Friday 25 March 2016

ಒಲವಿನ ಬಣ್ಣ

ಒಲವಿನ ಬಣ್ಣ...


ಅಂದು ಹೋಲಿ ಹಬ್ಬ. ರಂಗಿನ ಓಕುಳಿಯನ್ನು ಚೆಲ್ಲಲು ನಾನು ಶಾಲು ಮನೆಯ ಮುಂದೆ ಹೋಗಿ ನಿಂತೆ. ಕೈಯಲ್ಲಿ ಪಿಚಕಾರಿ ಹಿಡಿದು ನಿಂತು ಅವಳು ಆಗ ಹೊರಗೆ ಬರಬಹುದು, ಈಗ ಬರಬಹುದು ಎಂದು ನನ್ನ ಕಣ್ಣುಗಳು ಅವಳ ಮನೆಯ ಬಾಗಿಲ ಕಡೆಯೇ ನೋಡುತ್ತಿದ್ದವು. ನಾನು ಹಿಡಿದುಕೊಂಡು ನಿಂತಿದ್ದ ಪಿಚಕಾರಿಯನ್ನು ಆಕೆ ಟೆರೇಸ್ ಮೇಲಿನಿಂದಲೇ ನೋಡಿಬಿಟ್ಟರೆ...? ಎಂಬ ಅನುಮಾನವೂ ನನಗಿತ್ತು. ನಾನು ನಿಂತಿರುವುದನ್ನು ನೋಡಿದರೆ ಆಕೆ ಖಂಡಿತ ಹೊರಗೆ ಬರಲಾರಳು.. ಏನ್ಮಾಡೋದು ಹೇಳಿ ...ಬಣ್ಣತುಂಬಿದ ಆ ಪಿಚಕಾರಿಯನ್ನು ನಾನು  ರಾಜಾರೋಷವಾಗಿ ಹಿಡಿದು ಅವಳನ್ನು ಬಣ್ಣದಲ್ಲಿ ಮುಳುಗಿಸಲು ಅಲ್ಪ ಸ್ವಲ್ಪ ಸಹಾಸವೂ ಮಾಡಬೇಕಾಗುತ್ತದೆ. ನೇರವಾಗಿ ಮನೆಯೊಳಗೆ ನುಗ್ಗಿ ಬಣ್ಣ ಹಾಕುವ ಧೈರ್ಯವೂ ನನಗೆ ಇರಲಿಲ್ಲ. ಪಿಚಕಾರಿಯನ್ನು ಆಗಾಗ ಬೆನ್ನ ಹಿಂದೆಯೇ ಮುಚ್ಚಿಕೊಂಡು ಮರೆಮಾಚಿಸಲು ಪ್ರಯತ್ನಿಸುತ್ತಿದ್ದೆ. ಆಕೆಯ ದೇಹವನ್ನು ಸಂಪೂರ್ಣವಾಗಿ ವರ್ಣಮಯವನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಬಂದಿದ್ದೆ. ನನ್ನ ಯೋಜನೆ ವಿಫಲವಾಗಬಾರದೆಂದು ನಾನು ತುಂಬಾ ಎಚ್ಚರಿಕೆಯಿಂದಲೇ ಇದ್ದೆ.

