Monday, 22 August 2016

ಹುರುಳಿಯ ಪುರಾಣ

ಹುರುಳಿಯ ಪುರಾಣ...


ಚಿತ್ರದುರ್ಗದಲ್ಲಿ ಬಿ.ಎಡ್ ಓದುತ್ತಿದ್ದ ಸಮಯ . ಅಲ್ಲಿ ಹಾಸ್ಟಲ್ ನಲ್ಲಿ ಇದ್ದಾಗ ವಿಧ ವಿಧವಾದ ಊಟವೂ ಸಿಗುತ್ತಿತ್ತು. ಅಂದು ಮೈದಾನದಲ್ಲಿ ಸ್ವಲ್ಪ ಹೆಚ್ಚಾಗಿಯೇ ಆಟವಾಡಿದ್ದರಿಂದ ತುಂಬಾ ಹಸಿವಾಗಿತ್ತು. ಹಾಸ್ಟೆಲ್ ನ ಪಾಕಶಾಲೆಯಲ್ಲಿ ಆರಾಮಾಗಿ ಊಟಮಾಡೋಣವೆಂದು ಕುಳಿತುಕೊಂಡೆ . ಬಿಸಿ ಬಿಸಿಯಾದ ಹುರುಳಿ ಕಟ್ಟಿನ ಸಾರಿಗೆ ಮುದ್ದೆ ತಯಾರಾಗಿತ್ತು. ಇನ್ನೇನು ನುಂಗೋಣವೆಂದು ಮುದ್ದೆಯನ್ನು ಮುರಿದುಕೊಂಡೆ, ಎಲ್ಲಿದ್ದನೋ ಏನೋ ಆ ಪಾಪಿ .... ನನ್ನ ಸ್ನೇಹಿತ ಮಿಂಚಿನಂತೆ ನನ್ನ ಮುಂದೆ ವಕ್ಕರಿಸಿದ . ನನ್ನ ಊಟದ ತಟ್ಟೆಗೆ ಪಿಳಿ ಪಿಳಿ ಕಣ್ಣುಬಿಡುತ್ತಾ ಏನೋ ತಿನ್ನಬಾರದ್ದನ್ನು ತಿನ್ನುತ್ತಿದ್ದೆನೆ ಎಂಬಂತೆ ಗುರಾಯಿಸಿ ನೋಡತೊಡಗಿದ.
"ಎಂಥಾ ಮಾರಾಯಾ... ಈ ಹುರುಳಿ ಕಾಳಿನ ಸಾರು .... !!! ನಮ್ಮ ಕಡೆ ಇದನ್ನು ದನ ಕರುಗಳಿಗೆ ಹಾಕುವುದುಂಟು ಇದನ್ನು ತಿನ್ನಲು ಕುಳಿತಿರುವೆಯಲ್ಲಾ... ? "

ಆ ಪಾಪಿ ನಗುತ್ತಲೇ ಈ ಮಾತನ್ನು ಹೇಳಿದ. ಮೊದಲೇ ಭಯಂಕರವಾಗಿ ಹಸಿದಿದ್ದ ನನಗೆ ಇವನ ಮಾತನ್ನು ಕೇಳಿ ಹೇಗಾಗಿರಬೇಡ ...? ಊಟಮಾಡಬೇಕೋ ಬೇಡವೋ ಎಂಬ ಅನುಮಾನ...!!! ಅವನ ಮಾತನ್ನು ಧಿಕ್ಕರಿಸಿ ಊಟಕ್ಕೆ ಕುಳಿತುಕೊಂಡರೆ. ಆತನ ದೃಷ್ಟಿಯಲ್ಲಿ ನಾನು ಪಶುವಿಗೆ ಸಮಾನನಾಗಿ ಬಿಡುತ್ತಿದ್ದೆ. ತಿನ್ನದೇ ಇದ್ದರೆ ನನ್ನ ಹೊಟ್ಟೆ ಪೂಜೆ ಹೇಗೆ ಮಾಡಿಕೊಳ್ಳಬೇಕೆಂಬ ಚಿಂತೆ. ಏನು ಮಾಡಬೇಕೆಂದು ತಿಳಿಯದಂತಾಯಿತು. ನನ್ನ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿದ ಆ ಪಾಪಿಗೆ ಕೊಂದು ಹಾಕುವಷ್ಟು ಕೋಪ ಬಂದಿತು.....

