Tuesday 28 November 2017

ನೋಡ ಬನ್ನಿ ರಾಜ್ಯೋತ್ಸವ ಸಡಗರವ..

ಒಂದಿ ಬೀದಿ, ಬೀದಿ ತುಂಬಾ ಲೈಟು, ದೊಡ್ಡ ಶಾಮಿಯಾನ, ಆ ಏರಿಯಾದ ರಾಜಕೀಯ ಪುಡಾರಿಯಿಂದ ಹಣ ದೇಣಿಗೆಯಾಗಿ ಪಡೆದು. ಕನ್ನಡ ಚಿತ್ರಗೀತೆಗನ್ನೇ ಹಾಡುವ ಮ್ಯೂಸಿಕ್ ಆರ್ಕಿಸ್ಟಾ ಕರೆದು "ಜಗ್ಗಿನಕ್ಕ ಜಗ್ಗಿನಕ್ಕ" ಅಂತ ನಾಲ್ಕೈದು ಹಾಡನ್ನು ಹಾಡಿಸಿದ್ರೆ ಕನ್ನಡ ರಾಜ್ಯೋತ್ಸವ ಮುಗಿದು ಬಿಡುತ್ತದೆ. ಇಲ್ಲಾಂದ್ರೆ ನಾಲ್ಕೈದು ಮಿಮಿಕ್ರಿ ಆರ್ಟಿಸ್ಟ್ ಗಳನ್ನು ಕರೆಸಿದ್ರೂ "ಅದೇ ರಾಗ ಅದೇ ಹಾಡು" ಅಂತ ಅವೇ ಜೋಕುಗಳನ್ನ ಮತ್ತೊಮೆ ಕೇಳಿಸಿಯಾದರೂ ನವಂಬರ್ ರಾಜ್ಯೋತ್ಸವ ಮುಗಿಸಿ ಬಿಡಬಹುದು. ಎಲ್ಲಾ ಕಡೆ ಹೀಗೆ..ಇದೇ ರೀತಿಯ ಕಾರ್ಯಕ್ರಮಗಳನ್ನು ನೋಡಿದ್ದೇವೆ. ಆದರೆ ವೈವಿಧ್ಯತೆಯಿಲ್ಲ ಅಷ್ಟೆ. ಕನ್ನಡ ರಾಜ್ಯೋತ್ಸವ ಅಂದರೆ ಕನ್ನಡ ನಾಡು ನುಡಿಗೆ ಸೇವೆಗೈದವರನ್ನು ಸ್ಮರಿಸುವ ದಿನ. ಕನ್ನಡದ ಪ್ರತಿಭಾವಂತರನ್ನು ಸನ್ಮಾನಿಸುವ ದಿನ. ನವಂಬರ್ ಕನ್ನಡದ ಸೋಗಿನಲ್ಲಿ ಆಚರಿಸುವ ರಾಜ್ಯೋತ್ಸವೆಲ್ಲವೂ ಕನ್ನಡದ ಕಂಪು ಪಸರಿಸದು..

'ಅರಿ' ಯಾರಿಹರೆಂದು
ಹುಡುಕುವೆವು ಕನ್ನಡಕೆ
ಹೆಗಲ ಮುಟ್ಟಿ ನೋಡಬಾರದೇಕೆ...?

ನವಂಬರೇಶ್ವರ ಬಂದಿಹನು
ಒಮ್ಮೆ ಜೈ ಎಂದುಬಿಡಿ
ಕನ್ನಡದ ಸೋಗಿನಲಿ...

