Wednesday 28 November 2018

ಮನದಾಸೆ ಹಕ್ಕಿಯಾಗಿ

*ಮನದಾಸೆ ಹಕ್ಕಿಯಾಗಿ..*

ನಮ್ಮ ಮನೆಯ ಕರಿ ಹಂಚಿನ ಸೂರಿನಲ್ಲಿ ಗುಬ್ಬಚ್ಚಿಯೊಂದು ಗೂಡು ಕಟ್ಟುತ್ತಿತ್ತು. ಗುಬ್ಬಚ್ಚಿಯು ಚೀಂವ್... ಚೀಂವ್...ಎಂದು ಪಟ ಪಟನೆ ರೆಕ್ಕೆ ಬಡಿಯುತ್ತಾ ನಮ್ಮ ಕಣ್ಣ ಮುಂದೆನೇ ಹಾದು ಹೊಗುತ್ತಿದ್ದರೆ ನನಗೆ ಒಂದು ರೀತಿಯ ಆನಂದ ಸಿಗುತ್ತಿತ್ತು. ಗುಬ್ಬಚ್ಚಿ ಗೂಡು ಹೆಣೆಯುವುದನ್ನು ನೋಡುವುದೇ ಒಂದು ಕುತೂಹಲ.ತನ್ನ ಕೊಕ್ಕಿನಿಂದ ಒಂದೊಂದೇ ಹುಲ್ಲಿನ ಗರಿಗಳನ್ನು ತಂದು ಸೂರಿನಡಿಯಲ್ಲಿ ಸೇರಿಸಿ ಗೂಡು ಕಟ್ಟುತ್ತಿತ್ತು. ಶಾಲೆಯಿಂದ ಬಂದ ಕೂಡಲೇ ನಾನು ಗುಬ್ಬಚ್ಚಿಯ ಗೂಡಿನ ಬಳಿ ಹೋಗಿ ಎಷ್ಟು ಮೊಟ್ಟೆ ಇಟ್ಟಿದೆಯೆಂದು ಪ್ರತಿದಿನ ಹೋಗಿ ನೋಡುತ್ತಿದ್ದೆ.  ಒಂದೊಂದು ಸಾರಿ ಗುಬ್ಬಚ್ಚಿಯೂ ಸಹ ಗೂಡಲ್ಲೇ ಇರುತ್ತಿತ್ತು. ನಾನು ಅದಕ್ಕೆ ಏನೂ ತೊಂದರೆ ಮಾಡದಂತೆ ಹಾಗೆಯೇ ಹಿಂದೆ ಸರಿಯುತ್ತಿದ್ದೆನು. ಹದಿನೈದು ದಿನಗಳ ಹಿಂದೆ ಗುಬ್ಬಚ್ಚಿ ಗೂಡು ಕಟ್ಟುತ್ತಿದ್ದಾಗ ನಾನು ಗುಬ್ಬಚ್ಚಿಗೆ ಸಹಾಯ ಮಾಡಲೆಂದೇ ಸಿದ್ದಣ್ಣನ ಕಣದಲ್ಲಿರುವ ಬಣವೆಯಿಂದ ಒಂದು ಹಿಡಿ ಹುಲ್ಲನ್ನು ತಂದು ಗುಬ್ಬಚ್ಚಿ ಗೂಡುಕಟ್ಟುತ್ತಿದ್ದ ಸ್ಥಳದ ಹತ್ತಿರಕ್ಕೆ ತಂದು ಇಟ್ಟೆವು. ಪಾಪ ಗುಬ್ಬಚ್ಚಿ ಬಹು ದೂರ ಹಾರಿ ಹೋಗಿ ಕಷ್ಟಪಟ್ಟು ಹುಲ್ಲನ್ನು ತಂದು ಗೂಡನ್ನು ಕಟ್ಟುತ್ತಿತ್ತು. ಈಗ ಗುಬ್ಬಚ್ಚಿಗೆ ಸ್ವಲ್ಪ ಅನುಕೂಲವಾಗಬಹುದೆಂದು ಭಾವಿಸಿದೆನು. ಆದರೆ ಗುಬ್ಬಚ್ಚಿ ನಾನು ತಂದ ಹುಲ್ಲನ್ನು ಮುಟ್ಟಲೇ ಇಲ್ಲ ಮತ್ತೆ ಬಹು ದೂರ ಹಾರಿಕೊಂಡೇ ಹುಲ್ಲನ್ನು ತರುತ್ತಿತ್ತು. ಗುಬ್ಬಚ್ಚಿಗೆ ನನ್ನ ಸಹಾಯ ಬೇಕಾಗಿರಲಿಲ್ಲ. ಇಲ್ಲೇ ಹತ್ತಿರದಲ್ಲಿ ಹುಲ್ಲು ಇದ್ದರೂ ಗುಬ್ಬಚ್ಚಿ ಹೀಗೇಕೆ ಮಾಡುತ್ತಿದೆ. ಅದಕ್ಕೆ ಮಾನವನ ಸಹಾಯ ಬೇಕಿಲ್ಲವೇ..? ಎಂದೆನಿಸಿತು....

ಒಂದು ದಿನ ಅಮ್ಮ ಸೂರಿನಲ್ಲಿರುವ ಗುಬ್ಬಚ್ಚಿ ಗೂಡನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಳು. ನಾನು ಗುಬ್ಬಚ್ಚಿ ಗೂಡು ಬೇಕೇ ಬೇಕೆಂದು ಹಟ ಹಿಡಿದೆ.
"ನಾಳೆ ಸರ್ಕಾರದಿಂದ ರೈತ ಹಿತರಕ್ಷಣ ಸಮಿತಿಯವರು ವ್ಯವಹಾರದ ಮಾತುಕತೆ ನಡೆಸಲು ನಮ್ಮ ಮನೆಗೆ ಬರುತ್ತಿದ್ದಾರೆ. ತುಂಬಾ ದೊಡ್ಡ ಮನುಷ್ಯರು.ಕಾರಿನಲ್ಲಿ ಬರುತ್ತಾರೆ. ಅವರ ಮುಂದೆ ಈ ಗಲೀಜು ಇದ್ದರೆ ಏನಂದುಕೊಳ್ಳುತ್ತಾರೆ. ನನಗೂ ಸಹ ದಿನಾ ಈ ಗುಬ್ಬಚ್ಚಿಯ ಪಿಕ್ಕೆಗಳನ್ನು ಗುಡಿಸಿ ಸಾಕಾಗಿದೆ" ಎಂದು ಗೊಣಗಿದಳು.
ನಾನು ಗುಬ್ಬಚ್ಚಿ ಬೇಕೇ ಬೇಕು ಎಂದು ಹಠ ಹಿಡಿದು ಅಳಲು ಪ್ರಾರಂಭಿಸಿದೆ. ಅಮ್ಮ ನನ್ನ ಹಠಕ್ಕೆ ಮಣಿದು ಇನ್ನು ಮಂದೆ ನಿನ್ನ ಈ ಗುಬ್ಬಚ್ಚಿ ಗೂಡನ್ನು ತೆಗೆದು ಹಾಕುವುದಿಲ್ಲ ಎಂದು ಮಾತು ಕೊಟ್ಟ ಮೇಲೆ ಅಳುವುದನ್ನು ನಿಲ್ಲಿಸಿದೆ. ಅಂದಿನಿಂದ ನಾನು ಗುಬ್ಬಚ್ಚಿಗೆ ಇನ್ನೂ ಹತ್ತಿರವಾದೆ.

ಪ್ರತಿನಿತ್ಯ ಗುಬ್ಬಚ್ಚಿಯನ್ನು ನೋಡುವುದು. ಅದರೊಡನೆ ಮಾತನಾಡುವುದು.ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂತೋಷ ಪಡುವುದು, ಹೀಗೆ ದಿನವೂ ನಡೆಯುತ್ತಿತ್ತು. ಮೂರು ತಿಂಗಳಲ್ಲೇ ನನ್ನ ಮತ್ತು ಗುಬ್ಬಚ್ಚಿಯ ಸ್ನೇಹ ಗಾಢವಾಗಿ ಬೆಳೆಯಿತು. ಗುಬ್ಬಚ್ಚಿಯೂ ಸಹ ನನ್ನ ಪ್ರೀತಿಗೆ ಸ್ಪಂದಿಸುತ್ತಿತ್ತ....

ಆ ದಿನ ಅಪ್ಪ ತುಂಬಾ ದುಃಖದಿಂದ ಇದ್ದರು. ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಬಂದ ರೈತ ಹಿತರಕ್ಷಣ ಸಮಿತಿಯವರು ಅಪ್ಪನಿಗೆ ಹಣಕಾಸಿನ ವಿಷಯದಲ್ಲಿ ಪಂಗನಾಮ ಹಾಕಿದ್ದರು. ಆ ಸಮಿತಿಯವರು ರೈತರು ನಮ್ಮಲ್ಲಿ ಹಣ ಹೂಡಿದರೆ ಮೂರು ತಿಂಗಳಲ್ಲೇ ಎರಡರಷ್ಟು ಹಣ ಕೊಡುತ್ತೇವೆ ಎಂದು ನಮ್ಮ ಊರಿನಲ್ಲಿ ಸುದ್ಧಿ ಹಬ್ಬಿಸಿದ್ದರು. ನಮ್ಮ ಪಕ್ಕದ ಮನೆಯ ಸಿದ್ದಣ್ಣ ಹತ್ತು ಸಾವಿರ ಹಣ ಹೂಡಿದ್ದರು. ಮೂರು ತಿಂಗಳಲ್ಲಿ ಸಿದ್ದಣ್ಣನಿಗೆ ಇಪ್ಪತ್ತು ಸಾವಿರ ಹಣ ಬಂದಿತ್ತು. ಈ ವಿಷಯ ತಿಳಿದ ಅಪ್ಪನಿಗೆ ತುಂಬಾ ಖುಷಿಯಾಯಿತು. ಎರಡು ವರ್ಷದಿಂದ ಅಮ್ಮನಿಗೆ ಎರಡೆಳೆಯ ಅವಲಕ್ಕಿ ಸರ ಮಾಡಿಸಲೆಂದು ಅಪ್ಪ ಹತ್ತು ಸಾವಿರ ಹಣ ಕೂಡಿಟ್ಟಿದ್ದರು. ಸಿದ್ದಣ್ಣ ಹೇಳಿದ್ದರಿಂದ ಅಪ್ಪ ಹತ್ತು ಸಾವಿರ ರೂಪಾಯಿಗಳನ್ನು ರೈತ ಹಿತರಕ್ಷಣ ಸಮಿತಿಯಲ್ಲಿ ಹೂಡಿದ್ದರು. ಕಾರಿನಲ್ಲಿ ಬಂದ ಆ ದೊಡ್ಡ ಮನುಷ್ಯರು ಅಪ್ಪನಿಂದ ಹಣ ಪಡೆದು ಇಪ್ಪತ್ತು ಸಾವಿರ ರೂಪಾಯಿಗಳು ಎಂದು ಬರೆದು ಅವರೇ ಸಹಿ ಹಾಕಿದ ಬಾಂಡ್ ಪತ್ರವನ್ನು ನೀಡಿದ್ದರು. ಈಗ ಆ ಪತ್ರ ನೀಡಿ ನಾಲ್ಕು ತಿಂಗಳಾಗಿತ್ತು. ಆದರೆ ಅಪ್ಪ ಹೂಡಿದ ಹಣಕ್ಕೆ ಪಂಗನಾಮ ಹಾಕಿದ್ದರು. ತುಂಬಾ ಕಡೆ ವಿಚಾರಿಸಿದಾಗ ಸರ್ಕಾರದಲ್ಲಿ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಆ ರೀತಿಯ ಯಾವುದೇ ಸಮಿತಿ ಸರ್ಕಾರದಲ್ಲಿ ಇಲ್ಲವೇ ಇಲ್ಲ ಎಂಬ ವಿಷಯ ತಿಳಿಯಿತು. ಅಪ್ಪನ ತರ ನಮ್ಮ ಹಳ್ಳಿಯಲ್ಲಿ ಹತ್ತಾರು ಜನ ಹಣ ಕಳೆದು ಕೊಂಡಿದ್ದರು.ಬಹು ದಿನಗಳಿಂದ ಎರಡೆಳೆಯ ಅವಲಕ್ಕಿ ಸರದ ಆಸೆ ಇಟ್ಟುಕೊಂಡು ಏನೆನೋ ಕಲ್ಪನೆ ಕಟ್ಟಿಕೊಂಡಿದ್ದ ಅಮ್ಮನಿಗೆ ಈ ವಿಷಯ ತಿಳಿದಾಗ ದುಃಖದಿಂದ ಕಣ್ಣೀರು ಹಾಕಿದ್ದಳು.

ನಾನು ಪ್ರತಿದಿನ ಗುಬ್ಬಚ್ಚಿಗಾಗಿ ತೆಂಗಿನ ಚಿಪ್ಪಿನಲ್ಲಿ ನೀರು ಹಾಕಿ ಕುಡಿಯಲೆಂದೇ ಗೂಡಿನ ಪಕ್ಕದಲ್ಲಿ ಇಡುತ್ತಿದ್ದೆ. ಅಮ್ಮ ಅತ್ತ ಆ ದಿನ ಗುಬ್ಬಚ್ಚಿ ನಾನಿಟ್ಟ ನೀರು ಕುಡಿಯಲೇ ಇಲ್ಲ. ನನ್ನ ಕಣ್ಣ ಮುಂದೆಯೇ ನಮ್ಮ ಮನೆಯ ದೂರದಲ್ಲಿಯೇ ಇರುವ ಹೊಂಡದಿಂದ ಗುಬ್ಬಚ್ಚಿಯು ನೀರು ಕುಡಿದು ಬಂದಿತ್ತು ನನಗೆ ಗುಬ್ಬಚ್ಚಿಯ ಮೇಲೆ ಕೋಪ ಬಂದಿತು. ಈ ವಿಷಯ ಅಮ್ಮನ ಮುಂದೆ ಹೇಳಿಕೊಂಡು ನಾನೂ ದುಃಖಿಸಿದೆ..
"ನಿನ್ನೆ ಮಳೆ ಬಂದಿದೆಲ್ಲಾ ಮಗು, ಅದಕ್ಕೆ ಗುಬ್ಬಚ್ಚಿಯು ಪರಿಸರದಲ್ಲಿ ಸಿಗುವ ನೀರನ್ನೇ ಕುಡಿಯುತ್ತಿದೆ. ಹೊಂಡ ಬತ್ತಿ ಹೋದಾಗ ಮತ್ತೆ ನೀನಿಟ್ಟ ನೀರನ್ನೇ ಕುಡಿಯುತ್ತದೆ ಬಿಡು" ಎಂದು ನನ್ನನ್ನು ಸಮಾಧಾನ ಪಡಿಸಿದಳು.
"ಯಾಕಮ್ಮಾ ಗುಬ್ಬಚ್ಚಿಗೆ ನನ್ನ ಸಹಾಯ ಬೇಡವಾಯಿತಾ...?" ಎಂದು ನಾನು ಮುಗ್ದವಾಗಿ ಪ್ರಶ್ನಿಸಿದೆ.
"ಇಲ್ಲ ಮಗು ಗುಬ್ಬಚ್ಚಿಗಳು ಮನುಷ್ಯರಂತಲ್ಲ. ಮನುಷ್ಯರು ಬೀಸುವ ಜಾಲಕ್ಕೆ ಅವು ಸುಲಭವಾಗಿ  ಬಲಿಯಾಗುವುದಿಲ್ಲ. ದುರಾಸೆ ಪಟ್ಟು ಇನ್ನೊಬ್ಬರ ಸಹಾಯ ಅಂತ ಬೇಡೋದು ಮನುಷ್ಯನೊಬ್ಬನೆ ಮಗು.... ಗುಬ್ಬಚ್ಚಿಗಳು ತಾವೇ ಕಷ್ಟಪಟ್ಟು ಆಹಾರ ನೀರನ್ನು ತಾವೇ ಸಂಪಾದಿಸಿಕೊಳ್ಳುತ್ತವೆ. ನಾವು ಹಾಗಲ್ಲ ಪುಕ್ಕಟ್ಟೆ ಏನೋ ಸಿಗುತ್ತೆ ಎಂದಾಕ್ಷಣ ಆಸೆ ಪಟ್ಟು ಜೊಲ್ಲು ಸುರಿಸುತ್ತೇವೆ. ಗುಬ್ಬಚ್ಚಿಯದೇ ಸರಿಯಾದುದು. ನೀನೂ ಗುಬ್ಬಚ್ಚಿಯ ಈ ನೀತಿಯನ್ನು ಕಲಿತು ಕೋ......"

ಅಮ್ಮ ಗುಬ್ಬಚ್ಚಿಯಿಂದ ಸಾಕಷ್ಟು ಪಾಠ ಕಲಿತ್ತಿದ್ದಳು. ರೈತ ಹಿತರಕ್ಷಣ ಸಮಿತಿಯವರು ಅಂತ ಹೇಳಿಕೊಂಡು ಬಂದಿದ್ದ ಆ ಕಳ್ಳರ ಮಾಡಿದ ಮೋಸದ ನೋವು ಅಪ್ಪನ ಮನದಲ್ಲಿ ಮಡುಗಟ್ಟಿಕೊಂಡಿತ್ತು. ಆ ನೋವನ್ನು ಅಪ್ಪ ನಿಧಾನವಾಗಿ ಅಮ್ಮನಿಗೂ ರವಾನಿಸುತ್ತಿದ್ದ. ಅಪ್ಪ ಕಳೆದುಕೊಂಡ ಹತ್ತು ಸಾವಿರ ರೂ ಈಗಿನ ಕಾಲಕ್ಕೆ ಮೂರು ಲಕ್ಷಕ್ಕೆ ಸಮವಾಗುತ್ತಿತ್ತು. ಬಡತನದ ದೇಶ ಎಂದು ಗುರುತಿಸಿಕೊಂಡಿದ್ದ ಭಾರತೀಯರಿಗೆ ಹತ್ತು ಸಾವಿರ ರೂಗಳನ್ನು ಕೂಡಿ ಹಾಕುವುದೇನೂ ಸಾಮಾನ್ಯದ ವಿಷಯವಾಗಿರಲಿಲ್ಲ. ಇದೇ ನೋವಿನಿಂದ ಅಪ್ಪನಿಗೆ ಗಡ್ಡವೂ ಬೆಳೆಯಲಾರಂಬಿಸಿತು. ಹಣ ಕಳೆದುಕೊಂಡ ನೋವು ಅಪ್ಪನಿಗೆ ಜೀವನೋತ್ಸಾಹ ಕುಗ್ಗಿಸಿತು. ಮೋಸದ ಜಾಲ ಹೀಗಿರುತ್ತದೆ ಎಂದು ನಮ್ಮ ಹಳ್ಳಿಗೆ ಪರಿಚಯಿಸಿದ ಮೊದಲ ಘಟನೆ ಅದು. ಅಮ್ಮ ಹಬ್ಬಕ್ಕೆ  ಸಾಮಾನು ಬೇಕು ಎಂದರೂ ಅಪ್ಪ ರೇಗಿ ಬೀಳುತ್ತಿದ್ದ. ಆ ಒಂದು ವರ್ಷ ನಮ್ಮನೆಯಲ್ಲೂ ಹಬ್ಬವೂ ಇಲ್ಲ ಹೊಸ ಬಟ್ಟೆಯೂ ಇರಲಿಲ್ಲ...

ಆ ವೇಳೆಗಾಗಲೇ ನಾನು ಹಾಕಿದ್ದ ಚಡ್ಡಿಯು ಹಿಂದಗಡೆ ಸವೆದು ಸವೆದು ಪಾರದರ್ಶಕವಾಗಿತ್ತು. ಹರಿದ ಚಡ್ಡಿಯನ್ನು ಹಾಕಿಕೊಂಡು ಶಾಲೆಗೆ ಹೋಗಲಾರೆ ಎಂದು ಹಠ ಹಿಡಿದೆ. ನನ್ನ ಚಡ್ಡಿಯು ಹರಿದು ಹೋಗಿದ್ದಕ್ಕೆ ಅಮ್ಮನಿಗೂ ಏನು ಮಾಡಬೇಕೆಂದು ತೋಚದಂತಾಗಿತ್ತು. ಅಪ್ಪನಿಗೆ ಏನೇ ಕೇಳಿದರೂ ಉರಿದು ಬೀಳುತ್ತಿದ್ದ. ಅಪ್ಪ ಆ ಕೋಪವನ್ನು ಅಮ್ಮನಿಗೂ ದಿನೇ ದಿನೇ ಸಹಿಸಿ ಸಾಕಾಗಿ ಹೋಗಿತ್ತು. ಅಮ್ಮ ನನ್ನ ಚಡ್ಡಿಯ ವಿಷವನ್ನು ಅಪ್ಪನವರೆಗೆ ತೆಗೆದುಕೊಂಡು ಹೋಗಲೇ ಇಲ್ಲ. ನಮ್ಮೆಲ್ಲರ ಭವಿಷ್ಯಕ್ಕೆ ಮತ್ತೆ ದುಡ್ಡು ಕೂಡಿಡುವ ಭರದಲ್ಲಿ ಅಪ್ಪನೇ ತಿಂಗಳಿಗೊಂದು ಸಲ ಗಡ್ಡ ಕ್ಷೌರ ಮಾಡಿಕೊಳ್ಳುವಾಗ. ಅಮ್ಮನೂ ಸಹ ಅಪ್ಪನೊಂದಿಗೆ ಸಹಕರಿಸಲೇ ಬೇಕಾಗಿತ್ತು. ಬಾಳ ಪಯಣದಲ್ಲಿ ಜೋಡಿ ಎತ್ತುಗಳು ಕೊರಳಿಗೆ ನೊಗ ಕಟ್ಟಿಕೊಂಡು ಹೊಲದಲ್ಲಿ ದುಡಿಯುವುದಿಲ್ಲವೇ ಹಾಗೇ. ಅಪ್ಪ ಸಹ ಮನೆಯಲ್ಲಿದ್ದ ಜೋಡಿ ಎತ್ತನ್ನು ತೋರಿಸಿ ಅಮ್ಮನಿಗೆ ಜೀವನದ ಪಾಠವನ್ನೂ ಕಲಿಸಿದ್ದ. ಅಂದು ಅಮ್ಮ ಸಹ ನನಗೂ ಅದೇ ಪಾಠ ಹೇಳಿಕೊಟ್ಟಳು..

ಆ ಘಟನೆ ನಡೆಯುವಾಗ ನಮ್ಮನೆಯ ಸೂರಿನಲ್ಲಿ ನೆಲಸಿದ್ದ ಗುಬ್ಬಚ್ಚಿಗಳು ಗಾಳಿಮಳೆಗೆ ಉದುರಿದ ಗೂಡಿನ ಹುಲ್ಲನ್ನು ಸರಿ ಪಡಿಸಿ ಮತ್ತೆ ಗೂಡನು ಹೆಣೆಯುವ ಕೆಲಸದಲ್ಲಿ ತೊಡಗಿತ್ತು. ಅಮ್ಮ ನನ್ನನ್ನು ಗೂಡಿನ ಬಳಿಗೆ ಕರೆದುಕೊಂಡು ಹೋಗಿ "ನೋಡು ಮಗು ಗುಬ್ಬಚ್ಚಿಗಳು ಎಷ್ಟೊಂದು ಸುಂದರವಾಗಿ ಗೂಡಿಗೆ ಮತ್ತೆ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಅದು ನೇಯುವ ಕುಶಲ ಕಲೆಯನ್ನು ನೋಡಿಕೊಂಡು ಬಾ, ನಾನು ಸ್ವಲ್ಪ ಅಡಿಗೆ ಕೆಲಸ ಮಾಡುತ್ತಿರುತ್ತೇನೆ. ಆಮೇಲೆ ಹೊಸ ಚಡ್ಡಿ ತರಲು ಹೋಗೋಣ ಆಯ್ತಾ..? ಅದನ್ನೇ ಹಾಕಿಕೊಂಡು ಶಾಲೆಗೆ ಹೋಗುವಿಯಂತೆ" ಅಳುತ್ತಿದ್ದ ನನಗೆ ಅಮ್ಮ ಹೊಸ ಚಡ್ಡಿಯ ಆಸೆಯನ್ನೂ, ನನ್ನ ಪ್ರೀತಿಯ ಗುಬ್ಬಚ್ಚಿಗಳು ಗೂಡನ್ನು ಹೆಣೆಯುವ ಕಲೆಯನ್ನೂ ತೋರಿಸಿ ನನ್ನ ಮನದಲ್ಲಿ ಆಸೆಯನ್ನು ಬಿತ್ತಿದಳು. ನನ್ನ ಮನದಾಸೆಯೂ ಸಹ ಹಕ್ಕಿಯಂತೆ ಹಾರಲಾರಂಬಿಸಿತು..

ಅಮ್ಮ ಎಲ್ಲಾ ಕೆಲಸ ಮುಗಿಸಿ ಹೊಸ ಚಡ್ಡಿಯನ್ನು ಕೊಡಿಸುತ್ತೇನೆಂದು ಕರೆದುಕೊಂಡು ಹೊರಟಳು. ದಾರಿಯುದ್ದಕ್ಕೂ ನನ್ನನ್ನು ಮಾತಿಗೆಳೆದುಕೊಂಡಳು "ಮಗೂ, ಗುಬ್ಬಚ್ಚಿ ಗೂಡನ್ನು ಹೆಣೆಯುವುದು ನೋಡಿದೆಯಾ..?" ಅಮ್ಮನ ಮಾತಿಗೆ ನಾನು "ಹ್ಞೂಂ" ಎಂದು ತಲೆಯಾಡಿಸಿದೆ.
"ಮಳೆಗಾಳಿಗೆ ಕೊಚ್ಚಿ ಹೋಗಿದ್ದ ಗೂಡನ್ನು ಆ ಗುಬ್ಬಚ್ಚಿಗಳು ಎಷ್ಟು ಸುಂದರವಾಗಿ ತೇಪೆ ಹಾಕಿತು ಅಲ್ಲವೇ...? ಹಾಗೆಯೇ ನಮ್ಮ ಜೀವನದಲ್ಲೂ ಮಳೆ ಗಾಳಿಯಂತೆ ಹಲವು ಕಷ್ಟಗಳು ಬರುತ್ತವೆ ಮಗು. ನಾವು ಆಗ ಯಾವುದಕ್ಕೂ ಕುಗ್ಗ ಬಾರದು. ಗುಬ್ಬಚ್ಚಿಯಂತೆ ನಾವೂ ಸಹ ನಮ್ಮ ಕಷ್ಟಗಳಿಗೆ ತೇಪೆ ಹಚ್ಚಿಕೊಂಡೇ ನಡೆಯಬೇಕು. ನಾವೂ ಸಹ ಈಗ ಬಿರುಗಾಳಿಗೆ ಸಿಲುಕಿದ್ದೇವೆ ಮಗು. ನೀನು ಗುಬ್ಬಚ್ಚಿಯಂತೆ ನಿನ್ನ ಹರಿದ ಚಡ್ಡಿಗೆ ತೇಪೆ ಹಚ್ಚಿಕೊಳ್ಳುತ್ತೀಯಾ.. ನಿನಗೆ ಗುಬ್ಬಚ್ಚಿ ಅಂದರೆ ತುಂಬಾ ಇಷ್ಟ ಅಲ್ಲವೇ ? ಅದರಂತೆ ನೀನೂ ಸಹ ಇರುತ್ತೀಯಾ ತಾನೇ ?"

ಗುಬ್ಬಚ್ಚಿ ಅಂದ ಕೂಡಲೇ ನಾನು ಅಮ್ಮನ ಮಾತಿಗೆ ಸುಮ್ಮನೇ 'ಹ್ಞೂ' ಎಂದು ತಲೆಯನ್ನಾಡಿಸಿದೆ. ಯಾಕೆಂದರೆ ನಾನು ಗುಬ್ಬಚ್ಚಿಗಳನ್ನು ತುಂಬಾ ಹಚ್ಚಿಕೊಂಡಿದ್ದೆ. ಅಮ್ಮನಿಗೂ ಅದು ಸರಿಯಾಗಿ ತಿಳಿದಿತ್ತು. ದರ್ಜಿ ನರಸೋಜಿಯ ಬಳಿ ಹೋಗಿ ಅಮ್ಮ ಎಂಟಾಣೆ ಕೊಟ್ಟು ಚಡ್ಡಿಗೆ ತ್ಯಾಪೆ ಹಾಕಿಸಿ ಕೊಟ್ಟಳು..

ನಮ್ಮ ಕಷ್ಟದ ದಿನಗಳಲ್ಲಿ ನಮಗೆ ಜೊತೆಯಾಗಿದ್ದು ಗುಬ್ಬಚ್ಚಿಗಳು. ನಮ್ಮ ಕುಟುಂಬವು ಮೋಸದ ಜಾಲಕ್ಕೆ ಬಿದ್ದು  ವಂಚನೆಗಳಿಗೊಳಗಾಗಿದ್ದರಿಂದ ಬಂಧುಗಳಿಂದ  ಸ್ನೇಹಿತರಿಂದ ಬರುತ್ತಿದ್ದ ಕುಹಕದ ಮಾತುಗಳು ಮತ್ತಷ್ಟು ಮನಸ್ಸನ್ನು ಇರಿಯುತ್ತಿದ್ದವು. ಅಮ್ಮ ಎಲ್ಲರ ಸ್ನೇಹವನ್ನು ತೊರೆದು ನನ್ನ ಹಾಗೆ ಗುಬ್ಬಚ್ಚಿಯ ಜೊತೆಗೆ ಕಾಲ ಕಳೆಯಲಾರಂಬಿಸಿದಳು. ಅತಿಯಾಗಿ ದುಃಖವಾದಾಗ ಗುಬ್ಬಚ್ಚಿಯ ಜೊತೆಗೆ ಮಾತನಾಡುತ್ತಿದ್ದಳು. ಮೊದ ಮೊದಲು ಮನುಷ್ಯರ ಮಾತುಗಳಿಗೆ ಸ್ಪಂದಿಸದ ಗುಬ್ಬಚ್ಚಿಗಳು ನಂತರದ ದಿನಗಳಲ್ಲಿ ಅಮ್ಮನ ಮಾತುಗಳಿಗೆ ಆಸಕ್ತಿಯನ್ನು ತೋರಿಸಿ ತಮ್ಮ ಮುದ್ದು ಮುಖವನ್ನು ಅಮ್ಮನೆಡೆಗೆ ತೋರಿಸಿ ರೆಕ್ಕೆ ಬಡಿಯುತ್ತಿದ್ದವು. ನಮ್ಮ ಕುಟುಂಬಕ್ಕೆ ಗುಬ್ಬಚ್ಚಿಗಳು ತುಂಬಾ ಹತ್ತಿರವಾದವು. ಹಣ ಆಸೆಗೆ ಮೋಸ ಹೋಗಿದ್ದ ನಮ್ಮ ಕುಟುಂಬಕ್ಕೆ ಆದ ನಷ್ಟಕ್ಕಿಂತ ಬಂಧುಗಳು ಸ್ನೇಹಿತರು ಆಡಿಕೊಳ್ಳುವ ಮಾತುಗಳು ಅದಕ್ಕಿಂತ ಕಠೋರವಾಗಿದ್ದವು. ಹಳ್ಳಕ್ಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ನಮ್ಮ ಮೇಲೆ ಜನ ತೋರಿಸುತ್ತಿದ್ದ ಅನಾಸಕ್ತಿಯೇ ನಮಗೆ ಗುಬ್ಬಚ್ಚಿಗಳು ಇನ್ನಷ್ಟು ಹತ್ತಿರವಾಗಿದ್ದವು. ಮಾನವನಿಗಿಂತ ಪಕ್ಷಿಗಳೇ ನಮಗೆ ಹಿತವಾಗಿದ್ದವು. ಅಪ್ಪ ಹಣ ಕಳೆದುಕೊಂಡು ಬೇಸರದಿಂದ ದುಡಿಮೆ ಮಾಡದೇ ಮನೆಯಲ್ಲಿ ಕುಳಿತಾಗ ಅಮ್ಮ ಇದೇ ಗುಬ್ಬಚ್ಚಿ ಗೂಡುಗಳನ್ನು ತೋರಿಸಿ ನನ್ನೊಂದಿಗೆ ಮಾತನಾಡುತ್ತಾ ಅಪ್ಪನಿಗೆ ಪ್ರೋತ್ಸಾಹ ತುಂಬುತ್ತಿದ್ದಳು.

"ಪಕ್ಕ.... ನೋಡು ಈ ಗುಬ್ಬಚ್ಚಿಗಳನ್ನು ಎಷ್ಟು ಅನ್ಯೋನ್ಯವಾಗಿ ಇರ್ತಾವಲ್ಲ. ಮೊನ್ನೆ ಬೆಕ್ಕು ಹೊಂಚಿ ಹಾಕಿ ಕುಳಿತಾಗ ಗುಬ್ಬಚ್ಚಿಯು ತನ್ನ ಗೂಡು ಸುಲಭವಾಗಿ ಶತೃಗಳಿಗೆ ಸಿಗಬಾರದೆಂದು ಮತ್ತೊಂದು ಕಡೆ ಗೂಡು ಕಟ್ಟುತ್ತಿದೆ ನೋಡು. ಹೊಸದಾಗಿ ಗೂಡು ಕಟ್ಟುವುದೆಂದರೆ ಸಾಮಾನ್ಯ ಕೆಲಸವೇನಲ್ಲ. ಹೊಸದಾಗಿ ಹುಲ್ಲು ಕಡ್ಡಿಗಳನ್ನು ಹುಡುಕಿ ತರಬೇಕು. ದುಷ್ಟರಿಂದ ರಕ್ಷಿಸಲು ಸೂಕ್ತ ಜಾಗ ಹುಡುಕಿಕೊಳ್ಳಬೇಕು. ಎಂತ ಅಪಾಯಗಳಿಗೂ ಜಗ್ಗದೇ ಕುಗ್ಗದೇ ಬದುಕುತ್ತಿವೆ ನೋಡು. ಕಷ್ಟ ಅಂತ ಬಂದಾಗ ಕುಗ್ಗುವುದು ಮನುಷ್ಯನೊಬ್ಬನೇ ಅಂತ ಕಾಣುತ್ತೆ. ಮಳೆ ಗಾಳಿಗೆ ಗೂಡು ನಾಶವಾದಾಗ ಕೊರಗಿದ್ದನ್ನು ನಾನು ಕಾಣಲಿಲ್ಲ. ಈ ಕಷ್ಟಗಳೆಂಬ ಮಳೆಗಾಳಿಯನ್ನು ಎದುರಿಸಿ ನಿಲ್ಲವಂತೆ ಮನುಷ್ಯ ಸಹ ಕಷ್ಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಗುಬ್ಬಚ್ಚಿಗಳಂತೆ ಹೊಸದೊಂದು ಗೂಡು ಕಟ್ಟಿಕೊಳ್ಳಬಲ್ಲ"

ಅಮ್ಮ ಹೇಳಿದ ಈ ಮಾರ್ಮಿಕ ನುಡಿಗಳು ಅಂದು ನನಗೆ ಅರ್ಥವಾಗಲೇ ಇಲ್ಲ. ಸುಮ್ಮನೆ 'ಹೂಂ..' ಎಂದು ತಲೆ ಅಲ್ಲಾಡಿಸಿದೆ. ಆದರೆ ಅಪ್ಪ ಮಾತ್ರ ಅಮ್ಮನ ಮಾತುಗಳನ್ನು ಕೇಳಿ ಎದ್ದು ಹೊಲದ ಕಡೆಗೆ ಹೊರಟಿದ್ದ..

ಅಂದು ಮತ್ತೆ ನಮ್ಮ ಕುಟುಂಬಕ್ಕೆ ಹೊಸದಾದ ಗೂಡು ನಿರ್ಮಿಸಿದ್ದ. ಪಟೇಲನ ಹತ್ತು ಎಕರೆ ಹೊಲವನ್ನು ಕಾಳು ಗುತ್ತಿಗೆಗೆ ಪಡೆದುಕೊಂಡು ಕಷ್ಟಪಟ್ಟು ದುಡಿದ. ನಮ್ಮನ್ನೆಲ್ಲಾ ಕಷ್ಟಪಟ್ಟು ಓದಿಸಿದ ಅದರ ಪ್ಪತಿಫಲ ಇಂದು ನಾನು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಜೊತೆಗೆ ಆರಂಕಿಯ ಸಂಬಳ..

ಬಾಲ್ಯದ ಅಂದಿನ ಈ ಘಟನೆ ಮತ್ತೆ ನೆನಪಾದದ್ದು ಮೊನ್ನೆ ದಿನ ... ರಾತ್ರಿ ಊಟಮಾಡಿ ಮಲಗಿದ್ದೆ. ರಾತ್ರಿ ಸುಮಾರು ಒಂದು ಗಂಟೆಯಾಗಿರಬಹುದು. ನನ್ನ ಮೊಬೈಲ್ ಚಿಕ್ಕದಾಗಿ ರಿಂಗಣಿಸಿತು. ನಿದ್ದೆ ಕಣ್ಣಿನಿಂದಲೇ ಮೊಬೈಲನ್ನು ಎತ್ತಿಕೊಂಡೆ. ನನ್ನ ಮೈಲ್ ಇನ್ ಬಾಕ್ಸ ನಲ್ಲಿ ಹೊಸದೊಂದು ಮೇಲ್ ಬಂದಿತ್ತು. ಅದರಲ್ಲಿ "ನಾನು ಎಡ್ವಿನ್ ರಾಸೋ..... ಇಂಡಿಯಾದವನು, ಎನ್,ಆರ್,ಐ. ಈಗ ಅಮೇರಿಕಾದಲ್ಲಿರುವೆ.... ನನ್ನ ಅಂಕೌಟ್ ನಲ್ಲಿರುವ ಹತ್ತು ಕೋಟಿ ಹಣವನ್ನು ನಿಮಗೆ ವರ್ಗಾಯಿಸಬೇಕೆಂದಿದ್ದೇನೆ.... ಇಲ್ಲಿ ನನಗೆ ತೆರಿಗೆ ಕಟ್ಟುವ.... ಬ್ಲ್ಯಾಕ್ ಹಣ ಹೊಂದಿದ ,.ಇತ್ಯಾದಿ ತರಹದ ಸಮಸ್ಯೆಗಳಿವೆ. ನೀವು ಹಣ ವರ್ಗಾಯಿಸಲು ನಿಮ್ಮ ಬ್ಯಾಂಕ್ ನ ಡಿಟೈಲ್ಸ ನನಗೆ ಮೇಲ್ ಮಾಡಿ... ನನಗೆ ಸಹಾಯ ಮಾಡಿದರೆ ಶೇ ಐವತ್ತು ಹಣ ನಿಮಗೂ ಸಿಗುತ್ತದೆ"
ಈ ಮೇಲ್ ಓದಿದ ಕೂಡಲೆ ನನಗೆ ಸಂತೋಷವಾಯಿತು.
ಐದು ಕೋಟಿ ಹಣ ನನ್ನದಾಗುತ್ತದೆಯೆಂದು ನಾನು ಕಲ್ಪನಾ ಲೋಕದಲ್ಲಿ ತೇಲಿ ಹೋದೆ... ಹಾಗೆಯೇ ಮತ್ತೆ ನಿದ್ರೆ ಆವರಸಿತು. ಅದೇ ನೆನಪಲ್ಲಿ ಮಲಗಿದ್ದರಿಂದ ರಾತ್ರಿ ಕನಸಿನಲ್ಲಿ ದೊಡ್ಡದಾದ ಬಂಗಲೆಯಲ್ಲಿ ವಾಸವಾಗಿದ್ದೆ. ಆಳು ಕಾಳುಗಳು ನನ್ನ ಸೇವೆಯಲ್ಲಿ ನಿರತರಾಗಿದ್ದರು. ನಾಲ್ಕೈದು ಕಾರುಗಳು ನನ್ನ ಮನೆಯ ಮುಂದೆ ನಿಂತಿದ್ದವು.

ಬೆಳಗ್ಗೆಯಾಯಿತು. ಇನ್ನೂ ರಾತ್ರಿ ಬಂದ ಮೇಲ್ ಬಗ್ಗೆನೇ ಯೋಚಿಸುತ್ತಿದ್ದೆ. ತಕ್ಷಣ ಆ ವ್ಯಕ್ತಿಗೆ ನನ್ನ ಬ್ಯಾಂಕಿನ ಸಂಪೂರ್ಣ ಮಾಹಿತಿ ನೀಡಲು ಮುಂದಾದೆ. ಕಿಟಕಿಯಲ್ಲಿ ಗುಬ್ಬಚ್ಚಿಯೊಂದು ಪಟ ಪಟ ರೆಕ್ಕೆ ಬಡಿದು ಸದ್ದು ಮಾಡಿತು. ತಕ್ಷಣ ನನ್ನ ನೆನಪಿಗೆ ಬಂದಿದ್ದು ನನ್ನೂರಿನ ನನ್ನ ಗುಬ್ಬಚ್ಚಿಗಳು..... ಆ ದಿನ ಅಮ್ಮ ಹೇಳಿದಂತೆ

"ದುರಾಸೆ ಪಟ್ಟು ಇನ್ನೊಬ್ಬರ ಸಹಾಯಕ್ಕೆ ಹಾತೊರೆಯುವುದು ಮನುಷ್ಯನೇ ಹೊರತು ಗುಬ್ಬಚ್ಚಿಗಳಲ್ಲ."

ಎಂಬ ಮಾತುಗಳು ಸಹ ನೆನಪಿಗೆ ಬಂದಿತು. ಅಪ್ಪ ಇದೇ ರೀತಿ ಹತ್ತು ಸಾವಿರ ರೂಪಾಯಿಗಳನ್ನು ಕಳೆದು ಕೊಂಡಿದ್ದು ಕಣ್ಣ ಮುಂದೆಯೇ ಬಂದು ಹೋಯಿತು. ಯಾರೋ ಕೊಡುವ ಐದು ಕೋಟಿಗೆ ಆಸೆ ಪಟ್ಟು ಕಷ್ಟ ಪಟ್ಟು ದುಡಿದು ಸಂದಾದಿಸಿದ ಹಣ ಕಳೆದು ಕೊಳ್ಳುವುದು ಬೇಡವೆನಿಸಿತು. ಗುಬ್ಬಚ್ಚಿಗಳಂತೆ ಕಷ್ಟ ಪಟ್ಟು ದುಡಿದು ಗಳಿಸಬೇಕು ಎಂದುಕೊಂಡೆ. ಇದೇ ದುರಾಸೆಯ ಯೋಚನೆಯಲ್ಲಿದ್ದ ನಾನು ಅದರಿಂದ ಹೊರ ಬರಲು ಎಫ್,ಎಂ, ರೇಡಿಯೋ ಆನ್ ಮಾಡಿದೆ... ಸುಂದರವಾದ ಗೀತೆಯೊಂದು ನನ್ನ ಮನಸ್ಸನ್ನು ಮುದಗೊಳಿಸಿತು

"ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ, ಬನದಾಗೆ ಸುತ್ತಿ ಸುಳಿದು ಬಯಲಾಗೆ ಮೀಗಿ ಮೀಗಿ......."
ಈ ಹಾಡು ಕೇಳಿ ಮತ್ತೆ ಗುಬ್ಬಚ್ಚಿಗಳು ನೆನಪಾದವು. ಗುಬ್ಬಚ್ಚಿ ಗೂಡಿನಂತಿರುವ ನನ್ನ ಸುಂದರ ಸಂಸಾರದಲ್ಲಿ ದರಾಸೆಯಿಂದಲೂ.... ಮೋಸದ ಜಾಲದಿಂದಲೂ ಕೂಡಿದ ಈ ತರಹದ ಹಣಕ್ಕೆ ಆಸೆ ಪಡಬಾರದೆಂದುಕೊಂಡೆನು......

