Monday 27 March 2017

ಪರೀಕ್ಷೆ (ಕವನ)

ಪರೀಕ್ಷೆ

ವರುಷದ ತಪಸ್ಸಿಗೆ ಮೂರು ತಾಸಿನ ಯಜ್ಞ
ಓಂ ಶ್ರೀ ಮೊದಲಾಕ್ಷರದ ಮಂತ್ರ
ತ್ರಾಸಿನ ಅವಧಿಯಲಿ ನೂರೆಂಟು ತಂತ್ರ
ಅತ್ತಿತ್ತ ನೋಡುತ ಸಮರಕೆ ಕುಳಿತಿಹನು..

ಹತ್ತು ಹಲವು ಭಾವವು ಮುಖದಲಿ ಬೀರುತ
ಅರಿಯದ ಚಿಹ್ನೆಗಳು ಕಣ್ಣಲಿ ತೋರುತ
ಲೇಖನಿ ಹಿಡಿದು ಪುಟದಲಿ ಗೀಜುತ
ಮಿದುಳನು ಸಾಣೆಗೆ ಹಿಡಿದಿಹನು..

ತಿಳಿಯದೇ ತಲೆಯನು ಕೆರೆಯುತಲೊಮ್ಮೆ
ಅಪ್ಪನ ಕೋಪವ ನೆನೆಯುತಲೊಮ್ಮೆ
ಶಿಕ್ಷಕ ನೋಡಿ ಕೆಂಡವ ಕಾರುತ
ಕೆತ್ತನೆ ಕೆಲಸವ ಮಾಡಿಹನು..

ಬರೆದರೂ ಅಂಕವ ಮೂಡದು ಕಾಣ 
ಜಿಪುಣವ ತೋರುವ ಗುರುಗಳ ನೋಡ
ಹಗಲಲಿ ಕನಸಲಿ ಭಯದಲಿ ಚೀರುತ
ಭೂತವ ನೋಡಿದ ಹಾಗೆ ಬೆವರಿಹನು..

                           -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment