Wednesday 29 March 2017

ಕಣ್ಣಲ್ಲೇ ಕಂಡ ಒಲವು

ಸೂರ್ಯನ ಕಿರಣಗಳು ಆಗತಾನೆ ಕಿಟಕಿಯಿಂದ ಹಾದು ಒಳ ಪ್ರವೇಶಿಸಿದ್ದವು. ನಾನು ಮಲಗಿದ್ದ ಹಾಸಿಗೆಯವರೆಗೆ ಬಂದು ಸ್ಪರ್ಶಿಸಿದರೂ ನನಗೆ ಎಚ್ಚರವಾಗಿರಲಿಲ್ಲ. ಯಾವಾಗ ಮೋಬೈಲ್ ರಿಂಗಾದ ಸದ್ದು ಕಿವಿಗೆ ಬಡಿಯಿತೋ  ತಕ್ಷಣ ಆಕಾಶ ಕಳಚಿ ಬಿದ್ದವನಂತೆ ಎದ್ದು ಕುಳಿತೆ. ಮೊಬೈಲ್ ನೋಡಿದರೆ ಆಶ್ಚರ್ಯ.  ನನ್ನ ಗೆಳೆಯ ಮನೋಜನ ಕರೆ. ಆತ ನನ್ನಿಂದ ದೂರವಾಗಿ ಸುಮಾರು ಹತ್ತು ವರ್ಷವಾಗಿತ್ತು. ಇದ್ದಕ್ಕಿದ್ದಂತೆ ಅವನಿಂದ ಕರೆ ಬಂದಿದ್ದು ನೋಡಿ ನನ್ನ ಮುಖ ಸಂತೋಷದಿಂದ ಅರಳಿತು.

"ಏನೋ ಗೆಳೆಯ ಹೇಗಿದ್ದೀಯಾ...? ದಾವಣಗೆರೆಗೆ ಬಂದಿದ್ದೀನಿ. ನಿನ್ನ ಬೇಟಿಯಾಗಲೇ ಬೇಕು. ನೀನು  ಕುಟುಂಬ ಸಮೇತ ಮನೆಗೆ ಬಂದು ಬಿಡು. ಒಂದು ಚಿಕ್ಕ ಗೆಟ್ ಟುಗೆದರ್ ಪಾರ್ಟಿ ಆಯೋಜಿಸಿದ್ದೇನೆ. ಇತರ ಗೆಳೆಯರನ್ನು ಆಹ್ವಾನಿಸಿದ್ದೇನೆ. ತಪ್ಪದೇ ಬಾ.. ಎರಡೇ ದಿನ ಇಲ್ಲಿರೋದು ಮತ್ತೆ ಅಸ್ಸಾಂ ಗೆ ಹೋಗಬೇಕು. ಬಂದ ಮೇಲೆ ಸಾಕಷ್ಟು ಮಾತನಾಡೋಣ.."
ಎಂದು ಹೇಳಿ, ತನ್ನದೇ ಸ್ಟೈಲಲ್ಲಿ ಸ್ವೀಟಾಗಿ ಸ್ವಲ್ಪವೇ ಮಾತನಾಡಿ ಮುಗಿಸಿ ಫೋನ್ ಇಟ್ಟ. ಆತನ ಧ್ವನಿ ಕೇಳಿ ಎಷ್ಟೋ ದಿನವಾಗಿತ್ತು.
ಮನೋಜನ ಆಹ್ವಾನ ಅನಿರೀಕ್ಷಿತವಾದುದು. ಏನು ಮಾಡಬೇಕೋ ತಿಳಿಯದಂತಾಯಿತು. ಆದರೆ ಮನೋಜ ಜೀವದ ಗೆಳೆಯ ಅಸ್ಸಾಂ ನಿಂದ ಬಂದಿದ್ದಾನೆ. ಅದೂ ಗೆಳೆಯರನ್ನು ನೋಡಲು...!!! ಹಾಗಿರುವಾಗ ಮನೋಜನ ಆಹ್ವಾನ ತಿರಸ್ಕರಿಸುವಂತಿರಲಿಲ್ಲ. ಪತ್ನಿಗೂ ಹೇಳಿದೆ. ಅವಳಿಗೂ ಮನೋಜನನ್ನು ನೋಡುವ ಕಾತುರವಿತ್ತು. ಮುದ್ದು ಮಗಳೊಂದಿಗೆ ಮನೋಜನ ಮನೆಗೆ ಹೊರಟು ನಿಂತೆವು...

ಹತ್ತು ವರ್ಷದ ಹಿಂದಿನ ಮಾತು. ಮನೋಜ ಪರಿಚಯವಾಗಿದ್ದು ಕಾಲೇಜಿನ ಮೊದಲ ದಿನದಲ್ಲಿ. ನಾನು ಆಗ ತಾನೇ ಪದವಿ ಮುಗಿಸಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡಿದ್ದೆ. ಹೊಸ ಕಾಲೇಜು, ಹೊಸ ವಾತಾವರಣ, ಹೊಸ ಪ್ರಾಧ್ಯಾಪಕರು, ಹೊಸ ಗೆಳೆಯರು, ಹೊಸದಾದ ಪ್ರಪಂಚಕ್ಕೆ.. ಹೊಸ ಆಲೋಚನೆಯೊಂದಿಗೆ ಕಾಲೇಜಿಗೆ ಹೊರಟು ಬಂದೆ. ಇನ್ನೇನು ಕಾಲೇಜ್ ಕ್ಯಾಂಪಸ್ ಒಳಗೆ ಹೆಜ್ಜೆಯಿಡಬೇಕು ಎನ್ನುವಷ್ಟರಲ್ಲಿ ರಸ್ತೆಯ ಬದಿಯಲ್ಲಿ ಸುಂದರ ಹುಡುಗಿಯೊಬ್ಬಳು ಕಾಣಿಸಿಕೊಂಡಳು... ನನ್ನ ಮನಸು ಯಾಕೋ ಅತ್ತ ಕಡೆಯೇ ಸೆಳೆಯಿತು. ಅವಳನ್ನು ನೋಡಿದ ಕೂಡಲೇ ರೋಮಾಂಚನವಾಯಿತು. ಥೇಟ್ ಅಪ್ಸರೆಯಂತಹ ಸೌಂದರ್ಯ, ಕಿವಿಗಳಿಗೆ ಇಯರ್ ಫೋನನ್ನು ಸಿಕ್ಕಿಸಿಕೊಂಡು ಯಾವುದೋ ಹಾಡಲ್ಲಿ ಮಗ್ನಳಾಗಿ ತನ್ನ ಕಾರಿಗೆ ಒರಗಿಕೊಂಡಿದ್ದಳು. ತನಗರಿವಿಲ್ಲದಂತೆಯೇ ತುಟಿಗಳು ಹಾಡಿನ ಸಾಹಿತ್ಯವನ್ನು ಗುನುಗುತ್ತಿದ್ದವು. ತೆಳು ಗುಲಾಬಿ ಬಣ್ಣ ಲೇಪನದ ಆ  ತುಟಿಗಳು ಚಲನೆಯು ಆಕರ್ಷಕವಾಗಿ ಕಂಡಿತು, ಮನಸು ಯಾವುದೋ ಉಲ್ಲಾಸದ ಭಾವನೆಯಲ್ಲಿ ಮಿಂದಂತೆ ಅನುಭವವಾಯಿತು. ನನ್ನ ಹೃದಯದಲ್ಲಿ ಯಾರೋ ಒಲವ ವೀಣೆಯನ್ನು ಮೀಟಿದಂತಾಯಿತು.ಅವಳನ್ನು ಹಾಗೇ ನೋಡುತ್ತಾ ನಿಂತೆ. ಶುಭ್ರ ಬಿಳಿ ಬಣ್ಣದ ಉಡುಪಿಗೆ ಕೆಂಪು ಬಣ್ಣದ ದುಪ್ಪಟ್ಟ ಹೊದ್ದಿದ್ದಳು. ರೇಷಿಮೆಯಂತಹ ಅವಳ ಮೈ ಬಣ್ಣ ಹೊಂಗಿರಣದ ಹೊಳಪನ್ನು ಧರಿಸಿತ್ತು. ಗಾಳಿಯೊಂದಿಗೆ ಹಾರಾಡುತ್ತಿದ್ದ ಮುಂಗುರುಳು ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಹೆಣ್ಣನ್ನು ಇಷ್ಟು ಸುಂದರವಾಗಿ ಸೃಷ್ಟಿಸಿದ ಆ ದೇವರು ಅದ್ಭುತ ಕಲೆಗಾರ ಎಂದೆನಿಸಿತು. ನೋಡಿದರೆ ಅವಳನ್ನೇ ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಮೊದಲ ನೋಟದಲ್ಲೇ ಪ್ರೀತಿ ಆಗುತ್ತೆ ಅಂತ ಸಿನಿಮಾದಲ್ಲಿ ಡೈಲಾಗ್ ಹೊಡಿತಾರಲ್ಲ... ಅದು ಈಗ ನನ್ನ ಅನುಭವಕ್ಕೂ ಬರಲಾರಂಬಿಸಿತು. ಮೊದಲ ದಿನದಲ್ಲಿ  ಕಾಲೇಜ್ ಹೇಗಿರುತ್ತೋ ಎಂಬ  ಎಕ್ಸೈಟ್ಮೆಂಟ್ ಮಾಯವಾಗಿ, ಪ್ರೀತಿಯೆಂಬ ಸುಳಿಯಲ್ಲಿ  ನನಗರಿವಿಲ್ಲದಂತೆ ನಾನೇ ಸಿಕ್ಕಿ ಬಿದ್ದಂತಾಯಿತು. ಮತ್ತೆ ಅವಳನ್ನೇ ನೋಡುತ್ತಾ ನಿಂತೆ. ಎಷ್ಟು ನೋಡಿದರೂ ತೃಪ್ತಿಯಾಗದ ಭಾವ. ಅವಳೊಂದಿಗೆ ಮಾತನಾಡುವ ತವಕ. ನನಗರಿವಿಲ್ಲದಂತೆ ನನ್ನ ಹೆಜ್ಜೆ ಅವಳು ನಿಂತ ದಿಕ್ಕಿನತ್ತ ನಡೆಯಲಾರಂಭಿಸಿತು. ಇನ್ನೇನು ಅವಳು ಹತ್ತಿರವಾದಳು ಎನ್ನುವಷ್ಟರಲ್ಲಿ ನನ್ನಷ್ಟೇ ವಯಸ್ಸಿನ ಯುವಕನೊಬ್ಬ ಅವಳ ಕೈ ಹಿಡಿದು ಕಾರಿನಲ್ಲಿ ಕರೆದು ಕೂರಿಸಿಕೊಂಡ. ಯಾರವನು..? ಮನಸು ಒಂದು ಕ್ಷಣ ಬೇಸರಿಸಿಕೊಂಡಿತು. ಅವಳು ಹೋದ ದಿಕ್ಕಿನತ್ತ ಕಾರು ಮಾಯವಾಗುವವರೆಗೂ ನಿಂತು ನೋಡಿದೆ.

ಯಾರೋ ಹೆಗಲ ಮೇಲೆ ಕೈಯಿಟ್ಟಂತಾಯಿತು. ತಿರುಗಿ ನೋಡಿದೆ. ಬೆಕ್ಕಿನ ಕಣ್ಣು ಶೀನ ನಿಂತಿದ್ದ. ನನ್ನ ಗೆಳೆಯ ಹೈಸ್ಕೂಲ್ ನಿಂದಲೂ ಜೊತೆಯಾಗಿ ಓದಿದವನು. ಆತನ ಕಣ್ಣು ಸ್ವಲ್ಪ ಬೆಕ್ಕಿನ ಕಣ್ಣಿನಂತೆ ಇರೋದ್ರಿಂದ ಅವನನ್ನು ಕ್ಯಾಟ್ ಮ್ಯಾನ್ ಅಂತ ಆಗಾಗ ತಮಾಷೆ ಮಾಡುತ್ತಿದ್ದೆವು.

"ಏನ್ಲಾ ದೀಕ್ಷಿತ್ ..ಯಾಕೊ ನಿಂತಿದ್ದೀಯಾ ನಡಿಯೊ  ಕಾಲೇಜಿಗೆ"..

ಅಂತ ಕ್ಯಾಟ್ ಶೀನ ನನ್ನ ಕೈ ಹಿಡಿದು ಎಳಕೊಂಡು ಹೋದ. ನನ್ನ ಮನಸ್ಸು ಮಾತ್ರ ಆ ಹುಡುಗಿಯನ್ನೇ ನೆನೆಯುತ್ತಿತ್ತು. ಎಂತಹ ಅದ್ಭುತ ಸುಂದರಿ ಅವಳು. ಮನಸ್ಸಲ್ಲಿ ಅವಳದೇ ಧ್ಯಾನ. ಅವಳದೇ ಜಪ. ಕಾಲೇಜಿನ ಮೊದಲ ದಿನವೇ ಎಂತಹ ಹಿತಕರವಾದ ಸ್ವಾಗತ ಸಿಕ್ಕಂತಾಯಿತು...

ಅವಳನ್ನು ಇಷ್ಟು ಮೆಚ್ಚುಗೆಯಿಂದ ನೋಡಲು ಒಂದು ಕಾರಣವೂ ಇದೆ. ಅಮ್ಮ ನನಗೆ ಮದುವೆ ಮಾಡಿಸಲು ತೀರ್ಮಾನಿಸಿದ್ದಳು. ಮೊನ್ನೆ ಶಿವಮೊಗ್ಗಕ್ಕೆ ಹುಡುಗಿ ನೋಡಲು ಸಹ ಕರೆದುಕೊಂಡು ಹೋಗಿದ್ದಳು. ಹುಡುಗಿ ನೋಡಲು ಸುಂದರವಾಗೇ ಇದ್ದಳು. ಒಳ್ಳೆಯ ಸಂಪ್ರದಾಯಸ್ಥ ಸುಸಂಸ್ಕೃತ ಕುಟುಂಬ ಬೇರೆ. ಹುಡುಗಿ ಇಷ್ಟವಾದ್ದರಿಂದ ಅಮ್ಮ ತನ್ನ ಒಪ್ಪಿಗೆಯನ್ನು ಅಲ್ಲೇ ಸೂಚಿಸಿದ್ದಳು. ನಾನು ಮಾತ್ರ ಹತ್ತು ದಿನದ ಕಾಲಾವಕಾಶ ಕೋರಿದ್ದೆ. ಅಮ್ಮನಿಗೆ ನನಗೆ ಮದುವೆ ಮಾಡಿಯೇ ತೀರಬೇಕೆಂದು ಹಠ ಹಿಡಿದಿದ್ದಳು. ಈ ವಿಷಯವಾಗಿ ಅಮ್ಮನ ಎದುರು ಹಲವು ಸಲ ಜಗಳವೂ ಆಗಿತ್ತು. ಆದರೆ ಅಮ್ಮನ ಮುಂದೆ ನನಗೇ ಮಾತೇ ಹೊರಡುತ್ತಿರಲಿಲ್ಲ.

"ಕಾಲೇಜು ಓದೋದು ಬೇಡ.. ಮೊದಲು ನೌಕರಿ ಸೇರಿಕೋ.. ನಂತರ ಮದುವೆಯಾಗಿ ಬಿಡು. ಮುಂದೆ ತಂಗಿಯ ಮದುವೆಯೂ ಮಾಡಬೇಕು. ನಿನಗೆ ಜವಬ್ದಾರಿ ಹೆಚ್ಚಿದೆ.. ಓದು ಗೀದು ಅಂತ ಕಾಲೇಜ್ ಸೇರಿಕೊಂಡು ಕೈಗೆ ಬಂದ ನೌಕರಿನೂ ಹಾಳು ಮಾಡ್ಕೊ ಬೇಡ.."

ಅಂತ ಅಮ್ಮನದು ಒಂದೇ ಮಾತು. ಮನೆಯಲ್ಲಿ ಹಠ ಹಿಡಿದು ಕುಳಿತಳೆಂದರೆ ಎರೆಡೆರಡು ದಿನ ಊಟವನ್ನೂ ಬಿಡುತ್ತಿದ್ದಳು. ನಾನು ಮಾತ್ರ ಓದುವ ಹೆಬ್ಬಯಕೆಯಿಂದ ಅಮ್ಮನಿಗೆ ತಿಳಿಯದಂತೆ ಕಾಲೇಜ್ ಸೇರಿಕೊಂಡಿದ್ದೆ. ಓದುವ ಆಸೆ ನನ್ನಲ್ಲಿ ಬಹಳಷ್ಟಿತ್ತು. ಓದುವ ಟೈಮಲ್ಲಿ ಓದಿದರೆ ಒಳ್ಳೆಯದು. ಸಂಸಾರಿಯಾದಾಗ ತಲೆಗೆ ವಿದ್ಯೆ ಹತ್ತದು ಎಂಬುದು ನನ್ನ ಕೊರಗಾಗಿತ್ತು. ಆದರೆ ಅಮ್ಮನ ಸಿದ್ಧಾಂತವೇ ಬೇರೆಯಾಗಿತ್ತು. ಆದರೂ ಅವಳ ಮಾತಿನಲ್ಲಿ ನ್ಯಾಯವಿತ್ತು. ಅಪ್ಪ ಕಳೆದ ವರ್ಷ ಲಡಾಕ್ ನ ಹಿಮದಲ್ಲಿ ಉಗ್ರರೊಂದಿಗೆ ಹೋರಾಡುವಾಗ ವೀರ ಮರಣವನ್ನಪ್ಪಿದ್ದರು. ಅಪ್ಪನ ಸಾವಿನಿಂದ  ಮನೆಯಲ್ಲಿ ದುಃಖದ ಕಟ್ಟೆ ಒಡೆಯಿತು. ಸರ್ಕಾರದವರು ನಮ್ಮ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಭರವಸೆಯಿತ್ತರು. ನನಗೆ ಓದುವ ಆಸೆ. ಆದರೆ ಅಮ್ಮನಿಗೆ ಮಾತ್ರ ಸರ್ಕಾರ ಕೊಟ್ಟ ಆ ನೌಕರಿಯನ್ನು ಸೇರಿಕೊಂಡು ಮದುವೆಯಾಗಿ ಆಮೇಲೆ ಬೇಕಾದರೆ ಓದು ಮುಂದುವರೆಸು ಎನ್ನುತ್ತಿದ್ದಳು. ಅಮ್ಮನಿಗೆ ಮಕ್ಕಳನ್ನು ದಡ ಸೇರಿಸುವ ಹೊಣೆ. ಕಾರಣ ಅಪ್ಪನ ಸಾವಿನಿಂದ ಅಮ್ಮನಿಗೂ ಸಹ ಜೀವನೋತ್ಸಾಹ ಕುಗ್ಗಿ ಹೋಗಿತ್ತು. ಮಗನಿಗೆ ನೌಕರಿ ಸಿಕ್ಕಿ ಬಿಟ್ಟರೆ ಮಗಳಿಗೂ ಒಳ್ಳೆ ಮನೆಗೆ ಸೇರಿಸಿಬಿಡೋಣ ಎಂಬುದು ಅಮ್ಮನ ಲೆಕ್ಕಾಚಾರವಾಗಿತ್ತು. ಅಮ್ಮನ ಮಾತನ್ನು ತ್ಯಜಿಸಿ ನಾನು ಯಾರಿಗೂ ಹೇಳದೆ ಕಾಲೇಜಿಗೆ ಸೇರಿದ್ದು ತಪ್ಪು ಎಂದು ಆಗಾಗ ನನ್ನ ಮನಸು ಹೇಳುತ್ತಿತ್ತು. ಇತ್ತ ಕಾಲೇಜಿಗೂ ಹೋಗಲಾರದೇ.. ಕೆಲಸಕ್ಕೂ ಸೇರಲಾಗದೇ,  ಮದುವೆಯನ್ನೂ ಒಪ್ಪದೇ ಮನಸ್ಸು ಯಾಕೋ ಅಲ್ಲೋಲ ಕಲ್ಲೋಲವಾಗಿತ್ತು....

ಇಷ್ಟೆಲ್ಲಾ ವಿಷಯಗಳು ಮನಸಿನಲ್ಲಿದುದರಿಂದ ಕಾಲೇಜಿನ ಮೊದಲ ದಿನ ಯಾಕೋ ಕಷ್ಟದ ದಿನ ಎನಿಸತೊಡಗಿತು. ಆದರೆ ಕಾಲೇಜ್ ಗೇಟಲ್ಲಿ ಆ ಸುಂದರ ಹುಡುಗಿಯನ್ನು ನೋಡಿದಾಗಿನಿಂದಲೂ ಅಮ್ಮನ ಮಾತೇ  ಸರಿಯೆನಿಸತೊಡಗಿತು.. ಆ ದಿನ ಕ್ಯಾಟ್ ಶೀನ ಮತ್ತು ನಾನು ಈ ವಿಷಯದ ಬಗ್ಗೆ ಕಾಲೇಜ್ ಕ್ಯಾಂಟಿನಲ್ಲಿ ಮಾತನಾಡುತ್ತಿದ್ದೆವು ಆಗ ಪರಿಚಿತನಾದವನೇ ಹೊಸ ಗೆಳೆಯ ಮನೋಜ. ಅಪ್ಪ ಮಿಲಿಟರಿಯಲ್ಲಿ ಮರಣ ಹೊಂದಿದ ವಿಷಯವನ್ನು ನಾನು ಮತ್ತು ಕ್ಯಾಟ್ ಮಾತನಾಡುತ್ತಿರುವಾಗ ಅಲ್ಲೇ ಪಕ್ಕದಲ್ಲಿದ್ದ ಮನೋಜ ಕೇಳಿಸಿಕೊಂಡನು. ತಾನೇ ಮುಂದೆ ಬಂದು ನನ್ನ ಮತ್ತು ಕ್ಯಾಟ್ ನ ಪರಿಚಯ ಮಾಡಿಕೊಂಡ. ಅವರಪ್ಪನೂ ಸಹ ಪ್ಯಾರ ಮಿಲಿಟರಿ ಕಮಾಂಡೋ. ದಾವಣಗೆರೆಯವರೆ. ಈಗ ಗುವಾಹತಿಯಲ್ಲಿ ಬೆಟಾಲಿಯನ್ ಒಂದರಲ್ಲಿ ಮೇಜರ್ ಆಗಿದ್ದಾರಂತೆ.  ನನ್ನಪ್ಪ ಮತ್ತು ಮನೋಜನ ಅಪ್ಪ ಜೊತೆಯಲ್ಲೇ ಹಲವು ವರ್ಷ ಸೇವೆ ಮಾಡಿದ್ದರಂತೆ. ಈ ವಿಷಯವನ್ನು ಮನೋಜನೇ ನನಗೆ ಹೇಳಿದ. ಆದರೆ ಅಪ್ಪ ಮಾತ್ರ ಯಾವತ್ತೂ ತನ್ನ ಸ್ನೇಹಿತರ ಬಗ್ಗೆ ಮನೆಯಲ್ಲಿ ಚರ್ಚಿಸುತ್ತಿರಲಿಲ್ಲ. ಕರ್ನಾಟಕದ ನಾಲ್ಕು ಜನ ಸ್ನೇಹಿತರು ನಮ್ಮ ಬೆಟಾಲಿಯನ್ ನಲ್ಲಿದ್ದಾರೆ ಎಂದಷ್ಟೇ ಹೇಳಿದ ನೆನಪು. 
ನಾನು ಮದುವೆ ಆಗಬೇಕೋ..? ಅಥವಾ ನೌಕರಿಗೆ ಸೇರಬೇಕೋ..? ಎನ್ನುವುದೇ ನನಗೆ ದೊಡ್ಡ ಸಮಸ್ಯೆಯಾಗಿ ಕಾಣಿಸಿತು. ನನ್ನ ಸಮಸ್ಯೆಗೆ ಉತ್ತರ ಹೇಳಲು ಕ್ಯಾಟ್ ಸಹ  ತಡವರಿಸಿದ. ಈ ಎಲ್ಲಾ ಸಮಸ್ಯೆಯನ್ನು ಕೇಳಿಕೊಂಡ ಮನೋಜ ಅವರಪ್ಪನ ಸಲಹೆ ಪಡೆಯಲು ಹೇಳಿದ. ಅವರಪ್ಪನನ್ನು ಪರಿಚಯ ಮಾಡಿಸುವುದಾಗಿಯೂ ಹೇಳಿದ. ಮನೋಜನ ಅಪ್ಪ ರಜೆಯ ಮೇಲೆ ಊರಿಗೆ ಬಂದಿದ್ದರು..

ಅಂದು ಕಾಫಿ ಡೇ ನಲ್ಲಿ ಮನೋಜನ ಅಪ್ಪನನ್ನು ಬೇಟಿ ಮಾಡಿದೆ ನನ್ನೆಲ್ಲಾ ಸಮಸ್ಯೆಯನ್ನು ಹೇಳಿಕೊಂಡೆ. ಅದಕ್ಕೆ ಅವರು
"ನೋಡು ಧೀಕ್ಷಿತ್ ನಿನ್ನ ಅಮ್ಮ ಹೇಳುತ್ತಿರುವುದು ಸರಿಯಾಗಿದೆ. ನೀನು ಸರ್ಕಾರ ನೀಡಿರುವ ಅನುಕಂಪದ ಆಧಾರದ ಮೇಲಿನ ನೌಕರಿಯ ಸೌಲಭ್ಯವನ್ನು ಹಿಡಿಯುವುದೇ ಒಳ್ಳೆಯದು. ಸರ್ಕಾರದ ರೂಲ್ಸುಗಳು ಯಾವಾಗ ಏನಾಗುತ್ತವೆಯೋ ಸರಿಯಾಗಿ ತಿಳಿಯದು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು. ಜೀವನದಲ್ಲಿ ಮುಂದೆ ಬಾ.. ನಿನ್ನ ಮನೆಗೆ ಆಸರೆಯಾಗುತ್ತದೆ. ನಿನ್ನ ಜೀವನಕ್ಕೂ ಸರಿಯಾದ ದಿಕ್ಕು ಸಿಕ್ಕಂತಾಗುತ್ತದೆ.  ಸರಿಯಾಗಿ ಯೋಚಿಸಿ ಮುಂದೆ ಹೆಜ್ಜೆಯಿಡು.."

ಎಂದು ಹೇಳಿದರು..

ಅವರ ಮಾತು ಸರಿಯೆನಿಸಿತು. ನೌಕರಿಗೆ ಸೇರುವ ನಿರ್ಧಾರವೂ ಮಾಡಿಕೊಂಡೆ. ಕಾಫಿ ಡೇ ಯಿಂದ ಹೊರ ಬಂದೆವು..
ಅರೆ.....!!! ಅದೇ ಹುಡುಗಿ. ಅಂದು ಕಾಲೇಜಿನ ಗೇಟಲ್ಲಿ ಕಂಡ ಸುಂದರಿ. ಮತ್ತದೇ ಅಪ್ಸರೆಯಂತಹ ಚೆಲುವನ್ನು ಧರಿಸಿ ಕಾಫಿಯನ್ನು ಹೀರುತ್ತಿದ್ದಳು. ಅವಳ ಮುಂದೆ ಮತ್ತದೇ ಯುವಕ ಜೊತೆಗಿದ್ದ. ನಾವು ಮನೋಜನ ತಂದೆಯನ್ನು ಅಲ್ಲಿಂದ ಕಳುಹಿಸಿಕೊಟ್ಟು  ನಾನು, ಕ್ಯಾಟ್ ಶೀನ ಮತ್ತು ಮನೋಜ ಆ ಹುಡುಗಿಯ ಹಿಂದೆ ಬಿದ್ದೆವು. ಅವಳು ಕಾಫಿ ಡೇ ಯಿಂದ ಆ ಯುವಕನ ಕೈ ಹಿಡಿದು ಕೊಂಡೇ ಹೊರ ಬಂದಳು. ಮೆಟ್ಟಿಲು ಇಳಿಯುವಾಗ ಸ್ವಲ್ಪ ಎಡವಿದಳು ಕೂಡಲೇ ಆ ಯುುವಕ ಆಕೆಯ ಕೈ ಹಿಡಿದು ಕೊಂಡ. ನಾವು ಅವಳನ್ನೇ ದಿಟ್ಟಿಸುತ್ತಿದ್ದೆವು. ಅವಳು ಆ ಯುವಕನ ಸಹಾಯದಿಂದಲೇ ಹೆಜ್ಜೆ ಹಾಕುತ್ತಾ ಕಾರಿನೊಳಗೆ ಕುಳಿತು ಕೊಂಡಳು...

"ಅವಳಿಗೆ ಕಣ್ಣು ಕಾಣುವುದಿಲ್ಲ..ದೇವರು ಎಂತಹ ಸುಂದರ ರೂಪವನ್ನು ಕೊಟ್ಟು  ಅವಳ ಕಣ್ಣುಗಳನ್ನು ಕಿತ್ತುಕೊಂಡು ಬಿಟ್ಟ. ಅದ್ಭುತ ಶಿಲ್ಪವನ್ನು ರಚಿಸಿದ ದೇವರಿಗೆ ಸ್ವಲ್ಪವೂ ಕರುಣೆ ಬರಲಿಲ್ಲವೆನೋ.. ಅವಳು ಇರುವುದು ನಮ್ಮ ಬೀದಿಯಲ್ಲೇ... ಹೆಸರು ಮಂಜರಿ ಅಂತ. ನಮಗೆ ದೂರದ ಸಂಬಂಧಿ. ದಿನಾ ಬೆಳಗ್ಗೆ ಇವಳು ನಮ್ಮ ಮನೆಯ ಹಿಂದಿರುವ ಪಾರ್ಕಲ್ಲಿ ತನ್ನ ಅಣ್ಣನೊಂದಿಗೆ ವಾಕಿಂಗ್ ಗೆ ಬರುತ್ತಾಳೆ.."

ಮನೋಜ ನಿಧಾನವಾಗಿ ಕೇಳುವಂತೆ ನನ್ನ ಕಿವಿಯಲ್ಲಿ ಪಿಸುಗುಟ್ಟಿದ..

ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು. ನನಗೇ ಗೊತ್ತಿಲ್ಲದಂತೆ ನನ್ನಲ್ಲಿ ಮದುವೆಯ ಆಸೆಯನ್ನು ಚಿಗುರಿಸಿದ್ದ ಆ ಹುಡುಗಿಯ ದೃಷ್ಠಿ ಹೀನಳೇ... ? ಅವಳಿಗೆ ನಿಜಕ್ಕೂ ಕಣ್ಣು ಕಾಣಿಸುವುದಿಲ್ಲವೇ..? ಅಥವಾ ಮನೋಜನೇ ತಪ್ಪಾಗಿ ಗ್ರಹಿಸಿದನೇ...? ತಮಾಷೆಗೆ ಹಾಗೆ ಹೇಳುತ್ತಿರುವನೇ...? ನನಗೆ ಯಾವುದನ್ನೂ ನಂಬಲಾಗಲಿಲ್ಲ. ಒಂದು ವೇಳೆ ಅವಳಿಗೆ ನಿಜಕ್ಕೂ ಕಣ್ಣು ಕಾಣದಿದ್ದರೆ ಅವಳನ್ನು ತಿರಸ್ಕರಿಸಬೇಕೋ.. ಅಥವಾ ಮೊದಲಿನಂತೆ ಪ್ರೀತಿಯ ಭಾವನೆ ತೋರ ಬೇಕೋ..? ಛೆ..!! ನಮ್ಮ ಮನಸ್ಸು ಎಷ್ಟು ಸ್ವಾರ್ಥ, ಎಷ್ಟು ಕ್ರೂರಿಯಲ್ಲವೇ..?  ಎಲ್ಲವನ್ನೂ ನಮ್ಮ ನಮ್ಮ ಹಿತಕ್ಕೆ ಅನುಕೂಲಕ್ಕೆ ಬಯಸಿಕೊಳ್ಳುತ್ತದೆ... ಹುಡುಗಿ ಸುಂದರಿಯಾಗಿದ್ದಾಳೆಂದು ಬಯಸಿದ ನಾನು ಈಗ ದೂರ ಸರಿಯಬೇಕೆ..? ನನ್ನ ಮನದ ನಿರ್ಧಾರವನ್ನು ಸಡಿಲಿಸಿ ಮದುವೆಯ ಆಸೆಯನ್ನು ಚಿಗುರಿಸಿದ ಅಪ್ಸರೆಯೇ ಹೀಗಾಗಿ ಬಿಟ್ಟಳೆ....?  ಮದುವೆಯಾದರೆ ಇವಳನ್ನೇ ಮದುವೆಯಾಗಬೇಕು ಎಂದು ಮನಸ್ಸು ಆಗ  ನಿರ್ಧರಿಸಿಯಾಗಿತ್ತು...  ಆದರೆ ಈಗ...?  ಅಯ್ಯೋ... ಏನು ಮಾಡುವುದು..?  ಮನಸು ಯಾಕೋ ಗೊಂದಲದಲ್ಲಿ ಮುಳುಗಿತು. ಐದು ನಿಮಿಷ ತಾಳ್ಮೆಯಿಂದ ಯೋಚಿಸಿದೆ...

"ಮದುವೆಯಾದರೆ ಇವಳನ್ನೇ"

ನಾನು ಮನೋಜನಿಗೆ ಹೇಳಿದೆ.

"ಏನೋ ಆಗಿದೆ ನಿನಗೆ... !! ಮೊನ್ನೆ ಶಿವಮೊಗ್ಗದ ಹುಡುಗಿಯನ್ನು ನೋಡಿಕೊಂಡು ಬಂದಿದ್ದೇನೆಂದೆ. ಈಗ ನೋಡಿದರೆ ಕಣ್ಣುಕಾಣದ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳ್ತಿಯಲ್ಲೋ. ನಿನ್ನ ಅಮ್ಮ ಇದಕ್ಕೆ ಒಪ್ತಾಳೆನೋ...?"

ಮನೋಜ ಅನುಮಾನದಿಂದ ಕೇಳಿದ.

"ಅಮ್ಮನನ್ನು ಒಪ್ಪಿಸುವ ಜವಬ್ದಾರಿ ನನ್ನದು.. ಹುಡುಗಿ ಒಪ್ಪಿಕೊಂಡರೆ ಸಾಕು"

ನಾನು ದೃಢ ನಿರ್ಧಾರದಿಂದಲೇ ಹೇಳಿದೆ.

"ಹಾಗದರೆ ಹುಡುಗಿಯ  ಕಡೆಯವರನ್ನು ಒಪ್ಪಿಸುವ ಜವಬ್ದಾರಿ ನನ್ನದು.. ಅಷ್ಟಕ್ಕೂ ಹುಡುಗಿಯ ಕಡೆಯವರು ನನ್ನ ಕುಟುಂಬಕ್ಕೆ ಚನ್ನಾಗಿ ಗೊತ್ತು. ದೂರದ ಸಂಬಂಧಿಕರು. ಒಮ್ಮೆ ಹೋಗಿ ಮಾತಾನಾಡೋಣ"

ಎಂದು ಹೇಳಿ ಮನೋಜ ನನ್ನ ಸಹಾಯಕ್ಕೆ ನಿಂತ..

"ನಿನ್ನ ಅಮ್ಮನನ್ನು ಒಪ್ಪಿಸುವ ಹೊಣೆ ನನ್ನದು... ನಾನು ಮಾತನಾಡುತ್ತೇನೆ ನೀನೇನೂ ಚಿಂತಿಸ ಬೇಡ..

ಕ್ಯಾಟ್ ಶೀನನೂ ಅಮ್ಮನಿಗೆ ಒಪ್ಪಿಸುವ ಜವಬ್ದಾರಿ ಹೊತ್ತ.

ಮಾರನೆಯ ದಿನ ನಾನು ಕ್ಯಾಟು ಮತ್ತು ಮನೋಜ ದುರ್ಗಮ್ಮನ ಗುಡಿಗೆ ಹೋಗಿ ಅರ್ಚನೆ ಪೂಜೆಯನ್ನೆಲ್ಲಾ ಮಾಡಿಸಿದೆವು. ಅಮ್ಮನಿಗೆ ಕೊಟ್ಟ ಹತ್ತು ದಿನದ ಗಡುವೂ ಸಹ ಮುಗಿದಿತ್ತು. ಇವತ್ತು ಶಿವಮೊಗ್ಗದ ಹುಡುಗಿಯ ಬಗ್ಗೆ ನಾನು ನನ್ನ ಅಭಿಪ್ರಾಯವನ್ನು ಅಮ್ಮನಿಗೆ ತಿಳಿಸಲೇ ಬೇಕಿತ್ತು. ಅದಕ್ಕಿಂತ ಮೊದಲು ನಾನು ಮಂಜರಿ ಮತ್ತು ಆ ಕುಟುಂಬದ ಒಪ್ಪಿಗೆ ಪಡೆಯಬೇಕಿತ್ತು. ಮಂಜರಿ ಒಪ್ಪಿಕೊಂಡರೆ ಶಿವಮೊಗ್ಗದ ಹುಡುಗಿಯನ್ನು ತಿರಸ್ಕರಿಸುವ ಯೋಜನೆ ಹಾಕಿಕೊಂಡಿದ್ದೆ. ನಾನು ಮತ್ತು ಮನೋಜ ಮಂಜರಿಯನ್ನು ಒಪ್ಪಿಸಲು ಅವರ ಮನೆಗೆ ಹೋದೆವು. ಕ್ಯಾಟ್ ಶೀನ ಅಮ್ಮನನ್ನು ಒಪ್ಪಿಸಲು ನಮ್ಮ ಮನೆಗೆ ಹೋದ..
ಮಂಜರಿಯ ಮನೆಯವರು ಒಪ್ಪೇ ಒಪ್ಪುತ್ತಾರೆ. ಹುಡುಗಿಗೆ ಹೇಗಿದ್ದರೂ ಕಣ್ಣು ಕಾಣುವುದಿಲ್ಲ. ನನ್ನಂತಹ ಓದಿದ ಯುವಕನನ್ನು ತಿರಸ್ಕರಿಸಲಾರರು. ಅದಲ್ಲದೆ ನನಗೆ  ತಂದೆಯ ಸಾವಿನಿಂದ ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ  ನೌಕರಿಯೂ ಸಿಕ್ಕಿತ್ತು.  ತಂದೆ ವೀರ ಮರಣ ಹೊಂದಿದಾಗ ಕೇಂದ್ರ ಸರ್ಕಾರ ಮತ್ತು ಮಿಲಿಟರಿಯಿಂದ ಐವತ್ತು ಲಕ್ಷ ಹಣವೂ ಸಿಕ್ಕಿತ್ತು. ಇಷ್ಟೆಲ್ಲಾ ಆರ್ಥಿಕ ಸ್ಥಿತಿ ಸುಭದ್ರವಾಗಿರಬೇಕಾದರೆ. ನಾವು ಮಂಜರಿಯ ತಂದೆ ತಾಯಿಯನ್ನು ಒಪ್ಪಿಸುವುದು ದೊಡ್ಡ ವಿಷಯವಾಗಿರಲಿಲ್ಲ. ಆದರೆ ನನಗೆ ನನ್ನ ತಾಯಿಯದೇ ಚಿಂತೆಯಾಗಿತ್ತು. ಯಾವ ತಾಯಿ ತಾನೆ ಮಗನಿಗೆ ಕಣ್ಣು ಕಾಣದ ಹೆಣ್ಣನ್ನು ತಂದು ಕೊಳ್ಳುತ್ತಾಳೆ.. ನನ್ನ ತಾಯಿಯನ್ನು ಒಪ್ಪಿಸಲು ಹೊರಟ ಕ್ಯಾಟು ಅದ್ಹೇಗೆ ಮಾತನಾಡುತ್ತಾನೋ ಎಂಬ ಚಿಂತೆ ನನ್ನಲ್ಲಿತ್ತು..
ಮಂಜರಿಯ ಮನೆಗೆ ಹೋದಾಗ ಅದ್ಭುತ ಸ್ವಾಗತವೇ ಸಿಕ್ಕಿತು. ಮನೋಜ ಮೊದಲೇ ಹುಡುಗಿಯ ಕುಟಂಬಕ್ಕೆ ತಿಳಿಸಿದ್ದರಿಂದ ಅನುಕೂಲವೇ ಆಯಿತು. ನನ್ನ ಪರವಾಗಿ ಮಾತನಾಡಲು ಮನೋಜನ ತಂದೆಯೂ ಬಂದಿದ್ದರು. ರೂಢಿಯಂತೆ ಟೀ ಕಾಫಿಯ ಜೊತೆಗೆ ಲಘು ಉಪಹಾರವೂ ಆಯಿತು....
ಮಂಜರಿಯ ತಂದೆ ಮಾತು ಮುಂದುವರೆಸಿದರು

