Monday, 8 February 2016

ಕಡಲ ಕಿನಾರೆಯ ಹುಡುಗಿ

ಕಡಲ ಕಿನಾರೆಯ ಹುಡುಗಿ....

ಸೂರ್ಯನ ಹೊಂಬಿಸಿಲು ಆಗಲೇ ಭೂಮಿಯನ್ನು ಸ್ಪರ್ಶಿಸಿಯಾಗಿತ್ತು. ಕಡಲ ಅಲೆಗಳು ಎಂದಿಗಿಂತ ಸ್ವಲ್ಪ ಶಾಂತ ರೂಪವನ್ನು ಪಡೆದುಕೊಂಡಿದ್ದವು. ಕಡಲ ಕಿನಾರೆಯ ಮರಳಿನಲ್ಲಿ ಓಡಿ ಓಡಿ ಸುಸ್ತಾಗಿ ಸ್ವಲ್ಪ ನಿಂತುಕೊಂಡೆ. ಪ್ರತಿದಿನ ಎರಡು ಕಿಲೋಮೀಟರಷ್ಟಾದರೂ ಓಡುತ್ತಿದ್ದ ನನಗೆ ಇಂದು ಬಹುಬೇಗ ಆಯಾಸವಾಗಿತ್ತು. ಹಾಗೆಯೇ ವಿಶ್ರಾಂತಿಗಾಗಿ ಮರಳಿನಲ್ಲಿ ಬಿದ್ದುಕೊಂಡೆ..

"ಸರ್... ಈ ಹೂವು ಬೇಕಾ...? ಯಾವ್ ಕಲರ್ ನಾದ್ದರೂ ತಗೋಳಿ ಬರೀ ಐದು ರೂಪಾಯಿಗಳು"
ಹಿಂದಿನಿಂದ ಬಂದ ಹುಡುಗಿಯೊಬ್ಬಳು ಗುಲಾಬಿ ಹೂವಿನ ಬುಟ್ಟಿಯನ್ನು ನನ್ನ ಮುಂದೆ ಚಾಚಿ ಹೇಳಿದಳು. ಹೂವಿನ ಬುಟ್ಟಿಯಲ್ಲಿ ಹಲವು ರಂಗಿನ ಹೂವುಗಳು ತಾಜಾತನದಿಂದ ಕೂಡಿದ್ದವು. ಆಕೆಯ ಮುಖವನ್ನೊಮ್ಮೆ ನೋಡಿದೆ. ಅವಳ ಮುಖದ ಸೌಂದರ್ಯ ತಾನು ತಂದ ಹೂವಿಗಿಂತಲೂ ಹೆಚ್ಚಿನ ತಾಜಾತನದಿಂದ ಕಂಗೊಳಿಸುತ್ತಿತ್ತು. ಮುಂಜಾನೆಯ ಮಂಜನ್ನೇ ಹಿನ್ನಲೆಯಾಗಿರಿಸಿಕೊಂಡು ನಿಂತಿರುವ ಆ ಹುಡುಗಿಯು ರೂಪದಲ್ಲಿ ಯಾವ ಅಪ್ಸರೆಗಿಂತ ಕಡಿಮೆ ಇರಲಿಲ್ಲ. ಕೆಂಪು ಗುಲಾಬಿ ಬಣ್ಣದ ಲಂಗ, ಬಿಳಿಯ ಅತಿ ಶುಭ್ರವಾದ ರವಿಕೆ, ತಲೆಗೆ ಹಳದಿ ಬಣ್ಣದ ಬಟ್ಟೆಯನ್ನು ಪೇಟದಂತೆ ಸುತ್ತಿಕೊಂಡಿದ್ದಳು. ಪೇಟದಿಂದ ಇಳಿದು ಬಿದ್ದ ಉದ್ದನೆಯ ಕಪ್ಪು ಕೂದಲುಗಳು ಮುಂಜಾನೆಯ ತಂಗಾಳಿಯೊಡನೆ ಅಲೆಯಾಗಿ ಈಜುತ್ತಿವೆಯೇನೊ ಎಂಬಂತೆ ಕಾಣುತ್ತಿದ್ದವು. ಗುಲಾಬಿ ಬಣ್ಣದ ಆಕೆಯ ಕೆನ್ನೆಯ ಮುಂದೆ, ತಾಜಾ ಹೂವಿನ ಬಣ್ಣವೂ ಮಾಸಿದಂತೆ ಕಾಣುತ್ತಿತ್ತು.
ಆಕೆಯ ಸೌಂದರ್ಯವನ್ನು ನೋಡಿ ಮನಸಿನಲ್ಲಿ ಇಂಪಾದ ಭಾವವೊಂದು ಹೊಕ್ಕಂತಾಯಿತು.. ಬರಿದಾದ ಹೃದಯದಲ್ಲಿ ಸಂತಸದ ಜೀವಜಲವನ್ನು ಸಿಂಪಡಿಸಿದಂತಾಯಿತು. ಕಿತ್ತು ಹೋದ ಹೃದಯ ವೀಣೆಯ ತಂತಿಯನ್ನು ಬಿಗಿದು ಒಲವ ರಾಗವನ್ನು ನುಡಿಸಿದ್ದಳು. ಆಕೆಯ ಸೌಂದರ್ಯವನ್ನು ಸವಿಯುತ್ತಾ ಹಾಗೆಯೇ ಒಂದು ಕ್ಷಣ ಕಲ್ಪನಾ ಲೋಕದಲ್ಲಿ ತೇಲಿಹೋದೆ......
"ರೀ.....ಪ್ಲೀಸ್... ಒಂದು ಹೂವಾದ್ರೂ ತಗೋಳಿ"
ಮತ್ತೆ ಆಕೆ ಹೇಳಿದಳು.
ಆಕೆಯ ರೂಪ ನೋಡಿ ಮೈ ಮರೆತ್ತಿದ್ದ ನಾನು ಎಚ್ಚೆತ್ತುಕೊಂಡೆ..
ನನ್ನಲ್ಲಿದ್ದ ಐದು ರೂಪಾಯಿಗಳನ್ನು ಆಕೆಯ ಕೈಗೆ ಕೊಟ್ಟೆ. ತಿಳಿ ಹಳದಿ ಬಣ್ಣದ ಗುಲಾಬಿ ಹೂವೊಂದು ಕೊಟ್ಟಳು. ನಾನು ಹೂವನ್ನು ಪಡೆದು ಮತ್ತೆ ಅದೇ ಹೂವನ್ನು ಅವಳ ಕೈಗೆ ನೀಡಿ
"ನಿನ್ನ ಸೌಂದರ್ಯಕ್ಕೆ, ನನ್ನದೊಂದು ಚಿಕ್ಕ ಹೂ ಕಾಣಿಕೆ... ಈ ಹೂ ನಿನ್ನಿಂದ ಕೊಂಡದ್ದು ನಿನಗಾಗಿಯೇ, ಪ್ಲೀಸ್ ಸ್ವೀಕರಿಸು.. ಬೇಡ ಎನ್ನಬೇಡ"
ಎಂದು ಬೇಡಿಕೊಂಡೆ...
ಆಕೆ ನನ್ನಿಂದ ಆ ಹೂವನ್ನು ಪಡೆದು ಕೊಂಡಳು. ಆದರೆ ಒಂದು ಕ್ಷಣ ಕೈಯಲ್ಲಿ ಹಿಡಿದು ಹಾಗೆಯೇ ನಾನು ಕುಳಿತ್ತಿದ್ದ ಪಕ್ಕದಲ್ಲೇ ಮರಳಿನಲ್ಲಿ ಸಿಕ್ಕಿಸಿ ನನ್ನ ಮುಖವನ್ನೊಮ್ಮೆ ನೋಡಿ ನಸು ನಕ್ಕು ಹೊರಟಳು.
"ಹಲೋ... ಏಯ್... ನಿನ್ನ ಹೆಸರೇನು...? ಪ್ಲೀಸ್"
ಎಂದು ಕೂಗಿಕೊಂಡೆ.
ಅವಳು ತಿರುಗಿ ನೋಡಿ ಮತ್ತೊಮ್ಮೆ ನಕ್ಕಳು.
ಆಕೆಯ ಆ ನಗುವಿನಲ್ಲಿ ಚಂದಿರನು ಸಹ ನಾಚುವಂತಹ ಸೌಂದರ್ಯವಿತ್ತು. ಮಿಂಚಿನ ಹೊಳಪಿತ್ತು. ಹೃದಯವನ್ನು ಇರಿಯುವಂತಹ ತೀಕ್ಷ್ಣತೆ ಇತ್ತು. ಹಾಗೆಯೇ ಎದೆಯನ್ನೊಮ್ಮೆ ಗಟ್ಟಿಯಾಗಿ ಹಿಡಿದು ಕೊಂಡು ಕಡಲ ಕಿನಾರೆಯ ಮರಳಿನಲ್ಲಿ ದೊಪ್ಪನೇ ಬಿದ್ದೆ......
ಆಕೆಯ ನೆನಪಿನಿಂದ ಮನೆಗೆ ಬಂದಾಗ ಆಗಲೇ ಹತ್ತು ಗಂಟೆಯಾಗಿತ್ತು. ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪ್ಪ ಸತ್ತು ಹೋದಾಗಿನಿಂದ ಬದುಕು ಕಷ್ಟಕರವಾಗಿತ್ತು. ಎರಡು ತಿಂಗಳ ಹಿಂದೆ ಕಡಲಿನಲ್ಲಿ ಮೀನು ಹಿಡಿಯಲು ಬಹುದೂರ ಹೋಗಿದ್ದ ಅಪ್ಪ ಮರಳಿ ಬರಲೇ ಇಲ್ಲ. ಅಪ್ಪ ಚಲಿಸುತ್ತಿದ್ದ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿದ್ದರಿಂದ ಹಡಗು ಕಡಲಿನ ಮಧ್ಯೆ ನೀರಿನಲ್ಲಿ ಮುಳುಗಿ ಹೋಗಿತ್ತು. ಆ ದಿನ ಹಡಗಿನಲ್ಲಿ ಮೀನು ಹಿಡಿಯಲು ಹೋಗಿದ್ದ ಯಾವ ಹತ್ತು ಜನರ ಹೆಣವೂ ಸಿಕ್ಕಿರಲಿಲ್ಲ. ಅಪ್ಪ ಮರಳಿ ಬರಬಹುದು ಎಂಬ ಆಸೆಯಿಂದ ಕಾದ ನನಗೆ ಎರಡು ತಿಂಗಳು ಕಳೆದದ್ದು ಗೊತ್ತಾಗಲಿಲ್ಲ. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಬರಸಿಡಿಲು ಬಂದೆರಗಿತ್ತು. ಅಪ್ಪ ಹೊಸದಾದ ಹಡಗು ಕಟ್ಟಿಸಲು ಕೋ- ಅಪರೇಟಿವ್ ಬ್ಯಾಂಕ್ನಿಂದ ಐದು ಲಕ್ಷ್ಯ ಸಾಲ ಪಡೆದಿದ್ದರಂತೆ. ಸಾಲದ ಕಂತು ಆರು ತಿಂಗಳಿನಿಂದ ಸರಿಯಾಗಿ ಕಟ್ಟಿಲ್ಲ ಎಂಬ ಕಾರಣಕ್ಕೆ ಅಪ್ಪ ಕಾಣೆಯಾದ ಎರಡು ತಿಂಗಳಲ್ಲೇ ಬ್ಯಾಂಕಿನವರು ಇದ್ದ ಒಂದು ಮನೆಯನ್ನೂ ಹರಾಜು ಮಾಡಿದರು. ಅಪ್ಪ ಕಳೆದುಕೊಂಡ ದುಃಖ ಒಂದು ಕಡೆಯಾದರೆ. ಮನೆ ಹರಾಜು ಮಾಡಿದ ದುಃಖ ಇನ್ನೊಂದು ಕಡೆ ಇತ್ತು. ನನ್ನ ಎದುರು ಮನೆಯ ಪೂವಯ್ಯ ನನ್ನ ಕಷ್ಟ ನೋಡಲಾರದೆ ತನ್ನ ಎರಡನೇ ಅಂತಸ್ತಿನಲ್ಲಿರುವ ಚಿಕ್ಕ ಮನೆಯೊಂದನ್ನು ವಾಸಿಸಲು ನನಗೆ ನೀಡಿದ್ದರು. ಅಪ್ಪ ಇಲ್ಲದ್ದರಿಂದ ನನ್ನ ನಾಲ್ಕನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ಓದು ಸಹ ಅರ್ದಕ್ಕೆ ನಿಂತು ಹೋಗಿತ್ತು. ಈ ಆಘಾತದಿಂದ ಕಣ್ಣೀರು ಹಾಕುತ್ತಿದ್ದ ನನಗೆ ಈ ದಿನ ಬದುಕಿನಲ್ಲಿ ಮಿಂಚೊಂದು ಗೋಚರಿಸಿದ ಅನುಭವವಾಯಿತು....
ಮಾರನೆಯ ದಿನ ಬೆಳಗ್ಗೆ ಮತ್ತೆ ಕಡಲ ಕಿನಾರೆಯ ಮರಳಿನಲ್ಲಿ ಓಟ ಆರಂಭಿಸಿದೆ. ನನ್ನ ಕಣ್ಣುಗಳು ಮತ್ತೆ ಆ ಹುಡುಗಿಯನ್ನು ಹುಡುಕುತ್ತಿದ್ದವು. ಎಲ್ಲಿಯೂ ಕಾಣಲಿಲ್ಲ. ಕಡಲ ತೀರದಲ್ಲಿ ಹೂವಿನ ಅಂಗಡಿ ಅಂತ ಇದ್ದದ್ದು ಲಿಂಗಪ್ಪನದು ಮಾತ್ರ. ಅವನ ಮಗಳು ಕಮಲಿ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಬಂದ ನಮ್ಮಂತವರಿಗೆ ಗುಲಾಬಿ ಹೂಗಳನ್ನು ಮಾರುತ್ತಿದ್ದಳು. ಕಮಲಿಯನ್ನು ಬಿಟ್ಟು ಬೇರೆಯವರು ಈ ರೀತಿ ಹೂಗಳನ್ನು ಮಾರಿದವರು ನಾನು ಎಂದಿಗೂ ನೋಡೇ ಇರಲಿಲ್ಲ. ಮತ್ತೆ ಅವಳು ಸಿಗಬಹುದೇನೋ ಎಂದು ಎಲ್ಲಾ ಕಡೆ ದೃಷ್ಟಿ ಹಾಯಿಸಿದೆ. ಎಲ್ಲಿಯೂ ಕಾಣದಾದಳು. ಅಲ್ಲೇ ಇರುವ ಲಿಂಗಪ್ಪನ ಅಂಗಡಿಗೆ ಹೋದೆ. ಕಮಲಿಯೂ ಅಲ್ಲೇ ಇದ್ದಳು. 

"ಕಮಲಿ... ನಿನ್ನ ಬಿಟ್ಟು ಕಡಲ ತೀರದಲ್ಲಿ ಯಾರಾದರೂ ಗುಲಾಬಿ ಹೂ ಮಾರ್ತಾರ...?"
ಎಂದೆ..
ಆಕೆ ಇಲ್ಲವೆಂದು ತಲೆಯಾಡಿಸಿದಳು..
ನಾನು ನಂಬಲಿಲ್ಲ..
"ಇಲ್ಲ ಕಮಲಿ....ನಿನ್ನೆ ಹೊಸ ಹುಡುಗಿಯೊಬ್ಬಳು ಗುಲಾಬಿ ಮಾರಿದ್ದನ್ನು ನಾನೇ ನೋಡಿದ್ದೇನೆ"
"ಅಯ್ಯೋ.....ಅದಾ ನಿನ್ನೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ನಾಲ್ಕೈದು ಹುಡುಗಿಯರು ಪಿಕ್ನಿಕ್ ಗೆ ಅಂತ ಇಲ್ಲಿಗೆ ಬಂದಿದ್ದರು. ಅವರಲ್ಲಿ ಒಬ್ಬಳು ತನ್ನ ಗೆಳತಿಯರೊಡನೆ ಒಂದು ಗುಲಾಬಿಯನ್ನಾದರೂ ಇಲ್ಲಿ ಮಾರಾಟ ಮಾಡಿ ತೋರಿಸುತ್ತೇನೆಂದು ಬೆಟ್ಸ್ ಕಟ್ಟಿಕೊಂಡಿದ್ದಳು. ಅದರಂತೆ ಅವಳು ನನಗೆ ನೂರು ರೂಪಾಯಿಗಳನ್ನು ಕೊಟ್ಟು ನನ್ನ ಹೂ ಬುಟ್ಟಿಯನ್ನು ತೆಗೆದುಕೊಂಡು ಒಂದು ಗುಲಾಬಿಯನ್ನು ಮಾರಾಟಮಾಡಿ ತನ್ನ ಗೆಳತಿಯರಿಂದ ಸಾವಿರ ರೂಪಾಯಿಗಳನ್ನು ಗೆದ್ದು ಕೊಂಡಿದ್ದಳು"
ಕಮಲಿ ನಿನ್ನೆ ನಡೆದ ಎಲ್ಲಾ ವಿಷಯವನ್ನು ಹೇಳಿದಳು.
" ಬಾ ..ಪ್ರಕಾಶ...ಇಲ್ಲಿ ಕೂತ್ಕೊ, ನಿಮ್ಮಪ್ಪ ಕಾಣೆಯಾಗಿ ಇಲ್ಲಿಗೆ ಎರಡು ತಿಂಗಳಾಯಿತು. ನಿಮ್ಮ ಹೊಸ ಹಡಗಿಗೆ ಪೂಜೆಮಾಡಲು ಪ್ರತಿದಿನವೂ ನಾನೇ ಹೂಗಳನ್ನು ಕೊಡುತ್ತಿದ್ದೆ. ನಿಮ್ಮಪ್ಪ ಎಷ್ಟು ಒಳ್ಳೆಯವರು. ಶ್ರಮ ಜೀವಿ , ನೀನೂ ಏನಾರ ಕೆಲಸ ಮಾಡು, ಸುಮ್ನೆ ಕಾಲ ನೂಕಬೇಡ, ನನ್ನ ಮಗಳು ಕಮಲಿಯನ್ನೇ ನೋಡು, ಇನ್ನೂ ಒಂಬತ್ತನೇ ತರಗತಿ, ನಿನಗಿಂತ ಐದು ವರ್ಷ ಚಿಕ್ಕವಳು ದಿನ ಬೆಳಗ್ಗೆ ಒಂದೈವತ್ತು ಗುಲಾಬಿ ಹೂಗಳನ್ನು ಮಾರಿ, ಆಮೇಲೆ ಶಾಲೆಗೆ ಹೋಗ್ತಾಳೆ. ಇಲ್ದಿದ್ರೆ ನಮ್ ಜೀವನಾನೂ ಕಷ್ಟವೇ..."
ಲಿಂಗಪ್ಪ ಮುದ್ದಾಗಿದ ತನ್ನ ಮಗಳು ಕಮಲಿಯ ತಲೆಯನ್ನು ಸವರುತ್ತಾ ಹೇಳಿದನು.
ಲಿಂಗಪ್ಪನ ಮಾತು ಸರಿಯೆನಿಸಿತು. ನಾನು ಎರಡು ತಿಂಗಳಿನಿಂದಲೂ ಹಣಕ್ಕೆ ಪರದಾಡುತ್ತಿದ್ದೆ...
"ಲಿಂಗಣ್ಣ ಬೆಂಗಳೂರಿಗೆ ಹೋಗಬೇಕೆಂದು ಇದ್ದೇನೆ.. ಯಾರಾದ್ರೂ ಪರಿಚಯದವರಿದ್ರೆ ಹೇಳಿ ಕೆಲಸ ಕೊಡಿಸ್ತೀಯಾ..?"
ಲಿಂಗಣ್ಣ ಬೆಂಗಳೂರಿನಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡುವಂತೆ ನನ್ನ ಕೈಯಲ್ಲಿ ವಿಳಾಸವೊಂದನ್ನು ಕೊಟ್ಟರು. ಹೊಟಲ್ ವಿಳಾಸವು ಮೌಂಟ್ ಕಾರ್ಮಲ್ ಕಾಲೇಜಿನ ಎದುರುಗಡೆ ಎಂದು ಬರೆದಿದ್ದನ್ನು ನೋಡಿ ಖುಷಿಯಾದೆ. ಕಡಲ ಕಿನಾರೆಯಲ್ಲಿ ಸಿಕ್ಕ ಹುಡುಗಿಯನ್ನು ಮತ್ತೆ ನೋಡಬಹುದೆಂದು ಮನಸು ಹಾತೊರೆಯುತ್ತಿತ್ತು...
ಆ ಹುಡುಗಿಯನ್ನು ನೋಡಿದಂದಿನಿಂದ ನನ್ನಲ್ಲಿ ಸಾಕಷ್ಟು ಬದಲಾವಣೆಯುಂಟಾಗಿತ್ತು. ಆಕೆ ಸೌಂದರ್ಯವತಿ ಅವಳನ್ನು ಪಡೆಯಬೇಕು ಎನ್ನುವ ಸ್ವಾರ್ಥಕ್ಕಿಂತ. ಅವಳಿರವಂತೆ ನಾನು ಸಹ ಆತ್ಮ ವಿಶ್ವಾಸದಿಂದಿರಬೇಕು. ಜೀವನದಲ್ಲಿ ಸಂತೋಷದಿಂದ ಇರಬೇಕು ಎನ್ನುವ ಹುಮ್ಮಸ್ಸು ಬಂದಿತ್ತು. ಒಣಗಿ ಹೋಗುತ್ತಿರುವ ಗಿಡಕ್ಕೆ ಸೋನೆ ಮಳೆಯು ಬಿದ್ದಾಗ ಹೇಗೆ ಮತ್ತೆ ಹಸಿರು ಚಿಗುರೊಡೆಯುತ್ತದೆಯೋ ಹಾಗೆಯೇ ಅವಳ ನಡೆಯನ್ನು ಕಂಡಾಗ ನನ್ನ ಮನಸಿನಲ್ಲಿ ಹೊಸ ಹೊಸ ಆಸೆಗಳು ಮೂಡಲಾರಂಭಿಸಿದವು. ಸೂರ್ಯಕಾಂತಿಯ ಹೂವು ಸೂರ್ಯನತ್ತ ಆಕರ್ಷಣೆಗೊಂಡಂತೆ,.. ಹುಣ್ಣಿಮೆಯ ಚಂದ್ರನನ್ನು ಕಂಡಾಗ ಅಲೆಗಳು ಮೇಲೇಳುವಂತೆ,... ಕೋಗಿಲೆಯು ಮಾಮರದಲ್ಲಿ ಇಂಪಾಗಿ ಹಾಡಿದಂತೆ,... ದುಂಬಿಗಳು ಹೂಗಳನ್ನು ಬಯಸಿದಂತೆ,... ಸೂರ್ಯನ ಸುತ್ತ ಭೂಮಿ ತಿರುಗಿದಂತೆ,... ಎಲ್ಲವಕ್ಕೂ ಯಾವುದೋ ಅಗೋಚರ ಶಕ್ತಿಯೊಂದು ಸೆಳೆದಿರುತ್ತವೆ. ನನ್ನಲ್ಲಿಯೂ ಸಹ ಯಾವುದೋ ಒಂದು ಸೆಳೆತ ಮೋಡಿಯನ್ನುಂಟು ಮಾಡಿತ್ತು.... ಹಬ್ಬಲು ಬಯಸಿದ ಬಳ್ಳಿಯು ತನಗೆ ಆಸರೆಯಾಗುತ್ತಿರುವ ಮರ ಯಾವುದೆಂದು ನೋಡುತ್ತದೆಯೆ...? ಹಾಗೆಯೇ ನನಗೆ ಅವಳು ಯಾರಾದರೇನು..? ಬದುಕಿನಲ್ಲಿ ಹುಮ್ಮಸ್ಸು ತುಂಬಿದ ವಿಷಯ ಯಾವುದಾದರೇನು..? ಮರಳುಗಾಡಿನಂತೆ ಬತ್ತಿ ಹೋದ ನನ್ನ ಬದುಕಿಗೆ ಆ ಹುಡುಗಿಯ ನೋಟವೇ ನನ್ನಲ್ಲಿ ಬದುಕಿನ ಬಗ್ಗೆ ಮತ್ತೆ ಆಸೆ ಚಿಗುರಿಸಿತ್ತೇ...? ಗೊತ್ತಿಲ್ಲ....!! ಆದರೆ ಯಾಕೆ ಹೀಗಾಯಿತು...? ಇದೆಲ್ಲಾ ಹೇಗೆ ..? ಇದು ಸಾದ್ಯವೇ...? ಎಂಬ ಪ್ರಶ್ನೆಗಳು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ...ನಾನಿದ್ದ ಪರಿಸ್ಥಿತಿಗೆ ಯಾವುದೋ ಒಂದು ಸೆಳೆತ ನನ್ನನ್ನು ಜಾಗೃತ ಗೊಳಿಸಿರಬೇಕು ಅಷ್ಟೆ.....

ಮಾರನೇ ದಿನವೇ ಲಿಂಗಣ್ಣ ಕೊಟ್ಟ ವಿಳಾಸ ಹಿಡಿದು ಬೆಂಗಳೂರಿಗೆ ಹೊರಟೆ. ಮೌಂಟ್ ಕಾರ್ಮೆಲ್ ಕಾಲೇಜಿನ ಎದುರುಗಡೆ ಸ್ವಲ್ಪ ದೂರದಲ್ಲಿರುವ ಹೋಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಾನು ಬಯಸಿದ್ದರೆ ಮತ್ತೆ ಆ ಹುಡುಗಿಯನ್ನು ನೋಡುವ ಪ್ರಯತ್ನ ಮಾಡಬಹುದಿತ್ತು. ಆದರೆ ನಾನು ಕಾಲೇಜಿನ ಕಡೆಗೆ ಮುಖ ಎತ್ತಿಯೂ ನೋಡಲಿಲ್ಲ. ಅವಳೊಡನೆ ಪ್ರೀತಿ, ಪ್ರೇಮ ಅಂತ ಹಿಂದೆ ಸುತ್ತುವ ಮನಸ್ಥಿತಿಯೂ ನನಗಿರಲಿಲ್ಲ. ಹಾಗೇನಾದರೂ ಮಾಡಿದ್ದರೆ ಹೊಟೆಲ್ ಕೆಲಸ ಮಾಡುವ ನನ್ನಂತವನಿಗೆ ಅವಮಾನ ಕಟ್ಟಿಟ್ಟ ಬುತ್ತಿ. ತಂದೆ ತಾಯಿಯನ್ನು ಕಳೆದುಕೊಂಡು ಬದುಕನ್ನು ಕಟ್ಟಲು ಹೋರಾಡಬೇಕಿದ್ದ ನಾನು ಹುಡುಗಿಯ ಹಿಂದೆ ಬಿದ್ದು ಪ್ರೀ ಪ್ರೇಮ ಅಂತ ಸುತ್ತುವುದಾದರೂ ಹೇಗೆ..? ಕಾಣದ ಬದುಕಿಗೆ ಆಸೆ ಪಡುವುದಕ್ಕಿಂತ, ನೋಡಿದ ಬದುಕನ್ನು ಕಲ್ಪಿಸಿಕೊಳ್ಳುವುದು ಸುಖವೆಂದುಕೊಂಡೆ. ಬದುಕಿನಲ್ಲಿ ಸಾಧಿಸುವುದು ಬೇಕಾದಷ್ಟಿತ್ತು. ಬಾಲ್ಯದಲ್ಲಿ ಅಪ್ಪನೊಂದಿಗೆ ಮೀನು ಹಿಡಿಯಲು ಹೋಗುತ್ತಿದ್ದ ನನಗೆ ಕಡಲು ಸಾಕಷ್ಟು ಪಾಠವನ್ನು ಕಲಿಸಿತ್ತು. ಜೀವ ಬಿಗಿ ಹಿಡಿದು ಬಿರುಗಾಳಿಗೆ ಎದೆಯೊಡ್ಡಿ ಕಡಲ ಒಡಲನ್ನು  ಪ್ರವೇಶಿಸಿ, ಮೀನು ಹಿಡಿದು ಬದುಕನ್ನು ಸಾಗಿಸುವ ಕಷ್ಟವನ್ನು ಅಪ್ಪ ನನಗೆ ಬಾಲ್ಯದಲ್ಲೀಯೇ ಪರಿಚಯಿಸಿದ್ದರು.....
ನಾನು ನನ್ನ ಇಂಜಿನಿಯರಿಂಗ್ ಓದನ್ನು ಮತ್ತೆ ಬೆಂಗಳೂರಿಗೆ ವರ್ಗಾಯಿಸಿಕೊಂಡೆ. ಹೋಟೆಲ್ ಕೆಲಸ ಮಾಡುತ್ತಲೇ ನನ್ನ ಓದನ್ನು ಪೂರ್ಣ ಗೊಳಿಸಿಕೊಂಡೆ. ಎರಡು ವರ್ಷಗಳ ನಂತರ ಒಳ್ಳೆ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಈಗ ನನಗೆ ಆರಂಕಿಯ ಸಂಬಳ. ಅಂದು ಕಳೆದುಕೊಂಡಕ್ಕಿಂತ ಇಂದು ಹೆಚ್ಚಾಗಿಯೇ ಗಳಿಸಿದ್ದೇನೆ.
ಬಸ್ಸಿನಲ್ಲಿ ಕೂತು ನಮ್ಮೂರಿಗೆ ಹೊರಟಿದ್ದೆ. ನಮ್ಮೂರಿನ ಕಡಲಿನ ವಾಸನೆ... ಭೋರ್ಗರೆತದ ಸದ್ದು ಇಂದ್ರಿಯಗಳಿಗೆ ತಲುಪಿದ ಕೂಡಲೇ ನಿದ್ದೆಯಿಂದ ಎಚ್ಚೆತ್ತುಕೊಂಡೆ. ಐದು ವರ್ಷದ ನಂತರ ನಮ್ಮೂರನ್ನು ನೋಡಿದ ಕೂಡಲೇ ಏನೋ ತೃಪ್ತಿಯ ಭಾವ ಮುಖದಲ್ಲಿ ಮೂಡಿತು. ನಮ್ಮ ಮನೆಯನ್ನು ಅಂದು ಹರಾಜಿನಲ್ಲಿ ಕೊಂಡವರು ಇಂದು ಮಾರಲು ಹೊರಟಿದ್ದರು. ಈ ವಿಷಯವನ್ನು ಪೂವಯ್ಯನವರು ಪತ್ರ ಬರೆದು ತಿಳಿಸಿದ್ದರು. ಹದಿನೈದು ಲಕ್ಷ ರೂಪಾಯಿಗಳಿಗೆ ನಮ್ಮ ಮನೆಯನ್ನು ಮತ್ತೆ ಕೊಂಡುಕೊಂಡೆ. ಒಂದು ವಾರ ರಜೆಯ ಯೋಜನೆ ಹಾಕಿಕೊಂಡು ಊರಲ್ಲೇ ಆರಾಮಾಗಿ ಇರೋಣವೆಂದು ಬಂದಿದ್ದೆ. ಮನೆ ಕೊಂಡುಕೊಳ್ಳುವ ಕಛೇರಿ ಕೆಲಸದ ಭರಾಟೆಯಲ್ಲಿ ಸಮುದ್ರ ತೀರದ ಕಡೆಗೆ ಹೋಗಿರಲಿಲ್ಲ. ಐದನೆಯ ದಿನ ಮುಂಜಾನೆ ಜಾಗಿಂಗ್ ಸೂಟು ಹಾಕಿಕೊಂಡು ಸಮುದ್ರ ತೀರದ ಕಡೆಗೆ ಹೊರಟೆ.
ಸೂರ್ಯ ಆಗ ತಾನೆ ಕಡಲ ಅಲೆಗಳ ಮೇಲೆ ಹೊಂಗಿರಣವನ್ನು ಹರಡಿದ್ದನು. ಕಡಲ ಅಲೆಗಳು ಶಾಂತ ಸ್ವರೂಪವನ್ನು ಪಡೆದಿದ್ದವು. ಕೇವಲ ಅರ್ದ ಕಿಲೋಮೀಟರ್ ಓಡಿ ಬಂದ ನನಗೆ ಆಗಲೇ ಆಯಾಸವಾಗಿ ಹೋಗಿತ್ತು. ವಿಶ್ರಾಂತಿಗಾಗಿ ಅಲ್ಲೇ ಮರಳ ಮೇಲೆ ಬಿದ್ದು ಕೊಂಡೆ.
" ರೀ... ಹೂವು ಬೇಕಾ...? ಯಾವ ಕಲರ್ ಹೂವನ್ನು ತೆಗೆದುಕೊಳ್ಳಿ ಬರೀ ಹತ್ತು ರೂಪಾಯಿಗಳು ಮಾತ್ರ"
ಹಿಂದಿನಿಂದ ಬಂದ ಹುಡುಗಿಯೊಬ್ಬಳು ತನ್ನ ಗುಲಾಬಿ ಹೂವಿನ ಬುಟ್ಟಿಯನ್ನು ನನ್ನ ಮುಂದೆ ಚಾಚಿ ಹೇಳಿದಳು. ತಕ್ಷಣ ಅವಳನ್ನು ನೋಡಿದೆ. ಕೆಂಪು ಬಣ್ಣದ ಲಂಗ, ಬಿಳಿಯ ಶುಭ್ರವಾದ ರವಿಕೆ. ತಲೆಗೆ ಹಳದಿ ಬಣ್ಣದ ಬಟ್ಟೆಯನ್ನು ಪೇಟದಂತೆ ಕಟ್ಟಿದ್ದಳು. ಅದೇ ಸೌಂದರ್ಯ, ಅದೇ ರೂಪ, ಮತ್ತೆ ಅಂದು ಸಿಕ್ಕ ಹುಡುಗಿಯೇನಾದರೂ ಬಂದಿರಬಹುದೇ...? ಎಂದು ಯೋಚಿಸುತ್ತಿರುವಾಗಲೇ..
"ರೀ... ಒಂದನ್ನಾದರೂ ತಗೋಳಿ ಎಂದು, ತಿಳಿ ಹಳದಿ ಬಣ್ಣದ ಹೂವೊಂದನ್ನು ತೆಗೆದು ಕೊಟ್ಟಳು"
ನಾನು ಹೂವೊಂದನ್ನು ಪಡೆದು, ಮತ್ತೆ ಅವಳ ಕೈಗೆ ನೀಡಿ
" ಇದು ನಿನ್ನಿಂದ... ನಿನಗಾಗಿಯೇ... ಈ ಹೂವನ್ನು ಕೊಂಡದ್ದು, ನಿನ್ನ ಸೌಂದರ್ಯಕ್ಕೆ ನನ್ನದೊಂದು ಹೂ ಕಾಣಿಕೆ"
ಎಂದು ಆಕೆಯ ಕೈಗೆ ಕೊಟ್ಟೆ... ಹೂವನ್ನು ಪಡೆದ ಅವಳು ತನ್ನ ನಗುವನ್ನು ತೋರಿಸಿ ಓಡಿ ಹೋದಳು.
" ಹಲೋ.... ಏಯ್ ...ನಿನ್ನ ಹೆಸರೇನು..?"
ಎಂದು ಕೂಗಿಕೊಂಡೆ.
ಸ್ವಲ್ಪ ದೂರ ಹೋದ ಅವಳು ತಿರುಗಿ ನೋಡಿ.
" ಕಮಲೀೕೕ...."
ಎಂದು ಹೇಳಿ ನಾಚುತ್ತಾ ಓಡಿ ಹೋದಳು.
ಈ ಸಲ ಬಿಡಬಾರದೆಂದು ಅವಳ ಹಿಂದೆಯೇ ಓಡಿದೆ. ಅವಳು ಲಿಂಗಣ್ಣನ ಅಂಗಡಿಯ ಮುಂದೆ ನಿಂತಳು.
ನಾನು ಎದರುಸಿರು ಬಿಡುತ್ತಾ
"ನನ್ನ ಮದುವೆ ಆಗ್ತೀಯಾ ಎಂದೆ"
ಅವಳು ಉತ್ತರಿಸಲಿಲ್ಲ. ಅವಳ ಕಣ್ಣುಗಳು ನೆಲವನ್ನು ನೋಡುತ್ತಿದ್ದವು. ಮುಂಜಾನೆಯ ಮಂಜನ್ನೇ ಹಿನ್ನಲೆಯಾಗಿಸಿಕೊಂಡು ನಿಂತ ಅವಳು ರೂಪದಲ್ಲಿ ಯಾವ ಅಪ್ಸರೆಗಿತಲೂ ಕಡಿಮೆಯಿರಲಿಲ್ಲ..
ಲಿಂಗಣ್ಣ ಅಂಗಡಿಯಿಂದ ಹೊರಬಂದು
"ನಿನ್ನ ಉಪಕಾರ ಮರೆಯೊಲ್ಲಪ್ಪಾ... ನನ್ನ ಮಗಳು ಕಮಲಿಯನ್ನು ಒಪ್ಪಿರುವೆ. ನಿನ್ನಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ"
ಎಂದು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡರು. ನಾನು ಸಹ ಲಿಂಗಪ್ಪ ಮಾಡಿದ ಸಹಾಯ ಮರೆತಿರಲಿಲ್ಲ. ಅಂದು ಯಾರೋ ಅಂದು ಸಿಕ್ಕ ಹುಡುಗಿಗಿಂತ, ನನಗೆ ಬದುಕಲು ಸರಿ ದಾರಿ ತೋರಿದ ಲಿಂಗಪ್ಪನ ಕುಟುಂಬ ಇಂದು ಆಪ್ತವಾಗಿ ಕಂಡಿತು. ಕಮಲಿ ಹೂವನ್ನು ಮಾರಿಕೊಂಡೇ ಓದಿದವಳು. ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದುದು ಕಮಲಿಯ ಚಿಕ್ಕಪ್ಪನವರದೇ ಆಗಿತ್ತು. ಕಮಲಿ ತನ್ನ ಚಿಕ್ಕಪ್ಪನಿಗೆ ಪತ್ರ ಬರೆಯುವಾಗ ಪ್ರತಿಸಾರಿಯೂ ನನ್ನ ಬಗ್ಗೆ ಒಂದೆರಡು ಸಾಲುಗಳನ್ನು ಬರೆದು ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಈಗ ಕಮಲಿ ದಂತದ ಗೊಂಬೆಯಂತಾಗಿದ್ದಳು. ಮತ್ತೊಮ್ಮೆ ಕಮಲಿಯನ್ನು ನೋಡಿದೆ. ಹಳದಿ ಬಣ್ಣದ ಪೇಟದಿಂದ ಇಳಿ ಬಿದ್ದ ಆಕೆಯ ಕಪ್ಪನೆ ಕೂದಲುಗಳು ತಂಗಾಳಿಯಲ್ಲಿ ಅಲೆಯಂತೆ ಹಾರಾಡುತ್ತಿದ್ದವು........
                                 
- ಪ್ರಕಾಶ್ ಎನ್ ಜಿಂಗಾಡೆ

Friday, 5 February 2016

ಕನ್ನಡ ಪಾಠ

ಕನ್ನಡ ಪಾಠ (ಸಣ್ಣ ಕತೆ)

ಬಿಡುವಿನ ವೇಳೆ ನಾನು, ರಾಕೇಶ್ ಮತ್ತು ಗೌರಿಶಂಕರ್ ಸ್ಟ್ಯಾಫ್ ರೂಮಲ್ಲಿ ಕುಳಿತು ಆಗಾಗ ತಮಾಷೆ ಮಾಡಿಕೊಂಡು ನಗುತ್ತಿದ್ದೆವು.ರಾಕೇಶ್ ಕನ್ನಡ ಕಲಿಯುವ ಇಂಗಿತ ವ್ಯಕ್ತಪಡಿಸಿದ..
ಆತ ಬಿಹಾರ್ ನವನು. ಬೆಂಗಳೂರಿಗೆ ಬಂದು ಎರಡು ವರ್ಷ ಮಾತ್ರ ಆಗಿತ್ತು. ಈತ ನಮ್ಮ ಶಾಲೆಯ ಹಿಂದಿ ಪಂಡಿತ.
"ಇಬ್ಬರು ಕನ್ನಡ ಟೀಚರ್ ನನ್ನ ಜೊತೆಯಲ್ಲಿದ್ದೀರಿ...ಜೊತೆಯಲ್ಲೇ ಕೂರುತ್ತೇವೆ ಸ್ವಲ್ಪ ಕನ್ನಡವಾದರೂ ಕಲಿಸುತ್ತೀರಾ....?
ಎಂದು ನನ್ನ ಮತ್ತು ಗೌರಿಶಂಕರ್ ಕಡೆ ತಿರುಗಿ ಹೇಳಿದ.ಆತನ ಉತ್ಸಾಹ ನೋಡಿ ನಾವು ಕನ್ನಡ ಕಲಿಸಲು ಒಪ್ಪಿಕೊಂಡೆವು. ಬಿಹಾರದವನು ಕನ್ನಡ ಕಲಿಯುತ್ತೇನೆ ಎಂದಾಗ ನಮಗೂ ಖುಷಿಯಾಯಿತು.ಅಂದಿನಿಂದ ಪ್ರತಿದಿನ ಐದದು ಕನ್ನಡ ಪದಗಳನ್ನು ಇಂಗ್ಲಿಷಿನಲ್ಲಿ ಬರೆದುಕೊಂಡು ಕಲಿಯತೊಡಗಿದ...
ಎಷ್ಟೇ ಪ್ರಯತ್ನಿಸಿದರೂ ಕನ್ನಡ ನಾಲಿಗೆಗೆ ಬರುತ್ತಿರಲಿಲ್ಲ. ತನ್ನ ಈ ಕಷ್ಟವನ್ನು ಒಂದು ದಿನ ನಮ್ಮ ಶಾಲೆಯ ಬಸ್ ಕಂಡಕ್ಟರ್ ಬಳಿ ಹೇಳಿಕೊಂಡ. ಆತ
" ಮೊದಲು ಕನ್ನಡದ ಕೆಟ್ಟ ಕೆಟ್ಟ ಪದಗಳನ್ನು ಕಲಿಯಿರಿ. ಉಳಿದ ಪದಗಳು ತಾನಾಗಿಯೇ ಬರುತ್ತವೆ"
ಎಂಬ ತರ್ಲೆ ಐಡಿಯಾವನ್ನು ರಾಕೇಶನ ಕಿವಿಯಲ್ಲಿ ತುಂಬಿದ. ಬಸ್ ಕಂಡಕ್ಟರ್ ನ ಸಲಹೆ ರಾಕೇಶನಿಗೆ ಬಹಳ ಹಿಡಿಸಿತು.ಅಂದಿನಿಂದ ಅವನ ಚಿತ್ತ ಕೆಟ್ಟ ಪದಗಳ ಕಡೆಗೆ ನೆಟ್ಟಿತ್ತು. ಶಾಲೆಯ ಹೊರಗೆ. ಬೀದಿಯಲ್ಲಿ, ಸಂತೆಯಲ್ಲಿ, ಪೋಕರಿ ಹುಡುಗರ ಜಗಳ, ಹೀಗೆ ಹಲವು ಕಡೆಯಲ್ಲಿ ಕೇಳಿದ ಹೊಸ ಪದಗಳನ್ನು ನೆನಪಿಟ್ಟುಕೊಂಡು ನಮ್ಮಿಂದ ಅರ್ಥ ತಿಳಿದುಕೊಳ್ಳುತ್ತಿದ್ದ.
"ಬೇಡ ಈ ರೀತಿ ಕಲಿಯುವುದು ಬೇಡ, ಕಲಿತರೆ ಸರಿಯಾಗಿ ಕಲಿ. ಇಂತಹ ಪದಗಳಿಗೆ ಅರ್ಥ ಹೇಳುವುದು ನಮಗೂ ಮುಜುಗರವಾಗುತ್ತೆ"
ಎಂದು ಹೇಳಿ ನಾನು ಕನ್ನಡ ಕಲಿಸುವುದನ್ನು ನಿಲ್ಲಿಸಿಬಿಟ್ಟೆ. ಆದರೆ ಅವನು ಮಾತ್ರ ಬಿಡಲಿಲ್ಲ.
ಅವನು ವಾಸವಾಗಿದ್ದ ಮನೆಯ ಎರಡನೇ ಅಂತಸ್ತಿನಲ್ಲಿ ಗಂಡ ಹೆಂಡತಿಯರಿಬ್ಬರು ವಾಸವಾಗಿದ್ದರು.ಅವರು ಏನೇ ಮಾತನಾಡಿದರೂ ರಾಕೇಶನ ಮನೆಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆಗಾಗ ಆ ದಂಪತಿಗಳ ಜಗಳ ನಡೆಯುತ್ತಲೇ ಇತ್ತು. ಒಂದು ದಿನ ಆ ಜಗಳ ಭಯಾನಕ ರೂಪ ಪಡೆದುಕೊಂಡಿತ್ತು. ರಾತ್ರಿಯಲ್ಲೆಲ್ಲಾ ಅವರದು ರುದ್ರತಾಂಡವ.ಬೈಗುಳಗಳ ಸರಮಾಲೆಯೇ ಹರಿಯುತು.ಆದರೆ ಈ ಮಹಾಶಯ ಗೋಡೆಗೆ ಕಿವಿಯಿಟ್ಟು ಕೆಲವು ಕನ್ನಡ ಪದಗಳನ್ನು ತನ್ನ ಮೆದುಳಿನಲ್ಲಿ ಸಂಗ್ರಹಿಸಿಕೊಂಡ. ಆ ದಿನ ರಾಕೇಶನ ಶಬ್ಧಕೋಶದಲ್ಲಿ ಹೊಸ ಹೊಸ ಪದಗಳು ಸೇರಿಕೊಂಡಿದ್ದವು.
ಮಾರನೇ ದಿನ ಶಾಲೆಗೆ ಬಂದಾಗ ರಾಕೇಶ್ ಮನೆಯಲ್ಲಿ ನಡೆದ ಗಂಡ ಹೆಂಡತಿಯರ ಜಗಳದ ವಿಷಯವನ್ನು ಚರ್ಚಿಸಿದನು.
" ಇಲ್ಲಿಯ ಜನರಲ್ಲಿ ಅದೇನು ಸಂಸ್ಕೃತಿ.....? ಅದೇನು ಗೌರವ......? ಜಗಳದಲ್ಲೂ ಹೆಂಡತಿಯು ಗಂಡನಿಗೆ ಅದೆಷ್ಟು ಗೌರವ ಕೊಡುತ್ತಾಳೆ..."
ಎಂದನು
ಆತನ ಮಾತು ನನಗೆ ನಂಬಲಾಗಲಿಲ್ಲ
"ಏನು...???!!!! ..ಜಗಳದಲ್ಲೂ ಗಂಡನಿಗೆ ಮರ್ಯಾದೆಯೇ...?"
ಎಂದು ಕೇಳಿದೆ.
"ಹೌದು...ಗಂಡ ಹೆಂಡತಿಗೆ ಭಯಂಕರವಾಗಿ ಬಯ್ಯುತ್ತಿದ್ದರೂ...ಹೆಂಡತಿ ಮಾತ್ರ ಗಂಡನಿಗೆ ನೀನು ನಾರದ ಮುನಿ, ನಾರದ ಮುನಿ, ಎಂದು ಅಷ್ಟು ಮಾತ್ರ ಬಯ್ಯುತ್ತಿದ್ದಳು...ಯಾರಿಗೋ ನಾರದಮುನಿಯಂತೆ ಫಿಟ್ಟಿಂಗ್ ಇಟ್ಟಿರಬೇಕು.ಅದಕ್ಕೆ ಈ ಜಗಳ ನಡೆಯುತ್ತಿತ್ತು...ನಮ್ಮ ಬಿಹಾರದಲ್ಲಾಗಿದ್ದರೆ ಹಂಡತಿಯರ ಬಾಯಲ್ಲಿ ಒಳ್ಳೆ ಮಾತುಗಳು ಬರುತ್ತಿರಲಿಲ್ಲ..? ಇಲ್ಲಿಯವರು ಗಂಡ ತಪ್ಪು ಮಾಡಿದರೂ ಗಂಡನನ್ನು ಗೌರವದಿಂದಲೇ ಕಾಣುತ್ತಾರೆ. ಆ ಹೆಂಗಸು ಅಷ್ಟು ಕೆಟ್ಟ ಪದಗಳನ್ನು ಗಂಡನ ಮೇಲೆ ಉಪಯೋಗಿಸಲಿಲ್ಲ...ಜಗಳದಲ್ಲೂ ಗಂಡನಿಗೆ ಕೊಡಬೇಕಾದ ಗೌರವ ಕೊಡುತ್ತಿದ್ದಳು....!!
ಎಂದು ಹೇಳಿ ಸುಮ್ಮನಾದ
ರಾಕೇಶನ ಮಾತು ನನಗೆ ಆಶ್ಚರ್ಯ ತರಿಸಿತು.
"ಕನ್ನಡದಲ್ಲಿ ನಾರದಮುನಿ, ನಾರದಮುನಿ ಅಂತ ಯಾರೂ ಬೈಯ್ದಿದ್ದು ಇದುವರೆಗೂ ನಾನು ಕೇಳಿಲ್ಲ. ಹಾಗೆ ಯಾರೂ ಬೈಯ್ಯಲ್ಲ....ಅದೂ ಜಗಳದ ವಿಷಯದಲ್ಲಿ ಈ ಪದ ಉಪಯೋಗಿಸುವುದು ಕಡಿಮೆಯೇ ...!!! ಅವಳು ಬಳಸಿದ ಆ ಪದವನ್ನು ಸರಿಯಾಗಿ ನೆನಪಿಸಿಕೊಂಡು ಹೇಳು..."
ಎಂದೆ
ಅದಕ್ಕೆ ಆತ " ನನಗೆ ಸರಿಯಾಗಿ ನೆನಪಿದೆ ಹೆಂಡತಿ ಪ್ರತಿ ಸಾರಿ ಗಂಡನಿಗೆ ದೇವರ್ಷಿ.. ದೇವರ್ಷಿ ಎಂದು ನಾರದಮುನಿಗೆ ಹೊಲಿಸುತ್ತಿದ್ದಳು ಆಕೆಯ ಈ ಮಾತು ಈಗಲೂ ನನ್ನ ಕಿವಿಯಲ್ಲಿ ಗುಂಯ್ಯ್ ಗುಟ್ಟುತ್ತಿದೆ " ಎಂದನು.
ನನಗೆ ಮತ್ತು ಗೌರಿಶಂಕರಗೆ ನಗು ತಡೆಯಲಾಗಲಿಲ್ಲ.
"ಅಯ್ಯೋ ಮಾರಾಯ....ಅದು ದೇವರ್ಷಿಯಲ್ಲ ಬೇವರ್ಸಿ ಅಂತ "
ಎಂದು ಹೇಳಿ ಅದರ ಅರ್ಥ ವಿವರಿಸಿದಾಗ ರಾಕೇಶನು ತನ್ನ ಕಣ್ಣು ಗುಡ್ಡೆಗಳನ್ನು ದಡ್ಡದಾಗಿಸಿಕೊಂಡು ಕಕ್ಕಾಬಿಕ್ಕಿಯಾಗಿ ಅತ್ತಿತ್ತ ನೋಡಿ ತಲೆತಿರುಗಿ ಬೀಳುವ ಹಂತಕ್ಕೆ ತಲುಪಿದ್ದ.......
ಯಾವುದೇ ಕಾರ್ಯ ಒಳ್ಳೆಯತನದಿಂದಲೇ ಪ್ರಾರಂಭಿಸಬೇಕು. ಅದರಲ್ಲೂ ಕಲಿಕೆಯಂತಹ ವಿಷಯ ಉತ್ತಮ ಅಂಶಗಳಿಂದ ಪ್ರೇರಣೆಗೊಳ್ಳಬೇಕು. ಆಗ ಮಾತ್ರ ಸರಸ್ವತಿ ಒಲಿಯುತ್ತಾಳೆ.
                                               
               - ಪ್ರಕಾಶ್ ಎನ್ ಜಿಂಗಾಡೆ

ಈಜು

ಈಜು .. 

ಬಾಲ್ಯದ ಹುರುಪು ಮತ್ತು ಉತ್ಸಾಹಗಳು ಬಾಲ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಆ ಉತ್ಸಾಹ ಜೀವನಪೂರ್ತಿ ಇರುತ್ತದೆ ಎಂದುಕೊಂಡು ನಡೆಯುವುದು ತಪ್ಪು.
ಒಂದು ಸಲ ನನಗೆ ಇಂತಹ ಅನುಭವವಾಯಿತು.ನಾನು ಬೆಳೆದಿದ್ದು ಹಳ್ಳಿಯ ಪರಿಸರದಲ್ಲಿ. ಬಾಲ್ಯದಲ್ಲಿ ನಾನು ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೆ . ರಜೆ ಬಂತೆಂದರೆ ಸಾಕು ಗೆಳೆಯರೊಡನೆ ಆಟಕ್ಕೆ ಹೋಗುತ್ತಿದ್ದೆ. ಗೋಲಿ, ಚಿನ್ನಿದಾಂಡು, ಮರಕೋತಿ ದಿನ ನಿತ್ಯದ ಆಟಗಳಾಗಿದ್ದವು. ನಮ್ಮೂರಿನಲ್ಲಿ ಭದ್ರಾ ನಾಲೆಯೊಂದಿದೆ. ಆಟವಾಡಿ ಆಯಾಸವಾದರೆ ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಗೆಳೆಯರೊಂದಿಗೆ ಸೇರಿ ಈಜಲು ಹೋಗುತ್ತಿದ್ದೆವು. ಗುಡ್ಡವನ್ನು ಕೊರೆದು ನಾಲೆ ನಿರ್ಮಿಸಿದ್ದರಿಂದ ನಾವೆಲ್ಲಾ ಬಂಡೆಯ ಮೇಲಿಂದ ನಾಲೆಗೆ ಜಿಗಿದು ಹರಿಯುವ ನಿರಿನೊಡನೆ ತೇಲಿಕೊಂಡು ಒಂದರ್ದ ಕಿಲೋಮೀಟರ್ ಈಜಿ ಮತ್ತೆ ಅದೇ ಸ್ಥಾನಕ್ಕೆ ಬರುತ್ತಿದ್ದೆವು. ಹೀಗೆ ಪ್ರತಿ ದಿನವೂ ಈಜು ನಮಗೆಲ್ಲಾ ಅಭ್ಯಾಸವಾಗಿ ಹೋಗಿತ್ತು. ಈಜಿನ ವಿಷಯ ಬಂದರೆ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಈಜು ಕಲಿಯುವವರ ಮುಂದೆ ನನ್ನನ್ನು ನಾನು ಹೊಗಳಿಕೊಳ್ಳುತ್ತಿದ್ದೆ. ಈಗ ಅದೆಲ್ಲಾ ನೆನಪು...

ನಾನು ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ.ಆ ಶಾಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ವೊಂದು ಇತ್ತು. ನನ್ನ ಸಹಪಾಠಿ ಹಿಂದಿ ಶಿಕ್ಷಕ ರಾಕೇಶ್ ಎಂಬುವನು ಬಿಹಾರದವನು. ನನ್ನಂತೆ ಅವನು ಸಹ ಗಾಂಗಾ ನದಿಯಲ್ಲಿ ಈಜಿಕೊಂಡೇ ಬಾಲ್ಯ ಕಳೆದವನು. ಗೌರಿಶಂಕರ್ ಎಂಬ ಕನ್ನಡ ಶಿಕ್ಷಕರು ಕನಕಪುರದವರು. ಕಾವೇರಿ ನದಿಯಲ್ಲಿ ಈಜಿ ಅಭ್ಯಾಸ ಮಾಡಿಕೊಂಡವರು. ಇಂತವರು ಶಾಲೆಯಲ್ಲಿ ಗೆಳೆಯರಾಗಿ ಸಿಕ್ಕಿದ್ದರಿಂದ ನನ್ನ ಈಜಿಗೆ ಮರು ಜೀವ ಬಂದಂತಾಗಿತ್ತು. ಮೂವರು ಮಾತನಾಡಿಕೊಂಡು ಪ್ರಿನ್ಸಿಪಲ್ ಕಣ್ಣು ತಪ್ಪಿಸಿ ಪಿರಿಯಡ್ ಇಲ್ಲದ ಶನಿವಾರದಂದು ಸ್ವಿಮ್ಮಿಂಗ್ ಫೂಲ್ ಗೆ ಹೋಗುತ್ತಿದ್ದೆವು. ನದಿಯಲ್ಲಿ ಈಜಿದವರಿಗೆ ಈ ಸ್ವಿಮ್ಮಿಂಗ್ ಪೂಲ್ ಅಷ್ಟೊಂದು ತೃಪ್ತಿ ಕೊಡುತ್ತಿರಲಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಕೈಕಾಲಾಡಿಸಿಕೊಂಡು ಬರುತ್ತಿದ್ದೆವು. ನದಿಯ ಈಜು ಮತ್ತೆ ಯಾವಾಗ ಸಿಗುವುದೋ ಎಂದು ಆಗಾಗ ಅತೃಪ್ತಿ ತೋರ್ಪಡಿಸಿ ಕೊಳ್ಳುತ್ತಿದ್ದೆವು.
ಹೀಗಿರುವಾಗ ಒಂದು ದಿನ ನದಿಯಲ್ಲಿ ಈಜುವ ಅವಕಾಶವೊಂದು ಸಿಕ್ಕಿತು. ನಮ್ಮ ಶಾಲೆಯಲ್ಲಿ ಪರೀಕ್ಷೆ ಮುಗಿದ ನಂತರ ರಜೆ ಪ್ರಾರಂಭವಾಗುವ ಹಿಂದಿನ ದಿನ ಎಲ್ಲಾ ಶಿಕ್ಷಕರಿಗೆ ಒಂದು ಪಿಕ್ನಿಕ್ ವ್ಯವಸ್ಥೆ ಇರುತ್ತದೆ. ಪಿಕ್ನಿಕ್ ಸ್ಥಳವನ್ನು ಆಯ್ಕೆ ಮಾಡುವ ಅವಕಾಶ ನಮಗೆ ಸಿಕ್ಕಿತು. ನನ್ನ ಸ್ನೇಹಿತ ಗೌರಿಶಂಕರ್ ಮುತ್ತತ್ತಿ ಸ್ಥಳವನ್ನು ಸೂಚಿಸಿದರು. ಆಗ 2010 ಏಪ್ರಿಲ್ ತಿಂಗಳು. ಎಲ್ಲರೂ ಶಾಲೆಯಿಂದ ಹೊರಟು ಸುಂದರ ಪ್ರಕೃತಿಯನ್ನೊಳಗೊಂಡ ಮುತ್ತತ್ತಿ ತಲುಪಿದವು. ಕಾವೇರಿ ನದಿಯ ಜುಳು ಜುಳು ನಾದ ಕೇಳಿದೊಡನೆ ಮನಸು ಈಜಲು ಬಯಸಿತು. ರಾಕೇಶ್ ಈಜಲು ರೆಡಿಯಾಗಿ ನಿಂತ. ನೀರಿಗೆ ದುಮುಕಿ ಬೇಗ ಬೇಗನೆ ಈಜಿ ಮತ್ತೊಂದು ದಡ ಸೇರಿಯೇ ಬಿಟ್ಟ. ನಾನು ಮತ್ತು ಗೌರಿಶಂಕರಿ ಈಜಲು ನೀರಿಗಿಳಿದೆವು.ಹುರುಪಿನಿಂದ ಈಜತೊಡಗಿದೆವು ಮತ್ತೊಂದು ಕಡೆ ದಡ ಸೇರಿದ್ದ ರಾಕೇಶ್ ನಮ್ಮನ್ನು ಅಲ್ಲಿಂದಲೇ ಕರೆಯುತ್ತಿದ್ದ . ನಾನು ಅರ್ದ ನದಿಯನ್ನಷ್ಟೇ ಈಜಿದ್ದೆ . ಮುಂದೆ ಈಜಲು ಶಕ್ತಿ ಸಾಲದಾಯಿತು. ಮುಂದೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಹಿಂದೆ ಬರವುದು ಸಹ ಕಷ್ಟವಾಗಿತ್ತು. ವಾಪಾಸು ಹಿಂದಿರುಗಿ ಸ್ವಲ್ಪ ಈಜಿದೆಯಷ್ಟೆ. ಆಯಾಸಗೊಂಡು ಕಾಲನ್ನು ನೆಲಕ್ಕೆ ಊರಲು ಯತ್ನಿಸಿದೆ. ನೆಲ ಸಿಗಲಿಲ್ಲ ಮುಳುಗಲಾರಂಬಿಸಿದೆ. ನೀರು ರಭಸವಾಗಿ ಹರಿಯುತ್ತಿತ್ತು. ನಾನು ಅಪಾಯಕ್ಕೆ ಸಿಲುಕಿದ್ದೇನೆಂದು ಅರಿವಾಯಿತು.
"ಸರ್ ...ಗೌರಿಶಂಕರ್ ಸರ್ ಪ್ಲೀಸ್ ಕಾಪಾಡಿ"
ಎಂದು ಕೂಗಿಕೊಂಡೆನು. ನಾನು ನನ್ನ ಪ್ರಾಣದ ಆಸೆಯನ್ನು ಆಗಲೇ ತೊರೆದಿದ್ದೆ. ಆಯಾಸದಿಂದ ಮುಳುಗೇಳುತ್ತಾ ದಡ ಸೇರಲು ಪ್ರಯತ್ನಿಸುತ್ತಿದ್ದೆ. ಆಗಲಿಲ್ಲ. ನೀರು ಆಗಲೇ ಉಸಿರಿನ ಮೂಲಕ ನನ್ನ ದೇಹದೊಳಗೆ ಪ್ರವೇಶಿಸಲಾರಂಭಿಸಿತ್ತು.
ನನ್ನ ಕೂಗನ್ನು ಆಲಿಸಿದ ಗೌರಿಶಂಕರ್ ಹಿಂದಿನಿಂದ ನನ್ನನ್ನು ತಳ್ಳಿದರು. ತಳ್ಳಿದ ರಭಸಕ್ಕೆ ಒಂದು ಮಾರು ಮುಂದೆ ಹೋದೆ. ಅಲ್ಲಿಂದ ಮುಂದೆ ಈಜುವುದು ಕಷ್ಟವಾಗಿತ್ತು. ಪಾಪ ಆತನೂ ಸಹ ಈಜಿ ದಣಿದಿದ್ದ . ಏನಾದರೂ ಆಗಲಿ ಎಂದು ತೀರ್ಮಾನಿಸಿ ನಾನು ನನ್ನ ಕಾಲನ್ನು ನೆಲ ಸಿಗುವುದೇನೋ ಎಂಬ ಆಸೆಯಿಂದ ನೀರಿನಾಳಕ್ಕೆ ಇಳಿ ಬಿಟ್ಟೆ.. ಆ ದಿನ ದೇವರು ನನ್ನ ಮೇಲೆ ಕೃಪೆ ತೋರಿದ್ದ. ನಾನು ಮುಳುಗಲಿಲ್ಲ. ಕಲ್ಲು ಬಂಡೆಯೊಂದು ನದಿಯ ಮದ್ಯದಲ್ಲಿತ್ತು. ನಾನು ಅದರ ಮೇಲೆ ನಿಂತಿದ್ದೆ. ನನಗೆ ಮರು ಜೀವ ಬಂದಂತಾಗಿತ್ತು. ಸ್ವಲ್ಪ ಹೊತ್ತು ಆ ಕಲ್ಲಿನ ಮೇಲೆ ನಿಂತುಕೊಂಡು ಸುಧಾರಿಸಿಕೊಂಡೆ. ಮನಸಿನಲ್ಲೇ ದೇವರನ್ನು ಪ್ರಾರ್ಥಿಸಿದೆ. ಸಾವು ನನ್ನ ಕಣ್ಣ ಮಂದೆಯೇ ಬಂದು ಹೋಗಿದ್ದು ಕಂಡು ನನ್ನಲ್ಲಿ ಭಯ ಆವರಿಸಿಕೊಂಡಿತ್ತು. ಅಲ್ಲಿಂದ ಹೇಗೋ ಈಜಿಕೊಂಡು ದಡ ಸೇರಿ ನಿಟ್ಟಿಸಿರು ಬಿಟ್ಟೆ. ಈ ಘಟನೆ ನಡೆದು ಇಂದಿಗೆ ಐದು ವರ್ಷ ಕಳೆಯಿತು. ಅಂದಿನಿಂದ ಸ್ವಿಮ್ಮಿಂಗ್ ಪೂಲ್ ಕಡೆಯೂ ಕಣ್ಣೆತ್ತಿಯೂ ಸಹ ನೋಡುತ್ತಿಲ್ಲ..
ಎಂದೋ ಬಾಲ್ಯದಲ್ಲಿ ಭರ್ಜರಿಯಾಗಿ ಈಜಿದ್ದೆನೆಂದ ಮಾತ್ರಕ್ಕೆ ಈಗಲೂ ಅದೇ ಉತ್ಸಾಹ ಹುರುಪು ಇದೆ ಎಂದುಕೊಂಡಿದ್ದು ನನ್ನ ಮೂರ್ಖತನ. ನಮ್ಮ ಹಿಂದಿನ ವೈಭವಗಳು ಆಗಿನ ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದನ್ನು ಈಗಲೂ ನೆನಪಿಸಿಕೊಂಡು ಮಂದುವರಿಯುವುದು ಸರಿಯಲ್ಲ. ಹಿಂದೆ ಹಾಗಿದ್ದೆ ,ಹೀಗಿದ್ದೆ ಎಂದು ಬೀಗುತ್ತಾ ಪ್ರಸ್ತುತ ಸನ್ನಿವೇಶವನ್ನು ಮರೆತು ಮುನ್ನಡೆಯುತ್ತಿರುವ ನನ್ನಂತಹ ಎಷ್ಟೋ ಜನ ಮೂರ್ಖರನ್ನು ನಾನು ಈಗಲೂ ಕಾಣುತ್ತಿದ್ದೇನೆ. ಪ್ರಸ್ತುತ ಸನ್ನಿವೇಶದಲ್ಲಿ ನೀವು ಹೇಗಿದ್ದೀರಿ ಎಂದು ನೆನೆದು ಅದರಂತೆ ನಡೆದುಕೊಂಡರೆ ಸಾಕು.ಜೀವನ ಸುಂದರವಾಗಿರುತ್ತದೆ. ಅಲ್ಲವೇ..?
                                                - ಪ್ರಕಾಶ್ ಎನ್ ಜಿಂಗಾಡೆ

ಸುಂದರಿ

ಸುಂದರಿ. ..( ಸಣ್ಣ ಕತೆ)

ಅಂದೊಂದು ದಿನ ಜನಶತಾಬ್ದಿಯಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದೆ. ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಬಣ್ಣದ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಡೌಲು ಹೊಡೆಯಲು ಶುರು ಮಾಡಿದ. ಮೊಬೈಲ್ನಲ್ಲಿ ಫ್ರಂಟ್ ಕ್ಯಾಮರಾ ಆನ್ ಮಾಡಿಕೊಂಡು ತನ್ನನ್ನು ತಾನು ಪದೇ ಪದೇ ನೋಡಿಕೊಳ್ಳುತ್ತಿದ್ದ. ಆತನ ಈ ನಡವಳಿಕೆಯ ಡಿಢೀರ್ ಬದಲಾವಣೆಗಳಿಗೆ ಕಾರಣ ಹುಡುಕಿದೆ
ಅರೆ......ಎದುರುಗಡೆ ಸುರಸುಂದರಿ.....!!!!

ನಮ್ಮಿಂದ ನಾಲ್ಕು ಸೀಟು ಆಚೆ ಶೋಭಾಯಮಾನವಾಗಿ ಕಾಣುವಂತೆ ಕುಳಿತ್ತಿದ್ದಳು.

ಆಕೆಯ ಕಣ್ಣೋಟ, ಕಣ್ಣಿನವರೆಗೂ ಇಳಿಬಿದ್ದ ಮುಂಗುರುಳು,ಬೆಳದಿಂಗಳ ಹಾಲಿನಂತಹ ಬಣ್ಣ,ಎಲ್ಲವೂ ಅತ್ಯಾಕರ್ಷಣಕವಾಗಿದ್ದವು. ಆಕೆಯನ್ನು ನೋಡುತ್ತಾ ಕುಳಿತ ನನಗೆ ರೈಲು ತುಮಕೂರು ದಾಟಿದ್ದು ನನಗೂ ಸಹ ತಿಳಿಯಲಿಲ್ಲ. ಇಡ್ಲಿ ಮಾರುವ ಹುಡುಗನೂ ಸಹ ನಮ್ಮ ಭೋಗಿಗೆ ಪದೇ ಪದೇ ಬರುತ್ತಿದ್ದನು. ಅವನಿಗೂ ಅವಳನ್ನು ಮತ್ತೆ ಮತ್ತೆ ನೋಡುವ ಕಾತುರವಿದ್ದಿರಬೇಕು...!!
ನನ್ನ ಸೀಟಿನ ಮುಂದೆಯೇ ಒಬ್ಬ ಕಮಂಗಿರಾಯ ಕುಳಿತ್ತಿದ್ದ. ನೋಡಲು ಸುಂದರ ಸಭ್ಯಸ್ಥನಾಗಿದ್ದ. ಅವಳನ್ನು ನೋಡಿ ಕಮಂಗಿಯಾಟವ ಶುರುಮಾಡಿದ. ಹುಡುಗಿಯೊಬ್ಬಳು ಎದುರುಗಡೆ ಕಣ್ಣು ಕುಕ್ಕುವಷ್ಟು ಸುಂದರವಾಗಿರಬೇಕಾದರೆ ಪಾಪ ಆತನೇನು ಮಾಡಿಯಾನು....?

ವಿಶ್ವಾಮಿತ್ರನ ಮುಂದೆ ಮೇನಕೆ ಕುಳಿತಂತೆ...

ಅವಳ ಮುಂದೆ ನಾನಾ ಭಂಗಿಗಳನ್ನು ಪ್ರದರ್ಶಿಸುತ್ತಿದ್ದ. ಕೂಲ್ ಡ್ರಿಂಕ್ಸ್ ಮಾರುವನನ್ನು ಕರೆದು ಪೆಪ್ಸಿ ಕೊಂಡು ಸ್ಟೈಲಾಗಿ ಕುಡಿದ. ಒಂದೆರಡು ಬಾರಿ ಕೂದಲನ್ನು ಬಾಚಿಕೊಂಡ. ಅವಳನ್ನು ಹತ್ತಿರದಿಂದ ನೋಡುವ ನೆಪದಲ್ಲಿ ಒಂದೆರಡು ಬಾರಿ ಶೌಚಾಲಯಕ್ಕೆ ಹೋಗಿ ಬಂದದ್ದೂ ಆಯಿತು. ಬೆಲೆಬಾಳುವ ಮೊಬೈಲನ್ನು ಆಕೆಗೆ ಕಾಣುವಂತೆ ಒಂದೆರಡು ಬಾರಿ ಅಲ್ಲಾಡಿಸಿ ತೋರಿಸಿದ. ಆವಳು ಯಾವ ಪ್ರತಿಕ್ರಿಯೆ ತೋರಿಸಲಿಲ್ಲ. ಸ್ವಲ್ಪ ಸಮಯ ತೆಪ್ಪಗೆ ಕುಳಿತಂತೆ ತೋರಿದರೂ ಆಗಾಗ ಕಳ್ಳ ನೋಟ ಬೀರುತ್ತಲೇ ಇದ್ದ.
ರಾಯನಿಗೆ ಆಕೆಯನ್ನು ಮಾತನಾಡಿಸುವ ಕತೂಹಲವಿದ್ದಿರಬೇಕು. ಎದ್ದವನೇ ಸೀದಾ ಆಕೆ ಕುಳಿತ್ತಿದ್ದ ಸೀಟಿನ ಪಕ್ಕದಲ್ಲಿ ನಿಂತು ಆವಳನ್ನು ತಾಗಿಸಿಕೊಂಡು ತನ್ನ ಬ್ಯಾಗನ್ನು ಮೇಲಿಡಲು ಪ್ರಯತ್ನಿಸುತ್ತಿದ್ದ....

'ಕಣ್ ಕಾಣಲ್ವೇನ್ರಿ ನಿಮಗೆ'

ಬೈಯ್ದು ಮುಖ ಸಿಂಡರಿಸಿಕೊಂಡಳು.
ಪಾಪ.... ರಾಯ ಏನೂ ಮಾತನಾಡದೇ ತನ್ನ ಸೀಟಿನಲ್ಲಿ ಬಂದು ಕುಳಿತ.

"ಅಲ್ರಿ ಅವನ ಬ್ಯಾಗು ಇಲ್ಲೇ ಇಡಬಹುದಿತ್ತಲ್ಲ..!!
ಬೇಕಾದಷ್ಟು ಜಾಗವಿದೆ "

ಪಕ್ಕದಲ್ಲಿ ಕುಳಿತ ಯುವಕ ಆಶ್ಚರ್ಯದಿಂದ ಹೇಳಿದ. ನನಗೂ ಆತನ ಮಾತು ಸರಿಯೆನಿಸಿತು.
ಸ್ವಲ್ಪ ಹೊತ್ತಿನ ನಂತರ ಹಿಂದಿನಿಂದ
'ಬ್ರೆಡ್ ಆಮ್ಲೆಟ್..... ಬ್ರೆಡ್ ಆಮ್ಲೆಟ್'
ಎಂಬ ಧ್ವನಿ ಕೇಳಿಸಿತು
ರಾಯನಿಗೆ ಹಸಿವಾಗಿದ್ದಿರಬೇಕು.ಒಂದನ್ನು ಕೊಂಡುಕೊಂಡ.

'ಇನ್ನೊಂದನ್ನು ಆ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಕುಳಿತ ಹುಡುಗಿಗೆ ಕೊಟ್ಟು ಬಿಡಿ'
ಎಂದು ಅವಳತ್ತ ಕೈ ತೋರಿಸಿ ಹೇಳಿದ.

ಬ್ರೆಡ್ ಆಮ್ಲೆಟ್ ಮಾರುವವನು ಹಾಗೇ ಮಾಡಿದ.
ಆಕೆಗೆ ಕೋಪ ನೆತ್ತಿಗೇರಿರಬೇಕು ನೇರವಾಗಿ ಬಂದವಳೆ......

ನನಗ್ಯಾರಿ ನೀವು ಕೊಡಿಸೊದಕ್ಕೆ ಈ ತರ ಮಾಡಿದ್ರೆ ನಾನು ಸುಮ್ನಿರೊಲ್ಲ ನೋಡಿ'

ಹೀಗೆ ಹೇಳುವಾಗ ಅವಳ ಕಣ್ಣ ಕೆಂಪಾಗಿ ಹೋಗಿತ್ತು.

ಕೋಪದಿಂದ ನುಡಿದು ಬ್ರೆಡ್ ಆಮ್ಲೆಟನ್ನು ಅವನು ಕುಳಿತಲ್ಲೇ ಬಿಸಾಕಿ ನಡೆದಳು.
ರಾಯನ ಮುಖ ಚಿಕ್ಕದಾಯಿತು.
ನನಗೂ ಆತನ ವರ್ತನೆಗೆ ಚಚ್ಚಿ ಹಾಕುವಷ್ಟು ಕೋಪಬಂದಿತು.

"ನೋಡ್ರಿ ಒಂಟಿ ಹುಡುಗಿ ಸಿಕ್ಕಿದ್ದಳೆಂದು ಎಷ್ಟ್ ತೊಂದರೆ ಕೊಡ್ತಿದಾನೆ"

ನನ್ನ ಪಕ್ಕದಲ್ಲಿ ಕುಳಿತವನು ನನ್ನ ಕಿವಿಯಲ್ಲಿ ನಿಧಾನವಾಗಿ ಹೇಳಿದ.
ಅವನು ಹೇಳಿದ್ದು ಸರಿಯಾಗಿತ್ತು. ನಾನು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆವನತ್ತ ಹುಸಿ ನಗೆ ಬೀರಿ ಸುಮ್ಮನಾದೆ.
ಅಷ್ಟರಲ್ಲಿ ರೈಲು ಅರಸಿಕೆರೆಯನ್ನು ತಲುಪಿತ್ತು. ಅಲ್ಲಿ ಹತ್ತುವವರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇತ್ತು.
"ಮೇಡಮ್ ಈ ಸೀಟು ನನ್ನದು"
ಅರಸಿಕೆರೆಯಲ್ಲಿ ಹತ್ತಿದ ವ್ಯಕ್ತಿಯೊಬ್ಬ ತನ್ನ ಟಕೇಟ್ ತೋರಿಸಿ ಹೇಳಿದ
ಆ ಹುಡುಗಿ ಮರು ಮಾತನಾಡದೇ ಎದ್ದು ನಮ್ಮ ಕಡೆಗೆ ದಾವಿಸಿ ಬಂದಳು.
ಆಕೆಯ ಕಣ್ಣುಗಳು ಕಂಬನಿಯಿಂದ ತುಂಬಿ ಹೋಗಿತ್ತು. ಮುಖ ದುಃಖದಿಂದ ಮುದುಡಿ ಹೋಗಿತ್ತು.

" ನಿಂದೆ ತಪ್ಪು ಸಾರಿ ಹೇಳೊ.......ಸಾರಿ ಹೇಳೊ "

ಎಂದು ನನ್ನ ಸೀಟಿನ ಮಂದಿದ್ದ ಕಮಂಗಿರಾಯನನ್ನು ತನ್ನ ಅಂಗೈ ಮುಷ್ಠಿಯಂದ ಪ್ರೀತಿಯಿಂದ ಹೊಡೆದು ಅವನೆದೆಯ ಗೊಡಿನಲ್ಲಿ ಗುಬ್ಬಚ್ಚಿಯಂತೆ ಮುದುಡಿಕೊಂಡಳು.

"ಓಕೆ...ಐ ಆಮ್ ಸಾರಿ....ನೀನೂ ಸಹ ಇಷ್ಟೊಂದು ಆಟಿಟ್ಯೂಡ್ ತೋರಿಸಬಾರದಿತ್ತು"

ಎನ್ನುತ್ತಾ ರಾಯ ತನ್ನ ಬಲಗೈಯಿಂದ ಅವಳನ್ನು ಬಳಸಿಕೊಂಡನು.
ಹಾಗೆ ಮಾಡುವಾಗ ಆಕೆಯ ಕತ್ತಿನ ತಾಳಿ ರಾಯನ ಕಾಲರ್ ನಲ್ಲಿ ಸಿಲುಕ್ಕಿದ್ದು... ಆಕೆಯ ಕಣ್ಣ ಹನಿಗಳು ರಾಯನ ಷರಟಿನಲ್ಲಿ ಲೀನವಾದದ್ದು ....ಈಗಲೂ ನನ್ನ ಕಣ್ಣ ಮುಂದಿದೆ .....

                     
 - ಪ್ರಕಾಶ್ ಎನ್ ಜಿಂಗಾಡೆ

ದೆವ್ವದ ರಾತ್ರಿ

ದೆವ್ವದ ರಾತ್ರಿ....

ಸೆಕೆಂಡ್ ಷೋ ಸಿನಿಮಾ ಬಿಟ್ಟಾಗ ರಾತ್ರಿ ಒಂದು ಗಂಟೆಯಾಗಿತ್ತು. ಜನರ ಗುಂಪಿನಲ್ಲಿ ಸ್ವಲ್ಪ ದೂರ ಮಾತ್ರ ನಡೆದು ಬಂದೆ ಆಮೇಲೆ ರಸ್ತೆಯ ಬಲ ತಿರುವಿನಲ್ಲಿಯ ಚಿಕ್ಕದಾದ ಕಲ್ಲು ಮಣ್ಣಿನ ದಾರಿಯಲ್ಲಿ ನಮ್ಮ ಮನೆ ತಲುಪಲು ಅರ್ದ ಕಿಲೋ ಮೀಟರ್ ನಡೆಯಬೇಕಿತ್ತು. ಆಗ ಇದ್ದಿದ್ದು ನಾನೊಬ್ಬನೇ.. ನನ್ನ ಜೊತೆ ಯಾರಾದರೂ ಬರಬಹುದೇ ಎಂದು ಸ್ವಲ್ಪ ಹೊತ್ತು ಕಾದು ನಿಂತೆ. ನನ್ನ ದುರಾದೃಷ್ಟಕ್ಕೆ ಆ ದಿನ ನಮ್ಮ ಏರಿಯಾದ ಯಾವ ನರಪಿಳ್ಳೆಯೂ ಸಹ ಸಿನಿಮಾ ನೋಡೋಕೆ ಬಂದಿರಲಿಲ್ಲ. ಅನಿವಾರ್ಯವಾಗಿ ಒಬ್ಬನೇ ನಡೆಯಬೇಕಿತ್ತು. ಒಬ್ಬನೇ ಹೋಗುವುದನ್ನು ನೆನಪಿಸಿಕೊಂಡ ಕೂಡಲೇ ಕೈಕಾಲು ನಡುಗಲಾರಂಭಿಸಿತು. ನಮ್ಮನೆಯಲ್ಲಿ ಸ್ವಲ್ಪ ಪುಕ್ಕಲು ಸ್ವಭಾವದವನೆಂದರೆ ನಾನೊಬ್ಬನೆ. ರಾತ್ರಿ ಉಚ್ಚೆ ಹೊಯ್ಯಲು ಹೊರ ಬರಬೇಕಾದರೂ ಅಪ್ಪನನ್ನು ಎಬ್ಬಿಸುತ್ತಿದ್ದೆ. ನಾನು ಸಿನಿಮಾಗೆ ಹೊರಟಾಗ ನನ್ನ  ಸ್ವಭಾವ ಅರಿತ್ತಿದ್ದ ನಮ್ಮಮ್ಮ ಒಬ್ಬನೇ ಹೋಗಬೇಡ್ವೋ.. ಮೊದ್ಲೇ ನೀನು ಪುಕ್ಲು ಪುಕ್ಲು ತರ ಆಡ್ತೀಯಾ ಅಂತ ಎಚ್ಚರಿಸಿದ್ದಳು. ಅಯ್ಯೋ ಬಿಡಮ್ಮ ನಮ್ ಏರಿಯಾದಿಂದ ಯಾರಾದ್ರೂ ಬಂದೇ ಇರ್ತಾರೆ ಅವ್ರ ಜೊತೆ ವಾಪಸ್ ಬರ್ತೀನಿ ಅಂತ ಧೈರ್ಯದಿಂದ ಹೇಳಿ ಹೋಗಿದ್ದೆ....
ಆದರೆ ಸಿನಿಮಾ ನೋಡಿ ಹಿಂದಿರುವಾಗ ಒಂಟಿಯಾಗಿ ನಡೆಯಬೇಕಿತ್ತು. ದೆವ್ವ ಏನಾದರೂ ಅಡ್ಡಗಟ್ಟಿದರೆ..? ಮನಸು ಭಯಗೊಂಡಿತು
ದಾರಿಯೇ ಕಾಣದಂತಿರುವ ಆ ಘನ ಘೋರ ಕತ್ತಲನ್ನು ಬೇಧಿಸಿಕೊಂಡು ನಮ್ಮನೆಯ ದಾರಿಯನ್ನು ತುಳಿದೆ.  ಸುತ್ತಲೂ ಕಗ್ಗತ್ತಲು ತುಂಬಿತ್ತು. ಮುಂದಿರುವ ರಸ್ತೆ ಅಸ್ಪಷ್ಟವಾಗಿ ಕಾಣುತ್ತಿತ್ತು. ದಟ್ಟ ರಾತ್ರಿಯಲ್ಲೂ "ಘೀ" ಎನ್ನುವ ನೀರವ ಸದ್ದು ಕಿವಿಗೆ ಕೇಳಿಸುತ್ತಿತ್ತು. ಜೊತೆಗೆ ಕಪ್ಪೆಗಳು ವಟಗುಟ್ಟುವ ಶಬ್ಧ ಬೇರೆ...!

"ಸರ್...ರ್...... ಸರ್...ರ್.."

ಏನೋ ಕಾಲ ಬುಡದಲ್ಲಿ ಸದ್ದಾಯಿತು. ಹೆದರಿ ತಕ್ಷಣ ಮಾರುದ್ದ ಜಿಗಿದೆ. ಒಂದು ಕ್ಷಣ ಜೀವವೇ ಹೋದಂತಾಯಿತು. ಬೇಗ ಬೇಗ ಹೆಜ್ಜೆ ಹಾಕಿದೆ. ನನ್ನ ಎದೆ ಬಡಿತ ಇನ್ನೇನು ಸಹಜ ಸ್ಥಿತಿಯತ್ತ ತಲುಪುತ್ತಿದೆ ಎಂದುಕೊಳ್ಳುತ್ತಿರುವಾಗಲೇ ದೂರದಿಂದ ಗೆಜ್ಜೆಯ ಸದ್ದು ಕೇಳಿಸಲಾರಂಭಿಸಿತು

"ಘಲ್.... ಘಲ್... ಘಲ್..."

ಯಾರೋ ನಡೆದು ಬರುತ್ತಿರುವಂತೆ ಭಾಸವಾಯಿತು. ಹಿಂದಿರುಗಿ ನೋಡುವ ಧೈರ್ಯ ಬರಲಿಲ್ಲ. ನನ್ನ ಉಸಿರಿನ ವೇಗ ಹೆಚ್ಚಾಯಿತು. ನನ್ನ ಎದೆ ಬಡಿತದ ಸದ್ದು ನನಗೇ ನಗಾರಿ ಬಡಿದಂತೆ ಕೇಳಿಸಿತು. ತಂಪು ರಾತ್ರಿಯಲ್ಲೂ ಬೇವರಿನ ಹನಿ ಹಣೆಯ ಮೇಲಿಂದ ಇಳಿಯಲಾರಂಭಿಸಿತು. ಯಾರೋ ಹಿಂದಿನಿಂದ ನಡೆದು ಬಂದಂತೆ ಭಾಸವಾಯಿತು. ತಕ್ಷಣ ಯಾರೋ ಹೆಗಲಮೇಲೆ ಕೈಯಿಟ್ಟರು. ನನಗೆ ಜೀವವೇ ಹೋದಂತಾಯಿತು. ಚಳಯಲಿ ಮೈ ಬೆವರಿ ಇನ್ನಷ್ಟು ಬೆವರಿತು. ಉಸಿರು ಬಿಗಿ ಹಿಡಿದುಕೊಂಡು ಹಿಂದಕ್ಕೆ ತಿರುಗಿ ನೋಡಿದೆ.

"ಮೋಹಿನೀೕೕ.... . "
ಆಕೆಯ ರೂಪ ಕಂಡು ಭಯ ತಡೆಯಲಾರದೇ ಕೂಗಿಕೊಂಡೆ.

ನನ್ನ ಹಿಂದೆ ಮೋಹಿನಿ ತನ್ನ ವಿಕಾರ ರೂಪ ತೋರಿ ನಿಂತಿದ್ದಳು. ಉದ್ದವಾದ ಹರಡಿದ ಕೂದಲುಗಳಿಂದ ಮುಖ ಅರೆ ಮುಚ್ಚಿ ಹೋಗಿತ್ತು. ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು.ನಾಲಿಗೆ ಬಾಯಿಂದ ಹೊರಚಾಚಿತ್ತು. ಕೋರೆ ಹಲ್ಲುಗಳು ಹನಿ ಹನಿ ರಕ್ತ ಸೋರಿಸುತ್ತಿದ್ದವು.ಬಿಳಿ ಉಡುಪಿನ ಸೀರೆ ರಕ್ತದಿಂದಲೇ ಅರ್ದ ಕೆಂಪಾಗಿ ಹೋಗಿತ್ತು. ಈ ಭಯಾನಕ ರೂಪ ನೋಡಿ ಕಾಲುಗಳು ಕುಸಿದು ಬಿದ್ದವು. "ಮೋಹಿನಿ.... ಮೋಹಿನಿ..." ಎನ್ನುತ್ತಾ ನೆಲಕ್ಕೆ ದೊಪ್ಪನೆ ಉರುಳಿ ಬಿದ್ದೆ ಮುಂದೇನಾಯಿತೋ ನನಗೆ ನೆನಪಿಲ್ಲ....
ಕಣ್ಣು ಬಿಟ್ಟು ನೋಡಿದಾಗ ಆಸ್ಪತ್ರೆಯಲ್ಲಿ ಮಲಗಿದ್ದೆ. ನನ್ನ ಗೆಳೆಯ ತಿಪ್ಪ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದ. ಜ್ವರ ಹೆಚ್ಚಾಗಿ ಕೈ ಕಾಲುಗಳು ನಡುಗುತ್ತಿದ್ದವು. ನಿದಾನವಾಗಿ ಕಣ್ಣು ತೆರೆದು ಸುತ್ತಲೂ ನೋಡಿದೆ. ರುದ್ರ, ಶಂಕ್ರ ಕುಮ್ಮಿ,, ಮುಂತಾದ ಗೆಳೆಯರು ನನ್ನ ನೋಡಲು ಬಂದಿದ್ದರು. ನನ್ನ ಪಕ್ಕದಲ್ಲಿ ಸುಮ, ಕೀರ್ತಿ. ಪದ್ಮಿ ಕೂಡ ನನ್ನ ನೋಡಲು ಬಂದಿದ್ದರು  ಅವರ ಪಕ್ಕದಲ್ಲಿ ಮತ್ತೊಬ್ಬಳು..
'ಅರೆ.... ಅವಳೇ...!!! ಮೋಹಿನಿ...!!!'
ರಾತ್ರಿ ನೋಡಿದ ದೆವ್ವದ ರೂಪದಲ್ಲಿದ್ದವಳು ಅದೇ ಮೋಹಿನಿ...!!!
 ಆದರೆ ಈಗ ದೆವ್ವದ ರೂಪ ಧರಿಸಿರಲಿಲ್ಲ,... ಕೂದಲನ್ನು ಸುಂದರವಾಗಿ ಕಟ್ಟಿದ್ದಳು. ಕಣ್ಣುಗಳಿಗೆ ಕಾಡಿಗೆಯನ್ನು ತಿದ್ದಿ ಸುಂದರಗೊಳಿಸಿದ್ದಳು. ಯಾವ ಕೋರೆ ಹಲ್ಲೂ ಇರಲಿಲ್ಲ. ದೆವ್ವಕ್ಕೆ ವ್ಯತಿರಿಕ್ತವಾದ ಸುಂದರ ರೂಪ ಧರಿಸಿ ಮೇನಕೆಯಂತೆ ಕಣ್ಣ ಮುಂದೆ ಕಂಗೊಳಿಸುತ್ತಿದ್ದಳು. 

ಮೋಹಿನಿ ನನ್ನ ಕಾಲೇಜಿನ ಪ್ರಿಯ ಗೆಳತಿ. ಅವಳನ್ನು ನೋಡಿದಾಗಲೆಲ್ಲ ನನ್ನ ಮನಸಿನಲ್ಲಿ ಏನೋ ಒಂಥರಾ.. ಏನೋ ಆಹ್ಲಾದ ಭಾವ ಆವರಿಸಿಕೊಂಡು ಬಿಡುತ್ತಿತ್ತು. ನನ್ನ ಮಂದೆಯೇ ಕಾಣುತ್ತಿದ್ದ ಆ ಮುದ್ದಾದ ರೂಪ ಕಂಡ ಕೂಡಲೇ ಮನದೊಳಗೆ ಆವರಿಸಿದ್ದ ಆ ಭಯ ಕಡಿಮೆಯಾಗಲಾರಂಭಿಸಿತು. ಕಾಲೇಜಿನಲ್ಲಿ ಆಕೆಯ ನಗು ಕಂಡಾಗ ಎಷ್ಟೋ ಸಲ ನನ್ನನ್ನೇ ನಾನು ಮರೆತು ಯಾವುದೋ ಲೋಕದಲ್ಲಿ ತೇಲಿಹೋಗುತ್ತಿದ್ದೆ. ಆಕೆಯ ಕೇಶರಾಶಿ ಗಾಳಿಯಲ್ಲೊಮ್ಮೆ ಹಾರಾಡಿದರೆ ಸಾಕು ನನ್ನ ಎದೆ ಝಲ್ಲೆನ್ನುತ್ತಿತ್ತು. ಆಕೆಯ ಮುದ್ದು ಮೊಗ ನೋಡಿದ ಕೂಡಲೇ ನಾನು ದುಂಬಿಯಾಗಿ ಅತ್ತ ಸುಳಿಯಬಾರದೇಕೆ ಎಂದೆನಿಸುತ್ತಿತ್ತು. ಅವಳ ಕಣ್ಣ ಕಾಂತಿಯೋ......? ಆಕೆಯ ಎದುರು ನಿಂತ ನನಗೆ ಮಿಂಚು ಹೊಡೆದಂತಾಗುತ್ತಿತ್ತು. ಎಂತಹ ಸೌಂದರ್ಯ....!!! ಎಂತಹ ಅದ್ಭುತ ಶಿಲ್ಪ...!! ಮೋಹಿನಿಯನ್ನು ಈ ರೀತಿಯಾಗಿ ಸುಂದರವಾಗಿ ಸೃಷ್ಟಿಸಿದ ಆ ದೇವರಿಗೆ ಎಷ್ಟೋ ಸಲ ಮನದಲ್ಲೇ ಕೃತಜ್ಞತೆ ಹೇಳಿದ್ದೆ.

ಹೀಗಿರುವಾಗ ರಾತ್ರಿ ದೆವ್ವದ ರೂಪ ಧರಿಸಿ ನನ್ನನ್ನು
ಹೆದರಿಸಿದ್ದು ಇವಳೇನಾ..? 
ಮನದೊಳಗೆ ಅರಿಯದ ಸಂಶಯ
ಇವಳೇಕೆ ಹೆದರಿಸುವಳು..?
ಇವಳ ರೂಪ ಧರಿಸಿ ಬಂದ ಆ ಭೂತ ಯಾವುದು..? ಹೀಗೆ ಹಲವು ಪ್ರಶ್ನಗಳು ನನ್ನನ್ನು ಕಾಡಿತು.
ಕಾಲೇಜಿನಲ್ಲಿ ನನ್ನ ಮತ್ತು ಆಕೆಯದು ಒಳ್ಳೆಯ ಗೆಳೆತನ. ಒಂದೊಂದು ಸಲ ಆ ಗೆಳೆತನ ಪ್ರೕಿತಿಗೆ ತಿರುಗಿದೆಯೆನೋ ಎಂಬಂತೆ ನನಗೆ ಅನುಮಾನವಾಗುತ್ತಿತ್ತು.

"ಪ್ಲೀಸ್ ... ಐದು ನಿಮಿಷ ಎಲ್ಲರೂ ಹೊರಗೆ ಹೋಗಿ ಪೇಷೆಂಟ್ ನೋಡಲಿಕ್ಕೆ ಡಾಕ್ಟರ್ ಬರುತ್ತಿದ್ದಾರೆ"

ನರ್ಸ್ ಎಲ್ಲರಿಗೂ ಕಳುಹಿಸಿದಳು. 
ಗೆಳೆಯರೆಲ್ಲರೂ ಹೊರಟರು. ಮೋಹಿನಿಯೂ ಅವರೊಂದಿಗೆ ಹೋದಳು. ಡಾಕ್ಟರ್ ಬಂದು ಹೋದ ನಂತರ ತಿಪ್ಪ ಒಬ್ಬನೇ ಬಂದನು.

"ಗೆಳೆಯರೆಲ್ಲಾ ಎಲ್ಲೋ...?" ಎಂದೆ

"ಕ್ಯಾಂಟೀನಲ್ಲಿ ಕಾಫಿ ಕುಡಿತಿದಾರೆ" ಎಂದನು.

ನನ್ನ ಕಣ್ಣುಗಳು ಮೋಹಿನಿಯ ಬರುವುದನ್ನೇ ಕಾಯುತ್ತಿದ್ದವು..

"ನೆನ್ನೆ ಯಾಕೊ ಅಷ್ಟೊಂದು ಹೆದರಿದ್ದೆ"
ತಿಪ್ಪ ನನ್ನ ಪ್ರಶ್ನಿಸಿದ.

"ನೆನ್ನೆ ರಾತ್ರಿ ಮನೆಕಡೆ ಬರೋವಾಗ ಈಗ ನನ್ನ ನೋಡಳು ಬಂದಿದ್ದಾಳಲ್ಲಾ  ನನ್ನ ಗೆಳತಿ ಮೋಹಿನಿ... ಇವಳೇ ನನಗೆ ಭೂತವಾಗಿ ಕಾಡಿದಳು. ಇವಳೇನಾದರು ನನಗೆ ತಮಾಷೆ ಮಾಡಲು ಈ ರೀತಿ ಮಾಡಿರುವಳೇ..?" ಎಂದೆ

"ಛೆ.....!! ಪಕ್ಕ ...ಏನ್ ಹೇಳ್ತಿದಿಯಾ ಅವರ ಮನೆ ಇರೋದು ಮೂರು ಕಿಲೋ ಮೀಟರ್ ದೂರ. ಒಂಟಿ ಹುಡುಗಿ ಆ ರೀತಿ ಹೆದರಿಸಲು ಸಾದ್ಯವೇ ಇಲ್ಲ... ಅದೂ ಈ ಅಮವಾಸ್ಯೆ ರಾತ್ರಿಲಿ"

ತಿಪ್ಪನ ಹಾಗೆ ಹೇಳಿದಾಗ ಅವನ ಮಾತು ಸರಿಯೆನಿಸಿತು......

"ನೆನ್ನೆ ...ನಿನ್ನ ಮತ್ತು ಮೋಹಿನಿ ನಡುವೆ ಏನಾದರು ಘಟನೆ ನಡಿತಾ..? ಅಂದರೆ ಮೋಹಿನಿಯ ಬಗ್ಗೆ ಅಸಹಜವಾದ ವಿಷಯಗಳು... ಈ ಕರಹದ್ದೇನಾದರೂ...?
ತಿಪ್ಪ ಕುತೂಹಲದಿಂದ ವಿಚಾರಿಸಿದ.

ನಾನು 'ಇಲ್ಲ' ಎಂದೆ...

"ಸರಿಯಾಗಿ ಯೋಚಿಸಿ ಹೇಳು... ನಿನ್ನ ಮನಸಿನಲ್ಲೆಲ್ಲಾ ಮೋಹಿನಿ ತಂಬಿಕೊಂಡಿದಾಳೆ ಅಂತ ನನಗೆ ಗೊತ್ತು" ಎಂದ

ತಿಪ್ಪನ ಮಾತು ಸರಿಯಾಗಿತ್ತು. ನನಗೆ ಮೋಹಿನಿ ಎಂದರೆ ಪ್ರಾಣ. ಈ ವಿಷಯ ಎಲ್ರಿಗೂ ತಿಳಿದಿತ್ತು. ನಾನು ಕುಮ್ಮಿ ಎಲ್ರೂ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಪಾಸಾಗಿ ಒಳ್ಳೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದೆವು. ಆದರೆ ನಮ್ಮ ಗುಂಪಿನಲ್ಲಿ ಮೋಹಿನಿಗೆ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಮೋಹಿನಿಯ ಅಪ್ಪನಿಗೆ ತುಂಬಾ ಬೇಸರವಾಗಿತ್ತು. ಅವರಪ್ಪ ಸ್ವಲ್ಪ ಮೂಡನಂಬಿಕೆಯವನು. ಮೋಹಿನಿಗೆ ಯಾವುದೋ ದೆವ್ವದ ಕಾಟ ಇರೋದ್ರಿಂದ ಕೆಲಸ ಸಿಗ್ತಾಯಿಲ್ಲ. ಮೋಹಿನಿ ಐದನೇ ಕ್ಲಾಸ್ ಓದುವಾಗ ಯಾವುದೋ  ದೆವ್ವ ಮೆಟ್ಕೊಂಡಿತ್ತಂತೆ.. ಕ್ಯಾಂಪಸ್ ನಲ್ಲಿ ಸೆಲೆಕ್ಷನ್ ಆಗದಿದ್ದಕ್ಕೆ ಅವರಪ್ಪ ಮತ್ತೆ  ಯಾವುದೋ ದೆವ್ವದ ಕಾಟ ಎಂದು ತಿಳಿದು ಕಳೆದ ಅಮವಾಸ್ಯೆಯಲ್ಲಿ ಮೋಹಿನಿಗೆ ದೆವ್ವ ಬಿಡಿಸಲು ಉಕ್ಕಡ ಗಾತ್ರಿಗೆ ಕರೆದುಕೊಂಡು ಹೋಗಿದ್ದನಂತೆ. ಅಲ್ಲಿ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿ. ಅಜ್ಜಯ್ಯನ ಸಮ್ಮುಖದಲ್ಲಿ ದೆವ್ವ ಬಿಡಿಸಿದ್ದನಂತೆ. ಮೋಹಿನಿ ಬೇಡ ಬೇಡವೆಂದರೂ ಅವರಪ್ಪ ಕೇಳಲಿಲ್ಲವಂತೆ. ಈಗ ಮೋಹಿನಿಗೆ ಮತ್ತೆ ದೆವ್ವ ಹಿಡಿದಿರಬೇಕು. ಅವಳ ಸ್ನೇಹ ಮಾಡಿದ್ದರಿಂದ ನನಗೂ ರಾತ್ರಿ ದೆವ್ವವು ಮೋಹಿನಿ ರೂಪದಲ್ಲಿ ಬಂದು ನನಗೂ ಕಾಡಿತು

ಎಲ್ಲವನ್ನು ಸವಿವರವಾಗಿ ತಿಪ್ಪನಿಗೆ ಹೇಳಿದೆ.

ತಿಪ್ಪ ಒಮ್ಮೆ ಜೋರಾಗಿ ನಕ್ಕ. 
ನಾನು " ಯಾಕೋ ನಗ್ತಿಯಾ" ಎಂದೆ

"ಯಾವ್ ದೆವ್ವನೂ ಇಲ್ಲ... ಏನೂ ಇಲ್ಲ. ಎಲ್ಲಾ ನಿನ್ನ ಭ್ರಮೆ. ನಿನ್ನೆ ರಾತ್ರಿ ನೀನು ಸಿನಿಮಾ ನೋಡಿಕೊಂಡು ಮನೆಯ ಕಡೆ ಹೋಗುತ್ತಿರುವುದನ್ನು ನಾನು ನೋಡಿದೆ... ನನಗೆ ನಿದ್ದೆ ಬಂದಿರಲಿಲ್ಲ. ಹೊಸ ವರ್ಷ ಅಂತ ನನ್ನ ತಂಗಿ ನಮ್ಮ ನಾಯಿ ಜಿಮ್ಮಿ ಕೊರಳಲ್ಲಿ ಗೆಜ್ಜೆ ಕಟ್ಟಿದ್ದಳು. ರಾತ್ರಿ ಮಲಗುವಾಗ ತೆಗೆಯೋದು ಮರೆತ್ತಿದ್ದಳು.. ಜಿಮ್ಮಿ ಎಚ್ಚರವಾದಾಗಲೆಲ್ಲಾ ಗೆಜ್ಜೆ ಸದ್ದು ಕೇಳಿಸುತ್ತಿತ್ತು. ನನಗೂ ಈ ಸದ್ದಿನಿಂದ ಸರಿಯಾಗಿ ನಿದ್ದೆ ಬರಲಿಲ್ಲ. ರಾತ್ರಿ ಎದ್ದು ಜಿಮ್ಮಿ ಕೊರಳಿಂದ ಗೆಜ್ಜೆ ತೆಗೆಯುವಾಗ ನೀನು ಕಾಣಿಸಿದೆ. ಪ್ರಕಾಶ್...ಲೋ ಪಕ್ಕಾ... ಎಂದು ಕೂಗಿ ಕೊಂಡೆ. ನೀನು ನಡೆದು ಹೋಗುತ್ತಲೇ ಇದ್ದೆ. ನಿನ್ನ ಹಿಂದೆ ಓಡಿ ಬಂದೆ. ನನ್ನ ಹಿಂದೆ ನಾಯಿನೂ ಓಡಿ ಬಂತು. ಕೊರಳಲ್ಲಿ ಗೆಜ್ಜೆ ಇರೋದರಿಂದ ನೀನು ಯಾರೋ ಹೆಣ್ಣು ದೆವ್ವ ಹಿಂಬಾಲಿಸಿಕೊಂಡು ಬರುತ್ತಿದೆ ಅನ್ಕೊಂಡಿರಬೇಕು. ನಾನು ಹತ್ತಿರ ಬಂದು ನಿನ್ನ ಮುಟ್ಟಿದ ಕೂಡಲೇ ನನ್ನ ಮುಖವನ್ನೂ ಸರಿಯಾಗಿ ನೋಡದೇ ಮೋಹಿನೀೕೕ... ಅಂತ ಕಿರುಚುತ್ತಾ.ಕೂಡಲೇ ಕುಸಿದು ಬಿದ್ದು ಬಿಟ್ಟೆ. ನಿನ್ನ ಎತ್ಕಂಡು ಮನೆಗೆ ಹೋಗೊದ್ರೊಳಗೆ ನನಗೆ ಸಾಕಾಗಿ ಹೋಯ್ತು. ಎಷ್ಟ ಬಡಕಂಡ್ರೂ ನಿನಗೆ ಎಚ್ಚರವಾಗ್ಲೇ ಇಲ್ಲ. ನಿಮ್ಮಮ್ಮ ಹೆದರಿಕೊಂಡು ರಾತ್ರಿನೇ ಆಸ್ಪತ್ರೆ ತಂದು ಹಾಕಿದ್ವಿ. ನಿನಗೆ ಮೋಹಿನಿ ತುಂಬಾ ಇಷ್ಟ ಆಗಿರೋದ್ರಿಂದ ಅವಳ ಬಗ್ಗೆ ನೀನು ತಿಳಿದುಕೊಂಡ ಈ ಕತೆಯಿಂದಲೇ ಹೀಗೆ ಹೆದರಿಕೊಂಡಿದ್ದೀಯಾ ...  ನಿನ್ನ ಮೋಹಿನಿಗೆ ಯಾವ ದೆವ್ವನೂ ಮೆಡ್ಕಂಡಿರಲಿಲ್ಲ ನೀನು ಸ್ವಲ್ಪ ಹೆದರೋದನ್ನ ಕಡಿಮೆ ಮಾಡ್ಕೋ.. ನೀನು ಪ್ರೀತಿಸಿದ ಹುಡುಗಿಗೆ ದೆವ್ವ ಹಿಡಿದಿದೆಯೆಂದು ಅತಿಯಾಗಿ ಯೋಚಿಸಿದ್ದರಿಂದ ಹೀಗಾಗಿದೆ ಅಷ್ಟೆ" 
ತಿಪ್ಪ ಇಷ್ಟು ಹೇಳಿ ನಿಲ್ಲಿಸಿದ.
ಅಷ್ಟರಲ್ಲಿ ನನ್ನ ತಲೆಯ ಹತ್ತಿರ ನಿಂತಿದ್ದ ಅಮ್ಮ ಗೊಣಗಲಾರಂಬಿಸಿದಳು.
"ಈ ತಿರ್ ಬೋಕಿ ನನ್ನ ಮಗನಿಗೆ ಹೇಳಿ ಹೇಳಿ ನನಗೂ ಸಾಕಾಯ್ತು. ಇವನು ನಾಲ್ಕೈದು ವರ್ಷ ಹುಡುಗ ಇದ್ದಾಗ ಏನೋ ಅಳ್ತಾವನಲ್ಲಾ ಅಂತ ತಟ್ಟೆಯಲ್ಲಿ ಸ್ವಲ್ಪ ಮಂಡಕ್ಕಿ ಹಾಕಿ ತಿನ್ಕೋ ಅಂತ ಕಟ್ಟೆ ಮೇಲೆ ಕೂರ್ಸಿದ್ದೆ. ಗಾಳಿ ಜೋರಾಗಿ ಬೀಸ್ತು ತಟ್ಟೇಲಿದ್ದ ಮಂಡಕ್ಕಿ ಗಾಳಿಗೆ ಹಾರೋಯ್ತಪ್ಪ ಅವತ್ತಿಂದ ಈ ನನ್ಮಗ ಮಂಡಕ್ಕಿ ನೋಡಿದ್ರೂ ಹೆದರ್ತಾನೆ. ಅವತ್ತಿಂದನೇ ಇವನ ಪುಕ್ಲು ಬುದ್ದಿ ಆರಂಭ ಆಯ್ತು ನೋಡು. ಮತ್ತೊಂದ್ ಸಾರಿ ಇವನು ಎಂಟನೇ ಕ್ಲಾಸ್ ಓದ್ತಾ ಇದ್ದ. ಪಕ್ಕದ ಮನೆ ದನ ಕಾಯೋ ಬಸ್ಯ ಕಕ್ಕಸ್ ರೂಮಲ್ಲಿ ಕೂತು ಕಳ್ಳತನದಿಂದ ಬೀಡಿ ಸೇದಿದ್ನಂತೆ. ಕಕ್ಕಸ್ ರೂಮಿಂದ ಹೋಗೆ ಬರ್ತಾ ಇದೆ. ಕೊಳ್ಳಿ ದೆವ್ವ ಅಂತ ಹೆದರ್ಕಂಡು ನಾಲಕ್ ದಿನ ಜ್ವರ ತನ್ಕಂಡು ಮಲಗಿದ್ದ. ಪಿಯುಸಿ ಓದ್ಬೇಕಾದ್ರೆ ಇವಂದ್ ಇನ್ನೊಂದ್ ರಾಮಾಯಣ... ಪಕ್ಕದ ಮನೆ ಪಂಕಜ ಮನೆ ಟೆರೇಸ್ ಮೇಲೆ ಸೀರೆ ಒಣಗಾಕೆ ಹಾಕಿದ್ಳಪ್ಪಾ. ಏನೋ ಗಾಳಿ ಜೋರಾಗಿ ಬೀಸಿದ್ದರಿಂದ ಸೀರೆ ಹಾರ್ಕೊಂಡು ಬಂದು ಕಟ್ಟೆ ಮ್ಯಾಲೆ ಕೂತಿದ್ದ ನನ್ನ ಮಗನ ತಲೆ ಮೇಲೆ ಬಿತ್ತು. ದೆವ್ವ ದೆವ್ವ ಅಂತ ಕೂಗ್ಕೊಂಡು ಇನ್ನೊಂದ್ ಸ್ವಲ್ಪ ಸೀರೆನಾ ತಲೆತುಂಬಾ ಸುತ್ಕೊಂಡು ಹೆದರುತ್ತಾ ನೆಲದ ಮೇಲೆ ಬಿದ್ದು ಹೊರಳಾಡಿ ಬಿಟ್ಟಿದ್ದ ಆಗ ಐದು ದಿನ ಜ್ವರ ಬಂದಿತ್ತು.. ಇವನ ಕಾಟ ನನಗೂ ಸಾಕಾಗಿದೆ...."
ಅಮ್ಮ ಇಷ್ಟು ಹೇಳಿ ನನ್ನ ಮುಸುಡಿಯನ್ನೊಮ್ಮೆ ತಿವಿದಳು.
ಅಷ್ಟರೊಳಗೆ ಶಂಕ್ರ ಒಳಗೆ ಬಂದ.
"ಏನ್ಲಾ ಶಂಕ್ರ..... ನೀನೆ ಏನ್ಲಾ, ಐದನೇ ಕ್ಲಾಸ್ ಓದೋವಾಗ ಮೋಹಿನಿಗೆ ದೆವ್ವ ಹಿಡಿದಿತ್ತು ಅಂತ ಹೇಳಿದ್ಲು.."
ಅಮ್ಮ ಶಂಕ್ರನಿಗೂ ತರಾಟೆ ತೆಗೆದು ಕೊಂಡ್ಳು...
"ಇಲ್ಲ ಕಣವ್ವಾ...  ಅವಳಿಗ್ಯಾಕೆ ದೆವ್ವ ಮೆಟ್ಕೊಳುತ್ತೆ..  ಹಂಗೆ ದೆವ್ವದ ಕಾಟ ಇದ್ದೆ ಇಂಜಿನಿಯರಿಂಗ್ ಓದೋಕಾಗ್ತದಾ...? ಅವರಪ್ಪ ವರ್ಷಕ್ಕೊಂದ್ ಸಾರಿ ಉಕ್ಕಡಗಾತ್ರಿ ಅಜ್ಜಯನಿಗೆ ಪೂಜೆ ಮಾಡಿಸ್ಕಂಡು ಬರ್ತಾರೆ.... ಮೋಹಿನಿ ಬಸ್ಟಾಂಡ್ ಅಲ್ಲಿ ಸಿಕ್ಕಾಗ ಪ್ರಕಾಶನಿಗೆ ಹೇಳು ನಾಲ್ಕು ದಿನ ಇರಲ್ಲ ಅಂತ ಹೇಳಿದ್ಳು. ನಾನು ತಮಾಷೆಗೆ ಮೋಹಿನಿಗೆ ದೆವ್ವ ಹಿಡ್ದೈತಿ ಉಕ್ಕಡಗಾತ್ರಿಗೆಹೋದ್ರು ಅಂತ ತಮಾಷೆ ಮಾಡ್ದೆ ಕಣವ್ವೋ ಅಷ್ಟೆ.."
ಶಂಕ್ರ ಅಮ್ಮನ ಮುಂದೆ ಹೆದರಿಕೆಯಿಂದಲೇ ಹೇಳಿ ಮುಗಿಸಿದ.
"ನಿನ್ ತಮಾಷೆ ಮನೆ ಹಾಳಾಗ.... ಇವ್ನು ಮಾಡ್ಕಂಡಿರೋದು ನೋಡು. ಹೆದರ್ಕಂಡು ಜ್ವರ ಬೇರೆ ತಂದ್ಕಂಡವ್ನೆ... ಇವ್ನ ಮುಸುಡಿಗೆ ಲವ್ವು ಬೇರೆ ಕೇಡು... ಅವಳೆಂಗೆ ಇವ್ನ ನೋಡಿ ಮೆಚ್ಕಂಡ್ಳೋ..."
ಅಮ್ಮ ಮತ್ತೆ ಮುಖಕ್ಕೆ ಮುಂಗಳಾರತಿ ಎತ್ತಲಾರಂಭಿಸಿದಳು..
ಅಷ್ಟರಲ್ಲಿ ಮೋಹಿನಿ ಬರುವುದು ಕಾಣಿಸಿತು.
"ಮೋಹಿನಿ ಬರ್ತವ್ಳೆ... ಸುಮ್ನಿರಮ್ಮ, ಹುಡಿಗೀರ ಮುಂದೆ ಮಾನ ಕಳೀ ಬೇಡ"
ಮೆಲು ದ್ವನಿಯಲ್ಲಿ ಅಮ್ಮನಿಗೆ ಹೇಳಿದೆ.
ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ರುದ್ರ,ಕುಮ್ಮಿ,  ಪದ್ಮಿ. ಮೋಹಿನಿ ಎಲ್ಲಾ ಒಳಗೆ ಬಂದರು. ಮೋಹಿನಿ ನನ್ನ ಪಕ್ಕದಲ್ಲಿ ಕುಳಿತು ನನ್ನ ತಲೆಯ ಮೇಲೆ ಕೈಯಿಟ್ಟು ಪರೀಕ್ಷಿಸಿದಳು. ಆಕೆಯ ಮೊದಲ ಸ್ಪರ್ಶದಿಂದ ನಾನು ರೋಮಾಂಚಿತನಾದೆ. ಒಂದೇ ಕ್ಷಣಕ್ಕೆ ಜ್ವರವೆಲ್ಲಾ ಮಾಯವಾಗಿ. ಮೈಯಲ್ಲೆಲ್ಲಾ ಪ್ರೀತಿಯ ಜ್ವರ ಆವರಿಸಿತ್ತು.
"ಇಂತಹ ಹೆದರು ಪುಕ್ಕಲ ಮದುವೆಯಾಗಿ ಅದೇನು ಸಂಸಾರ ಮಾಡ್ತಾನೋ, ಲವ್ವು ಅಂತೆ ಲವ್ವು...ಹೆದರ್ಕೊಂಡು ಎರೆಡೆರಡು ದಿನ ಜ್ವರ ತಂದ್ಕಂಡು ಮಲಗಿದ್ರೆ ಮುಗೀತು... ಸಂಸಾರ ನಡೆಸ್ದಂಗೆ"
ಎಲ್ಲರೂ ಹೋದ ಮೇಲೆ ಅಮ್ಮ ಮತ್ತೆ ಗೊಣಗಿದಳು .
ನನಗೂ ಕೇಳಿ ಸಾಕಾಗಿತ್ತು..
"ಏ... ಸುಮ್ನಿರವ್ವೋ.... ಮೋಹಿನಿ ನನ್ನ ಹಣೆ ಮುಟ್ಟಿದ್ ಕೂಡ್ಲೆ... ಜ್ವರ ಮಾಯ ಆಗ್ಲಿಲ್ವೇ... ಮುಂದೇನೂ ಹಂಗೆನೇ... ಅವಗೆಂತ ಜ್ವರನೂ ಬರಲ್ಲ ಬಿಡು" 
ಅಂದೆ.
ನನ್ನ ಮಾತು ಕೇಳಿ ಅಮ್ಮ ಸೀರೆಯ ಮುಸುಕಿನೊಳಗೆ ನಕ್ಕಿದ್ದು ಕಂಡಂತಾಯಿತು....
                                 - ಪ್ರಕಾಶ್ ಎನ್ ಜಿಂಗಾಡೆ

ಹೆಲ್ಮೆಟ್ ಪುರಾಣ

ಹೆಲ್ಮೆಟ್ ಪುರಾಣ


ಆ ದಿನ ನಾನು ನನ್ನ ಕುಟುಂಬದೊಡನೆ ನನ್ನ ಲಟ್ಕಾಸಿ ಬೈಕ್ ಹತ್ತಿ ಶಾಪಿಂಗ್ ಗೆ ಅಂತ ಮಂತ್ರಿ ಮಾಲ್ಗೆ ಹೊರಟೆ...ಯಾವುದೋ ಯುದ್ಧಕ್ಕೆ ಹೊರಟ ಸೈನಿಕರಂತೆ ನಾವಿಬ್ಬರು ಶಿರಸ್ತ್ರಾಣ ಧರಿಸಿ ಬೈಕ್ ಮೇಲೆ ಕೂತು ಸವಾರಿ ಹೊರಟೆವು. ಕತ್ತಿ, ಗುರಾಣಿ ಮಾತ್ರ ಇರಲಿಲ್ಲ ಅನ್ನಿ. ನನ್ನವಳು ನಿನ್ನೆ ದಿನ ಎರಡೆರಡು ಹೆಲ್ಮೆಟ್ ಖರೀದಿಸಿದ್ದಳು.ಹಳೆದು ಅಂತ ಎರಡ್ಮೂರು ಇದ್ದವು. ಏನ್ಮಾಡೊದು ಹೇಳಿ ನನ್ನವಳು ಯಾವ್ ವಸ್ತುನೂ ಒಂದೊಂದು ಕೊಂಡವಳೇ ಅಲ್ಲ...ನಾನು "ಯಾಕೆ ಇಷ್ಟೊಂದೆಲ್ಲಾ ...? ಏನ್ ಹೆಲ್ಮೆಟ್ ಅಂಗಡಿ ಇಡ್ತಿಯೇನು....?" ಎಂದೆ.
"ಸುಮ್ನಿರಿ ಸಾಕು.... ನೀವು ಗಂಡಸರು ಪುಟ್ಗೋಸಿ ಹಾಕ್ಕೊಂಡ್ರೂ ನಡೆಯುತ್ತೆ.. ಯಾರ್ ಕೇಳ್ತಾರೆ ನಿಮ್ಮನ್ನ.. ಹಂಗಸರಿಗೆ ಮ್ಯಾಚಿಂಗ್ ಅಂತ ಬ್ಯಾಡ್ವ... ? ನೋಡೋರು ಏನಂದ್ಕೊಳ್ತಾರೆ.." ಅಂದ್ಲು
ನಾನು ಸುಮ್ಮನಾಗಿ ಹೋದೆ...
ಇವತ್ತು ಹೆಲ್ಮೆಟ್ ಧರಿಸಿರುವ ಕಲರ್ ನದ್ದೇ ಸೀರೆ ಉಟ್ಟಿದ್ದಳು. ಎಂಥ ಮ್ಯಾಚಿಂಗ್ ಅಂತಿರಾ...!! ತ್ರೀ ಈಡಿಯಟಾ ಪಿಕ್ಚರ್ ನಲ್ಲಿ ಕರಿನಾ ಕಪೂರ್ ಹಾಕ್ಕೊಂಡು ಬರಲ್ವೇ..?? ಥೇಟ್ ಅದೇ ತರ ಕಾಣಿಸುತ್ತಿದ್ದಳು..

ಬೈಕಿಂದ ಹೊರಟು ಇನ್ನೇನು ಮಲ್ಲೇಶ್ವರಮ್ ಗೆ ತಲುಪುತ್ತಿದ್ದಂತೆ ನನ್ನವಳಿಗೆ ತಕ್ಷಣ ಜ್ಞಾನೋದಯವಾಯಿತು. ಬೋದಿ ವೃಕ್ಷದ ಕೆಳಗೆ ಬುದ್ದನಿಗೆ ಆಗಲಿಲ್ವೆ ಹಂಗೆ ಆಯಿತು ಅಂದ್ಕೊಳಿ.ಆದ್ರೆ ಇವಳಿಗಾದದ್ದು ಮಲ್ಲೇಶ್ವರಮ್ ತಿರುವಿನಲ್ಲಿ ಅಷ್ಟೆ. ಅದು ಏನಪ್ಪಾ ಅಂದ್ರೆ. ನಮ್ ಬೈಕಲ್ಲಿ ಕೂತ ನನ್ನ ಚಿಕ್ಕ ಮಗನಿಗೂ ಹೆಲ್ಮೆಟ್ ಕೊಡಿಸುವ ವಿಚಾರ. ನನ್ನ ಹತ್ತು ವರ್ಷದ ಮಗನಿಗೂ ಹೆಲ್ಮೆಟ್ ಕೊಂಡುಕೊಳ್ಳುವಂತೆ ಹಠ ಹಿಡಿದೇ ಬಿಟ್ಟಳು. ನಾನು ಬೇಡವೆಂದರೂ ಕೇಳಲಿಲ್ಲ.
"ಸರಕಾರದವರು ಪ್ರಜೆಗಳ ಪ್ರಾಣಕ್ಕೆ ಎಷ್ಟೊಂದು ಕೇರ್ ತಗೊಂಡು ಈ ರೂಲ್ಸ್ ಮಾಡಿದ್ದಾರೆ..ನಮಗೆ ನಮ್ಮ ಮಕ್ಕಳು ಕ್ಷೇಮವಿರುವುದು ಬೇಡವೇ.? ನನಗೆ ನನ್ನ ಮಗನ ಹಿತ ಮುಖ್ಯ. ನಾವಿಬ್ಬರು ಕ್ಷೇಮವಾಗಿದ್ದರೆ ಸಾಲದು ಮಗನಿಗೂ ಹೆಲ್ಮೆಟ್ ಕೊಡಿಸಿ"
ಎಂದಳು.
ಅವಳ ಸೆಂಟಿಮೆಂಟ್ ಡೈಲಾಗ್ ಗೆ ಕಣ್ಣೀರು ಹಾಕುವುದೊಂದೇ ಬಾಕಿ ಇತ್ತು. ಅಲ್ಲೇ ಅಂಗಡಿ ಯೊಂದರಲ್ಲಿ ಮಗನಿಗೆ ಕಾರ್ಟೂನ್ ಚಿತ್ರವಿರುವ ಹೆಲ್ಮೆಟ್ ಕೊಂಡೆನು.ನಾನು ನನ್ನ ಹಂಡತಿ ನನ್ನ ಮಗ ಮೂವರು ಹೆಲ್ಮೆಟ್ ಹಾಕ್ಕೊಂಡು ಮತ್ತೆ ನನ್ನ ಲಟ್ಕಾಸಿ ಬೈಕಲ್ಲಿ ಕೂತ್ಕೊಂಡು ಹೊರಟೆವು... ಏನ್ ಸೀನ್ ಅಂತಿರಾ...!! ದೇವಲೋಕದಿಂದ ದೇವತೆಗಳು ಕಿರೀಟ ಧಾರಿಗಳಾಗಿ ಬೈಕ್ ಸವಾರಿ ಮಾಡುತ್ತಿದ್ದಾರೋ ಎಂಬಂತೆ ಜನರೆಲ್ಲಾ ನಮ್ಮನ್ನೇ ನೋಡುತ್ತಿದ್ದರು. ಅದರಲ್ಲೊಬ್ಬ ದೂರದಿಂದಲೇ ತನ್ನ ಮೊಬೈಲ್ ನಿಂದ ಫೋಟೋ ತೆಗೆದುಕೊಂಡ. ಬಹುಷಃ ಫೇಸ್ ಬುಕ್ ಗೋ... ವಾಟ್ಸಪ್ ಗೋ ಹಾಕಲು ಇರಬೇಕು....!!!
"ಪಪ್ಪ ... ತಲೆಗೆ ಮಾತ್ರ ಹೆಲ್ಮೆಟ್ ಯಾಕೆ..? ಬಿದ್ರೆ ಮೈ ಕೈ ಗೆ ನೋವಾಗಲ್ವಾ...?"
ಮಗ ತನ್ನ ಮುಗ್ಧತೆಯಿಂದ ಪ್ರಶ್ನಿಸಿದ...
"ಹೌದು ಮಗು ನೋವಾಗುತ್ತೆ.... ಸರಕಾರದವರು ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೆ ತರುತ್ತಾರೆ... ಮುಂದೆ ದೇಹಕ್ಕೆ ಕವಚವನ್ನೂ ಖಡ್ಡಾಯ ಮಾಡುತ್ತಾರೆ. ಮುಂದೆ ನಾವು ಸೂಪರ್ ಮ್ಯಾನ್ ಗಳಂತೆ ಸವಾರಿ ಮಾಡಬಹುದು" ಎಂದೆನು
"ಆ ಮಗು ಹತ್ರ ಏನ್ರಿ ತಮಾಷೆ"
ನನ್ನವಳು ಹಿಂದಿನಿಂದ ತಿವಿದು ಹೇಳಿದಳು.
ಮಂತ್ರಿ ಮಾಲ್ ರೀಚ್ ಆದ ಕೂಡಲೇ ಬೈಕನ್ನು ಪಾರ್ಕಿಂಗ್ನಲ್ಲಿ ಹಾಕಿದೆ... ದುರಾದೃಷ್ಟ ವಶಾತ್ ನನ್ನ ಬೈಕಲ್ಲಿಯ ಹೆಲ್ಮೆಟ್ ಲಾಕರ್ ನ್ನು ಮನೆಯಲ್ಲೇ ಬಿಟ್ಟು ಬಂದಿದ್ದೆ.. ಬೇರೆ ದಾರಿ ಇರಲಿಲ್ಲ ಮೂರು ಮೂರು ಹೆಲ್ಮೆಟ್ ಭಾರ ಹೊತ್ತು ನಡೆಯುವ ಜವಬ್ದಾರಿ ನನ್ನ ಪಾಲಿಗೆ ಬಂದಿತ್ತು. ನನ್ನವಳು ಮಗನೊಂದಿಗೆ ಮುಂದೆ ಮುಂದೆ ನಡೆದಳು ನಾನು ಕೂಲಿಯವನಂತೆ ಮೂರು ಹೆಲ್ಮೆಟ್ ಗಳನ್ನು ಹೊತ್ತು ಅವರನ್ನು ಹಿಂಬಾಲಿಸಿದೆ....
ಮಾಲ್ ನಲ್ಲಿರುವ ಲಗೇಜ್ ಕೌಂಟರ್ ನಲ್ಲಿ ನಮ್ಮ ಬ್ಯಾಗುಗಳನ್ನು ಇಟ್ಟೆವು.. ಆ ಪಾಪಿ ನಮ್ಮ ಹೆಲ್ಮಟ್ ಇಟ್ಟುಕೊಳ್ಳಲು ನಿರಾಕರಿಸಿದ...
ಶಾಪಿಂಗ್ ಮಾಡಲು ಟ್ರ್ಯಾಲಿಯನ್ನು ಎಳೆದುಕೊಂಡು ಹೆಲ್ಮೆಟ್ ಹಾಕಿಕೊಂಡೆ. ಟ್ರ್ಯಾಲಿ ಮೂರು ಹೆಲ್ಮೆಟ್ ನಿಂದ ತುಂಬಿ ಹೋಯಿತು ನನ್ನವಳು-."ಅಲ್ಲಿಂದ ತೆಗೆಯಿರಿ ನೋಡಿದವರು ಏನಂದುಕೊಂಡಾರು..?"
ಅಷ್ಟರಲ್ಲಿ ಕೂಲಿಯವನು
"ಸಾರ್..... ನಿಮ್ಮ ಹೆಲ್ಮೆಟ್ ಕೊಡಿ, ನಾನು ಹಿಡಿದು ಕೊಳ್ತೀನಿ, ಒಂದು ಗಂಟೆಗೆ ನೂರು ರೂಪಾಯಿ ಮಾತ್ರ" ಎಂದ
ನನ್ನವಳು ತಕ್ಷಣ ಹೆಲ್ಮೆಟ್ ಗಳನ್ನು ತೆಗೆದು ಕೂಲಿಯವನಿಗೆ ವಹಿಸಿದಳು. ನನ್ನವಳಿಗೆ ನಾನು ಹೆಲ್ಮಟ್ ಹಿಡಿದುಕೊಂಡು ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಕೂಲಿಯವನು ಹೆಲ್ಮೆಟ್ ಹಿಡಿದುಕೊಂಡು ನಮ್ಮ ಹಿಂದೆನೇ ಬರುತ್ತಿದ್ದ. ನೋಡಲು ಆಫ್ರಿಕನ್ ತರ ಕಪ್ಪಾಗಿದ್ದ.ಸ್ವಲ್ಪ ಸೈಡಿನಿಂದ ನೋಡಿದರೆ ಕಳ್ಳನ ತರ ಕಾಣುತ್ತಿದ್ದ. ಹೆಲ್ಮೆಟ್ ತೆಗೆದುಕೊಂಡು ಓಡಿ ಬಿಟ್ಟರೆ, ಅದೂ ಎರಡುವರೆ ಸಾವಿರ ಬೆಲೆ ಬಾಳುವ ಹೆಲ್ಮೆಟ್ಗಳು... ನಾನು ಅನುಮಾನಿಸಿದೆ. ನನ್ನ ಒಂದು ಕಣ್ಣು ಕೂಲಿಯವನ ಮೇಲೇ ಇತ್ತು.ಸ್ವತಂತ್ರವಾಗಿ ಶಾಪಿಂಗ್ ಮಾಡಲಾಗಲಿಲ್ಲ.
ಮಾಲ್ ನಲ್ಲಿ ಜನಜಂಗುಳಿ ದಟ್ಟವಾಗಿತ್ತು. ನನ್ನವಳಿಗೆ ಸೇವ್ ಪುರಿ ತಿನ್ನುವ ಬಯಕೆಯಾಯಿತು. ಕೊಡಿಸಿದೆ. ಆ ಆಫ್ರಿಕನ್ ನವನು ನನ್ನವಳು ತಿನ್ನುವುದನ್ನು ಗುರಾಯಿಸಿ ನೋಡುತ್ತಿದ್ದ. ನಾನು ಸ್ವಲ್ಪ ದೂರ ನಿಲ್ಲಲು ಹೇಳಿದೆ. ನಾವು ಸೇವ್ ಪುರಿ ತಿಂದು ಬರುವಷ್ಟರಲ್ಲಿ ಕೂಲಿಯವನು ಎರಡುವರೆ ಸಾವಿರ ರೂಪಾಯಿಯ ಹೆಲ್ಮೆಟ್ ತೆಗೆದುಕೊಂಡು ಪರಾರಿಯಾಗಿದ್ದ. ಸೇವ್ ಪುರಿಯ ಪರಿಣಾಮವಾಗಿ ಮೂರು ಹೆಲ್ಮೆಟ್ ಗಳು ಶೇವ್ ಆಗಿ ಹೋಗಿದ್ದವು. ಅವನಿಗೆ ಹಿಡಿ ಶಾಪ ಹಾಕಿಕೊಂಡೆ ಶಾಪಿಂಗ್ ಮುಗಿಸಿ ಹೊರಬಂದೆ. ಈಗ ನಾವು ಹೆಲ್ಮೆಟ್ ಇಲ್ಲದೇ ಪ್ರಯಾಣಮಾಡಬೇಕಿತ್ತು...
ನಾನು ನನ್ನ ಮೆದುಳನ್ನು ಜಾಗೃತ ಗೊಳಿಸಿಕೊಂಡು ಪೋಲೀಸರು ಇರದಂತಹ ವಾಮ ಮಾರ್ಗಗಳ ಬಗ್ಗೆ ಯೋಚಿಸಿಕೊಂಡೆ. ನನ್ನ ಲಟ್ಕಾಸಿ ಬೈಕ್ ನ ಸವಾರಿ ಸಂದಿ ಗೊಂದಿಯ ಕಡೆಗೆ ಹೊಕಟಿತು. ನಮ್ಮ ಪೋಲೀಸರು ಮಿಕಗಳನ್ನು ಹಿಡಿಯಲು ಸಿದ್ದಹಸ್ತರು. ಯಾವ ಕಡೆ ಗಾಳ ಹಾಕಿದರೆ ಯಾವ ಮೀನುಗಳನ್ನು ಹಿಡಿಯಬಹುದೆಂದು ಚನ್ನಾಗಿ ತಿಳಿದಿರುವವರು.ರಸ್ತೆಯ ತಿರುವಿನಲ್ಲಿ ಕಳ್ಳರಂತೆ ಮರೆಯಾಗಿ ನಿಂತಿದ್ದ ಪೋಲೀಸರು ನನ್ನ ಬೈಕ್ ಪ್ರವೇಶಿಸಿದ ಕೂಡಲೇ ಅವರ ಬಲೆಯಲ್ಲಿ ಕೆಡವಿಕೊಂಡೇ ಬಿಟ್ಟರು.ಅವರು ಹಿಡಿದ ರೀತಿ ನೋಡಿದರೆ ಸಿನಿಮಾದಲ್ಲಿ ಟೆರರಿಸ್ಟ್ ಗಳನ್ನು ಹಿಡಿದಂತಿತ್ತು. ನಾನು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸಿದೆ. ಹಿಂಬದಿ ಸವಾರರನ್ನು ಸೇರಿ ಸಾವಿರ ರೂಪಾಯಿ ದಂಡ ಹಾಕಲು ಮುಂದಾದರು. ನಾನು ನನ್ನ ಕತೆಯನ್ನು ವಿವರಿಸಿ ಹೇಳಿದರೂ ಕೇಳಲಿಲ್ಲ. ಕೊನೆಗೆ ನಾನೂರು ರೂಪಾಯಿಗಳಿಗೆ ಸುಲಭವಾಗಿಯೇ ಡೀಲ್ ಮುಗಿದು ಹೋಯಿತು.
ನನ್ನವಳು ಸಿಟ್ಟಿನಿಂದ
" ಅದಕ್ಕೆ ನಾನು ಯಾವಗಲೂ ಹೇಳೋದು ಕಾರ್ ತಗೋಳಿ ಅಂತ. ನನ್ ಮಾತು ಎಲ್ಲಿ ಕೇಳ್ತೀರಾ.."
ಎಂದು ಹೇಳಿದಳು
ಇದೇ ಮಾತನ್ನು ಆಕೆ ನನಗೆ ನೂರು ಸಾರಿ ಹೇಳಿದ್ದಳು.ಇವತ್ತಿನದು ನೂರ ಒಂದನೇ ಸಾರಿ ಇರಬಹುದೇನೋ...ಆದರೆ ಈ ಸಲದ ಅವಳ ಮಾತಿಗೆ ಕಾಲ ಮತ್ತು ಸನ್ನಿವೇಶಗಳೆರಡರ ಬೆಂಬಲ ಇತ್ತು. ನಾನು ಮಾತ್ರ ಏನೂ ಮಾತನಾಡದೇ ತೆಪ್ಪಗೆ ಬೈಕ್ ಓಡಿಸುತ್ತಿದ್ದೆ. ನನ್ನ ಗ್ರಹಚಾರವೋ ಏನೋ.. ನನ್ನ ಲಟ್ಕಾಸಿ ಬೈಕ್ ನ ಚೈನ್ ಲೂಸ್ ಆಗಿ ಇದೇ ಸಮಯಕ್ಕೆ "ಗರ್ ರ್... ರ್.... ರ್...." ಅಂತ ಸುದ್ದು ಬೇರೆ ಮಾಡಿತು....
                                  - ಪ್ರಕಾಶ್ ಎನ್ ಜಿಂಗಾಡೆ

Thursday, 4 February 2016

ಕುಡುಕ


ಕುಡುಕ 

ಸಂಜೆ ಆರು ಗಂಟೆಯಾಗಿರಬಹುದು.ಸೂರ್ಯ ಮೋಡಗಳ ಅಂಚಿನತ್ತ ಇಳಿದಿದ್ದ.ಆಗಸದಲ್ಲೆಲ್ಲಾ ನೆತ್ತರಿನ ರಂಗು ಚೆಲ್ಲಿ ಹೋಗಿತ್ತು. ಇನ್ನೇನು ಕತ್ತಲೆಯಾಗುತ್ತಿದೆ ಎನ್ನುವಷ್ಟರಲ್ಲಿ. ಚಂದ್ರಪ್ಪ ಸೊಟ್ಟ ಸೊಟ್ಟ ಹೆಜ್ಜಗಳನ್ನು ಹಾಕಿಕೊಂಡು ರಸ್ತೆಯ ತುಂಬೆಲ್ಲಾ ನಡೆದುಕೊಂಡು ಬರುತ್ತಿದ್ದ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಆತನ ಎಡಗಾಲು ರಸ್ತೆಯಂಚಿನ ಚರಂಡಿಯ ಕಡೆಗೆ ಎಳೆದರೆ. ಬಲಗಾಲು ರಸ್ತೆಯ ನಡುವಿನ ವರೆಗೂ ಎಳೆದು ತಂದು ಇಡೀ ದೇಹವನ್ನೇ ಬಾಗಿಸಿ ಬೀಳಿಸಲು ಪ್ರಯತ್ನಿಸುತ್ತಿತ್ತು. ಮದಿರೆಯ ಅಮಲು ರಸ್ತೆಯ ಉದ್ದಕ್ಕೂ ಚಂದ್ರಪ್ಪನನ್ನು ನರ್ತನ ಮಾಡಿಸುತ್ತಿತ್ತು. ಯಾರಾದರೂ ನೋಡುವರೇ ಎಂಬ ಆತಂಕವಿಲ್ಲ. ಜನ ಏನಂದುಕೊಂಡಾರು...? ಎಂಬ ಭಯ ಇಲ್ಲ. ಮದಿರೆಯ ಮತ್ತು ಬುದ್ಧಿಯನ್ನು ಸಹ ತನ್ನ ವಶಕ್ಕೆ ತೆಗೆದುಕೊಂಡು ಬಿಟ್ಟಿತ್ತು. ತನ್ನೊಳಗೆ ಮಾಯೆಯೋ...? ಮಾಯೆಯೊಳಗೆ ತಾನೋ..? ಎಂಬಂತೆ ಆತ ಮತ್ತಿನ ಮಾಯೆಯೊಳಗೆ ಓಲಾಡುತ್ತಿದ್ದ...

ಕಟ್ಟೆಯ ಮೇಲೆ ಕುಳಿತಿದ್ದ ನನಗೆ ಪೆಪ್ಪರಮೆಂಟೊಂದನ್ನು ಕೈಗೆ ನೀಡಿ, ಎದುರು ಗಡೆ ಇರುವ ಆತನ ಮನೆಯತ್ತ ಅಡ್ಡದಿಡ್ಡಿಯಾಗಿಯೇ ಹೆಜ್ಜೆ ಹಾಕುತ್ತಾ ಹೋದ. ಬಾಗಿಲ ಬಳಿ ಹೋಗುವಷ್ಟರಲ್ಲಿಯೇ ಆತ ದೊಪ್ಪನೆ ನೆಲಹಿಡಿದು ಬಿದ್ದ. ಹೆಂಡತಿ ಲಕ್ಷ್ಮಕ್ಕ ಬಿದ್ದ ಗಂಡನನ್ನು ಮನೆಯಳಗೆ ಎಳೆದುಕೊಂಡಳು. ಪ್ರತಿ ದಿನವೂ ಈ ದೃಶ್ಯ ನೋಡಿ ನನ್ನ ಕಣ್ಣು ಕಟ್ಟಿಹೋಗಿತ್ತು. ಪೆಪ್ಪರಮೆಂಟಿನ ಆಸೆಗಾಗಿ ನಾನು ಚಂದ್ರಪ್ಪ ಬರುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದೆ. ಹಾಗಾಗಿ ದಿನವೂ ಚಂದ್ರಪ್ಪನ ಈ ಅವಾಂತರ ನೋಡುವುದು ನನಗೆ ಅನಿವಾರ್ಯ ಆಗಿ ಹೋಗಿತ್ತು.
ಸುಮಾರು ಅರ್ದಗಂಟೆಯಾಗಿರಬಹುದು. ಚಂದ್ರಪ್ಪನ ಮನೆಯೊಳಗೆ ಪಾತ್ರೆಗಳು "ಠಣ್ ಠಣ್ ಠಣಣಣಣ...." ಎಂದು ಸದ್ದು ಮಾಡಲಾರಂಭಿಸಿದವು. ಇದು ಜಗಳ ಪ್ರಾರಂಭವಾಗುವುದರ ಸಂಕೇತ. ಹೇಗೆ ನಮ್ಮ ಶಾಲೆಯಲ್ಲಿ ತರಗತಿಯ ಆರಂಭಕ್ಕೂ ಮುನ್ನ ಬೆಲ್ಲ್ ಹೊಡೆಯುತ್ತಾರಲ್ಲಾ... ಅದೇ ರೀತಿ ಚಂದ್ರಪ್ಪನ ಮನೆಯಲ್ಲಿ....!! ಹೆಂಡತಿ ಲಕ್ಷ್ಮಕ್ಕಳ ಜೊತೆ ಜಗಳ ಪ್ರತಿದಿನವೂ ಮಾಮೂಲಾಗಿ ಹೋಗಿತ್ತು. ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ಬೆಳೆದಿರದ ನಮ್ಮಂತ ಚಿಕ್ಕ ಮಕ್ಕಳಿಗೆ ಚಂದ್ರಪ್ಪನ ಈ ಆಟೋಟೊಪಗಳೇ ನಮಗೆ ಆಗ ಖುಷಿ ನೀಡುತ್ತಿದ್ದವು. ಆಗ ನಮಗಂತೂ ಭರಪೂರ ಮನರಂಜನೆ ಸಿಗುತ್ತಿತ್ತು. ಆತ ಕುಡಿದಾಗಲೆಲ್ಲಾ ತನ್ನ ತೊದಲು ನಾಲಿಗೆಯಿಂದ ಹಾಡುಗಳನ್ನು ಹಾಡುತ್ತಿದ್ದನು. ಏನ್ ಮೆಲೋಡಿಯಸ್ ಅಂತಿರಾ...!! ಕಷ್ಟದಿಂದಲೇ ಮದ್ಯದ ಅಭಿಷೇಕಗೊಂಡ ತನ್ನ ನಾಲಿಗೆಯನ್ನು ತಿರುಗಿಸುತ್ತಾ "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ" ಎಂಬ ಹಾಡು ಹಾಡುತ್ತಿದ್ದ... ಅಬ್ಬಾ....!!! ಎಂತಹ ಸ್ವರ ಮಾಧುರ್ಯವದು ..!! ಅವನ ಕುಡಿದ ಕಂಠದಲ್ಲೇ ಈ ಹಾಡನ್ನು ಕೇಳಬೇಕು ಏನು ಮಜಾ ಸಿಗುತ್ತಿತ್ತು ಗೊತ್ತಾ....? ನನಗೆ ಹಾಡಿನ ಅಭಿರುಚಿ ಬೆಳೆದದ್ದೇ ಆ ಕುಡುಕ ಚಂದ್ರಪ್ಪನಿಂದ. ಆತ ಎಷ್ಟೋ ಸಲ ಸಿನಿಮಾ ನಟರ ಅಭಿನಯವನ್ನು ಮಾಡಿ ತೋರಿಸುತ್ತಿದ್ದ. ಆತನ ಆ ನಟನಾ ಕೌಶಲ್ಯ ಇಂದಿನ ಯಾವ ಸಿನಿಮಾ ನಟರಲ್ಲೂ ನಾನು ಕಾಣೆ. ಮದಿರೆಯ ಮತ್ತಿನಲ್ಲಿ ಉದುರುವ ಆ ಮಾತುಗಳು ಯಾವ ಸಂಭಾಷಣಕಾರನು ಬರೆಯಲು ಸಾದ್ಯವಿಲ್ಲ ಬಿಡಿ...!! ನಾನು ನನ್ನ ಬಾಲ್ಯದ ಎಷ್ಟೋ ಸಂಗತಿಗಳನ್ನು ಕುಡುಕ ಚಂದ್ರಪ್ಪನನ್ನು ನೋಡಿ ಕಲಿತ್ತಿದ್ದಿದೆ.
ನಮ್ಮಂತ ಚಿಕ್ಕವರಿಗೆ ಚಂದ್ರಪ್ಪ ಜೋಕರ್ ನಂತೆ ಕಂಡರೆ, ದೊಡ್ಡವರಿಗೆ ವಿಲನ್ ನಂತೆ ಕಾಣುತ್ತಿದ್ದ. ದಿನವಿಡಿ ದುಡಿದ ಹಣವನ್ನು ಸರಾಯಿ ಅಂಗಡಿಯ ಖಜಾನೆಗೆ ಹಾಕಿ ಬರುತ್ತಿದ್ದ. ಚಿಲ್ಲರೆ ಹಣವೇನಾದರೂ ಉಳಿದರೆ ನಮ್ಮಂತಹ ಮಕ್ಕಳಿಗೆ ಪೆಪ್ಪರಮೆಂಟು ತಂದು ಕೊಡುತ್ತಿದ್ದ. ಆತನ ಈ ಕುಡಿತಕ್ಕೆ ಆತನ ಹೆಂಡತಿ, ಮೂರು ಜನ ಮಕ್ಕಳು ಎಷ್ಟೋ ಸಲ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಉಪವಾಸ ಮಲಗುತ್ತಿದ್ದರು. ಮನೆಯಲ್ಲಿ ಅಡಿಗೆ ಮಾಡಲು ರೇಷನ್ ಇರುತ್ತಿರಲಿಲ್ಲ. ಲಕ್ಷ್ಮಕ್ಕ ಅವರಿವರ ಮನೆ ಕೆಲಸ ಮಾಡಿ ಒಪ್ಪತ್ತಿನ ಗಂಜಿಗೆ ದುಡಿಯುತ್ತಿದ್ದರು. ಜೊತೆಗೆ ಎರಡು ಗಂಡು, ಒಂದು ಹೆಣ್ಣು ಮಗುವಿನ ವಿದ್ಯಾಭ್ಯಾಸದ ಖರ್ಚು ಬೇರೆ. ಇಷ್ಟೆಲ್ಲಾ ದುಃಖವನ್ನು ಅನುಭವಿಸುತ್ತಾ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದ ಲಕ್ಷ್ಮಕ್ಕನ ಕಣ್ಣೀರು ನಮ್ಮಂತ ಚಿಕ್ಕಮಕ್ಕಳಿಗೆ ಕಾಣುವುದಾದರೂ ಹೇಗೆ...?
ಲಕ್ಷ್ಮಕ್ಕ ತಾನು ದುಡಿದು ಕೂಡಿಟ್ಟ ಹದಿನೆಂಟು ರೂಪಾಯಿಗಳನ್ನು ಚಂದ್ರಪ್ಪ ಕದ್ದು ಕುಡಿಯಲು ಒಯ್ದಿದ್ದ. ಮಕ್ಕಳ ಓದಿಗಾಗಿಯೇ ಲಕ್ಷ್ಮಕ್ಕ ಐದಾರು ತಿಂಗಳಿಂದ ನಾಲ್ಕಾಣೆ ಎಂಟಾಣೆಗಳನ್ನು ಡಬ್ಬದಲ್ಲಿ ಹಾಕಿಟ್ಟಿದ್ದಳು. ಹೆಂಡತಿ ಮಕ್ಕಳು ಎಂಬ ಪ್ರೀತಿ ವಿಶ್ವಾಸವೇ ಇಲ್ಲದ ಮೇಲೆ ಈತನೊಂದಿಗೆ ಸಂಸಾರಮಾಡಲು ಲಕ್ಷ್ಮ್ಮಕ್ಕನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. "ನನ್ನ ಗಂಡ ಸುಳ್ಳ ಅಲ್ಲ. ಕಳ್ಳ ಅಲ್ಲ, ಕುಡುಕ ಮಾತ್ರ" ಎಂದು ಬಂಧುಗಳೊಡನೆ ಸಮಾಧಾನಕ್ಕಾಗಿ ಹೇಳಿಕೊಳ್ಳುತ್ತಿದ್ದ ಲಕ್ಷ್ಮಕ್ಕನಿಗೆ ಈಗ ಏನೂ ಉಳಿದಿರಲಿಲ್ಲ. ಅಂದು ರಾತ್ರಿ ಎಂದಿಗಿಂತಲೂ ಸ್ವಲ್ಪ ಜಾಸ್ತಿ ರಂಪಾಟ ನಡೆಯಿತು. ಗಂಡ ಹೆಂಡತಿಯರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮೂವರು ಮಕ್ಕಳು ರಾತ್ರಿ ಊಟವಿಲ್ಲದೇ ಹಸಿವಿನಿಂದ ಅಳಲಾರಂಭಿಸಿದರು. ಅಮ್ಮ ಜಗಳ ನೋಡಲಾರದೇ ಮೂರು ಮಕ್ಕಳನ್ನು ಕರೆದು ಊಟಹಾಕಿ ನಮ್ಮನೆಯಲ್ಲೇ ಮಲಗಲು ಹೇಳಿದಳು.
ಮುಂಜಾನೆ ಐದು ಗಂಟೆಯಾಗಿರಬಹುದು. ಲಕ್ಷ್ಮಕ್ಕ ನಮ್ಮನೆ ಕಟಾಂಜನದ ಬಾಗಿಲು ತೆಗೆದು ಮಲಗಿದ್ದ ತನ್ನ ಮಕ್ಕಳನ್ನು ಎಬ್ಬಿಸಿ ಎಲ್ಲಿಗೋ ಆತುರದಿಂದ ಕರೆದೊಯ್ದಳು. ಅಲ್ಲೇ ಮಲಗಿದ್ದ ನಾನು ಇದನ್ನೆಲಾ ನೋಡಿ ಅಮ್ಮನಿಗೆ ಎಬ್ಬಿಸಿ ವಿಷಯ ತಿಳಿಸಿದೆ. ಅಮ್ಮ ಆತುರದಿಂದಲೇ ಲಕ್ಷ್ಮಕ್ಕ ಹೋದ ಕಡೆ ಅವಸರದಿಂದ ಹೆಜ್ಜೆ ಹಾಕಿ ಓಡಿದಳು. ಲಕ್ಷ್ಮಕ್ಕ ನಮ್ಮೂರಿನ ಭದ್ರಾ ನಾಲೆಯಲ್ಲಿ ಮೂವರು ಮಕ್ಕಳೊಡನೆ ಸಾಯಬೇಕು ಎನ್ನುವಾಗಲೇ ಅಮ್ಮ ಅಲ್ಲಿಗೆ ಹೋಗಿ ಆಗೋ ಅನಾಹುತವನ್ನು ತಡೆದಳು. ಲಕ್ಷಮ್ಮಕ್ಕನಿಗೆ ಬುದ್ಧಿವಾದ ಹೇಳಿದಳು. ಮಕ್ಕಳು ಸಾಯಲು ಇಷ್ಟವಿಲ್ಲದೇ ನಮ್ಮಮ್ಮನ ಸೆರಗಿನಲ್ಲಿ ಮುದುಡಿಕೊಂಡವು.
"ಇನ್ನೂ ಅರಳಬೇಕಾಗ ಮೊಗ್ಗುಗಳನ್ನು ಹೀಗೆ ಚಿವುಟುವುದು ನ್ಯಾಯವೇ. ಸ್ವಲ್ಪ ದಿನ ತಾಳ್ಮೆಯಂದಿರು. ಒಳ್ಳೆ ಸಮಯ ಬಂದೇ ಬರುತ್ತದೆ. ಕತ್ತಲ ನಂತರ ಬೆಳಕು ಬರಲೇ ಬೇಕು. ನಿನ್ನ ಮಕ್ಕಳ ಮುಖವನ್ನಾದರೂ ನೋಡಿ ಮನೆಗೆ ನಡೆ. ಕೋಪಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳ ಬೇಡ"
ಎಂದು ಲಕ್ಷ್ಮಕ್ಕನಿಗೆ ಬುದ್ದಿ ಹೇಳಿದಳು.
ಅಂದಿನಿಂದ ಅಮ್ಮ ಲಕ್ಷ್ಮಕ್ಕನ ಕುಟುಂಬದ ಸಹಾಯಕ್ಕೆ ನಿಂತಳು. ಪ್ರತಿದಿನ ಒಂದ್ಹೊತ್ತಿನ ಊಟ ನಮ್ಮನೆಯಿಂದಲೇ ಹೋಗುತ್ತಿತ್ತು. ಅಪ್ಪ ನಮಗಾಗಿ ಏನಾದರೂ ತಂದರೆ ಲಕ್ಷ್ಮಕ್ಕನ ಮಕ್ಕಳಿಗೂ ಪಾಲು ಹೋಗುತ್ತಿತ್ತು. ಅವರ ಹಬ್ಬ ಹರಿದಿನಗಳೆಲ್ಲಾ ನಮ್ಮನೆಯಲ್ಲಿಯೇ ನಡೆಯುತ್ತಿದ್ದವು. ಅವರು ಸಹ ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು. ಅವರೂ ನನ್ನಂತೆ ಅಮ್ಮನ ಕೈ ತುತ್ತು ತಿಂದು ಬೆಳೆದರು.
ಲಕ್ಷಮ್ಮಕ್ಕನ ಕುಟುಂಬ ಸುಮಾರು ಎರಡು ವರ್ಷಮಾತ್ರ ಇತ್ತು. ಆಮೇಲೆ ಅವರ ಊರಾದ ಹೊಳಲ್ಕೆರೆಗೆ ಹೊರಟರು. ಹೊಳಲ್ಕೆರೆಯಲ್ಲಿ ಚಂದ್ರಪ್ಪನ ಪಿತ್ರಾರ್ಜಿತ ಇತ್ತು. ಆಸ್ಥಿ ಪಾಲು ಮಾಡಿದಾಗ ಚಂದ್ರಪ್ಪನಿಗೆ ಎರಡು ಲಕ್ಷ್ಯ ಹಣ ಬಂತು. ಅಪ್ಪ ಆ ಹಣಕ್ಕೆ ಯೋಜನೆಯನ್ನು ರೂಪಿಸಿ ಲಕ್ಷ್ಮಕ್ಕನ ಹೆಸರಿನಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆದು ಚಂದ್ರಪ್ಪನಿಗೆ ಸಿಗದಂತೆ ಜೋಪಾನವಾಗಿರಿಸಿದರು. ಚಂದ್ರಪ್ಪ ಗಲಾಟೆ ಮಾಡಿದಾಗ ಅಪ್ಪ ಗೊತ್ತಿರುವ ಪೋಲೀಸನ್ನು ಕರೆಯಿಸಿ ಹೆದರಿಸಿದರು...ಚಂದ್ರಪ್ಪನ ಕುಟುಂಬ ಮತ್ತೆ ಹೊಳಲ್ಕೆರೆಗೆ ಹೋದ ಮೇಲೆ ಏನಾಯಿತೋ ಗೊತ್ತಿಲ್ಲ. ಮತ್ತೆ ನಮ್ಮೂರಿನ ಕಡೆ ಅವರು ಬರಲೇ ಇಲ್ಲ.......
ಬಾಲ್ಯದಲ್ಲಿ ನಡೆದ ಈ ಘಟನೆ ನನಗೆ ಮತ್ತೆ ನೆನಪಾಗಿದ್ದು. ದುರ್ಗಮ್ಮನ ಜಾತ್ರೆಗೆಂದು ಊರಿಗೆ ಹೋದಾಗ. ಸಾಮಾನ್ಯವಾಗಿ ನಮ್ಮೂರಿನ ದುರ್ಗಮ್ಮನ ಜಾತ್ರೆಗೆ ಎಲ್ಲರ ಮನೆಯಲ್ಲಿ ಬೀಗರು ಬಂದು ಸೇರಿರುತ್ತಾರೆ. ಆ ದಿನ ಅಮ್ಮ ಸಂಭ್ರಮದಿಂದ ಅಡುಗೆಯಲ್ಲಿ ತೊಡಗಿದ್ದಳು. ನಾನು ಆ ದಿನ ಕಟ್ಟೆಯ ಮೇಲೆ ಕುಳಿತುಕೊಂಡು ತಾಂಡಾದ ಕಡೆಗೆ ಹೋಗುತ್ತಿದ್ದ ಹೊಸ ಜನರನ್ನು ನೋಡುತ್ತಾ ಕುಳಿತ್ತಿದ್ದೆ. ಹೊಸ ಜನಗಳ ಮದ್ಯೆ ಹೊಸದೊಂದು ಕಾರು ಸೌಂಡು ಮಾಡುತ್ತಾ ಬಂದಿತು. ಬಿಳಿ ಬಣ್ಣದ ಆಡಿ ಕಾರ್.. ಅಷ್ಟು ಬೆಲೆಬಾಳುವ ಕಾರ್ ಗಳು ನಮ್ಮಂತಹ ಚಿಕ್ಕ ಹಳ್ಳಿಯ ಕಡೆಗೆ ಮುಖಮಾಡುವುದು ಕಡಿಮೆಯೇ... ಕಾರು ನಮ್ಮ ಮನೆಯ ಮತ್ತು ಸರೋಜಮ್ಮನ ಮನೆಯ ಮಧ್ಯದಲ್ಲಿರುವ ಜಾಗಕ್ಕೆ ಬಂದು ನಿಂತಿತು. ಯಾರೋ ರಾಜಕಾರಣಿಗಳು ಸರೋಜಮ್ಮನ ಮನೆಗೆ ಬಂದಿರಬೇಕು ಎಂದು ಕುತೂಹಲದಿಂದ ನೋಡಿದೆ. ನನ್ನಷ್ಟೇ ವಯಸ್ಸಾದ ಯುವಕನೊಬ್ಬ ಕಾರಿನಿಂದ ಇಳಿದ. ನೋಡಲು ಗಟ್ಟಿ ಮುಟ್ಟಾಗಿದ್ದ. ಕೈಯಲ್ಲಿ, ಕತ್ತಿನಲ್ಲಿ ಬಂಗಾರ ಒಡವೆಗಳು ಹೊಳೆಯುತ್ತಿದ್ದವು. ನಮ್ಮ ಮನೆಯತ್ತ ಧಾವಿಸಿ ಬರುತ್ತಿದ್ದನು. ಯಾರಿರಬಹುದು..? ನಾನು ಆಶ್ಚರ್ಯದಿಂದಲೇ ನೋಡಿದೆ
"ಏನೋ... ಪಕ್ಕ. ಚನ್ನಾಗಿದ್ದಿಯೇನೋ"
ಅಂದ
ನಾನು ಬಸವನಂತೆ ತಲೆಯಾಡಿಸಿ 'ಹೂಂ' ಎಂದೆ
ಯಾರೀತ...? ಯಾರಿರಬಹುದು...? ಯೋಚಿಸಿದೆ ಗುರುತು ಸಿಗಲೇ ಇಲ್ಲ.
ಒಳಗೆ ಹೋದವನೇ ಅಮ್ಮನನ್ನು ಹೊರಗೆ ಕರೆದು. ಅಮ್ಮನ ಕಾಲಿಗೆ ಬಿದ್ದನು.
" ಅಮ್ಮ ನಿನ್ನ ಆಶಿರ್ವಾದ ಬೇಕಮ್ಮ"
ಎನ್ನುತ್ತಾ ಕಾಲು ಗಟ್ಟಿ ಹಿಡಿದು ಕೊಂಡ..
" ಯಾರಪ್ಪಾ ನೀನು...? ನನಗೆ ಗುರುತು ಸಿಗ್ಲೇ ಇಲ್ಲ" ಅಮ್ಮನಿಗೂ ತಿಳಿಯದಂತಾಗಿ ಕೇಳಿದಳು
" ನಾನಮ್ಮ ರಘು.... ಲಕ್ಷ್ಮಮ್ಮನ ಹಿರಿ ಮಗ.. ಇವತ್ತು ನಾನು ಬದುಕಿದ್ದು ನಿನ್ನಿಂದಲೇ ಕಣಮ್ಮ .. ಅವತ್ತು ನೀನು ನಮ್ಮನ್ನ ಕಾಪಾಡ್ದೇ ಇದ್ದಿದ್ರೆ ನಾವು ನೀರು ಪಾಲಾಗಿರುತ್ತಿದ್ವಿ... ಅಮ್ಮ ನೀನು ನನ್ನ ಪಾಲಿನ ದೇವರು ಕಣಮ್ಮ. ನಿನ್ನ ಕೈ ತುತ್ತು ಮರೆಯೋಕೆ ಆಗ್ತದಾ ಅಮ್ಮಾ...."
"ಸರಿ ಏಳಪ್ಪ.... ಅಮ್ಮ ಅಪ್ಪಾ ಹೇಗಿದ್ದಾರೆ..?
"ಅಮ್ಮ... ನಾವು ಇಲ್ಲಿಂದ ಊರು ಬಿಟ್ಟು ಹೋದ ಮೇಲೆ ಎರಡೇ ವರ್ಷಕ್ಕೆ ಅಪ್ಪ ಲಿವರ್ ಕ್ಯಾನ್ಸರ್ ನಿಂದ ಸತ್ತರು.. ಆಮೇಲೆ ನಾನು ಓದೋದು ಬಿಟ್ಟು ಬೆಂಗಳೂರನ್ನು ಸೇರಿಕೊಂಡೆ... ಈಗ ನನ್ನದು ದೊಡ್ಡ ಬಿಸಿನೆಸ್ಸು ಇದೆ.... ಮುಂದಿನ ಸೋಮವಾರ ನನ್ನ ಮದುವೆ ಇದೆ... ನನ್ನ ಮದುವೆಯ ಮೊದಲ ಪತ್ರಿಕೆ ಸೇರಬೇಕಾದದ್ದು ನಿನಗೆ. ನೀನು ಬರಲೇ ಬೇಕಮ್ಮ" ಎಂದು ಅಂಗಲಾಚಿದನು...
ಅಮ್ಮನಿಗಾಗಿ ಒಂದು ಬಂಗಾರದ ನೆಕ್ಲೇಸ್ ಮತ್ತು ರೇಶಿಮೆಯ ಸೀರೆಯನ್ನು ಕೊಟ್ಟನು
" ಅಮ್ಮ... ಇದು ನನ್ನ ಮದುವೆಗಾಗಿ ನೀಡುತ್ತಿರುವ ಚಿಕ್ಕ ಕಾಣಿಕೆ ಸ್ವೀಕರಿಸಲೇ ಬೇಕು"
ಎಂದನು.
ಅಮ್ಮಾ ಸುತರಾಂ ಒಪ್ಪಲೇ ಇಲ್ಲ.
" ಮದುವೆಗೆ ಬರಲೇ ಬೇಕು ಅಂದ್ರೆ .. ಈ ಗಿಫ್ಟ್ ಗಳೆಲ್ಲಾ ನನಗೆ ಬೇಡ. ಪ್ರೀತಿಯಿಂದ ಮದುವೆಗೆ ಬರುತ್ತೇನೆ.. ಪಡೆದ ಸಹಾಯವನ್ನು ಯಾವಾಗಲೂ ಹಣದಿಂದ ಅಳೆಯಬಾರದು ರಘು. ನನಗೆ ಕಷ್ಟ ಅಂತ ಬಂದಾಗ ನಿನ್ನ ಸಹಾಯ ಖಂಡಿತ ಕೇಳುತ್ತೇನೆ. ಅಲ್ಲಿಯ ವರೆಗೆ ಪ್ರೀತಿಯೊಂದಿದ್ದರೆ ಸಾಕು"
ಎಂದಳು.
ರಘು ಅಮ್ಮನ ಮಾತು ತಿರಸ್ಕರಿಸಲಿಲ್ಲ. ದೈವ ವಾಕ್ಯದಂತೆ ಪರಿಪಾಲಿಸಿದ...
                                       ಪ್ರಕಾಶ್ ಎನ್ ಜಿಂಗಾಡೆ.

Tuesday, 2 February 2016

ಒಂದು ಪ್ರೀತಿಯ ಸುತ್ತ

ಒಂದು ಪ್ರೀತಿಯ ಸುತ್ತ. ( small story ....small feel )
ಶಂಕರಘಟ್ಟದಲ್ಲಿರುವ ಕುವೆಂಪುಯೂನಿವರ್ಸಿಟಿಯಲ್ಲಿ ಎಂ,ಎ, ಸೀಟು ಸಿಕ್ಕಿತ್ತು. ನಮ್ಮೂರಿನ ಕಿಟ್ಟಿಗೂ ಸಹ ಸಿಕ್ಕಿತ್ತು. ಓದಿನಲ್ಲಿ ನಾನು ಮತ್ತು ಕಿಟ್ಟಿ ಯಾವಾಗಲೂ ಮುಂದು.ಒಂದನೇ ತರಗತಿಯಂದಲೂ ನಾವಿಬ್ಬರೂ ಜೊತೆಯಾಗಿಯೇ ಓದಿದವರು.ಅವನು ಒಂಥರಾ ಗಾಂಧಿ ಇದ್ದಂತೆ. ಹುಡುಗಿ,ಲವ್ವು-ಗಿವ್ವುಅನ್ನೋದು ನಮ್ ಕಿಟ್ಟಿಗೆ ಆಗಿ ಬರೋಲ್ಲ. ಅವನ ಪ್ರಭಾವದಿಂದ ನಾನು ಸಹ ಸಿನ್ಸಿಯರ್ ಆಗಿದ್ದೆ.ಒಂದ್ ವರ್ಷದ್ ವರೆಗೆ ಲವ್ವು ಗಿವ್ವು ಅಂತ ಯಾವ್ ಸುದ್ದಿಗೂ ಹೋಗಿರ್ಲಿಲ್ಲ. ಸ್ವಲ್ಪ ನನ್ ಮನಸು ಆಚೆ ಈಚೆಗೆ ಹರಿಸಿದ್ರೆ ಸಾಕು ಕಿಟ್ಟಿ ಗಾಂಧಿಗಿರಿಯ ಉಪನ್ಯಾಸ ಶುರು ಹಚ್ಕೊಳ್ತಿದ್ದ. ಒಂದೊಂದ್ ಸಾರಿ ಕಿವಿಲೀ ರಕ್ತನೇ ಬರ್ತಿತ್ತು, ಅಷ್ಟ್ ಕೊರಿತಾ ಇದ್ದ. ಇವನ್ ಸಹವಾಸದಿಂದ ನಾನು ಸಹ ಒಂದ್ ವರ್ಷ ತೆಪ್ಪಗಿದ್ದೆ.

ಎಕ್ನಾಮಿಕ್ಸ ಡಿಪಾರ್ಟಮೆಂಟಿನ ಶಾಲಿನಿಯನ್ನ ಎಲ್ಲರೂ ಬ್ಯೂಟಿ ಕ್ವೀನ್ ಅಂತ ಕರೀತಿದ್ರೂ. ನನ್ನ ಮಂದೆ ಹಾದು ಹೋಗುವಾಗ ಆಕೆ ಸಾಕ್ಷಾತ್ ಮೇನಕೆ,
ಅಂತಹ ವಿಶ್ವಾಮಿತ್ರನ ತಪಸ್ಸೇ ಭಂಗ ಆಗಿರೋವಾಗ...!! ನಾವೆಲ್ಲಾ ಯಾರು...?
ಮನಸ್ಸು ಸಂಪೂರ್ಣವಾಗಿ ಶಾಲಿನಿಯ ಹಿಂದೆಯೇ ಅಲೆಯುತ್ತಿತ್ತು. ಗಾಂಧಿ ಕಿಟ್ಟಿ ಮತ್ತೆ ಅಡ್ಡ ಬಂದ.ಪ್ರತಿ ಸಲವೂ ನನಗೆ ಪ್ರೀತಿ ಮಾಡುವುದು ತಪ್ಪು ಎನ್ನವುದರ ಬಗ್ಗೆ ಗಂಟೆಗಟ್ಟಲೆ ಹೇಳ್ತಾಇದ್ದ. ನನಗೂ ಕಿಟ್ಟಿಯ ಸಹವಾಸ ಸಾಕಾಗಿ ಹೋಗಿತ್ತು. ಈ ವಯಸ್ಸಲ್ಲಿ ಲವ್ ಮಾಡಕಾಗ್ದೆ ಮುದುಕ ಆದಾಗ ಮಾಡೋಕೆ ಆಗ್ತದ ಎಂದು ಧೈರ್ಯ ತಂದ್ಕಂಡು
"ಏನಲೇ ಗಾಂಧಿ.... ನಮ್ಮಪ್ಪನಿಗ್ ಹೇಳ್ತಿಯೇನಲೇ... ಹೇಳ್ಕೊ ಹೋಗ್, ಇವತ್ತೇ ನಮ್ಮೂರಿಗೆ ಹೋಗಿ ಚಾಡಿ ಹೇಳಿ ಬಾ... ನಾ ಮಾತ್ರ ಶಾಲಿನಿ ಹಿಂದೆ ಅಲಿಯೋದು ನಿಲ್ಸಲ್ಲ....ಅದೇನ್ ಕಿಸಿದು ಗುಡ್ಡೆ ಹಾಕ್ತಿಯೋ ಹಾಕ್ಕೊ ಹೋಗ್"
ಅಂತ ಬೈಯ್ದೆ...
"ಬ್ಯಾಡ ಕಣ್ಲೇ ಪಕ್ಕಾ...!! ಓದೋ ವಯಸ್ಸಲ್ಲಿ ಹುಡುಗರು ಪ್ರೀತಿ ಗೀತಿ ಅಂತ ಅಲಿಬಾರ್ದು"
ಅಂತ ಬುದ್ದಿವಾದ ಹೇಳಿದ
ಅವನ ಮಾತು ಕೇಳಿ ತಿರಸ್ಕಾರದ ನೋಟ ಬೀರಿದೆ. ನನ್ನ ನಿರ್ಧಾರ ಸ್ಪಷ್ಟವಾಗಿತ್ತು.
ನನ್ನ ದೃಢ ನಿರ್ದಾರದಿಂದ ಕಿಟ್ಟಿ ಆಶ್ಚರ್ಯವಾಗಿತ್ತು.ಅವನು ಕನ್ನಡಕದೊಳಗಿನಿಂದ ತನ್ನ ಕಣ್ಣು ಗುಡ್ಡೆಗಳನ್ನು ದೊಡ್ಡದಾಗಿ ಮಾಡಿಕೊಂಡು ಆಶ್ಚರ್ಯದಿಂದ ನನ್ನತ್ತ ನೋಡಿದ್ದ..!!
ಅಂದಿನಿಂದ ಶಾಲಿನಿಯನ್ನು ಪಟಾಯಿಸಲು ಏನೇನೋ ಸರ್ಕಸ್ ಮಾಡಿದೆ. ಶಾಲಿನಿಯ ಸ್ವಬಾವವೂ ಚಂಚಲವಾಗಿತ್ತು. ನನ್ನತ್ತ ನೋಡಿ ಆಗಾಗ ಸ್ಮೈಲ್ ಕೊಡ್ತಿದ್ಳು. ಹ್ಯಾಂಡ್ ಸಮ್ ಆಗಿ ಕಾಣೋದ್ರಲ್ಲಿ ನಾನೇನು ಕಡಿಮೆ ಇರ್ಲಿಲ್ಲ ಅನ್ನಿ.....
ಇನ್ನೇನು ಶಾಲಿನಿ ನನಗೆ ಕ್ಲೀನ್ ಬೋಲ್ಡ್ ಆಗಬೇಕು ಅನ್ನುವಷ್ಟರಲ್ಲಿ ಅಡ್ಡ ಬಂದಿದ್ದು..!!
ಛೇ...!!! ಛೇ....!!! ನೀವು ಯೋಚಿಸಿದ್ದು ತಪ್ಪು.
ಕಿಟ್ಟಿ ಅಲ್ಲಾರಿ...
ಆ ಸೋಡಾ ಗ್ಲಾಸ್ ಸುಬ್ಬಲಕ್ಷ್ಮಿ....ಶಾಲಿನಿಯ ಜೊತೆಗಾತಿ. ಶಾಲಿನಿಯ ಊರವಳು.ತನ್ನ ಕನ್ನಡಕದೊಳಗಿನಿಂದ ಹುಡುಗರತ್ತ ಓರೆ ನೋಟ ತೋರಿಸಿದರೆ ಸಾಕು ಎಂಥವನಾದರೂ ಸುಬ್ಬಿಯ ಸೌಂದರ್ಯಕ್ಕೆ ಬೌಲ್ಡ್ ಆಗಿ ಬಿಡುತ್ತಿದ್ದರು. ಸೌಂದರ್ಯದ ವಿಷಯದಲ್ಲಿ ಅವಳೇನು ಕಡಿಮೆ ಇರ್ಲಿಲ್ಲ....ಆದ್ರೆ ಗಾಂಧಿಗಿರಿಯಲ್ಲಿ ನಮ್ ಕಿಟ್ಟಿಗಿಂತ ಒಂದ್ ಕೈ ಮೇಲು... ಡಬಲ್ ಗಾಂಧಿವಾದ ಅವಳ್ ಮೈಂಡಲ್ಲಿ ಸೇರ್ಕೊಂಡಿತ್ತು..!!! ಶಾಲಿನಿಯ ಬಾಡಿಗಾರ್ಡನಂತೆ ಯಾವಾಗಲೂ ಜೊತೆಲ್ಲೇ ಇರ್ತಿದ್ಲು. ಶಾಲಿನಿ ಕೆಮ್ಮಿದ್ರೂ ಸಹ ಈ ಸುಬ್ಬಿ ಅವರಪ್ಪಂಗೆ ವಿಷಯ ಮುಟ್ಟಿಸುತ್ತಿದ್ದಳು.ಸುಬ್ಬಿಗೆ ಲವ್ವು-ಗಿವ್ವು ಆಗಿ ಬರಲ್ವಂತೆ. ಪ್ರೀತಿ ಪ್ರೇಮ ಅಂತ ಆಚೆ ಈಚೆ ಹೋಗದಂತೆ ಶಾಲಿನಿಯನ್ನೂ ಸಹ ನೋಡಿಕೊಳ್ಳುವ ಜವಬ್ದಾರಿಯನ್ನು ಈ ಸುಬ್ಬಿ ವಹಿಸಿಕೊಂಡಿದ್ದಳಂತೆ
ಯಾವ್ ಜನ್ಮದ ಕರ್ಮನೋ..ಏನೋ...
ನನ್ ಜೊತೆ ಕಿಟ್ಟಿ.....ಅವಳ್ ಜೊತೆ ಈ ಸುಬ್ಬಿ.....
"ಪ್ರೀತಿ"..... ಅಂತ ಕನಸಲ್ಲಿ ಕನವರಿಸಿದ್ರು ಕೂಡ, ಇವರು ಕೆಂಡ ತುಳಿದವರಂತೆ ಹೌಹಾರಿಬಿಡುತ್ತಿದ್ರು....
ಸತ್ಯ ಹರಿಶ್ಚಂದ್ರನಿಗೆ ನಕ್ಷತ್ರಿಕನ ಕಾಟ ಇದ್ದಂತೆ ನಮಗೆ ಇವರಿಬ್ಬರದು.ಇಂತವರ ಸಹವಾಸದಿಂದ ನಾವ್ ತಲುಪಿದ್ದು ಬರೀ ಫ್ರೆಂಡ್ ಶಿಪ್ ವರೆಗೆ ಮಾತ್ರ...ಕಾಲೇಜ್ ಮುಗಿದು ನಮ್ ನಮ್ ಮನೆಗೆ ಹಿಂತಿರುಗುವಾಗ ನಾವು ಗಳಿಸಿದ್ದು ಕ್ಲೋಸ್ ಆಗಿ ಮಾತಾಡುವಷ್ಟು ಗೆಳೆತನ ಮಾತ್ರ....
ಊರಿಗೆ ಹೋದ ಮೇಲೆ ಕಿಟ್ಟಿ ಅಪ್ಪ
" ನೀನು ಓದಿರೋ ಎಮ್ಮೆಗೆ ಅದ್ಯಾವ್ ನನ್ಮಗ ಕೆಲ್ಸ ಕೊಡ್ತಾನೆ... ಅಂಗಡಿ ನೋಡ್ಕಂಡು ಬಿದ್ದಿರು ನನಗೂ ವಯಸ್ಸಾಗಿದೆ" ಅಂತ ಹೇಳಿ ಕಿರಾಣಿ ಅಂಗಡಿಯ ಜವಬ್ದಾರಿಯನ್ನು ಸಂಪೂರ್ಣವಾಗಿ ಕಿಟ್ಟಿಗೆ ಬಿಟ್ಟು ಕೊಟ್ಟಿದ್ದರು. ನಾನು ರಿಸಲ್ಚ ಬಂದ್ ಮೇಲೆ ಕೆಲಸ ಹುಡುಕುವ ಅಂತ ಸುಮ್ಮನಿದ್ದೆ.
ರಿಸಲ್ಟ್ ಬಂದ ದಿನ ನಾನು ಕಿಟ್ಟಿ ಶಂಕರಘಟ್ಟಕ್ಕೆ ಹೋದ್ವಿ. ಶಾಲಿನಿನೂ ಬಂದಿದ್ಲು...
ಅಬ್ಬಾ...!!!! ಸದ್ಯ ಆ ಸುಬ್ಬಿ ಶಾಲಿನಿಯ ಜೊತೆಗೆ ಬಂದಿರಲಿಲ್ಲ...
ಆ ದಿನ ಮನಸ್ಸು ತೃಪ್ತಿಯಾಗೊ ವರೆಗೂ ಮಾತಾಡ್ವಿ...ಆದ್ರೆ ಪ್ರೀತಿ ಹೇಳಿಕೊಳ್ಳುವಷ್ಟು ಧೈರ್ಯ ನನಗೆ ಬರಲಿಲ್ಲ.
ಅವಳಿಂದ ವಿಳಾಸ ಪಡ್ಕೊಂಡೆ...
"ಅಪ್ಪಾ ತುಂಬಾ ಸ್ಟಿಕ್ಟು.... ಪತ್ರ ಬರೆಯೋದಾದ್ರೆ ಸುಬ್ಬಿಯ ಬ್ಯೂಟಿ ಪಾರ್ಲರ್ ವಿಳಾಸಕ್ಕೆ ಬರೀರಿ"
ಅಂದ್ಲು ...
ಊರಿಗ್ಹೋದ ಮೇಲೆ ಸುಬ್ಬಿ ಬ್ಯೂಟಿ ಪಾರ್ಲರ್ ತೆರೆದಿದ್ದಳು.
"ಅಯ್ಯೋ.... ಸುಬ್ಬಿ ವಿಳಾಸನಾ..... !!!"
ಎಂದೆ
" ಸುಬ್ಬಿ ಮೊದಲಿನಂತಿಲ್ಲ ಪರ್ವಾಗಿಲ್ಲ... ಬರೀರಿ" ಅಂದ್ಲು....
ಅಲ್ಲಿಂದ ನಮ್ಮ ನಿಜವಾದ ಪ್ರೕಮ ನಿವೇದನೆಗಳು ಪ್ರಾರಂಭವಾದವು.....
ನಾನು ಅಪ್ಪನಿಗೆ ಹೆದರುತ್ತಿದ್ದರಿಂದ ಕಿಟ್ಟಿಯ ಕಿರಾಣಿ ಅಂಗಡಿ ವಿಳಾಸ ಕೊಟ್ಟಿದ್ದೆ....
ಈಗ ನಮ್ಮಿಬ್ಬರ ಪ್ರೀತಿಗೆ ಕಿಟ್ಟಿ ಮತ್ತು ಸುಬ್ಬಿಯರೇ ಸೇತುವೆಯಾಗಿ ನಿಂತಿದ್ದರು..... ಪ್ರೀತಿಗೆ ಸಹಕಾರ ಕೊಡೊ ಬುದ್ಧಿ ಇವರಿಗೆ ಆಗಲೇ ಇದ್ದಿದ್ದರೆ ಇಷ್ಟೊತ್ತಿಗೆ ನಾನು ಮತ್ತು ಶಾಲಿನಿ ಒಂದು ಹಂತಕ್ಕೆ ಬಂದು ನಿಲ್ಲುತ್ತಿದ್ದೆವು. ಕಿಟ್ಟಿಗೆ ಒಳ್ಳೆ ಬುದ್ದಿ ಬಂದಿತ್ತು. ನನಗೆ ಸಹಾಯ ಮಾಡುವುದಾಗಿ ಹೇಳಿದ. ಊರಿಗೆ ಬಂದು ಒಂದು ವಾರದೊಳಗೆ ಶಾಲಿನಿಗೊಂದು ಕವಿತೆ ಬರೆದೆ...
"ಕಣ್ಣಿಂದ ದೂರವಾದರೇನು
ಕಣ್ಣು ಮುಚ್ಚಿ ನೆನದರೆ ಸಾಕು
ನಿನ್ನ ಕಣ್ಣ ರೆಪ್ಪೆಯಲ್ಲೇ ನಾ ನೆಲೆಸಿರುವೆ....
ದಾರಿ ದೂರವಾದರೇನು
ಒಮ್ಮೆ ಕರೆದರೆ ಸಾಕು
ನಿನ್ನ ಹೆಜ್ಜೆಯ ಗುರುತಲ್ಲೇ ನಾನಿರುವೆ....."
ಈ ಪತ್ರಕ್ಕೆ ಶಾಲಿನಿ ತುಂಬಾ ಪುಳಕಿತಗೊಂಡಳು.
ಮತ್ತೆ ಅದೇ ತರಹದ ಕವನಗಳನ್ನು ಬರೆಯಿರಿ ಎಂದು ಹೇಳಿ ನನ್ನನ್ನು ಹುರಿದುಂಬಿಸುತ್ತಿದ್ದಳು
ನಾನು ಸಾಕಷ್ಟು ಕವಿತೆಗಳನ್ನು ರಚಿಸಿದ್ದೆ....
ಅವಳು ನನಗಾಗಿ ಬರೆದ ಕವಿತೆಗಳು ನಾ ಬರೆದ ಕವಿತೆಗಿಂತ ಚನ್ನಾಗಿದ್ದವು.....ನಾನು ಶಾಲಿನಿಯನ್ನು ಹೊಗಳಿ ಪತ್ರ ಬರೆಯುತ್ತಿದೆ. ನನ್ನ ಪತ್ರವನ್ನು ಆ ಸುಬ್ಬಿ ಕದ್ದು ಮುಚ್ಚಿ ಓದಿ ಬಿಟ್ಟರೆ...?? ಎಂದು ಅನುಮಾನ ವ್ಯಕ್ತ ಪಡಿಸಿದೆ. ಸುಬ್ಬಿ ಅಂತವಳಲ್ಲ ಎಂದು ಶಾಲಿನಿ ಹೇಳಿದ ಮೇಲೆ ನಾನು ಇನ್ನಷ್ಟು ಒಳ್ಳೆ ಕವನಗಳನ್ನು ಬರೆದು ಕಳುಹಿಸುತ್ತಿದ್ದೆ. ಕಿಟ್ಟಿಯೂ ಸಹ ಶಾಲಿನಿ ಬರೆದ ಪತ್ರಗಳನ್ನು ಒಡೆದು ಓದದೆಯೇ ನನಗೆ ಮುಟ್ಟಿಸುತ್ತಿದ್ದ.ಪ್ರೇಮಿಗಳ ಪತ್ರ ಓದಬಾರದು ಎಂಬ ವಿಷಯ ಅವರಿಬ್ಬರಿಗೂ ಚನ್ನಾಗಿ ತಿಳಿದಿತ್ತು. ಹೀಗೆ ನಾವಿಬ್ಬರೂ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದವು...ಆರು ತಿಂಗಳಲ್ಲೇ ನಮ್ಮ ಪ್ರೀತಿ ಸುಭದ್ರವಾಯಿತು.....
ಕಿಟ್ಟಿ ನಾಲ್ಕೈದು ದಿನ ರಜೆ ಹಾಕಿ ಯಾವುದೋ ಊರಿಗೆ ಹೋಗಿದ್ದ . ಕಿಟ್ಟಿ ನನಗೆ ಹೇಳದೇ ಊರಿಗೆ ಹೋಗಿದ್ದು ಇದೇ ಮೊದಲು. ನಾನು ಏನೊ ಪರ್ಸನಲ್ ವಿಷಯ ವಿರಬೇಕು ಎಂದು ಸುಮ್ಮನಾದೆ. ಆದರೆ ಕಿಟ್ಟಿ ಊರಿಗೆ ಹೋಗುತ್ತಿರುವ ವಿಷಯ ತನ್ನ ಮನೆಯಲ್ಲೂ ತಿಳಿಸಿರಲಿಲ್ಲ. ಕಿಟ್ಟಿ ತಂದೆ ನನಗೆ ಎರಡು ಮೂರು ಸಲ ಕೇಳಿ ಸುಮ್ಮನಾದರು. ನನ್ನ ತಂದೆಯೂ ಸಹ ನಾನೆನೋ ಮುಚ್ಚು ಮರೆ ಮಾಡುತ್ತಿದ್ದೇನೆಂದು ನನಗೆ ಬೈಯ್ದರು.
ಕಿಟ್ಟಿ ಊರಿಗೆ ವಾಪಸ್ಸಾದ ವಿಷಯ ತಿಳಿಯಿತು
ಆ ದಿನ ಕಿಟ್ಟಿಯ ಮನೆಯಲ್ಲಿ ಜಗಳ ನಡೆಯುತ್ತಿತ್ತು.ಇಪ್ಪತ್ತು ಮೂವತ್ತು ಜನ ಸೇರಿದ್ದರು. ನಮ್ಮಪ್ಪ ಕಿಟ್ಟಿಯ ಅಪ್ಪನ ಜೊತೆ ಸೇರಿಕೊಂಡು ಬೈಯ್ಯುತ್ತಿದ್ದರು. ನನಗೆ ಒಂದು ಸಲ ಜಂಘಾಬಲವೇ ಕುಸಿದು ಹೋದಂತಾಯಿತು. ನನ್ನ ಪತ್ರ ವ್ಯವಹಾರ ನಮ್ಮಪ್ಪನಿಗೆ ಗೊತ್ತಾಗಿದೆ ಎನ್ನುವ ವಿಚಾರ ಈಗ ನನಗೆ ಸ್ಪಷ್ಟವಾಯಿತು. ಅಲ್ಲೇ ಹಾದು ಹೋಗುತ್ತಿದ್ದ ನನ್ನನು ನಮ್ಮಪ್ಪ ಸಿಟ್ಟಿನಿಂದ
"ಬಾರೋ ಇಲ್ಲಿ......"
ಎಂದು ಕರೆದರು. ಅವರ ಧ್ವನಿಗೆ ನಾನು ಸ್ವಲ್ಪ ಬೆಚ್ಚಿಬಿದ್ದೆ..ನಮ್ಮಪ್ಪ ನನ್ನ ಕೈಹಿಡಿದು ಕೋಪದಿಂದ ಕಿಟ್ಟಿಯ ಮನೆ ಒಳಗೆ ಎಳೆದುಕೊಂಡು ಹೋದರು....
ಒಳಗಡೆ ಕಿಟ್ಟಿ ತಲೆ ತಗ್ಗಿಸಿ ನಿಂತಿದ್ದ..
ಅವನನ್ನು ಒಮ್ಮೆ ಗಮನಿಸಿದೆ..ಬಿಳಿ ಪಂಚೆ, ಬಿಳಿ ಷರ್ಟು.. ಕೊರಳಲ್ಲಿ ಹೂವಿನ ಹಾರ ಧರಿಸಿ ಮದುಮಗನಾಗಿ ನಿಂತಿದ್ದ...
ಯಾರಿಗೂ ಹೇಳದೇ ಕೇಳದೇ ರಿಜಿಸ್ಟರ್ ಮದುವೆಯಾಗಿ ಬಂದಿದ್ದ......
ನಾನು ಕಿಟ್ಟಿಯ ಹತ್ತಿರ ಹೋಗಿ
"ಏನೋ ಗಾಂಧಿ ಇದು...!!!
ಆಶ್ಚರ್ಯದಿಂದ ಕೇಳಿದೆ. ಕಿಟ್ಟಿಯು ತನ್ನ ಲವ್ ಮ್ಯಾಟರ್ ನನಗೂ ಗೊತ್ತಾಗದಂತೆ ಅತಿ ರಹಸ್ಯದಿಂದ ಇಟ್ಕೊಂಡಿದ್ದ. ಅವನ ಜೊತೆ ಇರುತ್ತಿದ್ದರಿಂದ ನನಗೂ ಆ ದಿನ ಸರಿಯಾಗಿ ಪೂಜೆ ನಡೆಯಿತು. ಹುಡುಗಿ ಕಡೆಯವರು ಜಗಳ ನಿಲ್ಲಿಸಿ ಸಂಧಾನ ಮಾಡಿಕೊಂಡರು. ಗಲಾಟೆ ಶಾಂತವಾದಾಗ ನಾನು ಅಲ್ಲೇ ತಲೆ ತಗ್ಗಿಸಿ ನಿಂತಿದ್ದ ಮದುಮಗಳೊಮ್ಮೆ ನೋಡಿದೆ
"ಅರೆ...... ಸುಬ್ಬಿ....!!!!!!!"
ನನ್ನ ಕಣ್ಣುಗಳು ನಂಬದಾದವು.
ಸುಬ್ಬಿ -ಕಿಟ್ಟಿ ಜೋಡಿಯಾಗಿದ್ದು ಹೇಗೆ...??
ಸಾದ್ಯವೇ ಇಲ್ಲ....!!! ಎಂದೆನಿಸಿತು.
ಅಪ್ಪನ ಕೈಯಲ್ಲಿ ಕೆಲವು ಪತ್ರಗಳಿದ್ದವು....ಒಂದನ್ನು ತೆಗೆದು ಓದಿದೆ.
ಅರೆ ...!! ನಾನೇ ಬರೆದ ಕವನಗಳು..!!
ಸುಬ್ಬಿ ತನ್ನ ಹಸ್ತಾಕ್ಷರದಿಂದ ಕಿಟ್ಟಿಗಾಗಿ ಬರೆದಿದ್ದಳು....ಕಿಟ್ಟಿಯನ್ನು ಆ ಪತ್ರದಲ್ಲಿ ಸಾಕಷ್ಟು ಹೊಗಳಿದ್ದಳು. ಅದು ನಾನು ಶಾಲಿನಿಗೆ ಹೊಗಳಿ ಬರೆದಂತೆಯೇ ಇತ್ತು..ಪತ್ರವೆಲ್ಲಾ ನನ್ನದೇ...ಆಗಿತ್ತು..!!!
ಸುಬ್ಬಿ ತಂದೆ ಹಿಡಿದು ಕೊಂಡಿದ್ದ ಪತ್ರವೊಂದನ್ನು ಪಡೆದು ಓದಿದೆ..
ಅರೆ...!!! ಶಾಲಿನಿ ನನಗಾಗಿ ಬರೆದ ಕವನಗಳು ...
ಕಿಟ್ಟಿ ತನ್ನ ಹಸ್ತಾಕ್ಷರದಿಂದ ಸುಬ್ಬಿಗೆ ಬರೆದಿದ್ದ.
ಶಾಲಿನಿ ನನಗಾಗಿ ಗೀಚಿದ ಕವನಗಳನ್ನು ಕಿಟ್ಟಿ ಸುಬ್ಬಿಗಾಗಿ ಬರೆದಿದ್ದ...!!
ನನಗೆ ಏನೂ ತೋಚದಂತಾಯಿತು....
ಸ್ವಲ್ಪ ಯೋಚಿಸಿದಾಗ ನಿಧಾನವಾಗಿ ನನ್ನ ಅರಿವಿಗೆ ಬರಲಾರಂಭಿಸಿತು...
ನಾ ಶಾಲಿನಿಗೆ ಬರೆದ ಕವನಗಳನ್ನು ಸುಬ್ಬಿ ಕದ್ದು ಓದಿ ತಾನೇ ಬರೆದಂತೆ ಕಿಟ್ಟಿಗೆ ಬರೆಯುವುದು..ಶಾಲಿನಿ ನನಗಾಗಿ ಬರೆದ ಕವನಗಳನ್ನು ಕಿಟ್ಟಿ ಓದಿ ತಾನೇ ಬರೆದಂತೆ ಸುಬ್ಬಿಗೆ ಬರೆಯುವುದು.
ಹೀಗೆ ಇವರಿಬ್ಬರೂ ಪತ್ರ ಬರೆದುಕೊಂಡು ತಮ್ಮ ತಮ್ಮ ಪ್ರೀತಿಯನ್ನು ಬೆಳೆಸಿಕೊಂಡಿದ್ದರು.
ನಮ್ಮ ಪತ್ರಗಳನ್ನು ಯಾರೂ ಒಡೆದು ಓದಲಾರರು
ಎಂದುಕೊಂಡು ನಾವಿಬ್ಬರು ಮೂರ್ಖರಾಗಿದ್ದೆವು. ಕಿಟ್ಟಿ 'ಕ್ಷಮಿಸು' ಎನ್ನುವಂತೆ ಕಣ್ಣಲ್ಲೇ ಕೈಮುಗಿದ. ಯಾರೋ ಬರೆದ ಪತ್ರಗಳು ಮತ್ತ್ಯಾರಿಗೋ ಲಾಭ ತಂದು ಕೊಟ್ಟಿದ್ದವು.. ನಾವು ಬರೆದುಕೊಂಡ ಕವನಗಳಿಗೆ ಇನ್ಯಾರೋ ಪುಳಕಿತಗೊಂಡಿದ್ದರು. ನಮ್ಮ ಪ್ರೀತಿ ಇನ್ನೇನು ಭದ್ರವಾಯಿತೆಂದುಕೊಳ್ಳುವಾಗ ಇನ್ಯಾರೋ ಬದುಕನ್ನು ಕಟ್ಟಿಕೊಂಡರು.
ಅಲ್ಲಿಂದ ಶಾಲಿನಿಯ ಪತ್ರ ಬರುವುದು ನಿಂತಿತು...
ಒಂದು ತಿಂಗಳ ನಂತರ ಸುಬ್ಬಿ ನನ್ನ ಭೇಟಿಯಾದಳು. ನನ್ನ ಮುಂದೆ ಕೈಮುಗಿದು.
" ನನ್ನನ್ನು ಕ್ಷಮಿಸಿ ಬಿಡಿ.... ನಾ ಕಿಟ್ಟಿ ಜೊತೆ ಬಂದಾಗಿನಿಂದ ಶಾಲಿನಿ ಮನೆಯಲ್ಲೂ ಗಲಾಟೆಯಾಯಿತು. ಅವರಪ್ಪ ನೀನು ಸುಬ್ಬಿ ತರ ಆಗಬೇಡ ಎಂದು ಬೈದು ಹತ್ತಿರದ ಸಂಬಂದಿಯರಡನೆ ನಿಶ್ಚಿತಾರ್ಥ ಮುಗಿಸಿದ್ದಾರೆ"
ಬೇಸರದಿಂದ ಹೇಳಿದಳು.
ಸುಬ್ಬಿ ನಮ್ಮೂರಿಗೆ ಸೊಸೆಯಾಗಿ ಬಂದಿದ್ದರಿಂದ ನನ್ನ ಮತ್ತು ಶಾಲಿನಿಯ ಪ್ರೇಮ ಸೇತುವೆಯೂ ಮುರಿದು ಬಿತ್ತು. ಕಿಟ್ಟಿ - ಸುಬ್ಬಿಯ ಮದುವೆಯೇ ನನ್ನ ಪ್ರೀತಿ ಮುರಿದು ಬೀಳಲು ಪ್ರಮುಖ ಕಾರಣವಾಯಿತು.
ಕೆಲವೊಮ್ಮೆ ಯಾರದೋ ಪ್ರೀತಿಗೆ ಇನ್ಯಾರೋ ಕನಸು ಕಟ್ಟಿಕೊಳ್ಳುತ್ತಾರೆ.ಯಾರದೋ ಕತೆಗೆ ಇನ್ಯಾರೋ ಮುನ್ನುಡಿ ಬರೆದು ಕೊಳ್ಳುತ್ತಾರೆ.. ಯಾರದೋ ಪಾತ್ರಕ್ಕೆ ಮತ್ತ್ಯಾರದೋ ಅಭಿನಯ... ನನ್ನ ಮತ್ತು ಶಾಲಿನಿಯ ಪಾತ್ರಕ್ಕೆ ಇನ್ಯಾರದ್ದೋ ಪರಕಾಯ ಪ್ರವೇಶ...ನಮ್ಮಿಬ್ಬರ ಪ್ರೇಮ ಕತೆಗೆ ಇನ್ಯಾರೋ ನಾಯಕ - ನಾಯಕಿಯಾಗಿ ಮೆರೆದಿದ್ದರು........
-ಪ್ರಕಾಶ್ ಎನ್ ಜಿಂಗಾಡೆ

ಭೂತ ಬಂಗಲೆಭೂತ ಬಂಗಲೆ...

ಪಾಳು ಬಿದ್ದ ಬಂಗಲೆಯದು. ನಮ್ಮ ಹಳ್ಳಿಯಿಂದ ಕೊಂಚವೇ ದೂರವಿದೆ. ರಾತ್ರಿಯಾದ ತಕ್ಷಣ ಆ ಬಂಗಲೆಯಲ್ಲಿ ವಿಚಿತ್ರ ಘಟನೆಗಳು ನಡೆಯುವುದರಿಂದ ನಮ್ಮ ಹಿರಿಯರು ಆ ಬಂಗಲೆಯ ಸುತ್ತ ತಂತಿ ಬೇಲಿಯನ್ನು ಹಾಕಿದ್ದಾರೆ.ಅತ್ತ ಯಾರೂ ಅಲೆಯದಂತೆ ಕಟ್ಟಪ್ಪಣೆಯನ್ನು ಹೊರಡಿಸಿದ್ದಾರೆ. ಆ ದಿನ ಬಂಗಲೆಯ ಸುತ್ತಲೂ ತಂತಿ ಬೇಲಿ ಹಾಕಲು ಹೋದ ಮಾರ ಕೆಲಸ ಮುಗಿಸಿ ರಾತ್ರಿ ಮಲಗಿದನು. ಆದರೆ ಮಾರನಿಗೆ ಏನಾಯಿತೋ ತಿಳಿಯಲಿಲ್ಲ ರಾತ್ರಿ ಮಲಗಿದವನು ಮತ್ತೆ ಏಳಲೇ ಇಲ್ಲ. ಅವನು ಪರಲೋಕವನ್ನು ಸೇರಿದ್ದನು. ಅವನು ಈ ರೀತಿ ಆಶ್ಚರ್ಯಕರವಾಗಿ ಸತ್ತದ್ದರಿಂದ ನಮ್ಮೂರಿನ ಜನರಿಗೆ ಇನ್ನಷ್ಟು ಭಯವನ್ನುಂಟು ಮಾಡಿತ್ತು. ಮಾರ ಬಂಗಲೆಯ ಸುತ್ತ ಬೇಲಿ ಹಾಕಿದ್ದರಿಂದ ದೆವ್ವ ಸೇಡು ತೀರಿಸಿಕೊಂಡಿದೆ ಎಂದು ಊರಿನವರು ಮಾತನಾಡಿಕೊಂಡರು. ಹೀಗೆ ದೆವ್ವವು ಅನೇಕ ಜನರಿಗೆ ಕಾಟ ಕೊಟ್ಟಿದೆಯೆಂದು ಜನ ಆಗಾಗ ಮಾತನಾಡಿಕೊಳ್ಳುವುದುಂಟು. ಈಗಲೂ ಸಹ ನಮ್ಮ ಹಳ್ಳಿಯವರು ಆ ಬಂಗಲೆಯ ದಿಕ್ಕಿನತ್ತ ತಲೆ ಹಾಕಿಯೂ ಮಲಗುವುದಿಲ್ಲ. ನಮ್ಮೂರಿನ ಕೋಳಿ ಪಿಳ್ಳೆಯೂ ಸಹ ಅತ್ತ ಹೆಜ್ಜೆ ಹಾಕಲು ಹೆದರುತ್ತದೆ...

ರಾಜು ಮತ್ತು ನಾನು ಬಾಲ್ಯದಿಂದಲೂ ಗೆಳೆಯರು ಓದಿನಲ್ಲಿ ಯಾವಾಗಲೂ ಮುಂದು. ನಾವು ಸ್ನಾತಕ್ಕೋತ್ಕರ ಪದವಿಯೊಂದಿಗೆ ಬಿ,ಎಡ್ ಸಹ ಮುಗಿಸಿದ್ದೆವು. ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆಗೆ ಹಲವು ಶಾಲಾ ಕಾಲೇಜ್ ಗಳನ್ನು ಸುತ್ತಿ ಅರ್ಜಿಯನ್ನು ಹಾಕಿದ್ದೆವು. ಎಲ್ಲಿ ಇಂಟರ್ ವ್ಯೂ ಗೆ ಹೋದರೂ ಬುದ್ಧಿ ಬಲಕ್ಕಿಂತ ಧನ ಬಲದ ಕೆಲಸವೇ ಜೋರಾಗಿ ನಡೆಯುತ್ತಿತ್ತು. ಐದರಿಂದ ಆರು ಲಕ್ಷ ಹಣ ನೀಡಿದವರಿಗೆ ಕೆಲಸ ಸುಲಭವಾಗಿ ಸಿಗುತ್ತಿತ್ತು. ಇದೇ ತರಹ ಐದಾರು ಕಡೆಗಳಲ್ಲಿ ನಡೆದು ಹೋಯಿತು. ನಮಗೆ ಅಷ್ಟೊಂದು ಹಣ ಕಟ್ಟಿ ಕೆಲಸಕ್ಕೆ ಸೇರುವ ಶಕ್ತಿ ಇರಲಿಲ್ಲ. ನಾವು ಓದಿ ತಪ್ಪು ಮಾಡಿದೆವು ಎಂದೆನಿಸಿತಿತ್ತು. ನಮಗೆ ಜೀವನವೇ ಸಾಕು ಎಂದೆನಿಸಿತು.

"ಎಲ್ಲಾದರು ಓಡಿ ಹೋಗಬೇಕು ಎನ್ನಿಸುತ್ತಿದೆ. ಮನೆಯ ಪರಿಸ್ಥಿತಿಯೂ ಸಹ ಸರಿಯಿಲ್ಲ. ಅಣ್ಣ ದುಡಿದಿದ್ದರಲ್ಲಿ ಎಷ್ಟು ದಿನ ಅಂತ ಕೂತು ತಿನ್ನುವುದು"

ರಾಜು ದುಃಖದಿಂದ ಹೇಳಿದ. ನನ್ನ ಪರಿಸ್ಥಿತಿಯೇನೂ ಭಿನ್ನವಾಗಿರಲಿಲ್ಲ. ಆ ದಿನ ರಾತ್ರಿ ಯಾರಿಗೂ ಹೇಳದೇ ನಮ್ಮ ಗಂಟು ಮೂಟೆ ಕಟ್ಟಿ ಕೊಂಡು ಬೆಂಗಳೂರಿಗೆ ಹೊರಡಲು ಸಿದ್ದರಾಗಿ ಬಂದೆವು. ರಾತ್ರಿ ಹತ್ತು ಗಂಟೆಯಾಗಿತ್ತು. ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತೆವು. ನಮ್ಮ ದುರಾದೃಷ್ಟವೇನೋ ಲಾಸ್ಟ್ ಬಸ್ ಆ ದಿನ ಬರಲೇ ಇಲ್ಲ. ಮನೆಯ ಕಡೆಗೆ ವಾಪಸ್ಸು ಹೆಜ್ಜೆ ಹಾಕಲು ಮನಸಾಗಲಿಲ್ಲ. ಯಾಕೆಂದರೆ ಮನೆಯಿಂದ ಇಬ್ಬರೂ ಹತ್ತತ್ತು ಸಾವಿರ ಹಣ ಕದ್ದಿದ್ದೆವು. ಬಡತನ ಇರುವ ಮನೆಯಲ್ಲಿ ಹತ್ತು ಸಾವಿರ ಕೂಡಿಡುವ ಕಷ್ಟವೇನೆಂದು ನಮಗೇ ತಿಳಿದೇ ಇತ್ತು.  ಈಗಾಗಲೇ ನಾವು ಹಣ ಕದ್ದ ವಿಷಯ ಮನೆಯವರಿಗೆ ಗೊತ್ತಾಗಿರುತ್ತದೆಯೆಂದು ನಾವಿಬ್ಬರೂ ಹೆದರಿದೆವು. ಮನೆಗೆ ಹಿಂದಿರುಗಿ ನಮ್ಮ ತಪ್ಪು ಒಪ್ಪಿಕೊಳ್ಳುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಓದಿ ಕೆಲಸ ಮಾಡದ ದಂಡಪಿಂಡಗಳು ಎಂಬ ಹಣೆ ಪಟ್ಟಿ ನಮಗೆ ಬಂದಾಗಿತ್ತು. ಸಾಕಷ್ಟು ಅವಮಾನದಿಂದ ನೊಂದಿರುವ ನಮಗೆ ಕಳ್ಳತನದ ಆರೋಪವನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಈಗೇನು ಮಾಡಬೇಕು ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ ಕಾಣಿಸಿದ್ದೇ ಆ ಭೂತ ಬಂಗಲೆ.....!!! 
ಭೂತ ಬಂಗಲೆ ಪ್ರವೇಶಿಸಿ ಸತ್ತರೂ ಪರವಾಯಿಲ್ಲ ಜೀವನದಲ್ಲಿ ಇನ್ನೇನು ಉಳಿದಿದೆ , ಎಲ್ಲಾ ಅಪಮಾನ ಅವಮಾನ ಸಹಿಸಿಕೊಂಡಾಗಿದೆ...

ರಾತ್ರಿ ಸುಮಾರು ಹತ್ತು ಗಂಟೆಯಾಗಿರಬಹುದು. ಹುಣ್ಣಿಮೆ ಚಂದಿರ ದೊಡ್ಡದಾಗಿ ನಗುತ್ತಿದ್ದ. ಆ ಬೆಳದಿಂಗಳ ಬೆಳಕಲ್ಲಿ ಬಂಗಲೆಯ ಗೇಟಿನ ಸಮೀಪ ಬಂದು ನಿಂತೆವು. ಗೇಟನ್ನು ತಳ್ಳಿ ಒಳ ಹೋಗಲು ಕೈಗಳು ನಡುಗುತ್ತಿದ್ದವು. ಒಂದೈದು ನಿಮಿಷ ಉಸಿರನ್ನು ಧೀರ್ಘವಾಗಿ ಎಳೆದುಕೊಂಡೆವು ಸ್ವಲ್ಪ ಧೈರ್ಯ ಬಂದಂತಾಯಿತು. ರಾಜು ಗೇಟನ್ನು ತಳ್ಳಿದ
" ಗಿರ್...ರ್....ರ್..ರ್."
ಸದ್ದು ಸ್ವಲ್ಪ ಜೋರಾಗಿಯೇ ಕೇಳಿಸಿತು. ಅಕ್ಕಪಕ್ಕದ ಮರದಲ್ಲಿ ಕುಳಿತ್ತಿದ್ದ ಹಕ್ಕಿಗಳು ಹೆದರಿ ಪಟಪಟನೆ ರೆಕ್ಕೆ ಬಡಿದು ಮೇಲಕ್ಕೇರಿದವು. ವಾತಾವರಣ ಸಹಜ ಸ್ಥಿತಿ ತಲುಪಲು ಐದು ನಿಮಿಷ ಬೇಕಾಯಿತು. ಬೆಳದಿಂಗಳ ಚಂದ್ರನ ಚಲನೆಯಿಂದಾಗಿ ಪಾಳು ಬಂಗಲೆಯೂ ಎತ್ತಲೋ ಚಲಿಸುತ್ತಿರುವಂತೆ ಭಾಸವಾಯಿತು. ಜನರು ಮಾತನಾಡಿಕೊಳ್ಳುತ್ತಿರುವಂತೆ ನಮ್ಮೂರಿನ ಗಂಗಜ್ಜ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಬಂಗಲೆಯಲ್ಲೇ ..ಎಂದು ಆ ಸಮಯ ನನ್ನ ನೆನೆಪಿಗೆ ಬಂದಿತು. ಕೂಡಲೇ ಕೈ ಕಾಲುಗಳಿಗೆ ಮುಂದೆ ಹೆಜ್ಜೆ ಹಾಕಲು ಶಕ್ತಿ ಇಲ್ಲದಂತಾಯಿತು.

"ರಾಜು ಬಾರೋ ಹೋಗೋಣ... ನನಗೆ ಹೆದರಿಕೆಯಾಗುತ್ತಿದೆ"

ನಡುಗುತ್ತಲೇ ಹೇಳಿದೆ. ರಾಜು ನನ್ನ ಮಾತು ತಿರಸ್ಕರಿಸಿದ.

"ನೀನು ಬೇಕಿದ್ದರೆ ಹೋಗು .... ನಾನು ಸತ್ತರೆ ಇದೇ ಪಾಳು ಬಂಗಲೆಯಲ್ಲೇ ಸಾಯುವೆ"

ಅವನ ಮಾತಿನಲ್ಲಿ ಧೃಡತೆ ಇತ್ತು. ನನಗೆ ಅವನ ಜೊತೆ ಇರುವುದೊಂದೆ ಅನಿವಾರ್ಯತೆ, ಬೇರೆ ದಾರಿನೇ ಇರಲಿಲ್ಲ.
ಬಂಗಲೆಯ ಒಳ ಹೊಕ್ಕಾಗ ಕತ್ತಲು ಆವರಿಸಿಕೊಂಡಿದ್ದರಿಂದ ಎಲ್ಲಾ ವಸ್ತುಗಳು ಅಸ್ಪಷ್ಟವಾಗಿ ಕಾಣಿಸುತ್ತಿದ್ದವು. ಅಲ್ಲಲ್ಲಿ ಜೇಡ ಹೆಣೆದಿದ್ದ ಬಲೆಯು ಚಂದಿರನ ಅಲ್ಪ ಬೆಳಕಿನಲ್ಲಿಯೆ ರೇಷಿಮೆ ನೂಲಿನಂತೆ ಹೊಳೆಯುತ್ತಿತ್ತು.

"ಸರ್...ರ್...ರ್.."

ಏನೋ ಸರಿದು ಹೋದಂತೆ ಸದ್ದಾಯಿತು.ನಾವು ಕಾಲಿಡುತ್ತಿದ್ದಂತೆಯೇ ಹೆಗ್ಗಣವೊಂದು ಹೆದರಿ ಓಡಿ ಹೋದಂತೆ ಕಾಣಿಸಿತು.

"ಗಂಗಜ್ಜ ಸತ್ತಿದ್ದು ಇದೇ ಕೋಣೆಯಲ್ಲಿರಬೇಕು"

ಬಾಗಿಲು ಹಾಕಿದ್ದ ಕೋಣೆಯೊಂದನು ತೋರಿಸಿ ರಾಜು ಹೇಳಿದ.
ನನ್ನ ಮೈ ನಡುಕ ಇನ್ನೂ ಹೆಚ್ಚಾಯಿತು. ಗಂಗಜ್ಜ ಸತ್ತು ಪ್ರೇತಾತ್ಮವಾಗಿ ಅಲೆಯುತ್ತಿದ್ದಂತೆ ಮನಸು ಭಾವಿಸಿತು. ನಾನು ತೊದಲಿಸುತ್ತಾ

" ಪ್...ಪ್..ಲೀ..ಲೀ...ಸ್...ಸ್.... ರಾಜು ಇಂಥದ್....ದ್...ದೆಲ್ಲಾ .... ನ್... ನ್...ನೆನಪಿಸ ..ಬ್...ಬೇಡ..."

ಹೆದರುತ್ತಲೇ ಹೇಳಿದೆ....

"ಆಯ್ತು ಬಾರೋ....."
ರಾಜು ಧೈರ್ಯದಿಂದ ನನ್ನ ಕೈ ಹಿಡಿದು ಕೊಂಡ..
ಆ ನೀರವ ಕತ್ತಲೆಯಲ್ಲಿ ಕಪ್ಪೆಗಳ ಗೂಂಯ್ ಗುಡುವ ಕಿಟಾರ್.ರ್...ರ್.. ಎಂಬ ಸದ್ದು, ಕಿವಿಗೊಟ್ಟು ಆಲಿಸಿದರೆ ಏನೋ ವಿಚಿತ್ರವಾದ ಕೂಗು ಕೇಳಿಸುತ್ತಿತ್ತು

ಹಿಂದಿನಿಂದ ಯಾರೋ ಒದ್ದಂತಾಯಿತು.

"ಅಮ್ಮಾ ....."
ಎಂದು ಜೋರಾಗಿ ಕೂಗಿಕೊಂಡು ದೊಪ್ಪನೆ ನೆಲಹಿಡಿದು ಬಿದ್ದೆ....
ಕಣ್ಣು ಮಂಜು ಕವಿದಂತಾಯಿತು. ಕತ್ತಲೆ...!! ಕತ್ತಲೆ... !! ಸುತ್ತಲೂ ಆವರಿಸಿದಂತಾಯಿತು. ಅಮೆಲೇನಾಯಿತು ನನ್ನ ಅರಿವಿಗೆ ಬಾರದ ಹಾಗೆ ಪ್ರಜ್ಞೆ ತಪ್ಪಿ ಹೋಗಿದ್ದೆ. ಅಲ್ಲಿಂದ ಎಲ್ಲವೂ ಅಸ್ಪಷ್ಟ.. ನಿದ್ದೆಯ ಮಂಪರು...
ಕಣ್ಣು ಬಿಟ್ಟು ನೋಡಿದಾಗ ಇನ್ನೂ ಅದೇ ಬಂಗಲೆಯಲ್ಲಿ ಬಿದ್ದಿದ್ದೆ. ನಾನು ಇನ್ನೂ ಜೀವಂತವಾಗಿರುವುದನ್ನು ಕಂಡು ನನಗೇ ಆಶ್ಚರ್ಯವಾಯಿತು. ನನ್ನ ರಟ್ಟೆಯನ್ನೊಮ್ಮೆ ಚಿವುಟಿ ಕೊಂಡೆ.. ಹೌದು ಇದು ನಿಜ..ನಿಜವಾಗಲೂ ನಾನು ಬದುಕಿದ್ದೇನೆ....!!!

ಸುತ್ತಲೂ ನೋಡಿದೆ... ಭೂತ ಬಂಗಲೆಯಂತೆ ಕಾಣಿಸಲೇ ಇಲ್ಲ.. ಎಲ್ಲಾ ಕಡೆ ಸ್ವಚ್ಛವಾಗಿತ್ತು. ರಾತ್ರಿ ಗೇಟ್ ತೆಗೆದು ಒಳ ಬಂದಾಗ ಇದ್ದ ಕಸ ಕಡ್ಡಿಗಳನ್ನು ಗುಡಿಸಿ ರಾಜು ಸ್ವಚ್ಛವಾಗಿರಿಸಿದ್ದ. ಬಂಗಲೆ ಮುಂಬಾಗದ ಗಿಡ ಗಂಟೆಗಳೆಲ್ಲಾ ಕತ್ತರಿಸಿ ಸ್ವಚ್ಛ ಮಾಡಿದ್ದ. ಬಂಗಲೆಯ ಗೋಡೆಯ ಮೇಲಿದ್ದ ಧೂಳೂ ಸಹ ಕಾಣಲಿಲ್ಲ.....

"ಏನೋ ರಾಜು ಇದೆಲ್ಲಾ"

ಆಶ್ಚರ್ಯದಿಂದ ಕೇಳಿದೆ

"ಪ್ಲೀಸ್.... ನನ್ನ ಕ್ಷಮಿಸಿ ಬಿಡೋ.."
ರಾಜು ನನ್ನ ಬಿಗಿದಪ್ಪಿಕೊಂಡು ಹೇಳಿದ

"ಏನಾಯ್ತೋ ರಾಜು....!!! ಏನೋ ಇದೆಲ್ಲಾ.. !!!"
ಎಂದೆ ...

ನನಗೆ ಏನೂ ತೋಚದಂತಾಯಿತು..

ಆಗ ರಾಜು ಎಲ್ಲವನ್ನು ವಿವರಿಸಿ ಹೇಳಿದ

"ನಾನು ನಿನ್ನೆ ಮನೆ ಬಿಟ್ಟು ಬೆಂಗಳೂರಿಗೆ ಹೋಗುತ್ತೇನೆ ಎಂದು ಬಂದಿದ್ದು ಸುಳ್ಳು... ನಾನು ಬಂದಿದ್ದು ಈ ಬಂಗಲೆಗೆ ಅಂತಾನೇ... ನಮ್ಮಣ್ಣನೆ ಭಯವಾದರೆ ನಿನ್ನನ್ನು ಕರೆದುಕೊಂಡು ಹೋಗು ಎಂದಿದ್ದ... ನಾನು ಬಂಗಲೆಗೆ ಎಂದರೆ ನೀನು ಖಂಡಿತ ಬರುವುದಿಲ್ಲಾ ಅಂತ ಗೊತ್ತಿತ್ತು . ಅದಕ್ಕೆ ಬೆಂಗಳೂರಿಗೆ ಹೋಗೋಣ ಎಂದು ನಿನ್ನನ್ನು ಹುರಿದುಂಬಿಸಿ ಇಲ್ಲಿಯ ವರೆಗೂ ಕರೆದು ತಂದೆ... ಲಾಸ್ಟ್ ಬಸ್ ಬರುವುದು ನಿಂತು ಈಗಾಗಲೇ ಮೂರು ದಿನ ವಾಗಿದೆ ಕಲಕ್ಷನ್ ಇಲ್ಲವಂತೆ.. ಇದು ನನಗೆ ಮೊದಲೇ ಗೊತ್ತಿತ್ತು. ನನ್ನ ಸುಳ್ಳಿಗೆ ದಯಮಾಡಿ ಕ್ಷಮಿಸು ಬಿಡು. ನಾನು ಬೇಕಂತಲೇ ನಿನ್ನನ್ನು ಕರೆದುಕೊಂಡು ಈ ಭೂತಬಂಗಲೆಗೆ ಬಂದೆ"

ರಾಜು ನನಗೆ ಕೈ ಮುಗಿದು ಬೇಡಿಕೊಂಡ.

"ಸರಿ.... ಈ ರೀತಿಯ ಸುಳ್ಳು ಯಾಕೆ... ಏನಾಯ್ತೋ...?? ನನಗೇನೂ ಅರ್ಥ ವಾಗ್ತಿಲ್ಲ"

ನಾನು ಕುತೂಹಲದಿಂದ ಕೇಳಿದೆ

" ನೀನು ತಿಳಿದಂತೆ ಗಂಗಜ್ಜ ಆತ್ಮಹತ್ಯೆಯಿಂದ ಸತ್ತಿದ್ದಲ್ಲ... ಹಾರ್ಟ್ ಅಟ್ಯಾಕ್ ನಿಂದ... ಗಂಗಜ್ಜನಿಗೆ ಐದು ಜನ ಗಂಡು ಮಕ್ಕಳು.ಅವರಲ್ಲಿ ನಮ್ಮಪ್ಪನೂ ಒಬ್ಬರು. ಗಂಗಜ್ಜನಿಗೆ ನಮ್ಮಪ್ಪನೇ ಕೊನೆಯವನು. ಗಂಗಜ್ಜ ಸತ್ತ ಘಳಿಗೆ ಮತ್ತು ನಕ್ಷತ್ರ ಸರಿಯಿಲ್ಲ ಎಂದು ಪುರೋಹಿತರು ಹೇಳಿದ್ದರಿಂದ ನಮ್ಮಪ್ಪ ಮೂರು ತಿಂಗಳವರೆಗೆ ಈ ಬಂಗಲೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿ ನೆಲೆಸಿದರು. ನಮ್ಮಪ್ಪನ ನಾಲ್ಕು ಅಣ್ಣಂದಿರು ಒಳ್ಳೇ ಕೆಲಸ ಹಿಡಿದು ಬೇರೆ ಬೇರೆ ಕಡೆ  ನೆಲಸಿದ್ದಾರೆ. ಅವರಾರಿಗೂ ಅಂತಹ ಬಡತನವಿಲ್ಲ. ಅವರು ನೆಲೆಸಿರುವ ಪಟ್ಟಣಗಳಲ್ಲಿಯೇ ಸಾಕಷ್ಟು ಆಸ್ತಿ ಪಾಸ್ತಿ ಸಂಪಾದಿಸಿಕೊಂಡಿದ್ದಾರೆ. ಅವರಲ್ಲಿ ಏನೂ ಇಲ್ಲದೆಯೇ ಬಡತನದಿಂದ ಜೀವನ ನಡೆಸುತ್ತಿರುವವರೆಂದರೆ ನಮ್ಮಪ್ಪ ಒಬ್ಬರೇ...ಈ ಬಂಗಲೆಯನ್ನು ಬಿಟ್ಟು ತನಗೇ ಬಿಟ್ಟು ಕೊಡುವಂತೆ ಅಪ್ಪ ಕೇಳಿಕೊಂಡರೂ ಯಾರೂ ಬಿಟ್ಟು ಕೊಡಲಿಲ್ಲ. ಎಲ್ಲರೂ  ಇದು ಪಿತೃಾರ್ಜಿತ ಆಸ್ತಿ ಸಮ ಪಾಲು ಬೇಕೆಂದು ಹಠ ಹಿಡಿದರು. ನಮ್ಮಪ್ಪ ಎಲ್ಲರಿಗಿಂತ ಕಡು ಬಡವರು ಬಂಗಲೆ ಮಾರಿ ಹಂಚಿಕೊಂಡರೆ ಏನೂ ಸಿಗಲಾರದು ಎಂದುಕೊಂಡು ಭೂತದ ಕತೆ ಕಟ್ಟಿದರು. ಪ್ರಕೃತಿಯಲ್ಲಿ ನಡೆಯುತ್ತಿದ್ದ ಸದ್ದು ವಿಸ್ಮಯಗಳಿಗೆ ಭೂತಬಂಗಲೆಯನ್ನೇ ಕಾರಣ ಕೊಡುತ್ತಾ ಬಂದರು. ಮೂರು ತಿಂಗಳ ನಂತರ ಮತ್ತೆ ಮನೆಯನ್ನು ಸೇರಬೇಕಾಗಿದ್ದ ನಾವುಗಳು ಬೇಕಂತಲೇ ಮನೆಯನ್ನು ಸೇರದೇ ದೂರ ಉಳಿದೆವು. ನಮ್ಮಪ್ಪನ ಅಣ್ಣಂದಿರೂ ಸಹ ಭೂತದ ಕತೆಯನ್ನು ನಿಜವೆಂದೇ ನಂಬುತ್ತಾ ಹೋದರು. ಬಂಗಲೆಯನ್ನು ಮಾರಿ ಹಂಚಿಕೊಳ್ಳಬೇಕೆನ್ನುವ ಅಣ್ಣಂದಿರ ಆಸೆಗೆ ನಮ್ಮಪ್ಪ ಸಹಕರಿಸಲಿಲ್ಲ.ಭೂಕದ ಕತೆ ಕಟ್ಟುತ್ತಲೇ ಹೋದರು. ಬಂಗಲೆಕೊಳ್ಳಲು ಬಂದವರೆಲ್ಲಾ ಹಾಗೇ ಹಿಂದಿರುಗಿದರು. ಈ ಬಂಗಲೆ ನಮ್ಮಪ್ಪನ ಹೆಸರಿಗೆ ಬರುವುದಕ್ಕೆ ಸುಮಾರು ಹತ್ತು ವರ್ಷವೇ ಆಗಿ ಹೋಯಿತು. ಅಲ್ಲಿಂದ ತಕ್ಷಣ ನಾವು ನೆಲೆಸಲು ಬಂಗಲೆಗೆ ಬರುವಂತೆಯೂ ಇರಲಿಲ್ಲ. ಏಕೆಂದರೆ ಇದರಿಂದ ಊರಿನ ಜನರಿಗೆ ಅನುಮಾನ ಬರುವ ಸಾಧ್ಯತೆ ಹೆಚ್ಚಾಗಿತ್ತು. ಮೊನ್ನೆ  ನಮ್ಮ ಅಪ್ಪ ತೀರಿಹೋದ ವಿಷಯ ನಿನಗೆ ಗೊತ್ತೇ ಇದೆ. ಸಾಯುವ ಮುನ್ನ ಅಪ್ಪ ಈ ವಿಷಯವನ್ನು ಹೇಳಿ ಸತ್ತರು. ನನಗೂ ಬಡತನ ಸಾಕಾಗಿ ಹೋಗಿದೆ. ಹೆದ್ದಾರಿ ಪಕ್ಕದಲ್ಲಿರುವುದರಿಂದ ಬಂಗಲೆಗೆ ಒಳ್ಳೆ ಬೆಲೆ ಸಿಕ್ಕಿದೆ. ಯಾವುದೋ ಒಂದು ಕಂಪನಿ ಹೋಟೆಲ್ ತೆರೆಯಲು ಮುಂದೆ ಬಂದಿದೆ ಮೂವತ್ತೈದು ಲಕ್ಷಕ್ಕೆ ಕೇಳುತ್ತಿದ್ದಾರೆ"

ರಾಜು ಎಲ್ಲವನ್ನೂ ಹೇಳಿದ

"ಅಯ್ಯೋ ರಾಮ... ಇದಕ್ಕೆ ರಾತ್ರಿ ಹೊತ್ತು ನನ್ನನ್ನು ಕರೆದುಕೊಂಡು ಬಂದು ಸಾಯಿಸುತ್ತಿದ್ದೆಲ್ಲೋ... ಪಾಪಿ"

ಎಂದು ಬೈಯ್ದೆ..

"ರಾತ್ರಿ ಬರುವುದಕ್ಕೂ ಒಂದು ಕಾರಣವಿದೆ. ಅಪ್ಪ ಸಾಯುವ ಮುನ್ನ ಬಂಗಲೆ ಸುತ್ತಾ ತಂತಿ ಬೇಲಿ ಹಾಕಿಸಿದರು. ಕೆಲವು ಹಳ್ಳಿ ಮುಖಂಡರು ಅಪ್ಪನ ಮೇಲೆ ಅನುಮಾನ ಪಟ್ಟರು. ಬಂಗಲೆ ತನ್ನ  ಹೆಸರಿಗೆ ಬಂದ ಕೂಡಲೇ ತಂತಿ ಬೇಲಿ ಹಾಕಿಸಿದ. ಭೂತದ ಕತೆ ಸುಳ್ಳಿರಬೇಕು ಎಂದು ಕೆಲವರು ಮಾತನಾಡಿಕೊಂಡರು. ಮಾರನೇ ದಿನ ತಂತಿ ಬೇಲಿ ಹಾಕಿದ ಮಾರ ಸತ್ತು ಹೋದ, ಅವನಿಗೆ ಯಾವುದೋ ರೋಗವಿತ್ತು. ಅಪ್ಪ  ಬಾಯಿ ಮುಚ್ಚಿಸಲು ಮತ್ತೆ ಭೂತದ ಕತೆ ಕಟ್ಟಿದರು. ಮಾರ ಸತ್ತಿರುವುದಕ್ಕೂ ಬಂಗಲೇಯ ಸುತ್ತ ಬೇಲಿ ಹಾಕಿದ್ದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಎಲ್ಲವೂ ಕಾಕತಾಳಿಯ. ಎಲ್ಲರೂ ಮತ್ತೆ ಅಪ್ಪನ ಮಾತನ್ನು ನಂಬಿದರು. ಅಂದಿನಿಂದ ಹಳ್ಳಿಯವರು ಬಂಗಲೆಯ ಕಡೆಗೆ ಯಾರೂ ಹೋಗದಂತೆ ಕಟ್ಟಪ್ಪಣೆ ಮಾಡಿದ್ದು ನಿನಗೆ ಗೊತ್ತೇ ಇದೆ. ಈಗ ನಮ್ಮಪ್ಪನೂ ಸತ್ತು ಹೋಗಿ ಒಂದು ವರ್ಷವಾಯಿತು ಈಗಾದರೂ ಈ ಬಂಗಲೆಯನ್ನು ಮಾರೋಣವೆಂದು ಅಣ್ಣ ಹೇಳಿದ್ದಾರೆ. ನಾವು ಒಂದು ದಿನ ರಾತ್ರಿ ಬಂಗಲೆಯಲ್ಲಿ ನೆಲೆಸಿದರೆ ಭೂತದ ಬಗ್ಗೆ ಇರುವ ಕಲ್ಪನೆ ಜನರಿಂದ ಮಾಯವಾಗುತ್ತದೆ. ಅಥವಾ ನಾವೇ ಎಲ್ಲರಿಗೂ ಯಾವ ಭೂತವೂ ಇಲ್ಲವೆಂದು ಹೇಳಬಹುದು. ಆದ್ದರಿಂದ ರಾತ್ರಿ ನಿನ್ನನ್ನು ಕರೆದುಕೊಂಡು ಬಂದಿದ್ದು. ನೀನು ಅತಿಯಾಗಿ ಹೆದರುತ್ತಿದುದರಿಂದ ನಾನೇ ಹಿಂದಿನಿಂದ ನಿನಗೆ ಗೊತ್ತಾಗದಂತೆ ಕೈ ಹಾಕಿ ತಳ್ಳಿ ಬೀಳಿಸಿಬಿಟ್ಟೆ..."

ರಾಜು ಮತ್ತಷ್ಟು ವಿವರಿಸಿ ಹೇಳಿದ

"ಈಗ ಜನರಿಗೆ ಅನುಮಾನ ಬರಲ್ವೇನೋ..?"
ಎಂದೆ

"ಇಲ್ಲ ಅನುಮಾನ ಬರಲು ಸಾದ್ಯವಿಲ್ಲ. ನಮ್ಮಿಬ್ಬರಿಗೆ ಕೆಲಸ ಸಿಗದಿದ್ದರಿಂದ ಸಾಯಲು ಭೂತ ಬಂಗಲೆಗೆ ಹೋಗಿದ್ದಾರೆಂದು ಅಣ್ಣ ಈಗಾಗಲೇ ಹೇಳಿಕೊಂಡು ಬಂದಿರುತ್ತಾನೆ.ಎಲ್ಲವೂ ಅಣ್ಣ ಮಾಡಿದ ಉಪಾಯದಂತೆ ನಡೆಯುತ್ತಿದೆ. ಅಪ್ಪ ಮಾಡಿದ ಭೂತದ ಕತೆಯಿಂದ ನಾವು ಆಸ್ತಿಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇನ್ನೇನು ಕೆಲವು ಗಂಟೆಯಲ್ಲಿ ಜನ ಬಂದು ಸೇರುತ್ತಾರೆ ನೋಡ್ತಾ ಇರು. ಬಂದ ಜನರಿಗೆ ನಾವೇ ಭೂತವಿಲ್ಲ ಎಂದು ಹೇಳಬೇಕು. ಬಂಗಲೆ ಮಾರಿ ಬಂದ ಹಣದಲ್ಲಿ ನಿನಗೂ ಐದು ಲಕ್ಷ ಪಾಲಿದೆ. ಅದು ಕೆಲಸಕ್ಕೆ ಸೇರಲು ಮಾತ್ರ. ನಿನ್ನ ಬಡತನದಿಂದ ಅಣ್ಣ ಈ ನಿರ್ಧಾರ ಮಾಡಿದ್ದಾರೆ. ಇಬ್ಬರೂ ಲಂಚ ಕೊಟ್ಟಾದರೂ ಸರಿ ಕೆಲಸಕ್ಕೆ ಸೇರಿ ಬಿಡೋಣ. ಜನ ಸೇರಿದಾಗ ನಾವು ಸಾಯಲು ಬಂದಿದ್ದು. ಆದರೆ ಇಲ್ಲಿ ಯಾವ ಭೂತವಿಲ್ಲ ಎಂದು ಹೇಳಿ ಜನರಲ್ಲಿಯ ಭಯ ದೂರ ಮಾಡಿದರೆ ಸಾಕು. ನಾವು ಒಂದು ವಾರ ಇಲ್ಲಿಯೇ ನೆಲಸೋಣ. ಇದರಿಂದ ನಿನಗೂ ಲಾಭ.. ಯೋಚಿಸಿ ನೋಡು"
ಎಂದನು..

ನನಗೆ ಈಗ ಎಲ್ಲಾ ವಿಷಯ ಸ್ಪಷ್ಟವಾಯಿತು. ಬಡತನದಿಂದ ಬೇಸತ್ತ ನನಗೆ ರಾಜು ಹೇಳಿದ್ದೇ ಸರಿ ಎನಿಸಿತು.....ಅದರಂತೆಯೇ ನಡೆಯಿತು.
ನಾನೀಗ ಕಾಲೇಜೊಂದರಲ್ಲಿ ಉಪನ್ಯಾಸಕ. ರಾಜು ಸಹ ಕಂದಾಯ ಇಲಾಖೆಯಲ್ಲಿ ಲಾಭದಾಯಕ ಹುದ್ದೆಯಲ್ಲಿದ್ದಾನೆ. 

 ಯಾವಾಗಲಾದರೂ ನಾವು ಹಳ್ಳಿಕಡೆ ಹೋದರೆ ಆ ಭೂತ ಬಂಗಲೆಯನ್ನು ನೋಡದೇ ಇರುವುದಿಲ್ಲ. ಊರಿನ ಪ್ರವೇಶದಲ್ಲೇ ದ್ವಾರದಲ್ಲೇ ಆ ಬಂಗಲೆ ಇದೆ. ಆದರೆ ಆ ಬಂಗಲೆಯ ಜಾಗದಲ್ಲಿ ಒಂದು ದೊಡ್ಡ ಹೋಟೇಲು ತಲೆ ಎತ್ತಿದೆ. ಯಾವಾಗಲೂ ಆ ಹೋಟೇಲಿನಲ್ಲಿ ಜನರ ಗುಂಪು ಇದ್ದೇ ಇರುತ್ತದೆ. ನಾವೂ ಸಹ ಗಂಗಜ್ಜ ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಎಂದು ನಂಬಿಸಲಾಗಿದ್ದ ಆ ಸ್ಥಳದಲ್ಲೇ ಹೋಟೆಲಿನವರು ಹಾಕಿದ್ದ ಕುಷನ್ ಸೋಫಾದ ಮೇಲೆ ಕುಳಿತು ಇಡ್ಲಿ ವಡೆಯನ್ನು ತಿಂದೆವು. ನಮ್ಮ ಲಾಭಕ್ಕೆ ಅನುಕೂಲಕ್ಕೆ ತಕ್ಕಂತೆ ನಾವು ಕತೆಯನ್ನು ಹೆಣೆದು ಬಿಡುತ್ತೇವೆ ಜನರನ್ನು ನಂಬಿಸಿಬಿಡುತ್ತೆವೆಯಲ್ಲವೆ.....? "ಉದರ ನಿಮಿತ್ತಂ ಬಹುಕೃತ ವೇಷಂ" ಎನ್ನುವಂತೆ.
-ಪ್ರಕಾಶ್ ಎನ್ ಜಿಂಗಾಡೆ