Friday 8 September 2017

ಅಂತ... ಆತಂಕ (ಭಾಗ-3)

ಅಂತ... ಆತಂಕ (ಭಾಗ-3)

ಹೆಜ್ಜೆ ಹೆಜ್ಜೆಗೂ ತನಿಷ್ಕಳಿಗೆ ಆತಂಕ ಆತಂಕ ಉಂಟಾಗುತ್ತಿತ್ತು. ಎಲ್ಲಿ ತನ್ನ ತಂದೆಗೆ ಆ ದುಷ್ಟರು ಏನಾದರೂ ಮಾಡಿದರೋ ಎಂಬ ಅನುಮಾನದಿಂದಲೇ ಆ ದುಷ್ಟರು ತನ್ನ ತಂದೆಯನ್ನು ಕರೆದುಕೊಂಡು ಹೋದ ದಿಕ್ಕಿನ ಕಡೆಗೆ ರೋಹನ್ ಜೊತೆ ಬಂದೂಕು ಹಿಡಿದು ನಿಧಾನವಾಗಿ ಹೆಜ್ಜೆ ಹಾಕಿದರು. ಸ್ವಲ್ಪ ಎತ್ತರದ ದಿಬ್ಬವನ್ನು ಏರಿದರು. ಯಾರಿಗೂ ಕಾಣದ ಆ ತಗ್ಗು ಪ್ರದೇಶದಲ್ಲಿ ಒಂದು ಕಾರು ಮತ್ತು ಒಂದು ಮಿನಿ ಲಾರಿ ನಿಂತಿತ್ತು. ಕಾರಿನ ಡಿಕ್ಕಿಯ ತುಂಬಾ ಸಾವಿರ, ಐನೂರರ ನೋಟುಗಳೇ ನೋಟುಗಳು. ಮತ್ತೊಂದು ಬದಿಯಲ್ಲಿ ಒಂದು ಟೆಂಪೋ ಲಾರಿ ನಿಂತಿತ್ತು. ಆ ಲಾರಿಯನ್ನು  ಜಾಲರಿಯಿಂದ ಭದ್ರಗೊಳಿಸಲಾಗಿತ್ತು. ಬೀಗ ಜಡಿದಿದ್ದ ಆ ಟೆಂಪೋ ಲಾರಿಯ ಕೆಳಗೆ ತನಿಷ್ಕಳ ತಂದೆಯನ್ನು ಕೂರಿಸಿದ್ದರು. ಅವರ ಬಾಯಿಂದ ರಕ್ತ ಸುರಿಯುತ್ತಿತ್ತು. ನಾಲ್ಕೈದು  ಮಧ್ಯವಯಸ್ಸಿನ ಗಂಡಸರು ಆಯುಧ ಹಿಡಿದು ಸುತ್ತಲೂ ತಿರುಗುತ್ತಿದ್ದರು. ಒಬ್ಬನ ಕೈಯಲ್ಲಿ ಲಾಂಗ್ ಇತ್ತು ಮತ್ತೊಬ್ಬನ ಕೈಯಲ್ಲಿ ರಿವಾಲ್ವರ್. ಇನ್ನೊಬ್ಬನ ಸೊಂಟದಲ್ಲಿ ಚಾಕು ಹೀಗೆ ಪ್ರತಿಯೊಬ್ಬರು ಯಾವುದೋ ಕ್ರೈಂ ಕೆಲಸ ಮಾಡಲು ಸ್ಕೆಚ್ ಹಾಕಿದವರಂತೆ ಕಾಣುತ್ತಿತ್ತು. ಈ ದೃಶ್ಯವನ್ನು ಕಂಡ ತನಿಷ್ಕ ಬೆದರಿದಳು. ಎಲ್ಲಿ ತನ್ನ ತಂದೆಗೆ ಏನಾದರೂ ಮಾಡಿ ಬಿಡುವರೋ ಎಂಬ ಆತಂಕ ಮುಖದಲ್ಲಿ ಮೂಡಿತು. ರೋಹನ್ ಅವಳನ್ನು ಸಮಾಧಾನ ಪಡಿಸಿ, ಅಲ್ಲೇ ಪೊದೆಯೊಂದರಲ್ಲಿ ಬಚ್ಚಿಟ್ಟುಕೊಂಡರು....

ಅವರಲ್ಲಿರುವವರಲ್ಲಿ ಟ್ರೈನ್ ನಲ್ಲಿ ಸಿಕ್ಕ ಫ್ರೆಂಚ್ ದಾಡಿಯ ವ್ಯಕ್ತಿ ಸ್ವಲ್ಪ ಕ್ರೂರಿಯಂತೆ ಕಾಣುತ್ತಿದ್ದನು.ಆತ ಚಂದ್ರ ಶೇಖರನ್ನು ಮತ್ತೆ ಮತ್ತೆ ಹೊಡೆದು ಯಾವುದೋ ರಹಸ್ಯವೊಂದನ್ನು ಅವರ ಬಾಯಿಂದ ಹೊರ ಬರಿಸಲು ಪ್ರಯತ್ನಿಸುತ್ತಿದ್ದನು..

"ನೋಡು ಒಳ್ಳೆಯ ಮಾತಲ್ಲೇ ಹೇಳುತ್ತಿದ್ದೇನೆ, ಸುಮ್ಮನೆ ಪಾಸ್ ವರ್ಡ್ ನ್ನು ಹೇಳಿ ಆ ಲಾರಿಯ ಬೀಗವನ್ನು ಓಪನ್ ಮಾಡೋ... ಇಲ್ಲದಿದ್ದರೆ ಸುಮ್ಮನೆ ತೊಂದರೆ ಅನುಭವಿಸಬೇಕಾಗುತ್ತದೆ. ಹೇಗಿದ್ದರೂ ನಿನ್ನ ಫ್ಯಾಮಿಲಿ ಇನ್ನೂ ಕಾರಲ್ಲೇ ಕುಳಿತಿದೆ. ನಾವು ಹೇಳಿದಂತೆ ನೀನು ಪಾಸ್ ವರ್ಡ್ ಹಾಕಿ ಲಾರಿಯ ಬೀಗ ತೆಗೆಯದಿದ್ದರೆ. ನಿನ್ನ ಕುಟುಂಬವನ್ನು ಸಾಯಿಸಿ ಬಿಡಬೇಕಾಗುತ್ತದೆ. ಬೇಗ ತೆಗೆಯೋ ..."

ಎನ್ನುತ್ತಾ ಆ ವ್ಯಕ್ತಿ ಇನ್ನೊಂದು ಏಟನ್ನು ಹೊಡೆದನು...

"ನನಗೆ ಗೊತ್ತಿಲ್ಲ... ಗೊತ್ತಿಲ್ಲ ಅಂತ ಅರ್ದ ಗಂಟೆಯಿಂದಲೂ ಹೇಳುತ್ತಿದ್ದೇನೆ... ರಿಸರ್ವ ಬ್ಯಾಂಕಿನವರು ಮೊದಲು ಹಣವನ್ನು ಕಳುಹಿಸುತ್ತಾರೆ ನಂತರ ಇ-ಮೇಲ್ ಮೂಲಕವೇ ಹಣವಿರುವ ಆ ಖಜಾನೆಯನ್ನು ಓಪನ್ ಮಾಡಲು ಪಾಸ್ವರ್ಡ್ ಕಳುಹಿಸುತ್ತಾರೆ. ನಿನ್ನೆ ಶನಿವಾರ ಇವತ್ತು ಭಾನುವಾರ ರಜಾದಿನವಾದ್ದರಿಂದ ನಾಳೆ ಸೋಮವಾರ ಕಳುಹಿಸುತ್ತಾರೆ. ಅಲ್ಲಿಯವರೆಗೆ ಯಾವ ಬ್ರಹ್ಮ ಬಂದರೂ ಈ ಟೆಂಪೋ ಲಾರಿಯಲ್ಲಿ ಫಿಕ್ಸ್ ಆಗಿರುವ ಖಜಾನೆಯನ್ನು ಯಾರೂ ಓಪನ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೀವೇನಾದರೂ ಆಧುನಿಕ ಉಪಕರಣಗಳಿಂದ ಕೊರೆದು  ಕಬ್ಬಿಣದ ಈ ಖಜಾನೆಯನ್ನು ತೆಗೆಯಲು ಪ್ರಯತ್ನಿಸಿದರೆ. ಈ ರೀತಿ ನೀವು ವಾಮ ಮಾರ್ಗದಿಂದ ಖಜಾನೆಯನ್ನು  ತೆರೆದರಿ ಎನ್ನಿ, ಖಜಾನೆಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾದ್ದರಿಂದ ತಕ್ಷಣ ರೆಡ್ ಸಿಗ್ನಲ್ ರಿಜರ್ವ್ ಬ್ಯಾಂಕಿನ ಸಿಗ್ನಲ್ ಗೆ ತಲುಪುತ್ತದೆ. ರೆಡ್ ದೀಪ ಹತ್ತಿದರೆ ಖಜಾನೆ ತೊಂದರೆಯಲ್ಲಿ ಸಿಲುಕಿದ್ ಎಂದಾರ್ಥ. ಈ ತಂತ್ರಜ್ಞಾನದ  ನೆರವಿನಿಂದ ತಕ್ಷಣ ನೀವಿರುವ ಸ್ಥಳದ ಮಾಹಿತಿ ರಿಸರ್ವ ಬ್ಯಾಂಕಿನ ಶಾಖೆಗೆ ತಲುಪುತ್ತದೆ. ಅಲ್ಲಿಂದ ಹಣ ಹೊತ್ತ ಟೆಂಪೋ ಲಾರಿ ಎಲ್ಲಿದೆ ಎಂದು ಭದ್ರತಾ ಸಿಬ್ಬಂದಿಗೆ ತಿಳಿಯುತ್ತದೆ. ಲಾರಿ ನಿಂತಿರುವ ಸ್ಥಳದ ಹತ್ತಿರವಿರುವ  ಪೋಲೀಸ್ ಠಾಣೆಗಳಿಗೆ ಶೀಘ್ರವೇ ಸಂದೇಶವೂ ಸಹ ರವಾನೆಯಾಗುತ್ತದೆ. ದಯವಿಟ್ಟು ನನ್ನ ಮಾತು ಕೇಳಿ, ನೀವು ಹಣ ಬದಲಾವಣೆ ಮಾಡಿಕೊಳ್ಳಬೇಕೆಂಬ ಮಾರ್ಗ ಸರಿಯಾಗಿಲ್ಲ. ಈ ಲಾರಿಯನ್ನು ಬೆಂಗಳೂರಿನ ಶಾಖೆ ಕಳುಹಿಸಿ ಬಿಡಿ..."

ಚಂದ್ರ ಶೇಖರರು ಆ ಕ್ರೂರ ದುಷ್ಟರಿಗೆ ತಿಳಿಸಲು ಪ್ರಯತ್ನಿಸಿದರು...

ಆ ಗುಂಪಿಗೆ ನಾಯಕನಂತೆ ಕಾಣುತ್ತಿದ್ದ ವ್ಯಕ್ತಿ ಮುಂದೆ ಬಂದು ಮತ್ತೆ ಕೋಪದಿಂದ ಚಂದ್ರ ಶೇಖರ್ ಗೆ ಮತ್ತೆ ಹೊಡೆದನು. ಹೊಡೆದ ರಭಸಕ್ಕೆ ಮತ್ತೆ ಚಂದ್ರಶೇಖರ್ ಕೆಳಗೆ ಬಿದ್ದರು.

"ಏನ್ಲಾ ಇದು, ಈ ಮನುಷ್ಯ ಸುಮಾರು ಒಂದು ಗಂಟೆಯಿಂದ ಹೀಗೆ ಸತಾಯಿಸುತ್ತಾ ಇದ್ದಾನೆ...ಇವನು ಹೇಳಿದಂತೆ ಸೋಮವಾರದ ವರೆಗೆ ಕಾದರೆ ನಮಗೆ ನಿಜಕ್ಕೂ ಪಂಗನಾಮ ಗ್ಯಾರಂಟಿ, ಹೋಗ್ಲಾ ಮಂಜ ಆ ಕಾರಲ್ಲಿ ಕುಳಿತಿರುವ ಹುಡುಗಿಯನ್ನ ಕರೆದುಕೊಂಡು ಬಾರ್ಲಾ ಇವನಿಗೆ ಹೆಂಗೆ ಬುದ್ದಿ ಕಲಿಸಬೇಕು ಅಂತ ನನಗೂ ಗೊತ್ತು.."

ಹಾಗೆಂದ ಕೂಡಲೇ ಫ್ರೆಂಚ್ ದಾಡಿ ಬಿಟ್ಟಿರುವ ರೈಲಿನಲ್ಲಿ ಸಿಕ್ಕ ವ್ಯಕ್ತಿ ಮಂಜನು ರಿವಾಲ್ವರ್ ನ್ನು ಹಿಡಿದು ಕಾರಿನ ಕಡೆನೇ ಧಾವಿಸಿದನು. ಪೊದೆಯ ಹಿಂದೆ ಅವಿತುಕೊಂಡು ಈ ಎಲ್ಲಾ ಸನ್ನಿವೇಶವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ತನಿಷ್ಕ ಮೊಬೈಲ್ ನ್ನು ಹಿಂತೆಗೆದುಕೊಂಡಳು. ಆ ಮಂಜ ಎಲ್ಲಿ ಏನಾದರೂ ಅನಾಹುತ ಮಾಡುವನೋ ಎಂದು ತನಿಷ್ಕ ಒಮ್ಮೆ ಹೆದರಿದಳು. ಮಂಜ ದಿಬ್ಬವನ್ನೇರಿ ಕಾರು ನಿಂತಿರುವ ಸ್ಥಳದ ಕಡೆಗೆ ಬರುತ್ತಿದ್ದನು. ಇನ್ನೇನು ದಿಬ್ಬ ಇಳಿದು ಕಾರಿನ ಹತ್ತಿರ ಧಾವಿಸಬೇಕು ಎನ್ನುವಷ್ಟರಲ್ಲಿ  ಹಿಂದಿನಿಂದ ಬಂದ ರೋಹನ್ ತಕ್ಷಣ ಮಂಜನ ಮೇಲೆ ಎರಗಿದನು. ಆವನ ತಲೆಗೆ ಬಲವಾದ ಏಟನ್ನು ಹೊಡೆದು, ತಕ್ಷಣ ಅವನ ಬಾಯನ್ನು ಮುಚ್ಚಿ ಹಿಡಿದನು. ಆತ ಸದ್ಧು ಮಾಡದಂತೆ ನೋಡಿಕೊಂಡನು...
ಸುತ್ತಲೂ ನೀರವ ಮೌನ ಆವರಿಸಿತ್ತು. ದುಷ್ಟರಿರುವ ಆ ಪ್ರದೇಶದವೆಲ್ಲಾ ಭಯದ ವಾತಾವರಣವೂ ಆವರಿಸಿತು.  ಇಷ್ಟೆಲ್ಲಾ ಘಟನೆಯನ್ನು ನೋಡುತ್ತಿದ್ದ ತನಿಷ್ಕಳ ಎದೆ ಬಡಿತವೂ ಹೆಚ್ಚಾಗಲಾರಂಭಿಸಿತು. ತಾವು ದುಷ್ಟರ ಜಾಲದಲ್ಲಿ ಸಿಲುಕಿದ್ದೇವೆ ಹೇಗಾದರೂ ಆ ಜಾಲದಿಂದ ತಪ್ಪಿಸಿಕೊಳ್ಳಲು ಅವರು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದರು. ರೋಹನ್ ಮಾತ್ರ ತನಿಷ್ಕಳಿಗೆ ಧೈರ್ಯ ತುಂಬುತ್ತಲೇ ಇದ್ದನು. ರೋಹನ್ ಸ್ವಲ್ಪವೂ ಹೆದರದೆ ಮಂಜನ ತಲೆಗೆ ಬಂದೂಕಿನ ಗುರಿಯಿಟ್ಟು ನಿಂತನು. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಮಂಜನನ್ನೇ ದಾಳವಾಗಿ ಉಪಯೋಗಿಸಿಕೊಂಡನು. ಅವನಿಂದ ರಿವಾಲ್ವರನ್ನು ಕಸಿದುಕೊಂಡು ತನ್ನ ಸೊಂಟದೊಳಗೆ ಸಿಕ್ಕಿಸಿಕೊಂಡನು. ಹಣೆಗೆ ಬಂದೂಕಿನ ಗುರಿಯನ್ನಿಟ್ಟುಕೊಂಡೇ ಮಂಜನನ್ನು ಧೈರ್ಯದಿಂದ ಎಳೆದುಕೊಂಡು ದಿಬ್ಬವನ್ನೇರಿ ಆ ದುಷ್ಟರಿರುವ ಗುಂಪಿನ  ಎದುರು ಸ್ವಲ್ಪ ಅಂತರದಲ್ಲಿ ನಿಂತುಕೊಂಡನು ...

"ನೋಡಿ... ನಿಮ್ಮ ಬಳಿ ಇರುವ ಚಂದ್ರ ಶೇಖರನ್ನು ಬಿಟ್ಟು ಬಿಡಿ ಇಲ್ಲದಿದ್ದರೆ. ಈ ವ್ಯಕ್ತಿಯನ್ನು ಮುಗಿಸಿ ಬಿಡಬೇಕಾಗುತ್ತದೆ"

ರೋಹನ್ ಹೀಗೆ ಹೇಳಿದ ಕೂಡಲೇ ಎಲ್ಲರೂ ತಮ್ಮ ತಮ್ಮ ರಿವಾಲ್ವರನ್ನು ಎತ್ತಿಕೊಂಡು ರೋಹನ್ ಕಡೆಗೆ ಗುರಿಯಿಟ್ಟರು. ಅದರಲ್ಲಿ ಒಬ್ಬ ಚಂದ್ರ ಶೇಖರ್ ರವರ ಹಣೆಗೆ ಗುರಿಯಿಟ್ಟನು. ಆಗ ಗುಂಪಿನ ನಾಯಕನು ವಕ್ರವಾಗಿ ನಗುತ್ತಾ..

"ನೋಡಿ ಮಂಜನನ್ನು ಬಿಟ್ಟು ಬಿಡಿ. ಇಲ್ಲದಿದ್ದರೆ ಈ ನಿಮ್ಮ ಪ್ರೀತಿಯ ಬ್ಯಾಂಕ್ ಮ್ಯಾನೇಜರ್ ಚಂದ್ರ ಶೇಖರರ ಪ್ರಾಣ ತೆಗೆಯಬೇಕಾಗುತ್ತದೆ. ನೀವು ಏನೂ ಮಾಡಲು ಸಾಧ್ಯವಿಲ್ಲ. ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಎಲ್ಲರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ... ಹುಷಾರ್. ಮಂಜನನ್ನು ಬಿಟ್ಟು ಬಿಡಿ.."

ಆ ದುಷ್ಟ ಹಾಗೆ ಹೇಳುವಾಗ ತನಿಷ್ಕ ತನ್ನ ಮೊಬೈಲ್ ನಿಂದ ಎಲ್ಲವನ್ನೂ ಚಿತ್ರೀಕರಿಸುತ್ತಿದ್ದಳು.

"ನೋಡಿ ನೀವು ನನ್ನ ತಂದೆಗೆ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಈ ಎಲ್ಲಾ ಚಟುವಟಿಕೆಗಳನ್ನು ನಾನು ಈಗಾಗಲೇ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದೇನೆ. ಮನಸ್ಸು ಮಾಡಿದರೆ ಈಗಲೇ ಎಲ್ಲವನ್ನು ಸೋಶಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡಿಬಿಡುತ್ತೇನೆ. ಜೊತೆಗೆ ನಿಮ್ಮ ಪ್ರೀತಿಯ ವ್ಯಕ್ತಿ ಮಂಜನ ಪ್ರಾಣವೂ ನಮ್ಮ ಕೈಯಲ್ಲಿದೆ. ಹೇಗಾದರೂ ನಾವು ನಿಮ್ಮ ಈ ದುಷ್ಟಜಾಲದಲ್ಲಿ ಸಿಲುಕಿಯಾಗಿದೆ. ನಿಮ್ಮ ಮಾತು ಕೇಳಿದರೆ ನಮ್ಮ ಪ್ರಾಣ ಉಳಿಯುತ್ತದೆ ಎಂಬ ನಂಬಿಕೆಯೇನೂ ನಮಗಿಲ್ಲ. ಸುಮ್ಮನೆ ನಮ್ಮ ಮಾತು ಕೇಳು. ನನ್ನ ತಂದೆಯನ್ನು ಬಿಟ್ಟು ಬಿಡು..."

ತನಿಷ್ಕ ಧೈರ್ಯವಾಗಿಯೇ ಹೇಳಿದಳು.

ಹಾಗೆಂದ ಕೂಡಲೇ ತನಿಷ್ಕಳ ಮಾತಿಗೆ ಹೆದರಿದ ಆ ಗುಂಪಿನ ದುಷ್ಟ ನಾಯಕ. ತನ್ನೆಲ್ಲಾ ಗುಂಪಿನ ಸದಸ್ಯರಿಗೆ ರಿವಾಲ್ವರನ್ನು ಕೆಳಗೆ ಇಳಿಸುವಂತೆ ಹೇಳಿದನು..

"ಸರಿ ನಿಮ್ಮ ಮಾತು ಕೇಳುತ್ತೇನೆ... ನಿನ್ನ ತಂದೆಯನ್ನು ಬಿಡುತ್ತೇವೆ ಆದರೆ ನೀವು ನಿಮ್ಮ ಮೊಬೈಲ್ ಹಾಗು ಮಂಜನನನ್ನು ನಮಗೆ ಒಪ್ಪಿಸಬೇಕು"

ಆ ದುಷ್ಟ ಹಾಗೆ ಹೇಳಿದ ಕೂಡಲೇ ರೋಹನ್ ಮತ್ತು ತನಿಷ್ಕ ಒಪ್ಪಿಕೊಂಡಂತೆ ತಲೆಯನ್ನಾಡಿಸಿದರು. ಆ ಕಡೆಯಿಂದ ಒಬ್ಬ ವ್ಯಕ್ತಿ ನಿಧಾನವಾಗಿ ಚಂದ್ರ ಶೇಖರ್ ರನ್ನು ಕರೆದು ಕೊಂಡು ಬಂದರು. ರೋಹನ್ ಮತ್ತು ತನಿಷ್ಕ ನಿಧಾನವಾಗಿ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ಕಾರು ನಿಂತಿರುವ ಸ್ಥಳದ ಕಡೆಗೆ ಹೆಜ್ಜೆ ಹಾಕಿದರು. ಅವರು ಚಂದ್ರ ಶೇಖರರನ್ನು ಕರೆದುಕೊಂಡು ಮುಂದೆ ಮುಂದೆ ಬಂದಂತೆ ಇವರು ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ಕಾರಿನ ಬಳಿ ತಲುಪಿದರು. ತನಿಷ್ಕ ನಿಧಾನವಾಗಿ ಕಾರಿನ ಬಾಗಿಲನ್ನು ತೆಗೆದಳು. ಸ್ವಲ್ಪ ಹಿಂದೆ ಸರಿದು...

"ನೋಡಿ ನಮ್ಮ ತಂದೆಯನ್ನು ಈ ಕಾರಿನಲ್ಲಿ ಕೂರಿಸಿ ನೀವು ಹಿಂದೆ ಸರಿದು ನಿಂತು ಕೊಳ್ಳಿ. ನಂತರ ಮಂಜನನ್ನು ಮತ್ತು ನನ್ನ ಮೋಬೈಲನ್ನು ಕೊಡುತ್ತೇನೆ"

ತನಿಷ್ಕ ಆ ದುಷ್ಟ ನಾಯಕನಿಗೆ ಹೇಳಿದಳು.

"ಸರಿ ನೀನು ಮೊದಲು ಮೊಬೈಲನ್ನು ಒಪ್ಪಿಸಬೇಕು... ಹಾಗಾದರೆ ಮಾತ್ರ"

ಆ ದುಷ್ಟ ನಾಯಕ ಹೇಳಿದನು.

"ಇಲ್ಲ ಮೊಬೈಲ್ ಮೊದಲೇ ನಿಮ್ಮ ಕೈಗೆ ಕೊಟ್ಟರೆ ನೀವು ನಮ್ಮ ಮೇಲೆ ಮತ್ತಿಗೆ ಹಾಕ ಬಹುದು. ನೀವು ಮೊದಲು ತಂದೆ ಯನ್ನು ಕಾರಿನಲ್ಲಿ ಕೂರಿಸಿ. ಅಗೋ ... ಅಲ್ಲಿ ಕಾಣುವ ಆ ಎತ್ತರದ ಕಲ್ಲಿನ ಮೇಲೆ ನನ್ನ ಮೊಬೈಲ್ ಇಟ್ಟು ಬರುತ್ತೇನೆ. ನಾವು ಇಲ್ಲಿಂದ ಹೋದ ತಕ್ಷಣ ನಿಮಗೆ ವಿಡಿಯೋ ಚಿತ್ರೀಕರಿಸಿದ ಆ ಮೊಬೈಲ್ ಸಿಗುತ್ತದೆ. ನಾವೆಲ್ಲಾ ಕಾರಿನಲ್ಲಿ ಕುಳಿತ ಮೇಲೆ ನಿಮ್ಮ ಮಂಜನನ್ನು ಬಿಟ್ಟು ಬಿಡುತ್ತೇವೆ. ಇಲ್ಲದಿದ್ದರೆ ಈ ವಿಡಿಯೋವನ್ನ ಸಾಮಾಜಿಕ ಜಾಲಗಳಲ್ಲಿ ಕಳುಹಿಸಬೇಕಾಗುತ್ತದೆ. ಹೇಗಿದ್ದರೂ ನಮಗೆ ನಮ್ಮ ಪ್ರಾಣ ಉಳಿಯುತ್ತೆ ಅನ್ನೊ ನಂಬಿಕೆ ನಮಗಿಲ್ಲ. ಸುಮಾರು ಐದಾರು ಗಂಟೆಯಿಂದ ಹೆದರಿ ಹೆದರಿ ನಾವೂ ನಮ್ಮ ಪ್ರಾಣ ಭಯವನ್ನು ಕಳೆದುಕೊಂಡಿದ್ದೇವೆ. ನೀವು ನಮ್ಮ ಮಾತನ್ನು ಕೇಳಲೇಬೇಕು. ಇಲ್ಲದಿದ್ದರೆ ಇಲ್ಲಿ ಏನಾದರೂ ಆಗಲಿ. ನಮಗೆ ನಿಮ್ಮ ಮಾತು ಕೇಳಲು ಸಾಧ್ಯವಿಲ್ಲ.."

"ಸರಿ ಹಾಗೇ ಹಾಗಲಿ..."

ದುಷ್ಟ ನಾಯಕ ಹೇಳಿದನು.

ತನಿಷ್ಕ ಹಾಗೆ ಹೇಳುತ್ತಾ ತನ್ನ ಮೊಬೈಲನ್ನು ದೂರದ ಕಲ್ಲಿನ ಮೇಲೆ ಇಟ್ಟು ಬಂದಳು

ಹಾಗೆಯೇ ಚಂದ್ರ ಶೇಖರರನ್ನು ನಿಧಾನವಾಗಿ ಕಾರಿನಲ್ಲಿ ಕೂರಿಸಿದರು. ನಂತರ ಸ್ವಲ್ಪ ದೂರ ಸರಿದರು. ರೋಹನ್ ನಿಧಾನವಾಗಿ ಮಂಜನ ಹಣೆಗೆ ಬಂದೂಕಿನ ಗುರಿ ಇಟ್ಟುಕೊಂಡೇ ಕಾರಿನ ಬಳಿಗೆ ಬಂದನು. ಹಿಂದಿನ ಸೀಟಲ್ಲಿ ತಾಯಿ ಸರೋಜ ತಂದೆ ಚಂದ್ರಶೇಖರರು ಕುಳಿತ್ತಿದ್ದರು ಮುಂದಿನ ಸೀಟಲ್ಲಿ ತನಿಷ್ಕ ಕುಳಿತಳು. ರೋಹನ್ ಆ ವ್ಯಕ್ತಿಯನ್ನು ಎಳೆದುಕೊಂಡೇ ನಿಧಾನವಾಗಿ ಕಾರಿನ ಡ್ರೈವರ್ ಸೀಟಲ್ಲಿ ಕುಳಿತನು. ಕಾರು ಸ್ಟಾರ್ಟ್ ಆದ ನಂತರ ಆ ಮಂಜನನ್ನು ರಭಸವಾಗಿ ದೂರ ತಳ್ಳಿದನು. ತಳ್ಳಿದ ರಭಸಕ್ಕೆ ಮಂಜನ ತಲೆ ಅಲ್ಲಿರುವ ಕಲ್ಲಿಗೆ ಜೋರಾಗಿ ಬಡಿಯಿತು. ಕಾರು ಜೋರಾಗಿ ಮುಂದೆ ಚಲಿಸಲಾರಂಬಿಸಿತು. ಅಲ್ಲೇ ಸ್ವಲ್ಪ ದೂರದಲ್ಲಿ ಕಲ್ಲಿನ ಮೇಲೆ ಇಟ್ಟ ಮೊಬೈಲನ್ನು ಕಾರು ಚಲಿಸುವಾಗಲೇ ವಿಂಡೋ ಹೊರಗೆ ಕೈ ಹಾಕಿ ಮತ್ತೆ ತನಿಷ್ಕ ಆ ಮೊಬೈಲನ್ನು ತೆಗೆದು ಕೊಂಡಳು...

ಇಷ್ಟೆಲ್ಲಾ ಬುದ್ದಿವಂತಿಕೆಯ ಆಟವನ್ನು ನೋಡುತ್ತಿದ್ದ ದುಷ್ಟರ ನಾಯಕ ಬೆಪ್ಪನಾಗಿ ಹೋದ. ತಮ್ಮ ದುಷ್ಕೃತ್ಯವನ್ನೆಲ್ಲಾ ಚಿತ್ರೀಕರಸಿದ ಮೊಬೈಲ್ ಸಹ ತನಗೆ ಸಿಗದಂತಾಯಿತು. ಒಮ್ಮೆ ಕೋಪದಿಂದ ಕೂಗಿದನು. ಅಲ್ಲೇ ಕಲ್ಲಿಗೆ ಪೆಟ್ಟು ತಿಂದ ಮಂಜನನ್ನು ಎಬ್ಬಿಸಲು ಹೋದನು. ಆದರೆ ಮಂಜ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅಲ್ಲೇ ಕೊನೆಯುಸಿರು ಎಳೆದಿದ್ದನು...

"ಅಯ್ಯೋ... ಮಂಜ ಸತ್ತೇ ಹೋದ, ಇರೋ ಒಬ್ಬ ತಮ್ಮನನ್ನು ಅವರು ಸಾಯಿಸಿ ಬಿಟ್ಟರು. ಇಲ್ಲ ಇವರನ್ನು ಸಮ್ಮನೆ ಬಿಡಲ್ಲ... ಗಾಡಿಗಳನ್ನ ತೆಗಿರೋ.. ಅವರನ್ನು ಬಿಡಬೇಡಿ. ನನ್ನ ತಮ್ಮನನ್ನು ಸಾಯಿಸಿದ ಅವರನ್ನು ಸಮ್ಮನೇ ಬಿಡಲ್ಲ..."

ಆ ದುಷ್ಟ ಹುಚ್ಚನಂತೆ ರೋಧಿಸಿದನು. ಅಲ್ಲಿ ನಿಂತ ಅವರ ಕಾರನ್ನು ತೆಗೆದರು. ಮತ್ತೆ ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡರು. ಅವರು ಸುಮಾರು ಆರೇಳು ಜನರಿರಬೇಕು. ಎಲ್ಲರೂ ಕಾರಲ್ಲಿ ಕುಳಿತುಕೊಂಡು ತನಿಷ್ಕ ರೋಹನ್ ಕುಳಿತ್ತಿದ್ದ ಕಾರನ್ನು ಹಿಂಬಾಲಿಸ ತೊಡಗಿದರು. ಅಲ್ಲಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಟ್ಚ ತನಿಷ್ಕ ಮತ್ತು ರೋಹನ್ ಗೆ ಮತ್ತೆ ಆತಂಕಗಳು ಅವರ ಬೆನ್ನ ಹಿಂದೆಯೇ ಬರುತ್ತಿತ್ತು. ನಿರ್ಜನವಿರುವ ಆ ಮಣ್ಣಿನ ರಸ್ತೆಯಲ್ಲಿ ರೋಹನ್ ಆದಷ್ಟು ಜೋರಾಗಿಯೇ ಕಾರನ್ನು ಚಲಿಸುತ್ತಿದ್ದನು. ಹಿಂದೆಯೇ ಬರುತ್ತಿದ್ದ ಆ ದುಷ್ಟರ ಗುಂಪು ಗುಂಡಿನ ಧಾಳಿ ನಡೆಸುತ್ತಿದ್ದರೂ. ಅದೃಷ್ಟವಶಾತ್ ಕಾರು ಸ್ವಲ್ಪ ಹೆಚ್ಚೇ ದೂರದಲ್ಲಿದುದರಿಂದ ಅವರು ಶೂಟ್ ಮಾಡಿದ ಯಾವ ಗುಂಡು ಸಹ ಕಾರಿಗೆ ಬಡಿಯಲಿಲ್ಲ. ಗುಂಡಿನ ಗುರಿಯನ್ನು ತಪ್ಪಿಸುತ್ತಾ ರೋಹನ್ ಬಹಳ ಬುದ್ಧಿವಂತಿಕೆಯಿಂದ ಕಾರನ್ನು ಚಲಿಸುತ್ತಿದ್ದನು. ಆ ದುಷ್ಟ ನಾಯರ ಅವರನ್ನು ಹಿಡಿಯುವಂತೆ ಕಾರಿನಿಂದಲೇ ಅಬ್ಬರಿಸುತ್ತಿದ್ದನು. ಎರಡೂ ಕಾರುಗಳು ಧೂಳನ್ನೆಬ್ಬಿಸುತ್ತ ಮುಂದೆ ಮುಂದೆ ಸಾಗುತ್ತಿದ್ದವು. ತಗ್ಗು ದಿಣ್ಣೆಯಲ್ಲಿ ಹಾರುತ್ತಾ ಇಳಿಯುತ್ತಾ ಕಾರುಗಳು ಚಲಿಸುತ್ತಿದ್ದವು. ಪ್ರಾಣ ಭಯವಿರುವವರಿಗೆ ಕಾರು ಸುರಕ್ಷಿತವಾಗಿ ಚಲಿಸಬೇಕು ಎಂಬ ತಾಳ್ಮೆ ಎಲ್ಲಿಂದ ಬರಲು ಸಾಧ್ಯ ಹೇಳಿ. ಅವರನ್ನು ಹಿಡಿಯುವ ಆತುರ ಆ ದುಷ್ಟರಿಹಿದ್ದರೆ. ದುಷ್ಟರಿಂದ ತಪ್ಪಿಸುಕೊಳ್ಳು ಭಯ ಇವರಲ್ಲಿತ್ತು. ಕೊನೆಗೂ ಆ ದುಷ್ಟರು ಹಾರಿಸಿದ ಗುಂಡು ರೋಹನ್ ಚಲಿಸುತ್ತಿದ್ದ ಕಾರಿನ ಚಕ್ರಕ್ಕೆ ಬಡಿದೇ ಬಿಟ್ಟಿತು. ಯಾವಾಗ ಗುಂಡು ತಗುಲಿತೋ ಕಾರಿನ ಚಕ್ರ ಪಂಕ್ಚರ್ ಆಗಿ ದಿಕ್ಕು ತಪ್ಪಿ ಸ್ವಲ್ಪ ದೂರ ಚಲಿಸಿ. ಅಲ್ಲೇ ಇರುವ ಮಣ್ಣಿನ ದಿಬ್ಬಕ್ಕೆ ಬಡಿಯಿತು. ಅದೃಷ್ಟಕ್ಕೆ ಪ್ರಾಣಾಪಯವಾಗಲಿಲ್ಲ. ಆತುರದಿಂದ ಎಲ್ಲರೂ ಕಾರಿನಿಂದ ಇಳಿದರು. ಆ ದುಷ್ಟರ ಕಾರು ಇನ್ನೇನು ಸ್ವಲ್ಪ ದೂರದಲೇ ಇತ್ತು...

(ಮುಂದುವರೆಯುವುದು)

No comments:

Post a Comment