ಈ ಹಿಂದೆ ನಾನೇ ಮುಖ ಪುಸ್ತಕದಲ್ಲಿ ಬರೆದುಕೊಂಡ  ಕವನದ ಕೊನೆಯ ಸಾಲುಗಳಿವು. ರಾಜ್ಯೋತ್ಸವವನ್ನು ಆಚರಿಸುವುದಕ್ಕೆ ನಿರ್ಧಿಷ್ಟ ಗುರಿಯಿರಬೇಕು. ಉತ್ತಮ ಯೋಜನೆಗಳಿರಬೇಕು, ಕನ್ನಡ ನಾಡು ನುಡಿಗೆ ಸೇವೆ ಮಾಡಿರುವ ಪ್ರತಿಭಾವಂತರನ್ನು ಸನ್ಮಾನಿಸಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವಂತಿರಬೇಕು. ಕನ್ನಡದ ಕವಿಪುಂಗರನ್ನು ನೆನೆಯುವಂತಿರಬೇಕು. ನಾಡು ನುಡಿ, ಕಲೆ, ಸಂಸ್ಕೃತಿ, ಸ್ವಲ್ಪ ಜೀವನಾದರ್ಶಗಳನ್ನು ಮೂಡಿಸುವಂತಿರಬೇಕು. ಇವೆಲ್ಲಾ ಹೇಗೆ ಸಾಧ್ಯ ಎನ್ನುವುದಾದರೆ ಒಮ್ಮೆ 3ಕೆ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬನ್ನಿ. ಅತ್ಯಂತ ಸರಳ ಸುಂದರ ಮತ್ತು ಕನ್ನಡದ ಕಂಪು ನಿಮ್ಮ ಕಿವಿಯನ್ನು ಇಂಪಾಗಿಸುತ್ತದೆ..

2017, ನವಂಬರ್ 26 ರ ಭಾನುವಾರ "ಕನ್ನಡ ಕಥನ ಕವನ" ಬಳಗವು ರಾಜ್ಯೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎರಡು ದಿನದ ಹಿಂದ ಶುಕ್ರವಾರೆ ಬೆಳಗ್ಗೆ ಎದ್ದು ಮೊಬೈಲ್ ನೋಡಿದಾಗ 3ಕೆ ಗೆಳೆಯ ಶ್ರೀಕಾಂತ್ ಮಂಜುನಾಥ್ ರವರು " Congratulations " ಅಂತ ಸಂದೇಶ ಕಳುಹಿಸಿದ್ದರು. ಯಾಕೆ ಅಂತ ಕೇಳುವ ಮನಸ್ಸಾಯಿತಾದರೂ, ನಂತರ ತ್ರಿಕೆ ಯಿಂದ ಬಂದ ಇ- ಮೇಲ್ ಸಂದೇಶವೇ ಎಲ್ಲದ್ದಕ್ಕೂ ಉತ್ತರ ನೀಡಿತ್ತು. ತ್ರಿಕೆ ನಡೆಸಿದ "ರಾಜ್ಯೋತ್ಸವ ಪ್ರಬಂಧ ಸ್ಪರ್ಧೆ" ಯಲ್ಲಿ ನನಗೆ ಮೊದಲ ಬಹುಮಾನ ಬಂದಿತ್ತು. ಆದರೆ ನವಂಬರ್ 26 ರ ಭಾನುವಾರ ಕವಿ ಮಿತ್ರ ಸೋಮು ರೆಡ್ಡಿಯವರ ಮದುವೆಗೆ ಹೋಗುವುದೆಂದು ನಿರ್ಧರಿಸಿಯಾಗಿತ್ತು. ಅತ್ತ ಹುಬ್ಬಳ್ಳಿಯಿಂದ ಚಂದ್ರಶೇಖರ್ ಮಾಡಲಗೇರಿಯವರು ಕರೆ ಮಾಡಿ "ಸರ್ ಹುಬ್ಬಳ್ಳಿಗೆ ಬರುತ್ತಿರಲ್ಲವೇ...? ಸಂಜೆ ಕವಿಗೋಷ್ಠಿ ಇದೆ" ಎಂದರೆ, ಇತ್ತ 3ಕೆ ಗೆಳೆಯ ನೂತನ್ ಕರೆ ಮಾಡಿ ಅಭಿನಂದನೆಯನ್ನು ತಿಳಿಸಿ "ಪ್ರಕಾಶ್ ಅವರೆ ಕಾರ್ಯಕ್ರಮಕ್ಕೆ ಬರುತ್ತಿರಲ್ಲವೇ ?" ಎಂದು ಕೇಳಿದರು. ಈ ಇಬ್ಬಗೆಯ ಮನಸ್ಸಿನ ದ್ವಂದ್ವದಲ್ಲಿ  ಕೊನೆಗೆ ನನ್ನ ಪಾಲಿದೆ ದಕ್ಕಿದ್ದು ತ್ರಿಕೆಯ ರಾಜ್ಯೋತ್ಸವ ಕಾರ್ಯಕ್ರಮ.

