Sunday 31 January 2016

ಚಾಂದಿನಿ

ಚಾಂದಿನಿ. (Small story )

ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಅಲ್ಲೇ ಇರುವ ಒಂದು ದೊಡ್ಡ ಮರದ ಕೆಳಗೆ ನಿಂತಿದ್ದೆ. ಸ್ವಲ್ಪ ದೂರದಲ್ಲಿಯೇ ಚಾಂದಿನಿಯ ಮನೆ ಕಾಣುತ್ತಿತ್ತು.
"ಛೇ ಇನ್ನೆರಡು ನಿಮಿಷವಾದರೂ ಮಳೆ ತಡವಾಗಿ ಬಂದಿದ್ದರೆ ಇಷ್ಟರಲ್ಲಿಯೇ ಅವಳ ಮನೆ ಸೇರಿ ಬಿಡುತ್ತಿದ್ದೆ."
ಎಂದು ಮನದಲ್ಲೇ ಅತೃಪ್ತಿಯಿಂದ ಹೇಳಿಕೊಂಡೆ.

ಚಾಂದಿನಿಯನ್ನು ನೋಡದೇ ಆಗಲೇ ಒಂದು ವರ್ಷ ಆಗಿ ಹೋಗಿತ್ತು.
" ಧಡ್...ಧಡಲ್....."
ಆಕಾಶದಲ್ಲಿ ಗುಡುಗಿನ ಸದ್ದು ಮೊಳಗಿತು. ಆ ಶಬ್ಧಕ್ಕೆ ನನ್ನ ಎದೆಯೊಮ್ಮೆ ಝಲ್ಲೆಂದಿತು...
ಹೌದು ....
ಚಾಂದಿನಿ ಮೊದಲ ಸಲ ಸಿಕ್ಕಾಗಲೂ ಇದೇ ರೀತಿಯ ಮಳೆಯಿತ್ತು..!! ಅಂದು ಆ ಮಿಂಚಿನ ಬೆಳಕಲ್ಲಿ ಅವಳ ಮುಖ ಇನ್ನಷ್ಟು ಮುದ್ದಾಗಿ ಕಾಣುತ್ತಿತ್ತು. ನಾನು ಈ ಮಳೆಯನ್ನು ನೋಡುತ್ತಲೇ ನನಗೆ ಹಿಂದಿನ ಘಟನೆಗಳು ನೆನಪಿಗೆ ಬರಲಾರಂಬಿಸಿದವು......
ಕಾಲೇಜಿನ ದಿನಗಳವು...ನನಗೆ ಬಿ,ಎಡ್, ಸೀಟು ಸಿಕ್ಕಿದ್ದು ಚಿತ್ರದುರ್ಗದಲ್ಲಿ.ಕಾಲೇಜಿನಲ್ಲಿ ಎಲ್ಲರೂ ಹೊಸಬರೇ, ನನಗೆ ಮೊದಲ ದಿನ ಪರಿಚಯವಾಗಿದ್ದು ಲೋಕೇಶ್..ಈತ ಗುಲ್ಬರ್ಗದವನು.ಅಸಾಮಿ ಸ್ವಲ್ಪ ಐಲು-ಬೈಲು.ಹುಡುಗಿಯರನ್ನು ಕಂಡರೆ ಜೊಲ್ಲು ಸುರಿಸುತ್ತಾನೆ ಎಂಬ ವಿಷಯ ಒಂದೆರಡು ದಿನದ ಗೆಳೆತನದಲ್ಲೇ ತಿಳಿಯಿತು.
