Monday, 23 May 2016

ಕೆಪ್ಪನ ಕಥೆ

ಕೆಪ್ಪನ ಕಥೆ 


ನಮ್ಮೂರಿನ ಕೆಪ್ಪಣ್ಣನಿಗೆ ಮಲ ಬಾಧೆ ರೋಗ. ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ಬಾರಿ. ಒಂದೊಂದು ಸಲ ಪಂಚೆಯಲ್ಲೇ ಆಗಿ ಬಿಡುತ್ತಿತ್ತು. ಬೀದಿಯಲ್ಲಿ ನಡೆದುಕೊಂಡು ಬರುವಾಗಲೂ ಆಗಾಗ ಆಗುತ್ತಲೇ ಇರುತ್ತದೆ. ಇದೊಂದು ತರಹದ ವಿಚಿತ್ರವಾದ ಅಸಹ್ಯ ಪಟ್ಟುಕೊಳ್ಳುವ ರೋಗ ಕೆಪ್ಪಣ್ಣನ ಈ ರೋಗಕ್ಕೆ ಹೆಂಡತಿ ಈರವ್ವ ಸಾಕಾಗಿ ಹೋಗಿದ್ದಳು. ಈರವ್ವ ಈ ರೋಗಕ್ಕೆ ಹಲವು ಬಾರಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಹಲವು ಬಾರಿ ತೋರಿಸಿಕೊಂಡು ಬಂದಿದ್ದಳು. ಆದರೂ ಕೆಪ್ಪಣ್ಣನ ರೋಗ ಮಾತ್ರ ವಾಸಿಯಾಗಿರಲಿಲ್ಲ. ಸುಮಾರು ಹತ್ತು ವರ್ಷಗಳಿಂದ ಕೆಪ್ಪಣ್ಣನ ಬೇದಿಯನ್ನು ನೋಡಿ ನೋಡಿ ಈರವ್ವನಿಗೆ ಸಾಕಾಗಿ ಹೋಗಿತ್ತು. ಎಲ್ಲೆಂದರಲ್ಲಿ ಕೆಪ್ಪಣ್ಣನ ಬೇದಿ ನಡೆಯುತ್ತಿತ್ತು. ಅದು ಯಾವ ಮಾನ ಮರ್ಯಾದೆಗೆ ಅಂಜಿಕೊಳ್ಳದೇ, ಸ್ಥಳ, ಸಮಯ ನೋಡದೇ ಉಟ್ಟ ಚಡ್ಡಿಯಲ್ಲೇ ಸರಾಗವಾಗಿ ಹೋಗುತ್ತಿತ್ತು. ಈ ಕಾರಣದಿಂದಲೇ ಈರವ್ವ ಇಂತಹ ಗಂಡನನ್ನು ಕಟ್ಟಿಕೊಂಡು ಯಾವ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ತವರುಮನೆಗೂ ಹೋಗುವುದನ್ನು ಸಹ ನಿಲ್ಲಿಸಿದ್ದಳು.. ಇದಕ್ಕೆ ಒಂದು ಕಾರಣವೂ ಇದೆ.
ಕೆಪ್ಪಣ್ಣನ ಈ ರೋಗದಿಂದ ಈರವ್ವ ತನ್ನ ತವರುಮನೆಯಲ್ಲೇ ಒಂದು ಸಲ ಅಪಮಾನಕ್ಕೀಡಾಗಿದ್ದಳು.
ಆಗ ಕೆಪ್ಪಣ್ಣನಿಗೆ ರೋಗ ಪ್ರಾರಂಭದ ಹಂತದಲ್ಲಿತ್ತು. ತನ್ನ ತವರುಮನೆಯ ಹತ್ತಿರದ ಸಂಬಂದಿಯೊಬ್ಬರ ಮದುವೆಗೆ ಈರವ್ವ ಗಂಡನನ್ನು ಕಟ್ಟಿಕೊಂಡು ಮದುವೆಗೆ ಹೋಗಿದ್ದಳು. ದಾವಣಗೆರೆಯ ಗುಂಡಿ ಮಹದೇವಪ್ಪನ ಛತ್ರದಲ್ಲಿ ಮದುವೆ. ಆಗ ನಮ್ಮೂರಿನ ಮದುವೆಗಳು ಛತ್ರದಲ್ಲಿ ನಡೆಯುತ್ತವೆಯೆಂದರೆ ಅದೊಂದು ವಿಜೃಂಬಣೆಯ ಶ್ರೀಮಂತರ ಮದುವೆ ಎಂದೇ ಅರ್ಥ. ಮನೆಯ ಮುಂದೆ ಚಪ್ಪರ ಹಾಕಿ ಲಾಡು ಚಿತ್ರಾನ್ನದೊಂದಿಗೆ ಮದುವೆಯನ್ನು ಸರಳವಾಗಿ ಮುಗಿಸುತ್ತಿದ್ದ ಕಾಲವದು. ಅಂಥದ್ದರಲ್ಲಿ ಛತ್ರದಲ್ಲಿ ಮದುವೆ ಎಂದರೆ ಕೇಳಬೇಕೆ... ಸಂಬಂದಿಕರೆಲ್ಲಾ ಮುಗಿಬಿದ್ದ ಹೋಗಿದ್ದರು. ಕೆಪ್ಪಣ್ಣನು ತನ್ನ ಹೆಂಡತಿಯ ಬಳಿ
"ನಾನು ಇದೇ ಮೊದಲ ಸಲ ಛತ್ರದಲ್ಲಿ ನಡೆಯುವ ಮದುವೆಗೆ ಹೋಗುತ್ತಿರುವುದು"
ಎಂದು ಈರವ್ವನ ಬಳಿ ಹೇಳಿಕೊಂಡು ಮದುವೆಗೆ ಹೋಗಲು ಹಲವು ದಿನಗಳ ಹಿಂದಿನಿಂದಲೂ ಕನಸು ಕಟ್ಟಿಕೊಂಡಿದ್ದ. ಬಿಸಿಲು ಹೆಚ್ಚಾಗಿರುವುದರಿಂದ ಕೆಪ್ಪಣ್ಣನಿಗೆ ಹೊಟ್ಟೆಯಲ್ಲಿ ಏನೋ ತಳಸಮಳವಾಗಿ ಸಾಮಾನ್ಯ ರೀತಿಯ ಬೇದಿಯಾಗುತ್ತಿದೇ ಎಂದು ಈರವ್ವ ಭಾವಿಸಿದ್ದಳು. ಪಾಪ ಅವಳಿಗೇನು ಗೊತ್ತಿತ್ತು ಕೆಪ್ಪಣ್ಣನ ಈ ರೋಗ ತನ್ನ ಜೀವನದುದ್ದಕ್ಕೂ ಕಾಡುತ್ತದೆಯೆಂದು...?
ಮದುವೆಯ ದಿನ ಕೆಪ್ಪಣ್ಣನಿಗೆ ಒಂದೆರಡು ಸಲ ಬೇದಿಯಾಗಿದ್ದಂತೂ ನಿಜ. ಅದು ಮರ್ಯಾದೆ ಪೂರ್ವಕವಾಗಿ ಆಗಿತ್ತು. ಆದ್ದರಿಂದ ಕೆಪ್ಪಣ್ಣ ಹೆಂಡತಿಯ ಬಳಿ ಹೇಳಿಕೊಳ್ಳಲಿಲ್ಲ... ಹೇಳಿಕೊಳ್ಳಲೇನು ಕೆಪ್ಪಣ್ಣ ಚಿಕ್ಕ ಮಗುವೇ..? ಆ ವಿಷಯ ಇರಲಿ ಮದುವೆಯ ಊಟಕ್ಕೆ ಬರೋಣ. ಬರಿಯ ಬೂಂದಿ ಪಾಯಸದಲ್ಲೇ ಮದುವೆಯಾಗುತ್ತಿದ್ದ ಕಾಲವದು. ಅಂತಹದ್ದರಲ್ಲಿ ಬೂಂದಿಯ ಬದಲಾಗಿ ಬಾದಾಮಿ ಹಾಲು ಚಿರೋಟಿ. ಪಾಯಸಕ್ಕೆ ಬದಲಾಗಿ ರಸ್ ಮಲಾಯಿ ಮಾಡಿಸಲಾಗಿತ್ತು. ಕೆಪ್ಪಣ್ಣ ಮದುವೆ ಊಟಕ್ಕೆ ಕುಂತಾಗ ತಾನು ಊಟ ಮಾಡುತ್ತಿರುವ ಸಿಹಿ ತಿಂಡಿಯ ಹೆಸರೇನು ಎಂದು ಸಹ ಗೊತ್ತಿರಲಿಲ್ಲ. ಚಿರೋಟಿಯನ್ನು ಎಲೆಯ ಮೇಲೆ ಇಟ್ಟಾಗ ಇದು ಪೂರಿಯಿರಬೇಕೆಂದು ತಿಳಿದು ಉಪ್ಪಿನಕಾಯಿ ಜೊತೆ ಮುರಿದುರೊಂಡು ತಿಂದಿದ್ದ. ಚಿತ್ರನ್ನಾಕ್ಕೆ ಬದಲಾಗಿ ಘಮ ಘಮಿಸುವ ಘೀ ರೈಸ್ ಎಲೆಯ ಮೇಲೆ ಬಿದ್ದಾಗ ಕೆಪ್ಪಣ್ಣ ಒಂದು ಸಲ ಖುಷಿಯಿಂದ ಧೀರ್ಘ ಉಸಿರನ್ನು ಎಳೆದುಕೊಂಡು ಘಮ ಘಮಿಸುವ ವಾಸನೆಯನ್ನು ಪಡೆದು ಸಂಭ್ರಮಿಸಿದ್ದ. ಅಲ್ಲಿ ಮದುವೆ ಊಟದ ಮೊದಲ ರುಚಿ ನೋಡುತ್ತಿರುವವರು ಬರೀ ಕೆಪ್ಪಣ್ಣ ಮಾತ್ರವಿರಲಿಲ್ಲ. ಕೆಪ್ಪಣ್ಣನ ತರಹ ಹಲವಾರು ಜನ ಹಳ್ಳಿಗರು ಅಲ್ಲಿದ್ದರು. ಅಮೇಲೇನಾಯಿತೋ ತಿಳಿಯಲಿಲ್ಲ ಊಟದ ಹಾಲ್ ನಲ್ಲಿ ಸ್ವಲ್ಪ ಕೋಲಾಹಲ ಉಂಟಾಯಿತು. ಜನ ತಮ್ಮ ತಮ್ಮ ಮೂಗುಗಳನ್ನು ಮುಚ್ಚಿಕೊಂಡು ಕೆಪ್ಪಣ್ಣನನ್ನು ಶಪಿಸುತ್ತಿದ್ದರು. ಕೆಪ್ಪಣ್ಣ ತನ್ನ ಹೆಗಲ ಮೇಲಿದ್ದ ಟವಲನ್ನು ತೆಗೆದುಕೊಂಡು ಒದ್ದೆಯಾಗಿದ್ದ ತನ್ನ ಮುಕುಳಿಗೆ ಕಟ್ಟಿಕೊಂಡು ಟಾಯ್ ಲೆಟ್ ಕಡೆಗೆ ಓಡಿ ಹೋದ. ಆಗ ಗಂಡಸರು ಏನು ಮಾತನಾಡದಿದ್ದರೂ ಹೆಂಗಸರು ಮಾತ್ರ ಕೆಪ್ಪಣ್ಣನ ಈ ಕೃತ್ಯಕ್ಕೆ ಈರವ್ವ ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದು ಈರವ್ವನಿಗಾದ ಅವಮಾನ ಅಷ್ಟಿಷ್ಟಲ್ಲ....
ಇನ್ನೊಂದು ಸಲ ಕೆಪ್ಪಣ್ಣನ ತಮ್ಮನ ಮೊಮ್ಮಗನ ನಾಮಕರಣ ಇತ್ತು. ಕೆಪ್ಪಣ್ಣನ ತಮ್ಮ ಅತ್ತಿಗೆಯನ್ನು ಮಾತ್ರ ನಾಮಕರಣಕ್ಕೆ ಬರುವಂತೆ ಹೇಳಿ ಹೋಗಿದ್ದನು. ಕೆಪ್ಪಣ್ಣನಿಗೆ ತಮ್ಮನ ಮನೆಯ ಕಾರ್ಯಕ್ರಮಕ್ಕೆ ಹೋಗದೇ ಇರಲು ಆಗಲಿಲ್ಲ. ತನ್ನ ಜೀವ ತಮ್ಮನ ಮನೆಯ ಕಡೆಗೇ ಎಳೆಯುತ್ತಿತ್ತು. ಕೆಪ್ಪಣ್ಣನ ಈ ಮನೋಸ್ಥಿತಿಯನ್ನು ನೋಡಲಾರದೇ ಎದುರುಮನೆಯ ತರ್ಲೆ ಹುಡುಗ ಸಿದ್ದ ಕೆಪ್ಪಣ್ಣನಿಗೆ ತರ್ಲೆ ಐಡಿಯವನ್ನು ಕೊಟ್ಟನು. ನಾಮಕರಣಕ್ಕೆ ಹೋಗುವಂತೆ ಕೆಪ್ಪಣ್ಣನನ್ನು ಹುರಿದುಂಬಿಸಿದ. ಸಿದ್ದನ ಅಕ್ಕ ಆಗ ತಾನೆ ಬೆಂಗಳೂರಿನಿಂದ ಬಂದಿದ್ದಳು. ಅಕ್ಕ ತನ್ನ ಮಗುವಿಗಾಗಿ ತಂದಿದ್ದ ಡೈಪರ್ಸ ಪಾಕೇಟೊಂದರಲ್ಲಿ ಸಿದ್ದ ಒಂದನ್ನು ಕದ್ದು ತಂದು ಕೆಪ್ಪಣ್ಣನಿಗೆ ಕೊಟ್ಟನು..
"ಕೆಪ್ಪಣ್ಣ ಇದು ಡೈಪರ್ಸ ಅಂತ. ಟೌನಲ್ಲಿರೊ ಜನ ಬಳಸ್ಥಾರಂತೆ. ಅಂದ್ರೆ ಮಕ್ಕಳಿಗೆ ಮಾತ್ರ... ಎಲ್ಲಾದ್ರೂ ಊರಿಗೆ, ಮದುವೆಗೆ ಹೋದಾಗ ಮಕ್ಕಳು ಇದರಲ್ಲಿ ಮಲ ಮಾಡಿದರೆ ಯಾರಿಗೂ ಏನೂ ಗೊತ್ತಾಗಲ್ಲಂತೆ.. ನೀನು ಇದನ್ನು ಹಾಕಿಕೊಂಡು ನಾಮಕರಣಕ್ಕೆ ಯಾಕಣ್ಣ ಹೋಗಬಾರದು"
ಸಿದ್ಧ ಹಾಗೆಂದ ಕೂಡಲೇ ಕೆಪ್ಪಣ್ಣ ಸಿದ್ದನ ಕೈಲಿದ್ದ ಡೈಪರ್ಸ ನ್ನು ಕಿತ್ತುಕೊಂಡು ನಾಲ್ಕೈದು ಸಲ ತಿರುವಿ ತಿರುವಿ ಪರೀಕ್ಷಿಸಿ ನೋಡಿದನು...
"ಅಣ್ಣ ಸೈಜ್ ಚಿಕ್ಕದು ... ಕತ್ತದ ದಾರ ಕಟ್ಟಿ ದೊಡ್ಡದು ಮಾಡಿ ಕೊಡ್ತೀನಿ. ನಿನಗೆ ಆಗೋ ತರ"
ಸಿದ್ದ ಹಾಗೆಂದ ಕೂಡಲೇ ಕೆಪ್ಪಣ್ಣ ತಲೆ ಅಲ್ಲಾಡಿಸಿದನು. ತಮ್ಮನ ಮನೆಗೆ ಹೋಗುವ ಆತುರದಲ್ಲಿ ಕೆಪ್ಪಣ್ಣನಿಗೆ ಸಿದ್ದನ ತರ್ಲೆ ಐಡಿಯಾ ಸಹ ಒಪ್ಪಿಗೆಯಾಗಿತ್ತು. ಕೆಪ್ಪಣ್ಣನ ಈ ರೋಗವೇ ಬೀದಿಯ ಮಕ್ಕಳಿಗೆ ತಮಾಷೆಯಾಗಿ ಹೋಗಿತ್ತು. ತಮ್ಮನ ಮನೆಯಲ್ಲೂ ಕೆಪ್ಪಣ್ಣನಿಗೆ ಅವಮಾನ ತಪ್ಪಲಿಲ್ಲ. ಮುಕುಳಿಯ ಒದ್ದೆ ಕಾಣಿಸದಿದ್ದರೂ ವಾಸನೆ ಮುಚ್ಚಿಡಲಾದೀತೇ...? ಬೆಂಕಿ ಇದ್ದಾಗ ಹೊಗೆಯಾಡದೇ ಇರುತ್ತದೆಯೇ...? ಅಂದಿನ ಈ ಅಪಮಾನದ ಘಟನೆಯೇ ಕೊನೆ, ಈರವ್ವ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿಯೇ ಬಿಟ್ಟಳು....
ಇಷ್ಟೆಲ್ಲಾ ಆದರೂ ಈರವ್ವ ಕೆಪ್ಪಣ್ಣನ ಜೊತೆಯಲ್ಲಿ ಸಂಸಾರ ಮಾಡುವುದಕ್ಕೆ ಒಂದು ಕಾರಣವಿದೆ. ಈರವ್ವ ಮದುವೆಯಾಗಿ ಬಂದಾಗ ಕೆಪ್ಪಣ್ಣನ ಬಳಿ ತಂದೆಯಿಂದ ಬಂದ ಒಂದು ಎಕರೆ ನೀರಾವರಿ ಮಾತ್ರ ಇತ್ತು. ಕೆಪ್ಪಣ್ಣ ಕಷ್ಟ ಜೀವಿ. ತನ್ನ ಜೋಡು ಎತ್ತುಗಳನ್ನು ತೆಗೆದುಕೊಂಡು ಗದ್ದೆಗೆ ಹೊರಟರೆ ಸಂಜೆಯ ವರೆಗೂ ಕಷ್ಟಪಟ್ಟು ದುಡಿಯುತ್ತಿದ್ದ. ಮಳೆ ಬಿಸಿಲು ಇದಾವುದು ಇವನಿಗೆ ಲೆಕ್ಕವಿರಲಿಲ್ಲ. ದುಡಿಮೆಯ ವೇಳೆಯಲ್ಲಿ ಯಾರಾದರು ಕರೆದರೆ ಆ ಗಡೆ ಗಮನ ಕೊಡುತ್ತಿರಲಿಲ್ಲ. ಕೂಗಿ ಕೂಗಿ ಕರೆದರೂ 'ಓ' ಎನ್ನದ ಇವನನ್ನು ಜನ ಕೆಪ್ಪಣ್ಣ ಎಂದು ಕರೆಯಲಾರಂಬಿಸಿದರು. ನಮ್ಮೂರಿನಲ್ಲಿ ಕಿವಿ ಸರಿಯಾಗಿ ಕೇಳಿಸುತ್ತಿದ್ದರೂ ಕೆಪ್ಪಣ್ಣ ಎಂಬ ಹೆಸರನ್ನು ಕರೆಸಿಕೊಂಡವನೆಂದರೆ ಇವನೆ. ಇವನ ಹೆಸರು ರತೀಂದ್ರ ಅಂತೆ. ನನಗೂ ಇವನ ನಿಜ ನಾಮಧೇಯ ಗೊತ್ತಾಗಿದ್ದು ಮೊನ್ನೆ ಊರಿಗೆ ಹೋದಾಗಲೆ....
ಕೆಪ್ಪಣ್ಣನ ದುಡಿಮೆಯಿಂದ ಒಂದು ಎಕರೆ ಇದ್ದ ನೀರಾವರಿ ಜಮೀನನ್ನು ಐದು ಎಕರೆಗೆ ಬೆಳೆಸಿದ್ದ. ಅದರಲ್ಲಿ ಮೂರು ಎಕರೆಗೆ ಅಡಿಕೆಯನ್ನು ಕಟ್ಟಿ ಒಳ್ಳೆ ಫಸಲು ಬರುವ ಹಾಗೆ ಮಾಡಿದ್ದಾನೆ...
ಈರವ್ವ ಮದುವೆಯಾದ ವರ್ಷದ ಕೊನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದಳು. ಎಲ್ಲಾ ಸರಿಸಾಗಿಯೇ ಇತ್ತು ಎನ್ನುವಾಗಲೇ ಈರವ್ವಳಿಗೆ 'ಸನ್ನಿ' ಎಂಬ ಬಾಣಂತನದ ರೋಗ ಅಂಟಿಕೊಂಡಿತ್ತು. ಆಗ ಈರವ್ವ ಒಂದು ರೀತಿ ಹುಚ್ಚಿಯಂತಾಗಿದ್ದಳು. ಒಂದೆರಡು ಸಲ ಮಾನಸಿಕ ಒತ್ತಡವನ್ನು ತಾಳಲಾರದೇ ಈರವ್ವ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಗ ಅವಳನ್ನು ಮಗುವಿನಂತೆ ಕಾಪಾಡಿದ್ದು ಇದೇ ಕೆಪ್ಪಣ್ಣ. ಹಗಲು ರಾತ್ರಿ ಎನ್ನದೇ ಖಂಡಪ್ಪ ಡಾಕ್ಟರ್ ಮನೆ ಬಾಗಿಲು ಬಡಿದು ಅವರನ್ನು ಚಿಕಿತ್ಸೆಗಾಗಿ ಮನೆಗೆ ಕರೆ ತರುತ್ತಿದ್ದನು. ಕೆಪ್ಪಣ್ಣ ಎರಡು ತಿಂಗಳು ಸರಿಯಾಗಿ ನಿದ್ದೆಯೂ ಮಾಡದೇ ಈರವ್ವನ ಸೇವೆ ಮಾಡಿ ಆಕೆಯನ್ನು ಉಳಿಸಿಕೊಂಡನು. ಎರಡನೇ ಮಗುವಾದಾಗ ಈರವ್ವ ಬಲಹೀನತೆಯಿಂದ ಆರು ತಿಂಗಳು ಬಳಲಿದ್ದಳು. ಆಗಲೂ ಕೆಪ್ಪಣ್ಣ ಈರವ್ವನ ಸೇವೆ ಮಾಡಿ ಉಳಿಸಿಕೊಂಡಿದ್ದ. ಈಗ ಅವನಿಗೆ ಇಬ್ಬರು ಗಂಡು ಮಕ್ಕಳು ಸುಖವಾದ ಸಂಸಾರ. ದೊಡ್ಡ ಮಗನಿಗೆ ಊರಿನಲ್ಲಿ ಜಮೀನ್ದಾರ ಎಂಬ ಬಿರುದು ಚಿಕ್ಕ ಮಗ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ದೇಶ ವಿದೇಶವೆಲ್ಲಾ ಸುತ್ತುತ್ತಾನೆ. ಎಲ್ಲಾ ಕೆಪ್ಪಣ್ಣನ ದುಡಿಮೆಯ ಫಲ. ಈ ಫಲ ಅನುಭವಿಸುವ ಸಮಯ ಬಂದಾಗಲೇ ಕೆಪ್ಪಣ್ಣನಿಗೆ ತನ್ನ ಐವತ್ತೆರಡನೇ ವಯಸ್ಸಿನಲ್ಲಿ ಮಲರೋಗ, ವಾಸಿಯಾಗದ ಮಲರೋಗ ಎಲ್ಲಾ ವಿಧಿ ಲಿಖಿತ...
ಮೊನ್ನೆ ನಾನು ಊರಿಗೆ ಹೋದಾಗ ಕೆಪ್ಪಣ್ಣನ ಮನೆಯ ಮುಂದೆ ತರ್ಲೆ ಸಿದ್ದ ಕುಳ್ಳಿಗೆ ಬೆಂಕಿ ಹಾಕಿ ಹೊಗೆ ಎಬ್ಬಿಸುತ್ತಿದ್ದ. ಕೆಪ್ಪಣ್ಣನ ಮನೆಯಿಂದ ಅಳುವ ಶಬ್ಧ ಕೇಳಿಸುತ್ತಿತ್ತು. ಕೆಪ್ಪಣ್ಣನ ಹೆಣದ ಮುಂದೆ ಈರವ್ವ ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದಳು. ನಾನು ಈರವ್ವನನ್ನು ಸಮಾಧಾನ ಪಡಿಸುತ್ತಿದ್ದೆ. ತಂದೆ ಸತ್ತ ಸುದ್ದಿ ತಿಳಿದರೂ ದೊಡ್ಡಮಗ ಇನ್ನು ಬಂದಿರಲಿಲ್ಲ. ಅಪ್ಪನ ಮಲಬಾಧೆ ರೋಗಕ್ಕೆ ಸಾಕಾಗಿ ದೊಡ್ಡ ಮಗ ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿಕೊಂಡಿದ್ದ. ತರ್ಲೆ ಸಿದ್ದ ನಾಲ್ಕೈದು ಆಳುಗಳನ್ನು ಸೇರಿಸಿ ಚಟ್ಟ ರೆಡಿ ಮಾಡಿಸಿಟ್ಟು. ಸ್ಮಶಾನಕ್ಕೆ ಕಟ್ಟಿಗೆಯನ್ನು ಸಾಗಿಸಿದ್ದ. ನಂತರ ಬಂದ ದೊಡ್ಡ ಮಗ ಸ್ವಲ್ಪ ಸಮಯ ಕಣ್ಣೀರು ಹಾಕಿ ಮಣ್ಣಿನ ಮಡಕೆ ಹೊತ್ತು ಸ್ಮಶಾನದ ಕಡೆ ಹೆಜ್ಜೆ ಹಾಕುತ್ತಿದ್ದ. ಹಿಂದೆ ಕೆಪ್ಪಣ್ಣನು ಸಂಸಾರದ ಜಂಜಾಟವನ್ನೆಲ್ಲಾ ಮರೆತು, ಚಟ್ಟದ ಮೇಲೆ ಚಿರ ನಿದ್ರೆ ಮಾಡುತ್ತಾ ಸುಖವಾಗಿ ಅಂತಿಮ ಯಾತ್ರೆಗೆ ಹೊರಟಿದ್ದ. ಶವಸಂಸ್ಕಾರದ ಪದ್ದತಿಗಳೆಲ್ಲಾ ಮುಗಿಯಿತು. ಇನ್ನೇನು ಚಟ್ಟಕ್ಕೆ ಬೆಂಕಿ ಹತ್ತಿಸಬೇಕು ಎನ್ನುವಷ್ಟರಲ್ಲಿ ಚಿಕ್ಕ ಮಗ ಕಾರಿನಿಂದ ಇಳಿದು ಬಂದನು. ಮಕ್ಕಳಿಬ್ಬರೂ "ಅಪ್ಪಾ ..ಅಪ್ಪಾ.. ನಮ್ಮ ಕ್ಷಮಿಸಪ್ಪ" ಎಂದು ಹೇಳುತ್ತಾ ಕಾಲ ಬುಡದಲ್ಲಿ ಬಿದ್ದರು. ಮಕ್ಕಳಿಗೆ ವಿದ್ಯಭ್ಯಾಸ, ಆಸ್ಥಿ, ಎಲ್ಲವನ್ನು ಮಾಡಿಟ್ಟು ತನ್ನ ಕರ್ತವ್ಯ ಮಾಡಿ ಮುಗಿಸಿ ಕೆಪ್ಪಣ್ಣ ಸುಖವಾಗಿ ಮಲಗಿದ್ದ. ಇನ್ನೊಂದು ಕಡೆ ಮಕ್ಕಳು ವೃದ್ದ ತಂದೆ ತಾಯಿಯರಿಗೆ ಮಾಡಬೇಕಾದ ಕರ್ತವ್ಯಕ್ಕೆ ಲೋಪ ಬಗೆದು ತಮ್ಮ ಮನಸಾಕ್ಷಿಗೆ ದ್ರೋಹ ಬಗೆದು ಮಾನಸಿಕ ತೊಳಲಾಟದಿಂದ ಮಕ್ಕಳಿಬ್ಬರು ರೋಧಿಸುತ್ತಾ ನಿಂತಿದ್ದರು......

