Monday, 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-7)

ಪ್ರೇತಾತ್ಮದ ಮನೆಯಲ್ಲಿ (ಭಾಗ-7)ಅಜ್ಜಿಯು ತಾನು ಪ್ರೇತಾತ್ಮವಾಗಿ ಅಲೆಯುತ್ತಿರುವ ರಹಸ್ಯವನ್ನು ನಿಧಾನವಾಗಿ ಎಳೆ ಎಳೆಯಾಗಿ ಬಿಚ್ಚಿ ಹೇಳಲಾರಂಬಿಸಿದಳು...

"ನಮ್ಮೂರಲ್ಲಿ 'ಜಿಂಗಾಡೆ' ಮನೆತನ ಅಂದ್ರೆ ತುಂಬಾ ಗೌರವ. ನಿನ್ನ ಅಜ್ಜ ನಾಗೇಶಪ್ಪ ಅಂದ್ರೆ ಸಾಕು ಸುತ್ತಲಿನ ನಾಲ್ಕೈದು ಹಳ್ಳಿ ಜನಕ್ಕೂ ಚಿರ ಪರಿಚಿತವಾದ ವ್ಯಕ್ತಿತ್ವ. ಹತ್ತು ಎಕರೆ ಅಡಿಕೆ ತೋಟ. ಹದಿನೈದು ಎಕರೆ ನೀರಾವರಿ, ಇಪ್ಪತ್ತು ಎಕರೆ ತೆಂಗು, ಎಂಟು ಎಕರೆ ಗದ್ದೆ. ಜೊತೆಗೆ ವಿಶಾಲವಾದ ಹಳ್ಳಿಯ ಮನೆ. ಹೊಲ,ತೋಟದಲ್ಲಿ ಕೆಲಸ ಮಾಡುವ ಆಳುಗಳ ಸಂಖ್ಯೆಗೇನು ಕಡಿಮೆಯಿರಲಿಲ್ಲ. ಯುಗಾದಿ ಹಬ್ಬ ಬಂತೆಂದರೆ ಸಾಕು ಎಲ್ಲಾ ಆಳುಗಳಿಗೆ ಹೊಸ ಬಟ್ಟೆ ಹಂಚುತ್ತಿದ್ದರು. ಅಂದು ಹೊಸ ಬಟ್ಟೆ ಪಡೆಯಲು ನಿಂತ ಆಳುಗಳ ಸಾಲು ನೋಡಿದರೆ ಸಾಕು, ಎಂಥವರಿಗಾದರೂ ನಾಗೇಶಪ್ಪನ ಉದಾರ ಗುಣ ಪರಿಚಯ ವಾಗುತ್ತಿತ್ತು. ನಿನ್ನ ಅಜ್ಜ ಒಂದು ರೀತಿ ಕಸ್ತೂರಿ ನಿವಾಸದ ಡಾ. ರಾಜ್ ಕುಮಾರ್ ಇದ್ದಂತೆ. ದಾನ ಧರ್ಮದಲ್ಲಿ ಎತ್ತಿದ ಕೈ, ಅವರ ಕೈ ಯಾವಾಗಲೂ ಆಕಾಶ ನೋಡುತ್ತಿತ್ತೇ ವಿನಃ ಎಂದಿಗೂ ಭೂಮಿಯನ್ನು ನೋಡಿದ್ದಿಲ್ಲ. ನಾನು ನಿಮ್ಮಜ್ಜನನ್ನು ಮದುವೆಯಾಗಿ ಬಂದಾಗಲೂ ಸಹ ಅವರು ತಮ್ಮ ದಾನ ಧರ್ಮದ  ಗುಣವನ್ನು ಬದಲಿಸಲಿಲ್ಲ. ಅದೇ ಉದಾರತೆಯನ್ನು ತೋರಿಸುತ್ತಿದ್ದರು. ನಾನು ಸಹ ಯಾವತ್ತೂ ಅವರ ಘನತೆ ಗೌರವಕ್ಕೆ ಧಕ್ಕೆ ಬರದಂತೆಯೇ ನಡೆದುಕೊಳ್ಳುತ್ತಿದ್ದೆ. ಗಂಡನಿಗೆ ತಕ್ಕ ಹೆಂಡತಿಯಾಗಿ ಅವರೊಡನೆ ಬಾಳುತ್ತಿದ್ದೆ. ಅವರೊಡನೆ ಸಂಸಾರ ಮಾಡುತ್ತಿದ್ದರಿಂದ ನನಗೂ ಸಹ ಅಲ್ಪ ಸ್ವಲ್ಪ ಉದಾರತೆಯ ಗುಣ ಬಂದಿತ್ತು. ದೇವರು ವಮಗೆ ನೀಡಿದ ಶ್ರೀಮಂತಿಯ ಸ್ವಲ್ಪ ಭಾಗವನ್ನು ಬಡವರೊಂದಿಗೆ ಹಂಚಿ ತಿನ್ನುವ ಪರಿಪಾಠ ನಮಗೆ ಅಭ್ಯಾಸವಾಗಿ ಹೋಗಿತ್ತು. ಇದರಿಂದ ಇಡೀ ಹಳ್ಳಿಯೇ ನಿಮ್ಮಜ್ಜನನ್ನು ಗೌರವ ಮರ್ಯಾದೆಯಿಂದ ನಡೆದುಕೊಳ್ಳುತ್ತಿತ್ತು. ಊರ ಜಾತ್ರೆಯ ತೇರು ಎಳೆಯಲು ನಾಗೇಶಪ್ಪ ಬೇಕು ಎನ್ನುತ್ತಿದ್ದರು. ಹಳ್ಳಿಯಲ್ಲಿ ಯಾವುದಾದರೂ ವ್ಯಾಜ್ಯ ನಡೆದರೆ ಸಾಕು, ವ್ಯಾಜ್ಯವನ್ನು ತೀರ್ಮಾನಿಸಲು ನಿಮ್ಮಜ್ಜನೇ ಹೋಗಬೇಕಿತ್ತು. ಸುತ್ತ ಹತ್ತು ಹಳ್ಳಿಗಳಲ್ಲಿ ಯಾವುದೇ ಸಭೆ ಸಮಾರಂಭಗಳಾಗಲಿ ನಿನ್ನ ನಾಗೇಶಜ್ಜ ಇಲ್ಲದೇ ನಡೆಯುತ್ತಿರಲಿಲ್ಲ. ಅಂತಹ ವ್ಯಕ್ತಿಯನ್ನು ಗಂಡನನ್ನಾಗಿ ಪಡೆದ ನಾನು ನಿಜವಾಗಲೂ ಪುಣ್ಯವಂತೆ. ಯಾವ ದೇವರಿಗೆ ಒಂದೆರಡು ಹೂವುಗಳನ್ನು ಹೆಚ್ಚಾಗಿ ಮುಡಿಸಿದ್ದೆನೋ ಏನೋ... ದೇವರು ನನಗೆ ಸುಸಂಸ್ಕೃತ ಗಂಡನನ್ನು ದಯಪಾಲಿಸಿದ್ದ. ಮದುವೆಯಾಗಿ ಒಂದು ವರ್ಷಕ್ಕೆ ನಿಮ್ಮಪ್ಪ ನನ್ನ ಹೊಟ್ಟೆಯಲ್ಲಿ ಬೆಳೆಯಲಾರಂಭಿಸಿದ. ಆ ಸಮಯದಲ್ಲಿ ನನಗೆ ಸೇವೆ ಮಾಡಲು ಆಳು ಕಾಳಿಗೇನೂ ಕೊರತೆ ಇರಲಿಲ್ಲ. ಇಷ್ಟೆಲ್ಲಾ ಸುಖ ಸಂತೋಷವನ್ನು ನಾನು ಅನುಭವಿಸುತ್ತಿದ್ದೆ. ಯಾವ ತೊಂದರೆಯಿಲ್ಲದೆ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಅವನು ನನ್ನ ಹಿರಿಯ ಮಗ ಶಾಮ. ಅಂದ್ರೆ ಈಗ ನಿಮ್ಮಪ್ಪ. ಆದರೆ ಅದೇನು ದುರಾದೃಷ್ಟವೋ ಏನೋ ನಿಮ್ಮ ಅಪ್ಪ ಹುಟ್ಟಿದ ಆರು ತಿಂಗಳಲ್ಲಿ ಅನಾರೋಗ್ಯದಿಂದ ಬಳಲಿದ. ಆರೋಗ್ಯದಲ್ಲಿ ಚೇತರಿಕೆ  ಕಾಣದೆ ಸಾಯುವ ಹಂತಕ್ಕೆ ಬಂದು ತಲುಪಿದ. ವೈದ್ಯರೂ ಸಹ ಏನೂ ಮಾಡಲಾಗದೇ ಅಸಹಾಯಕರಾಗಿ ಕೈ ಚಲ್ಲಿದರು. ಕೊನೆಗೆ ಯಾರೋ ಹಿರಿಯರು ವೈಷ್ಣೋದೇವಿಗೆ ಹೋಗಿ ಬನ್ನಿ.. ದೇವಿ ನಿಮ್ಮನ್ನು ಕಾಪಾಡುತ್ತಾಳೆ ಎಂದು ಸಲಹೆ ನೀಡಿದರು. ಅದೇನು ಮಹಿಮೆಯೋ ಏನೋ ವೈಷ್ಣೋದೇವಿಗೆ ಹೋಗಿ ಬಂದ ನಂತರ ನಿಮ್ಮಪ್ಪ ನಿಧಾನವಾಗಿ ಚೇತರಿಸಿ ಕೊಳ್ಳಲಾರಂಭಿಸಿದ. ಆರೋಗ್ಯವೂ ಸುಧಾರಣೆಯಾಯಿತು. ಎಲ್ಲಾ ಆ ದೇವಿಯ ಕೃಪೆ. ಇದಾದ ನಂತರ ನಮಗೆ ಹನ್ನೆರಡು ವರ್ಷಗಳವರೆಗೆ ಮಕ್ಕಳಾಗಲೇ ಇಲ್ಲ. ನಂತರ ಇನ್ನೊಂದು ಗಂಡು ಮಗು ಆಯಿತು. ಅವನೇ ನಿಮ್ಮ ಚಿಕ್ಕಪ್ಪ ಅನಂತು. ಇಬ್ಬರು ಗಂಡು ಮಕ್ಕಳೊಂದಿಗೆ ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ನಿಮ್ಮಪ್ಪನಿಗೆ ವಿಧ್ಯಾಭ್ಯಾಸಕ್ಕೆ ಯಾವ ಕೊರತೆಯೂ ಇರಲಿಲ್ಲ. ನಾವಂತೂ ಓದಲಿಲ್ಲ ಮಕ್ಕಳಾದರೂ ಓದಿ ವಿದ್ಯಾವಂತನಾಗಲಿ ಅಂತ ನಿನ್ನ ಅಜ್ಜ ನಿಮ್ಮಪ್ಪನನ್ನು ಸಾಕಷ್ಟು ಹಣ ಚೆಲ್ಲಿ ಓದಿಸಿದರು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಎಂ,ಟೆಕ್ ಎಲ್ಲಾ ಮಾಡಿಸಿದರು. ಮಗ ಹಳ್ಳಿಗೆ ಬಂದಕೂಡಲೇ ಮಗನನ್ನು ಎತ್ತಿ ಸಂಭ್ರಮದಿಂದ ಕುಣಿಯುತ್ತಿದ್ದರು. ಈ ಹಳ್ಳಿಯಲ್ಲಿ ನನ್ನ ಮಗನಷ್ಟು ಓದಿದವರಾರು ಇಲ್ಲ ಎಂದು ಹೆಮ್ಮೆ ಪಟ್ಟು ಕೊಳ್ಳುತ್ತಿದ್ದರು. ನಿಮ್ಮಜ್ಜನಿಗೆ ಮಕ್ಕಳೆಂದರೆ ಪಂಚಪ್ರಾಣ. ನಿಮ್ಮಪ್ಪನಿಗೆ ಮಕ್ಕಳು ಏನು ಕೇಳಿದರೂ ಇಲ್ಲ ಎಂದು ಹೇಳಿದ್ದು ನಾ ಕಾಣೆ. ನಿಮ್ಮಪ್ಪನೂ ಕೂಡ ಅಷ್ಟೆ ತಂದೆ ತಾಯಿ ಎಂದರೆ ಪಂಚಪ್ರಾಣ. ಊರಿಗೆ ಬಂದಾಗ ಮತ್ತೆ ವಾಪಸ್ಸು ಹೋಗುವಾಗ ತಂದೆ ತಾಯಿಗಳ ಪಾದ ಚರಣವನ್ನು ಸ್ಪರ್ಶಿಸಿ ನಮಸ್ಕರಿಸುವುದನ್ನು ಯಾವತ್ತೂ ಮರೆತವನಲ್ಲ.. ನಿಜವಾಗಲೂ ನಿಮ್ಮಪ್ಪ ಸುಸಂಸ್ಕೃತ, ಆತ ನನ್ನ ಹಿರಿಯ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿತ್ತು...."

ಅಜ್ಜಿ ತನ್ನ ಮಕ್ಕಳ ಬಗ್ಗೆ ಹೇಳುವಾಗ ನಾನು ಕುತೂಹಲದಿಂದ ಕೇಳುತ್ತಿದ್ದೆ. ನನಗೂ ಇಂತಹ ಅಪ್ಪನನ್ನು ಪಡೆದಿದ್ದಕ್ಕೆ ಹೆಮ್ಮೆ ಅನಿಸುತ್ತಿತ್ತು. ಅಜ್ಜಿ ಹೇಳಿದಂತೆ ಅಪ್ಪ ನಿಜವಾಗಿಯೂ ಜಂಟಲ್ ಮೆನ್... ಅವರ ಮಗನಾಗಿ ಹುಟ್ಟಿದ್ದಕ್ಕೆ ನನಗೆ ಧನ್ಯ ಎನಿಸಿತು.

"ಇಷ್ಟೆಲ್ಲಾ ಸುಖ ಸಂತೋಷವನ್ನು ಪಡೆದ ನೀನು ಈಗ್ಯಾಕೆ ಪ್ರೇತಾತ್ಮ ಳಾಗಿರುವೆ ಅಜ್ಜಿ....? ಏನಾದರೂ ಆಗಬಾರದ ಘಟನೆ ನಡೆಯಿತೇ ಅಜ್ಜಿ..?"

ನಾನು ಕುತೂಹಲದಿಂದ ಕೇಳಿದೆ 

"ನೀನು ಭಾವಿಸುತ್ತಿರುವಂತೆ ಅಂತಹ ಅನಿರೀಕ್ಷಿತ, ಘಟನೆಯನ್ನು ಹೇಳುವೆ ಮಗು. ನಾನು ಪ್ರೇತಾತ್ಮನಾಗಿ ಈ ಮನೆಯಲ್ಲೇ ಇರುವುದಕ್ಕೆ ಕಾರಣವಿದೆ. ಸರಿ.... ನಿಮ್ಮಪ್ಪನ ಬಗ್ಗೆ ಹೇಳುತ್ತಿದ್ದೆ ಅಲ್ಲವೇ...? ನಿಮ್ಮಪ್ಪ ಅಂದ್ರೆ ನನ್ನ ಹಿರಿ ಮಗ ಶಾಮ ನಡತೆಯಲ್ಲಿ ಶ್ರೀರಾಮಚಂದ್ರನೇ ಆಗಿದ್ದ. ಅಂತಹ ಮಗ ಸುಸಂಸ್ಕೃತನಾಗಿ ಬೆಳಸಿದ್ದು ನಮಗೂ ಹೆಮ್ಮೆಯ ವಿಷಯವಾಗಿತ್ತು. ಆತನ ಓದು ಮುಗಿದ ಮೇಲೆ ಬೆಂಗಳೂರಿನಲ್ಲೇ ಕೆಲಸವೂ ಸಿಕ್ಕಿತು. ಅದೂ ಸರ್ಕಾರಿ ಕೆಲಸ. ಬೆಂಗಳೂರು ಉತ್ತರಕ್ಕೆ ತಹಸಿಲ್ದಾರ್ ಆಗಿ ನೇಮಕವಾದ. ಆಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಆ ದಿನ ಹಳ್ಳಿಯವರಿಗೆಲ್ಲಾ ಸಿಹಿ ಹಂಚಲಾಯಿತು. 

ಕೆಲಸ ಸಿಕ್ಕಿ ಇನ್ನೂ ಒಂದು ವರ್ಷವೂ ಆಗಿರಲಿಲ್ಲ. ಸಾಕಷ್ಟು ಮದುವೆಯ ಸಂಬಂಧಗಳು ಬರಲಾರಂಬಿಸಿದವು. ನಿಮ್ಮ ತಾತ ಹಲವು ಸಂಬಂಧಗಳನ್ನು ಹುಡುಕಿದರೂ ಅವುಗಳನ್ನು ನಿಮ್ಮಪ್ಪ ಒಪ್ಪಿಕೊಳ್ಳಲಿಲ್ಲ. ಆತ ಬೆಂಗಳೂರಿನಲ್ಲೇ ಒಂದು ಸಂಬಂಧ ಹುಡುಕಿಕೊಂಡಿದ್ದ. ಹುಡುಗಿ ಶಾಮನ ಕಾಲೇಜಿನವಳೆ, ನೋಡಲು ಅಪ್ಸರೆಯಂತಹ ಸೌಂದರ್ಯ,  ಇಬ್ಬರೂ ಒಂದೇ ಕಾಲೇಜಿನಲ್ಲಿ ಜೊತೆಯಾಗಿಯೇ ಓದಿದವರು. ಓದುವಾಗಲೇ ಅವರಿಬ್ಬರಲ್ಲಿ ಪ್ರೀತಿ ಮೊಳಕೆಯೊಡೆದಿತ್ತು. ಜೊತೆಯಾಗಿಯೇ ಹಲವು ವರ್ಷ ಸ್ನೇಹಿತರಾಗಿದ್ದವರು. ಶಾಮನಿಗೆ ತನ್ನ ಪ್ರೀತಿಯ ವಿಷಯವನ್ನು ಹೇಗೆ ತನ್ನ ತಂದೆಗೆ ತಿಳಿಸುವುದು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು. ಆದ್ದರಿಂದ ಅವನು ತನ್ನ ಪ್ರೀತಿಯ ವಿಷಯವನ್ನು ಮುಚ್ಚಿಟ್ಟು ಬೆಂಗಳೂರಿನಲ್ಲಿ ಒಂದು ಹುಡುಗಿ ಇದೆಯಂತೆ ಬ್ರೋಕರ್ ಹೇಳಿದ, ಬಂದು ನೋಡಿ, ನಿಮಗೆ ನೀವು ಒಪ್ಪಿಗೆಯಾದರೆ ಮದುವೆಯಾಗುತ್ತೇನೆ ಎಂದು ನಮ್ಮನ್ನು ಬೆಂಗಳೂರಿಗೆ ಕರೆಯಿಸಿಕೊಂಡ....

ಆ ದಿನ ನಾವು ಶಾಮನಿಗೆ ಹುಡುಗಿ ನೋಡಲು ಹೋದೆವು. ಹುಡುಗಿ ಕಡೆಯವರು ತುಂಬಾ ಶ್ರೀಮಂತರು  ಹುಡುಗಿಯ ಅಪ್ಪ ಬೆಂಗಳೂರಿನ ಪ್ರಸಿದ್ಧ ಉದ್ಯಮಿ. ಅವರ ಮನೆ ಅರಮನೆಯಂತೆ ದೊಡ್ಡದಾಗಿಯೂ ಸುಂದರವಾಗಿಯೂ ಇತ್ತು. ಮನೆಯ ಮುಂದೆ ಹಲವು ಐಷರಾಮಿ ಕಾರುಗಳು ನಿಂತಿದ್ದವು. ಮನೆಯ ಕೆಲಸಕ್ಕೆ ಆಳುಕಾಳುಗಳ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ನಮಗಿಂತ ಎರಡರಷ್ಟು ಶ್ರೀಮಂತರಾಗಿದ್ದರು. ನಾವು ಮನೆಯೊಳಗೆ ಹೋದಕೂಡಲೇ ಹುಡುಗಿಯ ಅಪ್ಪ ನಗು ಮುಖದಿಂದ ಸ್ವಾಗತಿಸಿದರು. ಹುಡುಗಿ ನಮ್ಮನ್ನು ಕಂಡ ಕೂಡಲೇ ನಮ್ಮ ಪಾದ ಚರಣಗಳನ್ನು ಸ್ಪರ್ಶಿಸಿ ನಮಸ್ಕರಿಸಿದಳು. ಹುಡುಗಿ ರಾಣಿಯಂತೆ ಸುಂದರವಾಗಿದ್ದಳು. ಅದೇನು ಸಂಸ್ಕಾರ, ಅದೇನು ಸಂಸ್ಕೃತಿ, ಅಷ್ಟೊಂದು ಶ್ರೀಮಂತರಾಗಿದ್ದರೂ ಅಹಂಕಾರ ಇರಲಿಲ್ಲ. ಜೊತೆಗೆ ನಮ್ಮ ಶಾಮನಿಗೆ ಅನುರೂಪಳಾದ ಹೆಣ್ಣು. ಇಬ್ಬರ ಜೋಡಿ ಹೇಳಿ ಮಾಡಿಸಿದಂತೆ ಇತ್ತು. ಹುಡುಗಿಯ ತಂದೆ ನಿಮಗೆ ಕೈ ಮುಗಿದು ನಮಸ್ಕರಿಸಿ ದಯಮಾಡಿ ನನ್ನ ಮಗಳನ್ನು ಸೊಸೆಯಾಗಿ ತಂದುಕೊಳ್ಳಿರಿ ಎಂದು ಕೈ ಮುಗಿದು ಬೇಡಿಕೊಂಡರು. ಅವರು ಅಷ್ಟೊಂದು ಶ್ರೀಮಂತರಾಗಿದ್ದರೂ ಕೂಡ ನಮಗೆ ಕೈ ಮುಗಿದು ಬೇಡಿಕೊಂಡಿದ್ದು ನೋಡಿ ನನ್ನ ಮನ ಕರಗಿತು. ನಾನು ಮತ್ತು ಶಾಮ ಹುಡುಗಿಯನ್ನು ಒಪ್ಪಿಕೊಂಡರೂ ನಿಮ್ಮ ತಾತ ಒಪ್ಪಿಕೊಳ್ಳಲಿಲ್ಲ. ಶಾಮನಿಗೆ ಬುದ್ದಿವಾದವನ್ನು ಹೇಳಿದರು

"ನೋಡು ಮಗು... ಹುಡುಗಿಯ ಕಡೆಯವರು ಯಾವಾಗಲೂ ನಮಗಿಂತ ಕಡಿಮೆ ಶ್ರೀಮಂತರಾಗಿದ್ದರೆ ಚೆನ್ನ. ನಮಗೆ ದೇವರು ಸಾಕಷ್ಟು ಹಣ ಆಸ್ಥಿ ಎಲ್ಲಾ ಕೊಟ್ಟಿದ್ದಾನೆ. ನಮಗೆ ಹಣ, ಸಂಪತ್ತಿಗೇನೂ ಕಡಿಮೆಯಿಲ್ಲ. ಯಾವುದಾದರೂ ಬಡಕುಟುಂಬದ ಹೆಣ್ಣನ್ನು ಮದುವೆಯಾಗು. ಬಡವರಲ್ಲಿ ಉತ್ತಮ ಸಂಸ್ಕೃತಿಯಿರುತ್ತದೆ. ಸುಂದರ ಹುಡುಗಿಯರೂ ಸಿಗುತ್ತಾರೆ..."

ತಾತನ ಸಲಹೆ ನಿಮ್ಮ ತಂದೆಗೆ ಒಪ್ಪಿಗೆಯಾಗಲಿಲ್ಲ. ಆದರೆ ಶಾಮ ಮಾತ್ರ ತಂದೆಯ ವಿರುದ್ದವಾಗಿ ಏನೂ ಮಾತನಾಡಲಿಲ್ಲ. ಆಗಲಿ ಅಪ್ಪ ನಿಮ್ಮ ಇಚ್ಛೆಯಂತೆಯೇ ಆಗಲಿ ಎಂದ. ಆತ ತಂದೆಯ ಮಾತನ್ನು ಯಾವತ್ತೂ ತೆಗೆದು ಹಾಕಿದವನಲ್ಲ. ಯಾವತ್ತೂ ತಂದೆಯ ವಿರುದ್ಧ ನಡೆದುಕೊಂಡವನಲ್ಲ. ನನ್ನ ಮಗ ಶಾಮ ನಿಜಕ್ಕೂ ಕೋಟಿಗೊಬ್ಬ. ಆದರೆ ಅದಾಗಿ ಮೂರು ದಿನದಿಂದಲೂ ಆತ ತುಂಬಾ ಬೇಸರದಿಂದಲೇ ಇದ್ದ. ತನ್ನ ಹಲವು ವರ್ಷದ ಪ್ರೀತಿ ಸತ್ತು ಹೋಯಿತಲ್ಲ ಎಂದು ಮನದಲ್ಲೇ ಕೊರಗುತ್ತಿದ್ದ. ತನ್ನ ತಂದೆಯ ಮೇಲಿನ ಪ್ರೀತಿಗೆ ತಾನು ಪ್ರೀತಿಸಿದ ಹುಡುಗಿಯನ್ನೇ ತ್ಯಜಿಸಲು ಮುಂದಾದ. ಮಗನ ಈ ನಡವಳಿಕೆಯನ್ನು ನಿಮ್ಮ ತಾತ ಸೂಕ್ಮವಾಗಿ ಗಮನಿಸಿದರು. ಶಾಮನ ಸ್ನೇಹಿತನಿಂದ ಶಾಮನ  ಪ್ರೀತಿಯ ವಿಷಯವನ್ನು ತಿಳಿದುಕೊಂಡರು. ತಂದೆಯ ಮೇಲಿನ ಅಬಿಮಾನಕ್ಕೆ ತನ್ನ ಪ್ರೀತಿಯನ್ನು ತ್ಯಜಿಸಲು ಹೊರಟ ಮಗನ ಮೇಲೆ ನಿನ್ನ ತಾತನಿಗೆ ಹೆಮ್ಮೆ ಎನಿಸಿತು. ಮಗನ ಸುಖ ಸಂತೋಷಕ್ಕಾಗಿ ನಿಮ್ಮ ತಾತ ಮದುವೆಗೆ ಒಪ್ಪಿಗೆ ನೀಡಿದರು.

ಮದುವೆ ತುಂಬಾ ವಿಜೃಂಬಣೆಯಿಂದ ನಡೆಯಿತು. ಸಹಸ್ರಾರು ಸಂಖ್ಯೆಯ ಜನ ಆಗಮಿಸಿದ್ದರು. ಶಾಮು ಮದುವೆಯಾದ ನಂತರ ಸುಂದರವಾದ ಅಪಾರ್ಟ್ ಮೆಂಟಿನಲ್ಲಿ ಹೊಸ ಹೆಂಡತಿಯೊಡನೆ ಸಂಸಾರ ಹೂಡಿದ. ನನ್ನ ಸೊಸೆ ನಮ್ಮ ಮೇಲೆ ಸಾಕಷ್ಟು ಅಬಿಮಾನ ಇಟ್ಟುಕೊಂಡಿದ್ದಳು. ನಮ್ಮನ್ನು ಪದೇ ಪದೇ ಬೆಂಗಳೂರಿಗೆ ಬರುವಂತೆ ಆಹ್ವಾನಿಸುತ್ತಿದ್ದಳು. ಒಟ್ಟಿನಲ್ಲಿ ಮಗನ ಸುಂದರವಾದ ಸಂಸಾರ ನೋಡಿ ನಮಗೆ ತೃಪ್ತಿ ಮತ್ತು ಧನ್ಯತಾ ಭಾವ ಮೂಡುತ್ತಿತ್ತು. ಸೊಸೆಯೂ ಸಹ ನಮ್ಮನ್ನು ಅಷ್ಟೇ ಪ್ರೀತಿಸುತ್ತಿದ್ದಳು...

ಮದುವೆಯಾಗಿ ಒಂದು ವರ್ಷದೊಳಗೆ ನನ್ನ ಮೊಮ್ಮಗ ತನ್ನ ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ. ಅಂದರೆ ನೀನು ನಿನ್ನ ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದೆ. ನಿಮ್ಮ ತಾತನಿಗಂತೂ ತುಂಬಾ ಖುಷಿಯಾಯಿತು. ಮೊಮ್ಮಗನನ್ನು ನೋಡುತ್ತೇನೆಂಬ ಹಂಬಲದಿಂದಿದ್ದರು. ತಾನು ತಾತನಾಗುವ ವಿಷಯ ಹತ್ತು ಹಳ್ಳಿಗಳಿಗೆಲ್ಲಾ ಹೇಳಿಕೊಂಡು ಬಂದಿದ್ದರು. ಆದರೆ ದುರಾದೃಷ್ಟವಶಾತ್ ಒಂದು ಅಚಾತುರ್ಯವಾದ ಘಟನೆ ನಡೆದು ಹೋಯಿತು. ಇನ್ನೇನು ಮೊಮ್ಮಗ ಎರಡು ದಿನದಲ್ಲಿ ಈ ಪೃಥ್ವಿಗೆ ಕಾಲಿಡುತ್ತಾನೆ ಎನ್ನುವಷ್ಟರಲ್ಲಿ. ನಿಮ್ಮ ತಾತನಿಗೆ ಎದೆ ನೋವು ಕಾಣಿಸಿತು. ಬೆಂಗಳೂರಿನಲ್ಲಿ ನಿಮ್ಮ ತಾಯಿ ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಕೊಂಡಳು. ನಿನ್ನ ತಾತನಿಗೆ ಎದೆ ನೋವು ಅತಿಯಾಯಿತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ನಿನ್ನ ತಾತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆಸ್ಪತ್ರೆಗೆ ಅಡ್ಮಿಟ್ ಆದ ದಿನ ಆ ರಾತ್ರಿಯೇ ನಿನ್ನ ತಾತ ಕೊನೆಯುಸಿರೆಳೆದರು. ಹತ್ತು ಹಳ್ಳಿಗೆ ನಾಯಕನಾಗಿ ಮೆರೆದ ನಂದಾ ದೀಪವೊಂದು ನಂದಿ ಹೋಯಿತು. ನಿನ್ನ  ತಾತ ತೀರಿಕೊಂಡ ದಿನ ನಾನು ಮಾತ್ರವಲ್ಲ ಅವರನ್ನು ಪ್ರೀತಿಸುತ್ತಿದ್ದ ಜನರ ರೋಧನೆ ಮುಗಿಲು ಮುಟ್ಟುವಂತಿತ್ತು. ಗಂಡನನ್ನು ಕಳೆದು ಕೊಂಡ ನನಗೆ ಜೀವನವೇ ಸಾಕು ಎಂದೆನಿಸಿತು. ಯಾವ ಜನ್ಮದ ಫಲವೋ ಏನೋ ನಾನು ಒಳ್ಳೆಯ ಗಂಡನನ್ನು ಪಡೆದಿದ್ದೆ. ಆದರೆ ಆ ದೇವರು ನನ್ನ ಕೈಗೆ ಒಳ್ಳೆಯದನ್ನು ಕೊಟ್ಟು ಇನ್ನೊಂದು ಕೈಯಿಂದ ಅದನ್ನು ಕಿತ್ತುಕೊಂಡ. ಗಂಡನಿಲ್ಲದ ಬಾಳು ನನಗೆ ಬೇಡ ಎನಿಸಿದು. ನಿನ್ನ ತಾತ ಹೋದ ಜಾಗಕ್ಕೆ ನಾನೂ ಹೋಗಬೇಕು ಎಂದು ತೀರ್ಮಾನಿಸಿ ಕೊಂಡೆ ಆ ರಾತ್ರಿಯೆಲ್ಲಾ ಅತ್ತು ಅತ್ತು ಹಾಸಿಗೆಯನ್ನು ಹಿಡಿದೆ. ಮುಂಜಾನೆ ತಾತನ ಶವ ಸಂಸ್ಕಾರ ನಡೆಯಬೇಕಿತ್ತು. ಅಷ್ಟರಲ್ಲಿ ಬೆಂಗಳೂರಿನಿಂದ ಸುದ್ಧಿಯೊಂದು ಹೊರಬಿತ್ತು. ನನ್ನ ಮಗ ಶಾಮನಿಗೆ ಗಂಡು ಮಗು ಆಗಿದೆ ಅಂತ. ತಾತ ಸತ್ತು ಹೋದ ದುಃಖ ಒಂದೆಡೆಯಾದರೆ, ಮೊಮ್ಮಗ ಜನಿಸಿದ ಸಂತೋಷ ಇನ್ನೊಂದೆಡೆ. ಸುಖ ದುಃಖದ ಸಂಘರ್ಷದಲ್ಲಿ ಮೊಮ್ಮಗ ಜನಿಸಿದ ಸಂತೋಷವನ್ನು ನನ್ನ ಮನಸ್ಸು ಆಗ ಅನುಭವಿಸದಂತಾಯಿತು. ಆದರೆ ಊರಿನ ಜನರೆಲ್ಲಾ ನಾಗೇಶಪ್ಪ ಮತ್ತೆ ಹುಟ್ಟಿ ಬಂದ ಎಂದು ಸಂಭ್ರಮದಿಂದ ಕುಣಿದಾಡಿದರು. ಜೀವನವೇ ಬೇಡ ಎಂದು ಕೊಂಡಿದ್ದ ನನಗೆ ಜನರ ಸಂಭ್ರಮದಿಂದ ಮನಸ್ಸು ಬದಾಲಾಯಿತು. ನಾಗೇಶಪ್ಪ ಮತ್ತೆ ಹುಟ್ಟಿ ಬಂದ... ನಾಗೇಶಪ್ಪ ಮತ್ತೆ ಹುಟ್ಟಿ ಬಂದ...ಅಂತ ಜನರು ಹೇಳುತ್ತಿರುವಾಗ ನನ್ನ ಮನಸ್ಸಿನ ಮೂಲೆಯಲ್ಲಿ ನನ್ನ ಗಂಡ ಇನ್ನೂ ಜೀವಂತವಾಗಿದ್ದಾನೆ ಎಂದೆನಿಸಿತು. ಮೊಮ್ಮಗನಲ್ಲಿ ಅತಿಯಾದ ಪ್ರೀತಿ ಬೆಳೆಯಲು ಇದೂ ಒಂದು ಕಾರಣವಾಯಿತು. ಅಂದಿನಿಂದಲೂ ನೀನು ಎಂದರೆ ನನಗೆ ಅತಿ ಇಷ್ಟ. ನಿನ್ನ ಜನನವೇ ನನಗೆ ಬದುಕಲು ಮತ್ತೊಂದು ಅವಕಾಶ ಸಿಕ್ಕಂತಾಯಿತು. ಮತ್ತೆ ಜೀವನದ ಮೇಲೆ ಆಸೆ ಚಿಗುರಲಾರಂಭಿಸಿತು. ಗಂಡ ಸತ್ತ ದುಃಖವನ್ನು  ನಿಧಾನವಾಗಿ ಮರೆಯುತ್ತಾ ಬಂದೆ ನಿನ್ನಲ್ಲೇ ವಾತ್ಸಲ್ಯ ಬೆಳಸಿಕೊಂಡೆ..."

ಅಜ್ಜಿ ಹಾಗೆ ಹೇಳುವಾಗ ಕಣ್ಣು ತುಂಬಿ ಬಂದಿತ್ತು...

"ಅದೆಲ್ಲಾ ಸರಿ ಅಜ್ಜಿ.... ನೀನು ಪ್ರೇತಾತ್ಮಳಾಗಿ ಅಲೆಯುತ್ತಿರುವ ವಿಷಯ ಹೇಳಜ್ಜಿ....ಯಾರಾದರೂ ನಿನಗೆ ಸಾಯಿಸಿದರೆ. ನಿನ್ನ ಸಾವು ಸಹಜವಾದುದೇ...? ಅಥವಾ ಕೊಲೆಯೇ...? ಪ್ರೇತಾತ್ಮಳಾಗಿ ಅಲೆಯುತ್ತಿರುವ ನೀನು ಯಾರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿದ್ದೀಯಾ...? ಅದನ್ನು ಬಿಟ್ಟು ಎಲ್ಲಾ ಕತೆಯನ್ನೇಕೆ ಹೇಳುತ್ತಿರುವೆ. ನೀನು ಹೇಳುತ್ತಿರುವ ವಿಷಯ ಅಪ್ರಸ್ತುತ ಅಲ್ಲವೇ...?"

"ಇಲ್ಲ ನಿನಗೆ ಹೇಳಿದ ಕತೆ ಯಾವುದೂ ಇಲ್ಲಿ ಅಪ್ರಸ್ತುತವಲ್ಲ... ನಾನು ಪ್ರೇತಾತ್ಮಳಾಗಿ ಅಲೆಯುತ್ತಿರುವುದಕ್ಕೆ ಕಾರಣವಾದ ಹಿನ್ನಲೆಯೇ ಈಗ ನಿನಗೆ ಹೇಳಿದ್ದು. ಹಾಗೆ ನೋಡಿದರೆ ನಾನು ಪ್ರೇತಾತ್ಮಳಾಗಲು ಮೂಲ ಕಾರಣವಾಗಿದ್ದೇ ನಿನ್ನ ಹುಟ್ಟು.... ಅಂದರೆ ನೀನು ಹುಟ್ಟಿದ ಮೇಲೆಯೇ ಕೆಲವು ಅಸಹಜ ಮತ್ತು ಸಹಿಸಲಾಗದ ಘಟನೆ ನಡೆದಿದ್ದು...."

"ಏನು ನನ್ನ ಹುಟ್ಟು.... ನೀನು ಪ್ರೇತಾತ್ಮನಾಗಲು ಕಾರಣವೇ.....!!!? ಏನು ಹೇಳ್ತಾ ಇದ್ದೀಯಾ ಅಜ್ಜಿ...!!"

ನಾನು ಆಶ್ಚರ್ಯದಿಂದ ಕೇಳಿದೆ...

"ಹೌದು ನಿನ್ನ ಹುಟ್ಟಿನಿಂದಲೇ..."

ಅಜ್ಜಿ ಮತ್ತೊಮ್ಮೆ ಸ್ಪಷ್ಟ ಪಡಿಸಿ ಹೇಳಿದಳು.

ನನಗೆ ಒಮ್ಮೆ ತಲೆ ತಿರುಗಿದಂತಾಯಿತು. 

"ಆಗ ತಾನೆ ಹುಟ್ಟಿದ ಹಸುಗೂಸು ನಾನು.... ಅಜ್ಜಿಗೆ ನಾನು ತೊಂದರೆಯಾಗಿದ್ದು ಹೇಗೆ..? ಅಜ್ಜಿಯ ಪ್ರೇತಾತ್ಮವಾಗಲು ನಾನು ಹೊಣೆ ಹೊರಬೇಕೆ... ಸಾಧ್ಯವಿಲ್ಲ. ನನ್ನದಲ್ಲದ ತಪ್ಪಿಗೆ ನಾನೇಕೆ ಹೊಣೆ ಹೊರಬೇಕು.... ಅಜ್ಜಿ ಹೇಳುತ್ತಿರುವುದರಲ್ಲಿ , ಅಥವಾ ತಾನು ಪ್ರೇತಾತ್ಮ ಈ ಕಾರಣಕ್ಕಾಗಿಯೇ ಆಗಿದ್ದೇನೆ ಎಂದು ಕೊಂಡಿದ್ದರಲ್ಲಿ ತಪ್ಪೇನಾದರೂ ಇದೆಯೇ....."

ನನ್ನ ಮನಸು ಏನೇನೋ ಯೋಚಿಸಿತು.. 


(ಮುಂದುವರೆಯುವುದು)

No comments:

Post a Comment