Wednesday 6 September 2017

ಅಂತ... ಆತಂಕ (ಭಾಗ-2)

ಅಂತ... ಆತಂಕ (ಭಾಗ-2)

ಕೆಳಗೆ ಬಿದ್ದಿದ್ದ ಚಂದ್ರ ಶೇಖರ್ ಸುಧಾರಿಸಿಕೊಳ್ಳಲು ಒಂದೆರಡು ನಿಮಿಷ ಬೇಕಾಯಿತು. ಹೇಗೋ ಎದ್ದು ನಿಂತು.

"ಬಿಡೋ ನನ್ನ ಮಗಳನ್ನ ಯಾರೋ ನೀನು...? ಬಿಡದಿದ್ದರೆ ಚೈನ್ ಎಳೆದು ಟ್ರೇನ್ ನಿಲ್ಲಿಸಿಬಿಡುತ್ತೇನೆ"

ಎನ್ನುತ್ತಾ ತನಿಷ್ಕಳ ತಂದೆ ಮತ್ತೆ ಆ ಅನಾಮಿಕ ವ್ಯಕ್ತಿಯ ಕೊರಳ ಪಟ್ಟಿಯನ್ನು ಹಿಡಿದನು. ಕೋಪದಿ ಕೆಕ್ಕರಿಸಿ ನೋಡುತ್ತಿದ್ದ ಆ ವ್ಯಕ್ತಿ ಚಂದ್ರಶೇಖರರಿಗೆ ಮತ್ತೆ ಒಂದು ಏಟನ್ನು ಹೊಡೆದನು...

ಹೊಡೆದ ರಭಸಕ್ಕೆ ಅವರು ಮತ್ತೆ ಕೆಳಗೆ ಬಿದ್ದರು.

"ನೋಡು ನಿಮ್ಮನ್ನು ಸಾಯಿಸುವ ಉದ್ದೇಶ ನನಗಿಲ್ಲ ನಿಮ್ಮಿಂದ ಒಂದು ಸಣ್ಣ ಕೆಲಸವಾಗ ಬೇಕಾಗಿದೆ, ಅದನ್ನು ನೆರವೇರಿಸಿದರೆ ನೀವು ಜೀವ ಸಹಿತ ಉಳಿಯುತ್ತೀರಿ. ಇಲ್ಲದಿದ್ದರೆ ನಿಮ್ಮ ಪ್ರಾಣ ತೆಗೆಯಲೂ ಸಹ ನಾನು ಹೇಸುವುದಿಲ್ಲ...

ಹಾಗೆ ಹೇಳುತ್ತಾ ತನಿಷ್ಕಳ ಹಣೆಯಿಂದ ರಿವಾಲ್ವರನ್ನು ತೆಗೆದು ತಕ್ಷಣ ಹಿಂದೆ ತಿರುಗಿ ಒಂದು ಗುಂಡನ್ನು ಹಾರಿಸಿದನು. ತನ್ನ ಬೆನ್ನ ಹಿಂದೆ ಅನತಿ ದೂರದಲ್ಲಿ ಕುಳಿತ್ತಿದ್ದ ರೋಹನ್ ಇದನ್ನೆಲ್ಲಾ ಗಮನಿಸುತ್ತಿದ್ದರಿಂದ  ಕೂಡಲ್ ಟ್ರೈನ್ ನ ಚೈನನ್ನು ಎಳೆಯಲು ಮುಂದಾದನು. ರಿವಾಲ್ವರ್ ನಿಂದ ಹಾರಿದ ಬುಲೆಟ್ ಕೂದಲೆಳೆಯ ಅಂತರದಲ್ಲಿ ಚೈನ್ ಎಳೆಯಲು ಮುಂದೆ ಚಾಚಿದ ಕೈಯ ಹತ್ತಿರದಿಂದಲೇ ಹಾದು ಹೋಯಿತು. ರೋಹನ್ ತಕ್ಷಣ ಬೆದರಿದನು. ಹಾರಿಸಿದ ಗುಂಡು ತನಗೇ ಬಿತ್ತು ಎಂಬಂತೆ ಸೀಟಿನ ಕೆಳಗೆ ಬಿದ್ದನು. ಆ ಅನಾಮಿಕ ವ್ಯಕ್ತಿ ರೋಹನ್ ನನ್ನು ಕರೆತಂದು ಚಂದ್ರ ಶೇಖರ್ ಪಕ್ಕದಲ್ಲೇ ಕೂರಿಸಿದನು.

"ನೋಡಿ ಅತಿಯಾದ ಬುದ್ಧಿವಂತಿಕೆ ತೋರಿಸಬೇಡಿ. ನೀವು ನನ್ನನ್ನು ಏನೂ ಮಾಡಲಾಗದು. ನಾನು ಮೊದಲೇ ಹೇಳಿದಂತೆ ನಿಮ್ಮನ್ನು ಸಾಯಿಸುವ ಉದ್ದೇಶ ನನಗಿಲ್ಲ. ನನ್ನ ಚಿಕ್ಕ ಕೆಲಸಕ್ಕೆ ನೀವು ಸಹಾಯ ಮಾಡಿದರೆ ಸಾಕು. ನೀವು ಐದು ಜನರೂ ಸಹ ಜೀವಂತವಾಗಿರುತ್ತೀರಿ ಇಲ್ಲದಿದ್ದರೆ ಸಾವು ಖಂಡಿತ.... ಯೋಚಿಸಿ ನೋಡಿ"

ಫ್ರೆಂಚ್ ದಾಡಿಯ ಆ ಅನಾಮಿಕ ವ್ಯಕ್ತಿ ಮತ್ತೆ ಸಮಜಾಯಿಸಿ ಹೇಳಿದನು.

"ಏನದು ಯಾವ ಕೆಲಸ..? ನೀನು ಹೇಳಿದಂತೆ ಮಾಡುತ್ತೇನೆ ಏನದು ಹೇಳು...?  ಆದರೆ ನಮ್ಮನ್ನು ಬಿಟ್ಟು ಬಿಡಬೇಕು. ಯಾರಿಗೂ ತೊಂದರೆ ಕೊಡಬಾರದು."

ಚಂದ್ರ ಶೇಖರ್ ಹೆದರುತ್ತಲೇ ಹೇಳಿದನು.

"ಸರಿ.. ನನ್ನ ಕೆಲಸವನ್ನು ನೆರವೇರಿಸಿದರೆ ಯಾರಿಗೂ ತೊಂದರೆಯಾಗದು. ನೀವೇನಾದರೂ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ಯಾರೂ ಜೀವ ಸಹಿತ ಉಳಿಯಲಾರಿರಿ. ಇಲ್ಲಿಂದ ಸ್ವಲ್ಪ ಮುಂದೆ ರಾಣೆಬೆನ್ನೂರು ಸ್ಟೇಷನ್ ಸಿಗುತ್ತದೆ. ಅಲ್ಲಿಯವರೆಗೂ ನೀವು ನಿರಾತಂಕವಾಗಿ ಕುಳಿತು ಪ್ರಯಾಣಿಸಿರಿ. ರಾಣೆಬೆನ್ನೂರಿನಿಂದ ಹದಿನೈದು ಕಿಲೋಮೀಟರ್ ಸಾಗಿದ ನಂತರ ರೈಲು ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲುತ್ತದೆ  ನಿಲ್ಲಲೇಬೇಕು. ಅಲ್ಲಿ ನೀವೆಲ್ಲಾ ನನ್ನ ಜೊತೆಗೆ ಇಳಿಯಬೇಕು. ಅಲ್ಲಿ ನಮಗಾಗಿ ಒಂದು ಕಾರು ನಿಂತಿರುತ್ತದೆ. ಅಲ್ಲಿಂದ ಸ್ವಲ್ಪ ದೂರ ನೀವು ನನ್ನ ಜೊತೆ ಕಾರಿನಲ್ಲಿ ಬರಬೇಕು. ಅಲ್ಲಿ ತಲುಪಿದ ಮೇಲೆ ಮುಂದಿನ ಕೆಲಸವನ್ನು ನಾನು ತಿಳಿಸುತ್ತೇನೆ. ಯಾವ ಕೆಲಸ ಏನು ಎಂದು ನಿಮಗೆ ಅಲ್ಲಿಗೆ ಬಂದ ನಂತರವೇ ಹೇಳುತ್ತೇನೆ ಆದರೆ ಈ ಮಧ್ಯೆ ಏನಾದರೂ ಚಾಲಾಕಿತನವನ್ನು ತೋರಿಸಿದರೆ ಯಾರೂ ಬದುಕುವುದಿಲ್ಲ. ನೆನಪಿರಲಿ"

ಆ ವ್ಯಕ್ತಿ ತನ್ನ ಮುಂದಿನ ಯೋಜನೆಯನ್ನು ತಿಳಿಸಿದನು.

ರಿವಾಲ್ವರನ್ನು ಮತ್ತೆ ಸೂಟ್ ಕೇಸ್ ಒಳಗೆ ಇಟ್ಟು ಆ ವ್ಯಕ್ತಿ ಏನೂ ಆಗಿಲ್ಲವೆಂಬಂತೆ ನಿರಾತಂಕವಾಗಿ ಕುಳಿತನು. ಅಷ್ಟರಲ್ಲಿ ಸರೋಜಗೆ ಎಚ್ಚರವಾಯಿತು. ತನಿಷ್ಕ ಎಲ್ಲಾ ವಿಷಯವನ್ನು ತಾಯಿಯ ಕಿವಿಯಲ್ಲಿ ಹೇಳಿದಳು. ತಾಯಿ ಬೆವರಲಾರಂಭಿಸಿದಳು. ಚಂದ್ರಶೇಖರ್ ತನ್ನ ರಕ್ತಸಿಕ್ತ ಮುಖವನ್ನು ಒರೆಸಿಕೊಂಡು ಕುಳಿತನು. ತನಿಷ್ಕ ಹೆದರಿದ ತಾಯಿಯನ್ನು ತನ್ನ ಬುಜಕ್ಕೆ ಒರಗಿಸಿಕೊಂಡು ತಾಯಿಯನ್ನು ಹಿಡಿದು ಕುಳಿತ್ತಿದ್ದಳು.

ರೈಲು ವೇಗವಾಗಿ ಸಾಗುತ್ತಿತ್ತು. ಎಲ್ಲರ ಮುಖದಲ್ಲೂ ಗಂಭೀರತೆ, ಭಯ, ಕುತೂಹಲಗಳು ಆವರಿಸಿದ್ದವು. ರೈಲು ರಾಣೆಬೆನ್ನೂರು ಸ್ಟೇಷನ್ ದಾಟಿ ಮುಂದೆ ಸಾಗುತ್ತಿತ್ತು. ಆ ಫ್ರೆಂಚ್ ದಾಡಿ ಅನಾಮಿಕ ವ್ಯಕ್ತಿ ಹೇಳಿದಂತೆ ರಾಣೆಬೆನ್ನೂರಿನಿಂದ ಇಪ್ಪತ್ತು ಕಿಲೋಮೀಟರ್ ವರೆಗೆ ರೈಲು ಇದ್ದಕ್ಕಿದ್ದಂತೆ ನಿಂತು ಹೋಯಿತು. ಟ್ರೈನ್ ನಿಲ್ಲುವಂತಹ ಯಾವ ನಿಲ್ದಾಣವೂ ಇರಲಿಲ್ಲ. ಯಾವ ಕ್ರಾಸಿಂಗ್ ಸಹ ಇರಲಿಲ್ಲ. ಆ ಅನಾಮಿಕ ವ್ಯಕ್ತಿ ಹೇಳಿದಂತೆಯೇ ರೈಲು ನಿಂತಿದ್ದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಆ ವ್ಯಕ್ತಿ ಹೇಳಿದಂತೆ ಎಲ್ಲರೂ ಇಳಿದರು. ರೋಹನ್ ನನ್ನು ಸಹ ಆ ವ್ಯಕ್ತಿ ಬಲವಂತವಾಗಿ ಇಳಿಸಿದನು. ಎಲ್ಲರೂ ಪ್ರಾಣ ಭಯದಿಂದ ಉಸಿರು ಬಿಗಿ ಹಿಡಿದುಕೊಂಡಿದ್ದು. ರೈಲ್ವೇ ಟ್ರ್ಯಾಕ್ ನ ಅನತಿ ದೂರದಲ್ಲಿ ಆಲದ ಮರದ ಕೆಳಗೆ ಬಿಳಿ ಬಣ್ಣದ ಕಾರು ನಿಂತಿತ್ತು. ಆ ವ್ಯಕ್ತಿ ಎಲ್ಲರನ್ನೂ ಕಾರು ನಿಂತ ಸ್ಥಳಕ್ಕೆ ಕರೆದುಕೊಂಡು ಹೋದನು....

ಕಾರಿನ ಬಳಿ ಗುಂಡಾಗಳಂತೆ ಕಾಣುವ ಇಬ್ಬರು ದಡಿಯ ವ್ಯಕ್ತಿಗಳಿದ್ದರು. ಕಾರಿನಲ್ಲಿ ಕೂರಿಸುವ ಮೊದಲು ಎಲ್ಲರ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಲಾಯಿತು. ಎಲ್ಲರನ್ನು ಹೊತ್ತ ಕಾರು ಯಾವುದೋ ಅಜ್ಞಾತ ಸ್ಥಳವೊಂದರ ಕಡೆಗೆ ಚಲಿಸಲಾರಂಬಿತು. ಒಳಗಿದ್ದ ತನಿಷ್ಕ, ರೋಹನ್ ಮತ್ತು ಇತರರಿಗಾಗಲಿ ಕಾರು ಎತ್ತ ಸಾಗುತ್ತಿದೆ ಎಂಬ ಅರಿವು ಸಹ ಬಾರದಂತಾಗಿತ್ತು. ಕಾರಿನಿಂದ ಇಳಿದ ಕೂಡಲೇ ಅವರ ಪಟ್ಟಿಯನ್ನು ತೆಗೆಯಲಾಯಿತು. ಅಜ್ಞಾತ ನಿರ್ಜನ ಸ್ಥಳವದು. ಒಂದು ನರಪಿಳ್ಳೆಯೂ ಸಹ ಕಣ್ಣಿಗೆ ಕಾಣಿಸಲಿಲ್ಲ. ಆ ಅನಾಮಿಕ ಫ್ರೆಂಚ್ ಗಡ್ಡಧಾರಿಯು ಜೋರಾಗಿ ಒಂದು ಸೀಟಿ ಹೊಡೆದನು. ತಕ್ಷಣ ನಮ್ಮ ಕಣ್ಣ ಮುಂದಿರುವ ದಿಣ್ಣೆಯ ಮೇಲಿಂದ ಇಬ್ಬರು ವ್ಯಕ್ತಿಗಳು ನಮ್ಮ ಕಡೆಗೆ ಧಾವಿಸಿ ಬಂದರು...

"ನೀವೆಲ್ಲಾ ಇಲ್ಲೇ ಇರಿ... ಈ ಇಬ್ಬರು ನಿಮ್ಮ ಕಾವಲಿಗೆ ಇರುತ್ತಾರೆ ನನ್ನ ಜೊತೆ ಇವರೊಬ್ಬರೆ ಬಂದರೆ ಸಾಕು..."

ಎಂದು ಆ ಅನಾಮಿಕ ಗಡ್ಡಧಾರಿ ವ್ಯಕ್ತಿಯು ಚಂದ್ರಶೇಖರ್ ರವರನ್ನು ಮುಂದೆ ಎಳೆಯುತ್ತಾ ಹೇಳಿದನು. ಆ ಬಿಳಿಯ ಕಾರಿನ ಬಳಿ ಕಾವಲಿಗಾಗಿ ಬಂದೂಕು ಹಿಡಿದು ಬಂದ ಆ ವ್ಯಕ್ತಿಗಳು ಚಂದ್ರಶೇಖರ್ ರವರನ್ನು ಮಾತ್ರ ಕಳುಹಿಸಿದರು. ಉಳಿದವರನ್ನು ಕಾರಿನಲ್ಲೇ ದೂಡಿದನು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿದರು. ಎಲ್ಲರೂ ಮತ್ತೆ ಅದೇ ಕಾರಲ್ಲಿ ಬಂಧಿಯಂತೆ ಕುಳಿತರು. ಗಡ್ಡಧಾರಿ ವ್ಯಕ್ತಿಯು ಚಂದ್ರ ಶೇಖರರನ್ನು ದಿಣ್ಣೆಯ ಮೇಲಕ್ಕೆ ಕರೆದು ಕೊಂಡು ಹೋದನು. ದಿಣ್ಣೆ ಹತ್ತಿದ ನಂತರ ವಿರುದ್ದ ದಿಕ್ಕಿನ ತಗ್ಗಿನಲ್ಲಿ ಇಳಿದರು. ಅವರು ಹೋಗುವುದನ್ನೇ ದಿಟ್ಟಿಸಿ ನೋಡುತ್ತಿದ್ದ ತನಿಷ್ಕಳಿಗೆ ತಂದೆ ದಿಣ್ಣೆಯನ್ನು ಇಳಿದು ಇನ್ನೊಂದು ದಿಕ್ಕಿನತ್ತ ಹೋದ ಕೂಡಲೇ ಕಾಣಿಸದಂತಾದರು. ಕಾರಿನಲ್ಲೇ ಕುಳಿತ್ತಿದ್ದ ಇವರಿಗೆ ದಿಣ್ಣೆಯ ಮತ್ತೊಂದು ಪಾರ್ಶ್ವದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ.

ಸುಮಾರು ಅರ್ದ ಗಂಟೆಯಾಗಿ ಹೋಯಿತು. ತಂದೆ ಇನ್ನು ಬರಲಿಲ್ಲ ಎಂಬ ಆತಂಕ ತನಿಷ್ಕಳ ಮುಖದಲ್ಲಿತ್ತು. ದಿಬ್ಬದಾಚೆ ಏನು ನಡೆಯುತ್ತಿದೆ. ಒಂದು ಚಿಕ್ಕ ಸಹಾಯ ಬೇಕೆಂದವನು ಇಷ್ಟು ಹೊತ್ತಾದರೂ ತಂದೆಯನ್ನು ಯಾಕೆ ಕಳುಹಿಸಲಿಲ್ಲ. ನನ್ನ ತಂದೆಗೂ ಈ ದುಷ್ಟರ ಗುಂಪಿಗೂ ಏನಾದರೂ ಸಂಬಂಧವಿದೆಯೇ..? ನನ್ನ ತಂದೆಗೆ ಏನಾದರೂ ತೊಂದರೆ ಕೊಟ್ಟರೆ..ಹೀಗೆ ತನಿಷ್ಕಳ ಮನಸು ಏನೇನೋ ಯೋಚಿಸತೊಡಗಿತು. ತಾಯಿ ಸರೋಜ ಆಗಲೇ ಆಯಾಸದಿಂದ ಬೆವರುತ್ತಾ ಕಾರಲ್ಲೇ ಮಲಗಿದ್ದಳು. ಇನ್ನು ರೋಹನ್ ಗೆ ಏನೂ ಮಾಡಲಾರದಂತಹ ಸ್ಥಿತಿ. ಇಬ್ಬರು ಗನ್ ಹಿಡಿದು ಕಾವಲು ನಿಂತಿರುವ ಆ ವ್ಯಕ್ತಿಯನ್ನು ಎದುರಿಸಲು ಸಾದ್ಯವೇ ಇರಲಿಲ್ಲ. ನೋಡಲು ಗಟ್ಟಿಮುಟ್ಟಾಗಿ ಪೈಲ್ವಾನ್ರಂತೆ ಕಾಣುತ್ತಿದ್ದರು.

ಮಧ್ಯಾಹ್ನದ ರಣ ರಣ ಬಿಸಿಲಿನ ತೀಕ್ಣ ಅಧಿಕವಾಗುತ್ತಲೇ ಇತ್ತು. ಇನ್ನು ಒಂದು ಗಂಟೆ ಕಾದದ್ದಾಯಿತು. ತಂದೆಯ ಯಾವ ಸುಳಿವೂ ಕಾಣಲಿಲ್ಲ. ತನಿಷ್ಕಳಿಗೆ ಆತಂಕ ಮತ್ತಷ್ಟು ಹೆಚ್ಚಾಗತೊಡಗಿತು. ದಿಬ್ಬದ ಆಚೆಯಿಂದ ಯಾರೋ ಕೂಗಿದಂತಾಯಿತು. ಕಾರಲ್ಲಿದ್ದ ತನಿಷ್ಕ ಒಮ್ಮೆ ಬೆದರಿದಳು. ತನ್ನ ತಂದೆಗೆ ಏನಾದರು ಮಾಡಿದರೆ...? ಮೊದಲೇ ಅದು ದುಷ್ಟರ ಗುಂಪು. ಬಂದೂಕನಂತಹ ಆಯುಧಗಳನ್ನು ಇಟ್ಟುಕೊಂಡಿರುವವರು. ಇಂತಹ ದುಷ್ಟರ ಗುಂಪಿಗೆ ನಾವು ಸಿಕ್ಕಿಹಾಕಿಕೊಂಡಿದ್ದಾದರೂ ಹೇಗೆ..? ಹೀಗೆ ತನಿಷ್ಕಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡಲಾರಂಬಿಸಿದವು....

"ಏಯ್...ಹೇಯ್.... ಟುರ್.ರ್.ರ್.... ಟುರ್.ರ್.ರ್...."

ಅನ್ನೊ ಶಬ್ಧ ಕೇಳಿಸಿತು. ಕುರಿ ಕಾಯುವ ಯುವಕನೊಬ್ಬ ಕುರಿಗಳನ್ನು ಮೇಯಿಸುತ್ತಾ ಕಾರು ನಿಂತಿರುವ ಸ್ಥಳದ  ಹತ್ತಿರಕ್ಕೆ ಬಂದನು...

ಆಶ್ಚರ್ಯದಿಂದ ತನ್ನ ಮುಗ್ಧತೆಯನ್ನು ಪ್ರದರ್ಶಿಸುತ್ತಾ ತನಿಷ್ಕ ಕುಳಿತ್ತಿದ್ದ ಕಾರಿನ ವಿಂಡೋ ಗ್ಲಾಸ್ ನ ಹತ್ತಿರಕ್ಕೆ ಬಂದು ಇಣುಕಿ ನೋಡಲಾರಂಬಿಸಿದನು. ಎತ್ತಲೋ ಇದ್ದ ಮನಸ್ಸು ವಿಂಡೋ ಕಡೆ ತಿರುಗಿದಾಗ ತನಿಷ್ಕ ಆ ಕುರಿಗಾಯಿ ಯುವಕನನ್ನು ಕಂಡು ಬೆದರಿದಳು. ವಿಂಡೋ ಗ್ಲಾಸ್ ನಿಂಡ ಕಂಡ ಅವನ ಝೂಮ್ ಮುಖ ದೆವ್ವದಂತೆ ಕಂಡಿತು. ಮೊದಲೇ ಭಯಗೊಂಡಿದ್ದ ತನಿಷ್ಕಳಿಗೆ ಆ ಕುರಿಗಾಯಿ ಯುವಕನ ಭಯಾನಕ ಮುಖ ಸಹಿಸಲಾಗಲಿಲ್ಲ. ಒಮ್ಮೆ ಭಯದಿಂದ ಕಿಟಾರನೆ ಕಿರುಚಿದಳು. ಏನೋ ಆಗೇ ಬಿಟ್ಟಿತೆಂದು ಭಯಗೊಂಡ ಬಂದೂಕು ದಾರಿಗಳು ಕಾರಿನತ್ತ ಬಂದರು. ಆ ಕುರಿಗಾಯಿ ಯುವಕನ ಕೆನ್ನೆಗೊಂದು ಬಾರಿಸಿದನು...

"ಏಯ್... ಇಲ್ಲೇನೋ ಕೆಲಸ ನಿನಗೆ. ಕುರಿಗಳನ್ನು ಹೊಡೆದುಕೊಂಡು ಮುಂದಕ್ಕೆ ಹೋಗ್ತಾ ಇರಬೇಕು. ಇಲ್ಲಾಂದ್ರೆ, ಇದರಿಂದಲೇ ಸುಟ್ಟು ಹಾಕ್ತೀನಿ.."

ಕಾವಲಿನ ವ್ಯಕ್ತಿಯು ಬಂದೂಕಿನ ನಳಿಕೆಯನ್ನು ನೇರವಾಗಿ ಆ ಕುರಿ ಕಾಯುವ ಯುವಕನ ಹಣೆಗೆ ಗುರಿಯಿಟ್ಟವು. ಆದರೆ ಆ ಯುವಕ ಸ್ವಲ್ಪವೂ ಹೆದರಲಿಲ್ಲ. ಬಂದೂಕಿನ ಮೇಲೆ ನಿಧಾನವಾಗಿ ಕೈ ಸವರುತ್ತ ಕಣ್ಣುಗಳನ್ನು ಆಚೆ ಈಚೆಗೆ ತಿರುಗುತ್ತಾ ಮುಗ್ಧತೆಯನ್ನು ಪ್ರದರ್ಶಿಸಿದನು. ಅವನ ಅಸಹಜ ನಡವಳಿಕೆಯನ್ನು ಕಂಡ ಆ ಬಂದೂಕುದಾರಿ ವ್ಯಕ್ತಿಗಳಿಗೆ ಆ ಕುರಿಗಾಯಿ ಯುವಕನು ಹುಚ್ಚನೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಕುರಿಕಾಯುವ ಯುವಕ ಹುಚ್ಚು ಹುಚ್ಚುತನದಿಂದಲೇ ಕಾರನ್ನು ನೋಡುತ್ತಾ ಒಮ್ಮೆ ಬಂದೂಕನ್ನು ನೋಡುತ್ತಾ ಮುಗ್ಧತೆಯನ್ನು ಪ್ರದರ್ಶಿಸಿದನು. ಕೂಡಲೇ ಆ ವ್ಯಕ್ತಿಯಿಂದ ನೋಡು ನೋಡುತ್ತಿದ್ದಂತೆ ಬಂದೂಕನ್ನು ಕಿತ್ತುಕೊಂಡನು. ಆ ಕಾವಲು ವ್ಯಕ್ತಿಯು ಬಂದೂಕು ಕಿತ್ತುಕೊಂಡಿದ್ದರಿಂದ ಬೆದರಿದನು. ಎಲ್ಲಿ ಆ ಹುಚ್ಚು ಯುವಕ ಗುಂಡನ್ನು ಹಾರಿಸುವನೋ ಎಂಬ ಆತಂಕನಿಂದ ನಿಧಾನವಾಗಿ ಆ ಹುಚ್ಚನ ಬಳಿ ಹೆಜ್ಜೆ ಹಾಕಿದನು. ಆ ಹುಚ್ಚ ಇನ್ನೇನು ಬಂದೂಕಿನ ಕುದುರೆಯನ್ನು ಒತ್ತಬೇಕು ಎನ್ನುವಷ್ಟರಲ್ಲಿ ಆ ವ್ಯಕ್ತಿಯು ಮಿಂಚಿನಂತೆ ಎಗರಿ ಬಂದೂಕನ್ನು ಕಿತ್ತುಕೊಂಡನು. ಬಂದೂಕಿನಿಂದ ಗುಂಡು ಹಾರದಿದ್ದಕ್ಕೆ ಒಮ್ಮೆ ನಿಟ್ಟುಸಿರು ಬಿಟ್ಟನು. ಹುಚ್ಚನ ಈ ಹುಚ್ಚಾಟಕ್ಕೆ ಒಮ್ಮೆ ಕೋಪವೂ ಬಂದಿತು. ಯಾರಿಗಾದರು ಗುಂಡು ತಗುಲಿದ್ದರೆ ಏನು ಗತಿ..!! ಕೂಡಲೇ ಆ ಹುಚ್ಚನ ಕೆನ್ನೆಯ ಮೇಲೆ ಸರಿಯಾಗಿ ಒಂದು ಏಟು ಬಾರಿಸಿದನು. ಹೊಡೆದ ರಭಸಕ್ಕೆ ಕುರಿಕಾಯುವ ಆ ಹುಚ್ಚ ಸುಂಟರಗಾಳಿಯಂತೆ ತಿರುಗಿ ತಿರುಗಿ ನೆಲಹಿಡಿದು ಬಿದ್ದನು. ಅಷ್ಟರಲ್ಲಿ ಮತ್ತೊಂದಿಷ್ಟು ಕುರಿಗಳನ್ನು ಮೇಯಿಸಿಕೊಂಡು ಹಿಂದೆನೇ ಬಂದ ಆ ಹುಚ್ಚನ ಅಕ್ಕ ತಮ್ಮ ಕೆಳಗೆ ಬಿದ್ದಿರುವುದನ್ನು ನೋಡಿ ಸಹಿಸಿಕೊಳ್ಳಲಾಗಲಿಲ್ಲ....

"ಬೇವರ್ಸಿಗಳಿರ... ನನ್ನ ತಮ್ಮನನ್ನು ಹೊಡಿತೀರಾ..? ಬುದ್ಧಿಹೀನ ಹುಡುಗ ಅಂತ ಗೊತ್ತಿದ್ರೂ ನಿಮ್ಮ ಪೌರುಷ ಅವನ ಮೇಲೆ ತೋರಿಸ್ತೀರಲ್ಲ ನಾಚಿಕೆಯಾಗಲ್ವ ನಿಮಗೆ..."

ಎಂದು ಹೇಳುತ್ತಾ ಕೆಳಗೆ ಬಿದ್ದ ಬುದ್ದಿಮಾಂದ್ಯ ತಮ್ಮನನ್ನು ಮೇಲೆತ್ತಲು ಪ್ರಯತ್ನಿಸಿದಳು. ಹಾಗೆ ಮೇಲೆತ್ತುವ ಭರದಲ್ಲಿ ಆ ಕುರಿಕಾಯುವ ಯುವತಿಯ ಎದೆಯ ಭಾಗ ಪಾರದರ್ಶಕವಾಗಿ ಗೋಚರಿಸಿತು. ಮೊದಲೇ ಕಟುಕರಂತೆ ಕಾಣುತ್ತಿದ್ದ ಕಾವಲುಗಾರ ವ್ಯಕ್ತಿಯು ಅವಳನ್ನು ನೋಡಿ ಜೊಲ್ಲು ಸುರಿಸಲಾರಂಬಿಸಿದನು. ಇಷ್ಟೆಲ್ಲಾ ದೃಶ್ಯವನ್ನು ಕಾರಿನಲ್ಲೇ ಕುಳಿತು ನೋಡುತ್ತಿದ್ದ ತನಿಷ್ಕಳಿಗೆ ಆ ವ್ಯಕ್ತಿಯ ನಡವಳಿಕೆ ಅಸಹ್ಯವೆನಿಸಿತು.
ಆ ಬಂದೂದಾರಿ ವ್ಯಕ್ತಿ ಅಲ್ಲಿಗೆ ಸುಮ್ಮನೆ ಬಿಡಲಿಲ್ಲ.

"ಒಂದು ನಿಮಿಷ ಇರೋ... ಈಗ ಬಂದೆ, ಕಾರಿನ ಕಡೆ ಜಾಗೃತೆಯಿಂದ ಇರು.."

ಎಂದು ತನ್ನ ಇನ್ನೊಬ್ಬ ಸಂಗಡಿಗನಿಗೆ ಹೇಳಿ ಆ ಕುರಿ ಕಾಯುವ ಯುವತಿಯ ಹಿಂದೆ, ಅವಳು ಹೋದ ದಾರಿಯಲ್ಲೇ ಹಿಂಬಾಲಿಸಿಕೊಂಡು ಹೋದನು.
ಅವನು ಹೋಗಿ ಐದು ನಿಮಿಷವೂ ಆಗಿರಲಿಲ್ಲ. ತನಿಷ್ಕ ರೋಹನ್ ನ ಕಿವಿಯಲ್ಲಿ ಏನೋ ಹೇಳಿ ಕಾರಿನಿಂದ ಇಳಿದಳು.

"ಸರ್.. ನೇಚರ್ ಕಾಲ್. ಎರಡು ನಿಮಿಷ, ಅಲ್ಲಿ ಮುಂದಿರುವ ಪೊದೆಯ ಕಡೆ ಹೋಗಿ ಬರುತ್ತೇನೆ..."

ತನಿಷ್ಕ ಇನ್ನೊಬ್ಬ ಬಂದೂಕುದಾರಿ ವ್ಯಕ್ತಿಯೊಬ್ಬನಿಗೆ ಕೇಳಿದಳು.

"ಬೇಗ ಬಂದು ಬಿಡಬೇಕು, ಏನಾದ್ರೂ ಆಟ ಆಡಿದ್ರೆ ಗೊತ್ತಲ್ಲ... ನಿನ್ನ ತಂದೆ ತಾಯಿ ಇನ್ನೂ ನನ್ನ ಕಾವಲಿನಲ್ಲಿದ್ದಾರೆ ಅನ್ನೋದನ್ನ ಮರೆಯಬೇಡ, ಏನಾದರೂ ಹೆಚ್ಚು ಕಡಿಮೆಯಾದರೆ ಇವರನ್ನು ಸುಟ್ಟು ಹಾಕುತ್ತೇನೆ.. ನೆನಪಿರಲಿ"

ಇನ್ನೊಬ್ಬ ಬಂದೂಕುದಾರಿ ವ್ಯಕ್ತಿ ತನಿಷ್ಕಳನ್ನು ಹೆದರಿಸಿದನು.

ತನಿಷ್ಕ ಆಯಿತು ಎನ್ನುತ್ತಾ ಆ ವ್ಯಕ್ತಿ ಮರೆಯಾಗುವವರೆಗೂ ದೂರ ಹೋದಳು. ಕುರಿಕಾಯುವ ಯುವತಿ ಹೋದ ದಾರಿಯನ್ನು ಹಿಡಿದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ. ಯಾರೋ ಕಿರುಚಿದಂತೆ ಕೇಳಿಸಿತು. ಶಬ್ಧ ಬಂದ ಕಡೆ ಹೋದಳು. ಬಂದೂಕು ದಾರಿ ಕಾವಲುಗಾರ ವ್ಯಕ್ತಿಯು ಕುರಿಕಾಯುವ ಯುವತಿಯನ್ನು ಬಲವಂತಮಾಡುತ್ತಾ ತನ್ನ ತೆಕ್ಕೆಗೆ ಬೀಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅತ್ತ ಆ ಯುವತಿಯ ಬುದ್ಧಿಮಾಂದ್ಯ ತಮ್ಮ ಏನೂ ನಡೆಯುತ್ತಿಲ್ಲವೆಂಬಂತೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ. ಹೇಗಾದರೂ ಮಾಡಿ ಆ ಯುವತಿಯನ್ನು ಕಾಪಾಡಬೇಕು ಇಲ್ಲದಿದ್ದರೆ ಆ ದುಷ್ಟವ್ಯಕ್ತಿಗಳು ಎಂತಹ ಕೆಟ್ಟಕೆಲಸ ಮಾಡಲೂ ಹೇಸುವುದಿಲ್ಲ ಎಂದು ಯೋಚಿಸಿದಳು. ದಿಣ್ಣೆಯ ಮೇಲೆ ನಿಂತು ನೋಡಿದಳು. ಆ ದುಷ್ಟ ವ್ಯಕ್ತಿ ಕುರಿಕಾಯುವ ಯುವತಿಯನ್ನು ಎಳೆದಾಡುತ್ತಿದ್ದನು. ಮೋಸದ ಮಾಯಜಾಲದಲ್ಲಿ ಸಿಲುಕಿದ್ದ ತನಿಷ್ಕಳಿಗೆ ಅಲ್ಲಿಂದ ಹೇಗೆ ಹೊರಬರಬೇಕೆಂದು ಯೋಚಿಸುತ್ತಿದ್ದಳು. ಈ ದುಷ್ಟರನ್ನು ಇಲ್ಲೇ ಮಟ್ಟಹಾಕುವುದು ಸರಿಯೆಂದು ಅಲ್ಲೇ ಇದ್ದ ದೊಡ್ಡ ಕಲ್ಲನ್ನು ತೆಗೆದು ಕೊಂಡು ಆ ವ್ಯಕ್ತಿಯ ತಲೆಯ ಮೇಲೆ ಎತ್ತಿ ಹಾಕಿದಳು. ಕೂಡಲೇ ರಕ್ತ ಚಿಲ್ ಎಂದು ಹೊರ ಚಿಮ್ಮಿತು. ಕೂಡಲೇ ಅಲ್ಲಿಂದ ಕುರಿಕಾಯುವ ಯುವತಿಯನ್ನು ಅಲ್ಲಿಂದ ಕಳುಹಿಸಿ. ಕೆಳಗೆ ಬಿದ್ದಿದ್ದ ಆ ದುಷ್ಟ ವ್ಯಕ್ತಿಯ ಬಂದೂಕನ್ನು ತೆಗೆದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಕಾರಿನ ಬಳಿ ಬಂದಳು. ಹಿಂದೆ ತಿರುಗಿ ಸಿಗರೇಟ್ ಹಚ್ಚುತ್ತಿದ್ದ ವ್ಯಕ್ತಿಯಮೇಲೆ ಎರಗಿ ಬಂದೂಕಿನ ಹಿಂಬಾಗವನ್ನು ಬಳಸಿಕೊಂಡು ಆತನ ತಲೆಯ ಮೇಲೆ ಬಲವಾಗಿ ಹೊಡೆದಳು. ರೋಹನ್ ತಕ್ಷಣ ಕಾರಿನಿಂದ ಇಳಿದು ಆ ವ್ಯಕ್ತಿಯನ್ನು ಇನ್ನೊಂದೆರಡೇಟು ಹೊಡೆದು ಆತನ ದೇಹವನ್ನು ಎತ್ತಿಕೊಂಡು ಬಂದನು. ಮೊದಲೇ ಕಲ್ಲಿನ ಏಟು ತಿಂದು ಬಿದ್ದಿದ್ದ ವ್ಯಕ್ತಿಯ ಜೊತೆ ಈ ವ್ಯಕ್ತಿಯನ್ನು ಸೇರಿಸಿ ಹಗ್ಗದಿಂದ ಬಲವಾಗಿ ಕಟ್ಟಿ ಅಲ್ಲೇ ಗುಂಡಿಯಲ್ಲಿ ಹಾಕಿ ಅವರ ಮೇಲೆ ಹುಲ್ಲನ್ನು ಹೊದಿಸಿ  ಬಂದರು. ಈಗ ಹೇಗಾದರೂ ಮಾಡಿ ತಂದೆ ಚಂದ್ರಶೇಖರರನ್ನು ಕಾಪಾಡುವುದು ಅವರ ಗುರಿಯಾಗಿತ್ತು. ನಿಧಾನವಾಗಿ ತಂದೆ ಇರುವ ಇನ್ನೊಂದು ದಿಬ್ಬದ ಕಡೆಗೆ ಕಳ್ಳ ಬೆಕ್ಕಿನಂತೆ ಹೆಜ್ಜೆ ಹಾಕಿದರು....

      (ಮುಂದುವರೆಯುವುದು)

No comments:

Post a Comment