Monday, 8 August 2016

musuku

ಮುಸುಕು.....(Story)

ಮನೆಯಿಂದ ಅವಸರವಾಗಿ ಹೆಜ್ಜೆಹಾಕುತ್ತಾ ಆಫೀಸಿಗೆ ಬಂದೆ. ನಡೆದು ಬಂದ ಅವಸರಕ್ಕೆ ಆಗಲೇ ಮೈ ಬೆವರಲಾರಂಭಿಸಿತ್ತು. ಇಂದು ಆಫೀಸಿನಲ್ಲಿ ಕೆಲಸ ಒತ್ತಡ ಬೇರೆ ಜಾಸ್ತಿ ಇತ್ತು. ನೆನ್ನೆಯೇ ಮಾಡಿ ಮುಗಿಸಬೇಕಾದ ಪ್ರಾಜೆಕ್ಟ್ ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಪ್ರಾಜೆಕ್ಟ್ ನ ಸಂಪೂರ್ಣ ಡಿಟೈಲ್ಸನ್ನು ಸಂಗ್ರಹಿಸಿ ಇವತ್ತು ಬಾಸ್ ಗೆ ಕೊಡಲೇಬೇಕಿತ್ತು. ಮೊದಲೇ ನಮ್ಮ ಬಾಸ್ ಸಿಡುಕು ಮುಖದವನು. ಯಾವಾಗಲೂ ಉಗ್ರ ನರಸಿಂಹನ ರೂಪ ಧರಿಸಿಕೊಂಡೇ ಇರುತ್ತಾರೆ. ಇಂತಹ ವ್ಯಕ್ತಿತ್ವವಿರುವವನಿಗೆ ನನ್ನಂತಹ ಅರ್ದಂಬರ್ದ ಕೆಲಸ ಮಾಡಿದ ಮಿಕನೊಬ್ಬನು ಸಿಕ್ಕರೆ ಮುಗೀತು. ಹಿರಣ್ಯ ಕಶಿಪುವಿನಂತೆ ನಮ್ಮನ್ನು ತೋಡೆಯ ಮೇಲೆ ಮಲಗಿಸಿಕೊಂಡು ನಮ್ಮ ಕರುಳನ್ನು ಬಗೆದೇ ಬಿಡುತ್ತಾನೆ. ಅಂತಹ ಉಗ್ರ ರೂಪ ಅವನದು. ಆತನ ಈ ಉಗ್ರ ರೂಪ ನನ್ನ ಕಣ್ಣ ಮುಂದೆ ಬಂದಂತಾಯಿತು. ನಾನು ಒಮ್ಮೆ ಹೆದರಿದೆನು. ಹೇಗಾದರೂ ಮಾಡಿ ಈ ಕೆಲಸವನ್ನು ಪೂರ್ಣಗೊಳಿಸಲೇ ಬೇಕು ಇಲ್ಲದಿದ್ದರೆ ಬಾಸ್ ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು ಎಂದು ನಿರ್ಣಯಿಸಿಕೊಂಡೆ. ಆತುರದಿಂದ ಕಂಪ್ಯೂಟರನ್ನು ಆನ್ ಮಾಡಿ ಕೆಲಸ ಮಾಡಲಾರಂಬಿಸಿದೆ....

ಕೆಲಸಕ್ಕೆ ಕೂತು ಅರ್ದ ಗಂಟೆಯೂ ಆಗಿರಲಿಲ್ಲ. ರಂಜಿನಿ ತನ್ನ ಉದ್ದವಾದ ಕೂದಲನ್ನು ಹಾರಾಡಿಸಿಕೊಂಡು ಆಗ ತಾನೆ ಆಫೀಸಿಗೆ ಬರುತ್ತಿದ್ದಳು. ಗಾಳಿಯೊಂದಿಗೆ ಉಯ್ಯಾಲೆಯಾಡುತ್ತಿದ್ದ ಆ ರೇಷಿಮೆಯಂತಹ ಕೇಶರಾಶಿ ಮತ್ತು ಅವಳ ಸುಂದರ ರೂಪ ಕಂಡೊಡನೆ ನನ್ನ ಹೃದಯದಲ್ಲಿ ಏನೋ ಆಹ್ಲಾದಕರವಾದ ಅನುಭವವಾಯಿತು.
ಆಕೆಯ ಬಿಳಿಯ ಕೆನ್ನೆಗಳು ಮುಂಜಾನೆಯ ಆ ಹೊಂಬೆಳಕಿನಲ್ಲಿ ಎಂದಿಗಿಂತ ಸ್ವಲ್ಪ ಹೆಚ್ಚಾಗಿಯೇ ಹೊಳಪನ್ನು ಪಡೆದುಕೊಂಡಿದ್ದವು. ಜೀನ್ಸ್ ಪ್ಯಾಂಟಿಗೆ ಹಾಕಿದ್ದ ಆಕೆಯ ಬಿಳಿಯ ಟಾಪ್ ಕಣ್ಣಿಗೆ ಕುಕ್ಕುವಂತಿತ್ತು. ಇನ್ನು ಆಕೆಯ ರೂಪ ಯಾವ ಅಪ್ಸರೆಗಿಂತಲೂ ಕಡಿಮೆಯೇನಿರಲಿಲ್ಲ. ಸಿಕ್ಕರೆ ಇಂತಹ ಹುಡುಗಿ ಸಿಗಬೇಕು ಎಂದು ನನ್ನ ಮನಸ್ಸು ಅವಳನ್ನು ಬಯಸಲಾರಂಬಿಸಿತು. ಆಕೆಯ ಮುದ್ದಾದ ರೂಪ ಕಂಡ ಕೂಡಲೇ ನನಗೆ ಯಾಕೋ ಕೆಲಸ ಮಾಡಲು ಮನಸ್ಸಾಗಲಿಲ್ಲ. ಒಂದು ರೀತಿ ಮೇನಕೆಯು ವಿಶ್ವಾಮಿತ್ರನ ತಪಸ್ಸು ಭಂಗ ಮಾಡಿದಂತೆಯೇ ರಂಜು ನನ್ನ ಕೆಲಸವನ್ನು ಭಂಗ ಮಾಡುತ್ತಿರುವಳೋ ಎಂದೆನಿಸಿತು. ಆಕೆಯ ಬಗ್ಗೆಯೇ ಕನಸು ಕಾಣಲಾರಂಬಿಸಿದೆ. ಸುಂದರ ಹೂ ದೋಟದ ನಡುವೆ ರಂಜಿನಿಯ ಮುದ್ದು ಮುಖ ಕಂಡಂತಾಯಿತು. ಹೂಗಳ ಮೇಲೆ ನಡೆಯುತ್ತಾ ನನ್ನ ಹೃದಯಕ್ಕೆ ಲಗ್ಗೆ ಹಾಕಲು ಬರುತ್ತಿರುವಂತೆ ಬಾಸವಾಯಿತು. ಹೀಗೆ ಮನಸು ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವಾಗಲೇ ತಕ್ಷಣ ನಮ್ಮ ಬಾಸ್ ನ ಉಗ್ರ ರೂಪ ಕಣ್ಣ ಮುಂದೆ ಬಂದಂತಾಯಿತು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಉಗ್ರ ನರಸಿಂಹ ಹಿರಣ್ಯ ಕಶಿಪುವಿನ ಕರಳು ಬಗೆದ ದೃಶ್ಯ ಕಣ್ಣ ಮುಂದೆ ಬಂದಂತಾಯಿತು. ನಮ್ಮ ಬಾಸ್ ಆ ನರಸಿಂಹನ ಅವತಾರದಲ್ಲಿ ನಿಂತುಕೊಂಡು ನನ್ನನ್ನೇ ನುಂಗಿ ಬಿಡುವಂತೆ ನೋಡುತ್ತಿದ್ದ. ಆತನ ಆ ಸಿಡುಕು ಮುಖವನ್ನು ನೆನದು ಕೊಂಡೆ. ಈ ರೀತಿ ಕೆಲಸ ಮಾಡಿದರೆ ಖಂಡಿತ ಇವತ್ತು ಬಾಸ್ ನಿಂದ ಮಂಗಳಾರತಿಯಾಗುತ್ತೆ ಎಂದು ಹೆದರಿಕೊಂಡು ಮತ್ತೆ ಕೆಲಸದಲ್ಲಿ ತಲ್ಲೀನನಾದೆ..
ರಂಜಿನಿ ನಮ್ಮ ಕಂಪನಿಗೆ ಸೇರಿ ಸರಿಯಾಗಿ ಇನ್ನೂ ಆರು ತಿಂಗಳೂ ಆಗಿರಲಿಲ್ಲ. ಎಲ್ಲರಿಂದಲೂ ರಂಜು... ರಂಜು ..ಎಂದು ಕರೆಯುವಷ್ಟು ಆತ್ಮೀಯತೆಯನ್ನು ಬೆಳಸಿಕೊಂಡುದ್ದಳು. ಕೆಲಸದಲ್ಲಿ ಅಷ್ಟೇ ಉತ್ಸಾಹ ಮತ್ತು ಶ್ರದ್ಧೆಯನ್ನು ಬೆಳಸಿಕೊಂಡಿದ್ದಳು. ಯಾರು ಯಾವ ಕೆಲಸವನ್ನೇ ಹೇಳಲಿ ಬುದ್ಧಿವಂತಿಕೆಯಿಂದ ಮಾಡಿ ಮುಗಿಸುತ್ತಿದ್ದಳು. ಎಲ್ಲರನ್ನು ನಗು ನಗುತಾ ಮಾತನಾಡುವ ಗುಣ, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಪರಿ, ಎಂತಹ ಕೆಲಸ ಕೊಟ್ಟರೂ ಮಾಡಿ ಮುಗಿಸಬೇಕೆನ್ನು ಛಲ, ಈ ಗುಣಗಳೇ ಅವಳನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಿದ್ದವು. ನಾನು ಸಹ ಅವಳಂತೆ ಉತ್ಸಾಹ ದಿಂದ, ನಗು ಮುಖದಿಂದ ಕೆಲಸ ಮಾಡಬೇಕೆಂದು ಎಷ್ಟೋ ಸಲ ಪ್ರಯತ್ನ ಪಟ್ಟಿದ್ದುಂಟು. ಆದರೆ ನನ್ನಲ್ಲಿರುವ ಹೆಚ್ಚಿನ ಜವಾಬ್ದಾರಿ, ಮನೆಯ ಬಡತನದ ಪರಿಸ್ಥಿತಿ, ಇಬ್ಬರು ತಂಗಿಯರನ್ನು ಸಾಕುವ ಹೊಣೆ, ಈ ಎಲ್ಲಾ ಒತ್ತಡದಿಂದ ನಾನು ರಂಜಿನಿಯಂತೆ ಅತ್ಯುತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿರಲಿಲ್ಲ. ರಂಜಿನಿಯಲ್ಲಿ ಶ್ರೀಮಂತ ಹುಡುಗಿಯ ಎಲ್ಲಾ ಲಕ್ಷಣಗಳಿದ್ದವು. ತಂದೆ ತಾಯಿಯರು ಮುದ್ದಿನಿಂದ ಸಾಕಿರಬೇಕು. ಎಲ್ಲಾ ಸುಖ ಸೌಲಭ್ಯಗಳನ್ನು ಪಡೆದುಕೊಂಡು ಬೆಳೆದ ಹುಡುಗಿಯೊಬ್ಬಳು ಓದಿನಲ್ಲೂ ಕೆಲಸದಲ್ಲೂ ಯಶಸ್ಸು ಗಳಿಸದೇ ಇರುತ್ತಾಳೆಯೇ...? ಅವಳಿಗಿರುವ ಆ ಭಾಗ್ಯ ನನ್ನಲ್ಲಿ ಇರದುದಕ್ಕೆ ಈ ಒತ್ತಡ ಎದುರಿಸುತ್ತಿದ್ದೆನೆಯೇ..? ಬಡತನದ ಬೇಗೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಕಷ್ಟ ನನಗೆ ಬಂದುದರಿಂದಲೋ ಏನೋ ನನ್ನಲ್ಲಿ ನಗುಮುಖ ಕಣ್ಮರೆಯಾಗಿತ್ತು. ನಾನು ಸಹ ರಂಜಿನಿಯಂತೆ ಸ್ವತಂತ್ರವಾಗಿ ಹಾರಾಡುವ ಹಕ್ಕಿಯಂತೆ ಇರಬೇಕು. ಸಂತೋಷದಿಂದ ಕೆಲಸ ಮಾಡಬೇಕು ಎಂದೆನಿಸಿದರು ಅದು ಸಾದ್ಯವಾಗುತ್ತಿರಲಿಲ್ಲ. ಕೋಪದಿಂದ ಮುಖ ಗಂಟಿಕ್ಕಿಕೊಂಡೇ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ ನಗು ಧರಿಸಿಕೊಂಡರೂ ಅದು ಕೃತಕ ಮಾತ್ರ.
"ಸರ್.... ಬಾಸ್ ಕರೀತಿದಾರೆ. ಹಾಗೆಯೇ ಬೆಂಗಳೂರಿನ ವಿಲ್ಲಾಸ್ ಗಳ ಪ್ರಾಜೆಕ್ಟನ ಫೈಲ್ ತೆಗೆದುಕೊಂಡು ಹೋಗಬೇಕಂತೆ"
ಆಫೀಸ್ ಬಾಯ್ ರಾಜು ಹೇಳಿದಾಗ ನಾನು ಸ್ವಲ್ಪ ಹೆದರಿದೆ. ಫೈಲ್ ಇನ್ನೂ ಪೂರ್ಣಗೊಂಡಿರಲಿಲ್ಲ. ಬಾಸ್ ನಿಂದ ಮುಖಕ್ಕೆ ಮಂಗಳಾರತಿ ಖಂಡಿತ ಎಂದು ಹೆದರುತ್ತಲೇ ಬಾಸ್ ಕ್ಯಾಬಿನ್ ನತ್ತ ಹೆಜ್ಜೆ ಹಾಕಿದೆ.
ಆಫೀಸೊಳಗೆ ಕಾಲಿಟ್ಟಾಗ ಬಾಸ್ ಮುಂದೆ ರಂಜಿನಿ ಸಹ ನಿಂತಿದ್ದಳು. ನಾನು ಫೈಲನ್ನು ಬಾಸ್ಗೆ ಕೊಟ್ಟು ಅವರಿಂದ ಬೈಯ್ಯಿಸಿಕೊಳ್ಳಲು ಸಿದ್ಧನಾಗಿನಿಂತೆ.
"ಕಂಗ್ರ್ಯಾಟ್ಸ್ ಪ್ರಸಾದ್..... ಬೆಂಗೂರಿನ ವಿಲ್ಲಾಸ್ ನ ಪ್ರಾಜೆಕ್ಟ ಯಶಸ್ವಿಯಾಗಿ ಮುಗಿಸಿದ್ದೀರಿ... ಆದರೆ ಒಂದು ವಿಷಯ ನೆನಪಿನಲ್ಲಿ ಇಟ್ಟು ಕೊಳ್ಳಿ.... ನಿಮಗೆ ವಹಿಸಿದ್ದ ಈ ಕೆಲಸ ಒಂದೆರಡು ದಿನ ನಿಧಾನವಾಯಿತು. ಈ ಪ್ರಾಜೆಕ್ಟ್ ನ ದಾಖಲಾತಿ ಸಂಗ್ರಹಿಸುವ ಕೆಲಸ ರಂಜಿನಿಗೆ ವಹಿಸಿದ್ದೆ. ನಿನ್ನಿಂದ ತಡವಾದ ಈ ಕೆಲಸ ರಂಜಿನಿ ಮುಗಿಸಿದ್ದಾಳೆ. ನಿನ್ನ ಈ ಅಪೂರ್ಣ ಫೈಲ್ ಈಗ ಬೇಡ... ಕ್ಯಾಬಿನ್ ನಲ್ಲೇ ಇಟ್ಟು ಬಿಡು... ನಾಳೆಯಿಂದ ಮೈಸೂರಿನ ಪ್ರಾಜೆಕ್ಟ ಕೆಲಸ ನಿನಗೇ ವಹಿಸುತ್ತಿದ್ದೇನೆ... ಈ ಕೆಲಸವಾದರೂ ಹೇಳಿದ ಟೈಮ್ಗೆ ಮುಗಿಸಲು ಪ್ರಯತ್ನಿಸು. ರಂಜಿನಿಯನ್ನು ಸಹ ನಿನ್ನ ಸಹಾಯಕ್ಕೆ ನಿಯಮಿಸಿದ್ದೇನೆ."
ಬಾಸ್ ಹಾಗೆ ಹೇಳಿದ ಕೂಡಲೆ ನನಗೆ ಸಂತೋಷವಾಯಿತು. ಜೊತೆಗೆ ನನಗೆ ಗೊತ್ತಿಲ್ಲದೇ ನನ್ನ ಕೆಲಸಕ್ಕೆ ಸಹಾಯ ಮಾಡಿದ ರಂಜಿನಿಯ ಬಗ್ಗೆ ನನಗೆ ಹೆಮ್ಮೆಯೆನಿಸಿತು. ಆ ದಿನ ರಂಜು ನನ್ನ ಹತ್ತಿರ ವಿಲ್ಲಾಸ್ ಗಳ ಪ್ಲಾನ್ ನ ಡಿಟೈಲ್ಸ ಕೇಳೋಕೆ ಬಂದಾಗ ನಾನು ಅವಳ ಮೇಲೆ ರೇಗಿದ್ದೆ. ಕೋಪದಿಂದ ಬೈಯ್ದಿದ್ದೆ.
" ನನ್ನ ಕೆಲಸದ ಮದ್ಯೆ ತಲೆ ಹಾಕುವ ಯೋಗ್ಯತೆ ನಿನಗಿಲ್ಲ"
ಎಂದು ಮನ ಬಂದಂತೆ ಮಾತನಾಡಿದ್ದೆ. ಪಾಪ ರಂಜಿನಿ ಆಗ ತಾನೆ ಕೆಲಸಕ್ಕೆ ಹೊಸದಾಗಿ ಸೇರಿಕೊಂಡಿದ್ದಳು. ನನ್ನ ಬೈಗುಳಕ್ಕೆ ಅವಳು ದಿನ ಪೂರ್ತಿ ಅತ್ತಿದ್ದಳು. ಈಗ ಅದೇ ರಂಜಿನಿ ನನಗೆ ಏನೂ ಹೇಳದೆ ಪ್ರಾಜೆಕ್ಟ್ ನ ಎಲ್ಲಾ ಕೆಲಸ ಮುಗಿಸಿ ನನಗೆ ಸಹಾಯ ಮಾಡಿದ್ದಳು. ಅವಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ.. ಅವಳೊಂದಿಗೆ ನಾನು ಕೆಟ್ಟದಾಗಿ ವರ್ತಿಸಿದ್ದರಿಂದ ನನಗೆ ಅತೀವ ನಾಚಿಕೆಯಾಯಿತು. ಈ ದಿನ ರಂಜಿನಿಗೆ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿಕೊಂಡೆ. ಮತ್ತೆ ರಂಜಿನಿಯ ಮುದ್ದಾದ ಮುಖ ಕಣ್ಣ ಮುಂದೆಯೇ ಬಂದಂತಾಯಿತು. ಈ ದಿನ ರಂಜು ನನ್ನ ಮನಸ್ಸಿಗೆ ಮೊದಲಿಗಿಂತ ಹಿತವಾಗಿ ಕಂಡಳು....
ಕೆಲಸ ಮುಗಿದ ಮೇಲೆ ರಂಜಿನಿಗೆ ನನ್ನ ಜೊತೆ ಕಾಫಿ ಡೇಗೆ ಬರುವಂತೆ ಬೇಡಿಕೊಂಡೆ. ಅವಳು ಒಪ್ಪಿಕೊಂಡಳು. ಸಂಜೆ ಇಬ್ಬರೂ ಬೇಟಿಯಾದೆವು. ರಂಜಿನಿ ನನ್ನ ಎದುರು ಕುಳಿತ್ತಿದ್ದಳು. ಮಾತು ಹೇಗೆ ಪ್ರಾರಂಬಿಸಬೇಕೆಂದು ತಿಳಿಯಲಿಲ್ಲ. ರಂಜಿನಿಯನ್ನೊಮ್ಮೆ ನೋಡಿದೆ. ಆಕೆಯ ಮುಖದಲ್ಲಿ ಕೆಲಸ ಮಾಡಿದ ಆಯಾಸ ಕಾಣುತ್ತಿರಲಿಲ್ಲ. ಮುಖ ಇನ್ನೂ ತಾಜಾತನದಿಂದ ಕಂಗೊಳಿಸುತ್ತಿತ್ತು. ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಆಕೆಯ ಮುಂಗುರುಳುಗಳು ಮುದ್ದಾದ ಕೆನ್ನೆಯೊಡನೆ ಚಕ್ಕಂದವಾಡುತ್ತಿದ್ದವು. ಆಕೆಯ ಚೆಂದದ ರೂಪಕ್ಕೆ ಮನಸೋತಿದ್ದರಿಂದ ನನ್ನಿಂದ ಮಾತು ಹೊರಡಲಿಲ್ಲ.
"ಏನಾದರೂ ಮಾತನಾಡಿ..."
ರಂಜಿನಿ ಮೌನ ಮುರಿದಳು
"ಐ ಯಾಮ್ ವೆರಿ ಸಾರಿ ರಂಜಿನಿ.... ನೀನು ಹೊಸದಾಗಿ ಕೆಲಸಕ್ಕೆ ಸೇರಿದ ಆ ದಿನಗಳಲ್ಲಿ . ನಿನ್ನ ಜೊತೆ ಕೋಪದಿಂದ ವರ್ತಿಸಿದೆ. ಆದರೂ ನೀ ನನಗೆ ಸಹಾಯ ಮಾಡಿದೆ."
ನಾನು ವಿನಯದಿಂದಲೇ ಹೇಳಿದೆ.
" ಪರವಾಗಿಲ್ಲ ಬಿಡಿ.... ಹೌದು ..!! ನೀವು ಯಾವಾಗಲೂ ಯಾಕೆ ಅಷ್ಟು ಸಿರಿಯಸ್ ಆಗಿಯೇ ಕೆಲಸ ಮಾಡುತ್ತಿರುತ್ತಿರಿ ...ಸ್ವಲ್ಪ ನಗು ನಗುತ್ತಾ ಇರಿ. ನೀವು ನೋಡೋಕೆ ಎಷ್ಟು ಹ್ಯಾಂಡ್ ಸಮ್ಮಾಗಿ ಕಾಣುತ್ತೀರಿ... ಆದರೆ ಮುಖ ಮಾತ್ರ ಸಿಡುಕು.... ಯಾಕ್ರಿ ಇದೆಲ್ಲಾ, ನಾವೆನೂ ಪ್ರಪಂಚದ ಎಲ್ಲಾ ಜವಾಬ್ದಾರಿಯನ್ನೆಲ್ಲಾ ಹೊತ್ತು ಕೊಂಡಿದ್ದೇವೆಯೇ...? ಇರುವ ನಾಲ್ಕು ದಿನ ಎಲ್ಲರೊಂದಿಗೆ ನಗು ನಗುತಾ ಇರಬೇಕು ತಾನೆ"
ರಂಜಿನಿ ನಗುತ್ತಲೇ ಹೇಳಿದಳು
"ನಿನ್ನ ಮಾತು ಸರಿ ರಂಜಿನಿ.... ಏನ್ಮಾಡೋದು ಹೇಳು. ನನ್ನ ಜೀವನದಲ್ಲಿ ಕೆಲವು ಅಹಿತಕರವಾದ ಘಟನೆಗಳು ನಡೆದವು. ಅಪ್ಪ ಅಮ್ಮ ಇಬ್ಬರೂ ಆಕ್ಸಿಡೆಂಟಲ್ಲಿ ತೀರಿಕೊಂಡಾಗ ಆಗ ನಾನಿನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಇಬ್ಬರು ಪುಟ್ಟ ತಂಗಿಯರು, ಆ ವಯಸ್ಸಿನಲ್ಲೇ ಅವರನ್ನು ನೋಡಿಕೊಳ್ಳು ಹೊಣೆಗಾರಿಕೆ. ಹಣಕ್ಕೇನೂ ಕೊರತೆಯಿಲ್ಲ. ಅಪ್ಪ ಮಾಡಿದ ಆಸ್ತಿ ಚನ್ನಾಗಿಯೇ ಇದೆ.ತಿಂಗಳಿಗೆ ಎಂಬತ್ತು ಸಾವಿರ ರೂಪಾಯಿ ಮನೆಗಳ ಬಾಡಿಗೆ ಬರುತ್ತದೆ. ಆದರೂ ಬಡತನದ ಪ್ರಜ್ಞೆ ಕಾಣುತ್ತಿದೆ. ನನ್ನ ಚಿಕ್ಕಪ್ಪನವರೂ ಸಹಾಯ ಮಾಡುತ್ತಾರೆ. ಎಲ್ಲರೂ ಚೆನ್ನಾಗಿ ಓದುತ್ತಿದ್ದಾರೆ. ನಾನು ಸಹ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದೇನೆ. ಆದರೂ ತಂದೆ ತಾಯಿಯರ ಪ್ರೀತಿಯ ಕೊರತೆ ನನ್ನನ್ನು ಕಾಡುತ್ತಿದೆ. ನನಗೂ ನಿನ್ನಂತೆ ಇರಬೇಕೆಂಬ ಆಸೆಯೇನೋ ಇದೆ. ನಿನ್ನಂತ ಸುಂದರ ಹುಡುಗಿಯನ್ನು ಮದುವೆಯಾಗುವ ಆಸೆಯೂ ಇದೆ.... ಏನ್ಮಾಡೋದು ಎಲ್ಲಾ ವಿಧಿ ಲಿಖಿತ"
ಸ್ವಲ್ಪ ದುಃಖದಿಂದಲೇ ಹೇಳಿದೆನು...
"ಸಾರಿ.... ನಿಮ್ಮ ಹಿಂದೆ ದುಃಖದ ಕತೆಯೊಂದಿದೆ ಎಂದು ಗೊತ್ತಿರಲಿಲ್ಲ"
ರಂಜಿನಿ ಭಾವುಕಳಾಗಿ ಉತ್ತರಿಸಿದಳು.
ಅಷ್ಟರಲ್ಲಿ ವೇಟರ್ ಬಿಲ್ಲನ್ನು ತಂದು ಕೊಟ್ಟನು
ರಂಜಿನಿ ತಾನೆ ಬಿಲ್ ಕೊಡಲು ಮುಂದಾದಳು. ಆದರೆ ನಾನು ಬಿಡಲಿಲ್ಲ...
ಮಾರನೆಯ ದಿವಸ ರಂಜಿನಿಯು ಆಫೀಸಿಗೆ ಬಂದಾಗ ಎಂದಿಗಿಂತಲೂ ನನಗೆ ತುಂಬಾ ಹತ್ತಿರದವಳಂತೆ ಕಂಡಳು. ನನ್ನತ್ತ ಮುಗುಳ್ನಗೆ ಬೀರಿದಳು. ಅವಳ ಆ ನಗೆಯಲ್ಲಿ ಮಿಂಚಿನ ಸಂಚಾರವಿತ್ತು. ಆ ಮೋಹಕ ನಗೆ ನನ್ನ ಹೃದಯವನ್ನು ಇರಿಯುವಂತೆ ಇತ್ತು. ಮದುವೆ ಅಂತ ಆದರೆ ಇವಳನ್ನೇ ಎಂದು ನಿರ್ಧರಿಸಿಕೊಂಡೆ. ಸೀದಾ ಅವಳತ್ತ ಹೋದವನೆ
"ರಂಜಿನಿ ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು"
ಎಂದೆ.
"ಹೇಳಿ" ರಂಜಿನಿ ನಗುತ್ತಲೇ ಹೇಳಿದಳು.
" ಹೇಗೆ ಪ್ರಾರಂಭಿಸುವುದೋ ತಿಳಿಯುತ್ತಿಲ್ಲ. ನಿನ್ನಂತಹ ಬುದ್ಧಿವಂತ ಶ್ರೀಮಂತ ಕನ್ಯೆಗೆ ನನ್ನ ಅಭಿಲಾಷೆಯು ಒಪ್ಪಿಗೆ ಆಗುವುದಿಲ್ಲವೇನೋ ಎಂಬ ಭಯ. ಹೇಳಿದಾಗ ನನ್ನ ಮೇಲೆ ಕೋಪಿಸಿಕೊಳ್ಳಬಾರದು"
ಅಷ್ಟು ಹೇಳಿ ಮೌನವಾಗಿ ನಿಂತೆ.
"ಪರವಾಗಿಲ್ಲ ಹೇಳಿ .. ನೀವು ನನ್ನನ್ನು ಇಷ್ಟಪಡುತ್ತಿದ್ದೀರಿ. ನನ್ನನ್ನು ಮದುವೆಯಾಗಬೇಕೆಂಬ ಅಭಿಲಾಷೆ ನಿಮ್ಮ ಮಾತಿನಲ್ಲಿ ಇದೆ ಅಲ್ಲವೇ.....?
ರಂಜಿನಿ ಅಷ್ಟು ಹೇಳಿ ಮುಗಿಸಿರಲಿಲ್ಲ. ಅವಳ ಮೊಬೈಲ್ ರಿಂಗಣಿಸಿತು. ಒಂದೆರಡು ನಿಮಿಷ ಮೊಬೈಲ್ ನಲ್ಲಿ ಮಾತನಾಡಿಕೊಂಡಳು. ಆಕೆಯ ಕಣ್ಣುಗಳು ದುಃಖದಿಂದ ಹನಿಗೂಡಿದವು.
"ಅಪ್ಪನಿಗೆ ಸೀರಿಯಸ್ ಅಂತೆ....ಆಸ್ಪತ್ರೆಯಲ್ಲಿದ್ದಾರೆ, ನಾನು ಊರಿಗೆ ಹೋಗಲೇ ಬೇಕು. ಎಂದು ಹೇಳುತ್ತಾ ರಂಜಿನಿ ಆಫೀಸಿನಿಂದ ಹೊರಟೇ ಬಿಟ್ಟಳು.
ರಂಜಿನಿ ಹೋಗಿ ನಾಲ್ಕು ದಿನವಾಗಿತ್ತು. ಬಾಸ್ ರವರ ಮಹತ್ವಕಾಂಕ್ಷೆಯ ಮೈಸೂರಿನ ಪ್ರಾಜೆಕ್ಟ್ ರಂಜಿನಿ ಇಲ್ಲದೆ ಸೊರಗಿ ನಿಂತಿತ್ತು. ರಂಜಿನಿಯ ಮೊಬೈಲ್ ಸಹ ನಾಲ್ಕು ದಿನದಿಂದ ಸ್ವಿಚ್ ಆಫ್ ಆಗಿತ್ತು. ಬಾಸ್ ರಂಜಿನಿಯ ಊರಿನ ವಿಳಾಸವನ್ನು ಕೊಟ್ಟು ವಿಚಾರಿಸಿ ಬರುವಂತೆ ನನ್ನನ್ನು ಕಳುಹಿಸಿ ಕೊಟ್ಟರು.
ರಂಜಿನಿಯದು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಎಂಬುದೊಂದು ಚಿಕ್ಕ ಗ್ರಾಮ. ಊರು ಹತ್ತಿರವಾಗುತ್ತಿದ್ದಂತೆ ಸುತ್ತಲೂ ಕಾಣುತ್ತಿದ್ದ ಹಸಿರು ನನ್ನ ಮನಸ್ಸನ್ನು ಸೂರೆಗೊಳಿಸಿತು.

ಸುತ್ತಲೂ ಬೆಟ್ಟ, ಬೆಟ್ಟದ ನಡುವೆಯಿರುವ ಊರಿನತ್ತ ನನ್ನ ಕಾರು ಚಲಿಸಿತು. ರಂಜಿನಿಯ ಮನೆಯೇನೋ ತಲುಪಿದೆ. ಮನೆಯ ಹತ್ತಿರ ನೂರಾರು ಜನ ಸೇರಿದ್ದರು. ರಂಜಿನಿಯ ತಂದೆ ಆಗ ತಾನೆ ತೀರಿಕೊಂಡಿದ್ದರು. ಅಪ್ಪನ ಹೆಣದ ಮುಂದೆ ಕುಳಿತು ರಂಜಿನಿ ಕಣ್ಣೀರು ಹಾಕುತ್ತಿದ್ದಳು. ಆಕೆಯ ಗೋಳು ಮುಗಿಲು ಮುಟ್ಟಿತ್ತು.
ನಾನು ಕಾರಿನಿಂದ ಇಳಿದ ಕೂಡಲೇ ಬಿಳಿಯ ವಸ್ತ್ರಧಾರಿ ವ್ಯಕ್ತಿಯೊಬ್ಬ ನನ್ನ ಕಡೆಗೆ ಬಂದನು.
"ನೀವು ಪ್ರಸಾದ್ ಅಲ್ಲವೇ.....? ರಂಜಿನಿಯನ್ನು ಆಮೇಲೆ ಮಾತನಾಡಿಸುವಿರಂತೆ ಬನ್ನಿ"
ಎಂದು ಹೇಳಿ ಅವರ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ಪಡಸಾಲೆಯಲ್ಲಿ ಕೂರಿಸಿದರು.
"ನೋಡಿ ನನ್ನ ಹೆಸರು ಮ್ಯಾಥ್ಯೂ ಅಂತ... ಇಲ್ಲೇ ಚರ್ಚನಲ್ಲಿ ಫಾದರ್ ಆಗಿದ್ದೇನೆ"
ನಾನು ಕುತೂಹಲದಿಂದ ಅವರನ್ನೇ ನೋಡುತ್ತಿದ್ದೆ. ಮತ್ತೆ ಮಾತು ಮುಂದುವರೆಸಿದರು
"ನೋಡಿ .. ರಂಜಿನಿ ಬಡ ಹುಡುಗಿ. ಅವಳು ಹುಟ್ಟಿದ ಕೂಡಲೇ ತಾಯಿ ಸ್ವರ್ಗಸ್ಥರಾದರು. ಸಂಬಂದಿಕರು ರಂಜಿನಿಯನ್ನು ಅಪಶಕುನದ ಕೂಸೆಂದು ಕರೆದರು. ರಂಜಿನಿ ಏಳನೇ ತರಗತಿಯಲ್ಲಿದ್ದಾಗ ತಂದೆ ಕಾಲನ್ನು ಕಳೆದುಕೊಂಡರು. ಮನೆಯಲ್ಲಿ ದುಡಿಮೆ ಮಾಡುವ ತಂದೆಯೇ ಕುಂಟನಾದಾಗ ಊಟಕ್ಕೂ ಗತಿಯಿಲ್ಲದಂತಾಯಿತು. ರಂಜಿನಿ ಅವರಿವರ ಮನೆಯ ಮುಸುರೆ ಕೆಲಸ ಮಾಡಿ ತಂದೆಯನ್ನು ಸಾಕತೊಡಗಿದಳು. ಚನ್ನಾಗಿ ಓದುವ ಹೆಣ್ಣು ಮಗುವೊಂದು ಅವರಿವರ ಮನೆಯ ಕೆಲಸಕ್ಕೆ ಹೋಗುವುದು ಬೇಡವೆಂದು ನಾನೇ ಅವಳನ್ನು ಸಾಕಿ ಓದಿಸಿದ್ದೇನೆ. ಕೆಲಸವೂ ಸಿಕ್ಕಿದೆ. ಅವಳಿಗೊಂದು ಮದುವೆ ಮಾಡಿಬಿಡಬೇಕು ಎಂಬ ಆಸೆಯಿಂದಲೇ ಅವರ ತಂದೆ ಕಣ್ಣು ಮುಚ್ಚಿಕೊಂಡರು. ನನಗೂ ವಯಸ್ಸಾಗಿದೆ. ನಾನು ಸಹ ಆಗಲೋ ಈಗಲೋ ಎಂದು ದಿನಗಳನ್ನು ಏಣಿಸುತ್ತಿದ್ದೇನೆ. ನಿಮ್ಮ ಬಗ್ಗೆ ರಂಜಿನಿ ಎಲ್ಲಾ ಹೇಳಿದ್ದಾಳೆ......"
ಫಾದರ್ ಅಷ್ಟು ಹೇಳಿ ಮೌನವಾದರು.
ರಂಜಿನಿಯ ಪರಿಸ್ಥಿತಿ ಕಂಡು ನನ್ನ ಕಣ್ಣುಗಳು ತುಂಬಿ ಬಂದವು. ಇಷ್ಟೆಲ್ಲಾ ಕಷ್ಟದಿಂದ ಬೆಳೆದ ಹುಡುಗಿಯೊಬ್ಬಳು ಮೂರು ತಿಂಗಳ ವರೆಗೆ ನಮ್ಮ ಜೊತೆಯಲ್ಲಿದ್ದರೂ ಸಹ ಎಂದಿಗೂ ತನ್ನ ಕಷ್ಟವನ್ನು ಹೇಳಿಕೊಂಡವಳಲ್ಲ. ತಂದೆ ಸಂಪಾದಿಸಿದ ಆಸ್ತಿ ಅಂತಸ್ತು ಎಲ್ಲಾ ಇದ್ದರೂ ಸಹ ನಾನು ತುಂಬಾ ಕಷ್ಟದಲ್ಲಿರುವೆಯೇನೋ ಎಂಬಂತೆ ನೊಂದು ಕೊಳ್ಳುತ್ತಿದ್ದೆ. ಆದರೆ ರಂಜಿನಿ ಇನ್ನೊಬ್ಬರ ಮನೆ ಕೆಲಸ ಮಾಡಿ ಬೆಳೆದವಳು. ಕಷ್ಟದಲ್ಲೂ ತಂದೆಯನ್ನು ಸಾಕಿದವಳು. ತನ್ನ ಜೀವನಕ್ಕೆ ಗುರಿಯನ್ನಿಟ್ಟುಕೊಂಡು ಬೆಳೆದವಳು. ರಂಜಿನಿಯ ಕಷ್ಟದ ಮುಂದೆ ನನ್ನದು ಏನೂ ಇಲ್ಲ. ಎಲ್ಲಾ ಸುಖ ಸಂತೋಷ ನನಗಿದ್ದರೂ ನಾನು ಅದನ್ನು ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದೆ. ಸುಖ ಸಂತೋಷವೇ ಇಲ್ಲದ ರಂಜಿನಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಸುಖ ಸಂತೋಷವನ್ನು ಗಳಿಸುವತ್ತ ಹೆಜ್ಜೆ ಹಾಕಿದ್ದಳು. ಬಂದ ಅತಿ ಸಣ್ಣ ಕಷ್ಟವನ್ನು ಎದುರಿಸಲಾಗದ ನಾನು ಅತಿ ದೊಡ್ಡ ಕಷ್ಟದಲ್ಲಿ ಮುಳುಗಿದ್ದೇನೆ ಎಂಬ ಭ್ರಮೆಯಲ್ಲಿ ಮುಳುಗಿದ್ದೆ. ಕಷ್ಟಗಳು ಮನುಷ್ಯನಿಗಲ್ಲದೆ ಕಲ್ಲಿಗೆ ಬರುತ್ತದೆಯೇ...? ಕಷ್ಟವಿದೆ ಕಷ್ಟವಿದೆ ಎಂದು ಹೇಳಿಕೊಂಡು, ಅದೇ ಭ್ರಮೆಯಿಂದ ಗೆಳೆಯರೊಂದಿಗೆ ಸಿಡುಕು ಮುಖ ಹಾಕಿಕೊಂಡು ಕೆಲಸ ಮಾಡುತ್ತಿದ್ದ ನನಗೆ ಜೀವನದ ಕೆಲವು ಸಂತಸದ ಕ್ಷಣಗಳನ್ನು ಕಳೆದುಕೊಂಡಿದ್ದೇನೆ ಎಂದೆನಿಸಿತು. ಎಲ್ಲವನ್ನು ಮರೆತು ನಗುನಗುತ್ತಾ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ರಂಜಿನಿಯು ನನಗೆ ದೇವತೆಯಂತೆ ಕಂಡಳು. ನಾವು ಯಾವಾಗಲೂ ನಮಗಿಂತ ಕಷ್ಟದಲ್ಲಿರುವವರನ್ನು ನೋಡಿ ಜೀವನದ ಪಾಠಗಳನ್ನು ಕಲಿಯಬೇಕೆ ವಿನಃ ನಮಗಿಂತ ಶ್ರೀಮಂತರಾಗಿರುವವರನ್ನು ನೋಡಿ ಅಲ್ಲ. ಎಲ್ಲಾ ಶ್ರೀಮಂತಿಕೆಯ ಹಿಂದೆ ಪರಿಶ್ರಮ ಇದ್ದೇ ಇರುತ್ತದೆ. ಕಷ್ಟ ಕಷ್ಟವೆಂದು ಸದಾಕಾಲ ಕೊರಗುತ್ತಿರುವ ಮನುಷ್ಯನನ್ನು ಯಾವೊಬ್ಬನೂ ಸಹ ಸ್ನೇಹಿತನಂತೆ ಕಾಣಲಾರನು. ಅವನನ್ನು ಸಮಾಜ ಒಪ್ಪಿಕೊಳ್ಳುವುದು ಸಹ ಅಷ್ಟಕ್ಕಷ್ಟೆ. ಅದೇ ನಗುವನ್ನು ಹೊಂದಿರುವ ವ್ಯಕ್ತಿಯನ್ನು ನೋಡಿ ಆತ ಎಲ್ಲರಿಗೂ ಇಷ್ಟವಾಗುತ್ತಾನೆ. ನಗುವವನಿಗೆ ಸಾವಿರಾರು ಗೆಳೆಯರು. ಅಳುವವನಿಗೆ ಕ್ಷಣ ಕಾಲದ ಗೆಳೆಯರು. ಬಹುಷಃ ಈ ಸೂತ್ರ ರಂಜಿನಿಗೆ ಸರಿಯಾಗಿ ಅರ್ಥವಾಗಿರಬೇಕು. ಆಕೆ ನಗು ನಗುತ್ತಲೇ ಯಶಸ್ಸನ್ನು ಕಂಡುಕೊಂಡಿದ್ದಳು. ನಗುತಾ ಬಾಳುವಂತೆ ನನಗೂ ಒಂದೆರಡು ಸಾರಿ ಹೇಳಿದ್ದುಂಟು. ದೇವರು ಕೊಟ್ಟ ಈ ಅಲ್ಪಾಯುಷ್ಯವನ್ನು ನಗು ನಗುತಾ ಕಳೆಯಬೇಕೆ ವಿನಃ ದುಃಖದಿಂದಲ್ಲ. ಮುಂದೆ ಮತ್ತೆ ಮಾನವ ಜನ್ಮ ಸಿಗುತ್ತೆ ಅನ್ನೂ ಯಾವ ಖಾತ್ರಿಯೂ ಇಲ್ಲ. ಕಷ್ಟಗಳನ್ನು ಎದುರಿಸಿ ನಿಲ್ಲಬೇಕು. ಖಾಯಿಲೆ ಬಂದಾಗ ಔಷದಿಯನ್ನು ತೆಗೆದುಕೊಂಡು ನಿವಾರಿಸಿಕೊಳ್ಳಬೇಕೆ ವಿನಃ ಆ ಖಾಯಿಲೆಯನ್ನು ಇನ್ನೊಬ್ಬರಿಗೆ ಹರಡುವುದಲ್ಲ. ಕಷ್ಟಗಳೂ ಸಹ ಖಾಯಿಲೆಯಂತೆಯೇ......
ಹಿಂದೆ ಯಾರೋ ನನ್ನ ಹೆಗಲ ಮೇಲೆ ಕೈಯಿಟ್ಟಂತಾಯಿತು. ತಿರುಗಿ ನೋಡಿದೆ. ರಂಜಿನಿ ಅಳುತ್ತಾ ನಿಂತಿದ್ದಳು. ಶವಸಂಸ್ಕಾರ ಎಲ್ಲಾ ಮುಗಿದಿತ್ತು. ನಾನು ಅವಳ ಕಣ್ಣೀರನ್ನು ಒರೆಸಿದೆ.ಅವಳು ನನ್ನ ಆಸರೆಯನ್ನು ಬಯಸಿ ನನ್ನೆದೆ ಗೂಡಿನಲ್ಲಿ ಸೇರಿಕೊಂಡಳು. ನನ್ನ ಬಲಗೈಯ ಬೆರಳುಗಳೊಂದಿ ತನ್ನ ಬೆರಳುಗಳನ್ನು ಸೇರಿಸಿ ಹಿಡಿದು ನಿಂತಳು. ರಂಜಿನಿಯ ಸ್ಪರ್ಶದಿಂದ ಮನದ ಮುಸುಕು ದೂರ ಸರಿದಂತಾಯಿತು.....
                                                     
                                                                                                   ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment