Sunday, 4 September 2016

ಐಸ್ ಕ್ರೀಮ್

ಐಸ್ ಕ್ರೀಮ್ (small story )


ತೀರ್ಥಹಳ್ಳಿ... ಮಲೆನಾಡಿನ ಒಂದು ಸುಂದರ ತಾಣವದು. ಹೇಳಿಕೊಳ್ಳುವಂತಹ ದೊಡ್ಡ ನಗರವಲ್ಲದಿದ್ದರೂ. ಚಿಕ್ಕ ಹಳ್ಳಿಯಂತೂ ಆಗಿರಲಿಲ್ಲ. ಆ ನಗರದ ರಾಜಬೀದಿಗೆ ಹೊಂದಿಕೊಂಡಂತೆ ಜನಪ್ರಿಯವಾದ ಐಸ್ ಕ್ರೀಮ್ ಪಾರ್ಲರ್ ಇದೆ.  ಬಣ್ಣ ಬಣ್ಣದ ಚಿಟ್ಟೆಗಳು ಹೇಗೆ ಹೂವುಗಳನ್ನು ಮುತ್ತಿಕೊಂಡಿರುತ್ತವೆಯೋ ಹಾಗೆಯೇ ಹರೆಯಕ್ಕೆ ಕಾಲಿಟ್ಟ ಕಾಲೇಜು ಕನ್ಯೆಯರು ಆ ಐಸ್ ಕ್ರೀಮ್ ಪಾರ್ಲರನ್ನು ಮುತ್ತಿಕೊಂಡಿರುತ್ತಾರೆ. ಈ ಐಸ್ ಕ್ರೀಮ್ ಪಾರ್ಲನ ಹೊರಾಂಗಣದಲ್ಲಿ ಹಾಕಿರುವ ಟೇಬಲ್ ಮೇಲೆ ಕುಳಿತ ಹುಡುಗಿಯರು ಹರಟೆ ಹೊಡೆಯುತ್ತಾ ಬಣ್ಣ ಬಣ್ಣದ ರುಚಿ ರುಚಿಯಾದ ಐಸ್ ಕ್ರೀಮನ್ನು ಸವಿಯುತ್ತಾ ಹೊಟ್ಟೆ ತಂಪಾಗಿಸಿಕೊಳ್ಳುತ್ತಾರೆ.  ಹುಡುಗಿಯರ ಹೊಟ್ಟೆ ಐಸ್ ಕ್ರೀಮ್ ನಿಂದ ತಣ್ಣಾಗಾದರೆ ಹುಡುಗರಿಗೆ ಅವರನ್ನು ನೋಡಿಯೇ ಕಣ್ಣುಗಳು ತಂಪಾಗಿ ಬಿಡುತ್ತಿದ್ದವು. ಎಷ್ಟೋ ಹುಡುಗರು ಐಸ್ ಕ್ರೀಮ್ ತಿನ್ನುವ ಆಸೆಗಿಂತಲೂ ಹೆಚ್ಚಾಗಿ ಕಣ್ಣು ತಂಪು ಮಾಡಿಕೊಳುವ ಆಸೆಗಾಗಿ ಈ ಐಸ್ ಕ್ರೀಮ್ ಪಾರ್ಲರ್ ಗೆ ಬರುತ್ತಿದ್ದರು.

ಅಂದು ತಣ್ಣನೆಯ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಸೆಲ್ವಾರ್ ಕಮೀಜನ್ನು ತೊಟ್ಟ ಸುಂದರ ಹುಡುಗಿಯೊಬ್ಬಳು ಕುಳಿತ್ತಿದ್ದಳು. ತನ್ನ ಬಳುಕುವ ಸೊಂಟದ ಮೇಲೆ ತನ್ನ ಒಂದು ಕೈಯನ್ನು ಇಟ್ಟುಕೊಂಡು ಕುಳಿತ್ತಿದ್ದ ಆ ಪರಿ.... ಆ ಶೈಲಿ.....ಆಕರ್ಷಕವಾಗಿತ್ತು. ಮುಖದ ಮೇಲೆ ಬಿದ್ದ ಹೊಂಬೆಳಕು ಅವಳ ಸೌಂದರ್ಯಕ್ಕೆ ಇನ್ನಷ್ಟು ಮೆರಗು ನೀಡಿತ್ತು... ಅವಳ ಮೈ ಬಣ್ಣ ರೇಶಿಮೆಯಂತೆ ಹೊಳೆಯುತ್ತಿತ್ತು. ಚಂದಿರನನ್ನೂ ನಾಚಿಸುವಂತಹ ಅವಳ ರೂಪ. ಅವಳ ಮಂದಹಾಸದ ನಗು ಎಂತಹ ಹುಡುಗರನ್ನು ಸೆಳೆಯುವಂತೆ ಇತ್ತು. ಕಣ್ಣಿಗೆ ಕಾಡಿಗೆ ಹಚ್ಚಿದ್ದರಿಂದ ಕಣ್ಣುಗಳು ಚಿಟ್ಟೆಯಂತೆ ಕಾಣುತ್ತಿದ್ದವು. ಯಾರದೋ ನಿರೀಕ್ಷೆಯಲ್ಲಿದ್ದ ಅವಳ ಆ  ಕಣ್ಣುಗಳು ಐಸ್ ಕ್ರೀಮ್ ಪಾರ್ಲರ್ ನ ಒಳಭಾಗದ ಕಡೆಗೆ ನೆಟ್ಟಿದ್ದವು. . . ಅಷ್ಟರಲ್ಲಿ ಜೀನ್ಸ್ ಪ್ಯಾಂಟ್ ಮತ್ತು ಟೀ ಷರಟ್ ಹಾಕಿದ ಯುವಕನೊಬ್ಬ  ಐದಾರು ವಿಧದ ಬಣ್ಣದ ಐಸ್ ಕ್ರೀಮನ್ನು ಹಾಕಿದ್ದ  ಎರಡು ಉದ್ದನೆಯ ಗ್ಲಾಸ್ ನ್ನು ತಂದು ಅವಳ ಮುಂದೆ ಇಟ್ಟ. ಇಬ್ಬರೂ ಐಸ್ ಕ್ರೀಮನ್ನು ಸವಿಯಲಾರಂಭಿಸಿದರು...

"ಕೃತಿಕ... ಪ್ಲೀಸ್ ಏನಾದರು ಮಾತನಾಡು... ನಾಚಿಕೆ ಏಕೆ...?"
ಹುಡುಗ ಮೌನ ಮುರಿದ..
ಹಾಗೆಂದ ಕೂಡಲೇ ಕೃತಿಕ ಕಣ್ಣಿನ ವರೆಗೂ ಇಳಿಬಿದ್ದ ತನ್ನ ಮುಂಗುರಳನ್ನು ಸರಿ ಪಡಿಸಿಕೊಳ್ಳುತ್ತಾ ತನ್ನ ಎದುರಿಗಿದ್ದ ಹುಡುಗನನ್ನು ನೋಡಿದಳು. ಆಕೆಯ ಸುಂದರ ನೋಟಕ್ಕೆ ಆ ಯುವಕನ ಕಣ್ಣುಗಳೇ ಒಮ್ಮೆ ನಾಚಿಕೊಂಡವು..
"ಹೇಳಿ ರಂಜಿತ್ ನಾಚಿಕೆಯೇನೂ ಇಲ್ಲ... ನೀವು ಸುಮ್ಮನೆ ಇದ್ದಿರಲ್ಲ ಅಂತ ಮಾತನಾಡಲು ಹೋಗಲಿಲ್ಲ. ಹೇಳಿ ನಿಮ್ಮ ಬಿಸಿನೆಸ್ ಹೇಗಿದೆ.... ಬೆಂಗಳೂರಿನಲ್ಲಿ ನಿಮ್ಮದೇ ಹೋಟಲ್ ಇದೆ. ವಿವಿದ ರೀತಿಯ ಐಸ್ ಕ್ರೀಮ್ ತಯಾರಿಸುತ್ತೀರಿ.... ಹಾಗಿರುವಾಗ ನಮ್ಮ ಈ ಚಿಕ್ಕ ಊರಿನಲ್ಲಿ ಐಸ್ ಕ್ರೀಮ್ ತಿನ್ನಲು ನಿಮಗೆ ಬೇಸರವಾಗುವುದಿಲ್ಲವೇ....? ನಿಮಗೆ ನಿಜವಾಗಲೂ ಈ "ಗಡ್ ಬಡ್" ಐಸ್ ಕ್ರೀಮ್ ತುಂಬಾ ಇಷ್ಟನಾ...? ಅಥವಾ ನನಗೋಸ್ಕರ ತಿನ್ನುತ್ತಿರುವಿರಾ....? ನನಗೆ ಗೊತ್ತು ನೀವು ನನ್ನಿಷ್ಟದ ಎಲ್ಲಾ ತಿನಿಸುಗಳನ್ನು ಈಗಾಗಲೇ ತಿಳಿದುಕೊಂಡಿರುವಿರಿ... ನೀವು ನನ್ನನ್ನು ನೋಡಲು ಬಂದಾಗ ನನ್ನ ಇಷ್ಟದ ತಿನಿಸುಗಳ ಬಗ್ಗೆ ನಿಮ್ಮಮ್ಮ ಕೇಳಿದ್ದರು ..... ವಧು ಶಾಸ್ತ್ರದಲ್ಲಿ ನಾಚಿಕೊಳ್ಳಬಾರದು ವರನ ಕಡೆಯವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಧೈರ್ಯದಿಂದ ಉತ್ತರಿಸು ಅಂತ ಅಮ್ಮ ನನಗೆ ಹೇಳಿದ್ದರು.ನಾನು ಹೇಳಿದ ಕೆಲವು ತಿನಿಸುಗಳಲ್ಲಿ ಗಡ್ ಬಡ್ ಐಸ್ ಕ್ರೀಮ್ ಸಹ ಹೆಸರಿಸಿದ್ದೆ...  ಅದಕ್ಕೆ ಅಂತ ತೋರುತ್ತೆ ನೀವು ಪ್ರತಿ ಸಾರಿ ನನ್ನ ನೋಡಲು ತೀರ್ಥಹಳ್ಳಿಗೆ ಬಂದಾಗ ನೀವು ನನಗೆ ಐಸ್ ಕ್ರೀಮನ್ನು ತಿನ್ನಿಸುವುದು ತಪ್ಪಿಸುವುದಿಲ್ಲ......ನನಗೋಸ್ಕರ ನೀವೂ ಸಹ ತಿನ್ನುವಂತಹ ಪರಿಸ್ಥಿತಿ. ನಿಮಗೆ ಇಷ್ಟವಿಲ್ಲವೆಂದು ಕಾಣುತ್ತದೆ. ನನ್ನಿಂದಾಗಿ ಈ ಐಸ್ ಕ್ರೀಮ್ ತಿನ್ನುವ ಶಿಕ್ಷೆ ನಿಮಗೆ....ಅಲ್ಲವೇ..?"

"ಇಲ್ಲ ಹಾಗೇನಿಲ್ಲ ಈ ಗಡ್ ಬಡ್ ಐಸ್ ನಮ್ಮ ಜೀವನದ ದಿಕ್ಕನ್ನೇ ಬದಲಿಸಿತು. ಅದಕ್ಕಾಗಿಯೇ ಈ ಐಸ್ ಕ್ರಿಮ್ ಮೇಲೆ ನನಗೂ ಅಷ್ಟೇ ಪ್ರೀತಿ ಇದೆ... ಅದಕ್ಕಿಂತಲೂ ಮಿಗಿಲಾಗಿ ನಿಮ್ಮನ್ನ ನನ್ನ ಎದುರುಗಡೆನೇ ಕೂರಿಸಿಕೊಂಡು ನಿಮ್ಮ ಸೌಂದರ್ಯ ಸವಿಯಬಹುದಲ್ಲ ಎಂಬ ಆಸೆಯಿಂದ ಇಲ್ಲಿಗೆ ಕರೆದುಕೊಂಡು ಬಂದೆ. ಈ ತರಹದ ಲವರ್ ಗಳ ಸ್ಪಾಟ್ ನಿಮ್ಮ ಊರಿನಲ್ಲಿ ಬೇರೆ ಯಾವುದಿದೆ ಹೇಳಿ...?  ನಿನ್ನ ನೋಡುತ್ತಾ ಒಂದ್ ನಾಲ್ಕು ಮಾತನಾಡಿ ನಿನ್ನ ಜೊತೆ ಇಲ್ಲಿ ಕಾಲ ಕಳೆಯಬಹುದು ಎಂಬ ಆಸೆಯೂ ಇದೆ. ನೀನು ಐಸ್ ಕ್ರಿಮ್ ತಿಂದು ಹೊಟ್ಟೆ ತಂಪು ಮಾಡಿಕೊಂಡರೆ... ನಾನು ನಿನ್ನ ಈ ಅಪ್ಸರೆಯಂತಹ ಸೌಂದರ್ಯ ಸವಿದು ಕಣ್ಣು ತಂಪಾಗಿಸಿ ಕೊಳ್ಳುತ್ತೇನೆ.....ಈ ಅವಕಾಶ ಇಲ್ಲಿ ಬಿಟ್ಟು ಬೇರೆ ಯಾವ ಹೋಟಲ್ ನಲ್ಲಿ ಸಿಗುತ್ತೆ ಹೇಳಿ..?"
ರಂಜಿತ್ ಹಾಂಗೆಂದ ಕೂಡಲೇ ಕೃತಿಕ ನಾಚಿ ನೀರಾಗಿ  ಹೋದಳು. ಕಣ್ಣುಗಳು ರಂಜಿತನ ಮಾತಿಗೆ ಸೋತು ನೆಲವನ್ನು ನೋಡ ತೊಡಗಿದವು. ಎದೆಯಿಂದ ಸ್ವಲ್ಪ ಕೆಳಗೆ ಜಾರಿದ ದುಪ್ಪಟ್ಟವನ್ನು ಮತ್ತೆ  ಹೊದ್ದುಕೊಂಡು ನಾಚಿಕೆಯ ಆಭರಣವನ್ನು ಧರಿಸಿ ಕುಳಿತಳು. ಕೃತಿಕ ರಂಜಿತ್ ನನ್ನು ನೋಡುತ್ತಿರುವುದೇ ಇದು ಮೂರನೇ ಸಾರಿ. ಮೊದಲನೇ ಸಲ ವಧು ಶಾಸ್ತ್ರದಲ್ಲಿ. ನಂತರ ಮತ್ತೆ ಹತ್ತು ದಿನದ ನಂತರ ದೀಪಾವಳಿ ಹಬ್ಬಕ್ಕೆ ಬಂದಾಗ. ಈಗ ಮದುವೆಯ ಕಲ್ಯಾಣ ಮಂಟಪ ಗೊತ್ತು ಮಾಡಲು ಬಂದಾಗ. ಹೀಗೆ ಪ್ರತಿ ಸಾರಿ ಬಂದಾಗಲೂ ದೇವಸ್ಥಾನಕ್ಕೆ ಎಂದು ಅವಳ ಮನೆಯಲ್ಲಿ ಸುಳ್ಳು ಹೇಳಿ ಕೃತಿಕಾ ಳನ್ನು ಈ ಐಸ್ ಕ್ರೀಮ್ ಪಾರ್ಲರ್ಗೆ ಕರೆದುಕೊಂಡು ಬರುತ್ತಿದ್ದ. ಇಲ್ಲಿ ಅವಳನ್ನು ಚುಡಾಯಿಸಿ, ಸತಾಯಿಸಿ, ಅವಳನ್ನು ತನ್ನ ಹತ್ತಿರದ ವರೆಗೂ ಸೆಳೆದುಕೊಳ್ಳಲು ಏನೆನೋ ಪ್ರಯತ್ನ ಮಾಡುತ್ತಿದ್ದ. ಅವಳ ಸೌಂದರ್ಯವನ್ನು ಹೊಗಳುತ್ತಿದ್ದ. ಗಂಡನಾಗುವ ಹುಡುಗನ ಮುಂದೆ ಕುಳಿತುಕೊಳ್ಳಲು ಮೊದಲೇ ನಾಚಿಕೊಳ್ಳುತ್ತಿದ್ದ ಹುಡುಗಿಗೆ ತನ್ನ  ಸೌಂದರ್ಯ ಕುರಿತು ಹೊಗಳಿದರೆ ಪಾಪ ಅವಳಿಗೆ ಹೇಗಾಗುವುದು ಬೇಡ ಹೇಳಿ..!!! ಮೊದಲೇ ಹಳ್ಳಿ ಸಂಪ್ರದಾಯದ ಹುಡುಗಿ. ತನ್ನ ವಿವಾಹವಾಗ ಹೊರಟ ಹುಡುಗನೊಬ್ಬ ಹೀಗೆ ಯದ್ವ ತದ್ವ ಹೊಗಳಿದರೆ ಅವಳು ಸಹ ಐಸ್ ಕ್ರೀಮ್ ನಂತೆ ಕರಗಿ ಹೋಗುತ್ತಿದ್ದಳು....
ಸ್ವಲ್ಪ ಹೊತ್ತು ಮೌನ ಆವರಿಸಿತು....ಇಬ್ಬರೂ ತುಟಿ ಬಿಚ್ಚಲಿಲ್ಲ. ಅಷ್ಟರಲ್ಲಿ ಗಡ್ ಬಡ್ ಐಸ್ ಇದ್ದ ಗ್ಲಾಸ್ ಅರ್ಧ ಖಾಲಿಯಾಗಿತ್ತು.

"ಏನದು... ಗಡ್ ಬಡ್ ಐಸು ನಿಮ್ಮ ಜೀವನದ ದಿಕ್ಕು ಬದಲಿಸಿತು ಎಂದು ಹೇಳಿದಿರಿ...?  ಹೇಗೆ...? ನನಗೆ ಅರ್ಥವಾಗಲಿಲ್ಲ....

ಕೃತಿಕ ತನಗೆ ಆಗಿದ್ದ ನಾಚಿಕೆಯಿಂದ ಸುಧಾರಿಸಿಕೊಂಡು ಮೌನ ಮುರಿದು ಕೇಳಿದಳು..

ಆಗ ರಂಜಿತ್ ತನಗೂ ತಮ್ಮ ಮನೆತನಕ್ಕೂ ಇದ್ದ ಈ ಐಸ್ ಕ್ರೀಮಿನ ಸಂಬಂಧವನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳತೊಡಗಿದ....

"ಅದು ಅರವತ್ತರ ದಶಕದ ಮಾತು...ಆಗ ನನ್ನ  ತಾತ ತೀರ್ಥಹಳ್ಳಿಯಲ್ಲೇ ಮದುವೆಯಾಗಿದ್ದು...ಹೊಸದಾಗಿ ಹುಡುಗಿ ನೋಡಲು ತೀರ್ಥ ಹಳ್ಳಿಗೆ ಬಂದಾಗ ನಮ್ಮ ತಾತ ಡಾ. ರಾಜ್ ರವರು ಕಣ್ತೆರೆದು ನೋಡು ಸಿನಿಮಾದಲ್ಲಿ ಹಾಕಿದ್ದ ರೀತಿಯಲ್ಲಿಯೇ ಮೂರು ಗುಂಡಿಯ ಕಾಟನ್ ಷರಟು ಮತ್ತು ಪಂಚೆಯನ್ನು ಹಾಕಿಕೊಂಡು ಹುಡುಗಿ ನೋಡಲು ಬಂದಿದ್ದರಂತೆ. ನಮ್ಮ ತಾತನ ಮನಸ್ಸಿನಲ್ಲಿ ಹುಡುಗಿ ಲೀಲಾವತಿಯಂತೆಯೇ ಸುಂದರವಾಗಿರಬೇಕು ಎಂದು ಕನಸು ಕಂಡಿದ್ದರಂತೆ. ಹತ್ತಾರು ಹುಡುಗಿ ನೋಡಿದ ನಂತರ ತಾತನಿಗೆ ಇಷ್ಟವಾದದ್ದು ಈ ತೀರ್ಥಹಳ್ಳಿಯ ಹುಡುಗಿ. ತಾತಾ ಕನ್ಯೆ ನೋಡುವ ಶಾಸ್ತ್ರ ಮುಗಿದ ಕೂಡಲೇ ಖುಷಿ ಖುಷಿಯಾಗಿ ಬೆಂಗಳೂರಿಗೆ ವಾಪಸ್ಸಾದರಂತೆ...
ತಾತನದು ಮಲ್ಲೇಶ್ವರಂ ನ 8ನೇ ಕ್ರಾಸ್ ನಲ್ಲಿ ಚಿಕ್ಕ ಹೋಟಲ್ ಇತ್ತು. ಆಗ ಹೋಟಲ್ ನಲ್ಲಿ ಈಗಿರುವಂತೆ ಹೆಚ್ಚು ಜನ ಬರುತ್ತಿರಲಿಲ್ಲ. ಪರ ಊರಿನಿಂದ ಬಂದವರು ಮಾತ್ರ ಊಟಕ್ಕಾಗಿ ಹೋಟಲ್ಗೆ ಬರುತ್ತಿದ್ದರು. ಆಗ ದೋಸೆ. ಚಪಾತಿ , ಅನ್ನ ಸಾಂಬಾರ್ ಟೀ ಕಾಫಿಯ ಮತ್ತು ಐಸ್ ಕ್ರೀಮ್ ಮಾತ್ರ ಹೋಟಲ್ ನಲ್ಲಿ ಸಿಗುತ್ತಿತ್ತು. ತೀರ್ಥಹಳ್ಳಿಯ ಹುಡುಗಿ ಚಿತ್ರನಟಿ ಲೀಲಾವತಿಯಂತೆ ದುಂಡುಮುಖ ಹೊಂದಿದ್ದಳು. ಅಂದು ತಾತ ಲೀಲಾವತಿ ನಟಿಸಿದ್ದ  ಕಣ್ತೆರೆದು ನೋಡು ಚಿತ್ರದ ಗ್ರಾಮ ಫೋನ್ ಪ್ಲೇಟನ್ನು  ಖರೀದಿಸಿ ಗ್ರಾಮ್ ಫೋನ್ ನಲ್ಲಿ ಹಾಕಿಕೊಂಡು ಕೇಳಿದ್ದೇ ಕೇಳಿದ್ದು.... ಹಾಡಿನ ಜೊತೆ ಜೊತೆಗೆ ತಾತ ಅಂದು ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಕನಸನ್ನು ಕಟ್ಟಿ ಕೊಂಡಿದ್ದರು.

ತಾತ ಮತ್ತೊಮ್ಮೆ ತೀರ್ಥಹಳ್ಳಿಗೆ ಹೋದಾಗ ಹುಡುಗಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಇದೇ ಹೋಟಲ್ಗೆ ಕರೆದುಕೊಂಡು ಬಂದರಂತೆ. ಆಗ ಇದು ಸಾಮಾನ್ಯ ಹೋಟಲ್ ಆಗಿತ್ತು. ಈಗಿನಂತೆ ಐಸ್ ಕ್ರೀಮ್ ಪಾರ್ಲರ್ ಆಗಿರಲಿಲ್ಲ.  ಆಗ ಹುಡುಗಿಯರು ಹೋಟಲ್ ಕಡೆ ಸುಳಿಯುವುದು ತುಂಬಾ ಅಪರೂಪ. ಆಗ ಹದಿನೆಂಟರ ಯೌವ್ವನ ಹೊಂದಿದ್ದ ನಮ್ಮಜ್ಜಿ ನಾಚಿಕೊಳ್ಳುತ್ತಲೇ ಹೋಟಲ್ ಗೆ ಬಂದಳಂತೆ. ತಾತ ತನ್ನ ಮನ ಮೆಚ್ಚಿದ ಹುಡುಗಿಗಾಗಿ ಐಸ್ ಕ್ರೀಮನ್ನು ಆರ್ಡರ್ ಮಾಡಿದರು.... ಆರ್ಡರ್ ತೆಗೆದುಕೊಂಡ ಹೋಟಲ್ ಮಾಲೀಕ ಒಳಗೆ ಹೋಗಿ ನೋಡಿದರೆ ಐಸ್ ಕ್ರೀಮ್ ಖಾಲಿಯಾಗಿತ್ತು. ಹೋಟಲ್ ಮಾಲೀಕನಿಗೆ ಅಪರೂಪಕ್ಕೆ ಬಂದ ನವ ಜೋಡಿಗಳನ್ನು ಇಲ್ಲ ಎಂದು ಹೇಳಿ ಕಳುಹಿಸಲು ಮನಸ್ಸಾಗಲಿಲ್ಲ.  ತಳದಲ್ಲಿ ಉಳಿದ ಎಲ್ಲಾ ಬಗೆಯ ಅಲ್ಪ ಸ್ವಲ್ಪ ಐಸ್ ಕ್ರೀಮನ್ನು ಎರಡು ಗ್ಲಾಸ್ ಗಳಿಗೆ ಹಾಕುತ್ತಾ ಬಂದರಂತೆ. ಅದೂ ಸಾಲದಾದಾಗ ಹೇಗಾದರೂ ಮಾಡಿ ಗ್ಲಾಸ್ ತುಂಬಿಸಬೇಕೆಂಬ ಅವಸರದಲ್ಲಿ ಕತ್ತರಿಸಿದ ಹಣ್ಣಿನ ಹೋಳು ಮೇಲೆ ಸ್ವಲ್ಪ ಗೋಡಂಬಿ ದ್ರಾಕ್ಷಿಗಳನ್ನು ಹಾಕಿ ಐಸ್ ಕ್ರೀಮಿನ ಕಪ್ಪನ್ನು ಹೇಗೋ ತುಂಬಿಸಿದ ಹೋಟಲ್ ಮಾಲೀಕ ನವ ಜೋಡಿಗಳಿಗೆ ಕೊಟ್ಟನಂತೆ. ಅಂದು ಮೂರ್ನಾಲ್ಕು ವಿಧದ ಐಸ್ಕ್ರೀಮನ್ನು ಸವಿದ ನವ ಜೋಡಿಗಳು ಬಾಯಿ ಚಪ್ಪರಿಸಿ ಸವಿದರಂತೆ....

ಅದಾದ ಹದಿನೈದು ದಿನಗಳ ನಂತರ ತಾತಾನ ಮದುವೆಯಿತ್ತು. ಬೆಂಗಳೂರಿನಿಂದ ತುಂಬಿದ ಲಾರಿ ಮದುವೆಗೆಂದು ಬಂದಿತ್ತು. ಆಗೆಲ್ಲಾ ಬಸ್ಸಿನ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಮದುವೆ, ದಿಬ್ಬಣದಂತಹ  ಸಮಾರಂಭಕ್ಕೆ ಹೋಗಲು ಜನ ಲಾರಿಯಲ್ಲೇ ಬರುತ್ತಿದ್ದರಂತೆ. ತೀರ್ಥಹಳ್ಳಿ ಸಮೀಪವಾದ ಕೂಡಲೇ ತಾತನಿಗೆ ಮತ್ತೆ ಆ ಹೊಸ ತರಹದ ಐಸ್ ಕ್ರೀಮನ್ನು ಸವಿಯುವ ಆಸೆಯಾಯಿತಂತೆ. ಹೋಟಲ್ ಮುಂದೆ ಲಾರಿಯನ್ನು ನಿಲ್ಲಿಸಿ ಎಲ್ಲರಿಗೂ ಐಸ್ ಕ್ರೀಮ್ ಆರ್ಡರ್ ಮಾಡಿದರಂತೆ. ಹೋಟಲ್ ಮಾಲೀಕನೊಂದಿಗೆ ತಾನೆ ಖುದ್ದು ಮಾತನಾಡಿ ಅಂದು ಹುಡುಗಿಯೊಂದಿಗೆ ಬಂದಾಗ ನೀಡಿದ ವಿಶೇಷ ಐಸ್ ಕ್ರೀಮನ್ನೇ ನೀಡಲು ಹೇಳಿದರಂತೆ. ಹಾಗೆಯೇ ಆ ಹೋಟಲ್ ಮಾಲೀಕನಿಗೆ ಆ ಐಸ್ ಕ್ರೀಮಿನ ಹೆಸರು ಕೇಳಿದರಂತೆ. ಹೋಟಲ್ ಮಾಲಿಕನಿಗೆ ತಕ್ಷಣ ಅದರ ಹೆಸರೇನು ಹೇಳಬೇಕೆಂದು ಹೊಳೆಯಲೇ ಇಲ್ಲ. ಅವಸರದಲ್ಲಿ ಗಡಿಬಿಡಿಯಿಂದ ಮಾಡಿದ ಆ ಐಸ್ ಕ್ರೀಮನ್ನು ಇಂದು ಒಂದು ಲಾರಿಯಷ್ಟು ಜನಕ್ಕೆ ಮಾಡಿಕೊಂಡುವ ಅವಕಾಶ ಬರುತ್ತದೆಯೆಂದು ಆ ಹೋಟಲ್ ಮಾಲೀಕ ಕನಸಿನಲ್ಲಿಯೂ ನೆನಸಿರಲಿಲ್ಲ. ಗಡಿಬಿಡಿಯಲ್ಲಿ ತಯಾರಿಸಿದ ಆ ಐಸ್ ಕ್ರೀಮ್ ಗೆ  "ಗಡ್ ಬಡ್" ಎಂದು ಏನೋ ಹೆಸರು ಹೇಳಿದನಂತೆ...

ಅಂದು ಹುಟ್ಟಿದ ಈ ಗಡ್ ಬಡ್ ಐಸ್ ಕ್ರೀಮಿನ ಜನಪ್ರಿಯತೆ ಇಂದಿಗೂ ಮುಂದುವರೆದಿದೆ. ನಿಮ್ಮ ತೀರ್ಥಹಳ್ಳಿ ಅಂದಿನ ಆ ಹೋಟಲ್ ಇಂದು ಬರಿ ಐಸ್ ಕ್ರೀಮ್ ಪಾರ್ಲರ್ ಆಗಿ ಜನಪ್ರಿಯತೆ ಗಳಿಸಿದೆ. 1961 ರಲ್ಲಿ ನಡೆದ ಈ ಘಟನೆ ಹೋಟಲ್ನ ದಿಕ್ಕು ದೆಸೆಯನ್ನೇ ಬದಲಾಯಿಸಿತು. ಇಂದು ಗಡ್ ಬಡ್ ಎಂಬ ಐಸ್ ಕ್ರೀಮ್ ಏನಾದರೂ ಜನ ದೇಶದಾದ್ಯಂತ ತಿನ್ನುತ್ತಿದ್ದಾರೆಂದರೆ ಅದು ನಮ್ಮ ಕರ್ನಾಟಕದ ತೀರ್ಥಹಳ್ಳಿಯೇ ಕಾರಣ. ಮೊದಲು ಗಡ್ ಬಡ್ ತಿಂದ ಕೀರ್ತಿ ನಮ್ಮ ತಾತನಿಗೆ ಸಲ್ಲುತ್ತದೆ. ಅಂದು ಪರಿಚಿತವಾದ ಆ ಗಡ್ ಬಡ್ ಐಸನ್ನು ನಮ್ಮ ತಾತಾ ಬೆಂಗಳೂರಿನಲ್ಲಿಯೂ ಪ್ರಾರಂಭಿಸಿದರಂತೆ. ಇಂದು ಈ ಐಸ್ ಕ್ರೀಮ್ ನ ಪ್ರಭಾವದಿಂದಾಗಿಯೇ ನಾವೂ ಸಹ ಶ್ರೀಮಂತರಾಗಿದ್ದೇವೆ. ಈ ಘಟನೆಯಿಂದಾಗಿ ತೀರ್ಥಹಳ್ಳಿಯಲ್ಲಿರುವ ಈ ಹೋಟಲ್ ನ ಅದೃಷ್ಟ ಮಾತ್ರ ಬದಲಾಗಲಿಲ್ಲ. ನಮ್ಮ ಜೀವನದ ದಿಕ್ಕನ್ನು ಸಹ ಬದಲಾಯಿಸಿತು. ಅದಕ್ಕೆನೇ ನಿನಗೆ ಇದೇ ಹೋಟಲ್ ಗೆ ಕರೆದುಕೊಂಡು ಬಂದಿದ್ದು. ನಮ್ಮ ತಾತನೂ ಸಹ ನಿನ್ನ  ಹುಡುಗಿಯನ್ನು ಇದೇ ಐಸ್ ಕ್ರಿಮ್ ಪಾರ್ಲರ್ ಗೆ ಕರೆದುಕೊಂಡು ಹೋಗುವಂತೆ ಎರೆಡೆರಡು ಸಲ ತಾಕೀತು ಮಾಡಿ ಹೇಳಿದ್ದಾರೆ.... ಎಷ್ಟೇ ಆದರೂ ತಾತನ ಆಜ್ಞೆ ಪಾಲಿಸಬೇಕಲ್ಲವೆ...!!!"

ರಂಜಿತ್ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ಕೃತಿಕ ತನ್ನ ಗ್ಲಾಸ್ ನಲ್ಲಿದ್ದ ಐಸ್ ಕ್ರೀಮನ್ನು ತಿಂದು ಮುಗಿಸಿದ್ದಳು.
ತಾನು ಮದುವೆಯಾಗುವ ಹುಡುಗನ ಮುಂದೆ ಕುಳಿತ್ತಿದ್ದ ಕೃತಿಕ ಸ್ವಲ್ಪ ನಾಚಿಕೊಂಡೇ ಇದ್ದಳು. ನಾಚಿಕೆಯ ಮೈ ಮರೆಯುವಿಕೆಯಲ್ಲಿದ್ದ ಕೃತಿಕ ತನ್ನ ತುಟಿಯಂಚಿನಲ್ಲಿ ಮೆತ್ತಿಕೊಂಡಿದ್ದ ಸ್ವಲ್ಪ ಐಸ್ ಕ್ರೀಮ್ ನ್ನು ಒರೆಸಿಕೊಳ್ಳುವುದನ್ನೇ ಮರೆತಳು. ಕೃತಿಕಳ ತುಟಿಯ ಅಂಚಿನಲ್ಲಿ ಮೆತ್ತಿಕೊಂಡಿದ್ದ ಆ ಐಸ್ ಕ್ರಿಮನ್ನು ರಂಜಿತ್ ತನ್ನ ಕೈ ಬೆರಳಿನಿಂದ ಒರೆಸಿದ. ಐಸ್ ಕ್ರೀಮ್ ಒರೆಸುವ ನೆಪದಲ್ಲಿ ಕೃತಿಕಳ ಜೇನಿನ ಅಧರಗಳನ್ನು ಸಂಪೂರ್ಣವಾಗಿ ಸವರಿದನು. ಎರಡು ಬೆರಳುಗಳಿಂದ ಕೆಳ ತುಟಿಗಳನ್ನು ಪ್ರೀತಿಯಿಂದ ಹಿಡಿದುಕೊಂಡನು. ಕೃತಿಕಳಿಗೆ ಆ ಮೊದಲ ಸ್ಪರ್ಶದಿಂದ ಮೈ ಯಲ್ಲೆಲ್ಲಾ ವಿದ್ಯುತ್ ಸಂತರಿಸಿದಂತಾಯಿತು. ಕಣ್ಣುಗಳು ನಾಚುತ್ತಾ ಹಾಗೇ ಮುಚ್ಚಿಕೊಂಡವು. ಕೆನ್ನೆಗಳು ಗಲಾಬಿ ಹೂವಿನಂತೆ ಕೆಂಪು ರಂಗನ್ನು ಪಡೆದವು.  ಕಣ್ಣು ಮುಚ್ಚಿದ್ದ ಆ ಕತ್ತಲೆಯ ಪ್ರಪಂಚದಲ್ಲಿ ಕೃತಿಕ ಏನೆನೋ ಕನಸು ಕಂಡಳು.....
ಅಂದು ಸಂಜೆ ರಂಜಿತ್ ಹೊರಡಲು ಸಿದ್ಧನಾದ. ಕೃತಿಕಳ ತಾಯಿ ಭಾವಿ ಅಳಿಯನಿಗೆ ಸಿಹಿ ತಿನಿಸಿನ ಪೊಟ್ಟಣವನ್ನು ಕೊಟ್ಟಳು. ಕೃತಿಕ ತನ್ನ ಭಾವಿ ಪತಿಯನ್ನು ಬೀಳ್ಕೊಡಲು ಮನೆಯ ಹೊರಗೆ ನಿಂತಿದ್ದ ಕಾರಿನವರೆಗೂ ಬಂದಳು. ಕೃತಿಕಳ ತಾಯಿ ಮರೆಯಾಗಿದ್ದನ್ನು ಗಮನಿಸಿದ ರಂಜಿತ್ ಕೃತಿಕಳ ಕೈಯನ್ನು ಹಿಡಿದೆಳೆದು ತನ್ನ ಹತ್ತಿರಕ್ಕೆ ಸೆಳೆದುಕೊಂಡನು.  ಅವಳ ಕಿವಿಯ ಹತ್ತಿರಕ್ಕೆ  ಹೋಗಿ

"ಮುಂದಿನ ಸಾರಿ ಅದೇ ಹೋಟಲ್ಗೆ ಐಸ್ ಕ್ರೀಮ್ ತಿನ್ನಲು ಹೋಗೋಣ.... ಮತ್ತೆ ತುಟಿಯ ಅಂಚಿನಲ್ಲಿ ಐಸ್ ಕ್ರೀಮ್ ಉಳಿಸುವುದನ್ನು ಮರೆಯಬೇಡ"

ಎಂದು ಮೆಲ್ಲಗೆ ಉಸುರಿದನು...

ಮುಖದ ತೀರ ಸಮೀಪದ ವರೆಗೂ ಆವರಿಸಿದ ರಂಜಿತ್ ನ ಆ ಬಿಸಿ ಉಸಿರಿಗೆ ಕೃತಿಕ ಸಂಪೂರ್ಣವಾಗಿ ಐಸ್ ಕ್ರೀಮ್ ನಂತೆ ಕರಗಿ ನಾಚಿ ನೀರಾಗಿ ಹೋದಳು.....
                     ಪ್ರಕಾಶ್ ಎನ್ ಜಿಂಗಾಡೆ...

No comments:

Post a Comment