ಒಂದು ದಿನ ನಾನು ಮತ್ತು ಲೋಕಿ ಸಿಟಿಯಿಂದ ಹಾಸ್ಟಲ್ ಕಡೆಗೆ ಮರಳುವಾಗ ದಾರಿಯಲ್ಲಿ ಮಳೆಗೆ ಸಿಕ್ಕಿಕೊಂಡೆವು.ಮಳೆ ಜೋರಾಯಿತು.ಪೆಟ್ರೊಲ್ ಬಂಕ್ ನ ಪಕ್ಕದಲ್ಲಿನ ಮರದ ಕೆಳಗೆ ಓಡಿದೆವು. ಅಲ್ಲಿ ಆಗಲೇ ಕೆಲವರು ಮಳೆಯಲಿ ಅರ್ದಂರ್ಬರ್ದ ತೋಯ್ದು ಮರದ ಕೆಳಗೆ ನಿಂತಿದ್ದರು. ಲೋಕಿ ಕಣ್ ಸನ್ನೆ ಮಾಡಿ ತನ್ನ ಬಲಗಡೆ ನಿಂತಿದ್ದ ಹುಡುಗಿಯನ್ನು ತೋರಿಸಿ
"ಅವಳು ಚಾಂದಿನಿ ಅಂತ ...ನಮ್ ಕಾಲೇಜೇ ಕಣೋ.. ಮಲೆನಾಡಿನವಳು ಶಿವಮೊಗ್ಗ ಹತ್ತಿರದ ಹಳ್ಳಿಯಿಂದ ಬಂದಿದ್ದಾಳೆ"
ಎಂದು ನನ್ನ ಕಿವಿಯ ಹತ್ತಿರ ಬಂದು ಹೇಳಿದ.
ನೋಡಲು ಸುಂದರವಾಗಿದ್ದಳು. ನಾನು ಕಾಲೇಜ್ ಸೇರಿ ಒಂದು ತಿಂಗಳಾಗಿದ್ದರೂ ಇವಳು ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ಕೈಯಲ್ಲಿ ಚಾರ್ಟ್ ಪೇಪರ್ ನಲ್ಲಿ ಡ್ರಾಯಿಂಗ್ ಮಾಡಿದ ಟೀಚಿಂಗ್ ಏಯ್ಡ್ ನ ಚಿತ್ರಗಳನ್ನು ಸುರುಳಿಯಾಗಿ ಸುತ್ತಿ ಹಿಡಿದುಕೊಂಡಿದ್ದಳು. ಮಳೆಯಲ್ಲಿ ತೋಯ್ದು ಹೋಗದಂತೆ ತನ್ನ ವೇಲ್ ನಿಂದ ಮುಚ್ಚಿಕೊಂಡಿದ್ದಳು. ಮಳೆ ಜಾಸ್ತಿ ಯಾಗುತ್ತಲೇ ಇತ್ತು. ಎಡಗೈಯಲ್ಲಿ ಹಿಡಿದಿದ್ದ ಕೆಲವು ಪುಸ್ತಕಗಳನ್ನು ಈಗ ತಾನೆ ಖರೀದಿಸಿದಂತಿತ್ತು. ಮಳೆಯಲ್ಲಿ ತೋಯದಂತೆ ರಕ್ಷಿಸಲು ಚಡಪಡಿಸುತ್ತಿದ್ದಳು.
"ಪ್ಲೀಸ್..ಈ ಬ್ಯಾಗ್ ತಗೋಳಿ, ನಾನು ನಿಮ್ಮ ಕಾಲೇಜ್ ನವನೇ..ನಾಳೆ ಕಾಲೇಜ್ ಗೆ ಬರುವಾಗ ತಂದುಕೊಡಿ."
ನನ್ನ ಹೆಗಲ ಮೇಲಿದ್ದ ಬ್ಯಾಗನ್ನು ಅವಳಿಗೆ ಕೊಟ್ಟು ಹೇಳಿದೆ. ನನ್ನ ಬ್ಯಾಗ್ ಪಡೆಯದೇ ಅವಳಿಗೆ ಬೇರೆ ವಿಧಿಯಿರಲಿಲ್ಲ.
"ಥ್ಯಾಂಕ್ಸ್.... ನಿಮ್ಮ ಹೆಸರು ಪ್ರಕಾಶ್ ಅಲ್ವಾ....?"
ಎಂದಳು
ನನಗೆ ಆಶ್ಚರ್ಯವಾಯಿತು
"ಹೌದು"
ಎಂದು ಸುಮ್ಮನಾದೆ
ನನಗಿಂತ ಮೊದಲೇ ಅವಳು ನನ್ನನ್ನು ಕಾಲೇಜಿನಲ್ಲಿ ನೋಡಿದ್ದಳು ಎಂದು ಕಾಣುತ್ತದೆ.
ಅದು ನಮ್ಮಿಬ್ಬರ ಮೊದಲ ಸ್ನೇಹದ ಪರಿಚಯ....ಆಗ ಲೋಕಿ ಸುಮ್ಮನೆ ತೆಪ್ಪಗೆ ನಿಂತಿದ್ದ.....!!!!
ಮುಂದೆ ಟೀಚಿಂಗ್ ಪ್ರಾಕ್ಟಿಸ್ ಅಂತ ಶಾಲೆಯೊಂದಕ್ಕೆ ಕಳುಹಿಸಲು ಹನ್ನೆರಡು-ಹನ್ನೆರಡು ಪ್ರಶಿಕ್ಷಣಾರ್ಥಿಗಳ ತಂಡವನ್ನು ರಚಿಸಿದ್ದರು. ನಾನಿರುವ ತಂಡದಲ್ಲಿ ಚಾಂದಿನಿ ಸಹ ಇದ್ದಳು.ನಮ್ಮ ಸ್ನೇಹ ಗಾಡವಾಗಿ ಬೆಳೆದಿದ್ದು ಇಲ್ಲಿಯೇ....
ಒಮ್ಮೆ ಲೋಕಿ ಚಾಂದಿನಿಯನ್ನು ಮಾತನಾಡಿಸಲು ಹೋಗಿ ಅವಮಾನಗೊಂಡಿದ್ದ.ಅವಳು ಲೋಕನೊಡನೆ ಮಾತನಾಡಿಸಲು ಸ್ವಲ್ಪವೂ ಆಸಕ್ತಿ ತೋರಲಿಲ್ಲ. ಲೋಕಿ ಆ ಅವಮಾನದ ಸಿಟ್ಟನ್ನು ನನ್ನ ಮೇಲೆ ತೋರಿಸಲಾರಂಬಿಸಿದನು. ನನ್ನ ಮತ್ತು ಚಾಂದಿನಿಯ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ. ಈ ವಿಷಯ ಚಾಂದಿನಿವರೆಗೂ ಸುದ್ಧಿಯಾಗಿ ಹೋಯಿತು. ಲೋಕಿ ಮತ್ತು ನನ್ನ ಸ್ನೇಹ ಅಂದೇ ಕೊನೆಯಾಯಿತು. ಈ ಘಟನೆಯಿಂದ ನನಗೆ ಅತೀವ ನೋವಾಯಿತು. ಆಗ ಚಾಂದಿನಿ ನನ್ನ ಪರವಾಗಿ ನಿಂತಿದ್ದಳು.
"ಯಾರೊಡನೆ ಪ್ರೀತಿ ಮಾಡ್ಬೇಕು ಅಂತ ನನಗೆ ಚನ್ನಾಗಿ ಗೊತ್ತಿದೆ.. ನಮ್ಮ ಬಗ್ಗೆ ಏನಾದರೂ ಮಾತನಾಡಿದರೆ ನಾನು ಕಂಪ್ಲೇಂಟ್ ಮಾಡ್ಬೇಕಾಗುತ್ತೆ,...ಹುಷಾರ್...!!!"
ಎಂದು ಲೋಕಿಯನ್ನು ಚಾಂದಿನಿ ಸರಿಯಾಗಿ ಕ್ಲಾಸ್ ತೆಗೆದು ಕೊಂಡಿದ್ದಳು...
ಲೋಕಿ ಚಾಂದಿನಿಯನ್ನು ಪ್ರೀತಿಸಲು ನಾನಾ ಕಸರತ್ತುಗಳನ್ನು ನಡೆಸಿದ್ದ. ಅವಳನ್ನು ಓಲೈಸಿಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು.ಕೊನೆಗೆ ಲೋಕಿಯ ಈ ಸಿಟ್ಟು ಚಾಂದಿನಿಯ ಸ್ನೇಹ ಗಳಿಸಿದ್ದ ನನ್ನ ಮೇಲೆ ತಿರುಗಿತ್ತು.
ಅನಾವಶ್ಯಕವಾದ ಈ ಜಗಳಗಳು ನನಗೆ ಬೇಡವಾಗಿ ಹೋಗಿತ್ತು. ಸ್ವಲ್ಪ ದಿನ ಚಾಂದಿನಿ ಗೆಳೆತನವೂ ಬೇಡ ವೆನಿಸಿತು.ಯಾರೊಡನೆ ಮಾತನಾಡದೇ ಓದಿನ ಕಡೆ ಗಮನ ಹರಿಸಿದ್ದೆ.ಚಾಂದಿನಿ ಒಂದೆರಡು ಬಾರಿ ಮಾತನಾಡಲು ಬಂದಾಗ ನಾನೇ ನಿರಾಕರಿಸಿದೆ....
ಕಾಲೇಜಿನ ಪರೀಕ್ಷೆಗಳು ಮುಗಿದು ನಾವು ನಮ್ಮ ನಮ್ಮ ಮನೆಗೆ ಹೊರಟಿದ್ದೆವು. ಎಲ್ಲರ ಆಟೋಗ್ರಾಫ್ ಪಡೆದಿದ್ದೆ. ಕೊನೆಗೆ ಚಾಂದಿನಿಯದ್ದೂ ಪಡೆದೆ.ಅವಳಿಗೆ ನನ್ನ ಮೇಲೆ ಕೋಪವಿತ್ತು. ಕಾಲೇಜಿನ ನೆನಪುಗಳೊಡನೆ ಮನೆ ಮನೆಗೆ ಹಿಂದಿರುವಾಗ ಎಲ್ಲರ ಹೃದಯದಲ್ಲಿ ನೋವು ತುಂಬಿ ಕೊಂಡಿತ್ತು. ಚಾಂದಿನಿ ಕಣ್ಣುಗಳು ಆ ದಿನ ತುಂಬಿ ಬಂದಿದ್ದವು...
"ಐ ಆಮ್ ಸಾರಿ...."
ಎಂದು ಹೇಳಿದೆ
ಅವಳ ತುಟಿ ಕಂಪಿಸುತ್ತಿತ್ತು. ನಾಲಿಗೆ ಮಾತನಾಡಲು ಸಹಕರಿಸುತ್ತಿರಲಿಲ್ಲ.....
ಕಣ್ಣುಗಳು ಏನೋ ಹೇಳ ಹೊರಟಿದ್ದವು...ಅವಳ ಕಣ್ಣ ಭಾಷೆಯನ್ನು ನಾನು ಆ ದಿನ ಸ್ಪಷ್ಟವಾಗಿ ಓದಿದ್ದೆ.........
ಹಿಂದಿನ ಈ ಘಟನೆ ಹಾಗೆ ಕಣ್ಣ ಮುಂದೆ ಹಾದು ಹೋದಂತಾಯಿತು.ಅಷ್ಟರಲ್ಲಿ ಮಳೆ ಕಡಿಮೆಯಾಗಿತ್ತು.ಚಾಂದಿನಿಯ ಜೊತೆ ಮಾತನಾಡುವ ತವಕ ಹೆಚ್ಚಾಯಿತು. ಅವಳ ಮನೆಯತ್ತ ಹೆಜ್ಜೆ ಹಾಕಿದೆ. ಚಾಂದಿನಿ ಕೊಟ್ಟ ಮನೆಯ ವಿಳಾಸ ಸರಿಯಾಗಿತ್ತು. ಕಾಲಿಂಗ್ ಬೆಲ್ ಒತ್ತಿದ ಕೂಡಲೇ ಸುಮಾರು ಐವತ್ತು ವರ್ಷದ ಹೆಂಗಸು ಬಾಗಿಲು ತೆರೆದಳು
" ಚಾಂದಿನಿ ಮನೆ ಇದೆನಾ..ನಾನು ಅವಳ ಕಾಲೇಜ್ ಸಹಪಾಠಿ..ಇಲ್ಲೇ ಭದ್ರಾವತಿಯಲ್ಲಿ ನಮ್ಮಣ್ಣನ ಮದುವೆ ಇದೆ. ಕರೆಯೋಣ ಅಂತ ಬಂದೆ"
"ಹೌದು ಒಳಗೆ ಬನ್ನಿ "
ಆ ಹೆಂಗಸು ಒಳಗೆ ಕೂರಿಸಿದಳು
" ಕಾಫಿ...??? ಟೀ...? "
ಎಂದು ಕೇಳಿದಳು
ನಾನು ಏನೂ ಬೇಡವೆಂದೆ...
ಆದರೂ ಅಡಿಗೆ ಮನೆಯತ್ತ ಹೋದಳು. ನನ್ನ ಕಣ್ಣುಗಳು ಚಾಂದಿನಿಯನ್ನು ಹುಡುಕಿದವು. ಎಲ್ಲಿಯೂ ಕಾಣಲಿಲ್ಲ.
ಅವಳನ್ನು ಕಾಣಲು ಮನಸು ಹಾತೊರೆಯುತ್ತಿತ್ತು.
ಮತ್ತೆ ಸುತ್ತಲೂ ಹುಡುಕಿದೆ. ತಕ್ಷಣ ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೊವೊಂದು ನನ್ನ ಗಮನ ಸೆಳೆಯಿತು. ಅದು ಚಾಂದಿನಿಯದೇ, ಆದರೆ ಹೂವಿನ ಹಾರದಿಂದ ಶೃಂಗರಿಸಲಾಗಿತ್ತು.ಒಂದು ಕ್ಷಣ ಗರ ಬಡಿದವನಂತೆ ಸ್ಥಬ್ಧನಾಗಿಹೋದೆ. ಅಷ್ಟರಲ್ಲಿ ಆ ಹೆಂಗಸು,
" ಶಿವಮೊಗ್ಗದ ಶಾಲೆಯೊಂದಕ್ಕೆ.ಟೇಚರ್ ಆಗಿ ಕೆಲಸಕ್ಕೆ ಹೋಗುವಾಗ ಆರು ತಿಂಗಳ ಹಿಂದೆ ಆಕ್ಸಿಡೆಂಟ್ನಲ್ಲಿ ಕೊನೆಯುಸಿರೆಳೆದಳು"
ಹಾಗೆ ಹೇಳಿ ಆ ಹೆಂಗಸು ಬಿಕ್ಕಿ ಬಿಕ್ಕಿ ಅತ್ತಳು.
ನನ್ನ ಕಣ್ಣುಗಳು ತುಂಬಿ ಬಂದವು.ಆಕೆ ಕೊಟ್ಟ ಚಹದ ಕಪ್ಪನ್ನು ಅಲ್ಲೇ ಅನಾಥವಾಗಿ ಬಿಟ್ಟು ಹೊರಬಂದೆ
"ದಢ್ ....ದಢಾಲ್...."
ಗುಡುಗಿನ ಸದ್ದು ಮತ್ತೊಮ್ಮೆ ನನ್ನ ಎದೆ ನಡುಗಿಸಿತು...
ಮಳೆಯಲ್ಲಿ ನೆನೆಯುತ್ತಿದ್ದರೂ ಅದರ ಪರಿವೆ ಇಲ್ಲದಂತೆ ಹೆಜ್ಜೆ ಹಾಕುತ್ತಿದ್ದೆ.........


.-ಪ್ರಕಾಶ್ ಎನ್ ಜಿಂಗಾಡೆ

No comments:

Post a Comment