Monday 9 October 2017

ನೆರಳು

ನೆರಳು

ಮುಂಜಾನೆಯ ಹೊಂಗಿರಣದಲಿ
ನಾ ನಡೆಯುವಾಗ
ಮೂಡಿತೊಂದು ಕಪ್ಪಾದ ಪ್ರತಿಬಿಂಬ
ನನ್ನದೇ ಛಾಯೆಯಲಿ
ನನಗಿಂತ ಎತ್ತರದಲಿ

ನನ್ನ ಮನಸಿನ ಜೊತೆಗಾರ
ನಾ ನಡೆದಂತೆ ನಡೆಯುತ್ತಿತ್ತು
ನಾ ಕುಣಿದಂತೆ ಕುಣಿಯುತ್ತಿತ್ತು
ನಿನಗಿಂತ ನಾ ಎತ್ತರ
ಎಂಬ ಅಹಂಭಾವದಲಿ...

ಸೂರ್ಯ ನೆತ್ತಿಯ ಮೇಲೆ ಬಂದಾಗ
ನನ್ನ ಮೇಲೆಯೇ ಸವಾರಿ ಮಾಡಿತು
ನನ್ನ ಮೇಲೆಯೇ ಏರಿ ಕುಳಿತಿತು
ನನ್ನನೇ ಸ್ಪರ್ಶಿಸಿತು ನನ್ನನೇ ಮುಟ್ಟಿತು
ನಿನಗಿಂತ ನಾ ದೊಡ್ಡವನೆಂದೆನುತ..

ಕಾಲ ನೆರಳಿಗೂ ಕಾಲೆಳೆಯಿತು
ನನ್ನ ಮೇಲಿಂದ ಕಿತ್ತೆಸೆಯಿತು
ಆದರೂ ಬೆಳೆಯಿತು ಸಂಜೆಯತನಕ
ನನ್ನ ಮೀರಿಸುವರು ಯಾರಿಹರು
ಎಂದೆಂಬ ಸೊಕ್ಕಿನಲಿ..

ನೇಸರ ದಿಗಂತದಾಚೆ ಜಾರಿದ
ಎಲ್ಲಿ ಹೋದ ನನ್ನ ಮನಸಿನ ಜೊತೆಗಾರ ?
ಹಮ್ಮಿನಲಿ ಬೀಗಿದ್ದು,ಸೊಕ್ಕಿನಲಿ ಮೆರೆದಿದ್ದು
ಕತ್ತಲಲಿ ಕತ್ತಲಾಗಿ ಹೋಗಿ
ಅಶಾಶ್ವತೆಯ ನೀತಿಯ ಸಾರಿ..
           
      ✍- ಪ್ರಕಾಶ್. ಎನ್. ಜಿಂಗಾಡೆ ✍

No comments:

Post a Comment