Monday, 24 April 2017

ಪ್ರೇತಾತ್ಮದ ಮನೆಯಲ್ಲಿ, (ಭಾಗ-3)

ಪ್ರೇತಾತ್ಮದ ಮನೆಯಲ್ಲಿ, (ಭಾಗ-3)


ಕ್ಷತ್ರಿಯ ಸಮಾಜದಲ್ಲಿ ಸಿಕ್ಕ ಪ್ರತಿಕ್ರಿಯೆಗೆ ನಾನು ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಬಂದೆ. ಮನೆಗೆ ಬಂದಾಗ ಅಜ್ಜಿ ಕಟ್ಟೆಯ ಮೇಲೆಯೇ ಕುಳಿತ್ತಿದ್ದಳು. ಈ ಮುದುಕಿಯನ್ನು ಕಂಡ ಕೂಡಲೇ ಕೋಪ ಬರಲಾರಂಬಿಸಿತು. ಇಲ್ಲ ಸಲ್ಲದ ಕತೆಯನ್ನು ಹೇಳಿ ಈ ಮುದುಕಿ ನನ್ನ ದಿಕ್ಕು ತಪ್ಪಿಸುತ್ತಿರುವುದಾದರೂ ಯಾಕೆ ? ಅಜ್ಜಿ ಹೇಳಿದ ಅಂಜಲಿ ಯಾರು..?  ಈ ಮುದುಕಿಗೂ ದೆವ್ವಕ್ಕೂ ಏನೋ ನಂಟು ಇದ ಎನ್ನಿಸತೊಡಗಿತು. ಅಜ್ಜಿ, ಅಂಜಲಿ ಇವರಿಬ್ಬರ ಮಧ್ಯೆ ನಾನು. ಮನೆಯಲ್ಲಿ ನನಗೆ ಮತ್ತು ಅಜ್ಜಿಯನ್ನು ಬಿಟ್ಟರೆ ದೆವ್ವದ ಅಸ್ಥಿತ್ವ ಇರುವ ಅನುಭವ ಯಾರಿಗೂ ಬಂದಿಲ್ಲ. ಹೊಸದಾಗಿ ಮದುವೆಯಾಗಿ ಬಂದ ಸುಮತಿ ಚಿಕ್ಕಮ್ಮನಿಗಂತೂ ಮನೆಯಲ್ಲಿ ಪ್ರೇತಾತ್ಮವಿರುವ ವಿಷಯ ಸ್ವಲ್ಪವೂ ಗಮನಕ್ಕೆ ಬಂದಿಲ್ಲ. ಚಿಕ್ಕಪ್ಪನಿಗೂ ಸಹ ಪ್ರೇತಾತ್ಮದ ಉಪಟಳದ ಪರಿಚಯವಿಲ್ಲ. ಅವರಿಬ್ಬರೂ ಸಹಜವಾಗಿಯೇ ಬದುಕು ನಡೆಸುಕ್ತಿದ್ದು. ಒಂದು ವೇಳೆ ಚಿಕ್ಕಪ್ಪನ ಮೊದಲನೇ ಹೆಂಡತಿ ಅಂಜಲಿ ಚಿಕ್ಕಮ್ಮ ಈ ಮನೆಯಲ್ಲಿ ಬಾಳಿ ಬದುಕಿದ್ದರೆ. ಅವಳ ಪ್ರೇತಾತ್ಮ ಎಲ್ಲರಿಗೂ ತೊಂದರೆ ಕೊಡಲೇ ಬೇಕಿತ್ತು. ಆದರೆ ಮನೆಯಲ್ಲಿ ಈ ರೀತಿಯ ತೊಂದರೆಯಾಗಲಿ ಪ್ರೇತಾತ್ಮದ ಇರುವಿಕೆಯಲ್ಲಿ ಯಾರ ಅನುಭವಕ್ಕೂ ಬರುತ್ತಿಲ್ಲ. ಹೀಗೇಕೆ...? ನಾನು, ಅಜ್ಜಿ, ಮತ್ತು ಅಂಜಲಿಯ ಈ ಮೂವರಲ್ಲೇ ನಡೆಯುವ ಈ ಪ್ರೇತಾತ್ಮದ ಆಟ ಬೇರೆಯವರಿಗೆ ಏಕೆ ಕಾಣುತ್ತಿಲ್ಲ...? ಹೀಗೆ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹಾಕಿಕೊಂಡು ಸೀದಾ ಅಜ್ಜಿಯ ಬಳಿ ಬಂದೆ...
"ಅಜ್ಜಿ ನಿಜ ಹೇಳು... ಈ ಅಂಜಲಿ ಯಾರು..? ಅವಳು ಚಿಕ್ಕಪ್ಪನ ಮೊದಲನೇ ಹೆಂಡತಿಯಾಗಿರಲು ಸಾಧ್ಯವೇ ಇಲ್ಲ. ಸುಳ್ಳು ವಿಷಯಗಳನ್ನು ನನಗೇಕೆ ಹೇಳಿದೆ. ಚಿಕ್ಕಪ್ಪನಿಗೆ ಎರಡು ಮದುವೆ ಆಗಿಯೇ ಇಲ್ಲ.  ನಡೆದದ್ದು ಒಂದೇ ಮದುವೆ. ಅದೂ ಹೋದ ತಿಂಗಳು ನಡೆದದ್ದು..ನಿಜ  ಹೇಳಜ್ಜಿ ಆ ಪ್ರೇತ ಯಾರು...?  ನೀನೇಕೆ ಸುಳ್ಳು  ಕತೆಯನ್ನೆಲ್ಲಾ ಏಕೆ ಹೇಳುತ್ತಿರುವೆ. ಹೇಳಜ್ಜಿ ಯಾಕೆ ಎಲ್ಲಾ ರಹಸ್ಯವನ್ನು ಮುಚ್ಚಿಡುತ್ತಿರುವೆ...ಹೇಳಜ್ಜಿ, ಪ್ಲೀಸ್"

ನಾನು ಪಟ್ಟು ಬಿಡದೆ ಅಜ್ಜಿಯನ್ನು ಕೇಳಿದೆ

"ನೋಡು ಮೊಮ್ಮಗನೆ...ಈ ಅಂಜಲಿ ಯಾರು...? ಈ ಪ್ರೇತ ಯಾರು ? ಎಂಬ ವಿಷಯ ನಿನಗೆ ಬೇಕಾಗಿಲ್ಲ. ರಜೆ ಕಳೆಯಲು ಬಂದವನು ರಜೆ ಮುಗಿಸಿಕೊಂಡು ಹೋಗು ಅಷ್ಟೆ. ಹೇಗಾದರು ಒಂದು ತಿಂಗಳು ರಜೆಯನ್ನು ಕಳೆದಿದ್ದೀಯಾ ಇನ್ನೊಂದು ತಿಂಗಳಲ್ಲಿ ಮತ್ತೆ ನಿನ್ನ ಕಾಲೇಜು ಪ್ರಾರಂಭವಾಗುತ್ತೆ. ಬಂದವನು ಹಾಗೇ ವಾಪಸ್ಸು ಹೋಗು. ಇಲ್ಲ ಸಲ್ಲದ ವಿಷಯಕ್ಕೆ ತಲೆ ಹಾಕಬೇಡ. ಸುಮತಿ ಚಿಕ್ಕಮ್ಮ ಮತ್ತು ಅನಂತು ಚಿಕ್ಕಪ್ಪ ನೆಮ್ಮದಿಯಾಗಿ ಬದುಕುವುದು ನಿನಗೆ ಇಷ್ಟವಿಲ್ಲವೇ..? ಅಷ್ಟಕ್ಕೂ ಈ ಮನೆಯಲ್ಲಿ ಯಾವ ದೆವ್ವವೂ ಯಾರಿಗೂ ತೊಂದರೆಯನ್ನು ಕೊಡುತ್ತಿಲ್ಲ. ನಿಜ ಹೇಳಬೇಕೆಂದರೆ ಆ ದಿನ ಅಮವಾಸ್ಯೆಯ ರಾತ್ರಿ ದೆವ್ವದ ಸಹವಾಸಕ್ಕೆ ಹೋದವನು ನೀನೇ, ದೆವ್ವ ಇದೆ ಎಂದಾಗಲಿ, ಈ ಮನೆಯಲ್ಲಿ ದೆವ್ವದ ಇರುವಿಕೆಯ ವಿಷಯವಾಗಿ ನಿನ್ನ ಚಿಕ್ಕಪ್ಪನಿಗಾಗಲಿ  ಚಿಕ್ಕಮ್ಮನಿಗಾಗಲಿ ಗೊತ್ತೇ ಇಲ್ಲ. ದೆವ್ವದ ಇರುವಿಕೆ ಕೆಲವರಿಗೆ ಮಾತ್ರ ಕಾಣಿಸುತ್ತೆ ನಿಜ. ಅದು ನಿನಗೆ ಕಂಡಿರಬಹುದು. ನಿನಗೇನೋ ವಿಚಿತ್ರ ಅನುಭವವಾಗಿದೆ ಎಂಬ ಮಾತ್ರಕ್ಕೆ. ಏನೇನೋ ಹೇಳಿ ಇತರರಿಗೆ ಯಾಕೆ ತೊಂದರೆ ಕೊಡುತ್ತೀಯಾ.. ಸುಮತಿಯಾಗಲಿ ಅನಂತುವಾಗಲಿ ದೆವ್ವದ ಬಗ್ಗೆ ಯಾವಾತ್ತಾದರೂ ಮಾತನಾಡಿಕೊಂಡಿದ್ದು ಕೇಳಿಸಿಕೊಂಡಿರುವೆಯಾ...? ಇಲ್ಲ ತಾನೆ..?  ಹಾಗಿದ್ದರೆ ಇಲ್ಲ ಸಲ್ಲದ ವಿಷಯದ ಬಗ್ಗೆ ನೀನು ಯಾಕೆ ತಲೆ ಕೆಡಿಸಿಕೊಂಡಿರುವೆ. ಸುಮ್ಮನೆ ನಾಲ್ಕು ದಿನ ಸಂತೋಷದಿಂದ ಇದ್ದು ಊರಿಗೆ ಹೋಗು.. ಆ ದಿನ ನೀನು ಅಮವಾಸ್ಯೆಯ ರಾತ್ರಿಯಂದು ಕೇಳಿದ ಪ್ರೇತಾತ್ಮದ ಕೂಗಿಗೆ ನನಗೆ ಗಂಟು ಬಿದ್ದು ಕಾರಣ ಕೇಳಿದೆ. ನಾನು ನಿನಗೆ ಏನೋ ಒಂದು ಕತೆ ಹೇಳಿ ಸುಮ್ಮನಾದೆ. ಅದೇ ಸಮಯಕ್ಕೆ ಅಂಜಲಿ ಅನ್ನೋ ಹೆಸರು ನನ್ನ ನೆನಪಿಗೆ ಬಂತು ಅದನ್ನೇ ಕತೆಯಾಗಿ ಹೇಳಿದೆ. ಅರ್ಥವಾಯ್ತಾ.. ಮತ್ತೆ ಈ ವಿಷಯದ ಬಗ್ಗೆ ಯಾರೊಡನೆಯೂ ಚರ್ಚಿಸಲು ಹೋಗಬೇಡ. ತಿಳಿತಾ ಮಗು... ಸರಿ ಇನ್ನು ಮುಂದೆ ನೆಮ್ಮದಿಯಿಂದ ಇರುವುದನ್ನು ಕಲಿ,.."

ಅಜ್ಜಿ ನನ್ನ ತಲೆಯನ್ನು ಪ್ರೀತಿಯಿಂದ ಸವರುತ್ತಲೇ ಹೇಳಿದಳು.

ಅಜ್ಜಿ ಹೇಳಿದ ಮಾತು ಸರಿಯಾಗಿಯೇ ಇತ್ತು. ಯಾರ ಆನುಭವಕ್ಕೂ ಬಾರದ ಪ್ರೇತಾತ್ಮದ ಬಗ್ಗೆ ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅಜ್ಜಿಗೂ ಸಹ ಪ್ರೇತಾತ್ಮ ಇರುವಿಕೆಯ ಅನುಭವವಾಗಿದೆ. ಅಜ್ಜಿ ಸುಮ್ಮನಿಲ್ಲವೇ...  ಅಜ್ಜಿಯಂತೆ ನಾನು ಸುಮ್ಮನೆ ಇದ್ದರಾಯಿತು. ಅಷ್ಟಕ್ಕೂ ಪ್ರೇತಾತ್ಮ ಯಾರಿಗೂ ತೊಂದರೆ ಕೊಡುತ್ತಿಲ್ಲ. ಇನ್ನು ಮುಂದೆ ದೆವ್ವದ ವಿಷಯವನ್ನು ಮನಸ್ಸಿನಿಂದ ತೆಗೆದು ಹಾಕುತ್ತೇನೆ ಎಂದು ನಿರ್ಧರಿಸಿಕೊಂಡೆ. ಮನಸ್ಸು ಹಗುರವಾಯಿತು....

ರಾತ್ರಿ ಊಟಕ್ಕೆಂದು ಮನೆಯೊಳಗಡೆಗೆ ಹೋದೆ. ಚಿಕ್ಕಪ್ಪ ಚಿಕ್ಕಮ್ಮ ಇಬ್ಬರೇ ಏನೋ ಮಾತನಾಡಿಕೊಳ್ಳುವುದು ಕೇಳಿಸಿತು. ಸುಮತಿ ಚಿಕ್ಕಮ್ಮ ಆಡಿದ  ಮಾತು ನನ್ನ ಕಿವಿಗೆ ಸ್ಪಷ್ಟವಾಗಿ ಕೇಳಿಸಿತು.

"ಅಲ್ಲಾರಿ ..!! ನಿಮ್ಮ ಅಣ್ಣನ ಮಗ ಪ್ರಕಾಶ ಇತ್ತೀಚಿಗೆ  ಯಾಕೋ ಸ್ವಲ್ಪ ಹುಚ್ಚು ಹುಚ್ಚಾಗಿ ನಡೆದುಕೊಳ್ಳುತ್ತಿದ್ದಾನೆ, ಅಂತ ಅನಿಸುತ್ತಿಲ್ಲವೇ...? ಅವನಿಗೆ ಈ ಮೊದಲು  ಏನಾದರೂ ತೊಂದರೆ ಇತ್ತಾ...?

"ಹೌದು ಕಣೆ... !! ಇತ್ತೀಚೆಗೆ ನಾನೂ ಸಹ ಅವನನ್ನು ಗಮನಿಸುತ್ತಿದ್ದೇನೆ. ಯಾಕೋ ಹುಚ್ಚನ ತರ ಆಡ್ತಾ ಇದಾನೆ... ಅಣ್ಣ ಇವನ ಬಗ್ಗೆ ಹೆಚ್ಚೇನು ನನಗೆ ಹೇಳಿಲ್ಲ"
 
ಇಷ್ಟು ಹೇಳಿ ಚಿಕ್ಕಪ್ಪ ಮಾತು ನಿಲ್ಲಿಸಿದರು. ಬಹುಷಃ ನನ್ನ ಬರುವಿಕೆ ಅವರ ಗಮನಕ್ಕೆ ಬಂದಿರಬಹುದು. ಅಡುಗೆ ಮನೆಗೆ ಪ್ರವೇಶಿಸುವವರ ನೆರಳು ಬೇಗನೆ ಕಾಣುವುದರಿಂದ  ಅಡುಗೆ ಮನೆಯಲ್ಲಿರುವವರಿಗೆ ತಕ್ಷಣ ಹೊರಗಡೆಯಿಂದ ಬರುವವರ ಬಗ್ಗೆ ತಿಳಿದು ಬಿಡುತ್ತದೆ. ನಾನು ಆ ಮಾತುಗಳನ್ನು ಕೇಳಿಕೊಂಡರೂ ಏನೂ ಕೇಳಿಲ್ಲದಂತೆ  ನಾಟಕವಾಡಿದೆ. ರಾತ್ರಿ ಊಟ ಮುಗಿಸಿ ಮಲಗಿದ್ದಾಗಲೂ ನನಗೆ ಅದೇ ಚಿಂತೆ. ಚಿಕ್ಕಮ್ಮ ಯಾಕೆ ಹಾಗೆ ಹೇಳಿದರು. ನಾನು ಮರೆಯಲು ಯತ್ನಿಸಿದರೂ ಪದೇ ಪದೇ ನನ್ನ ಕಿವಿಯಲ್ಲಿ ಸುಮತಿ ಚಿಕ್ಕಮ್ಮಳ ಮಾತೇ ಕೇಳಿಸುತ್ತಿತ್ತು. ಅಷ್ಟಕ್ಕೂ ನನ್ನಲ್ಲಿ ಅಂತಹ ಯಾವ ಹುಚ್ಚು ನಡತೆಯೂ ಇರಲಿಲ್ಲ. ಹಾಗಾದರೆ ನನ್ನಲ್ಲಿ ಅನರು ಕಂಡದ್ದೇನು..?  ದಿನಾ ಬೆಳಗ್ಗೆ ಎದ್ದು ಸಾಧ್ಯವಾದಷ್ಟು ಎಲ್ಲರಿಗೂ ಸಹಾಯ ಮಾಡುತ್ತೇನೆ. ಎಲ್ಲರೊಂದಿಗೂ ಸಂತೋಷದಿಂದಲೇ ಮಾತನಾಡುತ್ತಾ ಒಂದು ತಿಂಗಳ ರಜೆಯನ್ನು ಕಳೆದಿದ್ದೇನೆ. ತೋಟಕ್ಕೂ ಸಹ ಹೋಗಿ ಚಿಕ್ಕಪ್ಪನ ಕೆಲಸದಲ್ಲಿ ಸಹಾಯ ಮಾಡಿದ್ದೇನೆ. ಇದರಲ್ಲಿ ನನ್ನ ಹುಚ್ಚು ಗುಣ ಯಾವುದು. ನನ್ನ ಯಾವ ನಡತೆಯನ್ನು ಕಂಡು ಚಿಕ್ಕಪ್ಪ ಚಿಕ್ಕಮ್ಮ ನನ್ನನ್ನು ಹುಚ್ಚನೆಂದು ತಿರ್ಮಾನಿಸಿದ್ದಾರೆ. ಹಾಗೇನಾದರೂ ನಾನು ಹುಚ್ಚನಂತೆ ನಡೆದುಕೊಂಡಿದ್ದರೆ ನನಗೆ ತಿಳಿಯುತ್ತಿರಲಿಲ್ಲವೇ, ಅಸಹಜವಾದ ಯಾವ ನಡತೆ ನನ್ನಲ್ಲಿದೆ...? ಹೀಗೆ ನನ್ನಲ್ಲೇ ಹಲವು ಪ್ರಶ್ನೆಗಳು ಮೂಡಲಾರಂಭಿಸಿದವು. ಚಿಕ್ಕಮ್ಮನ ಮಾತುಗಳು ನನ್ನ ಮನಸ್ಸನ್ನು ನೋಯಿಸಿದವು. ಹುಚ್ಚನೆಂಬ ಪಟ್ಟ ಕಟ್ಟಿಕೊಂಡು ಇನ್ನು ಈ ಮನೆಯಲ್ಲಿ ಇರುವುದು ಬೇಡ. ನಾಳೆನೇ ಅಪ್ಪನಿಗೆ ಫೋನ್ ಮಾಡಿ ಊರಿಗೆ ಹೋಗಿ ಬಿಡುತ್ತೇನೆ ಎಂದು ನಿರ್ಧರಿಸಿಕೊಂಡು ಮಲಗಿದೆ..

ಬೆಳಗ್ಗೆ ಏಳುವುದು ತಡವಾಯಿತು. ಸೂರ್ಯನ ಕಿರಣಗಳಲ್ಲಿ ಆಗಲೇ ಪ್ರಖರತೆ ಇತ್ತು. ಬಹುಷಃ ಹತ್ತು ಗಂಟೆಯಾಗಿರಬಹುದು. ಕಣ್ಣೊರೆಸಿಕೊಂಡು ಕೊಠಡಿಯಿಂದ ಹೊರ ಬಂದೆ. ನನಗೊಂದು ಆಶ್ಚರ್ಯ ಕಾದಿತ್ತು. ಹೊರಗಡೆ ಮರದ ಕೆಳಗೆ ಕಾರೊಂದು ನಿಲ್ಲಿಸಲಾಗಿತ್ತು. ಹೌದು ಆ ಕಾರು ಅಪ್ಪನದೇ...!!! ಅಪ್ಪ ಯಾವಾಗ ಊರಿಗೆ ಬಂದರು. ಬಹುಷಃ ಬೆಂಗಳೂರನ್ನು ರಾತ್ರಿಯೇ ಬಿಟ್ಟು ಮುಂಜಾನೆಯೇ ಇಲ್ಲಿಗೆ ಬಂದಿರಬಹುದು. ನನ್ನ ಊಹೆ ಸರಿಯಾಗಿತ್ತು. ಅಪ್ಪ ಮನೆಯ ಹಾಲ್ ನಲ್ಲಿ ಗಂಭೀರವಾಗಿ ಕುಳಿತ್ತಿದ್ದರು. ಚಿಕ್ಕಪ್ಪ ಮೌನವಾಗಿದ್ದರು. ಸುಮತಿ ಚಿಕ್ಕಮ್ಮ ಸಹ ಅಲ್ಲೇ ಇದ್ದರು. ನಾನು ಏಳುವುದನ್ನೇ ಎಲ್ಲರ ಕಾಯುತ್ತಿರುವಂತೆ ಭಾಸವಾಯಿತು. 
"ಅಪ್ಪ ಯಾವಾಗ ಬಂದೆಪ್ಪಾ...?"
ನಾನು ಉತ್ಸಾಹದಿಂದ ಕೇಳಿದೆ.

"ನಿನ್ನ ಲೀಲೆಗಳನ್ನು ಕೇಳಿ.. ಸಾಕಾಯ್ತು, ಅದಕ್ಕೆ ಬಂದೆ ನೋಡಪ್ಪ.. !!  ಏನೋ ಆಯ್ತು ನಿನಗೆ, ಯಾಕೋ ಹುಚ್ಚನ ತರ ಇರ್ತಿಯಂತೆ, ಮನೆಯಲ್ಲಿ ನೀನು ಹೀಗೆ ಇರ್ಲಿಲ್ಲ ಬಿಡು.. ನಿನ್ನ ಬಗ್ಗೆ ಏನೇನೋ ಕೇಳಬೇಕಾಗಿ ಬಂತು. ನಿಜ ಏನೋ...? ಏನಾಯ್ತೋ..? ಹೇಳೋ...?"

ಅಪ್ಪ ಬೇಸರದಿಂದಲೇ ಕೇಳಿದರು. 

ನನಗೆ ಏನು ಮಾತನಾಡಬೇಕೋ ತಿಳಿಯಲಿಲ್ಲ. ನಾನು ಹುಚ್ಚನ ತರ ಆಡ್ತಾ ಇದ್ದೀನ... ಯಾಕೆ ಈ ಅಪವಾದ. ನಾನು ಸಹಜವಾಗಿಯೇ ಇದ್ದೇನೆ, ನೂರಕ್ಕೆ ನೂರು ಸತ್ಯ ಆದರೆ ಚಿಕ್ಕಪ್ಪ ಅಪ್ಪನ ಕಿವಿಯಲ್ಲಿ ನನ್ನ ಮೇಲೆ ಯಾಕೆ ಸುಳ್ಳು ಸುಳ್ಳು ಅಪವಾದಗಳನ್ನು ಹೇಳಿದ್ದಾರೆ. ಇದರಲ್ಲಿ ಏನೋ ಮಸಲತ್ತು ಇದೆ.

"ಇಲ್ಲ ಅಪ್ಪ ಖಂಡಿತವಾಗಿಯೂ ಚಿಕ್ಕಪ್ಪ ಹೇಳಿದಂತೆ ಯಾವುದೇ ಅಸಹಜವಾದ ನಡವಳಿಕೆ ನನ್ನಲ್ಲಿಲ್ಲ. ಮೊದಲು ನನ್ನ ಮೇಲೆ ಸುಳ್ಳು ಅಪವಾದ ಹೊರಿಸಲು ಕಾರಣ ಏನಂತ ಕೇಳಪ್ಪ...? ನಿನ್ನ ಮಗನನ್ನು ನಂಬಪ್ಪ ಅವರು ಹೇಳಿದಂತೆ ನನ್ನ ನಡವಳಿಕೆ ಇಲ್ಲಪ್ಪಾ... ಪ್ಲೀಸ್ ನನ್ನ ನಂಬಪ್ಪಾ...!!"

ಅಪ್ಪನ ಮುಂದೆ ಬೇಡಿಕೊಂಡೆ.

ಅಷ್ಟರಲ್ಲಿ ಚಿಕ್ಕಪ್ಪ ಮಾತು ಮುಂದುವರೆಸಿದರು..

"ಏನು ...!! ನಾವು ಸುಳ್ಳು ಅಪವಾದಗಳನ್ನು ಹೊರಿಸುತ್ತಿದ್ದೇವೆಯೇ...? ಏನಂತ ಮಾತಾಡ್ತಿದ್ದೀಯೋ ಪ್ರಕಾಶ..!! ಮೊನ್ನೆ ಕ್ಷತ್ರಿಯ ಸಮಾಜಕ್ಕೆ ಹೋಗಿ ಚಿಕ್ಕಪ್ಪನ ಮೊದಲ ಹೆಂಡತಿಯ ಬಗ್ಗೆ ಮಾಹಿತಿ ಬೇಕು ಅಂತ ಕೇಳಿದ್ದು ಸುಳ್ಳಾ....? ಪಕ್ಕದ ಮನೆ ರಾಜಣ್ಣನ ಬಳಿ ಈ ಮನೆಯಲ್ಲಿ ಅಂಜಲಿ ಅನ್ನೋ ಹೆಂಗಸು ಚಿಕ್ಕಪ್ಪನ ಜೊತೆ ಇದ್ದಳೇ...? ಎಂದು ಕೇಳಿದ್ದು ಸುಳ್ಳಾ ...?  ಹೇಳೋ...?  ಇದೆಲ್ಲಾ ಅಪವಾದನಾ.. ಅಥವಾ ನೀನು ಮಾಡಿದ್ದನ್ನೇ ಹೇಳಿದ್ದೇನೋ..? ಅಥವಾ ಸುಳ್ಳು ಏನಾದರೂ ಹೇಳುತ್ತಿದ್ದೆನಾ....? ಮಾತಾಡೋ ಅಪ್ಪನ ಮುಂದೆ ಒಪ್ಕೊಳೋ..."

ಚಿಕ್ಕಪ್ಪ ಖಾರವಾಗಿಯೇ ಮಾತನಾಡಿದರು...

"ಹೇಳೋ.... ಚಿಕ್ಕಪ್ಪನ ಮಾತು ನಿಜವೇನೋ...?"

ಅಪ್ಪ ನನ್ನ ನೋಡುತ್ತಾ ನೋಡಿ ಗುಡುಗಿದರು..

ಚಿಕ್ಕಮ್ಮ ಏನು ಸುಮ್ಮನಿರಲಿಲ್ಲ.. ಅವರೂ ಒಂದಿಷ್ಟು ಸೇರಿಸಿದರು.

"ಏನೋ ಪ್ರಕಾಶ ನಾವು ನಿನ್ನ ಮೇಲೆ ನಾವು ಸುಳ್ಳು ಅಪವಾದ ಮಾಡುತ್ತಿದ್ದೆವೆಯಾ.... ಎಷ್ಟೋ ಸಲ ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತಿರುವುದು ನಾನೇನು ನೋಡಿಲ್ವಾ..?  ಒಂದೆರಡು ದಿನ ಹೀಗೆ ಆದ್ರೆ ನಾನು ಹೇಳುತ್ತಿರಲಿಲ್ಲ. ಒಂದು ತಿಂಗಳಿನಿಂದ ನಾನು ನಿನ್ನ ನೋಡುತ್ತಾ ಬಂದಿದ್ದೇನೆ  ಗೊತ್ತಾ..?"

ಚಿಕ್ಕಮ್ಮ ಹಾಗೆ ಹೇಳಿದ ಕೂಡಲೇ

"ನಿಜವೇನೋ...?"

ಅಪ್ಪ ಮತ್ತೆ ಗುಡುಗಿದರು.

ಆದರೆ ಚಿಕ್ಕಮ್ಮನ ಮಾತು ಸುಳ್ಳಾಗಿತ್ತು. ಅಪ್ಪನಿಗೆ ಏನೆಂದು ಉತ್ತರಿಸಬೇಕೋ ತಿಳಿಯಲಿಲ್ಲ. ಸುಮ್ಮನೆ ತಲೆ ತಗ್ಗಿಸಿಕೊಂಡೇ ನಿಂತಿದ್ದೆ.

"ಹೇಳೋ...?"

ಅಪ್ಪ ಮತ್ತೆ ಗುಡುಗಿದರು.

"ಇಲ್ಲಪ್ಪ... ಈ ಮಾತು ಸುಳ್ಳು... ಚಿಕ್ಕಮ್ಮನ ಮಾತು ನಂಬಬೇಡಿ........" 

ನನ್ನ ಮಾತು ಅರ್ಧಕ್ಕೆ ನಿಲ್ಲಿಸಿದೆ. ನನ್ನ ಮೆದುಳಿಗೆ ಏನೋ ಹೊಳೆದಂತಾಯಿತು. ವಿಧ್ಯುತ್ ಸಂಚಾರವಾದಂತಹ ಅನುಭವ...!! ಜ್ಞಾನೋದಯವಾದಂತೆ...!!! ಏನೋ ಹೊಳೆದಂತೆ.....

"ಅಪ್ಪ ಪ್ಲೀಸ್ ಐದು ನಿಮಿಷ ಟೈಮ್ ಕೊಡಿ.. ಸ್ವಲ್ಪ ನನ್ನ ರೂಮಿಗೆ ಹೋಗಿ ಬರುತ್ತೇನೆ...!!"

ಅಷ್ಟು ಹೇಳಿ ಅಪ್ಪನ ಪರ್ಮಿಶನ್ ಗೂ ಕಾಯದೇ ತಕ್ಷಣ ಅಲ್ಲಿಂದ ಓಡಿದೆ. 
ರೂಮ್ ನಲ್ಲಿದ್ದ ನನ್ನ ಬ್ಯಾಗ್ ನ್ನು ತೆಗೆದು ಕೊಂಡು ಏನೋ ಹುಡುಕಾಡಿದೆ.. ಸಿಕ್ಕಿತು..!!  ನಾನು ಅಂದು ಮಡಿಸಿಟ್ಟ ಪೇಪರ್, ಆ ಪೇಪರ್ ತೆಗೆದುಕೊಂಡು ಕುತೂಹಲದಿಂದ ನೋಡಿದೆ. ಅದರಲ್ಲಿ ನಾನೇ ಬಿಡಿಸಿದ ಡ್ರಾಯಿಂಗ್.... ಹೌದು ಅಮವಾಸ್ಯೆಯ ರಾತ್ರಿ ಕಂಡ ಪ್ರೇತಾತ್ಮದ ಚಿತ್ರ. ಅಂದು ಅರ್ಧಕ್ಕೆ ನಿಲ್ಲಿಸಿದ್ದೆ. ತಕ್ಷಣ ಪೆನ್ಸಿಲ್ ತೆಗೆದುಕೊಂಡು ಉಳಿದ ಚಿತ್ರ ಬಿಡಿಸಲಾರಂಬಿಸಿದೆ. ಅಂದಿನಿಂದ ಪರಿಚಿತ ಮುಖ... ಪರಿಚಿತ ಮುಖ.. ಅಂತ ಹಲವು ಬಾರಿ ತಲೆ ಕೆಡಿಸಿಕೊಂಡಿದ್ದು ಇಂದು ಫಲ ನೀಡಿತು. ಇಂದು ಆ ದೆವ್ವದ ಸಂಪೂರ್ಣವಾದ ಚಿತ್ರಣವನ್ನು ನನ್ನ ಮೆದುಳು ಗ್ರಹಿಸಿತು.   ಚಿತ್ರವನ್ನು ಪೂರ್ಣವಾದ ನಂತರ ಎರೆಡೆರಡು ಬಾರಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ..  ಹೌದು ಅದೇ ದೆವ್ವ, ಆ ರಾತ್ರಿ ಕಂಡಂತೆಯೇ...!!! ಪರಿಚಿತ ಮುಖವೇ...!!! ಅಂದು ನಾನು ಊಹಿಸಿದ್ದು ಸುಳ್ಳಾಗಲಿಲ್ಲ. 
ಆ ದೆವ್ವ ಇವಳಾ...!!!? ಒಂದು ಕ್ಷಣ ಸಿಡಿಲು ಬಡಿದಂತಾಯಿತು. 

(ಮುಂದುವರೆಯುವುದು)

No comments:

Post a Comment