ಶಾಲೂ ತುಂಟಿ ಹುಡುಗಿ. ತುಂಟತನದಲ್ಲಿ ನನಗಿಂತಲೂ ಒಂದು ಕೈ ಮುಂದೆ. ಹೋದ ವರ್ಷ ಹೋಳಿ ಹಬ್ಬದಂದು ಮಾಡಿದ ಅವಳ ಆ ತುಂಟತನ ಹೇಗೆ ಮರೆಯಲು ಸಾದ್ಯ ಹೇಳಿ.?  ಕಳೆದ ಸಲ ಹೋಲಿ ಹಬ್ಬದಂದು ನಾನು ಇನ್ನು ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ಸೀದ ಮನೆಯೊಳಗೆ ನುಗ್ಗಿ ನನ್ನನ್ನು ಎಬ್ಬಿಸಿ ನನ್ನನ್ನು ಮನೆಯಿಂದ ಹೊರಗೆ ಕರೆದು ರಂಗಿನ ಓಕುಳಿಯನ್ನು ಹಾಕಲು ಪ್ಲಾನ್ ಹಾಕಿಕೊಂಡೇ ಬಂದಿದ್ದಳು. ಎಂತಹ ಪ್ಲಾನ್ ಅಂತಿರಾ...? ಆ ಪ್ಲಾನ್ ಗೆ ಆಕೆಯ ಸುಂದರ ಮುಖ ಆಕೆಗೆ ಸಹಕಾರ ನೀಡಿತ್ತು. ನನ್ನನ್ನು ಮೋಸಗೊಳಿಸಿದ ಆವಳ ಆ ಸುಂದರ ರೂಪ, ಅವಳ ಆ ನಗುವಿಗೆ ಎಂಥವನಾದರೂ ಬೀಳದೇ ಇರಲು ಸಾಧ್ಯವಿರಲಿಲ್ಲ. ಅವಳ ಆ ಮುಗ್ದ ಸೌಂದರ್ಯದ ಹಿಂದೆ ನನ್ನನ್ನು ಮೋಸಗೊಳಿಸಿ ಓಕುಳಿ ಹಾಕಿದ ಆ ಘಟನೆ ಮರೆಯಲು ಸಾಧ್ಯವೇ ಇರಲಿಲ್ಲ. ಅವಳು ಆ ದಿನ ಅಪ್ಸರೆಯಂತೆ ಕಂಗೊಳಿಸುತ್ತಾ ನನ್ನ ಮುಂದೆ ಬಂದು ಕೆನ್ನೆಯ ವರೆಗೂ ಇಳಿಬಿದ್ದಿರುವ ತನ್ನ ಮುಂಗುರುಳನ್ನು ಸರಿಪಡಿಸಿಕೊಳ್ಳುತ್ತಾ...

"ಲೋ...ಪ್ರಕಾಶ,  ಪ್ಲೀಸ್ ಸ್ವಲ್ಪ ಐಶು ಮನೆಗೆ ಹೋಗಿ ಬರೋಣ ಬಾರೋ... ನಾಳೆ ಎಕ್ಸಾಮ್ ಇದೆ ಐಶು ಹತ್ರ ನೋಟ್ಸ ಇಸ್ಕೊಂಡ್ ಬರ್ಬೇಕಿತ್ತು... ಪ್ಲೀಸ್"

ಆಕೆ ಬೇಡಿಕೊಂಡ ಆ ಪರಿಯನ್ನು ನೋಡಿದರೆ ಒಪ್ಪಿಕೊಳ್ಳದಿರುವುದಕ್ಕೆ ಸಾಧ್ಯವೇ ಇರಲಿಲ್ಲ.
ಮುಗುಳ್ನಗೆಯನ್ನು ಬೀರುತ್ತಾ, ತನ್ನ ದೇಹವನ್ನು ಬಳ್ಳಿಯಂತೆ ಬಳುಕಿಸುತ್ತಾ ಹೇಳಿದಳು. ಇನ್ನೂ ಮಲಗ ಬೇಕೆಂದಿದ್ದ ನನಗೆ ಆಕೆಯ ಮುದ್ದು ಮುಖ ನೋಡಿದ ಕೂಡಲೇ ಎಂಥದೋ ಪುಳಕ ಮೈ ಮನವನ್ನೆಲ್ಲಾ ಆವರಿಸಿಕೊಂಡಿತ್ತು. ಹುಡುಗಿ ಬಂದು ಸಹಾಯ ಕೇಳಿದ್ರೆ ಯಾರು ಇಲ್ಲ ಅಂತಾರೆ ಹೇಳಿ...!! ಮೊದಲೇ ಹುಡುಗಿಯರು ಕೊಡುವ ಇಂತಹ ಅವಕಾಶಕ್ಕಾಗಿ ಎಷ್ಟೋ ಹುಡುಗರು ಕಾಯುತ್ತಿರುತ್ತಾರೆ. ಹಾಗಿರುವಾಗ ನಾನು ಬಿಟ್ಟೇನೇ...?
 ಅವಳನ್ನು ನನ್ನ ಬೈಕಿನ ಹಿಂದೆ ಕೂರಿಸಿಕೊಂಡು ಐಶು ಮನೆಯವರೆಗೂ ಹೋಗುವ ಆ ಕಲ್ಪನೆ ಇದೆಯಲ್ಲಾ... ಆ ಕ್ಷಣದಿಂದಲೇ ನನ್ನ ಮೆದುಳಿನಲ್ಲಿ ದೃಶ್ಯದಂತೆ ಕಣ್ಣ ಮುಂದೆ ಬರಲಾರಂಬಿಸಿತು. ನಾನು ಮುಂದೆ, ನನ್ನ ಹಿಂದೆ ಅವಳು... ಹಂಪ್ ಬಂದಾಗ ಬ್ರೇಕ್ ಹಾಕಿದ ಕೂಡಲೇ ನನ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿಯುವ ಆ ಸನ್ನಿವೇಶ... ಆಹಾ..! ಆ ನೆನಪೇ ಎಂತಹ ಮಜಾ..
ಬೇಗ ಬೇಗನೆ ಎದ್ದು ಷರಟನ್ನು ಹಾಕಿಕೊಂಡೆ...

