Monday, 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-4)

ಪ್ರೇತಾತ್ಮದ ಮನೆಯಲ್ಲಿ (ಭಾಗ-4)


ಆ ಚಿತ್ರವನ್ನು ನೋಡಿದ ಕೂಡಲೇ ನನ್ನ ಕಣ್ಣುಗಳು ನನ್ನನ್ನೇ ನಂಬದಾದವು. ಚಿತ್ರದಲ್ಲಿಯ ಕೋರೆ ಹಲ್ಲನ್ನು ಅಳಿಸಿ ನೀಟಾಗಿ ಮತ್ತೆ ಬಿಡಿಸಿದೆ. ಹೌದು ಅವಳೇ..!! ನಾನು ದಿನ ನಿತ್ಯ ನೋಡಿ ಮಾತನಾಡಿಸುತ್ತಿದ್ದವಳು.
ಹೌದು ಅದೇ ಅಜ್ಜಿ....!!!
ದಿನವೂ ಬಂದು ನನ್ನ ಪ್ರೀತಿಯ ಮೊಮ್ಮಗ ಎಂದು ಮಾತನಾಡಿಸುತ್ತಿದ್ದವಳು. ಇಷ್ಟು ದಿನ ನಾನು ಮಾತನಾಡುತ್ತಿದುದು ಅಜ್ಜಿಯ ಪ್ರೇತಾತ್ಮದ ಜೊತೆಗೇ...? ನನ್ನ ಕಾಲುಗಳು ನಡುಗಲು ಪ್ರಾರಂಬಿಸಿದವು.
ಅಜ್ಜಿ ಯಾವಾಗ ಸತ್ತು ಹೋದಳು..? ಈ ವಿಷಯ ಅಪ್ಪ  ನನಗೇಕೆ ತಿಳಿಸಲಿಲ್ಲ...? ಅಥವಾ ನನ್ನ ಬಳಿ ಹೇಳಿಕೊಳ್ಳಲಾಗದಂತಹ ಘಟನೆ ಏನಾದರೂ ನಡೆಯಿತೆ... ಹೀಗೆ ಹಲವು ಪ್ರಶ್ನೆಗಳು ಮನದಲ್ಲಿ ಮೂಡಲಾರಂಬಿಸಿದವು.
ತಕ್ಷಣ ಆ ಚಿತ್ರವನ್ನು ಮತ್ತೆ ಬ್ಯಾಗಲ್ಲೇ ಇಟ್ಟು ಬೇಗನೇ ನನ್ನ ಕೊಠಡಿಯಿಂದ ಕೆಳಗಿಳಿದು ಬಂದೆ. ಅಪ್ಪ, ಚಿಕ್ಕಮ್ಮ ಚಿಕ್ಕಪ್ಪ ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು. ಆದರೆ ನನ್ನ ಕಣ್ಣುಗಳು ಅಜ್ಜಿಯನ್ನು ಹುಡುಕುತ್ತಿದ್ದವು. ಅಜ್ಜಿ ಎಲ್ಲಿಯೂ ಕಾಣಲಿಲ್ಲ. ನಾನು ದಿನ ನಿತ್ಯ ಅಜ್ಜಿಯನ್ನು ಮಾತನಾಡುತ್ತಿದ್ದ ಮನೆಯ ಜಗುಲಿಯನ್ನು ಸಹ ನೋಡಿಕೊಂಡು ಬಂದೆ ಅಜ್ಜಿ ಅಲ್ಲಿಯೂ ಇರಲಿಲ್ಲ. ಮನೆಯ ಸುತ್ತಲೂ ಕಣ್ಣಾಯಿಸಿದೆ ಅಜ್ಜಿ ಎಲ್ಲಿಯೂ ಕಾಣಲಿಲ್ಲ. ನನ್ನ ಈ ನಡತೆ ಚಿಕ್ಕಪ್ಪನಿಗೆ ವಿಚಿತ್ರವಾಗಿ ಕಂಡಿರಬೇಕು.

"ನೋಡಣ್ಣ... ನಮ್ಮೆಲ್ಲರ ಕಣ್ಣ ಮುಂದೆನೇ ಹೇಗೆ ಆಡ್ತಾ ಇದಾನೆ ಹುಚ್ಚನ ತರ..!! ನಾವೆಲ್ಲಾ ಹಿರಿಯರು ಮಾತನಾಡುತ್ತಿರುವಾಗ ಅರ್ದಕ್ಕೆ ನಿಲ್ಲಿಸಿ, ತಕ್ಷಣ ತನ್ನ ಕೊಠಡಿಗೆ ಓಡಿ ಹೋದ. ಮತ್ತೆ ಕೆಳಗೆ ಬಂದವನೆ ಏನೋ ಕಳಕೊಂಡವನಂತೆ ಅಲ್ಲಿ ಇಲ್ಲಿ ಹುಡುಕಿದ. ಊರಿಂದ ಅಪ್ಪ ಬಂದಿದ್ದಾರೆ  ನನ್ನ ಕರೆದು ಏನೋ ಮಾತಾಡ್ತಾ ಇದಾರೆ. ಹಿರಿಯರಿಗೆ ಗೌರವ ಕೊಡಬೇಕು ಅನ್ನೋ ಕಾಮನ್ ಸೆನ್ಸ್ ಸಹ ಅವನಿಗಿಲ್ಲ. ಸುಮ್ಮನೆ ಡಿಗ್ರಿ ಬೇರೆ ಓದ್ತಾ ಇದಾನೆ.. ನೀನೆ ನೋಡಣ್ಣ ಅವನ ನಡತೆಯನ್ನ... ನಾವೆನೋ ಅವನ ಮೇಲೆ ಅಪವಾದ ಮಾಡುತ್ತಿದ್ದೇವೆ, ಹುಚ್ಚ ಅನ್ನೋ ಪಟ್ಟ ಕಟ್ಟುತ್ತಿದ್ದೇವೆ. ಅಂತ ತಪ್ಪಾಗಿ ತಿಳಿದು ಕೊಂಡಿದ್ದಾನೆ. ನಾವು ಹೇಳ್ತಾ ಇರೋದೆಲ್ಲಾ ಸುಳ್ಳು. ತಾನೇ ಬುದ್ದಿವಂತ ಅನ್ನೋ ಭ್ರಮೆ ಅವನಿಗೆ, ನೀನೆ ನೋಡಣ್ಣ.. ಬರಿ ಒಂದೆರಡು ಘಳಿಗೆಯಲ್ಲೇ ಇಷ್ಟೆಲ್ಲಾ ಹುಚ್ಚನ ತರ ಆಡುವಾಗ, ಇನ್ನು ಒಂದು ತಿಂಗಳಿನಿಂದ ನಾವು ಎಷ್ಟೆಲ್ಲಾ ಇವನ ಹುಚ್ಚತನವನ್ನು ನೋಡಿಲ್ಲ..."

ಚಿಕ್ಕಪ್ಪ ಅಪ್ಪನಿಗೆ ಮತ್ತಷ್ಟು ದೂರನ್ನು ಹೇಳಿದರು.

ಚಿಕ್ಕಪ್ಪನ ನಂತರ ಸುಮತಿ ಚಿಕ್ಕಮ್ಮ ಸಹ ನನ್ನ ದೂರಲಾರಂಬಿಸಿದರು. 

"ನಾನು ಮದುವೆಯಾಗಿ ಮನೆಗೆ ಬಂದಾಗಿನಿಂದಲೂ ಇವನನ್ನು ನೋಡುತ್ತಿದ್ದೇನೆ. ಮನೆಯ ಹೊರಗಡೆ ಜಗುಲಿಯ ಹತ್ತಿರ ಒಬ್ಬನೇ ಮಾತಾಡ್ತಾ ಇರ್ತಾನೆ.. ಕೆಲವೊಂದು ಸಲ ನಾನು ಅಡಿಗೆ ಮನೆಯಲ್ಲಿ ಇರುವಾಗ ನನ್ನ ಹತ್ತಿರ ಬಂದು ಚಿಕ್ಕಮ್ಮ ಅಜ್ಜಿಗೆ ಊಟ ಬೇಕಂತೆ ಅಂತ ಹೇಳ್ತಾನೆ. ನಾನು ನಮ್ಮ ಮನೆಯ  ಕೆಲಸದಾಕೆ ಮಾಯಜ್ಜಿಗೆ ಊಟ ಕೊಡಲು ಹೋದರೆ. ಅವಳು ನಾನು ಊಟಾನೇ ಕೇಳಿಲ್ಲಮ್ಮ. ಪ್ರಕಾಶ ನಿಮಗೆ ತಮಾಷೆ ಮಾಡಿರಬೇಕು ಅಂತಾಳೆ. ಮಾಯಜ್ಜಿಯು ತೋಟಕ್ಕೆ ಕೆಲಸಕ್ಕೆ ಅಂತ ಹೋದಾಗ ಸುಮ್ ಸುಮ್ಮನೆ ಅಜ್ಜಿ ಬಂದ್ಳು ಅಂತ ಜಗುಲಿ ಕಟ್ಟೆ ಹತ್ರ ಓಡ್ತಾನೆ... ಇವನ ಹುಚ್ಚಾಟ ಒಂದೇ ...ಎರಡೇ...!!! ನಾನು ಹೊಸದಾಗಿ ಈ ಮನೆಗೆ ಸೊಸೆಯಾಗಿ ಬಂದವಳು. ಇವನ ಈ ನಡತೆಯ ಬಗ್ಗೆ ಹೇಳ ಬೇಕೋ ಬೇಡವೋ ಅಂತ ಸಾಕಷ್ಟು ಸಲ ನಾನೇ ಹಿಂದೇಟು ಹಾಕಿದ್ದೇನೆ. ಅವನ ಹಿತದೃಷ್ಟಿಯಿಂದ ನಾನು ಇವನ ಹುಚ್ಚಾಟದ ಬಗ್ಗೆ  ಹೇಳಲೇ ಬೇಕಾಯಿತು.."

ಸುಮತಿ ಚಿಕ್ಕಮ್ಮ ಹಾಗೆ ಹೇಳುತ್ತಿರುವಾಗ ಅಪ್ಪ ಗಂಭೀರವಾಗಿ ಕೇಳಿಸಿಕೊಂಡರು...

ಚಿಕ್ಕಮ್ಮನ ಮಾತು ಕೇಳಿದ ಕೂಡಲೆ ನನ್ನ ಹುಚ್ಚಾಟದ  ವಿಷಯಗಳು ಗಮನಕ್ಕೆ ಬರಲಾರಂಬಿಸಿತು.  ಮನೆಯಲ್ಲಿ ಅಜ್ಜಿಯ ಪ್ರೇತಾತ್ಮದ ಇರುವಿಕೆಯೇನಾದರೂ ಇವರ ಗಮನಕ್ಕೆ ಬಂದಿದ್ದರೆ ನನ್ನನ್ನು ಇವರು ಹುಚ್ಚನೆಂದು ಕರೆಯಲು ಸಾಧ್ಯವೇ ಇರಲಿಲ್ಲ. ಆದರೆ ಅಜ್ಜಿಯ ಪ್ರೇತಾತ್ಮ ನನ್ನ ಜೊತೆ ಮಾತ್ರ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದೆ. ಹೆತ್ತ ಮಕ್ಕಳೇ ಇಬ್ಬರಿರುವಾಗ ಅವರೊಡನೆ ಬಿಟ್ಟು ನನ್ನ  ಜೊತೆ ಈ ಪ್ರೇತಾತ್ಮ ಕಾಣಿಸಿಕೊಳ್ಳುವುದು ನನಗೆ ಭಯದ ಜೊತೆಗೆ ಆಶ್ಚರ್ಯವನ್ನುಂಟು ಮಾಡಿತು. ಅಜ್ಜಿ ನನ್ನ ಜೊತೆ ಮಾತ್ರ ಮಾತನಾಡುತ್ತಿರುವುದಾದರೂ ಏಕೆ .. ?!! ಏನೋ ರಹಸ್ಯ ಇರಲೇ ಬೇಕು...!! ಇಷ್ಟೆಲ್ಲಾ ನಡೆದ ಮೇಲೆ  ಮನೆಯವರೆಲ್ಲಾ ನನ್ನನ್ನು ಹುಚ್ಚನೆಂದು ಇವರು ಗ್ರಹಿಸಿದ್ದು ತಪ್ಪೇನಿಲ್ಲ.! ನಿಜ ಹೇಳ ಬೇಕೆಂದರೆ ಅಜ್ಜಿ ಸತ್ತು ಹೋದ ವಿಷಯವೇ ನನಗೆ ಗೊತ್ತಿಲ್ಲ. ಯಾರೂ ಸಹ ನನಗೆ ಈ ಬಗ್ಗೆ ಹೇಳಿಲ್ಲ. ಅಥವಾ ಅಜ್ಜಿಯ ಫೋಟೋಗೆ ಹೂವಿನ ಹಾರ ಹಾಕಿ ಗೊಡೆಗೆ ನೇತು ಹಾಕಿದ ಯಾವ ಫೋಟೊ ಸಹ ಮನೆಯಲ್ಲಿಲ್ಲ. ಹೀಗಿರುವಾಗ ನನಗೆ ತಿಳಿಯುವುದಾದರೂ ಹೇಗೆ. ಆದರೆ ಅಜ್ಜಿ ಮಾತ್ರ ಪ್ರೇತಾತ್ಮವಾಗಿ ಇನ್ನೂ ಮನೆಯಲ್ಲಿ ಅಲೆಯುತ್ತಿರುವುದು ಮಾತ್ರ ಆಶ್ಚರ್ಯ. ಅದೂ ನನಗೊಬ್ಬನಿಗೆ ಕಾಣಿಸುವಂತೆ ಮಾತ್ರ. ಅಜ್ಜಿಯ ಸಾವಿನಲ್ಲಿ ಏನಾದರೂ ರಹಸ್ಯವಿದೆಯೇ.. ಹೀಗೆ ಯೋಚಿಸುತ್ತಿರುವಾಗಲೇ ಅಪ್ಪ ಮತ್ತೆ ಮಾತನಾಡಿದರು..

"ಏನೋ... ಚಿಕ್ಕಮ್ಮ ಚಿಕ್ಕಪ್ಪ ಹೇಳುತ್ತಿರುವುದು ನಿಜವೇನೋ... ಹುಚ್ಚನ ತರ ಆಡ್ತಿದ್ದಿಯಲ್ಲೋ ನಾನೇ ಈಗ  ಕಣ್ಣಾರೆ ಕಂಡಿದ್ದೇನೆ..  ಯಾಕೋ ಹೀಗೆ ಮಾಡ್ತಾ ಇದ್ದೀಯಾ ಸುಮಾರು ಹದಿನೈದು ದಿನದಿಂದಲೂ ನಿನ್ನ ನಡತೆಯ ಬಗ್ಗೆ ಚಿಕ್ಕಪ್ಪ ನನಗೆ ಫೋನಲ್ಲಿ ಹೇಳ್ತಾನೆ ಬಂದಿದ್ದಾರೆ. ನಾನು ಮೊದ ಮೊದಲು ನಂಬಲಿಲ್ಲ. ಆದರೆ ಕಣ್ಣಾರೆ ಕಂಡ ಮೇಲೆ ತುಂಬಾ ಬೇಸರವಾಯಿತು.... ಹೇಳೊ ಏನಾಯ್ತೋ..?"

ಅಪ್ಪನ ಮಾತಿನಲ್ಲಿ ವಿಷಾದವಿತ್ತು..

"ಹೌದಪ್ಪ... ಚಿಕ್ಕಮ್ಮ ಚಿಕ್ಕಪ್ಪ ಹೇಳುತ್ತಿರುವುದು ನಿಜವೆ. ನನಗೂ ಏನೂ ಸರಿಯಾಗಿ ಗೊತ್ತಿಲ್ಲಪ್ಪ. ಇಲ್ಲಿಗೆ ಬಂದ ಮೇಲೆ ನಾನು ಮೆದುಳಿನ ಮೇಲೆ ಹಿಡಿತ ಕಳಕೊಂಡಿದ್ದೇನೆಂದು ನನಗೂ ಆಗಾಗ ಬಾಸವಾಗುತ್ತಿದೆ... ಒಂದೊಂದು ಸಲ ನಾನು ಹೇಗೆ ನಡೆದುಕೊಳ್ಳುತ್ತಿದ್ದೇನೆ ಎಂಬುದು ಸಹ ನನ್ನ ಗಮನಕ್ಕೆ ಬಾರದಂತಾಗಿದೆ... ನನಗೇನೋ ಆಗಿಬಿಟ್ಟಿದೆಯಪ್ಪಾ....!!

ನಾನು ದೈನ್ಯದಿಂದಲೇ ಹೇಳಿದೆ.

ನಾನು ನನ್ನ ಮೇಲಿನ ಅಪವಾದಗಳನ್ನು ಒಪ್ಪಿಕೊಂಡೆ. ಆದರೆ ಅಜ್ಜಿಯ ಪ್ರೇತಾತ್ಮದ ವಿಷಯ ಅಪ್ಪನಿಗೆ ಹೇಳಲು ನನಗೆ ಮನಸ್ಸಾಗಲಿಲ್ಲ. ಅಜ್ಜಿಯ ಸಾವಿನ ಸುದ್ಧಿಯೇ ಇವರು ರಹಸ್ಯವಾಗಿ ಇಟ್ಟಿರುವಾಗ. ಇನ್ನು ಅಜ್ಜಿಯ ಪ್ರೇತಾತ್ಮದ ವಿಷಯ ನಾನು ಹೇಗೆ ಹೇಳುವುದು. ಮೊದಲು ಈ ರಹಸ್ಯವನ್ನು ಬೇಧಿಸಬೇಕು. ಆಮೇಲೆ ಎಲ್ಲಾ ವಿಷಯವನ್ನು ಹೇಳಿದರಾಯಿತು ಎಂದುಕೊಂಡು ಎಲ್ಲರ ಮುಂದೆ ಹುಚ್ಚನೆಂದು ಒಪ್ಪಿಕೊಂಡೆ. ನನಗೆ ಬೇರೆ ದಾರಿಯೂ ಇರಲಿಲ್ಲ. 

ಅಪ್ಪ ಎಲ್ಲರನ್ನೂ ಕಾರಿನಲ್ಲಿ ಕರೆದುಕೊಂಡು ಹೋದರು. ಎಲ್ಲಿ ಅಂತ ಹೇಳಲಿಲ್ಲ. ಕಾರು ಶಿವಮೊಗ್ಗದ ಕಡೆಗೆ ಚಲಿಸಿತು. ಅಪ್ಪ ಕಾರನ್ನು ಮಾನಸಿಕ ಆಸ್ಪತ್ರೆಯೊಂದರ ಮುಂದೆ ನಿಲ್ಲಿಸಿದಾಗಲೇ ನನಗೆ ಗೊತ್ತಾಗಿದ್ದು ಅಪ್ಪ ನನ್ನ ಹುಚ್ಚುತನಕ್ಕೆ ಟ್ರೀಟ್ ಮೆಂಟ್ ಕೊಡಿಸಲಿದ್ದಾರೆ. ಇರುವ ಒಬ್ಬ ಮಗ ಹೀಗಾದನಲ್ಲ ಅಂತ ಅಪ್ಪ ಬಹಳ ವಿಷಾದದಿಂದ ಕಣ್ಣು ತುಂಬಿಕೊಂಡರು. 
ಆಸ್ಪತ್ರೆಯ ಒಳಗೆ ಹೋದೆವು. ಪ್ರಖ್ಯಾತ ಸೈಕಿಯಾಟಿಸ್ಟ್ ಆನಂದ್ ಪೈ ಅಂತ. ಹಲವು ಮಾನಸಿಕ ರೋಗಗಳನ್ನು ಗುಣ ಪಡಿಸಿದ್ದಾರೆ. ಅವರ ಕ್ಯಾಬಿನ್ ಒಳಗೆ ಒಬ್ಬೊಬ್ಬರಾಗಿ ಹೋದರು. ಮೊದಲು ಅಪ್ಪ ಹೋದರು. ಹದಿನೈದು ನಿಮಿಷದ ನಂತರ ಹೊರ ಬಂದರು. ನಂತರ ಚಿಕ್ಕಪ್ಪ ಹೋದರು. ತದ ನಂತರ ಚಿಕ್ಕಮ್ಮನ ಜೊತೆ ಕೌನ್ಸೆಲಿಂಗ್ ನಡೆಯಿತು. ನಂತರ ನನ್ನನ್ನು ಕರೆದರು. ನಾನು ಒಬ್ಬನೇ ಒಳ ಹೋದೆ. ನನ್ನನ್ನು ನಗುತ್ತಾ ಬರಮಾಡಿಕೊಂಡರು. ಹಲವು ಪ್ರಶ್ನೆಗಳನ್ನೂ ಕೇಳಿದರು..

"ಮನೆಯವರೆಲ್ಲಾ ನಿನ್ನ ಬುದ್ಧಿವಂತ ಅಂತ ತಿಳ್ಕೊಂಡಿದ್ದಾರೆ. ಆದರೆ ನೀನು ಸ್ವಲ್ಪ ಮಾನಸಿಕವಾಗಿ ಬಳಲಿದ್ದರಿಂದ ಈ ಚಿಕಿತ್ಸೆ ಅಷ್ಟೆ" 

ಎಂದು ನಗುತ್ತಲೇ ಹೇಳಿದರು.

"ಇಲ್ಲ ಸರ್... ಒಂದು ತಿಂಗಳಿಂದ ನನ್ನ ನಡವಳಿಕೆ ಹುಚ್ಚನ ರೀತಿಯಲ್ಲಿದೆ. ಮನೆಯವರೆಲ್ಲರೂ ಹೇಳಿದ್ದು ಸರಿಯಾಗಿದೆ. ಅದರಲ್ಲಿ ಮುಚ್ಚು ಮರೆ ಏನೂ ಇಲ್ಲ..."
ನಾನು ಒಪ್ಪಿಕೊಂಡೆ.

"ಹಾಗಾದರೆ...ಜನ ಏನೇ ಹೇಳಲಿ, ಮನೆಯವರೆಲ್ಲಾ ಏನೇ ಹೇಳಲಿ, ನಿನ್ನ ಮಟ್ಟಿಗೆ ನೀನು ಹುಚ್ಚನೆಂದು ಒಪ್ಪಿಕೊಳ್ಳುವೆಯಾ...?"

ಮತ್ತೆ ಪ್ರಶ್ನಿಸಿದರು.

"ನನ್ನ ಮಟ್ಟಿಗೆ ಯೋಚಿಸುವುದಾದರೆ ನಾನು ನೂರಕ್ಕೆ ನೂರರಷ್ಟು ಸರಿಯಾಗಿದ್ದೇನೆ. ಆದರೆ ಬಾಹ್ಯ ನೋಟಕ್ಕೆ ನನ್ನ ನಡವಳಿಕೆ ಅನುಮಾನ ಹುಟ್ಟಿಸುತ್ತದೆ. ವೈಜ್ಞಾನಿಕವಾಗಿಯೇ ಚಿಂತಿಸುವ ನಿಮಗೆ ನನ್ನ ನಡವಳಿಕೆಯ ಕಾರಣ ಹೇಳಿದರೆ ನೀವು ಮತ್ತೆ ನನ್ನನ್ನು ಹುಚ್ಚನೆಂದೇ ತೀರ್ಮಾನಿಸುತ್ತೀರಿ"

"ನಾನು ವೈಜ್ಞಾನಿಕವಾಗಿ ಚಿಂತಿಸುವ ವೈದ್ಯನಲ್ಲ ಅಂತ ಇಡ್ಕೋ...ಆಗ"

"ನೀವು ನಾನು ಹೇಳುವ ವಿಷಯ ಯಾರಿಗೂ ಹೇಳುವುದಿಲ್ಲ ಎಂಬ ಭರವಸೆ ಕೊಟ್ಟರೆ ಮಾತ್ರ ಹೇಳುತ್ತೇನೆ"

"ಖಂಡಿತ"

"ನೀವು ಭೂತ ಪ್ರೇತಗಳನ್ನು ನಂಬ್ತೀರಾ..."

"ಹೌದು.... ವಿಜ್ಞಾನಕ್ಕೆ ನಿಲುಕದ ಎಷ್ಟೋ ವಿಷಯಗಳಿವೆ. ನಮ್ಮ ಮಾನಸಿಕ ಆಸ್ಪತ್ರೆ ನಡೆಯುತ್ತಿರುವುದೇ ನಂಬಿಕೆಯ ಆಧಾರದ ಮೇಲೆ. ಇಲ್ಲಿಗೆ ಬರುವ ರೋಗಿಗಳು  ಶೇಕಡ 80% ರಷ್ಟು ಜನ ಭೂತ ಪ್ರೇತದ ಪ್ರಭಾವದವರೆ.... ಅವರನ್ನು ಆ ಆಧಾರದ ಮೇಲೆಯೇ ಸಮಸ್ಯೆ ಬಗೆಹರಿಸಲಾಗುತ್ತದೆ"

ವೈದ್ಯರು ಹಾಗೆ ಹೇಳಿದ ಮೇಲೆ ನಾನು ಎಲ್ಲಾ ವಿಷಯವನ್ನು ಹೇಳಿದೆ. ಅಜ್ಜಿ ಪ್ರೇತವಾಗಿ ಮನೆಯಲ್ಲಿ ವಾಸವಾಗಿದ್ದು. ನನ್ನ ಹುಚ್ಚತನಕ್ಕೆ ಕಾರಣವಾದ ವಿಷಯ ಆ  ಎಲ್ಲಾ ಹೇಳಿದೆ. ನನ್ನ ಮಾತು ಕೇಳಿದ ವೈದ್ಯರು ಬೆವರಲಾರಂಭಿಸಿದರು. 

"ಭೂತ ಪ್ರೇತವನ್ನು ಕಾಣದೇ ಭಯ ಪಟ್ಟ ಮಾನಸಿಕ ರೋಗಿಗಳನ್ನು ಸಾಕಷ್ಟು ನೋಡಿದ್ದೇನೆ. ಆದರೆ ಕಾಲೇಜು ಓದುತ್ತಿರುವ ಹುಡುಗನೊಬ್ಬನಿಗೆ ಈ ರೀತಿಯ ಅನುಭವವಾಗಿರುವುದು ಇದು ಮೊದಲು"

 ಅಂತ ಹೇಳಿ ರುದ್ರಾ ಶಾಸ್ತ್ರಿ ಎಂಬ ಮಂತ್ರವಾದಿಯ ವಿಳಾಸ ನೀಡಿದರು. ಅವರನ್ನು ಬೇಟಿಯಾಗುವಂತೆ ಸಲಹೆ ನೀಡಿದರು.

ನಂತರ ಎಲ್ಲರನ್ನೂ ಒಳಗೆ ಕರೆಯಿಸಿದರು.

"ನಿಮ್ಮ ಮಗನಿಗೆ ಯಾವ ಸಮಸ್ಯೆಯೂ ಇಲ್ಲ. ಹೆದರುವ ಅವಶ್ಯಕವಿಲ್ಲ. ಇನ್ನು ಮುಂದೆ ಈ ರೀತಿಯ ನಡವಳಿಕೆಯನ್ನು ನೀವು ನಿಮ್ಮ ಮಗನಲ್ಲಿ ಕಾಣಲಾರಿರಿ. ಇದು ನನ್ನ ಭರವಸೆ" 

 ವೈದ್ಯರು ನನ್ನ ಪರವಾಗಿ ಅಪ್ಪನಿಗೆ ಭರವಸೆ ನೀಡಿದರು. 

ವೈದ್ಯರಿಂದ ಭರವಸೆ ಪಡೆದ ಅಪ್ಪ ನನ್ನನ್ನು ಮತ್ತೆ ಚಿಕ್ಕಪ್ಪನ ಮನೆಯಲ್ಲಿ ಬಿಟ್ಟು ಊರಿಗೆ ಹೋದರು. 

ನಾಳೆ ಅಮವಾಸ್ಯೆ...

ಅಜ್ಜಿಯನ್ನು ನೋಡಲೇ ಬೇಕಿತ್ತು. ಅದಕ್ಕೂ ಮೊದಲು ರುದ್ರಾ ಶಾಸ್ತ್ರಿಗಳನ್ನು ಬೇಟಿಯಾಗಲು ಹೊನ್ನಾಳಿಗೆ ಹೋದೆ . ಶಾಸ್ತ್ರಿಗಳು ಕಾವಿ ಬಟ್ಟೆ ತೊಟ್ಟಿದ್ದರು. ಹಣೆಯಲ್ಲಿ ದೊಡ್ಡದಾದ ಕೆಂಪು ಕುಂಕುಮ ಇಟ್ಟುಕೊಂಡಿದ್ದರು ಹೋಮ ಕುಂಡವನ್ನು ನಿರ್ಮಿಸಿ ಕುಳಿತ್ತಿದ್ದರು. ಅವರ ಪಕ್ಕದಲ್ಲಿ ಹರಿಶಿಣ ಕುಂಕುಮದಲ್ಲಿ ಚೌಕವನ್ನು ನಿರ್ಮಿಸಿದ್ದರು. ಚೌಕದ ಮೇಲೆ ಮಾನವನ ತಲೆ ಎಲುಬಿನ ಬುರುಡೆ. ಪಕ್ಕದಲ್ಲಿ ಮಾನವನ ಕೈಯ ಎರಡು ಮೂಳೆಗಳು ಪ್ಲಸ್ ಆಕಾರದಲ್ಲಿ ಇಟ್ಟಿದ್ದರು. ರುದ್ರಾ ಶಾಸ್ತ್ರಿಗಳು ಹೆಸರಿಗೆ ತಕ್ಕಂತೆಯೇ ಭಯಾನಕವಾಗಿ ಕಾಣುತ್ತಿದ್ದರು. ಬಾಗಿಲಲ್ಲೇ ನಿಂತು ಎಲ್ಲವನ್ನೂ ನೋಡಿದೆ. ಒಳಗಿರುವ ವ್ಯಕ್ತಿ ಹೊರ ಬರುವವರೆಗೂ ಕಾದು, ಅವರು ಬಂದ ಕೊಡಲೇ ಇನ್ನೇನು ನಾನು ಪ್ರವೇಶಿಸ ಬೇಕು ಎನ್ನುವಷ್ಟರಲ್ಲಿ ರುದ್ರಾ ಶಾಸ್ತ್ರಿಗಳ ಮೈ ಒಮ್ಮೆ ಜೋರಾಗಿ ಕಂಪಿಸಿತು. 

ಕೂಡಲೇ ಮುಚ್ಚಿದ ಕಣ್ಣು ತೆರೆದು

"ಅಲ್ಲೇ ನಿಂತ್ಕೋ....!!!"

ಎಂದು ಭಯಂಕರವಾಗಿ ಘರ್ಜಿಸಿದರು. 

ನನ್ನ ಕಣ್ಣ ಮುಂದೆಯೇ ಹಲವಾರು ಜನ ಹೋಗಿ ಬಂದರು. ನನ್ನನ್ನೇಕೆ ತಡೆದರು. ನನಗೆ ಅರ್ಥವೇ ಆಗಲಿಲ್ಲ. ಅವರ ಘರ್ಜನೆಯ ಶಬ್ದಕ್ಕೆ ಅವರ ಬಳಿ ಕೆಲಸ ಮಾಡುವ ಖಾವಿ ವಸ್ತ್ರಧಾರಿಯ ಶಿಷ್ಯರೆಲ್ಲಾ ಒಮ್ಮೆಲೇ ನನ್ಮ ಬಳಿ ಬಂದು ನಿಂತರು. ಇಬ್ಬರು ದ್ವಾರಪಾಲಕರಂತೆ ನಾನು ಒಳ ಹೋಗಲು ಅಡ್ಡವಾಗಿ ನಿಂತರು. ಇನ್ನಿಬ್ಬರು ತಕ್ಷಣ ನನ್ನ ಕೈಯನ್ನು ಹಿಡಿದರು. ನನ್ನ ಬಳಿ ಗಲ್ಲಿಗೇರಿಸುವ ಅಪರಾಧಿಯಂತೆ ನಡೆದು ಕೊಂಡರು. ಒಳಗೆ ರುದ್ರಾ ಶಾಸ್ತ್ರಿಗಳು. ಹೋಮದ ಕುಂಡಕ್ಕೆ ತನ್ನ ಹಿಡಿ ಮುಷ್ಠಿಯಿಂದ
"ಓಂ.... ಚಾಂಡಲೇಶ್ವರಿ. ಶಾಂತಳಾಗು, ಅವನನ್ನು ಬಾಗಿಲ ಬಳಿಯೇ ತಡೆದಿದ್ದೇನೆ... ಶಾಂತಳಾಗು ತಾಯೆ....!!! ಶಾಂತಳಾಗು....!!!"
ಎಂದು ಹೇಳುತ್ತಾ ಮುಷ್ಠಿಯಲ್ಲಿದ್ದ ಕುಂಕುಮವನ್ನು ಕುಂಡಕ್ಕೆ ಹಾಕಿದರು. ಕುಂಡದಿಂದ ಬೆಂಕಿ ಧಿಗ್ಗನೇ ಮೇಲಕ್ಕೆ ರಾಚಿತು...
"ಶಾಂತಳಾಗು ಚಾಂಡಾಲೇಶ್ವರಿ ...!!!  ಶಾಂತಳಾಗು... ನಿನ್ನ ಒಪ್ಪಿಗೆ ಪಡೆಯದೆ. ಅವನನ್ನು ಒಳಗೆ ಕರೆಸುವುದಿಲ್ಲ ತಾಯಿ.. ನೀನು ಮೊದಲು ಶಾಂತಳಾಗು...!!!" 

ಎದುರಿರುವ ಚಾಂಡಳೇಶ್ವರಿಯ ಮೂರ್ತಿಗೆ ಹೇಳುತ್ತಾ...ಮತ್ತೆ ಕುಂಡಕ್ಕೆ ತುಪ್ಪವನ್ನು ಹಾಕಿದರು
ನನ್ನ ಕಣ್ಣ ಮುಂದೆಯೇ ಬೆಂಕಿ ಧಿಗ್ಗನೆ ಎದ್ದಿತು. ಬೆಂಕಿಯ ಜ್ವಾಲೆ ಸೂರನ್ನು ಮುಟ್ಟುವಷ್ಟು ಮೇಲಕ್ಕೆ ಎದ್ದಿತು.

ಇದನ್ನೆಲ್ಲಾ ನೋಡಿದ ನಾನು ಬೆಚ್ಚಿ ಬೆವರಿದೆ.
 
ಏನಾಯಿತು...!!! ಸಾಮಾನ್ಯವಾಗಿ ಎಲ್ಲರೂ ರುದ್ರಾ ಶಾಸ್ತ್ರಿಗಳನ್ನು ನೋಡಲು ಒಳಗೆ ಹೋಗಿಯೇ ಬರುತ್ತಿದ್ದರು. ಆದರೆ ನಾನು ನೋಡಲು ಹೋಗುವಾಗಲೇ ಹೀಗೇಕಾಯಿತು. 

ಯಾರೀ ಚಾಂಡಾಳೇಶ್ವರಿ...?!!
ನನ್ನನ್ನು ತಡೆಯುತ್ತಿರುವುದಾದರೂ ಏಕೆ..?
ಚಾಂಡಾಳೇಶ್ವರಿಯ ಕೋಪ ನನ್ನ ಮೇಲೆಯೇ ಏಕೆ..? 

ಹೀಗೆ ಹಲವು ಯೋಚನೆಗಳು ನನ್ನನ್ನು ಕಾಡಲಾರಂಭಿಸಿತು...

ಮುಂದುವರೆಯುವುದು 

No comments:

Post a Comment