ವಿಳಾಸ ಹುಡುಕುವ ಭರದಲ್ಲಿ ಅಲ್ಲಲ್ಲಿ ಸುತ್ತು ಹಾಕಿ, ದಿಕ್ಕು ತಪ್ಪಿ, ಕೊನೆಗೆ ಹೇಗೋ ಗುರಿ ತಲುಪಿ ಕಾರ್ಯಕ್ರಮಕ್ಕೆ ಬಂದು ಕುಳಿತಾಗಲೇ ನಿಜವಾದ ಜೀವನದ ದಿಕ್ಕು ಗೋಚರವಾಗಿದ್ದು. ತತ್ವಪದದಲ್ಲಿನ ಜೀವನಾದರ್ಶಗಳು ತಿಳಿದಿದ್ದು. ತಂಬೂರಿಯ ಸ್ವರ ಕಿವಿಯನ್ನು ಸೋಂಕಿ ಕನ್ನಡದ ಕಂಪು ಮನಸಿನಾಳಕ್ಕೆ ಇಳಿದಿದ್ದು..

ನಾನು ಕಾರ್ಯಕ್ರಮಕ್ಕೆ ತಲುಪುವ ಹೊತ್ತಿಗಾಗಲೇ ನಾಡಗೀತೆ ಮುಗಿದಿತ್ತು. ಯುದ್ಧದಲ್ಲಿ ಮಡಿದ ಯೋಧರಿಗಾಗಿ ಕೆಲವು ನಿಮಿಷಗಳ ಮೌನ ವ್ರತಾಚರಣೆ. ನಂತರ  ಕಿರುತೆರೆಯ ನಿರ್ದೇಶಕ ತೇಜಸ್ವಿಯವರ ಪರಿಚಯವಾಯಿತು. ಸತೀಶ್ ರವರ ಪರಿಚಯ ಭಾಷಣವು ತೇಜಸ್ವಿಯವರ ಜೀವನವನ್ನೇ ಪರಿಚಯಿಸಿದಂತಿತ್ತು. ತ್ರಿಕೆಯವರೇ ಆದ ತೇಜಸ್ವಿಯವರು ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದು ತಿಳಿದು ಹೆಮ್ಮೆ ಎನಿಸಿದರೂ, ತೇಜಸ್ವಿಯವರು ಮಾತ್ರ ನಾನೇನು ಅಂತ ಸಾಧಕನಲ್ಲ ಹೊಟ್ಟೆ ಪಾಡಿಗಾಗಿ ಈ ವೃತ್ತಿ ಮಾಡುತಿರುವೆ. ಅದು ನನ್ನ ಕೆಲಸವಷ್ಟೆ ಎಂದು ಹೇಳಿ ಸರಳತೆಯನ್ನು ಮೆರೆದರು. ಇದು ಸಾಧಕರಲ್ಲಿ ಕಾಣುವ ಅಪರೂಪದ ಗುಣವೂ ಹೌದು. 

ಕಾರ್ಯಕ್ರಮದ ಪ್ರಾರಂಭದಿಂದಲೂ ತ್ರಿಕೆ ಬಳಗವು ಸಭಿಕರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಬಿಮಾನ ಮೂಡಿಸುತ್ತಲೇ ಕಾರ್ಯಕ್ರಮವನ್ನು ನಿರೂಪಿಸುತ್ತಿತ್ತು. ಕಾರ್ಯಕ್ರಮದ ನಿರೂಪಕರು  ಅಚ್ಚ ಕನ್ನಡದಲ್ಲಿ ಇಂಪಾದ ಸ್ವಚ್ಚ ಕನ್ನಡದಲ್ಲಿ ಮಾತನಾಡುತ್ತಿದುದು ಮುದ ನೀಡಿತು. ನಂತಪ ಕೊಳ್ಳೆಗಾಲ ಮಂಜುನಾಥ್ ರವರು ಸಂತ ಶಿಶುನಾಳ ಶರೀಫರ ತತ್ವಪದಗಳ ವಿಮರ್ಶೆ ಮತ್ತು ಶರೀಫರ ಸ್ಥೂಲ ಪರಿಚಯ ಮಾಡಿಕೊಟ್ಟರು. ಹಿಂದೂ ಮತ್ತೂ ಮುಸ್ಲಿಂ ಧರ್ಮಗಳೆರಡನ್ನು ಸಹಬಾಳ್ವೆಯನ್ನು ಬೆಸೆದ ಶರೀಫರ ಆದ್ಯಾತ್ಮದ ಚಿಂತನೆಗಳು ತತ್ವಪದಗಳು ಗಮನ ಸೆಳೆದವು. ಭಾಷಣದ ನಡುವೆ ಉಷಾ ಉಮೇಶ್ ಮತ್ತು ಸತೀಶ್ ರವರು ಶರೀಫರ ಗೀತೆಗಳಿಗೆ ಧ್ವನಿಯಾದರು..
ಕಾರ್ಯಕ್ರಮದಲ್ಲಿ ಹೆಚ್ಚು ಖುಷಿ ಕೊಟ್ಟಿದ್ದು ತಂಬೂರಿ ಜವರಯ್ಯ ದಂಪತಿಗಳ ಕಂಠ ಸಿರಿಯಿಂದ ಜಿನುಗಿದ ತತ್ವಪದಗಳು. ಯಾರೀ ಜವರಯ್ಯ ದಂಪತಿಗಳು ..? ತಂಬೂರಿ ಜವರಯ್ಯ ಮತ್ತು ಬೋರಮ್ಮ ದಂಪತಿಗಳು ಸ್ವತಃ  ತಂಬೂರಿ ಮತ್ತು ವೀಣೆಯನ್ನು ಹಿಡಿದು ತತ್ವಪದಗಳನ್ನು ಹಾಡುವ ಕಾಯಕವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಈಗವರು ಇಳಿ ವಯಸ್ಸಿನಲ್ಲಿದ್ದಾರೆ.  ತಂಬೂರಿ ಹಿಡಿದು ತತ್ವಪದಗಳನ್ನು ಹಾಡುವುದರ ಮೂಲಕ  ಅವರ ಬಡತನದ ಕಷ್ಟವನ್ನು ಮರೆತವರು. ರಾಜಕೀಯ ಕ್ರೂರ ದೃಷ್ಠಿ ಈ ಬಡವರನ್ನೂ ಬಿಟ್ಟಿಲ್ಲ ನೋಡಿ. ಯಾರೋ ಮಹಾನುಭಾವ ಗ್ಯಾಸ್ ಕೊಡಿಸುತ್ತೇನೆಂದು ದಾಖಲೆ ಪಡೆದು ಯಾಮಾರಿಸಿದ್ದಾನೆ. ಇತ್ತ ಸಿಮೆಎಣ್ಣೆಯೂ ಇಲ್ಲ, ಗ್ಯಾಸೂ ಇಲ್ಲ. ಸೌದೆಯನ್ನು ಉರಿಸಿ ಅಡುಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ...

ತ್ರಿಕೆಯು ಇಂತಹ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿದ್ದು ವಿಶೇಷತೆಗಳಲ್ಲೊಂದು. ಆ ದಂಪತಿಗಳ ಅವರ ಬಾಯಿಂದ ಜಿನುಗುವ ತತ್ವಪದಗಳನ್ನು ಅವರ ಕಂಠಸಿರಿಯಲ್ಲೇ ಕೇಳಬೇಕು. ಅಪ್ಪಟ ನಮ್ಮದೇ ನಾಡಿನ ಸೊಗಡು ಹಾಡಿನುದ್ದಕ್ಕೂ ಇಂಪಾಗಿ ಕರ್ಣಾನಂದವಾಗಿಸುತ್ತದೆ.

1. "ಬೆಟ್ಟದ ಮೇಲಿಂದ ಬೆಳ್ಳಿರಾಯ ಹತ್ತಿ ಬರುವಾಗ
ತ್ವಾಟದಲ್ಲಿರೋ ದಂಟಿನ್ ಸೊಪ್ಪು ನಲಿದಾಡ್ತಿತ್ತೋ..
ತ್ವಾಟದಲ್ಲಿರೋ ನಲಿದಾಡ್ತಿರೋ ದಂಟಿನ ಸೊಪ್ಪಿನ್ ಸುದ್ಧಿ ಕೇಳಿ. ಹೊಲದಲ್ಲಿರೋ ಈರುಳ್ಳಿ ತೊಳಸಾಡ್ತಿತ್ತೋ.."

2.  "ಎಂಥ ಭಕ್ತಿವಂತೆ ಈಕೆ ಕುಂಬಾರಕಿ
ಬ್ರಹ್ಮಾಂಡವೆಲ್ಲಾ ತಿಳ್ಕೊಂಡಿರೋ ಕುಂಬಾರಕೀ.."

ಹೀಗೆ ಎಟ್ಹತ್ತು ತತ್ವಪದಗಳು ಮನಸ್ಸಿಗೆ ಮುದ ನೀಡಿದುದಲ್ಲದೇ. ಅದರಲ್ಲಿನ ನೀತಿ ತತ್ವಗಳು ಜೀವನದ ಮತ್ತೊಂದು ಮಗ್ಗುಲಿನತ್ತ ಹೊರಳಿಸಿ ಚಿಂತನೆಯನ್ನು ಮೂಡಿಸಿತು. ಹಿಂದಿನವರು ಕಂಡು ಕೊಂಡ ಆದರ್ಶ ನಡೆ ನುಡಿಗಳು ಎಷ್ಟೊಂದು ಸೊಗಸು ಎನಿಸಿತು.

ಹೀಗೆ ಪ್ರತಿ ವರ್ಷವೂ ಈ ಕನ್ನಡ ಕಥನ ಕವನ ಸಂಘಟನೆಯು ಸಾಧಕರನ್ನು ಗುರುತಿಸಿ ಅವರನ್ನು ವೇದಿಕೆಗೆ ಕರೆದು ಸನ್ಮಾನಿಸುತ್ತದೆ. ಈ ವರ್ಷ ತಂಬೂರಿಯ ಜೊತೆಗೆ ತತ್ವ ಪದಗಳನ್ನು ನುಡಿಸುವ ತಂಬೂರಿ ಜವರಯ್ಯ ದಂಪತಿಗಳಿಗೆ ಸನ್ಮಾನಿಸಿದ್ದು ವಿಶೇಷ ಎನಿಸಿತು. ಇಳಿ ವಯಸ್ಸಿನಲ್ಲಿಯೂ ಆ ದಂಪತಿಯ ಬಾಯಿಂದ ಹೊರಬಂದ ಇಂಪಾದ ತತ್ವ ಸ್ವರಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಇಂತಹ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿದ್ದಕ್ಕೆ  ತ್ರಿಕೆ ಬಳಗಕ್ಕೆ ನನ್ನ ಅಭಿನಂದನೆಗಳು. ತ್ರಿಕೆಯ ಅದ್ಯಕ್ಷೆ ರೂಪ ಸತೀಶ್ ರವರು ಕಾರ್ಯಕ್ರಮದ ಜವಾಬ್ಧಾರಿಯನ್ನು ಹೊತ್ತುಕೊಂಡು ಸಮರ್ಥವಾಗಿ ನಿಭಾಯಿಸುತ್ತಿದ್ದರು.  ನಂತರ ಅಶೋಕ್ ಶೆಟ್ಟಿಯವರಿಂದ ಅಧ್ಯಕ್ಷರ ಭಾಷಣ ನಡೆಯಿತು. ಸಮೋಸ ತಣ್ಣಗಾಗುತ್ತೆ ಅಂತ ಎಚ್ಚರಿಸಿಯೇ ಭಾಷಣಕ್ಕೆ ಕಳುಹಿಸಿದ್ದಾರೆ. ಹೆಚ್ಚೇನೂ ಮಾತಾಡೊಲ್ಲ ಹಾಸ್ಯದ ಧಾಟಿಯಲ್ಲೇ ಮಾತು ಮುಂದುವರೆಸಿದರು. ನಂತರ ತ್ರಿಕೆಯ ರೂವಾರಿ ಮಹೇಶ್ ಮೂರ್ತಿಯವರು ಚೊಕ್ಕವಾಗಿಯೇ ತಮ್ಮ ಭಾಷಣ ಮುಗಿಸಿದರು.
ನಂತರ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರಾದ ಮಂಜುನಾಥ್ ಹಿಲಿಯಾಣ ಮತ್ತು ಕುಮಾರಿ ದೃಷ್ಠಿಯವರಿಗೆ ಅಭಿನಂದನೆಗಳು..

ಬರಿಯ ಕನ್ನಡ ಸೋಗನ್ನು ಹಾಕಿರುವ ಇತರ ಎಲ್ಲಾ ಸಂಘಟನೆಗಳಿಗೂ "ಕನ್ನಡ ಕಥನ ಕವನ" ಬಳಗವು ಇತರರಿಗೆ ಮಾದರಿಯಾಗಿ ನಿಲ್ಲುತ್ತದೆ. ಕನ್ನಡದ ನುಡಿ ಕಾಯಕದಲ್ಲಿ ತೊಡಗಿಸಿಕೊಂಡ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುತ್ತದೆ. ಇಲ್ಲಿ ಅಬ್ಬರವಿಲ್ಲ ಆಡಂಬರವಿಲ್ಲ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಮುಖಂಡರಿಲ್ಲ. ಕನ್ನಡ ಕಂಪು ರಾಜ್ಯೋತ್ಸವದ ಸೊಗಸು ಬಿಟ್ಟರೆ ಮತ್ತೇನು ನಿಮಗೆ ಕಾಣ ಸಿಗದು. 2008 ರಿಂದಲೂ ಇಂತಹ  ಕಾರ್ಯಕ್ರಮಗಳು 3ಕೆ ಯಿಂದ ಅಡೆ ತಡೆಯಿಲ್ಲದೇ ನಡೆಸಿಕೊಂಡು ಬರುತ್ತಲೇ ಇದೆ. ಮುಂದೆ ಈ ರೀತಿಯ ತ್ರಿಕೆಯ ಕನ್ನಡದ ಕಾರ್ಯಕ್ರಮವನ್ನು ಮುಂಬೈ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿಯೂ ನಡೆಸುವ ಚಿಂತನೆಯಿದೆ ಎಂಬ ಮಾತು ಕೇಳಿ ಸಂತೋಷವೂ ಆಯಿತು. ಕನ್ನಡ ರಾಜ್ಯೋತ್ಸವ ಆಚರಿಸುವ ಪರಿಯನ್ನು ತ್ರಿ ಕೆ ಯ ಕಾರ್ಯಕ್ರಮವನ್ನೇ ಮಾದರಿಯಾಗಿಟ್ಟುಕೊಂಡು ಇತರರು ಆಚರಿಸಿದರೆ ಒಳಿತೆಂದೇ ನನ್ನ ಭಾವನೆ..

3ಕೆ ಯ ರುವಾರಿ ಮಹೇಶ್ ಮೂರ್ತಿ ಸೂರತ್ಕಲ್, ಅಧ್ಯಕ್ಷೆ ರೂಪ ಸತೀಶ್, ಜೊತೆಗೆ ಬಳಗದ ಸದಸ್ಯರುಗಳಾದ ಅಶೋಕ್ ಶಟ್ಟಿ, ಶ್ರಿಕಾಂತ್ ಮಂಜುನಾಥ್, ಜೆ,ಎಂ, ವಿ. ನಾಯ್ಡು, ಸತೀಶ್, ನವೀನ್ ಕುಮಾರ್.. (ಇನ್ನಿತರರ ಹೆಸರು ನೆನಪಿಲ್ಲ) ಎಲ್ಲರೂ ಈ ಸುಂದರ ಕಾರ್ಯಕ್ರಮಕ್ಕೆ ಹೆಗಲು ನೀಡಿ ಕನ್ನಡದ ತೇರನ್ನು ಎಳೆದಿದ್ದೀರಿ. ಎಲ್ಲರಿಗೂ ಅಭಿನಂದನೆಗಳು. ಕನ್ನಡಕ್ಕೆ ನಿಮ್ಮಗಳ ಸೇವೆ ಹೀಗೆ ಇರಲಿ...
ಪ್ರಕಾಶ್ ಎನ್ ಜಿಂಗಾಡೆ

No comments:

Post a Comment