Wednesday, 6 September 2017

ಅಂತ... ಆತಂಕ (ಭಾಗ-2)

ಅಂತ... ಆತಂಕ (ಭಾಗ-2)

ಕೆಳಗೆ ಬಿದ್ದಿದ್ದ ಚಂದ್ರ ಶೇಖರ್ ಸುಧಾರಿಸಿಕೊಳ್ಳಲು ಒಂದೆರಡು ನಿಮಿಷ ಬೇಕಾಯಿತು. ಹೇಗೋ ಎದ್ದು ನಿಂತು.

"ಬಿಡೋ ನನ್ನ ಮಗಳನ್ನ ಯಾರೋ ನೀನು...? ಬಿಡದಿದ್ದರೆ ಚೈನ್ ಎಳೆದು ಟ್ರೇನ್ ನಿಲ್ಲಿಸಿಬಿಡುತ್ತೇನೆ"

ಎನ್ನುತ್ತಾ ತನಿಷ್ಕಳ ತಂದೆ ಮತ್ತೆ ಆ ಅನಾಮಿಕ ವ್ಯಕ್ತಿಯ ಕೊರಳ ಪಟ್ಟಿಯನ್ನು ಹಿಡಿದನು. ಕೋಪದಿ ಕೆಕ್ಕರಿಸಿ ನೋಡುತ್ತಿದ್ದ ಆ ವ್ಯಕ್ತಿ ಚಂದ್ರಶೇಖರರಿಗೆ ಮತ್ತೆ ಒಂದು ಏಟನ್ನು ಹೊಡೆದನು...

ಹೊಡೆದ ರಭಸಕ್ಕೆ ಅವರು ಮತ್ತೆ ಕೆಳಗೆ ಬಿದ್ದರು.

"ನೋಡು ನಿಮ್ಮನ್ನು ಸಾಯಿಸುವ ಉದ್ದೇಶ ನನಗಿಲ್ಲ ನಿಮ್ಮಿಂದ ಒಂದು ಸಣ್ಣ ಕೆಲಸವಾಗ ಬೇಕಾಗಿದೆ, ಅದನ್ನು ನೆರವೇರಿಸಿದರೆ ನೀವು ಜೀವ ಸಹಿತ ಉಳಿಯುತ್ತೀರಿ. ಇಲ್ಲದಿದ್ದರೆ ನಿಮ್ಮ ಪ್ರಾಣ ತೆಗೆಯಲೂ ಸಹ ನಾನು ಹೇಸುವುದಿಲ್ಲ...

ಹಾಗೆ ಹೇಳುತ್ತಾ ತನಿಷ್ಕಳ ಹಣೆಯಿಂದ ರಿವಾಲ್ವರನ್ನು ತೆಗೆದು ತಕ್ಷಣ ಹಿಂದೆ ತಿರುಗಿ ಒಂದು ಗುಂಡನ್ನು ಹಾರಿಸಿದನು. ತನ್ನ ಬೆನ್ನ ಹಿಂದೆ ಅನತಿ ದೂರದಲ್ಲಿ ಕುಳಿತ್ತಿದ್ದ ರೋಹನ್ ಇದನ್ನೆಲ್ಲಾ ಗಮನಿಸುತ್ತಿದ್ದರಿಂದ  ಕೂಡಲ್ ಟ್ರೈನ್ ನ ಚೈನನ್ನು ಎಳೆಯಲು ಮುಂದಾದನು. ರಿವಾಲ್ವರ್ ನಿಂದ ಹಾರಿದ ಬುಲೆಟ್ ಕೂದಲೆಳೆಯ ಅಂತರದಲ್ಲಿ ಚೈನ್ ಎಳೆಯಲು ಮುಂದೆ ಚಾಚಿದ ಕೈಯ ಹತ್ತಿರದಿಂದಲೇ ಹಾದು ಹೋಯಿತು. ರೋಹನ್ ತಕ್ಷಣ ಬೆದರಿದನು. ಹಾರಿಸಿದ ಗುಂಡು ತನಗೇ ಬಿತ್ತು ಎಂಬಂತೆ ಸೀಟಿನ ಕೆಳಗೆ ಬಿದ್ದನು. ಆ ಅನಾಮಿಕ ವ್ಯಕ್ತಿ ರೋಹನ್ ನನ್ನು ಕರೆತಂದು ಚಂದ್ರ ಶೇಖರ್ ಪಕ್ಕದಲ್ಲೇ ಕೂರಿಸಿದನು.

"ನೋಡಿ ಅತಿಯಾದ ಬುದ್ಧಿವಂತಿಕೆ ತೋರಿಸಬೇಡಿ. ನೀವು ನನ್ನನ್ನು ಏನೂ ಮಾಡಲಾಗದು. ನಾನು ಮೊದಲೇ ಹೇಳಿದಂತೆ ನಿಮ್ಮನ್ನು ಸಾಯಿಸುವ ಉದ್ದೇಶ ನನಗಿಲ್ಲ. ನನ್ನ ಚಿಕ್ಕ ಕೆಲಸಕ್ಕೆ ನೀವು ಸಹಾಯ ಮಾಡಿದರೆ ಸಾಕು. ನೀವು ಐದು ಜನರೂ ಸಹ ಜೀವಂತವಾಗಿರುತ್ತೀರಿ ಇಲ್ಲದಿದ್ದರೆ ಸಾವು ಖಂಡಿತ.... ಯೋಚಿಸಿ ನೋಡಿ"

ಫ್ರೆಂಚ್ ದಾಡಿಯ ಆ ಅನಾಮಿಕ ವ್ಯಕ್ತಿ ಮತ್ತೆ ಸಮಜಾಯಿಸಿ ಹೇಳಿದನು.

"ಏನದು ಯಾವ ಕೆಲಸ..? ನೀನು ಹೇಳಿದಂತೆ ಮಾಡುತ್ತೇನೆ ಏನದು ಹೇಳು...?  ಆದರೆ ನಮ್ಮನ್ನು ಬಿಟ್ಟು ಬಿಡಬೇಕು. ಯಾರಿಗೂ ತೊಂದರೆ ಕೊಡಬಾರದು."

ಚಂದ್ರ ಶೇಖರ್ ಹೆದರುತ್ತಲೇ ಹೇಳಿದನು.

"ಸರಿ.. ನನ್ನ ಕೆಲಸವನ್ನು ನೆರವೇರಿಸಿದರೆ ಯಾರಿಗೂ ತೊಂದರೆಯಾಗದು. ನೀವೇನಾದರೂ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ಯಾರೂ ಜೀವ ಸಹಿತ ಉಳಿಯಲಾರಿರಿ. ಇಲ್ಲಿಂದ ಸ್ವಲ್ಪ ಮುಂದೆ ರಾಣೆಬೆನ್ನೂರು ಸ್ಟೇಷನ್ ಸಿಗುತ್ತದೆ. ಅಲ್ಲಿಯವರೆಗೂ ನೀವು ನಿರಾತಂಕವಾಗಿ ಕುಳಿತು ಪ್ರಯಾಣಿಸಿರಿ. ರಾಣೆಬೆನ್ನೂರಿನಿಂದ ಹದಿನೈದು ಕಿಲೋಮೀಟರ್ ಸಾಗಿದ ನಂತರ ರೈಲು ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲುತ್ತದೆ  ನಿಲ್ಲಲೇಬೇಕು. ಅಲ್ಲಿ ನೀವೆಲ್ಲಾ ನನ್ನ ಜೊತೆಗೆ ಇಳಿಯಬೇಕು. ಅಲ್ಲಿ ನಮಗಾಗಿ ಒಂದು ಕಾರು ನಿಂತಿರುತ್ತದೆ. ಅಲ್ಲಿಂದ ಸ್ವಲ್ಪ ದೂರ ನೀವು ನನ್ನ ಜೊತೆ ಕಾರಿನಲ್ಲಿ ಬರಬೇಕು. ಅಲ್ಲಿ ತಲುಪಿದ ಮೇಲೆ ಮುಂದಿನ ಕೆಲಸವನ್ನು ನಾನು ತಿಳಿಸುತ್ತೇನೆ. ಯಾವ ಕೆಲಸ ಏನು ಎಂದು ನಿಮಗೆ ಅಲ್ಲಿಗೆ ಬಂದ ನಂತರವೇ ಹೇಳುತ್ತೇನೆ ಆದರೆ ಈ ಮಧ್ಯೆ ಏನಾದರೂ ಚಾಲಾಕಿತನವನ್ನು ತೋರಿಸಿದರೆ ಯಾರೂ ಬದುಕುವುದಿಲ್ಲ. ನೆನಪಿರಲಿ"

ಆ ವ್ಯಕ್ತಿ ತನ್ನ ಮುಂದಿನ ಯೋಜನೆಯನ್ನು ತಿಳಿಸಿದನು.

ರಿವಾಲ್ವರನ್ನು ಮತ್ತೆ ಸೂಟ್ ಕೇಸ್ ಒಳಗೆ ಇಟ್ಟು ಆ ವ್ಯಕ್ತಿ ಏನೂ ಆಗಿಲ್ಲವೆಂಬಂತೆ ನಿರಾತಂಕವಾಗಿ ಕುಳಿತನು. ಅಷ್ಟರಲ್ಲಿ ಸರೋಜಗೆ ಎಚ್ಚರವಾಯಿತು. ತನಿಷ್ಕ ಎಲ್ಲಾ ವಿಷಯವನ್ನು ತಾಯಿಯ ಕಿವಿಯಲ್ಲಿ ಹೇಳಿದಳು. ತಾಯಿ ಬೆವರಲಾರಂಭಿಸಿದಳು. ಚಂದ್ರಶೇಖರ್ ತನ್ನ ರಕ್ತಸಿಕ್ತ ಮುಖವನ್ನು ಒರೆಸಿಕೊಂಡು ಕುಳಿತನು. ತನಿಷ್ಕ ಹೆದರಿದ ತಾಯಿಯನ್ನು ತನ್ನ ಬುಜಕ್ಕೆ ಒರಗಿಸಿಕೊಂಡು ತಾಯಿಯನ್ನು ಹಿಡಿದು ಕುಳಿತ್ತಿದ್ದಳು.

ರೈಲು ವೇಗವಾಗಿ ಸಾಗುತ್ತಿತ್ತು. ಎಲ್ಲರ ಮುಖದಲ್ಲೂ ಗಂಭೀರತೆ, ಭಯ, ಕುತೂಹಲಗಳು ಆವರಿಸಿದ್ದವು. ರೈಲು ರಾಣೆಬೆನ್ನೂರು ಸ್ಟೇಷನ್ ದಾಟಿ ಮುಂದೆ ಸಾಗುತ್ತಿತ್ತು. ಆ ಫ್ರೆಂಚ್ ದಾಡಿ ಅನಾಮಿಕ ವ್ಯಕ್ತಿ ಹೇಳಿದಂತೆ ರಾಣೆಬೆನ್ನೂರಿನಿಂದ ಇಪ್ಪತ್ತು ಕಿಲೋಮೀಟರ್ ವರೆಗೆ ರೈಲು ಇದ್ದಕ್ಕಿದ್ದಂತೆ ನಿಂತು ಹೋಯಿತು. ಟ್ರೈನ್ ನಿಲ್ಲುವಂತಹ ಯಾವ ನಿಲ್ದಾಣವೂ ಇರಲಿಲ್ಲ. ಯಾವ ಕ್ರಾಸಿಂಗ್ ಸಹ ಇರಲಿಲ್ಲ. ಆ ಅನಾಮಿಕ ವ್ಯಕ್ತಿ ಹೇಳಿದಂತೆಯೇ ರೈಲು ನಿಂತಿದ್ದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಆ ವ್ಯಕ್ತಿ ಹೇಳಿದಂತೆ ಎಲ್ಲರೂ ಇಳಿದರು. ರೋಹನ್ ನನ್ನು ಸಹ ಆ ವ್ಯಕ್ತಿ ಬಲವಂತವಾಗಿ ಇಳಿಸಿದನು. ಎಲ್ಲರೂ ಪ್ರಾಣ ಭಯದಿಂದ ಉಸಿರು ಬಿಗಿ ಹಿಡಿದುಕೊಂಡಿದ್ದು. ರೈಲ್ವೇ ಟ್ರ್ಯಾಕ್ ನ ಅನತಿ ದೂರದಲ್ಲಿ ಆಲದ ಮರದ ಕೆಳಗೆ ಬಿಳಿ ಬಣ್ಣದ ಕಾರು ನಿಂತಿತ್ತು. ಆ ವ್ಯಕ್ತಿ ಎಲ್ಲರನ್ನೂ ಕಾರು ನಿಂತ ಸ್ಥಳಕ್ಕೆ ಕರೆದುಕೊಂಡು ಹೋದನು....

ಕಾರಿನ ಬಳಿ ಗುಂಡಾಗಳಂತೆ ಕಾಣುವ ಇಬ್ಬರು ದಡಿಯ ವ್ಯಕ್ತಿಗಳಿದ್ದರು. ಕಾರಿನಲ್ಲಿ ಕೂರಿಸುವ ಮೊದಲು ಎಲ್ಲರ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಲಾಯಿತು. ಎಲ್ಲರನ್ನು ಹೊತ್ತ ಕಾರು ಯಾವುದೋ ಅಜ್ಞಾತ ಸ್ಥಳವೊಂದರ ಕಡೆಗೆ ಚಲಿಸಲಾರಂಬಿತು. ಒಳಗಿದ್ದ ತನಿಷ್ಕ, ರೋಹನ್ ಮತ್ತು ಇತರರಿಗಾಗಲಿ ಕಾರು ಎತ್ತ ಸಾಗುತ್ತಿದೆ ಎಂಬ ಅರಿವು ಸಹ ಬಾರದಂತಾಗಿತ್ತು. ಕಾರಿನಿಂದ ಇಳಿದ ಕೂಡಲೇ ಅವರ ಪಟ್ಟಿಯನ್ನು ತೆಗೆಯಲಾಯಿತು. ಅಜ್ಞಾತ ನಿರ್ಜನ ಸ್ಥಳವದು. ಒಂದು ನರಪಿಳ್ಳೆಯೂ ಸಹ ಕಣ್ಣಿಗೆ ಕಾಣಿಸಲಿಲ್ಲ. ಆ ಅನಾಮಿಕ ಫ್ರೆಂಚ್ ಗಡ್ಡಧಾರಿಯು ಜೋರಾಗಿ ಒಂದು ಸೀಟಿ ಹೊಡೆದನು. ತಕ್ಷಣ ನಮ್ಮ ಕಣ್ಣ ಮುಂದಿರುವ ದಿಣ್ಣೆಯ ಮೇಲಿಂದ ಇಬ್ಬರು ವ್ಯಕ್ತಿಗಳು ನಮ್ಮ ಕಡೆಗೆ ಧಾವಿಸಿ ಬಂದರು...

"ನೀವೆಲ್ಲಾ ಇಲ್ಲೇ ಇರಿ... ಈ ಇಬ್ಬರು ನಿಮ್ಮ ಕಾವಲಿಗೆ ಇರುತ್ತಾರೆ ನನ್ನ ಜೊತೆ ಇವರೊಬ್ಬರೆ ಬಂದರೆ ಸಾಕು..."

ಎಂದು ಆ ಅನಾಮಿಕ ಗಡ್ಡಧಾರಿ ವ್ಯಕ್ತಿಯು ಚಂದ್ರಶೇಖರ್ ರವರನ್ನು ಮುಂದೆ ಎಳೆಯುತ್ತಾ ಹೇಳಿದನು. ಆ ಬಿಳಿಯ ಕಾರಿನ ಬಳಿ ಕಾವಲಿಗಾಗಿ ಬಂದೂಕು ಹಿಡಿದು ಬಂದ ಆ ವ್ಯಕ್ತಿಗಳು ಚಂದ್ರಶೇಖರ್ ರವರನ್ನು ಮಾತ್ರ ಕಳುಹಿಸಿದರು. ಉಳಿದವರನ್ನು ಕಾರಿನಲ್ಲೇ ದೂಡಿದನು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿದರು. ಎಲ್ಲರೂ ಮತ್ತೆ ಅದೇ ಕಾರಲ್ಲಿ ಬಂಧಿಯಂತೆ ಕುಳಿತರು. ಗಡ್ಡಧಾರಿ ವ್ಯಕ್ತಿಯು ಚಂದ್ರ ಶೇಖರರನ್ನು ದಿಣ್ಣೆಯ ಮೇಲಕ್ಕೆ ಕರೆದು ಕೊಂಡು ಹೋದನು. ದಿಣ್ಣೆ ಹತ್ತಿದ ನಂತರ ವಿರುದ್ದ ದಿಕ್ಕಿನ ತಗ್ಗಿನಲ್ಲಿ ಇಳಿದರು. ಅವರು ಹೋಗುವುದನ್ನೇ ದಿಟ್ಟಿಸಿ ನೋಡುತ್ತಿದ್ದ ತನಿಷ್ಕಳಿಗೆ ತಂದೆ ದಿಣ್ಣೆಯನ್ನು ಇಳಿದು ಇನ್ನೊಂದು ದಿಕ್ಕಿನತ್ತ ಹೋದ ಕೂಡಲೇ ಕಾಣಿಸದಂತಾದರು. ಕಾರಿನಲ್ಲೇ ಕುಳಿತ್ತಿದ್ದ ಇವರಿಗೆ ದಿಣ್ಣೆಯ ಮತ್ತೊಂದು ಪಾರ್ಶ್ವದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ.

ಸುಮಾರು ಅರ್ದ ಗಂಟೆಯಾಗಿ ಹೋಯಿತು. ತಂದೆ ಇನ್ನು ಬರಲಿಲ್ಲ ಎಂಬ ಆತಂಕ ತನಿಷ್ಕಳ ಮುಖದಲ್ಲಿತ್ತು. ದಿಬ್ಬದಾಚೆ ಏನು ನಡೆಯುತ್ತಿದೆ. ಒಂದು ಚಿಕ್ಕ ಸಹಾಯ ಬೇಕೆಂದವನು ಇಷ್ಟು ಹೊತ್ತಾದರೂ ತಂದೆಯನ್ನು ಯಾಕೆ ಕಳುಹಿಸಲಿಲ್ಲ. ನನ್ನ ತಂದೆಗೂ ಈ ದುಷ್ಟರ ಗುಂಪಿಗೂ ಏನಾದರೂ ಸಂಬಂಧವಿದೆಯೇ..? ನನ್ನ ತಂದೆಗೆ ಏನಾದರೂ ತೊಂದರೆ ಕೊಟ್ಟರೆ..ಹೀಗೆ ತನಿಷ್ಕಳ ಮನಸು ಏನೇನೋ ಯೋಚಿಸತೊಡಗಿತು. ತಾಯಿ ಸರೋಜ ಆಗಲೇ ಆಯಾಸದಿಂದ ಬೆವರುತ್ತಾ ಕಾರಲ್ಲೇ ಮಲಗಿದ್ದಳು. ಇನ್ನು ರೋಹನ್ ಗೆ ಏನೂ ಮಾಡಲಾರದಂತಹ ಸ್ಥಿತಿ. ಇಬ್ಬರು ಗನ್ ಹಿಡಿದು ಕಾವಲು ನಿಂತಿರುವ ಆ ವ್ಯಕ್ತಿಯನ್ನು ಎದುರಿಸಲು ಸಾದ್ಯವೇ ಇರಲಿಲ್ಲ. ನೋಡಲು ಗಟ್ಟಿಮುಟ್ಟಾಗಿ ಪೈಲ್ವಾನ್ರಂತೆ ಕಾಣುತ್ತಿದ್ದರು.

ಮಧ್ಯಾಹ್ನದ ರಣ ರಣ ಬಿಸಿಲಿನ ತೀಕ್ಣ ಅಧಿಕವಾಗುತ್ತಲೇ ಇತ್ತು. ಇನ್ನು ಒಂದು ಗಂಟೆ ಕಾದದ್ದಾಯಿತು. ತಂದೆಯ ಯಾವ ಸುಳಿವೂ ಕಾಣಲಿಲ್ಲ. ತನಿಷ್ಕಳಿಗೆ ಆತಂಕ ಮತ್ತಷ್ಟು ಹೆಚ್ಚಾಗತೊಡಗಿತು. ದಿಬ್ಬದ ಆಚೆಯಿಂದ ಯಾರೋ ಕೂಗಿದಂತಾಯಿತು. ಕಾರಲ್ಲಿದ್ದ ತನಿಷ್ಕ ಒಮ್ಮೆ ಬೆದರಿದಳು. ತನ್ನ ತಂದೆಗೆ ಏನಾದರು ಮಾಡಿದರೆ...? ಮೊದಲೇ ಅದು ದುಷ್ಟರ ಗುಂಪು. ಬಂದೂಕನಂತಹ ಆಯುಧಗಳನ್ನು ಇಟ್ಟುಕೊಂಡಿರುವವರು. ಇಂತಹ ದುಷ್ಟರ ಗುಂಪಿಗೆ ನಾವು ಸಿಕ್ಕಿಹಾಕಿಕೊಂಡಿದ್ದಾದರೂ ಹೇಗೆ..? ಹೀಗೆ ತನಿಷ್ಕಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡಲಾರಂಬಿಸಿದವು....

"ಏಯ್...ಹೇಯ್.... ಟುರ್.ರ್.ರ್.... ಟುರ್.ರ್.ರ್...."

ಅನ್ನೊ ಶಬ್ಧ ಕೇಳಿಸಿತು. ಕುರಿ ಕಾಯುವ ಯುವಕನೊಬ್ಬ ಕುರಿಗಳನ್ನು ಮೇಯಿಸುತ್ತಾ ಕಾರು ನಿಂತಿರುವ ಸ್ಥಳದ  ಹತ್ತಿರಕ್ಕೆ ಬಂದನು...

ಆಶ್ಚರ್ಯದಿಂದ ತನ್ನ ಮುಗ್ಧತೆಯನ್ನು ಪ್ರದರ್ಶಿಸುತ್ತಾ ತನಿಷ್ಕ ಕುಳಿತ್ತಿದ್ದ ಕಾರಿನ ವಿಂಡೋ ಗ್ಲಾಸ್ ನ ಹತ್ತಿರಕ್ಕೆ ಬಂದು ಇಣುಕಿ ನೋಡಲಾರಂಬಿಸಿದನು. ಎತ್ತಲೋ ಇದ್ದ ಮನಸ್ಸು ವಿಂಡೋ ಕಡೆ ತಿರುಗಿದಾಗ ತನಿಷ್ಕ ಆ ಕುರಿಗಾಯಿ ಯುವಕನನ್ನು ಕಂಡು ಬೆದರಿದಳು. ವಿಂಡೋ ಗ್ಲಾಸ್ ನಿಂಡ ಕಂಡ ಅವನ ಝೂಮ್ ಮುಖ ದೆವ್ವದಂತೆ ಕಂಡಿತು. ಮೊದಲೇ ಭಯಗೊಂಡಿದ್ದ ತನಿಷ್ಕಳಿಗೆ ಆ ಕುರಿಗಾಯಿ ಯುವಕನ ಭಯಾನಕ ಮುಖ ಸಹಿಸಲಾಗಲಿಲ್ಲ. ಒಮ್ಮೆ ಭಯದಿಂದ ಕಿಟಾರನೆ ಕಿರುಚಿದಳು. ಏನೋ ಆಗೇ ಬಿಟ್ಟಿತೆಂದು ಭಯಗೊಂಡ ಬಂದೂಕು ದಾರಿಗಳು ಕಾರಿನತ್ತ ಬಂದರು. ಆ ಕುರಿಗಾಯಿ ಯುವಕನ ಕೆನ್ನೆಗೊಂದು ಬಾರಿಸಿದನು...

"ಏಯ್... ಇಲ್ಲೇನೋ ಕೆಲಸ ನಿನಗೆ. ಕುರಿಗಳನ್ನು ಹೊಡೆದುಕೊಂಡು ಮುಂದಕ್ಕೆ ಹೋಗ್ತಾ ಇರಬೇಕು. ಇಲ್ಲಾಂದ್ರೆ, ಇದರಿಂದಲೇ ಸುಟ್ಟು ಹಾಕ್ತೀನಿ.."

ಕಾವಲಿನ ವ್ಯಕ್ತಿಯು ಬಂದೂಕಿನ ನಳಿಕೆಯನ್ನು ನೇರವಾಗಿ ಆ ಕುರಿ ಕಾಯುವ ಯುವಕನ ಹಣೆಗೆ ಗುರಿಯಿಟ್ಟವು. ಆದರೆ ಆ ಯುವಕ ಸ್ವಲ್ಪವೂ ಹೆದರಲಿಲ್ಲ. ಬಂದೂಕಿನ ಮೇಲೆ ನಿಧಾನವಾಗಿ ಕೈ ಸವರುತ್ತ ಕಣ್ಣುಗಳನ್ನು ಆಚೆ ಈಚೆಗೆ ತಿರುಗುತ್ತಾ ಮುಗ್ಧತೆಯನ್ನು ಪ್ರದರ್ಶಿಸಿದನು. ಅವನ ಅಸಹಜ ನಡವಳಿಕೆಯನ್ನು ಕಂಡ ಆ ಬಂದೂಕುದಾರಿ ವ್ಯಕ್ತಿಗಳಿಗೆ ಆ ಕುರಿಗಾಯಿ ಯುವಕನು ಹುಚ್ಚನೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಕುರಿಕಾಯುವ ಯುವಕ ಹುಚ್ಚು ಹುಚ್ಚುತನದಿಂದಲೇ ಕಾರನ್ನು ನೋಡುತ್ತಾ ಒಮ್ಮೆ ಬಂದೂಕನ್ನು ನೋಡುತ್ತಾ ಮುಗ್ಧತೆಯನ್ನು ಪ್ರದರ್ಶಿಸಿದನು. ಕೂಡಲೇ ಆ ವ್ಯಕ್ತಿಯಿಂದ ನೋಡು ನೋಡುತ್ತಿದ್ದಂತೆ ಬಂದೂಕನ್ನು ಕಿತ್ತುಕೊಂಡನು. ಆ ಕಾವಲು ವ್ಯಕ್ತಿಯು ಬಂದೂಕು ಕಿತ್ತುಕೊಂಡಿದ್ದರಿಂದ ಬೆದರಿದನು. ಎಲ್ಲಿ ಆ ಹುಚ್ಚು ಯುವಕ ಗುಂಡನ್ನು ಹಾರಿಸುವನೋ ಎಂಬ ಆತಂಕನಿಂದ ನಿಧಾನವಾಗಿ ಆ ಹುಚ್ಚನ ಬಳಿ ಹೆಜ್ಜೆ ಹಾಕಿದನು. ಆ ಹುಚ್ಚ ಇನ್ನೇನು ಬಂದೂಕಿನ ಕುದುರೆಯನ್ನು ಒತ್ತಬೇಕು ಎನ್ನುವಷ್ಟರಲ್ಲಿ ಆ ವ್ಯಕ್ತಿಯು ಮಿಂಚಿನಂತೆ ಎಗರಿ ಬಂದೂಕನ್ನು ಕಿತ್ತುಕೊಂಡನು. ಬಂದೂಕಿನಿಂದ ಗುಂಡು ಹಾರದಿದ್ದಕ್ಕೆ ಒಮ್ಮೆ ನಿಟ್ಟುಸಿರು ಬಿಟ್ಟನು. ಹುಚ್ಚನ ಈ ಹುಚ್ಚಾಟಕ್ಕೆ ಒಮ್ಮೆ ಕೋಪವೂ ಬಂದಿತು. ಯಾರಿಗಾದರು ಗುಂಡು ತಗುಲಿದ್ದರೆ ಏನು ಗತಿ..!! ಕೂಡಲೇ ಆ ಹುಚ್ಚನ ಕೆನ್ನೆಯ ಮೇಲೆ ಸರಿಯಾಗಿ ಒಂದು ಏಟು ಬಾರಿಸಿದನು. ಹೊಡೆದ ರಭಸಕ್ಕೆ ಕುರಿಕಾಯುವ ಆ ಹುಚ್ಚ ಸುಂಟರಗಾಳಿಯಂತೆ ತಿರುಗಿ ತಿರುಗಿ ನೆಲಹಿಡಿದು ಬಿದ್ದನು. ಅಷ್ಟರಲ್ಲಿ ಮತ್ತೊಂದಿಷ್ಟು ಕುರಿಗಳನ್ನು ಮೇಯಿಸಿಕೊಂಡು ಹಿಂದೆನೇ ಬಂದ ಆ ಹುಚ್ಚನ ಅಕ್ಕ ತಮ್ಮ ಕೆಳಗೆ ಬಿದ್ದಿರುವುದನ್ನು ನೋಡಿ ಸಹಿಸಿಕೊಳ್ಳಲಾಗಲಿಲ್ಲ....

"ಬೇವರ್ಸಿಗಳಿರ... ನನ್ನ ತಮ್ಮನನ್ನು ಹೊಡಿತೀರಾ..? ಬುದ್ಧಿಹೀನ ಹುಡುಗ ಅಂತ ಗೊತ್ತಿದ್ರೂ ನಿಮ್ಮ ಪೌರುಷ ಅವನ ಮೇಲೆ ತೋರಿಸ್ತೀರಲ್ಲ ನಾಚಿಕೆಯಾಗಲ್ವ ನಿಮಗೆ..."

ಎಂದು ಹೇಳುತ್ತಾ ಕೆಳಗೆ ಬಿದ್ದ ಬುದ್ದಿಮಾಂದ್ಯ ತಮ್ಮನನ್ನು ಮೇಲೆತ್ತಲು ಪ್ರಯತ್ನಿಸಿದಳು. ಹಾಗೆ ಮೇಲೆತ್ತುವ ಭರದಲ್ಲಿ ಆ ಕುರಿಕಾಯುವ ಯುವತಿಯ ಎದೆಯ ಭಾಗ ಪಾರದರ್ಶಕವಾಗಿ ಗೋಚರಿಸಿತು. ಮೊದಲೇ ಕಟುಕರಂತೆ ಕಾಣುತ್ತಿದ್ದ ಕಾವಲುಗಾರ ವ್ಯಕ್ತಿಯು ಅವಳನ್ನು ನೋಡಿ ಜೊಲ್ಲು ಸುರಿಸಲಾರಂಬಿಸಿದನು. ಇಷ್ಟೆಲ್ಲಾ ದೃಶ್ಯವನ್ನು ಕಾರಿನಲ್ಲೇ ಕುಳಿತು ನೋಡುತ್ತಿದ್ದ ತನಿಷ್ಕಳಿಗೆ ಆ ವ್ಯಕ್ತಿಯ ನಡವಳಿಕೆ ಅಸಹ್ಯವೆನಿಸಿತು.
ಆ ಬಂದೂದಾರಿ ವ್ಯಕ್ತಿ ಅಲ್ಲಿಗೆ ಸುಮ್ಮನೆ ಬಿಡಲಿಲ್ಲ.

"ಒಂದು ನಿಮಿಷ ಇರೋ... ಈಗ ಬಂದೆ, ಕಾರಿನ ಕಡೆ ಜಾಗೃತೆಯಿಂದ ಇರು.."

ಎಂದು ತನ್ನ ಇನ್ನೊಬ್ಬ ಸಂಗಡಿಗನಿಗೆ ಹೇಳಿ ಆ ಕುರಿ ಕಾಯುವ ಯುವತಿಯ ಹಿಂದೆ, ಅವಳು ಹೋದ ದಾರಿಯಲ್ಲೇ ಹಿಂಬಾಲಿಸಿಕೊಂಡು ಹೋದನು.
ಅವನು ಹೋಗಿ ಐದು ನಿಮಿಷವೂ ಆಗಿರಲಿಲ್ಲ. ತನಿಷ್ಕ ರೋಹನ್ ನ ಕಿವಿಯಲ್ಲಿ ಏನೋ ಹೇಳಿ ಕಾರಿನಿಂದ ಇಳಿದಳು.

"ಸರ್.. ನೇಚರ್ ಕಾಲ್. ಎರಡು ನಿಮಿಷ, ಅಲ್ಲಿ ಮುಂದಿರುವ ಪೊದೆಯ ಕಡೆ ಹೋಗಿ ಬರುತ್ತೇನೆ..."

ತನಿಷ್ಕ ಇನ್ನೊಬ್ಬ ಬಂದೂಕುದಾರಿ ವ್ಯಕ್ತಿಯೊಬ್ಬನಿಗೆ ಕೇಳಿದಳು.

"ಬೇಗ ಬಂದು ಬಿಡಬೇಕು, ಏನಾದ್ರೂ ಆಟ ಆಡಿದ್ರೆ ಗೊತ್ತಲ್ಲ... ನಿನ್ನ ತಂದೆ ತಾಯಿ ಇನ್ನೂ ನನ್ನ ಕಾವಲಿನಲ್ಲಿದ್ದಾರೆ ಅನ್ನೋದನ್ನ ಮರೆಯಬೇಡ, ಏನಾದರೂ ಹೆಚ್ಚು ಕಡಿಮೆಯಾದರೆ ಇವರನ್ನು ಸುಟ್ಟು ಹಾಕುತ್ತೇನೆ.. ನೆನಪಿರಲಿ"

ಇನ್ನೊಬ್ಬ ಬಂದೂಕುದಾರಿ ವ್ಯಕ್ತಿ ತನಿಷ್ಕಳನ್ನು ಹೆದರಿಸಿದನು.

ತನಿಷ್ಕ ಆಯಿತು ಎನ್ನುತ್ತಾ ಆ ವ್ಯಕ್ತಿ ಮರೆಯಾಗುವವರೆಗೂ ದೂರ ಹೋದಳು. ಕುರಿಕಾಯುವ ಯುವತಿ ಹೋದ ದಾರಿಯನ್ನು ಹಿಡಿದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ. ಯಾರೋ ಕಿರುಚಿದಂತೆ ಕೇಳಿಸಿತು. ಶಬ್ಧ ಬಂದ ಕಡೆ ಹೋದಳು. ಬಂದೂಕು ದಾರಿ ಕಾವಲುಗಾರ ವ್ಯಕ್ತಿಯು ಕುರಿಕಾಯುವ ಯುವತಿಯನ್ನು ಬಲವಂತಮಾಡುತ್ತಾ ತನ್ನ ತೆಕ್ಕೆಗೆ ಬೀಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅತ್ತ ಆ ಯುವತಿಯ ಬುದ್ಧಿಮಾಂದ್ಯ ತಮ್ಮ ಏನೂ ನಡೆಯುತ್ತಿಲ್ಲವೆಂಬಂತೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ. ಹೇಗಾದರೂ ಮಾಡಿ ಆ ಯುವತಿಯನ್ನು ಕಾಪಾಡಬೇಕು ಇಲ್ಲದಿದ್ದರೆ ಆ ದುಷ್ಟವ್ಯಕ್ತಿಗಳು ಎಂತಹ ಕೆಟ್ಟಕೆಲಸ ಮಾಡಲೂ ಹೇಸುವುದಿಲ್ಲ ಎಂದು ಯೋಚಿಸಿದಳು. ದಿಣ್ಣೆಯ ಮೇಲೆ ನಿಂತು ನೋಡಿದಳು. ಆ ದುಷ್ಟ ವ್ಯಕ್ತಿ ಕುರಿಕಾಯುವ ಯುವತಿಯನ್ನು ಎಳೆದಾಡುತ್ತಿದ್ದನು. ಮೋಸದ ಮಾಯಜಾಲದಲ್ಲಿ ಸಿಲುಕಿದ್ದ ತನಿಷ್ಕಳಿಗೆ ಅಲ್ಲಿಂದ ಹೇಗೆ ಹೊರಬರಬೇಕೆಂದು ಯೋಚಿಸುತ್ತಿದ್ದಳು. ಈ ದುಷ್ಟರನ್ನು ಇಲ್ಲೇ ಮಟ್ಟಹಾಕುವುದು ಸರಿಯೆಂದು ಅಲ್ಲೇ ಇದ್ದ ದೊಡ್ಡ ಕಲ್ಲನ್ನು ತೆಗೆದು ಕೊಂಡು ಆ ವ್ಯಕ್ತಿಯ ತಲೆಯ ಮೇಲೆ ಎತ್ತಿ ಹಾಕಿದಳು. ಕೂಡಲೇ ರಕ್ತ ಚಿಲ್ ಎಂದು ಹೊರ ಚಿಮ್ಮಿತು. ಕೂಡಲೇ ಅಲ್ಲಿಂದ ಕುರಿಕಾಯುವ ಯುವತಿಯನ್ನು ಅಲ್ಲಿಂದ ಕಳುಹಿಸಿ. ಕೆಳಗೆ ಬಿದ್ದಿದ್ದ ಆ ದುಷ್ಟ ವ್ಯಕ್ತಿಯ ಬಂದೂಕನ್ನು ತೆಗೆದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಕಾರಿನ ಬಳಿ ಬಂದಳು. ಹಿಂದೆ ತಿರುಗಿ ಸಿಗರೇಟ್ ಹಚ್ಚುತ್ತಿದ್ದ ವ್ಯಕ್ತಿಯಮೇಲೆ ಎರಗಿ ಬಂದೂಕಿನ ಹಿಂಬಾಗವನ್ನು ಬಳಸಿಕೊಂಡು ಆತನ ತಲೆಯ ಮೇಲೆ ಬಲವಾಗಿ ಹೊಡೆದಳು. ರೋಹನ್ ತಕ್ಷಣ ಕಾರಿನಿಂದ ಇಳಿದು ಆ ವ್ಯಕ್ತಿಯನ್ನು ಇನ್ನೊಂದೆರಡೇಟು ಹೊಡೆದು ಆತನ ದೇಹವನ್ನು ಎತ್ತಿಕೊಂಡು ಬಂದನು. ಮೊದಲೇ ಕಲ್ಲಿನ ಏಟು ತಿಂದು ಬಿದ್ದಿದ್ದ ವ್ಯಕ್ತಿಯ ಜೊತೆ ಈ ವ್ಯಕ್ತಿಯನ್ನು ಸೇರಿಸಿ ಹಗ್ಗದಿಂದ ಬಲವಾಗಿ ಕಟ್ಟಿ ಅಲ್ಲೇ ಗುಂಡಿಯಲ್ಲಿ ಹಾಕಿ ಅವರ ಮೇಲೆ ಹುಲ್ಲನ್ನು ಹೊದಿಸಿ  ಬಂದರು. ಈಗ ಹೇಗಾದರೂ ಮಾಡಿ ತಂದೆ ಚಂದ್ರಶೇಖರರನ್ನು ಕಾಪಾಡುವುದು ಅವರ ಗುರಿಯಾಗಿತ್ತು. ನಿಧಾನವಾಗಿ ತಂದೆ ಇರುವ ಇನ್ನೊಂದು ದಿಬ್ಬದ ಕಡೆಗೆ ಕಳ್ಳ ಬೆಕ್ಕಿನಂತೆ ಹೆಜ್ಜೆ ಹಾಕಿದರು....

      (ಮುಂದುವರೆಯುವುದು)

Tuesday, 8 August 2017

ಪರಿಚಯ

ಹೆಸರು :-   ಪ್ರಕಾಶ್ ಎನ್ ಜಿಂಗಾಡೆ 

ಹುಟ್ಟಿದ ಸ್ಥಳ :- ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ, ಬಸವಾಪಟ್ಟಣ 

ನೆಲೆ:- ಬೆಂಗಳೂರು

ವಿದ್ಯಭ್ಯಾಸ :-  ಎಂ. ಎ ,  ಬಿ.ಇಡಿ.

ವೃತ್ತಿ :-  ಪ್ರಸ್ತುತ ರಾಯನ್ ಇಂಟರ್ ನ್ಯಾಷನಲ್ Pre University ಕಾಲೇಜ್ ಯಲಹಂಕ ಬೆಂಗಳೂರಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದೆನೆ.

ಹವ್ಯಾಸ :- ಕನ್ನಡದಲ್ಲಿ ಕತೆ, ಕವನ, ಕಾದಂಬರಿ, ಲಲಿತ ಪ್ರಭಂದ, ಇತ್ಯಾದಿ ಪ್ರಕಾರಗಳಲ್ಲಿ ಬರವಣಿಗೆ, ಪುಸ್ತಕ ಓದು, ಹಾಡು ಸಂಗೀತಗಳನ್ನು ಕೇಳುವುದು, ಉಪನ್ಯಾಸ...ಇತ್ಯಾದಿ.

ಕೃತಿಗಳು:-

1). ಶಿಕ್ಷಕರ ಜೊತೆಗೆ (2008- ವಿಕ್ರಮ್ ಪ್ರಕಾಶನ)
ಈ ಪುಸ್ತಕ 2008 ರಲ್ಲಿ ಪ್ರಕಟವಾಗಿದ್ದು, ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯು ಈ ಪುಸ್ತಕವನ್ನು ಕರ್ನಾಟಕದಲ್ಲಿರುವ ಎಲ್ಲಾ ಶಾಲೆಗಳ ಗ್ರಂಥಾಲಯಕ್ಕೆ ಖರೀಧಿಸಿದ್ದು ಈ ಪುಸ್ತಕದ ಮತ್ತೊಂದು ಹೆಗ್ಗಳಿಕೆಯಾಗಿದೆ. 

ಐ,ಸಿ,ಎಸ್,ಇ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವ್ಯಾಕರಣ ವಿಭಾಗಕ್ಕೆ ಈ ಪುಸ್ತಕ ಕೆಲವು ಶಾಲೆಗಳಲ್ಲಿ ಪಠ್ಯ ಪುಸ್ತಕದ ರೀತಿಯಲ್ಲಿ ಚಾಲನೆಯಲ್ಲಿದೆ. 

  2). ನಮ್ಮ ದಿನಾಚರಣೆಗಳು 2014- ಪ್ರತಿಭಾ ಪ್ರಕಾಶನದಿಂದ ಲೋಕಾರ್ಪಣೆಯಾಯಿತು. ನಾವು ಆಚರಿಸುವ ಹಲವು ದಿನಾಚರಣೆಗಳ ಇತಿಹಾಸ. ಮಹತ್ವ ಮತ್ತು ಹಿನ್ನಲೆಯ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಈ ಪುಸ್ತಕವು ಕನ್ನಡದ ಚಂದನ ಟಿ.ವಿ. ವಾಹಿನಿಯ "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಹಲವು ತಿಂಗಳವರೆಗೆ ವಿಜೇತರಿಗೆ ಬಹುಮಾನವಾಗಿ ನೀಡಲಾಗುತ್ತಿದ್ದು ಇದು ಪುಸ್ತಕದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ವಿಡಿಯೋಗಾಗಿ ಕಾರ್ಯಕ್ರಮದ ತುಣುಕು ಈ ಲಿಂಕಲ್ಲಿದೆ : https://youtu.be/DOrSgndOH74?si=8Us8wC4JQaJue6qq 

3) ಕನ್ನಡ ಕಸ್ತೂರಿ 10 ಮಾರ್ಗದರ್ಶಿ (ಸುಭಾಷ್ ಪಬ್ಲಿಕೇಶನ್)ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

4) ಇಬ್ಬನಿಯಲಿ ಅವಳ ಕಂಡಾಗ - ಕಥಾಸಂಕಲನ  (ಹೆಚ್,ಎಸ್,ಆರ್,ಎ, ಪ್ರಕಾಶನ- 2018)


5)  ಪ್ರೇತಾತ್ಮದ ಮನೆಯಲ್ಲಿ - ಕಾದಂಬರಿ.
ಕಾವ್ಯ ಮಿತ್ರ ಪ್ರಕಾಶನದಿಂದ ನವಂಬರ್ 04-2018 ರಲ್ಲಿ ಲೋಕಾರ್ಪಣೆ.


6) ಮನದಾಸೆ ಹಕ್ಕಿಯಾಗಿ - ಕಥಾ ಸಂಕಲನವು ಹೆಚ್.ಎಸ್.ಆರ್.ಎ ಪ್ರಕಾಶನದಿಂದ 2019 ಜನವರಿ  06 ರಲ್ಲಿ ಲೋಕಾರ್ಪಣೆ


7) ಮೃತ್ಯು ದಂಡಂ - ಕಾದಂಬರಿಯು ದಿನಾಂಕ 21-07-2019 ರಲ್ಲಿ ಗುಂಡ್ಲು ಪೇಟೆಯಲ್ಲಿ ನಡೆದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಐದನೇ ಕಾರ್ಯಕಾರಿಣಿ ಸಭೆಯಲ್ಲಿ ಲೋಕಾರ್ಪಣೆ


8) ಬಿಡಿಯಾಗಿ ಬಿದ್ದ ಭಾವಗಳು - ಪ್ರಬಂಧ ಸಂಕಲನವು ಜೂನ್ 2022 ರಂದು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಲೋಕಾರ್ಪಣೆ 


9) ಸುಭಾಷ್ ಮಾರ್ಗದರ್ಶಿ  I PU study book (2013- ಸುಭಾಷ್ ಪಬ್ಲಿಕೇಶನ್) ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

10) ಸುಭಾಷ್ ಮಾರ್ಗದರ್ಶಿ  II PU study book (2013- ಸುಭಾಷ್ ಪಬ್ಲಿಕೇಶನ್) ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

11) ಸಾಹಿತ್ಯ ಸಂಚಲನ ಐ,ಸಿ,ಎಸ್,ಇ ಮಾರ್ಗದರ್ಶಿ (2014) ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

12) ಸುಭಾಶ್ ಗೈಡ್ II B. Com Bangalore university Guide ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

13) ಸುಭಾಶ್ ಗೈಡ್ III B. Com Bangalore university Guide ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

14) ಸುಭಾಶ್ ಗೈಡ್ I B.A Bangalore university Guide ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

ಪ್ರಶಸ್ತಿಗಳು

1) ಕನ್ನಡ ಸಂಘಟನಾ ಶಿಕ್ಷಕ ಪ್ರಶಸ್ತಿ (ಸಿರಿಗನ್ನಡ ಪ್ರಕಾಶನ ಚಿತ್ರದುರ್ಗ)

2) ಕನ್ನಡ ರತ್ನ ಪ್ರಶಸ್ತಿ ( ಸಿರಿಗನ್ನಡ ಪ್ರಕಾಶನ)


3) "ವಿಶ್ವಮಾನ್ಯ ಕನ್ನಡಿಗ" ದಿನಾಂಕ 11-03-2018 ರಲ್ಲಿ ಬಿಜಾಪುರ ಜಿಲ್ಲೆ ಇಂಡಿಯಲ್ಲಿ ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ  ಪ್ರಶಸ್ತಿ 


4) "ನೇಷನ್ ಬ್ಯುಲ್ಡರ್" ಅಖಿಲ ಭಾರತ ಭಾವಸಾರ ಮಹಾಸಭಾ ರವರಿಂದ  ಪ್ರಶಸ್ತಿ 02-09-2017 ರಲ್ಲಿ


5) ಕನ್ನಡ ಸಾಹಿತ್ಯ ರತ್ನ - ಹೆಚ್ ಎಸ್ ಆರ್ ಎ,  ಪ್ರಕಾಶನ ಇವರಿಂದ ಕವಿವೃಕ್ಷ ಬಳಗದಿಂದ ಕಾರ್ಯಕ್ರಮ ಸಂಘಟನೆ. ಪ್ರತಿಭಾವಂತರ ಶೋದ ಮತ್ತು ಹದಿನೈದು ಕೃತಿಗಳ ಲೋಕಾರ್ಪಣೆ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ, 2018 ಜಲೈಯ ಒಂದರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ.


6). ಕರುನಾಡ ಚೇತನ ಸಾಹಿತ್ಯ ಸನ್ಮಾನ - 25-12-2018 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಧಾರವಾಡದ ಚೇತನಾ ಪ್ರಕಾಶನವು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ .

7). ಕನ್ನಡ ಸೇವಾರತ್ನ ಪ್ರಶಸ್ತಿ - ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ ದಿನಾಂಕ ಮೇ 12, 2019 


8) 3 K (ಕನ್ನಡ ಕಥನ ಕವನ) ಸಂಘಟನೆಯಿಂದ ಉತ್ತಮ ಕವನ ವಾಚನಕ್ಕಾಗಿ ಪ್ರಶಸ್ತಿ 2016

9) ಕ್ರಾಂತಿ ಪ್ರಕಾಶನ ರವರು ಧಾರಾವಾಡದಲ್ಲಿ ದಿಂನಾಂಕ 01-10-2017 ರಂದು ಆಯೋಜಿಸಿದ ರಾಜ್ಯ ಮಟ್ಟದ ಕವನ ವಾಚನ ಸ್ಪರ್ಧೆಗೆ ಆಯ್ಕೆ. ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯ ಗೌರವ.


10) ಕಣ್ಣಿನ ಮಾತುಗಳು - ಎಂಬ ನನ್ನ ಕತೆಯು 2017 ಸೆಪ್ಟೆಂಬರ್ 2 ರಂದು ಉತ್ತರ ಅಮೇರಿಕಾ ಟೆಕ್ಸಸ್ ರಾಜ್ಯದ ಡ್ಯಾಲಸ್ ನಗರನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಕಥಾ ಸ್ಪರ್ಧೆಯಲ್ಲಿ ಬಹುಮಾನಿತ ಕಥೆ ಮತ್ತು ವಿಶ್ವ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಯ ಗೌರವ.

11) 2017 ನವಂಬರ್ 26 ರಂದು ನಡೆದ "ಕನ್ನಡ ಕಥನ ಕವನ (3ಕೆ)" ರಾಜ್ಯೋತ್ಸವ ಸಮಾರಂಭದಲ್ಲಿ ನನ್ನ ಪ್ರಬಂಧ ಲೇಖನಕ್ಕೆ ಪ್ರಥಮ ಬಹುಮಾನದ ಗೌರವ 


12) ಸರಜೂ ಕಾಟ್ಕರ್ ಸಾಹಿತ್ಯ ಪುರಸ್ಕಾರ :- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 20-03-2022 ರಂದು ಗೌರವಿಸಲಾಯಿತು.


13). ಎಂ ಡಿ ಗೋಗೇರಿ ಸಾಹಿತ್ಯ ಸದ್ಭಾವನ ಪ್ರಶಸ್ತಿ : ಚೇತನಾ ಫೌಂಡೇಶನ್ನಿನ ನಾಲ್ಕನೇ ಸಾಹಿತ್ಯ ಸಮ್ಮೇಳನ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 24-04-2022 ರಂದು ಗೌರವ ಸನ್ಮಾನ 


14)   ಹೊಯ್ಸಳ ಸಾಹಿತ್ಯ ಪ್ರಶಸ್ತಿ :- ದಿನಾಂಕ ೧೦-೧೧-೨೦೨೪ ರ ಭಾನುವಾರರಂದು ಮಾಣಿಕ್ಯ ಪ್ರಕಾಶನವು ರಾಜ್ಯಮಟ್ಟದ ಪ್ರಶಸ್ತಿಯನ್ನು ಹಾಸನದ ಸಂಸ್ಕೃತ ಭವನದಲ್ಲಿ ಸಾಹಿತ್ಯ ಸೇವೆಗಾಗಿ ನೀಡಿ ಗೌರವಿಸಲಾಯಿತು


ಸಂಪಾದನಾ ಕೃತಿಗಳು

1. ಕವಿ ಮನದ ಕುಸುಮಗಳು (ಕವನ ಸಂಕಲನ) 2018 ಹೆಚ್,ಎಸ್,ಆರ್,ಎ ಪ್ರಕಾಶನ 


2. ಕಥಾವೃಕ್ಷ (ಕಥಾ ಸಂಕಲನ)
2018 ಹೆಚ್,ಎಸ್,ಆರ್,ಎ ಪ್ರಕಾಶನ


3. ನವಿಲುಗರಿಯ ಬಣ್ಣಗಳು (ಕವನ ಸಂಕಲನ)
2018 ಹೆಚ್,ಎಸ್,ಆರ್,ಎ ಪ್ರಕಾಶನ


ನನ್ನ ಲೇಖನಗಳಿರುವ ಇತರ ಪುಸ್ತಕಗಳೆಂದರೆ

1. "ಶಿಕ್ಷಕ ವೃತ್ತಿಯ ಪಾವಿತ್ರ್ಯತೆ"
2. "ಕನಸಿನ ಕರ್ನಾಟಕ"
ಮತ್ತು
3. "ಕಾವ್ಯ ರಶ್ಮಿ" ಪುಸ್ತಕ ಬಿಡುಗಡೆ.

ಸಾಹಿತ್ಯ ಸೇವೆಗಳು

ಮೇ 20 , 2018 ರಂದು ಬೆಂಗಳೂರು ಕವಿವೃಕ್ಷ ಬಳಗದ ಅಧ್ಯಕ್ಷನಾಗಿ ಆಯ್ಕೆ.

1. ಜುಲೈ 01-2018 ರಂದು ಸಾಹಿತ್ಯ ಸಂಘಟನೆಯಲ್ಲಿ ತೋಡಗಿಕೊಂಡು ರಾಜ್ಯ ಮಟ್ಟದ ಕವಿಗೋಷ್ಟಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಆಯೋಜನೆ, ಕನ್ನಡ ಸಾಹಿತ್ಯ ಪರಿಷತ್ತು ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿದ್ದು, ಹನ್ನೊಂದು ಕವಿಗಳ ಹದಿನೈದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಈ ಮಹತ್ಕಾರ್ಯಕ್ಕೆ ಮತ್ತು ನನ್ನ ಇಬ್ಬನಿಯಲಿ ಅವಳ ಕಂಡಾಗ ಕಥಾಸಂಕಲನಕ್ಕೆ ಹೆಚ್,ಎಸ್,ಆರ್,ಎ, ಪ್ರಕಾಶನವು "ಕನ್ನಡ ಸಾಹಿತ್ಯ ರತ್ನ" ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿತು.

ಇತರ ಸೇವೆಗಳು

1) 2012 ರಲ್ಲಿ ಮುಂಬೈ ಮತ್ತು ಔರಂಗಾಬಾದ್ (ಮಹಾರಾಷ್ಟ್ರ) ಸೋಶಿಯಲ್ ಸರ್ವೀಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ)

2) 2014 ರಲ್ಲಿ ಮತ್ತೆ ಮುಂಬೈ, ಔರಂಗಾಬಾದ್ ನಲ್ಲಿ ನಡೆದ ಸೋಶಿಯಲ್ ಸರ್ವಿಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ

3) 2016 ರಲ್ಲಿ  ದಮನ್ (ಕೇಂದ್ರಾಡಳಿತ ಪ್ರದೇಶ... ಸೌತ್ ಗುಜರಾತ್) ನಲ್ಲಿ ನಡೆದ ಸೋಶಿಯಲ್ ಸರ್ವೀಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ

ಸಂಘಟನಾ ಸೇವೆ

ಮೇ 21- 2018 ರಲ್ಲಿ, ಬೆಂಗಳೂರು ಕವಿವೃಕ್ಷ ಬಳಗದ ಅಧ್ಯಕ್ಷನಾಗಿ ಆಯ್ಕೆ

1. ಜುಲೈ -30- 2018 ರಲ್ಲಿ ಬೆಂಗಳೂರು ಕವಿ ವೃಕ್ಷ ಬಳಗದಿಂದ , ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ರಾಜ್ಯದಾದ್ಯಂತ ಹದಿನೈದು ಉದಯೋನ್ಮುಖ ಕವಿಗಳನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಸಹಾಯ ಮತ್ತು ಲೋಕರ್ಪಣೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

2. ನವಂಬರ್ 04. 2018 ರಲ್ಲಿ ಬೆಂಗಳೂರು ಕವಿ ವೃಕ್ಷ ಬಳಗದಿಂದ , ಸಾಹಿತ್ಯ ಸಂಭ್ರಮ, ಕವಿಗೋಷ್ಠಿ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಯಿತು. ರಾಜ್ಯದಾದ್ಯಂತ ಹನ್ನೆರಡು  ಉದಯೋನ್ಮುಖ ಕವಿಗಳನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಸಹಾಯ ಮತ್ತು ಲೋಕರ್ಪಣೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು

3. ಜನವರಿ 6- 2019 ರಲ್ಲಿ ಬೆಂಗಳೂರು ಕವಿ ವೃಕ್ಷ ಬಳಗದಿಂದ , ಸಂಕ್ರಾಂತಿ ಸಾಹಿತ್ಯ ಸುಗ್ಗಿ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಆಯೋಜನೆ. ರಾಜ್ಯದಾದ್ಯಂತ ಹನ್ನೆರಡು ಉದಯೋನ್ಮುಖ ಕವಿಗಳನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಸಹಾಯ ಮತ್ತು ಲೋಕರ್ಪಣೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ಇತರ ಉಪನ್ಯಾಸಗಳು 

1. ರವಿಕಿರಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮತ್ತು ಕನ್ನಡ ಸಾಹಿತ್ಯದಲ್ಲಿ ಹನಿಗವನಗಳ ಪಾತ್ರದ ಕುರಿತು ಉಪನ್ಯಾಸ

2. ಸಿರಿಗನ್ನಡ ಬಳಗದ ಸಾಹಿತ್ಯ ಗೋಷ್ಠಿಯಲ್ಲಿ ಮುಖ್ಯ ಅತಿಥಿ ಮತ್ತು ಪ್ರಸ್ತುತ ಸಾಹಿತ್ಯದ ಸ್ಥಿತಿ ಗತಿ ಕುರಿತು ಉಪನ್ಯಾಸ

3. ವೆಂಕಟೇಶ್ವರ ಶಾಲೆ - ಕನ್ನಡ ರಾಜ್ಯೋತ್ಸವ ಆಚರಣೆಯ ಮುಖ್ಯ ಅತಿಥಿ, ಕನ್ನಡ ನಾಡು ನುಡಿ ಕುರಿತು ಉಪನ್ಯಾಸ 


4. ಮಹಾ ಪ್ರಕಾಶದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಟಿಯಲ್ಲಿ ಉದ್ಘಾಟನೆ ಮತ್ತು ಕನ್ನಡ ಸಾಹಿತ್ಯದ ಕುರಿತು ಉಪನ್ಯಾಸ.


5. ಪ್ರೇಮಗಂಗಾ ಹೆಲ್ಪ್ನಕೇರ್ ಮತ್ತು ಕಾವ್ಯಮಿತ್ರ ಪ್ರಕಾಶನದ ಪ್ರೇಮಾನುರಾಗ ಪುಸ್ತಕ ಬಿಡುಗಡೆಯಲ್ಲಿ ಅತಿಥಿ, ಮತ್ತು ಭಾಷಣ 


6. ದಿನಾಂಕ 14-06-2019 ರ ಬೆಳಕು ಶೋಧ ಕಾರ್ಯಕ್ರಮದಲ್ಲಿ, ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಕರ್ನಾಟಕದ ವೀರ ಸೈನಿಕ "ಲಾರೆನ್ಸ್ ಡಿಸೋಜ" ಕುರಿತಾದ ಪರಿಚಯಾತ್ಮಕ ಭಾಷಣ 

7. ದಿನಾಂಕ 01-11-2022, ವಿಶ್ವವಿದ್ಯಾಪೀಠ ಶಾಲೆ ಯಲಹಂಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕನ್ನಡ ನಾಡು ನಡಿಯ ಕುರಿತಾಗಿ ಉಪನ್ಯಾಸ. 


8. ದಿನಾಂಕ 21-11-2022 ಭಾವತರಂಗ ಸಾಹಿತ್ಯವೇದಿಕೆಯಲ್ಲಿ ಮುಖ್ಯ ಅತಿಥಿ, ಪುಸ್ತಕ ಬಿಡುಗಡೆ ಮತ್ತು ಪುಸ್ತಕ ಪರಿಚಯ ಭಾಷಣ 


9) ದಿನಾಂಕ 13-04-2024  ಬಸವ ಜಯಂತಿ ಪ್ರಯುಕ್ತ ಚಿಕ್ಕ ಬಾಣಾವರದ ಎಂ.ಎಸ್. ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಗೆ ಅತಿಥಿಯಾಗಿ ಭಾಗವಹಿಸುವಿಕೆ ಬಸವಣ್ಣನವರ ತತ್ವ ಮತ್ತು ಚಿಂತನೆಗಳ ಕುರಿತು ಉಪನ್ಯಾಸ.. 


10) ದಿನಾಂಕ 06-10-2024 ರ ಭಾನುವಾರ ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ವಚನ ಕಮ್ಮಟ ಕಾರ್ಯಕ್ರಮದಲ್ಲಿ ಉಪನ್ಯಾಸ (ವಿಷಯ ವಿಭೂತಿ) 

12) ದಿನಾಂಕ 10-10-2024 ರ ಗುರುವಾರ ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ವಚನ ಕಮ್ಮಟ ಕಾರ್ಯಕ್ರಮದಲ್ಲಿ ಉಪನ್ಯಾಸ (ವಿಷಯ - ಪ್ರಸಾದಿ) 

 ಆಹ್ವಾನ ಪತ್ರಿಕೆ 

ವಚನ ಕಮ್ಮಟದಲ್ಲಿ ಭಾಗವಹಿಸಿದ್ದು 

ಚಿತ್ರದುರ್ಗದ ಮುರುಘಾಮಠದ ವಚನಕಮ್ಮಟದ ಭಾಷಣದ ನೇರಪ್ರಸಾರ ಟಿ.ವಿ ಯಲ್ಲಿ

13) ದಿನಾಂಕ ೩೦-೦೪-೨೦೨೫ ರಂದು ಎಂ.ಎಸ್ ಇಂಗ್ಲಿಷ್ ಶಾಲೆಯಲ್ಲಿ ಬಸವಜಯಂತಿ ಅಂಗವಾಗಿ ಆಯೋಜಿಸಿದ ಶೈಕ್ಷಣಿಕ ಕಾರ್ಯಗಾರದಲ್ಲಿ ಅತಿಥಿಯಾಗಿ ಭಾಗವಹಿಸಿ ಬಸವಣ್ಣನವರ ವಚನಗಳಲ್ಲಿರುವ ಮೌಲ್ಯಗಳ ಬಗ್ಗೆ ಮಾತನಾಡಲಾಯಿತು.



೧೪) ಕನ್ನಡ ತೇರು ಬಳಗದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ದೊಡ್ಡರಂಗೇಗೌಡರು ಮತ್ತು ಶಶಿಕಾಂತರಾವ್ ಜೊತೆಯಲ್ಲಿ 

ಅತಿಥಿಯಾಗಿ ಭಾಗವಹಿಸಿ. ಕನ್ನಡ ಪುಸ್ತಕ ಲೋಕಾರ್ಪಣೆ ಮತ್ತು ಪುಸ್ತಕ ವಿಮರ್ಶೆ ನಡೆಸಲಾಯಿತು 

 

ಟಿ.ವಿ ಕಾರ್ಯಕ್ರಮಗಳು 

1. ಶ್ರೀ ಬಸವ ಟಿವಿ ಸಾಹಿತ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ 30ಕ್ಕೂ  ಕಾರ್ಯಕ್ರಮಗಳು 

2. ಶ್ರೀ ಬಸವ ಟಿವಿಯಲ್ಲಿ ವಿರೂಪಕನಾಗಿ ಸಾಹಿತ್ಯ ಜಾಗೃತಿಯ 15 ಕ್ಕೂ ಹೆಚ್ಚು ಕಾರ್ಯಕ್ರಮಗಳು 

3. ಶ್ರೀ ಬಸವ ಟಿವಿಯಲ್ಲಿ "ಅನುಭವ ಗೋಷ್ಟಿ" ಯಲ್ಲಿ 100 ಕ್ಕೂ ಹೆಚ್ಚು ಕಾರ್ಯಕ್ರಮಗಳು ಭಾಗವಹಿಸಿದ್ದು 

4. ಶ್ರೀ ಬಸವ ಟಿವಿಯಲ್ಲಿ "ಶರಣ ಚರಿತಾಮೃತ" ಯಲ್ಲಿ ೨೦ ಕ್ಕೂ ಹೆಚ್ಚು ಕಾರ್ಯಕ್ರಮಗಳು 


Tuesday, 4 July 2017

ನಮ್ಮ ಬಸ್ಯ..

ನಮ್ಮ ಬಸ್ಯ...

ಮಾಲ್ ನಲಿ ಬಸ್ಯ ಕೆಲಸಕೆ ಸೇರಿ
ಪಿಳಿ ಪಿಳಿ ಕಣ್ಣಲಿ ಜನಗಳ ನೋಡುತ
ಟೈಯನು ಬಿಗಿದು ನೇಣಿನ ಹಾಗೆ
ಸಲಾಮು ಮನಸ್ಕಾರ ಭಂಗಿಯ ತೋರಿ
ಕಷ್ಟದಿ ಕೃತಕ ನಗೆಯನು ಬೀರಿದ್ದ...

ಕೊರಳಲಿ ಐಡಿ ಕಾರ್ಡಿನ ಮಾಲೆ
ನಾಲಿಗೆಯಲಿ ಇಂಗ್ಲಿಷಿನ ಉರುಳುಯ್ಯಾಲೆ
ಹೊಂದದ ವಿಲಾಸಿ ವೇಷವ ತೋರುತ
ಇಲ್ಲದ ಧೂಳನು ಕೊಡವುತ ಒರೆಸುತ
ಮಾಲ್ ನಲಿ ಕೆಲಸವ ಮಾಡಿಹನು...

ಗೆಳೆಯನೊಬ್ಬ ಬಸ್ಯನ ಕಂಡು
ಅಚ್ಚರಿಯಲಿ ಅವನವತಾರವ ನೋಡಿ
'ಶೆಟ್ಟರಂಗಡಿಯಲಿ ಕೆಲಸದಿ ಇರುವಾಗ
ನೀನಿಂಗಿರಲಿಲ್ಲ ಬಿಡೋ ಬಸ್ಯ'
ಹೇಳಿದನು ಹಲ್ಲನು ಕಿಸಿಯುತಲಿ..

ಬಸ್ಯ ಗಂಭೀರದಿ ಗೆಳೆಯನ ನೋಡುತ
ಆಂಗ್ಲ ನುಡಿಯನು ಸ್ಟೈಲಲಿ ನುಡಿಯುತ
'Now India changed ಯಾರ್'
ಕೆಮ್ಮಿದ ತೊದಲಿದ ಹೇಳುತ ಬಸ್ಯ
ಕೊರಳಿನ ಟೈ ಯನು ಸವರುತಲಿ...

   - ಪ್ರಕಾಶ್ ಎನ್ ಜಿಂಗಾಡೆ.

Wednesday, 28 June 2017

ಭಿಕ್ಷುಕಿ

ಭಿಕ್ಷುಕಿ

ಇರಲಿ ಬಿಡಿ
ಆದರೂ ಅವಳು ಸುಂದರಿಯೇ..

ರಸ್ತೆ ಅಂಚಿನಲಿ
ಚಿಂದಿ ದಿರಿಸಿನಲಿ
ಮಸಿ ಮುಖದಲೇ ತಿರುಗುತ
ತಿರುಪೆಯ ಬೇಡುತ
ತರುಣಿಯು ಅಂದವ ತೋರಿಹಳು..

ಇರಲಿ ಬಿಡಿ
ಆದರೂ ಅವಳು ಅಪ್ಸರೆಯೇ..

ಕ್ರೀಮಿಲ್ಲ ಚೆಂದದ ಸೋಪಿಲ್ಲ
ಕಲಾವಿದನ ಮಾಂತ್ರಿಕ ಸ್ಪರ್ಶವಿಲ್ಲ
ರವಿಯ ಹೊಂಬೆಳಕಿನಡಿಯಲಿ
ಬಿಸಿಲಲಿ.. ಮಣ್ಣ ಹುಡಿಯಲಿ
ನಿಜ ಸ್ವರೂಪಿ ಕನ್ಯೆಯಿವಳು..

ಇರಲಿ ಬಿಡಿ
ಆದರೂ ಅವಳು ಸುಸಂಸ್ಕೃತಳು..

ಅತಿಯಾದ ಆಸೆಗಳಿಲ್ಲ
ಮೋಸ ದ್ರೋಹವ ತೋರಿಸಿಲ್ಲ
ಯಾವ ಜನುಮದ ಪಾಪವೋ
ಯಾವ ದೇವರ ಶಾಪವೋ
ಎಲ್ಲರಂತೆ ಬದುಕುವುದ ಕಲಿತಿಲ್ಲ...

    -ಪ್ರಕಾಶ್ ಎನ್ ಜಿಂಗಾಡೆ


ಫ್ಯಾಷನ್ನು

ಫ್ಯಾಷನ್ನು...

ಕೊರಳಲ್ಲಿಯ ಗುಂಡಿ ಬಿಚ್ಚಿದ ಅಂಗಿ
ಸೊಂಟದ ಮೇಲೆ ನಿಲ್ಲದ ಪ್ಯಾಂಟು
ವಕ್ರ ನಡೆಯ ಮರ್ಕಟ ಭಾವ
ಕಿವಿಗಳಲಿ ಕರ್ಣ ಮಂಡಲವು
ಇಂದಿನ ಯುವಕರ ಫ್ಯಾಷನ್ನು..

ಪ್ರಾಣಿಗಳ ಮೀರಿಸುವ ಕೇಶ ವಿನ್ಯಾಸಗಳು
ಅಲ್ಲಲ್ಲಿ ಕತ್ತರಿ ಹಾಕಿದ ಗುರುತುಗಳು
ಇಲಿ ತುರಿದಂತಿರುವ ಕುರುಹುಗಳು
ಇಳಿ ಬಿದ್ದ ಕೂದಲಲಿ ವಿಚಿತ್ರ ರಂಗುಗಳು
ಅದೇನಂತ ಅವರಿಗೇ ಕನ್ ಫ್ಯೂಸನ್ನು..

ಸುಪನಾತಿ ಉಡುಗೆಯ ಹುಡುಗಿಯರು
ಪಾರದರ್ಶಕ ಮಿತ ಉಡುಪುಗಳು
ಕಾಣುವ ಮಂಡಿ ತೋರುವ ನಡು
ಬಣ್ಣ ಮೆತ್ತಿದ ಅಧರಗಳು ಪಾರ್ಲರಿನ ಕೆನ್ನೆಗಳು
ಆದರೂ ಬೇಕೆನ್ನುತಿಹರು ತಮಗೆ ಪ್ರೊಟೆಕ್ಷನ್ನು..

ಐಲು ಬೈಲು ಇಂಗ್ಲಿಷನು ಬೆರೆಸಿ
ಅನ್ಯರ ಅನುಕರಣೆ ಅತಿಯಾಗಿ ನಡೆಸಿ
ನುಡಿ ಸಂಸ್ಕೃತಿಯನು ಹಾಳುಗೆಡಹಿ
ಕನ್ನಡ ಮಾತೆಯ ನುಡಿಯಲಿ ಸೋಲಿಸಿ
ಕೊಡುತಿಹರು ನಾಡಿಗೆ ಅತಿಯಾದ ಟೆಂಕ್ಷನ್ನು..

ಪ್ರಕಾಶ್ ಎನ್ ಜಿಂಗಾಡೆ