Thursday 15 December 2016

ಕಾಣಿಕೆ

ಕಾಣಿಕೆ



ಶ್ರೀ ಶ್ರೀ ಶ್ರೀ ಸಾನಂದ ಶಾಸ್ತ್ರಿಗಳು ಜ್ಯೋತಿಷ್ಯದಲ್ಲಿ ಪ್ರಖಂಡ ಪಂಡಿತರು. ಅವರ ಶಾಸ್ತ್ರ ವಾಕ್ ಪ್ರಖರತೆಗೆ ಭವಿಷ್ಯದ ಸಂಗತಿಗಳೆಲ್ಲವೂ ಹೆದರಿ ಬೆದರಿ ಸೋತು ಸುಣ್ಣವಾಗಿಬಿಡುತ್ತವೆಯೆಂದು ಜನ ಮಾತನಾಡಿಕೊಳ್ಳುವುದುಂಟು. ಹಲವು ಜನರು ತಮ್ಮ ಮನದ ನೋವಿಗೆ ಶಾಶ್ವತ ಪರಿಹಾರವನ್ನು ಸಾನಂದ ಶಾಸ್ತ್ರಿಗಳಲ್ಲಿ ಕಂಡುಕೊಂಡಿದ್ದುಂಟು. ಒಮ್ಮೆ ಶಾಸ್ತ್ರಿಗಳು ಭವಿಷ್ಯ ನುಡಿದರೆಂದರೆ ಮುಗೀತು ಅದು ಸುಳ್ಳಾಗುವ ಮಾತೇ ಇಲ್ಲ. ಶಾಸ್ತ್ರಿಗಳ ಪಾಂಡಿತ್ಯದ ಜನಪ್ರಿಯತೆಯನ್ನು ಕೇಳಿದ ನನಗೆ ಶಾಸ್ತ್ರಿಗಳ ಹತ್ತಿರ ಹೋಗಲೇಬೇಕಾದ ಪ್ರಸಂಗವೊಂದು ಒದಗಿ ಬಂತು...
ಬಡತನದ ಬೇಗೆಯಿಂದ ಬೆಂದ ನನಗೆ ಶ್ರೀಮಂತನಾಗಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣಬೇಕೆಂಬ ಅಪೇಕ್ಷೆ ಅತಿಯಾಗಿತ್ತು. ನಾನೂ ಸಹ  ಒಂದು ಕೈ ನೋಡಿಯೇ ಬಿಡೋಣವೆಂದು ಸಾನಂದ ಶಾಸ್ತ್ರಿಗಳ ಬಳಿ ಹೋದೆ. ಶಾಸ್ತ್ರಿಗಳು ಪಟ್ಟೆ ನಾಮದ ಗಂಧವನ್ನು ಹಚ್ಚಿಕೊಂಡು ಹುಲಿ ಚರ್ಮದ ಮೇಲೆ ಆಸೀನರಾಗಿ ಕುಳಿತ್ತಿದ್ದರು. ಶಾಸ್ತ್ರಿಗಳ ಮುಖವು ದೈವ ಸ್ವರೂಪದ ಗಂಭೀರತೆಯನ್ನು ಪಡೆದಿತ್ತು.

ನನ್ನ ಆಸೆಯನ್ನು ಅವರಿಗೆ ಮನ ಮುಟ್ಟುವಂತೆ ಹೇಳಿಕೊಂಡೆ. ಶಾಸ್ತ್ರಿಗಳು ಕವಡೆ ಹಾಕಿ ನನ್ನ ಸಮಸ್ಯೆಗೆ ಪರಿಹಾರ ಸೂಚಿಸಿದರು. ತಿಮ್ಮಪ್ಪನ ಹುಂಡಿಗೆ ಸಾಧ್ಯವಾದಷ್ಟು ಕಾಣಿಕೆ ಸಲ್ಲಿಸು ನಿನಗೆ ಒಳ್ಳೆ ಫಲ ಲಭಿಸುತ್ತದೆಯೆಂದರು. ಎಷ್ಟು ಉದಾರಿಯಾಗುತ್ತಿಯೋ ಅಷ್ಟು ಸಂಪತ್ತನ್ನು ನೀನು ಕಾಣುತ್ತೀಯ ಎಂದರು...
ಅವರು ಹೇಳಿದಂತೆ ನಡೆದು ಕೊಳ್ಳಲು ಮನಸ್ಸು ಹಾತೊರೆಯುತ್ತಿತ್ತು. ಇದ್ದ ಬದ್ದ ಹಣ ಕೂಡಿ ಹಾಕಿ ತಿಮ್ಮಪ್ಪನ ಹುಂಡಿಗೆ ಹಾಕಲು ಕಾಣಿಕೆಯನ್ನೆಲ್ಲಾ ಸಂಗ್ರಹಿಸಿದೆ. ಸಾವಿರಾರು ರೂಪಾಯಿಗಳಷ್ಟು ಹಣವನ್ನು  ಹುಂಡಿಗೆ ಹಾಕಿದ್ದಾಯಿತು. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಶ್ರೀಮಂತನಾಗಬೇಕೆಂಬ ಹಂಬಲ ನನ್ನಲ್ಲಿ ಹೆಚ್ಚಾಗಿತ್ತು.  ನಾನು ಬಹಳ ಉದಾರತೆಯನ್ನು ಪ್ರದರ್ಶಿಸಿ ಕೈಯಲ್ಲಿದ್ದ ಬಂಗಾರದ ಬ್ರಾಸ್ಲೆಟ್ಟನ್ನು ಸಹ ಹುಂಡಿಗೆ ಹಾಕಿಬಿಟ್ಟೆ.  ತುಂಬಾ ಉದಾರತೆ ತೋರಿದ ಹೆಮ್ಮೆಯು ಒಂದು ಕ್ಷಣ ನನ್ನ ಮನಸ್ಸನ್ನು ಸಂತೋಷವನ್ನಾಗಿರಿಸಿತು.

ದೇವರಿಗೆ ಹಣ ಹಾಕಿದ್ದೆನೆಂಬ ಕಾರಣಕ್ಕಾಗಿ ಮಾರನೆಯ ದಿನದಿಂದಲೇ ಪ್ರತಿಫಲವನ್ನು ನಿರೀಕ್ಷೆ ಮಾಡಲಾರಂಭಿಸಿದೆ. ವ್ಯಾಪಾರ ವ್ಯವಹಾರ ಪ್ರಗತಿಯಾಗುವ ಕನಸು ಕಂಡೆ. ಬೀದಿಯಲ್ಲಿ ಜನರ ಗುಂಪೇನಾದರೂ ಬರುತ್ತಿದ್ದರೆ ಅವರು ನಮ್ಮ ಅಂಗಡಿಗೇ ಬರಬಹುದು ಸಾವಿರಾರು ರೂಪಾಯಿಗಳ ವ್ಯಾಪಾರ ಮಾಡಬಹುದು ಎಂಬ ಆಸೆಯಿಂದ ಅವರತ್ತ ನೋಡುತ್ತಿದ್ದೆ. ಅಂತಹ ಹಲವಾರು ಜನರ  ಗುಂಪುಗಳು ನಮ್ಮ ಅಂಗಡಿಯ ಮುಂದೆ ಹಾದು ಹೋದರೇ ಹೊರತು ಯಾರೂ ಅಂಗಡಿಯನ್ನು ಮೂಸಿಯೂ ನೋಡಲಿಲ್ಲ. ಮೊದಲಿಗಿಂತಲೂ ವ್ಯವಹಾರ ಕಡಿಮೆಯಾಗಲಾರಂಭಿಸಿತು. ಪ್ರಖರ ಜ್ಯೋತಿಷ್ಯ ಶಿರೋಮಣಿ ಸಾನಂದ ಶಾಸ್ತ್ರಿಗಳು ಹೇಳಿದ ಯಾವ ಮಾತುಗಳೂ ನಿಜವಾಗಲಿಲ್ಲ. ಅದರಿಂದ ಯಾವ ಫಲವೂ ನನಗೆ ದಕ್ಕದಂತಾಯಿತು...

ಬೇಸರದಿಂದ ತಿಮ್ಮಪ್ಪನನ್ನು ಶಪಿಸುತ್ತಲೇ ಮನೆಯ ಕಡೆಗೆ ಹೆಜ್ಜೆ ಹಾಕಿದೆ.  ನಂಬಿದ ದೇವರು ತಿಮ್ಮಪ್ಪನು ನನ್ನ ಆಸೆ ಈಡೇರಿಸದಿದ್ದಕ್ಕೆ ತುಂಬಾ ಕೋಪ ಬಂದಿತು. ದಾರಿಯಲ್ಲಿ ಸಿಕ್ಕ ದೇವಸ್ಥಾನದ ಕಡೆಗೆ ಮುಖ ತಿರುಗಿಸಿಯೂ ನೋಡಲಿಲ್ಲ. ಮನೆಗೆ ಬರುವಷ್ಟರಲ್ಲಿ ಊಟದ ಸಮಯ ಆಗಲೇ ಮೀರಿತ್ತು. ಮನದಲ್ಲಿ ಅದೇ ನೋವು ಮತ್ತೆ ಮತ್ತೆ ಕಾಡುತ್ತಿತ್ತು. ಮನೆಗೆ ಬಂದಾಗ ಮಕ್ಕಳು ಹಾಲ್ ನಲ್ಲಿ ಟಿ.ವಿ. ನೋಡುತ್ತಾ ಕುಳಿತ್ತಿದ್ದರು. ಊಟ ಮಾಡಿ ಹಾಗೇ ಮೆತ್ತನೆಯ ಸೋಫಾದ ಮೇಲೆ ಒರಗಿದೆ. ನಿದ್ದೆಯ ಮಂಪರು ಆವರಿಸಿತು. ಕಣ್ಣಿಗೆ ಮಬ್ಬು ಆವರಿಸಿದಂತಾಯಿತು....ಕಣ್ಣುಗಳು ಮಂಜಾದವು.  ಬೆಳ್ಳನೆಯ ಮೋಡಗಳ ರಾಶಿ ಕಣ್ಣ ಮುಂದೆ ಕಂಡಂತಾಯಿತು. ಬಿಳಿಯ ಬಣ್ಣದ ಹೊಗೆ ಅಲೆಯಂತೆ ತೇಲುತ್ತಿದ್ದವು. ಕಣ್ಣು ತೆರದು ನೋಡಿದೆ. ಬಿಳಿ ಮೋಡದ ಮದ್ಯೆ ವೈಭವೋ ಪೇರಿತವಾದ ಸ್ವರ್ಗವೊಂದು ಗೋಚರಿಸಿತು. ಅಲ್ಲಿದ್ದ ಆಸ್ಥಾನ ಸಂಪೂರ್ಣವಾಗಿ ಚಿನ್ನದಿಂದ ತಯಾರಾಗಿತ್ತು. ಅದರ ಪ್ರತಿಬಿಂಬದ ಹೊಂಗಿರಣಗಳು ಕಣ್ಣುಗಳನ್ನು ಕೋರೈಸಿದವು. ಚಿನ್ನದ ಆಸ್ಥಾನದ ಮಧ್ಯೆ
ಎಲ್ಲಾ ದೇವಾನುದೇವತೆಗಳು ಸಭೆ ಸೇರಿದ್ದರು.

ಅರೆ......!!!! ಅಲ್ಲಿ ನಾನೂ ನಿಂತಿದ್ದೆ.

ತಿಮ್ಮಪ್ಪ ವೆಂಕಟೇಶ್ವರ ಸ್ವಾಮಿಯ ಮುಂದೆ ನಾನು ತಲೆ ತಗ್ಗಿಸಿ ಕೊಂಡಿದ್ದೆ. ನಾನು ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿದ್ದರೂ ನನ್ನ ಸಮಸ್ಯೆ ಪರಿಹಾರವಾಗದಿದ್ದರ ಬಗ್ಗೆ ಆ ಸಭೆಯಲ್ಲಿ  ಚರ್ಚೆ ನಡೆಯುತ್ತಿತ್ತು.

"ನೀನು ತಿಮ್ಮಪ್ಪ ಸ್ವಾಮಿಗೆ ಕಾಣಿಕೆಯನ್ನು ಸಲ್ಲಿಸಿ, ನಿನ್ನ ಮನದಾಸೆ ಈಡೇರದಿದ್ದಕ್ಕೆ ನೀನು ತಿಮ್ಮಪ್ಪನನ್ನೇ ಶಪಿಸಿದೆಯಾ...? ಮೂರ್ಖ ಮಾನವ"

ಶಶಿಭೂಷಣ ಶಂಕರನು ಕೋಪದಿಂದ ನೋಡುತ್ತಾ  ನನ್ನನ್ನು ಪ್ರಶ್ನಿಸಿದರು.

"ಹೌದು... ಸ್ವಾಮಿ ತಿಮ್ಮಪ್ಪನನ್ನು ಶಪಿಸಿದ್ದು ನಿಜ, ನನ್ನ ಬಡತನದ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲಿ.  ನಾನು ಬೆವರು ಸುರಿಸಿ ದುಡಿದ ಸಾವಿರಾರು ರೂಪಾಯಿ ಹಣವನ್ನು ತಿಮ್ಮಪ್ಪನ ಹುಂಡಿಗೆ  ಅರ್ಪಿಸಿದ್ದೇನೆ. ಮನೆತನದ ನಿರ್ವಹಣೆಯ ಸಮಸ್ಯೆ ಎಷ್ಟೇ ಇದ್ದರೂ ಸಹ ನಾನು ತಿಮ್ಮಪ್ಪನಿಗೆ ಕಡಿಮೆಯೇನೂ ಮಾಡಲಿಲ್ಲ. ನಾನು ನಂಬಿದ ದೇವರು ನನಗೆ ವರ ನೀಡಲಿಲ್ಲವೆಂದರೆ ಶಪಿಸುವುದರಲ್ಲಿ ತಪ್ಪೇನಿದೆ"

ನಾನು ಶಂಕರನಿಗೆ ಧೈರ್ಯದಿಂದಲೇ ಉತ್ತರಿಸಿದೆ.
ನನ್ನ ಬಳಿಯಲ್ಲಿ ನಿಂತಿದ್ದ ತಿಮ್ಮಪ್ಪ ನನ್ನನ್ನು ನೋಡಿ ಕುಪಿತರಾದರು...

"ಏನು....!!!  ಆ ನಿನ್ನ ಮಾನವ ನಿರ್ಮಿತ ಹಣವನ್ನು ತೆಗೆದುಕೊಂಡು ನಾನೇನು ಮಾಡಲಿ. ನಿನ್ನ  ವಿನಿಮಯದ ಆ ಹಣವು ಒಂದು ಯಕಶ್ಚಿತ್ ವಸ್ತು. ಅದನ್ನು ನಿನ್ನ ಬಳಿಯೇ ಇಟ್ಟುಕೋ. ನಿನಗೇ ಉಪಯೋಗವಾದೀತು.... ಅದು ನಿನ್ನ ಬೆವರಿನ ಹನಿ ಎಂದ ಮಾತ್ರಕ್ಕೆ ನೀನು ಆಸೆಪಟ್ಟಂತೆ ನೆರವೇರಿಸಲು ಸಾಧ್ಯವೇ..? "

ತಿಮ್ಮಪ್ಪನ ಮಾತು ನನ್ನ ಪರವಾಗಿಲ್ಲದುದಕ್ಕೆ  ನನಗೆ ಮತ್ತೆ ಬೇಜಾರಾಯಿತು.

"ಏನು....!!??  ನಮ್ಮ ಹಣ ಯಕಶ್ಚಿತ್ ವಿನಿಮಯದ ವಸ್ತುವೇ...? "

ನಾನು ಆಶ್ಚರ್ಯದಿಂದ ಕೇಳಿದೆ

ಆಗ ಶಂಕರನು ಮಧ್ಯೆ ಪ್ರವೇಶಿಸಿ 

"ಹೌದು ಮಗು... ಮಾನವ ನಿರ್ಮಿತ ಹಣಕ್ಕೆ ನಮ್ಮಲ್ಲಿ ಯಾವ ಬೆಲೆಯೂ ಇಲ್ಲ. ಅದು ನೀವು ವಿನಿಮಯಕ್ಕಾಗಿ ಮಾಡಿಕೊಂಡ ವಸ್ತು ಅಷ್ಟೆ. ಇಂತಹ ಉಪಯೋಗಕ್ಕೆ ಬಾರದ  ವಸ್ತುವನ್ನು ದೇವರಿಗೆ ಅರ್ಪಿಸಿದ್ದೇನೆ ಎಂಬ ನಿನ್ನ ಮಾತು ಮೂರ್ಖತನದ್ದು. ಲಂಚ ಕೊಟ್ಟು ಕಾರ್ಯ ಸಾಧನೆಯ ಮಾತು ನಿಮ್ಮ ಮಾನವರಿಗಷ್ಟೇ ಸೀಮಿತವಾಗಿರಲಿ. ಹಣ ಆಮಿಷದ ವಿಷಯಗಳು ನಮ್ಮ ಪರಿಧಿಯಿಂದ ದೂರವಾಗಿಯೇ ಇವೆ. ನಿಮ್ಮ ಬದುಕಿಗೆ ರೂಪಿಸಿಕೊಂಡ ವಿನಿಮಯದ ವಸ್ತುಗಳು ಇಲ್ಲಿ ಮೌಲ್ಯವನ್ನು ಕಳೆದುಕೊಂಡು ಕೇವಲ ಒಂದು ವಸ್ತುವಿನಂತೆ ಕಾಣುತ್ತವೆಯಷ್ಟೆ. ಪಾಪ ಪುಣ್ಯಗಳ ಲೆಕ್ಕಾಚಾರ ಮಾಡುವ ಈ ಸ್ಥಳದಲ್ಲಿ ನೀವು ಹಣವೆಂದು ಕರೆಯುವ ಆ ವಸ್ತುವನ್ನು ನಾವು ಎಂದಿಗೂ ಲೆಕ್ಕಾಚಾರ ಮಾಡುವುದಿಲ್ಲ. ನೀವು ಸಲ್ಲಿಸಿದ ಆ ಕಾಣಿಕೆಗೆ ಅನುಗುಣವಾಗಿ ಪ್ರತಿಫಲವನ್ನು ಆಶಿರ್ವದಿಸುವ ಯಾವ ಮಾನದಂಡಗಳೂ ನಮ್ಮಲ್ಲಿ ಇಲ್ಲ. ಇನ್ನು ಹೆಚ್ಚಾಗಿ ಹೇಳಬೇಕೆಂದರೆ ಅಂತಹ ವಸ್ತುವಿಗೆ ನಮ್ಮಲ್ಲಿ ಜಾಗವೇ ಇಲ್ಲ".

ಶಂಕರನು ಸಮಾಧಾನದಿಂದಲೇ ಹೇಳಿದರು

"ಹಾಗದರೆ ದೇವರಿಗೆ ಸಂಪತ್ತನ್ನು ಅರ್ಪಿಸುವುದು ತಪ್ಪೇ..?"
ನಾನು ಗೊಂದಲದಿಂದ ಶಂಕರನನ್ನು ಪ್ರಶ್ನಿಸಿದೆ
"ದೇವರಿಗೆ ಸಂಪತ್ತನ್ನು ಅರ್ಪಿಸುವುದು ತಪ್ಪಲ್ಲ.. ಆದರೆ ನೀನು ಯಾವುದನ್ನು ಸಂಪತ್ತು ಎಂದು ತಿಳಿದುಕೊಂಡಿದ್ದೆಯೋ ಅದು ಸಂಪತ್ತೇ ಅಲ್ಲ. ಸಂಪತ್ತು ಎಂದರೆ ದೇವರಿಂದ ನಿರ್ಮಿತವಾದ ಬೆಟ್ಟ ಗುಡ್ಡ, ಮರ, ಗಿಡ ಗಾಳಿ, ನೀರು,ನದಿ, ಸಮುದ್ರ ಭೂಮಿ, ಗ್ರಹ, ತಾರೆ ಆಕಾಶಕಾಯಗಳು, ಸಮಸ್ತ ಭ್ರಹ್ಮಾಂಡ ಎಲ್ಲವೂ..... ಇವೇ ನಿಜವಾದ ಸಂಪತ್ತುಗಳು. ಭ್ರಹ್ಮಾಂಡದಲ್ಲಿ ವಾಸಿಸುವ ಸಕಲ ಜೀವರಾಶಿಗಳಿಗೆ ಆಹಾರ ಸಿಗಲೆಂದು ಕಡಿಮೆಯಾಗದಂತೆ ಎಲ್ಲವನ್ನೂ ಅಳೆದು ತೂಗಿ ಸೃಷ್ಟಿಸಲಾಗಿದೆ. ನೀನೂ ಒಂದು ಕಾಳನ್ನು ಭೂಮಿಯಲ್ಲಿ ಬಿತ್ತಿದರೆ ನೂರಾರು ಕಾಳುಗಳನ್ನು ಪಡೆಯುವ ವರವನ್ನು ಕರುಣಿಸಿದ್ದೇವೆ..... ಇವುಗಳನ್ನು ಉಪಯೋಗಿಸಿಕೊಂಡ ನೀನು ಕೆಲವು ಕರ್ತವ್ಯವನ್ನು ನಿಭಾಯಿಸಲೇ ಬೇಕು. 

ನೀನು ಮರದಿಂದ ಒಂದು ಹಣ್ಣನ್ನು ಕಿತ್ತರೆ, ನೀನು ಅದಕ್ಕೆ ಪ್ರತಿಫಲವಾಗಿ ಆ ಮರಕ್ಕೆ  ನೀರೆರೆದು ಪೋಷಿಸಬೇಕು. ಒಂದು ಮರ ಉರುಳಿಸಿದರೆ ಮತ್ತೊಂದು ಮರ ಬೆಳೆಸುವ ಹೊಣೆ ನಿನ್ನದು. ಗಾಳಿ, ನೀರು, ಭೂಮಿಯ ವಿಷಯದಲ್ಲೂ ಅಷ್ಟೆ ನೀನು ಅವುಗಳನ್ನು ಉಪಯೋಗಿಸಿದ ಹಾಗೆಯೇ ಅದರ ಋಣವನ್ನು ತೀರಿಸಬೇಕು. ನಾವು ಸೃಷ್ಟಿಸಿದ ಸಮಗ್ರ  ಸಂಪತ್ತನ್ನು ಮತ್ತೆ ಯಥಾಸ್ಥಿತಿಯಲ್ಲಿರುವಂತೆ ಮಾಡುವುದು ನಿನ್ನ ಹೊಣೆ. ಅಂತಹ ಸಂಪತ್ತನ್ನು ನಮಗೆ ಮರಳಿ ಸಮರ್ಪಿಸುವ ಸತ್ಕಾರ್ಯವನ್ನು ಮಾಡು. ನಾವೇ ಸೃಷ್ಠಿಸಿದ ಪ್ರಕೃತಿಯ ಒಂದು ವಸ್ತುವಿನಿಂದಲೇ ತಯಾರಿಸಿದ ಆ ಮಾನವ ನಿರ್ಮಿತ  ಹಣವನ್ನು ನೀಡುವುದರ ಮೂಲಕ ಅಲ್ಲ. ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ."

ಶಂಕರನ ಮಾತಿನಲ್ಲಿ ದೃಢ ನಿಶ್ಚಯವಿತ್ತು.

"ಹಾಗಾದರೆ ನಾವು ಬೆವರು ಸುರಿಸಿದ ಶ್ರಮವಾದರೂ ನೀವು ಪರಿಗಣಿಸಬಹುದಲ್ಲ. ಎಲ್ಲಾ ಕಡೆ ದೇವರಿಗೆ ಹಣ ಸಮರ್ಪಿಸುವ ಸಂಪ್ರದಾಯವಿದೆ. ಅದರಂತೆ ನಾವು ನಡೆದುಕೊಳ್ಳುವುದು ತಪ್ಪೇ"

ಶಂಕರನಲ್ಲಿ ನಾನು ಮತ್ತೆ ಪ್ರಶ್ನಿಸಿದೆ.

"ಮೂರ್ಖ ಮಾನವ.... ನೀವು ಸಮರ್ಪಿಸಿದ ಯಾವುದೇ ಹಣವನ್ನು ಪರಿಗಣಿಸಿ ನಾವು ನಿಮಗೆ ಯಾವುದೇ ಫಲಾಫಲಗಳನ್ನು ಆಶಿರ್ವದಿಸಲಾರೆವು. ಆಯಾ ದೇಶದ ಜನರು ಆಯಾ ದೇಶದ ಹಣವನ್ನು ನಮಗೆ ಸಮರ್ಪಿಸುತ್ತಾರೆ. ರೂಪಾಯಿ, ಡಾಲರ್, ಯೆನ್, ಯೂರೋ, ಇತ್ಯಾದಿ ಇತ್ಯಾದಿ ... ಇವೆಲ್ಲವೂ ನಮ್ಮ ದೃಷ್ಠಿಯಲ್ಲಿ ಸಂಪತ್ತೇ ಅಲ್ಲ.. ಯಾವತ್ತಾದರೂ ನಾವು ಅದನ್ನು ಪಡೆದುಕೊಂಡ ಉದಾಹರಣೆಯನ್ನು ಹೇಳಿಬಿಡು ನೋಡೋಣ. ನಾವು ಪರಿಗಣಿಸುವುದು ಪಾಪ ಪುಣ್ಯಗಳನ್ನು ಮಾತ್ರ. ನೀವು ನಿಮ್ಮ ಪುಣ್ಯದ ಕೆಲಸಗಳನ್ನು ದೇವರಿಗೆ ಸಮರ್ಪಿಸರಿ. ಆಗ ನೀವು ನಿಜವಾದ ಪ್ರತಿಫಲವನ್ನು ಪಡೆಯುತ್ತೀರಿ.... ನೀನು ಎಂದಾದರೂ ನಿನ್ನ ಪುಣ್ಯದ ಕೆಲಸವನ್ನು ತಿಮ್ಮಪ್ಪನ ಹುಂಡಿಗೆ ಹಾಕಿರುವೆಯಾ...? ಭಗವಂತನ ಹೆಸರಿನಲ್ಲಿ ಮಾಡಿದ ಸತ್ಕಾರ್ಯ ಯಾವುದಾದರು ಇದೆಯಾ...? ನೀನು ಎಂದಾದರೂ ಧರ್ಮ ಕರ್ಮದಂತೆ ನಡೆದುಕೊಂಡಿರುವೆಯಾ...? .."

ಶಂಕರನ ಮಾತು ಕೇಳಿ ನಾನು ನಾಚಿಕೆಯಿಂದ ತಲೆತಗ್ಗಿಸಿ ಹೇಳಿದೆ.

ಈಗ ನನ್ನ ಮಾತು ತೊದಲಲಾರಂಭಿಸಿತು

"ಪುಣ್ಯದ ಕೆಲಸವನ್ನು ಮಾತ್ರ ದೇವರಿಗೆ ಸಮರ್ಪಿಸ ಬೇಕೆಂಬ ನಿನ್ನ ಮಾತಿನಲ್ಲಿ ನ್ಯಾಯವಿದೆ ಶಿವಶಂಕರ. ಆದರೆ ಹಣ ಬೇಡವೆಂದರೆ ನೀವು ಹಣದ ದೇವತೆ ಲಕ್ಷ್ಮೀಗೆ ಅವಮಾನ ಮಾಡಿದಂತಾಗುವುದಿಲ್ಲವೇ..?"

ಮತ್ತೆ ನನ್ನ ಮನಸಿನ ಗೊಂದಲವನ್ನು ಶಂಕರನ ಬಳಿ ಹೇಳಿಕೊಂಡೆ

ಶಂಕರನು ನನ್ನ ಮಾತನ್ನು ಕೇಳಿ ನಗಲಾರಂಬಿಸಿದ.

"ಮೂರ್ಖ ಮಾನವ.... ಲಕ್ಷ್ಮಿಯ ಹೊಣೆ ನಿಜವಾದ ಸಂಪತ್ತನ್ನು ಸಕಲ ಜೀವರಾಶಿಗಳಿಗೂ ಕರುಣಿಸುವುದು. ನೀನು ನಿರ್ಮಿಸಿಕೊಂಡ ಆ ಹಣವನ್ನಲ್ಲ.  ನೀನು ಸೃಷ್ಟಿಸಿಕೊಂಡ ಆ ನಿನ್ನ ಹಣವನ್ನು ಇತರ ಯಾವ ಪ್ರಾಣಿಯೂ ಸಹ ಮೂಸಿ ನೋಡದು.. ಬೇಕಾದರೆ ಭೂಲೋಕದಲ್ಲಿಯೇ  ನಿನ್ನ ಆ ಹಣವನ್ನು ಪಶುಗಳ ಮುಂದೆ ಇಟ್ಟು ಪರೀಕ್ಷಿಸಿ ನೋಡು. ಆಗ ನಿನ್ನ ಹಣಕ್ಕಿರುವ ಬೆಲೆ ನಿನಗೆ ತಿಳಿದೀತು. ಇನ್ನು ಸಕಲ ಗ್ರಹ ತಾರೆ ಆಕಾಶಕಾಯಗಳ ಹೊಣೆ ಹೊತ್ತಿರುವ ದೇವರಿಗೆ ನಿನ್ನ ಆ ವಸ್ತು ಹೇಗೆ ಉಪಯೋಗವಾದೀತು. ಇಡೀ ಭ್ರಹ್ಮಾಂಡಕ್ಕೆ ಹೋಲಿಸಿದಾಗ ನೀನು ವಾಸಿಸುವ ಭೂಮಿ ಒಂದು ಚುಕ್ಕೆಯ ಗಾತ್ರದಲ್ಲಿ ಇದೆ. ಆ ಚುಕ್ಕಿಯ ಗಾತ್ರದ ಭೂಮಿಯ ಮೇಲೆ ಕೋಟ್ಯಾಂತರ ಜೀವರಾಶಿಗಳು. ಅವುಗಳ ನಡುವೆ ನೀವು ಊಹಿಸಿಕೊಳ್ಳಲಾರದಷ್ಟು ಅಲ್ಪರು. ನೀವೇ ಇಷ್ಟು ಅಲ್ಪರಾಗಿರುವಾಗ ನಿಮ್ಮಿಂದ ನಿರ್ಮಿತವಾದ ಆ ಯಕಶ್ಚಿತ್ ಹಣ ಇನ್ನೆಷ್ಟು ಅಲ್ಪವಾಗಿರಬಹುದೆಂದು ಯೋಚಿಸಿ ನೋಡು..."

ಶಂಕರನ ಮಾತಿನಿಂದ ನನಗೆ ಭಯವಾಗಲಾರಂಬಿಸಿತು. ಕೊನೆಯದಾಗಿ ಒಂದು ಕೋರಿಕೆ ಎನ್ನುತ್ತಲೇ ನನ್ನ ಮಾತು ಆರಂಭಿಸಿದೆ...

"ಮಾನವ ನಿರ್ಮಿತ ಹಣ ಅಷ್ಟೊಂದು ಅಲ್ಪವೇ ಶಂಕರ.... ನಮ್ಮ ಹಣವನ್ನು ಸ್ವೀಕರಿಸಿ, ಇಂದಿನಿಂದ ಅದಕ್ಕೂ ಗೌರವವನ್ನು ನೀಡಿ ನಮ್ಮ ಹಣಕ್ಕೂ ನೀವು ಮಾನ್ಯತೆಯನ್ನು  ಕರುಣಿಸಬಹುದಲ್ಲವೇ.......... "

ನಾನು ಇನ್ನು ಮಾತು ಮುಗಿಸಿರಲಿಲ್ಲ.
ನನ್ನ ಮಾತಿನಿಂದ ದೇವತೆಗಳ ಕೋಪ ನೆತ್ತಿಗೇರಿತು. ಅಲ್ಲಿರುವ ದೇವತೆಗಳೆಲ್ಲಾ ಒಕ್ಕೊರಲಿನಿಂದ ನನ್ನನ್ನು...

"ಮೂರ್ಖ ಮಾನವ..."

ಎಂದು ಜೋರಾಗಿ ಕೂಗಿಕೊಂಡರು
ಅವರ ಆ ಶಬ್ಧಕ್ಕೆ ಆಸ್ಥಾನವೇ ಕಂಪಿಸಿದ ಅನುಭವವಾಯಿತು.

ಶಂಕರನು ಸಹ ನನ್ನ ಕಡೆ ಕೋಪದ ಕೆಂಗಣ್ಣನ್ನು ಬೀರಿ
"ಈ ಅಲ್ಪ ಬುದ್ಧಿಯ ಮಾನವನಿಗೆ ಎಷ್ಟು ಉಪದೇಶ ಮಾಡಿದರು ಕಡಿಮೆಯೇ"

ಎಂದು ಬಯ್ಯುತ್ತಾ  ಕೋಪದಿಂದ ತನ್ನ ತ್ರಿಶೂಲದಿಂದ ನನ್ನ ಎದೆಗೆ ತಿವಿದನು. 

ನೋವು ತಾಳಲಾರದೇ 

'ಅಮ್ಮಾ' ...

ಎಂದು ಜೋರಾಗಿ ಕಿರುಚಿಕೊಂಡೆ.
ಕಣ್ಣು ಬಿಟ್ಟು ನೋಡಿದೆ ಸ್ವರ್ಗದಲ್ಲಿರುವಂತೆ ಯಾವ ಚಿನ್ನದ ಆಸ್ಥಾನವೂ ಕಾಣಿಸಲಿಲ್ಲ. ಅದೇ ಮನೆ, ಅದೇ ಸೋಫಾ, ಮಲಗಿದ್ದವನು ಹಾಗೆಯೇ ಎದ್ದು ಕುಳಿತೆ.  ಮಕ್ಕಳು ಇನ್ನು ಟಿ,ವಿ, ನೋಡುತ್ತಲೇ ಕುಳಿತ್ತಿದ್ದರು. ಶಂಕರನ ಮಾತು ಇನ್ನೂ ಮನದೊಳಗೆ ಗುಂಯ್ ಗುಡುತ್ತಿರುವಾಗಲೇ. ಟಿ,ವಿ, ಯಲ್ಲಿ ಬಿತ್ತರವಾಗುತ್ತಿದ್ದ ಸುದ್ಧಿಯೊಂದು ಗಮನ ಸೆಳೆಯಿತು. ದೇವರ ಹುಂಡಿಯ ಹಣವನ್ನು ಕದ್ದ ದೇವಾಲಯದ ಸಿಬ್ಬಂದಿ  ಪೂಜಾರಿಯೊಬ್ಬನಿಗೆ ಕೋಳ ತೊಡಿಸಿದ್ದರು. ಟಿ,ವಿ,ಯಲ್ಲಿ ಆತನ ಮುಖವನ್ನು ಪದೇ ಪದೇ ಝೂಮ್ ಮಾಡಿ ಮಾಡಿ ತೋರಿಸುತ್ತಿದ್ದರು. ಜನರು ದೇವರಿಗಾಗಿ ಹಾಕಿದ್ದ ಹಣವನ್ನು ಆತ ಲೂಟಿ ಮಾಡಿದ್ದನು. ಒಂಬೈನೂರು ಕೋಟಿ ರೂಪಾಯಿಗಳು. ನೂರು ಕೆ,ಜಿ, ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಟಿ,ವಿ,ಯವರು ಒಮ್ಮೆ ಆ ಕಳ್ಳ ಕಪಟಿಯ ಮುಖವನ್ನು ತೋರಿಸಿದರೆ, ಮತ್ತೊಂದು ಸಾರಿ ಅವನು ಲಪಟಾಯಿಸಿದ ಹಣ ಮತ್ತು ಚಿನ್ನದ ರಾಶಿಯತ್ತ ಝೂಮ್ ಮಾಡಿ ತೋರಿಸುತ್ತಲೇ ಇದ್ದರು. 

ಆ ಕ್ಯಾಮರಾದ ಬೆಳಕಲ್ಲಿ ಅವನು ಕದ್ದ ಚಿನ್ನವು ಫಳ ಫಳನೆ ಹೊಳೆಯುತ್ತಿತ್ತು. ನೆಕ್ಲೆಸ್. ಬಳೆ, ಹಾರ,ಉಂಗುರಗಳು ರಾಶಿ ರಾಶಿಯಾಗಿ ಬಿದ್ದಿದ್ದವು.

ಅರೆ.....!!!!

ನನಗೊಂದು ಆಶ್ಚರ್ಯ ಕಾದಿತ್ತು.
ಅವುಗಳ ಮಧ್ಯೆ ನನ್ನ ಚಿನ್ನದ ಬ್ರಾಸ್ಲೆಟ್.
ಅಂದು ನನ್ನ ಕೈಯಾರೆ ನಾನೇ ಹುಂಡಿಗೆ ಹಾಕಿದ್ದು .
ನನ್ನ ಚಿನ್ನದ ಬ್ರಾಸ್ಲೆಟನ್ನು ಆ ಪಾಪಿ ತನ್ನ ವಶ ಮಾಡಿಕೊಂಡಿದ್ದನ್ನು ಕಂಡು ಮನಸ್ಸು ದುಃಖದಲ್ಲಿ ಮುಳುಗಿತು. ಕದ್ದ ಚಿನ್ನದ ರಾಶಿಯ ಮದ್ಯೆ ನನ್ನ ಬ್ರಾಸ್ಲೆಟ್ ಫಳ ಫಳಾನೆ ಮಿಂಚುತ್ತಿರುವುದನ್ನು ನೋಡಲು ನನ್ನ ಎರಡು ದುಃಖದ ಕಣ್ಣುಗಳು ಸಾಲದಾದವು....

    ಪ್ರಕಾಶ್ ಎನ್ ಜಿಂಗಾಡೆ

No comments:

Post a Comment