"ನೋಡಿ..ನೀವು ನನ್ನ ಮಗಳು ಮಂಜರಿಯನ್ನು ಒಪ್ಪಿ ಮದುವೆಯಾಗಲು ಮುಂದೆ ಬಂದಿದ್ದೀರಿ ಒಳ್ಳೆಯದೇ. ಅದು ನಿಮ್ಮ ಒಳ್ಳೆಯತನವನ್ನು ತೋರಿಸುತ್ತದೆ. ಕಣ್ಣು ಕಾಣದಿರುವ ಹೆಣ್ಣನ್ನು ಮದುವೆಯಾಗುವುದು ಒಂದು ಆದರ್ಶವೇ ಸರಿ. ನಾವು ಬಡವರು. ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ಆದರೆ ಮಕ್ಕಳನ್ನು ಸಾಕದಿರುವಷ್ಟು ಬಡತನ ನಮ್ಮಲ್ಲಿಲ್ಲ. ಮಂಜರಿ ಸುಂದರವಾಗಿದ್ದಾಳೆ ನಿಜ.  ಈ ಹಿಂದೆ ಕೆಲವರು ಮಂಜರಿ ಸುಂದರವಾಗಿದ್ದಾಳೆ ಅನ್ನೋ ಕಾರಣಕ್ಕೆ  ಮದುವೆಯಾಗುತ್ತೇನೆಂದು ಮುಂದೆ ಬಂದಿದ್ದರು. ಒಂದೆರಡು ಸಂಬಂಧಗಳೂ ಕುದುರಿದ್ದವು. ನಿಶ್ಚಿತಾರ್ಥದವರೆಗೂ ಬಂದು ನಿಂತಿದ್ದವು. ಹುಡುಗ ಒಪ್ಪಿದ್ದರೂ ಸಂಬಂದಿಕರ ಕುಹಕ ಬುದ್ಧಿಯಿಂದ ಮದುವೆ ಸಂಬಂಘಗಳು ಮರಿದು ಬಿದ್ದವು. ಅದಕ್ಕಾಗಿ ನಾನು ದೇವರಿಗೆ ಎಷ್ಟೋ ಧನ್ಯವಾದಗಳನ್ನು ಸಲ್ಲಿಸಿದ್ದೇನೆ. ಸಧ್ಯ ಮದುವೆಯ ಮೊದಲೇ ಇಷ್ಟೆಲ್ಲಾ ಆದದ್ದು ಒಳ್ಳೆಯದೇ ಆಯಿತು.. ಮದುವೆಯ ನಂತರ ಹೀಗಾಗಿದ್ದರೆ ನನ್ನ ಮಗಳು ಜೀವನ ಪೂರ್ತಿ ಕಣ್ಣೀರಿನಿಂದ ಕೈ ತೊಳೆಯಬೇಕಿತ್ತು. ಈ ಜನ, ಈ ಸಮಾಜ ಕೇವಲ ಮಾತಿನಲ್ಲಿ ಆದರ್ಶ ಮೆರೆಯುತ್ತಾರೆ, ಸಂಬಂದಿಕರು ಏನೋ ಹೇಳಿದರು ಎಂಬ ಕಾರಣಕ್ಕೆ ಮದುವೆಯ ಸಂಬಂಧಗಳನ್ನು ಮುರಿದು ಹಾಕಿದರು. ಅವರು ಯಾವತ್ತೂ ಹುಡುಗಿಯ ಮನಸ್ಸಿನ ಮೇಲೆ ಇದು ಎಷ್ಟ ಪರಿಣಾಮ ಬೀರುತ್ತದೆ ಎಂದು ಯೋಚಿಸಲೇ ಇಲ್ಲ. ಎರೆಡೆರಡು ಮಗುವೆಯ ಸಂಬಂಧ ಮುರಿದು ಹೋಗಿದ್ದರಿಂದ ಮಂಜರಿಯ ಮನಸ್ಸು ಜರ್ಜರಿತವಾಗಿದೆ. ಮದುವೆಯೇ ಬೇಡ ಎನ್ನುತ್ತಿದ್ದ ನನ್ನ ಮಗಳಿಗೆ ಕೆಲವರು ಬಂದು ಮದುವೆಯ ಆಸೆ ತೋರಿಸಿದರು. ನಿನಗೂ ಜೀವನವಿದೆ ಎಂಬ ಆದರ್ಶದ ಮಾತುಗಳನ್ನಾಡಿದರು. ಅವಳ ಸೌಂದರ್ಯವನ್ನು ಶ್ಲಾಘಿಸಿದರು. ಆದರೆ ಮಾಡಿದ್ದೇನು.. ಅವಳ ಮನಸಿನಲ್ಲಿ ನೋವು ತುಂಬಿ ದೂರ ಸರಿದರು. ಅಂದಿನಿಂಗ ನಾನು ಮಂಜರಿಗೆ ಮದುವೆ ಮಾಡಿಸುವುದು ಬೇಡವೆಂದು ನಿರ್ಧರಿಸಿದ್ದೇನೆ. ಮಂಜರಿಯೂ ಸಹ ಈ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದು ಕೊಂಡಿದ್ದಾಳೆ. ಹೆತ್ತವರಿಗೆ ಮಕ್ಕಳು ಎಂದಿಗೂ ಭಾರವೆನಿಸುವುದಿಲ್ಲ. ಹೇಗೋ ಅವಳ ಜೀವನ ದೇವರಿಟ್ಟಂತೆಯೇ ನಡೆಯಲಿ. ದಯವಿಟ್ಟು ಬೇಜಾರಾಗಬೇಡಿ ಮಂಜರಿಯ ಭವಿಷ್ಯದ ಹಿತ ದೃಷ್ಠಿಯಿಂದ ಈ ನಿರ್ಧಾರ ಮಾಡಲಾಗಿದೆ. ನೀವು ನನ್ನ ಮಗಳನ್ನು ಮೆಚ್ಚಿ ಬಂದಿದ್ದಕ್ಕೆ ಧನ್ಯವಾದಗಳು"

ಅಷ್ಟು ಹೇಳಿ ಮಂಜರಿಯ ತಂದೆ ನಮ್ಮ ಕಡೆ ಕೈ ಜೋಡಿಸಿ ಪ್ರಾರ್ಥಿಸಿದರು.

ನನಗೆ ಏನು ಮಾತನಾಡಬೇಕೋ ತೋಚದಂತಾಯಿತು. ಮನೋಜನ ತಂದೆಗೆ ಮಾತು ಹೊರಡದಾಯಿತು. ಅವರೂ ಸಹ ಮೌನ ವಹಿಸಿದರು...

ಮೌನದ ನಡುವೆಯೇ ನನ್ನ ಮೊಬೈಲ್ ನ ಸದ್ದಾಯಿತು. ಕ್ಯಾಟ್ ನದ್ದು ಫೋನು.

"ಲೋ .. ಧೀಕ್ಷಿತ್, ಅಮ್ಮ ನಿನ್ನ ಮದುವೆಗೆ ಒಪ್ಪಿಕೊಂಡಿದ್ದಾಳೆ  ನಾನು ನಿಮ್ಮಮ್ಮಳನ್ನು ಒಪ್ಪಿಸಲು ಶತಾಯು ಗತಾಯು ಪ್ರಯತ್ನ ಮಾಡಿದ್ದಾಯಿತು. ಕೊನೆಗೆ ನಿನ್ನ ಮತ್ತು ಮಂಜರಿಯ ಮದುವೆಗೆ ಸಂಪೂರ್ಣ ಒಪ್ಪಿಗೆ ನೀಡಿಯಾಗಿದೆ. ನೀನು ಮಂಜರಿಯ ಮನೆಯಲ್ಲೇ ಇರು, ಅಮ್ಮಳನ್ನು ಕರೆದುಕೊಂಡು ಬರುತ್ತೇನೆ"

ಶೀನ ಉದ್ವೇಗದಿಂದಲೂ... ಅಮ್ಮ ಮಂಜರಿಯನ್ನು  ಒಪ್ಪಿದ ಸಂತೋಷದಿಂದಲೂ ಮಾತನ್ನು ಅವಸರದಲ್ಲೇ ಹೇಳಿ ಮುಗಿಸಿದ...

ನನಗೆ ಅಮ್ಮ ಮದುವೆಗೆ ಒಪ್ಪಿದ ಸಂತೋಷ ಒಂದು ಕಡೆಯಾದರೆ. ಮಂಜರಿಯ ಕುಟಂಬ ವಿವಾಹವೇ ಬೇಡ ಎಂದು ತೀರ್ಮಾನಿಸಿದ ದುಃಖ ಇನ್ನೊಂದು ಕಡೆ ನೆಲೆಸಿತು. ನಾನು ಮಂಜರಿಯ ತಂದೆಗೆ ಕೈ ಮುಗಿದು ಬೇಡಿಕೊಂಡೆ

"ದಯವಿಟ್ಟು ಮದುವೆಯನ್ನು ಬೇಡ ಎನ್ನಬೇಡಿ. ನಿಮ್ಮ ಮಗಳನ್ನು ಸುಖ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತೇನೆ. ನನ್ನ ಅಮ್ಮ ಸಹ ಒಪ್ಪಿಕೊಂಡಿದ್ದಾಗಿದೆ. ಸಂಬಂಧಿಕರ ಮಾತು ನಾನು ಕೇಳುವುದಿಲ್ಲ... ಪ್ಲೀಸ್.."
ಕಾಲಿಗೆ ಬಿದ್ದು ಬೇಡಿಕೊಂಡೆ, ಅಳುವುದೊಂದು ಬಾಕಿ ಇತ್ತು.

ಮಂಜರಿಯ ತಂದೆ ಮತ್ತೆ ಮಾತು ಮುಂದುವರೆಸಿದರು.

"ನೋಡಿ, ಸೌಂದರ್ಯವೆನ್ನುವುದು ಕ್ಷಣಿಕ. ಮದುವೆಯಾದ ಹೊಸದರಲ್ಲಿ ಎಲ್ಲರೂ ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಯಾವಾಗ ಮನುಷ್ಯನಲ್ಲಿ ಸೌಂದರ್ಯವನ್ನು ಆಸ್ವಾದಿಸುವ ಗುಣ, ರಸಿಕತನ ಕಡಿಮೆಯಾಗುತ್ತಾ ಬರುತ್ತದೆಯೋ ಆಗ ಮನುಷ್ಯನ ಗುಣಾದರ್ಶಗಳು ಬದಲಾಗುತ್ತಾ ಹೋಗುತ್ತವೆ. ಕಣ್ಣಿರದ ಕುರುಡಿಯನ್ನು ಮದುವೆಯಾಗಿದ್ದು ತಪ್ಪು ಎಂಬ ಭಾವನೆಗಳು ಬರಲಾರಂಭಿಸುತ್ತವೆ. ಎಲ್ಲಾ ಆದರ್ಶಗಳು ಮಾಯವಾಗಿ ಬಿಡುತ್ತವೆ. ಅಂತಹ ಸ್ಥಿತಿಯಲ್ಲಿ ಯಾಕಾದರೂ ಈ ಕುರುಡಿಯೊಡನೆ ಜೀವನ ಪೂರ್ತಿ ಸಂಸಾರ ಮಾಡುತ್ತಿದ್ದೇನೋ ಎಂಬ ಹತಾಶೆಯ ಭಾವ ಮೂಡಬಹುದು. ಎಲ್ಲಾ ಸರಿಯಿದ್ದು, ಹೆಂಡತಿ ಸುಂದರವಾಗಿದ್ದರೂ ಸಹ ಮತ್ತೊಂದು ಛಾನ್ಸ್ ನೋಡುವ ಗಂಡಸರು ಈ ಸಮಾಜದಲ್ಲಿ ಕಡಿಮೆಯಿದ್ದಾರೆಯೇ.. ಇಷ್ಟೆಲ್ಲಾ ಸಹಜ ಸಾಮಾನ್ಯ ಗುಣವಿರುವ ಗಂಡಸರನ್ನು ನಾನು ಹೇಗೆ ನಂಬಲಿ. ಮದುವೆಗೆ ಮುನ್ನವೇ ಎರಡು ಸಂಬಂದಗಳು ಮುರಿದು ಬಿದ್ದ ಉದಾಹರಣೆ ಕಣ್ಣ ಮುಂದಿರುವಾಗ. ಮದುವೆ ನಂತರ ಏನಾಗುತ್ತೆ ನೋಡಿಯೇ ಬಿಡೋಣ ಎಂದುಕೊಂಡು, ನನ್ನ ಮುದ್ದಿನ ಮಗಳು ಮಂಜರಿಯನ್ನು ಯಾವುದೇ ಪ್ರಯೋಗಕ್ಕೆ ಒಡ್ಡಲು ನನ್ನ ಮನಸ್ಸು ಬಯಸುತ್ತಿಲ್ಲ.. ಮದುವೆಯೆಂಬ ಕನಸನ್ನು ಹೊತ್ತ ಒಂದು ಹೆಣ್ಣಿಗೆ ಮದುವೆಯ ಸಂಬಂದಗಳು ಮುರಿದು ಬಿದ್ದಾಗಲೇ ಅದರ ನೋವು ಏನೆಂದು ಅರಿವಾಗೋದು. ಈ ನೋವನ್ನು ಅನುಭವಿಸಿದ ಮಂಜರಿ ಎರಡು ತಿಂಗಳು ಹಾಸಿಗೆ ಹಿಡಿದದ್ದೂ ಆಗಿದೆ. ಈಗ ಆ ನೋವಿನಿಂದ ಹೊರ ಬಂದಿದ್ದಾಳೆ. ದಿನವೂ ನನ್ನ ಮಗ ತನ್ನ ತಂಗಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದಾನೆ. ಕಾಫಿ ಡೇ ಗೋ... ಸಂಜೆ ಸುತ್ತಾಡಲೋ ಕರೆದುಕೊಂಡು ಹೋಗಿ, ಮಂಜರಿಯನ್ನು ಮತ್ತೆ ಸಹಜ ಸ್ಥಿತಿಗೆ ತಂದಿದ್ದಾನೆ.... ಪ್ಲೀಸ್ ಮತ್ತೆ ಅವಳ ಬಾಳಲ್ಲಿ ಮತ್ತೆ ಮದುವೆಯ ನೆರಳು ಸುಳಿಯಕೂಡದು. ಯಾವಾಗ ಮಂಜರಿಯೇ ಮದುವೆಯಾಗುತ್ತೇನೆ ಎಂದು ಮುಂದೆ ಬರುತ್ತಾಳೆಯೋ ಅಲ್ಲಿಯ ವರೆಗೂ ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ಮಗಳನ್ನು ಸಾಕುವಷ್ಟು ಶಕ್ತಿ ನನ್ನ ತಂದೆಗಿಲ್ಲ ಅದಕ್ಕೆಯೇ ಮದುವೆಯೆಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂಬ ಭಾವನೆ ಅವಳಿಗೂ ಬರುವುದು ಬೇಡ.... ಪ್ಲೀಸ್ ನನ್ನ ಮಾತು ನಿಮಗೆ ಅರ್ಥವಾಗಿದೆ ಅಂತ ಭಾವಿಸುತ್ತೇನೆ"

ಮಂಜರಿಯ ತಂದೆ ಮತ್ತೆ ಕೈ ಮುಗಿದು ಬೇಡಿಕೊಂಡರು..
ನನ್ನ ಕಣ್ಣುಗಳು ದುಃಖದಿಂದ ಹನಿಗೂಡಿದವು. ಕಣ್ಣಿನ ಹನಿ ನೆಲಕ್ಕೆ ಬೀಳವುದೊಂದೆ ಬಾಕಿಯಿತ್ತು. ನಿರಾಸೆಯಿಂದ ಮಂಜರಿಯ ಮನೆಯಿಂದ ಹೊರ ಬಂದೆವು. ನನ್ನ ದುಃಖ ನೋಡಿದ ಮನೋಜ

"ನಿನ್ನ ಮತ್ತು ಮಂಜರಿಯ ವಿವಾಹ ಮಾಡಿಸುವ ಜವಬ್ದಾರಿ ನನ್ನದು. ಪ್ಲೀಸ್ ಒಂದು ತಿಂಗಳು ಸಮಯ ಕೊಡು"
ಮನೋಜ ನನಗೆ ಧೈರ್ಯ ತುಂಬಲು ಪ್ರಯತ್ನಿಸಿದ...
ಇನ್ನೂ ಬೈಕನ್ನೂ ಹತ್ತಿರಲಿಲ್ಲ ಮತ್ತೆ ಕ್ಯಾಟ್ ನಿಂದ ಫೋನ್ ಬಂತು..
ದುಃಖದಿಂದಲೇ 'ಹಲೋ' ಎಂದೆ

"ನಾನು ಹೈ ಸ್ಕೂಲ್ ಗ್ರೌಂಡ್ ಪೋಲೀಸ್ ಸ್ಟೇಷನ್ನಿನಿಂದ ಎಸ್,ಪಿ, ಅಯ್ಯರ್ ಮಾತಾಡ್ತಾ ಇದ್ದೀನಿ, ನಿನ್ನ ಗೆಳೆಯ ಮತ್ತು ನಿಮ್ಮ ಅಮ್ಮನಿಗೆ ಪಿ,ಬಿ,ರೋಡಲ್ಲಿ ಆಕ್ಸಿಡೆಂಟಾಗಿದೆ. ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ.. ಅಲ್ಲಿಗೆ ಬಂದು ಬಿಡಿ"

ಕ್ಷಣಕಾಲ ಸ್ಥಬ್ದನಾಗಿ ಹೊದೆ.  ಕಣ್ಣಂಚಲ್ಲೇ ಇದ್ದ ಕಣ್ಣೀರು ಈಗ ದುಃಖದ ಒತ್ತಡಕ್ಕೆ ಕಟ್ಟೆಯೊಡೆದು ಸುರಿಯಲಾರಂಭಿಸಿತು. ಅಲ್ಲೇ ನೆಲ ಹಿಡಿದು ಬಿದ್ದೆ. ಆಮೇಲೇನಾಯಿತೋ ತಿಳಿಯಲಿಲ್ಲ...

ನನಗೆ ಪ್ರಜ್ಞೆ ಬಂದಾಗ ಎರಡು ದಿನ ಆಗಿ ಹೋಗಿತ್ತು. ನಾನು  ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೆ. ನನ್ನ ಪಕ್ಕದಲ್ಲಿ ಅಮ್ಮ ನಿಂತಿದ್ದಳು ತಲೆಗೊಂದು ಬ್ಯಾಂಡೇಜ್. ಕೈಗೆ ಪ್ಲಾಸ್ಟ ಆಫ್ ಪ್ಯಾರಿಸ್ ನ ಕವಚ.  ಅಲ್ಲಲ್ಲಿ ಗಾಯಕ್ಕೆ ತೇಪೆ ಹಚ್ಚಿದ್ದು ಕಾಣಿಸಿತು. ಗಾಯಕ್ಕೆ ಅಮ್ಮನ ಮುಖ ಊದಿಕೊಂಡಿತ್ತು. ಅಮ್ಮಾ ಅಳುತ್ತಾ ನನ್ನ ಅಪ್ಪಿಕೊಂಡಳು.

"ನಿನ್ನ ಗೆಳೆಯ ಶೀನನನ್ನು ಉಳಿಕೊಳ್ಳಲು ವೈಧ್ಯರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ"

ಎಂದು ಹೇಳುತ್ತಲೇ ಗದ್ಗಧಿತಳಾಗಿ ಅಳು ಶುರುವಿಟ್ಟುಕೊಂಡಳು. ಆಗಲೇ ಶೀನನ ಅಂತ್ಯ ಸಂಸ್ಕಾರವೂ ಮುಗಿದು ಹೋಗಿತ್ತು. ಮನೋಜ ತನ್ನ ತಂದೆಯ ಜೊತೆ ಅಸ್ಸಾಂ ಸೇರಿಕೊಂಡ ವಿಷಯವೂ ತಿಳಿಯಿತು. ನೋವಲ್ಲಿ ಅಂದು ಹಾಕಿದ ಕಣ್ಣೀರೆಷ್ಟೋ ನನಗೇ ನೆನಪಿಲ್ಲ.

ಅಂದು ಅಸ್ಸಾಂಗೆ ಹೋಗಿದ್ದ ಮನೋಜ ಇಂದು ವಾಪಸ್ಸು ಬಂದಿದ್ದ. ಇಷ್ಟೆಲ್ಲಾ ಘಟನೆಗಳು ದೃಶ್ಯದಂತೆ ಕಣ್ಣ ಮಂದೆಯೇ ಬಂದು ಹೋದಂತಾಯಿತು. ಮನೋಜನನ್ನು ನೋಡುವ ಆತುರದಿಂದ ಕಾರನ್ನೇರಿ ಕುಳಿತುಕೊಂಡೆ. ಹೆಂಡತಿಯೂ ಲಘು ಬಗೆಯಿಂದಲೇ ಬಂದು ಕಾರಿನಲ್ಲಿ ಕುಳಿತಳು. ಮುದ್ದಿನ ಮಗಳು ಸಾನ್ವಿ ನನ್ನ ಜೊತೆಯಲ್ಲೇ ಕುಳಿತಳು. ನನ್ನ ಕಾರು ಕೆಟಿಜೆ ನಹರಗಲ್ಲಿರುವ ಮನೋಜನ ಮನೆಯ ಮುಂದೆ ನಿಂತಿತು. ಎಲ್ಲರೂ ಮನೆಯೊಳಗೆ ಹೋದೆವು. ಮನೋಜನ ಜೊತೆ ನನ್ನ ಕಾಲೇಜಿನ ಗೆಳೆಯರೂ ಇದ್ದರೂ. ಮನೋಜ ಸ್ವಲ್ಪ ದಪ್ಪನಾಗಿದ್ದ. ನನ್ನ ನೋಡುತ್ತಲೇ ಬಂದು ಅಪ್ಪಿಕೊಂಡನು. ನನ್ನ ಪಕ್ಕದಲ್ಲಿ ನಿಂತಿದ್ದ ನನ್ನ ಹೆಂಡತಿಯನ್ನು ದಿಟ್ಟಿಸಿ ನೋಡಿದ.

"ಅರೆ...!!! ಮಂಜರಿ...ನೀವು"

ಆಶ್ಚರ್ಯದಿಂದಲೇ ನೋಡಿದ.
"ದೀಕ್ಷಿತ್ ನೀನು ನಿಜವಾಗಿಯೂ.. ಮಂಜರಿಯನ್ನೇ ಮದುವೆಯಾದೆಯಾ...?"

ಎಂದು ಹೇಳುತ್ತಲೇ ಮಂಜರಿಯನ್ನೇ ಮತ್ತೆ ಮತ್ತೆ  ನೋಡಿದ.  ಮಂಜರಿಯ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ. ಯಾವಾಗ ಮಂಜರಿಯ ಕಣ್ಣನ್ನೇ ಮತ್ತೆ ಮತ್ತೆ  ನೋಡಲಾರಂಭಿಸಿದನೋ... ಮನೋಜನಿಗೆ ತನಗರಿವಿಲ್ಲದಂತೆ ಕಣ್ಣಿಗಳಲ್ಲಿ ನೀರು ತುಂಬಿಕೊಂಡವು..
ದುಃಖದಿಂದಲೇ

"ಏನಾಯ್ತೋ ದೀಕ್ಷಿತ್... ಆ ದಿನ ನಾನು ನಮ್ಮ ಕುಟುಂಬದೊಡನೆ ನಮ್ಮ ಮನೆಯನ್ನು ಅಸ್ಸಾಂಗೆ ಶಿಫ್ಟ್ ಮಾಡಿಕೊಂಡೆವು. ಅಪ್ಪ ಅದಕ್ಕಂತಲೇ ಅಂದು ಊರಿಗೆ ಬಂದಿದ್ದು. ನನಗೆ ಏರ್ ಫೋರ್ಸ ನಲ್ಲಿ ತಾಂತ್ರಿಕ ತರಬೇತಿಗಾಗಿ ಸೀಟು ಸಿಕ್ಕಿತ್ತು. ನಿನಗೆ ಹೇಳಿಯೇ ಹೋಗೋಣವೆಂದು ಆಸ್ಪತ್ರೆಯಲ್ಲಿ ಒಂದು ದಿನ ಕಾದಿದ್ದಾಯಿತು. ನಿನಗೆ ಎಚ್ಚರವಾಗಲೇ ಇಲ್ಲ. ಹಿಂದಿನ ದಿನ ಶೀನನ ಸಂಸ್ಕಾರ ಮುಗಿಸಿದ್ದೆ. ನನ್ನ ಕ್ಷಮಿಸಿ ಬಿಡು. ಆದರೆ ನೀನು ಮಂಜರಿಯನ್ನು ವಿವಾಹವಾಗಿದ್ದು ಆಕೆಗೆ ಕಣ್ಣು ಬಂದಿದ್ದು ವಿಷಯ ನನಗೆ ಗೊತ್ತಾಗಲೇ ಇಲ್ಲ.."
ಮನೋಜನ ಮಾತಿನಲ್ಲಿ ಪಶ್ಚಾತ್ತಪವಿತ್ತು..

"ಆ ದಿನ ನಾನು ದುಃಖದಿಂದ ಒಂಟಿಯಾಗಿ ಅಳುತ್ತಿದೆ. ಶೀನನ ಸಾವು ಮತ್ತೆ ಎರಡು ದಿನ ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿತು. ನಾಲ್ಕನೆಯ ದಿನ ನಾನು ಸಂಪೂರ್ಣ ಗುಣ ಮುಖವಾದಾಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆಯಲ್ಲಿ ವೈದ್ಯರು ಮಾತನಾಡಿಸಿದರು. ಶೀನ ಸಾಯುವಾಗ ತನ್ನ ಕಣ್ಣುಗಳನ್ನು ಮಂಜರಿಗೆ ಕೊಡುವುದಾಗಿ ಹೇಳಿದ್ದನಂತೆ. ತಕ್ಷಣ ಮಂಜರಿಯನ್ನು ನೇತ್ರಾಲಯಕ್ಕೆ ಸಾಗಿಸಿ ಶೀನನ ಕಣ್ಣುಗಳನ್ನು ಹಾಕಲಾಯಿತು. ನೇತ್ರದಾನ ಮಾಡಿ ಸಾವಿನಲ್ಲೂ ಆದರ್ಶ ಮೆರೆದ. ಶೀನನ ಕಣ್ಣು ಮಂಜರಿಗೆ ತನ್ನ ಜೀವನವನ್ನೇ ವಾಪಸು ತಂದು ಕೊಟ್ಟಿತು. ಶೀನನ ಆದರ್ಶ ಮತ್ತೆ ನನ್ನಲ್ಲಿ ಜೀವನೋತ್ಸಾಹ ತುಂಬಿತು. ನೇತ್ರದಾನ ಮಹಾದಾನವೆಂಬುದು ಬರಿಯ ನುಡಿಯಲ್ಲಾ ವೇದವಾಕ್ಯ. ಈಗಲೂ ನಾನು ಮಂಜರಿಗಿಂತ ಮಂಜರಿಯ ಕಣ್ಣುಗಳನ್ನೇ ಅತಿಯಾಗಿ ಪ್ರೀತಿಸುತ್ತೇನೆ. ಅವಳ ಕಣ್ಣ ಸಲುಗೆ ನನ್ನನ್ನು ಈಗಲೂ ಆಕರ್ಷಿಸುತ್ತಿದೆ. ಆ ಕಣ್ಣಿನಲ್ಲಿ  ನನ್ನ ಜೀವದ ಗೆಳೆಯ ಕ್ಯಾಟು ಕಾಣಿಸುತ್ತಾನೆ  ಬೆಕ್ಕಿನ ಕಣ್ಣು ಎಂದು ತಮಾಷೆ ಮಾಡುತ್ತಿದ್ದ ಕ್ಯಾಟು ತನ್ನ ಕಣ್ಣುಗಳಿಂದ ಜೀವಂತವಾಗಿದ್ದಾನೆ ಮತ್ತು ಜೀವನ ಸಂಗಾತಿ ಮಂಜರಿ ಆ ಕಣ್ಣುಗಳಿಂದಲೇ ಜಗತ್ತನ್ನು ಕಾಣುತ್ತಿದ್ದಳೆ.."

ನನ್ನ ಮಾತನ್ನು ಕೇಳಿ ಮನೋಜನ ಕಣ್ಣುಗಳಿಂದ ಹನಿಗಳು ಉದುರಿದವು