Wednesday, 29 June 2016

Part 1ಚಿಟ ಪಟ ಮಳೆ ಹನಿಗಳ ಮಧ್ಯದಲ್ಲಿ ರೈಲು ನಿಧಾನವಾಗಿ ಸಾಗಿತ್ತು. ಪಶ್ಚಿಮ ಘಟ್ಟಗಳ ಆ ಕಣಿವೆಯ ಮಧ್ಯದಲ್ಲಿ ಎಂದೂ ನೋಡದ ಆ ಪ್ರಕೃತಿ ಸೌಂದರ್ಯ ಎಂತವರನ್ನು ಒಂದು ಕ್ಷಣ ಮೂಕ ಮುಗ್ದ ಮಾಡುವಷ್ಟು ಸೊಗಸಾಗಿತ್ತು. ಅಲ್ಲಲ್ಲಿ ಬೆಟ್ಟದ ಮೇಲಿಂದ ಹರಿಯುವ ನೀರ ಝರಿಗಳು ಚಿಕ್ಕ ಚಿಕ್ಕ ಜಲಪಾತವನ್ನು ಸೃಷ್ಟಿಸಿತ್ತು. ಮೋಡಗಳು ಬೆಟ್ಟ ಗುಡ್ಡಗಳನ್ನು ಮುತ್ತಿಕ್ಕುತ್ತಿವೆಯೇನೋ ಎನ್ನುವಂತಹ ರಮಣೀಯ ನೋಟ. ಪ್ರಕೃತಿಯ ಸೌಂದರ್ಯಕ್ಕೆ ಸರಿಸಮಾನ ಸ್ಪರ್ದೆ ಎನ್ನುವಂತೆ ನನ್ನ ಮುಂದೆ ಇನ್ನು ಹದಿನೆಂಟರ ಬಾಲೆಯೊಬ್ಬಳು ಕುಳಿತ್ತಿದ್ದಳು. ಕಿಟಕಿಯ ಪಕ್ಕದಲ್ಲಿ ಆಕೆ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರೆ. ನನಗೆ ಎರಡೆರಡು ಸೌಂದರ್ಯ ನೋಡುವ ಅವಕಾಶ. ಸೌಂದರ್ಯದಲ್ಲಿ ಪ್ರಕೃತಿಯೋ... ಬಾಲೆಯೋ...! ಯಾವುದನ್ನು ತೆಗೆದು ಹಾಕುವಂತಿರಲಿಲ್ಲ...
"ನೋಡು... ಊರು ಬಂದ ಕೂಡಲೇ. ತೆಪ್ಪಗೆ ಇಳಿದು ಸುಮ್ಮನೆ ಬರಬೇಕು. ಮತ್ತೆ ಏನಾದರೂ ರಂಪ ಮಾಡಿದರೆ. ಗೊತ್ತಲ್ಲ ..? ಮಗಳು ಅನ್ನೋ ಮಮಕಾರ ಮರೆತು ಬಿಡಬೇಕಾಗುತ್ತದೆ.."
ಎದುರು ಸೀಟಿನಲ್ಲಿ ಕುಳಿತ್ತಿದ್ದ ದಢೂತಿ ಆಸಾಮಿ ಆ ಬಾಲೆಯನ್ನು ಎಚ್ಚರಿಸಿದ...
"ಹೂಂ"
ಹುಡುಗಿ ಮುಗ್ದವಾಗಿಯೇ ತಲೆಯಾಡಿಸಿದಳು..
ಅದುವರೆಗೂ ಪ್ರಕೃತಿ ಸೌಂದರ್ಯ ನೋಡುವಲ್ಲಿ ತಲ್ಲೀನನಾಗಿದ್ದ ನನಗೆ ಆ ದಢೂತಿ ಆಸಾಮಿ ಆ ಮುಗ್ಧ ಹುಡುಗಿಗೆ ಕೋಪದಿಂದ ಆ ಮಾತನ್ನು ಹೇಳಿದಾಗ ನನ್ನ ಗಮನ ಕೊಂಚ ಆ ಹುಡುಗಿಯ ಕಡೆಗೆ ನಾಟಿತು.
ಆ ಮುಗ್ದ ನೋಟದಲ್ಲಿ ಒಂದು ದುಃಖದ ಛಾಯೆಯೊಂದು ಗೋಚರಿಸಿದಂತಾಯಿತು. ಕಣ್ಣುಗಳು ತುಸು ಕೆಂಪು ಬಣ್ಣದಿಂದ ಗೋಚರಿಸಿದವು. ಮುಖದಲ್ಲಿ ನಗು ಮರೆಯಾದಂತಿತ್ತು. ಪಾಪ ಹುಡುಗಿಗೆ ಈ ರೀತಿ ಕೋಪದಿಂದ ಗದರಿಕೊಂಡ ವ್ಯಕ್ತಿಯನ್ನೊಮ್ಮೆ ನೋಡಿದೆ. ಆತನ ಮುಖ ಇನ್ನು ಕೋಪದಿಂದಲೇ ಕೂಡಿತ್ತು. ಗಂಟು ಹಾಕಿಕೊಂಡಿರುವ ಆ ಮುಖ ಆತನಿಗೆ ಹುಟ್ಟಿನಿಂದಲೇ ಕೊಡಿಗೆಯಾಗಿ ಬಂದಿರಬೇಕು. ಯಶವಂತಪುರದಲ್ಲಿ ರೈಲು ಹತ್ತಿದಾಗಿನಿಂದಲೂ ಆತನನ್ನು ಗಮನಿನಿಸಿಕೊಂಡೇ ಬಂದಿದ್ದೇನೆ ಆತನ ಮುಖವು ಯಾವ ವಿಲನ್ ಗಿಂತ ಏನೂ ಕಡಿಮೆಯಿರಲಿಲ್ಲ.
ಎಲ್ಲಿ ಆ ಸುಂದರ ಹುಡುಗಿ..? ಎಲ್ಲಿ ಆ ಗಂಟು ಮುಖದ ಅಪ್ಪ..? ರೂಪದಲ್ಲಿ ಸಂಪೂರ್ಣವಾಗಿ ಒಬ್ಬರಿಗೂಬ್ಬರು ವಿರುದ್ಧ ವ್ಯತ್ಯಾಸಗಳು...

ಆತ ಎದ್ದು ಹೊರಟ. ಶೌಚಾಲಯಕ್ಕೆ ಹೊರಟಿರಬೇಕು. ರೈಲು ಮೊದಲಿಗಿಂತ ಸ್ವಲ್ಪ ವೇಗವನ್ನು ಪಡೆದುಕೊಂಡಿತ್ತು. ಹುಡುಗಿಯ ಮುಖವನ್ನೊಮ್ಮೆ ನೋಡಿದೆ. ದುಗುಡ ತುಂಬಿಕೊಂಡಂತೆ ಇತ್ತು. ಅವಸರದಿಂದ ಎದ್ದು ತನ್ನ ತಂದೆ ಹೋದ ದಿಕ್ಕನ್ನೊಮ್ಮೆ ನೋಡಿಕೊಂಡು ಬಂದು ನನ್ನ ಪಕ್ಕದಲ್ಲಿ ಕುಳಿತಳು...
ಏನಾಯಿತೋ ತಿಳಿಯಲಿಲ್ಲ... ಕ್ಷಣಕಾಲ ಮೌನ. ನಾನೇ ಅವಳನ್ನು ಮಾತನಾಡಿಸಬೇಕೆಂದು ಯೋಚಿಸಿದೆ. ಮನದ ಮಾತು ಇನ್ನೇನು ನಾಲಿಗೆಯವರೆಗೂ ಬಂದಿತ್ತು. ಅಷ್ಟರಲ್ಲಿ ಅವಳೇ ಮೌನವನ್ನು ಮುರಿದಳು..
" ಪ್ಲೀಸ್.... ನಿಮ್ಮ ಮೊಬೈಲ್ ಕೊಡಿ ಒಂದೇ ಒಂದು ಕಾಲ್ ಮಾಡಿ ಕೊಡ್ತೀನಿ"
ಅವಸರ ಅವಸರದಿಂದ ಮಾತು ತೊದಲಿಸುತ್ತಾ ಹೇಳಿದಳು. ಅಪ್ಪ ಬಂದು ನೋಡಿ ಬಿಟ್ಟಾನು ಎಂಬ ಭಯ ಮುಖದ ತುಂಬಾ ಆವರಿಸಿತ್ತು.
"ಪರವಾಗಿಲ್ಲ ತಗೋಳಿ.."
ನಾನು ಮೊಬೈಲನ್ನು ಕೈಗಿತ್ತ ಕೂಡಲೇ ಆತುರದಿಂದ ನಂಬರ್ ಒತ್ತಿ ಕಿವಿಯತ್ತಿರ ಇಟ್ಟು ಕೊಂಡಳು..
ಮೊಬೈಲೇನೋ ರಿಂಗಾಯಿತು
"ಹಲೋ.. ರಾಕೇಶ್.  ಹಲೋ ರಾಕೇಶ್"
ಮಾತಿನಲ್ಲಿ ವೇಗ ಸ್ವಲ್ಪ ಹೆಚ್ಚಾಗಿಯೇ ಇತ್ತು.
"ಛೆ...!! ಒಂದು ಸಲ ರಿಂಗಾಗಿ ಕಟ್ ಆಯಿತು"
ಬೇಸರದಿಂದ ಮೊಬೈಲ್ ಹಿಂದಿರುಗಿಸಿದಳು..
"ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶ ನೋಡಿ... ಇಂತ ಕಡೆ ನೆಟ್ ವರ್ಕ್ ಸಿಗೋದು ಕಡಿಮಯೆ"
ನಾನು ಮುಗುಳ್ನಗೆಯಿಂದ ಹೇಳಿದೆ.
ಅವರಪ್ಪ ಬಂದು ಕುಳಿತುಕೊಳ್ಳುವ ವೇಳೆಗಾಗಲೇ ಆ ಹುಡುಗಿ ತನ್ನ ವಿಂಡೋ ಸೀಟ್ ನ ಬಳಿ ಏನೂ ತಿಳಿಯದಂತೆ ಕುಳಿತುಕೊಂಡಳು. ಆಕೆ ಇನ್ನೂ ಸ್ವಲ್ಪ ಸಮಯ ನನ್ನ ಪಕ್ಕ ಕುಳಿತುಕೊಂಡಿದ್ದರೆ...!! ಎಂದು ಮನಸು ಯೋಚಿಸಿತು.
ಎಂತಹ ಸುಂದರ ಹುಡುಗಿ ಅವಳು. ಅವಳ ಆ ಕಣ್ಣೋಟ, ನನ್ನಂತಹ ಹುಡುಗರನ್ನು ಬಲೆಗೆ ಬೀಳಿಸಿಕೊಳ್ಳಬಲ್ಲ ಆ ಮಾತಿನ ಸೌಮ್ಯತೆ, ಆ ಧ್ವನಿ, ಆ ಸುಂದರ ತುಟಿಗಳು, ಅವಳ ಹಾರುತ್ತಿರುವ ಮುಂಗುರುಳುಗಳು, ಅವಳ ಈ ಸೌಂದರ್ಯವೆಲ್ಲವೂ ನನ್ನ ಕಣ್ಣುಗಳು ಹತ್ತಿರದಿಂದಲೇ ತುಂಬಿಕೊಂಡಿದ್ದವು. ಅವು ನನ್ನ ಮನಸಿನಾಳಕ್ಕೆ ಇಳಿದು ಒಂದು ರೀತಿಯ  ಆನಂದವನ್ನು ತುಂಬಿ ಹೃದಯವನ್ನು ಆಕಾಶದಲ್ಲೇ ತೇಲಾಡುವಂತಹ ಭಾವನೆಯನ್ನುಂಟು ಮಾಡಿತ್ತು....
     ಅಷ್ಟರಲ್ಲಿ ರೈಲು ಪಶ್ಚಿಮ ಘಟ್ಟಗಳನ್ನು ಇಳಿದು ಕರಾವಳಿಯ ಬಯಲನ್ನು ಪ್ರವೇಶಿಸಿತ್ತು. ಸುತ್ತಲೂ ಮರಗಳು, ಹಸಿರನ್ನು ಹಾಸಿದಂತಹ ಸಮತಟ್ಟಿನ ಆ ಪ್ರದೇಶದಲ್ಲಿ ರೈಲು ನಿರಾತಂಕವಾಗಿ ಸಾಗಿತ್ತು. ಹುಡುಗಿಯ ಪಕ್ಕದಲ್ಲಿದ್ದ ಅವಳ ಅಪ್ಪ ಕೈಯನ್ನು ಮೇಲಕ್ಕೆತ್ತಿ ಮೈ ಮುರಿದುಕೊಂಡ. ಅವನ ಆ ವಿಕಾರ ರೂಪವನ್ನು ನೋಡುತ್ತಿರುವಾಗಲೇ ನನ್ನ ಮೊಬೈಲ್ ರಿಂಗಾಯಿತು. ಆ ಸದ್ಧಿಗೆ ಹುಡುಗಿ ಭಯಗೊಂಡಂತೆ ಒಮ್ಮೆ ಬೆಚ್ಚಿದಳು. ಅವಳನ್ನೊಮ್ಮೆ ನೋಡಿದೆ. ಕೈಮುಗಿದು ಕಣ್ಣ ಸನ್ನೆ ಮಾಡಿ ಅಪ್ಪನಿಗೆ ಹೇಳದಂತೆ ಬೇಡಿಕೊಂಡಳು.
ಅವಳ ಊಹೆ ಸರಿಯಾಗಿಯೇ ಇತ್ತು. ಅದು ಅವಳೇ ಈ ಹಿಂದೆ ಕರೆ ಮಾಡಿದ ರಾಕೇಶ್ ನಂಬರ್ ಆಗಿತ್ತು.
ಯಾರೀತ ರಾಕೇಶ್..?
ಅಪ್ಪನಿಗೆ ಹೆದರಿಕೊಂಡು ಕದ್ದು ಮುಚ್ಚಿ ಕರೆ ಮಾಡಿದ್ದಾದರೂ ಏಕೆ. ಅವಳ ಪ್ರೇಮಿಯಾಗಿರಬಹುದೇ...? ಅಣ್ಣ...?
ಛೆ...!! ಅಣ್ಣನಾಗಿರಲು ಸಾಧ್ಯವಿಲ್ಲ. ಅಪ್ಪನಿಗೆ ಹೆದರಿ ಕರೆ ಮಾಡುತ್ತಿದ್ದಾಳೆಂದರೆ. ಲವ್ ಪ್ರಾಬ್ಲಮ್ ಇರಬಹುದು ಎಂದು ಯೋಚಿಸುತ್ತಾ ಸ್ವಲ್ಪ ಆಚೆ ಹೋಗಿ ಕಾಲ್ ರಿಸೀವ್ ಮಾಡಬೇಕೆನ್ನುವಷ್ಟರಲ್ಲಿ. ಬಂದ ಕರೆ ಮತ್ತೆ ಕಟ್ ಆಯಿತು....
ಕಾಲ್ ಕಟ್ ಆಗಿರೋದನ್ನು ನೋಡಿ ಹುಡುಗಿ ಒಮ್ಮೆ ನಿಟ್ಟುಸಿರು ಬಿಟ್ಟಳು..
"ನಿಮ್ಮ ಹೆಸರೇನು...? ಎಲ್ಲಿಗೆ ಹೋಗ್ತಾ ಇದೀರಿ"
ಹುಡುಗಿಯನ್ನೊಮ್ಮೆ ಕೇಳಿದೆ
"ಮಾನಸ....ಅಂತ, ಕಾರವಾರಕ್ಕೆ ಹೋಗ್ತಾ ಇದ್ದೀವಿ, ನೀವು...?'
ಹುಡುಗಿ ಸಹಜವಾಗಿಯೇ ಉತ್ತರಿಸಿ, ನನ್ನೊಡನೆ ಹರಟಳು ಮುಂದಾದಳು. ಅವರ ಅಪ್ಪ ಅವಳ ಕಡೆಗೆ ವಿಲನ್ ನಂತೆ ಕಣ್ಣುಗಳನ್ನು ದೊಡ್ಡದಾಗಿಸಿಕೊಂಡು ಗದರಿಕೊಳ್ಳುವ ಹಾಗೆ ದೃಷ್ಟಿಯನ್ನು ಬೀರಿದ. ಹಾಗೆಯೇ ನನ್ನ ಕಡೆಗೊಮ್ಮೆ ಕೋಪದಿಂದ ಕೆಕ್ಕರಿಸಿ ನೋಡಿದ. ಕಣ್ಣಲ್ಲಿ ಕೆಂಪಾದ ಕೋಪಾಗ್ನಿ ಕಂಡಂತಾಯಿತು. ಅವನ ಆ ನೋಟ ಸಹಿಸಿಕೊಳ್ಳಲಾಗದೆ ನಾನು ಸಹ ಬಾಲ ಮುದುರಿಕೊಂಡು ತೆಪ್ಪಗೆ ಕುಳಿತುಕೊಂಡೆ. ನಾವು ಮಾತನಾಡದೇ ಮೌನವನ್ನು ಧರಿಸಿದ್ದರೂ ಕಣ್ಣುಗಳು ಮಾತನಾಡಿಕೊಂಡವು. ಅವಳ ಆ ಕಣ್ಣ ಬಾಷೆಗೆ ನನ್ನ ಮನಸು ಬಿರುಗಾಳಿಗೆ ತತ್ತರಿಸಿದಂತಾಯಿತು. ಮನಸು " ಮಾನಸ... ಮಾನಸ"  ಎಂದು ಅವಳ ಹೆಸರನ್ನೇ ಜಪಿಸುತ್ತಿತ್ತು. ಅವಳ ಸೌಂದರ್ಯವನ್ನು ಆಸ್ವಾದಿಸುತ್ತಾ ಕುಳಿತ್ತಿದ್ದ ನನಗೆ ಕಾರವಾರ ಬಂದಿದ್ದೂ ಸಹ ತಿಳಿಯಲಿಲ್ಲ.
ಕಾರವಾರದಲ್ಲಿ ಇಳಿದಾಗ ಪ್ರಯಾಣಿಕರ ಗದ್ದಲ ಸ್ವಲ್ಪ ಹೆಚ್ಚಾಗಿಯೇ ಇತ್ತು. ಆ ಹುಡುಗಿ ನನ್ನ ಮನಸಿನಿಂದ ಇನ್ನೂ ದೂರವಾಗಿರಲಿಲ್ಲ. ಅವಳನ್ನೇ ಹಿಂಬಾಲಿಸಿಕೊಂಡು ಬಂದೆ. ಅವಳು ತನ್ನ ತಂದೆಯೊಡನೆ ಹೆಜ್ಜೆ ಹಾಕುತ್ತಾ ಮುಂದಕ್ಕೆ ಸಾಗುತ್ತಿದ್ದಳು ನಾನು ಅವಳನ್ನು ಹಿಂಬಾಲಿಸಿಕೊಂಡೆ ನಡೆದೆ. ಒಮ್ಮೆ ಹಿಂದಿರುಗಿ ನೋಡಿದಳು. ನಾನು ಬರುತ್ತಿದುದು ಅವಳಿಗೆ ಸ್ಪಷ್ಟವಾಗಿ ಕಾಣಿಸಿತು. ಅವಳು ಸ್ವಲ್ಪ ದೂರದಲ್ಲಿದ್ದ ಆಟೋವನ್ನೇರಿ ಹೊರಟಳು. ನನಗೆ ಯಾಕೋ ಅವಳನ್ನು ಹಿಂಬಾಲಿಸಬೇಕು ಎಂದೆನಿಸಿತು. ಒಂದು ಕಡೆ ಅವಳ ಮುದ್ದಾದ ರೂಪ ಅವಳನ್ನು ಹಿಂಬಾಲಿಸಲು ಒಂದು ಕಾರಣವಾಗಿದ್ದರೆ ಮತ್ತೊಂದು ಕಡೆ ಅವಳು ಯಾವುದೋ ತೊಂದರೆಯಲ್ಲಿ ಸಿಲುಕಿರಬಹುದೆಂದು ನನ್ನ ಮನಸ್ಸು ಹೇಳುತ್ತಿತ್ತು. ನಾನು ಕೂಡಲೇ ಇನ್ನೊಂದು ಆಟೋವನ್ನು ಏರಿದೆ. ಆಟೋ ಡ್ರೈವರನಿಗೆ ಮುಂದೆ ಹೋಗುತ್ತಿದ್ದ ಅವಳ ಆಟೋವನ್ನು ಹಿಂಬಾಲಿಸಲು ಹೇಳಿದೆ. ಆಗ ಆ ಡ್ರೈವರ್ ನನ್ನತ್ತ ಅನುಮಾನದ ದೃಷ್ಟಿಯನ್ನು ಬಿರಿದ. 
"ಅಯ್ಯೋ ಬೇಗ ಹೋಗಪ್ಪ. ನಮ್ಮ ಅಪ್ಪ ನನ್ನ ಬಿಟ್ಟು ಹೋದಾರು ...? ನನಗೆ ಬೇರೆ ಸರಿಯಾಗಿ ವಿಳಾಸ ಗೊತ್ತಿಲ್ಲ."
 ಆಟೋದವನು ನನ್ನ ಮಾತನ್ನು ನಂಬಿದ. 
"ಸಾರ್... ಈಗ ಹೋಗಿ ಬಿಡ್ತೀನಿ ವರಿ ಮಾಡ್ಕೋಬೇಡಿ"
ಆತ ಹಾಗೆ ಹೇಳುತ್ತಲೇ ಆಟೋದ ವೇಗವನ್ನು ಹೆಚ್ಚಿಸಿಕೊಂಡ. ಆಟೋ ಕಾರವಾರದ ಸಂಧಿಗೊಂದಿಯನ್ನೆಲ್ಲ ತೋರಿಸಿಕೊಂಡು ಒಂದು ದೊಡ್ಡ ಬಂಗಲೆಯತ್ತಾ ನಿಂತಿತು. ಮಾನಸ ಮತ್ತು ಅವರಪ್ಪ ಆ ಬಂಗಲೆಯೊಳಗೆ  ಪ್ರವೇಶಿಸಿದರು. ನಾನು ಅಲ್ಲೇ ಇಳಿದವನಂತೆ ನಾಟಕವಾಡಿ ಮತ್ತೊಂದು ಆಟೋ ಹಿಡಿದು ಮನೆಗೆ ಹೋದೆನು. 

No comments:

Post a Comment