                                                                                          -ಪ್ರಕಾಶ್ ಎನ್ ಜಿಂಗಾಡೆ 

Friday, 25 March 2016

ಒಲವಿನ ಬಣ್ಣ

ಒಲವಿನ ಬಣ್ಣ...


ಅಂದು ಹೋಲಿ ಹಬ್ಬ. ರಂಗಿನ ಓಕುಳಿಯನ್ನು ಚೆಲ್ಲಲು ನಾನು ಶಾಲು ಮನೆಯ ಮುಂದೆ ಹೋಗಿ ನಿಂತೆ. ಕೈಯಲ್ಲಿ ಪಿಚಕಾರಿ ಹಿಡಿದು ನಿಂತು ಅವಳು ಆಗ ಹೊರಗೆ ಬರಬಹುದು, ಈಗ ಬರಬಹುದು ಎಂದು ನನ್ನ ಕಣ್ಣುಗಳು ಅವಳ ಮನೆಯ ಬಾಗಿಲ ಕಡೆಯೇ ನೋಡುತ್ತಿದ್ದವು. ನಾನು ಹಿಡಿದುಕೊಂಡು ನಿಂತಿದ್ದ ಪಿಚಕಾರಿಯನ್ನು ಆಕೆ ಟೆರೇಸ್ ಮೇಲಿನಿಂದಲೇ ನೋಡಿಬಿಟ್ಟರೆ...? ಎಂಬ ಅನುಮಾನವೂ ನನಗಿತ್ತು. ನಾನು ನಿಂತಿರುವುದನ್ನು ನೋಡಿದರೆ ಆಕೆ ಖಂಡಿತ ಹೊರಗೆ ಬರಲಾರಳು.. ಏನ್ಮಾಡೋದು ಹೇಳಿ ...ಬಣ್ಣತುಂಬಿದ ಆ ಪಿಚಕಾರಿಯನ್ನು ನಾನು  ರಾಜಾರೋಷವಾಗಿ ಹಿಡಿದು ಅವಳನ್ನು ಬಣ್ಣದಲ್ಲಿ ಮುಳುಗಿಸಲು ಅಲ್ಪ ಸ್ವಲ್ಪ ಸಹಾಸವೂ ಮಾಡಬೇಕಾಗುತ್ತದೆ. ನೇರವಾಗಿ ಮನೆಯೊಳಗೆ ನುಗ್ಗಿ ಬಣ್ಣ ಹಾಕುವ ಧೈರ್ಯವೂ ನನಗೆ ಇರಲಿಲ್ಲ. ಪಿಚಕಾರಿಯನ್ನು ಆಗಾಗ ಬೆನ್ನ ಹಿಂದೆಯೇ ಮುಚ್ಚಿಕೊಂಡು ಮರೆಮಾಚಿಸಲು ಪ್ರಯತ್ನಿಸುತ್ತಿದ್ದೆ. ಆಕೆಯ ದೇಹವನ್ನು ಸಂಪೂರ್ಣವಾಗಿ ವರ್ಣಮಯವನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಬಂದಿದ್ದೆ. ನನ್ನ ಯೋಜನೆ ವಿಫಲವಾಗಬಾರದೆಂದು ನಾನು ತುಂಬಾ ಎಚ್ಚರಿಕೆಯಿಂದಲೇ ಇದ್ದೆ.

ಶಾಲೂ ತುಂಟಿ ಹುಡುಗಿ. ತುಂಟತನದಲ್ಲಿ ನನಗಿಂತಲೂ ಒಂದು ಕೈ ಮುಂದೆ. ಹೋದ ವರ್ಷ ಹೋಳಿ ಹಬ್ಬದಂದು ಮಾಡಿದ ಅವಳ ಆ ತುಂಟತನ ಹೇಗೆ ಮರೆಯಲು ಸಾದ್ಯ ಹೇಳಿ.?  ಕಳೆದ ಸಲ ಹೋಲಿ ಹಬ್ಬದಂದು ನಾನು ಇನ್ನು ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ಸೀದ ಮನೆಯೊಳಗೆ ನುಗ್ಗಿ ನನ್ನನ್ನು ಎಬ್ಬಿಸಿ ನನ್ನನ್ನು ಮನೆಯಿಂದ ಹೊರಗೆ ಕರೆದು ರಂಗಿನ ಓಕುಳಿಯನ್ನು ಹಾಕಲು ಪ್ಲಾನ್ ಹಾಕಿಕೊಂಡೇ ಬಂದಿದ್ದಳು. ಎಂತಹ ಪ್ಲಾನ್ ಅಂತಿರಾ...? ಆ ಪ್ಲಾನ್ ಗೆ ಆಕೆಯ ಸುಂದರ ಮುಖ ಆಕೆಗೆ ಸಹಕಾರ ನೀಡಿತ್ತು. ನನ್ನನ್ನು ಮೋಸಗೊಳಿಸಿದ ಆವಳ ಆ ಸುಂದರ ರೂಪ, ಅವಳ ಆ ನಗುವಿಗೆ ಎಂಥವನಾದರೂ ಬೀಳದೇ ಇರಲು ಸಾಧ್ಯವಿರಲಿಲ್ಲ. ಅವಳ ಆ ಮುಗ್ದ ಸೌಂದರ್ಯದ ಹಿಂದೆ ನನ್ನನ್ನು ಮೋಸಗೊಳಿಸಿ ಓಕುಳಿ ಹಾಕಿದ ಆ ಘಟನೆ ಮರೆಯಲು ಸಾಧ್ಯವೇ ಇರಲಿಲ್ಲ. ಅವಳು ಆ ದಿನ ಅಪ್ಸರೆಯಂತೆ ಕಂಗೊಳಿಸುತ್ತಾ ನನ್ನ ಮುಂದೆ ಬಂದು ಕೆನ್ನೆಯ ವರೆಗೂ ಇಳಿಬಿದ್ದಿರುವ ತನ್ನ ಮುಂಗುರುಳನ್ನು ಸರಿಪಡಿಸಿಕೊಳ್ಳುತ್ತಾ...

"ಲೋ...ಪ್ರಕಾಶ,  ಪ್ಲೀಸ್ ಸ್ವಲ್ಪ ಐಶು ಮನೆಗೆ ಹೋಗಿ ಬರೋಣ ಬಾರೋ... ನಾಳೆ ಎಕ್ಸಾಮ್ ಇದೆ ಐಶು ಹತ್ರ ನೋಟ್ಸ ಇಸ್ಕೊಂಡ್ ಬರ್ಬೇಕಿತ್ತು... ಪ್ಲೀಸ್"

ಆಕೆ ಬೇಡಿಕೊಂಡ ಆ ಪರಿಯನ್ನು ನೋಡಿದರೆ ಒಪ್ಪಿಕೊಳ್ಳದಿರುವುದಕ್ಕೆ ಸಾಧ್ಯವೇ ಇರಲಿಲ್ಲ.
ಮುಗುಳ್ನಗೆಯನ್ನು ಬೀರುತ್ತಾ, ತನ್ನ ದೇಹವನ್ನು ಬಳ್ಳಿಯಂತೆ ಬಳುಕಿಸುತ್ತಾ ಹೇಳಿದಳು. ಇನ್ನೂ ಮಲಗ ಬೇಕೆಂದಿದ್ದ ನನಗೆ ಆಕೆಯ ಮುದ್ದು ಮುಖ ನೋಡಿದ ಕೂಡಲೇ ಎಂಥದೋ ಪುಳಕ ಮೈ ಮನವನ್ನೆಲ್ಲಾ ಆವರಿಸಿಕೊಂಡಿತ್ತು. ಹುಡುಗಿ ಬಂದು ಸಹಾಯ ಕೇಳಿದ್ರೆ ಯಾರು ಇಲ್ಲ ಅಂತಾರೆ ಹೇಳಿ...!! ಮೊದಲೇ ಹುಡುಗಿಯರು ಕೊಡುವ ಇಂತಹ ಅವಕಾಶಕ್ಕಾಗಿ ಎಷ್ಟೋ ಹುಡುಗರು ಕಾಯುತ್ತಿರುತ್ತಾರೆ. ಹಾಗಿರುವಾಗ ನಾನು ಬಿಟ್ಟೇನೇ...?
 ಅವಳನ್ನು ನನ್ನ ಬೈಕಿನ ಹಿಂದೆ ಕೂರಿಸಿಕೊಂಡು ಐಶು ಮನೆಯವರೆಗೂ ಹೋಗುವ ಆ ಕಲ್ಪನೆ ಇದೆಯಲ್ಲಾ... ಆ ಕ್ಷಣದಿಂದಲೇ ನನ್ನ ಮೆದುಳಿನಲ್ಲಿ ದೃಶ್ಯದಂತೆ ಕಣ್ಣ ಮುಂದೆ ಬರಲಾರಂಬಿಸಿತು. ನಾನು ಮುಂದೆ, ನನ್ನ ಹಿಂದೆ ಅವಳು... ಹಂಪ್ ಬಂದಾಗ ಬ್ರೇಕ್ ಹಾಕಿದ ಕೂಡಲೇ ನನ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿಯುವ ಆ ಸನ್ನಿವೇಶ... ಆಹಾ..! ಆ ನೆನಪೇ ಎಂತಹ ಮಜಾ..
ಬೇಗ ಬೇಗನೆ ಎದ್ದು ಷರಟನ್ನು ಹಾಕಿಕೊಂಡೆ...

"ಈ ಷರಟು ಬೇಡ ಕಣೋ... ಮೊನ್ನೆ ಹೊಸದಾದ ಬಿಳಿ ಷರಟ್ ತಗೊಂಡಿದ್ದೆಯಲ್ಲ ಅದನ್ನೇ ಹಾಕ್ಕೊ ನೀನು ಅದರಲ್ಲಿ ತುಂಬಾ ಚನ್ನಾಗಿ ಕಾಣಿಸ್ತಿಯಾ" ಅಂದ್ಲು

ಬಿಳಿ ಷರ್ಟಲ್ಲಿ ನಾನು ಅಷ್ಟೊಂದು ಸುಂದರವಾಗಿ ಕಾಣಿಸುತ್ತನೆಯೇ..? ಆ ಮಾತು ಕೇಳಿ ಕರ್ಣಾನಂದವಾಯಿತು. ಮನಸು ಹುಚ್ಚೆದ್ದು ಕುಣಿಯಿತು. ಅದೂ ಶಾಲೂ ಅಂತಹ ಸುಂದರ ಹುಡುಗಿಯಿಂದ ಹೊಗಳಿಕೆ ಬೇರೆ. ನನಗೆ ಸ್ವರ್ಗಕ್ಕೆ ಮೂರೇ ಗೇಣು.. ಒಂದುವರೆ ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ನನ್ನ ತುಂಬಾ ಇಷ್ಟದ ಬಿಳಿ ಷರಟನ್ನು ತೆಗೆದು ಹಾಕಿಕೊಂಡೆ. ಕಣ್ಣು ಕುಕ್ಕುವಂತಹ ಆ ಶುಭ್ರ ಬಿಳಿ ಷರಟಿನಲ್ಲಿ ನಾನು ಅಪ್ಪಟ ಮದು ಮಗನಂತೆ ಕಾಣುತ್ತಿದ್ದೆ. ನನ್ನನ್ನು ಅವಳು ಕೈಹಿಡಿದು ಕೊಂಡೇ ಹೊರಗೆ ಕರೆದೊಯ್ಯುತ್ತಿದ್ದಳು. ನಾನು ಮದುಮಗನಾದರೆ ಆಕೆ ಮದುಮಗಳಾಗಿ ನನ್ನ ಕೈಹಿಡಿದುಕೊಂಡು ಸಪ್ತಪದಿ ಹಾಕುತ್ತಿರುವಳೋ ಎಂಬಂತೆ ಬಾಸವಾಯಿತು...
ಸುಮಾರು ಏಳು ಹೆಜ್ಜೆ ಪೂರ್ಣಗೊಂಡಿತ್ತು. ಆಷ್ಟರಲ್ಲಿ ನಾನು ನನ್ನ ಮನೆಯ ಹೊರಗಿನ ಗೇಟ್ ವರಗೆ ಬಂದು ನಿಂತಿದ್ದೆ. ಮೊದಲೇ ಹಾಕಿಕೊಂಡ ಪ್ಲಾನ್ ನಂತೆ ಶಾಲೂ ತನ್ನ ಗೆಳತಿ ಐಶು ಮತ್ತು ತಮ್ಮ ಬಾಲು ಜೊತೆ ಸೇರಿಕೊಂಡು ನನ್ನ ಮೇಲೆ ರಂಗಿನ ಮಳೆಗೆರೆದರು. ಅವರ ರಂಗು ರಂಗಿನ ಆ ಓಕುಳಿಗೆ ನಾನು ಸಂಪೂರ್ಣವಾಗಿ ಬಣ್ಣದಲ್ಲಿ ಮುಳುಗಿ ಹೋಗಿದ್ದೆ. ನಾನು ಇಷ್ಟ ಪಟ್ಟು ಖರೀದಿಸಿದ ಬಿಳಿ ಷರಟು ಹಾಳಾಗಿದ್ದು ನನಗೆ ತಂಬಾ ನೋವನ್ನುಂಟು ಮಾಡಿತ್ತು. ಆ ತರಲೆ ಶಾಲೂ ನನ್ನ ಹೊಸ ಷರಟನ್ನು ಟಾರ್ಗೆಟ್ ಮಾಡಿ ಹಾಳು ಮಾಡಿದ್ದಳು. ಅದಕ್ಕೆ ನನ್ನಮ್ಮಳು ಸಹ ಅವಳಿಗೆ ಸಾಥ್ ನೀಡಿದ್ದಳು.

"ಪಾಪ ಹುಡುಗಿ.... ನಿನಗೆ ತಮಾಷೆ ಮಾಡದೇ ಇನ್ನಾರಿಗೆ ಮಾಡುತ್ತಾಳೋ..?"

ಎಂದು ಹೇಳಿ ಅಮ್ಮ ನನ್ನ ಕೋಪವನ್ನು ಶಾಂತಗೊಳಿಸಿದಳು.

"ತಮ್ಮನ ಮಗಳು ಅಂತ ಜಾಸ್ತಿ ಸಲುಗೆ ಕೊಟ್ಟಿದ್ದೀಯಮ್ಮ... ಇರಲಿ ನನಗೂ ಟೈಮ್ ಬರುತ್ತೆ"

ಪ್ರತಿಕಾರದ ಧ್ವನಿಯಲ್ಲೇ ಹೇಳಿದೆ...

ಶಾಲೂ ಇನ್ನು ಅಲ್ಲೇ ನಗುತ್ತಾ ನಿಂತಿದ್ದಳು. ಅಲ್ಲೇ ಅಮ್ಮ ನಲ್ಲಿಯ ಕೆಳಗೆ ಒಂದು ಬಕೆಟ್ ನೀರನ್ನು ತುಂಬಿ ಇಟ್ಟಿದ್ದಳು. ತಕ್ಷಣ ಶಾಲೂವಿನ ಕೈ ಹಿಡಿದೆಳೆದು ಆ ಬಕೇಟ್ ನೀರನ್ನು ಅವಳ ತಲೆಯ ಮೇಲೆ ಸುರಿದು ಬಿಟ್ಟೆ...
ಅವಳು 'ಅಯ್ಯೊ ಬಿಡೊ' ಎನ್ನುತ್ತಾ ನನ್ನ ಬಿಗಿ ಹಿಡಿತದಿಂದ ನುಣುಚಿಕೊಂಡು ಓಡಿದಳು ಬಟ್ಟೆಯಲ್ಲಾ ಒದ್ದೆಯಾಗಿತ್ತು. ಮೈ ಗಂಟಿಗಂಡಿದ್ದ ಅವಳ ಆ ಒದ್ದೆ ಬಟ್ಟೆಯನ್ನು ನೋಡಿ ನಾನು ಕ್ಷಣಕಾಲ ರೋಮಾಂಚಿತನಾದೆ....ಅವಳು ಹಾಕಿದ್ದ ತೆಳು ಬಟ್ಟೆಯು ರೇಷ್ಮೆಯಂತಹ ಅವಳ ಮೈಯೊಂದಿಗೆ ಬಿಗಿಯಾಗಿ ಅಪ್ಪಿಕೊಂಡಿತ್ತು. ಬೇಲೂರಿನ ಶಿಲಾಬಾಲಿಕೆ ನೆನಪಾದದ್ದು ಸುಳ್ಳಲ್ಲ. ಹೆಣ್ಣನ್ನು ನಾಜೂಕಾಗಿ ಕಡೆದ ಆ ಶಿಲ್ಪಿ ಅದೆಂತ ಅದ್ಭುತ ಕಲೆಗಾರ. ಹೆಣ್ಣನ್ನು ಸುಂದರವಾಗಿ ಚಿತ್ರಿಸಿ ಗಂಡನ್ನು ಆಕರ್ಷಿಸುವಂತಹ ಆ ಸಮ್ಮೋಹನ ಲೀಲೆಯನ್ನು ಅವಳಲ್ಲಿ ಅದು ಹೇಗೆ ಬೆರೆಸಿ ಸೃಷ್ಠಿಸಿದನೋ...!!!  ಆ ದಿನ ಶಾಲೂ ವನ್ನು ಮರೆಯಲಾಗಲಿಲ್ಲ. ಶಾಲೂಗೆ ಮದುವೆಯಾಗುವಂತೆ ಅಮ್ಮ ಹಲವು ಸಲ ಬೇಡಿಕೆಯಿಟ್ಟಿದ್ದರೂ ನಾನು ನಿರಾಕರಿಸಿದ್ದೆ. ಆದರೆ ಈ ದಿನ ಶಾಲೂ ಮನಸಿಗೆ ತೀರ ಹತ್ತಿರವಾಗಿದ್ದಳು. ಪ್ರಕೃತಿಯ ಸಹಜವಾದ ನೈಜ ಆಕರ್ಷಣೆ ಶಾಲೂವಿನ ಮೇಲಾಯಿತು.ಅಂದಿನಿಂದ ಶಾಲೂ ಮನಸ್ಸಿಗೆ ಹತ್ತಿರವಾದಂತೆ ಬಾಸವಾಯಿತು. ಅಮ್ಮ ಶಾಲೂ ಮತ್ತು ನನ್ನ ಮದುವೆಯ  ಬಗ್ಗೆ ಮತ್ತೆ ನನಗೆ ಕೇಳಬಹುದೇನೋ ಎಂದು ನಿರೀಕ್ಷಿಸಿದ್ದೆ. ಆದರೆ ಅಮ್ಮ ಕೇಳಲೇ ಇಲ್ಲ. ಇಷ್ಟು ದಿನ ಮದುವೆ ನಿರಾಕರಿಸುತ್ತಲೇ ಬಂದ ನಾನು ಶಾಲೂವಿನ ಪ್ರೀತಿಯವಿ ಬಿದ್ದಿದ್ದೆ.  ಶಾಲೂ ಮಾತ್ರ ಅಂದು ನನ್ನ ಹೃದಯವನ್ನೇ ಕದ್ದಿದ್ದಳು....

ಹಿಂದಿನ ವರ್ಷದ ಈ ಘಟನೆ ಮತ್ತೆ ಮನಸಿಗೆ ಮುದ ನೀಡುತ್ತಿತ್ತು. ಈ ವರ್ಷ ಹೋಳಿ ಬಂದಾಗ ಪದೇ ಪದೇ ಆ ನನ್ನ ಬಿಳಿ ಷರಟು ನೆನಪಿಗೆ ಬಂದಿತು. ಹಿಂದಿನ ವರ್ಷ ಶಾಲೂ ನನ್ನ ಮೇಲೆ ಓಕುಳಿ ಹಾಕಿದಂತೆ ನಾನೂ ಮೋಸದಿಂದ ಹಾಕಲು ನಿರ್ಧರಿಸಿದೆ ಹಿಂದಿನ ವರ್ಷದ ಸೇಡು ತೀರಿಸಿಕೊಳ್ಳುವುದು ಬೇಡವೇ... ನಾನು ಕೂಡ ಪ್ಲಾನ್ ಮಾಡಿಕೊಂಡು ಅವಳ ಮನೆಯ ಗೇಟಿನ ಬಳಿ ಇರುವ ಮರದ ಮರೆಯಲ್ಲಿ ನಿಂತುಕೊಂಡು ಕಾಯುತಲಿದ್ದೆ. ಕಳೆದ ವರ್ಷ ಬಣ್ಣಗಳಿಂದ ಹಾಳಾಗಿದ್ದ ಅದೇ ಬಿಳಿ ಬಣ್ಣದ ಷರಟನ್ನು ಹಾಕಿಕಂಡಿದ್ದೆ. ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಮನೆಯ ಆಚೆಗಿನ ತುಳಸಿ ಕಟ್ಟೆಯ ಹತ್ತಿರ ಕುಳಿತು ಓದುತ್ತಿದ್ದ ಅವಳು ಈ ದಿನ ಬರಲೇ ಇಲ್ಲ.ಮನೆಯೊಳಗೆ ಕಳ್ಳ ದೃಷ್ಠಿ ಬೀರಿದೆ. ಮನೆ ಶಾಂತವಾಗಿತ್ತು. ಎಷ್ಟು ಸಮಯವಾದರೂ ಕಾದು ಶಾಲೂವಿನ ಮೈಯನ್ನು ರಂಗು ರಂಗಿನ ಬಣ್ಣದಿಂದ ಒದ್ದೆ ಮಾಡಬೇಕು. ಹೊರಗೆ ಬಂದೇ ಬರುತ್ತಾಳೆ ನೋಡೋಣ ಎಂದು  ಮರದ ಮರೆಯಲ್ಲಿ ಕಾಯುತ್ತಲೇ ಇದ್ದೆ... 

ನನ್ನ ಹಿಂದೆ ಏನೋ ಸದ್ದಾಯಿತು. ತಕ್ಷಣ ತಿರುಗಿ ನೋಡಿದೆ. ಪಿಚಕಾರಿಯ ಕೊಳವೆಯಿಂದ ಎರಗಿ ಬಂದ ಕೆಂಪು ಬಣ್ಣವೊಂದು ಮುಖಕ್ಕೆ ಅಪ್ಪಳಿಸಿತು. ಇನ್ನೊಂದು ಪಿಚಕಾರಿಯಿಂದ ಬಂದ ನೇರಳೆ ಬಣ್ಣದ ನೀರು ನನ್ನ ಬಟ್ಟೆಯನ್ನು ರಂಗಾಗಿಸಿತು. ಮತ್ತೊಂದರಿಂದ ಬಂದ ಹಳದಿ ಬಣ್ಣದ ನೀರು ನನ್ನ ದೇಹವನ್ನು ತೊಯ್ದು ತೆಪ್ಪೆಯಾಗಿಸಿತು. ನನ್ನ ಹಿಂದೆ ಶಾಲೂ, ಐಶು, ಮತ್ತು ಬಾಲು ನನ್ನ ಮೇಲೆ ಮೂರು ಮೂರು ಪಿಚಕಾರಿಯನ್ನು ಹಿಡಿದು ರಂಗಿನ ನೀರನ್ನು ನನ್ನ ಮೇಲೆರೆದು ನಗುತ್ತಾ ನಿಂತಿದ್ದರು. ನಾನು ಹಿಂದಿನ ವರ್ಷದಂತೆಯೇ ಶಾಲೂವಿನ ಮುಂದೆ ಮತ್ತೆ ಮೋಸಹೋದೆ. ನನ್ನ ಮತ್ತು ಶಾಲೂವಿನ ಮದುವೆ ಕೇವಲ ಇನ್ನೊಂದು ವಾರ ಮಾತ್ರ ಉಳಿದಿತ್ತು. ಈ ಸಮಯದಲ್ಲಿ ಶಾಲೂ ನಾಚಿಕೆಯಿಂದ ಇರುವಳು. ಈ ಸಮಯವನ್ನು ನಾನೇ ಸದೂಪಯೋಗ ಪಡಿಸಿಕೊಂಡು ಶಾಲೂ ಮೇಲೆ ರಂಗಿನ ಮಳೆಗೆರೆಯಬಹುದು ಎಂದು ಕೊಂಡಿದ್ದೆ. ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ನಾನು ಶಾಲೂವಿನಿಂದ ಮತ್ತೆ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದಿತ್ತೇನೋ... ಶಾಲೂ ಹಾಗೆ ಮಾಡಲಾರಳು ಎಂದು ಭಾವಿಸಿದ್ದೇ ನನ್ನ ತಪ್ಪಾಯಿತು. ಏನೇ ಆಗಲಿ ಪ್ಲಾನ್ ಮಾಡಿ ನನ್ನಂತಹ ಹುಡುಗರನ್ನು ಯಾಮಾರಿಸುವುದರಲ್ಲಿ  ಹುಡುಗಿಯರು ಎತ್ತಿದ ಕೈ. ನನ್ನ ಕೈಗೆ ಸಿಕ್ಕಿದ್ದರೆ ಆಕೆಯನ್ನು ನನ್ನ ಎದೆಯ ಗೂಡಿನಲ್ಲಿ ಬಿಗಿಯಾಗಿ ಬಂಧಿಸಬೇಕೆಂದಿದ್ದೆ.  ಅವಳ ಕೈ ಹಿಡಿದುಕೊಂಡು ಬರ ಸೆಳೆದುಕೊಂಡೆ. ಇನ್ನೇನು ನನ್ನ ಬಾಹು ಬಂಧನದಲ್ಲಿ ಬಂಧಿಯಾಗಿ ನಾಚಿಕೆಯಿಂದ ಕರಗುವಳೆನೋ ಎನ್ನುವಾಗಲೇ. ಆಕೆ ನನ್ನಿಂದ ನುಣುಚಿಕೊಂಡು ದೂರ ಸರಿದು ಕೊಲೆಗಾರನಿಗೆ ಬಂದೂಕು ಹಿಡಿದು ನಿಂತಂತೆ ನನ್ನ ಎದೆಯನ್ನು ಗುರಿಯಾಗಿರಿಸಿಕೊಂಡು ಮತ್ತೆ ಪಿಚಕಾರಿಯನ್ನು ಹಿಡಿದು ನಿಂತಳು.

ಆಕೆಯ ಮೈ ಮೇಲೆ ಒಂಚೂರು ಹೋಳಿಯ ರಂಗು ತಾಕಿರಲಿಲ್ಲ. ಆದರೂ ಶಾಲೂ ತನ್ನ ಸಹಜ ಸೌಂದರ್ಯದಿಂದ ನನ್ನ ಕಣ್ಣಿಗೆ ಕಲರ್ ಫುಲ್ ಆಗಿ ಕಾಣುತ್ತಿದ್ದಳು. ನಾಚಿಕೆಯ ಆಭರಣ ಧರಿಸಿದ್ದ ಅವಳ ಮುಖ ಬೆಳದಿಂಗಳ ಚಂದಿರನಂತೆ ಬಿಳುಪಾದ ಹಾಲಿನ ಬಣ್ಣ ಪಡೆದಿತ್ತು. ರೇಷಿಮೆಯಂತಹ ಅವಳ ಕೆನ್ನೆಯು ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಆಸೆಯ ಕುಡಿನೋಟದ ಅವಳ ಕಣ್ಣುಗಳು ನೀಲಾಕಾಶದ ಬಣ್ಣದಿಂದ ಮುಳುಗಿತ್ತು. ಜೇನಿನ ಅಧರವಾಗಿದ್ದ ಅವಳ ತುಟಿಗಳು ತೊಂಡೆ ಹಣ್ಣಿನ ಕೆಂಪು ರಂಗನ್ನು ಪಡೆದಿತ್ತು. ಗಾಳಿಯೊಂದಿಗೆ ಸರಸವಾಡುತ್ತಿರುವ ಅವಳ ಮುಂಗುರುಳಿನದು ಕಪ್ಪು ಮೊಡದ ಬಣ್ಣ. ಅವಳು ಕುಣಿದು ಕುಪ್ಪಳಿಸುವಾಗ ನವಿಲುಗರಿಯ ಬಣ್ಣ. ನಡೆಯುವಾಗ ವಸುಂದರೆಯ ಹಸಿರ ಬಣ್ಣ. ತುಂಟತನದಲ್ಲಿ ಕಾಮನ ಬಿಲ್ಲಿನ ಏಳು ಬಣ್ಣ. ಒಟ್ಟಾರೆ  ಅವಳು ಬಣ್ಣಗಳ ಮಿಶ್ರಣ, ಅವಳ ಪಿಚಕಾರಿಯಿಂದ ಅಪ್ಪಳಿಸಿ  ಬಂದ ಬಣ್ಣಗಳಿಂದ ಮಿಂದ  ನಾನು ಅವಳದೆ ಬಣ್ಣಗಳ ಸಮ್ಮಿಶ್ರಣ.....

                                                                                           - ಪ್ರಕಾಶ್ ಎನ್ ಜಿಂಗಾಡೆ

Thursday, 3 March 2016

ದೇವರು ಧರ್ಮ

ದೇವಸ್ಥಾನದಲ್ಲಿ ಘಂಟೆಯ ಸದ್ದು ಕೇಳಿಸುತ್ತಿತ್ತು. ಬಹುಷಃ ಸ್ವಲ್ಪ ಲೇಟಾಗಿ ಬಂದಿರಬಹುದು ಎಂದುಕೊಂಡು ಆತುರವಾಗಿ ಹೆಜ್ಜೆ ಹಾಕಿದೆ. ಬುಟ್ಟಿಯಲ್ಲಿ ತಂದ ಹಣ್ಣು ಕಾಯಿಗಳೊಂದಿಗೆ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಒಳಗೆ ಪ್ರವೇಶಿಸಿದೆ. ಮಹಾಮಂಗಳಾರತಿಯ ದಿವ್ಯ ಪ್ರಭೆಯು ಪ್ರಾಂಗಣದ ತುಂಬೆಲ್ಲಾ ಪ್ರಜ್ವಲಿಸುತ್ತಿತ್ತು. ಮಿಂಚಿನ ಆ ಬೆಳಕಲ್ಲಿ ಭಕ್ತಿ ಪೂರ್ವಕವಾಗಿ ತಲ್ಲೀನ ಗೊಂಡಿರುವಾಗಲೇ ಮುದ್ದಾದ ಮುಖವೊಂದು ಕಣ್ಣ ಮುಂದೆ ಬಂದಂತಾಯಿತು. ಎಲ್ಲೋ ನೋಡಿದ ಪರಿಚಿತ ಎಂದೆನಿಸಿತು. ಆಕೆಯ ಗುಲಗಂಜಿಯಂತಿರುವ ಕಣ್ಣುಗಳ ಮೇಲೆ ನವಿಲು ಗರಿಯನ್ನು ಇಟ್ಟು ಯಾರೋ ಹುಬ್ಬುಗಳನ್ನು ತಿದ್ದಿ ತೀಡಿದ್ದಾರೆ ಎಂದೆನಿಸಿತು. ಕೆನ್ನೆಗಳು ಗುಲಾಬಿ ರಂಗಿನ ಹೊಳಪನ್ನು ಧರಿಸಿದ್ದವು. ಅಧರಗಳು ಜೇನು ಸವರಿದ ಒದ್ದೆಯಂತೆ ಫಳ ಫಳಿಸುತ್ತಿದ್ದವು.  ಬಯಸದ ಸೌಂದರ್ಯವೊಂದು ಕಣ್ಣ ಮುಂದೆ ಬಂದು ನನ್ನ ಮನಸನ್ನು ಪುಳಕಿತಗೊಳಿಸಿತು. ಆಕೆಯನ್ನು ದಿಟ್ಟಿಸಿ ನೋಡಿದೆ.

"ಅರೆ... ನೀವು ಸಲೋನಿ...!!  ಮೊನ್ನೆ ಚರ್ಚ್ ನಲ್ಲಿ  ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲವೆ...?"

ಎಂದು ಆಶ್ಚರ್ಯದಿಂದ ಕೇಳಿದೆ

"ಹೂಂ....ಹೌದು.... "
ಎಂದಳು

"ಮೊನ್ನೆ ಚರ್ಚ್ ಎದುರುಗಡೆಯ ಹಾಲ್ ನಲ್ಲಿ ನಡೆದ ನ್ಯಾನ್ಸಿಯ ಮದುವೆಗೆ ನಾನು ಬಂದಿದ್ದೆ... ಆಗ ನಿಮ್ಮನ್ನು ನೋಡಿದ್ದೆ... .. ಆಗ ನ್ಯಾನ್ಸಿ ನನ್ನ ಪರಿಚಯಿಸಿದ್ದು ನೀವು ಮರೆತಿರಬೇಕು"
ಎಂದೆನು.

"ಇಲ್ಲ, ಇಲ್ಲ , ಮರೆತಿಲ್ಲ....ನಿಮ್ಮ ಹೆಸರು ಪ್ರಕಾಶ್, ನೀವು ಬರೆಯುತ್ತಿರುವ ಪಿ,ಹೆಚ್,ಡಿ ಪ್ರಬಂಧಕ್ಕೆ ನನ್ನ ಸಹಾಯ ಕೇಳಲು ಬಂದಿದ್ರಿ ಅಲ್ಲವೇ....? "

ಸಲೋನಿ ನನ್ನ ನೆನಪಿಸಿಕೊಂಡು ಹೇಳಿದಳು.

"ಹೌದು... ಅಂದು ನೀವು ಕೊಟ್ಟ ಕೆಲವು ಮಾಹಿತಿಗಳು ನನ್ನ ಪ್ರಬಂದಕ್ಕೆ ಅನುಕೂಲವಾಯಿತು
 "ಆದರೆ ನೀವು ಈ ದೇವಸ್ಥಾನದಲ್ಲಿ...?"
ಅನುಮಾನದಿಂದ ಕೇಳಿದೆ.

"ಯಾಕೆ..? ಬರಬಾರದೇನು...? ಚರ್ಚ್ ನಲ್ಲಿ ಪ್ರಾರ್ಥಿಸುವವಳು ದೇವಸ್ಥಾನದಲ್ಲಿ ಅಂತ ಅನುಮಾನನಾ...?"

ನಗುತ್ತಾ ಕೇಳಿದಳು. ಆಕೆಯ ಆ ನಗು ಮಿಂಚಿನ ಬೆಳಕು ಚೆಲ್ಲಿದಂತಿತ್ತು.

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠ ಎಂದು ಕಿತ್ತಾಡಿಕೊಳ್ಳುವ ಈ ಸಮಾಜದಲ್ಲಿ ಅನ್ಯ ಧರ್ಮವನ್ನು ಗೌರವಿಸುವ ಸಲೋನಿಯಂತಹ ಹುಡುಗಿಯನ್ನು ಕಂಡರೆ ಆಶ್ಚರ್ಯವಾಗುವುದೇನೋ ಸಹಜ.

" ಹಾಗೇನಿಲ್ಲ .. ಬರಬಹುದು, ಕೆಲವರು ವಿಗ್ರಹಾರಾದನೆಯನ್ನು ನಂಬುವುದಿಲ್ಲವಲ್ಲ. ಅದಕ್ಕೆ ಕೇಳಿದೆ"
ಎಂದು ಸಮಾಧಾನದಿಂದ ಉತ್ತರಿಸಿದೆ.

"ನೋಡಿ ದೇವರು ಮೂರ್ತ ಸ್ವರೂಪವೋ, ಅಮೂರ್ತ ಸ್ವರೂಪವೋ ನನಗೆ ತಿಳಿಯದು, ನನ್ನ ಪ್ರಕಾರ ದೇವರು ಒಬ್ಬನೆ, ದೈವ ಶಕ್ತಿ ಇರುವುದೂ ಒಂದೇ ಎಂದು ನಂಬಿದವಳು ನಾನು. ಕೆಲವರು ಅದನ್ನೇ ವಿಭಿನ್ನ ಹೆಸರಿನಲ್ಲಿ, ವಿಭಿನ್ನ ಧರ್ಮದ ಅಡಿಯಲ್ಲಿ ಆರಾಧಿಸುತ್ತಾರೆ. ಕೆಲವರು ಆ ಶಕ್ತಿಯನ್ನು ವಿಗ್ರಹದ ರೂಪದಲ್ಲಿ  ಪೂಜಿಸಿದರೆ, ಮತ್ತೆ ಕೆಲವರು ಅದೇ ಶಕ್ತಿಯನ್ನು ಅಮೂರ್ತ ಸ್ವರೂಪದಲ್ಲಿ ಪೂಜಿಸುತ್ತಾರೆ. ಇರುವ ಭೂಮಿಯೂ ಒಂದೇ... ಕುಡಿವ ನೀರು ಒಂದೇ... ವಾಯು,ಅಗ್ನಿ, ಸೂರ್ಯ, ಚಂದ್ರ, ಆಕಾಶ, ಗ್ರಹ, ತಾರೆ, ಇಡೀ ಜಗತ್ತು ಎಲ್ಲವೂ ಎಲ್ಲರ ಕಣ್ಣಿಗೆ ಒಂದೇ ರೀತಿಯಾಗಿ ಕಾಣುತ್ತಿರಬೇಕಾದರೆ, ದೇವರು ಮಾತ್ರ ಬೇರೆ ರೀತಿಯಾಗಿ ಕಾಣಲು ಹೇಗೆ ಸಾದ್ಯ ಹೇಳಿ...? ಗುರಿ ತಲುಪಲು ಯಾವ ಮಾರ್ಗ ಆರಿಸಿಕೊಂಡರೇನು.. ? ಎಷ್ಟೋ ಜನ ಮಾರ್ಗ ಮಧ್ಯದಲ್ಲಿಯೇ ನನ್ನ ದಾರಿಯೇ ಶ್ರೇಷ್ಠವೆಂದು ವಾದಿಸಿ, ಜಗಳ ಮಾಡಿ, ಇನ್ನೊಬ್ಬರನ್ನು ತೊಂದರೆಗೆ ಸಿಲುಕಿಸಿ, ತಾವು ತೊಂದರೆಗೆ ಸಿಲುಕುತ್ತಾರೆ. ಇಂಥವರು ಗುರಿ ಕಾಣದೇ ಪರಿತಪಿಸುತ್ತಾರೆ. ಮಾರ್ಗಕ್ಕಿಂತ ಗುರಿ ಮುಖ್ಯವಲ್ಲವೇ..?"

ಸಲೋನಿ ಹಾಗೆ ಹೇಳಬೇಕಾದರೆ. ಆಕೆ ಬರೆದ 'ದೇವರು ಮತ್ತು ಧರ್ಮ' ಎಂಬ ಪುಸ್ತಕ ಓದಿದ ನೆನಪು ಬಂದಿತು. ಆಕೆ ಧರ್ಮದ ಬಗ್ಗೆ ಬರೆದ ಆ ಪುಸ್ತಕ ಎಲ್ಲಾ ಧರ್ಮದವರನ್ನು ಬೆರಗು ಗೊಳಿಸಿತ್ತು. ಆ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ಬಂದಿತ್ತು. ಆ ಪುಸ್ತಕ ಓದಿದಾಗಿನಿಂದ ನಾನು ಅವಳ ಅಭಿಮಾನಿಯಾಗಿ ಬಿಟ್ಟೆ. ಚಿಕ್ಕ ವಯಸ್ಸಿನಲ್ಲಿಯೇ ಅದೆಂತಹ ಸಾದನೆ ಅವಳದು. ನ್ಯಾನ್ಸಿಯ ಮದುವೆಯಲ್ಲಿ  ಬರಹಗಾರ್ತಿ ಸಲೋನಿ ಬರುತ್ತಾಳೆ ಎಂಬ ವಿಷಯ ಗೊತ್ತಾದ ಕೂಡಲೇ ಸಲೋನಿಯನ್ನು ನನಗೆ ಪರಿಚಯಿಸುವಂತೆ ನ್ಯಾನ್ಸಿಯನ್ನು ಒಂದು ವಾರದಿಂದ ದಂಗಾಲು ಬಿದ್ದಿದ್ದೆ.

"ನನ್ನ ಮದುವೆಗಿಂತ ಸಲೋನಿ ಪರಿಚಯವೇ ನಿನಗೆ ಮುಖ್ಯವೇ...?  ಹಾಗಿದ್ದರೆ ನನ್ನ ಮದುವೆಗೆ ನೀನೇನು ಬರುವುದು ಬೇಡ"

ಎಂದು ನ್ಯಾನ್ಸಿ ನನಗೆ ಹಲವು ಸಲ ಬೈದಿದ್ದಳು. ಆದರೂ ಬೆನ್ನು ಬಿಡದ ಬೇತಾಳದಂತೆ ನ್ಯಾನ್ಸಿಯನ್ನು ಒಪ್ಪಿಸಿ ಸಲೋನಿಯನ್ನು ಪರಿಚಯ ಮಾಡಿಕೊಂಡಿದ್ದೆ. ಅದಕ್ಕೆ ಒಂದು ಕಾರಣವೂ ಇತ್ತು. ನಾನು ಬರೆಯ ಹೊರಟಿದ್ದ  "ಧರ್ಮದ ತತ್ವ ಮತ್ತು ಸಿದ್ಧಾಂತಗಳು"  ಎಂಬ ಪಿ,ಹೆಚ್,ಡಿ, ಪ್ರಬಂಧಕ್ಕೆ ಸಲೋನಿಯ ಸಹಾಯ ನನಗೆ ಅವಶ್ಯವಾಗಿತ್ತು.

ಇಂದು ಸಲೋನಿಯು ಮತ್ತೆ ದೇವಸ್ಥಾನದಲ್ಲಿ ಸಿಕ್ಕಿದ್ದು ನನ್ನ ಮತ್ತು ಅವಳ ಗೆಳೆತನ ಇನ್ನಷ್ಟು ಭದ್ರವಾಯಿತು.  ಧರ್ಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕೆನಿಸಿದರೂ ಆ ಕ್ಷಣಕ್ಕೆ ನನ್ನ ತಲೆಗೆ ಏನೂ ಹೊಳೆಯಲಿಲ್ಲ. ಆಕೆಯ ಮದ್ದಾದ ಮುಖವು ನನ್ನ ಮನಸ್ಸನ್ನು ಆಗಾಗ ವಿಷಯಾಂತರ ಮಾಡಿಸುತ್ತಿತ್ತು. ಕಣ್ಣುಗಳು ನಾಚಿಕೊಂಡು ಅತ್ತಿತ್ತ ನೋಡುವಂತೆ ನಟಿಸುತ್ತಿದ್ದವು.

"ಸರಿ ನಾನು ಬರುತ್ತೇನೆ"

ಎಂದು ಹೇಳಿ ಸಲೋನಿ ದೇವಾಲಯದ ಮೆಟ್ಟಿಲು ಇಳಿದಳು. ಹಾಗೆ ಇಳಿಯುವಾಗ ಆಕೆಯ ಗೆಜ್ಜೆಯ ಸದ್ದು ಎದೆಯೊಳಗೆ ನನ್ನ ಎದೆಯೊಳಗೆಯೇ ಮಾರ್ಧನಿಸಿದಂತಾಯಿತು. ಎದೆಯಲ್ಲಿ ಎಂಥದೊ ತಕಧಿಮಿತದ ಮಧುರ ರಾಗ ಮೀಟಿ ಹೋದಂತಾಯಿತು..

ಸಲೋನಿ ಮತ್ತೆ ನನಗೆ ಭೇಟಿಯಾಗಿದ್ದು ನ್ಯಾನ್ಸಿಯ ಮನೆಯಲ್ಲಿ. ಕ್ರಿಸ್ ಮಸ್ ಹಬ್ಬಕ್ಕೆಂದು ನ್ಯಾನ್ಸಿ ನನ್ನನ್ನು ಕರೆದಿದ್ದಳು. ಅಲ್ಲಿಗೆ ಸಲೋನಿಯೂ ಬಂದಿದ್ದಳು. ಅಷ್ಟೊತ್ತಿಗೆ ನಾನು ಸಲೋನಿ ಬರೆದ ಪುಸ್ತಕದ ಕೆಲವು ಮಾಹಿತಿಯನ್ನು ನನ್ನ ಪಿ,ಹೆಚ್,ಡಿ, ಪ್ರಬಂಧಕ್ಕೆ ಅಳವಡಿಸಿಕೊಂಡಿದ್ದೆ. ಅಳವಡಿಸಿಕೊಳ್ಳುವುದು ನನಗೆ ಅನಿವಾರ್ಯವಾಗಿತ್ತು. ಅಂದು ಸಲೋನಿಗೆ ನನ್ನ ಪ್ರಬಂಧವನ್ನು ತೋರಿಸಿ ಒಪ್ಪಿಗೆ ಪಡೆಯಬೇಕಿತ್ತು. ಕ್ರಿಸ್ ಮಸ್ ಹಬ್ಬದ ಆಚರಣೆ ಊಟದ ನಂತರ ಮನೆಯ ಟೆರೇಸ್ ಮೇಲೆ ನನ್ನ ಪ್ರಬಂಧದ ಪುಟಗಳನ್ನು ತೋರಿಸಿದೆ. ಸಲೋನಿ ಪ್ರಬಂಧವನ್ನು ಓದಿ ನನಗೆ ಹಲವು ಕಡೆ ಸಲಹೆಗಳನ್ನು ನೀಡಿದಳು. ನನಗಿಂತ ಒಂದೆರಡು ವರ್ಷ ಚಿಕ್ಕವಳಾದ ಸಲೋನಿಗೆ ಇಷ್ಟೊಂದು ಜ್ಞಾನ ಸಂಪಾದಿಸಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಬರೆದ ಪ್ರಬಂಧ ಚೆನ್ನಾಗಿದೆ ಎಂದು ಹೇಳಿ ನನ್ನ ಬೆನ್ನು ತಟ್ಟಿದಳು.

"ನೀವು ಬರೆದ 'ದೇವರು ಮತ್ತು ಧರ್ಮ' ಎಂಬ ಕೃತಿಯಲ್ಲಿ ಎಷ್ಟೊಂದು ಸಹಿಷ್ಣುತೆಯ ವಿಚಾರಗಳನ್ನು ಬರೆದಿದ್ದೀರಿ. ಎಲ್ಲಾ ಧರ್ಮದ ತತ್ವಗಳನ್ನು ಮನ ಮುಟ್ಟುವಂತೆ ಹೇಳಿದ್ದೀರಿ ಇದೆಲ್ಲಾ ಹೇಗೆ ಸಾದ್ಯವಾಯಿತು..?"

ನಾನು ಕುತೂಹಲದಿಂದ ಕೇಳಿದೆ.

"ನನ್ನ ಮನೆಯ ವಾತಾವರಣವೇ ನನ್ನನ್ನು ಈ ಪುಸ್ತಕ ಬರೆಯಲು ಪ್ರೋತ್ಸಾಹ ಸಿಕ್ಕಿತು. ನಮ್ಮ ಮನೆಯಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಪ್ರಾಶಸ್ತ್ಯವಿದೆ. ಅಪ್ಪ ರಾಬರ್ಟ್, ಕ್ರಿಶ್ಚಿಯನ್ ಧರ್ಮದವರಾದರೆ, ಅಮ್ಮ ಶಾರದಾ ಸುಸಂಸ್ಕೃತ ಹಿಂದೂ ಮನೆತನದವಳು. ಇಬ್ಬರದೂ ಪ್ರೇಮ ವಿವಾಹ. ನಾನು ಹುಟ್ಟುವ ಮುನ್ನ ಅಪ್ಪ ನನ್ನ ಅಮ್ಮಳನ್ನು ತನ್ನ ಧರ್ಮಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರಂತೆ, ಅಮ್ಮ ಇದಕ್ಕೆ ಒಪ್ಪಲಿಲ್ಲ. ಒಮ್ಮೆ ಪಾಸ್ಟರ್ ಫರ್ನಾಂಡಿಸ್ ರವರನ್ನು ಅಪ್ಪ ನಮ್ಮ  ಮನೆಗೆ ಕರೆಯಿಸಿದ್ದರು. ಫಾಸ್ಟರ್ ರವರಿಂದ ಬುದ್ಧಿವಾದ ಹೇಳಿಸಿದರೆ ಅಮ್ಮಳನ್ನು ಕ್ರಿಶ್ಚಿಯನ್ ಆಗಿ ಮತಾಂತರಗೊಳಿಸಬಹುದೆಂದು ಅಪ್ಪನ ಲೆಕ್ಕಾಚಾರವಾಗಿತ್ತು. ಅದರಂತೆ ಅವರು ಅಮ್ಮನನ್ನು ಮತಾಂತರಿಸಲು ಮನವೊಲಿಸಿದರು. ಪಾಸ್ಟರ್ ರವರು ಹೇಳಿದ್ದು ಸರಿಯಾಗಿತ್ತು...

"ಹೆಣ್ಣಾದವಳು ಗಂಡನ ಧರ್ಮ ಪಾಲಿಸುವುದು ಸೂಕ್ತ. ಗಂಡನ ಸಂಸೃತಿ ಸಿದ್ಧಾಂತಗಳನ್ನು ಗೌರವಿಸಬೇಕು. ಗಂಡನೊಂದಿಗೆ ತಾನೂ ಅದೇ ಧರ್ಮವನ್ನು ಪಾಲಿಸಬೇಕು. ಇಬ್ಬರೂ ಒಟ್ಟಾಗಿದ್ದರೆ ಸೂಕ್ತ. ಆಗ ಸಂಸಾರವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಮೋಕ್ಷ ಪಡೆಯುವ ದಾರಿ ಇಬ್ಬರದೂ ಒಂದೇಯಾಗಿರಬೇಕು. ಯಾವಾಗ ಗುರಿ ಮತ್ತು ದಾರಿ ಒಂದೇ ಆಗಿರುತ್ತದೆಯೋ ಆಗ ಸ್ನೇಹ ಪ್ರೀತಿ ಸಹಜವಾಗಿ ಬೆಳೆಯುತ್ತಾ ಹೋಗುತ್ತದೆ. ದಾಂಪತ್ಯವೂ ಸುಖಕರವಾಗಿರುತ್ತದೆ".

 ಎಂದು ಬುದ್ಧಿವಾದ ಹೇಳಿದ್ದರು. ಆಗ ಅಮ್ಮ ಪಾಸ್ಟರ್ ರವರ ಮಾತನ್ನು ಗೌರವಿಸಿದಳು. ಚರ್ಚಗೆ ಹೋಗಿ ಅಪ್ಪನ ಧರ್ಮಕ್ಕೆ ಬದಲಾದಳು.

ಮಾರನೆಯ ದಿನ ಅಮ್ಮ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಚರ್ಚ್ ಗೆ ಹೋದಳು. ಚರ್ಚ್ ನ ಪ್ರಶಾಂತವಾದ ವಾತಾವರಣ, ಏಸು ಸ್ವಾಮಿಯ ದಿವ್ಯ ಶಕ್ತಿ ಅಮ್ಮನನ್ನು ಭಕ್ತಿಯಲ್ಲಿ ಮುಳುಗಿಸಿತು. ಕ್ಷಣಕಾಲ ಅಪ್ಪನೊಂದಿಗೆ ಬೈಬಲ್ ನ ವಾಕ್ಯಗಳನ್ನು ಪಠಿಸಿದಳು. ಪ್ರಾರ್ಥನೆಯಾದ ನಂತರ ಪಾಸ್ಟರ್ ಅಮ್ಮನನ್ನು ಕರೆದು ಮಾತನಾಡಿಸಿದರು.
ಅಮ್ಮನ ಎರಡು ಕೈಯನ್ನು ಹಿಡಿದು ಪ್ರಾರ್ಥಿಸಿದರು. ಒಳ್ಳೆಯದಾಗಲಿ ಎಂದು ಹರಸಿದರು. ಹೀಗೆ ಒಂದು ವಾರ ಕಳೆಯಿತು.

ಒಂದು ದಿನ ಪಾಸ್ಟರ್ ಅಮ್ಮನನ್ನು ಕರೆದು

"ಈಗ ಹೇಗನ್ನಿಸುತ್ತಿದೆ...?"
ಎಂದು ಕೇಳಿದರು. 

ಆಗ ಅಮ್ಮ

"ಮನಸ್ಸು ಶಾಂತವಾಗಿದೆ. ದೇವರ ವಾಕ್ಯಗಳು ಮನಸ್ಸನ್ನು ಮುದಗೊಳಿಸಿವೆ. ಮನಸ್ಸು ಉಲ್ಲಾಸದಿಂದ ಕುಣಿಯುತ್ತಿದೆ ಎಂದೆನಿಸುತ್ತಿದೆ. ಸತ್ಯ, ಶಾಂತಿ, ಸಂತೋಷ ನನಗೆ ಸಿಕ್ಕಿದೆ ಎಂಬಂತೆ ಬಾಸವಾಗುತ್ತಿದೆ....
ಆದರೆ
ಒಂದು ವಿಷಯ ಪಾಸ್ಟರ್... ಮೊನ್ನೆ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಎದುರುಗಡೆ ದೇವಾಲಯದಲ್ಲಿಯ ಘಂಟೆಯ ಸದ್ಧು ಕೇಳಿಸಿತು. ಅದರ ಮಾರ್ಧನಿ ನನ್ನ ಹೃದಯದೊಳಗೆಯೇ ಪ್ರತಿಧ್ವನಿಸಿದಂತಾಯಿತು. ಕೂಡಲೇ ಹೊರಗೆ ಬಂದೆ ದೇವಾಲಯದ ಒಳಗಿನಿಂದ ಪಠಣೆಯಾಗುತ್ತಿದ್ದ ವೇದ ಮಂತ್ರ ಘೋಷಗಳು ನನ್ನ ಕಿವಿಯನ್ನು ಹೊಕ್ಕಾಗ ಮಹದಾನಂದವಾಯಿತು. ಯಾವುದೋ ಸೆಳೆತ, ಏನೋ ಒಂದು ರೀತಿಯ ತೃಪ್ತಿಯ ಭಾವ ಆ ಮಂತ್ರ ಘೋಷದಲ್ಲಿ ಕಂಡಂತಾಯಿತು. ಬೈಬಲ್ ಓದಿದಾಗ ಮನಸ್ಸು ಶಾಂತವಾಯಿತು. ವೇದ ಮಂತ್ರ ಘೋಷಗಳಿಂದ ಮನಸು ಅತ್ಯಾನಂದ ಅನುಭವಿಸಿತು. ಹಾಗಂದ ಮಾತ್ರಕ್ಕೆ ನನಗೆ ಭಗವದ್ಗೀತೆ ದೋಡ್ಡದೆಂದಾಗಲೀ ಅಥವಾ ಬೈಬಲ್ ದೊಡ್ಡದೆಂದಾಗಲೀ ಯಾವ ಭೇದ ಭಾವವೂ ಇಲ್ಲ. ನಾನು ಚಿಕ್ಕಂದಿನಿಂದ ಪಾಲಿಸಲ್ಪಟ್ಟ ಹಿಂದೂ ಸಂಸ್ಕೃತಿಯ ಕಾರಣದಿಂದ ಗೀತೆಯ ವೇದ ಘೋಷಗಳು ನನ್ನನ್ನು ಈ ರೀತಿ ಆಕರ್ಷಿಸಿರಬಹುದು. ಅಗಕ್ಕೆ ಒಂದು ಕಾರಣವೂ ಇದೆ..

ನಾನು ಚಿಕ್ಕವಳಿರುವಾಗ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದೆನಂತೆ. ಖಾಯಿಲೆ ಹೆಚ್ಚಾಗಿ ಸಾಯುವ ಹಂತಕ್ಕೆ ತಲುಪಿದ್ದೆ. ಯಾವ ಚಿಕಿತ್ಸೆಗೂ ನನ್ನ ದೇಹ ಸ್ಪಂದಿಸುತ್ತಿರಲಿಲ್ಲ. ಆಗ ನನ್ನ ತಾಯಿ ಊರ ದೇವಿಗೆ ಹರಕೆ ಹೊತ್ತಳು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ತುಪ್ಪದ ದೀಪ ಹಚ್ಚಿದಳು ಇದರಿಂದ ನನ್ನ ಖಾಯಿಲೆಯೂ ಗುಣ ಮುಖವಾಗುತ್ತಾ ಬಂದಿತಂತೆ. ದೇವಿಯ ಆಶೀರ್ನವಾದದಿಂದ ನಾನು ಪುನರ್ಜೀವ ಪಡೆದೆನಂತೆ.  ಅಂದಿನಿಂದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ನಾನು ಅಮ್ಮನ ಜೊತೆಗೆ ದೇವಾಲಯಕ್ಕೆ ಹೋಗುವ ಅಭ್ಯಾಸವಾಯಿತು. ದೇವಾಲಯದ ಒಳಗೆ ಹೋದ ಕೂಡಲೆ ನಾನು ಅಮ್ಮನ ಜೊತೆಯಲ್ಲಿ ಭಕ್ತಿಯಲ್ಲಿ ತಲ್ಲೀನನಾಗುತ್ತಿದ್ದೆ. ಇಂದಿಗೂ ದೇವಾಯಲದ ಘಂಟೆ, ಶಂಖ, ಜಾಗಟೆಗಳ ಧ್ವನಿ ಕೇಳಿದ ಕೂಡಲೆ ಯಾವುದೋ ಒಂದು ಸೆಳೆತ ನನ್ನನ್ನು ಆವರಿಸಿಕೊಂಡಾಂತಾಗುತ್ತದೆ. ಚಿಕ್ಕಂದಿನಿಂದಲೂ ಬೆಳೆದುಬಂದ ಆ ಭಾವನೆಗಳು ನನ್ನಿಂದ ತೆಗೆದು ಹಾಕಲಾಗುತ್ತಿಲ್ಲ. ಮನಸ್ಸಿನಲ್ಲಿಯೇ ಶಾಶ್ವತವಾಗಿ ಅವಿರ್ಭಸಿರುವ ಆ ನೆನಪುಗಳನ್ನು ನಾನು ಹೇಗೆ ತೆಗೆದು ಹಾಕಲಿ. ಬಾಲ್ಯದ ಸುಂದರ ಕನಸುಗಳೊಂದಿಗೆ ಬೆರೆತಿರುವ ಈ  ಮಂತ್ರ ಘೋಷಗಳನ್ನು ನಾನು ಹೇಗೆ ಮರೆಯಲಿ. ಗೆಳೆತಿಯರೊಂದಿಗೆ ಗಣೇಶನ ದೇವಾಲಯದಲ್ಲಿ ಹಾಡಿದ ಭಕ್ತಿ ಗೀತೆಯನ್ನು ಹೇಗೆ ಮರೆಯಲಿ,  ಬಣ್ಣ ಬಣ್ಣದ ರಂಗನ್ನು ಹಾಕಿ ಗೆಳತಿಯರೊಂದಿಗೆ ಜಗಳಕ್ಕಿಳಿದ ಆ ಹೋಳಿ ಹಬ್ಬವನ್ನು ಹೇಗೆ ಮರೆಯಲಿ?  ಹೊಸ ಬಟ್ಟೆ ಹಾಕಿ ಪಟಾಕಿ ಸಿಡಿಸಿದ ಸಂಭ್ರಮವನ್ನು ಮರೆಯಲು ಸಾದ್ಯವೇ..? ಯಾವುದನ್ನು ಹೇಗೆ ಮರೆಯಲಿ ... ಈ ಎಲ್ಲಾ ಧಾರ್ಮಿಕ ನಿಷ್ಠೆಗಳು ನನ್ನ ದೇಹದೊಂದಿಗೆ ಬಿಡಿಸಲಾಗಂತೆ ತಳುಕು ಹಾಕಿಕೊಂಡಿವೆ.  ನನಗೆ ಜನ್ಮ ನೀಡಿದ ಹೆತ್ತ ತಾಯಿ ದೇವರ ಹಾಡನ್ನು ಹಾಡುತ್ತಾ ತೊಟ್ಟಿಲನ್ನು ತೂಗುತ್ತಿದ್ದಳಂತೆ ಅಮ್ಮನ ಜೊತೆ ಆ ಹಾಡನ್ನು ಹೇಳಿಕೊಂಡು ಮಾಡಿದ ದೇವರ ಪೂಜೆಯನ್ನು ಮರೆಯುವುದಾದರೂ ಹೇಗೆ...? ಇದ್ದಕ್ಕಿದ್ದಂತೆ ನೀವು ನನ್ನ ಹೆತ್ತ ತಾಯಿ ಇವಳಲ್ಲ ಎಂದು ಹೇಳಿ ಬೇರೆ ಯಾವುದೋ ಸ್ತ್ರೀ ಯನ್ನು ತೋರಿಸಿ ಇವಳೇ ನಿನ್ನ ತಾಯಿ ಎಂದರೆ ಹೇಗೆ ಸ್ವೀಕರಿಸಲಿ ಪಾಸ್ಟರ್.....  ನನ್ನ ಆ ನೆನಪುಗಳು ನನ್ನ ಉಸಿರಿನೊಂದಿಗೆ ಬೆರೆತು ಬಿಟ್ಟಿವೆ... ನನಗೆ ಸ್ವಲ್ಪ ದಿನ ಕಾಲಾವಕಾಶ ಕೊಡಿ ನನ್ನಲ್ಲೇನಾದರೂ ಬದಾಲಾವಣೆಯಾದರೆ ಖಂಡಿತ ನಾನು ಗಂಡನೊಂದಿಗೆ ಮೇಣದಬತ್ತಿಯನ್ನು ಹಚ್ಚುತ್ತೇನೆ, ಇಲ್ಲದಿದ್ದರೆ ಗಂಡನಿಗೆ ತಕ್ಕ ಹೆಂಡತಿಯಾಗಿ ಕರ್ಪೂರವನ್ನು ಹಚ್ಚುತ್ತೇನೆ...."

 ಅಂದು ಅಮ್ಮ ಹೇಳಿದ ಆ ಮಾತುಗಳು ಪಾಸ್ಟರ್ ಗೆ ಮನವರಿಕೆಯಾಯಿತೋ ಇಲ್ಲವೋ ತಿಳಿಯದು. ಆದರೆ  ಮಹಾನ್ ಸಹಿಷ್ಣುತಾವಾದಿಯಾದ ಅವರು ಅಪ್ಪನಿಗೆ ಅಮ್ಮನ ಭಾವನೆಗಳನ್ನು ಮನವರಿಕೆ ಮಾಡಿಸಿದರು. ಅಮ್ಮನ ಇಚ್ಛೆಯಂತೆ ಮನೆಯಲ್ಲೂ ಸಹ ಎರಡೂ ಧರ್ಮಕ್ಕೆ ಪ್ರಾಶಸ್ತ್ಯವನ್ನು ನೀಡಲಾಯಿತು. ಎಲ್ಲಾ ಧರ್ಮವನ್ನು ಗೌರವಿಸುವಂತೆ ಅಪ್ಪನಿಗೆ ಹೇಳಿಕೊಟ್ಟ ಆ ಪಾಸ್ಟರ್ ನಿಜಕ್ಕೂ ದೈವ ಸ್ವರೂಪಿಗಳು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ವಾದಿಸುವ ಈ ದಿನಗಳಲ್ಲಿ ಪಾಸ್ಟರ್ ಫರ್ನಾಂಡೀಸ್ ದೈವಸ್ವರೂಪಿಗಳಾಗಿದ್ದರು. ಸಾಕ್ಷಾತ್ ಏಸುವಿನ ಪ್ರತಿರೂಪದಂತೆ ಕಂಡರು. ತಮ್ಮ ಧರ್ಮದ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವ ಮಹಾನ್ ಸರ್ವ ಧರ್ಮ ಸಹಿಷ್ಣಿತಾವಾದಿಗಳಂತೆ ಗೋಚರಿಸಿದರು.

ಸಲೋನಿ ತನ್ನ ತಾಯಿಯ ಜೀವನದಲ್ಲಿ ನಡೆದ ಈ ಘಟನೆಯನ್ನು ಸವಿವರವಾಗಿ ವಿವರಿಸಿ ಹೇಳಿದಳು. ಧರ್ಮ, ಧರ್ಮ ಎಂದು ಕಿಚ್ಚಾಡುತ್ತಿರುವ ಇಂದಿನ ಸಮಾಜದಲ್ಲಿ ಸಲೋನಿಯ ಕುಟುಂಬವು ನನಗೆ ಮಾದರಿಯಾದಂತೆ ಕಂಡಿತು. ಸಲೋನಿಯು ನನ್ನ ನಡುವೆ ಇರುವ ಪ್ರೀತಿಯ ಆಪ್ತ ಸಂಗಾತಿ ಎಂಬಂತೆ ಅನುಭವವಾಯಿತು. ಜೊತೆಗೆ ಸಲೋನಿಯೂ ಸಹ ನನ್ನ ಮನಸಿಗೆ ಇನ್ನು ಹತ್ತಿರವಾದಳು.

"ನನ್ನ ಮದುವೆ ಆಗ್ತೀರಾ...?"

ಎಂದು ಕೇಳಿದೆ

ಸಲೋನಿ ಏನೂ ಮಾತನಾಡದೇ ಕ್ಷಣ ಕಾಲ ಮೌನ ವಹಿಸಿದಳು. ಮೌನದಲ್ಲೂ ಮುದ್ದಾಗಿ ಕಾಣುತ್ತಿದ್ದ ಆಕೆಯ ಮುಖ ಚೆಂದವಾಗಿ ಮನಸ್ಸನ್ನು ಮುದಗೊಳಿಸಿತು. ಉದ್ದವಾದ ಆಕೆಯ ಮುಂಗುರುಳು ಗಾಳಿಯೊಂದಿಗೆ ಹಾರಾಡುತ್ತಾ ಆಕೆಯ ಮುದ್ದಾದ ಕೆನ್ನೆಯನ್ನು ಸೋಕುತ್ತಿದ್ದವು. ಕಣ್ಣುಗಳು ನಾಚಿಕೆಯ ಆಭರಣಗಳನ್ನು ಧರಿಸಿದ್ದವು. ಪಟ ಪಟನೆ ಮುದ್ದಾಗಿ ಮಾತನಾಡುತ್ತಿದ್ದ ಅವಳ ನಾಲಿಗೆ ನನ್ನ ಪ್ರಶ್ನೆಗೆ ಉತ್ತರಿಸದಂತಾಯಿತು. ಆಕೆಯ ಮುದ್ದು ಮುಖ ಚಂದಿರನ ಬೆಳದಿಂಗಳನ್ನು ಮೀರಿಸುವಂತಿಹ ಕಾಂತಿ ಚೆಲ್ಲುತ್ತಿತ್ತು. ಆಕೆಯ ಸೌಂದರ್ಯಕ್ಕೆ ಮಾರು ಹೋದ ನನಗೆ ಕ್ಷಣ ಕಾಲ ಆಕೆ ಯಾವ ಧರ್ಮದವಳು ಎಂಬುದು ಮರೆತೇ ಹೋಗಿತ್ತು. ಆ ಕ್ಷಣ ನಮ್ಮಿಬ್ಬರ ಪ್ರೀತಿಗೆ ಜಾತಿಯಾಗಲಿ ಧರ್ಮವಾಗಲಿ ನೆನಪಿಗೆ ಬರಲೇ ಇಲ್ಲ.ಅದೊಂದು ಪ್ರಕೃತಿ ಸಹಜವಾಗಿ ಗಂಡು ಹೆಣ್ಣಿನ ಮನಸ್ಸಿನಲ್ಲಿ ಮೋಳಕೆಯೊಡೆಯುವಂತಹ ಸಹಜ, ನಿರ್ಮಲವಾದ ಪ್ರೀತಿ.  ಮನುಷ್ಯ ಹಾಕಿಕೊಂಡ ಧರ್ಮ ಮತ್ತು ಜಾತಿಯ ಕಟ್ಟುಪಾಡುಗಳನ್ನು ಮೀರಿನಿಂತ ದೈವದತ್ತವಾದ ಪ್ರೀತಿಯದು. ದೇವರು ಸೃಷ್ಟಿಸಿದ ಗಿಡ ಮರ, ಬೆಟ್ಟ ಗುಡ್ಡ ಭೂಮಿ ಆಕಾಶ, ನದಿ ಸಮುದ್ರದಂತೆಯೇ ಈ ಪ್ರೀತಿಯೂ ಸಹ ಸಹಜವಾದದ್ದು. ಧರ್ಮಕ್ಕೆ ಹೊರತಾಗಿ ನಿಂತಿರುವ, ಮತ್ತು ಮೇಲು, ಕೀಳು, ಮೈಲಿಗೆ ಎಂಬ ಪದಗಳೇ ಗೊತ್ತಿರದ ಭಾವನೆಯದು. ಪ್ರಕೃತಿಯಂತೆ  ಪ್ರೀತಿಯೂ ಸಹ ನಿರ್ಮಲ ಮತ್ತು  ನಿಷ್ಕಲ್ಮಶವಾದುದು. ಅದಕ್ಕೆ ಮನುಷ್ಯ ನಿರ್ಮಿಸಿಕೊಂಡ ಕಟ್ಟುಪಾಡುಗಳು ಅನ್ವಯಿಸದು....
 
ನನಗಾಗಲೀ ಸಲೋನಿಗಾಗಲೀ ಜಾತಿ ಮತ ಧರ್ಮಗಳ ಮೇಲೆ ಅಷ್ಟಾಗಿ ನಂಬಿಕೆಯಿರಲಿಲ್ಲ.  ದೇವರು ಧರ್ಮಗಳನ್ನು ಸೃಷ್ಠಿಸಿದನೋ.. ಅಥವಾ ಮಾನವನೇ ದೇವರನ್ನು ಸೃಷ್ಠಿಸಿಕೊಂಡು ಧರ್ಮವೆಂಬ ಬೇಲಿಯನ್ನು ಹಾಕಿಕೊಂಡನೋ ತಿಳಿಯದು. ಎಲ್ಲಾ ನಡೆ ನುಡಿಯಲ್ಲಿ ಧರ್ಮದ ವಿಧಿ ವಿಧಾನಗಳನ್ನು ವಿಧಿಸಿ ಮಾನವನ ನಡತೆಯನ್ನು ನಿಯಂತ್ರಿಸ ಬಹುದು. ಆದರೆ ಈ ಪ್ರೀತಿ ಅನ್ನೋ ಭಾವನೆಯನ್ನು ನಿಯಂತ್ರಿಸಲು ಯಾವ ಧರ್ಮಗಳೂ ಇನ್ನು ಸೃಷ್ಠಿಯಾಗಿಲ್ಲ. ಇಲ್ಲಿರುವ ಧರ್ಮಗಳು ಪ್ರೀತಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರೂ ಸಹ ಪ್ರೀತಿ ಮಾತ್ರ ಆಗಾಗ ಪ್ರಕೃತಿಯ ಸಹಜ ಧರ್ಮದತ್ತ ವಾಲುತ್ತಲೇ ಇರುತ್ತವೆ. ಆಗಾಗ ಅಂತರ್ಜಾತೀಯ ಅಂತರ್ ಧರ್ಮೀಯ ವಿವಾಹಗಳು ನಡೆದು ಮಾನವ ಧರ್ಮವನ್ನು ಪರಿಪಾಲಿಸುತ್ತಲೇ ಇರುತ್ತವೆ....

ಕ್ಷಣ ಕಾಲದ ನಮ್ಮಿಬ್ಬರ ನಡುವಿನ ಮೌನದ ಮಧ್ಯೆಯೇ ಮನಸ್ಸು ಬಿಡುವು ಮಾಡಿಕೊಂಡು ಏನೇನೋ ಯೋಚಿಸಿತು. ಮತ್ತೆ ಸಲೋನಿಯನ್ನು ನೋಡಿದೆ. ಅದೇ ನೀರವ ಮೌನ. ಸೌಂದರ್ಯೋಪಸಕನಾದ ಶಿಲ್ಪಿಯೊಬ್ಬನು ಕಡೆದ ಬೊಂಬೆಯಂತೆಯೇ ಸಲೋನಿಯು ಸುಂದರ ಕಲಾಕೃತಿಯಂತೆ ನನ್ನ ಮುಂದೆ ನಿಂತಿದ್ದಳು. ನಮ್ಮಿಬ್ಬರ ನಡುವೇ ಯಾವ ಧರ್ಮವೂ ಇರಲಿಲ್ಲ. ಇದ್ದದ್ದು ಪ್ರಕೃತಿಯ ಸಹಜ ಧರ್ಮ ಒಂದೇ... ನಕ್ಷತ್ರದಂತಿರುವ ಆಕೆಯ ಕಣ್ಣುಗಳು ಹೊಳಪಿನಿಂದ ಕೂಡಿದ ಬೆಳಕಿನ ಧರ್ಮ ಸೂಚಿಸುತ್ತಿತ್ತು. ಸಂಪಿಗೆಯಂತಿರುವ ಅವಳ ನಾಸಿಕವು ಹೂವಿನ ಧರ್ಮಕ್ಕೆ ಸೇರಿತ್ತು. ಜೇನಿನಂತೆ  ಸವಿಯಂತಿರುವ ಅವಳ ತುಟಿಗಳು ಸಿಹಿಯಾದ ಧರ್ಮವನ್ನು ತೋರಿಸಿತ್ತು. ನಯವಾದ ಕೆನ್ನೆಗಳು ಮೃದುವಾದ ಧರ್ಮ ಹೊಂದಿತ್ತು. ಅವಳ ಬಳುಕುವ ಶರೀರವು ಪ್ರಕೃತಿಯಲ್ಲಿಯೇ ಬಳ್ಳಿಯಾಗಿ ಬಳುಕುವ  ಸಸ್ಯ ಧರ್ಮವನ್ನು ಸೂಚಿಸುತ್ತಿತ್ತು. ನನ್ನ ಕಣ್ಣಿಗೆ ಅವಳೊಂದು ಹೆಣ್ಣು ಧರ್ಮ,  ನಾನೊಂದು ಗಂಡು ಧರ್ಮ,  ದೇವರು ಸೃಷ್ಟಸಿದ ಈ ಎರಡು ಧರ್ಮಗಳು ಎಂದಾದರೂ ಕೋಮು ಗಲಭೆ ನಡೆಸಿದ್ದವೆ...?  ಪ್ರೀತಿ ಮೊಳಕೆಯೊಡೆಯುವಾಗ ಯಾವ ಧರ್ಮವು ನಮಗೆ ಅಡ್ಡಬರಲಿಲ್ಲ. ನಾವು ಸೌಂದರ್ಯವನ್ನು ಆಸ್ವಾಧಿಸುವಾಗಲೂ ಧರ್ಮದ ಗುರುತು ನಮಗೆ ಸಿಗಲೇ ಇಲ್ಲ....
ನನ್ನ ಮದುವೆ ಆಗ್ತಿರಾ...? 
ಎಂದು ನಾನು ಕೇಳಿದ ಪ್ರಶ್ನೆಗೆ ಸಲೋನಿಯ ಕೆನ್ನೆಯ ರಂಗು ಇನ್ನಷ್ಟು ಅಧಿಕವಾದಂತೆ ಕಂಡಿತು. ಆಕೆಯ ಮುದ್ದು ಮುಖಕ್ಕೆ ಮೆರಗು ನೀಡಿದ್ದ ಅವಳ ಗುಳಿಕೆನ್ನೆಯಲ್ಲಿಯೇ, ನಾನು ಗಿರಿಗಿಟ್ಟಲೆ ಹೊಡೆದು ಧರ್ಮಕ್ಕೂ ಆಚೆಯಿರುವ  ಪ್ರೀತಿ ಎಂಬ ಗುಡಿಯೊಳಗೆ ಬಿದ್ದಿದ್ದೆ.  ಕ್ಷಣ ಕಾಲ ನನ್ನ ಹುಟ್ಟಿಗೆ ಧರ್ಮದ ಹಣೆಪಟ್ಟಿ ಕೊಟ್ಟವರೂ ಸಹ ನೆನಪಿಗೆ ಬರಲೇ ಇಲ್ಲ. ಸಲೋನಿಯನ್ನು ನೋಡಿದಾಗ ಧರ್ಮವನ್ನು ಮರೆಸುವ ಇನ್ನೊಂದು ಆಕರ್ಷಣೆ ಇದೆ ಎನ್ನಿಸಿತು. ಧರ್ಮಕ್ಕೂ ಮಿಗಿಲಾದ ಭಾವವೊಂದಿದೆ ಎನ್ನಿಸಿತು. ಅಥವಾ ಈ ಆಕರ್ಷಣೆಯೇ ನಿಜವಾದ ಧರ್ಮವೇ..?  ಯಾಕಾಗಿರಬಾರದು..ಅದು ಗಂಡು ಮತ್ತು ಹೆಣ್ಣು ಎಂಬ ಎರಡೇ ಧರ್ಮ.. ಎರಡೇ ಜಾತಿ.. ಹೀಗೆ ಧರ್ಮ ಬಗ್ಗೆ ಎದ್ದಿರುವ ಗೊಂದಲಮಯವಾದ ಹಲವು ಪ್ರಶ್ನೆಗಳು ನನ್ನ ಮನದಲ್ಲಿ ಮೂಡುತ್ತಿರುವಾಗಲೇ ಸಲೋನಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಳು.. 
ಆಕೆಯ ಆ ಸ್ಪರ್ಶದಲ್ಲಿ ಎಲ್ಲವನ್ನೂ ಮರೆಸುವ ಶಕ್ತಿಯಿತ್ತು..
ನವಿರಾದ ಸ್ಪರ್ಶ.. ಹಿತವಾದ ಭಾವ... ಬೌತಿಕ ಜಗತ್ತಿನಾಚೆ ವಿಹರಿಸಿಂತಹ ಅನುಭಾವ..
ಆ ಸ್ಪರ್ಶದಲ್ಲಿ ನಾನು ಅನುಭವಿಸಿದ್ದು ಪ್ರಕೃತಿಯ ಸಹಜ ಧರ್ಮ ಮಾತ್ರ. ಜಗತ್ತಿನ ಸೃಷ್ಠಿಗೆ ಮತ್ತು ಜೀವ ಜಗತ್ತಿನ ಇರುವಿಕೆಗೆ  ಕಾರಣವಾಗಿರುವ ಪ್ರೀತಿಯ ಧರ್ಮ, ಅದೊಂದೇ ನಿತ್ಯ ನಿರಂತರ....
                     
                        - ಪ್ರಕಾಶ್ ಎನ್ ಜಿಂಗಾಡೆ.

Monday, 8 February 2016

ಕಡಲ ಕಿನಾರೆಯ ಹುಡುಗಿ

ಕಡಲ ಕಿನಾರೆಯ ಹುಡುಗಿ....

ಸೂರ್ಯನ ಹೊಂಬಿಸಿಲು ಆಗಲೇ ಭೂಮಿಯನ್ನು ಸ್ಪರ್ಶಿಸಿಯಾಗಿತ್ತು. ಕಡಲ ಅಲೆಗಳು ಎಂದಿಗಿಂತ ಸ್ವಲ್ಪ ಶಾಂತ ರೂಪವನ್ನು ಪಡೆದುಕೊಂಡಿದ್ದವು. ಕಡಲ ಕಿನಾರೆಯ ಮರಳಿನಲ್ಲಿ ಓಡಿ ಓಡಿ ಸುಸ್ತಾಗಿ ಸ್ವಲ್ಪ ನಿಂತುಕೊಂಡೆ. ಪ್ರತಿದಿನ ಎರಡು ಕಿಲೋಮೀಟರಷ್ಟಾದರೂ ಓಡುತ್ತಿದ್ದ ನನಗೆ ಇಂದು ಬಹುಬೇಗ ಆಯಾಸವಾಗಿತ್ತು. ಹಾಗೆಯೇ ವಿಶ್ರಾಂತಿಗಾಗಿ ಮರಳಿನಲ್ಲಿ ಬಿದ್ದುಕೊಂಡೆ..

"ಸರ್... ಈ ಹೂವು ಬೇಕಾ...? ಯಾವ್ ಕಲರ್ ನಾದ್ದರೂ ತಗೋಳಿ ಬರೀ ಐದು ರೂಪಾಯಿಗಳು"
ಹಿಂದಿನಿಂದ ಬಂದ ಹುಡುಗಿಯೊಬ್ಬಳು ಗುಲಾಬಿ ಹೂವಿನ ಬುಟ್ಟಿಯನ್ನು ನನ್ನ ಮುಂದೆ ಚಾಚಿ ಹೇಳಿದಳು. ಹೂವಿನ ಬುಟ್ಟಿಯಲ್ಲಿ ಹಲವು ರಂಗಿನ ಹೂವುಗಳು ತಾಜಾತನದಿಂದ ಕೂಡಿದ್ದವು. ಆಕೆಯ ಮುಖವನ್ನೊಮ್ಮೆ ನೋಡಿದೆ. ಅವಳ ಮುಖದ ಸೌಂದರ್ಯ ತಾನು ತಂದ ಹೂವಿಗಿಂತಲೂ ಹೆಚ್ಚಿನ ತಾಜಾತನದಿಂದ ಕಂಗೊಳಿಸುತ್ತಿತ್ತು. ಮುಂಜಾನೆಯ ಮಂಜನ್ನೇ ಹಿನ್ನಲೆಯಾಗಿರಿಸಿಕೊಂಡು ನಿಂತಿರುವ ಆ ಹುಡುಗಿಯು ರೂಪದಲ್ಲಿ ಯಾವ ಅಪ್ಸರೆಗಿಂತ ಕಡಿಮೆ ಇರಲಿಲ್ಲ. ಕೆಂಪು ಗುಲಾಬಿ ಬಣ್ಣದ ಲಂಗ, ಬಿಳಿಯ ಅತಿ ಶುಭ್ರವಾದ ರವಿಕೆ, ತಲೆಗೆ ಹಳದಿ ಬಣ್ಣದ ಬಟ್ಟೆಯನ್ನು ಪೇಟದಂತೆ ಸುತ್ತಿಕೊಂಡಿದ್ದಳು. ಪೇಟದಿಂದ ಇಳಿದು ಬಿದ್ದ ಉದ್ದನೆಯ ಕಪ್ಪು ಕೂದಲುಗಳು ಮುಂಜಾನೆಯ ತಂಗಾಳಿಯೊಡನೆ ಅಲೆಯಾಗಿ ಈಜುತ್ತಿವೆಯೇನೊ ಎಂಬಂತೆ ಕಾಣುತ್ತಿದ್ದವು. ಗುಲಾಬಿ ಬಣ್ಣದ ಆಕೆಯ ಕೆನ್ನೆಯ ಮುಂದೆ, ತಾಜಾ ಹೂವಿನ ಬಣ್ಣವೂ ಮಾಸಿದಂತೆ ಕಾಣುತ್ತಿತ್ತು.
ಆಕೆಯ ಸೌಂದರ್ಯವನ್ನು ನೋಡಿ ಮನಸಿನಲ್ಲಿ ಇಂಪಾದ ಭಾವವೊಂದು ಹೊಕ್ಕಂತಾಯಿತು.. ಬರಿದಾದ ಹೃದಯದಲ್ಲಿ ಸಂತಸದ ಜೀವಜಲವನ್ನು ಸಿಂಪಡಿಸಿದಂತಾಯಿತು. ಕಿತ್ತು ಹೋದ ಹೃದಯ ವೀಣೆಯ ತಂತಿಯನ್ನು ಬಿಗಿದು ಒಲವ ರಾಗವನ್ನು ನುಡಿಸಿದ್ದಳು. ಆಕೆಯ ಸೌಂದರ್ಯವನ್ನು ಸವಿಯುತ್ತಾ ಹಾಗೆಯೇ ಒಂದು ಕ್ಷಣ ಕಲ್ಪನಾ ಲೋಕದಲ್ಲಿ ತೇಲಿಹೋದೆ......
"ರೀ.....ಪ್ಲೀಸ್... ಒಂದು ಹೂವಾದ್ರೂ ತಗೋಳಿ"
ಮತ್ತೆ ಆಕೆ ಹೇಳಿದಳು.
ಆಕೆಯ ರೂಪ ನೋಡಿ ಮೈ ಮರೆತ್ತಿದ್ದ ನಾನು ಎಚ್ಚೆತ್ತುಕೊಂಡೆ..
ನನ್ನಲ್ಲಿದ್ದ ಐದು ರೂಪಾಯಿಗಳನ್ನು ಆಕೆಯ ಕೈಗೆ ಕೊಟ್ಟೆ. ತಿಳಿ ಹಳದಿ ಬಣ್ಣದ ಗುಲಾಬಿ ಹೂವೊಂದು ಕೊಟ್ಟಳು. ನಾನು ಹೂವನ್ನು ಪಡೆದು ಮತ್ತೆ ಅದೇ ಹೂವನ್ನು ಅವಳ ಕೈಗೆ ನೀಡಿ
"ನಿನ್ನ ಸೌಂದರ್ಯಕ್ಕೆ, ನನ್ನದೊಂದು ಚಿಕ್ಕ ಹೂ ಕಾಣಿಕೆ... ಈ ಹೂ ನಿನ್ನಿಂದ ಕೊಂಡದ್ದು ನಿನಗಾಗಿಯೇ, ಪ್ಲೀಸ್ ಸ್ವೀಕರಿಸು.. ಬೇಡ ಎನ್ನಬೇಡ"
ಎಂದು ಬೇಡಿಕೊಂಡೆ...
ಆಕೆ ನನ್ನಿಂದ ಆ ಹೂವನ್ನು ಪಡೆದು ಕೊಂಡಳು. ಆದರೆ ಒಂದು ಕ್ಷಣ ಕೈಯಲ್ಲಿ ಹಿಡಿದು ಹಾಗೆಯೇ ನಾನು ಕುಳಿತ್ತಿದ್ದ ಪಕ್ಕದಲ್ಲೇ ಮರಳಿನಲ್ಲಿ ಸಿಕ್ಕಿಸಿ ನನ್ನ ಮುಖವನ್ನೊಮ್ಮೆ ನೋಡಿ ನಸು ನಕ್ಕು ಹೊರಟಳು.
"ಹಲೋ... ಏಯ್... ನಿನ್ನ ಹೆಸರೇನು...? ಪ್ಲೀಸ್"
ಎಂದು ಕೂಗಿಕೊಂಡೆ.
ಅವಳು ತಿರುಗಿ ನೋಡಿ ಮತ್ತೊಮ್ಮೆ ನಕ್ಕಳು.
ಆಕೆಯ ಆ ನಗುವಿನಲ್ಲಿ ಚಂದಿರನು ಸಹ ನಾಚುವಂತಹ ಸೌಂದರ್ಯವಿತ್ತು. ಮಿಂಚಿನ ಹೊಳಪಿತ್ತು. ಹೃದಯವನ್ನು ಇರಿಯುವಂತಹ ತೀಕ್ಷ್ಣತೆ ಇತ್ತು. ಹಾಗೆಯೇ ಎದೆಯನ್ನೊಮ್ಮೆ ಗಟ್ಟಿಯಾಗಿ ಹಿಡಿದು ಕೊಂಡು ಕಡಲ ಕಿನಾರೆಯ ಮರಳಿನಲ್ಲಿ ದೊಪ್ಪನೇ ಬಿದ್ದೆ......
ಆಕೆಯ ನೆನಪಿನಿಂದ ಮನೆಗೆ ಬಂದಾಗ ಆಗಲೇ ಹತ್ತು ಗಂಟೆಯಾಗಿತ್ತು. ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪ್ಪ ಸತ್ತು ಹೋದಾಗಿನಿಂದ ಬದುಕು ಕಷ್ಟಕರವಾಗಿತ್ತು. ಎರಡು ತಿಂಗಳ ಹಿಂದೆ ಕಡಲಿನಲ್ಲಿ ಮೀನು ಹಿಡಿಯಲು ಬಹುದೂರ ಹೋಗಿದ್ದ ಅಪ್ಪ ಮರಳಿ ಬರಲೇ ಇಲ್ಲ. ಅಪ್ಪ ಚಲಿಸುತ್ತಿದ್ದ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿದ್ದರಿಂದ ಹಡಗು ಕಡಲಿನ ಮಧ್ಯೆ ನೀರಿನಲ್ಲಿ ಮುಳುಗಿ ಹೋಗಿತ್ತು. ಆ ದಿನ ಹಡಗಿನಲ್ಲಿ ಮೀನು ಹಿಡಿಯಲು ಹೋಗಿದ್ದ ಯಾವ ಹತ್ತು ಜನರ ಹೆಣವೂ ಸಿಕ್ಕಿರಲಿಲ್ಲ. ಅಪ್ಪ ಮರಳಿ ಬರಬಹುದು ಎಂಬ ಆಸೆಯಿಂದ ಕಾದ ನನಗೆ ಎರಡು ತಿಂಗಳು ಕಳೆದದ್ದು ಗೊತ್ತಾಗಲಿಲ್ಲ. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಬರಸಿಡಿಲು ಬಂದೆರಗಿತ್ತು. ಅಪ್ಪ ಹೊಸದಾದ ಹಡಗು ಕಟ್ಟಿಸಲು ಕೋ- ಅಪರೇಟಿವ್ ಬ್ಯಾಂಕ್ನಿಂದ ಐದು ಲಕ್ಷ್ಯ ಸಾಲ ಪಡೆದಿದ್ದರಂತೆ. ಸಾಲದ ಕಂತು ಆರು ತಿಂಗಳಿನಿಂದ ಸರಿಯಾಗಿ ಕಟ್ಟಿಲ್ಲ ಎಂಬ ಕಾರಣಕ್ಕೆ ಅಪ್ಪ ಕಾಣೆಯಾದ ಎರಡು ತಿಂಗಳಲ್ಲೇ ಬ್ಯಾಂಕಿನವರು ಇದ್ದ ಒಂದು ಮನೆಯನ್ನೂ ಹರಾಜು ಮಾಡಿದರು. ಅಪ್ಪ ಕಳೆದುಕೊಂಡ ದುಃಖ ಒಂದು ಕಡೆಯಾದರೆ. ಮನೆ ಹರಾಜು ಮಾಡಿದ ದುಃಖ ಇನ್ನೊಂದು ಕಡೆ ಇತ್ತು. ನನ್ನ ಎದುರು ಮನೆಯ ಪೂವಯ್ಯ ನನ್ನ ಕಷ್ಟ ನೋಡಲಾರದೆ ತನ್ನ ಎರಡನೇ ಅಂತಸ್ತಿನಲ್ಲಿರುವ ಚಿಕ್ಕ ಮನೆಯೊಂದನ್ನು ವಾಸಿಸಲು ನನಗೆ ನೀಡಿದ್ದರು. ಅಪ್ಪ ಇಲ್ಲದ್ದರಿಂದ ನನ್ನ ನಾಲ್ಕನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ಓದು ಸಹ ಅರ್ದಕ್ಕೆ ನಿಂತು ಹೋಗಿತ್ತು. ಈ ಆಘಾತದಿಂದ ಕಣ್ಣೀರು ಹಾಕುತ್ತಿದ್ದ ನನಗೆ ಈ ದಿನ ಬದುಕಿನಲ್ಲಿ ಮಿಂಚೊಂದು ಗೋಚರಿಸಿದ ಅನುಭವವಾಯಿತು....
ಮಾರನೆಯ ದಿನ ಬೆಳಗ್ಗೆ ಮತ್ತೆ ಕಡಲ ಕಿನಾರೆಯ ಮರಳಿನಲ್ಲಿ ಓಟ ಆರಂಭಿಸಿದೆ. ನನ್ನ ಕಣ್ಣುಗಳು ಮತ್ತೆ ಆ ಹುಡುಗಿಯನ್ನು ಹುಡುಕುತ್ತಿದ್ದವು. ಎಲ್ಲಿಯೂ ಕಾಣಲಿಲ್ಲ. ಕಡಲ ತೀರದಲ್ಲಿ ಹೂವಿನ ಅಂಗಡಿ ಅಂತ ಇದ್ದದ್ದು ಲಿಂಗಪ್ಪನದು ಮಾತ್ರ. ಅವನ ಮಗಳು ಕಮಲಿ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಬಂದ ನಮ್ಮಂತವರಿಗೆ ಗುಲಾಬಿ ಹೂಗಳನ್ನು ಮಾರುತ್ತಿದ್ದಳು. ಕಮಲಿಯನ್ನು ಬಿಟ್ಟು ಬೇರೆಯವರು ಈ ರೀತಿ ಹೂಗಳನ್ನು ಮಾರಿದವರು ನಾನು ಎಂದಿಗೂ ನೋಡೇ ಇರಲಿಲ್ಲ. ಮತ್ತೆ ಅವಳು ಸಿಗಬಹುದೇನೋ ಎಂದು ಎಲ್ಲಾ ಕಡೆ ದೃಷ್ಟಿ ಹಾಯಿಸಿದೆ. ಎಲ್ಲಿಯೂ ಕಾಣದಾದಳು. ಅಲ್ಲೇ ಇರುವ ಲಿಂಗಪ್ಪನ ಅಂಗಡಿಗೆ ಹೋದೆ. ಕಮಲಿಯೂ ಅಲ್ಲೇ ಇದ್ದಳು. 

"ಕಮಲಿ... ನಿನ್ನ ಬಿಟ್ಟು ಕಡಲ ತೀರದಲ್ಲಿ ಯಾರಾದರೂ ಗುಲಾಬಿ ಹೂ ಮಾರ್ತಾರ...?"
ಎಂದೆ..
ಆಕೆ ಇಲ್ಲವೆಂದು ತಲೆಯಾಡಿಸಿದಳು..
ನಾನು ನಂಬಲಿಲ್ಲ..
"ಇಲ್ಲ ಕಮಲಿ....ನಿನ್ನೆ ಹೊಸ ಹುಡುಗಿಯೊಬ್ಬಳು ಗುಲಾಬಿ ಮಾರಿದ್ದನ್ನು ನಾನೇ ನೋಡಿದ್ದೇನೆ"
"ಅಯ್ಯೋ.....ಅದಾ ನಿನ್ನೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ನಾಲ್ಕೈದು ಹುಡುಗಿಯರು ಪಿಕ್ನಿಕ್ ಗೆ ಅಂತ ಇಲ್ಲಿಗೆ ಬಂದಿದ್ದರು. ಅವರಲ್ಲಿ ಒಬ್ಬಳು ತನ್ನ ಗೆಳತಿಯರೊಡನೆ ಒಂದು ಗುಲಾಬಿಯನ್ನಾದರೂ ಇಲ್ಲಿ ಮಾರಾಟ ಮಾಡಿ ತೋರಿಸುತ್ತೇನೆಂದು ಬೆಟ್ಸ್ ಕಟ್ಟಿಕೊಂಡಿದ್ದಳು. ಅದರಂತೆ ಅವಳು ನನಗೆ ನೂರು ರೂಪಾಯಿಗಳನ್ನು ಕೊಟ್ಟು ನನ್ನ ಹೂ ಬುಟ್ಟಿಯನ್ನು ತೆಗೆದುಕೊಂಡು ಒಂದು ಗುಲಾಬಿಯನ್ನು ಮಾರಾಟಮಾಡಿ ತನ್ನ ಗೆಳತಿಯರಿಂದ ಸಾವಿರ ರೂಪಾಯಿಗಳನ್ನು ಗೆದ್ದು ಕೊಂಡಿದ್ದಳು"
ಕಮಲಿ ನಿನ್ನೆ ನಡೆದ ಎಲ್ಲಾ ವಿಷಯವನ್ನು ಹೇಳಿದಳು.
" ಬಾ ..ಪ್ರಕಾಶ...ಇಲ್ಲಿ ಕೂತ್ಕೊ, ನಿಮ್ಮಪ್ಪ ಕಾಣೆಯಾಗಿ ಇಲ್ಲಿಗೆ ಎರಡು ತಿಂಗಳಾಯಿತು. ನಿಮ್ಮ ಹೊಸ ಹಡಗಿಗೆ ಪೂಜೆಮಾಡಲು ಪ್ರತಿದಿನವೂ ನಾನೇ ಹೂಗಳನ್ನು ಕೊಡುತ್ತಿದ್ದೆ. ನಿಮ್ಮಪ್ಪ ಎಷ್ಟು ಒಳ್ಳೆಯವರು. ಶ್ರಮ ಜೀವಿ , ನೀನೂ ಏನಾರ ಕೆಲಸ ಮಾಡು, ಸುಮ್ನೆ ಕಾಲ ನೂಕಬೇಡ, ನನ್ನ ಮಗಳು ಕಮಲಿಯನ್ನೇ ನೋಡು, ಇನ್ನೂ ಒಂಬತ್ತನೇ ತರಗತಿ, ನಿನಗಿಂತ ಐದು ವರ್ಷ ಚಿಕ್ಕವಳು ದಿನ ಬೆಳಗ್ಗೆ ಒಂದೈವತ್ತು ಗುಲಾಬಿ ಹೂಗಳನ್ನು ಮಾರಿ, ಆಮೇಲೆ ಶಾಲೆಗೆ ಹೋಗ್ತಾಳೆ. ಇಲ್ದಿದ್ರೆ ನಮ್ ಜೀವನಾನೂ ಕಷ್ಟವೇ..."
ಲಿಂಗಪ್ಪ ಮುದ್ದಾಗಿದ ತನ್ನ ಮಗಳು ಕಮಲಿಯ ತಲೆಯನ್ನು ಸವರುತ್ತಾ ಹೇಳಿದನು.
ಲಿಂಗಪ್ಪನ ಮಾತು ಸರಿಯೆನಿಸಿತು. ನಾನು ಎರಡು ತಿಂಗಳಿನಿಂದಲೂ ಹಣಕ್ಕೆ ಪರದಾಡುತ್ತಿದ್ದೆ...
"ಲಿಂಗಣ್ಣ ಬೆಂಗಳೂರಿಗೆ ಹೋಗಬೇಕೆಂದು ಇದ್ದೇನೆ.. ಯಾರಾದ್ರೂ ಪರಿಚಯದವರಿದ್ರೆ ಹೇಳಿ ಕೆಲಸ ಕೊಡಿಸ್ತೀಯಾ..?"
ಲಿಂಗಣ್ಣ ಬೆಂಗಳೂರಿನಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡುವಂತೆ ನನ್ನ ಕೈಯಲ್ಲಿ ವಿಳಾಸವೊಂದನ್ನು ಕೊಟ್ಟರು. ಹೊಟಲ್ ವಿಳಾಸವು ಮೌಂಟ್ ಕಾರ್ಮಲ್ ಕಾಲೇಜಿನ ಎದುರುಗಡೆ ಎಂದು ಬರೆದಿದ್ದನ್ನು ನೋಡಿ ಖುಷಿಯಾದೆ. ಕಡಲ ಕಿನಾರೆಯಲ್ಲಿ ಸಿಕ್ಕ ಹುಡುಗಿಯನ್ನು ಮತ್ತೆ ನೋಡಬಹುದೆಂದು ಮನಸು ಹಾತೊರೆಯುತ್ತಿತ್ತು...
ಆ ಹುಡುಗಿಯನ್ನು ನೋಡಿದಂದಿನಿಂದ ನನ್ನಲ್ಲಿ ಸಾಕಷ್ಟು ಬದಲಾವಣೆಯುಂಟಾಗಿತ್ತು. ಆಕೆ ಸೌಂದರ್ಯವತಿ ಅವಳನ್ನು ಪಡೆಯಬೇಕು ಎನ್ನುವ ಸ್ವಾರ್ಥಕ್ಕಿಂತ. ಅವಳಿರವಂತೆ ನಾನು ಸಹ ಆತ್ಮ ವಿಶ್ವಾಸದಿಂದಿರಬೇಕು. ಜೀವನದಲ್ಲಿ ಸಂತೋಷದಿಂದ ಇರಬೇಕು ಎನ್ನುವ ಹುಮ್ಮಸ್ಸು ಬಂದಿತ್ತು. ಒಣಗಿ ಹೋಗುತ್ತಿರುವ ಗಿಡಕ್ಕೆ ಸೋನೆ ಮಳೆಯು ಬಿದ್ದಾಗ ಹೇಗೆ ಮತ್ತೆ ಹಸಿರು ಚಿಗುರೊಡೆಯುತ್ತದೆಯೋ ಹಾಗೆಯೇ ಅವಳ ನಡೆಯನ್ನು ಕಂಡಾಗ ನನ್ನ ಮನಸಿನಲ್ಲಿ ಹೊಸ ಹೊಸ ಆಸೆಗಳು ಮೂಡಲಾರಂಭಿಸಿದವು. ಸೂರ್ಯಕಾಂತಿಯ ಹೂವು ಸೂರ್ಯನತ್ತ ಆಕರ್ಷಣೆಗೊಂಡಂತೆ,.. ಹುಣ್ಣಿಮೆಯ ಚಂದ್ರನನ್ನು ಕಂಡಾಗ ಅಲೆಗಳು ಮೇಲೇಳುವಂತೆ,... ಕೋಗಿಲೆಯು ಮಾಮರದಲ್ಲಿ ಇಂಪಾಗಿ ಹಾಡಿದಂತೆ,... ದುಂಬಿಗಳು ಹೂಗಳನ್ನು ಬಯಸಿದಂತೆ,... ಸೂರ್ಯನ ಸುತ್ತ ಭೂಮಿ ತಿರುಗಿದಂತೆ,... ಎಲ್ಲವಕ್ಕೂ ಯಾವುದೋ ಅಗೋಚರ ಶಕ್ತಿಯೊಂದು ಸೆಳೆದಿರುತ್ತವೆ. ನನ್ನಲ್ಲಿಯೂ ಸಹ ಯಾವುದೋ ಒಂದು ಸೆಳೆತ ಮೋಡಿಯನ್ನುಂಟು ಮಾಡಿತ್ತು.... ಹಬ್ಬಲು ಬಯಸಿದ ಬಳ್ಳಿಯು ತನಗೆ ಆಸರೆಯಾಗುತ್ತಿರುವ ಮರ ಯಾವುದೆಂದು ನೋಡುತ್ತದೆಯೆ...? ಹಾಗೆಯೇ ನನಗೆ ಅವಳು ಯಾರಾದರೇನು..? ಬದುಕಿನಲ್ಲಿ ಹುಮ್ಮಸ್ಸು ತುಂಬಿದ ವಿಷಯ ಯಾವುದಾದರೇನು..? ಮರಳುಗಾಡಿನಂತೆ ಬತ್ತಿ ಹೋದ ನನ್ನ ಬದುಕಿಗೆ ಆ ಹುಡುಗಿಯ ನೋಟವೇ ನನ್ನಲ್ಲಿ ಬದುಕಿನ ಬಗ್ಗೆ ಮತ್ತೆ ಆಸೆ ಚಿಗುರಿಸಿತ್ತೇ...? ಗೊತ್ತಿಲ್ಲ....!! ಆದರೆ ಯಾಕೆ ಹೀಗಾಯಿತು...? ಇದೆಲ್ಲಾ ಹೇಗೆ ..? ಇದು ಸಾದ್ಯವೇ...? ಎಂಬ ಪ್ರಶ್ನೆಗಳು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ...ನಾನಿದ್ದ ಪರಿಸ್ಥಿತಿಗೆ ಯಾವುದೋ ಒಂದು ಸೆಳೆತ ನನ್ನನ್ನು ಜಾಗೃತ ಗೊಳಿಸಿರಬೇಕು ಅಷ್ಟೆ.....

ಮಾರನೇ ದಿನವೇ ಲಿಂಗಣ್ಣ ಕೊಟ್ಟ ವಿಳಾಸ ಹಿಡಿದು ಬೆಂಗಳೂರಿಗೆ ಹೊರಟೆ. ಮೌಂಟ್ ಕಾರ್ಮೆಲ್ ಕಾಲೇಜಿನ ಎದುರುಗಡೆ ಸ್ವಲ್ಪ ದೂರದಲ್ಲಿರುವ ಹೋಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಾನು ಬಯಸಿದ್ದರೆ ಮತ್ತೆ ಆ ಹುಡುಗಿಯನ್ನು ನೋಡುವ ಪ್ರಯತ್ನ ಮಾಡಬಹುದಿತ್ತು. ಆದರೆ ನಾನು ಕಾಲೇಜಿನ ಕಡೆಗೆ ಮುಖ ಎತ್ತಿಯೂ ನೋಡಲಿಲ್ಲ. ಅವಳೊಡನೆ ಪ್ರೀತಿ, ಪ್ರೇಮ ಅಂತ ಹಿಂದೆ ಸುತ್ತುವ ಮನಸ್ಥಿತಿಯೂ ನನಗಿರಲಿಲ್ಲ. ಹಾಗೇನಾದರೂ ಮಾಡಿದ್ದರೆ ಹೊಟೆಲ್ ಕೆಲಸ ಮಾಡುವ ನನ್ನಂತವನಿಗೆ ಅವಮಾನ ಕಟ್ಟಿಟ್ಟ ಬುತ್ತಿ. ತಂದೆ ತಾಯಿಯನ್ನು ಕಳೆದುಕೊಂಡು ಬದುಕನ್ನು ಕಟ್ಟಲು ಹೋರಾಡಬೇಕಿದ್ದ ನಾನು ಹುಡುಗಿಯ ಹಿಂದೆ ಬಿದ್ದು ಪ್ರೀ ಪ್ರೇಮ ಅಂತ ಸುತ್ತುವುದಾದರೂ ಹೇಗೆ..? ಕಾಣದ ಬದುಕಿಗೆ ಆಸೆ ಪಡುವುದಕ್ಕಿಂತ, ನೋಡಿದ ಬದುಕನ್ನು ಕಲ್ಪಿಸಿಕೊಳ್ಳುವುದು ಸುಖವೆಂದುಕೊಂಡೆ. ಬದುಕಿನಲ್ಲಿ ಸಾಧಿಸುವುದು ಬೇಕಾದಷ್ಟಿತ್ತು. ಬಾಲ್ಯದಲ್ಲಿ ಅಪ್ಪನೊಂದಿಗೆ ಮೀನು ಹಿಡಿಯಲು ಹೋಗುತ್ತಿದ್ದ ನನಗೆ ಕಡಲು ಸಾಕಷ್ಟು ಪಾಠವನ್ನು ಕಲಿಸಿತ್ತು. ಜೀವ ಬಿಗಿ ಹಿಡಿದು ಬಿರುಗಾಳಿಗೆ ಎದೆಯೊಡ್ಡಿ ಕಡಲ ಒಡಲನ್ನು  ಪ್ರವೇಶಿಸಿ, ಮೀನು ಹಿಡಿದು ಬದುಕನ್ನು ಸಾಗಿಸುವ ಕಷ್ಟವನ್ನು ಅಪ್ಪ ನನಗೆ ಬಾಲ್ಯದಲ್ಲೀಯೇ ಪರಿಚಯಿಸಿದ್ದರು.....
ನಾನು ನನ್ನ ಇಂಜಿನಿಯರಿಂಗ್ ಓದನ್ನು ಮತ್ತೆ ಬೆಂಗಳೂರಿಗೆ ವರ್ಗಾಯಿಸಿಕೊಂಡೆ. ಹೋಟೆಲ್ ಕೆಲಸ ಮಾಡುತ್ತಲೇ ನನ್ನ ಓದನ್ನು ಪೂರ್ಣ ಗೊಳಿಸಿಕೊಂಡೆ. ಎರಡು ವರ್ಷಗಳ ನಂತರ ಒಳ್ಳೆ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಈಗ ನನಗೆ ಆರಂಕಿಯ ಸಂಬಳ. ಅಂದು ಕಳೆದುಕೊಂಡಕ್ಕಿಂತ ಇಂದು ಹೆಚ್ಚಾಗಿಯೇ ಗಳಿಸಿದ್ದೇನೆ.
ಬಸ್ಸಿನಲ್ಲಿ ಕೂತು ನಮ್ಮೂರಿಗೆ ಹೊರಟಿದ್ದೆ. ನಮ್ಮೂರಿನ ಕಡಲಿನ ವಾಸನೆ... ಭೋರ್ಗರೆತದ ಸದ್ದು ಇಂದ್ರಿಯಗಳಿಗೆ ತಲುಪಿದ ಕೂಡಲೇ ನಿದ್ದೆಯಿಂದ ಎಚ್ಚೆತ್ತುಕೊಂಡೆ. ಐದು ವರ್ಷದ ನಂತರ ನಮ್ಮೂರನ್ನು ನೋಡಿದ ಕೂಡಲೇ ಏನೋ ತೃಪ್ತಿಯ ಭಾವ ಮುಖದಲ್ಲಿ ಮೂಡಿತು. ನಮ್ಮ ಮನೆಯನ್ನು ಅಂದು ಹರಾಜಿನಲ್ಲಿ ಕೊಂಡವರು ಇಂದು ಮಾರಲು ಹೊರಟಿದ್ದರು. ಈ ವಿಷಯವನ್ನು ಪೂವಯ್ಯನವರು ಪತ್ರ ಬರೆದು ತಿಳಿಸಿದ್ದರು. ಹದಿನೈದು ಲಕ್ಷ ರೂಪಾಯಿಗಳಿಗೆ ನಮ್ಮ ಮನೆಯನ್ನು ಮತ್ತೆ ಕೊಂಡುಕೊಂಡೆ. ಒಂದು ವಾರ ರಜೆಯ ಯೋಜನೆ ಹಾಕಿಕೊಂಡು ಊರಲ್ಲೇ ಆರಾಮಾಗಿ ಇರೋಣವೆಂದು ಬಂದಿದ್ದೆ. ಮನೆ ಕೊಂಡುಕೊಳ್ಳುವ ಕಛೇರಿ ಕೆಲಸದ ಭರಾಟೆಯಲ್ಲಿ ಸಮುದ್ರ ತೀರದ ಕಡೆಗೆ ಹೋಗಿರಲಿಲ್ಲ. ಐದನೆಯ ದಿನ ಮುಂಜಾನೆ ಜಾಗಿಂಗ್ ಸೂಟು ಹಾಕಿಕೊಂಡು ಸಮುದ್ರ ತೀರದ ಕಡೆಗೆ ಹೊರಟೆ.
ಸೂರ್ಯ ಆಗ ತಾನೆ ಕಡಲ ಅಲೆಗಳ ಮೇಲೆ ಹೊಂಗಿರಣವನ್ನು ಹರಡಿದ್ದನು. ಕಡಲ ಅಲೆಗಳು ಶಾಂತ ಸ್ವರೂಪವನ್ನು ಪಡೆದಿದ್ದವು. ಕೇವಲ ಅರ್ದ ಕಿಲೋಮೀಟರ್ ಓಡಿ ಬಂದ ನನಗೆ ಆಗಲೇ ಆಯಾಸವಾಗಿ ಹೋಗಿತ್ತು. ವಿಶ್ರಾಂತಿಗಾಗಿ ಅಲ್ಲೇ ಮರಳ ಮೇಲೆ ಬಿದ್ದು ಕೊಂಡೆ.
" ರೀ... ಹೂವು ಬೇಕಾ...? ಯಾವ ಕಲರ್ ಹೂವನ್ನು ತೆಗೆದುಕೊಳ್ಳಿ ಬರೀ ಹತ್ತು ರೂಪಾಯಿಗಳು ಮಾತ್ರ"
ಹಿಂದಿನಿಂದ ಬಂದ ಹುಡುಗಿಯೊಬ್ಬಳು ತನ್ನ ಗುಲಾಬಿ ಹೂವಿನ ಬುಟ್ಟಿಯನ್ನು ನನ್ನ ಮುಂದೆ ಚಾಚಿ ಹೇಳಿದಳು. ತಕ್ಷಣ ಅವಳನ್ನು ನೋಡಿದೆ. ಕೆಂಪು ಬಣ್ಣದ ಲಂಗ, ಬಿಳಿಯ ಶುಭ್ರವಾದ ರವಿಕೆ. ತಲೆಗೆ ಹಳದಿ ಬಣ್ಣದ ಬಟ್ಟೆಯನ್ನು ಪೇಟದಂತೆ ಕಟ್ಟಿದ್ದಳು. ಅದೇ ಸೌಂದರ್ಯ, ಅದೇ ರೂಪ, ಮತ್ತೆ ಅಂದು ಸಿಕ್ಕ ಹುಡುಗಿಯೇನಾದರೂ ಬಂದಿರಬಹುದೇ...? ಎಂದು ಯೋಚಿಸುತ್ತಿರುವಾಗಲೇ..
"ರೀ... ಒಂದನ್ನಾದರೂ ತಗೋಳಿ ಎಂದು, ತಿಳಿ ಹಳದಿ ಬಣ್ಣದ ಹೂವೊಂದನ್ನು ತೆಗೆದು ಕೊಟ್ಟಳು"
ನಾನು ಹೂವೊಂದನ್ನು ಪಡೆದು, ಮತ್ತೆ ಅವಳ ಕೈಗೆ ನೀಡಿ
" ಇದು ನಿನ್ನಿಂದ... ನಿನಗಾಗಿಯೇ... ಈ ಹೂವನ್ನು ಕೊಂಡದ್ದು, ನಿನ್ನ ಸೌಂದರ್ಯಕ್ಕೆ ನನ್ನದೊಂದು ಹೂ ಕಾಣಿಕೆ"
ಎಂದು ಆಕೆಯ ಕೈಗೆ ಕೊಟ್ಟೆ... ಹೂವನ್ನು ಪಡೆದ ಅವಳು ತನ್ನ ನಗುವನ್ನು ತೋರಿಸಿ ಓಡಿ ಹೋದಳು.
" ಹಲೋ.... ಏಯ್ ...ನಿನ್ನ ಹೆಸರೇನು..?"
ಎಂದು ಕೂಗಿಕೊಂಡೆ.
ಸ್ವಲ್ಪ ದೂರ ಹೋದ ಅವಳು ತಿರುಗಿ ನೋಡಿ.
" ಕಮಲೀೕೕ...."
ಎಂದು ಹೇಳಿ ನಾಚುತ್ತಾ ಓಡಿ ಹೋದಳು.
ಈ ಸಲ ಬಿಡಬಾರದೆಂದು ಅವಳ ಹಿಂದೆಯೇ ಓಡಿದೆ. ಅವಳು ಲಿಂಗಣ್ಣನ ಅಂಗಡಿಯ ಮುಂದೆ ನಿಂತಳು.
ನಾನು ಎದರುಸಿರು ಬಿಡುತ್ತಾ
"ನನ್ನ ಮದುವೆ ಆಗ್ತೀಯಾ ಎಂದೆ"
ಅವಳು ಉತ್ತರಿಸಲಿಲ್ಲ. ಅವಳ ಕಣ್ಣುಗಳು ನೆಲವನ್ನು ನೋಡುತ್ತಿದ್ದವು. ಮುಂಜಾನೆಯ ಮಂಜನ್ನೇ ಹಿನ್ನಲೆಯಾಗಿಸಿಕೊಂಡು ನಿಂತ ಅವಳು ರೂಪದಲ್ಲಿ ಯಾವ ಅಪ್ಸರೆಗಿತಲೂ ಕಡಿಮೆಯಿರಲಿಲ್ಲ..
ಲಿಂಗಣ್ಣ ಅಂಗಡಿಯಿಂದ ಹೊರಬಂದು
"ನಿನ್ನ ಉಪಕಾರ ಮರೆಯೊಲ್ಲಪ್ಪಾ... ನನ್ನ ಮಗಳು ಕಮಲಿಯನ್ನು ಒಪ್ಪಿರುವೆ. ನಿನ್ನಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ"
ಎಂದು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡರು. ನಾನು ಸಹ ಲಿಂಗಪ್ಪ ಮಾಡಿದ ಸಹಾಯ ಮರೆತಿರಲಿಲ್ಲ. ಅಂದು ಯಾರೋ ಅಂದು ಸಿಕ್ಕ ಹುಡುಗಿಗಿಂತ, ನನಗೆ ಬದುಕಲು ಸರಿ ದಾರಿ ತೋರಿದ ಲಿಂಗಪ್ಪನ ಕುಟುಂಬ ಇಂದು ಆಪ್ತವಾಗಿ ಕಂಡಿತು. ಕಮಲಿ ಹೂವನ್ನು ಮಾರಿಕೊಂಡೇ ಓದಿದವಳು. ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದುದು ಕಮಲಿಯ ಚಿಕ್ಕಪ್ಪನವರದೇ ಆಗಿತ್ತು. ಕಮಲಿ ತನ್ನ ಚಿಕ್ಕಪ್ಪನಿಗೆ ಪತ್ರ ಬರೆಯುವಾಗ ಪ್ರತಿಸಾರಿಯೂ ನನ್ನ ಬಗ್ಗೆ ಒಂದೆರಡು ಸಾಲುಗಳನ್ನು ಬರೆದು ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಈಗ ಕಮಲಿ ದಂತದ ಗೊಂಬೆಯಂತಾಗಿದ್ದಳು. ಮತ್ತೊಮ್ಮೆ ಕಮಲಿಯನ್ನು ನೋಡಿದೆ. ಹಳದಿ ಬಣ್ಣದ ಪೇಟದಿಂದ ಇಳಿ ಬಿದ್ದ ಆಕೆಯ ಕಪ್ಪನೆ ಕೂದಲುಗಳು ತಂಗಾಳಿಯಲ್ಲಿ ಅಲೆಯಂತೆ ಹಾರಾಡುತ್ತಿದ್ದವು........
                                 
- ಪ್ರಕಾಶ್ ಎನ್ ಜಿಂಗಾಡೆ

Friday, 5 February 2016

ಕನ್ನಡ ಪಾಠ

ಕನ್ನಡ ಪಾಠ (ಸಣ್ಣ ಕತೆ)

ಬಿಡುವಿನ ವೇಳೆ ನಾನು, ರಾಕೇಶ್ ಮತ್ತು ಗೌರಿಶಂಕರ್ ಸ್ಟ್ಯಾಫ್ ರೂಮಲ್ಲಿ ಕುಳಿತು ಆಗಾಗ ತಮಾಷೆ ಮಾಡಿಕೊಂಡು ನಗುತ್ತಿದ್ದೆವು.ರಾಕೇಶ್ ಕನ್ನಡ ಕಲಿಯುವ ಇಂಗಿತ ವ್ಯಕ್ತಪಡಿಸಿದ..
ಆತ ಬಿಹಾರ್ ನವನು. ಬೆಂಗಳೂರಿಗೆ ಬಂದು ಎರಡು ವರ್ಷ ಮಾತ್ರ ಆಗಿತ್ತು. ಈತ ನಮ್ಮ ಶಾಲೆಯ ಹಿಂದಿ ಪಂಡಿತ.
"ಇಬ್ಬರು ಕನ್ನಡ ಟೀಚರ್ ನನ್ನ ಜೊತೆಯಲ್ಲಿದ್ದೀರಿ...ಜೊತೆಯಲ್ಲೇ ಕೂರುತ್ತೇವೆ ಸ್ವಲ್ಪ ಕನ್ನಡವಾದರೂ ಕಲಿಸುತ್ತೀರಾ....?
ಎಂದು ನನ್ನ ಮತ್ತು ಗೌರಿಶಂಕರ್ ಕಡೆ ತಿರುಗಿ ಹೇಳಿದ.ಆತನ ಉತ್ಸಾಹ ನೋಡಿ ನಾವು ಕನ್ನಡ ಕಲಿಸಲು ಒಪ್ಪಿಕೊಂಡೆವು. ಬಿಹಾರದವನು ಕನ್ನಡ ಕಲಿಯುತ್ತೇನೆ ಎಂದಾಗ ನಮಗೂ ಖುಷಿಯಾಯಿತು.ಅಂದಿನಿಂದ ಪ್ರತಿದಿನ ಐದದು ಕನ್ನಡ ಪದಗಳನ್ನು ಇಂಗ್ಲಿಷಿನಲ್ಲಿ ಬರೆದುಕೊಂಡು ಕಲಿಯತೊಡಗಿದ...
ಎಷ್ಟೇ ಪ್ರಯತ್ನಿಸಿದರೂ ಕನ್ನಡ ನಾಲಿಗೆಗೆ ಬರುತ್ತಿರಲಿಲ್ಲ. ತನ್ನ ಈ ಕಷ್ಟವನ್ನು ಒಂದು ದಿನ ನಮ್ಮ ಶಾಲೆಯ ಬಸ್ ಕಂಡಕ್ಟರ್ ಬಳಿ ಹೇಳಿಕೊಂಡ. ಆತ
" ಮೊದಲು ಕನ್ನಡದ ಕೆಟ್ಟ ಕೆಟ್ಟ ಪದಗಳನ್ನು ಕಲಿಯಿರಿ. ಉಳಿದ ಪದಗಳು ತಾನಾಗಿಯೇ ಬರುತ್ತವೆ"
ಎಂಬ ತರ್ಲೆ ಐಡಿಯಾವನ್ನು ರಾಕೇಶನ ಕಿವಿಯಲ್ಲಿ ತುಂಬಿದ. ಬಸ್ ಕಂಡಕ್ಟರ್ ನ ಸಲಹೆ ರಾಕೇಶನಿಗೆ ಬಹಳ ಹಿಡಿಸಿತು.ಅಂದಿನಿಂದ ಅವನ ಚಿತ್ತ ಕೆಟ್ಟ ಪದಗಳ ಕಡೆಗೆ ನೆಟ್ಟಿತ್ತು. ಶಾಲೆಯ ಹೊರಗೆ. ಬೀದಿಯಲ್ಲಿ, ಸಂತೆಯಲ್ಲಿ, ಪೋಕರಿ ಹುಡುಗರ ಜಗಳ, ಹೀಗೆ ಹಲವು ಕಡೆಯಲ್ಲಿ ಕೇಳಿದ ಹೊಸ ಪದಗಳನ್ನು ನೆನಪಿಟ್ಟುಕೊಂಡು ನಮ್ಮಿಂದ ಅರ್ಥ ತಿಳಿದುಕೊಳ್ಳುತ್ತಿದ್ದ.
"ಬೇಡ ಈ ರೀತಿ ಕಲಿಯುವುದು ಬೇಡ, ಕಲಿತರೆ ಸರಿಯಾಗಿ ಕಲಿ. ಇಂತಹ ಪದಗಳಿಗೆ ಅರ್ಥ ಹೇಳುವುದು ನಮಗೂ ಮುಜುಗರವಾಗುತ್ತೆ"
ಎಂದು ಹೇಳಿ ನಾನು ಕನ್ನಡ ಕಲಿಸುವುದನ್ನು ನಿಲ್ಲಿಸಿಬಿಟ್ಟೆ. ಆದರೆ ಅವನು ಮಾತ್ರ ಬಿಡಲಿಲ್ಲ.
ಅವನು ವಾಸವಾಗಿದ್ದ ಮನೆಯ ಎರಡನೇ ಅಂತಸ್ತಿನಲ್ಲಿ ಗಂಡ ಹೆಂಡತಿಯರಿಬ್ಬರು ವಾಸವಾಗಿದ್ದರು.ಅವರು ಏನೇ ಮಾತನಾಡಿದರೂ ರಾಕೇಶನ ಮನೆಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆಗಾಗ ಆ ದಂಪತಿಗಳ ಜಗಳ ನಡೆಯುತ್ತಲೇ ಇತ್ತು. ಒಂದು ದಿನ ಆ ಜಗಳ ಭಯಾನಕ ರೂಪ ಪಡೆದುಕೊಂಡಿತ್ತು. ರಾತ್ರಿಯಲ್ಲೆಲ್ಲಾ ಅವರದು ರುದ್ರತಾಂಡವ.ಬೈಗುಳಗಳ ಸರಮಾಲೆಯೇ ಹರಿಯುತು.ಆದರೆ ಈ ಮಹಾಶಯ ಗೋಡೆಗೆ ಕಿವಿಯಿಟ್ಟು ಕೆಲವು ಕನ್ನಡ ಪದಗಳನ್ನು ತನ್ನ ಮೆದುಳಿನಲ್ಲಿ ಸಂಗ್ರಹಿಸಿಕೊಂಡ. ಆ ದಿನ ರಾಕೇಶನ ಶಬ್ಧಕೋಶದಲ್ಲಿ ಹೊಸ ಹೊಸ ಪದಗಳು ಸೇರಿಕೊಂಡಿದ್ದವು.
ಮಾರನೇ ದಿನ ಶಾಲೆಗೆ ಬಂದಾಗ ರಾಕೇಶ್ ಮನೆಯಲ್ಲಿ ನಡೆದ ಗಂಡ ಹೆಂಡತಿಯರ ಜಗಳದ ವಿಷಯವನ್ನು ಚರ್ಚಿಸಿದನು.
" ಇಲ್ಲಿಯ ಜನರಲ್ಲಿ ಅದೇನು ಸಂಸ್ಕೃತಿ.....? ಅದೇನು ಗೌರವ......? ಜಗಳದಲ್ಲೂ ಹೆಂಡತಿಯು ಗಂಡನಿಗೆ ಅದೆಷ್ಟು ಗೌರವ ಕೊಡುತ್ತಾಳೆ..."
ಎಂದನು
ಆತನ ಮಾತು ನನಗೆ ನಂಬಲಾಗಲಿಲ್ಲ
"ಏನು...???!!!! ..ಜಗಳದಲ್ಲೂ ಗಂಡನಿಗೆ ಮರ್ಯಾದೆಯೇ...?"
ಎಂದು ಕೇಳಿದೆ.
"ಹೌದು...ಗಂಡ ಹೆಂಡತಿಗೆ ಭಯಂಕರವಾಗಿ ಬಯ್ಯುತ್ತಿದ್ದರೂ...ಹೆಂಡತಿ ಮಾತ್ರ ಗಂಡನಿಗೆ ನೀನು ನಾರದ ಮುನಿ, ನಾರದ ಮುನಿ, ಎಂದು ಅಷ್ಟು ಮಾತ್ರ ಬಯ್ಯುತ್ತಿದ್ದಳು...ಯಾರಿಗೋ ನಾರದಮುನಿಯಂತೆ ಫಿಟ್ಟಿಂಗ್ ಇಟ್ಟಿರಬೇಕು.ಅದಕ್ಕೆ ಈ ಜಗಳ ನಡೆಯುತ್ತಿತ್ತು...ನಮ್ಮ ಬಿಹಾರದಲ್ಲಾಗಿದ್ದರೆ ಹಂಡತಿಯರ ಬಾಯಲ್ಲಿ ಒಳ್ಳೆ ಮಾತುಗಳು ಬರುತ್ತಿರಲಿಲ್ಲ..? ಇಲ್ಲಿಯವರು ಗಂಡ ತಪ್ಪು ಮಾಡಿದರೂ ಗಂಡನನ್ನು ಗೌರವದಿಂದಲೇ ಕಾಣುತ್ತಾರೆ. ಆ ಹೆಂಗಸು ಅಷ್ಟು ಕೆಟ್ಟ ಪದಗಳನ್ನು ಗಂಡನ ಮೇಲೆ ಉಪಯೋಗಿಸಲಿಲ್ಲ...ಜಗಳದಲ್ಲೂ ಗಂಡನಿಗೆ ಕೊಡಬೇಕಾದ ಗೌರವ ಕೊಡುತ್ತಿದ್ದಳು....!!
ಎಂದು ಹೇಳಿ ಸುಮ್ಮನಾದ
ರಾಕೇಶನ ಮಾತು ನನಗೆ ಆಶ್ಚರ್ಯ ತರಿಸಿತು.
"ಕನ್ನಡದಲ್ಲಿ ನಾರದಮುನಿ, ನಾರದಮುನಿ ಅಂತ ಯಾರೂ ಬೈಯ್ದಿದ್ದು ಇದುವರೆಗೂ ನಾನು ಕೇಳಿಲ್ಲ. ಹಾಗೆ ಯಾರೂ ಬೈಯ್ಯಲ್ಲ....ಅದೂ ಜಗಳದ ವಿಷಯದಲ್ಲಿ ಈ ಪದ ಉಪಯೋಗಿಸುವುದು ಕಡಿಮೆಯೇ ...!!! ಅವಳು ಬಳಸಿದ ಆ ಪದವನ್ನು ಸರಿಯಾಗಿ ನೆನಪಿಸಿಕೊಂಡು ಹೇಳು..."
ಎಂದೆ
ಅದಕ್ಕೆ ಆತ " ನನಗೆ ಸರಿಯಾಗಿ ನೆನಪಿದೆ ಹೆಂಡತಿ ಪ್ರತಿ ಸಾರಿ ಗಂಡನಿಗೆ ದೇವರ್ಷಿ.. ದೇವರ್ಷಿ ಎಂದು ನಾರದಮುನಿಗೆ ಹೊಲಿಸುತ್ತಿದ್ದಳು ಆಕೆಯ ಈ ಮಾತು ಈಗಲೂ ನನ್ನ ಕಿವಿಯಲ್ಲಿ ಗುಂಯ್ಯ್ ಗುಟ್ಟುತ್ತಿದೆ " ಎಂದನು.
ನನಗೆ ಮತ್ತು ಗೌರಿಶಂಕರಗೆ ನಗು ತಡೆಯಲಾಗಲಿಲ್ಲ.
"ಅಯ್ಯೋ ಮಾರಾಯ....ಅದು ದೇವರ್ಷಿಯಲ್ಲ ಬೇವರ್ಸಿ ಅಂತ "
ಎಂದು ಹೇಳಿ ಅದರ ಅರ್ಥ ವಿವರಿಸಿದಾಗ ರಾಕೇಶನು ತನ್ನ ಕಣ್ಣು ಗುಡ್ಡೆಗಳನ್ನು ದಡ್ಡದಾಗಿಸಿಕೊಂಡು ಕಕ್ಕಾಬಿಕ್ಕಿಯಾಗಿ ಅತ್ತಿತ್ತ ನೋಡಿ ತಲೆತಿರುಗಿ ಬೀಳುವ ಹಂತಕ್ಕೆ ತಲುಪಿದ್ದ.......
ಯಾವುದೇ ಕಾರ್ಯ ಒಳ್ಳೆಯತನದಿಂದಲೇ ಪ್ರಾರಂಭಿಸಬೇಕು. ಅದರಲ್ಲೂ ಕಲಿಕೆಯಂತಹ ವಿಷಯ ಉತ್ತಮ ಅಂಶಗಳಿಂದ ಪ್ರೇರಣೆಗೊಳ್ಳಬೇಕು. ಆಗ ಮಾತ್ರ ಸರಸ್ವತಿ ಒಲಿಯುತ್ತಾಳೆ.
                                               
               - ಪ್ರಕಾಶ್ ಎನ್ ಜಿಂಗಾಡೆ

ಈಜು

ಈಜು .. 

ಬಾಲ್ಯದ ಹುರುಪು ಮತ್ತು ಉತ್ಸಾಹಗಳು ಬಾಲ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಆ ಉತ್ಸಾಹ ಜೀವನಪೂರ್ತಿ ಇರುತ್ತದೆ ಎಂದುಕೊಂಡು ನಡೆಯುವುದು ತಪ್ಪು.
ಒಂದು ಸಲ ನನಗೆ ಇಂತಹ ಅನುಭವವಾಯಿತು.ನಾನು ಬೆಳೆದಿದ್ದು ಹಳ್ಳಿಯ ಪರಿಸರದಲ್ಲಿ. ಬಾಲ್ಯದಲ್ಲಿ ನಾನು ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೆ . ರಜೆ ಬಂತೆಂದರೆ ಸಾಕು ಗೆಳೆಯರೊಡನೆ ಆಟಕ್ಕೆ ಹೋಗುತ್ತಿದ್ದೆ. ಗೋಲಿ, ಚಿನ್ನಿದಾಂಡು, ಮರಕೋತಿ ದಿನ ನಿತ್ಯದ ಆಟಗಳಾಗಿದ್ದವು. ನಮ್ಮೂರಿನಲ್ಲಿ ಭದ್ರಾ ನಾಲೆಯೊಂದಿದೆ. ಆಟವಾಡಿ ಆಯಾಸವಾದರೆ ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಗೆಳೆಯರೊಂದಿಗೆ ಸೇರಿ ಈಜಲು ಹೋಗುತ್ತಿದ್ದೆವು. ಗುಡ್ಡವನ್ನು ಕೊರೆದು ನಾಲೆ ನಿರ್ಮಿಸಿದ್ದರಿಂದ ನಾವೆಲ್ಲಾ ಬಂಡೆಯ ಮೇಲಿಂದ ನಾಲೆಗೆ ಜಿಗಿದು ಹರಿಯುವ ನಿರಿನೊಡನೆ ತೇಲಿಕೊಂಡು ಒಂದರ್ದ ಕಿಲೋಮೀಟರ್ ಈಜಿ ಮತ್ತೆ ಅದೇ ಸ್ಥಾನಕ್ಕೆ ಬರುತ್ತಿದ್ದೆವು. ಹೀಗೆ ಪ್ರತಿ ದಿನವೂ ಈಜು ನಮಗೆಲ್ಲಾ ಅಭ್ಯಾಸವಾಗಿ ಹೋಗಿತ್ತು. ಈಜಿನ ವಿಷಯ ಬಂದರೆ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಈಜು ಕಲಿಯುವವರ ಮುಂದೆ ನನ್ನನ್ನು ನಾನು ಹೊಗಳಿಕೊಳ್ಳುತ್ತಿದ್ದೆ. ಈಗ ಅದೆಲ್ಲಾ ನೆನಪು...

ನಾನು ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ.ಆ ಶಾಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ವೊಂದು ಇತ್ತು. ನನ್ನ ಸಹಪಾಠಿ ಹಿಂದಿ ಶಿಕ್ಷಕ ರಾಕೇಶ್ ಎಂಬುವನು ಬಿಹಾರದವನು. ನನ್ನಂತೆ ಅವನು ಸಹ ಗಾಂಗಾ ನದಿಯಲ್ಲಿ ಈಜಿಕೊಂಡೇ ಬಾಲ್ಯ ಕಳೆದವನು. ಗೌರಿಶಂಕರ್ ಎಂಬ ಕನ್ನಡ ಶಿಕ್ಷಕರು ಕನಕಪುರದವರು. ಕಾವೇರಿ ನದಿಯಲ್ಲಿ ಈಜಿ ಅಭ್ಯಾಸ ಮಾಡಿಕೊಂಡವರು. ಇಂತವರು ಶಾಲೆಯಲ್ಲಿ ಗೆಳೆಯರಾಗಿ ಸಿಕ್ಕಿದ್ದರಿಂದ ನನ್ನ ಈಜಿಗೆ ಮರು ಜೀವ ಬಂದಂತಾಗಿತ್ತು. ಮೂವರು ಮಾತನಾಡಿಕೊಂಡು ಪ್ರಿನ್ಸಿಪಲ್ ಕಣ್ಣು ತಪ್ಪಿಸಿ ಪಿರಿಯಡ್ ಇಲ್ಲದ ಶನಿವಾರದಂದು ಸ್ವಿಮ್ಮಿಂಗ್ ಫೂಲ್ ಗೆ ಹೋಗುತ್ತಿದ್ದೆವು. ನದಿಯಲ್ಲಿ ಈಜಿದವರಿಗೆ ಈ ಸ್ವಿಮ್ಮಿಂಗ್ ಪೂಲ್ ಅಷ್ಟೊಂದು ತೃಪ್ತಿ ಕೊಡುತ್ತಿರಲಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಕೈಕಾಲಾಡಿಸಿಕೊಂಡು ಬರುತ್ತಿದ್ದೆವು. ನದಿಯ ಈಜು ಮತ್ತೆ ಯಾವಾಗ ಸಿಗುವುದೋ ಎಂದು ಆಗಾಗ ಅತೃಪ್ತಿ ತೋರ್ಪಡಿಸಿ ಕೊಳ್ಳುತ್ತಿದ್ದೆವು.
ಹೀಗಿರುವಾಗ ಒಂದು ದಿನ ನದಿಯಲ್ಲಿ ಈಜುವ ಅವಕಾಶವೊಂದು ಸಿಕ್ಕಿತು. ನಮ್ಮ ಶಾಲೆಯಲ್ಲಿ ಪರೀಕ್ಷೆ ಮುಗಿದ ನಂತರ ರಜೆ ಪ್ರಾರಂಭವಾಗುವ ಹಿಂದಿನ ದಿನ ಎಲ್ಲಾ ಶಿಕ್ಷಕರಿಗೆ ಒಂದು ಪಿಕ್ನಿಕ್ ವ್ಯವಸ್ಥೆ ಇರುತ್ತದೆ. ಪಿಕ್ನಿಕ್ ಸ್ಥಳವನ್ನು ಆಯ್ಕೆ ಮಾಡುವ ಅವಕಾಶ ನಮಗೆ ಸಿಕ್ಕಿತು. ನನ್ನ ಸ್ನೇಹಿತ ಗೌರಿಶಂಕರ್ ಮುತ್ತತ್ತಿ ಸ್ಥಳವನ್ನು ಸೂಚಿಸಿದರು. ಆಗ 2010 ಏಪ್ರಿಲ್ ತಿಂಗಳು. ಎಲ್ಲರೂ ಶಾಲೆಯಿಂದ ಹೊರಟು ಸುಂದರ ಪ್ರಕೃತಿಯನ್ನೊಳಗೊಂಡ ಮುತ್ತತ್ತಿ ತಲುಪಿದವು. ಕಾವೇರಿ ನದಿಯ ಜುಳು ಜುಳು ನಾದ ಕೇಳಿದೊಡನೆ ಮನಸು ಈಜಲು ಬಯಸಿತು. ರಾಕೇಶ್ ಈಜಲು ರೆಡಿಯಾಗಿ ನಿಂತ. ನೀರಿಗೆ ದುಮುಕಿ ಬೇಗ ಬೇಗನೆ ಈಜಿ ಮತ್ತೊಂದು ದಡ ಸೇರಿಯೇ ಬಿಟ್ಟ. ನಾನು ಮತ್ತು ಗೌರಿಶಂಕರಿ ಈಜಲು ನೀರಿಗಿಳಿದೆವು.ಹುರುಪಿನಿಂದ ಈಜತೊಡಗಿದೆವು ಮತ್ತೊಂದು ಕಡೆ ದಡ ಸೇರಿದ್ದ ರಾಕೇಶ್ ನಮ್ಮನ್ನು ಅಲ್ಲಿಂದಲೇ ಕರೆಯುತ್ತಿದ್ದ . ನಾನು ಅರ್ದ ನದಿಯನ್ನಷ್ಟೇ ಈಜಿದ್ದೆ . ಮುಂದೆ ಈಜಲು ಶಕ್ತಿ ಸಾಲದಾಯಿತು. ಮುಂದೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಹಿಂದೆ ಬರವುದು ಸಹ ಕಷ್ಟವಾಗಿತ್ತು. ವಾಪಾಸು ಹಿಂದಿರುಗಿ ಸ್ವಲ್ಪ ಈಜಿದೆಯಷ್ಟೆ. ಆಯಾಸಗೊಂಡು ಕಾಲನ್ನು ನೆಲಕ್ಕೆ ಊರಲು ಯತ್ನಿಸಿದೆ. ನೆಲ ಸಿಗಲಿಲ್ಲ ಮುಳುಗಲಾರಂಬಿಸಿದೆ. ನೀರು ರಭಸವಾಗಿ ಹರಿಯುತ್ತಿತ್ತು. ನಾನು ಅಪಾಯಕ್ಕೆ ಸಿಲುಕಿದ್ದೇನೆಂದು ಅರಿವಾಯಿತು.
"ಸರ್ ...ಗೌರಿಶಂಕರ್ ಸರ್ ಪ್ಲೀಸ್ ಕಾಪಾಡಿ"
ಎಂದು ಕೂಗಿಕೊಂಡೆನು. ನಾನು ನನ್ನ ಪ್ರಾಣದ ಆಸೆಯನ್ನು ಆಗಲೇ ತೊರೆದಿದ್ದೆ. ಆಯಾಸದಿಂದ ಮುಳುಗೇಳುತ್ತಾ ದಡ ಸೇರಲು ಪ್ರಯತ್ನಿಸುತ್ತಿದ್ದೆ. ಆಗಲಿಲ್ಲ. ನೀರು ಆಗಲೇ ಉಸಿರಿನ ಮೂಲಕ ನನ್ನ ದೇಹದೊಳಗೆ ಪ್ರವೇಶಿಸಲಾರಂಭಿಸಿತ್ತು.
ನನ್ನ ಕೂಗನ್ನು ಆಲಿಸಿದ ಗೌರಿಶಂಕರ್ ಹಿಂದಿನಿಂದ ನನ್ನನ್ನು ತಳ್ಳಿದರು. ತಳ್ಳಿದ ರಭಸಕ್ಕೆ ಒಂದು ಮಾರು ಮುಂದೆ ಹೋದೆ. ಅಲ್ಲಿಂದ ಮುಂದೆ ಈಜುವುದು ಕಷ್ಟವಾಗಿತ್ತು. ಪಾಪ ಆತನೂ ಸಹ ಈಜಿ ದಣಿದಿದ್ದ . ಏನಾದರೂ ಆಗಲಿ ಎಂದು ತೀರ್ಮಾನಿಸಿ ನಾನು ನನ್ನ ಕಾಲನ್ನು ನೆಲ ಸಿಗುವುದೇನೋ ಎಂಬ ಆಸೆಯಿಂದ ನೀರಿನಾಳಕ್ಕೆ ಇಳಿ ಬಿಟ್ಟೆ.. ಆ ದಿನ ದೇವರು ನನ್ನ ಮೇಲೆ ಕೃಪೆ ತೋರಿದ್ದ. ನಾನು ಮುಳುಗಲಿಲ್ಲ. ಕಲ್ಲು ಬಂಡೆಯೊಂದು ನದಿಯ ಮದ್ಯದಲ್ಲಿತ್ತು. ನಾನು ಅದರ ಮೇಲೆ ನಿಂತಿದ್ದೆ. ನನಗೆ ಮರು ಜೀವ ಬಂದಂತಾಗಿತ್ತು. ಸ್ವಲ್ಪ ಹೊತ್ತು ಆ ಕಲ್ಲಿನ ಮೇಲೆ ನಿಂತುಕೊಂಡು ಸುಧಾರಿಸಿಕೊಂಡೆ. ಮನಸಿನಲ್ಲೇ ದೇವರನ್ನು ಪ್ರಾರ್ಥಿಸಿದೆ. ಸಾವು ನನ್ನ ಕಣ್ಣ ಮಂದೆಯೇ ಬಂದು ಹೋಗಿದ್ದು ಕಂಡು ನನ್ನಲ್ಲಿ ಭಯ ಆವರಿಸಿಕೊಂಡಿತ್ತು. ಅಲ್ಲಿಂದ ಹೇಗೋ ಈಜಿಕೊಂಡು ದಡ ಸೇರಿ ನಿಟ್ಟಿಸಿರು ಬಿಟ್ಟೆ. ಈ ಘಟನೆ ನಡೆದು ಇಂದಿಗೆ ಐದು ವರ್ಷ ಕಳೆಯಿತು. ಅಂದಿನಿಂದ ಸ್ವಿಮ್ಮಿಂಗ್ ಪೂಲ್ ಕಡೆಯೂ ಕಣ್ಣೆತ್ತಿಯೂ ಸಹ ನೋಡುತ್ತಿಲ್ಲ..
ಎಂದೋ ಬಾಲ್ಯದಲ್ಲಿ ಭರ್ಜರಿಯಾಗಿ ಈಜಿದ್ದೆನೆಂದ ಮಾತ್ರಕ್ಕೆ ಈಗಲೂ ಅದೇ ಉತ್ಸಾಹ ಹುರುಪು ಇದೆ ಎಂದುಕೊಂಡಿದ್ದು ನನ್ನ ಮೂರ್ಖತನ. ನಮ್ಮ ಹಿಂದಿನ ವೈಭವಗಳು ಆಗಿನ ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದನ್ನು ಈಗಲೂ ನೆನಪಿಸಿಕೊಂಡು ಮಂದುವರಿಯುವುದು ಸರಿಯಲ್ಲ. ಹಿಂದೆ ಹಾಗಿದ್ದೆ ,ಹೀಗಿದ್ದೆ ಎಂದು ಬೀಗುತ್ತಾ ಪ್ರಸ್ತುತ ಸನ್ನಿವೇಶವನ್ನು ಮರೆತು ಮುನ್ನಡೆಯುತ್ತಿರುವ ನನ್ನಂತಹ ಎಷ್ಟೋ ಜನ ಮೂರ್ಖರನ್ನು ನಾನು ಈಗಲೂ ಕಾಣುತ್ತಿದ್ದೇನೆ. ಪ್ರಸ್ತುತ ಸನ್ನಿವೇಶದಲ್ಲಿ ನೀವು ಹೇಗಿದ್ದೀರಿ ಎಂದು ನೆನೆದು ಅದರಂತೆ ನಡೆದುಕೊಂಡರೆ ಸಾಕು.ಜೀವನ ಸುಂದರವಾಗಿರುತ್ತದೆ. ಅಲ್ಲವೇ..?
                                                - ಪ್ರಕಾಶ್ ಎನ್ ಜಿಂಗಾಡೆ

ಸುಂದರಿ

ಸುಂದರಿ. ..( ಸಣ್ಣ ಕತೆ)

ಅಂದೊಂದು ದಿನ ಜನಶತಾಬ್ದಿಯಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದೆ. ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಬಣ್ಣದ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಡೌಲು ಹೊಡೆಯಲು ಶುರು ಮಾಡಿದ. ಮೊಬೈಲ್ನಲ್ಲಿ ಫ್ರಂಟ್ ಕ್ಯಾಮರಾ ಆನ್ ಮಾಡಿಕೊಂಡು ತನ್ನನ್ನು ತಾನು ಪದೇ ಪದೇ ನೋಡಿಕೊಳ್ಳುತ್ತಿದ್ದ. ಆತನ ಈ ನಡವಳಿಕೆಯ ಡಿಢೀರ್ ಬದಲಾವಣೆಗಳಿಗೆ ಕಾರಣ ಹುಡುಕಿದೆ
ಅರೆ......ಎದುರುಗಡೆ ಸುರಸುಂದರಿ.....!!!!

ನಮ್ಮಿಂದ ನಾಲ್ಕು ಸೀಟು ಆಚೆ ಶೋಭಾಯಮಾನವಾಗಿ ಕಾಣುವಂತೆ ಕುಳಿತ್ತಿದ್ದಳು.

ಆಕೆಯ ಕಣ್ಣೋಟ, ಕಣ್ಣಿನವರೆಗೂ ಇಳಿಬಿದ್ದ ಮುಂಗುರುಳು,ಬೆಳದಿಂಗಳ ಹಾಲಿನಂತಹ ಬಣ್ಣ,ಎಲ್ಲವೂ ಅತ್ಯಾಕರ್ಷಣಕವಾಗಿದ್ದವು. ಆಕೆಯನ್ನು ನೋಡುತ್ತಾ ಕುಳಿತ ನನಗೆ ರೈಲು ತುಮಕೂರು ದಾಟಿದ್ದು ನನಗೂ ಸಹ ತಿಳಿಯಲಿಲ್ಲ. ಇಡ್ಲಿ ಮಾರುವ ಹುಡುಗನೂ ಸಹ ನಮ್ಮ ಭೋಗಿಗೆ ಪದೇ ಪದೇ ಬರುತ್ತಿದ್ದನು. ಅವನಿಗೂ ಅವಳನ್ನು ಮತ್ತೆ ಮತ್ತೆ ನೋಡುವ ಕಾತುರವಿದ್ದಿರಬೇಕು...!!
ನನ್ನ ಸೀಟಿನ ಮುಂದೆಯೇ ಒಬ್ಬ ಕಮಂಗಿರಾಯ ಕುಳಿತ್ತಿದ್ದ. ನೋಡಲು ಸುಂದರ ಸಭ್ಯಸ್ಥನಾಗಿದ್ದ. ಅವಳನ್ನು ನೋಡಿ ಕಮಂಗಿಯಾಟವ ಶುರುಮಾಡಿದ. ಹುಡುಗಿಯೊಬ್ಬಳು ಎದುರುಗಡೆ ಕಣ್ಣು ಕುಕ್ಕುವಷ್ಟು ಸುಂದರವಾಗಿರಬೇಕಾದರೆ ಪಾಪ ಆತನೇನು ಮಾಡಿಯಾನು....?

ವಿಶ್ವಾಮಿತ್ರನ ಮುಂದೆ ಮೇನಕೆ ಕುಳಿತಂತೆ...

ಅವಳ ಮುಂದೆ ನಾನಾ ಭಂಗಿಗಳನ್ನು ಪ್ರದರ್ಶಿಸುತ್ತಿದ್ದ. ಕೂಲ್ ಡ್ರಿಂಕ್ಸ್ ಮಾರುವನನ್ನು ಕರೆದು ಪೆಪ್ಸಿ ಕೊಂಡು ಸ್ಟೈಲಾಗಿ ಕುಡಿದ. ಒಂದೆರಡು ಬಾರಿ ಕೂದಲನ್ನು ಬಾಚಿಕೊಂಡ. ಅವಳನ್ನು ಹತ್ತಿರದಿಂದ ನೋಡುವ ನೆಪದಲ್ಲಿ ಒಂದೆರಡು ಬಾರಿ ಶೌಚಾಲಯಕ್ಕೆ ಹೋಗಿ ಬಂದದ್ದೂ ಆಯಿತು. ಬೆಲೆಬಾಳುವ ಮೊಬೈಲನ್ನು ಆಕೆಗೆ ಕಾಣುವಂತೆ ಒಂದೆರಡು ಬಾರಿ ಅಲ್ಲಾಡಿಸಿ ತೋರಿಸಿದ. ಆವಳು ಯಾವ ಪ್ರತಿಕ್ರಿಯೆ ತೋರಿಸಲಿಲ್ಲ. ಸ್ವಲ್ಪ ಸಮಯ ತೆಪ್ಪಗೆ ಕುಳಿತಂತೆ ತೋರಿದರೂ ಆಗಾಗ ಕಳ್ಳ ನೋಟ ಬೀರುತ್ತಲೇ ಇದ್ದ.
ರಾಯನಿಗೆ ಆಕೆಯನ್ನು ಮಾತನಾಡಿಸುವ ಕತೂಹಲವಿದ್ದಿರಬೇಕು. ಎದ್ದವನೇ ಸೀದಾ ಆಕೆ ಕುಳಿತ್ತಿದ್ದ ಸೀಟಿನ ಪಕ್ಕದಲ್ಲಿ ನಿಂತು ಆವಳನ್ನು ತಾಗಿಸಿಕೊಂಡು ತನ್ನ ಬ್ಯಾಗನ್ನು ಮೇಲಿಡಲು ಪ್ರಯತ್ನಿಸುತ್ತಿದ್ದ....

'ಕಣ್ ಕಾಣಲ್ವೇನ್ರಿ ನಿಮಗೆ'

ಬೈಯ್ದು ಮುಖ ಸಿಂಡರಿಸಿಕೊಂಡಳು.
ಪಾಪ.... ರಾಯ ಏನೂ ಮಾತನಾಡದೇ ತನ್ನ ಸೀಟಿನಲ್ಲಿ ಬಂದು ಕುಳಿತ.

"ಅಲ್ರಿ ಅವನ ಬ್ಯಾಗು ಇಲ್ಲೇ ಇಡಬಹುದಿತ್ತಲ್ಲ..!!
ಬೇಕಾದಷ್ಟು ಜಾಗವಿದೆ "

ಪಕ್ಕದಲ್ಲಿ ಕುಳಿತ ಯುವಕ ಆಶ್ಚರ್ಯದಿಂದ ಹೇಳಿದ. ನನಗೂ ಆತನ ಮಾತು ಸರಿಯೆನಿಸಿತು.
ಸ್ವಲ್ಪ ಹೊತ್ತಿನ ನಂತರ ಹಿಂದಿನಿಂದ
'ಬ್ರೆಡ್ ಆಮ್ಲೆಟ್..... ಬ್ರೆಡ್ ಆಮ್ಲೆಟ್'
ಎಂಬ ಧ್ವನಿ ಕೇಳಿಸಿತು
ರಾಯನಿಗೆ ಹಸಿವಾಗಿದ್ದಿರಬೇಕು.ಒಂದನ್ನು ಕೊಂಡುಕೊಂಡ.

'ಇನ್ನೊಂದನ್ನು ಆ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಕುಳಿತ ಹುಡುಗಿಗೆ ಕೊಟ್ಟು ಬಿಡಿ'
ಎಂದು ಅವಳತ್ತ ಕೈ ತೋರಿಸಿ ಹೇಳಿದ.

ಬ್ರೆಡ್ ಆಮ್ಲೆಟ್ ಮಾರುವವನು ಹಾಗೇ ಮಾಡಿದ.
ಆಕೆಗೆ ಕೋಪ ನೆತ್ತಿಗೇರಿರಬೇಕು ನೇರವಾಗಿ ಬಂದವಳೆ......

ನನಗ್ಯಾರಿ ನೀವು ಕೊಡಿಸೊದಕ್ಕೆ ಈ ತರ ಮಾಡಿದ್ರೆ ನಾನು ಸುಮ್ನಿರೊಲ್ಲ ನೋಡಿ'

ಹೀಗೆ ಹೇಳುವಾಗ ಅವಳ ಕಣ್ಣ ಕೆಂಪಾಗಿ ಹೋಗಿತ್ತು.

ಕೋಪದಿಂದ ನುಡಿದು ಬ್ರೆಡ್ ಆಮ್ಲೆಟನ್ನು ಅವನು ಕುಳಿತಲ್ಲೇ ಬಿಸಾಕಿ ನಡೆದಳು.
ರಾಯನ ಮುಖ ಚಿಕ್ಕದಾಯಿತು.
ನನಗೂ ಆತನ ವರ್ತನೆಗೆ ಚಚ್ಚಿ ಹಾಕುವಷ್ಟು ಕೋಪಬಂದಿತು.

"ನೋಡ್ರಿ ಒಂಟಿ ಹುಡುಗಿ ಸಿಕ್ಕಿದ್ದಳೆಂದು ಎಷ್ಟ್ ತೊಂದರೆ ಕೊಡ್ತಿದಾನೆ"

ನನ್ನ ಪಕ್ಕದಲ್ಲಿ ಕುಳಿತವನು ನನ್ನ ಕಿವಿಯಲ್ಲಿ ನಿಧಾನವಾಗಿ ಹೇಳಿದ.
ಅವನು ಹೇಳಿದ್ದು ಸರಿಯಾಗಿತ್ತು. ನಾನು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆವನತ್ತ ಹುಸಿ ನಗೆ ಬೀರಿ ಸುಮ್ಮನಾದೆ.
ಅಷ್ಟರಲ್ಲಿ ರೈಲು ಅರಸಿಕೆರೆಯನ್ನು ತಲುಪಿತ್ತು. ಅಲ್ಲಿ ಹತ್ತುವವರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇತ್ತು.
"ಮೇಡಮ್ ಈ ಸೀಟು ನನ್ನದು"
ಅರಸಿಕೆರೆಯಲ್ಲಿ ಹತ್ತಿದ ವ್ಯಕ್ತಿಯೊಬ್ಬ ತನ್ನ ಟಕೇಟ್ ತೋರಿಸಿ ಹೇಳಿದ
ಆ ಹುಡುಗಿ ಮರು ಮಾತನಾಡದೇ ಎದ್ದು ನಮ್ಮ ಕಡೆಗೆ ದಾವಿಸಿ ಬಂದಳು.
ಆಕೆಯ ಕಣ್ಣುಗಳು ಕಂಬನಿಯಿಂದ ತುಂಬಿ ಹೋಗಿತ್ತು. ಮುಖ ದುಃಖದಿಂದ ಮುದುಡಿ ಹೋಗಿತ್ತು.

" ನಿಂದೆ ತಪ್ಪು ಸಾರಿ ಹೇಳೊ.......ಸಾರಿ ಹೇಳೊ "

ಎಂದು ನನ್ನ ಸೀಟಿನ ಮಂದಿದ್ದ ಕಮಂಗಿರಾಯನನ್ನು ತನ್ನ ಅಂಗೈ ಮುಷ್ಠಿಯಂದ ಪ್ರೀತಿಯಿಂದ ಹೊಡೆದು ಅವನೆದೆಯ ಗೊಡಿನಲ್ಲಿ ಗುಬ್ಬಚ್ಚಿಯಂತೆ ಮುದುಡಿಕೊಂಡಳು.

"ಓಕೆ...ಐ ಆಮ್ ಸಾರಿ....ನೀನೂ ಸಹ ಇಷ್ಟೊಂದು ಆಟಿಟ್ಯೂಡ್ ತೋರಿಸಬಾರದಿತ್ತು"

ಎನ್ನುತ್ತಾ ರಾಯ ತನ್ನ ಬಲಗೈಯಿಂದ ಅವಳನ್ನು ಬಳಸಿಕೊಂಡನು.
ಹಾಗೆ ಮಾಡುವಾಗ ಆಕೆಯ ಕತ್ತಿನ ತಾಳಿ ರಾಯನ ಕಾಲರ್ ನಲ್ಲಿ ಸಿಲುಕ್ಕಿದ್ದು... ಆಕೆಯ ಕಣ್ಣ ಹನಿಗಳು ರಾಯನ ಷರಟಿನಲ್ಲಿ ಲೀನವಾದದ್ದು ....ಈಗಲೂ ನನ್ನ ಕಣ್ಣ ಮುಂದಿದೆ .....

                     
 - ಪ್ರಕಾಶ್ ಎನ್ ಜಿಂಗಾಡೆ