Monday 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ -6)

ಪ್ರೇತಾತ್ಮದ ಮನೆಯಲ್ಲಿ (ಭಾಗ -6)



ಪ್ರೇತಾತ್ಮವನ್ನು ನೋಡಿದ ಕೂಡಲೇ ನನ್ನ ಕಾಲುಗಳು ಭಯದಿಂದ ನಡುಗಲಾರಂಬಿಸಿತು. ಕೊರಳಲ್ಲಿದ್ದ ತಾಯತ ಎಲ್ಲಿ ಕಳೆದಿರಬಹುದು..? ತುಂಬಾ ಯೋಚಿಸಿದೆ ತಾಯತ ಕಳೆದಿರುವ ಬಗ್ಗೆ ಒಂದು ಸಣ್ಣ ಸುಳಿವೂ ಸಹ ನನ್ನ ತಲೆಗೆ ಹೊಳೆಯಲಿಲ್ಲ. ಎಲ್ಲಿ ಕಳೆದಿರಬಹುದು...? ಎಂದು ಯೋಚಿಸುತ್ತಿರುವಾಗಲೇ. ಪ್ರೇತಾತ್ಮ ಉಗ್ರ ರೂಪವನ್ನು ತಾಳಿ ನನ್ನ ಕಡಯೇ ಬರಲಾರಂಬಿಸಿತು...

"ಹೋಗೊ ಇಲ್ಲಿಂದ, ಯಾಕೋ ಬಂದೆ, ನಿನಗೆ ಸಾಯುವ ಇಚ್ಛೆಯೋ...? ಮೊದಲು ಇಲ್ಲಿಂದ ತೊಲಗಿ ಹೋಗು. ನಾನು ನಿನಗೆ ಒಂದು ಅವಕಾಶ ಕೊಡುತ್ತೇನೆ ಬೇಗನೆ ಹೋಗಿ ಮನೆ ಸೇರಿಕೊ.. ಇಲ್ಲದಿದ್ದರೆ ಕೆಟ್ಟ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ. ಇಂದು ಅಮವಾಸ್ಯೆ ಬೇರೆ, ನಮ್ಮ ದಿನ, ನಮ್ಮ ಶಕ್ತಿಯನ್ನು ಪ್ರಯೋಗಿಸುವ ದಿನ, ಸುಮ್ಮನೆ ದುಷ್ಟ ಶಕ್ತಿಗಳನ್ನು ಕೆಣಕಬೇಡ...ತೊಲಗು ಇಲ್ಲಿಂದ"

ಪ್ರೇತಾತ್ಮದ ಮಾತು ಭಯಂಕರವಾಗಿತ್ತು. ಮಾತಿನಲ್ಲಿ ವಿಕಾರವಾದ ಧ್ವನಿ ತುಂಬಿತ್ತು. ಮಾತು ಎರೆಡೆರಡು ಸಲ ಪ್ರತಿಧ್ವನಿಸುತ್ತಿದೆಯೇನೋ ಎಂಬಂತೆ ಭಾಸವಾಯಿತು. 

"ಅಜ್ಜಿ... ನೀ ನನ್ನ ಸಾಯಿಸಿದರೂ ಸರಿಯೇ, ನೀನು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳಲೇ ಬೇಕು, ನಾನು ಈ ಊರಿಗೆ ಬಂದಾಗಿನಿಂದಲೂ ನೋಡುತ್ತಿದ್ದೇನೆ. ಮನೆಯ ಹಿಂದೆ ಎಂಥದೋ ವಿಚಿತ್ರವಾದ ಧ್ವನಿ ಕೇಳಿ ಬರುತ್ತಿತ್ತು. ಈ ಬಗ್ಗೆ ನಾನು ನಿನ್ನ ಕೇಳಿದೆ. ಆಗ ನೀನು ಅದ್ಯಾರೋ ಅಂಜಲಿ ಅಂತ ಹೇಳಿ ದೆವ್ವದ ಕತೆ ಹೇಳಿ ನನ್ನನ್ನು ಸುಮ್ಮನಾಗಿಸಿದೆ. ಅವಳನ್ನು ಚಿಕ್ಕಪ್ಪನ ಮೊದಲ ಹೆಂಡತಿ ಅಂದೆ, ಅಲ್ಲಿಂದಲೇ ನನಗೆ ಅನುಮಾನ ಪ್ರಾರಂಭವಾಯಿತು. ಇದರಲ್ಲಿ ಏನೋ ರಹಸ್ಯ ಅಡಗಿದೆ ಎಂದು ನನ್ನ ಮನಸ್ಸನ್ನು ಕೆಡಿಸಿಕೊಂಡೆ. ಅವತ್ತಿಂದಲೇ ನಾನು ಪತ್ತೆದಾರಿ ಕೆಲಸ ಶುರು ಮಾಡಿದೆ. ರಹಸ್ಯವನ್ನು ಭೇದಿಸುವ ಪ್ರಯತ್ನದಲ್ಲಿ ನನಗೆ ಹುಚ್ಚನೆಂಬ ಪಟ್ಟವು ಸಿಕ್ಕಿತು. ನನಗೆ ಯಾವಾಗ ನೀನೇ ದೆವ್ವ ಅನ್ನೋ ವಿಷಯ ನನಗೆ ತಿಳಿಯಿತೋ ಆಗ ನೀನು ಮನೆಯನ್ನೇ ಬಿಟ್ಟು ಹೋದೆ, ನೀನು ಪ್ರೇತಾತ್ಮವಾಗಿ ಅಲೆಯಲು ಕಾರಣವೇನೆಂದು ತಿಳಿದುಕೊಳ್ಳಬೇಕೆನ್ನುವಷ್ಟರಲ್ಲಿ ನೀನೇ ಮನೆಯಿಂದ ಕಾಣೆಯಾದೆ. ಆದರೆ ನೀನು ಇದುವರೆಗೂ ಯಾರಿಗೂ ತೊಂದರೆ ಕೊಡಲಿಲ್ಲ ಅನ್ನೋ ವಿಷಯ ಮಾತ್ರ ಸಮಾಧಾನಕರ. ಆದರೂ ನೀನು ಐದು ವರ್ಷಗಳಿಂದ ಮನೆಯಲ್ಲಿ ಪ್ರೇತಾತ್ಮವಾಗಿ ಏಕೆ ಅಲೆಯುತ್ತಿರುವೆ...?  ನೀನು ಯಾವ ಕಾರ್ಯ ಸಾಧನೆ ಮಾಡಲು ಹೀಗೆ ಪ್ರೇತಾತ್ಮವಾಗಿ ಅಲೆಯುತ್ತಿರುವೆ...?  ಯಾವ ಸಮಯಕ್ಕಾಗಿ ಕಾಯುತ್ತಿರುವೆ...?  ನಿನ್ನ ಗುರಿ ಏನು..? ಆ ನಿನ್ನ ಗುರಿ ನಾನೇ ಆಗಿದ್ದರೆ ಈಗಲೇ ನನ್ನು ಕೊಂದು ಬಿಡು. ಆದರೆ ನನ್ನ ಬಗ್ಗೆ ಹೇಳಬೇಕೆಂದರೆ, ನೀನು ನನ್ನನ್ನು ಕೊಲ್ಲುವಂತಹ ಯಾವ ಪಾಪವನ್ನೂ ನಾನು ಮಾಡಿಲ್ಲ. ಆದರೂ ಬೇರೆ ಏನೋ ಕಾರಣಕ್ಕೆ ನೀ ನನ್ನ ಕೊಲ್ಲಲೇ ಬೇಕೆಂದರೆ ಇದು ನಿನಗೊಂದು ಒಳ್ಳೆಯ ಅವಕಾಶ, ಹೇಗೋ ನನ್ನ  ಕೊರಳಲ್ಲಿ ತಾಯತವಿಲ್ಲ. ನನ್ನ ಕೊಂದು ಬಿಡು,  ನಿನ್ನ ಆಸೆಯೂ ನೆರವೇರಿದಂತಾಗುತ್ತದೆ. ಹೇಗೋ ನನಗೂ ಕೂಡ ಇಲ್ಲಿಂದ  ತಪ್ಪಿಸಿಕೊಳ್ಳಲು ದಾರಿಯಿಲ್ಲ, ಮಿಕ ತಾನಾಗಿಯೇ ಬಂದು ಬಲೆಗೆ ಬಿದ್ದಿರುವಾಗ. ಯಾವ ಯೋಚನೆಯನ್ನೂ ಮಾಡದೇ ನಿನ್ನ ಕಾರ್ಯವನ್ನು ಸಾಧಿಸು.. ಈಗಲೇ ನನ್ನ ಕೊಂದು ಬಿಡು.. ಇಲ್ಲ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡು...." 

ನನ್ನ ಮಾತು ಕೇಳಿ ಪ್ರೇತಾತ್ಮ ಮತ್ತಷ್ಟು ಉಗ್ರ ರೂಪ ತಳೆಯಿತು. ನರಳಾಟದ ಶಬ್ಧ ಹೆಚ್ಚಾಯಿತು. ಒಮ್ಮೆ ಕೋಪದಿಂದ ಜೋರಾಗಿ ಮುಗಿಲು ಮಟ್ಟುವಂತೆ ಕೂಗಿಕೊಂಡಿತು. ದೆವ್ವದ ಆ ಚೀರಾಟಕ್ಕೆ ಮರದ ಕೊಂಬೆಯ ಮೇಲೆ ತಲೆ ಕೆಳಗಾಗಿ ನೇತು ಬಿದ್ದಿದ್ದ ಗೂಬೆಗಳು ಹೆದರಿ ಪಟ ಪಟನೆ ಮರದ ಕೊಂಬೆಯಿಂದ ಹಾರಾಡಿಕೊಂಡು ಹೊರ ಬಂದವು. ನಾಯಿಗಳ ಕೂಗಾಟದ ಧ್ವನಿ ಜಾಸ್ತಿಯಾಯಿತು. ಕಗ್ಗತ್ತಲ ಆ ಸಮಾಧಿಯ ಬಳಿ ಮತ್ತ್ಯಾರೋ ಕೂಗಿದಂತೆಯೂ. ಕಿರ್ ಕಿರ್ ಎನ್ನುವಂತಹ ಕ್ರಿಮಿ ಕೀಟದ ಧ್ವನಿಯೂ ಹೆಚ್ಚಾಯಿತು. ಆ ಪ್ರೇತಾತ್ಮ ಅಲ್ಲಿಗೇ ಸುಮ್ಮನಾಗಲಿಲ್ಲ. ನನ್ನ ಕಡೆ ಕೆಂಪಾದ ಕಣ್ಣುಗಳಿಂದ ಕೆಕ್ಕರಿಸಿ ನೋಡಿತು. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಪ್ರಜ್ವಲಿಸಿದವು. ಬಿಳಿಯ ಕೇಶರಾಶಿಯನ್ನು ಹರಡಿಕೊಂಡು ನಾಲಿಗೆಯನ್ನು ಬಾಯಿಂದ ಹೊರಗೆ ತೆಗೆಯುವುದು ಮತ್ತೆ ಬಾಯೊಳಗೆ ಎಳೆದುಕೊಳ್ಳುವುದು ಮಾಡಿತು. ಒಮ್ಮೆ ಅದರ ಬಾಯಿಂದ ಕೋರೆಹಲ್ಲು ಕಾಣಿಸಿಕೊಂಡರೆ. ಮತ್ತಮ್ಮೆ ಮುಂದಿನ ಹಲ್ಲುಗಳೇ ಉದ್ದವಾಗಿ ಕಾಣಿಸುತ್ತಿತ್ತು. ಮತ್ತೆ ನನ್ನತ್ತ ನೋಡುತ್ತಾ ಭೂಮಿಯೇ ಬಿರುವಂತೆ ರೋಧಿಸಿತು. ಸಮಾದಿಯ ಮೇಲೆ ಕುಳಿತು ತನ್ನ ಎರಡೂ ಕೈಗಳಿಂದ ಸಮಾದಿಯನ್ನು ಬಡಿಯಲಾರಂಭಿಸಿತು. ಸಮಾದಿಯನ್ನು ಧಪ್ ಧಪ್ ಎಂದು ಎರಡೂ ಮುಷ್ಠುಯನ್ನು ಬಿಗಿಮಾಡಿ ಬಡಿಯುತ್ತಲೇ ಇತ್ತು. ನನಗೆ ಪ್ರೇತಾತ್ಮದ ಆ ವಿಚಿತ್ರವಾದ ಭಯಾನಕ ಸ್ವರೂಪ ನೋಡಲಾಗಲಿಲ್ಲ. ನನ್ನ ದೇಹ ಪೂರ್ತಿ ಭಯದಿಂದ ನಡುಗಲಾರಂಭಿಸಿತು. ಅಷ್ಟರಲ್ಲಿ "ಸುಂಯ್ ಯ್ ಯ್ ಯ್....." ಎಂಬ ಧ್ವನಿಯೊಂದಿಗೆ ಬುಜದ ಮೇಲೆ ಯಾರೋ ಹೊಡೆದಂತಾಯಿತು. ನೋಡು ನೋಡುತ್ತಿದ್ದಂತೆ ಗೂಬೆಯೊಂದು ಪಟ ಪಟನೆ ಶಬ್ಧಮಾಡುತ್ತಾ ನನ್ನ ಕಿವಿಯನ್ನು ತಗುಲಿಕೊಂಡೇ ಹಾರಿ ಹೋಯಿತು. ಮೊದಲೇ ಹೆದರಿದ್ದ ನನಗೆ ಗೂಬೆಯ ಸದ್ದು ಕಿವಿಯ ಹತ್ತಿರವೇ ಬಡಿದಿದ್ದರಿಂದ ದೆವ್ವವೇ ಮೈ ಮೇಲೆ ಎರಗಿದಂತೆ ಹೆದರಿಕೊಂಡೆ. ತಕ್ಷಣ ಚೀರಿಕೊಂಡು ನೆಲದ ಮೇಲೆ ಬಿದ್ದೆ. ಸಾಮಾದಿಯ ಕಟ್ಟೆಯನ್ನು ಬಡಿಯುತ್ತಿದ್ದ ಆ ಪ್ರೇತಾತ್ಮವು ಮತ್ತೆ ತನ್ನ ತಲೆಯನ್ನು ಎತ್ತಿ ಭಯಂಕರವಾದ ಧ್ವನಿಯಲ್ಲಿ ಮಾತನಾಡಲಾರಂಭಿಸಿತು.

"ಹೋಗೊ ಇಲ್ಲಿಂದ, ಇಂದು ಅಮವಾಸ್ಯೆಯ ರಾತ್ರಿ. ನನ್ನನ್ನು ಸುಮ್ಮನೆ ಕಾಡಬೇಡ. ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಾಳೆ ಬಂದು ಉತ್ತರಿಸುತ್ತೇನೆ. ಮೊದಲು ಇಲ್ಲಿಂದ ತೊಲಗು ದುಷ್ಟ ಶಕ್ತಿಯನ್ನು ಕೆಣಕಬೇಡ, ಈ ದಿನ ನಾನೂ ಸಹ ನಿನ್ನನ್ನು ಕಾಪಾಡಲು ಸಾಧ್ಯವೇ ಇಲ್ಲ. ಇಲ್ಲಿ  ಏನಾದರೂ ಸಂಭವಿಸಬಹುದು. ನಿನ್ನ ಪ್ರಾಣವೂ ಹೋಗಬಹುದು. ದೆವ್ವ ಪ್ರೇತಗಳ ಜೊತೆ ಹುಡುಗಾಟವಾಡಬೇಡ..." 

ಎಂದು ಚೀರಿತು. ಆ ಪ್ರೇತಾತ್ಮ ನನಗೆ ಆಜ್ಞೆಯನ್ನು  ಮಾಡಿತೋ...  ನನ್ನನ್ನು ಮನೆಗೆ ಹೋಗುವಂತೆ ಎಚ್ಚರ ನೀಡಿತೋ ತಿಳಿಯಲಿಲ್ಲ. ನಾನು ಮಾತ್ರ ಹಾಗೆಯೇ ಭಯದಿಂದ ನೆಲಹಿಡಿದು ಬಿದ್ದಿದ್ದೆ. ಎದ್ದು ನಿಲ್ಲಲು ಕಾಲಲ್ಲಿ ಶಕ್ತಿಯಿರಲಿಲ್ಲ. ಆ ಪ್ರೇತಾತ್ಮದಿಂದ ತಪ್ಪಿಸಿಕೊಂಡರೆ ಸಾಕು ಎಂದು ಸ್ವಲ್ಪ ದೂರ ತೆವಳಿಕೊಂಡು ಹೋದೆ. ತೆವಳಲೂ ಸಹ ಮೈಯಲ್ಲಿ ಶಕ್ತಿ ಇಲ್ಲದಂತಾಯಿತು. ಮತ್ತೆ ಅಲ್ಲೇ ನೆಲಹಿಡಿದು ಬಿದ್ದೆ. ಇದ್ದಕ್ಕಿದ್ದಂತೆ ಅಜ್ಜಿಯ ಪ್ರೇತಾತ್ಮ ನನ್ನ ಬಳಿ ಹಾರಿ ಬಂದಿತು. ನನ್ನ ಕತ್ತನ್ನು ಹಿಡಿದು ಮೇಲಕ್ಕೆ ಎತ್ತಿ ಒಂದೆರಡು ಬಾರಿ ತಿರುಗಿಸಿ ಜೋರಾಗಿ ಎಸೆಯಿತು. ಹೊಸ ಸಮಾದಿಯನ್ನು ಕಟ್ಟಲು ಯಾರೋ ಹಾಕಿದ್ದ ಮರಳಿನ ರಾಶಿಯ ಮೇಲೆ ಬಿದ್ದೆ. ನಾನಾ ಬಿದ್ದ ರಭಸಕ್ಕೆ ಮರಳಿನ ರಾಶಿ ಚಲ್ಲಾ ಪಿಲ್ಲಿಯಾಯಿತು..

"ಈಗಲಾದರೂ ಮನೆಗೆ ಹೋಗೋ..... ಸುಮ್ಮನೆ ಸಾಯಬೇಡ, ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡ. ಓಡು... ಇಲ್ಲಿಂದ ಓಡಿ ಹೋಗು.... ಇದು ಕೊನೆಯ ಅವಕಾಶ, ಏಳು ಬೇಗ ಏಳು.... ಓಡೋ...!!  ನಾಳೆ ನಾನೇ ಮನೆಗೆ ಬರುತ್ತೇನೆ.  ಬಂದು ನಿನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳುತ್ತೇನೆ...ಇಲ್ಲಿಂದ ತೊಲಗೋ...."

ಪ್ರೇತಾತ್ಮ ಮತ್ತೆ ಭಯಂಕರವಾಗಿ ಕಿರುಚಿತು. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಭಯದಿಂದ ಹೆದರಿ ಹೆದರಿ ನನ್ನ ಕಾಲುಗಳು ನಡೆಯಲಾರದಷ್ಟು ಶಕ್ತಿ ಕಳೆದುಕೊಂಡಿತ್ತು. ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸಿದೆ. ಎದ್ದು ನಿಂತೆ, ಶಕ್ತಿ ಸಾಲದಾಯಿತು. ಭಯದಿಂದ ಸೋತು ಹೋದದ್ದರಿಂದ ನಡೆಯಲು ಶಕ್ತಿ ಇಲ್ಲದಂತಾಯಿತು. ಮತ್ತೆ ದೊಪ್ಪ್ ಎಂದು ನೆಲ ಹಿಡಿದು ಬಿದ್ದೆ. ಗಾಳಿಯೊಂದಿಗೆ ತೇಲಿ ಬಂದ ಪ್ರೇತಾತ್ಮವು. ನನ್ನ ಕೊರಳ ಪಟ್ಟಿಯನ್ನು ಹಿಂಡಿದು ನನ್ನನ್ನು ಮೇಲಕ್ಕೆತ್ತಿತು. ನನ್ನನ್ನು ರಭಸವಾಗಿ ಹಿಡಿದೊಯ್ದಿತು. ಇನ್ನೇನು ನಾನು ಸತ್ತೇ ಹೋದೆ ಎನ್ನುವಷ್ಟು ಆತಂಕ ಮೂಡಿತು. ಗಾಳಿಯೊಂದಿಗೆ ತೇಲಿ ಹೋಗುತ್ತಿದ್ದ ಪ್ರೇತಾತ್ಮ ನನ್ನನ್ನು ಬಲವಾಗಿ ಹಿಡಿದು ನಮ್ಮ ಮನೆಯ ದಿಕ್ಕಿನತ್ತ ಹೊರಟಿತು.  ನನ್ನ ಮನೆ ತಲುಪಿದ ಕೂಡಲೇ ನನ್ನನ್ನು ರಭಸವಾಗಿ ನಮ್ಮ ಮನೆಯ ಮುಂದೆ ಎಸೆಯಿತು...

"ನಾಳೆ ಬರ್ತೀನಿ ಕಣೋ.... ರೆಡಿ ಇರು, ಆದ್ರೆ ನೀನೇನಾದರು ರುದ್ರಾ ಶಾಸ್ತ್ರಿಗಳ ಬಳಿ ಹೋದರೆ ಪರಿಣಮ ನೆಟ್ಟಗಿರಲ್ಲ. ಇದು ನನ್ನ ಮನೆ, ನನ್ನ ಇಷ್ಟ. ನನ್ನ ತೀರ್ಮಾನ, ಮಂತ್ರವಾದಿಗಳಾರೂ ಈ ಮನೆಯ ಕಡೆಗೆ ಬರಕೂಡದು..   ತಿಳಿಯಿತೇ...?"

ಪ್ರೇತಾತ್ಮ ಭಯಂಕರವಾಗಿ ಕಿರುಚುತ್ತಾ ಹೇಳಿತು. ಬಂದ ದಿಕ್ಕಿನಲ್ಲೇ ರಭಸವಾಗಿ ಹೊರಟು ಹೋಯಿತು.

ಭಯದಿಂದ ತತ್ತರಿಸಿ ಹೋಗಿದ್ದ ನಾನು ತೆವಳಿಕೊಂಡು ಕಟ್ಟೆಯ ಆಸರೆಯಿಂದ ಹೇಗೋ ಎದ್ದುನಿಂತೆ. ಕಿಟಕಿಯ ಕಿಂಡಿಯಿಂದ ಕೈ ಹಾಕಿ ಒಳಗಿನಿಂದ ಬಾಗಿಲ ಚಿಲಕವನ್ನು ತೆಗೆದೆ. ಹೇಗೋ ತೆವಳುತ್ತಲೇ ಹಾಸಿಗೆಯ ಬಳಿ ಹೋದೆ. ಹಾಸಿಗೆಯ ಮೇಲೆ ಹೇಗೆ ಬಿದ್ದುಕೊಂಡೆನೋ ನನಗೆ ತಿಳಿಯದು....

ಬೆಳಗ್ಗೆ ಎದ್ದಾಗ ಹತ್ತು ಗಂಟೆಯಾಗಿತ್ತು. ಎದ್ದ ಕೂಡಲೇ ರಾತ್ರಿಯ ಘಟನೆ ನೆನೆದು ಆಶ್ಚರ್ಯವಾಯಿತು. ಎದ್ದವನೇ ಹಾಸಿಗೆಯನ್ನು ಮಡಚಿಟ್ಟೆ. ನಾನು ಕಳೆದುಕೊಂಡೆ ಎಂದು ಭಾವಿಸಿದ್ದ ತಾಯತವು ಹಾಸಿಗೆಯಲ್ಲಿ ಅನಾಥವಾಗಿ ಬಿದ್ದಿತ್ತು. ರುದ್ರಾ ಶಾಸ್ತ್ರಿಯ ಶಿಷ್ಯ ತಾಯತವನ್ನು ನನ್ನ ಕೊರಳಿಗೆ ಸರಿಯಾಗಿ ಕಟ್ಟಿರಲಿಲ್ಲ. ಅದು ಕಳಚಿಕೊಂಡು ನಿನ್ನೆ ರಾತ್ರಿಯೇ ಹಾಸಿಗೆ ಹಿಡಿದಿತ್ತು. ಅದರ ಪರಿಣಾಮವಾಗಿಯೇ ನಾನು ರಾತ್ರಿ ತುಂಬಾ ಭಯದಿಂದ ನರಳಬೇಕಾಯಿತು. ಒಂದು ವೇಳೆ ತಾಯತ ಕೊರಳಲ್ಲಿದ್ದಿದ್ದರೆ ಆ ಪ್ರೇತಾತ್ಮ ನನ್ನನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ತಾಯತದ ದಾರ ಕಿತ್ತು ಹೋಗಿದ್ದರಿಂದ ಅದನ್ನು ಹಾಗೆಯೇ ಜೋಪಾನವಾಗಿ ಬ್ಯಾಗಲ್ಲಿ ಇಟ್ಟೆ. ನಾಳೆ ಅದಕ್ಕೆ ದಾರ ಕಟ್ಟಿಕೊಂಡು ಹಾಕಿಕೊಂಡರಾಯಿತು ಎಂದು ನನ್ನ ಕೋಣೆಯಿಂದ  ಕೆಳಗಿಳಿದು ಬಂದೆ. ಆಗಲೇ ಹೊಟ್ಟೆ ತಾಳ ಹಾಕಲಾರಂಭಿಸಿತ್ತು. ಸೀದ ಅಡುಗೆ ಮನೆಗೆ ಹೋದೆ ಸುಮತಿ ಚಿಕ್ಕಮ್ಮ ಇದ್ದರು. ಚಿಕ್ಕಮ್ಮ ನನ್ನ ನೋಡಿ ತಿಂಡಿಯನ್ನು ಹಾಕಿ ಕೊಡಲು ಮುಂದಾದರು. ಮತ್ತೆ ನನ್ನ ಕಡೆ ತಿರುಗಿ
"ಏನೋ ಇದು ಗಾಯ.... ಹಣೆಗೆ ಇಷ್ಟೊಂದು ದೊಡ್ಡ ಗಾಯ ಆಗಿದೆ. ಯಾವಾಗ ಮಾಡ್ಕೊಂಡೆ. ನಿನ್ನೆ ರಾತ್ರಿ ಊಟ ಮಾಡುವಾಗ ಚನ್ನಾಗಿಯೇ ಇದ್ದೆ. ಇವತ್ತೆನಾಯ್ತೋ...?"
ಚಿಕ್ಕಮ್ಮ ಆಶ್ಚರ್ಯದಿಂದ ಕೇಳಿದರು.

ನನಗೆ ಏನು ಹೇಳಬೇಕೋ ತೋಚದಂತಾಯಿತು. ಸುಮ್ಮನೆ ನಿಂತೇ ಇದ್ದೆ. ಚಿಕ್ಕಮ್ಮ ಮತ್ತೆ ನನ್ನನ್ನು ಆಶ್ಚರ್ಯದಿಂದ ನೋಡಿ ಮಾತು ಮುಂದುವರೆಸಿದರು. 

"ಏನೋ ಇದು ಕೈ ಕಾಲೆಲ್ಲ ಪರಚಿಕೊಂಡಂತೆ ಇದೆ. ಕೈ ಕಾಲುಗಳ ಮೇಲೆ ಅಲ್ಲಲ್ಲಿ ಗಾಯ.... ಏನೋ ಇದು ರಕ್ತದ ಕಲೆ ಷರಟಿನ ಮೇಲೆ, ಏನಾಯ್ತೋ...? ಯಾಕೋ ಷರಟು ಸಹ ಅಲ್ಲಲ್ಲಿ ಹರಿದು ಹೋಗಿದೆ, ಏನಾಯ್ತೋ ಪ್ರಕಾಶ ...? ಏನಾಯ್ತು ಅಂತ ಹೇಳೋ...?

"ಓ ....!!! ಅದಾ ಚಿಕ್ಕಮ್ಮ, ರಾತ್ರಿ ಒಂದಾ ಮಾಡಲು ಅಂತ ಎದ್ದೆ. ಇನ್ನೇನು ಮನೆಯ ಒಳಗೆ ಹೋಗುವುದು ಅಂತಾ... ಬಾಗಿಲು ತೆಗೆದು ಹೊರಗೆ ಹೋದೆ. ಹೋಗುವಾಗ ಕಲ್ಲು ಎಡವಿ ಜಾರಿ  ಮೇಲೆ ಬಿದ್ದೆ. ಹಣೆಗೆ ಸ್ವಲ್ಪ ಪೆಟ್ಟಾಯಿತು. ಬಿದ್ದ ರಭಸಕ್ಕೆ ಉರುಳಿ ಹೋದೆ ಚಿಕ್ಕಮ್ಮ. ಮೈ ಕೈ ಸಹ  ಸ್ವಲ್ಪ ಪರಚಿದಂತಾಯಿತು. ಅಷ್ಟೆ ಚಿಕ್ಕಮ್ಮ..."

ಸ್ವಲ್ಪ ತಡವರಿಸುತ್ತಲೇ ಹೇಳಿದೆ. ಚಿಕ್ಕಮ್ಮ ಮತ್ತೊಮ್ಮೆ ನನ್ನನ್ನು ಆಶ್ಚರ್ಯದಿಂದ ನೋಡಿದರು. ಮತ್ತೆ ಅವರು ಏನೂ ಮಾತನಾಡಲಿಲ್ಲ. ತಟ್ಟೆಯಲ್ಲಿ ಇಡ್ಲಿ ಚಟ್ನಿ ಬಡಿಸಿದರು. ತುಂಬಾನೇ ಹಸಿವಾಗಿದ್ದರಿಂದ ಎರೆಡೆರಡು ಸಲ ಬಡಿಸಿಕೊಂಡು ತಿಂದೆ....

ಮದ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಇವತ್ತು ನಾನು  ತೋಟಕ್ಕೆ ಹೋಗಲಿಲ್ಲ. ಮದ್ಯಾಹ್ನದ ಊಟದ ಬುತ್ತಿಯನ್ನು ಚಿಕ್ಕಪ್ಪನಿಗೆ ಕೊಡಲು ನಾನೇ ಪ್ರತಿದಿನ ಹೋಗುತ್ತಿದ್ದೆ. ಇವತ್ತು ಚಿಕ್ಕಮ್ಮ ಬೇಡ ನಾನೇ ಹೋಗ್ತೀನಿ ಅಂದ್ರು. ಕೈ ಕಾಲೆಲ್ಲಾ ಗಾಯ ಮಾಡ್ಕೊಂಡಿದ್ದೀಯಾ. ಸ್ವಲ್ಪ ವಿಶ್ರಾಂತಿ ತೆಗೆದು ಕೊ, ಸಾಯಂಕಲ ಆಸ್ಪತ್ರೆಗೆ ಹೋದರಾಯಿತು ಅಂದ್ರು. ನಾನು ಆಯ್ತು ಚಿಕ್ಕಮ್ಮ ಅಂತ ಹೇಳಿ ಸುಮ್ಮನಾದೆ. ಚಿಕ್ಕಮ್ಮ ಒಂದು ಬಾಕ್ಸ್ ನಲ್ಲಿ ಅನ್ನ, ಇನ್ನೊಂದರಲ್ಲಿ ಸೊಪ್ಪಿನ ಸಾರು, ಮತ್ತೊಂದರಲ್ಲಿ ನಯವಾಗಿ ತೀಡಿ ತಟ್ಟಿದ ರಾಗಿಯ ಮುದ್ದೆ, ಜೊತೆಗೆ ಮೊಸರು ಉಪ್ಪಿನಕಾಯಿಯನ್ನು ಸಹ ಬುತ್ತಿಯೊಂದಿಗೆ  ಕಟ್ಟಿಕೊಂಡು ಚೀಲವನ್ನು ಹಿಡಿದು ತೋಟದ ಕಡೆಗೆ ಹೊರಟರು.

ಮನೆಯಲ್ಲಿ ಯಾರೂ ಇರಲಿಲ್ಲ..
ನಾನೊಬ್ಬನೆ...!!!
ಅಜ್ಜಿ ಬೇರೆ ನಾಳೆ ಬರ್ತೀನಿ ಕಣೋ ಅಂತ ಎರೆಡೆರಡು ಸಲ ಎಚ್ಚರಿಸಿದ್ದಳು. ನಾನೂ ಸಹ ಅವಳ ಬರುವಿಕೆಯನ್ನೇ ಕಾಯುತ್ತಿದ್ದೆ. ಚಿಕ್ಕಮ್ಮ ಹೋದ ನಂತರ ತಣ್ಣೀರಿನ ಸ್ನಾನ ಮುಗಿಸಿಕೊಂಡು ಹೊರಬಂದೆ. ನೆನ್ನೆ ರಾತ್ರಿ ಹೆದರಿಕೆಯಿಂದ ಬೆವರಿದ್ದರಿಂದ ಮೈಯಲ್ಲಾ ಅಂಟು ಅಂಟಾಗಿ ಗಲೀಜಾಗಿತ್ತು. ಯಾವಾಗ ಸ್ನಾನ ವಾಯಿತು ದೇಹವೆಲ್ಲಾ ಭಾರ ಕಳೆದು ಕೊಂಡಂತಾಯಿತು. ಮನಸ್ಸು ಹಗುರವಾಯಿತು. ಮನೆಯ ಜಗುಲು ಕಟ್ಟಯವರೆಗೆ ಬಂದೆ...

ಅರೆ....!!! ಅಜ್ಜಿ...!!

ಕೂಡಲೇ ಶಾಕ್ ಆದಂತಾಯಿತು.

ಅಜ್ಜಿ ಜಗುಲಿಯ ಕಟ್ಟೆಯ ಮೇಲೆ ಶಾಂತ ಸ್ವರೂಪವನ್ನು ತಾಳಿ ಹೂವನ್ನು ಕಟ್ಟುತ್ತಾ ಕುಳಿತ್ತಿದ್ದಳು. ನೆನ್ನೆ ರಾತ್ರಿಯ ಆ ಭಯಾನಕ ರೂಪವನ್ನು ನೋಡಿದ ನನಗೆ ಅವಳ ಬಳಿ ಹೋಗಲು ಮನಸ್ಸು ಹೆದರಿತು. ಕೊರಳಲ್ಲಿ ತಾಯತ ಬೇರೆ ಇರಲಿಲ್ಲ. ನೆನ್ನೆ ರಾತ್ರಿ ಅಜ್ಜಿಯ ಪ್ರೇತಾತ್ಮ ಮನಸ್ಸಿಗೆ ಬಂದ ಹಾಗೆ ನನ್ನ ಎತ್ತಿ ಎಸೆದದ್ದು ನೆನಪಾಯಿತು... ಮತ್ತೆ ನಡುಕ ಶುರು ಆಯಿತು. ಅಜ್ಜಿ ಮಾತ್ರ ನನ್ನನೇ ಕಾಯುತ್ತಾ ಕುಳಿತಂತೆ ಕಂಡಿತು. ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ನಾನು ಹೆದರುತ್ತಿರುವುದನ್ನು ಕಂಡ ಅಜ್ದಿ..

"ಬಾರೋ ಪ್ರಕಾಶ, ಹೆದರ ಬೇಡ ಕಣೋ... ಬಾ ನನ್ನ ಹತ್ರ ಕೂತ್ಕೋ ..."

ತನ್ನ ಎರಡೂ ಕೈ ಗಳಿಂದ ಬಾ.. ಬಾ.  ಎಂದು ಸನ್ನೆಯಿಂದ ಕರೆದಳು. ಅವಳು ಕರೆದ ಶೈಲಿ ಮತ್ತು ಅವಳ ನೋಟಕ್ಕೆ ನಾನು ಮತ್ತೆ ಬೆಚ್ಚಿದೆ. ನಿಧಾನವಾಗಿ ಹೆಜ್ಜೆ ಹಾಕುತ್ತಲೇ ಅವಳ ಬಳಿ ಹೋದೆ. ಪಕ್ಕದಲ್ಲಿ ಕುಳಿತೆ.
ಅಜ್ಜಿ ಮಾತ್ರ ವಿಚಿತ್ರವಾಗಿ ನನ್ನನ್ವೇ ದಿಟ್ಟಿಸುತ್ತಿದ್ದಳು. ನನ್ನ ತಲೆಯನ್ನೊಮ್ಮೆ ಸವರುತ್ತಾ 'ಮಗೂ' ಅಂತ ಮತ್ತೊಮ್ಮೆ ಮೆಲು ಧ್ವನಿಯಲ್ಲಿ ಮಾತನಾಡಿಸಿದಳು.
ತಕ್ಷಣ ಹೆದರಿಕೊಂಡು ತಲೆಯ ಮೇಲಿನ ಅವಳ ಕೈಯನ್ನು ಕಿತ್ತೆಸೆದೆ.

"ಯಾಕಪ್ಪಾ.... ನನ್ನ ಕಂಡರೆ ಭಯಾನಾ...? ನಿನಗೆ ಅಜ್ಜಿ ಬೇಡ್ವಾ...? ನಾನು ಈ ಮನೆಯಲ್ಲಿ ಇರೋದು ನಿನಗೆ ಇಷ್ಟವಿಲ್ವಾ....? ನಾನು ನಿನ್ನ ಅಜ್ಜಿ ಕಣೋ..? ನಿನಗೆ ಎಲ್ಲಾ ರಹಸ್ಯವನ್ನು ಹೇಳಲೆಂದೇ ಬಂದಿದ್ದೇನೆ... ಆದರೆ ನೀನು ನನ್ನ ಒಂದು ಮಾತನ್ನು ನಡೆಸಿಕೊಡಬೇಕು...?

ಅಜ್ಜಿ ನನ್ನನ್ನು ನೋಡುತ್ತಲೇ ಹೇಳಿದಳು

"ಅದೇನು ಹೇಳಜ್ಜಿ... ನಿನ್ನ ಮಾತು ನಡೆಸಿಕೊಡುತ್ತೇನೆ..."

"ನೀನು ಇನ್ನು ಮುಂದೆ ಅಮವಾಸ್ಯೆಯ ದಿನ ಯಾವತ್ತೂ ಸಮಾದಿಯ ಕಡೆಗೆ ಹೋಗಬೇಡ. ಹಾಗಂತ ಮಾತು ಕೊಡು. ಎಲ್ಲಾ ರಹಸ್ಯವನ್ನು ಹೇಳುತ್ತೇನೆ" 

ಹಾಗೆ ಹೇಳುತ್ತಾ ಅಜ್ಜಿ ಕೈ ಮುಂದೆ ಚಾಚಿದಳು. ನಾನು ಅಜ್ಜಿಯ ಕೈ ಮೇಲೆ ನನ್ನ ಕೈಯಿಟ್ಟು ಅಮವಾಸ್ಯೆಯ ರಾತ್ರಿ ಸ್ಮಶಾನಕ್ಕೆ ಹೋಗುವುದಿಲ್ಲ ಅಂತ ಭಾಷೆಯನ್ನು ಕೊಟ್ಟೆ...

ಆಗ ಅಜ್ಜಿಯು ತಾನು ಪ್ರೇತಾತ್ಮವಾಗಿ ಅಲೆಯುತ್ತಿರುವ ರಹಸ್ಯವನ್ನು ನಿಧಾನವಾಗಿ ಎಳೆ ಎಳೆಯಾಗಿ ಬಿಚ್ಚಿ ಹೇಳಲಾರಂಬಿಸಿದಳು...

(ಮುಂದುವರೆಯುವುದು)

No comments:

Post a Comment