Sunday, 11 September 2016

ನಮ್ಮೂರು (poem )

ನಮ್ಮೂರು

ದೆವ್ವ ಅಂತೆ ದೆವ್ವ (poem)

ದೆವ್ವ ಅಂತೆ ದೆವ್ವ

ಹೋಗ್ರಿರೀ...ದೆವ್ವ ಅಂತೆ ದೆವ್ವ..!!
ನಾನ್ ಬದುಕಿ ನಾಲ್ಕ್ ದಶಕ ಕಳೆದ್ರೂ
ಯಾವ್ ಅಬ್ಬೆಪಾರಿ ದೆವ್ವನೂ ಬಂದು
ನನ್ನ ಯೋಗಕ್ಷೇಮ ಕೇಳ್ಲಿಲ್ಲ,

ಸಾವಿರಕ್ಕೊಬ್ಬ ಸತ್ತವನು ದೆವ್ವ ಅನ್ಕೊಂಡಿದ್ರೂ
ಯಾವ್ ಮೋಹಿನಿನೂ ತನ್ ರೂಪ ತೋರ್ಸಿಲ್ಲ
ಯಾವ್ ಬೇತಾಳನೂ ನನ್ನ ಬೆನ್ನಟ್ಟಲಿಲ್ಲ
ಪ್ರೇತದ ಪ್ರೀತಿಯಂತೂ ಸಿಕ್ಕೇ ಇಲ್ಲ.

ಸ್ಮಶಾನ,ಪಾಳು ಬಂಗಲೆಯನ್ನೂ ಸುತ್ತಿದೆ
ಮರದ ಸಂದಿಗೊಂದಿಯಲಿ ಕಣ್ಣಾಡಿಸಿದೆ
ಬೀದಿಯಲಿ ಅಮವಾಸ್ಯೆ ರಾತ್ರಿ ಕಳೆದೆ
ಯಾವ ದೆವ್ವವೂ ಗೋಚರಿಸಲಿಲ್ಲ...

ನಾ ಕಂಡದ್ದು  ಹಗಲಿನ ದೆವ್ವಗಳು
ಬಿಳಿ ಟೋಪಿ ಖಾದಿ ದಿರಿಸಿನ ಬೇತಾಳಗಳು
ಅಧಿಕಾರದಾಸೆಗೆ ರಕ್ತ ಹೀರುವ ಪ್ರೇತಗಳು
ಹಣಕ್ಕೆ ಬಾಯ್ ತೆರೆದ ಸತ್ತ ಹೆಣಗಳು....

ಸುಳ್ಳು ಬರವಸೆಗಳ ಕ್ರೂರ ರೂಪ
ಇದ್ದದ್ದು ಸೌಧದಲಿ ಬಂಗಲೆಯಲಿ
ಈ ಭಯಾನಕ ಕ್ರೂರ ಪಿಶಾಚಿಗಳ ನಡುವೆ
ಮಾನವೀಯ ದೆವ್ವಗಳು ಎಲ್ಲಿ ಕಂಡಾವು..?

ಹೋಗ್ರಿರಿ ದೆವ್ವ ಅಂತೆ ದೆವ್ವ.......!!!!!

                    -ಪ್ರಕಾಶ್. ಎನ್. ಜಿಂಗಾಡೆ

ತಲೆಗಳು (poem)

ತಲೆಗಳು

ಇಂದು ಕ್ಷೌರದಂಗಡಿಗೆ ಹೋಗಿದ್ದೆ
ಅವದೇನು ಕಲೆ ಅದೆಂತಹ ಮಾತ್ರಿಕ ಸ್ಪರ್ಶ
ಕ್ಷೌರಿಕನ ತಾಳ ಲಯಬದ್ದವಾದ ಬಡಿತಕೆ
ಎಷ್ಟೋ ತಲೆಗಳು ಸೋತಿದ್ದವು
ಎಷ್ಟೋ ತಲೆಗಳು ನಿದ್ರೆಗೆ ಜಾರಿದ್ದವು
ಅದೆಷ್ಟೋ ತಲೆಗಳು ಅಮಲೇರಿದ್ದವು
ಸುಖದಿಂದಲೂ ಮುಳುಗಿ ಯಾವುದೋ
ಹೊಸದೊಂದು ಲೋಕಕ್ಕೆ ಜಾರುತ್ತಿದ್ದವು

ಕೆಲವರದು ಚಿಕ್ಕದಾದ ನಯವಾದ ತಲೆ
ಕೆಲವರದು ದೊಡ್ಡದಾದ ತಗಡು ತಲೆ
ಮತ್ತೆ ಕೆಲವರದು ಕೊಳಕಾದುದು,ಸ್ವಚ್ಛವಾದುದು
ಜಾಣತನದ್ದು, ಮೊಂಡುತನದ್ದು,
ಬುದ್ದಿಹೀನದ್ದು ಲಜ್ಜೆಗೆಟ್ಟದ್ದು
ವಿಧವಿದವಾದದ್ದು ವಿಭಿನ್ನ ವಾದದ್ದು
ಆದರೆ ಅದರೊಳಗಿನ ಯೋಚನಾ ಲಹರಿಯೋ ?
ಬ್ರಹ್ಮನೊಬ್ಬನೆ ಅರಿವನು.....

ನನಗೊಂದು ಆಶ್ಚರ್ಯ
ಬ್ರಹ್ಮ ಅದೆಂತಹ ಅದ್ಭುತ ಕುಂಬಾರನೋ
ಯಾವ ಕೈಗಳಿಂದ ನಿರ್ಮಿಸಿದನೋ
ಅದ್ಯಾವ ಮಂತ್ರಶಕ್ತಿಯನು ತುಂಬಿದನೋ
ಜೀವರಾಶಿಗಳಿಗೂ ಮಿಗಿಲಾಗಿ
ಇಂದ್ರಜಾಲ ಅದರೊಳಗೆ ತುಂಬಿಸಿ
ಕಲ್ಪನಾ ಯೋಚನಾ ಶಕ್ತಿಗಳನು ಬೆರೆಸಿ
ಧರೆಯೊಳಗೆ ತಂದು ಬಿಟ್ಟನು....

ಜೋಪಾನವಾಗಿಡುವುದರಲ್ಲಿ ನಾವು ಜಾಣರು
ಅಮ್ಮ ಕೊಟ್ಟ ಬಂಗಾರ ಕಾಪಾಡುತ್ತೇವೆ
ಅಪ್ಪ ಕೊಟ್ಟ ಆಸ್ತಿ ಕಾಯುತ್ತೇವೆ
ದೇವರು ಕೊಟ್ಟ ಈ ತಲೆಯನ್ನು ಕಾಪಾಡಿಕೊಳ್ಳದೇ
ಹೊಲಸಾಗಿಸಿ ಮಲಿನಗೊಳಿಸಿದ್ದೇವೆ
ದುರ್ವಿಚಾರಗಳನು ತುಂಬಿಕೊಂಡು
ಕಳಕು ಕೊಚ್ಚೆಯೆಡೆಗೆ ಸಾಗುತ್ತಿದ್ದೇವೆ
ಎಲ್ಲವೂ ಸ್ವಾರ್ಥಕ್ಕಾಗಿ .......

           ಪ್ರಕಾಶ್. ಎನ್. ಜಿಂಗಾಡೆ.

ಮುಗ್ಧರು (poem)

Lovely children.....poem

ಮುಗ್ಧರು

ಪಾಠಿ ಚೀಲ ಹೊತ್ತು
ಸಾಲಿಗೆ ಹೊರಟ ಮಕ್ಕಳು
ಬೆನ್ನ ಹಿಂದೆ ಹೊತ್ತಿದ್ದು ಹೊತ್ತಿಗೆಯಲ್ಲ
ಕನಸಿನ ಮೂಟೆಗಳು....

ವಾಹನಗಳ ಮದ್ಯೆ ಪರದಾಡಿ
ಅವಸರದಿ ಹೆಜ್ಜೆಹಾಕಿ
ಗಣಿತದ ನಡುವೆ ಕಂಗೆಟ್ಟು
ಎಲ್ಲೋ ಕಳೆದು ಹೋಗುವರು...

ವಾತ್ಸಲ್ಯ ತೋರದ ಹೆತ್ತವರು
ಅನ್ಯರ ಪ್ರೀತಿಯ ಬೇಡುವ ಮುಗ್ದರು
ಬಯಸಿದ್ದೆಲ್ಲಾ ಪಡೆವ ಶ್ರೀಮಂತರು
ಪ್ರೀತಿಯಲಿ ಕಡು ಬಡವರು...

ಹೆತ್ತವರ ಪ್ರತಿಷ್ಟೆಯ ಜಗಳಗಳು
ದೊಡ್ಡತನದ ಅಹಂಭಾವಗಳು
ಮುದ್ದು ಕಂದಮ್ಮಗಳ ಲೆಕ್ಕಸದೆ
ವಿಚ್ಛೇದನದ ತೀರ್ಮಾನಗಳು....

ಅರಳುವ ಹೂಗಳ ಚಿವುಟುವ
ಅಧಿಕಾರ ಕೊಟ್ಟವರಾರು...?
ಯಾರದೋ ತಪ್ಪಿಗೆ
ಇನ್ನಾರಿಗೋ ಶಿಕ್ಷೆ...

                            - ಪ್ರಕಾಶ್ ಎನ್ ಜಿಂಗಾಡೆ

ಇಷ್ಟವಿಲ್ಲ

ನೆಲ ಜಲ ಸಂಸ್ಕೃತಿಯನರಿಯದೆ
ಅನ್ಯ ಅಸಂಸ್ಕೃತಿಯ ಆಲಂಗಿಸಿ
ವಿಷ ವರ್ತುಲ ಬಯಸುವ ಜನರು
ನನಗಿಷ್ಟವಿಲ್ಲ...

ಅಭಿಮಾನವ ತೋರದೆ
ನನ್ನದೇ ಶ್ರೇಷ್ಠ ಧರ್ಮವೆನ್ನುತ್ತಾ
ಇತರ ಧರ್ಮವ ಜರಿಯುವವರ ಸಂಗ
ನನಗಿಷ್ಟವಿಲ್ಲ....

ಅತಿಯಾದ ಆಡಂಬರವ ತೋರಿ
ಮೊದಲ ಪಂಕ್ತಿಯವನಾಗಿ ನಿಂತು
ದುಃಖ ದುಗುಡನರಿಯದ ಅಗ್ರಜರು
ನನಗಿಷ್ಟವಿಲ್ಲ...

ಸಹಿಷ್ಣುಗಳಾಗಿರದ ದೇಶವಾಸಿಗಳು
ಯಾರದೋ ಸಿದ್ಧಂತಕ್ಕೆ ಬಲಿಯಾಗಿ
ತಮ್ಮತನವ ಮಾರಿಕೊಂಡವರು
ನನಗಿಷ್ಟವಿಲ್ಲ....

ಇತಿಹಾಸ ತಿರುಚಿ ಮಹಾನೀಯರಾದವರು
ಧರ್ಮ ಸಿದ್ಧಾಂತ ತಪ್ಪಾಗಿ ಅರ್ಥೈಸಿಕೊಂಡವರು
ಕಾಣದ ಮರೀಚಿಕೆಗಳನ್ನು ನಂಬುವರು
ಇವರಿಗೆ ನನ್ನಿಷ್ಟಗಳು ಹೇಗೆ ತಿಳಿದಾವು....?

        ಪ್ರಕಾಶ್ ಎನ್ ಜಿಂಗಾಡೆ

Saturday, 10 September 2016

ಸಿಗದವಳು

ಸಿಗದವಳು

ಜಾನಪದದ ಹುಡುಗಿ
ನನ್ನ ಸುಂದರ ಬೆಡಗಿ
ದಾವಣಿಯ ಸೊಗಸಿನಲಿ
ಲಾವಣಿಯ ಕಥೆ ಹೇಳಿ
ಕಣ್ಣೋಟದಿ ಸನ್ನೆ ಮಾಡಿ
ನನ್ನಯ ಕರೆದಿಹಳು.....

ಕೋಲಾಟದ ಕುಣಿತದಿ
ಗೆಜ್ಜೆಯ ನಾದವ
ಎದೆಯಲಿ ತುಂಬಿ
ಸೀರೆಯ ಸೊಬಗಲಿ
ಲಜ್ಜೆಯ ತೋರಿ
ಎದೆಯಲಿ ತಕಧಿಮಿ ಬೆರೆಸಿಹಳು....

ಬರಸೆಳೆದು ಬಿಗಿದಪ್ಪಿದರೆ
ತತ್ವ ಪದದ ಲಾಸ್ಯವು
ಜಿನುಗುವುದು
ನುಣುಚುವಳು ನುಲಿಯುವಳು
ದೂರ ಸರಿದು
ಒಗಟಾಗಿ ನಿಂತಿಹಳು....

                    - ಪ್ರಕಾಶ್ ಎನ್ ಜಿಂಗಾಡೆ

ವ್ಯಾಕರಣ (poem)

ನನ್ನವಳೊಂದು ವ್ಯಾಕರಣ...

ಅವಳೂಂದು ಕಥೆ
ನಾ ಅದರ ಸಾಲಾಗಬೇಕು
ಅವಳ ಅಲಂಕಾರವೋ
ಚೆಂದದ ಉಪಮೆ ರೂಪಕಕ್ಕೆ ಮನಸೋತು
ನಾ ಅದರ ಪದವಾಗಲು ಹೊರಟು
ವಿಫಲನಾಗಿದೆ...

ಅವಳು ಚೆಂದದ ಛಂದಸ್ಸಾದಾಗ
ನಾ ಲಘು ಗುರು ಹಾಕಲು ಯತ್ನಿಸಿದೆ
ವೃತ್ತದ ಯಾವ ನಿಯಮಗಳು ಅನ್ವಯಿಸಲಿಲ್ಲ
ವ್ಯಾಕರಣಕ್ಕೆ ಸಿಗದ ಕಾವ್ಯವಾದಳು
ತಿದ್ದಿದೆ ಗೀಚಿದೆ ತಿಳಿಯದೆ
ಪೆದ್ದನಾಗಿ ಉಳಿದೆ...

ಅವಳು ತತ್ಸಮವಾದಗ
ತದ್ಭವ ಪದ ಹುಡುಕಿದೆ
ವಿರುದ್ಧ ಪದಗಳೇ ಸಿಕ್ಕವು
ಬರಿಯ ನಿಷೇದಾರ್ಥಕ ರೂಪಗಳು
ನನ್ನದೇ ಸಾಲಿನಲಿ
ಆವಳದೇ ಪೂರ್ಣವಿರಾಮ...

ಹಿರಿಯರು ಹೊಂದಿಸಿ ಬರೆದರು
ಸಮಾನಾರ್ಥಕ ಪದ ಹುಡುಕಿ ಕೊಟ್ಟರು
ಈಗವಳು ಪುಸ್ತಕ
ನಾನದರ ಪುಟಗಳು
ಪುಟಗಳು ತೆರೆಯುತ್ತಲಿವೆ
ಜೀವನ ಸಾಗುತ್ತಲಿದೆ....
         
                   -ಪ್ರಕಾಶ್.ಎನ್. ಜಿಂಗಾಡೆ