Friday 29 January 2016

ಬದನೆಕಾಯಿ ಪುರಾಣ

ಬದನೆಕಾಯಿ ಪುರಾಣ.



ನಮ್ಮೂರು ಬಸವಾಪಟ್ಟಣದಲ್ಲಿ ಹೊರಬೀಡನ್ನು ನಾವು ಜಾನಪದ ಹಬ್ಬದಂತೆ ಆಚರಿಸುತ್ತೇವೆ. ಆ ದಿನ ನಾವು ದುರ್ಗಮ್ಮ ದೇವಿಯ ಬೆಟ್ಟದಡಿ ಬಿಡಾರಗಳನ್ನು ಹಾಕಿ ಒಂದು ದಿನ ವಾಸಮಾಡುತ್ತೇವೆ. ರಾತ್ರಿಯಾದ ಕೂಡಲೇ ಬೆಟ್ಟದ ಮೇಲೆ ದೀಪ ಹಚ್ಚಿ ಬರುತ್ತೇವೆ. ಆ ದಿನ ಎಲ್ಲರ ಬಿಡಾರದಲ್ಲೂ ಮೂಲೆ ಮೂಲೆಗಳಿಂದ ಬೀಗರ ದಂಡು ಬಂದು ಸೇರಿರುತ್ತದೆ. ಮಧ್ಯಾಹ್ನ ಊಟದ ಸಮಯ ಬಂತೆಂದರೆ ಸಾಕು ನನಗೆ ಏನೋ ಒಂದು ರೀತಿಯ ಮಜ ಸಿಗುತ್ತಿತ್ತು.....!! ಬಗೆ ಬಗೆಯ ಭಕ್ಷ್ಯ ಭೋಜನಗಳು. ರೊಟ್ಟಿ ಹಲವು ವಿಧದ ಪಲ್ಯಗಳು ಇರುತ್ತಿದ್ದವು. ಅದರಲ್ಲಿ ಪ್ರಮುಖ ಆಕರ್ಷಣೆ ಎಂದರೆ ಬದನೆಕಾಯಿ ಪಲ್ಯ. ಬದನೆಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ..? ಉತ್ತರ ಕರ್ನಾಟಕದ ಬದನೆಕಾಯಿ ಎಣ್ಣೆಗಾಯ ಪಲ್ಯ ಮತ್ತು ರೊಟ್ಟಿಯ ರುಚಿ ಇರುವಂತೆ ನಮ್ಮ ಹೊರಬೀಡಿನಲ್ಲಿಯೂ ಇದರ ರುಚಿ ಇರುತ್ತದೆ. ಭದ್ರಾವತಿಯಿಂದ ಬಂದ ಕುಮಾರ್ ಮಾಮನಿಗಂತೂ ಬದನೆಕಾಯಿ ಎಣ್ಣೆಗಾಯಿ ಪಲ್ಯ ಎಂದರೆ ಜೀವ. ಹೊರಬೀಡಿಗೆ ಬರುವ ಮುನ್ನವೇ ನನ್ನ ತಾಯಿಗೆ ಬದನೇಕಾಯಿ ಪಲ್ಯ ಮಾಡಲೇಬೇಕು ಎಂದು ಬೇಡಿಕೆ ಇಡುತ್ತಿದ್ದರು. ಈ ಹಬ್ಬದಲ್ಲಿ ಎಲ್ಲರ ಮನೆಯಲ್ಲೂ ಬದನೆಕಾಯಿ ಎಣ್ಣೆಗಾಯಿ ಪಲ್ಯ ಇದ್ದೇ ಇರುತ್ತೆ.ಊಟದ ಸಮಯದಲ್ಲಿ ನಾನು ಎಲ್ಲರ ಟೆಂಟ್ ಗೆ ನುಗ್ಗಿ ವಿಧ ವಿಧವಾದ ಬದನೆಕಾಯಿ ಪಲ್ಯಗಳ ರುಚಿ ಸವಿಯುತ್ತಿದ್ದೆ. ಒಂದೊಂದು ಬಿಡಾರದಲ್ಲಿ ಒಂದೊಂದು ತರಹದ ರುಚಿ...ಆಹಾ ಬದನೆಯದು ಏನು ಮಜಾ ಅಂತಿರಾ.... ಬಲ್ಲವನೇ ಬಲ್ಲ ಬೆಲ್ಲದ ರುಚಿಯ...!!! ಅಲ್ಲವೇ...?

ಹೀಗೆ ಬದನೆಕಾಯಿಯ ರುಚಿಯನ್ನು ಸವಿಯುವಾಗಲೇ ನನ್ನ ಸ್ನೇಹಿತ ವಾಗೀಶ ಹಿಂದಿನಿಂದ ಬಂದು ಹೆಗಲ ಮೇಲೆ ಕೈ ಹಾಕಿದ.
"ಎಲ್ಲೊ...ನನಗೆ ಬರಬೇಕಾದ ದುಡ್ಡು..? ಮೊನ್ನೆಯೇ ಕೊಡ್ತೀನಿ ಅಂದೆ... ಹೇಳೋದು ವೇದಾಂತ ತಿನ್ನೋದು ಬದನೆಕಾಯಿ"
ಅಂತ ಗಾದೆ ಮಾತನ್ನು ಹೋಲಿಸಿ ನನಗೆ ಬೈಯ್ದ.
ಅಂದರೆ ಇವನು ಹೇಳಿದ ಈ ಗಾದೆಯಲ್ಲಿ ಬದನೆಕಾಯಿ ಒಂದು ವ್ಯರ್ಥವಾದ ತರಕಾರಿ ಎಂದಾರ್ಥ. ಈ ಪಾಪಿ... ನಾನು ಬದನೆಕಾಯಿನ್ನು ತಿನ್ನುವಾಗಲೇ ಈ ಮಾತನ್ನು ಹೇಳಿದ್ದರಿಂದ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ನನಗೆ ಬೈಯ್ದರೆ ಸಹಿಸಿಕೊಳ್ಳ ಬಹುದಿತ್ತು. ಆದರೆ ನಾವು ತಿನ್ನುವ ತರಕಾರಿನ್ನು ಹೀಯಾಳಿಸಿ ಮಾತನಾಡುವುದು ಯಾವ ನ್ಯಾಯ ನೀವೆ ಹೇಳಿ...?
ನನ್ನ ಇನ್ನೊಬ್ಬ ಗೆಳೆಯ ಇದ್ದಾನೆ. ಸ್ವಲ್ಪ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡವನು. ಕುಡಿತ, ಬೀಡಿ, ಸಿಗರೇಟು ಇವನಿಗೆ ದಿನನಿತ್ಯದ ಹವ್ಯಾಸವಾಗಿತ್ತು. ಒಮ್ಮೆ ನಾನು ಇವನಿಗೆ ಈ ಅಬ್ಯಾಸಗಳನ್ನು ಬಿಟ್ಟುಬಿಡುವಂತೆ ಒಂದ್ಹತ್ತು ನಿಮಿಷ ಬುದ್ಧಿವಾದ ಹೇಳಿದೆ. ನನ್ನ ಮಾತಿಗೆ ಈ ಕುಡುಕ ಏನಂದ ಗೊತ್ತೆ...?
" ಲೇ.... ಪ್ರಕಾಶ , ಸಾಕು ಮುಚ್ಚೊ ...ನಿನ್ನ ಈ ಪುಸ್ತಕದ ಬದನೆಕಾಯಿ ಪುರಾಣವನ್ನು"
ಅಂದರೆ ಅವನ ಪ್ರಕಾರ ನಾನು ಹೇಳಿದ ಬುದ್ಧಿ ಮಾತುಗಳು ಪುಸ್ತಕದ ಬದನೆಯಾಯಿಯ ಹಾಗೆ ವ್ಯರ್ಥವಾದವುಗಳು....!!!
ಈ ರೀತಿ ಪ್ರತಿ ಸಾರಿ ಮಾತನಾಡುವಾಗಲೂ ಬದನೆಕಾಯಿಯನ್ನು ವ್ಯೆರ್ಥ ತರಕಾರಿ ಎಂಬಂತೆ.. ಉಪಯೋಗಕ್ಕೆ ಬಾರದು ಎಂಬಂತೆ ಬಳಸಿಕೊಳ್ಳುತ್ತೇವೆ. ಆದರೆ ಬದನೆಕಾಯಿ ನನಗೆ ಪ್ರಿಯವಾದುದರಿಂದ ಇಂತಹ ಮಾತುಗಳು ಸ್ವಲ್ಪವೂ ಹಿಡಿಸುತ್ತಿರಲಿಲ್ಲ.ಇಷ್ಟೇ ಅಲ್ಲದೇ ಮುಜಾಹಿದ್ ಎಂಬ ನನ್ನ ಒಬ್ಬ ಮುಸಲ್ಮಾನ ಗೆಳೆಯನೂ ಸಹ ಮಾತನಾಡುವಾಗ " ಚುಪ್ ..ಬೈಟ್ರೆ.. ಉಸ್ ಮೆ ಕ್ಯಾ ಹೈ ಬೈಂಗನ್" ಎಂದು ಹೇಳುತ್ತಿದ್ದ.
ಹೀಗೆ ಬದನೆಕಾಯಿಯನ್ನು ಎಲ್ಲರೂ ವ್ಯೆರ್ಥ ಎಂದು ಬಿಂಬಿಸುವುದರ ಐತಿಹ್ಯವಾದರೂ ಏನು...? ಅಥವಾ ಬದನೆಕಾಯಿಯನ್ನು ವಿರೋಧಿಸುವವರು ಈ ತರಹ ಗಾದೆಗಳನ್ನು ಸೃಷ್ಟಿಸಿ ಜನಗಳ ಮುಂದೆ ಹರಿಯ ಬಿಡುತ್ತಿದ್ದಾರೆಯೆ.....? ಬದನೆಕಾಯಿಯ ಮಾನ ಮರ್ಯಾದೆಯನ್ನು ಹರಾಜು ಹಾಕುವ ಇಂತಹ ಮೋಸದ ಜಾಲವನ್ನು ಭೇಧಿಸಲೇ ಬೇಕು... ಬದನೇಕಾಯಿಗೆ ಆಗುತ್ತಿರುವ ಈ ಅಪಮಾನವನ್ನು ತಡೆಯಲೇ ಬೇಕು ಎಂದು ತೀರ್ಮಾನಿಸಿಕೊಂಡೆ. ನನಗೆ ಬದನೆಕಾಯಿ ಪ್ರಿಯವಾಗಿದ್ದರಿಂದ . ಜನರು ಬದನೇಕಾಯಿಗೆ ಮಾಡುತ್ತಿದ್ದ ಈ ರೀತಿಯ ಅವಮಾನವನ್ನು ನನ್ನ ಅವಮಾನವೆಂದೇ ಭಾವಿಸಿದೆ...
ಅಂದೇ ಬದನೆಯ ಬಗ್ಗೆ ಇತಿಹಾಸವನ್ನೊಮ್ಮೆ ಕೆಣಕುತ್ತಾ ಹೋದೆ. ಬದನೆಯು ಹೆಚ್ಚಿನ ನಾರಿನಾಂಶವಿರುವ ತರಕಾರಿ. ಇದರಲ್ಲಿ ಪೊಟಾಷಿಯಂ, ಮ್ಯಾಂಗನೀ್ಸ್, ತಾಮ್ರ, ಮೆಗ್ನಿಷಿಯಂ, ವಿಟಮಿನ್ ಬಿ 1, 3, 6 ಪೋಲೇಟ್ ಹೇರಳವಾಗಿರತ್ತದೆ. ಇಷ್ಟೊಂದು ಅಂಶಗಳಿರುವ ಈ ಬದನೆ ಆರೋಗ್ಯಕ್ಕೂ ಒಳ್ಳೆಯದು. ಈಗ ಹೇಳಿ ಮಾತು ಮಾತಿಗೂ ನಾವು ಬದನೆಯನ್ನು ತೆಗಳುವುದು ತಪ್ಪಲ್ಲವೇ....?
ವರಹಮಿಹಿರನ 'ಬೃಹತ್ ಸಂಹಿತೆ' ಎಂಬ ಗ್ರಂಥದಲ್ಲಿ ಬದನೇಕಾಯಿ ಪ್ರಸ್ತಾಪ ಬರುತ್ತದೆ. ಸುರಪಾಲ ಎಂಬ ವಿದ್ವಾಂಸ ಬರೆದಿರುವ ಆಯುರ್ವೇದದ ಗ್ರಂಥದಲ್ಲಿ ಬದನೇಕಾಯಿಯನ್ನು ಔಷಧಿಯಾಗಿ ಬಳಸುವ ಕ್ರಮವನ್ನು ಹೇಳಿಕೊಂಡಿದ್ದಾನೆ. ಶ್ರೀವಾದಿರಾಜರು ತಾವು ಬರೆದ 'ತೀರ್ಥಪ್ರಬಂಧ' ಕೃತಿಯಲ್ಲಿ ಬದನೆಕಾಯಿ ವಿಷಯವನ್ನು ಕುರಿತು ಬರೆದಿದ್ದಾರೆ.
ಒಮ್ಮೆ ಶ್ರೀ ವಾದಿರಾಜರು ತೀರ್ಥಯಾತ್ರೆಯನ್ನು ಮಾಡುತ್ತಾ ನವದ್ವೀಪದ ಗಂಗಾಸಾಗರಕ್ಕೆ (ಇದು ಈಗಿನ ಪಶ್ಚಿಮ ಬಂಗಾಳದ ಪ್ರದೇಶ) ಬಂದರಂತೆ. ಅಲ್ಲಿ ಬೆಳೆದ ಬದನೆಯನ್ನು ಸವಿದು, ಸಂತೋಷಗೊಂಡು ಬದನೆಯ ಬೀಜವನ್ನು ಕರ್ನಾಟಕದ ಉಡುಪಿ ಕ್ಷೇತ್ರಕ್ಕೂ ತಂದರಂತೆ. ಅಲ್ಲಿ ವಾದಿರಾಜರು ಪ್ರತಿದಿನವೂ ಹಯಗ್ರೀವನಿಗೆ ಬದನೆಯನ್ನೇ ನೈವೇದ್ಯವಾಗಿಟ್ಟು ಪೂಜೆ ಮಾಡುತ್ತಿದ್ದರಂತೆ. ಬದನೆಯ ಶ್ರೇಷ್ಟತೆ ಬಗ್ಗೆ ಅನುಮಾನ ಪಟ್ಟ ಬ್ರಾಹ್ಮಣರು ಬದನೆಗಳಿಗೆ ವಿಷ ಹಾಕಿದರಂತೆ. ಆದರೂ ಸಹ ವಾದಿರಾಜರು ಬದನೆಯನ್ನು ನೈವೇದ್ಯಕ್ಕೆ ಬಳಸುವುದನ್ನು ಬಿಡಲಿಲ್ಲವಂತೆ. ಬದನೆ ನಾವು ಅಂದು ಕೊಂಡಂತೆ ವ್ಯೆರ್ಥ ತರಕಾರಿಯಾಗಿದ್ದರೆ ಶ್ರೀ ವಾದಿರಾಜರು ಇದನ್ನು ನೈವೇದ್ಯಕ್ಕೆ ಬಳಸುತ್ತಿದ್ದರೆ.. ? ವಾದಿರಾಜರಿಗೆ ತಿಳಿದ ಬದನೆಯ ಮಹತ್ವ ನಮಗೆ ಇನ್ನೂ ತಿಳಿಯಲಿಲ್ಲವೇಕೆ....? ಬದನೆಯನ್ನು ತಿಂದು ಖುಷಿಪಟ್ಟ ನಾವು ಮತ್ತೆ ಬದನೆಯನ್ನೇ ತೆಗಳುತ್ತೇವೆ. ಅಂದು ದೇವರಿಗೆ ಸಮರ್ಪಿಸುತ್ತಿದ್ದ ಈ ಬದನೆಯ ಬಗ್ಗೆ ಈ ರೀತಿಯ ಅಸಡ್ಡೆ ಮಾತುಗಳನ್ನು ಆಡಬಹುದೇ...? ನಮ್ಮಂತಹ ಬದನೆ ಪ್ರಿಯರಿಗೆ ಈ ವಿಷಯ ಎಷ್ಟೊಂದು ನೋವು ಕೊಡುತ್ತದೆ ಎಂದು ಯಾರಾದರೂ ಯೋಚಿಸಿದ್ದಿರಾ.....!!??
ಆಮೇಲೆ ವಾದಿರಾಜರು ಆ ಬದನೆಯ ಮಹತ್ವವನ್ನು ಅಲ್ಲಿಯ ಬ್ರಾಹ್ಮಣರಿಗೂ ತಿಳಿಸಿ ಅದರ ರುಚಿಯನ್ನು ಸವಿಯುವಂತೆ ಮಾಡಿದರಂತೆ. ಅಂದು ವಾದಿರಾಜರಿಂದ ಪಡೆದ ಬೀಜಗಳನ್ನೇ ಬ್ರಾಹ್ಮಣರು ಅಲ್ಲಿಯ ಸಮುದ್ರ ತೀರದ ಪ್ರದೇಶವಾದ 'ಮಟ್ಟು' ಎಂಬ ಊರಿನಲ್ಲಿ ಬೆಳೆಯಲಾರಂಬಿಸಿದರು. ಈಗಲೂ ಈ ಬದನೆ "ಮಟ್ಟುಗುಳ್ಳ" ಎಂದೇ ಪ್ರಸಿದ್ಧಿ ಪಡೆದಿದೆ. ಬೇರೆ ಬದನೆಗಿಂತ ಈ "ಮಟ್ಟುಗುಳ್ಳ" ದ ರುಚಿ ವಿಶಿಷ್ಟ ಎಂದು ಹೇಳಲಾಗುತ್ತದೆ. ಯಾವಗಲಾದರೂ ಉಡುಪಿಗೆ ಹೋದರೆ ಈ ಮುಟ್ಟುಗುಳ್ಳ ಬದನೆಯನ್ನು ತಿನ್ನಿ ಬದವೆಯ ಮಹತ್ವ ಗೊತ್ತಾಗುತ್ತೆ....!!
