Tuesday 4 July 2017

ನಮ್ಮ ಬಸ್ಯ..

ನಮ್ಮ ಬಸ್ಯ...

ಮಾಲ್ ನಲಿ ಬಸ್ಯ ಕೆಲಸಕೆ ಸೇರಿ
ಪಿಳಿ ಪಿಳಿ ಕಣ್ಣಲಿ ಜನಗಳ ನೋಡುತ
ಟೈಯನು ಬಿಗಿದು ನೇಣಿನ ಹಾಗೆ
ಸಲಾಮು ಮನಸ್ಕಾರ ಭಂಗಿಯ ತೋರಿ
ಕಷ್ಟದಿ ಕೃತಕ ನಗೆಯನು ಬೀರಿದ್ದ...

ಕೊರಳಲಿ ಐಡಿ ಕಾರ್ಡಿನ ಮಾಲೆ
ನಾಲಿಗೆಯಲಿ ಇಂಗ್ಲಿಷಿನ ಉರುಳುಯ್ಯಾಲೆ
ಹೊಂದದ ವಿಲಾಸಿ ವೇಷವ ತೋರುತ
ಇಲ್ಲದ ಧೂಳನು ಕೊಡವುತ ಒರೆಸುತ
ಮಾಲ್ ನಲಿ ಕೆಲಸವ ಮಾಡಿಹನು...

ಗೆಳೆಯನೊಬ್ಬ ಬಸ್ಯನ ಕಂಡು
ಅಚ್ಚರಿಯಲಿ ಅವನವತಾರವ ನೋಡಿ
'ಶೆಟ್ಟರಂಗಡಿಯಲಿ ಕೆಲಸದಿ ಇರುವಾಗ
ನೀನಿಂಗಿರಲಿಲ್ಲ ಬಿಡೋ ಬಸ್ಯ'
ಹೇಳಿದನು ಹಲ್ಲನು ಕಿಸಿಯುತಲಿ..

ಬಸ್ಯ ಗಂಭೀರದಿ ಗೆಳೆಯನ ನೋಡುತ
ಆಂಗ್ಲ ನುಡಿಯನು ಸ್ಟೈಲಲಿ ನುಡಿಯುತ
'Now India changed ಯಾರ್'
ಕೆಮ್ಮಿದ ತೊದಲಿದ ಹೇಳುತ ಬಸ್ಯ
ಕೊರಳಿನ ಟೈ ಯನು ಸವರುತಲಿ...

   - ಪ್ರಕಾಶ್ ಎನ್ ಜಿಂಗಾಡೆ.