Monday, 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-8)

ಪ್ರೇತಾತ್ಮದ ಮನೆಯಲ್ಲಿ (ಭಾಗ-8)ಅಜ್ಜಿ ಮತ್ತೆ ತನ್ನ ಕತೆಯನ್ನು ಮುಂದುವರೆಸಿದಳು.

"ಮಗು ನಿನ್ನ ಹುಟ್ಟು, ನಾನು ಪ್ರೇತಾತ್ಮವಾಗಿ ಅಲೆಯಲು ಕಾರಣ ಅಂದೆ. ಆದರೆ ನಿನ್ನಿಂದಲೇ ನಾನು ಪ್ರೇತಾತ್ಮಳಾದೆ ಎಂಬ ಅರ್ಥ ಇದಲ್ಲ. ನಿನ್ನ ತಾತನ ಸಾವು ಮತ್ತು ನೀನು ಹುಟ್ಟಿದ ಮೇಲೆ ನನ್ನ ಜೀವನದಲ್ಲಿ ಹಲವು ಬದಲಾವಣೆಗಳಾದವು. ಹಳ್ಳಿಯಲ್ಲಿ ತಾತನಿಲ್ಲದ ಜೀವನ ನಡೆಸುವುದು ನನಗೆ ತುಂಬ ಕಷ್ಟವಾಯಿತು. ಆ ಸಂದರ್ಭದಲ್ಲಿ ನಿನ್ನ ಅನಂತು ಚಿಕ್ಕಪ್ಪ ಇನ್ನೂಹಾಸದಲ್ಲಿ ರೆಸಿಡೆನ್ಸಿಯಲ್ ಸ್ಕೂಲ್ ಒಂದರಲ್ಲಿ ಓದುತ್ತಿದ್ದ. ಊರಿನಲ್ಲಿ ನಾನೊಬ್ಬಳೇ ಇದ್ದೆ. ನಿಮ್ಮಪ್ಪ ಶಾಮ ನನ್ನನ್ನು ಬೆಂಗಳೂರಿನಲ್ಲೇ ಬಂದಿರುವಂತೆ ಹೇಳಿದ. ನನಗೂ ಊರಿನಲ್ಲಿ ಒಬ್ಬಳೆ ಇರಲಾಗಲಿಲ್ಲ. ಮೊಮ್ಮಗ ಹುಟ್ಟಿದ ಎಂಬ ಸಂತೋಷವೂ ಇತ್ತು. ನೀನು ಅಜ್ಜನ ಪ್ರತಿರೂಪ ಎಂದು ನಾನು ಭಾವಿಸಿದ್ದರಿಂದ ನಾನು ಬೆಂಗಳೂರಿನವರೆಗೆ ಬರುವಂತೆ ನನ್ನನ್ನು ಆಕರ್ಷಿಸಿತು . ನಿನ್ನ ಎತ್ತಿ ಆಡಿಸುತ್ತಾ ಹೇಗೋ ಕಾಲ ಕಳೆಯಬಹುದು ನನ್ನ ಒಂಟಿತನವನ್ನು ದೂರ ಮಾಡಿಕೊಳ್ಳಬಹುದು ಎಂಬ ಆಸೆಯಿಂದ ಬೆಂಗಳೂರಿಗೆ ಬಂದೆ. ಹೊಸ ಊರು, ಹೊಸ ವಾತಾವರಣ, ಸ್ನೇಹಿತರು ಅಂತ ಅಲ್ಲಿ ಯಾರೂ ಇರಲಿಲ್ಲ, ನೆರೆಹೊರೆಯವರಲ್ಲಿ ಆತ್ಮೀಯತೆಯಿಲ್ಲ. ಇದ್ದರೆ ಮನೆಯಲ್ಲೇ ಇರಬೇಕು  ಇಂತಹ ನಗರದ ಜೀವನಕ್ಕೆ ಹೊಂದಿಕೊಳ್ಳಲು ಮನಸ್ಸು ಸಿದ್ದವಾಗಲೇ ಇಲ್ಲ. ಬೆಂಗಳೂರಿನಂತಹ ಮೆಘಾ ನಗರಕ್ಕೆ ಯೌವ್ವನದಲ್ಲಿ ಬಂದವರು ಸಹಜವಾಗಿ ಹೊಂದಿಕೊಂಡು ಬಿಡುತ್ತಾರೆ. ನನ್ನಂತಹ ಇಳಿ ವಯಸ್ಸಿನವರು ಯಾವಾಗಲೂ ಬೆಂಗಳೂರಿನ ಜೀವನಕ್ಕೆ ಹೊಂದಿ ಕೊಳ್ಳಲು ಸಾಧ್ಯವೇ ಇಲ್ಲ. ಹಳ್ಳಿಯಲ್ಲಾದರೆ ತೋಟ,ಹೊಲ,ಗದ್ದೆ, ನೆರೆ ಹೊರೆ, ಬಂಧು ಬಳಗ, ಸ್ನೇಹಿತರು ಎಲ್ಲಾ ಇದ್ದರು. ಎಲ್ಲವನ್ನು ಬಿಟ್ಟು ಬೆಂಗಳೂರಿನ ಕೃತಕ ಜೀವನವನ್ನು ಸಾಗಿಸಲಾರಂಭಿಸಿದೆ. ನನ್ನ ಮಗ ಶಾಮು ಹಳ್ಳಿಯ ತೋಟ ಗದ್ದೆ ಎಲ್ಲವನ್ನೂ ಅನಂತುವಿನ ಓದು ಮುಗಿಯುವ ತನಕ ಗುತ್ತಿಗೆಯ ಆಧಾರದ ಮೇಲೆ ಜಮೀನನ್ನು ಮತ್ತೊಬ್ಬರಿಗೆ ವಹಿಸಿದ,  ಹಳ್ಳಿಯ ವಿಶಾಲವಾದ ಮನೆಯನ್ನು ಬಾಡಿಗೆ ನೀಡಿದ, ನಿನ್ನ ತಾತ ಕಟ್ಟಿಸಿದ ಆ ಮನೆ ಬಾಡಿಗೆ ಕೊಡುವುದು ಎಂದಾಗ ನನ್ನ ಕಣ್ಣಲ್ಲಿ ನೀರು ಬಂದಿತು. ಆ ಮನೆ ಕಟ್ಟಲು ನಾನು ಸಹಾಯಕಳಾಗಿ ಕೆಲಸ ಮಾಡಿದ್ದೇನೆ. ನಿನ್ನ ತಾತನ ಜೊತೆ ನಿಂತು ಹಗಲಿರುಳೆನ್ನದೆ ಕೆಲಸಗಾರರಿಗೆ ನನ್ನ ಸಲಹೆಯನ್ನು ನೀಡುತ್ತಾ ನನ್ನ ಕನಸಿನ ಮನೆಯನ್ನು ನಿರ್ಮಿಸಿಕೊಂಡಿದ್ದೇನೆ. ನನ್ನ ಕನಸಿನಂತೆ ನಿರ್ಮಾಣವಾದ ಮನೆಯನ್ನು ಬಿಟ್ಟು ಹೊರ ಬರುವಾಗ ನನಗಾದ ದುಃಖ ಅಷ್ಟಿಷ್ಟಲ್ಲ.... ಆದರೆ ವಿಧಿಯಾಟ ಏನೂ ಮಾಡುವಂತಿರಲಿಲ್ಲ. ನಿನ್ನ ತಾತನಿಗಿಂತ ನಾನೇ ಮೊದಲು ಸ್ವರ್ಗ ಸೇರಿದರೆ ನಾನು ಸಂತೋಷವಾಗಿರುತ್ತಿದ್ದೆನೋ ಏನೋ....?"

ಅಜ್ಜಿ ಭಾವನಾತ್ಮಕವಾಗಿ ಹೇಳುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಳು...
ಕಣ್ಣನ್ನು ಒರೆಸಿಕೊಳ್ಳುತ್ತಾ ಮತ್ತೆ ಮಾತು ಮುಂದುವರೆಸಿದಳು

"ಬೆಂಗಳೂರಿಗೆ ಹೋದಾಗ ಮೊದ ಮೊದಲು ಎಲ್ಲಾ ಚನ್ನಾಗಿಯೇ ಇತ್ತು. ಮೊಮ್ಮಗನಾದ ನಿನ್ನೊಂದಿಗೆ ಕಾಲ ಕಳೆಯುತ್ತಾ, ನಿನ್ನ ತಾತನ ಸಾವನ್ನು ಮರೆಯಲು ಯತ್ನಿಸಿದೆ. ಸೊಸೆ ಮಗ ನನಗೆ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ಊಟ ಬಟ್ಟೆ ಹಣ ಎಲ್ಲವೂ ಸಿಗುತ್ತಿತ್ತು. ಬೆಗಳೂರಿಗೆ ಹೊಗಿ ಆರು ತಿಂಗಳವರೆಗೆ ನನ್ನ ತುಂಬಾ ಚನ್ನಾಗಿ ನೋಡಿಕೊಂಡರು...

ಹೀಗಿರುವಾಗ ಒಂದು ದಿನ ಸೊಸೆಯ ತೌರೂರಿನಿಂದ ಅವರ ಅಣ್ಣ, ಅತ್ತಿಗೆ, ತಂದೆ ತಾಯಿ, ಅವರ ಅತ್ತೆ ಬೆಂಗಳೂರಿಗೆ ಬಂದಿದ್ದರು. ಒಂದೆರಡು ದಿನ ಇದ್ದರು. ಅತಿಥಿ ಸತ್ಕಾರವೂ ಚನ್ನಾಗಿಯೇ ನಡೆಯಿತು. ಹೊಗುವಾಗ ಅವರ ಅತ್ತೆಯಾದವಳು ನನ್ನ ಸೊಸೆ ಗೀತಾಳ ಅಂದರೆ ನಿಮ್ಮಮ್ಮಳ ಕಿವಿಯಲ್ಲಿ ಏನೋ ತುಂಬುತ್ತಿದ್ದರು. ಸೊಸೆ ಗೀತಾಳಿಗೆ ಹೇಳುತ್ತಿದ್ದ ಆ ಮಾತು ಅಲ್ಲೇ ನಿಂತಿದ್ದ ನನಗೂ ಕೇಳಿಸಿತು..

"ಏನೆ ಗೀತಾ... ಈ ಮುದುಕಿಯನ್ನು ಕರೆದುಕೊಂಡು ಇಟ್ಕೊಂಡಿದ್ದೀಯಲ್ಲಾ ನಿನೆಗೇನಾದರೂ ಬುದ್ಧಿ ಇದೆಯಾ... ? ಅವಳನ್ನ ಹಳ್ಳಿಯಲ್ಲೇ ಬಿಡುವುದಲ್ಲವಾ... ನೀವು ಗಂಡ ಹೆಂಡತಿಯರಿಗೆ ಈ ಮುದುಕಿ ಇದ್ದರೆ ನಿಮ್ಮ ಸ್ವಾತಂತ್ರಕ್ಕೆ ಧಕ್ಕೆ ಬರುವುದಿಲ್ಲವೇ... ನಿನ್ನ ಈ ಮನೆಗೆ ಮದುವೆ ಮಾಡಿ ಕೊಟ್ಟಿದ್ದು ಯಾಕೆ ಗೊತ್ತೆ. ಅತ್ತೆ ಮಾವಂದಿರ ಕಾಟ ಇರುವುದಿಲ್ಲ ಅಂತ. ನಮ್ಮ ಹುಡುಗಿ ಬೆಂಗಳೂರಿನಲ್ಲಿ ಹಾಯಾಗಿ ಗಂಡನ ಮನೆಯಲ್ಲಿ ಇರ್ತಾಳೆ. ನಿನ್ನ ಅತ್ತೆ ಮಾವ ಹೇಗಿದ್ದರೂ ಹಳ್ಳಿಯಲ್ಲೇ ಇರ್ತಾರೆ ಅಂದ್ಕೊಂಡಿದ್ವಿ. ಈಗ ನೋಡಿದರೆ ಈ ಮುದುಕಿನ ಬೇರೆ ನಿಮ್ಮ ಮನೆಯಲ್ಲೇ ಇಟ್ಕೊಂಡಿದ್ದೀಯಾ... ಹೋಗಮ್ಮ ಗೀತಾ ಅದೇನು ಜೀವನ ಅಂತ ನಡೆಸ್ತಾ ಇದ್ದೀಯೋ ಏನೋ... ಪ್ರೈವೆಟಾಗಿ ಹಾಯಾಗಿ ಗಂಡನ ಜೊತೆ ಇರುವುದನ್ನು ಬಿಟ್ಟು... ಎಕ್ಚ್ರಾ ಫಿಟಿಂಗ್ ಅಂತ ಈ ಮುದುಕಿನ ಬೇರೆ ಮನೇಲೆ ಇಟ್ಕೊಂಡು ಸಾಕ್ತಾ ಇದ್ದಿಯಾ... "

ಅವಳ ಮಾತು ಕೇಳಿದ ಕೂಡಲೇ ನನಗೆ ಬೇಸರವಾಯಿತು. ಕಣ್ಣಲ್ಲಿ ನೀರು ಬಂತು. ನಮ್ಮ ಸಮಾಜ ಎತ್ತ ಸಾಗುತ್ತಿದೆ. ಮಾನವೀಯ ಸಂಬಂಧಗಳಿಗೆ ಬೆಲೆಯಿಲ್ಲವೇ..? ಹೆತ್ತು ಹೊತ್ತು ಸಾಕಿದ ಮಗನ ಮನೆಯಲ್ಲಿ ತಾಯಿ ಇರುವುದು ತಪ್ಪೇ...? ಹೀಗೆಯೇ ಎಲ್ಲಾ ನೆಂಟರು ತಮ್ಮ ಮಗಳಿಗೆ ಗಂಡು ಹುಡುಕುವಾಗ ಅತ್ತೆ ಮಾವ ಇರಬಾರದು ಎಂದು ಬಯಸಿದರೆ ಹೇಗೆ. ತನ್ನ  ಗಂಡ ಎಲ್ಲರನ್ನೂ ಬಿಟ್ಟು ಹೆಂಡತಿಯೊಂದಿಗೆ ಬೇರೆ ಮನೆ ಮಾಡಿಕೊಂಡಿರಬೇಕು ಎಂದು ಬಯಸಿದರೆ ಹೇಗೆ..? ಮಕ್ಕಳನ್ನು ಹೆತ್ತು ಹೊತ್ತು, ವಿದ್ಯಾ ಬುದ್ಧಿ ನೀಡಿದ ವಯಸ್ಸಾದ ತಂದೆ ತಾಯಿ ಎಲ್ಲಿಗೆ ಹೋಗಬೇಕು. ಕೂಲಿ ನಾಲಿನೋ ಮಾಡಿ ಎಷ್ಟೋ ಜನ ತಂದೆ ತಾಯಿಗಳು ಮಗನನ್ನು ಓದಿಸಿದ್ದಾರೆ, ತಮ್ಮ ಸುಖ ಸಂತೋಷಗಳನ್ನು ತ್ಯೆಜಿಸಿ ಮಕ್ಕಳಿಗಾಗಿ ಜೀವ ವನ್ನು ತೇಯ್ದಿದ್ದಾರೆ  ಆದರೆ ಸೊಸೆಯಾಗಿ ಬರುವವಳು ತನಗೆ ಅತ್ತೆ ಮಾವ ಇರಬಾರದು ಎಂದು ಬಯಸಿದರೆ ಹೇಗೆ...? ಇಲ್ಲ ನನ್ನ ಸೊಸೆ ಹಾಗೆ ಮಾಡಲಾರಳು. ಅವಳ್ಯಾರೋ ಚಾಡಿ ಹೇಳಿದ ಮಾತ್ರಕ್ಕೆ ನನ್ನ ಸೊಸೆ ಮತ್ತು ಮಗ ಬದಲಾಗುವುದಿಲ್ಲ ಎಂಬ ದೃಢವಾದ ನಂಬಿಕೆ ನನ್ನಲ್ಲಿತ್ತು.. 

ಆದರೆ ನನ್ನ ನಂಬಿಕೆ ಸುಳ್ಳಾಯಿತು. ಅಂದಿನಿಂದ ಸೊಸೆ ಗೀತಾ ನಿಧಾನವಾಗಿ ಬದಲಾಗುತ್ತಾ ಬಂದಳು. ನನ್ನ ಮಗ ಇದ್ದಾಗ ನನ್ನನ್ನು ಚನ್ನಾಗಿ ನೋಡಿಕೊಳ್ಳುವ ನಾಟಕವಾಡಿ. ಯಾವಾಗ ಮಗ ಕೆಲಸಕ್ಕೆ ಹೋಗುತ್ತಾನೋ ಆಗ ತನ್ನ ವರಸೆಯನ್ನು ಬದಲಾಯಿಸುತ್ತಿದ್ದಳು. ತಿಂಡಿಯನ್ನು ಕೊಡದೇ ಸತಾಯಿಸುವುದು. ಊಟವನ್ನು ಬಡಿಸದೇ ಹಾಗೇ ಇರುವುದು, ಮುಸುರೆ ಪಾತ್ರೆ ತೊಳೆಯಲು ಒತ್ತಾಯಿಸುವುದು. ಮಗ ಶಾಮ ಹೊರಗಿನಿಂದ ಏನೇ ತಿಂಡಿ ತಂದರೂ ನನಗೆ ಕೊಡದೇ ತಾನೇ ಮುಚ್ಚಿಟ್ಟುಕೊಂಡು ತಿನ್ನುವುದು. ನಾನು ಏನೇ ಮಾತನಾಡಿದರೂ ಸಾಕು, ಆ ಮಾತಿನಲ್ಲಿ ಬೇರೆಯದೇ ಅರ್ಥವನ್ನು ಕಲ್ಪಿಸಿಕೊಂಡು ನನ್ನ ಮಗನಲ್ಲಿ ಚಾಡಿ ಹೇಳುವುದು. ನಿಮ್ಮ ಅಮ್ಮ ಹೀಗೆ,  ನಿಮ್ಮಮ್ಮ ಹಾಗೆ ಅಂತ ಏನೇನೋ ವಿಷಯಗಳನ್ನು ನನ್ನ ಮಗನ ಕಿವಿಯಲ್ಲಿ ತುಂಬುವುದು. ಹೀಗೆ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. 

 ಒಂದು ದಿನ ಸೊಸೆ ಗೀತಾಳ ಕೊರಳ ನೆಕ್ಲೆಸ್ ಕಾಣೆಯಾಗಿತ್ತು. ಅದು ಅವರ ತವರು ಮನೆಯವರು ಕೊಟ್ಟಿದ್ದರಂತೆ. ತುಂಬಾ ಬೆಲೆಯುಳ್ಳದ್ದು. ಕಾಣೆಯಾದಾಗಿನಿಂದ ಗಂಡ ಹೆಂಡತಿ ತಾವೇ ರಹಸ್ಯವಾಗಿ ಏನೆನೋ ಮಾತನಾಡಿಕೊಳ್ಳುತ್ತಿದ್ದರು. ಆದರೆ ನನಗೆ ಮಾತ್ರ ಸೊಸೆಯ ನೆಕ್ಲೆಸ್ ಕಳೆದುಹೋದ ಯಾವ ವಿಷಯ ಗೊತ್ತೇ  ಆಗಲಿಲ್ಲ. ಸೊಸೆಗೆ ನನ್ನ ಮೇಲೆ ಅನುಮಾನ ಇತ್ತು. ನಾನೇ ಆ ಸರವನ್ನು ಕದ್ದೆನೆಂದು ಅವಳ ಭಾವನೆ. ಆದರೆ ನನ್ನ ಮಗ ಮಾತ್ರ ನನ್ನ ತಾಯಿ ಅಂಥವಳಲ್ಲ ಎಂದು ವಾದಿಸುತ್ತಿದ್ದ. ಹೀಗೆ ಎಂಟು- ಹತ್ತು ದಿನದ ವರೆಗೂ ಅವರಲ್ಲೇ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ನನಗೆ ಮಾತ್ರ ಆ ವಿಷಯ ತಿಳಿಯಲೇ ಇಲ್ಲ. ಹೆಂಡತಿಯೊಂದಿಗೆ ಜಗಳ ಮಾಡಿಕೊಂಡ ನನ್ನ ಮಗ ಒಂದೊಂದು ಸಲ ಬೆಳಗ್ಗೆ ತಿಂಡಿಯನ್ನೂ ಸಹ ತಿನ್ನದೇ ಕೋಪದಿಂದ ಕೆಲಸಕ್ಕೆ ಹೋಗುತ್ತಿದ್ದ, ಹೀಗೆ ಅವಅವರಲ್ಲೇ ಒಂದು ತಿಂಗಳು ಜಗಳವಾಯಿತು. ನಾನು ಸಹ ಇದು  ಗಂಡ ಹೆಂಡತಿ ಜಗಳ ಇವರ ಮದ್ಯೆ ಬಾಯಿ ಹಾಕುವುದು ಸರಿಯಲ್ಲ ಅಂತ ಏನೂ ಕೇಳಲು ಹೋಗಲಿಲ್ಲ. ಹೇಗೋ ಈ ಜಗಳ ನಿಧಾನವಾಗಿ ತಣ್ಣಗಾಗುತ್ತಾ ಬಂದಿತು...

ಒಂದು ದಿನ ನೀನು ನನ್ನ ರೂಮಿನಲ್ಲಿ ಕಳೆದು ಹೋದ ನೆಕ್ಲೆಸನ್ನು ಹಿಡಿದುಕೊಂಡು ಆಟವಾಡುತ್ತಿದ್ದೆ. ಆಗ ನೀನು  ನಾಲ್ಕು ವರ್ಷದ ಮಗು. ಹೇಗೋ ನಿಮ್ಮಮ್ಮ ನೀನು ಸರ ಹಿಡಿದುಕೊಂಡು ಆಟವಾಡುತ್ತಿರುವುದನ್ನು ನೋಡಿದಳು. ನಿಮ್ಮಮ್ಮನಿಗೆ ಸರ ಸಿಕ್ಕ ಸಂತೋಷಕ್ಕಿಂತಲೂ ಸರ ಎಲ್ಲಿ ಸಿಕ್ತು ಅಂತ ರಂಪ ಮಾಡಿದಳು. "ಹೇಳೋ ನಿನಗೆ ಸರ ಎಲ್ಲಿಂದ ಸಿಕ್ತು" ಅಂತ ಜೋರಾಗಿ ಕೂಗುತ್ತಾ ನಿನ್ನ ಹೊಡೆಯಲಾರಂಬಿಸಿದಳು. ಸ್ನಾನ ಮಾಡುತ್ತಿದ್ದ ನಾನು ಆ ಗಲಾಟೆಗೆ ಬೇಗನೆ ಹೊರ ಬಂದೆ. ನಿಮ್ಮಮ್ಮ ಗೀತಾ ನಿನಗೆ ಚನ್ನಾಗಿ ಹೊಡೆಯುತ್ತಿದ್ದಳು. ಪಾಪ ನೀನಿನ್ನು ಮುಗ್ಧ ಕೂಸು. ಸರ ಎಲ್ಲಿ ಸಿಕ್ತು ಅಂತ ಹೇಳಲಾರದಷ್ಟು ಮುಗ್ಧತೆ ನಿನ್ನಲ್ಲಿತ್ತು. ಪಾಪ ನಾಲ್ಕು ವರ್ಷದ ಮಗು ಅದನ್ನೆಲ್ಲಾ ಹೇಗೆ ನೆನಪಿಸಿಕೊಳ್ಳಲು ಸಾಧ್ಯ..? ಅವಳು ಸಿಕ್ಕಾ ಪಟ್ಟೆ ನಿನ್ನನ್ನು ಕೋಪದಿಂದ ಹೊಡೆಯುತ್ತಿದ್ದಳು. ನಿನ್ನನ್ನು ಬಿಡಿಸಿಕೊಳ್ಳಲು ಮುಂದಾದೆ. ನಿನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ನಿಮ್ಮಮ್ಮ ಬಿದ್ದು ಹೋದಳು. ಹಣೆಯಿಂದ ರಕ್ತ ಸುರಿಯಲಾರಂಭಿಸಿತು. ಸಾಯಂಕಾಲ ಮಗ ಶಾಮ ಬಂದಾಗ ದೊಡ್ಡ ರಂಪಾಟವೇ ನಡೆಯಿತು. ನಿಮ್ಮಮ್ಮ ನನಗೆ ಬೇಕಂತಲೇ ತಳ್ಳಿದಳು. ನನ್ನ ಮೇಲೆ ದ್ವೇಷ ಸಾದಿಸುತ್ತಿದ್ದಾಳೆ. ಈ ಅತ್ತೆಯರೇ ಹೀಗೆ, ಅವಳ ಮೇಲೆ ನಾನು ವರದಕ್ಷಿಣೆ ಕೇಸು ಹಾಕುತ್ತೇನೆ. ಈ ಮನೆಯಲ್ಲಿ ನಾನಿರಬೇಕು ಇಲ್ಲವೇ ನಿಮ್ಮಮ್ಮ ಇರಬೇಕು. ನನ್ನ ಸರ ಕದ್ದಿದ್ದೂ ಸಹ ನಿಮ್ಮಮ್ಮವೇ .. ಮಗ ಪ್ರಕಾಶ ನಿಮ್ಮ ಅಮ್ಮನ ರೂಮಿನಿಂದಲೇ ಸರವನ್ನು ತೆಗೆದುಕೊಂಡು ಆಟವಾಡುತ್ತಿದ್ದಾನೆ ಅಂಗ ಮೇಲೆ ಸರ ಕದ್ದು ನಿಮ್ಮಮ್ಮ ಎಲ್ಲೋ ಬಚ್ಚಿಟ್ಟಿದ್ದಾಳೆ. ಎಂದು ನನ್ನ ಮೇಲೆ ಅಪವಾದ ಹೊರಿಸಿದಳು. ಸೊಸೆಯ ಸರ ಕಳೆದು ಹೋದ ವಿಷಯ ತಿಳಿದಿದ್ದು ನನಗೆ ಆಗಲೇ....

ಒಂದು ದಿನ ನನ್ನ ಮಗ ಶಾಮ ತನ್ನ ಕಾರಿನಲ್ಲಿ ಕೂರಿಸಿಕೊಂಡು ಜಯನಗರದ ಕಡೆ ಹೋದ. ನನಗೆ ಎಲ್ಲಿಗೆ ಅಂತ ಗೊತ್ತಾಗಲಿಲ್ಲ. ಕಾರಿನಿಂದ ಇಳಿದಾಗಲೇ ನನಗೆ ತಿಳಿದಿದ್ದು ನನ್ನ ಮಗ ಶಾಮ ನನ್ನನ್ನು ವೃದ್ದಾಶ್ರಮಕ್ಕೆ ಸೇರಿಸಲು ಬಂದಿದ್ದಾನೆ ಅಂತ. ನಾನು ವೃದ್ದಾಶ್ರಮಕ್ಕೆ ಸೇರುತ್ತಿದ್ದೇನೆ ಎಂದು ನನಗಾದ ನೋವಿಗಿಂತಲೂ, ನನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೆನಲ್ಲಾ ಎಂಬ ನೋವು ಅವನಲ್ಲಿ ಜಾಸ್ತಿ ಇತ್ತು. ವೃದ್ಧಾಶ್ರಮದ ಕಟ್ಟೆಯ ಮೇಲೆ ಕುಳಿತುಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ನನ್ನ ಕಾಲು ಹಿಡಿದು ಕ್ಷಮೆ ಕೇಳಿದ..

"ನನ್ನ ಕ್ಷಮಿಸಿ ಬಿಡಮ್ಮ... ಗೀತಾ ತುಂಬಾ ಹಠ ಮಾಡುತ್ತಿದ್ದಾಳೆ. ಇನ್ನು ನಿನ್ನ ಮನೆಯಲ್ಲಿ ಇಟ್ಟುಕೊಳ್ಳಲು ನನಗೆ ಆಗುತ್ತಿಲ್ಲ. ನಾನು ಮತ್ತು ಗೀತಾ ಈ ವಿಷಯದ ಬಗ್ಗೆ ಸಾಕಷ್ಟು ಸಲ ಜಗಳ ಮಾಡಿದ್ದೇವೆ. ನಾನೂ ಸಹ ಅವಳ ಹಠ ತಾಳಲಾರದೇ ಗೀತಾಳನ್ನು ಡೈವರ್ಸ ಮಾಡುವ ಹಂತಕ್ಕೆ ಬಂದಿದ್ದೆ. ಆದರೆ ಗೀತಾಳ ಕಡೆಯವರು ನನ್ನ ಮತ್ತು ನಿನ್ನ ಮೇಲೆ ವರದಕ್ಷಿಣೆ ಕಿರುಕುಳದ ಕೇಸ್ ಹಾಕುವುದುದಾಗಿ ಹೆದರಿಸುತ್ತಿದ್ದಾರೆ. ನಾನು ತಹಸಿಲ್ದಾರ್ ಸರಕಾರಿ ಸೇವೆಯಲ್ಲಿರುವವನು. ತುಂಬಾ ಕೆಟ್ಟ ಹೆಸರು ಬರುತ್ತದೆ.  ಜೈಲಿಗೆ ಹೋದರೂ ಸರಿ ನಾನು ಹೇಗೋ ಸಹಿಸಿಕೊಳ್ಳುವೆ.. ಆದರೆ ನಿನ್ನನ್ನು ಅಲ್ಲಿ ನೋಡುವುದು ಹೇಗಮ್ಮಾ...  ನನ್ನ ಹಣೆ ಬರಹದಲ್ಲಿ ಒಳ್ಳೆಯ ಹೆಂಡತಿ ಪಡೆಯುವ ಭಾಗ್ಯ ಇಲ್ಲವೆಂದು ಕಾಣುತ್ತದೆ...."

ಹಾಗೆ ಹೇಳುತ್ತಾ ಶಾಮ ಬಿಕ್ಕಿ ಬಿಕ್ಕಿ ಅಳಲಾರಂಬಿಸಿದ. ತಾಯಿಯಾದ ನನಗೆ ಅವನ ದುಃಖ ನೋಡಲಾಗಲಿಲ್ಲ. ನಾನೇ ವೃದ್ಧಾಶ್ರಮಕ್ಕೆ ಹೋಗಲು ಒಪ್ಪಿಕೊಂಡೆ. ನಾನು ಮಗನ ಸುಖ ಸಂತೋಷಕ್ಕಾಗಿ ವೃದ್ದಾಶ್ರಮ ಸೇರಲು ಒಪ್ಪಿಕೊಂಡರೂ ಸಹ ನನ್ನ ಮಗ ಶಾಮ ಮಾತ್ರ ಅಳುವುದನ್ನು ನಿಲ್ಲಿಸಲಿಲ್ಲ...

"ಅಮ್ಮಾ ಕ್ಷಮಿಸಮ್ಮಾ... ಪ್ಲೀಸ್.. ಅನಂತುವಿನ ಓದು ಮುಗಿದ ಕೂಡಲೇ ನಿನ್ನ ಮತ್ತು ಅನಂತುವನ್ನು ಮತ್ತೆ ಹಳ್ಳಿಗೆ ಕಳುಹಿಸುತ್ತೇನಮ್ಮಾ. ಆಗ ನೀನು ಮತ್ತು ಅನಂತು ಸುಖವಾಗಿರಿ, ನನಗೆ ಅಪ್ಪನ ಆಸ್ತಿ ಅಂತಸ್ತು ಏನು ಬೇಡಮ್ಮಾ... ಅನಂತು ಮತ್ತು ನೀನು ಚನ್ನಾಗಿದ್ದರೆ ನನಗೆ ಅಷ್ಟೇ ಸಾಕಮ್ಮಾ... ಹಿರಿಯ ಮಗನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸದಂತಾದೆ..."

ಶಾಮ ಮತ್ತೆ ಅಳಲಾರಂಭಿಸಿದ. ನಾನೇ ಅವನನ್ನು ಸಮಧಾನ ಮಾಡಿದೆ.

"ಆಸ್ತಿ ಅಂತಸ್ತು ಒಂದಿದ್ದರೆ ಮಾತ್ರ ಸಾಲದು  ಸಂಬಂಧಗಳೂ ಸಹ ಒಳ್ಳೆಯದಾಗಿರಬೇಕು. ನಿಮ್ಮಪ್ಪ ನಿನಗೆ ಮೊದಲೇ ಹೇಳಿದ್ದರು. ಆ ಹುಡುಗಿ ಮತ್ತು ನಮಗಿಂತ ಶ್ರೀಮಂತರಾಗಿದ್ದ ಆ ಮನೆತನ ಬೇಡ ಅಂತ. ಆದರೆ ನನ್ನ ಮಗ ಹುಡುಗಿಯನ್ನು ಪ್ರೀತಿಸಿದ್ದಾನೆ ಎಂಬ ಕಾರಣಕ್ಕಾಗಿ. ನಿನ್ನ ಸುಖ ಸಂತೋಷಕ್ಕಾಗಿಯೇ ನಿನ್ನ
ಮದುವೆಗೆ ಒಪ್ಪಿಕೊಂಡರು ಅಷ್ಟೆ. ನಿಮ್ಮಪ್ಪನ ಮಾತು ಸರಿಯಾಗಿತ್ತು ಶಾಮು. ನಿಮ್ಮಪ್ಪನ ಇಂತಹ ಸರಿಯಾದ  ನಿರ್ಧಾರಗಳಿಂದಲೇ ಈಗಲೂ ಹಳ್ಳಿಯ ಜನ ನಿಮ್ಮಪ್ಪನಿಗೆ ಅಷ್ಟೊಂದು ಗೌರವ ನೀಡುತ್ತಿದ್ದಾರೆ. ಆದರೆ ಮನೆಯ ವಿಷಯದಲ್ಲಿ ಅವರ ನಿರ್ಧಾರ ಪಾಲನೆಯಾಗಲಿಲ್ಲ.. ಇರಲಿ ಬಿಡು ಅನಂತುವಿನ ಓದು ಮುಗಿದ ಕೂಡಲೇ ಹಳ್ಳಿ ಮನೆಗೆ ಹೋದರಾಯಿತು..."

ಅಷ್ಟು ಹೇಳಿ ನಾನು ವೃದ್ಧಾಶ್ರಮದ ಒಳಗೆ ಹೋದೆ. ಶಾಮ ಮಾತ್ರ ಅಳುತ್ತಾ ಮನೆಗೆ ಹಿಂದಿರುಗಿದ..

ನನಗೆ ವೃದ್ದಾಶ್ರಮದ ವಾತಾವರಣ ಹೊಸದೆನಿಸಿತು. ಒಂದು ಕಾಲದಲ್ಲಿ ಹಳ್ಳಿಯಲ್ಲಿ ರಾಣಿಯಾಗಿ ಮೆರೆದ ನಾನು ಈಗ ಅನಾಥೆಯಾಗಿಬಿಟ್ಟೆ. ವೃದ್ಧಾಶ್ರಮದಲ್ಲಿ ನನ್ನಂತೆ ನೂರಾರು ಮುದುಕ ಮುದುಕಿಯರು ವಾಸವಾಗಿದ್ದರು.  ಒಬ್ಬೊಬ್ಬರದು ಒಂದೊಂದು ಗೋಳಿನ ಕತೆ. ಕೆಲವರು ಎಲ್ಲಾ ಇದ್ದು ಬಂದವರು. ಇನ್ನು ಕೆಲವರು ಎಲ್ಲಾ ಕಳಕೊಂಡು ಬಂದವರು. ಅಲ್ಲಿರುವ ಎಲ್ಲಾ ತಂದೆ ತಾಯಿಯರದು ಒಂದೇ ಗೋಳಿನ ಕತೆ, ಮಗ ನಮ್ಮನ್ನು ವೃದ್ಧಾಶ್ರಮಕ್ಕೆ ಹಾಕಿ ಬಿಟ್ಟ ಎಂದು. ಚಿಕ್ಕ ಮಗುವಿದ್ದಾಗ ಮಕ್ಕಳೇ ಸರ್ವಸ್ವ ಎಂದುಕೊಂಡು ಎಲ್ಲವನ್ನೂ ಮಕ್ಕಳಿಗಾಗಿಯೇ ತ್ಯಾಗ ಮಾಡುವ ತಂದೆ ತಾಯಿಗಳು ವೃದ್ಧಾಶ್ರಮಕ್ಕೆ ಬಂದಿರುವುದು ಒಂದು ನೋವಿನ ಸಂಗತಿ. ತಂದೆ ತಾಯಿಯರನ್ನು ಸಾಕಲಾರದ ಮಕ್ಕಳು ಯಾಕಾದರೂ ಈ ಭೂಮಿಯ ಮೇಲೆ ಹುಟ್ಟುತ್ತಾರೆಯೋ ಎಂದೆನಿಸಿತು...
ಮೊದ ಮೊದಲು ನನಗೆ ವೃದ್ಧಾಶ್ರಮದ ವಾತಾವರಣ ಹಿಡಿಸಲಿಲ್ಲ. ತುತ್ತು ಅನ್ನಕ್ಕಾಗಿ ತಟ್ಟೆ ಹಿಡಿದು ಕಾಯಬೇಕಿತ್ತು. ಅದೇ ನಾನು ಹಳ್ಳಿಯಲ್ಲಿದ್ದಾಗ ಇದೇ ಕೈಯಿಂದ ನೂರಾರು ಆಳುಗಳಿಗೆ ಅನ್ನವನ್ನು ಬಡಿಸಿದವಳು. ವೃದ್ಧಾಶ್ರಮದಲ್ಲಿ ಹೊಸ ಬಟ್ಟೆ ಕೊಡುತ್ತಾರೆ ಅಂದರೆ ಅಲ್ಲಿರುವ ವೃದ್ಧರಿಗೆ ಸಂತೋಷವಾಗುತ್ತಿತ್ತು. ಆದರೆ ನಾನು ಹಳ್ಳಿಯಲ್ಲಿದ್ದಾಗ ಇದೇ ಕೈಯಿಂದ ನೂರಾರು ಕೆಲಸಗಾರರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದೆ. ಈಗ ಎಲ್ಲವೂ ಮರೀಚಿಕೆ. ಎಲ್ಲವೂ ಇದೆ. ಈಗಲೂ ಮನಸ್ಸು ಮಾಡಿದರೆ ಜಮೀನು ತೋಟದ ಉತ್ಪಾದನೆಯಿಂದಲೇ ರಾಣಿಯಂತಿರಬಹುದು. ಆದರೆ ಮೈಯಲ್ಲಿ ಶಕ್ತಿಯಿಲ್ಲ. ತೋಟ. ಹೊಲ, ಮನೆ ಎಲ್ಲವೂ ಐದು ವರ್ಷದ ಗುತ್ತಿಗೆ ನೀಡಲಾಗಿದೆ. ಹಿಂದೆ ಪಡೆದರೂ ಈ ಮುದುಕಿ ಏನು ಮಾಡಲು ಸಾಧ್ಯ...
 ನನ್ನ ಜೀವನದ ಅಮೂಲ್ಯವಾದ ಎಂಟು ವರ್ಷ ವೃದ್ದಾಶ್ರಮದಲ್ಲಿ ಕಳೆದದ್ದು ನನ್ನ ಪಾಲಿಗೆ ಅತಿ ನೋವಿನ ಸಂಗತಿ. ನಾನು ಹಳ್ಳಿಯಲ್ಲಿ ರಾಣಿಯಂತೆ ಬಾಳಲು ಬರೀ ನನ್ನ ಗಂಡ ನಾಗೇಶಪ್ಪನ ಹೆಸರೊಂದೇ ಸಾಕಾಗಿತ್ತು. ನಾನೇ ನನ್ನಾಸೆಯಂತೆ ಕಟ್ಟಿದ ಮನೆಯಲ್ಲೂ ವಾಸ ಮಾಡುವ ಭಾಗ್ಯ ನನಗೆ ಇಲ್ಲದಾಯಿತು. ಯಾವ ಮನೆಯಲ್ಲಿ ನನ್ನ ಜೀವನದ ಕೊನೆಯ ಕ್ಷಣಗಳನ್ನು ಕಳೆಯಬೇಕು ಅಂತ ಆಸೆ ಇತ್ತೋ ಅದು ನೆರವೇರಲಿಲ್ಲ. ನನ್ನ ಗಂಡ ಕಾಲಿಟ್ಟ ಹೆಜ್ಜೆಯಲ್ಲಿ ನನ್ನ ಹೆಜ್ಜೆಯನಿಟ್ಟು ನಡೆಯುವ ಮತ್ತು ಮನೆಯಲ್ಲಿ ಇರುವ ಬಯಕೆಯೂ ಸಹ ಈಡೇರಲಿಲ್ಲ. ನನ್ನ ಮನೆಯಲ್ಲೇ ನಾನು ಸಾಯಬೇಕು ಎನ್ನುವ ಆಸೆಯೂ ಈಡೇರಲಿಲ್ಲ. ಅನಂತುವಿನ ಓದು ಮುಗಿಯಲು ಇನ್ನು ಒಂದು ತಿಂಗಳು ಮಾತ್ರ ಇತ್ತು. ವೃದ್ಧಾಶ್ರಮಕ್ಕೆ ಸಲಾಂ ಹೊಡೆದು ಚಿಕ್ಕ ಮಗನ ಜೊತೆ ಹಳ್ಳಿ ಮನೆಯಲ್ಲಿ ವಾಸಿಸುವ ಕನಸು ಕಂಡಿದ್ದೆ. ಇನ್ನೇನು ಕೊನೆಯ ದಿನ. ನನ್ನ ಬಟ್ಟೆ ಲಗೇಜನ್ನೂ ಸಹ ಕಟ್ಟಿಕೊಂಡಿದ್ದೆ. ಅನಂತು ನನ್ನನ್ನು ಕರೆದು ಕೊಂಡು ಹೋಗಲು ನಾಳೆ ಬರುವುದಾಗಿ ಹೇಳಿದ್ದ. ಆ ಕೊನೆಯ ದಿನದ ರಾತ್ರಿಯೇ ನನ್ನ ಹೃದಯ ಬಡಿತ ಸ್ಥಬ್ಧವಾಯಿತು. ವೃದ್ದಾಶ್ರಮದಲ್ಲಿ ಎಲ್ಲರೂ ರುಕ್ಕಜ್ಜಿ ಹಾರ್ಟ್ ಅಟ್ಯಾಕ್ ಆಯಿತು ಎಂದು ಗೊಂದಲ ಎಬ್ಬಿಸಿದರು. ನನ್ನ ಆತ್ಮ ನನ್ನ ದೇಹದ ಸುತ್ತಲೂ ಅಲೆಯುತ್ತಿತ್ತು. ಹಳ್ಳಿ ಮನೆಯಲ್ಲಿ ನೆಲೆಸುವ ನನ್ನ ಆಸೆ ಕೊನೆಗೂ ಈಡೇರಲಿಲ್ಲ. ಅದಕ್ಕಾಗಿ ನನ್ನ ಆತ್ಮ ನಿರಾಸೆಯಿಂದ ತಲ್ಲಣಿಸಿತು. ಮಗ ಶಾಮ ಮಾರನೆಯ ದಿನ ವೃದ್ದಾಶ್ರಮದಿಂದ ನನ್ನ ಶವವನ್ನು ಹಳ್ಳಿಗೆ ಸಾಗಿಸಿದ. ನಮ್ಮ ಮನೆಯ ಸ್ವಲ್ಪ ದೂರವಿರುವ ಸ್ಮಶಾನದಲ್ಲಿ. ನನ್ನ ಗಂಡ ತೀರಿಕೊಂಡ ಸಮಾದಿಯ ಪಕ್ಕದಲ್ಲೇ ನನ್ನನ್ನು ಸಹ ಊಳಲಾಯಿತು. ಆದರೆ ನನ್ನ ಆತ್ಮ ಮಾತ್ರ ತೃಪ್ತಿಯನ್ನು ಕಾಣದೇ ಪ್ರೇತಾತ್ಮವಾಗಿ ಅಲೆಯಲಾರಂಭಿಸಿತು. ಎಷ್ಟು ವರ್ಷದ ವರೆಗೆ ನನ್ನ ಜೀವನದ ಅಮೂಲ್ಯ ಕ್ಷಣಗಳನ್ನು ವೃದ್ಧಾಶ್ರಮದಲ್ಲಿ ಕಳೆದನೋ ಅಷ್ಟೇ ವರ್ಷ ನಾನು ಈ ಮನೆಯಲ್ಲೇ ವಾಸವಾಗಲೇ ಬೇಕು ಎಂದು ತೀರ್ಮಾನಿಸಿದೆ. ಅಂದಿನಿಂದ ಈ ಮನೆಯಲ್ಲೇ ವಾಸವಾಗಿದ್ದು ನನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದೇನೆ... ಇನ್ನೊಂದು ವರ್ಷವಿದೆ ನನ್ನ ಪಾಡಿಗೆ ನನ್ನ ಬಿಟ್ಟು ಬಿಡು. ನಾನೇ ಈ ಮನೆಯಿಂದ ಹೊರಟು ಹೋಗುತ್ತೇನೆ...ರುದ್ರಾ ಶಾಸ್ತ್ರಿ ಅಂತೆಲ್ಲಾ ಯಾರನ್ನೂ ಕರೆಸುವ ಅವಶ್ಯಕತೆಯಿಲ್ಲ. ಇದು ನನ್ನ ಮನೆ, ನನ್ನ ಆಸೆ, ನನ್ನ ನಿರ್ಧಾರ.. ಅದಕ್ಕೆ ನೀನು ಭಂಗ ತರಬೇಡ..." 

ಅಜ್ಜಿ ಕಣ್ಣೀರಿಡುತ್ತಾ ಎಲ್ಲಾ ಕತೆಯನ್ನು ಹೇಳಿದಳು. ನಾನು ಅಜ್ಜಿಯ ಮುಂದೆ ನಿಶ್ಯಬ್ಧವಾಗಿ ನಿಂತೇ ಇದ್ದೆ. ಮನದಲ್ಲಿ ಅಜ್ಜಿಯಷ್ಟೇ ನೋವು ತುಂಬಿಕೊಂಡಿತ್ತು.

ಅಷ್ಟರಲ್ಲಿ ಹೊರಗಡೆ ಕಾರಿನ ಸದ್ಧಾಯಿತು. ಮತ್ತೆ ಅಮ್ಮ ಅಪ್ಪ ಇಬ್ಬರೂ ಬಂದಿದ್ದರು. ಕಾರಿನಲ್ಲಿ ಸುಮತಿ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಸಹ ಇದ್ದರು...

ಕಾರಿನಿಂದ ಇಳಿಯುತ್ತಲೇ ಅಮ್ಮ ನನ್ನ ತಬ್ಬಿಕೊಂಡು ರೋಧಿಸಿದರು.

"ಏನಾಯ್ತೋ ಪ್ರಕಾಶ... ಮುಖದ ತುಂಬಾ ಗಾಯ, ಕೈ ಕಾಲುಗಳಲ್ಲಿ ಮಂಡಿಗಳಲ್ಲಿ ಗಾಯ. ಮೊನ್ನೆ ರಾತ್ರಿ ಊಟ ಮಾಡುವಾಗ ಸರಿಯಾಗಿದ್ದವನು. ಬೆಳಗ್ಗೆ ಎದ್ದಾಗ ಮುಖದ ತುಂಬಾ ಗಾಯ ಆಗಿತ್ತಂತೆ. ಹೇಳೋ ರಾತ್ರಿ ಏನಾಯ್ತೋ... ಮುಖ ನೋಡು ಹೇಗೆ ಊದಿಕೊಂಡಿದೆ.." 

ಅಮ್ಮ ನನ್ನ ಸ್ಥಿತಿ ಕಂಡು ರೋಧಿಸಿದಳು..

ಅಮ್ಮ ಹಾಗೆ ತಬ್ಬಿಕೊಂಡಾಗ. ನನ್ನ ದೇಹವು ಭಾರವಾದ ಅನುಭವವಾಯಿತು, ಕೂಡಲೇ ಕಣ್ಣುಗಳು ಕೆಂಪಾದವು. ದೇಹದೊಳಗೆ ಮತ್ತೊಂದು ಶಕ್ತಿ ಹೊಕ್ಕಂತಾಯಿತು. ಕೂಡಲೇ ಅಮ್ಮನನ್ನು ಹಿಂದಕ್ಕೆ ತಳ್ಳಿದೆ. ಅವಳ ಕುತ್ತಿಗೆಗೆ ನೇರವಾಗಿ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡೆ.

ನನ್ನ ಬಿಗಿಯಾದ ಹಿಡಿತಕ್ಕೆ ಅಮ್ಮನಿಗೆ ಉಸಿರು ಕಟ್ಟಿದಂತಾಯಿತು...

"ಏನೇ ...ಗೀತಾ, ಈಗ ನಿನಗೆ ಈ ಹಳ್ಳಿ ಮನೆಗೆ ಬರುವ ಹಾಗಾಯಿತೋ.... ಬಾ.. ಬಾ...!!! ಮಗನ ಮೇಲಿನ ಮಮಕಾರ ಇಲ್ಲಿಯ ವರೆಗೂ ನಿನ್ನನ್ನು ಕರೆಸಿತು. ಆಗ ನನಗೂ ನನ್ನ ಮಗನ ಮೇಲೆ ಆಸೆ ಇತ್ತು. ಮಗನೊಡನೆ ಬಾಳಿ ಬದುಕ ಬೇಕೆನ್ನುವ ಆಸೆ ನನಗೂ ಇತ್ತು. ಬಾ ಗೀತಾ.... ಬಾ.. !!! ನಿನಗಾಗಿಯೇ ಕಾಯ್ತಾ ಇದ್ದೆ..  ಬಾರೆ. ನನ್ನ ಹಾಗೆ ನಿನಗೂ ಮಗನೊಡನೆ ಬದುಕುವ ಅವಕಾಶ ನಾನು ಕೊಡುವುದಿಲ್ಲ. ಬಾರೆ ಗೀತಾ.... ಬಾ...!!"

ನನ್ನೊಳಗಿನ ಅಜ್ಜಿಯ ಆತ್ಮ ನನ್ನಿಂದ ವಿಕಾರವಾಗಿ ಮಾತನಾಡಿಸುತ್ತಿತ್ತು. 

(ಮುಂದು ವರೆಯುವುದು)

No comments:

Post a Comment