"ಈ ಷರಟು ಬೇಡ ಕಣೋ... ಮೊನ್ನೆ ಹೊಸದಾದ ಬಿಳಿ ಷರಟ್ ತಗೊಂಡಿದ್ದೆಯಲ್ಲ ಅದನ್ನೇ ಹಾಕ್ಕೊ ನೀನು ಅದರಲ್ಲಿ ತುಂಬಾ ಚನ್ನಾಗಿ ಕಾಣಿಸ್ತಿಯಾ" ಅಂದ್ಲು

ಬಿಳಿ ಷರ್ಟಲ್ಲಿ ನಾನು ಅಷ್ಟೊಂದು ಸುಂದರವಾಗಿ ಕಾಣಿಸುತ್ತನೆಯೇ..? ಆ ಮಾತು ಕೇಳಿ ಕರ್ಣಾನಂದವಾಯಿತು. ಮನಸು ಹುಚ್ಚೆದ್ದು ಕುಣಿಯಿತು. ಅದೂ ಶಾಲೂ ಅಂತಹ ಸುಂದರ ಹುಡುಗಿಯಿಂದ ಹೊಗಳಿಕೆ ಬೇರೆ. ನನಗೆ ಸ್ವರ್ಗಕ್ಕೆ ಮೂರೇ ಗೇಣು.. ಒಂದುವರೆ ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ನನ್ನ ತುಂಬಾ ಇಷ್ಟದ ಬಿಳಿ ಷರಟನ್ನು ತೆಗೆದು ಹಾಕಿಕೊಂಡೆ. ಕಣ್ಣು ಕುಕ್ಕುವಂತಹ ಆ ಶುಭ್ರ ಬಿಳಿ ಷರಟಿನಲ್ಲಿ ನಾನು ಅಪ್ಪಟ ಮದು ಮಗನಂತೆ ಕಾಣುತ್ತಿದ್ದೆ. ನನ್ನನ್ನು ಅವಳು ಕೈಹಿಡಿದು ಕೊಂಡೇ ಹೊರಗೆ ಕರೆದೊಯ್ಯುತ್ತಿದ್ದಳು. ನಾನು ಮದುಮಗನಾದರೆ ಆಕೆ ಮದುಮಗಳಾಗಿ ನನ್ನ ಕೈಹಿಡಿದುಕೊಂಡು ಸಪ್ತಪದಿ ಹಾಕುತ್ತಿರುವಳೋ ಎಂಬಂತೆ ಬಾಸವಾಯಿತು...
ಸುಮಾರು ಏಳು ಹೆಜ್ಜೆ ಪೂರ್ಣಗೊಂಡಿತ್ತು. ಆಷ್ಟರಲ್ಲಿ ನಾನು ನನ್ನ ಮನೆಯ ಹೊರಗಿನ ಗೇಟ್ ವರಗೆ ಬಂದು ನಿಂತಿದ್ದೆ. ಮೊದಲೇ ಹಾಕಿಕೊಂಡ ಪ್ಲಾನ್ ನಂತೆ ಶಾಲೂ ತನ್ನ ಗೆಳತಿ ಐಶು ಮತ್ತು ತಮ್ಮ ಬಾಲು ಜೊತೆ ಸೇರಿಕೊಂಡು ನನ್ನ ಮೇಲೆ ರಂಗಿನ ಮಳೆಗೆರೆದರು. ಅವರ ರಂಗು ರಂಗಿನ ಆ ಓಕುಳಿಗೆ ನಾನು ಸಂಪೂರ್ಣವಾಗಿ ಬಣ್ಣದಲ್ಲಿ ಮುಳುಗಿ ಹೋಗಿದ್ದೆ. ನಾನು ಇಷ್ಟ ಪಟ್ಟು ಖರೀದಿಸಿದ ಬಿಳಿ ಷರಟು ಹಾಳಾಗಿದ್ದು ನನಗೆ ತಂಬಾ ನೋವನ್ನುಂಟು ಮಾಡಿತ್ತು. ಆ ತರಲೆ ಶಾಲೂ ನನ್ನ ಹೊಸ ಷರಟನ್ನು ಟಾರ್ಗೆಟ್ ಮಾಡಿ ಹಾಳು ಮಾಡಿದ್ದಳು. ಅದಕ್ಕೆ ನನ್ನಮ್ಮಳು ಸಹ ಅವಳಿಗೆ ಸಾಥ್ ನೀಡಿದ್ದಳು.

"ಪಾಪ ಹುಡುಗಿ.... ನಿನಗೆ ತಮಾಷೆ ಮಾಡದೇ ಇನ್ನಾರಿಗೆ ಮಾಡುತ್ತಾಳೋ..?"

ಎಂದು ಹೇಳಿ ಅಮ್ಮ ನನ್ನ ಕೋಪವನ್ನು ಶಾಂತಗೊಳಿಸಿದಳು.

"ತಮ್ಮನ ಮಗಳು ಅಂತ ಜಾಸ್ತಿ ಸಲುಗೆ ಕೊಟ್ಟಿದ್ದೀಯಮ್ಮ... ಇರಲಿ ನನಗೂ ಟೈಮ್ ಬರುತ್ತೆ"

ಪ್ರತಿಕಾರದ ಧ್ವನಿಯಲ್ಲೇ ಹೇಳಿದೆ...

ಶಾಲೂ ಇನ್ನು ಅಲ್ಲೇ ನಗುತ್ತಾ ನಿಂತಿದ್ದಳು. ಅಲ್ಲೇ ಅಮ್ಮ ನಲ್ಲಿಯ ಕೆಳಗೆ ಒಂದು ಬಕೆಟ್ ನೀರನ್ನು ತುಂಬಿ ಇಟ್ಟಿದ್ದಳು. ತಕ್ಷಣ ಶಾಲೂವಿನ ಕೈ ಹಿಡಿದೆಳೆದು ಆ ಬಕೇಟ್ ನೀರನ್ನು ಅವಳ ತಲೆಯ ಮೇಲೆ ಸುರಿದು ಬಿಟ್ಟೆ...
ಅವಳು 'ಅಯ್ಯೊ ಬಿಡೊ' ಎನ್ನುತ್ತಾ ನನ್ನ ಬಿಗಿ ಹಿಡಿತದಿಂದ ನುಣುಚಿಕೊಂಡು ಓಡಿದಳು ಬಟ್ಟೆಯಲ್ಲಾ ಒದ್ದೆಯಾಗಿತ್ತು. ಮೈ ಗಂಟಿಗಂಡಿದ್ದ ಅವಳ ಆ ಒದ್ದೆ ಬಟ್ಟೆಯನ್ನು ನೋಡಿ ನಾನು ಕ್ಷಣಕಾಲ ರೋಮಾಂಚಿತನಾದೆ....ಅವಳು ಹಾಕಿದ್ದ ತೆಳು ಬಟ್ಟೆಯು ರೇಷ್ಮೆಯಂತಹ ಅವಳ ಮೈಯೊಂದಿಗೆ ಬಿಗಿಯಾಗಿ ಅಪ್ಪಿಕೊಂಡಿತ್ತು. ಬೇಲೂರಿನ ಶಿಲಾಬಾಲಿಕೆ ನೆನಪಾದದ್ದು ಸುಳ್ಳಲ್ಲ. ಹೆಣ್ಣನ್ನು ನಾಜೂಕಾಗಿ ಕಡೆದ ಆ ಶಿಲ್ಪಿ ಅದೆಂತ ಅದ್ಭುತ ಕಲೆಗಾರ. ಹೆಣ್ಣನ್ನು ಸುಂದರವಾಗಿ ಚಿತ್ರಿಸಿ ಗಂಡನ್ನು ಆಕರ್ಷಿಸುವಂತಹ ಆ ಸಮ್ಮೋಹನ ಲೀಲೆಯನ್ನು ಅವಳಲ್ಲಿ ಅದು ಹೇಗೆ ಬೆರೆಸಿ ಸೃಷ್ಠಿಸಿದನೋ...!!!  ಆ ದಿನ ಶಾಲೂ ವನ್ನು ಮರೆಯಲಾಗಲಿಲ್ಲ. ಶಾಲೂಗೆ ಮದುವೆಯಾಗುವಂತೆ ಅಮ್ಮ ಹಲವು ಸಲ ಬೇಡಿಕೆಯಿಟ್ಟಿದ್ದರೂ ನಾನು ನಿರಾಕರಿಸಿದ್ದೆ. ಆದರೆ ಈ ದಿನ ಶಾಲೂ ಮನಸಿಗೆ ತೀರ ಹತ್ತಿರವಾಗಿದ್ದಳು. ಪ್ರಕೃತಿಯ ಸಹಜವಾದ ನೈಜ ಆಕರ್ಷಣೆ ಶಾಲೂವಿನ ಮೇಲಾಯಿತು.ಅಂದಿನಿಂದ ಶಾಲೂ ಮನಸ್ಸಿಗೆ ಹತ್ತಿರವಾದಂತೆ ಬಾಸವಾಯಿತು. ಅಮ್ಮ ಶಾಲೂ ಮತ್ತು ನನ್ನ ಮದುವೆಯ  ಬಗ್ಗೆ ಮತ್ತೆ ನನಗೆ ಕೇಳಬಹುದೇನೋ ಎಂದು ನಿರೀಕ್ಷಿಸಿದ್ದೆ. ಆದರೆ ಅಮ್ಮ ಕೇಳಲೇ ಇಲ್ಲ. ಇಷ್ಟು ದಿನ ಮದುವೆ ನಿರಾಕರಿಸುತ್ತಲೇ ಬಂದ ನಾನು ಶಾಲೂವಿನ ಪ್ರೀತಿಯವಿ ಬಿದ್ದಿದ್ದೆ.  ಶಾಲೂ ಮಾತ್ರ ಅಂದು ನನ್ನ ಹೃದಯವನ್ನೇ ಕದ್ದಿದ್ದಳು....

ಹಿಂದಿನ ವರ್ಷದ ಈ ಘಟನೆ ಮತ್ತೆ ಮನಸಿಗೆ ಮುದ ನೀಡುತ್ತಿತ್ತು. ಈ ವರ್ಷ ಹೋಳಿ ಬಂದಾಗ ಪದೇ ಪದೇ ಆ ನನ್ನ ಬಿಳಿ ಷರಟು ನೆನಪಿಗೆ ಬಂದಿತು. ಹಿಂದಿನ ವರ್ಷ ಶಾಲೂ ನನ್ನ ಮೇಲೆ ಓಕುಳಿ ಹಾಕಿದಂತೆ ನಾನೂ ಮೋಸದಿಂದ ಹಾಕಲು ನಿರ್ಧರಿಸಿದೆ ಹಿಂದಿನ ವರ್ಷದ ಸೇಡು ತೀರಿಸಿಕೊಳ್ಳುವುದು ಬೇಡವೇ... ನಾನು ಕೂಡ ಪ್ಲಾನ್ ಮಾಡಿಕೊಂಡು ಅವಳ ಮನೆಯ ಗೇಟಿನ ಬಳಿ ಇರುವ ಮರದ ಮರೆಯಲ್ಲಿ ನಿಂತುಕೊಂಡು ಕಾಯುತಲಿದ್ದೆ. ಕಳೆದ ವರ್ಷ ಬಣ್ಣಗಳಿಂದ ಹಾಳಾಗಿದ್ದ ಅದೇ ಬಿಳಿ ಬಣ್ಣದ ಷರಟನ್ನು ಹಾಕಿಕಂಡಿದ್ದೆ. ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಮನೆಯ ಆಚೆಗಿನ ತುಳಸಿ ಕಟ್ಟೆಯ ಹತ್ತಿರ ಕುಳಿತು ಓದುತ್ತಿದ್ದ ಅವಳು ಈ ದಿನ ಬರಲೇ ಇಲ್ಲ.ಮನೆಯೊಳಗೆ ಕಳ್ಳ ದೃಷ್ಠಿ ಬೀರಿದೆ. ಮನೆ ಶಾಂತವಾಗಿತ್ತು. ಎಷ್ಟು ಸಮಯವಾದರೂ ಕಾದು ಶಾಲೂವಿನ ಮೈಯನ್ನು ರಂಗು ರಂಗಿನ ಬಣ್ಣದಿಂದ ಒದ್ದೆ ಮಾಡಬೇಕು. ಹೊರಗೆ ಬಂದೇ ಬರುತ್ತಾಳೆ ನೋಡೋಣ ಎಂದು  ಮರದ ಮರೆಯಲ್ಲಿ ಕಾಯುತ್ತಲೇ ಇದ್ದೆ... 

ನನ್ನ ಹಿಂದೆ ಏನೋ ಸದ್ದಾಯಿತು. ತಕ್ಷಣ ತಿರುಗಿ ನೋಡಿದೆ. ಪಿಚಕಾರಿಯ ಕೊಳವೆಯಿಂದ ಎರಗಿ ಬಂದ ಕೆಂಪು ಬಣ್ಣವೊಂದು ಮುಖಕ್ಕೆ ಅಪ್ಪಳಿಸಿತು. ಇನ್ನೊಂದು ಪಿಚಕಾರಿಯಿಂದ ಬಂದ ನೇರಳೆ ಬಣ್ಣದ ನೀರು ನನ್ನ ಬಟ್ಟೆಯನ್ನು ರಂಗಾಗಿಸಿತು. ಮತ್ತೊಂದರಿಂದ ಬಂದ ಹಳದಿ ಬಣ್ಣದ ನೀರು ನನ್ನ ದೇಹವನ್ನು ತೊಯ್ದು ತೆಪ್ಪೆಯಾಗಿಸಿತು. ನನ್ನ ಹಿಂದೆ ಶಾಲೂ, ಐಶು, ಮತ್ತು ಬಾಲು ನನ್ನ ಮೇಲೆ ಮೂರು ಮೂರು ಪಿಚಕಾರಿಯನ್ನು ಹಿಡಿದು ರಂಗಿನ ನೀರನ್ನು ನನ್ನ ಮೇಲೆರೆದು ನಗುತ್ತಾ ನಿಂತಿದ್ದರು. ನಾನು ಹಿಂದಿನ ವರ್ಷದಂತೆಯೇ ಶಾಲೂವಿನ ಮುಂದೆ ಮತ್ತೆ ಮೋಸಹೋದೆ. ನನ್ನ ಮತ್ತು ಶಾಲೂವಿನ ಮದುವೆ ಕೇವಲ ಇನ್ನೊಂದು ವಾರ ಮಾತ್ರ ಉಳಿದಿತ್ತು. ಈ ಸಮಯದಲ್ಲಿ ಶಾಲೂ ನಾಚಿಕೆಯಿಂದ ಇರುವಳು. ಈ ಸಮಯವನ್ನು ನಾನೇ ಸದೂಪಯೋಗ ಪಡಿಸಿಕೊಂಡು ಶಾಲೂ ಮೇಲೆ ರಂಗಿನ ಮಳೆಗೆರೆಯಬಹುದು ಎಂದು ಕೊಂಡಿದ್ದೆ. ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ನಾನು ಶಾಲೂವಿನಿಂದ ಮತ್ತೆ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದಿತ್ತೇನೋ... ಶಾಲೂ ಹಾಗೆ ಮಾಡಲಾರಳು ಎಂದು ಭಾವಿಸಿದ್ದೇ ನನ್ನ ತಪ್ಪಾಯಿತು. ಏನೇ ಆಗಲಿ ಪ್ಲಾನ್ ಮಾಡಿ ನನ್ನಂತಹ ಹುಡುಗರನ್ನು ಯಾಮಾರಿಸುವುದರಲ್ಲಿ  ಹುಡುಗಿಯರು ಎತ್ತಿದ ಕೈ. ನನ್ನ ಕೈಗೆ ಸಿಕ್ಕಿದ್ದರೆ ಆಕೆಯನ್ನು ನನ್ನ ಎದೆಯ ಗೂಡಿನಲ್ಲಿ ಬಿಗಿಯಾಗಿ ಬಂಧಿಸಬೇಕೆಂದಿದ್ದೆ.  ಅವಳ ಕೈ ಹಿಡಿದುಕೊಂಡು ಬರ ಸೆಳೆದುಕೊಂಡೆ. ಇನ್ನೇನು ನನ್ನ ಬಾಹು ಬಂಧನದಲ್ಲಿ ಬಂಧಿಯಾಗಿ ನಾಚಿಕೆಯಿಂದ ಕರಗುವಳೆನೋ ಎನ್ನುವಾಗಲೇ. ಆಕೆ ನನ್ನಿಂದ ನುಣುಚಿಕೊಂಡು ದೂರ ಸರಿದು ಕೊಲೆಗಾರನಿಗೆ ಬಂದೂಕು ಹಿಡಿದು ನಿಂತಂತೆ ನನ್ನ ಎದೆಯನ್ನು ಗುರಿಯಾಗಿರಿಸಿಕೊಂಡು ಮತ್ತೆ ಪಿಚಕಾರಿಯನ್ನು ಹಿಡಿದು ನಿಂತಳು.

ಆಕೆಯ ಮೈ ಮೇಲೆ ಒಂಚೂರು ಹೋಳಿಯ ರಂಗು ತಾಕಿರಲಿಲ್ಲ. ಆದರೂ ಶಾಲೂ ತನ್ನ ಸಹಜ ಸೌಂದರ್ಯದಿಂದ ನನ್ನ ಕಣ್ಣಿಗೆ ಕಲರ್ ಫುಲ್ ಆಗಿ ಕಾಣುತ್ತಿದ್ದಳು. ನಾಚಿಕೆಯ ಆಭರಣ ಧರಿಸಿದ್ದ ಅವಳ ಮುಖ ಬೆಳದಿಂಗಳ ಚಂದಿರನಂತೆ ಬಿಳುಪಾದ ಹಾಲಿನ ಬಣ್ಣ ಪಡೆದಿತ್ತು. ರೇಷಿಮೆಯಂತಹ ಅವಳ ಕೆನ್ನೆಯು ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಆಸೆಯ ಕುಡಿನೋಟದ ಅವಳ ಕಣ್ಣುಗಳು ನೀಲಾಕಾಶದ ಬಣ್ಣದಿಂದ ಮುಳುಗಿತ್ತು. ಜೇನಿನ ಅಧರವಾಗಿದ್ದ ಅವಳ ತುಟಿಗಳು ತೊಂಡೆ ಹಣ್ಣಿನ ಕೆಂಪು ರಂಗನ್ನು ಪಡೆದಿತ್ತು. ಗಾಳಿಯೊಂದಿಗೆ ಸರಸವಾಡುತ್ತಿರುವ ಅವಳ ಮುಂಗುರುಳಿನದು ಕಪ್ಪು ಮೊಡದ ಬಣ್ಣ. ಅವಳು ಕುಣಿದು ಕುಪ್ಪಳಿಸುವಾಗ ನವಿಲುಗರಿಯ ಬಣ್ಣ. ನಡೆಯುವಾಗ ವಸುಂದರೆಯ ಹಸಿರ ಬಣ್ಣ. ತುಂಟತನದಲ್ಲಿ ಕಾಮನ ಬಿಲ್ಲಿನ ಏಳು ಬಣ್ಣ. ಒಟ್ಟಾರೆ  ಅವಳು ಬಣ್ಣಗಳ ಮಿಶ್ರಣ, ಅವಳ ಪಿಚಕಾರಿಯಿಂದ ಅಪ್ಪಳಿಸಿ  ಬಂದ ಬಣ್ಣಗಳಿಂದ ಮಿಂದ  ನಾನು ಅವಳದೆ ಬಣ್ಣಗಳ ಸಮ್ಮಿಶ್ರಣ.....

                                                                                           - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment