Monday 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-9)

ಪ್ರೇತಾತ್ಮದ ಮನೆಯಲ್ಲಿ (ಭಾಗ-9)



ಅಜ್ಜಿಯ ಆತ್ಮ ನನ್ನ ದೇಹ ಪ್ರವೇಶವಾದಾಗಿನಿಂದ ನನ್ನ ಮುಖ ವಿಕಾರ ರೂಪವನ್ನು ಪಡೆದಿತ್ತು. ಕಣ್ಣುಗುಡ್ಡೆಗಳು ಮೊದಲಿಗಿಂತ ದೊಡ್ಡದಾಗಿದ್ದವು. ಮುಖ ಸ್ವಲ್ಪ ವಿಕಾರ ರೂಪ ಪಡೆದುಕೊಂಡಿತ್ತು. ನನ್ನ ಕೈ ನನ್ನ ಅಮ್ಮನ ಕೊರಳನ್ನು ಬಿಗಿಯಾಗಿ ಹಿಡಿದಿತ್ತು. ಅಮ್ಮ ಕೈ ಯನ್ನು ತನ್ನ ಕೊರಳಿನಿಂದ ಬಿಡಿಸಿಕೊಳ್ಳಲು ಬಹಳ ಪ್ರಯಾಸ ಪಡುತ್ತಿದ್ದಳು....

"ಈಗ ಹೇಳೆ ಗೀತಾ.... ನಿನ್ನ ಮಗನನ್ನು ನೀನು ಉಳಿಸಿಕೊಳ್ಳುವೆಯಾ...? ಮಗನ ಮೇಲಿನ ಪ್ರೀತಿ ಎಂತಹದ್ದು ಎಂದು ನಿನಗೂ ಅರಿವಾಗಲಿ. ನಿನ್ನ ಮಗ ಸತ್ತ ನಂತರ ನೀನೂ ನಿನ್ನ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲೇ ಕಳೆಯಬೇಕು. ಆಸ್ತಿ ಅಂತಸ್ತು ಎಲ್ಲಾ ಇದ್ದೂ ಸಹ ನೀನು ಅನಾಥವಾಗಿ ಬಾಳಬೇಕು. ಅದನ್ನು ನಾನು ನನ್ನ ಕಣ್ಣಾರೆ ನೋಡ ಬೇಕು..... ಹ್ಹ ಹ್ಹ ಹ್ಹ ಹ್ಹ"

ನನ್ನೊಳಗಿನ ಆತ್ಮ ವಿಕಾರವಾಗಿ ನಗಲಾರಂಭಿಸಿತು..

ತಕ್ಷಣ ಆ ಆತ್ಮವು ಗೀತಾಳ ಕೊರಳಿನಿಂದ ಕೈ ಯನ್ನು ಹೊರ ತೆಗೆಯಿತು.

"ಈಗ ನಿನ್ನ ಮಗನ ಸ್ಥಿತಿಯನ್ನು ನೋಡೇ......"

ಎಂದು ಕೂಗುತ್ತಾ.. ನನ್ನ ದೇಹವನ್ನು ಗೋಡೆಗೆ ಡಿಕ್ಕಿ ಹೊಡೆಸಿತು. ತಲೆಯನ್ನು ಎರಡು ಮೂರು ಸಲ ಗೋಡೆಗೆ ಚಚ್ಚಿಕೊಳ್ಳುವಂತೆ ಮಾಡಿತು. ನನ್ನ ಹಣೆಯಿಂದ ರಕ್ತ ಸುರಿಯಲಾರಂಭಿಸಿತು. ನಾನು ರಕ್ತವನ್ನು ಸುರಿಸಿಕೊಂಡೇ ನಿಂತಿದ್ದೆ. ಆದರೆ ನನ್ನೊಳಗಿದ್ದ ಆತ್ಮ ವಿಕಾರವಾಗಿ ನಗುತ್ತಲೇ ಇತ್ತು. 

ಅಪ್ಪ ಅಮ್ಮ ನನ್ನ ಸ್ಥಿತಿಯನ್ನು ಕಂಡು ಕಣ್ಣೀರು ಸುರಿಸಿದರು. ಎಲ್ಲಿ ಮಗನ ಪ್ರಾಣ ಹೊರಟು ಹೋಗುತ್ತದೋ ಎಂದು ಆತಂಕ ಪಟ್ಟರು. ಆದರೆ ನನಗೆ ಯಾವ ಸಹಾಯವನ್ನೂ ಮಾಡದಂತಹ ಅಸಾಹಯಕ ಸ್ಥಿತಿ ಅವರದಾಗಿತ್ತು. ನನ್ನ ಹಣೆಯಿಂದ ರಕ್ತ ಸುರಿಯುತ್ತಲೇ ಇತ್ತು..

ಅಪ್ಪ ತಕ್ಷಣ ಮೊಬೈಲನ್ನು ತೆಗೆದು ರುದ್ರಾ ಶಾಸ್ರಿಗಳಿಗೆ ಫೋನ್ ಮಾಡಿದರು..

ಒಂದು ಕ್ಷಣ ಸುಮ್ಮನಿದ್ದ ಅಜ್ಜಿಯ ಆತ್ಮ ತಕ್ಷಣ ನನ್ನನ್ನು ಅಪ್ಪನ ಬಳಿ ಕರೆದುಕೊಂಡು ಹೋಯಿತು. ಅಪ್ಪನ ಕೊರಳಿಗೆ ಕೈ ಹಾಕಿ ಮೇಲಕ್ಕೆ ಎತ್ತಿತು. ಅಪ್ಪನ ದೇಹ ಭೂಮಿಯಿಂದ ಮೇಲಕ್ಕೆ ನೇತಾಡುತ್ತಿತ್ತು. ತಕ್ಷಣ ಅಪ್ಪನನ್ನು ಜೋರಾಗಿ ಎಸೆಯಿತು. ಮತ್ತೆ ಆ ಪ್ರೇತಾತ್ಮ ವಿಕಾರವಾಗಿ ನಗುತ್ತಾ

"ಏನೋ... ಹೆತ್ತು ಹೊತ್ತು ಬೆಳಸಿದ ತಾಯಿಯನ್ನು ಸಾಕಲಾರದಷ್ಟು ನೀಚನಾಗಿ ಹೋದೆಯಾ ನೀನು... ಏನೋ ಮಗನೆಂಬ ಮಮಕಾರದಿಂದ ನಿನ್ನ ಜೊತೆಗಿರಲು ನಿಮ್ಮ ಮನೆಗೆ ಬಂದರೆ, ನೀನು ಹೆಂಡತಿ ಮಾತು ಕಟ್ಟಿಕೊಂಡು ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೀಯಾ...? ಎಲ್ಲಾ ಇದ್ದು ನನ್ನನ್ನು ಭಿಕಾರಿಯನ್ನಾಗಿ ಮಾಡಿದಿಯಲ್ಲೋ... ವೃದ್ಧಾಶ್ರಮ ಮಕ್ಕಳಿದ್ದ ನನ್ನಂತವರಿಗಲ್ಲ ಕಣೋ.. ಅದು ಮಕ್ಕಳಿಲ್ಲದ ವೃದ್ಧರಿಗೆ ಅಂತಿಮ ಆಶ್ರಯ, ಆದರೆ ನೀನು ಮಾಡಿದ್ದೇನು...? ಹೆಂಡತಿ ಮಾತು ಕಟ್ಟಿಕೊಂಡು ನನ್ನ ಆಸ್ಥಿಯನ್ನು ಕಿರಿಯ ಮಗನಿಗೂ ಕೊಡದಂತೆ ಮೋಸ ಮಾಡಲು ಹೊರಟಿದ್ದೀಯೇನೋ...? ನಾನು ಸಾಯುವ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆಸುವಾಗ ನೀವು ಮಾಡಿದ್ದಾರೂ ಏನು, ನಾಲ್ಕೈದು ಬಹು ಮೌಲ್ಯ ಬಾಂಡ್ ಪೇಪರ್ ಗಳಿಗೆ ಬಲವಂತವಾಗಿ ನನ್ನಿಂದ ಹೆಬ್ಬಟ್ಟಿನ ಗರುತು ಹಾಕಿಸಿಕೊಂಡಿರಿ. ನಾನು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರೆ ನೀವುಗಳು ತಾಯಿಯ ಜೊತೆ ಆಸ್ಪತ್ರೆಯಲ್ಲಿರದೇ ಆಸ್ತಿ ಪತ್ರ ಮಾಡಿಸಲು ಓಡಾಡುತ್ತಿದ್ದೆ ಅಲ್ಲವೇ...? ಅದಾಗಿ ಎರಡು ದಿನದ ನಂತರ ನಾನು ಕೊನೆಯುಸಿರೆಳೆದೆ. ನನ್ನ ಗಂಡನ ಪ್ರತಿರೂಪ ಅಂತ ನಂಬಿದ್ದ ಮೊಮ್ಮಗನಿಗೆ ನನ್ನ ಸಾವಿನ ಸುದ್ಧಿ ತಿಳಿಸಲೇ ಇಲ್ಲ. ಮಂಗಳೂರಿನ ರೆಸಿಡೆನ್ಸಿ ಶಾಲೆಯಲ್ಲಿದ್ದಾನೆ ಅಂತ ನೆಪವೊಡ್ಡಿ ನನ್ನ ಶವಸಂಸ್ಕಾರಕ್ಕೂ ಕರೆಯಲಿಲ್ಲ. ಸತ್ತ ಮೇಲಾದರೂ ನನ್ನ ಭಾವಚಿತ್ರವನ್ನು ಮನೆಯಲ್ಲಿ ನೇತು ಹಾಕಲಿಲ್ಲ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವರ್ಷದ ತಿಥಿಯನ್ನೂ ಮಾಡಲಿಲ್ಲ....ಹೇಳೋ ಹೀಗೇಕೆ ಮಾಡಿದೆ..?"

ಅಜ್ಜಿಯ ಆತ್ಮ ಕೆಳಗೆ ಬಿದ್ದ ನನ್ನ ತಂದೆಯ ಕೊರಳನ್ನು ಹಿಡಿದು ಮತ್ತೆ ಮೇಲಕ್ಕೆತ್ತಿತು...

ಅಪ್ಪ ಮತ್ತೆ ನೇತಾಡುತ್ತಿದ್ದರು... ಮತ್ತೆ ಅಪ್ಪನನ್ನು ಎಸೆಯಿತು...

ಪ್ರೇತಾತ್ಮ ದುಃಖದಿಂದ ಅಳಲಾರಂಬಿಸಿತು...

ಆಗ ಅಪ್ಪ ಅಮ್ಮ ಪ್ರೇತಾತ್ಮದ ಮುಂದೆ ಕೈ ಮುಗಿದು ಬೇಡಿಕೊಂಡರು...

"ದಯವಿಟ್ಟು ನನ್ನ ಮಗನನ್ನು ಏನೂ ಮಾಡಬೇಡಿ, ನಾವು ಮಾಡಿದ ತಪ್ಪಿಗೆ ನನ್ನ ಮಗನಿಗೇಕೆ ಶಿಕ್ಷೆ ಕೊಡುತ್ತಿರುವೆ. ಅವನ ದೇಹವನ್ನು ಬಿಟ್ಟು ಬಿಡು. ಅವನಿಗೆ ಇವೆಲ್ಲಾ ಗೊತ್ತಿಲ್ಲ. ನಮಗೆ ಬೇಕಾದರೆ ಶಿಕ್ಷೆ ಕೊಡು. ಆದರೆ ಇರುವ ಒಬ್ಬನೇ ಮಗನಿಗೆ ಹೀಗೆ ತೊಂದರೆ ಕೊಡ ಬೇಡ..."

ಅಪ್ಪ ಕಣ್ಣೀರಿಟ್ಟು ಬೇಡಿಕೊಂಡರು ..

ಅಮ್ಮ ಸಹ ಅಳುತ್ತಾ ಹೇಳಿದರು...

"ಅತ್ತೆ ಪ್ಲೀಸ್ ಮಗನನ್ನು ಬಿಟ್ಟು ಬಿಡಿ, ನನ್ನ ಪ್ರಾಣ ಬೇಕಾದರೆ ತೆಗೆದುಕೊಳ್ಳಿ... ನನ್ನದು ಕ್ಷಮಿಸಲಾರದಂತಹ ತಪ್ಪು... ಸರ್ಕಾರಿ ನೌಕರಿಯ ಗಂಡ ಸಿಕ್ಕ ಎಂಬ ದುರಹಂಕಾರದಿಂದ ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲಾರದಷ್ಟು ನೀಚಳಾಗಿ ಹೋದೆ.. ಅತ್ತೆ ಮನೆಯಲ್ಲಿದ್ದರೆ ಸ್ವಾತಂತ್ರವಿರದು ಎಂದು ತಪ್ಪಾಗಿ ಅರ್ಥೈಸಿಕೊಂಡೆ. ವೃದ್ಧರನ್ನು ಸರಿಯಾಗಿ ನೋಡಿಕೊಳ್ಳದಿರುವುದು ನನ್ನದೇ ತಪ್ಪು ... ದಯಮಾಡಿ ನನ್ನನ್ನು ಕ್ಷಮಿಸಿ..."

ಅಮ್ಮ ಪ್ರೇತಾತ್ಮದ ಕಾಲು ಹಿಡಿದು ಅಳಲಾರಂಭಿಸಿದಳು...

"ನಿನ್ನ ಮಗನನ್ನು ಸಾಯಿಸುವ ಇಚ್ಛೆ ನನ್ನದಾಗಿದ್ದರೆ  ಎಂದೋ ಮುಗಿಸಿಬಿಡುತ್ತದೆ... ಅವನು ತನ್ನ ಅಜ್ಜನ ಪ್ರತಿರೂಪ ಧರಿಸಿಯೇ ಹುಟ್ಟಿದ್ದಾನೆ. ಗುಣ ನಡತೆ ಮುಖಚರ್ಯೆ ಎಲ್ಲವೂ ತನ್ನ ಅಜ್ಜನಿಂದ ಬಳುವಳಿಯಾಗಿ ಪಡೆದಿದ್ದಾನೆ, ಇನ್ನೊಂದು ವರ್ಷ ಈ ಮನೆಯಲ್ಲಿ ಇದ್ದು  ಯಾರಿಗೂ ತೊಂದರೆ ಕೊಡದೆ ನಾನು ಮುಕ್ತಿಯನ್ನು ಪಡೆಯಬೇಕೆಂದಿದ್ದೆ . ಆದರೆ ಮೊಮ್ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಅವನಿಗೆ ಮಾತನಾಡಿಸುತ್ತಾ ಬಂದೆ... ಆದರೆ ಆತ ನನ್ನ ಮೇಲಿಟ್ಟಿದ್ದ ಮಮಕಾರ ನೋಡಿ ನನಗೆ ಕಣ್ಣು ತುಂಬಿ ಬಂದವು. ಮುಂದಿನ ತಿಂಗಳು ನಡೆಯುವ ವರ್ಷದ ಶ್ರಾದ್ಧವನ್ನು ನನ್ನ ಮೊಮ್ಮಗನೇ ನೆರವೇರಿಸಲಿ. ಅಷ್ಟರೊಳಗೆ ನೀವು ನಿಮ್ಮ ದುರಾಸೆಯನ್ನು ಬಿಟ್ಟು, ಅಪ್ಪ ಮಾಡಿದ ಆಸ್ಥಿಯನ್ನು ಅನಂತುವಿಗೂ ಸಹ ಸಮನಾಗಿ ಹಂಚಬೇಕು. ಈ ಎಲ್ಲಾ ಕಾರ್ಯವನ್ನು ಮುಂದಿನ ತಿಂಗಳೊಳಗೆ ಮಾಡಿ ಮುಗಿಸಬೇಕು. ಪ್ರೇತಾತ್ಮವಾಗಿ ಅಲೆಯುತ್ತಿರುವ ನನಗಾಗ ಐದು ವರ್ಷ ತುಂಬುತ್ತದೆ. ವೃದ್ಧಾಶ್ರಮದ ಜೀವನಕ್ಕೆ ನೊಂದು ತತ್ತರಿಸಿದ್ದ ನನಗೂ ಸ್ವಲ್ಪ ತೃಪ್ತಿಸಿಕ್ಕಂತಾಗುತ್ತದೆ .."

ಅಜ್ಜಿ ಹಾಗೆ ಹೇಳಿದಾಗ ಅಪ್ಪ ತನ್ನ ತಪ್ಪಿನ ಅರಿವಾಗಿ ಅಳಲಾರಂಭಿಸಿದರು. ವೃದ್ಧ ತಾಯಿಯನ್ನೂ ನೋಡಿಕೊಳ್ಳಲಾರದ ಮಗ ಇದ್ದರೂ ಸತ್ತ ಹಾಗೆ ಎಂದು ಗೋಳಾಡಿದರು...

 ನನ್ನ ತಾಯಿಯೂ ಸಹ ತಪ್ಪನ್ನು ಒಪ್ಪಿಕೊಂಡು ಅಳಲಾರಂಬಿಸಿದರು...

ಅಜ್ಜಿ ಹೇಳಿದಂತೆಯೇ ಒಂದು ತಿಂಗಳೊಳಗೆ ಎಲ್ಲಾ ನಡೆಯಿತು.. ಅಪ್ಪ ಸ್ವಲ್ಪ ಆಸ್ತಿಯನ್ನು ಇಟ್ಟುಕೊಂಡು ಹೆಚ್ಚಿನ ಭಾಗವನ್ನು ಚಿಕ್ಕಪ್ಪ ಅನಂತುವಿನ ಹೆಸರಲ್ಲಿ ಬರೆದರು....

ವರ್ಷದ ತಿಥಿ ಮುಗಿದ ನಂತರ ಅಜ್ಜಿ ಎಲ್ಲಿಯೂ ಕಾಣಿಸಲಿಲ್ಲ. ಹಲವು ವರ್ಷ ಮನೆಯಲ್ಲಿ ನೆಲಸಿದ್ದ ಅಜ್ಜಿಯ ಪ್ರೇತಾತ್ಮವೊಂದು ಮುಕ್ತಿಯನ್ನು ಪಡೆಯಿತು...

(ಮುಗಿಯಿತು....)

------------------------------------------------------------------------
ಈ ಕತೆಯನ್ನು ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ಮೊದ ಮೊದಲು ತುಂಬಾ ಕುತೂಹಲದಿಂದ ಬೆಳೆದ ಕತೆ ಸಾಮಾನ್ಯ ಮುಕ್ತಾಯ ಕಂಡಿತು ಅನ್ನಿಸಬಹುದು. ಮಕ್ಕಳಿದ್ದರೂ ವೃದ್ಧ ತಂದೆ ತಾಯಿಯರು ವೃದ್ಧಾಶ್ರಮಕ್ಕೆ ಸೇರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮೊನ್ನೆ ಊರಿಗೆ ಹೋದಾಗ ಅಲ್ಲಿದ್ದ ಕುಟುಂಬವೊಂದು ದಿವಾಳಿಯ ಹಂತಕ್ಕೆ ತಲುಪಿತ್ತು. ನಾನು ದಿವಾಳಿಯಾಗಲು ಕಾರಣ ಕೇಳಿದೆ. ಅದಕ್ಕೆ ಅಲ್ಲಿಯ ನೆರೆಹೊರೆಯವರು ಹೇಳಿದ ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಆ ಮನೆಯಲ್ಲಿ ಮಗ ಮತ್ತು ಸೊಸೆ ವೃದ್ದಾಪ್ಯಕ್ಕೆ ತಲುಪಿದ್ದ ತಾಯಿಗೆ ಸರಿಯಾಗಿ ಊಟವೂ ಹಾಕುತ್ತಿರಲಿಲ್ಲ. ಸೊಸೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಎಂಬ ಕಾರಣ ತಿಳಿಯಿತು ಇದಕ್ಕಾಗಿ ಮನನೊಂದ ಅಜ್ಜಿ.

."ನನ್ನ ಮನಸ್ಸನ್ನು ನೋಯಿಸಿ ಉಪವಾಸ ಕೆಡವಿದ ಅವರು ಎಂದೂ ಉದ್ಧಾರವಾಗೊಲ್ಲ"  

ಎಂದು ಹಲವು ಬಾರಿ ಹಲವರ ಬಳಿ ಹಿಡಿ ಶಾಪ ಹಾಕಿ  ಹೇಳಿಕೊಂಡಿದ್ದಳಂತೆ. 
ಆ ಮುದುಕಿ ಸತ್ತ ಮೇಲೆ ಆ ಕುಟುಂಬವೂ ಸಹ ದಿವಾಳಿಯ ಹಾದಿ ಹಿಡಿಯಲಾರಂಬಿಸಿತಂತೆ. ಮುದುಕಿಯ ಶಾಪ ಆ ಕುಟುಂಬಕ್ಕೆ ತಗುಲಿದೆ ಎಂಬುದು ನೆರೆಹೊರೆಯವರ ಅಬಿಪ್ರಾಯ. ಇದು ಎಷ್ಟರ ಮಟ್ಟಿಗೆ ನಿಜ ಎಂದು ನಾನು ಇಲ್ಲಿ ವಿಶ್ಲೇಷಿಸಲು ಹೋಗುವುದಿಲ್ಲ. ಆದರೆ ವೃದ್ದ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದಂತಹ ಮಕ್ಕಳು ಇರುವುದಂತೂ ಸತ್ಯ. ಈ ನೈಜ ಘಟನೆಯ ಎಳೆಯನ್ನು ಇಟ್ಟುಕೊಂಡೇ ಕತೆ ಬರೆದಿದ್ದರಿಂದ ಕೊನೆಯ ಭಾಗ ನಿಮಗೆ ಬೋರ್ ಅನಿಸಬಹುದು. ಆದರೆ ಈ ಕತೆ ವೃದ್ಧ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗಾಗಿ. ವೃದ್ಧಾಶ್ರಮಕ್ಕೆ ಕಳುಹಿಸಿ ತಾವು ಮಾತ್ರ ಸಂತೋಷದಿಂದ ಮೆರೆಯುತ್ತಿರುವವರಿಗಾಗಿ. ಈ ಕತೆಯಂತೆ ಮಕ್ಕಳ ತಪ್ಪುಗಳನ್ನು ತಿದ್ದಲು ಅಜ್ಜಿ ಪ್ರೇತಾತ್ಮವಾಗಿಯೇ ಅಲೆಯಬೇಕು ಎಂದೇನಲ್ಲ. ನಾವು ಮಾಡಿದ ಧರ್ಮ ಕರ್ಮಗಳಿಗೆ ನಾವು ಯಾವುದೋ ಒಂದು ರೀತಿಯಲ್ಲಿ ನಾವು ಬೆಲೆಯನ್ನು ತೆರ ಬೇಕಾಗುತ್ತದೆ. ದೆವ್ವ ಪ್ರೇತಾತ್ಮ ಅಂತ ಎಲ್ಲಿಯೂ ಇಲ್ಲ. ಅದು ನಮ್ಮ ಮನಸ್ಸಿನಲ್ಲೇ ನೆಲೆಸಿದೆ. ನಾವು ಮಾಡಿದ ಕರ್ಮಗಳೇ ನಮಗೆ ದೆವ್ವ ಪ್ರೇತಾತ್ಮವಾಗಿ ಕಾಡುತ್ತವೆ. ನೀವು ನಿಮ್ಮ ಮನೆಯಲ್ಲಿ ದುಷ್ಟತನದಿಂದಲೋ... ಆತ್ಮ ವಂಚನೆಯಿಂದ ನಿಮ್ಮ ಸುಖಕ್ಕಾಗಿ ಇನ್ನೊಬ್ಬರಿಗೆ ತೊಂದರೆಯನ್ನು ಕೊಟ್ಟು ಬದುಕುತ್ತಿದ್ದರೆ. ಆ ಮನೆಯಲ್ಲಿ ಪ್ರೇತಾತ್ಮ ನೆಲೆಸಿರುತ್ತದೆ. ನೀವು ಒಳ್ಳೆಯ ಧರ್ಮವನ್ನು ಪಾಲಿಸುತ್ತಿದ್ದರೆ ನಿಮ್ಮ ಮನೆಯಲ್ಲಿ ದೇವರು ನೆಲೆಸಿರುತ್ತಾನೆ. ಆತ್ಮ ಪ್ರೇತಾತ್ಮಗಳಿರುವುದು ನಮ್ಮ ನಮ್ಮ ನಡತೆಯಲ್ಲಿ ಗುಣದಲ್ಲಿ. ನಾವು ಮಾಡಿದ ಕೆಟ್ಟತನಗಳೇ ಮುಂದೆ ನಮ್ಮ ಮನಸ್ಸಿನಲ್ಲಿ ಪ್ರೇತಾತ್ಮವಾಗಿ ಕಾಡುತ್ತವೆ. ಮಾಡಿದ ಪಾಪಗಳೀ ನಮ್ಮನ್ನು ದೆವ್ವವಾಗಿ ಹಿಂಬಾಲಿಸುತ್ತವೆ. ಆದ್ದರಿಂದ ತಿಳಿದು ಯಾರ ಮನಸ್ಸನ್ನೂ ನೋಯಿಸಲು . ಪ್ರಯತ್ನಿಸಬೇಡಿ. ವೃದ್ಧ ತಂದೆ ತಾಯಿಯರ ಮನಸ್ಸು ಮಗುವಿನಂತೆ ಆದಷ್ಟು ಅವರನ್ನು ಚನ್ನಾಗಿ ನೋಡಿಕೊಂಡು ಅವರನ್ನು ನಗು ನಗುತ್ತಲೇ ಕಳುಹಿಸಿಕೊಡಿ... ಏಕೆಂದರೆ ನಾವೂ ಮುಂದೆ ನಗು ನಗುತ್ತಲೇ ನಮ್ಮ ಅಂತಿಮ ಯಾತ್ರೆ ಮುಗಿಸಬೇಕಲ್ಲವೇ...? 

ಎಲ್ಲರಿಗೂ ಧನ್ಯವಾದಗಳು

ನಿಮ್ಮ

ಪ್ರಕಾಶ್ ಎನ್ ಜಿಂಗಾಡೆ

No comments:

Post a Comment