ಹುರುಳಿಕಾಳು ನಿಜವಾಗಿಯೂ ದನ ಕರುಗಳಿಗೆ ಹಾಕುವಷ್ಟು ನಿಷ್ಪ್ರಯೋಜಕವೇ ....? ಮನುಷ್ಯ ತಿಂದರೆ ಏನಾದರೂ ತೊಂದರೆ ಯಾಗುತ್ತದೆಯೇ ಹೀಗೆ ಹಲವು ಪ್ರಶ್ನೆಗಳು ಮೂಡಿದವು. ಆ ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸಿದೆ.
ಹುರುಳಿಯನ್ನು ಇಂಗ್ಲಿಷಿನಲ್ಲಿ "horse gram (ಹಾರ್ಸ್ ಗ್ರ್ಯಾಮ್)" ಎಂದು ಕರೆಯುತ್ತಾರೆ. ವಿದೇಶಗಳಲ್ಲಿ ಇದನ್ನು ಕುದುರೆಗೆ ತಿನ್ನಿಸಲು ಬಳಸುತ್ತಾರಂತೆ. ನಮ್ಮ ದೇಶದಲ್ಲಿ ಹುರುಳಿಯನ್ನು "ಬಡವರ ಆಹಾರ" ವೆಂದು ಕರೆಯುತ್ತಾರೆ. ಕೆಲವು ಕಡೆಗಳಲ್ಲಿ ಇದನ್ನು ದನ ಕರುಳಿಗೂ ಹಾಕುವುದುಂಟು. ಬಡವರು ಇದನ್ನು ಹೆಚ್ಚಾಗಿ ಬಳಸುವುದರಿಂದಲೋ ಅಥವಾ ಹುರುಳಿಯ ಬೆಲೆ ಕಡಿಮೆ ಇರುವುದರಿಂದಲೋ ಈ ಹೆಸರು ಬಂದಿರಬೇಕು. ಹೀಗೆ ಹುರುಳಿಗೆ " ಬಡವರ ಆಹಾರ" ಎಂದು ಹಣೆ ಪಟ್ಟಿ ಕಟ್ಟುವುದು ನನಗೆನೋ ಒಪ್ಪಿಕೊಳ್ಳಲು ಆಗುತ್ತಿಲ್ಲ. ಆಹಾರದಲ್ಲಿ ಇದು ಬಡವರದು ಇದು ಶ್ರೀಮಂತರದು ಎಂದು ವರ್ಗೀಕರಿಸುವುದೇ ತಪ್ಪು. ಆಹಾರ ಎಲ್ಲರ ಸ್ವತ್ತೂ ಆಗಿದೆ.
ಒಮ್ಮೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಸುತ್ತೂರು ಮಠಕ್ಕೆ ಹೋಗಿದ್ದರಂತೆ. ಸುತ್ತೂರು ಮಠದಲ್ಲಿ ಭಕ್ತರಿಗಾಗಿ ಹಂಡೆಗಟ್ಟಲೆ ಹುರುಳಿಯ ಕಟ್ಟನ್ನು ಬೇಯಿಸುತ್ತಿದ್ದರಂತೆ. ಅಂದು ಮಹಾರಾಜರು ಹುರುಳಿಯ ಕಟ್ಟನ್ನು ಮೊದಲ ಬಾರಿ ಸವಿದರಂತೆ, ಯಾವಾಗ ಮಹಾರಾಜರು ಹುರುಳಿಯ ಸಾರನ್ನು ಸವಿದರೋ ಅಂದಿನಿಂದ ಹುರುಳಿಯ ಅಸಾಧಾರಣ ರುಚಿಗೆ ಮಾರುಹೋಗಿಬಿಟ್ಟರು. ಮಠದ ಅಧಿಕಾರಿಗಳಿಗೆ ಪ್ರತಿದಿನವೂ ಹುರುಳಿಯ ಕಟ್ಟನ್ನು ರಾಜನ ಆಸ್ಥಾನಕ್ಕೆ ತಂದು ಕೊಡಬೇಕೆಂದು ಆದೇಶ ನೀಡಿದರಂತೆ. ಹುರುಳಿಯ ಅಸಾಧಾರಣ ರುಚಿಯಿಂದಲೋ ಅಥವಾ ಹುರುಳಿಯ ಮಹಿಮೆಯಿಂದಲೋ ಏನೋ ಮಹಾರಾಜರು ಸುತ್ತೂರು ಮಠಕ್ಕೆ ಸಾಕಷ್ಟು ಭೂಮಿಯನ್ನು ಕಾಣಿಕೆಯನ್ನಾಗಿ ನೀಡಿದರಂತೆ. ಹೀಗೆ ಮಹಾರಾಜರಿಗೂ ಮೋಡಿ ಮಾಡಿದ್ದ ಈ ಹುರುಳಿಯನ್ನು ಬಡವರ ಆಹಾರ ಎಂದು ಕರೆಯಲು ಸಾಧ್ಯವೇ.....?

ಕರ್ನಾಟಕದಲ್ಲಿ ಭಾವಸಾರ ಕ್ಷತ್ರಿಯ ಎಂಬ ಜನಾಂಗವಿದೆ. ಒಮ್ಮೆ ನಾನು ಭಾವಸಾರ ಸ್ನೇಹಿತನೊಬ್ಬನ ಮನೆಗೆ ಊಟಕ್ಕೆಂದು ಹೋಗಿದ್ದೆ. ಭಾವಸಾರರು ರುಚಿಕರವಾದ ಊಟ ತಯಾರಿಸುವುದರಲ್ಲಿ ಸಿದ್ಧಹಸ್ತರು. ಭಾವಸಾರರು ಮೂಲತಃ ಸೌರಾಷ್ಟ್ರದವರು. ಹನ್ನೆರಡನೇ ಶತಮಾನದಲ್ಲಿ ಮೊಘಲರ ಮತಾಂತರಕ್ಕೆ ಹೆದರಿ ಸೌರಾಷ್ಟ್ರದಿಂದ ಚದುರಿ ವಲಸೆ ಹೋಗಲಾರಂಭಿಸಿದರು. ಮತಾಂತರದ ಒತ್ತಡಗಳು ಹೆಚ್ಚಾದಾಗ ಕೆಲವು ಭಾವಸಾರ ಪಂಗಡಗಳು ದಕ್ಷಿಣ ಭಾರತದತ್ತ ವಲಸೆ ಬಂದರು. ಹಾಗೆ ಬರುವಾಗ ಭಾವಸಾರರು ಉತ್ತರದ ಆಹಾರ ಪದ್ಧತಿಯ ಶೈಲಿಯನ್ನು ಕರ್ನಾಟಕಕ್ಕೂ ತಂದರು. ಕರ್ನಾಟಕದಲ್ಲಿಯ ಹುರುಳಿಯು ಭಾವಸಾರರಿಗೆ ಸ್ವಲ್ಪ ಹೆಚ್ಚಾಗಿಯೇ ರುಚಿಸಿದಂತೆ ಕಂಡಿರಬೇಕು. ಮೊಗಲರ ಮಾಂಸಹಾರಿ ಭಕ್ಷ್ಯವಾದ ಖೀಮಾ ಶೈಲಿಯನ್ನು ಹುರುಳಿಗೆ ಅಳವಡಿಸಿದರು. ಮೊಳಕೆ ಕಟ್ಟಿದ ಹುರುಳಿಗೆ ಖೀಮಾಗೆ ಹಾಕುವ ಪದಾರ್ಥಗಳನ್ನು ಹಾಕಿ ಅರೆದು ಹುರುಳಿಯ ಉಂಡೆಗಳನ್ನು ತಯಾರಿಸಿದರು.
ಹೀಗೆ ತಯಾರಿಸಿದ ಉಂಡೆಗಳನ್ನು ಹಬೆಯಲ್ಲಿ ಬೇಯಿಸಿ ಒಗ್ಗರಣೆ ಹಾಕುತ್ತಾರೆ. ಈ ಉರುಳಿಯ ಉಂಡೆಗಳು ಮಾಂಸಹಾರಿ ಖೀಮಾ ಉಂಡೆಗಳಿಗಿಂತಲೂ ಸ್ವಾಧಿಷ್ಟವಾದುದು ಮತ್ತು ಆರೋಗ್ಯಕರವಾದುದೆಂದು ಹೇಳುತ್ತಾರೆ. ಕರುನಾಡಿನಲ್ಲಿ ಬೆಳೆದ ಈ ಹುರುಳಿಯು ಭಾವಸಾರರಿಗೆ ಮೋಡಿ ಮಾಡಿತ್ತೆಂದರೆ ಹುರುಳಿಯು ರುಚಿಕರವಾದ ಆಹಾರವೆಂದು ನೀವು ಒಪ್ಪಲೇಬೇಕು.....

ನೀವು ಹುರುಳಿಯನ್ನು ಉಪಯುಕ್ತ ಆಹಾರ ಎಂಬುದನ್ನು ಒಪ್ಪಿಕೊಳ್ಳಿ ಇಲ್ಲವೇ ಬಿಡಿ. ಅವರವರ ಭಾವ ಅವರಿಗೆ. ಬಡವರ ಆಹಾರವಾದ ಹುರುಳಿಯ ಬಗ್ಗೆ ಹೀಗೆ ಏನೇನೋ ಹೇಳಿ ನಮಗೆ ತಿನ್ನುವಂತೆ ಪ್ರೇರೇಪಿಸುತ್ತಿರಬಹುದೆಂದು ನೀವು ನನ್ನನ್ನು ದೂಷಿಸುತ್ತಿರಬಹುದು. ಶ್ರೀಮಂತರಾದ ನಿಮಗೆ ಹುರುಳಿಯನ್ನು ತಿನ್ನಿ ಎಂದು ಒತ್ತಡವೇನೂ ಹಾಕುತ್ತಿಲ್ಲ. ಆದರೆ ಒಂದು ಸಾರಿ ಪ್ರಯೋಗಿಸಿ ನೋಡಿ, ಆಗ ಮಾತ್ರವೇ ಹುರುಳಿಯ ಮಹಿಮೆ ನಿಮಗೂ ಅರ್ಥವಾಗುತ್ತದೆ. ಇಲ್ಲದಿದ್ದರೆ ನನ್ನ ಮಾತುಗಳು ನಿಮಗೆ ಗೌಣ ಎಂದೆನಿಸುತ್ತದೆ. ಅಂಥ ಮೈಸೂರಿನ ಮಹಾರಾಜರಾದ ಮಮ್ಮುಡಿ ಕೃಷ್ಣರಾಜರೇ ಅರಮನೆಯ ಭಕ್ಷ್ಯ ಭೋಜನವನ್ನು ಮರೆತು ಹುರುಳಿಯ ಸ್ವಾದಿಷ್ಟಕ್ಕೆ ಮಾರುಹೋದರೆಂದರೆ ಹುರುಳಿಯು ರುಚಿಕರವಾದ ಆಹಾರವೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಹುರುಳಿಯ ರುಚಿ ಎಷ್ಟು ಮೋಡಿ ಮಾಡಿತ್ತು ಎಂದರೆ ಆಸ್ಥಾನದ ಕಲಾವಿದರು ಮತ್ತು ವಿಧ್ವಾಂಸರೊಂದಿಗೆ ಚರ್ಚಿಸುವಾಗಲೂ ಹುರುಳಿಯ ಹಪ್ಪಳದ ರುಚಿಯನ್ನು ಸವಿಯುತ್ತಿದ್ದರಂತೆ. ಮಹಾರಾಜರು ಆಸ್ಥಾನದ ಕಲಾವಿದರೊಂದಿಗೆ ಹರಟೆ ಮಾಡುವ ಹವ್ಯಾಸವನ್ನು ಬೆಳಸಿಕೊಂಡಿದ್ದರು. ಹೀಗೆ ಹರಟೆ ಹೊಡೆಯುವ ಸಂದರ್ಭದಲ್ಲಿ ಮಹಾರಾಜರ ಕುರ್ಚಿಯ ಹಿಂದೆಯೇ ಬಾಣಸಿಗನೊಬ್ಬ ಹುರುಳಿ ಹಪ್ಪಳವನ್ನು ಸುಟ್ಟು ಅದಕ್ಕೆ ನವಿರಾಗಿ ತುಪ್ಪವನ್ನು ಸವರಿ ಕೊಡುತ್ತಿದ್ದನಂತೆ...... ಮಹಾರಾಜರಿಗಿದ್ದ ಹುರುಳಿಯ ಈ ಪ್ರೀತಿಯನ್ನು ಪ್ರಖ್ಯಾತ ಸಂಗೀತಗಾರರಾದ ವಾಸುದೇವಾಚಾರ್ಯರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. 

ಇನ್ನು ನಮ್ಮ ಜನಪದ ಸಂಸ್ಕೃತಿಯಲ್ಲಿಯೂ ಸಹ ಹುರುಳಿಯು ಎಲ್ಲರ ಜೀವನದಲ್ಲಿ ಹಾಸು ಹೊಕ್ಕಿದೆ. ಮದ್ಯ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಾಗರ ಪಂಚಮಿಯ ಹಬ್ಬದಲ್ಲಿ ಹುರುಳಿಯಿಂದ ಮಾಡಿದ ಸಿಹಿ ಭಕ್ಷ್ಯಗಳನ್ನು ತಯಾರಿಸುತ್ತಾರೆ. ರೈತ ಹೆಂಗಸರು ಇನ್ನೂ ಪಂಚಮಿ ಹಬ್ಬ ಮೂರ್ನಾಲ್ಕು ದಿನ ಇದೆ ಎನ್ನುವಾಗಲೇ ನೆನಸಿದ ಹುರುಳಿಯನ್ನು ಮಡಕೆಯಲ್ಲಿ ಹಾಕಿ ಬೇಯಿಸಲಾರಂಬಿಸುತ್ತಾರೆ. ಅಡಿಗೆಯಾದ ನಂತರ ಈ ಮಡಕೆಯನ್ನು ಕೆಂಡದ ಮೇಲೆ ಬೇಯಿಸಲು ಬಿಟ್ಟು ಹೊಲಗದ್ದೆಗಳಿಗೆ ತೆರಳುತ್ತಾರೆ. ರಾತ್ರಿ ಅಡುಗೆಯ ನಂತರವೂ ಈ ಹುರುಳಿಯ ಮಡಕೆ ಕೆಂಡದ ಗದ್ದುಗೆಯನ್ನೇರುತ್ತದೆ. ಹೀಗೆ ದಿನ ಪೂರ್ತಿ ಕೆಂಡದಲ್ಲೇ ಬೆಂದ ಈ ಹುರುಳಿಗೆ ಹಬ್ಬದ ದಿನ ಬೆಲ್ಲ ಹಾಲು ತುಪ್ಪ ಮಿಶ್ರಣ ಮಾಡುತ್ತಾರೆ. ಹಬ್ಬದ ದಿನ ಹುರುಳಿಯ ಅದ್ಭುತ ಸಿಹಿ ಭಕ್ಷ್ಯವನ್ನು ಸವಿಯುತ್ತಾರೆ. ನಮ್ಮ ಜನಪದರು ಕಂಡುಕೊಂಡ ಈ ಸಿಹಿ ಭಕ್ಷ್ಯದ ರುಚಿಯು ಆಧುನಿಕವಾಗಿ ತಯಾರಾಗುತ್ತಿರುವ ಇಂದಿನ ಯಾವ ಹಲ್ವದಲ್ಲಿಯೂ ಕಾಣಸಿಗದು.....

ಯಾವ ಪದಾರ್ಥವನ್ನೇ ತೆಗೆದುಕೊಳ್ಳಿ ಅದನ್ನು ಬಳಸುವುದರಲ್ಲೇ ಅದರ ರುಚಿ ಮಹತ್ತ್ವ ಅಡಗಿದೆ. ಪಶುಗಳಿಗೆ ಬಳಸುತ್ತಿದ್ದ ಮುಸುಕಿನ ಜೋಳವನ್ನು ಇಂದು ಕೋಸುಂಬರಿಗೆ. ಅದರ ಎಳಸು ದಿಂಡನ್ನು ಬೇಬಿ ಕಾರ್ನ್ ಮಂಚೂರಿಗಳಿಗೆ ಬಳಸುತ್ತಾರೆ. ಮಸಾಲೆ ಮಿಶ್ರಿತ ಮಾಡಿ ಬೇಯಿಸಿದ ಮುಸುಕಿನ ಕಾಳುಗಳನ್ನು ಜನ ಮುಗಿ ಬಿದ್ದು ತಿನ್ನುವುದನ್ನು ಕಾಣುವುದಿಲ್ಲವೇ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯ ಹೊಲ ಗದ್ದೆಗಳಲ್ಲಿ ಕಣ್ಣ ಮುಂದೆನೇ ರಾಶಿ ರಾಶಿ ತೆನೆ ಬಿದ್ದಿದ್ದರೂ ಅದನ್ನು ನಾವು ಮೂಸಿ ಸಹ ನೋಡುತ್ತಿರಲಿಲ್ಲ. ಆದರೆ ಇಂದು ರಸ್ತೆ ಬದಿಯಲ್ಲಿ ಕೆಂಡದಲ್ಲಿ ಸುಡುತ್ತಿದ್ದ ತೆನೆಯನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ಹುರುಳಿಯ ವಿಷಯವೂ ಹಾಗೆಯೇ ಸರಿಯಾಗಿ ಬಳಸಿದರೆ ಅದೂ ಶ್ರೀಮಂತರ ಆಹಾರವೇ..?
ಹುರುಳಿ ಶ್ರಿಮಂತ ಆಹಾರ ಎನ್ನುವುದಕ್ಕೆ ಹಲವು ಕಾರಣಗಳಿವೆ. ಹುರುಳಿಕಾಳು ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಗಳನ್ನು ಒದಗಿಸುತ್ತದೆ. ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹುರುಳಿ ಕಾಳಿಗೆ ವಿಶೇಷ ಮಹತ್ತವಿದೆ. ಶೀತ ಜ್ವರದಿಂದ ಬಳಲುತ್ತಿರುವವರಿಗೆ ಹುರುಳಿಕಾಳಿನ ಸೂಪ್ ಅತ್ಯುಪಯುಕ್ತ. ಅಸ್ತಮಾ ಇದ್ದವರು ಹುರುಳಿಕಾಳನ್ನು ಉಪಯೋಗಿಸಿದರೆ ಉಸಿರಾಟ ಸುಗಮವಾಗುತ್ತಂತೆ. ಹುರುಳಿಕಾಳು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಾಲ ಕಾಲಕ್ಕೆ ಋತುಚಕ್ರಕ್ಕೆ ಹುರುಳಿಕಾಳಿನ ಉಪಯೋಗ ಉತ್ತಮ. ಮಧುಮೇಹಿ ರೋಗಿಗಳಿಗಂತೂ ಹುರುಳಿಕಾಳು ರಾಮಬಾಣವಿದ್ದಂತೆ. ಚಿಕ್ಕ ಚಿಕ್ಕ ಕಿಡ್ನಿ ಕಲ್ಲುಗಳ ನಿವಾರಣೆಗೆ ಹುರುಳಿಯನ್ನು ಉಪಯೋಗಿಸುವುದುಂಟು. ಇನ್ನು ನಿಮ್ಮ ದೇಹದ ಕೊಬ್ಬನ್ನು ಕರಗಿಸಿ ತೂಕ ಕಡಿಮೆ ಮಾಡಿಕೊಳ್ಳಲೂ ಸಹ ಹುರುಳಿ ಅತ್ಯುತ್ತಮವಾದುದು. ಹುರುಳಿಯು ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುತ್ತದೆ. ಅತಿ ಹೆಚ್ಚಿನ ನಾರಿನಾಂಶ ಮತ್ತು ಕಬ್ಬಿಣಾಂಶ ಹೊಂದಿದ ಹುರುಳಿ ಆರೋಗ್ಯಕ್ಕೂ ಒಳ್ಳೆಯದು...ಈಗ ಹೇಳಿ ಹುರುಳಿ ಬಡವರ ಆಹಾರವೇ ಅಥವಾ ಶ್ರೀಮಂತರ ಆಹಾರವೇ ಎಂದು. ಬೆಲೆಯಲ್ಲಿ ಬಡವರ ಆಹಾರವಾದರೂ ಇದು ಎಲ್ಲರಿಗೂ ಉಪಯೋಗವಾಗುವ ಅತಿ ಶ್ರೀಮಂತ ಆಹಾರ...
ಪಿಜ್ಜಾ, ಬರ್ಗರ್, ಮಂಚೂರಿಯನ್ಸ್ ಗಳು, ನೂಡಲ್ಸ್, ಚೀಸ್, ಕಾಬುಲ್ ಕಡ್ಲೆ, ಶಿಮ್ಲಾ ಮಿರ್ಚಿ, ಮುಂತಾಂತ ವಿದೇಶಿ ಆಹಾರಗಳ ಧಾಳಿಯಿಂದ ಅಪ್ಪಟ ದೇಶಿ ಸೊಗಡಿನ ಹುರುಳಿಯು ತನ್ನ ಮಹತ್ವ ಕಳೆದುಕೊಳ್ಳುತ್ತಿದೆಯೇನೋ ಎನಿಸುತ್ತಿದೆ....

ಹಿಂದೆ ನಮ್ಮೂರಿನಲ್ಲಿ ಸ್ನೇಹಿತನ ಹೋಟಲ್ ಗೆ ಹೋದಾಗ ಆತ ರುಚಿಕರವಾದ ಊಟದ ಆತಿಥ್ಯವನ್ನು ಕೊಟ್ಟ. ನಾನು ನಿಮ್ಮ ಹೋಟಲ್ ನಲ್ಲಿ ರುಚಿಕರವಾದ ಹುರುಳಿಯ ಕಟ್ಟು ಯಾಕೆ ಮಾಡಬಾರದು ಎಂದು ಸಲಹೆ ನೀಡಿದೆ.
"ಜನ ತಿನ್ನಬೇಕಲ್ಲ... ? ಯಾಕೆ ಹೋಟಲ್ ಚನ್ನಾಗಿ ನಡೆಸುವುದು ನಿನಗೆ ಇಷ್ಟವಿಲ್ಲವೇ ..? ಅಂದ.
ಹೋಟೆಲ್ ಗಳು ಎಷ್ಟೇ ಆದರೂ ವ್ಯವಹಾರ ದೃಷ್ಟಿಯಿಂದ ರಚನೆಯಾದಂತವು. ಅಲ್ಲಿ ನಾಲಿಗೆ ರುಚಿ ಮುಖ್ಯವೇ ಹೊರತು ಆರೋಗ್ಯವಲ್ಲ. ಜನ ಬಯಸುವುದನ್ನೇ ಅಲ್ಲಿ ನೀಡಬೇಕು ಎಂದುಕೊಂಡು ನಾನು ಅಷ್ಟಕ್ಕೇ ಸುಮ್ಮನಾದೆ.
ಮೊನ್ನೆ ಮತ್ತೆ ಹಳ್ಳಿಗೆ ಹೋಗಿದ್ದೆ. ಊಟ ಮಾಡಲು ಅದೇ ಹೋಟಲ್ ಗೆ ಹೋದೆ. ಘಮ ಘಮಿಸುವ ಹುರುಳಿ ಕಟ್ಟಿನ ವಾಸನೆ ಮೂಗಿಗೆ ಬಡಿಯಿತು. ಬಿಸಿಯಾದ ಮುದ್ದೆಯೊಂದಿಗೆ ಮೂರು ನಾಲ್ಕು ಪಲ್ಯಗಳನ್ನು ಸೇರಿಸಿ ಬಡಿಸಿದ. ವಾವ್....!!! ರುಚಿ ಅದ್ಭುತವಾಗಿತ್ತು. ನನ್ನಂತೆ ಹುರುಳಿ ಕಟ್ಟನ್ನು ಬಡಿಸಿಕೊಂಡು ಮುದ್ದೆ ಮುರಿಯುತ್ತಿದ್ದ ಹಲವು ಗಿರಾಕಿಗಳನ್ನು ಕಂಡೆ. ಕುದಿಸಿದಷ್ಟು ಅತಿಯಾಗಿ ರುಚಿ ಬಿಟ್ಟುಕೊಳ್ಳುವ ಸಾರು ಎಂದರೆ ಅದು ಹುರುಳಿಯ ಸಾರು ಮಾತ್ರ... ಅದು ನೆನ್ನೆ ಮಾಡಿದ ಸಾರು ಇದ್ದರೆ ಮುಗೀತು.. ಇನ್ನೂ ರುಚಿ ಅದ್ಭುತವಾಗಿ ಬಂದಿರುತ್ತದೆ. ಅಷ್ಟರಲ್ಲಿ ಸ್ನೇಹಿತ ಕಣ್ಣಮುಂದೆ ಪ್ರತ್ಯೆಕ್ಷನಾದ. ಹುರುಳಿಯ ರುಚಿಯನ್ನು ಹೊಗಳುತ್ತಾ ಕುಶಲೋಪರಿಯನ್ನು ವಿಚಾರಿಸಿದೆ. ಡುಮ್ಮಣ್ಣನಾಗಿದ್ದ ನನ್ನ ಸ್ನೇಹಿತ ಸ್ವಲ್ಪ ಕೊಬ್ಬನ್ನೂ ಕರಗಿಸಿದ್ದ.."ಏನೋ ಸುಬ್ಬಾ ಸ್ವಲ್ಪ ತೆಳ್ಳಗಾಗಿ ಬಿಟ್ಟಿದ್ದೀಯಾ...!!!! ಯೋಗ ಏನಾದ್ರೂ ಮಾಡ್ತಿದ್ದಿಯೇನೋ..."
ಎಂದು ಕೇಳಿದೆ...
ಅದಕ್ಕೆ ಆತ
"ಏನಿಲ್ಲ ಕಣ್ಲೆ..... ವಾರಕ್ಕೊಂದು ಸಾರಿಯಾದರು ಮೊಳಕೆ ಕಟ್ಟಿದ ಹುರುಳಿಯ ಆಹಾರವನ್ನು ತಿಂತೀನಿ.... ಎಲ್ಲಾ ಹುರುಳಿಯ ಮಹಿಮೆ'
ಅಂದ
ಪ್ರಕಾಶ್ ಎನ್ ಜಿಂಗಾಡೆ

No comments:

Post a Comment