Saturday, 13 January 2018

ವಚನಾಮೃತ -5

ಸತ್ಸಂಗವೇನು ಬಿಕರಿಯಾಗುವ ವಸ್ತುವೆ ಅಯ್ಯ
ಬಿಕರಿ ಉಂಟೆಂದು ಹೇಳಿದರೆ
ನಾ ಮೊದಲ ಸಾಲಲಿ ನಿಲ್ಲವೆನಯ್ಯ

ಸತ್ಸಂಗವ ತೊರೆದವರು ಇರುವರೇ ಅಯ್ಯ
ಸಂಗವು ಹಿತ ನೀಡುವುದಾದೊಡೆ
ಬೇಕೆಂದಡೆ ಅರಸಿ ಹೋಗುವೆನಯ್ಯ

ಸತ್ಸಂಗವು ಸಂತಸ ನೀಡದಿರಲು ಸಾಧ್ಯವೇ ಅಯ್ಯ
ಸಂಗವಿರುವಾಗ ದುಃವೂ ಹಬ್ಬವೇ
ಸಂಗವಿರಡೆಡೆ ಹಬ್ಬವೂ ದುಃಖವಯ್ಯಾ..

      - ಪ್ರಕಾಶ್ ಎನ್ ಜಿಂಗಾಡೆ

ಹಳ್ಳಿಯವರು (ಕವನ)

ಹಳ್ಳಿಯ ಹಾದಿಯಿದು
ಒಲವು ಸಿಗುವ ಸವಿ ನೆಲೆಯಿದು
ಬಡವರಿರುವ ಸಿರಿವಂತ ತಾಣವಿದು
ಪ್ರೀತಿಗೆ ನೀತಿಗೆ ಏಕತೆಗೆ
ಆಲಯವಿದು.. ಪ್ರೇಮಾಲಯವಿದು

ಸ್ನೇಹ ಸಂಬಂಧಗಳ ಮಾರಾಟವಿಲ್ಲ
ಸಂಸ್ಕೃತಿ ಮೌಲ್ಯಗಳ ನಾಶವಿಲ್ಲ
ಹಣಕೆ ಬಾಯ್ಬಿಟ್ಟ ಹೆಣಗಳಿಲ್ಲ
ಬದುಕಿನು ಕಲಿಸುವ ವಿದ್ಯಾಲಯವಿದು
ಬನ್ನಿರೈ ಒಮ್ಮೆ ನೆಲಸಿ ನೋಡಿರೈ

ಯಾರಿಹರು ಒಮ್ಮೆ ತೋರಿಸಿಬಿಡಿ
ಹಳ್ಳಿಯ ಹಿನ್ನಲೆಯಿರದ ಸಾಧಕರು
ದೇಶವನೇ ಆಳಿ ತೋರಿಹರು
ಬೆವರಿನ ಹನಿಯನು ಭೂಮಿಗೆ ಬೆರಸಿ
ಮಣ್ಣಿನ ಮಕ್ಕಳೇ ಆಗಿಹರು..

ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ 2

ಕಣ್ಣಿಗೆ ಕಣ್ಣೀರೆ ಅಂದವಯ್ಯ
ಸಂತಸಕೆ ನೋವಿದ್ದರೆ ಚೆಂದವಯ್ಯ
ಸುಖವೊಂದಿದ್ದರೆ ಸಂಸಾರ ಸುಖಿಸದು
ದಃಖವಿಲ್ಲದಿರೆ ಪ್ರೀತಿ ದೊರಕದು
ನಾಲ್ಕು ದಿನದ ಬಾಳ ದಾರಿಯಲಿ
ನೋವ ಮರೆತು ಸುಖಿಸುವವನೆ
ನಿಜ ಪಯಣಿಗನಯ್ಯ ..
   
             -ಪ್ರಕಾಶ್ ಎನ್ ಜಿಂಗಾಡೆ

ಕರುನಾಡ ತಾಯಿ (ಕವನ)

ಕರಮುಗಿದು ಕರುನಾಡ ತಾಯಿಗಿದೊ ನಮವು
ಹರಸಿಯೆಮ್ಮಯ ಹೆಮ್ಮೆಯಿಂದಲಿ ಪೋಷಿಸಿ
ನುಡಿಗಳನು ನಾಲಿಗೆಯಿಂದಲಿ ತೊದಲಿಸಿ
ತದ ಲಾಸ್ಯವ ಕಂಠಸ್ಯದೋಳ್ ಮೊಳಗಿಸಿ
ಓಂ ಶ್ರಿಕಾರವ ಸಕ್ಕದೋಳ್ ಬೆರೆಸಿ
ತಾಳ ಲಯವಂ ಪದಗಳಲಿ ನಲ್ಮಿಸಿ
ಚಿರ ನೂತನ ಸಿರಿ ಶಬ್ಧವಂ ಕಲ್ಪಿಸಿ
ಖಗ ಮಿಕಗಳೆಲ್ಲವಂ.. ತನು ಮನವೆಲ್ಲವಂ
ತನ್ನಲೇ ಸೆಳೆದು, ಅಪ್ಪಿ ಬಿಗಿದಪ್ಪಿ
ಅನಂತ ನೆಲೆಯ ಸಿರಿ ನುಡಿಯಂ
ಉಸಿರನುಸಿನಲಿ ಬೆರೆಸಿ
ಜಗದೋಳ್ ಚಿರನೂತನ ಮೆರೆದ
ತಾಯಿಗೆ ಕನ್ನಡಿಗರೇ ಕೃತಘ್ನರೆಂಬೆನು
ಕ್ಷಮಿಸರವರನ್ನ ಕರುಣಿಸು ದೇವಿಯೆ
ಪದಗಳ ನಾಲಿಗೆಯಲ್ಲಾಡಿವ ಶಕ್ತಿಯಂ
ಕನ್ನಡಂ ಕನ್ನಡಂ ಎಂಬ ಮಂತ್ರವ
ಮೊಳಗುತಿರಲಿ ಎದೆ ಎದೆಯಲಿ
ಬೇಡಿಹೆನು ಮತ್ತೆ ನಿನ್ನಲೇ ಕೈಮುಗಿಯುತಲಿ..

           ಪ್ರಕಾಶ್ ಎನ್ ಜಿಂಗಾಡೆ

ಧನ್ಯಂ

ಪರಿಣಿತರಂ ಪಲವುಂ ಮುಖಪುಟ
ಮಿತ್ರರಂ ಪಡೆದ ನಾಂ ಧನ್ಯಂ
ಅದರ ಪರಿಯಂ ಎಂತು ಪೇಳ್ವೆಂ ಎಂತು ಬಣ್ಣಿಪೆ ನಾಂ
ಕೆಲವರಂ ನಿಜ ಕವಿ ಗುಣದವರಂ
ಕೆಲವರಂ ಅಕ್ಕರೆಯ ಚೆಲ್ವರ್
ಈ ಕರುನಾಡ ಕಬ್ಬಿಗರ್ ನಿಜ ಮಾನಿಸರ್ ನಿಜ ಕಲಿಗಳಂ

ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ 1

ಹೊಗಳಿದೊಡೆ ಶಿರದೊಳು 
ಹೊನ್ನ ಕಿರೀಟ ಮೂಡುವುದಯ್ಯ
ತೆಗಳಿದೊಡೆ ಶಿರವೆಂಬುದು
ಕದಡಿದ ಕೆಸರಂತಾಗುವುದಯ್ಯ ..

ದಿಟದ ನುಡಿ ಬೇಡೆಂಬರಯ್ಯ
ಮಿಥ್ಯದ ಸಿಹಿ ಬೇಕೆಂಬರಯ್ಯ
ಕ್ಷಣಿಕ ಹಿತವನರಸುವ ಮೂಢರು
ಅನಂತ ಸುಖವ ತೊರೆಯುವರಯ್ಯ

         -ಪ್ರಕಾಶ್ ಎನ್ ಜಿಂಗಾಡೆ

ಕವಿಗಳಿವರು (ಕವನ)

ಕಲ್ಲು ಪೊಟರೆಗಳಲಿ ಅಕ್ಷರಗಳ ಕೆತ್ತಿದ
ಚಿಹ್ನೆಯ ರೂಪದಿ ಭಾವನೆ ತೋರಿದ
ಆ ಆದಿವಾಸಿಯೂ ಕಬ್ಬಿಗನೇ..

ತಾಳೆ ಗರಿಯೋಳ್ ಕಾವ್ಯವಂ ಬರೆದು
ಮಯೂರ ಗರಿಯಂ ಲೇಖನಿಯಾಗಿ ಪಿಡಿದು
ಮಹಾಕಾವ್ಯವಂ ಖಂಡಿಸಿರುವರೂ ಕವಿಗಳೇ...

ಕಾಗದದ ಪುಟ ಪುಟಗಳಲಿ
ಶಾಹಿಯ ಪದ ಲಾಲಿತ್ಯದಲಿ
ಹೊತ್ತಿಗೆಯ ರೂಪ ಕೊಟ್ಟವರೂ ಕವಿಗಳೇ..

ಬುಕ್ಕೋ.. ಫೇಸ್ ಬುಕ್ಕೋ
ವಾಟ್ಸಪ್ಪೋ.. ಬರೀ ಬ್ಲಾಗೋ
ಏಕೀ ಭಿನ್ನ ಭಾವ..!ಅವರೂ ಕವಿಗಳೇ..

ಕಲ್ಲೋ..ಗರಿಯೋ..ಹಾಳೆಯೋ..?
ಯಾವುದಾದರೇನು ಭಾವವ ಚೆಲ್ಲಲು
ಗೋ ಗ್ರೀನ್ ಕವಿಗಳಿವರೆಂದು
ಜೈ ಅನ್ನಬಾರದೇಕೆ..?

    -ಪ್ರಕಾಶ್ ಎನ್ ಜಿಂಗಾಡೆ