Thursday, 19 January 2017

ಅಭಿಮಾನಿ

ಅಭಿಮಾನಿ. (Story)

"ಪೋಸ್ಟ್...ಪೋಸ್ಟ್.."
ಕೋರಿಯರ್ ಹುಡುಗ ಬಾಗಿಲ ಬಳಿ ಬಂದು ಕೂಗಿದನು. ನನ್ನ ಹೆಸರಿಗೆ ಬಂದಿದ್ದ ರಿಜಿಸ್ಟರ್ ಕವರ್ ಒಂದನು ನನ್ನ ಕೈಗೆ ನೀಡಿ ಹೋದನು. ನಾನು "ಯಾರದಿರಬಹುದು...?"
ಎಂದು ಕುತೂಹಲದಿಂದ  ತೆರೆದು ನೋಡಿದೆ. ಪತ್ರ ಓದಿದ ಕೂಡಲೇ ಮುಖದಲ್ಲಿ ಮಂದಹಾಸ ಮೂಡಿತು.
"ಕನ್ನಡದ ಅತ್ಯಂತ ಜನಪ್ರಿಯ ನಟ ಹೇಮಂತ್ ಕುಮಾರ್ ಜೊತೆ ಲಂಚ್ ಮಾಡುವ ಭಾಗ್ಯ ನಿಮ್ಮದು. ನೀವು ನಮ್ಮ ಕಂಪನಿಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದೀರಿ.ಈ  ಭಾನುವಾರವೇ ನೀವು ನಿಮ್ಮ ಮೆಚ್ಚಿನ ನಟನನ್ನು ಭೇಟಿಯಾಗಿರಿ..."
ಎಂದು ಬರೆದಿತ್ತು.
ಮೆಚ್ಚಿನ ನಟ ಹೇಮಂತ್ ಕುಮಾರ್ ಎಂದ ಕೂಡಲೇ ಮೈ ಮನ ರೋಮಾಂಚನವಾಯಿತು. ಅವರನ್ನು ಹತ್ತಿರದಿಂದಅವರೊಂದಿಗೆ ಮಾತನಾಡಬೇಕು ಎಂಬ ಆಸೆ ಹೊತ್ತಿದ್ದ ನನಗೆ ಅವರೊಂದಿಗೆ ಲಂಚ್ ಮಾಡುವ ಸದಾವಕಾಶ ಸಿಗುತ್ತದೆ ಎಂದು ಊಹಿಸಿಕೊಂಡಿರಲಿಲ್ಲ. ಪತ್ರ ಓದಿದ ಕೂಡಲೇ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು....
ಒಂದು ತಿಂಗಳ ಹಿಂದೆ ಕಂಪನಿಯೊಂದು ನೀಡಿದ ಜಾಹಿರಾತಿನಲ್ಲಿರುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ ಮೇಲ್ ಕಳುಹಿಸಿದ್ದೆ. ಅದೃಷ್ಟವಶಾತ್ ಸೂಪರ್ ಸ್ಟಾರ್ ಮಹೇಂದ್ರ ಕುಮಾರ್ ಜೊತೆ ಲಂಚ್ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಒಲಿದು ಬಂದಿತ್ತು.  ಬರೀ ಆತನ ಸಿನಿಮಾವನ್ನೇ ನೋಡಿ ಬೆಳದಿದ್ದ ನನಗೆ ಇಂದು ಮಹೇಂದ್ರ ಕುಮಾರ್ ನನ್ನು ಹತ್ತಿರದಿಂದ ನೋಡುತ್ತೇನೆ ಎಂಬ ಕಲ್ಪನೆಯೇ ನನ್ನನ್ನು ಹೆಚ್ಚು  ಪುಳಕಿತನನ್ನಾಗಿಸಿತು.
ನಟ ಮಹೇಂದ್ರಕುಮಾರ್ ಎಂದರೆ ನನಗೆ ಪಂಚಪ್ರಾಣ. ನಾನು ಕಾಲೇಜಿನ ದಿನಗಳಲ್ಲಿ ಎಷ್ಟೋ ಸಾರಿ ಅವನ ಚಿತ್ರ ರಿಲೀಜ್ ಆದ ಕೂಡಲೇ ಮೊದಲ ದಿನವೇ ಮೊದಲ ಶೋ ನೋಡಿ ಎಂಜಾಯ್ ಮಾಡಿದ್ದುಂಟು. ಚಿತ್ರ ಮಂದಿರದ ಹೊರಗೆ ಉದ್ದವಾಗಿ ನಿಂತಿದ್ದ ಅವನ ಕಟೌಟ್ಗೆ ಅಭಿಮಾನಿಗಳೊಂದಿಗೆ ಸೇರಿ ಹಾಲಿನ ಅಭಿಷೇಕ ಮಾಡಿದ್ದೂ ಉಂಟು. ಒಂದೆರಡು ಸಲ ಅವರ ಮನೆಯನ್ನೂ ಹುಡುಕಿಕೊಂಡು ಹೋದದ್ದುಂಟು . ಅವರ ಮನೆಯ ಮುಂದೆಯೕೆ  ಹಲವು ಸಲ ಗಿರಕಿ ಹೊಡೆದಿದ್ದೆ. ಅವರ ಮನೆ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಸೂಪರ್ ಸ್ಟಾರ್ ಮಹೇಂದ್ರ ಕುಮಾರನ್ನು ನೋಡಲು ಬಿಡುವಂತೆ ಅಂಗಲಾಚಿ ಬೇಡಿಕೊಂಡಿದ್ದೆ. ನನ್ನ ದುರಾದೃಷ್ಟವೋ ಏನೋ ನಾನು ಹೋದಾಗಲೆಲ್ಲ ನನ್ನ ಮೆಚ್ಚಿನ ನಟ ಶೂಟಿಂಗ್ ಹೋಗಿರುತ್ತಿದ್ದರು. ಅವರನ್ನು ನೋಡಿ ಮಾತನಾಡಿಸುವ ಹಂಬಲ ಮನದಲ್ಲಿ ಹಾಗೆಯೇ ಉಳಿದು ಕೊಂಡಿತ್ತು. ಆದರೆ ಇಂದು ಅವರನ್ನು ನೋಡುವುದು ಮಾತ್ರವಲ್ಲ ಅವರ ಜೊತೆಯಲ್ಲಿ ಕುಳಿತುಕೊಂಡು ಊಟಮಾಡುವುದು ಎಂತಹ ಸೌಭಾಗ್ಯ ನನ್ನದು....!!! ಮನದಲ್ಲಿ ಏನೋ ಒಂಥರಾ ಆನಂದವೋ ಆನಂದ. ಒಂದು ಘಳಿಗೆ ನನ್ನ ಮನಸ್ಸು ಆಕಾಶದಲ್ಲೇ ತೇಲುತ್ತಿರುವಂತಹ ಅನುಭವಾಯಿತು.
ಈ ಶುಭ ಸಮಾಚಾರವನ್ನು ಹಂಚಿಕೊಳ್ಳಲು ಗೆಳೆಯ ರವಿಗೆ ಫೋನ್ ಮಾಡಿದೆ,
"ರವಿ ನನ್ನ ಕ್ಷಮಿಸಿ ಬಿಡೋ... ನಿನ್ನ ಈ ವರ್ಷದ ಬರ್ತ್ ಡೇ ಪಾರ್ಟಿಗೆ ಬರುತ್ತಿಲ್ಲ. ಕಾರಣ ಏನು ಗೊತ್ತಾ ..? ಸೂಪರ್ ಸ್ಟಾರ್ ಮಹೇಂದ್ರ ಕುಮಾರ್ ಜೊತೆ ಊಟ ಮಾಡುವ ಅವಕಾಶ ದೊರೆತಿದೆ. ಅದೂ ಇದೇ ಭಾನುವಾರ. ಎಷ್ಟು ಸಂತೋಷವಾಗ್ತಿದೆ ಗೊತ್ತಾ..? "
ನಾನು ಹೇಳಿದ ವಿಷಯ ಕೇಳಿದ ಕೂಡಲೇ ರವಿ ನನಗಿಂತಲೂ ಹೆಚ್ಚು ಸಂಭ್ರಮ ಪಟ್ಟ. ತಾನೇ ನಟ ಮಹೇಂದ್ರ ಕುಮಾರ್ ಜೊತೆ ಇರುತ್ತಿದ್ದೇನೆ ಎನ್ನುವಷ್ಟು ಹರ್ಷ ವ್ಯಕ್ತ ಪಡಿಸಿದ. ನನಗೆ ಸಿಕ್ಕ ಅವಕಾಶ ಕಂಡು ಅವನೂ ಕುಣಿದು ಕುಪ್ಪಳಿಸಿದ. ಆತ ನನಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಮಹೇಂದ್ರ ಕುಮಾರ್ ನ ಅಭಿಮಾನಿಯಾಗಿದ್ದ.
ನಾನು ಮತ್ತು ನನ್ನ ಗೆಳೆಯರು ಮಹೇಂದ್ರ ಕುಮಾರ್ ನನ್ನು ಮೆಚ್ಚಲು ಹಲವು ಕಾರಣಗಳಿವೆ...
ಅವರ ಮೊದಲ ಚಿತ್ರ "ಸೊಸೆ ಹಾಕಿದ ಕಣ್ಣೀರು" ಚಿತ್ರ ನೋಡಿದಾಗಿನಿಂದ ನಾವು ಮಹೇಂದ್ರ ಕುಮಾರ್ ರವರ ಅಭಿಮಾನಿಯಾಗಿ ಬಿಟ್ಟೆವು. ಅದಲ್ಲಿ ಅವರು ಮನೆತನದ ಗೌರವ ಉಳಿಸುವ ನಾಯಕ ನಟನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು.
ನಾವು ಕಾಲೇಜ್ ಬಂಕ್ ಮಾಡಿ ನೋಡಿದ ಸಿನಿಮಾ ಎಂದರೆ "ಕಾಕಳ್ಳೆ ಹುಡುಗರು" ಅದರಲ್ಲಿ ನಮ್ಮ ಸೂಪರ್ ಸ್ಟಾರ್ ಮಹೇಂದ್ರ ಕುಮಾರ್ ರವರು ಬಡ ಕಾಲೇಜ್ ವಿದ್ಯಾರ್ಥಿಯಾಗಿ ಪಾತ್ರ ನಿರ್ವಹಿಸಿದ್ದರು. ವಿದ್ಯಾರ್ಥಿಗಳು ಓದಿ ಮುಂದೆ ಬರಬೇಕು. ಪ್ರತಿ ವಿದ್ಯಾರ್ಥಿಗಳು ತಂದೆ ತಾಯಿಗಳ ಆಸೆ ಈಡೇರಿಸುವ ಆದರ್ಶ ವ್ಯಕ್ತಿಯಾಗಿ ಬೆಳೆಯಬೇಕೆಂಬ ತತ್ವವನ್ನು ಮನ ಮುಟ್ಟುವಂತೆ ಹೇಳಿದ್ದರು. ನಾವೇನಾದರು ಇಂದು ಚನ್ನಾಗಿ ಓದಿ ಒಳ್ಳೆ ಕೆಲಸ ಮಾಡುತ್ತಿದ್ದೇವೆಂದರೆ ಅದಕ್ಕೆ ಪರೋಕ್ಷವಾಗಿ ಮಹೇಂದ್ರ ಕುಮಾರವರ ಪ್ರಭಾವವೂ ಇದೆ ಎಂದರೆ ತಪ್ಪಾಗಲಾರದು.
ಮುಂದೆ ಮಹೇಂದ್ರ ಕುಮಾರ್ ರವರ ಸೂಪರ್ ಹಿಟ್ ಚಿತ್ರವಾದ "ಭೂತಾಯಿಯ ಮಗ" ಚಿತ್ರವನ್ನಂತು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲಿ ಶ್ರೀಮಂತಿಕೆ ಮತ್ತು  ಹಣಕ್ಕಿಂತ ಮಾನವೀಯತೆ ದೊಡ್ಡದೆಂಬ ತತ್ವವನ್ನು ತಿಳಿಸಿ ಹೇಳಿದ್ದರು. ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಸಿಕ್ಕಿತು.
ಹೀಗೆ ಮಹೇಂದ್ರ ಕುಮಾರ್ ರವರು ಕೇವಲ ನಟ ಮಾತ್ರವಲ್ಲ ನಮ್ಮ ಪಾಲಿನ ಸೂಪರ್ ಸ್ಟಾರ್ ಆಗಿ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಬಿಟ್ಟಿದ್ದಾರೆ. ಅವರ ಸಿನಿಮಾಗಳಿಂದ ನಾನು ಸಾಕಷ್ಟು ವಿಷಯವನ್ನು ಕಲಿತ್ತಿದ್ದೇನೆ ಸಾಕಷ್ಟು ನಡತೆಯನ್ನು ತಿದ್ದಿಕೊಂಡಿದ್ದೇನೆ. ಜೀವನ ಏನೆಂಬುದನ್ನು ಅವರ ಸಿನಿಮಾಗಳಿಂದ ಕಲಿತ್ತಿದ್ದೇನೆ....
ಭಾನುವಾರ ಬಂದೇ ಬಿಟ್ಟಿತು ನಟ ಮಹೇಂದ್ರ ಕುಮಾರ್ ನನ್ನು ಬೇಟಿಯಾಗಲು ಇನ್ನು ಕೆಲವೇ ಗಂಟೆಗಳು ಮಾತ್ರ. ಬೆಳಗ್ಗೆ ಎದ್ದೊಡನೆ ಸ್ನಾನ ಮಾಡಿ, ನಿನ್ನೆ ತಂದಿದ್ದ ಹೊಸದಾದ ಟಿ-ಷರ್ಟ್ ಮತ್ತು ಜೀನ್ಸ್ ಪ್ಯಾಂಚನ್ನು ಹಾಕಿಕೊಂಡು, ನುಣ್ಣಗೆ ಶೇವ್ ಮಾಡಿದ ಮುಖಕ್ಕೆ ಸ್ವಲ್ಪ ಕ್ರೀಮ್ ,ಹಾಗೆಯೇ ಸ್ವಲ್ಪ ಫರ್ಫ್ಯೂಮ್ ಸ್ಪ್ರೇ ಮಾಡಿಕೊಂಡು, ಹೊಸದಾಗಿ ತಂದ ಶೂ ಹಾಕಿಕೊಂಡು ಹೊರಟೆ. ಹೊರಗಡೆ  ಎಲೆ ಅಡಿಕೆ ಕುಟ್ಟುತ್ತಿದ್ದ ನಮ್ಮಜ್ಜಿ ನನ್ನ ರೂಪ ಕಂಡು.
"ನನ್ನ ಮೊಮ್ಮಗ ಥೇಟ್ ರಾಜ ಕುಮಾರನ ತರ ಕಾಣ್ತವ್ನೆ"
ಅಂತ ಹೇಳ್ತಾ ನನ್ನ ಕೆನ್ನಗಳನ್ನ ಹಿಂಡಿ, ತನ್ನ ತಲೆಗೆ ಬೆರಳುಗಳನ್ನು ಅದುಮಿಕೊಂಡು ಲಟಿಕೆ ಮುರಿದುಕೊಂಡಳು.
ಅಜ್ಜಿ ಹೇಳಿದ ಮಾತಿನಿಂದ ಇನ್ನಷ್ಟು ಸಂತೋಷವಾಗಿ ಮನಸು ಹಿಗ್ಗಿ ಹೋಯಿತು. ಲಘು ಬಗೆಯಿಂದ ಬಸ್ಸನ್ನೇರಿ ಕುಳಿತುಕೊಂಡೆ. ಫೈವ್ ಸ್ಟಾರ್ ಹೊಟೆಲ್ ಭವ್ಯತೆ ನೋಡಬಹುದು. ಪಕ್ಕದಲ್ಲಿ ಸೂಪರ್ ಸ್ಟಾರ್ ಮಹೇಂದ್ರ ಕುಮಾರ್ ಅವರೊಡನೆ ಮಾತನಾಡಬಹುದು, ಅವರ ಭುಜವನ್ನು ತಗುಲಿಸಿಕೊಂಡೇ ಆತ್ಮೀಯವಾಗಿ ಒಂದೆರಡು ಸೆಲ್ಫಿ ತೆಗೆದುಕೊಳ್ಳಬಹುದು ಹೀಗೆ ಮನಸ್ಸು ಏನೇನೋ ಯೋಚಿಸಿತು.
ಇನ್ನೇನು ಮಹೇಂದ್ರಕುಮಾರ್ ಇರುವ ಫೈವ್ ಸ್ಟಾರ್ ಹೋಟೆಲ್ ಹತ್ತೇ ನಿಮಿಷದ ಹಾದಿ ಎನ್ನುವಾಗ ನಾನು ಕುಳಿತ್ತಿದ್ದ ಬಸ್ಸಿನ ಮುಂದಿನ ಸೀಟಿನ ಗಂಡ ಹೆಂಡತಿ ಜಗಳ ತೆಗೆದಿದ್ದರು. ಪ್ರೀತಿಯಿಂದಲೇ ಮಾತನಾಡುತ್ತಿದ್ದವರು ಒಂದೇ ಕ್ಷಣದಲ್ಲಿ ಅದ್ಯಾವುದೋ ಮಾತಿಗೆ ಗಂಡ ಕೋಪಗೊಂಡು ಹೆಂಡತಿಯನ್ನು ಬಯ್ಯಲಾರಂಭಿಸಿದ.
"ನೋಡೇ... ನಿನ್ನ ಅನುಮಾನ ಸೈಡಿಗಿಟ್ಟು ಬಿಡು, ನನಗೂ ಆ ರಾಧಗೂ ಯಾವುದೇ ಸಂಬಂಧ ಇಲ್ಲ. ಆಫೀಸ್ ಕೆಲಸ ಅಂತ ಅವಳು ನನ್ನ ಜೊತೆ ಪದೇ ಪದೇ ಮಾತಾಡ್ತಾಳೆ ಅಷ್ಟೆ. ಒಬ್ಬಳನ್ನೇ ಕಟ್ಟಿಕೊಂಡು ಬದುಕೋದು ಕಷ್ಟ. ಅಂತಂದ್ದರಲ್ಲಿ ಎರೆಡೆರಡು ಮದುವೆಯಾಗೋಕೆ ನಾನೇನು ಫಿಲ್ಮ್ ಸ್ಟಾರ್ ಅಲ್ಲ... ಅಥವಾ ಹೀರೋ ಮಹೇಂದ್ರ ಕುಮಾರ್ ಅಲ್ಲ,  ಸುಮ್ಮನೆ ಕಿರಿ ಕಿರಿ ಮಾಡಬೇಡ... ನಮ್ಮಿಬ್ಬರದೂ ಬರೀ ಫ್ರೆಂಡ್ ಶಿಪ್ ಮಾತ್ರ"
ಗಂಡ ಏರು ಧ್ವನಿಯಲ್ಲೇ ಹೆಂಡತಿಹೆ ಬಯ್ದ.
ಹೆಂಡತಿಯೇನು ಕಡಿಮೆಯಿರಲಿಲ್ಲ ಅವಳೂ ವಾದ ಮಾಡಲಾರಂಭಿಸಿದಳು. ನಂತರ ಕಂಡಕ್ಟರ್ ಬಂದು ಇಬ್ಬರನ್ನೂ ಸಮಾಧಾನ ಪಡಿಸಿ ಗದ್ದಲವನ್ನು ನಿಲ್ಲಿಸಿದನು. ಇಷ್ಟು ಮುಗಿಯುವುದರೊಳಗೆ ನಾನು ಇಳಿಯುವ ಬಸ್ ಸ್ಟಾಪ್ ಬಂದಿತು...
ಬಸ್ಸಿಂದ ಇಳಿದ ಕೂಡಲೇ ಎದುರುಗಡೆನೇ ಮಹೇಂದ್ರ ಕಮಾರ್ ತಂಗಿರುವ ಫೈವ್ ಸ್ಟಾರ್ ಹೋಟೆಲ್ ಭವ್ಯವಾಗಿ ಕಾಣಿಸಿತು. ಆ ಹೋಟೆಲ್ ನಲ್ಲಿ ಕೂತು ನನ್ನ ಮೆಚ್ಚಿನ ನಟನೊಂದಿಗೆ ಯಾವಾಗ ಊಟ ಮಾಡುತ್ತೇನೆಯೋ, ಆತನನ್ನು ಯಾವಾಗ ನೋಡುತ್ತೇನೆಯೋ ಎಂದು ಮನಸು ಹಾತೊರೆಯುತ್ತಿತ್ತು. ಕಂಪನಿ ಕೊಟ್ಟ ಬಹುಮಾನದ ಕೂಪನನ್ನು ಹಿಡಿದು ಮೆಟ್ಟಿಲು ಏರಲಾರಂಭಿಸಿದೆ. ತಕ್ಷಣ ನನ್ನ ಕಾಲು ನಡೆಯುವುದನ್ನು ನಿಲ್ಲಿಸಿತು. ಮನಸು ಮತ್ತೆನೋ ಯೋಚಿಸಲಾರಂಭಿಸಿತು....
ಒಂದು ವೇಳೆ ನಟ ಮಹೇಂದ್ರ ಕುಮಾರ್ ನನ್ನನ್ನು ಸರಿಯಾಗಿ ಮಾತನಾಡಿಸದಿದ್ದರೆ..? ನನಗೆ ಇಲ್ಲಿ  ಪರಿಚಯದವರು ಅಂತ ಬೇರೆ ಯಾರೂ ಇಲ್ಲ. ಹಾಗೆ ನೋಡಿದರೆ ನನಗೆ ನಟ ಮಹೇಂದ್ರ ಕುಮಾರ್ ರವರ ಪರಿಚಯವಿದೆಯಾದರೂ ಅವರಿಗೆ ನನ್ನ ಪರಿಚಯವಿಲ್ಲ. ನನ್ನಂತಹ ಸಾವಿರಾರು ಅಬಿಮಾನಿಗಳು ಅವರಿಗಿದ್ದಾರೆ. ಅವರು ತೋರುವಂತಹ ಕೃತಕ ನಗೆಯ ತೋರುವರೇ ? ಅಥವಾ ಅಭಿಮಾನಿಗಳಲ್ಲಿ ನಿಜವಾದ ಪ್ರೀತಿಯಿರುತ್ತದೆಯೇ..? ಅವರು ತೋರುವ ಪ್ರೀತಿ ಒಂದೆಡೆ ಇರಲಿ, ನನ್ನ ಬಾಲ್ಯದ ಮಿತ್ರ ರವಿಯ ಹುಟ್ಟುಹಬ್ಬಕ್ಕೆ ಹೋಗುತ್ತಿಲ್ಲವಲ್ಲ ಎಂಬ ಚಿಂತೆ ಬೇರೆ ನನ್ನನ್ನು ಕಾಡುತ್ತಿತ್ತು. ಇತರ ಗೆಳೆಯರಾದ ರಾಜು, ಗೋಪಾಲ, ಕರಣ್, ವಸಂತ್, ಈಗಾಗಲೇ ರವಿಯ ಮನೆಯಲ್ಲಿ ಸೇರಿಕೊಂಡಿದ್ದಾರೆ.
ನನ್ನನ್ನು ಬಿಟ್ಟು ಎಲ್ಲಾ ಸೇರಿ ಎಂಜಾಯ್ ಮಾಡುತ್ತಿದ್ದಾರೆ. ಆ ಪಾರ್ಟಿಯಲ್ಲಿ ಸಿಗುವ ಸ್ವಾತಂತ್ರ್ಯ ಹಾಸ್ಯ ಇಲ್ಲಿ ಸಿಗುವುದೇ.. ? ನಾವು ಎಲ್ಲಾ ಕಷ್ಟಗಳನ್ನು  ಹಂಚಿಕೊಂಡು ಬೆಳೆದಿರುವ ಸ್ನೇಹಿತರು. ಕಾಲೇಜು ದಿನಗಳಲ್ಲಿ ತರ್ಲೆ ಮಾಡಿಕೊಂಡೇ ಓದಿದವರು,
ಡಿಗ್ರಿ ಓದುವಾಗ ಬೆಟ್ಸ್ ಕಟ್ಟಿ ಯಮುನಾ ಜಡೆಯಿಂದ ಹೂವನ್ನು ಕಿತ್ತಿದ್ದು... ಸುಮಾಳ ನೋಟ್ ಬುಕ್ ಲ್ಲಿ ನಮ್ಮ ಹೆಸರು ಬರೆದುಕೊಳ್ಳದೇ "ಐ ಲವ್ ಯೂ" ಎಂಬ ಪತ್ರ ಇಟ್ಟಿದ್ದು. ಆಮೇಲೆ ಸುಮ ಆ ಪತ್ರ  ಬರೆದವರನ್ನು ಹುಡುಕಲು ಒದ್ದಾಡಿದ್ದು. ಅದನ್ನು ನೋಡಿ ನಾವು ನಕ್ಕಿದ್ದು. ಹೀಗೆ ನಾವು ಹತ್ತು ಹಲವು ತಮಾಷೆ ಮಾಡಿಕೊಂಡೇ ಬೆಳೆದವರು. ಹೀಗೆ ನಮ್ಮ ಜೀವನವನ್ನು ಸ್ವಲ್ಪ ವರ್ಣಮಯವನ್ನಾಗಿ  ಮಾಡಿಕೊಂಡು, ಇನ್ನು ಸ್ವಲ್ಪ  ಭಾವನಾತ್ಮಕವಾಗಿ ಬೆಸೆದುಕೊಂಡು ಬೆಳೆದವರು ನಾವು. ರವಿಯ ಹುಟ್ಟು ಹಬ್ಬಕ್ಕೆ ಹೋಗಲಾರದೆ  ಗೆಳೆಯರು ಸೇರಿಕೊಂಡಿರುವ ಒಂದು ಸಂತೋಷದ ಕ್ಷಣವನ್ನು ಮಿಸ್ ಮಾಡಿಕೊಳ್ಳುತ್ತಿರುವೆಯೇನೋ ಎಂದೆನಿಸಿತು...
ಚಿತ್ರಮಂದಿರದ ಪರದೆಯ ಮೇಲೆ ಹೀರೋ ಆಗಿ ಮೆರೆದ ನಟನೊಬ್ಬನಿಗೆ ನಮಗೆ ಗೊತ್ತಿಲ್ಲದೆ ಅತಿ ಹೆಚ್ಚಿನ ಮಹತ್ವವನ್ನು ನೀಡಿ ಬಿಡುತ್ತೇವೆ. ನಿಜ ಜೀವನದ ಹೀರೋಗಳನ್ನು ಕಂಡರೆ ನೋಡಿಯೂ ನೋಡದಂತೆ ಉದಾಸೀನ ತೋರುತ್ತೇವೆ. ಹಗಲಿರುಳು ಗಡಿಯನ್ನು ಕಾಯ್ದ ಸೈನಿಕರೆಷ್ಟೋ... ಅನಾಥಾಶ್ರಮ ನಡೆಸುವರೆಷ್ಟೋ.....? ವೃದ್ದಾಶ್ರಮಕ್ಕೆ ಕಾಣಿಕೆ ನೀಡುವವರೆಷ್ಟೋ... ಸಾಮಾಜಿಕ ಜವಬ್ದಾರಿಯನ್ನು ಹೊತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು ಎಷ್ಟೋ ಜನ... ಇವರೆಲ್ಲಾ ನಮ್ಮ ಕಣ್ಣ ಮುಂದೆಯೇ ಇದ್ದರೂ ನಾವು ಮರೆತು ಬಿಡುತ್ತೇವೆ. ಇವೆಲ್ಲಾ ಯೋಚಿಸಿದಾಗ ನನಗೆ ಕಷ್ಟದಲ್ಲಿ ಸಹಾಯ ಮಾಡಿದ ನನ್ನ ಬಾಲ್ಯದ ಮಿತ್ರ ರವಿಯ ಹುಟ್ಟುಹಬ್ಬವನ್ನು ತಿರಸ್ಕರಿಸಿದೆನಲ್ಲಾ ಎಂಬ ಕೊರಗು ಕಾಡಿದಂತಾಯಿತು...
ಸಿನಿಮಾ ನಟರು ತೆರೆಯ ಮೇಲೆ ಹೀರೋ ಆಗಿ ಮೆರೆದಿರಬಹುದು ನಿಜ ಜೀವನದಲ್ಲಿ ಕಷ್ಟದಲ್ಲಿ ಸಹಾಯ ಮಾಡಿದ ಗೆಳೆಯರೇ ನನ್ನ ಪಾಲಿನ ಹೀರೋಗಳು.
ಕೇವಲ ಕಾಲ್ಪನಿಕವಾದ ಸಿನಿಮಾ ಎಂಬ ಕಥಾ ಜಗತ್ತನ್ನು ಪ್ರವೇಶಿಸಿ ಅಲ್ಲಿಯ ಪಾತ್ರಗಳನ್ನೇ ನಿಜವೆಂದು ನಂಬಿ. ಅಲ್ಲಿರುವ ವ್ಯಕ್ತಿಯನ್ನೇ ಆದರ್ಶ, ಆರಾದ್ಯ ಎಂಬಂತೆ ಪೂಜಿಸುವ ನಾವುಗಳು. ವಾಸ್ತವ ಜೀವನದ ಹೀರೋಗಳನ್ನು ಮರೆತಿದ್ದೇವೆ...
ಜೀವನುದ್ದಕ್ಕೂ ಅವರು ನೀಡಿದ ಸಹಕಾರ ಮರೆಯಲಾದೀತೆ...? ಬೇಸರವಾದಗ ಕರೆದಲ್ಲಿಗೆ ಬರುವುದು ಜೊತೆಗಾರರು ಮಾತ್ರವಲ್ಲವೇ..?  ಕಷ್ಟ ನಷ್ಟ, ನೋವು ನಲಿವು ಅಂತ  ಎಲ್ಲದ್ದಕ್ಕೂ ನನ್ನ ಹತ್ತಿರ ಬಂದಿದ್ದು ಗೆಳೆಯರೆ...
ಮೊದಲಿನಿಂದಲೂ ನಟ ಮಹೇಂದ್ರ ಕುಮಾರ್ ರವರ ಮೇಲೆ ಅದೇಕೋ ನನ್ನ ಅಬಿಮಾನ ಸ್ವಲ್ಪ ಹೆಚ್ಚೇ ಇತ್ತು. ಅಮ್ಮ ಕೂಡಿಟ್ಟ ಹಣವನ್ನು ಕದ್ದು ಮಹೇಂದ್ರ ಕುಮಾರ್ ನ ಕಟೌಟಿಗೆ ಹಾಲಿನ ಅಭಿಷೇಕ ಮಾಡಿದ್ದು. ಫಸ್ಟ್ ಡೇ... ಫಸ್ಟ್ ಶೋ ನೋಡಲು ಒದ್ದಾಡಿದ್ದು, ನನ್ನ ನೆಚ್ಚಿನ ಆ ನಟನ ಪರ ವಹಿಸಿ ನನ್ನ ಆಪ್ತ ಗೆಳೆಯನೊಂದಿಗೆ ಜಗಳವಾಡಿದ್ದು. ಪರೀಕ್ಷೆ ಸಮಯದಲ್ಲಿ ನಟ ಮಹೇಂದ್ರ ಕುಮಾರನ ಪಿಕ್ಚರ್ ನೋಡಿ ಅಪ್ಪನಿಂದ ಒದೆ ತಿಂದದ್ದು, ಎಲ್ಲವೂ ಅಬಿಮಾನದಿಂದಲೇ ನಡೆಯಿತು. ನಮ್ಮ ಕಣ್ಣ ಮುಂದೆ ಇರದ ವ್ಯಕ್ತಿಯೊಬ್ಬನಿಗೆ ಮನೆಯವರಿಗಿಂತಲೂ, ಗೆಳೆಯರಿಗಿಂತಲೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರುವೆಯೇನೋ ಎಂದೆನಿಸಿತು. ಕಾಲ್ಪನಿಕ ಜಗತ್ತಿನ ಕಲಾ ಸಾಮ್ರಾಟರಾದ ನಟನೊಬ್ಬನ ಕಾಣದ ಯಾವುದೋ ಜಗತ್ತೊಂದನು ವಾಸ್ತವ ಎಂಬಂತೆ ಕಲ್ಪಿಸಿಕೊಂಡು ಬಿಡುತ್ತೇವೆ. ನಮಗೆ ಸಿಗದೇ ಇರುವ  ವ್ಯಕ್ತಿಯೊಬ್ಬನನ್ನು ಆಪ್ತನನ್ನಾಗಿಸಿಕೊಂಡು ಬಿಡುತ್ತೇವೆ. ನಮ್ಮ ಮನಸುಗಳು ಯಾವುದೋ ಅಭಿಮಾನಕ್ಕೆ ಜೋತುಬಿದ್ದಂತೆ ಅವರಡೆಗೇ ವಾಲಿ ಬಿಡುತ್ತವೆ. ವಾಸ್ತವವನ್ನು ಬಿಟ್ಟು ಕಾಲ್ಪನಿಗ ಜಗತ್ತಿನೆಡೆಗೆ ನಾವು ಹೆಚ್ಚಿನ ಮಹತ್ವವನ್ನು ನೀಡಿ ಬಿಡುತ್ತೇವೆ.
"ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೆ ಜೀವನ" ಎಂಬ ಅಡಿಗರ ಕವನದಂತೆಯೋ.... "ಕಾಣದ ಕಡಲಿಗೆ ಹಂಬಲಿಸಿದೆ ಮನ" ಎಂಬ ಜಿ,ಎಸ್, ಶಿವರುದ್ರಪ್ಪನವರ ಸಾಲಿನಂತೆಯೋ... ಮನಸು ಮತ್ತೆನನ್ನೋ ಬಯಸುತ್ತಿರುತ್ತವೆ. ನಮ್ಮ ಕಲ್ಪನೆಯಲ್ಲಿ ಹೀರೋ ಆಗಿ ರಾರಾಜಿಸಿದ ವ್ಯಕ್ತಿಯೊಬ್ಬ ವಾಸ್ತವ ಪ್ರಪಂಚದಲ್ಲಿ ಹಾಗಾಗಿರದಿದ್ದರೆ ಮನಸು ನೋವು ಅನುಭವಿಸುವುದು ಸಹಜ. ಸಿನಿಮಾ ಎಂಬ ಕಥಾ ಜಗತ್ತಿನಲ್ಲಿ ದೃವತಾರೆಯಂತೆ ಬೆಳಗಿದ ಕಲಾ ಕುಸುಮ ನಮ್ಮ ನಟರು. ಆ ಕಥಾ ಪ್ರಪಂಚದಲ್ಲಿ ಅವರು ತೋರಿದ  ಒಳ್ಳೆತನ, ಆದರ್ಶ, ಸ್ನೇಹಮಯಿ ಗುಣಗಳೆಲ್ಲವನ್ನೂ ಮೆಚ್ಚಿಕೊಂಡು ನಾವು ಚಪ್ಪಾಳೆ ತಟ್ಟಿ, ಸೀಟಿ ಹಾಕಿ ಕುಣಿಯುತ್ತೇವೆ. ನಮ್ಮ ವ್ಯಕ್ತಿತ್ವ ಅಂತಹ ಪಾತ್ರದಿಂದ ಸಾಕಷ್ಟು ಪ್ರಭಾವಗೊಂಡಿರುತ್ತವೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಅದೇ ಆದರ್ಶವನ್ನು ಪಾಲಿಸಲು ಪ್ರಯತ್ನಿಸುತ್ತೇವೆ. ಸಿನಿಮಾ ಜಗತ್ತಿನ ಕಥೆಯನ್ನು ನಮ್ಮದೇ ಕಥೆ, ನಮ್ಮ ಮನೆಯಲ್ಲೇ ನಡೆಯುತ್ತಿವೆ ಎಂಬಂತೆ ನಂಬಿ ಬಿಡುತ್ತೇವೆ. ಅಲ್ಲಿಯ ಪಾತ್ರಗಳೆಲ್ಲವನ್ನೂ  ನಮ್ಮ ಮನೆಯ ಸದಸ್ಯರೆಂಬಂತೆ ಕಲ್ಪಿಸಿಕೊಳ್ಳುತ್ತೇವೆ. ಅದರಲ್ಲಿ ನಾಯಕನಾಗಿ ಮೆರೆದವನು ಬಹಳ ಆಪ್ತನಾಗಿ ಬಿಡುತ್ತಾನೆ. ಅವನೇ ಆದರ್ಶನಾಗಿಬಿಡುತ್ತಾನೆ. ಅವನೇ ದೈವನಾಗಿ ಬಿಡುತ್ತಾನೆ. ಹೆತ್ತ ತಾಯಿಗಿಂತಲೂ ಮಿಗಿಲಾಗಿ, ಹೊತ್ತ ತಂದೆಗಿಂತಲೂ ಆಪ್ತನಾಗಿ ಬಿಡುತ್ತಾನೆ.... ಪರೋಕ್ಷವಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಆ ಸಿನಿಮಾ, ಆ ಪಾತ್ರಗಳೆಲ್ಲವೂ ಪ್ರಶಂಸನೀಯವಾದುದೇ ಅದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಕಥೆಯೇ ಬೇರೆ ವಾಸ್ತವವೇ ಬೇರೆ. ವಾಸ್ತವದಲ್ಲಿ ನಟನೊಬ್ಬನಿಗೆ ತನ್ನದೇ ಆದ ವೈಯಕ್ತಿಕ ಬದುಕಿರುತ್ತದೆ. ಆ ಬದುಕಿನಲ್ಲಿ ಅವನು ಖಳನೋ...? ನಾಯಕನೋ..? ಎಂದು ನಮಗೆ  ತಿಳಿಯದಂತಹ ಗೊಂದಲಗಳು ಮೂಡುತ್ತವೆ.
ಐದು ವರ್ಷದ ಹಿಂದೆ ಮಹೇಂದ್ರ ಕುಮಾರ್ ಮೊದಲ ಹೆಂಡತಿಗೆ ಡೈವರ್ಸ್ ನೀಡಿ ಮತ್ತೊಂದು ಹುಡುಗಿಯನ್ನು ಮದುವೆಯಾದಾಗ ಮಹೇಂದ್ರ ಕುಮಾರ್ ನನ್ನು ದ್ವೇಷಿಸುತ್ತಿದ್ದ ನನ್ನ ಇತರ ಗೆಳೆಯರು ನಾನೇ ತಪ್ಪು ಮಾಡಿದಂತೆ ನನ್ನನ್ನು ಹೀಯಾಳಿಸಿದರು. "ನೋಡೊ... ನಿನ್ನ ಹೀರೋ ಮಾಡಿದ ಮೋಸದ ಕೆಲಸವನ್ನ... ಹೊಸ ಹುಡುಗಿ ಸಿಕ್ಕಳು ಅಂತ ಧರ್ಮ ಪತ್ನಿಯನ್ನೇ ತೊರೆದು ಬಿಟ್ಟ. ಈಗಾದ್ರೂ ತಿಳ್ಕೋ.. ಅವನು ತೆರೆಯ ಮೇಲೆ ಮಾತ್ರ ಹೀರೋ, ವಾಸ್ತವ ಜಗತ್ತಿನಲ್ಲಲ್ಲ"  ಎಂದರು.
ಗೆಳೆಯರು ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ನಾನೇ ಕಾಲ್ಪನಿಕ ಜಗತ್ತಿನ ಹೀರೋ ಒಬ್ಬನನ್ನು ವಾಸ್ತವ ಜಗತ್ತಿನಲ್ಲೂ ಅದೇ ರೀತಿ ಇರುತ್ತಾರೆ ಎಂದು ಭಾವಿಸಿಕೊಂಡಿದ್ದು. ಆಗ ನಮಗೆ ಬುದ್ಧಿ ಇರಲಿಲ್ಲ ಬಿಡಿ ...ಕಣ್ಣಿಗೆ ಕಂಡ ವ್ಯಕ್ತಿತ್ವವನ್ನು ಸುಲಭವಾಗಿ ನಂಬುವಂತಹ ವಯಸ್ಸು. ಸಿನಿಮಾ ಆಗಲಿ ವಾಸ್ತವವಾಗಲಿ ವ್ಯತ್ಯಾಸವೇ ತಿಳಿಯದಂತಹ ಮುಗ್ಧತೆ. ಇನ್ನೂ ಎಷ್ಟೋ ಮುಗ್ಧ ಮನಸುಗಳು ಸಿನಿಮಾದ ಆ ವ್ಯಕ್ತಿತ್ವವನ್ನೇ ಆದರ್ಶವೆಂಬಂತೆ  ಪ್ರೀತಿಸುತ್ತಿರುವುದುಂಟು. ಅವರ ಚಿತ್ರಗಳನ್ನು ತಾವು ಮಲಗುವ ಕೋಣೆಯಲ್ಲೋ ಅಥವಾ ತಾವು ಬಳಸುವ ಮೊಬೈಲ್ ಗಳಲ್ಲಿ ಹಾಕಿಕೊಂಡು ಅಭಿಮಾನವನ್ನು ತೋರಿಸುತ್ತಾರೆ .ಆ ಪ್ರೀತಿಯನ್ನು ನಮ್ಮ ನಟರು ಉಳಿಸಿಕೊಳ್ಳುವರೇ...? ಸಿನಿಮಾದಲ್ಲಿ ತೋರಿದ ಆ ಒಳ್ಳೆತನವನ್ನು ವಾಸ್ತವದಲ್ಲೂ ಸ್ವಲ್ಪವಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸುವರೇ...? ಅವರು ಹಣವನ್ನು ಖರ್ಚು ಮಾಡಿ, ಬಡವರಿಗೆ ಸಹಾಯ ಅಥವಾ ದೇಶಸೇವೆ ಮಾಡುವುದೇನೂ ಬೇಡ. ಸಾಮಾಜಿಕ ಜವಬ್ದಾರಿಯನ್ನು ಅರಿತರೆ ಸಾಕು. ತಮ್ಮನ್ನು ಮಾದರಿಯನ್ನಾಗಿಟ್ಟುಕೊಂಡು ಹಲವು ಅಭಿಮಾನಿಗಳಿದ್ದಾರೆ ಎಂದು ತಿಳಿಕೊಂಡರೆ ಸಾಕು. ರೌಡಿಗಳಂತೆ ಇನ್ನೊಬ್ಬರ ಮೇಲೆ ಕತ್ತಿ ಮಸೆಯುವುದು. ಸಹ ನಟಿಯರನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುವುದು. ಮದುವೆಯಾದ ಹೆಂಡತಿಯನ್ನು ತಿರಸ್ಕರಿಸುವುದು. ಕೆಲಸದ ಒತ್ತಡದ ನೆಪದಲ್ಲಿ ಹೆತ್ತ ಮಕ್ಕಳನ್ನೇ ತೊರೆಯುವುದು. ಬಣ್ಣದ ಪ್ರಪಂಚದಲ್ಲಿ ಹಣವೇ ಮುಖ್ಯ ಎಂದಾದರೆ ಮಾನವೀಯತೆಗೆ ಬೆಲೆ ಎಲ್ಲಿ...? ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವವರಾರು..? ಇಂತಹ ಗುಣಗಳನ್ನು ಅವರು ಬೆಳಸಿಕೊಳ್ಳಲಿ ಬಿಡಲಿ. ಅದು ಅವರ ವಯಕ್ತಿಕ ವಿಷಯ ಬಿಡಿ ಎಂದು ತಳ್ಳಿ ಹಾಕಬಹುದು. ಆದರೆ ಸಮಾಜದಲ್ಲಿ ಅವರು ದೃವತಾರೆಯಂತಹ ಸ್ಥಾನ ಗಿಟ್ಟಿಸಿಕೊಂಡಿದ್ದು ಸುಳ್ಳೇ...? ಅಭಿಮಾನಿಗಳ ಹೃದಯದಲ್ಲಿ ಕಲಾ ಚಕ್ರವರ್ತಿಯಾಗಿ ಮೆರೆಯುತ್ತಿರುವುದು ಸುಳ್ಳೇ...? ಹೀಗೆ ಏನೆನೋ ವಿಷಯಗಳು ಮನಸ್ಸಿನಲ್ಲಿ ಹರಿದಾಡಿದವು. ನಾನು ಪ್ರೀತಿಸುವ ಮಹೇಂದ್ರ ಕುಮಾರ್ ನಲ್ಲಿ ಇಂತಹ ಯಾವ ಗುಣವೂ ಇರಲಿಲ್ಲ. ಹಾಗಾದರೆ ಅವನನ್ನು ಕಾಣುವ ಹಂಬಲವಾದರೂ ಯಾಕೆ.. ಜನಪ್ರಿಯ ನಟ ಎಂದೇ...? ಅವನ ಬಳಿ ಕೋಟಿಗಟ್ಟಲೆ ಹಣವಿದೆ ಎಂಬ ಕಾರಣಕ್ಕೋ...? ಅವನ ಜೊತೆ ಊಟ ಮಾಡಿ ಒಂದೆರಡು ಸೆಲ್ಫಿಗಳನ್ನು ತೆಗೆದುಕೊಂಡು ಗೆಳೆಯರಿಗೆ ತೋರಿಸಿದೊಡೆ ನಾನೇ ಹೀರೋ ಆಗಿ ಬಿಡುತ್ತೇನೆ ಎಂದೋ...? ಖಂಡಿತ ಇದಾವುದೂ ಅಲ್ಲ. ಎಲ್ಲಾ ಹುಚ್ಚು ಅಭಿಮಾನವಷ್ಟೇ.. ಅಭಿಮಾನವಿರುವುದು ತಪ್ಪಲ್ಲ, ಆದರೆ ಆ ಅಭಿಮಾನಕ್ಕೆ ಒಂದು ಕಾರಣವಾದರೂ ಇರಲಿ.
ಈಗ ಮಹೇಂದ್ರ ಕುಮಾರ್ ನ ಸ್ಥಾನದಲ್ಲಿ ಮತ್ತೊಬ್ಬ ನಟ ನನ್ನ ಮೆಚ್ಚಿನ ನಟನಾಗಿ ಮನಸ್ಸನ್ನು ಆವರಿಸಿಕೊಳ್ಳಲಾರಂಭಿಸಿದ್ದನೆ. ಅದೂ ಅವನಲ್ಲಿ ಸತ್ಯ, ಪ್ರಾಮಾಣಿಕತೆ, ಮಾನವೀಯತೆವಿರುವವರೆಗೆ ಮಾತ್ರ. ಒಂದು ಹೆಣ್ಣನ್ನು ಗೌರವಿಸಿ ಅವಳ ಭಾವನೆಗಳಿಗೆ ಬೆಲೆ ಕೊಡುವವರೆಗೆ ಮಾತ್ರ...
ಇಷ್ಟೆಲ್ಲಾ ಯೋಚನೆ ಮಾಡಿದ ಮೇಲೆ ಅದೇಕೋ  ಗೆಳೆಯ ರವಿ ಆಪ್ತವಾಗಿ ಕಾಣಲಾರಂಭಿಸಿದ. ಗೆಳೆಯರನ್ನು ನೋಡುವ ಆತುರತೆ ಹೆಚ್ಚಾಯಿತು. ಕೂಡಲೇ ಅಲ್ಲಿಂದ ಹಿಂದಿರುಗಿ ರವಿಯ ಹುಟ್ಟುಹಬ್ಬವನ್ನಾಚರಿಸಲು ಅವನ ಮನೆಯ ಕಡೆಗೆ ಹೊರಡಲು ಸಿದ್ಧನಾಗಿ ನಿಂತೆ...
                                     - ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment