Thursday 15 March 2018

ಭಿಕ್ಷುವಿನ ಪ್ರೇಮಾಲಾಪ

ಭಿಕ್ಷುವಿನ ಪ್ರೇಮಾಲಾಪ..

ಮೋರಿಯಂಚಿನಲಿ ಮಲಗಿದ
ತಿರುಕಿ ಕೊಳಾಕಾಂಗಿಗೆ
ಚಿಂದಿ ತೇಪೆ ಧಿರಿಸಿನ
ಬಿಕ್ಷುಕನ ಪ್ರೇಮ ಆಲಾಪನೆಯಿದು....

ಪ್ರಿಯೆ ...
ನಿನ್ನ ಮುಂಗುರುಳು
ಗಂಟು ಬಿದ್ದ ನೂಡಲ್ಸ್ ನಂತೆ
ಕಿವಿಗಳು
ಮಡಚಿದ ಮೋ..ಮೋ..ಗಳಂತೆ

ನಾಸಿಕದ ಸೊಗಸು
ಚಂಪಾಕಲಿಯ ಸೊಬಗು
ಚಳಿಗಾಲದ ನೆಗಡಿಯಂತೆ
ತೊಟ್ಟಿಕ್ಕವ ರಸಧಾರೆ ......

ಕಣ್ಣು ಗುಡ್ಡೆಗಳು
ಜಾಮೂನಿನ ಉಂಡೆಗಳು
ಸುತ್ತಲೂ ಪ್ರೀತಿಯಿಂದ
ಮುತ್ತಿಕ್ಕಿದ ನೊಣಗಳು.....

ಗಲ್ಲಗಳು
ಸೀದಿಟ್ಟ ರೊಟ್ಟಿಯ ಕರುಕಲು
ಮುತ್ತಿಟ್ಟರೆ
ತುಟಿಗೆ ಕಪ್ಪಾದ ರಂಗು...

ಹೊಗಳಿಕೆಯ ಭಾವ ಬೇರೆ
ಜೋಗಿ ಪಡೆದದ್ದು ಜೋಗಿಗೆ
ಅವರ ಉಡುಗೆಗೆ ರೂಪಕ್ಕೆ
ವಾಕರಿಸುವ ನಾವುಗಳೆಷ್ಟು ಶುಭ್ರರು....?

ಕೊಳಕು ಮನಸಿನ ಬಣ್ಣದ ಮಾತಿಗಿಂತ
ಕೊಳಕು ರೂಪ ಹಿತವಾಗಿಹುದು...
ಜಗದ ಕಠೋರ ನಿಂದನೆ ಪಡೆದ
ಅವರ ಮೌನ ಬೇಡಿಕೆಯೊಂದೇ
ನಾವೂ ಮನುಷ್ಯರು- ಎಂದು

                   - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment