Saturday, 4 June 2016

Selfee

ಸೆಲ್ಫಿ

ಬೆಳಗ್ಗೆಯಿಂದ ನನ್ನ ಸುಕೋಮಲವಾದ ವದನವನ್ನು ಬಹು ಬಗೆಯಲ್ಲಿ ಸೆರೆಹಿಡಿಯಬೇಕೆಂದು ಮೋಬೈಲನ್ನು ತೆಗೆದುಕೊಂಡು ಎಲ್ಲಾ ಕೋನದಿಂದ ತಿರುಗಿಸಿ ತಿರುಗಿಸಿ ನನ್ನ ನಾ ಸೆರೆ ಹಿಡಿದುಕೊಳ್ಳಲು ನೋಡಿದೆ. ಯಾವ ಯ್ಯಾಂಗಲ್ ನಿಂದಲೂ ನಾನು ಚನ್ನಾಗಿ ಕಾಣಲಿಲ್ಲ. ನಾನು ರಾಜ್ ಕುಮಾರ್ ನಂತೆಯೋ, ದೇವಲೋಕದ ಇಂದ್ರನಂತೆಯೋ ಕಾಣಬೇಕೆಂದು ಹಂಬಲಿಸಿದ್ದು ತಪ್ಪಾಯಿತೋ ಏನೋ.....? ಆದರೂ ನನ್ನ ಪ್ರಯತ್ನ ಬಿಡಲಿಲ್ಲ . ಮುಂದುವರೆಸಿದೆ. ನಾನೇ ಹಲವು ರೀತಿಯಲ್ಲಿ ಭಿನ್ನ ಭಿನ್ನ ಭಂಗಿಯಲ್ಲಿ ಕುಳಿತು ನೋಡಿದೆ. ಹಿಂದೆ, ಮುಂದೆ, ಅಕ್ಕ-ಪಕ್ಕ, ಮೇಲೆ, ಕೆಳಗೆ ಎಲ್ಲಾ ರೀತಿಯಲ್ಲೂ ಕುಳಿತೆ. ಹೀಗೆ ಮಗ್ಗುಲನ್ನು ಬದಲಿಸಿ, ಬದಲಿಸಿ ನೋಡಿದೆ. ಎಷ್ಟೇ ಹೊಸ ಹೊಸ ಭಂಗಿಯಲ್ಲಿ ಪ್ರಯತ್ನಿಸಿ ನೋಡಿದರೂ ಹಳೆಯ ಬ್ಲ್ಯಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಂತೆಯೇ ಕಾಣುತ್ತಿದ್ದೆ. ನನ್ನ ಈ ಸೆಲ್ಫಿ ತೆಗೆಯುವ ಮಂಗನಾಟವನ್ನು ಯಾರಾದರೂ ನೋಡಿದರೆ ಎಷ್ಟು ನಗುತ್ತಿದ್ದರೋ ಏನೋ..ನಗುವುದು ಹಾಗಿರಲಿ ನನ್ನನ್ನೇ ಹುಚ್ಚನೆಂದು ಅಂದು ಕೊಂಡರೇ..? ಅಂದು ಕೊಂಡರೂ ತಪ್ಪೇನಿಲ್ಲ ಬಿಡಿ ನನ್ನ ಸೆಲ್ಫಿಯ ಗೀಳು ಹೆಚ್ಚು ಕಡಿಮೆ ಹಾಗೇ ಇತ್ತು. ನಾನು ಎಲ್ಲಾ ರೀತಿಯ ಹಾವ ಭಾವವನ್ನು ನನ್ನ ಮೊಬೈಲ್ ಕ್ಯಾಮರಾದ ಮುಂದೆ ಪ್ರದರ್ಶಿಸುತ್ತಿದ್ದೆ. ಅಂದರೆ ವಕ್ರ ವಕ್ರವಾಗಿಯೂ ಅಂಕುಡೊಂಕಾಗಿಯೂ... ಮುಖದಲ್ಲಿ ನವರಸಗಳೆಲ್ಲವನ್ನು ಕಿತ್ತು ಬರುವ ಹಾಗೆ ತೋರಿಸಿಕೊಂಡೆ. ಯಾವ ರಸವೂ ನನ್ನ ಮುಖಕ್ಕೆ ಚಂದವಾಗಿ ಕಾಣಿಸಲೇ ಇಲ್ಲ. ಒಂದೊಂದು ಮುಖದ ರಸಭಾವಗಳೂ ಸಹ ಒಬ್ಬೊಬ್ಬ ವಿಲನ್ ಗಿಂತಲೂ ಕಡಿಮೆಯೇನೂ ಇರಲಿಲ್ಲ. ಹೀಗೆ ಕಾಣುತ್ತಿದ್ದ ವಿಲನ್ ಗಳಿಗೆ ಇನ್ನಷ್ಟು ವಕ್ರತನ, ಕುರೂಪವನ್ನು ಮಿಕ್ಸ್ ಮಾಡಿ ನೋಡಿದರೆ ಹೇಗಿರುತ್ತಿದ್ದರೋ ಅದಕ್ಕಿಂತ ಕೆಟ್ಟದಾಗಿಯೇ ನನ್ನ ಮುಖ ಕಾಣುತ್ತಿತ್ತು. ಕೊನೆಗೆ ಮೊಬೈಲ್ ಸರಿಯಿಲ್ಲವೇನೋ ಎಂದು ಅನುಮಾನಿಸಿದೆ. ಎಕ್ಟ್ರ ಫೋಟೋ ಎಡಿಟರ್ ಅಪ್ಲಿಕೇಷನ್ ನಲ್ಲಿ ನಾನು ತೆಗೆದ ಪೋಟೋವನ್ನು ಮಿಕ್ಸಿಂಗ್ ಮಾಡಿ, ಸ್ವಲ್ಪ ಆಧುನಿಕತೆಯ ಟಚ್ ಕೊಟ್ಟು ನೋಡಿದೆ. ಆದರೆ ಅದರಲ್ಲಿ ಅತಿಯಾದ ಮೇಕಪ್ ನಿಂದಾಗಿ ಯಕ್ಷಗಾನ ಕಲಾವಿದನಂತೆಯೂ. ಬೂದಿ ಬಳಿದುಕೊಂಡ ಅಘೋರಿಯಂತೆ ಕಂಡೆನೇ ಹೊರತು ನಾನಂದು ಕೊಂಡಂತೆ ರಾಜಕುಮಾರನ ರೂಪ ನನ್ನಲ್ಲಿ ಬರಲೇ ಇಲ್ಲ.

ನಾನು ನನ್ನ ಪೋಟೋ ಶೂಟ್ ಮಾಡಿಕೊಂಡ ಸ್ಥಳಗಳನ್ನು ಹೇಳಿಕೊಂಡರೆ ನಕ್ಕು ಬಿಡುತ್ತೀರಿ. ಬೆಡ್ ರೂಮಲ್ಲಿ ಮಂಚದ ಮೇಲೆ... ಮನೆಯ ಮುಂಬಾಗ ಯಾರೋ ನಿಲ್ಲಿಸಿದ ಕಾರಿನ ಮುಂದೆ ನಿಂತು... ಅಡುಗೆ ಮನೆಯಲ್ಲಿ ಸೌಡನ್ನು ಹಿಡಿದು... ಅಡುಗೆಯವನ ರೂಪದಲ್ಲಾದರೂ ಚನ್ನಾಗಿ ಕಾಣುವೆನೇನೋ ಎಂಬ ಪ್ರಯತ್ನವೂ ಸಹ ನಡೆದು ಹೋಯಿತು... ಹಾಲ್ ನಲ್ಲಿ ತಲೆಗೆ ಟವಲ್ ಸುತ್ತಿಕೊಂಡು ನೋಡಿದೆ... ಇವೆಲ್ಲಾ ಪ್ರಯತ್ನದ ನಂತರ ಬಾತ್ ರೂಮ್ ನಲ್ಲಿ ಸೇವಿಂಗ್ ಮಾಡುವಾಗಲೂ ಒಂದೆರೆಡು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡೆ.. ಯಾರಾದರೂ ಇಂತಹ ಫೋಟೋಗಳನ್ನು ನೋಡಿದರೆ ನಗದೇ ಇರುತ್ತಾರೆಯೇ...? ಖಂಡಿತ ನೋಡಿ ನಗುವರು ಎಂದು ಅನುಮಾನಿಸಿ ಆ ಪೋಟೋಗಳನ್ನು ಅಲ್ಲೇ ಡಿಲೀಟ್ ಮಾಡಿಬಿಟ್ಟೆ. ಸ್ಥಳ ಯಾವುದಾದರೇನು.. ರೂಪ ಅದೆಯಲ್ಲವೇ..? ಆದರೂ ಸಹ ಚನ್ನಾಗಿ ಕಾಣಲೇ ಬೇಕು ಎನ್ನುವ ಛಲ ಇದೆಯಲ್ಲ ಅದು ನನ್ನಲ್ಲಿ ಶತಾಯು ಗತಾಯುವಾಗಿ ನಡೆಯುತ್ತಲೇ ಇತ್ತು...

ಇವತ್ತು ಇಷ್ಟೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಕ್ಕೆ ಒಂದು ಕಾರಣವೂ ಇದೆ. ಅಮ್ಮ ಒಂದು ವಾರದ ಹಿಂದೆ ನನಗೆ ಗೊತ್ತಿಲ್ಲದೆ ನನಗೆ ಹೆಣ್ಣು ನೋಡುತ್ತಿದ್ದರು. ನನಗೆ ಈ ವಿಷಯ ಗೊತ್ತಾಗುವ ವೇಳೆಗಾಗಲೇ ನನ್ನ ಅತಿ ಕೆಟ್ಟದಾದ ಫೋಟೋವೊಂದನ್ನು ಹುಡುಗಿಯ ಕಡೆಯವರಿಗೆ ಕಳುಹಿಸಿಕೊಟ್ಟಿದ್ದಳು. ಅಂತಹ ಕೆಟ್ಟ ಪೋಟೋ ಕಳುಹಿಸಿದ ವಿಷಯ ಗೊತ್ತಾದ ಕೂಡಲೇ ನಾನು ಕೆಂಡಮಂಡಲವಾದೆ. ಅಂತಹ ಪೋಟೋ ಯಾವ್ ಹುಡುಗಿ ತಾನೆ ಒಪ್ಕೋತಾಳೆ ಹೇಳಿ... ಒಂದು ಆಂಗಲ್ ನಲ್ಲಿ ಹಳೆಯ ಬ್ಲಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಾಗಪ್ಪನಂತೆ ಕ್ರೂರ ದೃಷ್ಠಿ ತೋರಿಸಿದ್ದೆ. ಇನ್ನೊಂದು ಕಡೆಯಿಂದ ನೋಡಿದರೆ ಥೇಟ್ ವಜ್ರುಮುನಿಯ ಖಳ ನೋಟ.. ಹುಡುಗ ಚಾಕೊಲೇಟ್ ಹೀರೋ ತರಹ ಇರಬೇಕು ಎಂದು ಬಯಸುವ ಹುಡುಗಿಯರು ಯಾರು ತಾನೆ ಇಂತಹ ಫೋಟೋ ಒಪ್ಕೋತಾರೆ ಹೇಳಿ... ಅಮ್ಮ ಆರಿಸಿ ಕಳುಹಿಸಿ ಈ ಫೋಟೋದಿಂದಲೇ ಈ ಸಂಬಂದ ಮುರಿದು ಬೀಳುವುದು ಗ್ಯಾರಂಟಿಯಾಗಿತ್ತು.. ಹುಡುಗಿ ಕಡೆಯವರನ್ನು ನೋಡಿ ಎಂತಹ ಫೋಟೋ ಕಳುಹಿಸಿದ್ದರು ಗೊತ್ತಾ...? ಹುಡುಗಿ ಅಪ್ಸರೆ. ಕೈ ತೊಳೆದುಕೊಂಡು ಮುಟ್ಟುವ ಹಾಗಿದ್ದಳು.. ಅವಳ ಜೊತೆ ನನ್ನನ್ನು ಹೋಲಿಸಿಕೊಂಡರೆ ಅವರು ನನ್ನನ್ನು ಮುಟ್ಟಿ ಕೈ ತೊಳೆದುಕೊಳ್ಳಬೇಕು ಬಿಡಿ.

ಅವಳ ಆ ಸುಂದರ ರೂಪ ನೋಡಿ ನಾನು ಕನಸಿನ ಲೋಕದಲ್ಲಿ ವಿಹರಿಸಲಾರಂಭಿಸಿದೆ. ಗುಲಾಬಿ ಕೆನ್ನೆಗಳು, ಸಾಫ್ಟ್ ಆಗಿ ಕಾಣುತ್ತಿದ್ದ ಆ ನಾಸಿಕ, ಗಾಳಿಗೆ ಉಯ್ಯಾಲೆಯಾಡುತ್ತಿರುವ ಆ ಮುಂಗುರುಳುಗಳು, ಜೇನಿನ ಅಧರಗಳು, ಅಬ್ಬಾ....!! ರವಿವರ್ಮನ ಕಲಾ ಪ್ರಪಂಚವೇ ಅದರಲ್ಲಿ ಅಡಗಿತ್ತು. ಮೊನಾಲಿಸಾಳ ನಗು ಸಹ ಈ ಪೋಟೋ ಮುಂದೆ ಕಳಪೆಯಂತೆ ಕಂಡಿತು. ಅಂತಹ ಗಂಧರ್ವ ಕನ್ಯೆಗೆ ನನ್ನ ಕೆಟ್ಟ ಚಿತ್ರ ಪಟ ಕಳುಹಿಸಿದರೆ ನನಗೆ ಹೇಗಾಗುವುದಿಲ್ಲ ಹೇಳಿ...

ಒಂದು ವಾರದ ನಂತರ ಹುಡುಗಿ ನೋಡುವ ಶಾಸ್ತ್ರ ನಡೆಯಿತು. ಹುಡುಗಿ ಘಮ ಘಮಿಸುವ ಉಪ್ಪಿಟ್ಟಿನೊಂದಿಗೆ ಬಂದಳು. ಫೋಟೋದಲ್ಲಿ ನೋಡಿದ ಹಾಗೆಯೇ ಹುಡುಗಿಯು ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಅವಳನ್ನು ನೋಡುತ್ತಿದ್ದ ಹಾಗೆ ಅಮ್ಮ ಇವರಿಗೆ ಕಳುಹಿಸಿದ್ದ ನನ್ನ ಕೆಟ್ಟ ಫೋಟೋ ನೆನಪಿಗೆ ಬಂತು. ಇಂತಹ ಅಪ್ಸರೆ ನನ್ನನ್ನು ಒಪ್ಪಲು ಸಾಧ್ಯವೇ..ಸಿಟ್ಟಿನಿಂದ ಅಮ್ಮನ ಕಡೆಯೊಮ್ಮೆ ನೋಡಿದೆ. ಅಮ್ಮ ಆ ತರಹದ ಪೋಟೋ ಕಳುಹಿಸಿದ್ದರಿಂದ ನನ್ನ ಪಾಲಿಗೆ ವಿಲನ್ ನಂತೆ ಕಾಣುತ್ತಿದ್ದಳು. ಒಂದು ರೀತಿ ಹಳೆ ಸಿನಿಮಾದ ಘಟವಾಣಿ ಪಾತ್ರಧಾರಿ ಉಮಾ ಶಿವಕುಮಾರಿಯಂತೆ ಹೊಸ ಸೀರೆ ಧರಿಸಿ ಕುಳಿತ್ತಿದ್ದಳು. ಮತ್ತೊಮ್ಮೆ ಹುಡುಗಿಯನ್ನು ನೋಡಿದೆ ಅದೇನು ನಯ... ಅದೇನು ನಾಜೂಕು... ನಾಚಿಕೆಯ ಆಭರಣವನ್ನು ಧರಿಸಿ, ರೇಷ್ಮೆಯಂತೆ ಹೊಳೆಯುವ ಮೈ ಬಣ್ಣದಿಂದ ಕಣ್ಣು ಕುಕ್ಕುವಂತೆ ಕುಳಿತ್ತಿದ್ದಳು.

ಅಷ್ಟರಲ್ಲಿ ಹುಡುಗಿಯ ತಂದೆ ಮೌನ ಮುರಿದರು

"ನಮ್ ಹುಡುಗಿ ಮಾನಸಗೆ ನೀವು ಕಳುಹಿಸಿದ ಫೋಟೋ ತುಂಬಾ ಹಿಡಿಸಿದೆ. ಸಿನಿಮಾ ಹೀರೋ ತರ ಇದ್ದಾರೆ ಅಂತ ಅವಳು ತನ್ನ ಗೆಳತಿಯರ ಹತ್ತಿರ ಹೇಳ್ಕೊಳ್ತಾ ಇದ್ಳು. ಇಷ್ಟು ದಿನ ಎಷ್ಟೊಂದು ಹುಡುಗರನ್ನು ನೋಡಿದ್ವಿ ಯಾವ್ ಹುಡುಗನೂ ಅವಳಿಗೆ ಇಷ್ಟ ಆಗಿರ್ಲಿಲ್ಲ. ನಮ್ ಹುಡುಗಿಗೆ ಹಣ ಆಸ್ತಿ ಮುಖ್ಯವಲ್ಲ ಹುಡುಗ ಚನ್ನಾಗಿದ್ದರೆ ಸಾಕು. ನೀವು ಕಳುಹಿಸಿದ ಫೋಟೋನೇ ನಮ್ಮ ಹುಡುಗಿಗೆ ಮೋಡಿ ಮಾಡಿಬಿಡ್ತು ನೋಡಿ.... ಅದರಂತೆ ಹುಡುಗನು ಸಹ ಹ್ಯಾಂಡ್ ಸಮ್ ಆಗಿದಾನೆ ಬಿಡಿ"

ಅವರು ನಮ್ಮಮ್ಮನ ಕಡೆ ನೋಡಿ ಹೇಳಿದರು. ನನಗೆ ಸಂತೋಷವಾಯಿತು ಅಮ್ಮನ ಕಡೆಗೆ ನೋಡಿದೆ. ಅಮ್ಮ ಪಂಡರಿಬಾಯಿಯಂತೆ ಶಾಂತ ರೂಪವನ್ನು ಧರಿಸಿ ಮುಗುಳ್ನಗೆ ಬೀರಿ ಕುಳಿತ್ತಿದ್ದಳು. ಅಮ್ಮ ಈಗ ನನ್ನ ಕಣ್ಣಿಗೆ ಬದಲಾದ ರೂಪದಲ್ಲಿ ಕಂಡಳು. ಈ ಮನಸ್ಸೇ ಹಾಗೆ ನಾವು ಸಂತೋಷವಾಗಿದ್ದಾಗ ಎಲ್ರೂ ಚೆನ್ನಾಗಿಯೇ ಕಾಣಿಸ್ತಾರೆ. ಇಲ್ಲದಿದ್ದರೆ ವಿಲನ್ ಗಳು. ಅಮ್ಮ ಕಳುಹಿಸಿದ ಈ ನನ್ನ ಕೆಟ್ಟ ಫೋಟೋ ಇನ್ನೊಬ್ಬರ ಮನಸ್ಸು ಕದಿಯುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನಮಗೆ ನಾವು ಯಾವತ್ತೂ ಸುಂದರವಾಗಿ ಕಾಣುವುದಿಲ್ಲ. ಕನ್ನಡಿಯ ಮುಂದೆ ಎಷ್ಟು ಸರಿ ನೋಡಿಕೊಂಡರು ನಾವು ಸುಂದರರು ಅಂತ ಅನ್ನಿಸುವುದಿಲ್ಲ. ಈ ಕಾರಣದಿಂಗಲೇ ಈ ಸೆಲ್ಫಿ ತೆಗೆಯುವ ಹುಚ್ಚು ಎಲ್ಲರಲ್ಲಿಯೂ ಅಂಟಿಕೊಂಡಿರುತ್ತೋ ಏನೋ...ಕ್ಲಿಕ್ಕಿಸುವುದು, ಅಪ್ ಲೋಡ್ ಮಾಡುವುದು, ಗೆಳೆಯರ ಕಮೆಂಟ್ಸ್ ಓದಿ ಖುಷಿ ಪಡುವುದು. ನಾವು ಇನ್ನೊಬ್ಬರನ್ನು ಹೊಗಳಿ ಕಾಮೆಂಟ್ಸ್ ಮಾಡುವುದಕ್ಕಿಂತ ಇನ್ನೊಬ್ಬರಿಂದ ಹೊಗಳಿಸಿಕೊಂಡರೆ ಮಾತ್ರ ನಮಗೆ ತೃಪ್ತಿ ಸಿಗುತ್ತದೆ. ನಾವು ಸುಂದರ ವಾಗಿರುವುದನ್ನು ಸುಂದರ ಎನ್ನುವುದರಲ್ಲಿ ತಪ್ಪೇನಿದೆ ಹೇಳಿ...

ಹೀಗೆ ಯೋಚಿಸುತ್ತಾ ಕುಳಿತ್ತಿರುವಾಗಲೇ ಅಮ್ಮ ಅಪ್ಪ ಎಲ್ಲರೂ ಎದ್ದು ಹುಡುಗಿಯ ಹೊಸ ಮನೆಯನ್ನು ನೋಡಲು ಹೊರಟರು. ಹುಡುಗಿ ಮಾತ್ರ ಇನ್ನೂ ತಲೆತಗ್ಗಿಸಿ ನಾಚಿಕೆಯಿಂದ ಕುಳಿತ್ತಿದ್ದಳು. ಯಾರೂ ಇರಲಿಲ್ಲ. ತಕ್ಷಣ ಅವಳ ಪಕ್ಕ ಹೋಗಿ ಕುಳಿತೆ. ಇನ್ನಷ್ಟು ನಾಚಿಕೊಂಡಳು.
"ನೀವು ಅಪ್ಸರೆಯಂತೆ ಸುಂದರವಾಗಿದ್ದೀರಿ"
ಎನ್ನುತ್ತಾ ಅವಳ ಕೆನ್ನೆಯನ್ನು ಹಿಂಡಿದೆ. ಅವಳು ನಾಚಿ ಇನ್ನೊಂದು ಕೆನ್ನೆ ಕೆಂಪಾಗಿಸಿಕೊಂಡಳು...

" ನಿಮ್ಮಷ್ಟು ಸುಂದರವಿಲ್ಲ ಬಿಡಿ.."

ಎಂದು ಹೇಳುತ್ತಾ ಅವಳು ಇನ್ನೇನು ನನ್ನ ಎದೆಯ ಗೂಡಿನಲ್ಲಿ ಗುಬ್ಬಚ್ಚಿಯಂತೆ ಅವಿತುಕೊಳ್ಳಲು ಮುಂದಾದಳು. ಕೂಡಲೇ ಅವಳ ತಂಗಿ ನಮ್ಮ ಮೊದಲ ಪ್ರೇಮ ಸ್ಪರ್ಶಕ್ಕೆ ಅಡ್ಡಲಾಗಿ ಬಂದಳು...
"ಏನ್ ಭಾವ... ನಿಮ್ ಫೋಟೋ ಅಕ್ಕನಿಗೆ ಎಷ್ಟು ಮೋಡಿ ಮಾಡಿದೆ ಗೊತ್ತಾ... ನಿಮ್ ಫೋಟೋ ನನ್ಹತ್ರ ಇಟ್ಕೊಂಡು ಅಕ್ಕನಿಗೆ ಎಷ್ಟು ಆಟ ಆಡಿಸಿದ್ದೀನಿ ಗೊತ್ತಾ.?
ಎನ್ನುತ್ತಾ ನನ್ನ ಫೋಟೋ ಕೈಯಲ್ಲಿ ಹಿಡಿದು ಮತ್ತೆ ತನ್ನಕ್ಕನಿಗೆ ಸತಾಯಿಸಲು ಮುಂದಾದಳು.
ಮಾನಸ ಮಾತ್ರ ತಂಗಿಯ ಮಾತಿಗೆ ಉತ್ತರಿಸದೇ ನಾಚಿಕೆಯಿಂದ ಮೌನವಾಗಿ ಕುಳಿತ್ತಿದ್ದಳು. ನಾನು ಅಂದುಕೊಂಡಿದ್ದ ಆ ಕೆಟ್ಟ ಫೋಟೋ ಈ ತರಹದ ಮೋಡಿ ಮಾಡಿದ್ದು ನೋಡಿ ನಾನು ತುಟಿಯಂಚಿನಲ್ಲೇ ನಕ್ಕು ಸುಮ್ಮನಾದೆ. ಅವತ್ತೇ ನನಗೂ ಗೊತ್ತಾಗಿದ್ದು. ನಾವು ಸಹ ರೂಪ ಲಾವಣ್ಯದಲ್ಲಿ ಒಂದು ಕೈ ಮೇಲೆನೇ ಇದ್ದೕವಿ ಅಂತ. ನನಗೆ ಮಾತ್ರ ನನಗಿಂತ ಸುಂದರ ಹುಡುಗಿ ಸಿಕ್ಕಳೆಂಬ ಸಂತಸ ಇತ್ತು. ಅವಳು ನನ್ನ ಕಡೆ ನೋಡುತ್ತಿದ್ದ ಆ ಕಳ್ಳ ನೋಟ ಎದೆಯೊಳಗೆ ಇನ್ನಷ್ಟು ಕಚಗುಳಿಯನ್ನು ಇಟ್ಟಿತ್ತು.....
- ಪ್ರಕಾಶ್ ಎನ್ ಜಿಂಗಾಡೆ

No comments:

Post a Comment