Monday, 20 February 2017

ದೆವ್ವದ ರಾತ್ರಿ. ಭಾಗ-2

ದೆವ್ವ, ಪಿಶಾಚಿ, ಭೂತಗಳ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇದ್ದ ಹೆದರಿಕೆಯೇ ಮೋಹಿನಿ ದೆವ್ವದ ರೂಪದಲ್ಲಿ ಕಂಡಿರಬೇಕು. ಆದರೆ ಸ್ಪಷ್ಟವಾಗಿ ದೆವ್ವದಂತೆಯೇ ಕಂಡಿದ್ದು ಇದು ನನ್ನ ಮೊದಲ ಅನುಭವ. ಈ ಹಿಂದೆ ನಾನು ದೆವ್ವಕ್ಕೆ ಹೆದರಿದ್ದೆನಾದರೂ ಅದು ಪ್ರಕೃತಿಯ ಮಧ್ಯೆ ನಡೆಯುವಂತಹ ಅಗೋಚರ ಶಬ್ಧಗಳಿಗೋ... ಅಥವಾ ತಟಸ್ಥ ಅವಸ್ಥೆಯಲ್ಲಿರು ನನ್ನ ಮನಸ್ಸಿಗೆ ಇದ್ದಕ್ಕಿಂತಂದೆ ಬಂದು ಎರಗಿದ ಒಂದು ಯಾವುದೋ ಬೌತಿಕ ಕಾರ್ಯಚರಣೆಗಳಿಗೋ...ನಾನು ಹೆದರಿಕೊಂಡಿದ್ದುಂಟು. ಆದರೆ ಮೊನ್ನೆ ಸಿನಿಮಾ ನೋಡಿಕೊಂಡು ಬರುವಾಗ ನಾನು ಕಂಡ ದೆವ್ವದ ರೂಪವೇ ಬೇರೆ. ಅದು ಸ್ಪಷ್ಟವಾದ ದೆವ್ವದ ರೂಪ.....!!!!
ಈ ಹಿಂದೆ ಕಂಡಿರದೇ ಇರುವಂತಹ ಭಯಾನಕ ರೂಪ....!!!!
ಅದೂ ನಂಬಲಾರದಂತಹ ಘಟನೆ...!!
ಆದರೂ ನನ್ನ ಗೆಳೆಯ ತಿಪ್ಪ ಅಂದಿನ ನನ್ನ ಸ್ಥಿತಿಯನ್ನು ಪ್ರತ್ಯೆಕ್ಷವಾಗಿ ನೋಡಿದ್ದರಿಂದ ನಾನು ಗೆಳೆಯನ ಮಾತನ್ನು ನಂಬಲೇಬೇಕಾಯಿತು..
ಒಂದೆರಡು ದಿನಗಳಾದ ನಂತರ ಜ್ವರ ಕಡಿಮೆಯಾಗುತ್ತಾ ಬಂತು. ಯಾಕೋ ಮನಸ್ಸಿನ ತುಂಬೆಲ್ಲಾ ಮೋಹಿನಿ ಆವರಿಸಿಕೊಂಡಿದ್ದಳು. ದೆವ್ವದ ರೂಪದಲ್ಲಿರುವ ಭಯಾನಕ ರೂಪದ ಮೋಹಿನಿ ಅಲ್ಲ.. ನಾನು ಪ್ರೀತಿಸುತ್ತಿರುವ ಸುಂದರ ರೂಪದ ಮೋಹಿನಿ. ಕೆಲಸ ಸಿಕ್ಕ ಮೇಲೆ ಮೋಹಿನಿಯನ್ನೇ ಮದುವೆಯಾಗುತ್ತೇನೆಂದು ಅಮ್ಮನಿಗೆ ಒಪ್ಪಿಸಿದ್ದೆ. ಮೋಹಿನಿ ತಂದೆಯವರು ಸಹ ನೋಡೋಣ ಎಂದು ಹೇಳಿದ್ದರು. ಹಾಗಾಗಿ ಮೋಹಿನಿಗೆ ಕೆಲಸ ನೋಡುವ ಜವಬ್ದಾರಿ ನನ್ನ ಜವಬ್ದಾರಿಯೂ ಆಗಿತ್ತು. ಹೇಗಾದರೂ ಮಾಡಿ ಮೋಹಿನಿಗೆ ಬೆಂಗಳೂರಿನಲ್ಲಿಯೇ ಕೆಲಸ ಹುಡುಕಿದರೆ ನನಗೂ ಮುಂದೆ ಸಹಾಯವಾಗುತ್ತೆ. ಮುಂದೆ ಮದುವೆಯಾದರೂ ಒಂದೇ ಕಡೆ ಇರಬಹುದು. ಹೀಗೆಲ್ಲಾ ಲೆಕ್ಕಚಾರ ಹಾಕಿಕೊಂಡೆ. ಮೋಹಿನಿಗೆ ಚನ್ನೈನಲ್ಲಿ ಕೆಲಸ ಸಿಕ್ಕರೂ ನಾನೇ ಬೇಡ ಎಂದು ಹೇಳಿದ್ದೆ. ಅವರಪ್ಪನೂ ಸಹ ಒಬ್ಬಳೇ ಮಗಳು ದೂರದ ಚೆನ್ನೈಗೆ ಕಳುಹಿಸಲಾರೆ ಬೇಕಾದರೆ ಬೆಂಗಳೂರಿಗೆ ಹೋಗಲಿ. ಎಂದು ಹೇಳಿದ್ದರು...
ಅಂದು ಕಾಲೇಜಿನಲ್ಲಿ ಕೊನೆಯ ದಿನ. ಮೋಹಿನಿ ಪದ್ಮಿ ಸುಮ ನಾನು, ಶಂಕ್ರ, ರುದ್ರ, ಎಲ್ಲಾ ಸ್ವಲ್ಪ ಹೊತ್ತು ಕುಳಿತು ಹರಟೆ ಹೊಡೆದೆವು. ಕಾಲೇಜಿನಿಂದ ಮಾರ್ಕ್ಸ ಕಾರ್ಡ್ ಪಡೆದುಕೊಳ್ಳಲು ಅಂದೇ ಎಲ್ಲಾ ವಿದ್ಯಾರ್ಥಿಗಳನ್ನು ಕರೆಯಲಾಗಿತ್ತು. ಆ ದಿನ ಮೋಹಿನಿ ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನಮ್ಮ ಮದುವೆಗೆ ಹಿರಿಯರು ಶೇಕಡ ಎಂಬತ್ತರಷ್ಟು ಅದಿಕೃತ ಒಪ್ಪಿಗೆ ನೀಡಿದ್ದರಿಂದಮೋಹಿನಿ ನನ್ನ ಜೊತೆ ಸಲಿಗೆಯಿಂದಲೇ ಇದ್ದಳು. ಕಾಲೇಜು ಮುಗಿಸಿಕೊಂಡು ಹೊರಡುವಾಗಲೂ ನನ್ನ ಕೈ ಹಿಡಿದುಕೊಂಡೇ ಹೊರಬಂದಳು. ಅವಳ ಹಿತಕರವಾದ ಸ್ಪರ್ಶ ಮನಸಿಗೆ ಮುದ ನೀಡಿತ್ತು. ಗೆಳೆಯರೊಂದಿಗೆ ಮೋಜು ಮಸ್ತಿ ತಮಾಷೆ ಎಲ್ಲಾ ಮುಗಿಯಿತು. ಆದರೆ ಮೋಹಿನಿಯೊಂದಿಗಿನ ಹಿತಕರವಾದ ನೆನಪುಗಳಿಂದ ಮನಸ್ಸು ತುಂಬಿ ಹೋಗಿತ್ತು. ಮತ್ತೆ ಸಿಗೋಣ ಅಂತ ಹೇಳಿ ಮನೆಯ ಕಡೆ ಹೊರಟೆವು....
ನಾನು ಬೈಕ್ ಹತ್ತಿ ಮನೆಯ ಕಡೆ ಹೊರಟೆ. ಮನಸ್ಸಿನಲ್ಲೆಲ್ಲಾ ಮೋಹಿನಿಯೇ ತುಂಬಿಕೊಂಡಿದ್ದಳು. ನಮ್ಮೂರಿನ ದಾರಿಯ ಮಧ್ಯೆ ಕಲ್ಲನಕೇರಿ ದಿಬ್ಬ ಅನ್ನೋ ಒಂದು ಸ್ಥಳ ಇದೆ. ಸುತ್ತಲೂ ಸ್ಮಶಾನವಿರುವ ಸ್ಥಳ ಅದು. ಅಲ್ಲಿಗೆ ಬರುವಷ್ಟರಲ್ಲಿ ನನ್ನ ಬೈಕ್ ಕೆಟ್ಟು ನಿಂತಿತು. ನಾಲ್ಕೈದು ಸಲ ಕಿಕ್ ಹೊಡೆದರೂ ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಮದ್ಯಾಹ್ನದ ರಣ ರಣ ಬಿಸಿಲು ತೀವ್ರವಾಗಿತ್ತು. ಯಾರಾದರೂ ಸಹಾಯಕ್ಕೆ ಬರುವರೇ ಎಂದು ನೋಡಿದೆ  ದಾರಿಯಲ್ಲಿ ಜನರ ಓಡಾಟವೂ ಕಡಿಮೆ ಇತ್ತು. ಬೈಕ್ ಕೆಟ್ಟ ಸ್ಥಳದ ಪಕ್ಕದಲ್ಲಿ ಸ್ಮಶಾನ ದೃಶ್ಯ ಅಸಹಜವಾಗಿತ್ತು. ಸ್ಮಶಾನ ಕಡೆಯಿಂದ ಏನೋ ಕೀರಲು ಧ್ವನಿ ಕೇಳಿಸಿದಂತಾಯಿತು. ಗಾಳಿ ಜೋರಾಗಿ ಎದ್ದಿತು. ತಕ್ಷಣ ಮೊನ್ನೆ ಮೊನ್ನೆ ಸೆಕೆಂಡ್ ಷೋ ಪಿಕ್ಚರ್ ನೋಡಿ ಮೋಹಿನಿ ಅಂತ ಹೆದರಿಕೊಂಡಿದ್ದು ಜ್ಞಾಪಕಕ್ಕೆ ಬಂದಿತು. ಇನ್ನು ನಾನು ಹೆದರಲೇ ಬಾರದೆಂದು ಅಂದೇ ನಿರ್ಧರಿಸಿಕೊಂಡಿದ್ದೆ...
ಧೈರ್ಯದಿಂದ ಮತ್ತೆ ಬೈಕನ್ನು ಹತ್ತಿ ಒಂದೆರಡು ಸಲ ಕಿಕ್ ಹೊಡೆದೆ. ಆದರೆ ಏನೂ ಉಪಯೋಗವಾಗಲಿಲ್ಲ.ಬೈಕಿಂದ ಇಳಿದು ಪ್ಲಗ್ ನ್ನು ಪರೀಕ್ಷಿಸಲು ವಯರನ್ನು ಕಿತ್ತೆ. ನೋಡು ನೋಡುತ್ತಿದ್ದಂತೆ ಸ್ಮಶಾನದ ಕಡೆಯಿಂದ ಜೋರಾಗಿ ಗಾಳಿ ಬೀಸಲಾರಂಭಿಸಿತು. ಧೂಳು, ಹುಲ್ಲು, ಮರದ ಎಲೆಗಳೆಲ್ಲಾ ಗಾಳಿಯೊಂದಿಗೆ ರಭಸವಾಗಿ ಬಂದು ನನ್ನ ಮುಖಕ್ಕೆ ಬಡಿಯಲಾರಂಭಿಸಿತು. ಬಿರುಗಾಳಿ ಬಂದ ಕಡೆ ದೃಷ್ಠಿ ಹಾಯಿಸಿದೆ. ಬಿಳಿಯಾದ  ಸೀರೆಯೊಂದು ಗಾಳಿಯೊಂದಿಗೆ ಅಲೆಯಂತೆ ಹಾರಾಡುತ್ತಿತ್ತು. ನನಗೆ ಆಶ್ಚರ್ಯವಾಯಿತು. ನನ್ನ ದೃಷ್ಠಿಯನ್ನು ಸ್ಮಶಾನದಿಂದ ಆಚೆಗೆ ಕದಲಿಸಲಿಲ್ಲ.  ಸಮಾದಿಯೊಂದರ ಮೇಲೆ ಯಾರೋ ಬಿಳಿ ಸೀರೆಯುಟ್ಟ ಒಬ್ಬ ಹೆಂಗಸು ಕುಳಿತ್ತಿದ್ದಳು. ಕೂದಲು ಉದ್ದವಾಗಿದ್ದು ಮುಖ ಮುಚ್ಚಿಕೊಂಡಿತ್ತು. ಉದ್ದವಾದ ಕೈಯ ಉಗುರಿನ ಬೆರಳುಗಳು ರಕ್ತಸಿಕ್ತವಾಗಿ ಗೋಚರಿಸಿತು. ಮತ್ತೊಮ್ಮೆ ಜೋರಾಗಿ ಗಾಳಿ ಬೀಸಿತು. ಆ ಹೆಂಗಸಿನ ಕೂದಲು ಗಾಳಿಯೊಂದಿ ಹಾರಾಡಿತು. ಮುಚ್ಚಿದ್ದ ಮುಖ ಗೋಚರಿಸಿತು...
ಅರೆ....!!! ಮೋಹಿನಿ....!!!
ಅವಳೆ ...ನಾನು ಪ್ರೀತಿಸುತ್ತಿರುವ ಮೋಹಿನಿಯ ಮುಖ...!!
ನನ್ನ ಕಣ್ಣುಗಳು ಆ ರೂಪವನ್ನು ನಂಬದಾದವು...
ಮತ್ತೊಮ್ಮೆ ಅವಳ ಮುಖ ನೋಡಿದೆ... ಡೌಟೇ ಇಲ್ಲ ಅದೇ ಮುಖ. ಆದರೆ ದೆವ್ವದ ಭಯಾನಕ ರೂಪದೊಂದಿಗೆ ಇತ್ತು. ಕಣ್ಣುಗಳು ಕೆಂಪಾಗಿದ್ದವು. ಮುಖದ ಕೆಲವು ಕಡೆ ರಕ್ತದ ಕಲೆಗಳಿದ್ದವು. ಕೋರೆ ಹಲ್ಲುಗಳಂತೆ ಕಾಣುವ ಬಿಳುಪಾದ ಹಲ್ಲುಗಳು ತುಟಿಯಿಂದ ಆಚೆ ಬಂದಿತ್ತು. ಕೈ ಬೆರಳಲ್ಲಿ ಉದ್ದವಾದ ಉಗುರುಗಳಿಂದ ಹನಿ ಹನಿ ರಕ್ತ ಜಿನುಗುತ್ತಿತ್ತು. ಗಾಳಿಯೊಂದಿಗೆ ಹಾರಾಡುತ್ತಿರುವ ಕೂದಲುಗಳ ನಡುವೆ ಅವಳ ಮುಖ ಒಮ್ಮೆ ಕಪ್ಪಾಗಿಯೂ ಮತ್ತೊಮ್ಮೆ ಬಿಳುಪಾಗಿಯೂ ಕಾಣುತ್ತಿತ್ತು.. ಹಾಗೆಯೇ ದಿಟ್ಟಿಸಿ ನೋಡಿದೆ...
"ಬಾ.... ಬಾ...  ಎಂದು ಕೈ ಸನ್ನೆ ಮಾಡುತ್ತಾ ನನ್ನ ಕಡೆನೇ ಬರಲಾರಂಬಿಸಿದಳು...
ಕೈಕಾಲುಗಳು ಶಕ್ತಿ ಕಳೆದುಕೊಂಡು ನಡುಗಲಾರಂಭಿಸಿತು. ಅವಳು ನನ್ನ ಕಡೆ ಹತ್ತಿರ ಹತ್ತಿರ ಬರುತ್ತಿರುವಂತೆ ಮತ್ತೊಷ್ಟು ಭಯಾನಕ ರೂಪ ತಳೆದಂತೆ ಭಾಸವಾಯಿತು.. ಎದ್ದೆನೋ ಬಿದ್ದೆನೋ... ತಿಳಿಯಲಿಲ್ಲ. ದಿಕ್ಕೆಟ್ಟು ಓಡಲಾರಂಭಿಸಿದೆ. ಹಿಂದಕ್ಕೆ ತಿರುಗಿ ನೋಡಿದೆ ಮೋಹಿನಿ ನನ್ನನ್ನು ಹಿಡಿಯಲು ಹಿಂದೆಯೇ ಓಡಿ ಬರುತ್ತಿದ್ದಳು. ಅವಳ ಕಾಲುಗಳು ನೆಲದಿಂದ ನಾಲ್ಕೈದು ಅಡಿ ಮೆಲೆಯೇ ಇತ್ತು. ನೆಲವನ್ನು ಸ್ಪರ್ಶಿಸದೇ ನಡೆಯುತ್ತಿದ್ದ ಮೋಹಿನಿಯ ನಡಿಗೆ ಇನ್ನಷ್ಟು ಭಯವನ್ನು ಸೃಷ್ಟಿಸಿತು. ಈಗ ಅವಳ ಕೂದಲುಗಳು ಮುಖದ ಹಿಂದೆ ಅಲೆಯಂತೆ ಪಟ ಪಟನೇ ಹಾರಾಡುತ್ತಿದ್ದವು. ಅವಳ ಕೋರೆ ಹಲ್ಲುಗಳು ಉದ್ದವಾಗಿ ಕಂಡಿತು. ಕಣ್ಣುಗಳು ಕೆಂಪಾಗಿ ರಕ್ತ ಕಾರುತ್ತಿದ್ದವು. ನಾಲಿಗೆಯ ಮುಕ್ಕಾಲು ಭಾಗ ಬಾಯಿಂದ ಆಚೆ ಬಂದಿತ್ತು. ನನಗೆ ಭಯ ತಡೆಯಲಾಗಲಿಲ್ಲ. ಚಡ್ಡಿ ಒದ್ದೆಯಾದಂತಹ ಅನುಭವ...
ನಾನು ನಿಲ್ಲಲಿಲ್ಲ.... ನಿಲ್ಲಲಿಲ್ಲ.... ಓಡಿದೆ... ಮತ್ತಷ್ಟು ಓಡಿದೆ, ಮೋಹಿನಿ ಹತ್ತಿರ ಬಂದೇ ಬಿಟ್ಟಳು... ಇನ್ನೇನು ನನ್ನ
ಹಿಡಿಯಬಹುದು.... ಹ್ಞಾಂ ಹಿಡಿದೇ ಬಿಟ್ಟಳು.... ಹಿಡಿದೇ ಬಿಟ್ಟಳು... ಎಂದು ಯೋಚಿಸುವಷ್ಟರಲ್ಲಿ ರಾಮಣ್ಣನ ಅಂಗಡಿ ಬಂದಿದ್ದೂ ತಿಳಿಯಲಿಲ್ಲ... ದೊಪ್ಪನೆ ರಸ್ತೆಯ ಬದಿಯಲ್ಲಿ ಜ್ಞಾನ ತಪ್ಪಿ ಬಿದ್ದೆ. ಅಲ್ಲಿಂದ ಮುಂದಿನ ನೆನಪುಗಳೆಲ್ಲವೂ ಶೂನ್ಯ... ಶೂನ್ಯ.... ಯಾವುದೋ ಅರಿವಿಲ್ಲದ ನೆನಪಿಲ್ಲದ ಕತ್ತಲು ಪ್ರಪಂಚವನ್ನು ಪ್ರವೇಶಿಸಿಯಾಗಿತ್ತು.....
ಕಣ್ಣು ಬಿಟ್ಟು ನೋಡಿದಾಗ ಅದೇ ಆಸ್ಪತ್ರೆ. ಡಾಕ್ಟರ್ ಥರ್ಮಾ ಮೀಟರ್ ಇಟ್ಟು ನನ್ನ ಜ್ವರವನ್ನು ಪರೀಕ್ಷಿಸುತ್ತಿದ್ದರು...
"ಜ್ವರ ನೂರು ಡಿಗ್ರಿಗಿಂತಲೂ ಮೇಲಿದೆ... ಹಣೆ ಮೇಲೆ ಒದ್ದೆ ಬಟ್ಟೆ ಹಾಕಮ್ಮ.."
ಡಾಕ್ಟರ್ ಪಕ್ಕದಲ್ಲಿದ್ದ ನರ್ಸ್ ಗೆ ಹೇಳಿದ್ದು ಕೇಳಿಸಿತು. ತಿಪ್ಪ ನನ್ನ ಪಕ್ಕದಲ್ಲೇ ನಿಂತಿದ್ದ. ಡಾಕ್ಟರ್ ಹೋದ ಮೇಲೆ...ಅಮ್ಮ ತನ್ನ ದೊಡ್ಡದಾದ ಬಾಯಿ ತೆಗೆದು ನನ್ನನ್ನು  ಬಯ್ಯಲಾರಂಭಿಸಿದಳು.
"ಥೂ..... ನಿನ್ನ ಮುಖಕ್ಕೆ ಮಂಗಳಾರತಿ ಎತ್ತ, ಮತ್ತೆ ಹೆದರ್ಕೊಂಡು ಜ್ವರ ತಂದ್ಕಂಡಿದ್ದೀಯಲ್ಲಾ ನಿನಗೆ ಬುದ್ದಿ ಗಿದ್ದಿ ಐತಾ.... ನನಗೂ ಸಾಕಾಗಿ ಬಿಟ್ಟಿದೆ. ಹೆದರ್ಕೊಂಡು ಹೀಗೆ ಆಸ್ಪತ್ರೆ ಸೇರ್ತಿಯಲ್ಲಾ..... ಥೂ ನಿನ್ನ ಜನ್ಮಕ್ಕಿಷ್ಟು. ಮೊನ್ನೆ ಇನ್ಮೇಲೆ ಯಾವ ಕಾರಣಕ್ಕೂ ಹೆದರಲ್ಲ ಅಂತ ಭಾಷೆ ಬೇರೆ ಕೊಟ್ಟಿದ್ದೆ...!!! ಎಲ್ಲೋ ಹೋಯ್ತು ನಿನ್ನ ಭಾಷೆ....? ಬಾ ನಿನಗೆ ಮುಸ್ತಾಕಪ್ಪನ ದರ್ಗಾಕೆ ಕರ್ಕೊಂಡ್ ಹೋಗಿ ನಾಲ್ಕು ಛಡಿ ಏಟು ಕೊಡ್ಸಿಲ್ಲಾಂದ್ರೆ ಕೇಳು.."
ಅಮ್ಮನ ಮಾತು ಕೇಳಿ ನನಗೆ ಭಯವಾಯಿತು. ನಾನು ಈ ಹಿಂದೆ ಪಿಯುಸಿ ಓದ ಬೇಕಾದರೆ. ನಮ್ಮ ಬೀದಿಯ ವಿದವೆ ಹೆಂಗಸು ಶಾರದವ್ವ ಬಿಳಿ ಸೀರೆಯುಟ್ಟು ಕಲ್ಲನಕೇರಿಯ ಹತ್ತಿರ ನಡೆದುಕೊಂಡು ಹೊಲಕ್ಕೆ ಹೋಗ್ತಾ ಇದ್ದಳಂತೆ. ಆಗ ನಾನು ದೆವ್ವ ಅಂತ ಹೆದರ್ಕೊಂಡು ಮೂರು ದಿನ ಜ್ವರ ತಂದ್ಕಂಡಿದ್ದೆ. ಆಗ ಅಮ್ಮ ಮುಸ್ತಫನ ದರ್ಗಾಕೆ ಕರ್ಕೊಂಡು ಹೋಗಿ ಬಾಬಾನ ಕೈಯಿಂದ ನಾಲ್ಕು ಛಡಿ ಏಟು ಹಾಕಿಸಿದ್ಳು. ಅಬ್ಬಾ ಎಂಥಹ ಹೊಡೆತಗಳವು ..!! ಬಾಬಾನ ಏಟನ್ನು ಸಹಿಸಿಕೊಂಡವರೂ ಯಾರೂ ಇಲ್ಲ. ಅಮ್ಮ ಮತ್ತೆ ಮುಸ್ತಫಾ ದರ್ಗಾ ನೆನಪಿಸಿದ ಕೂಡಲೇ ಕೈ ಕಾಲು ನಡಗಲಾರಂಭಿಸಿತು...
"ಅಮ್ಮ ನಾನೇನೂ ಮೊದಲಿನಂತೆ ಚಿಕ್ಕ ಹುಡುಗ ಅಲ್ಲ... ಬಾಬಾ ಕೈಯಿಂದ ಏಟು ತಿನ್ನಲಿಕ್ಕೆ. ಅಷ್ಟಕ್ಕೂ ನನಗೇನು ದೆವ್ವ ಹಿಡಿದಿಲ್ಲ. ಮೋಹಿನಿ ಪದೇ ಪದೇ ದೆವ್ವದ ರೂಪದಲ್ಲಿ ಕಾಣುತ್ತಿರೋದಕ್ಕೆ ಕಾರಣ ಹುಡುಕಬೇಕಿದೆ.. ನೀನು ಸುಮ್ನಿರಮ್ಮ. ನಾನೇನು ಸುಮ್ ಸುಮ್ಮೆ ಹೆದರ್ಕೊಂಡಿಲ್ಲ..."
ನಾನು ಅಮ್ಮನಿಗೆ ಹೇಳಿದೆ
ಅದಕ್ಕೆ ಅವಳು
"ಅದೇನು ದೊಡ್ಡವನಾಗಿದಿಯೋ ಏನೋ.... ಚಿಕ್ಕ ಮಕ್ಕಳ ತರ ಹೆದರ್ಕೊಂಡು ಮನೆಯವರಿಗೆಲ್ಲಾ ಟೆನ್ಷನ್ ಕೊಡ್ತಿಯಾ...."
ಅಮ್ಮ ಗೊಣಗುತ್ತಾ ಹೊರ ನಡೆದಳು.
ನನ್ನ ಪಕ್ಕದಲ್ಲಿ ನಿಂತಿದ್ದ ತಿಪ್ಪ ನನ್ನ ತಲೆಯನ್ನು ಸವರುತ್ತಾ ಕೇಳಿದ
"ಯಾಕೊ.. ಪಕ್ಕ, ಮತ್ತೇನಾಯ್ತೋ. ದೊಡ್ಡವನಾಗಿ ಈ ತರ ಹೆದರ್ಕೊತಿಯಲ್ಲೋ... ಏನಾಯ್ತೋ...?"
"ಇಲ್ಲ ಕಣೋ ತಿಪ್ಪ... ಯಾರೋ ನನ್ನ ಫಾಲೋ ಮಾಡ್ತಿದಾರೆ ಅಂತ ಅನುಮಾನ ಬರ್ತಾ ಇದೆ. ಮೋಹಿನಿ ಏನಾದ್ರೂ ಈ ತರ ಹೆದರಿಸುತ್ತಿರಬಹುದೇ. ಯಾಕೆ ಈ ತರ ಆಡ್ತಿದಾಳೆ. ಮೋಹಿನಿ ಮೈಯಲ್ಲೇನಾದ್ರೂ ದೆವ್ವ....!!! ಛೇ ಆ ರೀತಿ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಲೋ ತಿಪ್ಪ ಅವತ್ತು ರಾತ್ರಿ ಸಿನಿಮಾ ನೋಡ್ಕೊಂಡು ಹಿಂದಿರುಗುವಾಗ ಏನು ನಡಿತೋ ಸರಿಯಾಗಿ ಜ್ಞಾಪಿಸಿಕೊಂಡು ಹೇಳು. ಆ ದಿನ ನನಗೆ ಕಂಡಿದ್ದು ಮೋಹಿನಿ. ನೀನು ಹೇಳುತ್ತುರುವುದು ಮೋಹಿನಿ ಅಲ್ಲ ಅಲ್ಲ ಅದು ನಾನೇ ಹಿಂಬಾಲಿಸಿದ್ದು ಅಂತ....ಅದೇನು ಅಂತ ಸರಿಯಾಗಿ ಹೇಳೋ ಪ್ಲೀಸ್...."
ನಾನು ತಿಪ್ಪನನ್ನು ಬೇಡಿಕೊಂಡೆ
"ನೀನು ಹೀಗೆಲ್ಲಾ ಹೇಳ್ತಿರೋದು ನೋಡಿದ್ರೆ.... ನನಗೂ ಅನುಮಾನ ಬರ್ತಾ ಇದೆ. ಆ ದಿನ ನಮ್ಮ ನಾಯಿ ಜಿಮ್ಮಿ ಯಾರನ್ನೋ ನೋಡಿ ಭಯದಿಂದ ಬೊಗಳ್ತಾ ಇತ್ತು. ಆಗಲೇ ನನಗೂ ಎಚ್ಚರವಾಗಿದ್ದು. ಅದೇ ಸಮಯಕ್ಕೆ ನಿನ್ನ ನೋಡಿ ನಾನು ಹಿಂಬಾಲಿಸಿಕೊಂಡು ಬಂದಿದ್ದು. ನನ್ನ ಮತ್ತು ನಿನ್ನ ನಡುವೆ ಮತ್ತ್ಯಾರಾದರೂ ನಿನ್ನ ಹಿಂಬಾಲಿಸುತ್ತಿರುವರೆನೋ ಎಂದು ನನಗೆ ಸರಿಯಾಗಿ ತಿಳಿಯದು. ಆದರೆ ನಾನು ನಿನ್ನ  ಮುಟ್ಟುವ ಮೊದಲೇ ಮೋಹಿನಿ ಅಂತ ಕಿರುಚಿ ನೆಲ ಹಿಡಿದಿದ್ದೆ. ನನ್ನ ಹಿಂದೆ ಓಡಿ ಬಂದ ಜಿಮ್ಮಿ ವಿಚಿತ್ರವಾಗಿ ಬೊಗಳುತ್ತಿತ್ತು. ಜಿಮ್ಮಿಗೆ ಯಾರೋ ಕಂಡಿರಬೇಕು. ಸುಮಾರು ಐದು ನಿಮಿಷ ಯಾರನ್ನೋ ನೋಡಿ ಬೊಗಳಿದಂತೆ ಕಂಡಿತು. ಭವಿಷಃ ನೀನು ಪ್ರೀತಿಸಿದ ಮೋಹಿನಿಯೇನಾದರೂ ನಿನ್ನ ಹೆದರಿಸುತ್ತಿರಬಹುದು ಅಂತ ನನಗೆ ಅನುಮಾನ ಬರುತ್ತಿದೆ..."
ತಿಪ್ಪ ಆ ದಿನದ ಘಟನೆಯನ್ನು ನೆನಪಿಸಿಕೊಂಡು ಹೇಳಿದ.
"ನನಗೂ ಅದೇ ಅನುಮಾನ... ದೆವ್ವದ ರೂಪದಲ್ಲಿರುವ ಮುಖ ಮೋಹಿನಿಯದೇ. ನಾನು ಸ್ಪಷ್ಟವಾಗಿ ಆ ಮುಖವನ್ನು ನೋಡಿದ್ದೇನೆ. ಅದು ಅವಳೇ... ಆದರೆ ಹೆದರಿಸುತ್ತಿರುವ ಕಾರಣ ತಿಳಿಯಬೇಕಷ್ಟೆ. ಅಥವಾ ಅವಳ ಹಿಂದೆ ಯಾರೋ ಅವಳನ್ನು ಬಳಸಿಕೊಂಡು ಈ ಕುತಂತ್ರ ನಡೆಸುತ್ತಿರಬಹುದು. ಇದನ್ನು ಕಂಡು ಹಿಡಿಯಲೇ ಬೇಕು... ಆ ದಿನ ನಾವೆಲ್ಲರೂ ಒಂದೇ ಸಮಯಕ್ಕೆ ಕಾಲೇಜು ಬಿಟ್ಟು ಮನೆಗೆ ಹೊರೆಟೆವು... ಸುಮ, ಪದ್ಮಿ,, ಜೊತೆಗೆ ಮೋಹಿನಿಯೂ ಇದ್ದಳು. ನಾನು ಹೊರಟು ಬಂದ ಮೇಲೆ ಮೋಹಿನಿ ಅವರ ಜೊತೆಗೆ ಮನೆಗೆ ಹೊರಡಲೇ ಹೊರಟಿರಲೇ ಬೇಕು ..ಅವರ ಜೊತೆ  ಇಲ್ಲ ವೆಂದಾದರೆ ಇದೆಲ್ಲಾ ಮೋಹಿನಿಯದೇ ಕುತಂತ್ರ.. ಸುಮಾಗೆ ಫೋನ್ ಮಾಡಿ ಕೇಳಿದರೆ ಮೋಹಿನಿಯ ಬಣ್ಣ ಬಯಲಾಗುತ್ತದೆ. ..."
ತಕ್ಷಣ ಮೇಬೈಲ್ ಎತ್ತಿಕೊಂಡು ಸುಮಾಗೆ ಫೋನ್ ಮಾಡಿದೆ
"ಹಾಯ್ ಸುಮ ಹೇಗಿದ್ದೀಯಾ....? ಅಂತು ನಮ್ದೆಲ್ಲಾ ಕಾಲೇದ್ ಲೈಫ್ ಮುಗೀತು ನೋಡು. ಇನ್ಮೇಲೆ ಕತ್ತೆ ತರ ದುಡಿಯೋದೊಂದೇ ನಮ್ಮ ಕೆಲಸ.... ಹೌದು ಅವತ್ತು ಮೋಹಿನಿ ನೀವು ಎಷ್ಟು ಗಂಟೆಗೆ ಮನೆ ಸೇರ್ಕೊಂಡ್ರಿ...?"
ಅಷ್ಟು ಹೇಳಿ ಸುಮಾಳ ಉತ್ತರಕ್ಕೆ ಕಾದೆ..
"ನಾನು ಚನ್ನಾಗಿದ್ದೀನಿ.   ನೀನು ಹೇಗಿದ್ದೀಯಾ..? ಆ ದಿನ ಕಾಲೇದಿನ ಕೊನೆಯ ದಿನ ವಾದ್ದರಿಂದ ನಾವೆಲ್ಲಾ. ಅಕ್ಕಮಹಾದೇವಿ ಸರ್ಕಲ್ ನಲ್ಲಿರೋ ಚಾಟ್ ಸೆಂಟರ್ ಗೆ ಹೋಗಿ ತನ್ನಾಗಿ ತಿಂದ್ವಿ... ಎಲ್ಲಾ ಖರ್ಚು ಮೋಹಿನಿಯದ್ದೇ... ಮೋಹಿನಿ ಕೊಟ್ಟ  ಪಾರ್ಟಿ ಚನ್ನಾಗಿತ್ತು. ಅಲ್ಲಿಂದ ಮನೆ ಸೇರೋತನಕ ಸಾಯಂಕಲ ಐದುಗಂಟೆಯಾಯಿತು..."
ಅಷ್ಟು ಕೇಳಿದ ಕೂಡಲೇ ನಾನು ಸರಿ ಎಂದು ಏನೋ ಸಬೂಬು ಹೇಳಿ ಕಾಲ್ ಕಟ್ ಮಾಡ್ದೆ. ...
ಮೋಹಿನಿ ಗೆಳತಿಯರ ಜೊತೆಗೇ ಇದ್ದಾಳೆ. ಅಷ್ಟಕ್ಕೂ ಮೋಹಿನಿ ಅಷ್ಟು ಬೇಗ ನನ್ನನ್ನು ಹಿಂಬಾಲಿಸಿ ಬಂದು ಹೆದರಿಸಲು ಸಾಧ್ಯವೇ ಇಲ್ಲ...ಹಾಗಾದರೆ ಭೂತದ ವೇಶದಲ್ಲಿದ್ದ ಆ ಮೋಹಿನಿಯ ರೂಪ ಯಾವುದು...? ನನ್ನ ಹಿಂದೆ ಬಿದ್ದ ಆ ಮೋಹಿನಿ ಯಾರು...? ನನ್ನ ಮನದಲ್ಲಿ ಹಲವು ಅನುಮಾನಕರವಾದ ಪ್ರಶ್ನೆಗಳು ಏಳಲಾರಂಭಿಸಿದವು....
             ಪ್ರಕಾಶ್ ಎನ್ ಜಿಂಗಾಡೆ