Thursday 15 March 2018

ಭಿಕ್ಷುವಿನ ಪ್ರೇಮಾಲಾಪ

ಭಿಕ್ಷುವಿನ ಪ್ರೇಮಾಲಾಪ..

ಮೋರಿಯಂಚಿನಲಿ ಮಲಗಿದ
ತಿರುಕಿ ಕೊಳಾಕಾಂಗಿಗೆ
ಚಿಂದಿ ತೇಪೆ ಧಿರಿಸಿನ
ಬಿಕ್ಷುಕನ ಪ್ರೇಮ ಆಲಾಪನೆಯಿದು....

ಪ್ರಿಯೆ ...
ನಿನ್ನ ಮುಂಗುರುಳು
ಗಂಟು ಬಿದ್ದ ನೂಡಲ್ಸ್ ನಂತೆ
ಕಿವಿಗಳು
ಮಡಚಿದ ಮೋ..ಮೋ..ಗಳಂತೆ

ನಾಸಿಕದ ಸೊಗಸು
ಚಂಪಾಕಲಿಯ ಸೊಬಗು
ಚಳಿಗಾಲದ ನೆಗಡಿಯಂತೆ
ತೊಟ್ಟಿಕ್ಕವ ರಸಧಾರೆ ......

ಕಣ್ಣು ಗುಡ್ಡೆಗಳು
ಜಾಮೂನಿನ ಉಂಡೆಗಳು
ಸುತ್ತಲೂ ಪ್ರೀತಿಯಿಂದ
ಮುತ್ತಿಕ್ಕಿದ ನೊಣಗಳು.....

ಗಲ್ಲಗಳು
ಸೀದಿಟ್ಟ ರೊಟ್ಟಿಯ ಕರುಕಲು
ಮುತ್ತಿಟ್ಟರೆ
ತುಟಿಗೆ ಕಪ್ಪಾದ ರಂಗು...

ಹೊಗಳಿಕೆಯ ಭಾವ ಬೇರೆ
ಜೋಗಿ ಪಡೆದದ್ದು ಜೋಗಿಗೆ
ಅವರ ಉಡುಗೆಗೆ ರೂಪಕ್ಕೆ
ವಾಕರಿಸುವ ನಾವುಗಳೆಷ್ಟು ಶುಭ್ರರು....?

ಕೊಳಕು ಮನಸಿನ ಬಣ್ಣದ ಮಾತಿಗಿಂತ
ಕೊಳಕು ರೂಪ ಹಿತವಾಗಿಹುದು...
ಜಗದ ಕಠೋರ ನಿಂದನೆ ಪಡೆದ
ಅವರ ಮೌನ ಬೇಡಿಕೆಯೊಂದೇ
ನಾವೂ ಮನುಷ್ಯರು- ಎಂದು

                   - ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ -8

ಬೇಟೆಯನು ಕಲಿತ ಸಿಂಹವೊಂದನು
ಯಾವ ಕಾಡಿಗೆ ತಳ್ಳಿದೊಡೆನಯ್ಯ
ಸಿಂಗಂ ಗಾವಸಿಂಗಂ ಆಗಿ
ಬೇಟೆಯಾಡುವುದನು ಮರೆತು
ಅದು ಉಪಾವಾಸ ಇರುವುದೇ ಅಯ್ಯ

ವಿದ್ಯೆಯಂ ಕಲಿತ ಮಾನವಂಗೆ
ಯಾವ ಊರಾದೊಡೇನು
ವೃತ್ತಿಯನೀಡಿ ಸಲುಹಿದೆನೆಂಬ
ಗರ್ವಿಯನು ಮೆಟ್ಟಿ ನಿಲುವನಯ್ಯಾ
Bosseಶ್ವರನ ಮೆದುಳಿನಾಣೆಗೂ ದಿಟವಯ್ಯ..

ಪ್ರಕಾಶ್ ಎನ್ ಜಿಂಗಾಡೆ

ಹೇ..! ಮಾನವ


ಹೇ..! ಮಾನವ
ನಿನ್ನದೂ ಎಂತಹ ಸ್ವಾರ್ಥ ಬದುಕು..?
ನದಿಯ ನೀರನೇ ಕುಡಿವೆ
ನದಿಯನೇ ನಾಶಗೈಯುವೆ
ಒಣಗಿ ನಿಂತಿಹ, ಬತ್ತಿ ಬಾಡಿಹ
ಜಲ ವಿನಾಶಕೆ ಕಾರಣನಾಗಿ
ಜ್ಞಾನಿ ಎಂದು ಮೆರೆಯುತಿರುವೆ...

ಹೇ..! ಮಾನವ
ಎಲ್ಲಿದೆ ನಿನ್ನಲಿ ಪಾವಿತ್ರ್ಯತೆ ..?
ಸಪ್ತ ನದಿಯ ಮಂತ್ರವ ಹೇಳುವೆ
ಪವಿತ್ರ ಜಲವೆಂಬಂತೆ ಪ್ರಾರ್ಥಿಸುವೆ
ಮಲ ಮಲಿನ ಹೆಣಗಳನು ಹಾಕಿ
ಜೀವ ಜಲಕೆ ವಿಷವನು ಬೆರೆಸಿ
ಮಡಿ ಮಡಿಯೆಂದು ಬೀಗುತಿರುವೆ...

ಹೇ..! ಮಾನವ
ಎಲ್ಲಿಹುದು ನಿನ್ನಲಿ ಸಂಸ್ಕಾರ ?
ತುಂಬಿದ ನದಿಗೆ ಬಾಗಿಣ ನೀಡುವೆ
ಬತ್ತಿ ಬಸವಳಿದಾಗ ಹಿಂದೆ ಸರಿವೆ
ಸ್ವಾರ್ಥ ಕೃತ್ಯಕೆ ನಿಸರ್ಗವ ದೂಷಿಸಿ
ಜಲ ಜೀವನಾಡಿಯ ಸಂಹರಿಸಿ
ಪ್ರಕೃತಿ ರಕ್ಷಕನೆಂದು ಸೋಗು ಹಾಕಿರುವೆ..

ಹೇ..! ಮಾನವ
ನದಿಯೊಂದು ಹರಿವು ಮಾತ್ರವೇ ?
ಅವಳು ಪವಿತ್ರಳು ನಮಗಾಗಿ ಹುಟ್ಟಿಹಳು
ಶಿವನ ಜಟಧಾರಿ ಗಂಗೆಯವಳು
ಅಗಸ್ತ್ಯ ಕಮಂಡಲವಾರಿ ಕಾವೇರಿಯವಳು
ಎಲ್ಲಿಹುದು ಆ ಭಕ್ತಿ ಆ ಕೃತಜ್ಞತೆ
ಸುಮ್ಮನೆ ಭಕ್ತನೆಂಬ ಮುಖವಾಡ ಧರಿಸಿರುವೆ. 

ಹೇ..! ಮಾನವ
ಕಟುಕನಾಗಬೇಡ ಪ್ರಕೃತಿಯ ಮುಂದೆ
ಇಂದು ಅಟ್ಟಹಾಸ ನಿನದಾದರೆ
ನಾಳೆ ಪ್ರಕೃತಿಯದು ಮರಣ ಮೃದಂಗ
ಎಚ್ಚೆತ್ತು ಕೋ ಮಾನವ..ಎಚ್ಚೆತ್ತು ಕೋ
ಇಲ್ಲವಾದರೆ ಪೃಥ್ವಿಯನೇ ಬಲಿಗೈದ
ದುರಂತ ಅಧ್ಯಾಯಕೆ ಸಾಕ್ಷಿಯಾಗುವೆ..

ಸ್ವಾರ್ಥ ನಡೆ

ಏನಿದೇನಿದೆಲ್ಲವೂ
ಸ್ವಾರ್ಥ ಬದುಕಿನ ನಡೆಗಳು
ನಮ್ಮದೇ ವ್ಯಾಖ್ಯಾನದ
ಅಧರ್ಮದ ನುಡಿಗಳು
ಬದಲಾದ ಬದುಕಿನ ಪರಿಗಳು

ಕತ್ತೆಗೆ ಭಾರವ ಕೊಟ್ಟು
ಆನೆಗೆ ಅಂಕುಶ ಹಾಕಿ
ನಾಯಿಗೆ ಚೈನನು ಬಿಗಿದು
ಎಮ್ಮೆಯ ಕೆಚ್ಚಲು ಕಿವುಚಿ
ಬಳಸುವೆವೆಲ್ಲಾ ಸ್ವಾರ್ಥದಿ..

ನೀಚ ಬದುಕಿನ ನಡೆಗಳು
ಜಾತಿ ಧರ್ಮದ ಗೋಡೆಗಳು
ಮೇಲು ಕೀಳೆಂಬ ಭಾವಗಳು 
ಎಲ್ಲವೂ ನರನದೆ ಸೃಷ್ಠಿ
ಏನಿದರ ದ್ವಂದ್ವ..?

ಹೇ..! ಏಸು ಕೃಷ್ಣ ಪೈಗಂಬರರೇ
ಮತ್ತೊಮ್ಮೆ ಕೇಳ ಬನ್ನಿರಿ
ನಿಮ್ಮ ಉಪದೇಶಗಳನು
ಅನರ್ಥೈಸಿಕೊಂಡಿರುವ
ಜನರ ನಡೆ ನುಡಿ ತತ್ವಗಳನು...

ಕಾವ್ಯ ರಚನೆ

ಬರೆಯಲೇ ಬೇಕು
ಕಟ್ಟಲೇ ಬೇಕು
ಎಂದು ಹೊರಟವನ
ಲೇಖನಿಯ ಮೂಸೆಯಿಂದ
ಕವಿತೆ ಅರಳದು...

ಪದಗಳ ಲಾಲಿತ್ಯದಲಿ
ಭಾವಗಳ ಚಕ್ಕಂದದಲಿ
ಲೇಖನಿಯ ಮೊನಚಿನಲಿ
ಜ್ಞಾನದ ಕಟ್ಟೆಯೊಡೆದಾಗಲೇ
ಕಾವ್ಯವು ಘಮಿಸುವುದು..

     ಪ್ರಕಾಶ್ ಎನ್ ಜಿಂಗಾಡೆ

ಜೈ ಅಂದು ಬಿಡಿ

ತೊದಲಾಗಲಿ ತುಂಡಾಗಲಿ
ಅರಹುವೆವು ನಾನು
ಆಂಗ್ಲವನು ಸೊಕ್ಕಿನಲಿ

ಅರಿವಾಗಲಿ ಅನರ್ಥವಾಗಲಿ
ನೋಡುವೆವು ನಾವು
ಪರಭಾಷೆ ಬೆಳ್ದೆರೆಗಳನು..

'ಅರಿ' ಯಾರಿಹರೆಂದು
ಹುಡುಕುವೆವು ಕನ್ನಡಕೆ
ಹೆಗಲ ಮುಟ್ಟಿ ನೋಡಬಾರದೇಕೆ...?

ನವಂಬರೇಶ್ವರ ಬಂದಿಹನು
ಒಮ್ಮೆ ಜೈ ಎಂದುಬಿಡಿ
ಕನ್ನಡದ ಸೋಗಿನಲಿ...

   -ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ -7

ಕಣ್ಣಿಗೆ ಕಣ್ಣೀರೆ ಅಂದವಯ್ಯ
ಸಂತಸಕೆ ನೋವಿದ್ದರೆ ಚೆಂದವಯ್ಯ
ಸುಖವೊಂದಿದ್ದರೆ ಸಂಸಾರ ಸುಖಿಸದು
ದಃಖವಿಲ್ಲದಿರೆ ಪ್ರೀತಿ ದೊರಕದು
ನಾಲ್ಕು ದಿನದ ಬಾಳ ದಾರಿಯಲಿ
ನೋವ ಮರೆತು ಸುಖಿಸುವವನೆ
ನಿಜ ಪಯಣಿಗನಯ್ಯ ..
   
             -ಪ್ರಕಾಶ್ ಎನ್ ಜಿಂಗಾಡೆ

ನನ್ನಿಂದಲೇ..


ನನ್ನದೇ ನಡೆಯಬೇಕು
ನನ್ನವರೇ ಜೊತೆಗಿರಬೇಕು
ನನ್ನ ಮಾತೇ ಕೇಳಬೇಕು
ನನ್ನದೇ ಸಾಮ್ರಾಜ್ಯ
ನನ್ನದೇ ತೀರ್ಪು
ನನ್ನ ಮಾತೇ ಅಂತಿಮ ..

ವಿಮರ್ಶೆ ವಿಲ್ಲದ ನಡತೆ
ಬೇಡವಾದ ಸಲಹೆ
ಸರಿ ತಪ್ಪುಗಳ ಅರಿವಿಲ್ಲದ
ಬುದ್ಧಿಗೇಡಿ ಮನಸುಗಳು
ಸುತ್ತಲೂ ಸಿಗುವರು
ಸೊಕ್ಕಿ ನಗುವರು..

ತಪ್ಪಿನ ಸತ್ವ ಅರಿತಾಗ
ಚಟ್ಟಕೆ ಹತ್ತಿರ ವಾಗಿಹರು
ಏನ ಸಾದಿಸಿಹರು
ಗಳಿಸಿದ ಪಾಪಂ
ನಿಂದೆಯ ರೂಪಿಂದ
ಹಿಂದೆಯೇ ಪೋಗುತಿರೆ..

         -ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ -6

ಗುಡಿ ಚರ್ಚು ಮಸೀದಿಗಳ ಅಂಗಳವ ತೊಳೆಯಿರಯ್ಯ
ಪುಣ್ಯಕ್ಷೇತ್ರದಲಿಯ ಹೊಲಸು ನಿಲ್ಲಿಸಿರಯ್ಯ
ಕಾನನ ನದಿ ಪರ್ವತಗಳ ಹೊಲಸು ಮಾಡಿದುದೇಕಯ್ಯ
ಸಕಲ ಚರಾಚರಗಳಂ ಮಲಿನ ಮಾಡಿದುದನೇ
ಮನ್ನಿಸಲು ಶಂಕರನಾತ್ಮ ಜರಿಯುತಿರಲು
ಮನಸನೂ ಸಹ ಹೊಲಸೆಬ್ಬಿನಿಕೊಂಡು
ಪಾಪಗಳಂ ಮೆರೆಯುತಿರು ಮಾನವಂಗೆ
ಇನ್ನೆಲ್ಲಿಯ ಕ್ಷಮೆಯಿರುವುದಯ್ಯ
ಶಂಕರನಾತ್ಮಕೆ ಇದು ಘಾಸಿಯೆಂದು ತಿಳಿಯಿರಯ್ಯ..

         -ಪ್ರಕಾಶ್ ಎನ್ ಜಿಂಗಾಡೆ

ಗರಡಿ

ಆಹಾರಂ ಪಚನಗೊಳಿಸಿದೊಡೇನು ಫಲ
ದೇಹವಂ ಹುರಿಗೊಳಿಸಿದೊಡೆ
ಆತ್ಮವಿಶ್ವಾಸಂ ಆರೋಗ್ಯಂ ವೃದ್ದಿಸುವುದಯ್ಯ..

ಬರಿಯ ಕಾಯಕವ ಸಲ್ಲಿಸಿದೊಡೇನು ಫಲ
ಗರಡಿ ತಾಲೀಮಿನ ಕಸರತ್ತು ಇಲ್ಲದೊಡೆ
ದೇಹವು ಮಾತನೆಂತು ಕೇಳುವುದಯ್ಯ..

ವೈದ್ಯರಿಂಗೆ ಸಂಪತ್ತು ಸುರಿಸಿದೊಡೆ
ಆಯಸ್ಸು ಚಿಗುರೊಡೆದು ಬರವುದೇನಯ್ಯ
ಗರಡಿ ಶಾಲೆಯೇ ನಿಜ ಚಿಕಿತ್ಸಾಲಯವಯ್ಯ.. 

ಯೋಗಂ ಹೃದ್ಯಂ.. ಅನುಭೋಗಂ ವದ್ಯವಯ್ಯ
ತಾಲೀಮು ತಮ್ಯಂ..  ಆಲಸ್ಯಂ ರೋಗವಯ್ಯ
ದೇಹಂ ದಂಡಂ ಆದೊಡೆ ಆರೋಗ್ಯ ಹಿತವಪ್ಪುದಯ್ಯ..

ಬದುಕಲಿ ಶಿಸ್ತು ಪಾಲನೆ ಇಲ್ಲವಾದೊಡೆ
ದೇವ ಕೊಟ್ಟ ಆಯಸ್ಸು ಇಲ್ಲವಯ್ಯ
ಈ ನಿಜ ಚಿತ್ರಂ ಅರಿತು ಬಾಳುವದ ಕಲಿಯಿರಯ್ಯ..

       -ಪ್ರಕಾಶ್ ಎನ್ ಜಿಂಗಾಡೆ

ಹಳ್ಳಿ ಹಾದಿ

ಹಳ್ಳಿಯ ಹಾದಿಯಿದು
ಒಲವು ಸಿಗುವ ಸವಿ ನೆಲೆಯಿದು
ಬಡವರಿರುವ ಸಿರಿವಂತ ತಾಣವಿದು
ಪ್ರೀತಿಗೆ ನೀತಿಗೆ ಏಕತೆಗೆ
ಆಲಯವಿದು.. ಪ್ರೇಮಾಲಯವಿದು

ಸ್ನೇಹ ಸಂಬಂಧಗಳ ಮಾರಾಟವಿಲ್ಲ
ಸಂಸ್ಕೃತಿ ಮೌಲ್ಯಗಳ ನಾಶವಿಲ್ಲ
ಹಣಕೆ ಬಾಯ್ಬಿಟ್ಟ ಹೆಣಗಳಿಲ್ಲ
ಬದುಕಿನು ಕಲಿಸುವ ವಿದ್ಯಾಲಯವಿದು
ಬನ್ನಿರೈ ಒಮ್ಮೆ ನೆಲಸಿ ನೋಡಿರೈ

ಯಾರಿಹರು ಒಮ್ಮೆ ತೋರಿಸಿಬಿಡಿ
ಹಳ್ಳಿಯ ಹಿನ್ನಲೆಯಿರದ ಸಾಧಕರು
ದೇಶವನೇ ಆಳಿ ತೋರಿಹರು
ಬೆವರಿನ ಹನಿಯನು ಭೂಮಿಗೆ ಬೆರಸಿ
ಮಣ್ಣಿನ ಮಕ್ಕಳೇ ಆಗಿಹರು..

ಪ್ರಕಾಶ್ ಎನ್ ಜಿಂಗಾಡೆ

ಮನಸಾಗಬಹುದು..

ಮನ ಮನಗಳ ಒಲವಿನಲಿ
ಮನಸಾಗಿ ಮನಸು ತೋರಿ
ಮನಸಿನವಳು ಮನಸು ಮೂಡಿಸಿದರೆ
ಮನಸಾಗಬಹುದೇನೋ..

ಮನಸಿಲ್ಲದ ಮನಸಿನಲಿ
ಮನಸು ಮೂಡಿಸಿದರೆ ಮನಸಾಗದು
ಮನಸ್ಸೆಂಬುದು ಮನ ಮನಗಳ ಮಿಡಿತ
ಮನ ಮನಗಳ ಸೆಳೆತವೇನೋ..

   -ಪ್ರಕಾಶ್ ಎನ್ ಜಿಂಗಾಡೆ

ಅರಿವು

ಅರಿಯೋ ಜಗದರಿವ
ಮನ ಬೆಳಗಿಸೋ ಅರಿವ
ಆರಿಸೋ ನೀಚ ಮನಗಳಲಿ
ಅರಿವಿನ ದೀಪ ಬೆಳಗಿಸೋ
ಹೇ ದೇವ...

ಬೆಳಕಿನ ಜಗದಿರುವಿನಲಿ
ಅಂಧಕಾರದ ಅರಿ ತೊಲಗಲಿ
ನೇಸರನ ಉದಯದಲಿ
ಬದುಕು ಬೆಳಕಾಗಿರಲಿ
ಹೇ ದೇವ ...

     -ಪ್ರಕಾಶ್ ಎನ್ ಜಿಂಗಾಡೆ

ಮತ್ತೊಂದು ಸ್ವಾತಂತ್ರ್ಯ

ಮುಗ್ಧ ಜನರ ಮನದ ಅಳಲನು
ಅರಿಯದ ನಾಯಕರು
ಸುತ್ತಲೂ ಸೋಗಿನಲಿರುವಾಗ 
ಗಾಂಧಿಯೇ ಸಪ್ಪಗಾಗಿ
ಶಿರ ಭಾಗಿಸಿ ಕುಳಿತಿಹನು..

ಸ್ವಾತಂತ್ರವೋ ಸ್ವೇಚ್ಛೆಯೋ
ಶಾಂತಿ ಅಹಿಂಸೆಯ ಕಪಟವೋ
ಸತ್ಯಾದರ್ಶವನು ಪಾಳು ಬಾವಿಗೆಸೆದ
ನಾಯಕರ ಮೋಡಿಯ ನೋಡಿ
ಮನ ನೊಂದು ಕುಳಿತಿಹನು..

ಪರಂಗಿಗಳ ಪಿರಂಗಿಗೆ ಎದೆ ಕೊಟ್ಚ
ಪರರ ದಾಸ್ಯಕೆ ಪ್ರಾಣವ ತೆತ್ತ
ವೀರರು ಮತ್ತೆ ಬೇಕಿದೆ
ಮತ್ತೊಂದು ಸ್ವಾತಂತ್ರ್ಯಕೆ
ಬನ್ನಿರಂದಿಹನು ಪಿತಾಮಹನು..

           -ಪ್ರಕಾಶ್ ಎನ್ ಜಿಂಗಾಡೆ

ಹೆಣ್ಣು..

ಹೆಣ್ಣು…
ಪ್ರಕೃತಿಯ ಅದ್ಭುತ ಸೃಷ್ಟಿ
ಹೆಣ್ಣೆಂಬುದು ಬರಿಯ ಶಬ್ದವಲ್ಲ
ಆಕೃತಿಯಲ್ಲ, ಬರಿಯ ಕಲ್ಪನೆಯೂ ಅಲ್ಲ
ಜಗದ ಶಕ್ತಿಯವಳು
ಕ್ಷಮಯಾ ಧರಿತ್ರಿಯವಳು..

ಹೆಣ್ಣು….
ಬರಿಯ ಜೀವವಲ್ಲ
ಅವಳು ಭೂಮಿಯಂತೆ ಪವಿತ್ರಳು
ದೇವರಷ್ಟೇ ಪೂಜ್ಯಳು
ಜಗದ ಎಲ್ಲಾ ಪಾತ್ರಗಳಲಿ
ತಾನೇ ನೋವನುಂಡು
ಪರರ ಸುಖಕಾಗಿ ನಿಂತಿಹಳು..

ಹೆಣ್ಣು….
ಬರಿಯ ಅಬಲೆಯಲ್ಲ
ಸಿಡಿಲಬ್ಬರದ ಶಕ್ತಿಯವಳು
ದೇಶದ ಚುಕ್ಕಾಣಿ ಹಿಡಿದು ನಿಂತಿಹಳು
ಬಂದೂಕನು ಹಿಡಿದು
ಯುದ್ಧ ವಿಮಾನದಲೂ
ಯಶಸ್ವಿ ಸೈನಿಕಳಾಗಿ ನಿಂತಿಹಳು..

ಹೆಣ್ಣು….
ಜಗದ ಸುಂದರ ಸೃಷ್ಟಿ
ಜಗದ ಮೂಲ ಶಕ್ತಿ ನೀನು
ಜಗಕೆ ಮೂಲ ಪ್ರೇರಕಿಯೂ ನೀನು
ನಗು ಮೊಗದಲೇ ಎಲ್ಲವನೂ
ಸಾಧಿಸುವ ಯಶಸ್ವಿ ಮಹಿಳೆಯೂ ನೀನು ...

ಹೆಣ್ಣು
ಸಕಲ ರಂಗದ ಸಾಧಕಿ
ನಿನಗಿದೋ ಸಾವಿರ ವಂದನೆಗಳು
ಹೃದಯ ಪೂರ್ವಕ ಅಭಿನಂದನೆಗಳು..
ಕೋಟಿ ನಮನವು ನಿಮಗೆ
ಮಹಿಳಾ ದಿನಾಚರಣೆಯ
ಶುಭ ಹಾರೈಕೆಗಳು ನಿಮಗೆ...

          - ಪ್ರಕಾಶ್ ಎನ್ ಜಿಂಗಾಡೆ

ಅನಾಗರೀಕತೆಯತ್ತ...

ಎಲ್ಲೋ ಒಂದು ಊರು
ಕಣಿವೆ ಬೆಟ್ಟಗಳ ಸೀಳಿ
ಅಲ್ಲಲ್ಲಿ.. ಮತ್ತೆ ಸ್ವಲ್ಪ ದೂರದಲ್ಲಿ
ಬೆಳಸಿದವರಾರೋ, ನೆಲೆಸಿದವರಾರೋ
ಎಂದೋ ಹೋಗೋ ಪುಟ್ಟಿದ ಆ ಗುಂಪಿಗೆ
ನಾಗರೀಕತೆಯ ಎರಕ ಹೊಯ್ದವರಾರೋ
ಭಾಷೆಯ ಸೆಳೆತ ತಂದವರಾರೋ
ಅಲ್ಲೇ ಕೃಷಿ..ಮತ್ತೆಲ್ಲೋ ಮಣ್ಣ ಅಗೆತ
ಅಲ್ಲಲ್ಲಿ ಅವರದೇ ಪರಪಂಚ
ಯಾರೆಂದರೋ ಅವರಿಗೆ
ಕಣಿವೆಯಲಿ ಬೆಟ್ಟದಲಿ ತಟದಲಿ
ಅಲ್ಲಲ್ಲಿ ನೆಲಸಿ ಬಾಳಿರೆಂದು
ಅಲ್ಲಿನದೆ ನಿಸರ್ಗ ಸಂಪತ್ತು ನಿಮ್ಮದೆಂದು
ಹೆಂಗೋ ಏನೋ ಊರ ರೂಪ ಪಡೆದವು
ಕೊಂಡಿ ಬೆಸೆದವು, ಪ್ರೀತಿ ಹುಟ್ಟಿತು...

ಊರೂರು ಪಟ್ಟಣ ನಗರಗಳು
ಗುಂಪುಗಳು ತಮ್ಮವರು ಪರರೆಂದು
ಧರ್ಮ ಜಾತಿಯೂ ಬೆಳೆಯಿತು
ಪಸರಿಸಿತು ಪಂಗಡಿಸಿತು
ಈಗೋ ಊರೂ ಸಹ ತುಸು ಹತ್ತಿರ
ಕೈ ಗೆಟುಕುವಷ್ಟೇ ದೂರ
ವಿಷ ಬೀಜವ ಬಿತ್ತಲು
ಗಲಬೆಗಳೂ ಅಲ್ಲಲ್ಲಿ..
ನಾಯ ರೀತಿಯ ಕಚ್ಚಾಟಗಳು
ಪ್ರೀತಿಯಾಗಿ ಬೆಸೆದಿಹ ಕೊಂಡಿಗೆ
ಹುಳಿಯನಿಂಡಿದವರಾರೋ
ಧರ್ಮ ಜಾತಿಗಳ ಬೇಲಿ ಹಾಕಿ
ಮತ್ತೆ ಅನಾಗರೀಕತೆಯತ್ತ
ತಳ್ಳುತಿರುವರಾರೋ ....
    
       -ಪ್ರಕಾಶ್ ಎನ್ ಜಿಂಗಾಡೆ.