Thursday, 15 March 2018

ಗರಡಿ

ಆಹಾರಂ ಪಚನಗೊಳಿಸಿದೊಡೇನು ಫಲ
ದೇಹವಂ ಹುರಿಗೊಳಿಸಿದೊಡೆ
ಆತ್ಮವಿಶ್ವಾಸಂ ಆರೋಗ್ಯಂ ವೃದ್ದಿಸುವುದಯ್ಯ..

ಬರಿಯ ಕಾಯಕವ ಸಲ್ಲಿಸಿದೊಡೇನು ಫಲ
ಗರಡಿ ತಾಲೀಮಿನ ಕಸರತ್ತು ಇಲ್ಲದೊಡೆ
ದೇಹವು ಮಾತನೆಂತು ಕೇಳುವುದಯ್ಯ..

ವೈದ್ಯರಿಂಗೆ ಸಂಪತ್ತು ಸುರಿಸಿದೊಡೆ
ಆಯಸ್ಸು ಚಿಗುರೊಡೆದು ಬರವುದೇನಯ್ಯ
ಗರಡಿ ಶಾಲೆಯೇ ನಿಜ ಚಿಕಿತ್ಸಾಲಯವಯ್ಯ.. 

ಯೋಗಂ ಹೃದ್ಯಂ.. ಅನುಭೋಗಂ ವದ್ಯವಯ್ಯ
ತಾಲೀಮು ತಮ್ಯಂ..  ಆಲಸ್ಯಂ ರೋಗವಯ್ಯ
ದೇಹಂ ದಂಡಂ ಆದೊಡೆ ಆರೋಗ್ಯ ಹಿತವಪ್ಪುದಯ್ಯ..

ಬದುಕಲಿ ಶಿಸ್ತು ಪಾಲನೆ ಇಲ್ಲವಾದೊಡೆ
ದೇವ ಕೊಟ್ಟ ಆಯಸ್ಸು ಇಲ್ಲವಯ್ಯ
ಈ ನಿಜ ಚಿತ್ರಂ ಅರಿತು ಬಾಳುವದ ಕಲಿಯಿರಯ್ಯ..

       -ಪ್ರಕಾಶ್ ಎನ್ ಜಿಂಗಾಡೆ

ಹಳ್ಳಿ ಹಾದಿ

ಹಳ್ಳಿಯ ಹಾದಿಯಿದು
ಒಲವು ಸಿಗುವ ಸವಿ ನೆಲೆಯಿದು
ಬಡವರಿರುವ ಸಿರಿವಂತ ತಾಣವಿದು
ಪ್ರೀತಿಗೆ ನೀತಿಗೆ ಏಕತೆಗೆ
ಆಲಯವಿದು.. ಪ್ರೇಮಾಲಯವಿದು

ಸ್ನೇಹ ಸಂಬಂಧಗಳ ಮಾರಾಟವಿಲ್ಲ
ಸಂಸ್ಕೃತಿ ಮೌಲ್ಯಗಳ ನಾಶವಿಲ್ಲ
ಹಣಕೆ ಬಾಯ್ಬಿಟ್ಟ ಹೆಣಗಳಿಲ್ಲ
ಬದುಕಿನು ಕಲಿಸುವ ವಿದ್ಯಾಲಯವಿದು
ಬನ್ನಿರೈ ಒಮ್ಮೆ ನೆಲಸಿ ನೋಡಿರೈ

ಯಾರಿಹರು ಒಮ್ಮೆ ತೋರಿಸಿಬಿಡಿ
ಹಳ್ಳಿಯ ಹಿನ್ನಲೆಯಿರದ ಸಾಧಕರು
ದೇಶವನೇ ಆಳಿ ತೋರಿಹರು
ಬೆವರಿನ ಹನಿಯನು ಭೂಮಿಗೆ ಬೆರಸಿ
ಮಣ್ಣಿನ ಮಕ್ಕಳೇ ಆಗಿಹರು..

ಪ್ರಕಾಶ್ ಎನ್ ಜಿಂಗಾಡೆ

ಮನಸಾಗಬಹುದು..

ಮನ ಮನಗಳ ಒಲವಿನಲಿ
ಮನಸಾಗಿ ಮನಸು ತೋರಿ
ಮನಸಿನವಳು ಮನಸು ಮೂಡಿಸಿದರೆ
ಮನಸಾಗಬಹುದೇನೋ..

ಮನಸಿಲ್ಲದ ಮನಸಿನಲಿ
ಮನಸು ಮೂಡಿಸಿದರೆ ಮನಸಾಗದು
ಮನಸ್ಸೆಂಬುದು ಮನ ಮನಗಳ ಮಿಡಿತ
ಮನ ಮನಗಳ ಸೆಳೆತವೇನೋ..

   -ಪ್ರಕಾಶ್ ಎನ್ ಜಿಂಗಾಡೆ

ಅರಿವು

ಅರಿಯೋ ಜಗದರಿವ
ಮನ ಬೆಳಗಿಸೋ ಅರಿವ
ಆರಿಸೋ ನೀಚ ಮನಗಳಲಿ
ಅರಿವಿನ ದೀಪ ಬೆಳಗಿಸೋ
ಹೇ ದೇವ...

ಬೆಳಕಿನ ಜಗದಿರುವಿನಲಿ
ಅಂಧಕಾರದ ಅರಿ ತೊಲಗಲಿ
ನೇಸರನ ಉದಯದಲಿ
ಬದುಕು ಬೆಳಕಾಗಿರಲಿ
ಹೇ ದೇವ ...

     -ಪ್ರಕಾಶ್ ಎನ್ ಜಿಂಗಾಡೆ

ಮತ್ತೊಂದು ಸ್ವಾತಂತ್ರ್ಯ

ಮುಗ್ಧ ಜನರ ಮನದ ಅಳಲನು
ಅರಿಯದ ನಾಯಕರು
ಸುತ್ತಲೂ ಸೋಗಿನಲಿರುವಾಗ 
ಗಾಂಧಿಯೇ ಸಪ್ಪಗಾಗಿ
ಶಿರ ಭಾಗಿಸಿ ಕುಳಿತಿಹನು..

ಸ್ವಾತಂತ್ರವೋ ಸ್ವೇಚ್ಛೆಯೋ
ಶಾಂತಿ ಅಹಿಂಸೆಯ ಕಪಟವೋ
ಸತ್ಯಾದರ್ಶವನು ಪಾಳು ಬಾವಿಗೆಸೆದ
ನಾಯಕರ ಮೋಡಿಯ ನೋಡಿ
ಮನ ನೊಂದು ಕುಳಿತಿಹನು..

ಪರಂಗಿಗಳ ಪಿರಂಗಿಗೆ ಎದೆ ಕೊಟ್ಚ
ಪರರ ದಾಸ್ಯಕೆ ಪ್ರಾಣವ ತೆತ್ತ
ವೀರರು ಮತ್ತೆ ಬೇಕಿದೆ
ಮತ್ತೊಂದು ಸ್ವಾತಂತ್ರ್ಯಕೆ
ಬನ್ನಿರಂದಿಹನು ಪಿತಾಮಹನು..

           -ಪ್ರಕಾಶ್ ಎನ್ ಜಿಂಗಾಡೆ

ಹೆಣ್ಣು..

ಹೆಣ್ಣು…
ಪ್ರಕೃತಿಯ ಅದ್ಭುತ ಸೃಷ್ಟಿ
ಹೆಣ್ಣೆಂಬುದು ಬರಿಯ ಶಬ್ದವಲ್ಲ
ಆಕೃತಿಯಲ್ಲ, ಬರಿಯ ಕಲ್ಪನೆಯೂ ಅಲ್ಲ
ಜಗದ ಶಕ್ತಿಯವಳು
ಕ್ಷಮಯಾ ಧರಿತ್ರಿಯವಳು..

ಹೆಣ್ಣು….
ಬರಿಯ ಜೀವವಲ್ಲ
ಅವಳು ಭೂಮಿಯಂತೆ ಪವಿತ್ರಳು
ದೇವರಷ್ಟೇ ಪೂಜ್ಯಳು
ಜಗದ ಎಲ್ಲಾ ಪಾತ್ರಗಳಲಿ
ತಾನೇ ನೋವನುಂಡು
ಪರರ ಸುಖಕಾಗಿ ನಿಂತಿಹಳು..

ಹೆಣ್ಣು….
ಬರಿಯ ಅಬಲೆಯಲ್ಲ
ಸಿಡಿಲಬ್ಬರದ ಶಕ್ತಿಯವಳು
ದೇಶದ ಚುಕ್ಕಾಣಿ ಹಿಡಿದು ನಿಂತಿಹಳು
ಬಂದೂಕನು ಹಿಡಿದು
ಯುದ್ಧ ವಿಮಾನದಲೂ
ಯಶಸ್ವಿ ಸೈನಿಕಳಾಗಿ ನಿಂತಿಹಳು..

ಹೆಣ್ಣು….
ಜಗದ ಸುಂದರ ಸೃಷ್ಟಿ
ಜಗದ ಮೂಲ ಶಕ್ತಿ ನೀನು
ಜಗಕೆ ಮೂಲ ಪ್ರೇರಕಿಯೂ ನೀನು
ನಗು ಮೊಗದಲೇ ಎಲ್ಲವನೂ
ಸಾಧಿಸುವ ಯಶಸ್ವಿ ಮಹಿಳೆಯೂ ನೀನು ...

ಹೆಣ್ಣು
ಸಕಲ ರಂಗದ ಸಾಧಕಿ
ನಿನಗಿದೋ ಸಾವಿರ ವಂದನೆಗಳು
ಹೃದಯ ಪೂರ್ವಕ ಅಭಿನಂದನೆಗಳು..
ಕೋಟಿ ನಮನವು ನಿಮಗೆ
ಮಹಿಳಾ ದಿನಾಚರಣೆಯ
ಶುಭ ಹಾರೈಕೆಗಳು ನಿಮಗೆ...

          - ಪ್ರಕಾಶ್ ಎನ್ ಜಿಂಗಾಡೆ

ಅನಾಗರೀಕತೆಯತ್ತ...

ಎಲ್ಲೋ ಒಂದು ಊರು
ಕಣಿವೆ ಬೆಟ್ಟಗಳ ಸೀಳಿ
ಅಲ್ಲಲ್ಲಿ.. ಮತ್ತೆ ಸ್ವಲ್ಪ ದೂರದಲ್ಲಿ
ಬೆಳಸಿದವರಾರೋ, ನೆಲೆಸಿದವರಾರೋ
ಎಂದೋ ಹೋಗೋ ಪುಟ್ಟಿದ ಆ ಗುಂಪಿಗೆ
ನಾಗರೀಕತೆಯ ಎರಕ ಹೊಯ್ದವರಾರೋ
ಭಾಷೆಯ ಸೆಳೆತ ತಂದವರಾರೋ
ಅಲ್ಲೇ ಕೃಷಿ..ಮತ್ತೆಲ್ಲೋ ಮಣ್ಣ ಅಗೆತ
ಅಲ್ಲಲ್ಲಿ ಅವರದೇ ಪರಪಂಚ
ಯಾರೆಂದರೋ ಅವರಿಗೆ
ಕಣಿವೆಯಲಿ ಬೆಟ್ಟದಲಿ ತಟದಲಿ
ಅಲ್ಲಲ್ಲಿ ನೆಲಸಿ ಬಾಳಿರೆಂದು
ಅಲ್ಲಿನದೆ ನಿಸರ್ಗ ಸಂಪತ್ತು ನಿಮ್ಮದೆಂದು
ಹೆಂಗೋ ಏನೋ ಊರ ರೂಪ ಪಡೆದವು
ಕೊಂಡಿ ಬೆಸೆದವು, ಪ್ರೀತಿ ಹುಟ್ಟಿತು...

ಊರೂರು ಪಟ್ಟಣ ನಗರಗಳು
ಗುಂಪುಗಳು ತಮ್ಮವರು ಪರರೆಂದು
ಧರ್ಮ ಜಾತಿಯೂ ಬೆಳೆಯಿತು
ಪಸರಿಸಿತು ಪಂಗಡಿಸಿತು
ಈಗೋ ಊರೂ ಸಹ ತುಸು ಹತ್ತಿರ
ಕೈ ಗೆಟುಕುವಷ್ಟೇ ದೂರ
ವಿಷ ಬೀಜವ ಬಿತ್ತಲು
ಗಲಬೆಗಳೂ ಅಲ್ಲಲ್ಲಿ..
ನಾಯ ರೀತಿಯ ಕಚ್ಚಾಟಗಳು
ಪ್ರೀತಿಯಾಗಿ ಬೆಸೆದಿಹ ಕೊಂಡಿಗೆ
ಹುಳಿಯನಿಂಡಿದವರಾರೋ
ಧರ್ಮ ಜಾತಿಗಳ ಬೇಲಿ ಹಾಕಿ
ಮತ್ತೆ ಅನಾಗರೀಕತೆಯತ್ತ
ತಳ್ಳುತಿರುವರಾರೋ ....
    
       -ಪ್ರಕಾಶ್ ಎನ್ ಜಿಂಗಾಡೆ.