Thursday 15 November 2018

ಕನಸುಗಳ ಬೆನ್ನೇರಿ - 1

*ಕನಸುಗಳ ಬೆನ್ನೇರಿ....*

*ಮುಗ್ಧ ಕನಸುಗಳು*

ನಮಗೆ ಕನಸು ಬಿತ್ತು ಎನ್ನಿ ಆ ಕನಸಿಗೆ ಅರ್ಥ ಕೊಡುವವರು ಸಾಕಷ್ಟು ಜನರಿದ್ದಾರೆ. ಅದರಲ್ಲೂ ಮುಂಜಾನೆ ಬಿದ್ದ ಕನಸುಗಳು ನಿಜವೆಂದೇ ಭಾವಿಸುತ್ತೇವೆ. ಭಯಂಕರ ಕನಸುಗಳೇನಾದರೂ ಬಿದ್ದರೆ ಅದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುತ್ತೇವೆ... ಕೆಲವರು ಕನಸನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವರು ಕನಸನ್ನು ನಿಜ ಜೀವನದಂತೆ ಗಣನೆಗೆ ತೆಗೆದು ಕೊಳ್ಳುತ್ತಾರೆ.
ಮೊನ್ನೆ ನನ್ನ ಸ್ನೇಹಿತನ ಕನಸಿನಲ್ಲಿ ಅವನ ಅಣ್ಣನ ಮಗಳು ಬಂದಿದ್ದಳಂತೆ. "ಚಿಕ್ಕಪ್ಪ ಪ್ಲೀಸ್ ನನ್ನನ್ನು ಕಾಪಾಡು.... ನನ್ನನ್ನು ಕಾಪಾಡು ನಾನು ತುಂಬಾ ಕಷ್ಟದಲ್ಲಿದ್ದೇನೆ" ಅಂತ ಕನಸಿನಲ್ಲಿ ಗೋಗರೆಯುತ್ತಿದ್ದಳಂತೆ. ಅದು ಬರೀ ಕನಸು ಅಷ್ಟೇ. ಅದನ್ನು ನನ್ನ ಸ್ನೇಹಿತ ಬರಿಯ ಕನಸು ಎಂದ್ ಪರಿಗಣಿಸಿ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟ. ಒಂದೆರಡು ದಿನಗಳ ನಂತರ ಕನಸಿನಲ್ಲಿ ಕಂಡ ಆ ಹುಡುಗಿಯು ಯಾವುದೋ ಅಚಾತುರ್ಯ ಘಟನೆಯೊಂದರಲ್ಲಿ ಸತ್ತು ಹೋದಳು. ಆಕೆ ಕನಸಿನಲ್ಲಿ ಹೇಳಿಕೊಂಡಂತೆ ತುಂಬಾ ತೊಂದರೆಯಲ್ಲಿ ಸಿಲುಕಿದ್ದಳು. ನನ್ನ ಸ್ನೇಹಿತ ಈ ವಿಷಯ ಹೇಳಿದ ಮೇಲೆ ಕನಸನ್ನು ಕನಸಿನಂತೆಯೇ ಕಾಣುತ್ತಿದ್ದ ನಮಗೆಲ್ಲರಿಗೂ ಈ ಘಟನೆ ಆಶ್ಚರ್ಯವನ್ನುಂಟು ಮಾಡುತ್ತದೆ. ಹಾಗಾದರೆ ಬೆಳಗಿನ ಕನಸುಗಳು ಹಿರಿಯರು ಹೇಳುವಂತೆ ನಿಜವಾಗುತ್ತಾ..? ಹೀಗೆ ಸಾಕಷ್ಟು ಗೊಂದಲಗಳು ಮೂಡುವುದುಂಟು.

ಜರ್ಮನಿಯ ವಿಜ್ಞಾನಿಯಾದ ಕೊಕುಲೆಗೆ ಒಂದು ಸಮಸ್ಯೆಗೆ ಉತ್ತರ ಸಿಗಲಾರದೇ ಪರದಾಡುತ್ತಿದ್ದನಂತೆ.  ಬೆಂಜಿನ್ ಪರಮಾಣುವಿನಲ್ಲಿ ಏನಿರುತ್ತದೆ ಎಂದು ಕಂಡು ಹಿಡಿಯುವುದೇ ಅವನ ಸಮಸ್ಯೆಯಾಗಿತ್ತು. ಹೇಗೆ ಯೋಚಿಸಿ ಅಧ್ಯಯನ ನಡೆಸಿದರೂ ತನ್ನ ಸಮಸ್ಯೆಗೆ ಉತ್ತರ ಕಂಡು ಕೊಳ್ಳಲಾಗಲಿಲ್ಲ. ಆ ದಿನ ರಾತ್ರಿ ಕೊಕುಲೆಯ ಕನಸಿನಲ್ಲಿ ಒಂದು ಹಾವು ತನ್ನ ಬಾಲವನ್ನೇ ಕಚ್ಚಿಕೊಂಡಂತಹ ಕನಸು ಕಂಡನಂತೆ. ಈ ಕನಸನ್ನು ಅರ್ಥೈಸಿಕೊಂಡಾಗ ಕೊಕುಲೆಗೆ ತನ್ನ ಸಮಸ್ಯೆಯ ಉತ್ತರ ದೊರೆಯಿತಂತೆ. ಮುಚ್ಚಿದ ಸರಪಳಿಯ ಕಾರ್ಬನ್ನಿನ ರಚನೆಯೇ ಬೆಂಜಮಿನ್ ಪರಮಾಣುವಿನ ಸಂರಚನೆಯಾಗಿತ್ತು. ಅಧ್ಯಯನದಿಂದ, ಸಂಶೋದನೆಯಿಂದ ತಿಳಿಯದ ವಿಷಯ ಕೊಕುಲೆಗೆ ಕನಸಿನಿಂದ ಉತ್ತರ ಸಿಕ್ಕಿತ್ತು. ಈ ತರಹ ಕನಸಿನಲ್ಲಿ ಉತ್ತರ ಕಂಡು ಕೊಂಡವರು ಇನ್ನೂ ಹಲವರಿದಿದ್ದಾರೆ. 1869 ರಲ್ಲಿ ಡಿಮೆಟ್ರಿ ಮೆಂಡಲೀವ್ ಎಂಬ ವಿಜ್ಞಾನಿ ಮೂಲವಸ್ತುವಿನ ಆಧುನಿಕ ಆವರ್ತಕ ಕೋಷ್ಠಕವನ್ನು ರಚಿಸಲು ಸಾಕಷ್ಟು ಪರದಾಡಿದ್ದನಂತೆ. ಆವರ್ತಕ ಕೊಷ್ಠಕದ ಯೋಚನೆಯಲ್ಲೇ ತೊಡಗಿದ ಮೆಂಡಲೀವ್ಗೆ ಉತ್ತರ ಸಿಗಲಿಲ್ಲ. ಆ ದಿನ ರಾತ್ರಿ ಕನಸಿನಲ್ಲಿ ಕಂಡ ಆವರ್ತಕ ಕೋಷ್ಠಕವನ್ನೇ ಕಾಗದದಲ್ಲಿ ಬರೆದು ನೋಡಿದನಂತೆ. ಅದನ್ನೇ ಪ್ರಸ್ತುತ ಪಡಿಸಿ ಆಧುನಿಕ ಆವರ್ತಕ ಕೋಷ್ಠಕ ರಚಿಸಿದ್ದನಂತೆ. ಇನ್ನು ಪ್ರಸಿದ್ಧ ವಿಜ್ಞಾನಿಗಳಾದ ಥಾಮಸ್ ಆಲ್ವ ಎಡಿಸನ್ನು ಬಲ್ಪ್ ಕಂಡುಹಿಡಿಯುವಾಗಲೂ, ಐನ್ ಸ್ಟಿನ್ ರವರು ಸಾಫೇಕ್ಷ ಸಿದ್ಧಂತ ಕಂಡು ಹಿಡಿಯುವಾಗಲೂ ಅವರಿಗೆ ಕನಸೇ ಸಹಕಾರಿಯಾಗಿತ್ತು. ಹಾಗೆಂದ ಮಾತ್ರಕ್ಕೆ ಅವರು ಪ್ರಯತ್ನ ಪಡಲಿಲ್ಲ ಎಂಬ ಅರ್ಥವಲ್ಲ. ನಮ್ಮ ನಿದ್ರಾ ಚಕ್ರವು ನಮ್ಮ ಅಂತರ್ಗತದ ಭಾಗವೇ ಆಗಿರುವುದರಿಂದ ಅವರು ಪಡುತ್ತಿರುವ ಪ್ರಯತ್ನಗಳು ಕನಸಿನಲ್ಲಿ ಆವರಿಸಿಕೊಂಡು ಉತ್ತರ ಪಡೆದುಕೊಂಡರು. ಅವರು ಕಂಡ ಆ ಕನಸುಗಳು ನಮ್ಮಂತ ಸಾಮಾನ್ಯರು ಕಾಣುವುದು ಸಾದ್ಯವಿಲ್ಲ....
ನಮ್ಮ ಜೀವನದ ಎಲ್ಲಾ ಅಂತರ್ಗತ ವಿಷಯಗಳೇ ಕನಸುಗಳು. ಎಷ್ಟೋ ವಿಷಯಗಳಿಗೆ ಕನಸುಗಳೇ ಉತ್ತರವಾಗಿರುತ್ತದೆ. ಮೊನ್ನೆ ನನ್ನ ವಿಧ್ಯಾರ್ಥಿಯೊಬ್ಬ ನೋಟ್ಸ್ ಬರೆಯಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಒಂದೆರಡು ಏಟು ಹಾಕಿ ಶಿಕ್ಷೆ ಕೊಟ್ಟಿದ್ದೆ. ಆತನಿಗೆ ಎಷ್ಟು ಕೋಪ ಬಂದಿತ್ತೆಂದರೆ ನನ್ನನ್ನು ಸಿಟ್ಟಿನಿಂದ ನೋಡಿದ. ಮಾರನೆಯ ದಿನ ಆತ ಕನಸಿನಲ್ಲಿ ಕಂಡ ವಿಷಯವನ್ನು ತನ್ನ ಸ್ನೇಹಿತನ ಬಳಿ ಹೇಳಿಕೊಳ್ಳುತ್ತಿದ್ದ. "ಲೋ ಹರ್ಷ... ನಿನ್ನೆ ಕನಸಿನಲ್ಲಿ ಪ್ರಕಾಶ್ ಸರ್ ರನ್ನು ನಾನು ಸಿಕ್ಕಾ ಪಟ್ಟೆ ಹೊಡೆಯುತ್ತಿದ್ದೆ ಕಣೊ"
ಆ ವಿಷಯ ನನ್ನ ಕಿವಿಗೂ ಬಿತ್ತು ನಾನು ನಕ್ಕು ಸುಮ್ಮನಾದೆ.
ವಾಸ್ತವವಾಗಿ ಸಾಧ್ಯವಾಗದ ಎಷ್ಟೋ ವಿಷಯಗಳನ್ನು ನಾವು ನಮ್ಮ ಕನಸಿನಿಂದ ಈಡೇರಿಸಿಕೊಳ್ಳುತ್ತೇವೆ. ನನ್ನ ಮೇಲಿನ ಕೋಪವನ್ನು ಆ ವಿಧ್ಯಾರ್ಥಿ ಕನಸಿನ ಮೂಲಕ ಈಡೇರಿಸಿಕೊಂಡು ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳುತ್ತಾನೆ. ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳಲು ಕನಸುಗಳು ಎಷ್ಟೋ ಸಹಾಯ ಮಾಡುತ್ತವೆ. ಕನಸು ಕಾಣದ ವ್ಯಕ್ತಿ ಮಾನಸಿಕ ಅಸಮತೋಲನದಿಂದ ಇದ್ದಾನೆ ಎಂದಾರ್ಥವಲ್ಲ. ಪ್ರತಿಯೊಬ್ಬರೂ ಕನಸನ್ನು ಕಂಡೇ ಕಾಣುತ್ತಾರೆ. ಕನಸು ಕಾಣಲಿಲ್ಲವೆಂದರೆ ಮನುಷ್ಯ ಹುಚ್ಚನಾಗುತ್ತಾನೆ. ಆದರೆ ನಾವು ಕಂಡ ಎಷ್ಟೋ ಕನಸುಗಳು ನಮ್ಮ ನೆನಪಿಗೆ ಬರುವುದೇ ಇಲ್ಲ. ಶೇಕಡ ತೊಂಬತ್ತರಷ್ಟು ಕನಸುಗಳು ನೆನಪಿಗೆ ಬಾರದೇ ಹಾಗೆಯೇ ಜಾರಿ ಹೋಗಿ ಬಿಡುತ್ತವೆ. ಒಬ್ಬ ಮನುಷ್ಯ ತಮ್ಮ ಜೀವಿತವಧಿಯಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಅವಧಿಯಷ್ಟು ಕನಸು ಕಾಣುತ್ತಾನಂತೆ. ಕನಸುಗಳು ನಮ್ಮ ಮನಸ್ಸನ್ನು ಸ್ವಾಸ್ಥ್ಯವಾಗಿಡುತ್ತವೆ. ನಾವು ಕಾಣುವ ಕನಸುಗಳು ಭಯಂಕರವೋ ಅಥವಾ ವಿಚಿತ್ರವೋ ಆಗಿದ್ದರೆ. ಅದಕ್ಕೆ ಕೆಲವು ಘಟನೆಗಳು ಕಾರಣವಾಗಿರಬಹುದು. ಕನಸುಗಳು ನಮ್ಮ ಜೀವನದಲ್ಲಿ ನಡೆದ ಘಟನೆಗಳ ಪ್ರತಿಬಿಂಬಗಳು. ಮೆದುಳಿನ ಮೂಲೆಯಲ್ಲಿ ಸ್ತಪ್ತವಾಗಿರುವ ಇಂತಹ ಘಟನಾವಳಿಗಳು ಆಗಾಗ ಕನಸಿನ ರೂಪದಲ್ಲಿ ಮರುಕಳಿಸಬಹುದು.....

