Monday 20 June 2016

ನಮ್ಮೂರು

ನಮ್ಮೂರು

ಬಸವನೊಮ್ಮೆ ಹೂಂಕರಿಸಿ ಗೂಳಿಟ್ಟಿಸಿ
ಆಶೕಿರ್ವದಿಸಿದ ಪುಣ್ಯಭೂಮಿಯೇ
ನಮ್ಮೂರು ಬಸವಾಪಟ್ಟಣ
ಪಟ್ಟಣವೆಂಬುದು ಅನ್ವರ್ಥನಾಮ ಅಷ್ಟೇ
ಗಗನಚುಂಬಿ ಕಟ್ಟಡಗಳೇನೂ ಇಲ್ಲ
ವಿಶಾಲ ಹೃದಯಗಳಿಗೇನೂ ಕೊರತೆ ಇಲ್ಲ

ಮೂರು ಕಡೆ ಸುತ್ತಲೂ ಬೆಟ್ಟಗಳು
ಬೆಟ್ಟಕ್ಕೆ ಮುತ್ತಿಕ್ಕಿ ಹರಿಯುವ ಭದ್ರಾನಾಲೆ
ವೈವಿದ್ಯದ ರಾಜಬೀದಿಯಲಿ ಕಾಲಿಟ್ಟರೆ
ಕೋಶ ಓದುವುದೇನೂ ಬೇಡ
ಅಲ್ಲಿಯ ತರಲೇ ಮಾತುಗಳು
ಸೋಮಾರಿ ಕಟ್ಟೆಯ ಚರ್ಚೆಗಳೇ ಸಾಕು...

ಹಾಲಸ್ವಾಮಿ ಬೆಟ್ಟದ ಹಿತನುಡಿಗಳು
ದುರ್ಗಮ್ಮ ಗುಡ್ಡದ ವೇದಾಂತಗಳು
ಜನರ ಐಲು ಬೈಲು ರಾಜಕೀಯ ನುಡಿಗಳು
ರಾಜಧಾನಿಯಲ್ಲೂ ಸಿಗಲಾರದ ಸಿದ್ಧಾಂತಗಳು
ಕುಡುಕರು ಅಭಿನಯದ ಸಂಜೆ ಬೀದಿಗಳು
ಬಿಳಿ ಲುಂಗಿ ಪರದೆಯಲ್ಲಿನ ಟೆಂಟ್ ಸಿನಿಮಾಗಳು

ದಿನದ ದುಡಿಮೆ ಇಲ್ಲದಿದ್ದರೂ ಚಿಂತೆಯಿಲ್ಲ
ಪಕ್ಕದ ಮನೆಯ ಕಡ ಇದ್ದೇ ಇದೇ
ಕೂಡಿ ಬದುಕುವ ಕಲ್ಚರ್ ಇದೆ
ಇಲ್ಲಿನಂತೆ ಮೋಸದ ಜಾಲವಿಲ್ಲ
ಕಳ್ಳ ಬಂದರೂ ಚಿಂತೆಯಿಲ್ಲ
ಅಲ್ಲೇ ಡ್ರಾ ಅಲ್ಲೇ ಬಹುಮಾನ...

ವೈಫೈ ಯುಗದಲ್ಲೂ ಹೈಫೈ ಆಗಲಿಲ್ಲ
ಸಂಸ್ಕೃತಿ ಸಂಸ್ಕಾರಕ್ಕೆ ಆಧುನಿಕತೆ ಸಿಗಲಿಲ್ಲ
ಇಂಗ್ಲಿಷಿನ ಭಾಷೆ ನಾಲಿಗೆಗೆ ಬರಲಿಲ್ಲ
ಅದೇ ಜನ, ಅದೇ ಮನ
ಪ್ರೀತಿ ವಿಶ್ವಾಸದ ಆರಾಧಕರು
ದೇವರ ಪ್ರತಿನಿಧಿಗಳು....
                      
                     - ಪ್ರಕಾಶ್.ಎನ್.ಜಿಂಗಾಡೆ

No comments:

Post a Comment