Friday, 5 May 2017

ನಾಯಕರಿವರು (ಕವನ)

ನಾಯಕರಿವರು

ಗಾಂಧಿ ಪ್ರತಿಮೆಯ ನಿಲ್ಲಿಸಿಹರು
ಅಂಬೇಡ್ಕರ್ ಪಟವ ಹಾಕಿಹರು
ವಲ್ಲಭ ಪಟೇಲ್, ಸುಭಾಷ್, ಚಂದ್ರ ಶೇಖರರ
ಸಂಗೊಳ್ಳಿ, ಝಾನ್ಸಿ, ಚೆನ್ನಮ್ಮರಾಣಿಯರನೇಕರ
ಶಾಲೆಲಿ ಪಾಠವ ಓದಿದ ನೆನಪಲಿ
ಬಾಯಲಿ ಭಾಷಣ ಬಿಗಿಯುವರು..

ಗಾಂಧಿ ಸುಭಾಷರ ವೇಷವ ಧರಿಸಿ
ತಮ್ಮಯ ಕಾರ್ಯವ ಮರೆತಿಹರು.
ಜನರ ಕಿವಿಯಲಿ ಪಿಳ್ಳಂಗೋವಿಯ ಊದಿ
ಲಂಚದ ಬಾಗಿಲಲಿ ಭಟ್ಟಂಗಿಗಳಾಗಿ
ಹಿಂದಿನ ಸಾಧನೆ ಮಾತ್ರವೇ ಹೊಗಳುತ
ಸುಮ್ಮನೆ ಕಾಲವ ನೂಕಿಹರು...

ಹಸಿವಿನ ಉದರವು ತಂಬಲೇ ಇಲ್ಲ
ಬಾಯಾರಿದ ನಾಲಿಗೆ ತಣಿಯಲೇ ಇಲ್ಲ
ಬಾಂಬು ಸಿಡಿ ಮದ್ದುಗಳ ಸದ್ದು ಅಡಗಲೇ ಇಲ್ಲ
ಶ್ರಮಿಕನ ಬವಣೆ ತೀರಲೂ ಇಲ್ಲ
ಮಂತ್ರಿಯ ನಿದ್ದೆ ಮುಗಿಯಲೇ ಇಲ್ಲ
ನಿದ್ದೆಯ ನಿಧಾನ ಸೌಧದಲಿ...

ಗಾಂಧಿ ಹೋರಾಟದ ನೆಪದಲೆ ನಡೆಯುತ
ತಾವೇ ಸ್ವತಂತ್ರ ತಂದವರಂತೆ ಬೀಗುತ
ಅವರಿಟ್ಟ ಹೆಜ್ಜೆಯ ಇಂಚಿಗೂ ಸುಳಿಯದೇ
ವರ್ತಮಾನದ ಸ್ಥಿತಿ ಗತಿಯನು ಅರಿಯದೆ
ಸ್ವಾರ್ಥದಿ ದಾರಿಯ ಸೆವೆಸುವರು
ಅಧಿಕಾರದ ಅರ್ಥವ ತಿಳಿಯರು..

             ಪ್ರಕಾಶ್ ಎನ್ ಜಿಂಗಾಡೆ

No comments:

Post a Comment