Thursday, 4 February 2016

ಕುಡುಕ


ಕುಡುಕ 

ಸಂಜೆ ಆರು ಗಂಟೆಯಾಗಿರಬಹುದು.ಸೂರ್ಯ ಮೋಡಗಳ ಅಂಚಿನತ್ತ ಇಳಿದಿದ್ದ.ಆಗಸದಲ್ಲೆಲ್ಲಾ ನೆತ್ತರಿನ ರಂಗು ಚೆಲ್ಲಿ ಹೋಗಿತ್ತು. ಇನ್ನೇನು ಕತ್ತಲೆಯಾಗುತ್ತಿದೆ ಎನ್ನುವಷ್ಟರಲ್ಲಿ. ಚಂದ್ರಪ್ಪ ಸೊಟ್ಟ ಸೊಟ್ಟ ಹೆಜ್ಜಗಳನ್ನು ಹಾಕಿಕೊಂಡು ರಸ್ತೆಯ ತುಂಬೆಲ್ಲಾ ನಡೆದುಕೊಂಡು ಬರುತ್ತಿದ್ದ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಆತನ ಎಡಗಾಲು ರಸ್ತೆಯಂಚಿನ ಚರಂಡಿಯ ಕಡೆಗೆ ಎಳೆದರೆ. ಬಲಗಾಲು ರಸ್ತೆಯ ನಡುವಿನ ವರೆಗೂ ಎಳೆದು ತಂದು ಇಡೀ ದೇಹವನ್ನೇ ಬಾಗಿಸಿ ಬೀಳಿಸಲು ಪ್ರಯತ್ನಿಸುತ್ತಿತ್ತು. ಮದಿರೆಯ ಅಮಲು ರಸ್ತೆಯ ಉದ್ದಕ್ಕೂ ಚಂದ್ರಪ್ಪನನ್ನು ನರ್ತನ ಮಾಡಿಸುತ್ತಿತ್ತು. ಯಾರಾದರೂ ನೋಡುವರೇ ಎಂಬ ಆತಂಕವಿಲ್ಲ. ಜನ ಏನಂದುಕೊಂಡಾರು...? ಎಂಬ ಭಯ ಇಲ್ಲ. ಮದಿರೆಯ ಮತ್ತು ಬುದ್ಧಿಯನ್ನು ಸಹ ತನ್ನ ವಶಕ್ಕೆ ತೆಗೆದುಕೊಂಡು ಬಿಟ್ಟಿತ್ತು. ತನ್ನೊಳಗೆ ಮಾಯೆಯೋ...? ಮಾಯೆಯೊಳಗೆ ತಾನೋ..? ಎಂಬಂತೆ ಆತ ಮತ್ತಿನ ಮಾಯೆಯೊಳಗೆ ಓಲಾಡುತ್ತಿದ್ದ...

ಕಟ್ಟೆಯ ಮೇಲೆ ಕುಳಿತಿದ್ದ ನನಗೆ ಪೆಪ್ಪರಮೆಂಟೊಂದನ್ನು ಕೈಗೆ ನೀಡಿ, ಎದುರು ಗಡೆ ಇರುವ ಆತನ ಮನೆಯತ್ತ ಅಡ್ಡದಿಡ್ಡಿಯಾಗಿಯೇ ಹೆಜ್ಜೆ ಹಾಕುತ್ತಾ ಹೋದ. ಬಾಗಿಲ ಬಳಿ ಹೋಗುವಷ್ಟರಲ್ಲಿಯೇ ಆತ ದೊಪ್ಪನೆ ನೆಲಹಿಡಿದು ಬಿದ್ದ. ಹೆಂಡತಿ ಲಕ್ಷ್ಮಕ್ಕ ಬಿದ್ದ ಗಂಡನನ್ನು ಮನೆಯಳಗೆ ಎಳೆದುಕೊಂಡಳು. ಪ್ರತಿ ದಿನವೂ ಈ ದೃಶ್ಯ ನೋಡಿ ನನ್ನ ಕಣ್ಣು ಕಟ್ಟಿಹೋಗಿತ್ತು. ಪೆಪ್ಪರಮೆಂಟಿನ ಆಸೆಗಾಗಿ ನಾನು ಚಂದ್ರಪ್ಪ ಬರುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದೆ. ಹಾಗಾಗಿ ದಿನವೂ ಚಂದ್ರಪ್ಪನ ಈ ಅವಾಂತರ ನೋಡುವುದು ನನಗೆ ಅನಿವಾರ್ಯ ಆಗಿ ಹೋಗಿತ್ತು.
ಸುಮಾರು ಅರ್ದಗಂಟೆಯಾಗಿರಬಹುದು. ಚಂದ್ರಪ್ಪನ ಮನೆಯೊಳಗೆ ಪಾತ್ರೆಗಳು "ಠಣ್ ಠಣ್ ಠಣಣಣಣ...." ಎಂದು ಸದ್ದು ಮಾಡಲಾರಂಭಿಸಿದವು. ಇದು ಜಗಳ ಪ್ರಾರಂಭವಾಗುವುದರ ಸಂಕೇತ. ಹೇಗೆ ನಮ್ಮ ಶಾಲೆಯಲ್ಲಿ ತರಗತಿಯ ಆರಂಭಕ್ಕೂ ಮುನ್ನ ಬೆಲ್ಲ್ ಹೊಡೆಯುತ್ತಾರಲ್ಲಾ... ಅದೇ ರೀತಿ ಚಂದ್ರಪ್ಪನ ಮನೆಯಲ್ಲಿ....!! ಹೆಂಡತಿ ಲಕ್ಷ್ಮಕ್ಕಳ ಜೊತೆ ಜಗಳ ಪ್ರತಿದಿನವೂ ಮಾಮೂಲಾಗಿ ಹೋಗಿತ್ತು. ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ಬೆಳೆದಿರದ ನಮ್ಮಂತ ಚಿಕ್ಕ ಮಕ್ಕಳಿಗೆ ಚಂದ್ರಪ್ಪನ ಈ ಆಟೋಟೊಪಗಳೇ ನಮಗೆ ಆಗ ಖುಷಿ ನೀಡುತ್ತಿದ್ದವು. ಆಗ ನಮಗಂತೂ ಭರಪೂರ ಮನರಂಜನೆ ಸಿಗುತ್ತಿತ್ತು. ಆತ ಕುಡಿದಾಗಲೆಲ್ಲಾ ತನ್ನ ತೊದಲು ನಾಲಿಗೆಯಿಂದ ಹಾಡುಗಳನ್ನು ಹಾಡುತ್ತಿದ್ದನು. ಏನ್ ಮೆಲೋಡಿಯಸ್ ಅಂತಿರಾ...!! ಕಷ್ಟದಿಂದಲೇ ಮದ್ಯದ ಅಭಿಷೇಕಗೊಂಡ ತನ್ನ ನಾಲಿಗೆಯನ್ನು ತಿರುಗಿಸುತ್ತಾ "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ" ಎಂಬ ಹಾಡು ಹಾಡುತ್ತಿದ್ದ... ಅಬ್ಬಾ....!!! ಎಂತಹ ಸ್ವರ ಮಾಧುರ್ಯವದು ..!! ಅವನ ಕುಡಿದ ಕಂಠದಲ್ಲೇ ಈ ಹಾಡನ್ನು ಕೇಳಬೇಕು ಏನು ಮಜಾ ಸಿಗುತ್ತಿತ್ತು ಗೊತ್ತಾ....? ನನಗೆ ಹಾಡಿನ ಅಭಿರುಚಿ ಬೆಳೆದದ್ದೇ ಆ ಕುಡುಕ ಚಂದ್ರಪ್ಪನಿಂದ. ಆತ ಎಷ್ಟೋ ಸಲ ಸಿನಿಮಾ ನಟರ ಅಭಿನಯವನ್ನು ಮಾಡಿ ತೋರಿಸುತ್ತಿದ್ದ. ಆತನ ಆ ನಟನಾ ಕೌಶಲ್ಯ ಇಂದಿನ ಯಾವ ಸಿನಿಮಾ ನಟರಲ್ಲೂ ನಾನು ಕಾಣೆ. ಮದಿರೆಯ ಮತ್ತಿನಲ್ಲಿ ಉದುರುವ ಆ ಮಾತುಗಳು ಯಾವ ಸಂಭಾಷಣಕಾರನು ಬರೆಯಲು ಸಾದ್ಯವಿಲ್ಲ ಬಿಡಿ...!! ನಾನು ನನ್ನ ಬಾಲ್ಯದ ಎಷ್ಟೋ ಸಂಗತಿಗಳನ್ನು ಕುಡುಕ ಚಂದ್ರಪ್ಪನನ್ನು ನೋಡಿ ಕಲಿತ್ತಿದ್ದಿದೆ.
ನಮ್ಮಂತ ಚಿಕ್ಕವರಿಗೆ ಚಂದ್ರಪ್ಪ ಜೋಕರ್ ನಂತೆ ಕಂಡರೆ, ದೊಡ್ಡವರಿಗೆ ವಿಲನ್ ನಂತೆ ಕಾಣುತ್ತಿದ್ದ. ದಿನವಿಡಿ ದುಡಿದ ಹಣವನ್ನು ಸರಾಯಿ ಅಂಗಡಿಯ ಖಜಾನೆಗೆ ಹಾಕಿ ಬರುತ್ತಿದ್ದ. ಚಿಲ್ಲರೆ ಹಣವೇನಾದರೂ ಉಳಿದರೆ ನಮ್ಮಂತಹ ಮಕ್ಕಳಿಗೆ ಪೆಪ್ಪರಮೆಂಟು ತಂದು ಕೊಡುತ್ತಿದ್ದ. ಆತನ ಈ ಕುಡಿತಕ್ಕೆ ಆತನ ಹೆಂಡತಿ, ಮೂರು ಜನ ಮಕ್ಕಳು ಎಷ್ಟೋ ಸಲ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಉಪವಾಸ ಮಲಗುತ್ತಿದ್ದರು. ಮನೆಯಲ್ಲಿ ಅಡಿಗೆ ಮಾಡಲು ರೇಷನ್ ಇರುತ್ತಿರಲಿಲ್ಲ. ಲಕ್ಷ್ಮಕ್ಕ ಅವರಿವರ ಮನೆ ಕೆಲಸ ಮಾಡಿ ಒಪ್ಪತ್ತಿನ ಗಂಜಿಗೆ ದುಡಿಯುತ್ತಿದ್ದರು. ಜೊತೆಗೆ ಎರಡು ಗಂಡು, ಒಂದು ಹೆಣ್ಣು ಮಗುವಿನ ವಿದ್ಯಾಭ್ಯಾಸದ ಖರ್ಚು ಬೇರೆ. ಇಷ್ಟೆಲ್ಲಾ ದುಃಖವನ್ನು ಅನುಭವಿಸುತ್ತಾ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದ ಲಕ್ಷ್ಮಕ್ಕನ ಕಣ್ಣೀರು ನಮ್ಮಂತ ಚಿಕ್ಕಮಕ್ಕಳಿಗೆ ಕಾಣುವುದಾದರೂ ಹೇಗೆ...?
ಲಕ್ಷ್ಮಕ್ಕ ತಾನು ದುಡಿದು ಕೂಡಿಟ್ಟ ಹದಿನೆಂಟು ರೂಪಾಯಿಗಳನ್ನು ಚಂದ್ರಪ್ಪ ಕದ್ದು ಕುಡಿಯಲು ಒಯ್ದಿದ್ದ. ಮಕ್ಕಳ ಓದಿಗಾಗಿಯೇ ಲಕ್ಷ್ಮಕ್ಕ ಐದಾರು ತಿಂಗಳಿಂದ ನಾಲ್ಕಾಣೆ ಎಂಟಾಣೆಗಳನ್ನು ಡಬ್ಬದಲ್ಲಿ ಹಾಕಿಟ್ಟಿದ್ದಳು. ಹೆಂಡತಿ ಮಕ್ಕಳು ಎಂಬ ಪ್ರೀತಿ ವಿಶ್ವಾಸವೇ ಇಲ್ಲದ ಮೇಲೆ ಈತನೊಂದಿಗೆ ಸಂಸಾರಮಾಡಲು ಲಕ್ಷ್ಮ್ಮಕ್ಕನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. "ನನ್ನ ಗಂಡ ಸುಳ್ಳ ಅಲ್ಲ. ಕಳ್ಳ ಅಲ್ಲ, ಕುಡುಕ ಮಾತ್ರ" ಎಂದು ಬಂಧುಗಳೊಡನೆ ಸಮಾಧಾನಕ್ಕಾಗಿ ಹೇಳಿಕೊಳ್ಳುತ್ತಿದ್ದ ಲಕ್ಷ್ಮಕ್ಕನಿಗೆ ಈಗ ಏನೂ ಉಳಿದಿರಲಿಲ್ಲ. ಅಂದು ರಾತ್ರಿ ಎಂದಿಗಿಂತಲೂ ಸ್ವಲ್ಪ ಜಾಸ್ತಿ ರಂಪಾಟ ನಡೆಯಿತು. ಗಂಡ ಹೆಂಡತಿಯರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮೂವರು ಮಕ್ಕಳು ರಾತ್ರಿ ಊಟವಿಲ್ಲದೇ ಹಸಿವಿನಿಂದ ಅಳಲಾರಂಭಿಸಿದರು. ಅಮ್ಮ ಜಗಳ ನೋಡಲಾರದೇ ಮೂರು ಮಕ್ಕಳನ್ನು ಕರೆದು ಊಟಹಾಕಿ ನಮ್ಮನೆಯಲ್ಲೇ ಮಲಗಲು ಹೇಳಿದಳು.
ಮುಂಜಾನೆ ಐದು ಗಂಟೆಯಾಗಿರಬಹುದು. ಲಕ್ಷ್ಮಕ್ಕ ನಮ್ಮನೆ ಕಟಾಂಜನದ ಬಾಗಿಲು ತೆಗೆದು ಮಲಗಿದ್ದ ತನ್ನ ಮಕ್ಕಳನ್ನು ಎಬ್ಬಿಸಿ ಎಲ್ಲಿಗೋ ಆತುರದಿಂದ ಕರೆದೊಯ್ದಳು. ಅಲ್ಲೇ ಮಲಗಿದ್ದ ನಾನು ಇದನ್ನೆಲಾ ನೋಡಿ ಅಮ್ಮನಿಗೆ ಎಬ್ಬಿಸಿ ವಿಷಯ ತಿಳಿಸಿದೆ. ಅಮ್ಮ ಆತುರದಿಂದಲೇ ಲಕ್ಷ್ಮಕ್ಕ ಹೋದ ಕಡೆ ಅವಸರದಿಂದ ಹೆಜ್ಜೆ ಹಾಕಿ ಓಡಿದಳು. ಲಕ್ಷ್ಮಕ್ಕ ನಮ್ಮೂರಿನ ಭದ್ರಾ ನಾಲೆಯಲ್ಲಿ ಮೂವರು ಮಕ್ಕಳೊಡನೆ ಸಾಯಬೇಕು ಎನ್ನುವಾಗಲೇ ಅಮ್ಮ ಅಲ್ಲಿಗೆ ಹೋಗಿ ಆಗೋ ಅನಾಹುತವನ್ನು ತಡೆದಳು. ಲಕ್ಷಮ್ಮಕ್ಕನಿಗೆ ಬುದ್ಧಿವಾದ ಹೇಳಿದಳು. ಮಕ್ಕಳು ಸಾಯಲು ಇಷ್ಟವಿಲ್ಲದೇ ನಮ್ಮಮ್ಮನ ಸೆರಗಿನಲ್ಲಿ ಮುದುಡಿಕೊಂಡವು.
"ಇನ್ನೂ ಅರಳಬೇಕಾಗ ಮೊಗ್ಗುಗಳನ್ನು ಹೀಗೆ ಚಿವುಟುವುದು ನ್ಯಾಯವೇ. ಸ್ವಲ್ಪ ದಿನ ತಾಳ್ಮೆಯಂದಿರು. ಒಳ್ಳೆ ಸಮಯ ಬಂದೇ ಬರುತ್ತದೆ. ಕತ್ತಲ ನಂತರ ಬೆಳಕು ಬರಲೇ ಬೇಕು. ನಿನ್ನ ಮಕ್ಕಳ ಮುಖವನ್ನಾದರೂ ನೋಡಿ ಮನೆಗೆ ನಡೆ. ಕೋಪಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳ ಬೇಡ"
ಎಂದು ಲಕ್ಷ್ಮಕ್ಕನಿಗೆ ಬುದ್ದಿ ಹೇಳಿದಳು.
ಅಂದಿನಿಂದ ಅಮ್ಮ ಲಕ್ಷ್ಮಕ್ಕನ ಕುಟುಂಬದ ಸಹಾಯಕ್ಕೆ ನಿಂತಳು. ಪ್ರತಿದಿನ ಒಂದ್ಹೊತ್ತಿನ ಊಟ ನಮ್ಮನೆಯಿಂದಲೇ ಹೋಗುತ್ತಿತ್ತು. ಅಪ್ಪ ನಮಗಾಗಿ ಏನಾದರೂ ತಂದರೆ ಲಕ್ಷ್ಮಕ್ಕನ ಮಕ್ಕಳಿಗೂ ಪಾಲು ಹೋಗುತ್ತಿತ್ತು. ಅವರ ಹಬ್ಬ ಹರಿದಿನಗಳೆಲ್ಲಾ ನಮ್ಮನೆಯಲ್ಲಿಯೇ ನಡೆಯುತ್ತಿದ್ದವು. ಅವರು ಸಹ ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು. ಅವರೂ ನನ್ನಂತೆ ಅಮ್ಮನ ಕೈ ತುತ್ತು ತಿಂದು ಬೆಳೆದರು.
ಲಕ್ಷಮ್ಮಕ್ಕನ ಕುಟುಂಬ ಸುಮಾರು ಎರಡು ವರ್ಷಮಾತ್ರ ಇತ್ತು. ಆಮೇಲೆ ಅವರ ಊರಾದ ಹೊಳಲ್ಕೆರೆಗೆ ಹೊರಟರು. ಹೊಳಲ್ಕೆರೆಯಲ್ಲಿ ಚಂದ್ರಪ್ಪನ ಪಿತ್ರಾರ್ಜಿತ ಇತ್ತು. ಆಸ್ಥಿ ಪಾಲು ಮಾಡಿದಾಗ ಚಂದ್ರಪ್ಪನಿಗೆ ಎರಡು ಲಕ್ಷ್ಯ ಹಣ ಬಂತು. ಅಪ್ಪ ಆ ಹಣಕ್ಕೆ ಯೋಜನೆಯನ್ನು ರೂಪಿಸಿ ಲಕ್ಷ್ಮಕ್ಕನ ಹೆಸರಿನಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆದು ಚಂದ್ರಪ್ಪನಿಗೆ ಸಿಗದಂತೆ ಜೋಪಾನವಾಗಿರಿಸಿದರು. ಚಂದ್ರಪ್ಪ ಗಲಾಟೆ ಮಾಡಿದಾಗ ಅಪ್ಪ ಗೊತ್ತಿರುವ ಪೋಲೀಸನ್ನು ಕರೆಯಿಸಿ ಹೆದರಿಸಿದರು...ಚಂದ್ರಪ್ಪನ ಕುಟುಂಬ ಮತ್ತೆ ಹೊಳಲ್ಕೆರೆಗೆ ಹೋದ ಮೇಲೆ ಏನಾಯಿತೋ ಗೊತ್ತಿಲ್ಲ. ಮತ್ತೆ ನಮ್ಮೂರಿನ ಕಡೆ ಅವರು ಬರಲೇ ಇಲ್ಲ.......
ಬಾಲ್ಯದಲ್ಲಿ ನಡೆದ ಈ ಘಟನೆ ನನಗೆ ಮತ್ತೆ ನೆನಪಾಗಿದ್ದು. ದುರ್ಗಮ್ಮನ ಜಾತ್ರೆಗೆಂದು ಊರಿಗೆ ಹೋದಾಗ. ಸಾಮಾನ್ಯವಾಗಿ ನಮ್ಮೂರಿನ ದುರ್ಗಮ್ಮನ ಜಾತ್ರೆಗೆ ಎಲ್ಲರ ಮನೆಯಲ್ಲಿ ಬೀಗರು ಬಂದು ಸೇರಿರುತ್ತಾರೆ. ಆ ದಿನ ಅಮ್ಮ ಸಂಭ್ರಮದಿಂದ ಅಡುಗೆಯಲ್ಲಿ ತೊಡಗಿದ್ದಳು. ನಾನು ಆ ದಿನ ಕಟ್ಟೆಯ ಮೇಲೆ ಕುಳಿತುಕೊಂಡು ತಾಂಡಾದ ಕಡೆಗೆ ಹೋಗುತ್ತಿದ್ದ ಹೊಸ ಜನರನ್ನು ನೋಡುತ್ತಾ ಕುಳಿತ್ತಿದ್ದೆ. ಹೊಸ ಜನಗಳ ಮದ್ಯೆ ಹೊಸದೊಂದು ಕಾರು ಸೌಂಡು ಮಾಡುತ್ತಾ ಬಂದಿತು. ಬಿಳಿ ಬಣ್ಣದ ಆಡಿ ಕಾರ್.. ಅಷ್ಟು ಬೆಲೆಬಾಳುವ ಕಾರ್ ಗಳು ನಮ್ಮಂತಹ ಚಿಕ್ಕ ಹಳ್ಳಿಯ ಕಡೆಗೆ ಮುಖಮಾಡುವುದು ಕಡಿಮೆಯೇ... ಕಾರು ನಮ್ಮ ಮನೆಯ ಮತ್ತು ಸರೋಜಮ್ಮನ ಮನೆಯ ಮಧ್ಯದಲ್ಲಿರುವ ಜಾಗಕ್ಕೆ ಬಂದು ನಿಂತಿತು. ಯಾರೋ ರಾಜಕಾರಣಿಗಳು ಸರೋಜಮ್ಮನ ಮನೆಗೆ ಬಂದಿರಬೇಕು ಎಂದು ಕುತೂಹಲದಿಂದ ನೋಡಿದೆ. ನನ್ನಷ್ಟೇ ವಯಸ್ಸಾದ ಯುವಕನೊಬ್ಬ ಕಾರಿನಿಂದ ಇಳಿದ. ನೋಡಲು ಗಟ್ಟಿ ಮುಟ್ಟಾಗಿದ್ದ. ಕೈಯಲ್ಲಿ, ಕತ್ತಿನಲ್ಲಿ ಬಂಗಾರ ಒಡವೆಗಳು ಹೊಳೆಯುತ್ತಿದ್ದವು. ನಮ್ಮ ಮನೆಯತ್ತ ಧಾವಿಸಿ ಬರುತ್ತಿದ್ದನು. ಯಾರಿರಬಹುದು..? ನಾನು ಆಶ್ಚರ್ಯದಿಂದಲೇ ನೋಡಿದೆ
"ಏನೋ... ಪಕ್ಕ. ಚನ್ನಾಗಿದ್ದಿಯೇನೋ"
ಅಂದ
ನಾನು ಬಸವನಂತೆ ತಲೆಯಾಡಿಸಿ 'ಹೂಂ' ಎಂದೆ
ಯಾರೀತ...? ಯಾರಿರಬಹುದು...? ಯೋಚಿಸಿದೆ ಗುರುತು ಸಿಗಲೇ ಇಲ್ಲ.
ಒಳಗೆ ಹೋದವನೇ ಅಮ್ಮನನ್ನು ಹೊರಗೆ ಕರೆದು. ಅಮ್ಮನ ಕಾಲಿಗೆ ಬಿದ್ದನು.
" ಅಮ್ಮ ನಿನ್ನ ಆಶಿರ್ವಾದ ಬೇಕಮ್ಮ"
ಎನ್ನುತ್ತಾ ಕಾಲು ಗಟ್ಟಿ ಹಿಡಿದು ಕೊಂಡ..