ಇನ್ನು ಕೆಲವರು ಕನಸಿನ ಕೆಲವು ಘಟನೆಗಳು ವಾಸ್ತವದಂತೆ ಫೀಲ್ ಆಗುತ್ತವೆ. ಮೊನ್ನೆ ನನ್ನ ಸ್ನೇಹಿತ ತನ್ನ ಅಣ್ಣನ ಮನೆಗೆ ಹೋದಾಗ ಅವರ ಮಗಳು ಮತ್ತೆ ಕನಸಿನಲ್ಲಿ ಬಂದಿದ್ದಳಂತೆ. ಸತ್ತು ಹೋದ ಆಕೆ ಮತ್ತೆ ಬಂದು ತಾನು ಮಲಗಿದ ಕಡೆ ಬಂದು ತಲೆ ಸವರುತ್ತಿದ್ದಳಂತೆ. ತಲೆಯನ್ನು ಸವರಿದಂತಹ ಸ್ಪರ್ಶ ಜ್ಞಾನದ ಅನುಭವಗಿದ್ದರಿಂದ ನನ್ನ ಸ್ನೇಹಿತ ಬೆಚ್ಚಿ ಕೂಗಿಕೊಂಡು ಎದ್ದನಂತೆ, ಸುತ್ತಲೂ ಯಾರೂ ಕಾಣಿಸಲಿಲ್ಲ. ಪ್ರೀತಿಗೆ ಪಾತ್ರರಾಗಿರುವವರು ಕನಸಿನಲ್ಲಿ ಬರುವುದು ಮಾತ್ರವಲ್ಲ ಆತ್ಮವೂ ಸುತ್ತಮುತ್ತಲು ಸಂಚರಿಸುತ್ತಿತ್ತಂತೆ. ಆತ್ಮ ಮತ್ತು ಕನಸಿಗೆ ಏನಾದರು ಸಂಬಂಧ ಇರಬಹುದೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತಿರುತ್ತದೆ. ಕನಸು ನಿಜವೆಂದು ನಂಬುವ ನಾವು ಕನಸಿನಂತೆಯೇ ಆತ್ಮಗಳು ಸಹ ನಮ್ಮ ಸುತ್ತಮುತ್ತ ಸಂಚರಿಸುವುದನ್ನು ಅನುಭವಿಸುತ್ತೇವೆ.

ಮೆದುಳು ತಡೆದುಕೊಳ್ಳಲು ಸಾಧ್ಯವಿಲ್ಲದಂತಹ ನೋವುಗಳು ಸಹಿಸುತ್ತಾ ಬಂದವು. ಇವು ಎಲ್ಲೋ ನನ್ನ ಮೆದುಳಿನ ಸುಪ್ತಾವಸ್ತೆಯಲ್ಲಿ ಸೇರಿಕೊಂಡು ಕನಸಿನ ರೂಪದಲ್ಲಿ ಕಾಡಿದ್ದೂ ಉಂಟು. ಹತ್ತಿರದ ಸಂಬಂಧಿಗಳಿಂದ ಕುಹಕ ಮಾತುಗಳನ್ನು ಕೇಳಿದೆ ಈ ಎಲ್ಲಾ ಆಘಾತಗಳು ಈಗಲೂ ನನ್ನ ಮನಸಿನಲ್ಲಿ ಸುಪ್ತ ಪ್ರಜ್ಞಾವಸ್ತೆಯಲ್ಲಿ ಸೇರಿಕೊಂಡವು. ಈ ತರಹದ ಯಾವುದಾದರೊಂದು ಆಹಿತಕರವಾದ ಘಟನೆಗಳು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ...

ಮನಸ್ಸು ತಡೆದುಕೊಳ್ಳಲು ಸಾಧ್ಯವಾಗದ ಕೆಲವು ಅಹಿತಕಾರಿ ದುರ್ಬರ ಘಟನೆಗಳನ್ನು ಬಾಲ್ಯ ಅಥವಾ  ಪ್ರೌಢಾವಸ್ತೆಯಲ್ಲಿದ್ದ ಮೆದುಳು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿರುವುದಿಲ್ಲ. ಕೆಲವರ ಜೀವನದಲ್ಲಿ ಬಾಲ್ಯದ ಹಂತದಲ್ಲಿಯೇ ಅಹಿತಕರವಾದ ನೋವಿನ ಘಟನೆಗಳು ನಡೆದು ಬಿಡುತ್ತವೆ. ಅಚಾತುರ್ಯವಾದ ರಕ್ತಪಾತ, ತಂದೆ ತಾಯಿಯರ ಅಗಲುವಿಕೆ, ಅವಮಾನದಿಂದ ಕೂಡಿದ ಬಡತನದ ಜೀವನ, ಹೀಗೆ ಇತ್ಯಾದಿ ನೋವುಗಳನ್ನು ಬಾಲ್ಯದಿಂದಲೇ ಸಹಿಸಿಕೊಂಡು ಬಂದವರು ಭಾರತದಲ್ಲಿ ಸಾಕಷ್ಟು ಜನರಿದ್ದಾರೆ. ಚಿಕ್ಕ ಮಕ್ಕಳಲ್ಲಿಯ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಅಲ್ಪ ಪ್ರಮಾಣದ ನೋವನ್ನು ಸಹಿಸುವ ಶಕ್ತಿಯನ್ನು ಮಾತ್ರ ಹೊಂದಿರುತ್ತದೆ. ಮೆದುಳು ತಡೆದುಕೊಳ್ಳುವ ಶಕ್ತಿಗಿಂತ ನೋವಿನ ಪ್ರಮಾಣ ಅತಿಯಾದಾಗ ಮನಸು ಅನಾರೋಗ್ಯವಾಗಿ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದ ಈ ನೋವುಗಳು ಸುಪ್ತಾವಸ್ತೆಯಲ್ಲಿ ಹಾಗೆಯೇ ಉಳಿದು ಬಿಡುತ್ತವೆ. ಮುಂದೆ ದೊಡ್ಡವರಾದಾಗಲೂ ಸುಪ್ತಾವಸ್ತೆಯಲ್ಲಿ ಉಳಿದಿರುವ ಈ ಘಟನೆಗಳು ಕೆಟ್ಟ ಕನಸುಗಳ ಮೂಲಕ ಹೊರ ಬರುತ್ತವೆ. ಯಾರಾದರು ಸತ್ತಾಗ ಆತ್ಮಗಳು ರಾತ್ರಿಯ ವೇಳೆ ತಮ್ಮ ಹತ್ತಿರವೇ ಬಂದಂತೆ. ದೆವ್ವಗಳನ್ನು ನೋಡಿದ ಅನುಭವ ಹೀಗೆ ಇತ್ಯಾದಿ ಭಯಾನಕ ಘಟನೆಗಳಂತೆ ಕಾಣುತ್ತವೆ...

ಪ್ರೌಢಾವಸ್ಥೆಯನ್ನು ದಾಟಿದ ಹಂತದಲ್ಲಿ ನಮ್ಮ ಜೀವನದ ಕೆಲವು ಕೆಟ್ಟ ಅನುಭವಗಳು ಆಗಾಗ ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವಷ್ಟು ಭಯಾನಕವಾಗಿರುವುದಿಲ್ಲ. ಏಕೆಂದರೆ ಈ ಘಟನೆ ನಡೆದಾಗ ಮೆದುಳು ಸಂಪೂರ್ಣವಾಗಿ ಬೆಳೆದಿರುತ್ತದೆ. ನೋವು ಸಹಿಸಿಕೊಳ್ಳುವ ಶಕ್ತಿ ಪಡೆದುಕೊಂಡಿರುತ್ತದೆ. ಅದೇ ಘಟನೆ ಜೀವನದ ಪಾಠವಾಗಿ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಆದರೆ ಚಿಕ್ಕ ಮಕ್ಕಳಲ್ಲಿ ಅಂದರೆ ಐದು ವರ್ಷದಿಂದ ಹದಿನೆಂಟು ವರ್ಷದವರೆಗೆ ನಮ್ಮ ಮೆದುಳು ಸಿಮಿತ ಪ್ರಮಾಣದಷ್ಟು ಮಾತ್ರ ನೋವನ್ನು ಸಹಿಸಿಕೊಳ್ಳುತ್ತದೆ. ಅತಿಯಾದ ಭಯಾನಕ ಕೃತ್ಯ ಮತ್ತು ನೋವುಗಳನ್ನು ಸಹಿಸಿಕೊಳ್ಳಲು ಶಕ್ತವಾಗಿರುವುದಿಲ್ಲ. ಒಂದನೇ ತರಗತಿಯಲ್ಲಿ ಓದುವ ಮಗು ಅದರ ಬುದ್ಧಿ ಸಾಮರ್ಥಕ್ಕನುಗುಣವಾಗಿ ಪಠ್ಯಕ್ರಮವನ್ನು ಮಾತ್ರ ರಚಿಸಲಾಗುತ್ತದೆ. ಆ ಮಗುವಿಗೆ ಐದನೇ ತರಗತಿಯ ಬುದ್ಧಿ ಸಾಮರ್ಥ್ಯದ ಪಠ್ಯಕ್ರಮವನ್ನು ಒದಗಿಸಲು ಸಾಧ್ಯವಿಲ್ಲ. ಹಾಗೆಯೇ ಐದನೇ ತರಗತಿಯ ಮಗುವಿಗೆ ಹತ್ತನೇ ತರಗತಿಯ ಪಠ್ಯ ಕೊಡಲು ಸಾಧ್ಯವಿಲ್ಲ. ಹಾಗೆಯೇ ನೋವಿನ ವಿಷಯದಲ್ಲಿಯೂ ಅಷ್ಟೆ ಆಯಾ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ನಮ್ಮ ಮೆದುಳು ನೋವನ್ನು ಪಡೆದುಕೊಳ್ಳುವ ಶಕ್ತಿ ಇರುತ್ತದೆ. ಅದಕ್ಕಿಂತ ನೋವು ಬವಣೆಗಳು ಹೆಚ್ಚಾದಾಗ ಮನಸ್ಸು ಬಳಲಿ ಹೋಗುತ್ತದೆ. ಭಯ, ಹಠ, ಉಧ್ವೇಗ, ಹತಾಷೆ, ಮುಂತಾದ ಅನಾರೋಗ್ಯಕರವಾದಂತಹ ಅಂಶಗಳು ನಮ್ಮ ಮೆದುಳಿನ ಸುಪ್ತಾವಸ್ತೆಯಲ್ಲಿ ಸಂಗ್ರಹವಾಗಿ ಆಗಾಗ ಕೆಟ್ಟ ಕನಸಾಗಿಯೂ ಕಾಡಬಹುದು.
ಪ್ರತಿಯೊಬ್ಬ ಮನುಷ್ಯನ ಆಲೋಚನೆಗಳು ಎರಡು ಸ್ತರಗಳಲ್ಲಿ ನಡೆಯುತ್ತದೆ. ಒಂದು ಸುಪ್ತಾವಸ್ತೆ ಮತ್ತೂಂದು ಜಾಗೃತಾವಸ್ತೆ. ಪ್ರಾಯ್ಡ ಮತ್ತು ಯಂಗ್ ಎಂಬ ಮನೋ ವಿಜ್ಞಾನಿಗಳು ಈ ರೀತಿ ಮನೋರೋಗದಿಂದ ಬಳಲುತ್ತಿದ್ದರ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿದರು. ಅವರು ಕಂಡ ಕನಸುಗಳನ್ನು ಬರೆದುಕೊಂಡರು. ಅನೇಕರಲ್ಲಿ ತಾವು ಬಾಲ್ಯದಲ್ಲಿ ಅನುಭವಿಸಿದ ನೋವಿನ ಘಟನೆಗಳಿಗೂ ತಾವು ಕಂಡ ಕನಸುಗಳಿಗೂ ಸ್ವಾಮ್ಯತೆಯನ್ನು ಗಮನಿಸಿದರು. ಸುಪ್ತಾವಸ್ತೆಯಲ್ಲಿರುವ ದಮನಿತ ಆಕಾಂಕ್ಷೆಗಳು ಈ ರೀತಿ ಕನಸಿನ ರೂಪದಲ್ಲಿ ಮೂಡುತ್ತವೆ. ಈ ದಮನಿತ ಘಟನೆಗಳು ಜಾಗೃತಾವಸ್ತೆಗೆ ಬರುವುದೇ ಇಲ್ಲ. ವಿವೇಚನಾ ಶಕ್ತಿ ತುಂಬಾ ಬಲಶಾಲಿಯಾದಾಗ ಕೆಲವು ದಮನಿತ ಘಟನೆ ಆಕಾಂಕ್ಷೆಗಳು ಕೆಟ್ಟ ಕನಸಿನ ರೂಪದಲ್ಲೋ ಅಥವಾ ದೆವ್ವ ಪ್ರೇತವನ್ನು ಕಂಡಂತಲೋ ಬೆಚ್ಚಿ ಹೆದರುತ್ತೇವೆ....

ಎಷ್ಟೋ ಸಲ ಕೆಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಕೆಲವು ವಿಚಿತ್ರ ಘಟನೆಗಳನ್ನು ನನ್ನ ಬಳಿ ಹೇಳಿಕೊಂಡದ್ದೂ ಉಂಟು. ಅಥವಾ ತರಗತಿಯಲ್ಲಿ ನಾನು ಪಾಠ ಮಾಡುತ್ತಿರುವಾಗ ಅತೀ ಕಡಿಮೆ ಆತ್ಮ ವಿಶ್ವಾಸ ಹೊಂದಿದ ಮಕ್ಕಳನ್ನೂ ಗಮನಿಸಿದ್ದೇನೆ. ಕೆಲವು ಮಕ್ಕಳು ಅನಾರೋಗ್ಯಕರವಾದ ಮನೆಯ ವಾತಾವರಣದಲ್ಲಿ ಬೆಳೆಯುತ್ತಿರುವುದನ್ನೂ ಕಂಡಿದ್ದೇನೆ.. ಇಂತವರಿಗೆಲ್ಲಾ ನನ್ನ ಸಲಹೆ ಏನೆಂದರೆ ನಿನ್ನ ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಭಯ, ನೋವು, ಹೆದರಿಕೆ, ಮುಂತಾದ ಋಣಾತ್ಮಕ ಮತ್ತು ನಿಷೇದಾತ್ಮಕ ಭಾವನೆಗಳನ್ನು ಅತಿಯಾಗಿ ಹೇರಬೇಡಿ. ಅಂತಹ ಘಟನೆಗಳು ಮನೆಯಲ್ಲಿ ನಡೆದರೂ ಮಕ್ಕಳ ಮುಂದೆ ಬುದ್ಧಿವಂತಿಕೆಯಿಂದ ವರ್ತಿಸಿ. ಆದಷ್ಟು ಹದಿನೆಂಟು ವರ್ಷಗಳ ವರೆಗೆ ನಿಮ್ಮ ಮಕ್ಕಳ ಮನಸ್ಸನ್ನು ಸಂತೋಷಕರವಾಗಿರುವಂತೆ ನೋಡಿಕೊಳ್ಳಿ. ಆಟ ಪಾಠ, ಹೊಗಳಿಗೆ, ಶಿಕ್ಷೆ, ನೋವುಗಳನ್ನು ಸಹ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಪರಿಚಯಿಸಿರಿ. ಇಷ್ಟು ಮಾಡಿದರೆ ಸಾಕು ನಿಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಲ್ಲರು....

ಪ್ರಕಾಶ್ ಎನ್ ಜಿಂಗಾಡೆ..