Wednesday 28 June 2017

ಭಿಕ್ಷುಕಿ

ಭಿಕ್ಷುಕಿ

ಇರಲಿ ಬಿಡಿ
ಆದರೂ ಅವಳು ಸುಂದರಿಯೇ..

ರಸ್ತೆ ಅಂಚಿನಲಿ
ಚಿಂದಿ ದಿರಿಸಿನಲಿ
ಮಸಿ ಮುಖದಲೇ ತಿರುಗುತ
ತಿರುಪೆಯ ಬೇಡುತ
ತರುಣಿಯು ಅಂದವ ತೋರಿಹಳು..

ಇರಲಿ ಬಿಡಿ
ಆದರೂ ಅವಳು ಅಪ್ಸರೆಯೇ..

ಕ್ರೀಮಿಲ್ಲ ಚೆಂದದ ಸೋಪಿಲ್ಲ
ಕಲಾವಿದನ ಮಾಂತ್ರಿಕ ಸ್ಪರ್ಶವಿಲ್ಲ
ರವಿಯ ಹೊಂಬೆಳಕಿನಡಿಯಲಿ
ಬಿಸಿಲಲಿ.. ಮಣ್ಣ ಹುಡಿಯಲಿ
ನಿಜ ಸ್ವರೂಪಿ ಕನ್ಯೆಯಿವಳು..

ಇರಲಿ ಬಿಡಿ
ಆದರೂ ಅವಳು ಸುಸಂಸ್ಕೃತಳು..

ಅತಿಯಾದ ಆಸೆಗಳಿಲ್ಲ
ಮೋಸ ದ್ರೋಹವ ತೋರಿಸಿಲ್ಲ
ಯಾವ ಜನುಮದ ಪಾಪವೋ
ಯಾವ ದೇವರ ಶಾಪವೋ
ಎಲ್ಲರಂತೆ ಬದುಕುವುದ ಕಲಿತಿಲ್ಲ...

    -ಪ್ರಕಾಶ್ ಎನ್ ಜಿಂಗಾಡೆ


ಫ್ಯಾಷನ್ನು

ಫ್ಯಾಷನ್ನು...

ಕೊರಳಲ್ಲಿಯ ಗುಂಡಿ ಬಿಚ್ಚಿದ ಅಂಗಿ
ಸೊಂಟದ ಮೇಲೆ ನಿಲ್ಲದ ಪ್ಯಾಂಟು
ವಕ್ರ ನಡೆಯ ಮರ್ಕಟ ಭಾವ
ಕಿವಿಗಳಲಿ ಕರ್ಣ ಮಂಡಲವು
ಇಂದಿನ ಯುವಕರ ಫ್ಯಾಷನ್ನು..

ಪ್ರಾಣಿಗಳ ಮೀರಿಸುವ ಕೇಶ ವಿನ್ಯಾಸಗಳು
ಅಲ್ಲಲ್ಲಿ ಕತ್ತರಿ ಹಾಕಿದ ಗುರುತುಗಳು
ಇಲಿ ತುರಿದಂತಿರುವ ಕುರುಹುಗಳು
ಇಳಿ ಬಿದ್ದ ಕೂದಲಲಿ ವಿಚಿತ್ರ ರಂಗುಗಳು
ಅದೇನಂತ ಅವರಿಗೇ ಕನ್ ಫ್ಯೂಸನ್ನು..

ಸುಪನಾತಿ ಉಡುಗೆಯ ಹುಡುಗಿಯರು
ಪಾರದರ್ಶಕ ಮಿತ ಉಡುಪುಗಳು
ಕಾಣುವ ಮಂಡಿ ತೋರುವ ನಡು
ಬಣ್ಣ ಮೆತ್ತಿದ ಅಧರಗಳು ಪಾರ್ಲರಿನ ಕೆನ್ನೆಗಳು
ಆದರೂ ಬೇಕೆನ್ನುತಿಹರು ತಮಗೆ ಪ್ರೊಟೆಕ್ಷನ್ನು..

ಐಲು ಬೈಲು ಇಂಗ್ಲಿಷನು ಬೆರೆಸಿ
ಅನ್ಯರ ಅನುಕರಣೆ ಅತಿಯಾಗಿ ನಡೆಸಿ
ನುಡಿ ಸಂಸ್ಕೃತಿಯನು ಹಾಳುಗೆಡಹಿ
ಕನ್ನಡ ಮಾತೆಯ ನುಡಿಯಲಿ ಸೋಲಿಸಿ
ಕೊಡುತಿಹರು ನಾಡಿಗೆ ಅತಿಯಾದ ಟೆಂಕ್ಷನ್ನು..

ಪ್ರಕಾಶ್ ಎನ್ ಜಿಂಗಾಡೆ