Monday 27 March 2017

ಕನ್ನಡ ತಾಯಿ (ಪದ್ಯ)

ಕನ್ನಡ ತಾಯಿ

ನಮ್ಮನೆಗೆ ಕವಿ ಚಕ್ರವರ್ತಿ ಪಂಪನ ಆಗಮನ
ಆಧರದ ಆತಿಥ್ಯವು ನವನವೀನ
ಪಿಜ್ಜಾ ಬರ್ಗರ್ ನಂತಹ ವಿವಿಧಾವಳಿ
ಗೋಬಿ ನೂಡಲ್ಸ್ ನ ಖಾನಾವಳಿ
ಪಡುವಣದ ಪರಿಮಳದ್ದೇ ಪ್ರಭಾವಳಿ
ತೆಂಕಣದ ಕಂಪು ಎಲ್ಲಿ..? ಎಂದರು

ಬೀದಿಯಲ್ಲಿ ಸಿಕ್ಕರು ಕುಮಾರವ್ಯಾಸರು
ಅಲ್ಲಿ ಪರಭಾಷೆಯವರದೇ ಕಾರುಬಾರು
ಅರ್ಥವಾಗದ ದಿಕ್ಕೆಟ್ಟ ನುಡಿಯ ಮದ್ಯೆ
ಕರ್ಣಟಕ ಕಥಾಮಂಜರಿ ಹುಡುಕಲು ಯತ್ನಿಸಿ
ತಡವರಿಸುತ್ತಾ ನನ್ನನ್ನೊಮ್ಮೆ ಎಡವಿ ಪ್ರಶ್ನಿಸಿದರು
ಕನ್ನಡ ಬರುತ್ತಾ..? ಎಂದು

ದವಾಖಾನೆಯಲಿ ಸಿಕ್ಕಿದ್ದು
ಮಾಸ್ತಿ ಕುವೆಂಪು ಬೇಂದ್ರೆ ಮತ್ತಿತರರು
ಹಾಸಿಗೆ ಹಿಡಿದ ಕನ್ನಡ ಮಾತೆಯ ಮುಂದೆ
ಕಂಬನಿಗರೆದರು ಗುಣವಾಗಲೆಂದು
ವೈದ್ಯನಾಗಿ ಬಂದ ನನ್ನನ್ನೇ ಕೈಮುಗಿದರು
ಹೇಗಾದರೂ ಮಾಡಿ ಬದುಕಿಸುವಿರಾ..?

ಎಲ್ಲರೂ ಮಾತೆಯ ನೆನೆದರು
ಆಕೆಯ ಸಂಸ್ಕಾರಗಳು
ಸಂಸ್ಕೃತಿ ನಡೆ ನುಡಿಗಳು
ಶತಶತಮಾನಗಳಿಂದ ಸಾಗಿಬಂದಿದ್ದು
ನೀವು ಉಳಿಸಿ ಬೆಳೆಸುವಿರಾ..?
ನಿಮ್ಮ ಮಕ್ಕಳಿಗೂ ತಲುಪಿಸುವಿರಾ..?

ಇಂಗ್ಲಿಷಿನ ರಿಂಗಣ ಎಚ್ಚರಿಸಿತು
ಕನ್ನಡ ತಾಯಿ...ಕನ್ನಡ ತಾಯಿ...
ಜೋರಾಗಿ ಕೂಗಿದೆ
ಬಿದ್ದಿದ್ದು ಕನಸೆಂದು ತಿಳಿಯಿತು
ಸುತ್ತಲೂ ಕವಿಗಳನು ಹುಡುಕಿದೆ
ಯಾರೂ ಕಾಣಲಿಲ್ಲ....

                         - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment