Friday, 25 March 2016

ಒಲವಿನ ಬಣ್ಣ

ಒಲವಿನ ಬಣ್ಣ...


ಅಂದು ಹೋಲಿ ಹಬ್ಬ. ರಂಗಿನ ಓಕುಳಿಯನ್ನು ಚೆಲ್ಲಲು ನಾನು ಶಾಲು ಮನೆಯ ಮುಂದೆ ಹೋಗಿ ನಿಂತೆ. ಕೈಯಲ್ಲಿ ಪಿಚಕಾರಿ ಹಿಡಿದು ನಿಂತು ಅವಳು ಆಗ ಹೊರಗೆ ಬರಬಹುದು, ಈಗ ಬರಬಹುದು ಎಂದು ನನ್ನ ಕಣ್ಣುಗಳು ಅವಳ ಮನೆಯ ಬಾಗಿಲ ಕಡೆಯೇ ನೋಡುತ್ತಿದ್ದವು. ನಾನು ಹಿಡಿದುಕೊಂಡು ನಿಂತಿದ್ದ ಪಿಚಕಾರಿಯನ್ನು ಆಕೆ ಟೆರೇಸ್ ಮೇಲಿನಿಂದಲೇ ನೋಡಿಬಿಟ್ಟರೆ...? ಎಂಬ ಅನುಮಾನವೂ ನನಗಿತ್ತು. ನಾನು ನಿಂತಿರುವುದನ್ನು ನೋಡಿದರೆ ಆಕೆ ಖಂಡಿತ ಹೊರಗೆ ಬರಲಾರಳು.. ಏನ್ಮಾಡೋದು ಹೇಳಿ ...ಬಣ್ಣತುಂಬಿದ ಆ ಪಿಚಕಾರಿಯನ್ನು ನಾನು  ರಾಜಾರೋಷವಾಗಿ ಹಿಡಿದು ಅವಳನ್ನು ಬಣ್ಣದಲ್ಲಿ ಮುಳುಗಿಸಲು ಅಲ್ಪ ಸ್ವಲ್ಪ ಸಹಾಸವೂ ಮಾಡಬೇಕಾಗುತ್ತದೆ. ನೇರವಾಗಿ ಮನೆಯೊಳಗೆ ನುಗ್ಗಿ ಬಣ್ಣ ಹಾಕುವ ಧೈರ್ಯವೂ ನನಗೆ ಇರಲಿಲ್ಲ. ಪಿಚಕಾರಿಯನ್ನು ಆಗಾಗ ಬೆನ್ನ ಹಿಂದೆಯೇ ಮುಚ್ಚಿಕೊಂಡು ಮರೆಮಾಚಿಸಲು ಪ್ರಯತ್ನಿಸುತ್ತಿದ್ದೆ. ಆಕೆಯ ದೇಹವನ್ನು ಸಂಪೂರ್ಣವಾಗಿ ವರ್ಣಮಯವನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಬಂದಿದ್ದೆ. ನನ್ನ ಯೋಜನೆ ವಿಫಲವಾಗಬಾರದೆಂದು ನಾನು ತುಂಬಾ ಎಚ್ಚರಿಕೆಯಿಂದಲೇ ಇದ್ದೆ.

ಶಾಲೂ ತುಂಟಿ ಹುಡುಗಿ. ತುಂಟತನದಲ್ಲಿ ನನಗಿಂತಲೂ ಒಂದು ಕೈ ಮುಂದೆ. ಹೋದ ವರ್ಷ ಹೋಳಿ ಹಬ್ಬದಂದು ಮಾಡಿದ ಅವಳ ಆ ತುಂಟತನ ಹೇಗೆ ಮರೆಯಲು ಸಾದ್ಯ ಹೇಳಿ.?  ಕಳೆದ ಸಲ ಹೋಲಿ ಹಬ್ಬದಂದು ನಾನು ಇನ್ನು ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ಸೀದ ಮನೆಯೊಳಗೆ ನುಗ್ಗಿ ನನ್ನನ್ನು ಎಬ್ಬಿಸಿ ನನ್ನನ್ನು ಮನೆಯಿಂದ ಹೊರಗೆ ಕರೆದು ರಂಗಿನ ಓಕುಳಿಯನ್ನು ಹಾಕಲು ಪ್ಲಾನ್ ಹಾಕಿಕೊಂಡೇ ಬಂದಿದ್ದಳು. ಎಂತಹ ಪ್ಲಾನ್ ಅಂತಿರಾ...? ಆ ಪ್ಲಾನ್ ಗೆ ಆಕೆಯ ಸುಂದರ ಮುಖ ಆಕೆಗೆ ಸಹಕಾರ ನೀಡಿತ್ತು. ನನ್ನನ್ನು ಮೋಸಗೊಳಿಸಿದ ಆವಳ ಆ ಸುಂದರ ರೂಪ, ಅವಳ ಆ ನಗುವಿಗೆ ಎಂಥವನಾದರೂ ಬೀಳದೇ ಇರಲು ಸಾಧ್ಯವಿರಲಿಲ್ಲ. ಅವಳ ಆ ಮುಗ್ದ ಸೌಂದರ್ಯದ ಹಿಂದೆ ನನ್ನನ್ನು ಮೋಸಗೊಳಿಸಿ ಓಕುಳಿ ಹಾಕಿದ ಆ ಘಟನೆ ಮರೆಯಲು ಸಾಧ್ಯವೇ ಇರಲಿಲ್ಲ. ಅವಳು ಆ ದಿನ ಅಪ್ಸರೆಯಂತೆ ಕಂಗೊಳಿಸುತ್ತಾ ನನ್ನ ಮುಂದೆ ಬಂದು ಕೆನ್ನೆಯ ವರೆಗೂ ಇಳಿಬಿದ್ದಿರುವ ತನ್ನ ಮುಂಗುರುಳನ್ನು ಸರಿಪಡಿಸಿಕೊಳ್ಳುತ್ತಾ...

"ಲೋ...ಪ್ರಕಾಶ,  ಪ್ಲೀಸ್ ಸ್ವಲ್ಪ ಐಶು ಮನೆಗೆ ಹೋಗಿ ಬರೋಣ ಬಾರೋ... ನಾಳೆ ಎಕ್ಸಾಮ್ ಇದೆ ಐಶು ಹತ್ರ ನೋಟ್ಸ ಇಸ್ಕೊಂಡ್ ಬರ್ಬೇಕಿತ್ತು... ಪ್ಲೀಸ್"

ಆಕೆ ಬೇಡಿಕೊಂಡ ಆ ಪರಿಯನ್ನು ನೋಡಿದರೆ ಒಪ್ಪಿಕೊಳ್ಳದಿರುವುದಕ್ಕೆ ಸಾಧ್ಯವೇ ಇರಲಿಲ್ಲ.
ಮುಗುಳ್ನಗೆಯನ್ನು ಬೀರುತ್ತಾ, ತನ್ನ ದೇಹವನ್ನು ಬಳ್ಳಿಯಂತೆ ಬಳುಕಿಸುತ್ತಾ ಹೇಳಿದಳು. ಇನ್ನೂ ಮಲಗ ಬೇಕೆಂದಿದ್ದ ನನಗೆ ಆಕೆಯ ಮುದ್ದು ಮುಖ ನೋಡಿದ ಕೂಡಲೇ ಎಂಥದೋ ಪುಳಕ ಮೈ ಮನವನ್ನೆಲ್ಲಾ ಆವರಿಸಿಕೊಂಡಿತ್ತು. ಹುಡುಗಿ ಬಂದು ಸಹಾಯ ಕೇಳಿದ್ರೆ ಯಾರು ಇಲ್ಲ ಅಂತಾರೆ ಹೇಳಿ...!! ಮೊದಲೇ ಹುಡುಗಿಯರು ಕೊಡುವ ಇಂತಹ ಅವಕಾಶಕ್ಕಾಗಿ ಎಷ್ಟೋ ಹುಡುಗರು ಕಾಯುತ್ತಿರುತ್ತಾರೆ. ಹಾಗಿರುವಾಗ ನಾನು ಬಿಟ್ಟೇನೇ...?
 ಅವಳನ್ನು ನನ್ನ ಬೈಕಿನ ಹಿಂದೆ ಕೂರಿಸಿಕೊಂಡು ಐಶು ಮನೆಯವರೆಗೂ ಹೋಗುವ ಆ ಕಲ್ಪನೆ ಇದೆಯಲ್ಲಾ... ಆ ಕ್ಷಣದಿಂದಲೇ ನನ್ನ ಮೆದುಳಿನಲ್ಲಿ ದೃಶ್ಯದಂತೆ ಕಣ್ಣ ಮುಂದೆ ಬರಲಾರಂಬಿಸಿತು. ನಾನು ಮುಂದೆ, ನನ್ನ ಹಿಂದೆ ಅವಳು... ಹಂಪ್ ಬಂದಾಗ ಬ್ರೇಕ್ ಹಾಕಿದ ಕೂಡಲೇ ನನ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿಯುವ ಆ ಸನ್ನಿವೇಶ... ಆಹಾ..! ಆ ನೆನಪೇ ಎಂತಹ ಮಜಾ..
ಬೇಗ ಬೇಗನೆ ಎದ್ದು ಷರಟನ್ನು ಹಾಕಿಕೊಂಡೆ...