ಬದನೆಯ ಮಹತ್ವವನ್ನು ಸರಿಯಾಗಿ ತಿಳಿದಿದ್ದವನು ನಮ್ಮ ಶ್ರೀಕೃಷ್ಣದೇವರಾಯ. ಆತ ಬದನೆಯನ್ನು ಇಷ್ಟಪಟ್ಟು ತನ್ನ ತೋಟದಲ್ಲಿಯೇ ಬೆಳಸಿದ್ದನಂತೆ. ಬದನೆಯ ರುಚಿ ಇತರರಿಗೆ ತಿಳಿಸಲೆಂದೇ ಶ್ರೀಕೃಷ್ಣದೇವರಾಯನು ತನ್ನ ಆಸ್ಥಾನದ ಎಲ್ಲಾ ಸದಸ್ಯರಿಗೂ ಭೋಜನಾಕೂಟವನ್ನು ಏರ್ಪಡಿಸಿದ್ದನು. ಆಸ್ಥಾನಿಕರೆಲ್ಲರೂ ಬದನೆಯ ರುಚಿಯನ್ನು ಸವಿದು ಬೆರಗಾಗಿ ಹೋದರು. ಎಲ್ಲರ ಬಾಯಲ್ಲೂ ಬರೀ ಬದನೆಯ ಮಾತೇ ಮಾತು. ತೆನಾಲಿರಾಮನು ತಾನು ತಿಂದುಂಡ ಬದನೆಯ ರುಚಿಯನ್ನು ತನ್ನ ಹೆಂಡತಿಯ ಬಳಿ ಅತ್ಯಾನಂದದಿಂದ ಹೇಳಿಕೊಂಡ. ಬದನೆಯ ಸ್ವಾದ ಬಾಯಲ್ಲಿ ನೀರು ಬರಿಸುವಷ್ಟು ವರ್ಣನೆ ಮಾಡಿದ್ದೇ ಮಾಡಿದ್ದು. ಹೆಂಡತಿ ಸುಮ್ಮನೇ ಬಿಟ್ಟಾಳೇ...? ತನಗೂ ಕೃಷ್ಣದೇವರಾಯನ ತೋಟದ ಬದನೆ ಬೇಕೇ ಬೇಕು ಎಂದು ಹಠ ಹಿಡಿದು ಕುಳಿತಳು. ಆದರೆ ಸೈನಿಕರ ಕಣ್ಣು ತಪ್ಪಿಸಿ ರಾಯನ ತೋಟದ ಬದನೆ ಕದಿಯುವುದು ತೆನಾಲಿರಾಮನಿಗೆ ಕಷ್ಟವಾಗಿತ್ತು. ಹೇಗೋ ಕದ್ದು ಹೆಂಡತಿಗೆ ತಿನ್ನಿಸಿದ ಅನ್ನಿ....

ಬದನೆಯ ಸ್ವಾದ ತೆನಾಲಿರಾಮನಿಗೂ ಕೃಷ್ಣದೇವರಾಯನಿಗೂ ಮೋಡಿ ಮಾಡಿತ್ತು ಎನ್ನುವುದಾದರೆ ಬದನೆ ರುಚಿಯಾದ ತರಕಾರಿ ಎಂದು ನಾವು ಒಪ್ಪಲೇ ಬೇಕು.ಆದರೂ ಕೆಲವರು ಬದನೆಯನ್ನು ತಿನ್ನಲು ಹಿಂದುಮುಂದು ನೋಡುತ್ತಾರೆ. ಬೇರೆಯವರ ವಿಷಯವೇಕೆ ಬದನೆಯನ್ನು ಹೆಚ್ಚಾಗಿ ಮನೆಗೆ ತಂದರೆ ನನ್ನವಳು ಅಡಿಗೆ ಮಾಡದೇ ನನಗೆ ಉಪವಾಸ ಹಾಕಿಬಿಡುತ್ತಾಳೆ. ಬದನೆಯ ಬಗ್ಗೆ ಈ ತಿರಸ್ಕಾರವೇಕೆ ಎಂದು ಯೋಚಿಸಿದೆ ಬಹುಷಃ ಅದರಲ್ಲಿರುವ ನಂಜಿನ ಅಂಶವೇ ಜನರನ್ನು ಭಯ ಭೀತಗೊಳಿಸಿರಬಹುದೇ.....?
ನಮ್ಮ ಸೃಷ್ಟಿಕರ್ತ ಬ್ರಹ್ಮನಿಗೆ ಬದನೆ ಇಷ್ಟವಾಗಿರುವಾಗ ಈ ಹುಲುಮಾನವರದೇನು ಲೆಕ್ಕ ....? ಎಂದು ಧೈರ್ಯ ತಂದುಕೊಂಡೆ. ಬ್ರಹ್ಮನಿಗೆ ಬದನೆಯ ರುಚಿ ಇಷ್ಟವಾಗಿ ಇದಕ್ಕೆ ಕಿರೀಟವನ್ನು ತೊಡಿಸಿ ಭೂಲೋಕದ ಜನರು ಸವಿಯಲೆಂದು ಭೂಮಿಗೆ ತಂದು ಬಿಟ್ಟನಂತೆ. ಈ ಕಿರೀಟವಿರುವುದರಿಂದಲೇ ಬದನೆಯನ್ನು ತರಕಾರಿಗಳ ರಾಜ ಎಂದು ಕರೆಯುವರು.... ಈಗ ನೀವು ನನ್ನ ಮಾತನ್ನು ಒಪ್ಪಲೇ ಬೇಕು... ..? ಒಪ್ಪುತ್ತೀರಿ ಅಲ್ಲವೇ...?
ತಮಿಳಿನ ಜನಪದ ಕತೆಯೊಂದು ಹೀಗೆ ಹೇಳುತ್ತದೆ. ಒಮ್ಮೆ ರಾಜನೊಬ್ಬನ ಬಳಿ ಹೊಸದಾಗಿ ಬಾಣಸಿಗನೊಬ್ಬನು ನೇಮಕವಾದನಂತೆ. ಆತ ರಾಜನಿಗಾಗಿ ವಿಶೇಷ ಆಸಕ್ತಿಯನ್ನು ವಹಿಸಿ ಬದನೇಕಾಯಿಯ ಖಾದ್ಯವೊಂದನ್ನು ತಯಾರಿಸಿದನಂತೆ. ಈ ಹೊಸ ಖಾದ್ಯವನ್ನು ಸವಿದ ರಾಜನು ಇದರ ಪ್ರಸ್ತಾಪವನ್ನು ಸಭೆಯ ಮುಂದೆ ತಂದು ಬದನೆ ಕುರಿತು ಚರ್ಚಿಸಿದನಂತೆ. ಆಸ್ಥಾನದ ಹೊಗಳು ಭಟ್ಟರು ರಾಜನಿಂದ ಮೆಚ್ಚುಗೆಯನ್ನು ಪಡೆಯಲು ಬದನೆಕಾಯಿಯನ್ನು ಪ್ರಶಂಸಿದರಂತೆ.
"ಹೌದು ಮಹಾಸ್ವಾಮಿ.... ಈ ಬದನೆ ಬ್ರಹ್ಮನಿಗೂ ಪ್ರಿಯವಾದುದು. ಅದಕ್ಕಾಗಿಯೇ ಬ್ರಹ್ಮ ಅದರ ತಲೆಯ ಮೇಲೆ ಕಿರೀಟವನ್ನಿಟ್ಟಿದ್ದಾನೆ"
ಹೊಗಳು ಭಟ್ಟರ ಪ್ರಶಂಸೆಯಿಂದ ಪ್ರಸನ್ನನಾದ ರಾಜ ಬದನೆಯ ಖಾದ್ಯವನ್ನು ಹೊಟ್ಟೆ ಬಿರಿಯುವಂತೆ ತಿಂದನಂತೆ. ಸಂಜೆಯಾಗುವಷ್ಟರಲ್ಲಿ ರಾಜನಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಬದನೆಗೆ ಹಿಡಿ ಶಾಪವನ್ನು ಹಾಕಲಾರಂಭಿಸಿದನು. ಬದನೆಯನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ ಹೊಗಳು ಭಟ್ಟರಿಗೆ ತಮ್ಮ ತಪ್ಪಿನ ಅರಿವಾಯಿತು. ಮತ್ತೆ ರಾಜನ ಬಳಿಗೆ ಹೋಗಿ ತಮ್ಮ ವರಾತವನ್ನು ಬದಲಿಸಿ
"ಮಹಾರಾಜರೇ.... ಈ ಬದನೆಯನ್ನು ಕಂಡರೆ ಬ್ರಹ್ಮನಿಗೂ ಇಷ್ಟವಿರಲಿಲ್ಲ. ಅದಕ್ಕೆ ಅದರ ತಲೆಯ ಮೇಲೆ ಮುಳ್ಳನ್ನಿರಿಸಿದ್ದಾನೆ"
ಎಂದರಂತೆ
ಗಡದ್ದಾಗಿ ಹೊಟ್ಟೆ ಬಿರಿಯುವಂತೆ ತಿಂದು ಬದನೆಕಾಯಿಯನ್ನು ತೆಗಳುವುದು ಯಾವ ನ್ಯಾಯ ಹೇಳಿ....? ನನಗಂತೂ ಇದರಲ್ಲಿ ರಾಜನದೇ ತಪ್ಪು ಕಾಣುತ್ತದೆ. ಬದನೆಕಾಯಿ ಅತಿಯಾಗಿ ತಿಂದು ರಾಜ ಸಭಿಕರ ಮುಂದೆನೇ ಹೊಟ್ಟೆನೋವು ಎಂದು ಹತ್ತಾರು ಬಾರಿ ಪಾಯಿಖಾನೆಗೆ ಹೋಗಿಬಂದು ತನ್ನ ಮರ್ಯಾದೆಯನ್ನು ಕಳೆದುಕೊಂಡರೆ ಅದು ಬದನೇಕಾಯಿಯದು ತಪ್ಪೇ... ? ಅತಿಯಾದರೆ ಅಮೃತವೂ ವಿಷ ಎಂದು ಹಿರಿಯರು ಹೇಳಿದ್ದು ರಾಜನಿಗೆ ಗೊತ್ತಿಲ್ಲವೆಂದು ಕಾಣುತ್ತದೆ. ರಾಜನಂತಹ ಜನರು ಇಂದಗೂ ಈ ಬದನೆಯ ಬಗ್ಗೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದೆನಿಸಿತು.
ದಕ್ಷಿಣ ಕನ್ನಡದಲ್ಲಿ ಭತ್ತದ ನಾಟಿ ಮಾಡುವ ಸಂದರ್ಭದಲ್ಲಿ ನಮ್ಮ ರೈತ ಹೆಂಗಸರೆಲ್ಲಾ ಸೇರಿ "ಗೋವಿಂದ ಬದನೆ, ಗೋವಿಂದ ಬದನೆ" ಎಂದು ಹಾಡುತ್ತಾರೆ. ಇದನ್ನೇ ಜನಪದ ಸಾಹಿತ್ಯದಲ್ಲಿ 'ಕಬಿತಗಳು' ಎಂದು ಕರೆಯುತ್ತಾರೆ. ಈ ಕಬಿತದಲ್ಲಿ ಕ್ರೈಸ್ತ ಹೆಗಸೊಬ್ಬಳು ಬದನೆ ಬೀಜವನ್ನು ನೆಟ್ಟು, ಗೊಬ್ಬರ ಹಾಕಿ, ನೀರುಣಿಸಿ, ಬದನೆಯನ್ನು ಬೆಳೆಸುತ್ತಿದ್ದಳು. ತಾನೇ ಬೆಳೆದ ಬದನೆಯನ್ನು ಊರೂರು ಸುತ್ತಿ ಮಾರಾಟ ಮಾಡುತ್ತಿದ್ದಳು.ಇಂತಹ ಜನಪದದ ಕಬಿತದಲ್ಲಿ ಬದನೆಯ ಮಹತ್ವವನ್ನು ಹೇಳಿದ್ದಾರೆ. ಬದನೆ ನೀವಂದುಕೊಂಡಂತೆ ವ್ಯೆರ್ಥ ತರಕಾರಿಯಾಗಿದ್ದರೆ ನಮ್ಮ ರೈತ ಹೆಂಗಸರು ಬದನೆಯನ್ನು ಕುರಿತು ಹೊಲಗದ್ದೆಗಳಲ್ಲಿ ಹಾಡಿಕೊಳ್ಳುತ್ತಿದ್ದರೆ....?
ಬದನೆಯಲ್ಲಿ ಇರುವಷ್ಟು ವೈವಿದ್ಯತೆಗಳು ಬೇರೆ ತರಕಾರಿಗಳಲ್ಲಿದ್ದರೆ ಹೇಳಿ ಬಿಡಿ ನೋಡೋಣ. ಬಣ್ಣ, ರುಚಿ, ಗಾತ್ರಗಳಲ್ಲಿ ಬದನೆಯನ್ನು ಮೀರಿಸುವ ಇನ್ನೊಂದು ತರಕಾರಿ ಇದೆಯೇ....? ಚೋಳ ಬದನೆ, ಬಿಳಿ ಬದನೆ, ಗುಂಡು ಬದನೆ, ಮುಳ್ಳುಗಾಯಿ, ಕೆಂಪು ಬದನೆ, ಕರಿ ಬದನೆ, ಪಟ್ಟೆ ಬದನೆ, ಬಾಸಲ ಬದನೆ, ಕಡಬಟ್ಲ ಬದನೆ, ಹಸಿರು ಬದನೆ, ಬೆಳವಂಕಿ ಬದನೆ, ಗೋರಬಾಳೆ ಬದನೆ, ಪೇರಂಪಳ್ಳಿ ಬದನೆ, ಮುಸುಕು ಬದನೆ, ಕೊತ್ತಿನ ತಲೆ ಬದನೆ, ಈರಂಗನೆ ಬದನೆ.......... ಅಬ್ಬಬ್ಬ.....!!!! ಒಂದೇ... ಎರಡೇ....!!! 

ಇಂತಹ ವೈವಿದ್ಯದ ಬದನೆಯನ್ನು ತಿನ್ನುವುದು ಬಿಟ್ಟು ನಾವು ಪಾಶ್ಚ್ಯಾತ್ಯರ ಆಹಾರವನ್ನು ತಿನ್ನಲು ಹೊರಟಿದ್ದೇವೆ.... ಎರೆ ಹುಳದಂತಿರುವ ನೂಡಲ್ಸ್ ಗೆ ಮುಗಿಬೀಳುತ್ತೇವೆ. ಆ ಪಿಡ್ಜಾನೋ..? ಚಪಾತಿಯ ಮೇಲೆ ಯಾರೋ ವಾಂತಿ ಮಾಡಿಕೊಂಡಿರುವಂತೆ ಕಾಣುತ್ತದೆ. ಎರಡು ಬ್ರೆಡ್ ಗಳ ನಡುವೆ ಸೊಪ್ಪು ಸೆದೆಯನ್ನು ಜೋಡಿಸಿರುವ ಬರ್ಗರ್, ಸ್ಯಾಂಡ್ವಿಚ್ ಗಳು....ಯಾವುದು ಬೇಕು ಯೋಚಿಸಿ. ಆಯ್ಕೆ ನಿಮ್ಮದು...!!
ಏಕೆಂದರೆ ಬದನೆ ಭಾರತದ ಮೂಲ ಬೆಳೆ. ಕ್ರಿ.ಶ. ಐದನೇ ಶತಮಾನದಲ್ಲಿ ಚೈನಾಕ್ಕೆ, ನಂತರ ಆಫ್ರಿಕಾಕ್ಕೆ, ಹದಿನಾಲ್ಕನೇ ಶತಮಾನದಲ್ಲಿ ಇಟಲಿಗೆ ಪ್ರವೇಶ ಪಡೆದವು. ಈಗ ಪ್ರಪಂಚದಾದ್ಯಂತ ಬದನೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ವಿದೇಶಿಯರಿಗೂ ಇಷ್ಟವಾಗುತ್ತಿದೆ ಎಂದರೆ ನಮಗೂ ಇಷ್ಟವಾಗಲೇಬೇಕು. ಏಕೆಂದರೆ ನಾವು ವಿದೇಶಿಯರನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದೇವೆ ಅಲ್ಲವೇ.....?
ಬೇಕಾದಾಗ ಹೊಗಳಿ ತಿನ್ನುವುದು. ಬೇಡವಾದಾಗ ಅದನ್ನು ಜರಿಯುವುದು ಮಾನವನ ಹುಟ್ಟುಗುಣವಲ್ಲವೇ. ಬದನೆಯು ನನ್ನಲ್ಲಿ ಹೀಗೆ ಹಲವು ಯೋಚನೆಗಳನ್ನು ಮನದಲ್ಲಿ ಮೂಡಿಸುತ್ತಿರುವಾಗಲೇ ಅಮ್ಮ ಬಂದು ನಾನು ಬರೆಯುತ್ತಿರುವ ಪೆನ್ನು ಪೇಪರನ್ನು ಕಿತ್ತು ಕೊಂಡಳು.
"ಹರೋಸಾಗರದ ಬಾಬುಕಾಕ, ವಿಠ್ಠು, ಸೋನು, ನಾಗ್ಯ, ಸಾಕ್ರೆ ಅನಂತ, ಎಲ್ಲರೂ ನಿನ್ನ ದುರ್ಗಮ್ಮನ ಗುಡ್ಡದ ಮೇಲೆ ದೀಪ ಹಚ್ಚಲು ಕರೆಯುತ್ತಿದ್ದಾರೆ. ನೀನು ನೋಡಿದ್ರೆ ಈ ಹೊರಬೀಡಲ್ಲೂ ಬರೀತಿದ್ದೀಯ. ಅದೇನು ಬರೀತ್ತಿದ್ದಿಯೋ ಬದನೆಕಾಯಿ ಪುರಾಣನ..."
ಎಂದು ಗೊಣಗಿದಳು.....
ಅರೆ.... !!! ಮತ್ತೆ ಬದನೆಕಾಯಿಗೆ ಅವಮಾನನಾ.....?
ಎಂದುಕೊಂಡೆ
ಸುಮ್ಮನೆ ಎದ್ದು ಬೆಟ್ಟದ ಕಡೆಗೆ ಹೊರಟೆ.
                                                                             -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment