ಲ. ತಂಗಿ ಸುಖವಾಗಿರಬೇಕೆಂಬ ಆಸೆ ನನಗೂ ಇದೆ"
ರವಿ ನನ್ನ ಮಾತನ್ನು ತಿರಸ್ಕರಿಸಿ ಹೇಳಿದ

"ಲೋ... ಪ್ರಕಾಶ .. ವಾಸ್ತವನೇ ಬೇರೆ ಕಲ್ಪನೆಯೇ ಬೇರೆ. ಕಾಲ್ಪನಿಕ ಕತೆಗಳನ್ನು ನಾವು ತಲೆಗೆ ಹಚ್ಚಿಕೊಂಡು ಜೀವನ ನಡೆಸಬಾರದು"

ಮಂಜನೂ ಸಹ ರವಿ ಹೇಳಿದಂತೆಯೇ ಸಮರ್ಥಿಸಿಕೊಂಡನು....
"ಕಲ್ಪನೆ ವಾಸ್ತವಗಳಿಗೆ ತೀರ ಹತ್ತಿರದ ಸಂಬಂದವಿದೆ.... ಎಷ್ಟೋ ಕಲ್ಪನೆಗಳು ಮನುಷ್ಯನ ವಾಸ್ತವ ಜೀವನದೊಂದಿಗೆ ಬೆಸೆದುಕೊಂಡಿವೆ. ಹಾಗೆ ನೋಡಿದರೆ ಮನುಷ್ಯನ ಜೀವನ ಪ್ರಾರಂಭವಾಗೋದೇ ಕಲ್ಪನೆಗಳಿಂದ. ಮಗು ಹುಟ್ಟಿದಾಗ ರಾಮ ನಂತಲೋ.. ಕೃಷ್ಣನಂತದಹುದೋ ಮಗು ಹುಟ್ಟಲಿ ಎಂದು ಪುರಾಣ ಪಾತ್ರಗಳನ್ನು ಕಲ್ಪಿಸಿಕಳ್ಳುತ್ತೇವೆ... ಮಗು ಊಟ ಮಾಡಲು ಹಠ ಹಿಡಿದಾಗ ಚಂದಮಾಮನನ್ನು ತೋರಿಸಿ ಏನೇನೋ ಕಲ್ಪನೆಗಳನ್ನು ಮಗುವಿನ ಮನಸ್ಸಿನಲ್ಲಿ ತುಂಬುತ್ತೇವೆ. ಮಗು ಶಾಲೆಗೆ ಹೋಗುವಾಗ ಶಿಕ್ಷಕರು ಪಂಚತಂತ್ರದ ಕತೆಯನ್ನು ಹೇಳಿ ವಾಸ್ತವ ಜೀವನವನ್ನು ಕಾಲ್ಪನಿಕ ಪಾತ್ರದೊಂದಿಗೆ ಬೆರೆಸುತ್ತಾರೆ... ಕವಿಗಳು ಗೀಚಿದ ಕಾಲ್ಪನಿಕ ಕತೆಗಳನ್ನು ಹೇಳಿ ವಿದ್ಯಾರ್ಥಿಗಳಲ್ಲಿ ನೀತಿಯನ್ನು ಬಿತ್ತುತ್ತಾರೆ.. ಇನ್ನೂ ದೊಡ್ಡವರಾಗಿ ದಾಯಾದಿ ಕಲಹ ಆರಂಭವಾದಾಗ ಮಹಾಭಾರತ ಕತೆಯನ್ನು ಉದಾಹರಿಸಿ ಸರಿ ದಾರಿಗೆ ತರುತ್ತೇವೆ. ರಾಮಾಯಣದ ಪಾತ್ರಗಳನ್ನು ಉದಾಹರಿಸಿ ಒಳ್ಳೆಯ ದಾರಿ ತೋರಿಸುತ್ತೇವೆ... ನೀತಿ ರಾಮನಂತಿರಲಿ. ಗುರುಭಕ್ತಿ ಏಕಲವ್ಯನಂತಿರಲಿ. ಪಿತೃಭಕ್ತಿ ಶ್ರವಣ ನಂತಿರಲಿ. ದಾನ ಕರ್ಣನಂತಿರಲಿ. ಎಂಬ ಟ್ಯಾಗ್ ಲೈನ್ ಹಾಕಿಕೊಂಡು ಕಾಲ್ಪನಿಕ ಪಾತ್ರವನ್ನೇ ಅನುಸರಿಸಲು ಪ್ರಯತ್ನಿಸುತ್ತೇವೆ.  ರಾಕ್ಷಸರನ್ನು ಕೊಂದ ಕತೆಗಾಗಿ ಅಭ್ಯಂಜನ ಸ್ನಾನ ಮಾಡಿ ಹಬ್ಬ ಆಚರಿಸುತ್ತೇವೆ... ಎಲ್ಲಾ ಧರ್ಮ, ಎಲ್ಲಾ ಸಮುದಾಯಗಳು ಸರಿಯಾದ ಮಾರ್ಗಗಳನ್ನು ಹಾಕಿಕೊಂಡು ಮುನ್ನಡೆಯುತ್ತಿರುವುದು ಈ ತರಹದ ಕಲ್ಪನೆಯ ಆಧಾರದ ಮೇಲೆಯೇ.... ಕೆಲವೊಂದು ಸಾರಿ ಈ ಕಲ್ಪನೆಗಳೇ ವಾಸ್ತವವಾಗಿ ಬರುತ್ತವೆ.. ಇವುಗಳು ಕಲ್ಪನೆಗಳೋ...? ವಾಸ್ತವವೋ....? ಎನ್ನುವಷ್ಟು ಗೋಜಿಗೆ ನಾವೇ ಸಿಕ್ಕಿಕೊಳ್ಳುತ್ತೇವೆ. ಕಾಲ್ಪನಿಕ ಸಿನಿಮಾವನ್ನು ನೋಡಿದಾಗ ನೀವು ಸಹ ನಿಮ್ಮ ಜೀವನವನ್ನು ವಾಸ್ತವದ ಓರೆಗಲ್ಲಿಗೆ ಹಚ್ಚಿ ನೋಡಿಕೊಳ್ಳುವುದಿಲ್ಲವೇ.....? "
ರವಿ ಮತ್ತು ಮಂಜ ಮೌನವಾಗಿ ನನ್ನ ಮಾತುಗಳನ್ನು ಆಲಿಸುತ್ತಿದ್ದರು.
ಸಿನಿಮಾದಲ್ಲಿ  ತಾಯಿ ಪ್ರೀತಿಯ ದೃಶ್ಯ ಬಂದಾಗ ಮಂಜ ನೀನು ಭಾವುಕನಾಗಲಿಲ್ಲವೇ ? ನಿಜ ಹೇಳು.... ತಂದೆ ತಾಯಿ ಎಂಬ ದೇವರು ಕಣ್ಣ ಮುಂದೆಯೇ ಇದ್ದರು. ಆದರೂ ಸಹ ಬಣ್ಣ ಹಚ್ಚಿ ಅಭಿನಯಿಸಿದ ತಂದೆ ತಾಯಿಗಳೆಂಬ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಪ್ರಭಾವ ಬೀರಿದ್ದೇಕೆ. ಅಲ್ಲಿರುವ ಪಾತ್ರಗಳು ಸಹ ನಮ್ಮ ಜೀವನದಲ್ಲಿ ನಡೆಯುತ್ತಿರುವ ಪಾತ್ರದ ಪ್ರತಿಬಿಂಬಗಳೇ ಆಗಿವೆ... ಜೀವನ ಬೇರೆ ಅಲ್ಲ ಸಿನಿಮಾದ ಪಾತ್ರ ಬೇರೆ ಅಲ್ಲ. ಸಿನಿಮಾದಲ್ಲಿರುವ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವೇಕೆ ಪ್ರಯತ್ನಿಸುವುದಿಲ್ಲ... ಸಿನಿಮಾದ ತಂದೆ ತಾಯಿಗಳನ್ನು ನೋಡಿ ನಮ್ಮ ಮನಸ್ಸು ಕರಗಿತು. ನಿಜವಾದ ತಂದೆ ತಾಯಿಗಳ ಮೇಲೆ ಕರುಣೆ ಯಾಕೆ ಇಲ್ಲವಾಯಿತು..?"
ಮಂಜ ಮಾತನಾಡಲಿಲ್ಲ..
  ಮಂಜನಂತೆಯೇ ರವಿಯೂ ಸಹ  ಪ್ರೀತಿ ವಿಷಯ ಬಂದಾಗ ಕಣ್ಣುಗಳು ತಂಬಿ ಬಂದವು...? ಸಿನಿಮಾ ಒಂದು ಕತೆ,  ಕಲ್ಪನೆ ಅಂತ ನಿಮಗೆ ಅನಿಸಿದ್ದರೆ ನಿಮ್ಮಲ್ಲಿ ಏಕೆ ಈ ಬದಲಾವಣೆಯಾದವು ...? ಸಿನಿಮಾದ ಆದರ್ಶಗಳನ್ನು ಮಾತ್ರ ಮೆಚ್ಚಿ. ಚಿತ್ರ ಮಂದಿರದಿಂದ ಹೊರ ಬರುವಾಗ ಆ ಆದರ್ಶಗಳನ್ನು ಅಲ್ಲೇ ಬಿಟ್ಟು ಬರುವುದೇಕೆ..? ಅವು ವಾಸ್ತವದಲ್ಲಿ ಅನುಸರಿಸಲು ಅರ್ಹವಾಗಿಲ್ಲವೇ..?  ಸಿನಿಮಾ ಎನ್ನುವುದು ಒಂದು ಕಲ್ಪನೆಯಿರಬಹುದು...ಆದರೆ ಅಲ್ಲಿಯ ಪಾತ್ರಗಳು ನಮ್ಮ ಸುತ್ತಮುತ್ತಲಿನವು. ಕತೆ ಕಲ್ಪನೆಯಾಗಿರಬಹುದು ಆದರೆ ಎಲ್ಲೋ ಯಾರದೋ ಜೀವನದಲ್ಲಿ ನಡೆದಂತವುಗಳೇ.. ಆದರೆ  ಅವುಗಳೆಲ್ಲವೂ ವಾಸ್ತವದ ಪ್ರತಿಬಿಂಬಗಳೇ ಆಗಿವೆ"
ನನ್ನ ಸುಧೀರ್ಘ ಭಾಷಣಕ್ಕೆ ರವಿ, ಮಂಜ, ಮೌನವಾಗಿಯೇ ಇದ್ದರು. ಎಲ್ಲರೂ ಚಿತ್ರಮಂದಿರದಿಂದ ಬಂದಾಗ ಏನೋ ಹೊತ್ತು ಬಂದೆವು ಎನ್ನುವಷ್ಟು ಭಾರವೆನಿಸಿತು. ಹಲವು ವರ್ಷಗಳ ಕಾಲ ಮಾತು ಬಿಟ್ಟಿದ್ದ ನವೀನ ನನ್ನ ಕೈ ಹಿಡಿದುಕೊಂಡೇ ಹೊರಬಂದ. ನನ್ನ ಗೆಳೆತನ ಅವನ ಸ್ನೇಹ ಎಂಬ ಮುಷ್ಠಿಯಲ್ಲಿ ಭದ್ರವಾಗಿತ್ತು.....
ಸುಮಾರು ಹದಿನೈದು ದಿನ ಕಳೆದಿರಬಹುದು. ದೇವಸ್ಥಾನಕ್ಕೆ ಹೋದಾಗ ಮಂಜನ ಹಂಡತಿ ತನ್ನ ಅತ್ತೆ ಮಾವಂದಿರ ಜೊತೆಗೆ ನಗು ನಗುತ್ತಾ ಪೂಜೆ ಮುಗಿಸಿ ಹೋಗುತ್ತಿರುವುದನ್ನು ನೋಡಿದೆ. ಒಡೆದು ಹೋದ ಮನೆ, ಮನಗಳು ಒಂದಾದಂತೆ ಕಂಡವು. ದೇವಾಲಯದ ಒಳ ಹೊಕ್ಕಾಗ ರಘು ಮತ್ತು ರವಿಯ ತಂಗಿ ದೇವರಿಗೆ ಕೈ ಮುಗಿದು ನಿಂತಿದ್ದರು. ಪ್ರೇಮಿಗಳು ಒಂದಾದ ಹಾಗೆ ಕಂಡರು..

"ಪ್ರಕಾಶಣ್ಣ....... ನನ್ನ ಮದುವೆ ಫಿಕ್ಸ್ ಆಯಿತು.ಕೊನೆಗೂ ಮನೆಯವರಿಂದ ಒಪ್ಪಿಗೆ ಸಿಕ್ಕಿತು. ಅದಕ್ಕೆ ಪೂಜೆ ಮಾಡಿಸಲೆಂದು ಬಂದೆವು"

ರವಿಯ ತಂಗಿ ಸುಮ ಸಂತೋಷದಿಂದಲೇ ಈ ವಿಷಯವನ್ನು ಹೇಳಿದಳು. ಹಾಗೆ ಹೇಳುವಾಗ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ........
-                                                                                        - ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment