Wednesday 17 August 2016

huruli

 ಚಿತ್ರದುರ್ಗದಲ್ಲಿ ಬಿ.ಎಡ್ ಓದುತ್ತಿದ್ದ ಸಮಯ . ಅಲ್ಲಿ ಹಾಸ್ಟಲ್ ನಲ್ಲಿ ಇದ್ದಾಗ ವಿಧ ವಿಧವಾದ ಊಟವೂ ಸಿಗುತ್ತಿತ್ತು. ಅಂದು ಮೈದಾನದಲ್ಲಿ ಸ್ವಲ್ಪ ಹೆಚ್ಚಾಗಿಯೇ ಆಟವಾಡಿದ್ದರಿಂದ ತುಂಬಾ ಹಸಿವಾಗಿತ್ತು. ಹಾಸ್ಟೆಲ್ ನ ಪಾಕಶಾಲೆಯಲ್ಲಿ ಆರಾಮಾಗಿ ಊಟಮಾಡೋಣವೆಂದು ಕುಳಿತುಕೊಂಡೆ . ಬಿಸಿ ಬಿಸಿಯಾದ ಹುರುಳಿ ಕಟ್ಟಿನ ಸಾರಿಗೆ ಮುದ್ದೆ ತಯಾರಾಗಿತ್ತು. ಇನ್ನೇನು ನುಂಗೋಣವೆಂದು ಮುದ್ದೆಯನ್ನು ಮುರಿದುಕೊಂಡೆ, ಎಲ್ಲಿದ್ದನೋ ಏನೋ ಆ ಪಾಪಿ .... ನನ್ನ ಸ್ನೇಹಿತ  ಮಾದೇವ ಮಿಂಚಿನಂತೆ ನನ್ನ ಮುಂದೆ ವಕ್ಕರಿಸಿದ . ನನ್ನ ಊಟದ ತಟ್ಟೆಗೆ ಪಿಳಿ ಪಿಳಿ ಕಣ್ಣುಬಿಡುತ್ತಾ ಏನೋ ತಿನ್ನಬಾರದ್ದನ್ನು ತಿನ್ನುತ್ತಿದ್ದೆನೆ ಎಂಬಂತೆ ಗುರಾಯಿಸಿ ನೋಡತೊಡಗಿದ.

"ಎಂಥಾ ಮಾರಾಯಾ... ಈ ಹುರುಳಿ ಕಾಳಿನ ಸಾರು .... !!! ನಮ್ಮ ಕಡೆ ಇದನ್ನು ದನ ಕರುಗಳಿಗೆ ಹಾಕುವುದುಂಟು ಇದನ್ನು ತಿನ್ನಲು ಕುಳಿತಿರುವೆಯಲ್ಲಾ... ? "

ಆ ಪಾಪಿ ನಗುತ್ತಲೇ ಈ ಮಾತನ್ನು ಹೇಳಿದ. ಮೊದಲೇ ಭಯಂಕರವಾಗಿ ಹಸಿದಿದ್ದ ನನಗೆ ಇವನ ಮಾತನ್ನು ಕೇಳಿ ಹೇಗಾಗಿರಬೇಡ ...? ಮನದಲ್ಲೇ ಊಟಮಾಡಬೇಕೋ ಬೇಡವೋ ಎಂಬ ಅನುಮಾನ...!!! ಅವನ ಮಾತನ್ನು ಧಿಕ್ಕರಿಸಿ ಊಟಕ್ಕೆ ಕುಳಿತುಕೊಂಡರೆ. ಆತನ ದೃಷ್ಟಿಯಲ್ಲಿ ನಾನು ಪಶುವಿಗೆ ಸಮಾನನಾಗಿ ಬಿಡುತ್ತಿದ್ದೆ. ತಿನ್ನದೇ ಇದ್ದರೆ ನನ್ನ ಹೊಟ್ಟೆ ಪೂಜೆ ಹೇಗೆ ಮಾಡಿಕೊಳ್ಳಬೇಕೆಂಬ ಚಿಂತೆ. ಏನು ಮಾಡಬೇಕೆಂದು ತಿಳಿಯದಂತಾಯಿತು. ನನ್ನ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿದ ಆ ಪಾಪಿಗೆ ಕೊಂದು ಹಾಕುವಷ್ಟು ಕೋಪ ಬಂದಿತು.....

ಹುರುಳಿಕಾಳು ನಿಜವಾಗಿಯೂ ದನ ಕರುಗಳಿಗೆ ಹಾಕುವಷ್ಟು ನಿಷ್ಪ್ರಯೋಜಕವೇ ....?  ಮನುಷ್ಯ ತಿಂದರೆ ಏನಾದರೂ ತೊಂದರೆ ಯಾಗುತ್ತದೆಯೇ ಹೀಗೆ ಹಲವು ಪ್ರಶ್ನೆಗಳು ಮೂಡಿದವು.  ಆ ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸಿದೆ.

ಹುರುಳಿಯನ್ನು ಇಂಗ್ಲಿಷಿನಲ್ಲಿ "horse gram (ಹಾರ್ಸ್ ಗ್ರ್ಯಾಮ್)" ಎಂದು ಕರೆಯುತ್ತಾರೆ. ವಿದೇಶಗಳಲ್ಲಿ ಇದನ್ನು ಕುದುರೆಗೆ ತಿನ್ನಿಸಲು ಬಳಸುತ್ತಾರಂತೆ. ನಮ್ಮ ದೇಶದಲ್ಲಿ ಹುರುಳಿಯನ್ನು "ಬಡವರ ಆಹಾರ" ವೆಂದು ಕರೆಯುತ್ತಾರೆ. ಕೆಲವು ಕಡೆಗಳಲ್ಲಿ ಇದನ್ನು ದನ ಕರುಳಿಗೂ ಹಾಕುವುದುಂಟು. ಬಡವರು ಇದನ್ನು ಹೆಚ್ಚಾಗಿ ಬಳಸುವುದರಿಂದಲೋ ಅಥವಾ ಹುರುಳಿಯ ಬೆಲೆ ಕಡಿಮೆ ಇರುವುದರಿಂದಲೋ ಈ ಹೆಸರು ಬಂದಿರಬೇಕು.  ಹೀಗೆ ಹುರುಳಿಗೆ " ಬಡವರ ಆಹಾರ" ಎಂದು ಹಣೆ ಪಟ್ಟಿ ಕಟ್ಟುವುದು  ನನಗೆನೋ ಒಪ್ಪಿಕೊಳ್ಳಲು ಆಗುತ್ತಿಲ್ಲ. ಆಹಾರದಲ್ಲಿ ಇದು ಬಡವರದು ಇದು ಶ್ರೀಮಂತರದು ಎಂದು ವರ್ಗೀಕರಿಸುವುದೇ ತಪ್ಪು. ಆಹಾರ ಎಲ್ಲರ ಸ್ವತ್ತೂ ಆಗಿದೆ. 

ಒಮ್ಮೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಸುತ್ತೂರು ಮಠಕ್ಕೆ ಹೋಗಿದ್ದರಂತೆ.  ಸುತ್ತೂರು ಮಠದಲ್ಲಿ ಭಕ್ತರಿಗಾಗಿ ಹಂಡೆಗಟ್ಟಲೆ ಹುರುಳಿಯ ಕಟ್ಟನ್ನು ಬೇಯಿಸುತ್ತಿದ್ದರಂತೆ. ಅಂದು ಮಹಾರಾಜರು ಹುರುಳಿಯ ಕಟ್ಟನ್ನು ಮೊದಲ ಬಾರಿ ಸವಿದರಂತೆ, ಯಾವಾಗ ಮಹಾರಾಜರು ಹುರುಳಿಯ ಸಾರನ್ನು ಸವಿದರೋ ಅಂದಿನಿಂದ ಹುರುಳಿಯ ಅಸಾಧಾರಣ ರುಚಿಗೆ ಮಾರುಹೋಗಿಬಿಟ್ಟರು. ಮಠದ ಅಧಿಕಾರಿಗಳಿಗೆ ಪ್ರತಿದಿನವೂ ಹುರುಳಿಯ ಕಟ್ಟನ್ನು ರಾಜನ ಆಸ್ಥಾನಕ್ಕೆ ತಂದು ಕೊಡಬೇಕೆಂದು ಆದೇಶ ನೀಡಿದರಂತೆ. ಹುರುಳಿಯ ಅಸಾಧಾರಣ ರುಚಿಯಿಂದಲೋ ಅಥವಾ ಹುರುಳಿಯ ಮಹಿಮೆಯಿಂದಲೋ ಏನೋ ಮಹಾರಾಜರು ಸುತ್ತೂರು ಮಠಕ್ಕೆ ಸಾಕಷ್ಟು ಭೂಮಿಯನ್ನು ಕಾಣಿಕೆಯನ್ನಾಗಿ ನೀಡಿದರಂತೆ. ಹೀಗೆ ಮಹಾರಾಜರಿಗೂ ಮೋಡಿ ಮಾಡಿದ್ದ ಈ ಹುರುಳಿಯನ್ನು ಬಡವರ ಆಹಾರ ಎಂದು ಕರೆಯಲು ಸಾಧ್ಯವೇ.....?


ಬಹುಶಃ ೭ನೇ ಶತಮಾನದಲ್ಲಿ, ಮುಹಮ್ಮದ್ ಬಿನ್ ಕಾಸಿಮ್ ಆಕ್ರಮಣ ಹಾಗೊ ಮತಾಂತರ ಶುರು ಮಾಡಿದಾಗೆ, ಇವರ ವಲಸೆ ಶುರುವಾಗಿರಬಹುದು ಎಂದುಕೊಂಡೆ.

No comments:

Post a Comment