Monday, 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-2)

ಪ್ರೇತಾತ್ಮದ ಮನೆಯಲ್ಲಿ (ಭಾಗ-2)


ಸಮಾದಿಯ ಮೇಲೆ ಕುಳಿತ ಆ ಪ್ರೇತಾತ್ಮ ನನ್ನ ಕಡೆಯೇ ನೋಡುತ್ತಿತ್ತು. ಕಣ್ಣುಗಳು ರಕ್ತವನ್ನು ಕಾರುತ್ತಿತ್ತು. ಮುಖ ಕೂದಲಿನಿಂದ ಸಂಪೂರ್ಣವಾಗಿ ಮುಚ್ಚಿತ್ತು. ಒಂದೆರಡು ನಿಮಿಷ ಎದುರುಸಿರು ಬಿಡುತ್ತಾ ಕುಳಿತ ಆ ಪ್ರೇತಾತ್ಮವು ತಕ್ಷಣ ತನ್ನ ತಲೆಯನ್ನು ಗಿರಿಗಿಟ್ಟಲೆಯಂತೆ ಅಲ್ಲಾಡಿಸಿತು. ತಲೆ ಅಲ್ಲಾಡಿದ ರಭಸಕ್ಕೆ ಕೂದಲು ಕೆದರಿಕೊಂಡು ಚೆಲ್ಲಾಪಿಲ್ಲಿಯಾಯಿತು. ಈಗ ಆ ಪ್ರೇತಾತ್ಮದ ಮುಖ ಸ್ಪಷ್ಟವಾಗಿ ಕಾಣಿಸಿತು. ಎಲ್ಲೋ ನೋಡಿದ ಪರಿಚಿತ ಮುಖ ಎಂಬಂತೆ ಭಾಸವಾಯಿತು. ಕಣ್ಣ ಸುತ್ತಲೂ ಕಪ್ಪಾದ ಛಾಯೆ ಗೋಚರಿಸಿದ್ದರಿಂದ ಮುಖ ಭಯಾನಕವಾಗಿ ಕಾಣುತ್ತಿತ್ತು. ಕತ್ತಲೆಯಲ್ಲಿ ಬೆಳ್ಳನೇ ಹೊಳೆಯುವ ಕೊರೆಹಲ್ಲುಗಳು ನನ್ನ ಕಣ್ಣನ್ನು ಕುಕ್ಕಿದಂತಾಯಿತು. ಎಲ್ಲೋ ನೋಡಿದ ಮುಖ..!! ನಿಜವಾಗಿಯೂ ತುಂಬಾ ಪರಿಚಿತ ಮುಖವೇ...!!  ಆದರೆ ತಕ್ಷಣ ಯಾರೆಂದು ತಿಳಿಯಲಿಲ್ಲ. ಯಾರಿರಬಹುದು..? ಭೂತವಾಗಿ ಕಾಡುತ್ತಿರಲು ಕಾರಣವಾದರೂ ಏನು..?  ಎಂದು ಯೋಚಿಸುತ್ತಾ ಹಾಗೆಯೇ ನಿಂತೆ. ಎಷ್ಟು ಯೋಚಿಸಿದರೂ ಆ ಮುಖ ಯಾವುದೆಂದು ನನಗೆ ತಿಳಿಯಲೇ ಇಲ್ಲ.  ನೋಡು ನೋಡುತ್ತಿದ್ದಂತೆ ಆ ಪ್ರೇತಾತ್ಮ ಸಮಾದಿಯಿಂದ ಇಳಿದು ನನ್ನ ಕಡೆಯೇ ಬರಲಾರಂಭಿಸಿತು. ವಿಚಿತ್ರವಾದ ನಗು ಜೊತೆ ಜೊತೆಗೆ ನರಳಾಟದ ಕೂಗು ಸಹ ಕೇಳಿಸಿತು. ಆ ದೆವ್ವವನ್ನು ಮಾತನಾಡಿಸಲೇಬೇಕೆಂದು ಧೈರ್ಯವಾಗಿ ಬಂದಿದ್ದ ನನಗೆ, ಇದ್ದಕ್ಕಿದ್ದಂತೆಯೇ ಕೈ ಕಾಲುಗಳು ನಡುಗಲಾರಂಭಿಸಿದವು. ಘನ ಘೋರ ಆ ಅಮವಾಸ್ಯೆಯ ಕತ್ತಲಲ್ಲಿ ನಾನು ನಿಜವಾಗಿಯೂ ಆ ಪ್ರೇತಾತ್ಮದ ಕೈಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಿಟ್ಟರೆ...!! ಅಬ್ಬಾ..!! ನನ್ನನ್ನು ಬಿಡಿಸಿಕೊಳ್ಳಲು ಯಾರೂ ಬರಲಾರರು. ಅಮವಾಸ್ಯೆಯ ಆ ಕತ್ತಲಿನಲ್ಲಿ, ನರಪಿಳ್ಳೆಯೂ ಇರದ ನಿರ್ಜನವಾದ ಪ್ರದೇಶಕ್ಕೆ ನಾನು ಯಾಕಾದರೂ ಬಂದೆನೋ ಎಂದೆನಿಸಿತು. ಅಲ್ಲಲ್ಲಿ ನಾಯಿ ಬೊಗಳುವ ಸದ್ದು ಜೋರಾಗಿ ಕೇಳಿಸುತ್ತಿತ್ತು.  ಕೈಯಲ್ಲಿದ್ದ ಟಾರ್ಚ್ ಬೆಳಕನ್ನು ನಮ್ಮ ಮನೆಯ ದಿಕ್ಕಿನತ್ತ ತಿರುಗಿಸಿಕೊಂಡು ಜೋರಾಗಿ ಓಡಲು ಪ್ರಾರಂಭಿಸಿದೆ. ಸ್ವಲ್ಪ ದೂರ ಓಡಿದ ಮೇಲೆ ಹಿಂದಕ್ಕೆ ತಿರುಗಿ ನೋಡಿದೆ ಆ ದೆವ್ವವೂ ಸಹ ಹಿಂದೆಯೇ ಬರುತ್ತಿತ್ತು. ಕೂಡಲೇ ನನ್ನ ಎದೆಯ ಬಡಿತ ಇನ್ನಷ್ಟು ಜೋರಾಯಿತು. ಕಾಲಿನ ವೇಗ ಇನ್ನೂ ಹೆಚ್ಚಾಯಿತು. ಎದ್ದೆನೋ ಬಿದ್ದನೋ ಎಂದು ಯಾವುದನ್ನೂ ಗಮನಕ್ಕೆ ತಂದು ಕೊಳ್ಳದಂತೆ ಓಡಿದ ಫಲವಾಗಿ ಮನೆಯ ಹತ್ತಿರ ಬಂದು ಸೇರಿದೆ. ಕಿಟಕಿಯ ಕಿಂಡಿಯಿಂದ ಕೈಯನ್ನು  ಒಳಗೆ ಸೇರಿಸಿ ಮನೆಯ ಚಿಲಕವನ್ನು ತೆಗೆದು ಹೇಗೋ ಮನೆ ಸೇರಿಕೊಂಡೆ. ಕಿಟಕಿಯಿಂದ ಹೊರಗಡೆ ನೋಡಿದೆ. ನನ್ನ ಹಿಂಬಾಲಿಸಿಕೊಂಡು ಬರುತ್ತಿದ್ದ ಪ್ರೇತಾತ್ಮ ಕಾಣಲಿಲ್ಲ. ಸಮಾಧಾನದಿಂದ ಹಾಸಿಗೆಯ ಮೇಲೆ ಬಿದ್ದು ಕೊಂಡೆ. ನನ್ನ ಎದೆಯ ಬಡಿತ "ಧಗ್... ಧಗ್" ಎಂದು ನಗಾರಿಯ ಸದ್ಧಿನಂತೆ ಬಡಿದುಕೊಳ್ಳಲಾರಂಭಿಸಿತು. ಎದೆಯ ಬಡಿತ ನಿಧಾನವಾಗಿ ಸಹಜ ಸ್ಥಿತಿಗೆ ಬರಲಾರಂಬಿಸಿತು. ಬೆವರಿನಿಂದ ನನ್ನ ಬಟ್ಟೆ ಒದ್ದೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು ಆಗಲೇ. 'ಭಯ' ಎಂದರೇನು ಎಂದು ನಿಜವಾಗಿ ಅನುಭವಕ್ಕೆ ಬಂದದ್ದು ಆಗಲೇ. ಭವಿಷಃ ಈ ತರಹದ ಭಯ ಅನುಭವಿಸಿದವರು ಪ್ರಪಂಚದಲ್ಲಿ ಕೆಲವೇ ಜನ ಸಿಗಬಹುದು. ಅವರಲ್ಲಿ ನಾನು ಒಬ್ಬ. ಸಧ್ಯ ಆ ಭಯವನ್ನು ಅನುಭವಿಸಿ ನಾನು ಬದುಕಿರುವುದೇ ಹೆಚ್ಚು ಎಂದೆನಿಸಿತು. ಹಾಗೇ ಹಾಸಿಗೆಯಲ್ಲಿ ನಡಗುತ್ತಾ ಮಲಗಿದೆ. ನರಕದ ಶಿಕ್ಷೆಗಿಂತಲೂ ಘನ ಘೋರ ಶಿಕ್ಷೆ ರಾತ್ರಿಯೆಲ್ಲಾ ಅನುಭವಿಸಿದಂತಾಯಿತು. ಒಮ್ಮೆ ಭಯ ಮತ್ತೊಮ್ಮೆ ನಡುಕ, ಒಮ್ಮೆ ನಿದ್ದೆಯ ಮಂಪರು ಮತ್ತೊಮ್ಮೆ ನಡುಕ ಬೆವರು. ಹೇಗೋ ರಾತ್ರಿ ಕಳೆದದ್ದಾಯಿತು.

ಬೆಳಗ್ಗೆ ಏಳುವುದು ಸಹ ತಡವಾಯಿತು. ಕಣ್ಣು ಬಿಟ್ಟಾಗಲೆಲ್ಲಾ ಆ ಪ್ರೇತಾತ್ಮದ ರೂಪ ಕಣ್ಣ ಮಂದೆನೇ ಬಂದಂತಾಗುತ್ತಿತ್ತು. ಯಾರಿರಬಹುದು....?  ಎಲ್ಲೋ ನೋಡಿದ ಮುಖ, ಪರಿಚಿತವಾದ ಮುಖ, ಆದರೂ ಯಾಕೆ  ನನ್ನ ಮೆದುಳಿಗೆ ಸ್ಪಷ್ಟವಾಗಿ ಹೊಳೆಯುತ್ತಿಲ್ಲ ನನ್ನ ನೆನಪಿನ ಶಕ್ತಿಗೆ ಏನಾಯಿತು ಹೀಗೆ ಹಲವು ಸಲ ಯೋಚಿಸಿ ತಲೆಯನ್ನೊಮ್ಮೆ ಕೆರೆದುಕೊಂಡೆ. ಪ್ರೇತಾತ್ಮದ ರೂಪ ಕಣ್ಣ ಮಂದೆಯೇ ಇತ್ತು. ಇನ್ನೊಂದೆರಡು ದಿನ ಕಳೆದರೆ ನನ್ನ ಮೆದುಳಿನಲ್ಲಿ ರಿಜಿಸ್ಟರ್ ಆದ ಆ ದೆವ್ವದ ರೂಪವೂ ಮರೆತು ಹೋಗಬಹುದು. ತಕ್ಷಣ ಒಂದು ಉಪಾಯ ಹೊಳೆಯಿತು. ಕಾಲೇಜಿನಲ್ಲಿ ಓದುವಾಗ ಡ್ರಾಯಿಂಗ್ ಸ್ಪರ್ಧೆಯಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದೆ. ಪೆನ್ಸಿಲ್ ಶೇಡ್ ಕೊಡು ಮನುಷ್ಯರ ಫೋಟೋಗಳನ್ನು ಯಥಾವತ್ತಾಗಿ ಬಿಡಿಸುವ ಕಲೆ ನನಗೆ ಸಿದ್ಧಿಸಿತ್ತು. ಇಲ್ಲ ಬಿಡಬಾರದು ನಾನು ನೋಡಿದಂತೆಯೇ ಆ ದೆವ್ವದ ರೂಪವನ್ನು ಚಿತ್ರದಲ್ಲಿ ಬಿಡಿಸಲೇ ಬೇಕು ಎಂದು ನಿರ್ಧರಿಸಿಕೊಂಡೆ. ತಕ್ಷಣ ಬ್ಯಾಗಲ್ಲಿದ್ದ ಪೆನ್ಸಿಲ್ ನ್ನು ತೆಗೆದುಕೊಂಡೆ. ಬಿಳಿಯ ಹಾಳೆಯ ಮೇಲೆ ರಾತ್ರಿ ನೋಡಿದ ಪ್ರೇತಾತ್ಮದ ಕಣ್ಣುಗಳನ್ನು ಬಿಡಿಸಿದೆ. ಮುಖದಲ್ಲಿದ್ದ ಕೋರೆ ಹಲ್ಲನ್ನೂ ಬಿಡಿಸಿದೆ. ತಲೆಗೂದಲನ್ನೂ ಬಿಡಿಸಿದೆ.  ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಎದುರಲ್ಲೇ ಕೂರಿಸಿಕೊಂಡು ಗೆಳೆಯರ ಹಲವು ಚಿತ್ರಗಳನ್ನೂ ಬಿಡಿಸಿದ್ದರಿಂದ ದೆವ್ವದ ಚಿತ್ರ ಬಿಡಿಸಲು ನನಗೇನೂ ಕಷ್ಟವಾಗಲಿಲ್ಲ. ರಾತ್ರಿ ನೋಡಿದಂತೆಯೇ ದೆವ್ವದ ಚಿತ್ರ ಬಿಡಿಸಿದ್ದಾಯಿತು. ಆದರೆ ಅದೂ ಸಹ ಅಸ್ಪಷ್ಟ ಏಕೆಂದರೆ ಕಗ್ಗತ್ತಲಲ್ಲಿ ನನಗೆ ಕಂಡದ್ದೂ ಅಷ್ಟೆ.  ಕಣ್ಣು ಕೂದಲು ಮತ್ತು ಕೋರೆ ಹಲ್ಲುಗಳನ್ನು ಬಿಡಿಸಿ ಚಿತ್ರ ಅರ್ಧಕ್ಕೆ ನಿಲ್ಲಿಸಿದೆ. ಉಳಿದಿದ್ದೆಲ್ಲಾ ಅಸ್ಪಷ್ಟ..!! ಅಸ್ಪಷ್ಟ...!! ನಾನು ನೋಡಿದಷ್ಟು ದೆವ್ವದ ಚಿತ್ರವೇನೋ ಬಿಡಿಸಿ. ಹಾಗೇ ಅದನ್ನು ಮಡಿಸಿಟ್ಟು ಕೋಣೆಯಿಂದ ಹೊರಗೆ ಬಂದೆ....

ಅಜ್ಜಿ ಕಟ್ಟೆಯ ಮೇಲೆ ಕುಳಿತು ರಾಗಿ ಹಸನು ಮಾಡುತ್ತಿದ್ದಳು. ನನಗೆ ಅಜ್ಜಿಯ ಮೇಲೆಯೂ ಅನುಮಾನ ಮೂಡಲಾರಂಭಿಸಿತು. ಯಾಕೆಂದರೆ ಅಜ್ಜಿ ಹೇಳಿದಂತೆ ಚಿಕ್ಕಪ್ಪನ ಮೊದಲನೇ ಹೆಂಡತಿ ಅಂಜಲಿ ದೆವ್ವವಾಗಿರಲಿಲ್ಲ. ಯಾಕೆಂದರೆ ಮೊದಲ ಚಿಕ್ಕಮ್ಮ ಅಂಜಲಿಯನ್ನು ನಾನು ನೋಡಲೇ ಇಲ್ಲ. ನನಗೆ ಗೊತ್ತಿಲ್ಲದ ಅಂಜಲಿ ಚಿಕ್ಕಮ್ಮಳ ರೂಪ ಪರಿಚಿತ ಮುಖದಂತೆ ಕಾಣಲು ಹೇಗೆ ಸಾಧ್ಯ. ಅಂಜಲಿ ಚಿಕ್ಕಮ್ಮಳ ಫೋಟೊವನ್ನು ನಾನು ಇದುವರೆಗೂ ನೋಡಿಲ್ಲ. ಅಥವಾ ಅಂಜಲಿ ಚಿಕ್ಕಮ್ಮಳ ಫೋಟೊವನ್ನು ತೋರಿಸಿ ಅಂತ ನಾನು ಯಾವತ್ತೂ ಚಿಕ್ಕಪ್ಪನನ್ನು ಕೇಳಿರಲಿಲ್ಲ. ಅಥವಾ ಈ ರೀತಿ ತನಗೊಂದು ಮೊದಲ ಪತ್ನಿ ಇದ್ದಳೆಂಬ ನೆನಪಿಗೂ  ಸಹ ಚಿಕ್ಕಪ್ಪ ಮನೆಯಲ್ಲಿ ಅವಳ ಒಂದು ಫೋಟೋವನ್ನೂ ಸಹ ಗೋಡೆಗೆ ನೇತು ಹಾಕಿರಲಿಲ್ಲ. ಹೀಗೆ ಎಲ್ಲಿಯೂ ನೋಡದ ಆ ರೂಪ ಪರಿಚಿತ ಮುಖದಂತೆ ನನಗೆ ಕಾಣಲು ಸಾಧ್ಯವೇ...?  ಹಾಗಿದ್ದರೆ ಯಾರವಳು.. ?  ಅಜ್ಜಿ ಯಾಕೆ ಸುಳ್ಳು ಹೇಳಿದಳು...?  ಅಜ್ಜಿ ಹೇಳಿದ್ದು ಸುಳ್ಳು ಎಂಬ ವಿಷಯ ನನಗೆ ಈಗ  ಸ್ಪಷ್ಟವಾಗತೊಡಗಿತು. ಅಜ್ಜಿ ನನ್ನಿಂದ ಏನೋ ರಹಸ್ಯವನ್ನು ಮುಚ್ಚಿಡುತ್ತಿರುವಳು. ಮತ್ತೆ ಏನಾದರೂ ಕೇಳಿದರೆ ಅಜ್ಜಿ ಸುಳ್ಳು ಹೇಳ ಬಹುದು. ನಾನು ರಾತ್ರಿ ದೆವ್ವ ನೋಡಲು ಹೋದ ವಿಷಯ ಅಜ್ಜಿಗೆ ತಿಳಿಸಲೇ ಬಾರದು. ನನಗೆ ಸಿಕ್ಕ ಕೆಲವು ಮಾಹಿತಿಗಳಿಂದಲೇ ಈ ಪ್ರೇತಾತ್ಮ ಯಾರದೆಂದು ಕಂಡು ಹಿಡಿಯಲೇ ಬೇಕು ಎಂದು ನಿರ್ಧರಿಸಿಕೊಂಡೆ.
ನನ್ನ ಕೊಠಡಿಯಿಂದ ಕೆಳಗಿಳಿದು ಬಂದೆ. ಕಟ್ಟೆಯ ಮೇಲೆ ಕುಳಿತ್ತಿದ್ದ ಅಜ್ಜಿ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು. ಅಜ್ಜಿಯನ್ನು ನೋಡಿಯೂ ನೋಡದಂತೆ ನಾನು ಮನೆಯೊಳಗೆ ಹೆಜ್ಜೆ ಹಾಕಿದೆ.  ಅಜ್ಜಿ ನನ್ನನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಳು..

"ಪ್ರಕಾಶ ಬಾರಪ್ಪಾ ಇಲ್ಲಿ... ಏನು ಅಜ್ಜಿಯನ್ನು ಮಾತನಾಡಿಸದೇ ಹಾಗೆ ಒಳಗಡೆ ಹೋಗ್ತಾ ಇದ್ದೀಯಾ. ಅಜ್ಜಿ ಮೇಲೆ ಪ್ರೀತಿ ಇಲ್ಲವಾ...?"

ಅಜ್ಜಿ ನನ್ನ ಕೂರಿಸಿಕೊಂಡು ತಲೆ ಸವರುತ್ತಾ ಪ್ರೀತಿಯಿಂದ ಮಾತನಾಡಿಸಿದಳು.
"ಹಾಗೇನಿಲ್ಲ ಅಜ್ಜಿ... ಹೊಟ್ಟೆ ಹಸೀತಾ ಇದೆ. ತಿಂಡಿ ತಿಂದು ಮಾತನಾಡಿಸೋಣ ಅಂತ ಇದ್ದೆ ಅಜ್ಜಿ.."
ಅಷ್ಟು ಹೇಳಿ ನಾನು ಮುಂದಕ್ಕೆ ಹೊರಡಲು ಹೆಜ್ಜೆ ಹಾಕಿದೆ.
ತಕ್ಷಣ ಅಜ್ಜಿ ನನ್ನ ಕೈಹಿಡಿದುಕೊಂಡಳು..

"ತಪ್ಪು ಮಾಡ್ತಾ ಇದ್ದೀಯಾ ಮಗು.... ನಾನು ಹೋಗಬೇಡ ಅಂದ್ರು ರಾತ್ರಿ ಆ ಸ್ಮಶಾನದ ಕಡೆಗೆ ಹೋಗಿದ್ಯಾಕೆ...? ಅವಳು ಒಳ್ಳೆಯವಳಲ್ಲ ಮಗು. ಅವಳು ರಾಕ್ಷಸಿ. ಬದುಕಿರುವಾಗಲೇ ನನ್ನ ಮತ್ತು ನಿನ್ನ ಚಿಕ್ಕಪ್ಪಳನ್ನು ಬಿಟ್ಟವಳಲ್ಲ ಆ ಅಂಜಲಿ. ಇನ್ನು ಪ್ರೇತಾತ್ಮವಾಗಿ ಅಲೆಯುವಾಗ ಸುಮ್ಮನೇ ಬಿಟ್ಟಾಳೆ ಮಗು... ಇರುವ ಒಬ್ಬನೇ ಮೊಮ್ಮಗ ನೀನು ನಿನ್ನನ್ನು ಕಳೆದುಕೊಂಡರೆ ನಿನ್ನ ಅಜ್ಜಿ ಸುಮ್ಮನಿರುವಳೇ ಮಗು... ಬೇಡಪ್ಪ ಬೇಡ ನಿನಗೆ ಈ ಭೂತ ಪ್ರೇತದ ಸಹವಾಸ ಬೇಡ. ಸುಮ್ಮನೆ ಊರಿಗೆ ಹೋಗಿಬಿಡು. ಯಾವುದೇ ಸಹವಾಸಕ್ಕೆ ಹೋಗುವುದಿಲ್ಲ ಎನ್ನುವುದಾದರೆ ಅಜ್ಜಿ ಹೇಳಿದಂತೆ ಕೇಳಿಕೊಂಡು ರಜೆ ಮುಗಿಸಿಕೊಂಡೇ ಊರಿಗೆ ಹೋಗು. ನೀನು ಸುಮ್ಮನೆ ಅಪಾಯಗಳನ್ನು ಮೈ ಮೇಲೆ ಎಳೆದುಕೊಂಡರೆ, ಏನಾದರು ಅನಾಹುತವಾದರೆ ನಿಮ್ಮಪ್ಪನಿಗೆ ನಾವು ಏನಂತ ಉತ್ತರಸೋದು. ಬೇಡ ಮಗು ಇನ್ನೊಂದು ಸಲ ಅಮವಾಸ್ಯೆಯ ದಿನ ಆ ಕಡೆ ಹೋಗಬೇಡ ಮಗು. ಆ ಅಂಜಲಿ ತುಂಬಾ ಕೆಟ್ಟವಳು. ಸುಮ್ಮನೆ ನೀನು ಅವಳಿಗೆ ಬಲಿಯಾಗುವುದು ಬೇಡ"

ಅಜ್ಜಿ ಸಮಾಧಾನದಿಂದ ಪ್ರೀತಿ ತೋರಿಸುತ್ತಲೇ ಹೇಳಿದಳು. 
ನಾನು ಸುಮ್ಮನೇ "ಹ್ಞೂಂ" ಎಂದು ತಲೆಯಾಡಿಸಿ ಸ್ನಾಕ್ಕೆ ಹೋದೆ..

ನಾನು ರಾತ್ರಿ ಹನ್ನೆರಡು ಗಂಟೆಗೆ ಎದ್ದು ಹೋದ ವಿಷಯ ವಿಷಯ ಅಜ್ಜಿಗೆ ಹೇಗೆ ತಿಳಿಯಿತು. ಯಾರೂ ನೋಡಿಲ್ಲ ಎಂದು ಕೊಂಡಿದ್ದು ನನ್ನ ತಪ್ಪಾಯಿತೋ ಏನೋ.. ಮೊದಲೇ ವಯಸ್ಸಾದವರಿಗೆ ನಿದ್ದೆ ಕಡಿಮೆ  ನೋಡದೇ ಏನ್ಮಾಡ್ತಾಳೆ ಮುದುಕಿ ಅಂತ ನನ್ನಷ್ಟಕ್ಕೆ ನಾನೇ ಗೊಣಗಿಕೊಂಡೆ...

ತಿಂಡಿ ಸ್ನಾನ ಮುಗಿಸಿದ ನಂತರ ತೋಟದ ಕಡೆಗೆ ಹೋದೆ. ಚಿಕ್ಕಪ್ಪ ತೆಂಗಿನ ಕಾಯಿ ಕೀಳುತ್ತಿದ್ದರು. ಚಿಕ್ಕಪ್ಪನಿಗೆ ಅಂಜಲಿ ಚಿಕ್ಕಮ್ಮನ ಬಗ್ಗೆ ಕೇಳಬೇಕೆನಿಸಿದರೂ ಮನಸ್ಸು ಹಿಂದೇಟು ಹಾಕಿತು. ಚಿಕ್ಕಪ್ಪ ಏನಾದರೂ ಕೋಪ ಗೊಂಡರೆ.. ಅಥವಾ ಅಂಜಲಿ ಚಿಕ್ಕಮ್ಮಳ ಬಗ್ಗೆ ಏನಾದರೂ ನೋವುಂಟು ಮಾಡುವಂತಹ ವಿಷಯಗಳಿದ್ದರೆ ಚಿಕ್ಕಪ್ಪ ನೊಂದು ಕೊಳ್ಳಬಹುದು. ಇನ್ನು ಎರಡನೇ ಮದುವೆಯಾಗಿ ಸರಿಯಾಗಿ ಒಂದು ತಿಂಗಳೂ ಆಗಿಲ್ಲ. ಹೇಗೋ ಮೊದಲನೇ ಹೆಂಡತಿಯನ್ನು ಮರೆತು ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಅಂತದ್ದರಲ್ಲಿ ಏನೇನೋ ಕೇಳಿ ಚಿಕ್ಕಪ್ಪನ ಮನಸ್ಸಿಗೆ ನೋವು ತರಬಾರದು ಎಂದುಕೊಂಡು ಸಮ್ಮನಾಗಿ ಬಿಟ್ಟೆ..
ಆದರೆ ಇದ್ದಕ್ಕಿಂತಂತೆ ಚಿಕ್ಕಪ್ಪನ ಮದುವೆಯ ದೃಶ್ಯಗಳು ಕಣ್ಣ ಮುಂದೆ ಬರಲಾರಂಭಿಸಿತು. ಚಿಕ್ಕಪ್ಪ ಸುಮತಿ ಚಿಕ್ಕಮ್ಮಳಿಗೆ ತಾಳಿ ಕಟ್ಟಿದ ಮೇಲೆ, ಸಮಾಜದ ಭಾಂದವರು ತಮ್ಮ ಸಮುದಾಯದ ರಿಜಿಸ್ಟರ್ ಪುಸ್ತಕದ ಮೇಲೆ ದಂಪತಿಗಳಿಬ್ಬರ ಸಹಿ ತೆಗೆದುಕೊಂಡು. ಮದುವೆಯ ಸರ್ಟಿಫಿಕೇಟನ್ನು ಕೊಟ್ಟರು. ಆ ದೃಶ್ಯ ನೆನಪಿಗೆ ಬಂದ ಕೂಡಲೇ ತೋಟದಿಂದ ಕಾಲ್ಕಿತ್ತೆ. ಮುಖದಲ್ಲಿ ಏನೋ ಕುತೂಹಲ. ಪಟ್ಟಣದ ಬೀದಿಯನ್ನು ಪ್ರವೇಶಿಸಿ ಶೆಟ್ಟರ ಅಂಗಡಿಯ ಪಕ್ಕದ ರೋಡಿನತ್ತ ಹೆಜ್ಜೆ ಹಾಕಿದೆ. ಸ್ವಲ್ಪ ದೂರ ಹೋದ ಮೇಲೆ ಮೊದಲನೇ ಮಹಡಿಯ ಮೇಲೆ ಒಂದು ಕಛೇರಿ ಇತ್ತು. ಕ್ಷತ್ರಿಯ ಸಮಾಜ ಎಂದು ಬರೆದಿತ್ತು. ಕಛೇರಿಯ ಒಳಗೆ ಪ್ರವೇಶಿಸಿದೆ. ಐವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಅಲ್ಲಿ ಕುಳಿತ್ತಿದ್ದು. 

"ಸರ್.. ನಾನು ಶಾಮ್ ರಾವ್ರ ಮಗ. ಅನಂತ್ ರಾವ್ ಇದಾರಲ್ಲ ಅವರ ಅಣ್ಣನ ಮಗ. ಸರ್ ನನಗೆ ನನ್ನ ಚಿಕ್ಕಪ್ಪನ ಮೊದಲನೇ ಹೆಂಡತಿ ಅಂಜಲಿಯವರ ಫೋಟೊ ಮತ್ತು ಕೆಲವು ಮಾಹಿತಿ ಬೇಕಿತ್ತು... ಅನಂತು ಚಿಕ್ಕಪ್ಪನೇ ಕಳುಹಿಸಿದ್ದು" 
ನಾನು ಹಾಗೆ ಕೇಳಿದ ಕೂಡಲೇ ಆ ವ್ಯಕ್ತಿ ನನ್ನನ್ನೊಮ್ಮೆ ದಿಟ್ಟಿಸಿ ನೋಡಿದರು. ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ..

"ಯಾರು...? ಜಿಂಗಾಡೆ ಅನಂತು ಬಗ್ಗೆ ತಾನೇ ನೀನು ಕೇಳ್ತಾ ಇರೋದು..? ಕಳೆದ ತಿಂಗಳು ಮದುವೆ ಆಯ್ತಲ್ಲಾ ಅವ್ರೆ ತಾನೇ..?

ಅನುಮಾನದಿಂದಲೇ ಕೇಳಿದರು.

"ಹೌದು ಸರ್, ಅವರೇ.... ಅವರ ಮೊದಲ ಹೆಂಡತಿ ಅಂಜಲಿಯ ಬಗ್ಗೆ ಮಾಹಿತಿ ಬೇಕಿತ್ತು.."
ನಾನು ಮತ್ತೆ ಕೇಳಿದೆ.

"ಏನಯ್ಯಾ ನಿನಗೆ ತಲೆ ಗಿಲೆ ಕೆಟ್ಟಿಲ್ಲ ತಾನೇ... ಮೊದಲ ಹೆಂಡತಿ ಯಾರಿಗಯ್ಯ.. ಶ್ರೀರಾಮಚಂದ್ರನ ತರ ಇರೋ ನಿನ್ನ ಚಿಕ್ಕಪ್ಪನಿಗ..? ಅವರಿಗೆ ಮೊದಲ ಹೆಂಡತಿ ಅಂತ ಯಾರೂ ಇಲ್ಲ. ಇರೋದು ಮೊನ್ನೆ ಮದುವೆ ಆಗಿರೋ ಹೆಂಡತಿ ಸುಮತಿ ಅಂತ.. ಯಾರೋ ನಿನಗೆ ತಮಾಷೆ ಮಾಡಲು ಆಫೀಸಿಗೆ ಕಳುಹಿಸಿದ್ದಾರೆ ಅಷ್ಟೆ.. ಈ ಕಾಲೇಜ್ ಓದೋ ಹುಡುಗರ ಕೀಟಲೆಗಳೇ ಹಾಗೆ, ಹೋಗಯ್ಯ ಹೋಗು ಸುಮ್ಮನೆ ಸಮಯ ಹಾಳು ಮಾಡ ಬೇಡ"

ಆ ವ್ಯಕ್ತಿ ಕಡ್ಡಿ ಮುರಿದಂತೆ ಖಡಾ ಖಂಡಿತವಾಗಿ ಹೇಳಿದ.

 ಪೆಚ್ಚು ಮೋರೆ ಹಾಕಿಕೊಂಡು ಹೊರಬಂದೆ. ಹಾಗಾದರೆ ಆ ಅಂಜಲಿ ಯಾರು..? ಅಜ್ಜಿ ಸೃಷ್ಠಿಸಿದ್ದ ಅಂಜಲಿ ಎನ್ನುವುದು ಸುಳ್ಳು ಪಾತ್ರವೇ..? ದೆವ್ವಕ್ಕೂ ನಮ್ಮ ಕುಟುಂಬಕ್ಕೂ ಏನು ಸಂಬಂಧ..? ನನಗೆ ಪರಿಚಿತ ಮುಖದ ದೆವ್ವವೇ ಅದು..ಯಾಕೆ ನನ್ನ ಮನಸ್ಸಿಗೆ ಹೊಳೆಯುತ್ತಿಲ್ಲ. ಹೀಗೆ ಹಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಲಾರಂಬಿಸಿದವು..

ಮುಂದುವರೆಯುವುದು....

No comments:

Post a Comment