" ಯಾರಪ್ಪಾ ನೀನು...? ನನಗೆ ಗುರುತು ಸಿಗ್ಲೇ ಇಲ್ಲ" ಅಮ್ಮನಿಗೂ ತಿಳಿಯದಂತಾಗಿ ಕೇಳಿದಳು
" ನಾನಮ್ಮ ರಘು.... ಲಕ್ಷ್ಮಮ್ಮನ ಹಿರಿ ಮಗ.. ಇವತ್ತು ನಾನು ಬದುಕಿದ್ದು ನಿನ್ನಿಂದಲೇ ಕಣಮ್ಮ .. ಅವತ್ತು ನೀನು ನಮ್ಮನ್ನ ಕಾಪಾಡ್ದೇ ಇದ್ದಿದ್ರೆ ನಾವು ನೀರು ಪಾಲಾಗಿರುತ್ತಿದ್ವಿ... ಅಮ್ಮ ನೀನು ನನ್ನ ಪಾಲಿನ ದೇವರು ಕಣಮ್ಮ. ನಿನ್ನ ಕೈ ತುತ್ತು ಮರೆಯೋಕೆ ಆಗ್ತದಾ ಅಮ್ಮಾ...."
"ಸರಿ ಏಳಪ್ಪ.... ಅಮ್ಮ ಅಪ್ಪಾ ಹೇಗಿದ್ದಾರೆ..?
"ಅಮ್ಮ... ನಾವು ಇಲ್ಲಿಂದ ಊರು ಬಿಟ್ಟು ಹೋದ ಮೇಲೆ ಎರಡೇ ವರ್ಷಕ್ಕೆ ಅಪ್ಪ ಲಿವರ್ ಕ್ಯಾನ್ಸರ್ ನಿಂದ ಸತ್ತರು.. ಆಮೇಲೆ ನಾನು ಓದೋದು ಬಿಟ್ಟು ಬೆಂಗಳೂರನ್ನು ಸೇರಿಕೊಂಡೆ... ಈಗ ನನ್ನದು ದೊಡ್ಡ ಬಿಸಿನೆಸ್ಸು ಇದೆ.... ಮುಂದಿನ ಸೋಮವಾರ ನನ್ನ ಮದುವೆ ಇದೆ... ನನ್ನ ಮದುವೆಯ ಮೊದಲ ಪತ್ರಿಕೆ ಸೇರಬೇಕಾದದ್ದು ನಿನಗೆ. ನೀನು ಬರಲೇ ಬೇಕಮ್ಮ" ಎಂದು ಅಂಗಲಾಚಿದನು...
ಅಮ್ಮನಿಗಾಗಿ ಒಂದು ಬಂಗಾರದ ನೆಕ್ಲೇಸ್ ಮತ್ತು ರೇಶಿಮೆಯ ಸೀರೆಯನ್ನು ಕೊಟ್ಟನು
" ಅಮ್ಮ... ಇದು ನನ್ನ ಮದುವೆಗಾಗಿ ನೀಡುತ್ತಿರುವ ಚಿಕ್ಕ ಕಾಣಿಕೆ ಸ್ವೀಕರಿಸಲೇ ಬೇಕು"
ಎಂದನು.
ಅಮ್ಮಾ ಸುತರಾಂ ಒಪ್ಪಲೇ ಇಲ್ಲ.
" ಮದುವೆಗೆ ಬರಲೇ ಬೇಕು ಅಂದ್ರೆ .. ಈ ಗಿಫ್ಟ್ ಗಳೆಲ್ಲಾ ನನಗೆ ಬೇಡ. ಪ್ರೀತಿಯಿಂದ ಮದುವೆಗೆ ಬರುತ್ತೇನೆ.. ಪಡೆದ ಸಹಾಯವನ್ನು ಯಾವಾಗಲೂ ಹಣದಿಂದ ಅಳೆಯಬಾರದು ರಘು. ನನಗೆ ಕಷ್ಟ ಅಂತ ಬಂದಾಗ ನಿನ್ನ ಸಹಾಯ ಖಂಡಿತ ಕೇಳುತ್ತೇನೆ. ಅಲ್ಲಿಯ ವರೆಗೆ ಪ್ರೀತಿಯೊಂದಿದ್ದರೆ ಸಾಕು"
ಎಂದಳು.
ರಘು ಅಮ್ಮನ ಮಾತು ತಿರಸ್ಕರಿಸಲಿಲ್ಲ. ದೈವ ವಾಕ್ಯದಂತೆ ಪರಿಪಾಲಿಸಿದ...
                                       ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment