Monday, 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-5)

ಪ್ರೇತಾತ್ಮದ ಮನೆಯಲ್ಲಿ (ಭಾಗ-5)


ರುದ್ರಾಶಾಸ್ತ್ರಿಗಳು ಬಾಗಿಲಲ್ಲಿ ನಿಂತಿದ್ದ ನನ್ನ ಕಡೆಯೇ ಗುರಾಯಿಸಿ ನೋಡುತ್ತಿದ್ದರು. ಹೋಮ ಕುಂಡದ ಬೆಂಕಿಯ ಜ್ವಾಲೆ ಕಡಿಮೆಯಾಗಲೇ ಇಲ್ಲ. ಶಾಸ್ತ್ರಿಗಳು ಒಂದು ಕ್ಷಣ ಕಣ್ಣು ಮುಚ್ಚಿದರು. ಏನೋ ಬಾಯಲ್ಲಿ ಮಂತ್ರವನ್ನು ಜಪಿಸುತ್ತಾ ತಕ್ಷಣ ಕಣ್ಣನ್ನು ತೆರೆದು ಮುಷ್ಠಿಯಲ್ಲಿ ಹಿಡಿದಿದ್ದ ಭಸ್ಮವನ್ನು ಹೋಮ ಕುಂಡಕ್ಕೆ ಹಾಕಿದರು. ಆದರೆ ಬೆಂಕಿಯ ಜ್ವಾಲೆ ತೀವ್ರ  ವಾಗುತ್ತಲೇ ಇತ್ತು.

"ಶಾಂತಳಾಗು ತಾಯೆ... ಶಾಂತಳಾಗು. ನೀನು ಶಾಂತಳಾಗುವವರೆಗು ಅವನನ್ನು ಒಳಗೆ ಕರೆಸುವುದಿಲ್ಲ. ನೀನು ಶಾಂತಳಾಗು ತಾಯೆ...."

ಎಂದು ಬೇಡಿಕೊಂಡರು.

ಒಂದು ಕ್ಷಣ ಯೋಚಿಸಿ ತಾವೇ ಆಸನದಿಂದ ಎದ್ದು ನನ್ನ ಕಡೆಗೇ ಬಂದರು. ಬಾಗಿಲ ಬಳಿ ಅವರ ಶಿಷ್ಯಂದಿರು ನನ್ನನ್ನು ಬಲವಾಗಿ ಹಿಡಿದಿದ್ದರು. ರುದ್ರಾ ಶಾಸ್ತ್ರಿಗಳು ಬಂದ ಕೂಡಲೇ ನನ್ನ ಮೇಲೆ ಹಿಡಿ ಭಸ್ಮವನ್ನು ಎರಚಿದರು. ಕೈ ಯಲ್ಲಿ ನಿಂಬೆಹಣ್ಣನ್ನು ಹಿಡಿದು ಅಡಿಯಿಂದ ಮುಡಿಯವರೆಗೂ ಸ್ಪರ್ಶಿಸುತ್ತಾ ಬಂದರು. ಹಾಗೆ ಸ್ಪರ್ಶಿಸುತ್ತಾ ಬರುವಾಗ ಕತ್ತಿನ ಭಾಗಕ್ಕೆ ಬಂದ ಕೂಡಲೇ ನಿಂಬೆ ಹಣ್ಣು ಹಿಡಿದ ಕೈಗೆ ವಿಧ್ಯುತ್ ಬಡಿದಂತಾಗಿ ರುದ್ರಾ ಶಾಸ್ತ್ರಿಗಳು ಕೆಳಗೆ ಬಿದ್ದರು...

"ಏನಾಯ್ತು ಗುರುಗಳೇ....!!"

ಎಲ್ಲಾ ಶಿಷ್ಯರು ಆಶ್ಚರ್ಯರಾಗಿ ಒಕ್ಕೊರಲಿನಿಂದ ಕೂಗಿಕೊಂಡರು. 

"ಶಿಷ್ಯರೇ... ಅವನ ಕೊರಳಲ್ಲಿ ಕಟ್ಟಿದ ತಾಯತವನ್ನು ಮೊದಲು ತೆಗೆಯಿರಿ...!!!"

ಎಂದು ಅಬ್ಬರಿಸಿದರು.

ಶಿಷ್ಯನೊಬ್ಬ ನನ್ನ ಕೊರಳ ತಾಯತವನ್ನು ಬಿಚ್ಚಿದನು. ಅಷ್ಟರಲ್ಲಿ ರುದ್ರಾಶಾಸ್ತ್ರಿಗಳ ಕೋಣೆಯ ಬೆಂಕಿಯ ಜ್ವಾಲೆ ತಣ್ಣಗಾಗುತ್ತಾ ಬಂದಿತು.

"ಚಾಂಡಾಳೇಶ್ವರಿ ಶಾಂತಳಾಗಿದ್ದಾಳೆ ಅವನನ್ನು ಒಳಗೆ ಕರೆತನ್ನಿ... ಆದರೆ ತಾಯತ ಹಿಡಿದ ಶಿಷ್ಯ ಮಾತ್ರ ಹೊರಗೇ ನಿಂತಿರಲಿ... ಯಾವ ಕಾರಣಕ್ಕೂ ಅವನ ಕೊರಳ ತಾಯತವನ್ನು ಒಳಗೆ ತರಬೇಡಿ.."

ರುದ್ರಾ ಶಾಸ್ತ್ರಿಗಳು ಶಿಷ್ಯರಿಗೆ ಆಜ್ಞಾಪಿಸಿದರು..

ಇಬ್ಬರು ಶಿಷ್ಯರು ನನ್ನ ಕೈ ಹಿಡಿದುಕೊಂಡು ಒಳಗೆ ಹೋದರು. ಬಿಳಿಯ ಬೂದಿಯಿಂದ ಹಾಕಲ್ಪಟ್ಟ ವೃತ್ತಾಕಾರದ ಒಳಗೆ ನನ್ನನ್ನು ಕೂರಿಸಿದರು. ರುದ್ರಾ ಶಾಸ್ತ್ರಿಗಳು ಚಾಂಡಾಳೇಶ್ವರಿಯ ಕೈಯಲ್ಲಿದ್ದ ಲಿಂಬೆ ಹಣ್ಣೊಂದನ್ನು ತಂದು ನನ್ನ ಕೈಗಿತ್ತರು. ನನಗೆ ಈ ವಿಚಿತ್ರವಾದ ಅನುಭವವಾದಂತಾಯಿತು. ಇದ್ದಕ್ಕಿದ್ದಂತೆ ರುದ್ರಾಶಾಸ್ತ್ರಿಗಳು ಹೀಗೆ ಏಕೆ ಮಾಡುತ್ತಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ. ಆನಂದ ಪೈ ವೈದ್ಯರು ನನಗೆ ತಿಳಿಯದಂತೆ ಏನಾದರೂ ರುದ್ರಾ ಶಾಸ್ತ್ರಿಗಳಿಗೆ ಹೇಳಿರಬಹುದೇ ಎಂದು ಅನುಮಾನ ಮೂಡಲಾರಂಬಿಸಿತು. ರುದ್ರಾ ಶಾಸ್ತ್ರಿಗಳು ನನ್ನ ಕೈ ಮೇಲಿರುವ ಲಿಂಬೆ ಹಣ್ಣಿನ ಮೇಲೆ ಮಂತ್ರದ ನೀರನ್ನು ಚಿಮುಕಿಸಿ ಅದನ್ನು ವಾಪಸ್ ತೆಗೆದು ಕೊಂಡರು. ನಂತರ ಆ ಲಿಂಬೆಹಣ್ಣನ್ನು ಚಾಕುವಿನಿಂದ ಕುಯ್ದರು. ಲಿಂಬೆ ಹಣ್ಣು ಯಥಾ ಪ್ರಕಾರವಾಗಿಯೇ ಎರಡು ಹೋಳಾಯಿತು...

"ಲಿಂಬೆ ಹಣ್ಣು ಕೆಂಪು ಬಣ್ಣಕ್ಕೆ ತಿರುಗಿಲ್ಲ. ಇವನ ಮೈಯಲ್ಲಿ ಯಾವ ದುಷ್ಟ ಶಕ್ತಿಯೂ ಅಡಗಿಲ್ಲ. ಶಿಷ್ಯರೇ ಇವನನ್ನು ಕರೆತಂದು ಈ ವೃತ್ತಾಕಾರದಲ್ಲಿ ಕೂರಿಸಿ ಬಿಡಿ..."

ಗುರುಗಳು ಹಾಗೆ ಹೇಳಿದ ಕೂಡಲೇ ಶಿಷ್ಯರು. ನನ್ನನ್ನು  ವೃತ್ತದಲ್ಲಿ ಕರೆತಂದರು. ಅಲ್ಲಿ ನನ್ನನ್ನು ಸ್ವತಂತ್ರವಾಗಿ ಬಿಟ್ಟು ದೂರ ಸರಿದು ನಿಂತರು.

"ಹೇಳು ನಿನ್ನ ಕೊರಳಲ್ಲಿರುವ ತಾಯತ ಯಾವುದು...?  ನಾನು ಈ ವರೆಗೂ ಇಷ್ಟು ಶಕ್ತಿಶಾಲಿಯಾದ ತಾಯತವನ್ನು ಯಾವತ್ತೂ ನೋಡಿಲ್ಲ. ಒಂದು ಕ್ಷಣ ಆ ತಾಯತದ ಶಕ್ತಿಗೆ ನಮ್ಮ ತಾಯಿ ಚಾಂಡಳೇಶ್ವರಿಯು ಸಹ ದಂಗಾಗಿ ಹೋದಳು. ಹೇಳು ಆ ತಾಯತ ಎಲ್ಲಿಂದ ಬಂತು...? ನಿನಗೆ ಧರಿಸಿದವರಾರು...?"

ಗುರುಗಳು ಕುತೂಹಲದಿಂದ ಕೇಳಿದರು.

"ಒಂದು ಅಜ್ಜಿ ಕಟ್ಟಿದ್ದು, ಅವಳು ಬದುಕಿರುವಾಗ. ಆಗ ನಾನಿನ್ನು ತುಂಬಾ ಚಿಕ್ಕವನು. ಊರಿಗೆ ಬಂದಾಗ ಅದನ್ನು ಮೊನ್ನೆ ತೆಗೆದಿದ್ದೆ... ಅದನ್ನೇ ಅಜ್ಜಿ ಆಂಜನೆಯದೆಂದು ಮತ್ತೊಮ್ಮೆ ಕಟ್ಟಿದ್ದಳು. ಆದರೂ ತೆಗೆದಿದ್ದೇನೆ. ಇನ್ನೊಂದು ತಾಯತ ಮೊದಲಿನಿಂದಲೂ ಇದೆ. ಈಗ ನೀವು ತೆಗೆದಿದ್ದೀರಲ್ಲ ಅದು. ನಾನು ನಾಲ್ಕು ವರ್ಷದ ಚಿಕ್ಕ ಮಗುವಾಗಿದ್ದಾಗ ತುಂಬಾ ಹಠ ಮಾಡುತ್ತಿದ್ದೇನಂತೆ. ಒಂದು ವರ್ಷವಾದರೂ ನನ್ನ ಹಠ ಕಡಿಮೆಯಾಗಲಿಲ್ಲ. ಆಗ ಅಪ್ಪನಿಗೆ ಸ್ನೇಹಿತರೊಬ್ಬರು ನನ್ನನ್ನು ವೈಷ್ಣೋದೇವಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ನನ್ನನ್ನು ವೈಷ್ಣೋದೇವಿಗೆ ಕರೆದೊಯ್ದಾಗ ಅಲ್ಲಿ ಹಿಮಾಲಯದಿಂದ ಬಂದ ಅಘೋರಿಯೊಬ್ಬ ತಾನೆ ಬಂದು ಅಪ್ಪನನ್ನು ಮಾತನಾಡಿಸಿದರಂತೆ. ನಿನ್ನ ಮಗನಿಗೆ ಮುಂದೆ ಪ್ರಾಣಕ್ಕೆ ಗಂಡಾಂತರವಿದೆ. ಈ ತಾಯತವನ್ನು ಕಟ್ಟಿ ಅಂದರಂತೆ. ಅಂದಿನಿಂದಲೂ ಈ ತಾಯತವನ್ನು ಕಟ್ಟಿಕೊಂಡಿದ್ದೇನೆ. ಎಷ್ಟೋ ಸಲ ತೆಗೆಯಲು ಪ್ರಯತ್ನಿಸಿದಾಗ ಅಪ್ಪ ಅಮ್ಮ ಮತ್ತೆ ಬೈಯ್ದು ಈ ತಾಯತವನ್ನು ಕಟ್ಟಿದ್ದಾರೆ. ನನಗೆ ಇದಕ್ಕಿಂತ ಹೆಚ್ಚು ವಿಷಯ ಗೊತ್ತಿಲ್ಲಲ ಗುರುಗಳೆ ..ಅಮ್ಮ ಎಂದೋ ಈ ವಿಷಯ ಹೇಳಿದ ನೆನಪು."

ಅಷ್ಟು ಹೇಳಿ ನಾನು ಸುಮ್ಮನಾದೆ...

"ನಿನಗೆ ತಾಯತ ಕೊಟ್ಟ ಅಘೋರಿ ಸಾಮಾನ್ಯದವನಲ್ಲ.. ಎಷ್ಟು ವರ್ಷದ ತಪಸ್ಸಿನ ಫಲವೋ ಏನೋ ಈ ತಾಯತಕ್ಕೆ ಇಷ್ಟು ಶಕ್ತಿಯಿದೆ...  ನಾನು ವಶೀಕರಣ ಮಾಡಿಕೊಂಡಿದ್ದು ಚಾಂಡಾಳೇಶ್ವರಿ ಎಂಬ ದುಷ್ಟ ದೇವತೆಯನ್ನು. ಇವಳ ಸಹಾಯದಿಂದಲೇ ಹಲವಾರು ಪ್ರೇತಾತ್ಮ, ದೆವ್ವ ಭೂತಗಳನ್ನು ಮಾತಾನಾಡಿಸಲು ಸಾಧ್ಯವಾಗುತ್ತಿದೆ. ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಮಾನವರು ಹೇಗೆ ದೇವರ ಅಧೀನದಲ್ಲಿರುತ್ತಾರೆಯೋ.. ಹಾಗೆಯೇ ದುಷ್ಟ ಶಕ್ತಿಗಳೆಲ್ಲವೂ ಚಾಂಡಾಳೇಶ್ವರಿಗೆ ಅಧೀನದಲ್ಲಿರುತ್ತಾರೆ. ಶಿಷ್ಟ ಜನರೊಂದಿಗೆ ನಡೆಯುತ್ತಿರುವ ದುಷ್ಟ ಶಕ್ತಿಗಳ  ಅಟ್ಟಹಾಸಗಳನ್ನು ನಾನು ಚಾಂಡಾಳೇಶ್ವರಿಯ ಸಹಾಯದಿಂದಲೇ ಪರಿಹರಿಸುತ್ತಿದ್ದೇನೆ. ನಿನ್ನ ಈ ತಾಯತದ ಮುಂದೆ ದುಷ್ಟ ಶಕ್ತಿಯ ಆಟ ನಡೆಯದು. ಇಂತಹ ಶಕ್ತಿ ಶಾಲಿಯಾದ ತಾಯತವನ್ನು ಯಾವತ್ತೂ ಕಳೆದು ಕೊಳ್ಳಬೇಡ.. ಈ ತಾಯತದ ಶಕ್ತಿಯ ಫಲದಿಂದಲೇ ಚಾಂಡಾಳೇಶ್ವರಿ ನಿನ್ನನ್ನು ಒಳಗೆ ಬಿಡದಂತೆ ನನಗೆ ಆಜ್ಞಾಪಿಸಿದ್ದು... ಅದಿರಲಿ ನಿನ್ನ ಸಮಸ್ಯೆ ಏನು ...? ನೀನು ಇಲ್ಲಿಗೆ ಬಂದ ಕಾರಣ ತಿಳಿಸುವೆಯಾ..?  

ನಾನು ಎಲ್ಲಾ ವಿಷಯವನ್ನು ಸವಿವರವಾಗಿ ಹೇಳುತ್ತಾ ಹೋದೆ. ನಾನು ತುಂಬಾ ವರ್ಷಗಳ ನಂತರ ಅಪ್ಪನ ಊರಿಗೆ ಬಂದಿದ್ದು. ಮನೆಯಲ್ಲಿ ಅಜ್ಜಿಯ ಪ್ರೇತಾತ್ಮವನ್ನು ನೋಡಿದ್ದು. ಪ್ರತಿದಿನವೂ ಅಜ್ಜಿಯೊಂದಿಗೆ ಮಾತನಾಡುತ್ತಿದುದು. ನನ್ನ ಈ ನಡತೆಗಾಗಿ ಮನೆಯವರೆಲ್ಲರೂ ಹುಚ್ಚನೆಂದು ಕರೆದಿದ್ದು ಹೀಗೆ ಎಲ್ಲಾ ವಿಷಯವನ್ನು ರುದ್ರಾ ಶಾಸ್ತ್ರಿಗಳಿಗೆ ತಿಳಿಸಿದೆ. 

ರುದ್ರಾ ಶಾಸ್ತ್ರಿಗಳು ಕುತೂಹಲದಿಂದ ಕೇಳುತ್ತಿದ್ದರು. 

"ಮುಂದೆ ಏನು ಮಾಡಬೇಕೆಂದಿದ್ದೀಯಾ..?

ರುದ್ರಾಶಾಸ್ತ್ರಿಗಳು ಪ್ರಶ್ನಿಸಿದರು

"ಏನಿಲ್ಲಾ ಗುರುಗಳೆ ಅಜ್ಜಿಯ ಆತ್ಮ ಸುಮಾರು ಐದು ವರ್ಷದಿಂದ ಮನೆಯಲ್ಲೇ ವಾಸಮಾಡುತ್ತಿದೆ. ಇದಕ್ಕೆ ಕಾರಣ ತಿಳಿಯಬೇಕು..."

" ಐದು ವರ್ಷದಿಂದ ವಾಸಿಸುತ್ತಿರುವ ಆ ಪ್ರೇತಾತ್ಮ ಯಾರಿಗೂ ತೊಂದರೆ ಕೊಟ್ಟಿಲ್ಲ ಅಂತ ಹೇಳ್ತಾ ಇದ್ದೀಯಾ.. ನಿನ್ನನ್ನು ಬಿಟ್ಟು ಸಾರಿಗೂ ಕಾಣಿಸಿಕೊಂಡಿಲ್ಲ ಹೀಗಿರುವಾಗ ಕಾರಣ ತಿಳಿದುಕೊಂಡು ಏನು ಮಾಡುವೆ..? ಅದರ ಪಾಡಿಗೆ ಅದು ಇರಲಿ ಬಿಡು. ನಿನ್ನ ಬಳಿ ತಾಯತದ ಶಕ್ತಿ ಇರುವುದರಿಂದ ಕಾಣಿಸಿಕೊಂಡಿದೆ ಅಷ್ಟೆ.."

"ಐದು ವರುಷದಿಂದ ಪ್ರೇತಾತ್ಮ ಮನೆಯಲ್ಲೇ ಇದೆ ಎಂದರೆ ಅದಕ್ಕೆ ಏನಾದರೂ ಬಲವಾದ ಕಾರಣ ಇದ್ದೇ ಇರುತ್ತದೆ ಗುರುಗಳೇ... ಆದರೆ ಅದು ನಮಗೆ ಯಾವ ತೊಂದರೆಯನ್ನೂ ಕೊಟ್ಟಿಲ್ಲ ಎಂದ ಮಾತ್ರಕ್ಕೆ ಪ್ರೇತಾತ್ಮವನ್ನು ಹಾಗೆ ಬಿಡುವುದು ಎಷ್ಟು ಸರಿ. ಆ ಆತ್ಮಕ್ಕೆ ಮುಕ್ತಿ ಬೇಡವೇ. ಆ ಆತ್ಮವು ಮುಂದೆ ಯಾವಾಗಲೋ ತನ್ನ ಉದ್ದೇಶ ಈಡೇರಿದ ನಂತರ ಮುಕ್ತಿಯನ್ನು ಪಡೆಯಬಹುದು. ಆದರೆ ಅದು ತನ್ನ ಗುರಿ ಮತ್ತು ಉದ್ದೇಶಗಳೆರಡೂ ತೀರಿದಾಗ ಮಾತ್ರ. ಆ ಪ್ರೇತಾತ್ಮದ ಗುರಿ, ಉದ್ದೇಶವೇನು...? ಒಂದು ವೇಳೆ ಅದರ ಉದ್ದೇಶ ನಮ್ಮ ಮನೆಯವರಿಗೆ ತೊಂದರೆ ಕೊಡುವಂತಿದ್ದರೆ...? ಅದು ಯಾರ ಮೇಲೋ ಸೇಡು ತೀರಿಸಿಕೊಳ್ಳಲು ಬಯಸುತ್ತಿರ ಬಹುದು...? ಯಾವ ಸೇಡು ಇಲ್ಲವೆನ್ನುವುದಾದರೆ ಮನೆಯಲ್ಲಿ ಪ್ರೇತಾತ್ಮವಾಗಿ ಅಲೆಯುತ್ತಿರುವುದಾದರೂ ಯಾಕೆ..?  ಐದು ವರ್ಷಗಳಿಂದ ಆ ಪ್ರೇತಾತ್ಮ ಯಾರಿಗಾಗಿ ಕಾಯುತ್ತಿದೆ..?  ಮುಂದೆ ಅನಂತು ಚಿಕ್ಕಪ್ಪನಿಗೆ ಮಕ್ಕಳಾಗುವವರೆಗೆ ಕಾದು ನಂತರ ತೊಂದರೆ ಕೊಡಲು ಬಯಸುತ್ತಿರಬಹುದೇ...? ಅಥವಾ ತನ್ನ ಕೆಲಸ ಸಾಧಿಸಲು ಸಮಯ ಕಾಯುತ್ತಿರುವುದೇ..? ಹೀಗೆ ನನ್ನಲ್ಲಿ ಹಲವು ಪ್ರಶ್ನೆಗಳಿವೆ. ಇದಕ್ಕೆ ಕಾರಣ ಬೇಕು ಗುರುಗಳೆ. ಅದಕ್ಕಾಗಿ ನಿಮ್ಮ ಸಲಹೆ ಕೇಳಲು ಬಂದಿರುವೆ..."

"ನಿನ್ನ ಮಾತು ಸರಿಯಾಗಿದೆ. ನಿನ್ನ ಚಿಕ್ಕಪ್ಪನ ಮಕ್ಕಳೂ ಆಗಬಹುದು ಅಥವಾ ಆ ಪ್ರೇತಾತ್ಮದ ಗುರಿ ನೀನೇ ಯಾಕಾಗಿರಬಾರದು..?  ತಾಯತ ನಿನ್ನ ಬಳಿ ಇರುವುದರಿಂದ ನೀನು ಉಳಿಕೊಂಡಿರಬಹುದು. ಆ ಪ್ರೇತಾತ್ಮ ನಿನ್ನ ಪ್ರಾಣವನ್ನೂ ಸಹ ತೆಗೆದುಕೊಳ್ಳಬಹುದಲ್ಲವೇ...? ಯಾವುದಕ್ಕೂ ನಿವೆಲ್ಲರೂ ಹುಷರಾಗಿರುವುದು ಉತ್ತಮ. ನನಗಂತೂ ಆ ಪ್ರೇತಾತ್ಮದ ಗುರಿ ನೀನೆ ಅಂತ ಅನಿಸುತ್ತದೆ. ಆದರೆ ನೀನು ಯಾವಾಗಲೂ ತಾಯತ ಕಟ್ಟಿಕೊಳ್ಳುವುದನ್ನು ಮರೆಯಬೇಡ. ಹಿಮಾಲಯದಿಂದ ಬಂದ ಆ ತಪಸ್ವಿ ಅಘೋರಿಯು ಇದೇ ಉದ್ದೇಶಕ್ಕೆ ನಿನಗೆ ಈ ತಾಯತವನ್ನು ನೀಡಿರಬಹುದಲ್ಲವೇ..? ನಿನಗೆ ನಾನು ಸಹಾಯ ಮಾಡುತ್ತೇನೆ. ಆದರೆ ನಾನು ಆ ಪ್ರೇತಾತ್ಮವನ್ನು ಈ ವೃತ್ತಾಕಾರಕ್ಕೆ ಕರೆದು ಕೂರಿಸಿ ಆ ಪ್ರೇತಾತ್ಮಕ್ಕೆ ಅಷ್ಟ ದಿಗ್ಭಂದನವನ್ನು ಹಾಕಿ ಬಂಧನದಲ್ಲಿಡಬೇಕಾದರೆ ನೀನು ಪೂರ್ಣಿಮೆಯ ದಿನದ ವರೆಗೂ ಕಾಯಲೇ ಬೇಕು. ನನಗೆ ಚಾಂಡಾಳೇಶ್ವರಿಯ ಸಹಾಯ ಸಿಗುವುದು ಆ ದಿನ ಮಾತ್ರ.."

"ಗುರುಗಳೆ.. ನಾನು ಅಜ್ಜಿಯನ್ನು ಒಂದು ಸಲ ಸಮಾದಿಯ ಬಳಿ ನೋಡಿದ್ದೇನೆ. ಅಮವಾಸ್ಯೆಯ ದಿನ ಅಜ್ಜಿ ಅಲ್ಲಿ ಸಿಕ್ಕೇ ಸಿಗುತ್ತಾಳೆ. ಅಲ್ಲಿ ನಾನು ಅಜ್ಜಿಯೊಂದಿಗೆ ಮಾತನಾಡಬಹುದು. ನಾನು ಅಲ್ಲಿಗೆ ಹೋಗಿಯೇ ಕಾರಣ ತಿಳಿದುಕೊಳ್ಳುತ್ತೇನೆ. ಅಜ್ಜಿ ಪ್ರೇತಾತ್ಮವಾಗಿದ್ದಾಳೆ ಎಂಬ ವಿಷಯ ಯಾವಾಗ ನನಗೆ ತಿಳಿಯಿತೋ ಅಂದಿನಿಂದ ಅಜ್ಜಿ ನನಗೆ ಕಾಣಿಸುತ್ತಿಲ್ಲ. ಮತ್ತು ನಮ್ಮ ಮನೆಯ ಕಡೆಯೂ ಬಂದಿಲ್ಲ. ನಾನೂ ಅಜ್ಜಿಗಾಗಿ ಕಾಯುತ್ತಿದ್ದೇನೆ. ನಾಳೆ ಅಮವಾಸ್ಯೆ ಬೇರೆ... ನಾನೇ ಅಜ್ಜಿಯ ಸಮಾಧಿಯ ಬಳಿ ಹೋಗುತ್ತೇನೆ...ಅಲ್ಲಿ ಸಿಕ್ಕೇ ಸಿಗುತ್ತಾಳೆ..."

"ಮೂರ್ಖ ಹುಡುಗ.. ಅಮವಾಸ್ಯೆ ಎಂದರೇನು ನಿನಗೆ ಗೊತ್ತೇ..?  ಅದು ದುಷ್ಟ ಶಕ್ತಿಗಳು ಮೆರೆಯುವಂತಹ ದಿನ. ಹಲವು ದಿನಗಳವರೆಗೆ ಕಾದರೂ ಸರಿ, ಪ್ರೇತಾತ್ಮಗಳು ಅಮವಾಸ್ಯೆಯಂದೇ ಸೇಡು ತೀರಿಸಿಕೊಳ್ಳಲು ಹವಣಿಸುತ್ತವೆ. ನೀನು ಸುಮ್ಮನೇ ಹೋಗಿ ಪ್ರೇತಾತ್ಮಕ್ಕೆ ಆಹಾರವಾಗಬೇಡ. ಅಮವಾಸ್ಯೆಯ ದಿನ ದುಷ್ಟ ಶಕ್ತಿಗಳ ಶಕ್ತಿ ಮೊದಲಿಗಿಂತ ಹತ್ತು ಪಟ್ಟು ಜಾಸ್ತಿಯಾಗಿರುತ್ತದೆ. ಆ ದಿನ ಅವು ಉಗ್ರ ರೂಪವನ್ನು ತಾಳುತ್ತವೆ. ಹಗಲಿನಲ್ಲಿಯೇ ಅಮವಾಸ್ಯೆಯ ದಿನ ಹೊರಗೆ ಹೋಗಲು ಎಷ್ಟೋ ಜನ ಹೆದರುತ್ತಾರೆ. ಅಂತದ್ದರಲ್ಲಿ ರಾತ್ರಿಯ ದಿನ ಹೋದರೆ ತೊಂದರೆ ಖಚಿತ. ನೀನು ಎಂದಿಗೂ ಅಮವಾಸ್ಯೆಯ ದಿನ ಹೋಗುತ್ತೇನೆಂದು ಯೋಚಿಸಬೇಡ... ತಿಳಿಯಿತೇ.. ? ಮುಂದಿನ ಪೂರ್ಣಿಮೆಯ ದಿನದ ವರೆಗೆ ಕಾಯು.. ಆಗ ಆ ಪ್ರೇತಾತ್ಮವನ್ನು ಮಾತನಾಡಿಸೋಣ.."

ರುದ್ರಾ ಶಾಸ್ತ್ರಿಗಳ ಸಲಹೆ ಸರಿಯಾಗಿಯೇ ಇತ್ತು. ಆದರೆ ಮುಂದಿನ ಪೂರ್ಣಿಮೆಯ ದಿನದ ವರೆಗೂ ಕಾಯುವವರಾರು..? ನನ್ನ ರಜೆದಿನಗಳು ಮುಗಿದು ನಾನು ಊರಿಗೆ ಹೋಗಿರುತ್ತೇನೆ. ಮತ್ತೆ ನಾನು ಊರಿಗೆ ಯಾವಾಗ ಬರುತ್ತೇನೆಯೋ ಅದು ಗೊತ್ತಿಲ್ಲ. ಅಮವಾಸ್ಯೆಯ ರಾತ್ರಿ ಅಜ್ಜಿಯ ಸಮಾಧಿಯ ಬಳಿ ಹೋಗಿಯೇ ತೀರುತ್ತೇನೆ.... ಎಂದು ನಿರ್ಧರಿಸಿಕೊಂಡೆ.

ರುದ್ರಾ ಶಾಸ್ತ್ರಿಗಳ ಕೋಣೆಯಿಂದ ಹೊರಬರುವಾಗ ಬಾಗಿಲಿನ ಬಳಿ ತಾಯತ ಹಿಡಿದು ನಿಂತಿದ್ದ ಶಿಷ್ಯ ಮತ್ತೆ ನನ್ನ ಕೊರಳಿಗೆ ಕಟ್ಟಿದ. ರುದ್ರಾ ಶಾಸ್ತ್ರಿಗಳು ಒಳಗಿನಿಂದಲೇ ಕೂಗಿದರು..

"ನೀನು ಈ ಊರು ಬಿಟ್ಟು ಹೋಗುವ ತನಕ ತಾಯತವನ್ನು ಕೊರಳಿಗೆ ಕಟ್ಟಿಕೊಂಡಿರು... ಜಾಗ್ರತೆಯಿಂದಿರು. ಪೂರ್ಣಿಮೆಯ ಮುನ್ನಾ ದಿನ ನನ್ನನ್ನು ಭೇಟಿಯಾಗು"

ನಾನು "ಹ್ಞೂಂ" ಎಂದು ತಲೆಯಾಡಿಸಿದೆ.
ಅಲ್ಲಿಂದ ಮನೆಗೆ ಹೊರಟೆ.

ಅಮವಾಸ್ಯೆ ಬಂದೇ ಬಿಟ್ಟಿತು. ದಿನ ರಾತ್ರಿಯಾಗುವುದನ್ನೇ ಕಾಯುತ್ತಿದ್ದೆ . ರಾತ್ರಿ ಊಟ ಮಾಡಿ ಮಲಗುವಾಗ ಸರಿಯಾಗಿ ಹನ್ನೆರಡು ಗಂಟೆಗೆ ಅಲರಾಂ ಇಟ್ಟು ಮಲಗಿದೆ.
 
"ಠಣ್..ಠಣ್...ಠಣ್.........."
 ಎಂದು ಅಲರಾಂ ಹನ್ನೆರಡು ಸಲ ಭಾರಿಸಿತು

ಶಬ್ಧಕ್ಕೆ ಎದ್ದು ಕುಳಿತೆ.

ಸಮಾಧಿಯ ಬಳಿ ಹೋಗುವುದನ್ನು ನೆನಪಿಸಿಕೊಂಡೆ. ಒಮ್ಮೆ ಭಯ, ಮತ್ತೊಮ್ಮ ಮೊಂಡು ಧೈರ್ಯ, ಇಬ್ಬಗೆಯ ಭಾವ. ಟಾರ್ಚನ್ನು ಹಿಡಿದುಕೊಂಡು ನಿಧಾನವಾಗಿ ಬಾಗಿಲ ಚಿಲಕವನ್ನು ತೆಗೆದು ಹೊರಬಂದೆ. ಸುತ್ತಲೂ ನೋಡಿದೆ. ಎಲ್ಲಾ ಕಡೆ ಕಗ್ಗತ್ತಲು ಆವರಿಸಿತ್ತು. ಅಲ್ಲಲ್ಲಿ ನಾಯಿಗಳು ಬೊಗಳುವ ಸದ್ಧು ಕೇಳಿಸುತ್ತಿತ್ತು. ಕಗ್ಗತ್ತಲ ಆ ನೀರವವಾದ ಭಯಾನಕ ವಾತಾವರಣದಲ್ಲಿ ಟಾರ್ಚನ ಮಂದವಾದ ಬೆಳಕಲ್ಲಿ ಸಮಾಧಿಯ ಹಾದಿಯನ್ನು ಹಿಡಿದು ಹೊರಟೆ. ಹೆಜ್ಜೆ ಇಟ್ಟು ಮುಂದೆ ಮುಂದೆ ಹೋದ ಹಾಗೆ ಮನಸ್ಸಿನಲ್ಲಿ ನಿಧಾನವಾಗಿ ಭಯ ಆವರಿಸತೊಡಗಿತು. ನಡೆಯುವಾಗ 

'ಸರ್ ರ್ ರ್.... '

ಏನೋ ಸದ್ಧಾಯಿತು. ಒಂದು ಸಲ ಬೆಚ್ಚಿ ಬಿದ್ದೆ. ಬಹುಷಃ ಕಪ್ಪೆಯೋ... ಬೆಕ್ಕೋ ಹುಲ್ಲಿನ ಮೇಲೆ ನಡೆದಾಡಿರಬೇಕು. ಘನ ಘೋರವಾದ ಆ ಕಗ್ಗತ್ತಲಿನಲ್ಲಿ ಏನು ಶಬ್ಧವಾದರು ಅದು ನನ್ನ ಹೃದಯ ಬಡಿತವನ್ನು ಹೆಚ್ಚಿಸುತ್ತಿತ್ತು. ಭಯದಿಂದಲೇ ಅಜ್ಜಿಯ ಸಮಾಧಿಯ ಹತ್ತಿರ ಹೆಜ್ಜೆ ಹಾಕಿದೆ. ಸಮಾಧಿ ಇನ್ನೇನು ಹತ್ತಿರವಾಗುತ್ತಿದೆ ಎನ್ನುವಾಗ ಯಾರೋ ರೋಧಿಸುತ್ತಿರುವಂತೆ ಸದ್ದು ಕೇಳಿಸಿತು. ಒಮ್ಮೆ ಏನೋ ವಿಚಿತ್ರವಾದ ಕೂಗು, ಮತ್ತೊಮ್ಮೆ ನರಳಾಟ, ಹೌದು ಅಜ್ಜಿಯ ಪ್ರೇತಾತ್ಮದ ಕೂಗು. ಸಮಾಧಿ ಸಮೀಪಿಸಿತು. ಟಾರ್ಚ್ ಬೆಳಕನ್ನು ಸಮಾದಿಯ ಮೇಲೆ ಹಾಯಿಸಿದೆ. ಮಾನವ ರೂಪದ ಪ್ರತಿಕೃತಿ. ಬಿಳಿಯ ಸೀರೆ ಉದ್ದವಾದ ಬಿಳಿಯ ಕೂದಲನ್ನು ಬಿಟ್ಟುಕೊಂಡು ಸಮಾಧಿಯ ಮೇಲೆ ಕುಳಿತ್ತಿತ್ತು. ನಾನು ಹತ್ತಿರ ಹೋಗಿ ನಿಂತ ಕೂಡಲೇ ಪ್ರೇತಾತ್ಮ ಜೋರಾಗಿ ಎದುರುಸಿರು ಬಿಡಲು ಪ್ರಾರಂಭಿಸಿತು. ತಲೆಯನ್ನೊಮ್ಮೆ ಜೋರಾಗಿ ಗಿರಗಿಟ್ಟಲೆಯಂತೆ ತಿರುಗಿಸಿ ಸಮಾಧಿಯ ಮೇಲೆ ನಿಂತುಕೊಂಡಿತು. ಹಾಗೆ ನಿಂತುಕೊಂಡಾಗ ಅದರ ಪಾದ ಸಮಾದಿಯನ್ನು ಸ್ಪರ್ಶಿಸದೇ ಒಂದು ಅಡಿ ಮೇಲಕ್ಕೇ ನಿಂತಿತ್ತು. ಬಿಳಿಕೂದಲು ಮೊಣಕಾಲಿಗಿಂತಲೂ ಉದ್ದವಾಗಿ ಹರಡಿತ್ತು. ಕಣ್ಣುಗಳು ಕೆಂಪಾಗಿ ಭಯಾನಕವಾಗಿ ಕಾಣುತ್ತಿತ್ತು. ನಾಲಿಗೆ ವಿಕಾರವಾಗಿ ಹೊರಚಾಚಿತ್ತು. ಮೊದಲೆ ಭಯದಿಂದಿದ್ದ ಮನಸು ಈಗ ಸಂಪೂರ್ಣವಾಗಿ ಕುಗ್ಗಿ ಹೋಯಿತು. ಕಾಲುಗಳು ನಡುಗಿದವು. ಹಣೆಯಲ್ಲಿ ಬೆವರು ಮೂಡಲಾರಂಬಿಸಿತು. ಬೆವರುತ್ತಿದ್ದ ಹಣೆಯನ್ನು ಮುಖವನ್ನು ಕುತ್ತಿಗೆ ಒಮ್ಮೆ ಒರೆಸಿಕೊಂಡೆ.

"ಅರೆ ...!!! ನನ್ನ ತಾಯತ...!!!

ಕೊರಳಲ್ಲಿದ್ದ ತಾಯತ ನನ್ನ ಕೈಯನ್ನು ಸ್ಪರ್ಶಿಸಲಿಲ್ಲ. ಮತ್ತೆ ಎರೆಡೆಡು ಸಲ ಅಂಗಿಯ ಕಾಲರ್ ಹಿಂದೆ ಜರುಗಿಸಿ ಪರೀಕ್ಷಿದೆ. ತಾಯತ ಕತ್ತಲ್ಲಿರಲಿಲ್ಲ.

ರಾತ್ರಿಯ ವೇಳೆ ಒಬ್ಬನೇ ಸಮಾದಿಯ ಬಳಿ ಹೋಗಿ  ಪ್ರೇತಾತ್ಮವನ್ನು ನೋಡುವಂತೆ ನನ್ನಲ್ಲಿ ಧೈರ್ಯ ಮೂಡಿದ್ದೇ ಆ ತಾಯತದಿಂದ. ಈಗ ಆ ತಾಯತವೇ ಕಾಣೆಯಾಗಿದೆ..

ತಕ್ಷಣ ನನ್ನ ಜಂಘಾಬಲವೇ ಕುಸಿದು ಹೋಯಿತು....

(ಮುಂದುವರೆಯುವುದು)

No comments:

Post a Comment