Friday 8 June 2018

ಮಾಧ್ಯಮಗಳ ಪಾತ್ರ

ದೇಶದ ಪ್ರಗತಿಯಲ್ಲಿ ಮಾಧ್ಯಮಗಳ ಋಣಾತ್ಮಕ  ಅಂಶಗಳು :-

*  ಜವಾಬ್ದಾರಿಯುತ  ಮಾಧ್ಯಮಗಳು ತೀರಾ ಇತ್ತೀಚಗೆ ಅನಿವಾರ್ಯತೆಗೆ ಕಟ್ಟುಬಿದ್ದು ವ್ಯಾಪಾರಿಕರಣಗೊಳ್ಳುತ್ತಿವೆ. ಇದರಿಂದಾಗಿ ಎಲ್ಲೋ ಒಂದು ಕಡೆ ಮೂಲ ಉದ್ದೇಶಕ್ಕೆ ಚ್ಯುತಿ ಬರ್ತಾ ಇದೆ ಅನ್ನೋದನ್ನ ಒಪ್ಪಿಕೊಳ್ಳಲೇ ಬೇಕು. ಮಾಧ್ಯಮಗಳು ಬೆಳೆಯಬೇಕು ಅನ್ನೋದಾದ್ರೆ ವ್ಯಾಪಾರ ಕೂಡಾ ಅನಿವಾರ್ಯ. ಹಾಗಂತ ಪತ್ರಿಕೋಧ್ಯಮದ ಮೂಲ ಉದ್ದೇಶವನ್ನೇ ಮರೆತರೆ ಪ್ರಾಕೃತಿಕ ವ್ಯವಸ್ಥೆ ಕೈ ಕಟ್ಟಿಕುಳಿತುಕೊಳ್ಳೋದಿಲ್ಲ ಅನ್ನೋದಕ್ಕೆ ರೂಪರ್ಟ ಮುರ್ಡೋಕ ಹಾಗೂ ಕನಿಮೋಳಿ ಪ್ರಕರಣಗಳೇ ಸಾಕ್ಷಿ.

*  ಮಾಧ್ಯಮಗಳು ಜನ ಬಯಸುವ ಸಂಗತಿಗಳ ಕೊಡೋ ಭರದಲ್ಲಿ ಕೆಲವು ಪ್ರಕರಣಗಳಿಗೆ ನ್ಯಾಯ ಸಿಕ್ಕದೇ ಇರೋದು ವಿಪರ್ಯಾಸ. ಈ ವಿಪರ್ಯಾಸಗಳ ಪಟ್ಟಿ ಟಿವಿ ಕಾರ್ಯಕ್ರಮಗಳಲ್ಲಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಟಿ,ಆರ್, ಪಿ ಹಿಂದೆ ಬಿದ್ದಿರೋ ಖಾಸಗಿ ದೂರದರ್ಶನಗಳು ಮೂಲ ದ್ಯೇಯವನ್ನು ಕಡೆಗಣೆಸೋದೇ ಹೆಚ್ಚು. ಮೂಲ ಉದ್ದೇಶಕ್ಕೆ ಧಕ್ಕೆ ತಂದ್ರೆ ಏನಾಗುತ್ತದೆ ಅನ್ನೋದನ್ನ ಸಮೂಹ ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕಾಗಿದೆ.

* ಇತ್ತೀಚಿಕೆ ಮಾಧ್ಯಮಗಳು 'Breaking news' ಮತ್ತು  'Exclusive News' ಎಂದು  ತೋರಿಸಿ ಒಂದು ಸಾಮಾನ್ಯ ಸುದ್ಧಿಯನ್ನು ಅತಿಯಾಗಿ ವೈಭವೀಕರಿಸಿ ಆ ದಿನದ ಪ್ರಧಾನ ಸುದ್ದಿಯನ್ನು ಆರಿಸುವುದು ಕೂಡ ಒಂದು ವಿಶಿಷ್ಟ ರಾಜಕಾರಣ. ಯಾವ ಸುದ್ದಿಗೆ ಹೆಚ್ಚು ಬಿಕರಿಯಾಗುವ ಶಕ್ತಿ ಇದೆಯೋ ಅದು ಪ್ರಧಾನ ಸುದ್ದಿಯಾಗುತ್ತದೆ. ಇಲ್ಲಿ ‘ಮಾರಾಟ’ ಎನ್ನುವಾಗ ಒಂದು ಮಾಧ್ಯಮ ತಂಡಕ್ಕೆ ಆ ರಾಜ್ಯದ ಮಹಾನಾಯಕರ ಹುಟ್ಟುಹಬ್ಬದ ಆಚರಣೆ, ನಟ ನಟಿಯರ ಡೈವರ್ಸ ಪ್ರಕರಣಗಳು, ರಾಜಕೀಯ ನಾಯಕರ ರಾಸಲೀಲೇ, ಕುಟುಂಬದಲ್ಲಿನ ಅನೈತಿಕ ಲೈಂಗಿಕ ಪ್ರಕರಣಗಳು ಅತಿಯಾಗಿ ವೈಭವೀಕರಿಸಿ ನೋಡುಗರಲ್ಲಿ ಅತಿಯಾದ ಮುಜುಗರವನ್ನು ಸೃಷ್ಟಿಸುತ್ತಿರುವುದು ಮಾಧ್ಯಮಗಳ ಬೇಜವಬ್ದಾರಿಯನ್ನು ಮೆರೆಯುತ್ತಿವೆ.

* ಸುದ್ದಿ ಮಾಧ್ಯಮಗಳು ಇಂದು ದಿನದ 24 ಗಂಟೆಯೂ ಸುದ್ದಿಗಳನ್ನು ಬಿತ್ತರಿಸಬೇಕಾದ ಅನಿವಾರ್ಯತೆ. ಇಲ್ಲ ಸಲ್ಲದ ಬದುಕಿನ ಸಂಧಿಗ್ಧಗಳೇ ಸುದ್ದಿ ಮಾಧ್ಯಮಗಳಿಗೆ ಪ್ರಧಾನ ಆಹಾರ. ಬೃಹತ್ ದುರಂತ ಅಥವಾ ಹೇಯ ಅಪರಾಧ. ಸಂದಿಗ್ಧಗಳು ಹೆಚ್ಚು ಜನ ನೋಡುಗರನ್ನು ಸೆಳೆಯುತ್ತವೆ ಎಂಬುದು ಮಾಧ್ಯಮದವರು ಹೇಳುವ ಮಾತು.ತಮ್ಮ ಕಾರ್ಯಕ್ರಮಗಳನ್ನು ಎಷ್ಟು ಜನ ನೋಡಿದರು ಎಂಬುದನ್ನು ಆಧರಿಸಿ ಟಿ.ಆರ್.ಪಿ. ಲೆಕ್ಕ ಹಾಕುತ್ತಾರೆ, ಅಂತರ್ಜಾಲದಲ್ಲಿ hits ಎಂಬ ಲೆಕ್ಕವಿದೆ.  ಇಂತಹ ಅಂಕಿ೦ಸಂಖ್ಯೆಯನ್ನು ಆಧರಿಸಿ ಆಯಾ ಮಾಧ್ಯಮಕ್ಕೆ ಜಾಹೀರಾತು ದೊರೆಯುತ್ತದೆ. ಆ ಜಾಹೀರಾತುಗಳೇ ಎಲ್ಲಾ ಮಾಧ್ಯಮಗಳಿಗೆ ಪ್ರಧಾನ ಆದಾಯ ಆಗಿದೆ. ಹೀಗಾಗಿ ಜಾಹೀರಾತು ಪಡೆಯಲು ಎಲ್ಲಾ ಮಾಧ್ಯಮ ಮಿತ್ರರೂ ಅನೇಕಾನೇಕ ಸರ್ಕಸ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಈ ಸರ್ಕಸ್‌ಗಳಿಗೆ ಸಂಧಿಗ್ಧತೆ ಸುದ್ಧಿಯನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ.  ಎಲ್ಲಿಯೂ ಸಂದಿಗ್ಧಗಳು ದೊರೆಯದೆ ಇದ್ದಾಗ ಮಾಧ್ಯಮವು ಸ್ವತಃ ಅಂತಹದೊಂದು ಸಂದಿಗ್ಧವನ್ನು ತಾನೇ ಸೃಷ್ಟಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಇಂದು ತಲುಪಿದ್ದೇವೆ.
ಉದಾ: ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದು ಎಷ್ಟು ಸರಿ..? ಆಚರಿಸಬೇಕೇ ? ಬೇಡವೇ ?  ಇದರಲ್ಲಿ ಯಾವುದು ಜಾರಿಯಾದರೂ ಈ ನಾಡಿನ ಜನಕ್ಕೆ ಯಾವ ಲಾಭವೂ ಇಲ್ಲ.

* ಮಾಧ್ಯಮಗಳು ಇತ್ತೀಚೆಗೆ ಕೇವಲ ನಾಟಕೀಯವನ್ನು ಪ್ರದರ್ಶಿಸುತ್ತವೆ. ಮಾಧ್ಯಮಗಳಿಂದಾಗಿ ಜನರ ಮತ್ತು ಹೋರಾಟಗಾರರ ವರ್ತನೆಯೂ ಸಹ ಬದಲಾಗಿದೆ. ಯಾವುದೋ ವಿಷಯವನ್ನು ಧಿಕ್ಕಾರ ಕೂಗಲು, ನ್ಯಾಯ ಕೇಳಲು, ಹೋರಾಟ ಮಾಡಲು ಬಂದಿರುವ ಜನ ಸಹ ಮಾಧ್ಯಮದವರು ಎದುರಿಗೆ ಬಂದಾಗ ಮಾತ್ರ ತಮ್ಮ ಘೋಷಣೆಗಳನ್ನು ಕೂಗುತ್ತಾರೆ. ತಾವು ಸಿಟ್ಟಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಾರೆ. ಮಾಧ್ಯಮದವರ ಎದುರಿಗೆ ಮಾತ್ರ ಅತೀ ಉದ್ವೇಗದಿಂದ ಮಾತಾಡುತ್ತಾರೆ. ಕೆಲವೊಮ್ಮೆ ಮಾಧ್ಯಮ ಮಿತ್ರರು ಸ್ವತಃ ಹೋರಾಟಗಾರರಿಗೆ ಹೀಗೆಯೇ ನಿಲ್ಲಿ ಎಂದು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವುದು ಸಹ ಉಂಟು. ಕ್ಯಾಮೆರಾ ಬಂದಿದೆ ಎಂದು ತಿಳಿದ ಕೂಡಲೇ ಅತ್ಯಂತ ನಾಟಕೀಯವಾಗಿ ಅಳುತ್ತಾ ಇದ್ದದ್ದನ್ನು ನೋಡಿದ್ದೇವೆ. ಹೋರಾಟಗಳಿಂದಲೇ ಹೆಸರು ಮಾಡಿದ ಈ ನಾಡಿನ ‘ಮಹಾನ್’ ಸಾಹಿತಿಗಳು ಅಥವಾ ನಾಯಕರುಗಳು ಹೋರಾಟಕ್ಕೆ ಬರಬೇಕೆಂದರೆ ಯಾವ ಯಾವ ಮಾಧ್ಯಮದವರು ಬರುತ್ತಾರೆ ಎಂದು ಕೇಳಿಕೊಳ್ಳುತ್ತಾರೆ. ಅಂದರೆ ನಮ್ಮ ಸಮಕಾಲೀನ ಹೋರಾಟಗಳು,  ಸಮಾರಂಭಗಳು, ಸನ್ಮಾನಗಳು ಕೂಡ ಕೇವಲ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಮಾಡುವ ನಾಟಕದ ಹಾಗೆ ಆಗಿವೆ. ಈ ಬದಲಾದ ಸಾಮಾಜಿಕ ವರ್ತನೆಯನ್ನು ‘ಮಾಧ್ಯಮ ಋಣ’ ಎನ್ನಬಹುದು.

* ಇತ್ತೀಚೆಗೆ ಮಾಧ್ಯಮಗಳು ರಾಜಕಾರಣಿಗಳ ಕೈ ಗೊಂಬೆಗಳಾಗಿವೆ. ಅನೇಕ ರಾಜಕಾರಣಿಗಳು ವಾಹಿನಿಗಳನ್ನು ಮತ್ತು ಪತ್ರಿಕೆಗಳನ್ನು ಆರಂಭಿಸಿದ್ದಾರೆ. ಇದು ಆಯಾ ರಾಜಕಾರಣಿಗಳಿಗೆ ಸಮೂಹದ ಮೇಲೆ ತನ್ನ ಪ್ರಭಾವ ಬೀರಬೇಕು ಅಥವಾ ತಮ್ಮ ಪಕ್ಷದ ಸಿದ್ಧಾಂತವು ಪ್ರಚಾರವಾಗಬೇಕು ಎಂದು ರಾಜಕೀಯ ನಾಯಕರು ನೇರವಾಗಿ ತಾವೇ ತೊಡಗಿಸಿಕೊಳ್ಳದೆ ತಮ್ಮ ಅಧಿಕಾರವನ್ನು ಮಾಧ್ಯಮಗಳ ಮೇಲೆ ಹೇರಿ ಅವುಗಳನ್ನು ನಡೆಸುತ್ತಾ ಇರುವುದೂ ಉಂಟು. ಕೆಲವು ಪಕ್ಷಗಳಂತೂ ಜನಪ್ರಿಯ ದೈನಿಕಗಳನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದೂ ಉಂಟು. ಇಂತಹ ಎಲ್ಲಾ ಪ್ರಯತ್ನಗಳ ಹಿಂದೆ ಮಾಧ್ಯಮದ ಶಕ್ತಿಯನ್ನು ಅರಿತ ಮಂದಿಯೇ ಇರುತ್ತಾರೆ. ಇದರಿಂದಾಗಿ ಮಾಹಿತಿ ಎಂಬುದು ಸಮೂಹಕ್ಕೆ ತಲುಪುವ ಮುನ್ನವೇ ಸಿದ್ಧಾಂತಗಳ ಪೋಷಾಕು ತೊಟ್ಟಿರುತ್ತದೆ. ಇದು ಮಾಧ್ಯಮ ಎಂಬ ಉದ್ಯಮದ ಮೇಲೆ ಮಾಡಿರುವ ಪರಿಣಾಮದಿಂದಾಗಿ ಇಂದು ಸುದ್ದಿ ಎಂಬುದನ್ನು ಕುರಿತು ಜನ ನಂಬಿಕೆ ಕಳೆದುಕೊಂಡಿರುವ ಸ್ಥಿತಿಯು ಸಹ ಬಂದಿದೆ.

ಈ ಮೇಲಿನ ಅಂಶಗಳನ್ನು ನೋಡಿದರೆ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ ಇಲ್ಲದಿದ್ದರೆ ಅದು ಮಾರಕವಾಗಿ ಪರಿಗಣಿಸಲ್ಪಡುತ್ತದೆ. ಜನ ಸಾಮಾನ್ಯರಿಗೆ ಮಾಹಿತಿ ನೀಡಲು, ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿ ಉಳಿಯಲು ಮಾಧ್ಯಮಗಳು  ಅತ್ಯಗತ್ಯ. ಪ್ರಜೆಗಳು ತಮ್ಮ ಸುತ್ತ-ಮುತ್ತ ದಿನನಿತ್ಯ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಯುವುದು ಇಂದು  ಅನಿವಾರ್ಯವಾಗಿದೆ. ವ್ಯಕ್ತಿಗತವಾಗಿ ಪ್ರತಿಯೊಂದು ಘಟನೆಗಳ ಆಗು-ಹೋಗುಗಲ ಮೇಲೆ ಕಣ್ಣಿಡಲಾಗದ ಜನರಿಗೆ ಮಾಧ್ಯಮಗಳು ಅಂತಹ ಮಾಹಿತಿ ಕಲೆ ಹಾಕಿ,ವಿಶ್ಲೇಷಿಸಿ, ಓದುವ ಆಸಕ್ತಿ ಹುಟ್ಟಿಸುವ ಕೆಲಸ ಮಾಡಬೇಕು. ಜನಾಭಿಪ್ರಾಯ ರೂಪಿಸುವುದಕ್ಕೆ ನಮಗೆ ಮಾಧ್ಯಮಗಳು ಬೇಕು. ರಾಜ್ಯದಲ್ಲಿನ ವಾಸ್ತವ ಸಂಗತಿಗಳನ್ನು ಮರೆತು ಆಡಳಿತ ಪಕ್ಷದವರು ಅನೇಕ ತೀರ್ಮಾನಗಳನ್ನು ಪ್ರಜೆಗಳ ಮೇಲೆ ಹೇರುತ್ತಾರೆ. ಅಂತಹ ವಿಷಯಗಳ ಬಗ್ಗೆ ಜನರು ಪ್ರತಿಭಟನೆ ವ್ಯಕ್ತಪಡಿಸಲು, ಹೋರಾಟ ಮಾಡಲು ಮಾಧ್ಯಮಗಳು ಸರ್ಕಾರ ಮತ್ತು ಪ್ರಜೆಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕು. ಯಾವಾಗ ಇಂತಹ ಕಾರ್ಯಗಳನ್ನು ಮಾಧ್ಯಮಗಳು ಯಶಸ್ವಿಯಾಗಿ ನಿರ್ವಹಿಸುತ್ತದೆಯೋ ಆಗ ಮಾಧ್ಯಮಗಳು ಸಮಾಜ ಮುಖಿಯಾಗಿ ಕೆಲಸ ಮಾಡಿದಂತಾಗುತ್ತದೆ  ರಾಜ್ಯಾಡಳಿತವೊಂದರ ರಚನಾತ್ಮಕ ಟೀಕೆ ಮತ್ತು ವಸ್ತುನಿಷ್ಠ ವಿಮರ್ಶೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಧ್ಯಮಗಳು ಅಡಿಪಾಯವಾಗಬೇಕು. ಅವಕಾಶ ಸಿಕ್ಕಿದರೆ ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರ ಎಂತಹ ವ್ಯಕ್ತಿಯನ್ನೂ ಭ್ರಷ್ಟನನ್ನಾಗಿಸುತ್ತದೆ. ಮಾಧ್ಯಮಗಳು ಜನಾಭಿಪ್ರಾಯ ಮೂಡಿಸುವ ಮುಖಾಂತರ ಭ್ರಷ್ಟಚಾರವನ್ನು ಬಯಲಿಗೆಳೆಯಬೇಕು. ಈ ಮೂಲಕ ಮಾಧ್ಯಮಗಳು  ಪ್ರಜಾಪ್ರಭುತ್ವದ ನಿರಂತರ ಕಣ್ಗಾವಲಾಗಿ ಕೆಲಸ ಮಾಡಿದರೆ ಮಾತ್ರ ಮಾದ್ಯಮಗಳನ್ನು 'ಸರ್ಕಾರದ ನಾಲ್ಕನೇ ಅಂಗ' ಪ್ರಜಾಪ್ರಭುತ್ವದ ‘ಅಡಿಗಲ್ಲು’, ಎಂದು ಕರೆಯಬಹುದು. ಇಲ್ಲವಾದರೆ ಮಾಧ್ಯಮಗಳೇ ಪ್ರಗತಿಗೆ ಅಡ್ಡಿಯಾಗಿ ನಿಲ್ಲುತ್ತವೆ.

ಪ್ರಕಾಶ್ ಎನ್ ಜಿಂಗಾಡೆ.
9986249671