Friday, 17 March 2017

ಜ್ಯೋತಿಷ್ಯ (ಕವನ)

ಜ್ಯೋತಿಷ್ಯ 

ಮಳೆ ಸುರಿಯದೇ ನಿಂತಿತೇ
ಭೂಮಿ ತಿರುಗದೇ ಇರುವುದೇ
ಗ್ರಹ ತಾರೆ ಶಶಿಯ ಚಲನೆಯು ನಿಲುವುದೇ
ರಾಹು ಗುಳಿಕ ಯಮಗಂಡ ಕಾಲ ಎಂದೆನುತ..
ಮಾಡುವ ಕಾರ್ಯವ ಬದಿಗೆ ಸರಿಸಿ
ನಮ್ಮಯ ಮಂಕು ಮತ್ತೊಂದಕೆ ಹೊರಿಸಿ
ಜ್ಯೋತಿಷ್ಯ ರೇಖೆಯ ಚಾದರ ಹೊದಿಸಿ
ಸುಮ್ಮನೆ ನೆಪದಿ ಕಾಲವ ಕಳೆಯುತ...
ನುಗ್ಗಿರಿ ಮುಂದಕೆ ಜ್ಯೋತಿಷ್ಯವ ಮರೆಯುತ
ಹಾಕಿರಿ ಚಪ್ಪಾಳೆ ಜೀವನೋತ್ಸಾಹ ತುಂಬುತ
ರೇಖೆ ನಾಡಿ ನಕ್ಷತ್ರ ಬದಿಗೆ ಸರಿಸುತ
ತಡೆಯದೆ ನುಗ್ಗಿ ಜೀವನವೇ ನನ್ನದೆನುತ...
               -ಪ್ರಕಾಶ್ ಎನ್ ಜಿಂಗಾಡೆ.

ಕಲಹಗಳ ಕಾಲ (ಕವನ)

ಕಲಹಗಳ ಕಾಲ

ಕಲಹಗಳ ಕಾಲವಿದಯ್ಯ
ಊರು ಕೇರಿ ಜಾತಿ ಧರ್ಮದ ನಡುವೆ
ತಿಕ್ಕಾಟ ಸೆಣಸಾಟ ಯುದ್ದಗಳ ಬಿಡದೆ
ಸುಖ ಶಾಂತಿ ನೆಮ್ಮದಿಯನು ಕಾಣದೆ
ನಿತ್ಯದಿ ಗೊಂದಲ ಮೆರೆಯುವರಯ್ಯ.....
ನಾನು ನನ್ನದೆಂಬ ದೊಂಬರಾಟ
ಬಿಟ್ಟರೆ ನಾನೇ ದೇವರೆಂಬ ಹುಂಬನಾಟ
ಅಹಂಗೆ ಕಿರಿ ಹಿರಿಯರೂ ಲೆಕ್ಕವಿಲ್ಲ
ಮತಿಹೀನರ ನುಡಿ ನಡೆಗಳೂ ಸಭ್ಯವಿಲ್ಲ
ನಿತ್ಯದ ಬದುಕಲಿ ಅಸತ್ಯಕೆ ಜಯಹಾಕುವರಯ್ಯ..
ಬುದ್ಧ ಬಸವ ಬಸವಳಿದು ಹೋದರು
ಏಸು ಪೈಗಂಬರರು ಏಸೊಂದು ಹೇಳಿದರು
ಗುರು ನಾನಕ ಕಬೀರರ ಕಗ್ಗಗಳು
ಅನುಸರಿಸದಾದರು ನಮ್ಮಯ ಜನಗಳು
ಸನ್ನಡತೆಯ ಹಾದಿಯ ಮರೆತೇ ಹೋದರಯ್ಯ...
                 - ಪ್ರಕಾಶ್ ಎನ್ ಜಿಂಗಾಡೆ

ನಮ್ಮ ನೇತಾರರು (ಕವನ)

ನಮ್ಮ ನೇತಾರರು
ನಿದ್ದೆಯ ಗುಂಗಿನ ಮಂಪರು ಜನರು
ತಲೆಯಲಿ ಹಣವನು ಜಪಿಸುವರು
ವಿದ್ಯೆಯ ತೊರೆದು ಲದ್ದಿಯನೆತ್ತಿ 
ಸುಳ್ಳು ಮಾತಲಿ ದೇಶವ ಸುತ್ತಿ
ಅಧಿಕಾರವ ಹಿಡಿದು ಕುಳಿತಿಹರು...

ಬ್ರಿಟಿಷರ ಹಾಗೆ ಸಂಪತ್ತನು ಸಾಗಿಸಿ
ದೇಶದ ಹಣವನು ಗುಡಿಸಿ ಸಾರಿಸಿ
ಕಾಳ ಧನವನು ಸ್ವಿಸ್ ಲಿ ಇಡಿಸಿ
ಸಾಧಕರಂತೆ ಮಂತ್ರವ ಜಪಿಸುತ
ಸೇವೆಯ ಮುಖವಾಡವ ಧರಿಸಿಹರು
ಜನರ ಹಣದಲಿ ಫಾರಿನ್ ಸುತ್ತಿ
ಮಂಕು ಬುದ್ದಿಲಿ ಎಲ್ಲವೂ ನೋಡಿ
ಅಭಿವೃದ್ಧಿ ಮಂತ್ರದ ಭಾಷಣ ಸುತ್ತಿ
ಅನುದಾನದ ಅಡಿಯಲಿ ಎಲ್ಲವೂ ಬಾಚಿ
ಬಕಾಸುರರಾಗಿ ಮೆರೆದಿಹರು...
ರೌಡಿ ಪೋಕರಿ ಬಳಗವ ಕಟ್ಟಿ
ಕೇಸು ಹಗರಣ ನಿಂದೆಯ ಮೆಟ್ಟಿ
ಜೈಲು ಊಟದ ರುಚಿಯನು ನೋಡಿ
ಆಸ್ತಿ ಪಾಸ್ತಿ ರಹಸ್ಯದಿ ಮಾಡಿ
ಸಭೆಯಲಿ ಮೋಡಿಯ ಮಾಡಿಹರು...
ಕಾನೂನು ಕಾಯ್ದೆಯ ಸ್ವಂತದಿ ಬಳಸಿ
ಸ್ವ ಹಿತ ಸಂವಿದಾನದ ಫರ್ಮಾನು ಹೊರಡಿಸಿ
ಆರೋಪ ಮುಕ್ತ ಶಾಸನ ಕೆತ್ತಿ
ಪ್ರಜೆಗಳ ಮುಸುಡಿಗೆ ಬಡತನ ಮೆತ್ತಿ
ಆದರ್ಶ ರಾಜಕಾರಣಿಗಳೆನಿಸಿಹರು...
             ಪ್ರಕಾಶ್ ಎನ್ ಜಿಂಗಾಡೆ

Monday, 20 February 2017

ದೆವ್ವದ ರಾತ್ರಿ. ಭಾಗ-2

ದೆವ್ವ, ಪಿಶಾಚಿ, ಭೂತಗಳ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇದ್ದ ಹೆದರಿಕೆಯೇ ಮೋಹಿನಿ ದೆವ್ವದ ರೂಪದಲ್ಲಿ ಕಂಡಿರಬೇಕು. ಆದರೆ ಸ್ಪಷ್ಟವಾಗಿ ದೆವ್ವದಂತೆಯೇ ಕಂಡಿದ್ದು ಇದು ನನ್ನ ಮೊದಲ ಅನುಭವ. ಈ ಹಿಂದೆ ನಾನು ದೆವ್ವಕ್ಕೆ ಹೆದರಿದ್ದೆನಾದರೂ ಅದು ಪ್ರಕೃತಿಯ ಮಧ್ಯೆ ನಡೆಯುವಂತಹ ಅಗೋಚರ ಶಬ್ಧಗಳಿಗೋ... ಅಥವಾ ತಟಸ್ಥ ಅವಸ್ಥೆಯಲ್ಲಿರು ನನ್ನ ಮನಸ್ಸಿಗೆ ಇದ್ದಕ್ಕಿಂತಂದೆ ಬಂದು ಎರಗಿದ ಒಂದು ಯಾವುದೋ ಬೌತಿಕ ಕಾರ್ಯಚರಣೆಗಳಿಗೋ...ನಾನು ಹೆದರಿಕೊಂಡಿದ್ದುಂಟು. ಆದರೆ ಮೊನ್ನೆ ಸಿನಿಮಾ ನೋಡಿಕೊಂಡು ಬರುವಾಗ ನಾನು ಕಂಡ ದೆವ್ವದ ರೂಪವೇ ಬೇರೆ. ಅದು ಸ್ಪಷ್ಟವಾದ ದೆವ್ವದ ರೂಪ.....!!!!
ಈ ಹಿಂದೆ ಕಂಡಿರದೇ ಇರುವಂತಹ ಭಯಾನಕ ರೂಪ....!!!!
ಅದೂ ನಂಬಲಾರದಂತಹ ಘಟನೆ...!!
ಆದರೂ ನನ್ನ ಗೆಳೆಯ ತಿಪ್ಪ ಅಂದಿನ ನನ್ನ ಸ್ಥಿತಿಯನ್ನು ಪ್ರತ್ಯೆಕ್ಷವಾಗಿ ನೋಡಿದ್ದರಿಂದ ನಾನು ಗೆಳೆಯನ ಮಾತನ್ನು ನಂಬಲೇಬೇಕಾಯಿತು..
ಒಂದೆರಡು ದಿನಗಳಾದ ನಂತರ ಜ್ವರ ಕಡಿಮೆಯಾಗುತ್ತಾ ಬಂತು. ಯಾಕೋ ಮನಸ್ಸಿನ ತುಂಬೆಲ್ಲಾ ಮೋಹಿನಿ ಆವರಿಸಿಕೊಂಡಿದ್ದಳು. ದೆವ್ವದ ರೂಪದಲ್ಲಿರುವ ಭಯಾನಕ ರೂಪದ ಮೋಹಿನಿ ಅಲ್ಲ.. ನಾನು ಪ್ರೀತಿಸುತ್ತಿರುವ ಸುಂದರ ರೂಪದ ಮೋಹಿನಿ. ಕೆಲಸ ಸಿಕ್ಕ ಮೇಲೆ ಮೋಹಿನಿಯನ್ನೇ ಮದುವೆಯಾಗುತ್ತೇನೆಂದು ಅಮ್ಮನಿಗೆ ಒಪ್ಪಿಸಿದ್ದೆ. ಮೋಹಿನಿ ತಂದೆಯವರು ಸಹ ನೋಡೋಣ ಎಂದು ಹೇಳಿದ್ದರು. ಹಾಗಾಗಿ ಮೋಹಿನಿಗೆ ಕೆಲಸ ನೋಡುವ ಜವಬ್ದಾರಿ ನನ್ನ ಜವಬ್ದಾರಿಯೂ ಆಗಿತ್ತು. ಹೇಗಾದರೂ ಮಾಡಿ ಮೋಹಿನಿಗೆ ಬೆಂಗಳೂರಿನಲ್ಲಿಯೇ ಕೆಲಸ ಹುಡುಕಿದರೆ ನನಗೂ ಮುಂದೆ ಸಹಾಯವಾಗುತ್ತೆ. ಮುಂದೆ ಮದುವೆಯಾದರೂ ಒಂದೇ ಕಡೆ ಇರಬಹುದು. ಹೀಗೆಲ್ಲಾ ಲೆಕ್ಕಚಾರ ಹಾಕಿಕೊಂಡೆ. ಮೋಹಿನಿಗೆ ಚನ್ನೈನಲ್ಲಿ ಕೆಲಸ ಸಿಕ್ಕರೂ ನಾನೇ ಬೇಡ ಎಂದು ಹೇಳಿದ್ದೆ. ಅವರಪ್ಪನೂ ಸಹ ಒಬ್ಬಳೇ ಮಗಳು ದೂರದ ಚೆನ್ನೈಗೆ ಕಳುಹಿಸಲಾರೆ ಬೇಕಾದರೆ ಬೆಂಗಳೂರಿಗೆ ಹೋಗಲಿ. ಎಂದು ಹೇಳಿದ್ದರು...
ಅಂದು ಕಾಲೇಜಿನಲ್ಲಿ ಕೊನೆಯ ದಿನ. ಮೋಹಿನಿ ಪದ್ಮಿ ಸುಮ ನಾನು, ಶಂಕ್ರ, ರುದ್ರ, ಎಲ್ಲಾ ಸ್ವಲ್ಪ ಹೊತ್ತು ಕುಳಿತು ಹರಟೆ ಹೊಡೆದೆವು. ಕಾಲೇಜಿನಿಂದ ಮಾರ್ಕ್ಸ ಕಾರ್ಡ್ ಪಡೆದುಕೊಳ್ಳಲು ಅಂದೇ ಎಲ್ಲಾ ವಿದ್ಯಾರ್ಥಿಗಳನ್ನು ಕರೆಯಲಾಗಿತ್ತು. ಆ ದಿನ ಮೋಹಿನಿ ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನಮ್ಮ ಮದುವೆಗೆ ಹಿರಿಯರು ಶೇಕಡ ಎಂಬತ್ತರಷ್ಟು ಅದಿಕೃತ ಒಪ್ಪಿಗೆ ನೀಡಿದ್ದರಿಂದಮೋಹಿನಿ ನನ್ನ ಜೊತೆ ಸಲಿಗೆಯಿಂದಲೇ ಇದ್ದಳು. ಕಾಲೇಜು ಮುಗಿಸಿಕೊಂಡು ಹೊರಡುವಾಗಲೂ ನನ್ನ ಕೈ ಹಿಡಿದುಕೊಂಡೇ ಹೊರಬಂದಳು. ಅವಳ ಹಿತಕರವಾದ ಸ್ಪರ್ಶ ಮನಸಿಗೆ ಮುದ ನೀಡಿತ್ತು. ಗೆಳೆಯರೊಂದಿಗೆ ಮೋಜು ಮಸ್ತಿ ತಮಾಷೆ ಎಲ್ಲಾ ಮುಗಿಯಿತು. ಆದರೆ ಮೋಹಿನಿಯೊಂದಿಗಿನ ಹಿತಕರವಾದ ನೆನಪುಗಳಿಂದ ಮನಸ್ಸು ತುಂಬಿ ಹೋಗಿತ್ತು. ಮತ್ತೆ ಸಿಗೋಣ ಅಂತ ಹೇಳಿ ಮನೆಯ ಕಡೆ ಹೊರಟೆವು....
ನಾನು ಬೈಕ್ ಹತ್ತಿ ಮನೆಯ ಕಡೆ ಹೊರಟೆ. ಮನಸ್ಸಿನಲ್ಲೆಲ್ಲಾ ಮೋಹಿನಿಯೇ ತುಂಬಿಕೊಂಡಿದ್ದಳು. ನಮ್ಮೂರಿನ ದಾರಿಯ ಮಧ್ಯೆ ಕಲ್ಲನಕೇರಿ ದಿಬ್ಬ ಅನ್ನೋ ಒಂದು ಸ್ಥಳ ಇದೆ. ಸುತ್ತಲೂ ಸ್ಮಶಾನವಿರುವ ಸ್ಥಳ ಅದು. ಅಲ್ಲಿಗೆ ಬರುವಷ್ಟರಲ್ಲಿ ನನ್ನ ಬೈಕ್ ಕೆಟ್ಟು ನಿಂತಿತು. ನಾಲ್ಕೈದು ಸಲ ಕಿಕ್ ಹೊಡೆದರೂ ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಮದ್ಯಾಹ್ನದ ರಣ ರಣ ಬಿಸಿಲು ತೀವ್ರವಾಗಿತ್ತು. ಯಾರಾದರೂ ಸಹಾಯಕ್ಕೆ ಬರುವರೇ ಎಂದು ನೋಡಿದೆ  ದಾರಿಯಲ್ಲಿ ಜನರ ಓಡಾಟವೂ ಕಡಿಮೆ ಇತ್ತು. ಬೈಕ್ ಕೆಟ್ಟ ಸ್ಥಳದ ಪಕ್ಕದಲ್ಲಿ ಸ್ಮಶಾನ ದೃಶ್ಯ ಅಸಹಜವಾಗಿತ್ತು. ಸ್ಮಶಾನ ಕಡೆಯಿಂದ ಏನೋ ಕೀರಲು ಧ್ವನಿ ಕೇಳಿಸಿದಂತಾಯಿತು. ಗಾಳಿ ಜೋರಾಗಿ ಎದ್ದಿತು. ತಕ್ಷಣ ಮೊನ್ನೆ ಮೊನ್ನೆ ಸೆಕೆಂಡ್ ಷೋ ಪಿಕ್ಚರ್ ನೋಡಿ ಮೋಹಿನಿ ಅಂತ ಹೆದರಿಕೊಂಡಿದ್ದು ಜ್ಞಾಪಕಕ್ಕೆ ಬಂದಿತು. ಇನ್ನು ನಾನು ಹೆದರಲೇ ಬಾರದೆಂದು ಅಂದೇ ನಿರ್ಧರಿಸಿಕೊಂಡಿದ್ದೆ...
ಧೈರ್ಯದಿಂದ ಮತ್ತೆ ಬೈಕನ್ನು ಹತ್ತಿ ಒಂದೆರಡು ಸಲ ಕಿಕ್ ಹೊಡೆದೆ. ಆದರೆ ಏನೂ ಉಪಯೋಗವಾಗಲಿಲ್ಲ.ಬೈಕಿಂದ ಇಳಿದು ಪ್ಲಗ್ ನ್ನು ಪರೀಕ್ಷಿಸಲು ವಯರನ್ನು ಕಿತ್ತೆ. ನೋಡು ನೋಡುತ್ತಿದ್ದಂತೆ ಸ್ಮಶಾನದ ಕಡೆಯಿಂದ ಜೋರಾಗಿ ಗಾಳಿ ಬೀಸಲಾರಂಭಿಸಿತು. ಧೂಳು, ಹುಲ್ಲು, ಮರದ ಎಲೆಗಳೆಲ್ಲಾ ಗಾಳಿಯೊಂದಿಗೆ ರಭಸವಾಗಿ ಬಂದು ನನ್ನ ಮುಖಕ್ಕೆ ಬಡಿಯಲಾರಂಭಿಸಿತು. ಬಿರುಗಾಳಿ ಬಂದ ಕಡೆ ದೃಷ್ಠಿ ಹಾಯಿಸಿದೆ. ಬಿಳಿಯಾದ  ಸೀರೆಯೊಂದು ಗಾಳಿಯೊಂದಿಗೆ ಅಲೆಯಂತೆ ಹಾರಾಡುತ್ತಿತ್ತು. ನನಗೆ ಆಶ್ಚರ್ಯವಾಯಿತು. ನನ್ನ ದೃಷ್ಠಿಯನ್ನು ಸ್ಮಶಾನದಿಂದ ಆಚೆಗೆ ಕದಲಿಸಲಿಲ್ಲ.  ಸಮಾದಿಯೊಂದರ ಮೇಲೆ ಯಾರೋ ಬಿಳಿ ಸೀರೆಯುಟ್ಟ ಒಬ್ಬ ಹೆಂಗಸು ಕುಳಿತ್ತಿದ್ದಳು. ಕೂದಲು ಉದ್ದವಾಗಿದ್ದು ಮುಖ ಮುಚ್ಚಿಕೊಂಡಿತ್ತು. ಉದ್ದವಾದ ಕೈಯ ಉಗುರಿನ ಬೆರಳುಗಳು ರಕ್ತಸಿಕ್ತವಾಗಿ ಗೋಚರಿಸಿತು. ಮತ್ತೊಮ್ಮೆ ಜೋರಾಗಿ ಗಾಳಿ ಬೀಸಿತು. ಆ ಹೆಂಗಸಿನ ಕೂದಲು ಗಾಳಿಯೊಂದಿ ಹಾರಾಡಿತು. ಮುಚ್ಚಿದ್ದ ಮುಖ ಗೋಚರಿಸಿತು...
ಅರೆ....!!! ಮೋಹಿನಿ....!!!
ಅವಳೆ ...ನಾನು ಪ್ರೀತಿಸುತ್ತಿರುವ ಮೋಹಿನಿಯ ಮುಖ...!!
ನನ್ನ ಕಣ್ಣುಗಳು ಆ ರೂಪವನ್ನು ನಂಬದಾದವು...
ಮತ್ತೊಮ್ಮೆ ಅವಳ ಮುಖ ನೋಡಿದೆ... ಡೌಟೇ ಇಲ್ಲ ಅದೇ ಮುಖ. ಆದರೆ ದೆವ್ವದ ಭಯಾನಕ ರೂಪದೊಂದಿಗೆ ಇತ್ತು. ಕಣ್ಣುಗಳು ಕೆಂಪಾಗಿದ್ದವು. ಮುಖದ ಕೆಲವು ಕಡೆ ರಕ್ತದ ಕಲೆಗಳಿದ್ದವು. ಕೋರೆ ಹಲ್ಲುಗಳಂತೆ ಕಾಣುವ ಬಿಳುಪಾದ ಹಲ್ಲುಗಳು ತುಟಿಯಿಂದ ಆಚೆ ಬಂದಿತ್ತು. ಕೈ ಬೆರಳಲ್ಲಿ ಉದ್ದವಾದ ಉಗುರುಗಳಿಂದ ಹನಿ ಹನಿ ರಕ್ತ ಜಿನುಗುತ್ತಿತ್ತು. ಗಾಳಿಯೊಂದಿಗೆ ಹಾರಾಡುತ್ತಿರುವ ಕೂದಲುಗಳ ನಡುವೆ ಅವಳ ಮುಖ ಒಮ್ಮೆ ಕಪ್ಪಾಗಿಯೂ ಮತ್ತೊಮ್ಮೆ ಬಿಳುಪಾಗಿಯೂ ಕಾಣುತ್ತಿತ್ತು.. ಹಾಗೆಯೇ ದಿಟ್ಟಿಸಿ ನೋಡಿದೆ...
"ಬಾ.... ಬಾ...  ಎಂದು ಕೈ ಸನ್ನೆ ಮಾಡುತ್ತಾ ನನ್ನ ಕಡೆನೇ ಬರಲಾರಂಬಿಸಿದಳು...
ಕೈಕಾಲುಗಳು ಶಕ್ತಿ ಕಳೆದುಕೊಂಡು ನಡುಗಲಾರಂಭಿಸಿತು. ಅವಳು ನನ್ನ ಕಡೆ ಹತ್ತಿರ ಹತ್ತಿರ ಬರುತ್ತಿರುವಂತೆ ಮತ್ತೊಷ್ಟು ಭಯಾನಕ ರೂಪ ತಳೆದಂತೆ ಭಾಸವಾಯಿತು.. ಎದ್ದೆನೋ ಬಿದ್ದೆನೋ... ತಿಳಿಯಲಿಲ್ಲ. ದಿಕ್ಕೆಟ್ಟು ಓಡಲಾರಂಭಿಸಿದೆ. ಹಿಂದಕ್ಕೆ ತಿರುಗಿ ನೋಡಿದೆ ಮೋಹಿನಿ ನನ್ನನ್ನು ಹಿಡಿಯಲು ಹಿಂದೆಯೇ ಓಡಿ ಬರುತ್ತಿದ್ದಳು. ಅವಳ ಕಾಲುಗಳು ನೆಲದಿಂದ ನಾಲ್ಕೈದು ಅಡಿ ಮೆಲೆಯೇ ಇತ್ತು. ನೆಲವನ್ನು ಸ್ಪರ್ಶಿಸದೇ ನಡೆಯುತ್ತಿದ್ದ ಮೋಹಿನಿಯ ನಡಿಗೆ ಇನ್ನಷ್ಟು ಭಯವನ್ನು ಸೃಷ್ಟಿಸಿತು. ಈಗ ಅವಳ ಕೂದಲುಗಳು ಮುಖದ ಹಿಂದೆ ಅಲೆಯಂತೆ ಪಟ ಪಟನೇ ಹಾರಾಡುತ್ತಿದ್ದವು. ಅವಳ ಕೋರೆ ಹಲ್ಲುಗಳು ಉದ್ದವಾಗಿ ಕಂಡಿತು. ಕಣ್ಣುಗಳು ಕೆಂಪಾಗಿ ರಕ್ತ ಕಾರುತ್ತಿದ್ದವು. ನಾಲಿಗೆಯ ಮುಕ್ಕಾಲು ಭಾಗ ಬಾಯಿಂದ ಆಚೆ ಬಂದಿತ್ತು. ನನಗೆ ಭಯ ತಡೆಯಲಾಗಲಿಲ್ಲ. ಚಡ್ಡಿ ಒದ್ದೆಯಾದಂತಹ ಅನುಭವ...
ನಾನು ನಿಲ್ಲಲಿಲ್ಲ.... ನಿಲ್ಲಲಿಲ್ಲ.... ಓಡಿದೆ... ಮತ್ತಷ್ಟು ಓಡಿದೆ, ಮೋಹಿನಿ ಹತ್ತಿರ ಬಂದೇ ಬಿಟ್ಟಳು... ಇನ್ನೇನು ನನ್ನ
ಹಿಡಿಯಬಹುದು.... ಹ್ಞಾಂ ಹಿಡಿದೇ ಬಿಟ್ಟಳು.... ಹಿಡಿದೇ ಬಿಟ್ಟಳು... ಎಂದು ಯೋಚಿಸುವಷ್ಟರಲ್ಲಿ ರಾಮಣ್ಣನ ಅಂಗಡಿ ಬಂದಿದ್ದೂ ತಿಳಿಯಲಿಲ್ಲ... ದೊಪ್ಪನೆ ರಸ್ತೆಯ ಬದಿಯಲ್ಲಿ ಜ್ಞಾನ ತಪ್ಪಿ ಬಿದ್ದೆ. ಅಲ್ಲಿಂದ ಮುಂದಿನ ನೆನಪುಗಳೆಲ್ಲವೂ ಶೂನ್ಯ... ಶೂನ್ಯ.... ಯಾವುದೋ ಅರಿವಿಲ್ಲದ ನೆನಪಿಲ್ಲದ ಕತ್ತಲು ಪ್ರಪಂಚವನ್ನು ಪ್ರವೇಶಿಸಿಯಾಗಿತ್ತು.....
ಕಣ್ಣು ಬಿಟ್ಟು ನೋಡಿದಾಗ ಅದೇ ಆಸ್ಪತ್ರೆ. ಡಾಕ್ಟರ್ ಥರ್ಮಾ ಮೀಟರ್ ಇಟ್ಟು ನನ್ನ ಜ್ವರವನ್ನು ಪರೀಕ್ಷಿಸುತ್ತಿದ್ದರು...
"ಜ್ವರ ನೂರು ಡಿಗ್ರಿಗಿಂತಲೂ ಮೇಲಿದೆ... ಹಣೆ ಮೇಲೆ ಒದ್ದೆ ಬಟ್ಟೆ ಹಾಕಮ್ಮ.."
ಡಾಕ್ಟರ್ ಪಕ್ಕದಲ್ಲಿದ್ದ ನರ್ಸ್ ಗೆ ಹೇಳಿದ್ದು ಕೇಳಿಸಿತು. ತಿಪ್ಪ ನನ್ನ ಪಕ್ಕದಲ್ಲೇ ನಿಂತಿದ್ದ. ಡಾಕ್ಟರ್ ಹೋದ ಮೇಲೆ...ಅಮ್ಮ ತನ್ನ ದೊಡ್ಡದಾದ ಬಾಯಿ ತೆಗೆದು ನನ್ನನ್ನು  ಬಯ್ಯಲಾರಂಭಿಸಿದಳು.
"ಥೂ..... ನಿನ್ನ ಮುಖಕ್ಕೆ ಮಂಗಳಾರತಿ ಎತ್ತ, ಮತ್ತೆ ಹೆದರ್ಕೊಂಡು ಜ್ವರ ತಂದ್ಕಂಡಿದ್ದೀಯಲ್ಲಾ ನಿನಗೆ ಬುದ್ದಿ ಗಿದ್ದಿ ಐತಾ.... ನನಗೂ ಸಾಕಾಗಿ ಬಿಟ್ಟಿದೆ. ಹೆದರ್ಕೊಂಡು ಹೀಗೆ ಆಸ್ಪತ್ರೆ ಸೇರ್ತಿಯಲ್ಲಾ..... ಥೂ ನಿನ್ನ ಜನ್ಮಕ್ಕಿಷ್ಟು. ಮೊನ್ನೆ ಇನ್ಮೇಲೆ ಯಾವ ಕಾರಣಕ್ಕೂ ಹೆದರಲ್ಲ ಅಂತ ಭಾಷೆ ಬೇರೆ ಕೊಟ್ಟಿದ್ದೆ...!!! ಎಲ್ಲೋ ಹೋಯ್ತು ನಿನ್ನ ಭಾಷೆ....? ಬಾ ನಿನಗೆ ಮುಸ್ತಾಕಪ್ಪನ ದರ್ಗಾಕೆ ಕರ್ಕೊಂಡ್ ಹೋಗಿ ನಾಲ್ಕು ಛಡಿ ಏಟು ಕೊಡ್ಸಿಲ್ಲಾಂದ್ರೆ ಕೇಳು.."
ಅಮ್ಮನ ಮಾತು ಕೇಳಿ ನನಗೆ ಭಯವಾಯಿತು. ನಾನು ಈ ಹಿಂದೆ ಪಿಯುಸಿ ಓದ ಬೇಕಾದರೆ. ನಮ್ಮ ಬೀದಿಯ ವಿದವೆ ಹೆಂಗಸು ಶಾರದವ್ವ ಬಿಳಿ ಸೀರೆಯುಟ್ಟು ಕಲ್ಲನಕೇರಿಯ ಹತ್ತಿರ ನಡೆದುಕೊಂಡು ಹೊಲಕ್ಕೆ ಹೋಗ್ತಾ ಇದ್ದಳಂತೆ. ಆಗ ನಾನು ದೆವ್ವ ಅಂತ ಹೆದರ್ಕೊಂಡು ಮೂರು ದಿನ ಜ್ವರ ತಂದ್ಕಂಡಿದ್ದೆ. ಆಗ ಅಮ್ಮ ಮುಸ್ತಫನ ದರ್ಗಾಕೆ ಕರ್ಕೊಂಡು ಹೋಗಿ ಬಾಬಾನ ಕೈಯಿಂದ ನಾಲ್ಕು ಛಡಿ ಏಟು ಹಾಕಿಸಿದ್ಳು. ಅಬ್ಬಾ ಎಂಥಹ ಹೊಡೆತಗಳವು ..!! ಬಾಬಾನ ಏಟನ್ನು ಸಹಿಸಿಕೊಂಡವರೂ ಯಾರೂ ಇಲ್ಲ. ಅಮ್ಮ ಮತ್ತೆ ಮುಸ್ತಫಾ ದರ್ಗಾ ನೆನಪಿಸಿದ ಕೂಡಲೇ ಕೈ ಕಾಲು ನಡಗಲಾರಂಭಿಸಿತು...
"ಅಮ್ಮ ನಾನೇನೂ ಮೊದಲಿನಂತೆ ಚಿಕ್ಕ ಹುಡುಗ ಅಲ್ಲ... ಬಾಬಾ ಕೈಯಿಂದ ಏಟು ತಿನ್ನಲಿಕ್ಕೆ. ಅಷ್ಟಕ್ಕೂ ನನಗೇನು ದೆವ್ವ ಹಿಡಿದಿಲ್ಲ. ಮೋಹಿನಿ ಪದೇ ಪದೇ ದೆವ್ವದ ರೂಪದಲ್ಲಿ ಕಾಣುತ್ತಿರೋದಕ್ಕೆ ಕಾರಣ ಹುಡುಕಬೇಕಿದೆ.. ನೀನು ಸುಮ್ನಿರಮ್ಮ. ನಾನೇನು ಸುಮ್ ಸುಮ್ಮೆ ಹೆದರ್ಕೊಂಡಿಲ್ಲ..."
ನಾನು ಅಮ್ಮನಿಗೆ ಹೇಳಿದೆ
ಅದಕ್ಕೆ ಅವಳು
"ಅದೇನು ದೊಡ್ಡವನಾಗಿದಿಯೋ ಏನೋ.... ಚಿಕ್ಕ ಮಕ್ಕಳ ತರ ಹೆದರ್ಕೊಂಡು ಮನೆಯವರಿಗೆಲ್ಲಾ ಟೆನ್ಷನ್ ಕೊಡ್ತಿಯಾ...."
ಅಮ್ಮ ಗೊಣಗುತ್ತಾ ಹೊರ ನಡೆದಳು.
ನನ್ನ ಪಕ್ಕದಲ್ಲಿ ನಿಂತಿದ್ದ ತಿಪ್ಪ ನನ್ನ ತಲೆಯನ್ನು ಸವರುತ್ತಾ ಕೇಳಿದ
"ಯಾಕೊ.. ಪಕ್ಕ, ಮತ್ತೇನಾಯ್ತೋ. ದೊಡ್ಡವನಾಗಿ ಈ ತರ ಹೆದರ್ಕೊತಿಯಲ್ಲೋ... ಏನಾಯ್ತೋ...?"
"ಇಲ್ಲ ಕಣೋ ತಿಪ್ಪ... ಯಾರೋ ನನ್ನ ಫಾಲೋ ಮಾಡ್ತಿದಾರೆ ಅಂತ ಅನುಮಾನ ಬರ್ತಾ ಇದೆ. ಮೋಹಿನಿ ಏನಾದ್ರೂ ಈ ತರ ಹೆದರಿಸುತ್ತಿರಬಹುದೇ. ಯಾಕೆ ಈ ತರ ಆಡ್ತಿದಾಳೆ. ಮೋಹಿನಿ ಮೈಯಲ್ಲೇನಾದ್ರೂ ದೆವ್ವ....!!! ಛೇ ಆ ರೀತಿ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಲೋ ತಿಪ್ಪ ಅವತ್ತು ರಾತ್ರಿ ಸಿನಿಮಾ ನೋಡ್ಕೊಂಡು ಹಿಂದಿರುಗುವಾಗ ಏನು ನಡಿತೋ ಸರಿಯಾಗಿ ಜ್ಞಾಪಿಸಿಕೊಂಡು ಹೇಳು. ಆ ದಿನ ನನಗೆ ಕಂಡಿದ್ದು ಮೋಹಿನಿ. ನೀನು ಹೇಳುತ್ತುರುವುದು ಮೋಹಿನಿ ಅಲ್ಲ ಅಲ್ಲ ಅದು ನಾನೇ ಹಿಂಬಾಲಿಸಿದ್ದು ಅಂತ....ಅದೇನು ಅಂತ ಸರಿಯಾಗಿ ಹೇಳೋ ಪ್ಲೀಸ್...."
ನಾನು ತಿಪ್ಪನನ್ನು ಬೇಡಿಕೊಂಡೆ
"ನೀನು ಹೀಗೆಲ್ಲಾ ಹೇಳ್ತಿರೋದು ನೋಡಿದ್ರೆ.... ನನಗೂ ಅನುಮಾನ ಬರ್ತಾ ಇದೆ. ಆ ದಿನ ನಮ್ಮ ನಾಯಿ ಜಿಮ್ಮಿ ಯಾರನ್ನೋ ನೋಡಿ ಭಯದಿಂದ ಬೊಗಳ್ತಾ ಇತ್ತು. ಆಗಲೇ ನನಗೂ ಎಚ್ಚರವಾಗಿದ್ದು. ಅದೇ ಸಮಯಕ್ಕೆ ನಿನ್ನ ನೋಡಿ ನಾನು ಹಿಂಬಾಲಿಸಿಕೊಂಡು ಬಂದಿದ್ದು. ನನ್ನ ಮತ್ತು ನಿನ್ನ ನಡುವೆ ಮತ್ತ್ಯಾರಾದರೂ ನಿನ್ನ ಹಿಂಬಾಲಿಸುತ್ತಿರುವರೆನೋ ಎಂದು ನನಗೆ ಸರಿಯಾಗಿ ತಿಳಿಯದು. ಆದರೆ ನಾನು ನಿನ್ನ  ಮುಟ್ಟುವ ಮೊದಲೇ ಮೋಹಿನಿ ಅಂತ ಕಿರುಚಿ ನೆಲ ಹಿಡಿದಿದ್ದೆ. ನನ್ನ ಹಿಂದೆ ಓಡಿ ಬಂದ ಜಿಮ್ಮಿ ವಿಚಿತ್ರವಾಗಿ ಬೊಗಳುತ್ತಿತ್ತು. ಜಿಮ್ಮಿಗೆ ಯಾರೋ ಕಂಡಿರಬೇಕು. ಸುಮಾರು ಐದು ನಿಮಿಷ ಯಾರನ್ನೋ ನೋಡಿ ಬೊಗಳಿದಂತೆ ಕಂಡಿತು. ಭವಿಷಃ ನೀನು ಪ್ರೀತಿಸಿದ ಮೋಹಿನಿಯೇನಾದರೂ ನಿನ್ನ ಹೆದರಿಸುತ್ತಿರಬಹುದು ಅಂತ ನನಗೆ ಅನುಮಾನ ಬರುತ್ತಿದೆ..."
ತಿಪ್ಪ ಆ ದಿನದ ಘಟನೆಯನ್ನು ನೆನಪಿಸಿಕೊಂಡು ಹೇಳಿದ.
"ನನಗೂ ಅದೇ ಅನುಮಾನ... ದೆವ್ವದ ರೂಪದಲ್ಲಿರುವ ಮುಖ ಮೋಹಿನಿಯದೇ. ನಾನು ಸ್ಪಷ್ಟವಾಗಿ ಆ ಮುಖವನ್ನು ನೋಡಿದ್ದೇನೆ. ಅದು ಅವಳೇ... ಆದರೆ ಹೆದರಿಸುತ್ತಿರುವ ಕಾರಣ ತಿಳಿಯಬೇಕಷ್ಟೆ. ಅಥವಾ ಅವಳ ಹಿಂದೆ ಯಾರೋ ಅವಳನ್ನು ಬಳಸಿಕೊಂಡು ಈ ಕುತಂತ್ರ ನಡೆಸುತ್ತಿರಬಹುದು. ಇದನ್ನು ಕಂಡು ಹಿಡಿಯಲೇ ಬೇಕು... ಆ ದಿನ ನಾವೆಲ್ಲರೂ ಒಂದೇ ಸಮಯಕ್ಕೆ ಕಾಲೇಜು ಬಿಟ್ಟು ಮನೆಗೆ ಹೊರೆಟೆವು... ಸುಮ, ಪದ್ಮಿ,, ಜೊತೆಗೆ ಮೋಹಿನಿಯೂ ಇದ್ದಳು. ನಾನು ಹೊರಟು ಬಂದ ಮೇಲೆ ಮೋಹಿನಿ ಅವರ ಜೊತೆಗೆ ಮನೆಗೆ ಹೊರಡಲೇ ಹೊರಟಿರಲೇ ಬೇಕು ..ಅವರ ಜೊತೆ  ಇಲ್ಲ ವೆಂದಾದರೆ ಇದೆಲ್ಲಾ ಮೋಹಿನಿಯದೇ ಕುತಂತ್ರ.. ಸುಮಾಗೆ ಫೋನ್ ಮಾಡಿ ಕೇಳಿದರೆ ಮೋಹಿನಿಯ ಬಣ್ಣ ಬಯಲಾಗುತ್ತದೆ. ..."
ತಕ್ಷಣ ಮೇಬೈಲ್ ಎತ್ತಿಕೊಂಡು ಸುಮಾಗೆ ಫೋನ್ ಮಾಡಿದೆ
"ಹಾಯ್ ಸುಮ ಹೇಗಿದ್ದೀಯಾ....? ಅಂತು ನಮ್ದೆಲ್ಲಾ ಕಾಲೇದ್ ಲೈಫ್ ಮುಗೀತು ನೋಡು. ಇನ್ಮೇಲೆ ಕತ್ತೆ ತರ ದುಡಿಯೋದೊಂದೇ ನಮ್ಮ ಕೆಲಸ.... ಹೌದು ಅವತ್ತು ಮೋಹಿನಿ ನೀವು ಎಷ್ಟು ಗಂಟೆಗೆ ಮನೆ ಸೇರ್ಕೊಂಡ್ರಿ...?"
ಅಷ್ಟು ಹೇಳಿ ಸುಮಾಳ ಉತ್ತರಕ್ಕೆ ಕಾದೆ..
"ನಾನು ಚನ್ನಾಗಿದ್ದೀನಿ.   ನೀನು ಹೇಗಿದ್ದೀಯಾ..? ಆ ದಿನ ಕಾಲೇದಿನ ಕೊನೆಯ ದಿನ ವಾದ್ದರಿಂದ ನಾವೆಲ್ಲಾ. ಅಕ್ಕಮಹಾದೇವಿ ಸರ್ಕಲ್ ನಲ್ಲಿರೋ ಚಾಟ್ ಸೆಂಟರ್ ಗೆ ಹೋಗಿ ತನ್ನಾಗಿ ತಿಂದ್ವಿ... ಎಲ್ಲಾ ಖರ್ಚು ಮೋಹಿನಿಯದ್ದೇ... ಮೋಹಿನಿ ಕೊಟ್ಟ  ಪಾರ್ಟಿ ಚನ್ನಾಗಿತ್ತು. ಅಲ್ಲಿಂದ ಮನೆ ಸೇರೋತನಕ ಸಾಯಂಕಲ ಐದುಗಂಟೆಯಾಯಿತು..."
ಅಷ್ಟು ಕೇಳಿದ ಕೂಡಲೇ ನಾನು ಸರಿ ಎಂದು ಏನೋ ಸಬೂಬು ಹೇಳಿ ಕಾಲ್ ಕಟ್ ಮಾಡ್ದೆ. ...
ಮೋಹಿನಿ ಗೆಳತಿಯರ ಜೊತೆಗೇ ಇದ್ದಾಳೆ. ಅಷ್ಟಕ್ಕೂ ಮೋಹಿನಿ ಅಷ್ಟು ಬೇಗ ನನ್ನನ್ನು ಹಿಂಬಾಲಿಸಿ ಬಂದು ಹೆದರಿಸಲು ಸಾಧ್ಯವೇ ಇಲ್ಲ...ಹಾಗಾದರೆ ಭೂತದ ವೇಶದಲ್ಲಿದ್ದ ಆ ಮೋಹಿನಿಯ ರೂಪ ಯಾವುದು...? ನನ್ನ ಹಿಂದೆ ಬಿದ್ದ ಆ ಮೋಹಿನಿ ಯಾರು...? ನನ್ನ ಮನದಲ್ಲಿ ಹಲವು ಅನುಮಾನಕರವಾದ ಪ್ರಶ್ನೆಗಳು ಏಳಲಾರಂಭಿಸಿದವು....
             ಪ್ರಕಾಶ್ ಎನ್ ಜಿಂಗಾಡೆ

Saturday, 28 January 2017

ಇಬ್ಬನಿಯಲಿ ಅವಳ ಕಂಡಾಗ..

ಇಬ್ಬನಿಯಲಿ ಅವಳ ಕಂಡಾಗ...

ಅರೆ ಮಲೆನಾಡಿನ ಸುಂದರ ತಾಣವದು. ಸುತ್ತಲೂ ಹಸಿರು. ಹಸಿರಿನ ನಡುವೆ ಹಸಿರಾಗಿ ನಿಂತಿರುವ ಸುಂದರ ಬೆಟ್ಟ. ಬೆಟ್ಟದ ಮೇಲೂಂದು ದುರ್ಗಾಂಬಿಕೆಯ ಮಂದಿರ. ಬೆಳಗ್ಗೆ ಎದ್ದೊಡನೆ ಬೆಟ್ಟ ಏರಿದರೆ ಸಾಕು ಕವಿತೆ ಗೀಜಲು ಎಲ್ಲಿಲ್ಲದ ಹುಮ್ಮಸ್ಸು ಬರುತ್ತಿತ್ತು. ಸ್ವಲ್ಪ ಹೊತ್ತು ಆರೋಗ್ಯಕ್ಕಾಗಿ ಅಲ್ಲೇ ತಾಲೀಮು ನಡೆಸಿ ಆಮೇಲೆ ಕವಿತೆಯನ್ನು ಬರೆಯಲು ದಿಬ್ಬದ ಕಲ್ಲಿನ ಮೇಲೆ ಕುಳಿತೆ.  ಆಗ ತಾನೆ  ಅರುಣೋದಯದ ಪ್ರಥಮ ಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತಿದ್ದವು.

ಗೂಡು ಬಿಟ್ಟು ಹೊರ ಬರುತ್ತಿದ್ದ ಹಕ್ಕಿಗಳ ಕಲರವ ಇಂಚರ ಇಂಪಾಗಿ ಕೇಳುತ್ತಿತ್ತು. ಇದರ ಜೊತೆಗೆ ಇಬ್ಬನಿಗೆ ಮೈಯೊಡ್ಡಿ ನಿಂತ ಗಿಡ ಮರಗಳು. ಹಸಿರು ಹುಲ್ಲಿನ ಮೇಲೆ ಹೊಳೆಯುತ್ತಿರುವ ಮಂಜಿನ ಹನಿಗಳು, ನಿಧಾನವಾಗಿ ಅರಳುತ್ತಿರುವ ಹೂವುಗಳು, ಸೂರ್ಯನ ಹೊಂಗಿರಣಗಳೊಂದಿಗೆ ಸರಸವಾಡುತ್ತಿದ್ದ ಮೋಡಗಳು, ಇವಿಷ್ಟೇ ಸಾಕಾಗಿತ್ತು ನನ್ನ ಕವನಗಳಿಗೆ ಸ್ಪೂರ್ತಿ ತುಂಬಲು...

ಆದರೆ ಅವಳು ಎಲ್ಲಿಂದ ಬಂದಳೋ ತಿಳಿಯಲಿಲ್ಲ....
ಆಗ ತಾನೆ ಭೂಮಿಯನ್ನು ಸ್ಪರ್ಶಿಸಿದ್ದ ರವಿಯ ಹೊಂಗಿರಣಗಳೊಂದಿಗೆ ಮಿನುಗುತ್ತಾ ಅಪ್ಸರೆಯಂತೆ ನನ್ನ ಮುಂದೆ ಕಾಣಿಸಿಕೊಂಡಳು. ಒಂದು ಕ್ಷಣ ಕವಿತೆ ಗೀಚುವುದನ್ನು ನಿಲ್ಲಿಸಿದೆ. ಅವಳೇ ಕಾವ್ಯವಾಗಿ ನನ್ನ ಮುಂದೆ ಕಂಡಾಗ ಕವಿತೆಗೆ ಬೆಲೆಯೆಲ್ಲಿ..? ಅವಳ ಸೌಂದರ್ಯದ ಮುಂದೆ ನನ್ನ ಕವನದ ಸಾಲುಗಳೇ ಒಂದು ಕ್ಷಣ ಸ್ಥಬ್ಧವಾಗಿ ಹೋದವು. ಮುಂಜಾನೆಯ ತಂಗಾಳಿಯಲಿ ಹಾಯಾಗಿ ಹಾರುತ್ತಿರುವ ರೇಷಿಮೆಯಂತಹ ಕೂದಲುಗಳು ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡಿದ್ದವು. ತಿದ್ದಿ ತೀಡಿದ ಮೀನಿನಂತಹ ಸುಂದರ ಕಣ್ಣುಗಳು. ಬಳ್ಳಿಯಂತೆ ಬಳುಕುವ ಸಣ್ಣ ನಡು.
ಟ್ರ್ಯಾಕ್ ಸೂಟ್ ಹಾಕಿಕೊಂಡು ಮೇಲೊಂದು ಜಾಕೇಟ್ ಹೊದ್ದು ಮುಂಜಾನೆಯ ಆ ಮಂಜಿನಲ್ಲಿ ಮಿಂದು ಅವಳು ಜಾಗಿಂಗ್ ಮಾಡುತ್ತಿದ್ದ ಆ ಪರಿಯನ್ನು ಕಂಡ ಕೂಡಲೇ ಮೈ ಮನಗಳು ರೋಮಾಂಚನವಾದಂತಾಯಿತು. ಕೈಯಲ್ಲಿದ್ದ ಪೆನ್ನು ಪೇಪರ್ ಅಲ್ಲೇ ಪಕ್ಕದಲ್ಲಿ ಬಿಟ್ಟು ಆ ಚೆಲುವೆಯನ್ನು ಹಿಂಬಾಲಿಸ ತೊಡಗಿದೆ..

ಆಕೆಯನ್ನು ಹಿಂಬಾಲಿಸಿ ಇನ್ನು ಎರಡು ನಿಮಿಷವೂ ಆಗಿರಲಿಲ್ಲ..

"ಜೀ....ತೋಡಾ ಸುನೋ ಜೀ.... ಆಪ್ಸೆ ಕುಚ್ ಬಾತ್ ಕರ್ನಾ ಹೈ"

ನಾನು ಕೂಗಿ ಹೇಳಿದೆ.

"ರೀ ಯಾಕ್ರಿ... ನನ್ನ ಹಿಂದೆನೇ ಬರ್ತಾ ಇದಿರಾ....? ಹೋಗ್ರಿ ಎಲ್ಲಾದ್ರೂ.. ಒಂಟಿ ಹುಡುಗಿ ಸಿಕ್ಳು ಅಂತ ನಿಮ್ಮಂತಹ ಹುಡುಗರು ಹಿಂದೆನೇ ಬಂದ್ ಬಿಡ್ತಿರಾ..?"

ಆ ಹುಡುಗಿ ಓಡುವುದನ್ನು ನಿಲ್ಲಿಸಿ ಕನ್ನಡದಲ್ಲೇ ಹೇಳಿದಳು..
"ರೀ ನಿಮ್ಮ ಹತ್ರ ಸ್ವಲ್ಪ ಮಾತಾಡ್ ಬೇಕಿತ್ತು....."
ನಾನು ಇನ್ನು ಮಾತು ಮುಗಿಸಿರಲಿಲ್ಲ
ಅಷ್ಟರಲ್ಲಿ ಅವಳು

"ಹುಡುಗಿ ಚನ್ನಾಗಿದಾಳೆ.... ಅಂತ ಏನಾದ್ರೂ ಹಿಂದೆ ಬಂದ್ರೆ ಮೈಯಲ್ಲಿರೋ ದೆವ್ವ ಬಿಡಿಸಿ ಬಿಡ್ತೀನಿ"

ಕೋಪದಿಂದ ಗುಡುಗಿದಳು.

ಏನೋ ಹೇಳಲು ಬಂದವನು ಅವಳ ಮಾತಿಗೆ ತಬ್ಬಿಬ್ಬಾಗಿ ಹೋದೆ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ..

"ಮುಂಜಾನೆ ಎದ್ದ ತಕ್ಷಣ ಸುಂದರ ವಾಗಿರೋದನ್ನೇ ನೋಡಬೇಕು ಅಂತ ಅಮ್ಮ ಹೇಳ್ತಾ ಇದ್ರೂ... ನೀವೂ ಸಹ ಸುಂದರವಾಗಿದ್ದೀರಲ್ಲ ಅದಕ್ಕೆ ಹಿಂಬಾಲಿಸಿದೆ. ಇವತ್ತು ಒಂದೊಳ್ಳೆ ಕೆಲಸಕ್ಕೆ ಮಾಡಬೇಕು ಅಂತ ಇದೀನಿ, ಮನಸ್ಸು ಖುಷಿ ಇದ್ರೆ ತಾನೆ ಯಶಸ್ಸು ಸಿಗೋದು.? ಅದರಲ್ಲೂ ಬೆಳ್ಳಂಬೆಳಗ್ಗೆ ನಿಮ್ಮಂತಹ ಸುಂದರ ಹುಡುಗಿ ದರ್ಶನವಾದರೆ ಮನಸ್ಸು ಸಂತೋಷದಿಂದ ಹಾರಾಡುತ್ತಿರುತ್ತದೆ... ಅಲ್ಲವೇ..?
ನಾನು ಸೌಮ್ಯವಾಗಿಯೇ ಹೇಳಿದೆ.
ಅವಳು ಕಣ್ಣು ಗುಡ್ಡೆಗಳನ್ನು ದೊಡ್ಡದಾಗಿಸಿಕೊಂಡು ಕೋಪದಿಂದ ನನ್ನತ್ತ ಕೆಕ್ಕರಿಸಿ ನೋಡುತ್ತಾ ಹೇಳಿದಳು
"ಹೇ...ಅಲ್ಲಾ....!!!!  ನಿಮಗೇನಾದ್ರೂ ಲೂಸಾ.....!!! ನೀವು ಖುಷಿಯಾಗಿರ್ಬೇಕು ಅಂತ ನನ್ನ ಫಾಲೋ ಮಾಡ್ತೀರಾ.. ನನ್ನನ್ನು ಬಿಟ್ಟು  ಸುಂದರವಾಗಿರೋ ಈ ಬೆಟ್ಟ, ಗುಡ್ಡ, ಈ ಹಸಿರಾಗಿರೋ ಭೂಮಿ , ಅದರ ಮೇಲೆ ಬಿದ್ದಿರೋ ಇಬ್ಬನಿ, ಇವನ್ನ ನೋಡ್ಕೊಂಡು ಬಿದ್ದಿರಿ. ಆಗ ನಿಮ್ಮ ಮನಸ್ಸು ಹಾಯಾಗಿರುತ್ತದೆ. ನನ್ನ ಹಿಂದೆ ಬಂದ್ರೆ ನಿನಗೆ ಹಿಡಿದಿರೋ ದೆವ್ವ ಬಿಡಿಸಿ ಬಿಡ್ತೀನಿ.... ಹುಷಾರ್...!!!

ಅವಳ ಮಾತು ಏರು ಧ್ವನಿಯಲ್ಲೇ ಇತ್ತು.

"ರೀ... ಏನ್ರೀ ಇದು ನಿಮ್ಮ ಮುಖ ಇಷ್ಟೊಂದು ಸುಂದರ...!! ಬಯ್ಯೋವಾಗಲೂ ನೀವು  ಎಷ್ಟು  ಸುಂದರವಾಗಿ ಕಾಣಿಸ್ತೀರಾ ಗೊತ್ತಾ....? ನಿಮ್ಮ ಆ ಕೋಪದ ಕಣ್ಣುಗಳು, ಬಯ್ಯುವಾಗ ಬಹು ಸುಂದರವಾಗಿ ಕಾಣುವ ಆ ನಾಸಿಕ. ಚಿಟ್ಟೆಯಂತೆ ಬಡಿಯುತ್ತಿರುವ ಕಣ್ಣು ರೆಪ್ಪೆಗಳು, ಮುದ್ದಾಗಿ ಕಾಣುತ್ತಿರುವ ತುಟಿಗಳು, ಮುಖದ ಮೇಲೆ ನೀವು ತೋರುತ್ತಿರುವ ಆ ಕೋಪದ ಭಾವನೆಗಳು. ತುಂಬಾ ಎಕ್ಸೆಲೆಂಟ್ ಕಣ್ರೀ.... ರೀ ಪ್ಲೀಸ್ ಸ್ವಲ್ಪ ಕೋಪಿಸ್ಕೊಂಡೇ ಇರ್ತಿರಾ....? ಇನ್ನೂ ಸ್ವಲ್ಪ ನೋಡಬೇಕು ಅಂತ ಅನಿಸುತ್ತಿದೆ"

ನಾನು ಪ್ರೀತಿಯಿಂದಲೇ ಹೇಳಿದೆ..

ಅವಳು ತಕ್ಷಣ ಕೋಪವನ್ನು ಕೃತಕವಾಗಿ ಸ್ವಲ್ಪ ಕಡಿಮೆ ಮಾಡಿಕೊಂಡು ನನ್ನತ್ತ ಕೊಂಕು ನೋಟ ಬೀರುತ್ತಾ ಮತ್ತೆ ಜಾಗಿಂಗ್ ಮುಂದುವರೆಸಿದಳು...
ಇಬ್ಬನಿ ತುಬಿರುವ ಪ್ರಕೃತಿಯ ಮಧ್ಯೆ ಆ ಹುಡುಗಿ ಜಾಗಿಂಗ್ ಮಾಡುತ್ತಿರುವುದನ್ನು ನೋಡಿದಾಗ ಮನಸು ಯಾಕೋ ಉಲ್ಲಾಸದಿಂದ ಕುಣಿಯಿತು. ಬೆಟ್ಟದ ತುಂಬಾ ಆವರಿಸಿರುವ ಆ ಮಂಜಿನ ನಡುವೆ ಅವಳ ಪಯಣಕ್ಕೆ ನಾನೂ ಜೊತೆಯಾಗಬೇಕು ಎಂದೆನಿಸಿತು. ಬಿಡಲಿಲ್ಲ ಮತ್ತೆ ಅವಳನ್ನು ಹಿಂಬಾಲಿಸಿದೆ. ಅವಳನ್ನು ಓವರ್ ಟ್ಯಾಕ್ ಮಾಡಿ ಜೊತೆಯಲ್ಲೇ ಓಡುವಂತೆ ವೇಗವನ್ನು ಹೆಚ್ಚಿಸಿಕೊಂಡೆ. ಅವಳು ನನ್ನತ್ತ ಗಮನಕೊಡದೆ ಮೌನವಾಗಿಯೇ ಓಟ ಆರಂಬಿಸಿದ್ದಳು. ಅವಳ ಮೌನ ತುಂಬಿದ ಮುಖ ಸೌಂದರ್ಯದಿಂದ ಶೋಭಿಸುತ್ತಿತ್ತು.

"ರೀ.... ಇಲ್ಲಾರೀೕ.... ನಾನು ಆಗ ಹೇಳಿದ್ದು ತಪ್ಪು, ಕೋಪದಲ್ಲಿರುವುದಕ್ಕಿಂತಲೂ ನೀವು ಮೌನವಾಗಿ ಇದ್ದಾಗಲೇ ತುಂಬಾ ಸುಂದರವಾಗಿ ಕಾಣಿಸುತ್ತೀರಿ. ಒಂಥರಾ... ಹಾಲಿನಲ್ಲಿ ಅದ್ದಿ ತೆಗೆದ ಗೊಂಬೆಯಂತೆ ಬಿಡ್ರಿ ನೀವು.."

ನನ್ನ ಮಾತು ಕೇಳಿದೊಡನೆ ಮತ್ತೆ ಜಾಗಿಂಗ್ ನಿಲ್ಲಿಸಿದಳು...
"ನಾನು ಯಾವಾಗ ಹೆಂಗಾದ್ರೂ ಕಾಣ್ತೀನಿ...ಅದನ್ನ ಕಟ್ಕೊಂಡು ನಿಮಗೇನಾಬೇಕ್ರಿ.. ನಿಮಗೇನೋ ಹುಚ್ಚು .. ಇನ್ನೊಂದು ಐದು ನಿಮಿಷ ಇರಿ ಸಾಕು. ಹಿಂದೆ ನಮ್ಮಣ್ಣನೂ ಸಹ ಜಾಗಿಂಗ್ ಮಾಡ್ತಾ ಬರ್ತಾ ಇದಾನೆ.... ನಿನಗೇನೋ ಇವತ್ತು ಗ್ರಹಚಾರ ಕಾದಿದೆ.."

"ರೀ.... ನಿಮ್ಮ ಅಣ್ಣ ಬರ್ತಾನೆ ಅಂದಾಕ್ಷಣ ನಾನು ಹೆದರ್ಕೊ ಬೇಕಾ... ?  ಸ್ವಲ್ಪ ಸೌಮ್ಯವಾಗಿ ಪ್ರೀತಿಯಿಂದ ಮಾತಾಡಿ ಸಾಕು, ನಾನೇ ಹೋಗ್ತೀನಿ..."

"ಆಯ್ತು ಮಹಾರಾಯ ನೀನಿನ್ನು ಇಲ್ಲಿಂದ ಹೋಗ್ಬಹುದು....ಸುಮ್ಮನೆ ಗಲಾಟೆ ಬೇಡ "

ಸೌಮ್ಯವಾಗಿ ಕೈ ಜೋಡಿಸಿ ಹೇಳಿದಳು
ಇನ್ನು ಅವಳನ್ನು ಸತಾಯಿಸಲು ಮನಸ್ಸಾಗಲಿಲ್ಲ.. ತಕ್ಷಣ ಅಲ್ಲಿಂದ ಹಿಂದಿರುಗಿ ಓಡಲಾರಂಬಿಸಿದೆ.

"ಮೂದೇವಿ... ಯಾವ್ದೋ.. ಕೋತಿಯಿದು, ಭಾಯಿ ಜಾನ್ ಹೆಸರು ಹೇಳಿದ ಕೂಡಲೇ, ಹೆಂಗೆ ಹೆದರ್ ಕೊಂಡು ಓಡ್ತಾ ಇದೆ ನೋಡು.."

ನನ್ನ ಕಿವಿಗೆ ಕೇಳುವಂತೆ ಗೊಣಗಿಕೊಂಡಳು ಆ ಹುಡುಗಿ. ನಾನು ಜಾಣ ಕಿವುಡನ್ನು ಪ್ರದರ್ಶಿಸಿ ಅಲ್ಲಿಂದ ಕಾಲ್ಕಿತ್ತೆನು.... ಸ್ವಲ್ಪ ದೂರ ನಿಂತು ಆ ಹುಡುಗಿಯನ್ನೇ ನೋಡುತ್ತಾ ನಿಂತೆ. ಅವಳು ಹಿಂದಿರುಗಿ ನೋಡದೇ ತನ್ನ ಓಟವನ್ನು ಮುಂದುವರೆಸಿದ್ದಳು. ಮುಂದೆ ಮುಂದೆ ಹೋಗುತ್ತಿದಂತೆ ಇಬ್ಬನಿಯ ವಾತಾವರಣದಲ್ಲಿ ಅವಳೂ ಸಹ ಆ ಮುಸುಕಿನಲ್ಲಿ  ಮುಸುಕಿ ಹೋದಳು...

ಮಾರನೆಯ ದಿನ....

ಅದೇ ಬೆಟ್ಟ, ಅದೇ ಹಸಿರು, ಅದೇ ಇಬ್ಬನಿ, ಅದೇ ಹಕ್ಕಿಗಳ ಇಂಚರ, ಮತ್ತದೇ ಸೂರ್ಯನ ಕಿರಣಗಳು ಭೂಮಿಯನ್ನು ಆಗ ತಾನೆ ಸ್ಪರ್ಶಿಸಲಾರಂಭಿಸಿದ್ದವು. ನೆನ್ನೆ ನಿಲ್ಲಿಸಿದ ಕವಿತೆಯನ್ನು ಮತ್ತೆ ಬರೆಯಲು ಲೇಖನಿಯನ್ನು ಹಿಡಿದು ಕುಳಿತೆ...

ಅರೆ ....!!! ಮತ್ತೆ ಅದೇ ಹುಡುಗಿ...ಇಬ್ಬನಿಯಲಿ ಓಡುತ್ತಾ ನನ್ನ ಕಡೆಗೇ ಬರುತ್ತಿದ್ದಳು.
ನಾನು ಕುಳಿತು ಬರೆಯುತ್ತಿದ್ದ ದಿಬ್ಬದ ಕಡೆಗ ನಡೆದು ಬಂದಳು. ಏನೂ ಮಾತನಾಡದೇ ನನ್ನನ್ನೇ ಗಮನಿಸುತ್ತಾ ನಿಂತಳು...
ನಾನು ಕಣ್ಣೆತ್ತಿ ಅವಳ ಕಡೆಗೆ ನೋಡಿದೆ.
ಮುಂಜಾನೆಯ ಆ ಇಬ್ಬನಿಯ ನಡುವೆ ಅವಳು ಸುಂದರ ಗೊಂಬೆಯಂತೆ ಕಂಗೊಳಿಸಿದಳು. ಮತ್ತದೇ ಟ್ರ್ಯಾಕ್ ಸೂಟ್ ಮೇಲೊಂದು ಜಾಕೆಟ್ ಹೊದ್ದಿದ್ದಳು. ಆದರೆ ಅದರ ಬಣ್ಣವೊಂದು ಬದಲಾಗಿತ್ತು.
ನಾನು ಅವಳ ಕಡೆ ನೋಡದೇ ಹಾಗೇ ತಲೆ ತಗ್ಗಿಸಿ ಅರ್ಧಕ್ಕೆ ನಿಲ್ಲಿಸಿದ್ದ ನಿನ್ನೆಯ ಕವಿತೆಯ ಸಾಲುಗಳನ್ನು ಬರೆಯಲಾರಂಭಿಸಿದೆ.
ಅವಳು ಅಲ್ಲಿಂದ ಕದಲಿಲ್ಲ. ತದೇಕ ಚಿತ್ತದಿಂದ ನನ್ನನ್ನೇ ನೋಡುತ್ತಿದ್ದಳು. ಮಾತಿಲ್ಲ, ಕತೆಯಿಲ್ಲ. ಗಾಳಿಯೊಂದಿಗೆ ಹಾರಾಡುತ್ತಿದ್ದ ತನ್ನ ತಲೆಗೂದಲನ್ನು ಸರಿಪಡಿಸಿಕೊಂಡಳು. ನನ್ನಿಂದ ಮತ್ತೇನನ್ನೋ ನಿರೀಕ್ಷಿಸುತ್ತಿರುವಂತೆ ಕಂಡಿತು.ಅವಳು ನಿಂತಲ್ಲಿಂದ ಸ್ವಲ್ಪವೂ ಕದಲಲದೇ, ಮಾತನಾಡದೇ ಮೌನವಾಗಿಯೇ ನಿಂತಿದ್ದಳು. ಹಾಗೆ ನಿಂತಿದ್ದ  ಅವಳನ್ನು ಮತ್ತೆ ಸತಾಯಿಸಬೇಕೆನಿಸಿತು.
ನಾನು ಮತ್ತೆ ಕವಿತೆ ಬರೆಯುವುದನ್ನು ನಿಲ್ಲಿಸಿದೆ. ನಾನೇ ಈ ಸ್ಥಳದಿಂದ ಬೇರೆಡೆಗೆ ಓಡಲು  ನಿರ್ಧರಿಸಿಕೊಂಡೆ, ಅವಳು ನನ್ನ ಹಿಂದಯೇ  ಹಿಂಬಾಲಿಸಿ ಬಂದರೆ ನನ್ನನ್ನು ಮೆಚ್ಚಿಕೊಂಡಿರುವಳೆಂದೇ ಅರ್ಥ. ಸುಂದರ ಶಿಲ್ಪ ಕಲಾಕೃತಿಯಂತೆ ನಿಂತಿರುವ ಅವಳೆಡೆಗೆ ಲಕ್ಷ್ಯವನ್ನು ಕೊಡದೇ ಬೆಟ್ಟದ ತುಂಬಾ ಆವರಿಸಿರುವ ಆ ಇಬ್ಬನಿಯನ್ನು ಭೇದಿಸಿಕೊಂಡು ನಾನು ಓಡಲಾರಂಭಿಸಿದೆ. ಅವಳೂ ಸಹ ನನ್ನ ಬೆನ್ನ ಹಿಂದೆಯೇ ಹಿಂಬಾಲಿಸುತ್ತಿದ್ದಳು.

"ರೀ... ಯಾಕೆ ನನ್ನ ಹಿಂಬಾಲಿಸುತ್ತಿದ್ದೀರಾ...?"
ನಾನು ಓಡುವುದನ್ನು ನಿಲ್ಲಿಸಿ ಕೇಳಿದೆ,

ಅದಕ್ಕೆ ಅವಳು...

"ಮುಂಜಾನೆಯ ಈ ವಾತಾವರಣದಲ್ಲಿ ಸುಂದರವಾಗಿರೋದನ್ನು ನೋಡಿದರೆ, ಒಳ್ಳೆಯವರ ಹತ್ತಿರ ಮಾತನಾಡಿದರೆ ಮನಸ್ಸು ದಿನ ಪೂರ್ತಿ ಉಲ್ಲಾಸ ವಾಗಿರುತ್ತದೆಯಂತೆ. ಹಾಗಂತ ಅಮ್ಮಿ ಜಾನ್ ಹೇಳ್ತಾ ಇದ್ರು"

ನಿನ್ನೆ ನಾನು ಹೇಳಿದ್ದ ನನ್ನದೇ ಡೈಲಾಗ್ ನನಗೇ ತಿರುಗಿಸಿ ಹೇಳಿದಳು..

"ಏನ್ರಿ.... ಇದು, ಇಷ್ಟೊಂದು ಬದಲಾವಣೆ, ಇದ್ದಕ್ಕಿದ್ದಂತೆ ನನ್ನ ಮೇಲೆ ಈ ರೀತಿಯಾಗಿ ಕರುಣೆ, ಪ್ರೀತಿ, ಮಮಕಾರ, ಒಟ್ಟಿಗೆ ಉಕ್ಕಿಬರುತ್ತಿದೆಯಲ್ಲಾ..? ನಿನ್ನೆ ದೆವ್ವ ಬಿಡಿಸುತ್ತೇನೆಂದು ಬೈದವರು ಈಗ ನೀವೇ ಬೇತಾಳದಂತೆ ಹಿಂದೆ ಬಿದ್ದಿದ್ದೀರಲ್ಲಾ...?"

ಅಂದೆ

ಅವಳು ಮೌನ ಮುರಿದಳು
"ಅದಕ್ಕೆ ಕಾರಣ ಏನೆಂದು ನಿಮಗೂ ಗೊತ್ತಿದೆಯಲ್ಲಾ.... ಕಲ್,  ಆಪ್ ಕ ದೋಸ್ತ್ ಇಮ್ರಾನ್ ಭಾಯಿ ಘರ್ ಆಯೇಥೆ... ಎಲ್ಲಾ ವಿಷಯಾನೂ ಹೇಳಿದ್ರು... ಅಷ್ಟಕ್ಕೂ ನಾನು ನಿಮ್ಮ ಹಿಂದೆ ಬಿದ್ದದ್ದು ನಿಮ್ಮನ್ನು ಕ್ಷಮೆ ಕೇಳಲೆಂದು ಅಷ್ಟೆ, ನಿನ್ನೆ ನಾನು ನಿಮ್ಮ ಪೂರ್ವಾಪರ ವಿಚಾರಿಸದೇ, ಏನೋ ಹೇಳಲು ಬಂದ ನಿಮ್ಮ ಮಾತನ್ನೂ ಕೇಳುವ ತಾಳ್ಮೆ ತೋರಲಿಲ್ಲ. ನಾನು ಹಾಗೆ ವರ್ತಿಸಿದ್ದು ನನಗೆ ತಪ್ಪೆಂದು ತಿಳಿಯಿತು. ನೀವು ನನ್ನನ್ನ ಒಪ್ಪಿದರೂ ಸಂತೋಷವೇ, ಹುಡುಗಿಯ ಗುಣ ಇಷ್ಟವಾಗಿಲ್ಲ ಎಂದು ತಿರಸ್ಕರಿಸಿದರೂ ಸರಿಯೆ.. ನಿಜವಾಗಿ ಹೇಳ್ತೀನಿ ಮೊನ್ನೆ ಭಾನುವಾರ ನನ್ನ ನೋಡೋಕೆ ಬಂದ ಗಂಡು ನೀವೇ ಅಂತ ನನಗೆ ಗೊತ್ತಿಲ್ಲ. ನನ್ನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ ಅಪ್ಪ, ಅಜ್ಜಿ ಕಣ್ಣಮುಂದೆನೇ ಇರುವಾಗ,  ನಿಮ್ಮನ್ನು ಸರಿಯಾಗಿ ನೋಡಲು ಆಗಲಿಲ್ಲ. ಆ ದಿನ ಕಾಫಿ ಕೊಡುವಾಗ ನಿಮ್ಮನ್ನ ಒಂದೆರೆಡು ಸೆಕೆಂಡ್ ನೇರವಾಗಿ ನೋಡಿದ್ದು ಬಿಟ್ಟರೆ, ಮತ್ತೆ ನಿಮ್ಮನ್ನ ಎಲ್ಲರ ಮುಂದೆ ನೇರವಾಗಿ ನೋಡುವಂತಹ ಧೈರ್ಯ ನನಗೆ  ಬರಲಿಲ್ಲ. ಆದ್ದರಿಂದ ನಿಮ್ಮ ರೂಪವಾಗಲಿ, ಮುಖದ ಗುರುತಾಗಲಿ ನನ್ನ ಮೆದುಳಿನಲ್ಲಿ ರಿಜಿಸ್ಚರ್ ಆಗಲೇ ಇಲ್ಲ. ಇಲ್ಲದಿದ್ದರೆ ನಿನ್ನೆ ಬೆಳಗ್ಗೆ ನಾನು ಈ ರೀತಿ ವರ್ತಿಸುತ್ತಿರಲಿಲ್ಲ."

ಆ ಹುಡುಗಿ ಸೌಮ್ಯವಾಗಿ ಹೇಳಿದಳು..

" ಇಲ್ಲ ನಿಮ್ಮದೇನು ತಪ್ಪಿಲ್ಲ. ತಪ್ಪೆಲ್ಲಾ ನನ್ನದು ಮತ್ತು ಈ ತರ್ಲೆ ಐಡಿಯಾ ಕೊಟ್ಟ ಇಮ್ರಾನ್ ನದು. ಪೊರ್ಕಿ ತರ ಹುಡುಗಿಯನ್ನು ಹಿಂಬಾಲಿಸಿದರೆ ಯಾರು ತಾನೆ  ಸುಮ್ಮನಿರದ್ದಾರು ಹೇಳಿ ..? ಅದು ಹಾಗೆ ಇರಲಿ  ನಿಮಗೆ ಗೊತ್ತಿರುವಂತೆ ನಾನೂ ಇಮ್ರಾನ್  ಬೆಂಗಳೂರಿನಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡೋದು. ಇಮ್ರಾನ್ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದನು. ಅಷ್ಟೇ ಅಲ್ಲ ಇಮ್ರಾನ್  ನನಗೆ ಅತ್ತೆಯ ಮಗ, ನಿನಗೆ ದೊಡ್ಡಪ್ಪನ ಮಗ, ನನಗೆ ನನ್ನು ಮನೆಯಲ್ಲಿ  ಹುಡುಗಿ ನೋಡಲು ತಯಾರಿ ನಡೆಸಿದ್ದರು. ಇಮ್ರಾನ್ ಮನೆಗೆ ಬಂದಾಗ ನಿಮ್ಮ ಬಗ್ಗೆ ಹೇಳಿದ.  ಹುಡುಗಿ ಇಂಜಿನಿಯರಿಂಗ್ ಮುಗಿಸಿದ್ದಾಳೆ. ನೋಡಲು  ತುಂಬಾ ಸುಂದರವಾಗಿದ್ದಾಳೆ. ನಿನಗೆ ಜೋಡಿ ಸರಿ ಹೊಂದುತ್ತೆ, ನಿಮ್ಮ ಮನೆಗೆ ಸರಿಹೊಂದುತ್ತಾಳೆ ಅಂತ. ಹುಡುಗಿಯ ಮನೆಯವರು ತುಂಬಾ ಸಂಪ್ರದಾಯಸ್ಥರು ಒಂದು ಸಾರಿ ನಮ್ಮ ಹಳ್ಳಿಗೆ ಬಂದು ನೋಡಿಕೊಂಡು ಹೋಗಿ ಅಂತ ಮನೆಯವರನ್ನೆಲ್ಲಾ ಒಪ್ಪಿಸಿದ. ಅವನು ಹೇಳಿದಂತೆಯೇ ನಾನು ಕಂಪನಿಗೆ ಮೂರು ದಿನ ರಜೆ ಹಾಕಿ ನಿಮ್ಮನ್ನು ಈ ಭಾನುವಾರ ನೋಡಲು ಬಂದಿದ್ದು... ನಿಮ್ಮನ್ನ ನೋಡಿದ್ದು ಗೊತ್ತೇ ಇದೆಯಲ್ಲಾ....ರೀ ನಿಜ ಹೇಳಬೇಕೆಂದರೆ ನಿಮ್ಮನ್ನ ನೋಡಿದ ಆ ಕ್ಷಣದಿಂದಲೇ ನನಗೆ ನಗು ತಡೆಯಲಾಗಲಿಲ್ಲ....ಅಬ್ಬಾ......!!! ಎಂತಹ ಸನ್ನಿವೇಶವದು"

ಅಷ್ಟು ಹೇಳಿ ನಾನು ಗಹ ಗಹಿಸಿ ನಗಲಾರಂಭಿಸಿದೆ.

"ಜೀ.. .ಚುಪ್ ರಹೋ ಜಿ...ಯಾಕ್ರಿ ನಗ್ತಿರಾ....? ಏನಾಯ್ತು, ಸ್ವಲ್ಪ ನನಗೂ ಹೇಳಿ ನಕ್ಕು ಬಿಡಿ"

ನನ್ನ ನಗುವಿಗೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ ಆ ಹುಡುಗಿ ಕೇಳಿದಳು.

ಹಾಗೆ ಕೇಳುವಾಗ ಅವಳ ಸುಂದರ ಮುಖದಲ್ಲಿ ಮುಗ್ಧತೆ ಮತ್ತು ಕುತೂಹಲಗಳೆರಡೂ ಕಾಣಿಸಿತು.

"ನಗದೇ ಇನ್ನೇನ್ರಿ ಮತ್ತೆ.... ಆ ದಿನ ನಿಮಗೆ ಮೇಕಪ್ ಮಾಡಿದ್ದು ಯಾರ್..ರೀ   ಥೇಟ್ ಗೌರಮ್ಮನ ತರ ಕಾಣ್ತಾ ಇದ್ರಿ... ಕಣ್ಣಿಗೆ ದೊಡ್ಡದಾಗಿ ಕಾಜಲ್ ಹಚ್ಚಿಕೊಂಡು ಆಪ್ತಮಿತ್ರ ಚಿತ್ರದ ನಾಗವಲ್ಲಿ ತರ ಕಾಣ್ತಾ ಇದ್ರಿ. ಅಷ್ಟೆ ಅಲ್ಲದೇ ಸೀರೆ ಬೇರೆ ಉಟ್ಟಿದ್ರಿ, ಅದೂ ಮುಖ ಸರಿಯಾಗಿ ಕಾಣಿಸದಂತೆ ತಲೆಯ ತುಂಬಾ ಸೆರಗನ್ನು ಹೊದ್ದು, ನೀವು ಕಾಫಿ ಕೊಡಲು ಬಂದಾಗಲೇ ನನಗೆ ನಗು ತಡೆಯಲಾಗಲಿಲ್ಲ. ನಾನು ನಿಮ್ಮನ್ನ ಹಳ್ಳಿ ಗೌರಮ್ಮ ಅಂತ ಅನ್ಕೊಂಡಿದ್ದೆ, ಸೀರೆ ಉಟ್ಟಿದ್ದರಿಂದ ನೀವು ಆಂಟಿ ತರ ಬೇರೆ ಕಾಣ್ತಾ ಇದ್ರಿ, ನಿಮ್ಮ ಮುಖ ಸರಿಯಾಗಿ ಕಾಣ್ತಾನೂ ಇರಲಿಲ್ಲ. ಹಣೆಯಿಂದ ಕೆಳಗೆ ಕತ್ತಿನಿಂದ ಮೇಲಕ್ಕೆ ಅರ್ದಂಬರ್ಧ ಮುಖ ತೋರಿಸಿ ಅವಸರದಿಂದ ರೂಮ್ ಸೇರಿಕೊಂಡರೆ ಯಾವ್ ಹುಡುಗ ತಾನೆ ಮೆಚ್ಕೊತಾನೆ ಹೇಳಿ, ಅವತ್ತೇ ಸಂಜೆ ಹುಡುಗಿ ಇಷ್ಟ ಆಗಲಿಲ್ಲ ಅಂತ ನಾನು ಬೆಂಗಳೂರಿಗೆ ಹೊರಟಿದ್ದೆ. ಕೊನೆಗೆ ಇಮ್ರಾನ್  ನನ್ನನ್ನು ಬಲವಂತ ಮಾಡಿ ಉಳಿಸಿಕೊಂಡ, ಇನ್ನೊಂದು ಸಲ ಹುಡುಗಿ ನೋಡಿಬಿಡು ಇಷ್ಟವಾಗಲಿಲ್ಲ ಅಂದ್ರೂ ಪರವಾಯಿಲ್ಲ. ಆ ಹುಡುಗಿ ಪ್ರತಿದಿನ ಬೆಳಗ್ಗೆ ಬೆಟ್ಟದ ಕಡೆಗೆ ಜಾಗಿಂಗ್ ಹೋಗ್ತಾಳೆ. ನೀನೂ ಸಹ ಅಲ್ಲಿಗೆ ಹೋಗು, ಹುಡುಗಿ ಇಷ್ಟವಾದರೆ ಮಾತನಾಡಿಸು. ಹುಡುಗಿ ನಿನಗೆ ಖಂಡಿತ ಇಷ್ಟ ಆಗೇ ಆಗ್ತಾಳೆ ಅಂತ ಬಲವಂತ ಮಾಡಿ ನನ್ನನ್ನು ಕಳುಹಿಸಿದ .... ಮುಂದಿನದ್ದು ನಿಮಗೇ ಗೊತ್ತಿದೆಯಲ್ಲ"

ನಾನು ಎಲ್ಲವನ್ನು ವಿವರಿಸಿ ಹೇಳಿದೆ.

"ಅಚ್ಚಾ...!! ಯೇ ಸಬಿ ಇಮ್ರಾನ್ ಭಾಯಿಜಾನ್ ಕ ಪ್ಲಾನ್ ಹೈ....!!! ಉಸ್ ಕೊ ನಹಿ ಚೋಡುಂಗಿ... ರೀ ನಗ್ ಬೇಡ್ರಿ, ನನಗೂ ಆ ದಿನ ಹಾಗೆ ಕಾಣಿಸಬೇಕು ಅಂತ ಇರ್ಲಿಲ್ಲ, ನಮ್ಮಜ್ಜಿ ತುಂಬಾ ಸ್ಟ್ರಿಕ್ಟು, ತುಂಬಾ ಸಂಪ್ರದಾಯಸ್ಥೆ, ಹುಡುಗಿಯನ್ನು ನೇರವಾಗಿ ತೋರಿಸ್ಬೇಡಿ ಅಂತ ಅಬ್ಬಾ ಜಾನ್ ಗೆ ತಲೆ ತಿನ್ತಾ ಇದ್ಳು..... 1941 ರಲ್ಲಿ ನಮ್ಮಜ್ಜಿಗೆ ನೋಡೋಕೆ ನಮ್ಮ ತಾತ ಬಂದಾಗ ಅಜ್ಜಿ ಮುಖವನ್ನು ಕನ್ನಡಿಯಲ್ಲಿ ತೋರಿಸಿದ್ದರಂತೆ. ಅಬ್ಬಾ ಜಾನ್ ಕೂಡ ಅಷ್ಟೆ ಅಮ್ಮಿನ ಮೊದಲ ಸಲ ನೋಡಿದ್ದೂ ಕನ್ನಡಿಯಲ್ಲೇ ಅಂತೆ....ಹೀಗೆ ಸಂಪ್ರದಾಯ ಇರೋವಾಗ ನನ್ನನ್ನ ಹೇಗೆ ತೋರಿಸಿಯಾರು? ಹಾಗಿರುವಾಗ ಅಜ್ಜಿ ನನ್ನನ್ನೂ ಸಹ ನೇರವಾಗಿ ಹುಡುಗನಿಗೆ ತೋರಿಸಬೇಡಿ ಅಂತ ರಂಪ ತೆಗೆದಿದ್ದಳು. ಅಬ್ಬಾಜಾನ್ ಒಪ್ಪದಿದ್ದಾಗ "ಯಾ...ಅಲ್ಲಾ...!!! ಯೇ ಕ್ಯಾ ಜಮಾನಾ ಆಗಯಾ... ಆಜ್ ಕೆ ಲೋಗಾ ಬಡೋಂಕಾ ಬಾತ್ ಜರಾ ಭಿ ಸುನ್ತೆ ನಹೀ.." ಅಂತ ನಮ್ಮಜ್ಜಿ ಗೊಣಗುತ್ತಲೇ ಇದ್ದಳು. ನೀವು ಮನೆಗೆ ಬಂದಾಗ ಅಜ್ಜಿ ಮತ್ತೆ ಎಲ್ಲಿ ರಂಪ ತೆಗೆದಾಳು ಅಂತ, ಅಬ್ಬಾ ಜಾನ್ ನನಗೆ ಮುಖಕ್ಕೆ ಸೆರಗನ್ನು ಹೊದಿಸಿ ತೋರಿಸಿದ್ದು...ನಾನೇನು ಮಾಡೋಕಾಗುತ್ತೆ, ನಿಮ್ಮ ಪಟ್ಟಣದಂತೆ ಇಲ್ಲಿ ಇಲ್ಲ... ಹಳ್ಳಿ ಕಡೆ ಹಿಂಗೆನೇ..."

ಅಷ್ಟು ಹೇಳಿ ಮೌನವಾದಳು.

ಕಾಲ ಬದಲಾದಂತೆ ಧರ್ಮ, ಸಂಸ್ಕೃತಿ,  ಸಂಪ್ರದಾಯಗಳು ಸಡಿಲವಾಗುತ್ತಾ ಹೋಗುತ್ತವೆ. ಸಂಪ್ರದಾಯಿಕವಾಗಿ ತೋರಿಸಿದ ಹುಡುಗಿ ಇಷ್ಟವಾಗದೇ ಹೋದಳು. ಇಬ್ಬನಿಯಲ್ಲಿ ಸಹಜವಾಗಿ ಓಡಿ ಬಂದ ಹುಡುಗಿ ಮುದ್ದಾಗಿ ಕಂಡಳು. ಇಬ್ಬನಿಯಲಿ ಅವಳ ಕಂಡಾಗ ಖುಷಿಯಾಯಿತು. ಪ್ರಕೃತಿಯ ನಡುವೆ ಅವಳೂ ಸಹ ಸಹಜವಾಗಿ ಕಂಡಳು.

ಒಂದು ಕ್ಷಣ ಇಬ್ಬರೂ ಮೌನ...!!

ಬೆಳಗಿನ ಇಬ್ಬನಿ ಸುತ್ತಲೂ ಕವಿದಿತ್ತು.

"ಸರಿ ... ಹೋಗುತ್ತೇನೆ, ಭಾಯಿಜಾನ್ ಬಂದು ಬಿಡಬಹುದು. ಎಂದು ಹೊರಡಳು ಸಿದ್ಧವಾದಳು.

ತಕ್ಷಣ ಅವಳ ಕೈ ಹಿಡಿದುಕೊಂಡೆ. ಕೈ ಬಿಡಿಸಿ ಕೊಳ್ಳಲು ಕೊಸರಾಡಿದಳು.

"ನಿಮ್ಮಣ್ಣ ಬರಲ್ಲ ಬಿಡಿ, ಬೆಟ್ಟದ ಕೆಳಗೆ ಇಮ್ರಾನ್ ಜೊತೆ ಇದ್ದಾನೆ. ಅವನು ಬೆಟ್ಟದ ಮೇಲೆ ಬರದಂತೆ ನಿಮ್ಮಣ್ಣನನ್ನು ಸರಿಯಾಗೇ ನಿಭಾಯಿಸುತ್ತಿದ್ದಾನೆ..."

ನಾನು ಆತ್ಮ ವಿಶ್ವಾಸದಿಂದ ಹೇಳಿದೆ.

"ಓಹೋ.... ಇದೆಲ್ಲಾ ನಿಮ್ಮಿಬ್ಬರ ತರ್ಲೆ ಪ್ಲಾನ್ ನ, ಯಾಕೋ ಭಾಯಿಜಾನ್ ನಿನ್ನೆ ನನ್ನ ಜೊತೆ ಜಾಗಿಂಗ್ ಬರಲಿಲ್ಲ ಅಂತ ಯೋಚಿಸುತ್ತಿದ್ದೆ. ಇವತ್ತೂ ಹೀಗೆ... ಎಲ್ಲಾ ಪ್ಲಾನ್ ಮಾಡೇ ಮಾಡಿದ್ದೀರಾ....ರೀ ನೀವು ತುಂಬಾ ಇದೀರಾ, ಹುಡುಗಿ ಪಟಾಯಿಸುವುದು ಹೇಗೆ ಅಂತ ನಿಮ್ಮಿಂದಲೇ ಕಲಿತು ಕೊಳ್ಳಬೇಕು.... ರಿ ಬಿಡ್ರಿ ಕೈಯನ್ನ..."

ಅವಳು,  ನನ್ನಿಂದ ಕೈ ಬಿಡಿಸಿಕೊಳ್ಳಲು ಪ್ರಯತ್ನಿಸಿದಳು..

"ರೀ ಮತ್ತೆ ನಾವು ಸುಮ್ನೆನಾ.... ನಿನ್ನೆ ಏನೋ ಗೊಣಗುತ್ತಾ ಇದ್ರಿ..... ಕೋತಿ ಮುಂಡೇದು ನಮ್ಮಣ್ಣನ ಹೆಸರು ಹೇಳಿದ ತಕ್ಷಣ ಹೇಗೆ ಹೆದರಿಕೊಂಡು ಹೋಗ್ತಾ ಇದೆ ಅಂತಿದ್ದೆ.... ಈಗ ಹೇಳಿ ನೋಡೋಣ...."

"ರೀ... ಬಿಡ್ರಿ ಹೋಗಬೇಕು.."

ಹೇಗೋ ಕೈ ಬಿಡಿಸಿಕೊಂಡು ಅಲ್ಲಿಂದ ಓಡಿ  ಹೋದಳು...

ಆ ಇಬ್ಬನಿಯ ನಡುವೆ ಅವಳು ಕಣ್ಮರೆಯಾಗುವವರೆಗೂ ನೋಡುತ್ತಲೇ ನಿಂತೆ... ಅವಳು ತಿರುಗಿ ತಿರುಗಿ ನೋಡುತ್ತಲೇ
ಓಡುತ್ತಿದ್ದಳು.... ಇಬ್ಬನಿಯ ತಂಗಾಳಿ ನನ್ನ  ಮನಸ್ಸನ್ನು ಇನ್ನಷ್ಟು ಆಹ್ಲಾದಗೊಳಿಸುತ್ತಿತ್ತು....
  



    ಪ್ರಕಾಶ್ ಎನ್ ಜಿಂಗಾಡೆ

Friday, 30 December 2016

ಕಣ್ಣುಗಳು (ಕವನ)

ಕಾಡುತಿಹವು ಅವಳ ಕಣ್ಣುಗಳು
ಏನೇನೋ ಭಾಷೆಗಳು ಅದೆಂಥವೋ ಸನ್ನೆಗಳು
ಏನೇನೋ ಹೇಳಲು ಹೊರಟಿಹವು
ಪ್ರಶ್ನಾರ್ಥಕ ಚಿಹ್ನೆಯು ಅತಿಯಾಗಿ ಸಂಚಯಿಸಿ
ಅರ್ಥವಾಗದ ಗಣಿತದಂತೆ
ಈಗಲೂ ನನ್ನನು ಪೆದ್ದನಾಗಿಪವು....

ಸೋತು ಹೋಗಿಹೆನು ಕಣ್ಣ ಸೊಬಗಿಗೆ
ಏನೋ ಆಕರ್ಷಣೆ ಅದೆಂಥದೋ ಮೋಡಿ
ನೂರಾರು ಭಾವಗಳು ಕಲಿಯದ ಮಾತುಗಳು
ಕಣ್ಣಲ್ಲೇ ತೋರಿಹಳು...
ನಲಿಯುವಳು ನುಲಿಯುವಳು
ಅರ್ಥವಾಗದ ಹಾಡಾಗಿ ನಿಂತಿಹಳು

ಯಾವ ಶಾಲೆಯೂ ಕಲಿಸಲಿಲ್ಲ
ಯಾವ ಗುರುವೂ ತಿಳಿಸಲಿಲ್ಲ
ಪುಸ್ತಕವೂ ಮೀರಿ ನಿಂತಿಹ ನೋಟವದು...
ನಾಲಿಗೆಯ ತಿರುಗಿಸಿ ನನ್ನನು ಶಪಿಸಿ
ಹುಂಬನೆಂಬ ಬಿರುದನು ಪಾಲಿಸಿ
ಸೊಂಟವ ಕೊಂಕಿಸಿ ಕೋಪದಿ ಮುಂದೆ ಸಾಗಿಹಳು.

ಪ್ರಕಾಶ್ ಎನ್ ಜಿಂಗಾಡೆ.