"ಈ ಷರಟು ಬೇಡ ಕಣೋ... ಮೊನ್ನೆ ಹೊಸದಾದ ಬಿಳಿ ಷರಟ್ ತಗೊಂಡಿದ್ದೆಯಲ್ಲ ಅದನ್ನೇ ಹಾಕ್ಕೊ ನೀನು ಅದರಲ್ಲಿ ತುಂಬಾ ಚನ್ನಾಗಿ ಕಾಣಿಸ್ತಿಯಾ" ಅಂದ್ಲು

ಬಿಳಿ ಷರ್ಟಲ್ಲಿ ನಾನು ಅಷ್ಟೊಂದು ಸುಂದರವಾಗಿ ಕಾಣಿಸುತ್ತನೆಯೇ..? ಆ ಮಾತು ಕೇಳಿ ಕರ್ಣಾನಂದವಾಯಿತು. ಮನಸು ಹುಚ್ಚೆದ್ದು ಕುಣಿಯಿತು. ಅದೂ ಶಾಲೂ ಅಂತಹ ಸುಂದರ ಹುಡುಗಿಯಿಂದ ಹೊಗಳಿಕೆ ಬೇರೆ. ನನಗೆ ಸ್ವರ್ಗಕ್ಕೆ ಮೂರೇ ಗೇಣು.. ಒಂದುವರೆ ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ನನ್ನ ತುಂಬಾ ಇಷ್ಟದ ಬಿಳಿ ಷರಟನ್ನು ತೆಗೆದು ಹಾಕಿಕೊಂಡೆ. ಕಣ್ಣು ಕುಕ್ಕುವಂತಹ ಆ ಶುಭ್ರ ಬಿಳಿ ಷರಟಿನಲ್ಲಿ ನಾನು ಅಪ್ಪಟ ಮದು ಮಗನಂತೆ ಕಾಣುತ್ತಿದ್ದೆ. ನನ್ನನ್ನು ಅವಳು ಕೈಹಿಡಿದು ಕೊಂಡೇ ಹೊರಗೆ ಕರೆದೊಯ್ಯುತ್ತಿದ್ದಳು. ನಾನು ಮದುಮಗನಾದರೆ ಆಕೆ ಮದುಮಗಳಾಗಿ ನನ್ನ ಕೈಹಿಡಿದುಕೊಂಡು ಸಪ್ತಪದಿ ಹಾಕುತ್ತಿರುವಳೋ ಎಂಬಂತೆ ಬಾಸವಾಯಿತು...
ಸುಮಾರು ಏಳು ಹೆಜ್ಜೆ ಪೂರ್ಣಗೊಂಡಿತ್ತು. ಆಷ್ಟರಲ್ಲಿ ನಾನು ನನ್ನ ಮನೆಯ ಹೊರಗಿನ ಗೇಟ್ ವರಗೆ ಬಂದು ನಿಂತಿದ್ದೆ. ಮೊದಲೇ ಹಾಕಿಕೊಂಡ ಪ್ಲಾನ್ ನಂತೆ ಶಾಲೂ ತನ್ನ ಗೆಳತಿ ಐಶು ಮತ್ತು ತಮ್ಮ ಬಾಲು ಜೊತೆ ಸೇರಿಕೊಂಡು ನನ್ನ ಮೇಲೆ ರಂಗಿನ ಮಳೆಗೆರೆದರು. ಅವರ ರಂಗು ರಂಗಿನ ಆ ಓಕುಳಿಗೆ ನಾನು ಸಂಪೂರ್ಣವಾಗಿ ಬಣ್ಣದಲ್ಲಿ ಮುಳುಗಿ ಹೋಗಿದ್ದೆ. ನಾನು ಇಷ್ಟ ಪಟ್ಟು ಖರೀದಿಸಿದ ಬಿಳಿ ಷರಟು ಹಾಳಾಗಿದ್ದು ನನಗೆ ತಂಬಾ ನೋವನ್ನುಂಟು ಮಾಡಿತ್ತು. ಆ ತರಲೆ ಶಾಲೂ ನನ್ನ ಹೊಸ ಷರಟನ್ನು ಟಾರ್ಗೆಟ್ ಮಾಡಿ ಹಾಳು ಮಾಡಿದ್ದಳು. ಅದಕ್ಕೆ ನನ್ನಮ್ಮಳು ಸಹ ಅವಳಿಗೆ ಸಾಥ್ ನೀಡಿದ್ದಳು.

"ಪಾಪ ಹುಡುಗಿ.... ನಿನಗೆ ತಮಾಷೆ ಮಾಡದೇ ಇನ್ನಾರಿಗೆ ಮಾಡುತ್ತಾಳೋ..?"

ಎಂದು ಹೇಳಿ ಅಮ್ಮ ನನ್ನ ಕೋಪವನ್ನು ಶಾಂತಗೊಳಿಸಿದಳು.

"ತಮ್ಮನ ಮಗಳು ಅಂತ ಜಾಸ್ತಿ ಸಲುಗೆ ಕೊಟ್ಟಿದ್ದೀಯಮ್ಮ... ಇರಲಿ ನನಗೂ ಟೈಮ್ ಬರುತ್ತೆ"

ಪ್ರತಿಕಾರದ ಧ್ವನಿಯಲ್ಲೇ ಹೇಳಿದೆ...

ಶಾಲೂ ಇನ್ನು ಅಲ್ಲೇ ನಗುತ್ತಾ ನಿಂತಿದ್ದಳು. ಅಲ್ಲೇ ಅಮ್ಮ ನಲ್ಲಿಯ ಕೆಳಗೆ ಒಂದು ಬಕೆಟ್ ನೀರನ್ನು ತುಂಬಿ ಇಟ್ಟಿದ್ದಳು. ತಕ್ಷಣ ಶಾಲೂವಿನ ಕೈ ಹಿಡಿದೆಳೆದು ಆ ಬಕೇಟ್ ನೀರನ್ನು ಅವಳ ತಲೆಯ ಮೇಲೆ ಸುರಿದು ಬಿಟ್ಟೆ...
ಅವಳು 'ಅಯ್ಯೊ ಬಿಡೊ' ಎನ್ನುತ್ತಾ ನನ್ನ ಬಿಗಿ ಹಿಡಿತದಿಂದ ನುಣುಚಿಕೊಂಡು ಓಡಿದಳು ಬಟ್ಟೆಯಲ್ಲಾ ಒದ್ದೆಯಾಗಿತ್ತು. ಮೈ ಗಂಟಿಗಂಡಿದ್ದ ಅವಳ ಆ ಒದ್ದೆ ಬಟ್ಟೆಯನ್ನು ನೋಡಿ ನಾನು ಕ್ಷಣಕಾಲ ರೋಮಾಂಚಿತನಾದೆ....ಅವಳು ಹಾಕಿದ್ದ ತೆಳು ಬಟ್ಟೆಯು ರೇಷ್ಮೆಯಂತಹ ಅವಳ ಮೈಯೊಂದಿಗೆ ಬಿಗಿಯಾಗಿ ಅಪ್ಪಿಕೊಂಡಿತ್ತು. ಬೇಲೂರಿನ ಶಿಲಾಬಾಲಿಕೆ ನೆನಪಾದದ್ದು ಸುಳ್ಳಲ್ಲ. ಹೆಣ್ಣನ್ನು ನಾಜೂಕಾಗಿ ಕಡೆದ ಆ ಶಿಲ್ಪಿ ಅದೆಂತ ಅದ್ಭುತ ಕಲೆಗಾರ. ಹೆಣ್ಣನ್ನು ಸುಂದರವಾಗಿ ಚಿತ್ರಿಸಿ ಗಂಡನ್ನು ಆಕರ್ಷಿಸುವಂತಹ ಆ ಸಮ್ಮೋಹನ ಲೀಲೆಯನ್ನು ಅವಳಲ್ಲಿ ಅದು ಹೇಗೆ ಬೆರೆಸಿ ಸೃಷ್ಠಿಸಿದನೋ...!!!  ಆ ದಿನ ಶಾಲೂ ವನ್ನು ಮರೆಯಲಾಗಲಿಲ್ಲ. ಶಾಲೂಗೆ ಮದುವೆಯಾಗುವಂತೆ ಅಮ್ಮ ಹಲವು ಸಲ ಬೇಡಿಕೆಯಿಟ್ಟಿದ್ದರೂ ನಾನು ನಿರಾಕರಿಸಿದ್ದೆ. ಆದರೆ ಈ ದಿನ ಶಾಲೂ ಮನಸಿಗೆ ತೀರ ಹತ್ತಿರವಾಗಿದ್ದಳು. ಪ್ರಕೃತಿಯ ಸಹಜವಾದ ನೈಜ ಆಕರ್ಷಣೆ ಶಾಲೂವಿನ ಮೇಲಾಯಿತು.ಅಂದಿನಿಂದ ಶಾಲೂ ಮನಸ್ಸಿಗೆ ಹತ್ತಿರವಾದಂತೆ ಬಾಸವಾಯಿತು. ಅಮ್ಮ ಶಾಲೂ ಮತ್ತು ನನ್ನ ಮದುವೆಯ  ಬಗ್ಗೆ ಮತ್ತೆ ನನಗೆ ಕೇಳಬಹುದೇನೋ ಎಂದು ನಿರೀಕ್ಷಿಸಿದ್ದೆ. ಆದರೆ ಅಮ್ಮ ಕೇಳಲೇ ಇಲ್ಲ. ಇಷ್ಟು ದಿನ ಮದುವೆ ನಿರಾಕರಿಸುತ್ತಲೇ ಬಂದ ನಾನು ಶಾಲೂವಿನ ಪ್ರೀತಿಯವಿ ಬಿದ್ದಿದ್ದೆ.  ಶಾಲೂ ಮಾತ್ರ ಅಂದು ನನ್ನ ಹೃದಯವನ್ನೇ ಕದ್ದಿದ್ದಳು....

ಹಿಂದಿನ ವರ್ಷದ ಈ ಘಟನೆ ಮತ್ತೆ ಮನಸಿಗೆ ಮುದ ನೀಡುತ್ತಿತ್ತು. ಈ ವರ್ಷ ಹೋಳಿ ಬಂದಾಗ ಪದೇ ಪದೇ ಆ ನನ್ನ ಬಿಳಿ ಷರಟು ನೆನಪಿಗೆ ಬಂದಿತು. ಹಿಂದಿನ ವರ್ಷ ಶಾಲೂ ನನ್ನ ಮೇಲೆ ಓಕುಳಿ ಹಾಕಿದಂತೆ ನಾನೂ ಮೋಸದಿಂದ ಹಾಕಲು ನಿರ್ಧರಿಸಿದೆ ಹಿಂದಿನ ವರ್ಷದ ಸೇಡು ತೀರಿಸಿಕೊಳ್ಳುವುದು ಬೇಡವೇ... ನಾನು ಕೂಡ ಪ್ಲಾನ್ ಮಾಡಿಕೊಂಡು ಅವಳ ಮನೆಯ ಗೇಟಿನ ಬಳಿ ಇರುವ ಮರದ ಮರೆಯಲ್ಲಿ ನಿಂತುಕೊಂಡು ಕಾಯುತಲಿದ್ದೆ. ಕಳೆದ ವರ್ಷ ಬಣ್ಣಗಳಿಂದ ಹಾಳಾಗಿದ್ದ ಅದೇ ಬಿಳಿ ಬಣ್ಣದ ಷರಟನ್ನು ಹಾಕಿಕಂಡಿದ್ದೆ. ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಮನೆಯ ಆಚೆಗಿನ ತುಳಸಿ ಕಟ್ಟೆಯ ಹತ್ತಿರ ಕುಳಿತು ಓದುತ್ತಿದ್ದ ಅವಳು ಈ ದಿನ ಬರಲೇ ಇಲ್ಲ.ಮನೆಯೊಳಗೆ ಕಳ್ಳ ದೃಷ್ಠಿ ಬೀರಿದೆ. ಮನೆ ಶಾಂತವಾಗಿತ್ತು. ಎಷ್ಟು ಸಮಯವಾದರೂ ಕಾದು ಶಾಲೂವಿನ ಮೈಯನ್ನು ರಂಗು ರಂಗಿನ ಬಣ್ಣದಿಂದ ಒದ್ದೆ ಮಾಡಬೇಕು. ಹೊರಗೆ ಬಂದೇ ಬರುತ್ತಾಳೆ ನೋಡೋಣ ಎಂದು  ಮರದ ಮರೆಯಲ್ಲಿ ಕಾಯುತ್ತಲೇ ಇದ್ದೆ... 

ನನ್ನ ಹಿಂದೆ ಏನೋ ಸದ್ದಾಯಿತು. ತಕ್ಷಣ ತಿರುಗಿ ನೋಡಿದೆ. ಪಿಚಕಾರಿಯ ಕೊಳವೆಯಿಂದ ಎರಗಿ ಬಂದ ಕೆಂಪು ಬಣ್ಣವೊಂದು ಮುಖಕ್ಕೆ ಅಪ್ಪಳಿಸಿತು. ಇನ್ನೊಂದು ಪಿಚಕಾರಿಯಿಂದ ಬಂದ ನೇರಳೆ ಬಣ್ಣದ ನೀರು ನನ್ನ ಬಟ್ಟೆಯನ್ನು ರಂಗಾಗಿಸಿತು. ಮತ್ತೊಂದರಿಂದ ಬಂದ ಹಳದಿ ಬಣ್ಣದ ನೀರು ನನ್ನ ದೇಹವನ್ನು ತೊಯ್ದು ತೆಪ್ಪೆಯಾಗಿಸಿತು. ನನ್ನ ಹಿಂದೆ ಶಾಲೂ, ಐಶು, ಮತ್ತು ಬಾಲು ನನ್ನ ಮೇಲೆ ಮೂರು ಮೂರು ಪಿಚಕಾರಿಯನ್ನು ಹಿಡಿದು ರಂಗಿನ ನೀರನ್ನು ನನ್ನ ಮೇಲೆರೆದು ನಗುತ್ತಾ ನಿಂತಿದ್ದರು. ನಾನು ಹಿಂದಿನ ವರ್ಷದಂತೆಯೇ ಶಾಲೂವಿನ ಮುಂದೆ ಮತ್ತೆ ಮೋಸಹೋದೆ. ನನ್ನ ಮತ್ತು ಶಾಲೂವಿನ ಮದುವೆ ಕೇವಲ ಇನ್ನೊಂದು ವಾರ ಮಾತ್ರ ಉಳಿದಿತ್ತು. ಈ ಸಮಯದಲ್ಲಿ ಶಾಲೂ ನಾಚಿಕೆಯಿಂದ ಇರುವಳು. ಈ ಸಮಯವನ್ನು ನಾನೇ ಸದೂಪಯೋಗ ಪಡಿಸಿಕೊಂಡು ಶಾಲೂ ಮೇಲೆ ರಂಗಿನ ಮಳೆಗೆರೆಯಬಹುದು ಎಂದು ಕೊಂಡಿದ್ದೆ. ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ನಾನು ಶಾಲೂವಿನಿಂದ ಮತ್ತೆ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದಿತ್ತೇನೋ... ಶಾಲೂ ಹಾಗೆ ಮಾಡಲಾರಳು ಎಂದು ಭಾವಿಸಿದ್ದೇ ನನ್ನ ತಪ್ಪಾಯಿತು. ಏನೇ ಆಗಲಿ ಪ್ಲಾನ್ ಮಾಡಿ ನನ್ನಂತಹ ಹುಡುಗರನ್ನು ಯಾಮಾರಿಸುವುದರಲ್ಲಿ  ಹುಡುಗಿಯರು ಎತ್ತಿದ ಕೈ. ನನ್ನ ಕೈಗೆ ಸಿಕ್ಕಿದ್ದರೆ ಆಕೆಯನ್ನು ನನ್ನ ಎದೆಯ ಗೂಡಿನಲ್ಲಿ ಬಿಗಿಯಾಗಿ ಬಂಧಿಸಬೇಕೆಂದಿದ್ದೆ.  ಅವಳ ಕೈ ಹಿಡಿದುಕೊಂಡು ಬರ ಸೆಳೆದುಕೊಂಡೆ. ಇನ್ನೇನು ನನ್ನ ಬಾಹು ಬಂಧನದಲ್ಲಿ ಬಂಧಿಯಾಗಿ ನಾಚಿಕೆಯಿಂದ ಕರಗುವಳೆನೋ ಎನ್ನುವಾಗಲೇ. ಆಕೆ ನನ್ನಿಂದ ನುಣುಚಿಕೊಂಡು ದೂರ ಸರಿದು ಕೊಲೆಗಾರನಿಗೆ ಬಂದೂಕು ಹಿಡಿದು ನಿಂತಂತೆ ನನ್ನ ಎದೆಯನ್ನು ಗುರಿಯಾಗಿರಿಸಿಕೊಂಡು ಮತ್ತೆ ಪಿಚಕಾರಿಯನ್ನು ಹಿಡಿದು ನಿಂತಳು.

ಆಕೆಯ ಮೈ ಮೇಲೆ ಒಂಚೂರು ಹೋಳಿಯ ರಂಗು ತಾಕಿರಲಿಲ್ಲ. ಆದರೂ ಶಾಲೂ ತನ್ನ ಸಹಜ ಸೌಂದರ್ಯದಿಂದ ನನ್ನ ಕಣ್ಣಿಗೆ ಕಲರ್ ಫುಲ್ ಆಗಿ ಕಾಣುತ್ತಿದ್ದಳು. ನಾಚಿಕೆಯ ಆಭರಣ ಧರಿಸಿದ್ದ ಅವಳ ಮುಖ ಬೆಳದಿಂಗಳ ಚಂದಿರನಂತೆ ಬಿಳುಪಾದ ಹಾಲಿನ ಬಣ್ಣ ಪಡೆದಿತ್ತು. ರೇಷಿಮೆಯಂತಹ ಅವಳ ಕೆನ್ನೆಯು ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಆಸೆಯ ಕುಡಿನೋಟದ ಅವಳ ಕಣ್ಣುಗಳು ನೀಲಾಕಾಶದ ಬಣ್ಣದಿಂದ ಮುಳುಗಿತ್ತು. ಜೇನಿನ ಅಧರವಾಗಿದ್ದ ಅವಳ ತುಟಿಗಳು ತೊಂಡೆ ಹಣ್ಣಿನ ಕೆಂಪು ರಂಗನ್ನು ಪಡೆದಿತ್ತು. ಗಾಳಿಯೊಂದಿಗೆ ಸರಸವಾಡುತ್ತಿರುವ ಅವಳ ಮುಂಗುರುಳಿನದು ಕಪ್ಪು ಮೊಡದ ಬಣ್ಣ. ಅವಳು ಕುಣಿದು ಕುಪ್ಪಳಿಸುವಾಗ ನವಿಲುಗರಿಯ ಬಣ್ಣ. ನಡೆಯುವಾಗ ವಸುಂದರೆಯ ಹಸಿರ ಬಣ್ಣ. ತುಂಟತನದಲ್ಲಿ ಕಾಮನ ಬಿಲ್ಲಿನ ಏಳು ಬಣ್ಣ. ಒಟ್ಟಾರೆ  ಅವಳು ಬಣ್ಣಗಳ ಮಿಶ್ರಣ, ಅವಳ ಪಿಚಕಾರಿಯಿಂದ ಅಪ್ಪಳಿಸಿ  ಬಂದ ಬಣ್ಣಗಳಿಂದ ಮಿಂದ  ನಾನು ಅವಳದೆ ಬಣ್ಣಗಳ ಸಮ್ಮಿಶ್ರಣ.....

                                                                                           - ಪ್ರಕಾಶ್ ಎನ್ ಜಿಂಗಾಡೆ

Thursday, 3 March 2016

ದೇವರು ಧರ್ಮ

ದೇವಸ್ಥಾನದಲ್ಲಿ ಘಂಟೆಯ ಸದ್ದು ಕೇಳಿಸುತ್ತಿತ್ತು. ಬಹುಷಃ ಸ್ವಲ್ಪ ಲೇಟಾಗಿ ಬಂದಿರಬಹುದು ಎಂದುಕೊಂಡು ಆತುರವಾಗಿ ಹೆಜ್ಜೆ ಹಾಕಿದೆ. ಬುಟ್ಟಿಯಲ್ಲಿ ತಂದ ಹಣ್ಣು ಕಾಯಿಗಳೊಂದಿಗೆ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಒಳಗೆ ಪ್ರವೇಶಿಸಿದೆ. ಮಹಾಮಂಗಳಾರತಿಯ ದಿವ್ಯ ಪ್ರಭೆಯು ಪ್ರಾಂಗಣದ ತುಂಬೆಲ್ಲಾ ಪ್ರಜ್ವಲಿಸುತ್ತಿತ್ತು. ಮಿಂಚಿನ ಆ ಬೆಳಕಲ್ಲಿ ಭಕ್ತಿ ಪೂರ್ವಕವಾಗಿ ತಲ್ಲೀನ ಗೊಂಡಿರುವಾಗಲೇ ಮುದ್ದಾದ ಮುಖವೊಂದು ಕಣ್ಣ ಮುಂದೆ ಬಂದಂತಾಯಿತು. ಎಲ್ಲೋ ನೋಡಿದ ಪರಿಚಿತ ಎಂದೆನಿಸಿತು. ಆಕೆಯ ಗುಲಗಂಜಿಯಂತಿರುವ ಕಣ್ಣುಗಳ ಮೇಲೆ ನವಿಲು ಗರಿಯನ್ನು ಇಟ್ಟು ಯಾರೋ ಹುಬ್ಬುಗಳನ್ನು ತಿದ್ದಿ ತೀಡಿದ್ದಾರೆ ಎಂದೆನಿಸಿತು. ಕೆನ್ನೆಗಳು ಗುಲಾಬಿ ರಂಗಿನ ಹೊಳಪನ್ನು ಧರಿಸಿದ್ದವು. ಅಧರಗಳು ಜೇನು ಸವರಿದ ಒದ್ದೆಯಂತೆ ಫಳ ಫಳಿಸುತ್ತಿದ್ದವು.  ಬಯಸದ ಸೌಂದರ್ಯವೊಂದು ಕಣ್ಣ ಮುಂದೆ ಬಂದು ನನ್ನ ಮನಸನ್ನು ಪುಳಕಿತಗೊಳಿಸಿತು. ಆಕೆಯನ್ನು ದಿಟ್ಟಿಸಿ ನೋಡಿದೆ.

"ಅರೆ... ನೀವು ಸಲೋನಿ...!!  ಮೊನ್ನೆ ಚರ್ಚ್ ನಲ್ಲಿ  ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲವೆ...?"

ಎಂದು ಆಶ್ಚರ್ಯದಿಂದ ಕೇಳಿದೆ

"ಹೂಂ....ಹೌದು.... "
ಎಂದಳು

"ಮೊನ್ನೆ ಚರ್ಚ್ ಎದುರುಗಡೆಯ ಹಾಲ್ ನಲ್ಲಿ ನಡೆದ ನ್ಯಾನ್ಸಿಯ ಮದುವೆಗೆ ನಾನು ಬಂದಿದ್ದೆ... ಆಗ ನಿಮ್ಮನ್ನು ನೋಡಿದ್ದೆ... .. ಆಗ ನ್ಯಾನ್ಸಿ ನನ್ನ ಪರಿಚಯಿಸಿದ್ದು ನೀವು ಮರೆತಿರಬೇಕು"
ಎಂದೆನು.

"ಇಲ್ಲ, ಇಲ್ಲ , ಮರೆತಿಲ್ಲ....ನಿಮ್ಮ ಹೆಸರು ಪ್ರಕಾಶ್, ನೀವು ಬರೆಯುತ್ತಿರುವ ಪಿ,ಹೆಚ್,ಡಿ ಪ್ರಬಂಧಕ್ಕೆ ನನ್ನ ಸಹಾಯ ಕೇಳಲು ಬಂದಿದ್ರಿ ಅಲ್ಲವೇ....? "

ಸಲೋನಿ ನನ್ನ ನೆನಪಿಸಿಕೊಂಡು ಹೇಳಿದಳು.

"ಹೌದು... ಅಂದು ನೀವು ಕೊಟ್ಟ ಕೆಲವು ಮಾಹಿತಿಗಳು ನನ್ನ ಪ್ರಬಂದಕ್ಕೆ ಅನುಕೂಲವಾಯಿತು
 "ಆದರೆ ನೀವು ಈ ದೇವಸ್ಥಾನದಲ್ಲಿ...?"
ಅನುಮಾನದಿಂದ ಕೇಳಿದೆ.

"ಯಾಕೆ..? ಬರಬಾರದೇನು...? ಚರ್ಚ್ ನಲ್ಲಿ ಪ್ರಾರ್ಥಿಸುವವಳು ದೇವಸ್ಥಾನದಲ್ಲಿ ಅಂತ ಅನುಮಾನನಾ...?"

ನಗುತ್ತಾ ಕೇಳಿದಳು. ಆಕೆಯ ಆ ನಗು ಮಿಂಚಿನ ಬೆಳಕು ಚೆಲ್ಲಿದಂತಿತ್ತು.

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠ ಎಂದು ಕಿತ್ತಾಡಿಕೊಳ್ಳುವ ಈ ಸಮಾಜದಲ್ಲಿ ಅನ್ಯ ಧರ್ಮವನ್ನು ಗೌರವಿಸುವ ಸಲೋನಿಯಂತಹ ಹುಡುಗಿಯನ್ನು ಕಂಡರೆ ಆಶ್ಚರ್ಯವಾಗುವುದೇನೋ ಸಹಜ.

" ಹಾಗೇನಿಲ್ಲ .. ಬರಬಹುದು, ಕೆಲವರು ವಿಗ್ರಹಾರಾದನೆಯನ್ನು ನಂಬುವುದಿಲ್ಲವಲ್ಲ. ಅದಕ್ಕೆ ಕೇಳಿದೆ"
ಎಂದು ಸಮಾಧಾನದಿಂದ ಉತ್ತರಿಸಿದೆ.

"ನೋಡಿ ದೇವರು ಮೂರ್ತ ಸ್ವರೂಪವೋ, ಅಮೂರ್ತ ಸ್ವರೂಪವೋ ನನಗೆ ತಿಳಿಯದು, ನನ್ನ ಪ್ರಕಾರ ದೇವರು ಒಬ್ಬನೆ, ದೈವ ಶಕ್ತಿ ಇರುವುದೂ ಒಂದೇ ಎಂದು ನಂಬಿದವಳು ನಾನು. ಕೆಲವರು ಅದನ್ನೇ ವಿಭಿನ್ನ ಹೆಸರಿನಲ್ಲಿ, ವಿಭಿನ್ನ ಧರ್ಮದ ಅಡಿಯಲ್ಲಿ ಆರಾಧಿಸುತ್ತಾರೆ. ಕೆಲವರು ಆ ಶಕ್ತಿಯನ್ನು ವಿಗ್ರಹದ ರೂಪದಲ್ಲಿ  ಪೂಜಿಸಿದರೆ, ಮತ್ತೆ ಕೆಲವರು ಅದೇ ಶಕ್ತಿಯನ್ನು ಅಮೂರ್ತ ಸ್ವರೂಪದಲ್ಲಿ ಪೂಜಿಸುತ್ತಾರೆ. ಇರುವ ಭೂಮಿಯೂ ಒಂದೇ... ಕುಡಿವ ನೀರು ಒಂದೇ... ವಾಯು,ಅಗ್ನಿ, ಸೂರ್ಯ, ಚಂದ್ರ, ಆಕಾಶ, ಗ್ರಹ, ತಾರೆ, ಇಡೀ ಜಗತ್ತು ಎಲ್ಲವೂ ಎಲ್ಲರ ಕಣ್ಣಿಗೆ ಒಂದೇ ರೀತಿಯಾಗಿ ಕಾಣುತ್ತಿರಬೇಕಾದರೆ, ದೇವರು ಮಾತ್ರ ಬೇರೆ ರೀತಿಯಾಗಿ ಕಾಣಲು ಹೇಗೆ ಸಾದ್ಯ ಹೇಳಿ...? ಗುರಿ ತಲುಪಲು ಯಾವ ಮಾರ್ಗ ಆರಿಸಿಕೊಂಡರೇನು.. ? ಎಷ್ಟೋ ಜನ ಮಾರ್ಗ ಮಧ್ಯದಲ್ಲಿಯೇ ನನ್ನ ದಾರಿಯೇ ಶ್ರೇಷ್ಠವೆಂದು ವಾದಿಸಿ, ಜಗಳ ಮಾಡಿ, ಇನ್ನೊಬ್ಬರನ್ನು ತೊಂದರೆಗೆ ಸಿಲುಕಿಸಿ, ತಾವು ತೊಂದರೆಗೆ ಸಿಲುಕುತ್ತಾರೆ. ಇಂಥವರು ಗುರಿ ಕಾಣದೇ ಪರಿತಪಿಸುತ್ತಾರೆ. ಮಾರ್ಗಕ್ಕಿಂತ ಗುರಿ ಮುಖ್ಯವಲ್ಲವೇ..?"

ಸಲೋನಿ ಹಾಗೆ ಹೇಳಬೇಕಾದರೆ. ಆಕೆ ಬರೆದ 'ದೇವರು ಮತ್ತು ಧರ್ಮ' ಎಂಬ ಪುಸ್ತಕ ಓದಿದ ನೆನಪು ಬಂದಿತು. ಆಕೆ ಧರ್ಮದ ಬಗ್ಗೆ ಬರೆದ ಆ ಪುಸ್ತಕ ಎಲ್ಲಾ ಧರ್ಮದವರನ್ನು ಬೆರಗು ಗೊಳಿಸಿತ್ತು. ಆ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ಬಂದಿತ್ತು. ಆ ಪುಸ್ತಕ ಓದಿದಾಗಿನಿಂದ ನಾನು ಅವಳ ಅಭಿಮಾನಿಯಾಗಿ ಬಿಟ್ಟೆ. ಚಿಕ್ಕ ವಯಸ್ಸಿನಲ್ಲಿಯೇ ಅದೆಂತಹ ಸಾದನೆ ಅವಳದು. ನ್ಯಾನ್ಸಿಯ ಮದುವೆಯಲ್ಲಿ  ಬರಹಗಾರ್ತಿ ಸಲೋನಿ ಬರುತ್ತಾಳೆ ಎಂಬ ವಿಷಯ ಗೊತ್ತಾದ ಕೂಡಲೇ ಸಲೋನಿಯನ್ನು ನನಗೆ ಪರಿಚಯಿಸುವಂತೆ ನ್ಯಾನ್ಸಿಯನ್ನು ಒಂದು ವಾರದಿಂದ ದಂಗಾಲು ಬಿದ್ದಿದ್ದೆ.

"ನನ್ನ ಮದುವೆಗಿಂತ ಸಲೋನಿ ಪರಿಚಯವೇ ನಿನಗೆ ಮುಖ್ಯವೇ...?  ಹಾಗಿದ್ದರೆ ನನ್ನ ಮದುವೆಗೆ ನೀನೇನು ಬರುವುದು ಬೇಡ"

ಎಂದು ನ್ಯಾನ್ಸಿ ನನಗೆ ಹಲವು ಸಲ ಬೈದಿದ್ದಳು. ಆದರೂ ಬೆನ್ನು ಬಿಡದ ಬೇತಾಳದಂತೆ ನ್ಯಾನ್ಸಿಯನ್ನು ಒಪ್ಪಿಸಿ ಸಲೋನಿಯನ್ನು ಪರಿಚಯ ಮಾಡಿಕೊಂಡಿದ್ದೆ. ಅದಕ್ಕೆ ಒಂದು ಕಾರಣವೂ ಇತ್ತು. ನಾನು ಬರೆಯ ಹೊರಟಿದ್ದ  "ಧರ್ಮದ ತತ್ವ ಮತ್ತು ಸಿದ್ಧಾಂತಗಳು"  ಎಂಬ ಪಿ,ಹೆಚ್,ಡಿ, ಪ್ರಬಂಧಕ್ಕೆ ಸಲೋನಿಯ ಸಹಾಯ ನನಗೆ ಅವಶ್ಯವಾಗಿತ್ತು.

ಇಂದು ಸಲೋನಿಯು ಮತ್ತೆ ದೇವಸ್ಥಾನದಲ್ಲಿ ಸಿಕ್ಕಿದ್ದು ನನ್ನ ಮತ್ತು ಅವಳ ಗೆಳೆತನ ಇನ್ನಷ್ಟು ಭದ್ರವಾಯಿತು.  ಧರ್ಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕೆನಿಸಿದರೂ ಆ ಕ್ಷಣಕ್ಕೆ ನನ್ನ ತಲೆಗೆ ಏನೂ ಹೊಳೆಯಲಿಲ್ಲ. ಆಕೆಯ ಮದ್ದಾದ ಮುಖವು ನನ್ನ ಮನಸ್ಸನ್ನು ಆಗಾಗ ವಿಷಯಾಂತರ ಮಾಡಿಸುತ್ತಿತ್ತು. ಕಣ್ಣುಗಳು ನಾಚಿಕೊಂಡು ಅತ್ತಿತ್ತ ನೋಡುವಂತೆ ನಟಿಸುತ್ತಿದ್ದವು.

"ಸರಿ ನಾನು ಬರುತ್ತೇನೆ"

ಎಂದು ಹೇಳಿ ಸಲೋನಿ ದೇವಾಲಯದ ಮೆಟ್ಟಿಲು ಇಳಿದಳು. ಹಾಗೆ ಇಳಿಯುವಾಗ ಆಕೆಯ ಗೆಜ್ಜೆಯ ಸದ್ದು ಎದೆಯೊಳಗೆ ನನ್ನ ಎದೆಯೊಳಗೆಯೇ ಮಾರ್ಧನಿಸಿದಂತಾಯಿತು. ಎದೆಯಲ್ಲಿ ಎಂಥದೊ ತಕಧಿಮಿತದ ಮಧುರ ರಾಗ ಮೀಟಿ ಹೋದಂತಾಯಿತು..

ಸಲೋನಿ ಮತ್ತೆ ನನಗೆ ಭೇಟಿಯಾಗಿದ್ದು ನ್ಯಾನ್ಸಿಯ ಮನೆಯಲ್ಲಿ. ಕ್ರಿಸ್ ಮಸ್ ಹಬ್ಬಕ್ಕೆಂದು ನ್ಯಾನ್ಸಿ ನನ್ನನ್ನು ಕರೆದಿದ್ದಳು. ಅಲ್ಲಿಗೆ ಸಲೋನಿಯೂ ಬಂದಿದ್ದಳು. ಅಷ್ಟೊತ್ತಿಗೆ ನಾನು ಸಲೋನಿ ಬರೆದ ಪುಸ್ತಕದ ಕೆಲವು ಮಾಹಿತಿಯನ್ನು ನನ್ನ ಪಿ,ಹೆಚ್,ಡಿ, ಪ್ರಬಂಧಕ್ಕೆ ಅಳವಡಿಸಿಕೊಂಡಿದ್ದೆ. ಅಳವಡಿಸಿಕೊಳ್ಳುವುದು ನನಗೆ ಅನಿವಾರ್ಯವಾಗಿತ್ತು. ಅಂದು ಸಲೋನಿಗೆ ನನ್ನ ಪ್ರಬಂಧವನ್ನು ತೋರಿಸಿ ಒಪ್ಪಿಗೆ ಪಡೆಯಬೇಕಿತ್ತು. ಕ್ರಿಸ್ ಮಸ್ ಹಬ್ಬದ ಆಚರಣೆ ಊಟದ ನಂತರ ಮನೆಯ ಟೆರೇಸ್ ಮೇಲೆ ನನ್ನ ಪ್ರಬಂಧದ ಪುಟಗಳನ್ನು ತೋರಿಸಿದೆ. ಸಲೋನಿ ಪ್ರಬಂಧವನ್ನು ಓದಿ ನನಗೆ ಹಲವು ಕಡೆ ಸಲಹೆಗಳನ್ನು ನೀಡಿದಳು. ನನಗಿಂತ ಒಂದೆರಡು ವರ್ಷ ಚಿಕ್ಕವಳಾದ ಸಲೋನಿಗೆ ಇಷ್ಟೊಂದು ಜ್ಞಾನ ಸಂಪಾದಿಸಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಬರೆದ ಪ್ರಬಂಧ ಚೆನ್ನಾಗಿದೆ ಎಂದು ಹೇಳಿ ನನ್ನ ಬೆನ್ನು ತಟ್ಟಿದಳು.

"ನೀವು ಬರೆದ 'ದೇವರು ಮತ್ತು ಧರ್ಮ' ಎಂಬ ಕೃತಿಯಲ್ಲಿ ಎಷ್ಟೊಂದು ಸಹಿಷ್ಣುತೆಯ ವಿಚಾರಗಳನ್ನು ಬರೆದಿದ್ದೀರಿ. ಎಲ್ಲಾ ಧರ್ಮದ ತತ್ವಗಳನ್ನು ಮನ ಮುಟ್ಟುವಂತೆ ಹೇಳಿದ್ದೀರಿ ಇದೆಲ್ಲಾ ಹೇಗೆ ಸಾದ್ಯವಾಯಿತು..?"

ನಾನು ಕುತೂಹಲದಿಂದ ಕೇಳಿದೆ.

"ನನ್ನ ಮನೆಯ ವಾತಾವರಣವೇ ನನ್ನನ್ನು ಈ ಪುಸ್ತಕ ಬರೆಯಲು ಪ್ರೋತ್ಸಾಹ ಸಿಕ್ಕಿತು. ನಮ್ಮ ಮನೆಯಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಪ್ರಾಶಸ್ತ್ಯವಿದೆ. ಅಪ್ಪ ರಾಬರ್ಟ್, ಕ್ರಿಶ್ಚಿಯನ್ ಧರ್ಮದವರಾದರೆ, ಅಮ್ಮ ಶಾರದಾ ಸುಸಂಸ್ಕೃತ ಹಿಂದೂ ಮನೆತನದವಳು. ಇಬ್ಬರದೂ ಪ್ರೇಮ ವಿವಾಹ. ನಾನು ಹುಟ್ಟುವ ಮುನ್ನ ಅಪ್ಪ ನನ್ನ ಅಮ್ಮಳನ್ನು ತನ್ನ ಧರ್ಮಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರಂತೆ, ಅಮ್ಮ ಇದಕ್ಕೆ ಒಪ್ಪಲಿಲ್ಲ. ಒಮ್ಮೆ ಪಾಸ್ಟರ್ ಫರ್ನಾಂಡಿಸ್ ರವರನ್ನು ಅಪ್ಪ ನಮ್ಮ  ಮನೆಗೆ ಕರೆಯಿಸಿದ್ದರು. ಫಾಸ್ಟರ್ ರವರಿಂದ ಬುದ್ಧಿವಾದ ಹೇಳಿಸಿದರೆ ಅಮ್ಮಳನ್ನು ಕ್ರಿಶ್ಚಿಯನ್ ಆಗಿ ಮತಾಂತರಗೊಳಿಸಬಹುದೆಂದು ಅಪ್ಪನ ಲೆಕ್ಕಾಚಾರವಾಗಿತ್ತು. ಅದರಂತೆ ಅವರು ಅಮ್ಮನನ್ನು ಮತಾಂತರಿಸಲು ಮನವೊಲಿಸಿದರು. ಪಾಸ್ಟರ್ ರವರು ಹೇಳಿದ್ದು ಸರಿಯಾಗಿತ್ತು...

"ಹೆಣ್ಣಾದವಳು ಗಂಡನ ಧರ್ಮ ಪಾಲಿಸುವುದು ಸೂಕ್ತ. ಗಂಡನ ಸಂಸೃತಿ ಸಿದ್ಧಾಂತಗಳನ್ನು ಗೌರವಿಸಬೇಕು. ಗಂಡನೊಂದಿಗೆ ತಾನೂ ಅದೇ ಧರ್ಮವನ್ನು ಪಾಲಿಸಬೇಕು. ಇಬ್ಬರೂ ಒಟ್ಟಾಗಿದ್ದರೆ ಸೂಕ್ತ. ಆಗ ಸಂಸಾರವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಮೋಕ್ಷ ಪಡೆಯುವ ದಾರಿ ಇಬ್ಬರದೂ ಒಂದೇಯಾಗಿರಬೇಕು. ಯಾವಾಗ ಗುರಿ ಮತ್ತು ದಾರಿ ಒಂದೇ ಆಗಿರುತ್ತದೆಯೋ ಆಗ ಸ್ನೇಹ ಪ್ರೀತಿ ಸಹಜವಾಗಿ ಬೆಳೆಯುತ್ತಾ ಹೋಗುತ್ತದೆ. ದಾಂಪತ್ಯವೂ ಸುಖಕರವಾಗಿರುತ್ತದೆ".

 ಎಂದು ಬುದ್ಧಿವಾದ ಹೇಳಿದ್ದರು. ಆಗ ಅಮ್ಮ ಪಾಸ್ಟರ್ ರವರ ಮಾತನ್ನು ಗೌರವಿಸಿದಳು. ಚರ್ಚಗೆ ಹೋಗಿ ಅಪ್ಪನ ಧರ್ಮಕ್ಕೆ ಬದಲಾದಳು.

ಮಾರನೆಯ ದಿನ ಅಮ್ಮ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಚರ್ಚ್ ಗೆ ಹೋದಳು. ಚರ್ಚ್ ನ ಪ್ರಶಾಂತವಾದ ವಾತಾವರಣ, ಏಸು ಸ್ವಾಮಿಯ ದಿವ್ಯ ಶಕ್ತಿ ಅಮ್ಮನನ್ನು ಭಕ್ತಿಯಲ್ಲಿ ಮುಳುಗಿಸಿತು. ಕ್ಷಣಕಾಲ ಅಪ್ಪನೊಂದಿಗೆ ಬೈಬಲ್ ನ ವಾಕ್ಯಗಳನ್ನು ಪಠಿಸಿದಳು. ಪ್ರಾರ್ಥನೆಯಾದ ನಂತರ ಪಾಸ್ಟರ್ ಅಮ್ಮನನ್ನು ಕರೆದು ಮಾತನಾಡಿಸಿದರು.
ಅಮ್ಮನ ಎರಡು ಕೈಯನ್ನು ಹಿಡಿದು ಪ್ರಾರ್ಥಿಸಿದರು. ಒಳ್ಳೆಯದಾಗಲಿ ಎಂದು ಹರಸಿದರು. ಹೀಗೆ ಒಂದು ವಾರ ಕಳೆಯಿತು.

ಒಂದು ದಿನ ಪಾಸ್ಟರ್ ಅಮ್ಮನನ್ನು ಕರೆದು

"ಈಗ ಹೇಗನ್ನಿಸುತ್ತಿದೆ...?"
ಎಂದು ಕೇಳಿದರು. 

ಆಗ ಅಮ್ಮ

"ಮನಸ್ಸು ಶಾಂತವಾಗಿದೆ. ದೇವರ ವಾಕ್ಯಗಳು ಮನಸ್ಸನ್ನು ಮುದಗೊಳಿಸಿವೆ. ಮನಸ್ಸು ಉಲ್ಲಾಸದಿಂದ ಕುಣಿಯುತ್ತಿದೆ ಎಂದೆನಿಸುತ್ತಿದೆ. ಸತ್ಯ, ಶಾಂತಿ, ಸಂತೋಷ ನನಗೆ ಸಿಕ್ಕಿದೆ ಎಂಬಂತೆ ಬಾಸವಾಗುತ್ತಿದೆ....
ಆದರೆ
ಒಂದು ವಿಷಯ ಪಾಸ್ಟರ್... ಮೊನ್ನೆ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಎದುರುಗಡೆ ದೇವಾಲಯದಲ್ಲಿಯ ಘಂಟೆಯ ಸದ್ಧು ಕೇಳಿಸಿತು. ಅದರ ಮಾರ್ಧನಿ ನನ್ನ ಹೃದಯದೊಳಗೆಯೇ ಪ್ರತಿಧ್ವನಿಸಿದಂತಾಯಿತು. ಕೂಡಲೇ ಹೊರಗೆ ಬಂದೆ ದೇವಾಲಯದ ಒಳಗಿನಿಂದ ಪಠಣೆಯಾಗುತ್ತಿದ್ದ ವೇದ ಮಂತ್ರ ಘೋಷಗಳು ನನ್ನ ಕಿವಿಯನ್ನು ಹೊಕ್ಕಾಗ ಮಹದಾನಂದವಾಯಿತು. ಯಾವುದೋ ಸೆಳೆತ, ಏನೋ ಒಂದು ರೀತಿಯ ತೃಪ್ತಿಯ ಭಾವ ಆ ಮಂತ್ರ ಘೋಷದಲ್ಲಿ ಕಂಡಂತಾಯಿತು. ಬೈಬಲ್ ಓದಿದಾಗ ಮನಸ್ಸು ಶಾಂತವಾಯಿತು. ವೇದ ಮಂತ್ರ ಘೋಷಗಳಿಂದ ಮನಸು ಅತ್ಯಾನಂದ ಅನುಭವಿಸಿತು. ಹಾಗಂದ ಮಾತ್ರಕ್ಕೆ ನನಗೆ ಭಗವದ್ಗೀತೆ ದೋಡ್ಡದೆಂದಾಗಲೀ ಅಥವಾ ಬೈಬಲ್ ದೊಡ್ಡದೆಂದಾಗಲೀ ಯಾವ ಭೇದ ಭಾವವೂ ಇಲ್ಲ. ನಾನು ಚಿಕ್ಕಂದಿನಿಂದ ಪಾಲಿಸಲ್ಪಟ್ಟ ಹಿಂದೂ ಸಂಸ್ಕೃತಿಯ ಕಾರಣದಿಂದ ಗೀತೆಯ ವೇದ ಘೋಷಗಳು ನನ್ನನ್ನು ಈ ರೀತಿ ಆಕರ್ಷಿಸಿರಬಹುದು. ಅಗಕ್ಕೆ ಒಂದು ಕಾರಣವೂ ಇದೆ..

ನಾನು ಚಿಕ್ಕವಳಿರುವಾಗ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದೆನಂತೆ. ಖಾಯಿಲೆ ಹೆಚ್ಚಾಗಿ ಸಾಯುವ ಹಂತಕ್ಕೆ ತಲುಪಿದ್ದೆ. ಯಾವ ಚಿಕಿತ್ಸೆಗೂ ನನ್ನ ದೇಹ ಸ್ಪಂದಿಸುತ್ತಿರಲಿಲ್ಲ. ಆಗ ನನ್ನ ತಾಯಿ ಊರ ದೇವಿಗೆ ಹರಕೆ ಹೊತ್ತಳು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ತುಪ್ಪದ ದೀಪ ಹಚ್ಚಿದಳು ಇದರಿಂದ ನನ್ನ ಖಾಯಿಲೆಯೂ ಗುಣ ಮುಖವಾಗುತ್ತಾ ಬಂದಿತಂತೆ. ದೇವಿಯ ಆಶೀರ್ನವಾದದಿಂದ ನಾನು ಪುನರ್ಜೀವ ಪಡೆದೆನಂತೆ.  ಅಂದಿನಿಂದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ನಾನು ಅಮ್ಮನ ಜೊತೆಗೆ ದೇವಾಲಯಕ್ಕೆ ಹೋಗುವ ಅಭ್ಯಾಸವಾಯಿತು. ದೇವಾಲಯದ ಒಳಗೆ ಹೋದ ಕೂಡಲೆ ನಾನು ಅಮ್ಮನ ಜೊತೆಯಲ್ಲಿ ಭಕ್ತಿಯಲ್ಲಿ ತಲ್ಲೀನನಾಗುತ್ತಿದ್ದೆ. ಇಂದಿಗೂ ದೇವಾಯಲದ ಘಂಟೆ, ಶಂಖ, ಜಾಗಟೆಗಳ ಧ್ವನಿ ಕೇಳಿದ ಕೂಡಲೆ ಯಾವುದೋ ಒಂದು ಸೆಳೆತ ನನ್ನನ್ನು ಆವರಿಸಿಕೊಂಡಾಂತಾಗುತ್ತದೆ. ಚಿಕ್ಕಂದಿನಿಂದಲೂ ಬೆಳೆದುಬಂದ ಆ ಭಾವನೆಗಳು ನನ್ನಿಂದ ತೆಗೆದು ಹಾಕಲಾಗುತ್ತಿಲ್ಲ. ಮನಸ್ಸಿನಲ್ಲಿಯೇ ಶಾಶ್ವತವಾಗಿ ಅವಿರ್ಭಸಿರುವ ಆ ನೆನಪುಗಳನ್ನು ನಾನು ಹೇಗೆ ತೆಗೆದು ಹಾಕಲಿ. ಬಾಲ್ಯದ ಸುಂದರ ಕನಸುಗಳೊಂದಿಗೆ ಬೆರೆತಿರುವ ಈ  ಮಂತ್ರ ಘೋಷಗಳನ್ನು ನಾನು ಹೇಗೆ ಮರೆಯಲಿ. ಗೆಳೆತಿಯರೊಂದಿಗೆ ಗಣೇಶನ ದೇವಾಲಯದಲ್ಲಿ ಹಾಡಿದ ಭಕ್ತಿ ಗೀತೆಯನ್ನು ಹೇಗೆ ಮರೆಯಲಿ,  ಬಣ್ಣ ಬಣ್ಣದ ರಂಗನ್ನು ಹಾಕಿ ಗೆಳತಿಯರೊಂದಿಗೆ ಜಗಳಕ್ಕಿಳಿದ ಆ ಹೋಳಿ ಹಬ್ಬವನ್ನು ಹೇಗೆ ಮರೆಯಲಿ?  ಹೊಸ ಬಟ್ಟೆ ಹಾಕಿ ಪಟಾಕಿ ಸಿಡಿಸಿದ ಸಂಭ್ರಮವನ್ನು ಮರೆಯಲು ಸಾದ್ಯವೇ..? ಯಾವುದನ್ನು ಹೇಗೆ ಮರೆಯಲಿ ... ಈ ಎಲ್ಲಾ ಧಾರ್ಮಿಕ ನಿಷ್ಠೆಗಳು ನನ್ನ ದೇಹದೊಂದಿಗೆ ಬಿಡಿಸಲಾಗಂತೆ ತಳುಕು ಹಾಕಿಕೊಂಡಿವೆ.  ನನಗೆ ಜನ್ಮ ನೀಡಿದ ಹೆತ್ತ ತಾಯಿ ದೇವರ ಹಾಡನ್ನು ಹಾಡುತ್ತಾ ತೊಟ್ಟಿಲನ್ನು ತೂಗುತ್ತಿದ್ದಳಂತೆ ಅಮ್ಮನ ಜೊತೆ ಆ ಹಾಡನ್ನು ಹೇಳಿಕೊಂಡು ಮಾಡಿದ ದೇವರ ಪೂಜೆಯನ್ನು ಮರೆಯುವುದಾದರೂ ಹೇಗೆ...? ಇದ್ದಕ್ಕಿದ್ದಂತೆ ನೀವು ನನ್ನ ಹೆತ್ತ ತಾಯಿ ಇವಳಲ್ಲ ಎಂದು ಹೇಳಿ ಬೇರೆ ಯಾವುದೋ ಸ್ತ್ರೀ ಯನ್ನು ತೋರಿಸಿ ಇವಳೇ ನಿನ್ನ ತಾಯಿ ಎಂದರೆ ಹೇಗೆ ಸ್ವೀಕರಿಸಲಿ ಪಾಸ್ಟರ್.....  ನನ್ನ ಆ ನೆನಪುಗಳು ನನ್ನ ಉಸಿರಿನೊಂದಿಗೆ ಬೆರೆತು ಬಿಟ್ಟಿವೆ... ನನಗೆ ಸ್ವಲ್ಪ ದಿನ ಕಾಲಾವಕಾಶ ಕೊಡಿ ನನ್ನಲ್ಲೇನಾದರೂ ಬದಾಲಾವಣೆಯಾದರೆ ಖಂಡಿತ ನಾನು ಗಂಡನೊಂದಿಗೆ ಮೇಣದಬತ್ತಿಯನ್ನು ಹಚ್ಚುತ್ತೇನೆ, ಇಲ್ಲದಿದ್ದರೆ ಗಂಡನಿಗೆ ತಕ್ಕ ಹೆಂಡತಿಯಾಗಿ ಕರ್ಪೂರವನ್ನು ಹಚ್ಚುತ್ತೇನೆ...."

 ಅಂದು ಅಮ್ಮ ಹೇಳಿದ ಆ ಮಾತುಗಳು ಪಾಸ್ಟರ್ ಗೆ ಮನವರಿಕೆಯಾಯಿತೋ ಇಲ್ಲವೋ ತಿಳಿಯದು. ಆದರೆ  ಮಹಾನ್ ಸಹಿಷ್ಣುತಾವಾದಿಯಾದ ಅವರು ಅಪ್ಪನಿಗೆ ಅಮ್ಮನ ಭಾವನೆಗಳನ್ನು ಮನವರಿಕೆ ಮಾಡಿಸಿದರು. ಅಮ್ಮನ ಇಚ್ಛೆಯಂತೆ ಮನೆಯಲ್ಲೂ ಸಹ ಎರಡೂ ಧರ್ಮಕ್ಕೆ ಪ್ರಾಶಸ್ತ್ಯವನ್ನು ನೀಡಲಾಯಿತು. ಎಲ್ಲಾ ಧರ್ಮವನ್ನು ಗೌರವಿಸುವಂತೆ ಅಪ್ಪನಿಗೆ ಹೇಳಿಕೊಟ್ಟ ಆ ಪಾಸ್ಟರ್ ನಿಜಕ್ಕೂ ದೈವ ಸ್ವರೂಪಿಗಳು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ವಾದಿಸುವ ಈ ದಿನಗಳಲ್ಲಿ ಪಾಸ್ಟರ್ ಫರ್ನಾಂಡೀಸ್ ದೈವಸ್ವರೂಪಿಗಳಾಗಿದ್ದರು. ಸಾಕ್ಷಾತ್ ಏಸುವಿನ ಪ್ರತಿರೂಪದಂತೆ ಕಂಡರು. ತಮ್ಮ ಧರ್ಮದ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವ ಮಹಾನ್ ಸರ್ವ ಧರ್ಮ ಸಹಿಷ್ಣಿತಾವಾದಿಗಳಂತೆ ಗೋಚರಿಸಿದರು.

ಸಲೋನಿ ತನ್ನ ತಾಯಿಯ ಜೀವನದಲ್ಲಿ ನಡೆದ ಈ ಘಟನೆಯನ್ನು ಸವಿವರವಾಗಿ ವಿವರಿಸಿ ಹೇಳಿದಳು. ಧರ್ಮ, ಧರ್ಮ ಎಂದು ಕಿಚ್ಚಾಡುತ್ತಿರುವ ಇಂದಿನ ಸಮಾಜದಲ್ಲಿ ಸಲೋನಿಯ ಕುಟುಂಬವು ನನಗೆ ಮಾದರಿಯಾದಂತೆ ಕಂಡಿತು. ಸಲೋನಿಯು ನನ್ನ ನಡುವೆ ಇರುವ ಪ್ರೀತಿಯ ಆಪ್ತ ಸಂಗಾತಿ ಎಂಬಂತೆ ಅನುಭವವಾಯಿತು. ಜೊತೆಗೆ ಸಲೋನಿಯೂ ಸಹ ನನ್ನ ಮನಸಿಗೆ ಇನ್ನು ಹತ್ತಿರವಾದಳು.

"ನನ್ನ ಮದುವೆ ಆಗ್ತೀರಾ...?"

ಎಂದು ಕೇಳಿದೆ

ಸಲೋನಿ ಏನೂ ಮಾತನಾಡದೇ ಕ್ಷಣ ಕಾಲ ಮೌನ ವಹಿಸಿದಳು. ಮೌನದಲ್ಲೂ ಮುದ್ದಾಗಿ ಕಾಣುತ್ತಿದ್ದ ಆಕೆಯ ಮುಖ ಚೆಂದವಾಗಿ ಮನಸ್ಸನ್ನು ಮುದಗೊಳಿಸಿತು. ಉದ್ದವಾದ ಆಕೆಯ ಮುಂಗುರುಳು ಗಾಳಿಯೊಂದಿಗೆ ಹಾರಾಡುತ್ತಾ ಆಕೆಯ ಮುದ್ದಾದ ಕೆನ್ನೆಯನ್ನು ಸೋಕುತ್ತಿದ್ದವು. ಕಣ್ಣುಗಳು ನಾಚಿಕೆಯ ಆಭರಣಗಳನ್ನು ಧರಿಸಿದ್ದವು. ಪಟ ಪಟನೆ ಮುದ್ದಾಗಿ ಮಾತನಾಡುತ್ತಿದ್ದ ಅವಳ ನಾಲಿಗೆ ನನ್ನ ಪ್ರಶ್ನೆಗೆ ಉತ್ತರಿಸದಂತಾಯಿತು. ಆಕೆಯ ಮುದ್ದು ಮುಖ ಚಂದಿರನ ಬೆಳದಿಂಗಳನ್ನು ಮೀರಿಸುವಂತಿಹ ಕಾಂತಿ ಚೆಲ್ಲುತ್ತಿತ್ತು. ಆಕೆಯ ಸೌಂದರ್ಯಕ್ಕೆ ಮಾರು ಹೋದ ನನಗೆ ಕ್ಷಣ ಕಾಲ ಆಕೆ ಯಾವ ಧರ್ಮದವಳು ಎಂಬುದು ಮರೆತೇ ಹೋಗಿತ್ತು. ಆ ಕ್ಷಣ ನಮ್ಮಿಬ್ಬರ ಪ್ರೀತಿಗೆ ಜಾತಿಯಾಗಲಿ ಧರ್ಮವಾಗಲಿ ನೆನಪಿಗೆ ಬರಲೇ ಇಲ್ಲ.ಅದೊಂದು ಪ್ರಕೃತಿ ಸಹಜವಾಗಿ ಗಂಡು ಹೆಣ್ಣಿನ ಮನಸ್ಸಿನಲ್ಲಿ ಮೋಳಕೆಯೊಡೆಯುವಂತಹ ಸಹಜ, ನಿರ್ಮಲವಾದ ಪ್ರೀತಿ.  ಮನುಷ್ಯ ಹಾಕಿಕೊಂಡ ಧರ್ಮ ಮತ್ತು ಜಾತಿಯ ಕಟ್ಟುಪಾಡುಗಳನ್ನು ಮೀರಿನಿಂತ ದೈವದತ್ತವಾದ ಪ್ರೀತಿಯದು. ದೇವರು ಸೃಷ್ಟಿಸಿದ ಗಿಡ ಮರ, ಬೆಟ್ಟ ಗುಡ್ಡ ಭೂಮಿ ಆಕಾಶ, ನದಿ ಸಮುದ್ರದಂತೆಯೇ ಈ ಪ್ರೀತಿಯೂ ಸಹ ಸಹಜವಾದದ್ದು. ಧರ್ಮಕ್ಕೆ ಹೊರತಾಗಿ ನಿಂತಿರುವ, ಮತ್ತು ಮೇಲು, ಕೀಳು, ಮೈಲಿಗೆ ಎಂಬ ಪದಗಳೇ ಗೊತ್ತಿರದ ಭಾವನೆಯದು. ಪ್ರಕೃತಿಯಂತೆ  ಪ್ರೀತಿಯೂ ಸಹ ನಿರ್ಮಲ ಮತ್ತು  ನಿಷ್ಕಲ್ಮಶವಾದುದು. ಅದಕ್ಕೆ ಮನುಷ್ಯ ನಿರ್ಮಿಸಿಕೊಂಡ ಕಟ್ಟುಪಾಡುಗಳು ಅನ್ವಯಿಸದು....
 
ನನಗಾಗಲೀ ಸಲೋನಿಗಾಗಲೀ ಜಾತಿ ಮತ ಧರ್ಮಗಳ ಮೇಲೆ ಅಷ್ಟಾಗಿ ನಂಬಿಕೆಯಿರಲಿಲ್ಲ.  ದೇವರು ಧರ್ಮಗಳನ್ನು ಸೃಷ್ಠಿಸಿದನೋ.. ಅಥವಾ ಮಾನವನೇ ದೇವರನ್ನು ಸೃಷ್ಠಿಸಿಕೊಂಡು ಧರ್ಮವೆಂಬ ಬೇಲಿಯನ್ನು ಹಾಕಿಕೊಂಡನೋ ತಿಳಿಯದು. ಎಲ್ಲಾ ನಡೆ ನುಡಿಯಲ್ಲಿ ಧರ್ಮದ ವಿಧಿ ವಿಧಾನಗಳನ್ನು ವಿಧಿಸಿ ಮಾನವನ ನಡತೆಯನ್ನು ನಿಯಂತ್ರಿಸ ಬಹುದು. ಆದರೆ ಈ ಪ್ರೀತಿ ಅನ್ನೋ ಭಾವನೆಯನ್ನು ನಿಯಂತ್ರಿಸಲು ಯಾವ ಧರ್ಮಗಳೂ ಇನ್ನು ಸೃಷ್ಠಿಯಾಗಿಲ್ಲ. ಇಲ್ಲಿರುವ ಧರ್ಮಗಳು ಪ್ರೀತಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರೂ ಸಹ ಪ್ರೀತಿ ಮಾತ್ರ ಆಗಾಗ ಪ್ರಕೃತಿಯ ಸಹಜ ಧರ್ಮದತ್ತ ವಾಲುತ್ತಲೇ ಇರುತ್ತವೆ. ಆಗಾಗ ಅಂತರ್ಜಾತೀಯ ಅಂತರ್ ಧರ್ಮೀಯ ವಿವಾಹಗಳು ನಡೆದು ಮಾನವ ಧರ್ಮವನ್ನು ಪರಿಪಾಲಿಸುತ್ತಲೇ ಇರುತ್ತವೆ....

ಕ್ಷಣ ಕಾಲದ ನಮ್ಮಿಬ್ಬರ ನಡುವಿನ ಮೌನದ ಮಧ್ಯೆಯೇ ಮನಸ್ಸು ಬಿಡುವು ಮಾಡಿಕೊಂಡು ಏನೇನೋ ಯೋಚಿಸಿತು. ಮತ್ತೆ ಸಲೋನಿಯನ್ನು ನೋಡಿದೆ. ಅದೇ ನೀರವ ಮೌನ. ಸೌಂದರ್ಯೋಪಸಕನಾದ ಶಿಲ್ಪಿಯೊಬ್ಬನು ಕಡೆದ ಬೊಂಬೆಯಂತೆಯೇ ಸಲೋನಿಯು ಸುಂದರ ಕಲಾಕೃತಿಯಂತೆ ನನ್ನ ಮುಂದೆ ನಿಂತಿದ್ದಳು. ನಮ್ಮಿಬ್ಬರ ನಡುವೇ ಯಾವ ಧರ್ಮವೂ ಇರಲಿಲ್ಲ. ಇದ್ದದ್ದು ಪ್ರಕೃತಿಯ ಸಹಜ ಧರ್ಮ ಒಂದೇ... ನಕ್ಷತ್ರದಂತಿರುವ ಆಕೆಯ ಕಣ್ಣುಗಳು ಹೊಳಪಿನಿಂದ ಕೂಡಿದ ಬೆಳಕಿನ ಧರ್ಮ ಸೂಚಿಸುತ್ತಿತ್ತು. ಸಂಪಿಗೆಯಂತಿರುವ ಅವಳ ನಾಸಿಕವು ಹೂವಿನ ಧರ್ಮಕ್ಕೆ ಸೇರಿತ್ತು. ಜೇನಿನಂತೆ  ಸವಿಯಂತಿರುವ ಅವಳ ತುಟಿಗಳು ಸಿಹಿಯಾದ ಧರ್ಮವನ್ನು ತೋರಿಸಿತ್ತು. ನಯವಾದ ಕೆನ್ನೆಗಳು ಮೃದುವಾದ ಧರ್ಮ ಹೊಂದಿತ್ತು. ಅವಳ ಬಳುಕುವ ಶರೀರವು ಪ್ರಕೃತಿಯಲ್ಲಿಯೇ ಬಳ್ಳಿಯಾಗಿ ಬಳುಕುವ  ಸಸ್ಯ ಧರ್ಮವನ್ನು ಸೂಚಿಸುತ್ತಿತ್ತು. ನನ್ನ ಕಣ್ಣಿಗೆ ಅವಳೊಂದು ಹೆಣ್ಣು ಧರ್ಮ,  ನಾನೊಂದು ಗಂಡು ಧರ್ಮ,  ದೇವರು ಸೃಷ್ಟಸಿದ ಈ ಎರಡು ಧರ್ಮಗಳು ಎಂದಾದರೂ ಕೋಮು ಗಲಭೆ ನಡೆಸಿದ್ದವೆ...?  ಪ್ರೀತಿ ಮೊಳಕೆಯೊಡೆಯುವಾಗ ಯಾವ ಧರ್ಮವು ನಮಗೆ ಅಡ್ಡಬರಲಿಲ್ಲ. ನಾವು ಸೌಂದರ್ಯವನ್ನು ಆಸ್ವಾಧಿಸುವಾಗಲೂ ಧರ್ಮದ ಗುರುತು ನಮಗೆ ಸಿಗಲೇ ಇಲ್ಲ....
ನನ್ನ ಮದುವೆ ಆಗ್ತಿರಾ...? 
ಎಂದು ನಾನು ಕೇಳಿದ ಪ್ರಶ್ನೆಗೆ ಸಲೋನಿಯ ಕೆನ್ನೆಯ ರಂಗು ಇನ್ನಷ್ಟು ಅಧಿಕವಾದಂತೆ ಕಂಡಿತು. ಆಕೆಯ ಮುದ್ದು ಮುಖಕ್ಕೆ ಮೆರಗು ನೀಡಿದ್ದ ಅವಳ ಗುಳಿಕೆನ್ನೆಯಲ್ಲಿಯೇ, ನಾನು ಗಿರಿಗಿಟ್ಟಲೆ ಹೊಡೆದು ಧರ್ಮಕ್ಕೂ ಆಚೆಯಿರುವ  ಪ್ರೀತಿ ಎಂಬ ಗುಡಿಯೊಳಗೆ ಬಿದ್ದಿದ್ದೆ.  ಕ್ಷಣ ಕಾಲ ನನ್ನ ಹುಟ್ಟಿಗೆ ಧರ್ಮದ ಹಣೆಪಟ್ಟಿ ಕೊಟ್ಟವರೂ ಸಹ ನೆನಪಿಗೆ ಬರಲೇ ಇಲ್ಲ. ಸಲೋನಿಯನ್ನು ನೋಡಿದಾಗ ಧರ್ಮವನ್ನು ಮರೆಸುವ ಇನ್ನೊಂದು ಆಕರ್ಷಣೆ ಇದೆ ಎನ್ನಿಸಿತು. ಧರ್ಮಕ್ಕೂ ಮಿಗಿಲಾದ ಭಾವವೊಂದಿದೆ ಎನ್ನಿಸಿತು. ಅಥವಾ ಈ ಆಕರ್ಷಣೆಯೇ ನಿಜವಾದ ಧರ್ಮವೇ..?  ಯಾಕಾಗಿರಬಾರದು..ಅದು ಗಂಡು ಮತ್ತು ಹೆಣ್ಣು ಎಂಬ ಎರಡೇ ಧರ್ಮ.. ಎರಡೇ ಜಾತಿ.. ಹೀಗೆ ಧರ್ಮ ಬಗ್ಗೆ ಎದ್ದಿರುವ ಗೊಂದಲಮಯವಾದ ಹಲವು ಪ್ರಶ್ನೆಗಳು ನನ್ನ ಮನದಲ್ಲಿ ಮೂಡುತ್ತಿರುವಾಗಲೇ ಸಲೋನಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಳು.. 
ಆಕೆಯ ಆ ಸ್ಪರ್ಶದಲ್ಲಿ ಎಲ್ಲವನ್ನೂ ಮರೆಸುವ ಶಕ್ತಿಯಿತ್ತು..
ನವಿರಾದ ಸ್ಪರ್ಶ.. ಹಿತವಾದ ಭಾವ... ಬೌತಿಕ ಜಗತ್ತಿನಾಚೆ ವಿಹರಿಸಿಂತಹ ಅನುಭಾವ..
ಆ ಸ್ಪರ್ಶದಲ್ಲಿ ನಾನು ಅನುಭವಿಸಿದ್ದು ಪ್ರಕೃತಿಯ ಸಹಜ ಧರ್ಮ ಮಾತ್ರ. ಜಗತ್ತಿನ ಸೃಷ್ಠಿಗೆ ಮತ್ತು ಜೀವ ಜಗತ್ತಿನ ಇರುವಿಕೆಗೆ  ಕಾರಣವಾಗಿರುವ ಪ್ರೀತಿಯ ಧರ್ಮ, ಅದೊಂದೇ ನಿತ್ಯ ನಿರಂತರ....
                     
                        - ಪ್ರಕಾಶ್ ಎನ್ ಜಿಂಗಾಡೆ.