Thursday 15 November 2018

ಕನಸುಗಳ ಬೆನ್ನೇರಿ -2

*ಕನಸುಗಳ ಬೆನ್ನೇರಿ....*

*2. ಬೆಳಗಿನ ಕನಸುಗಳು*

*ಮಾನವ ಕತ್ತಲೆಯಲ್ಲಿ ಬೇಕಿದ್ದರೆ ಬದುಕಬಲ್ಲ. ಆದರೆ ಕನಸುಗಳಿಲ್ಲದೇ ಬದುಕಲು ಸಾಧ್ಯವಿಲ್ಲ* ಕೆಲವೇ ಕೆಲವರು ಕನಸನ್ನು ಕೇವಲ ಕನಸು ಎಂದು ತಿರಸ್ಕರಿಸಿ ಬಿಡುತ್ತಾರೆ. ಆ ಕನಸನ್ನು ಅರ್ಥೈಸಲೂ ಹೋಗುವುದಿಲ್ಲ. ವಿಶ್ಲೇಸಿಕೊಳ್ಳಲೂ ಹೋಗುವುದಿಲ್ಲ. ಆದರೆ ಬಹುಸಂಖ್ಯಾದ ಮುಂದಿ ತಮಗೆ ಬಿದ್ದ ಕನಸುಗಳನ್ನು ವಿಶ್ಲೇಷಿಸಿಕೊಳ್ಳುವುದೇ ಹೆಚ್ಚು. ಕನಸುಗಳು ಮಾನವನ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿವೆ ಅದರಲ್ಲೂ ಬೆಳಗಿನ ಕನಸುಗಳು ಬಿದ್ದರಂತೂ ಮುಗೀತು, ಒಳ್ಳೆಯದೇ ಕೆಟ್ಟದ್ದೇ ಎಂಬ ವ್ಯಾಖ್ಯಾನು ವ್ಯಾಖ್ಯೆಗಳು ಪ್ರಾರಂಭವಾಗಿಬಿಡುತ್ತವೆ. ಮೊನ್ನೆ ಇಂತಹ ಬೆಳಗಿನ ಕನಸಿನ ಬಗ್ಗೆ ನಾನು ತುಂಬಾ ತಲೆ ಕೆಡಿಸಿಕೊಂಡಿದ್ದೂ ಇದೆ..

ನಮ್ಮೂರು ಬಸವಾಪಟ್ಟಣ ದಾವಣಗೆರೆ ಜಿಲ್ಲೆಯ ಚಿಕ್ಕ ಹಳ್ಳಿ. ಹುಟ್ಟಿದಂದಿನಿಂದ ಊರನ್ನು  ನೋಡುತ್ತಲೇ ಬೆಳೆದೆ. ನಾನು ಉದ್ದ ಬೆಳೆದೆನೆ ಹೊರತು ಊರು ಮಾತ್ರ ಒಂದಿಂಚು ಸಹ ಬೆಳೆಯಲಿಲ್ಲ. ನಮ್ಮೂರು ಯಾವಾಗ ಪಟ್ಟಣದ ರೂಪ ಪಡೆಯುತ್ತದೆಯೋ ಎಂದು ಕಾದು ಕಾದು ನನಗೂ ಸಾಕಾಯಿತು. ನಮ್ಮೂರಿನ ಹೆಸರಿನಲ್ಲಿ ಪಟ್ಟಣ ಎಂದು ಇದೆಯಾದರೂ ಅದು ಇವತ್ತಿನವರೆಗೂ ಪಟ್ಟಣದಂತೆ ವಾಸ್ತವ ಸ್ವರೂಪವನ್ನು ಪಡೆಯಲೇ ಇಲ್ಲ. ಹೆಸರಲ್ಲಿ ಮಾತ್ರ ಬಸವಾ'ಪಟ್ಟಣ' ಎಂದು ಚಿರ ನೂತನವಾಗಿ ಉಳಿದಿದೆ.

ಇಪ್ಪತ್ತೆರಡು ವರ್ಷದ ಹಿಂದೆ ನಮ್ಮ ಭಾವನವರು ನಮ್ಮಕ್ಕನನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದರು ನಮ್ಮೂರಿನ ಹೆಸರನ್ನು ಕೇಳಿ ಕೂಡಲೇ ಇದು ಯಾವುದೋ ದೊಡ್ಡ ಪಟ್ಟಣವಿರಬೇಕೆಂದು ಊಹಿಸಿಕೊಂಡು ಬಂದಿದ್ದರಂತೆ. ನಮ್ಮೂರಿಗೆ ಕಾಲಿಟ್ಟಾಲೇ ಅವರಿಗೆ ಗೊತ್ತಾಗಿದ್ದು ನಮ್ಮೂರಿನ ಉದ್ದ ಅಗಲ ವಿಸ್ತೀರ್ಣ ಎಷ್ಟು ಎಂದು.

ನಮ್ಮೂರಿನಲ್ಲಿರುವ ಚಿರಡೋಣಿ ಎಂಬ ರೋಡಿನ ಬಲಭಾಗದ ಪ್ರದೇಶವು ಇತ್ತೀಚೆಗೆ ತುಂಬಾ ಅಭಿವೃದ್ಧಿ ಕಂಡಿದೆ. ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡ ಹೊಂದಿದ ಹೆಗ್ಗಳಿಕೆ ನಮ್ಮೂರಿಗಿದೆ. ಶಾಂಘೈ ಟವರ್ ಗಿಂತಲೂ ಸುಂದರವಾದ ಮಿನಾರ್ ನಿರ್ಮಾಣವಾಗಿದೆ. ನಮ್ಮೂರಿನ ದುರ್ಗಾಂಬಿಕಾ ಬೆಟ್ಟದ ಮೇಲಿಂದ ಊರನ್ನು  ನೋಡಿದರೆ ಹೊಸದಾಗಿ ನಿರ್ಮಿತವಾದ ಆ ಊರಿನ ಸೌಂದರ್ಯ ವರ್ಣಿಸಲಾಗದು. ಎಲ್ಲಾ ಹೈ ಟೆಕ್ ಸಿಟಿಗಳನ್ನ ಹಿಂದೆ ಹಾಕಿದೆ. ಗೌಡನಕಟ್ಟೆ ಎಂಬ ನಾಲೆಯ ಪಕ್ಕದಲ್ಲೇ ಬೃಹತ್ ಬೌದ್ಧ ದೇವಾಲಯವೊಂದು ನಿರ್ಮಾಣವಾಗುತ್ತಿದೆ. ಹೊನ್ನಿನಂತೆ ಹೊಳೆಯುತ್ತಿರುವ ಸಂಪೂರ್ಣವಾದ ಸುವರ್ಣಮಂದಿರವದು. ಇದನ್ನೆಲ್ಲಾ ನೋಡಿದ ಮೇಲೆ ನನ್ನ ಜೀವ ತಡೆಯಲಿಲ್ಲ. ಹೊಸ ಊರಿನ ಸೌಂದರ್ಯ ಸವಿಯಬೇಕು ಎಂಬ ಆಸೆ ಮೂಡಿತು.  ಅಲ್ಲಿರುವ ಬುದ್ದನ ಸುವರ್ಣ ಮಂದಿರ ಹತ್ತಿರದಿಂದಲೇ ಕಣ್ಣು ತುಂಬಿಕೊಳ್ಳುವ ಬಯಕೆ ಅತಿಯಾಯಿತು. ಇನ್ನೇನು ಹೊಸ ಊರಿನೊಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಅಲ್ಲೇ ನಾಲೆಯಲ್ಲಿ ಎಮ್ಮೆಯ ಮೈ ತೊಳೆಯುತ್ತಿದ್ದ ದನ ಕಾಯುವ ಹುಡುಗನೊಬ್ಬ ನನ್ನ ಕಡೆ ನೋಡಿ

"ಸರ್.... ಆಕಡೆ ಹೋಗ ಬೇಡಿ. ಅದು ನಮ್ಮ ದೇಶವಲ್ಲ. ಕೌಲಲಂಪುರ ಅನ್ನೋ ದೇಶ ನಿರ್ಮಾಣವಾಗುತ್ತಿದೆ. ವೀಸಾ ಪಾಸ್ ಪೋರ್ಟ್ ಇಲ್ದೇ ಹೋದರೆ ಅರೆಸ್ಟ್ ಆಗಿ ಹೋಗ್ತೀರಾ"

ಎಂದನು.

"ಅರೆ.... ನಾನು ಎಷ್ಟೋ ಸಲ ಇದೇ ಮಾರ್ಗವಾಗಿ ಸಂಗಾಹಳ್ಳಿಗೆ ಹೋಗಿದ್ದೆನಲ್ಲಾ...."
ಎಂದೆ

ಅದಕ್ಕೆ ಆ ಹುಡುಗ

"ಅಣ್ಣ.. ಅದು ಆಗ...!! ಇದು ಈಗ...!!"

ಆ ಹುಡುಗ ಬೆರಳನ್ನು ತಿರುಗಿಸುತ್ತಾ ರಜನಿಕಾಂತ್ ಸ್ಟೈಲಲ್ಲಿ ಹೇಳಿದ

"ಯಾರೋ ಹೇಳಿದ್ದು ನಿನಗೆ.. ಆ ಕಡೆ ಹೋಗಬಾರದು ಅಂತ... ಚಿಕ್ಕವನಾಗಿದ್ದಾಗ ಇದೇ ರೋಡಲ್ಲಿ ನಾನು ಸೈಕಲ್ ಕಲಿತ್ತಿದ್ದೇನೆ ಗೊತ್ತಾ..? ಈಗ ಹೋಗಬಾರದು ಎಂದರೆ ಹೆಂಗೆ"

ನಾನು ಅಸಮಧಾನದಿಂದ ಕೇಳಿದೆ..

"ಓಯ್... ಅಣ್ಣ ಸ್ವಲ್ಪ ಅರ್ಥ ಮಾಡ್ಕೊ, ನೀನು ಪಾಕಿಸ್ಥಾನಕ್ಕೆ ಹೋಗ್ತೀನಿ ಅಂದ್ರೆ ನಿನ್ನ ಹಂಗೆ ಒಳಗೆ  ಬಿಡ್ಕಂಡ್ ಬಿಡ್ತಾರಾ...? ವೀಸಾ ಇಲ್ದಿದ್ರೆ ಜೈಲಲ್ಲಿ ಹಾಕಿ ರುಬ್ಬಲ್ವಾ... ಇದು ಹಿಂಗೆನೇ, ಬೇರೆ ದೇಶ ಕಣಣ್ಣೊ... "

ಹುಡುಗ ಈಗ ಜಗ್ಗೇಶ್ ಸ್ಟೈಲಲ್ಲಿ ಅವನದೇ ಧ್ವನಿಯಲ್ಲಿ ಹೇಳಿದ..

ಎಷ್ಟೋ ಸಲ ಈ ಪ್ರದೇಶದ ಮೇಲೆ ನಾನು ಮನಬಂದಂತೆ ಸವಾರಿ ಮಾಡಿದ್ದನ್ನು ನೆನಪಿಸಿಕೊಂಡೆ. ಆಗ ಇದ್ದ ಸ್ವಾತಂತ್ರ ಈಗ ಇಲ್ಲದ್ದನ್ನು ಕಂಡು ಮನಸು ಬೇಸರವಾಯಿತು. ಇದ್ಯಾವ ದೇಶ ನಮ್ಮೂರಿಗೆ ಅಂಟಿಕೊಂಡೇ ನಿರ್ಮಾಣವಾಗುತ್ತಿದೆಯಲ್ಲಾ ಎಂದು ಯೋಚಿಸಿ ಗೂಗಲ್ ಸರ್ಚ್ ಮಾಡಿದೆ. " which another country is situated inside of south India" ಎಂದು ಟೈಪ್ ಮಾಡಿ ನೋಡಿದೆ. ಗೂಗಲ್ ಸಂಪೂರ್ಣ ಮಾಹಿತಿಯೊದಗಿಸಿತು...

ಊರಿನ ಜನ ಮಾತನಾಡಿಕೊಳ್ಳುವಂತೆ ಅದು ಕೌಲಲಂಪುರ ಅನ್ನೋ ದೇಶವಾಗಿರಲಿಲ್ಲ. ಗೂಗಲ್ ಮಾಹಿತಿಯ ಪ್ರಕಾರ  "ಘಯಾನಾ" ಅನ್ನೋ ದೇಶವದು. ನಮ್ಮೂರಿನ ಪಕ್ಕದಲ್ಲೇ ನಿರ್ಮಾಣವಾಗುತ್ತಿದೆ.  ಹಿಂದೆ ಹದಿನಾರನೇ ಶತಮಾನದಲ್ಲಿ ಬಸವಾಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನಾದ ಕೆಂಗಣ್ಣನಾಯಕನು ಫ್ರೆಂಚರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದನಂತೆ. ಬಸವಾಪಟ್ಟಣದ ಮೇಲೆ ಆಕ್ರಮಣ ಮಾಡದೇ ಸ್ವತಂತ್ರವಾಗಿ ಬಿಟ್ಟರೆ ಬಲಭಾಗದ ಹತ್ತು ಮೈಲು ಗಳಷ್ಟು ಭೂಮಿಯನ್ನು ಫ್ರೆಂಚರಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದನಂತೆ. ಅದೇ ಪ್ರಕಾರ ಫ್ರೆಂಚರು ಕೆಂಗಣ್ಣನಾಯಕನಿಂದ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಂಡು ಹತ್ತು ಮೈಲ ಪ್ರದೇಶದ ಆ ಭೂಮಿಯನ್ನು ಪಡೆದುಕೊಂಡರಂತೆ.  ಹದಿನೇಳನೇ ಶತಮಾನದಲ್ಲಿ ಇಂಗ್ಲಿಷರ ಪ್ರಭಾವ ಭಾರತದಲ್ಲಿ ಹೆಚ್ಚಾಯಿತು. ಕ್ರಮೇಣ ಫ್ರೆಂಚರು ಬ್ರಿಟಿಷರ ಮುಂದೆ ಮಂಕಾಗಿ ಹೋದರು. ತಮ್ಮ ಪ್ರಭಾವ ಕುಗ್ಗಿ ಹೋದದ್ದರಿಂದ ಫ್ರೆಂಚರು ತಮ್ಮ ದೇಶಕ್ಕೆ ಮರಳಿದರು...

ಇದಾಗಿ ಮೂರು ಶತಮಾನಗಳ ನಂತರ, ಅಂದರೆ ಮೊನ್ನೆ ಮೊನ್ನೆ 2016 ರಲ್ಲಿ ಮತ್ತೆ ಕ್ಯಾತೆ ತೆಗೆದ ಫ್ರೆಂಚರು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಮತ್ತೆ ನಮ್ಮೂರಿನ ಪಕ್ಕದ ಹತ್ತು ಮೈಲಿ ಭೂ ಪ್ರದೇಶವನ್ನು ಮರಳಿ ಪಡೆದರು. ಈಗ ಅದೇ ಭೂ ಪ್ರದೇಶದಲ್ಲಿ ವೈಭವಯುತವಾದ 'ಘಯಾನಾ" ದೇಶ ನಿರ್ಮಾಣವಾಗುತ್ತಿದೆ. ಅದರ ಸೌಂದರ್ಯ ಕಣ್ಣು ಕುಕ್ಕುತ್ತಿದೆ. ಇಂದ್ರನ ಅಮರಾವತಿ ನಗರಕ್ಕೂ ಒಂದು ಕೈ ಮೇಲಿರುವ ವೈಭವಯುತ ನಗರವು ನನ್ನ ಕಣ್ಣ ಮುಂದೆನೇ ನಿರ್ಮಾಣವಾಗುತ್ತಿದೆ. ಆದರೆ ಒಳಗೆ ಹೋಗಲಾರದೇ ಮನಸು ವಿಲ ವಿಲನೆ ಒದ್ದಾಡುತ್ತಿದೆ...

ಇಂದು ಬೆಳ್ಳಂಬೆಳಗ್ಗೆ ಬಿದ್ದ ಈ ವಿಚಿತ್ರ ಕನಸು ಹೇಗೆ ಅರ್ಥೈಸಿಕೊಳ್ಳಬೇಕೋ.....!! 

ಬೆಳಗಿನ ಕನಸನ್ನು ನಿಜವೆಂದು ವ್ಯಾಖ್ಯಾನಿಸುವವರು, ಜ್ಯೋತಿಷ್ಯ ತಿಳಿದವರು ಯಾರಾದರೂ ಇದ್ದರೆ ಅರ್ಥೈಸಿರಿ..

ಮುಂಜಾನೆಯ ಕನಸುಗಳು ನಿಜ ಆಗುತ್ತೆ ಅಂತಾನೆ ಎಲ್ಲರೂ ಹೇಳ್ತಾರೆ. ಆದರೆ ನಮ್ಮೂರಿನ ಪಕ್ಕದಲ್ಲಿ ಮತ್ತೊಂದು ದೇಶ ನಿರ್ಮಾಣವಾಗೋ ಮಾತು  ತಿಪ್ಪರ್ ಲಾಗ ಹಾಕಿದರೂ ನಿಜವಾಗಲಾರದು. ಬೆಳಗಿನ ಕನಸು ನಿಜ ಆಗುತ್ತದೆ ಎನ್ನುವುದಾದರೆ ಹಿಂದಿನ ಜನ್ಮದಲ್ಲಿ ನಾನೇನಾದರೂ ಬಸವಾಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರ ಕೆಂಗಣ್ಣನಾಯಕ ಆಗಿದ್ದೆನೋ ಅಥವಾ ಫ್ರೆಂಚ್ ವೈಸ್ ರಾಯ್ ಏನಾದರೂ ಆಗಿದ್ದೆನೋ ಎಂಬ ಒಂದು ಸಣ್ಣ ಶಂಕೆ ಮೂಡುತ್ತಿದೆ..

ಈ ಕನಸಿನ ವಿಚಾರವನ್ನು ನಮ್ಮ ಕುಟುಂಬದ ಕುಲ ಪುರೋಹಿತರೊಡನೆ ಚರ್ಚಿಸಿದೆ. ಅವರು ಈ ಹಿಂದೆ ನಮ್ಮ ಕುಟುಂಬದಲ್ಲಿ ಬಿದ್ದ ಕೆಟ್ಟ ಕನಸುಗಳಿಗೆ ಶಾಂತಿ ಮಾಡಿಸುವ ವಿಧಾನವನ್ನು ಸೂಚಿಸಿದ್ದರು. ಆದರೆ ಈ ಸಲದ ಕನಸನ್ನು ಹೊತ್ತು "ಗುರುಗಳೇ ನಾನು ಹಿಂದಿನ ಜನ್ಮದಲ್ಲಿ ಫ್ರೆಂಚ್ ವೈಸರಾಯ್ ಅಥವಾ ಪಾಳೇಗಾರ ಕೆಂಗಣ್ಣನಾಯಕನಾಗಿರುವ ಸಾಧ್ಯತೆಗಳಿವೆ ಅರ್ಥೈಸಿ ನೋಡಿ" ಎಂದಾಗ ನನ್ನ ಮೇಲೆ ಅನುಮಾನದ ದೃಷ್ಠಿಯನ್ನು ಬೀರಿ, ಬಹುದಿನಗಳಿಂದ ನನಗೆ ಹೇಳಬೇಕಾದ ಬುದ್ಧಿವಾದಗಳನ್ನು ಹೇಳಿ ಮನೆಗೆ ಕಳುಹಿಸಿಕೊಟ್ಟರು.

ನಮ್ಮ ಸಮಾಜವೇ ಹೀಗೆ ಕೆಟ್ಟ ಕನಸುಗಳಿಗೆ ಇರುವ ಬೆಲೆ ಒಳ್ಳೆಯ ಕನಸುಗಳಿಗೆ ಸಿಗದು. ಬಹುಷಃ ಅಂದು ನನಗೆ ಬೆಳಗಿನ ಜಾವದಲ್ಲಿ ಕೆಟ್ಟ ಕನಸೇನಾದರೂ ಬಿದ್ದಿದ್ದರೆ ಶಾಸ್ತ್ರಿಗಳು ಅದಕ್ಕೆ ಅರ್ಥವನ್ನು ಹೇಳಿ ಶಾಂತಿ ಮಾಡಿಸುವ ವಿಧಾನವನ್ನು ಹೇಳಿ, ತಮ್ಮ ಉದರ ಪೋಷಿಸಿಕೊಳ್ಳುವಂತಹ ಸ್ವಾಹಿತಾಸಕ್ತಿಯ ದಾರಿ ಕಂಡು ಕೊಳ್ಳುತ್ತಿದ್ದರೋ ಏನೋ. ಆದರೆ ನನ್ನ ಕನಸಿನಲ್ಲಿ ಲಾಭ ಮಾಡಿಕೊಳ್ಳುವಂತಹ ಯಾವ ದಾರಿಯೂ ಇರಲಿಲ್ಲವಾದ್ದರಿಂದ ಶಾಸ್ತ್ರಿಗಳು ಕೈ ಚೆಲ್ಲಿರಬಹುದು. ಅಥವಾ ಬೆಳಗಿನ ಜಾವದ ಕೆಟ್ಟ ಕನಸುಗಳಿಗೆ ಅರ್ಥವನ್ನು ಹೇಳಿ ಅದಕ್ಕೆ ಪರಿಹಾರ ಸೂಚಿಸುವಂತಹ ಕಾಯಕಕ್ಕೆ ಅವರು ಜೋತು ಬಿದ್ದಿದ್ದರಿಂದ ನನಗೆ ಬಿದ್ದ ಒಳ್ಳೆಯ ಕನಸನ್ನು ತಿರಸ್ಕರಿಸಿರಬಹುದು.

ಬೆಳಗಿನ ಕನಸುಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ವ್ಯವಹಾರಗಳು ನಮ್ಮ ಸಮಾಜದಲ್ಲಿ ಇರುವುದರಿಂದ ನನಗೆ ಬೆಳಗಿನ ಕನಸುಗಳ ಬಗ್ಗೆ ನನಗಿದ್ದ ನಂಬಿಕೆ ಹೊರಟು ಹೋಯಿತು. ಅಂದಿನಿಂದ ಬೆಳಗಿನ ಕನಸುಗಳು ನಿಜವೇ ಎಂಬುದರ ಬಗ್ಗೆ ಅಧ್ಯಯನ  ಮಾಡಲಾರಂಭಿಸಿದೆ. ಬೆಳಗಿನ ಕನಸುಗಳು ನಿಜವಾಗುತ್ತವೆ ಎಂದು ಎಲ್ಲರೂ ನಂಬಿದ್ದರ ಐತಿಹ್ಯವಾದರೂ ಏನು ? ಇದಕ್ಕೆ ವೈಜ್ಞಾನಿಕ ಕಾರಣವೇನಾದರೂ ಇದೆಯೇ ? ಹೀಗೆ ಹಲವು ಪ್ರಶ್ನೆಗಳು ನನ್ನ ಮನದಲ್ಲಿ ಉದ್ಭವಿಸಿದವು. ಉತ್ತರ ಹುಡುಕಲು ನಗರದ ಗ್ರಂಥಾಲಯಗಳನ್ನು ಅಲೆದೆ, ಹಿರಿಯ ತಜ್ಞರನ್ನು ಕೇಳಿದೆ. ಧಾರ್ಮಿಕ ಮುಖಂಡರನ್ನು ಬೇಟಿಯಾದೆ.  ಕೆಲವರು ನನ್ನ ಬೆನ್ನ ಹಿಂದೆ ಮುಸು ಮುಸು ನಕ್ಕು ಸುಮ್ಮನಾದರೆ, ಮತ್ತೆ ಕೆಲವರು ತಮಗೆ ತಿಳಿದಿದ್ದನ್ನು ಹೇಳಿ ನನಗೂ ಬುದ್ಧಿವಾದ ಹೇಳಿದರು.

ಬೆಳಗಿನ ಕನಸುಗಳನ್ನು ವೈಜ್ಞಾನಿಕವಾಗಿಯೂ ವಿಶ್ಲೇಷಣೆಗೆ ಒಳಪಟ್ಟಿವೆ. ವಿಜ್ಞಾನಿಗಳ ಪ್ರಕಾರ ಮುಂಜಾನೆ ಕನಸುಗಳು ಥೀಟಾ ಮಟ್ಟದ  ನಿದ್ರಾವಸ್ಥೆಯಲ್ಲಿರುತ್ತವಂತೆ. ಅದನ್ನು ವೈಜ್ಞಾನಿಕವಾಗಿ  REM  (Rapid Eye Movement) ಎಂದು ಕರೆಯುತ್ತಾರೆ. ಬೆಳಗಿನ ಕನಸುಗಳು ಈ ಹಂತದಲ್ಲಿ ಬೀಳುವುದರಿಂದ ನೆನಪಿಡಲು ಸುಲಭವಾಗಿದೆ. ಥೀಟಾ ಮಟ್ಟವನ್ನು ಸಾಮಾನ್ಯವಾಗಿ ವೈದ್ಯರು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಈ ಥೀಟಾ ಹಂತದಲ್ಲಿ ನಮ್ಮ  ಮಿದುಳಿನ ತರಂಗಗಳಂತಲ್ಲದೆ, ಥೀಟಾದ ಸಿಕ್ಕುವ ಧ್ವನಿಯು ಮೌನವಾದ ಧ್ವನಿಯನ್ನು ಹೊಂದಿದೆ. ಇದು 7Hz ನಿಂದ 8Hz ವರೆಗಿನ ಆಲ್ಫಾ-ಥೈಟಾ ಗಡಿಭಾಗದಲ್ಲಿದೆ, ಅಲ್ಲಿ ದೃಶ್ಯೀಕರಣ, ಮನಸ್ಸಿನ ಪ್ರೋಗ್ರಾಮಿಂಗ್ ಮತ್ತು ನಿಮ್ಮ ಮೈಂಡ್ ಸೃಜನಶೀಲ ಶಕ್ತಿಯನ್ನು ಬಳಸಿಕೊಳ್ಳುವ ಅತ್ಯುತ್ತಮ ವ್ಯಾಪ್ತಿ ಇದಾಗಿದೆ. ಹಾಗಾಗಿಯೇ ವಿಜ್ಞಾನಿಗಳು ಈ ಹಂತದ ಬೆಳಗಿನ ಕನಸುಗಳು ಪ್ರಜ್ಞಾಪೂರ್ವಕವಾಗಿ ನಿಮ್ಮ ನೈಜತೆಯನ್ನು ರಚಿಸುವ ಮಾನಸಿಕ ಸ್ಥಿತಿ ಎಂದು ಗುರುತಿಸುತ್ತಾರೆ. ಹಾಗಾಗಿ ಇಲ್ಲಿ ಬೀಳುವ ಕನಸುಗಳು ನೈಜತೆಗೆ ಹತ್ತಿರವಾಗಿರುತ್ತವೆ ಎಂಬ ವಾದ. ಆದರೆ ಇಲ್ಲಿರುವ ಕನಸುಗಳು (ಮನಸ್ಥಿತಿಗಳು) ಥೀಟ ಹಂತದಲ್ಲಿದ್ದರೆ ಮಾತ್ರ ನೀವು ನಿಮ್ಮ ಬದುಕಿನಲ್ಲಿ ನಡೆಯುವ ನೈಜ ಘಟನೆಗಳನ್ನು ಕನಸಿನ ರೂಪದಲ್ಲಿ ಕಾಣಲು ಸಾಧ್ಯವಾಗಿರುತ್ತದೆ. ಆಳವಾದ ನಿದ್ರಾವಸ್ಥೆಯಲ್ಲಿನ ಬೆಳಗಿನ ಕನಸುಗಳು ನೈಜವಾಗಿರುತ್ತವೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.
ಇಲ್ಲಿ ವಿಜ್ಞಾನಿಗಳು ಬೆಳಗಿನ ಕನಸುಗಳು ನಿಜವಾಗಬಹುದು ಎಂಬುದಕ್ಕೆ ಕಾರಣವನ್ನು ನೀಡಿದ್ದಾರೆಯೇ ವಿನಃ ಎಲ್ಲಿಯೂ ನಿಜ ಎಂಬಂತೆ ದೃಢೀಕರಿಸಿಲ್ಲ. ಹಾಗಾಗಿ ವಿಜ್ಞಾನವು ಈ ವಿಷಯದಲ್ಲಿ ಸ್ಪಷ್ಟತೆಯನ್ನು ನೀಡದಷ್ಟು ಜಾಣತನವನ್ನು ತೋರಿಸಿ ಸುಮ್ಮನಾಗಿ ಬಿಡುತ್ತದೆ.

ಇನ್ನು ಬೆಳಗಿನ ಕನಸುಗಳ ಬಗ್ಗೆ ನಮ್ಮ ಧರ್ಮಶಾಸ್ತರಗಳು ಏನು ಹೇಳುತ್ತವೆ ಎಂದು ಹುಡುಕಾಡಿದೆ. ಕುರಾನಿನ ಪುಟಗಳನ್ನು ತಿರುವಿ ಹಾಕಿದೆ. ಕುರಾನಿನಲ್ಲಿ ಬೆಳಗಿನ ಕನಸುಗಳು ಮತ್ತು  ಮಧ್ಯರಾತ್ರಿಯ ಕನಸುಗಳು ಬಗ್ಗೆ ಯಾವ ಬೇಧ ಭಾವ ತೋರಿಸಲಾಗಿಲ್ಲ. ಅಲ್ಲಿ ಕನಸುಗಳು ಬೀಳುವ ಸಮಯದ ಆಧಾರದ ಮೇಲೆ ಕನಸನ್ನು ವಿಂಗಡಿಸಲು ಹೋಗಿಲ್ಲ. ಎಲ್ಲವೂ ಸಹ ಕಸಸಿನಂತೆ ಪರಿಗಣಿಸಲ್ಪಟ್ಟು ಕನಸುಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ  "ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತದೆ; ಕೆಟ್ಟ ಕನಸುಗಳು ಸೈತಾನನಿಂದ ಬರುತ್ತವೆಯಂತೆ" ಕುರಾನಿನ ಈ ಮಾತು ನನ್ನ ಮನಸ್ಸಿಗೆ ಹತ್ತಿರವಾಯಿತು. ಕನಸುಗಳು ನಿಜವಾಗುತ್ತವೆ ಎಂದು ಮನಸ್ಸು ಕೆಡಿಸಿಕೊಂಡು ನಮ್ಮ ತಲೆಯನ್ನು ಹನ್ನೆರಡಾಣೆ ಮಾಡಿಕೊಳ್ಳುವುದರ ಬದಲು. ಒಳ್ಳೆಯ ಕನಸು ದೇವರದು, ಕೆಟ್ಟದ್ದು ಸೈತಾನನದು ಎಂದು ಸುಮ್ಮನಾಗಿ ಬಿಡುವುದೇ ಲೇಸು. ಯಾಕೆಂದರೆ ಮನುಷ್ಯನ ಅಂತರಂಗದಲ್ಲಿ ಎಲ್ಲಿಯ ವರೆಗೆ ಒಳ್ಳೆಯದು ಕೆಟ್ಟದ್ದು ಎಂಬ ಭಾವನೆಗಳು ನೆಲೆಸಿರುತ್ತವೆಯೋ ಅಲ್ಲಿಯ ವರೆಗೂ ಒಳ್ಳೆಯ ಕನಸುಗಳು ಮತ್ತು ಕೆಟ್ಟ ಕನಸುಗಳು ಇದ್ದೇ ಇರುತ್ತವೆ. ಇನ್ನು ಕನಸಿನಲ್ಲಿ ಬೆಳಗಿನದು. ರಾತ್ರಿಯದು ಎಂದು ವಿಂಗಡಿಸುವುದು ಎಷ್ಟರ ಮಟ್ಟಿಗೆ ಸರಿ..

ಇನ್ನೂ ನಮ್ಮ ಪುರಾಣಗಳಲ್ಲಿಯೂ ಸಹ ಕನಸಿನ ಬಗ್ಗೆ ಉಲ್ಲೇಖಗಳಿವೆ. ಬ್ರಹ್ಮಸೂತ್ರದಲ್ಲಿ ಪ್ರಕಾರ ಭಗವಂತನು ಕನಸಿನ ಮೂಲಕ ಸತ್ಯದ ದರ್ಶನವನ್ನು ಮಾಡಿಸುತ್ತಾನೆ. ಎಂಬ ಉಲ್ಲೇಖವಿದೆ. ಕುರಾನಿನ ವಾಕ್ಯದಂತೆಯೇ ಕನಸುಗಳು ದೇವರಿಂದ ಮೂಡಿದ್ದು ಎಂಬ ತತ್ವ ಇಲ್ಲಿಯೂ ಇದೆ. ವೇದವ್ಯಾಸರು ಕನಸಿನ ಈ ವೇದಾಂತವನ್ನು ಒಪ್ಪತ್ತಾರೆ. ಮುಂದೆ ಮಧ್ವಾಚಾರ್ಯರೂ ಸಹ ಇದನ್ನೇ ಅನುಮೋದಿಸುತ್ತಾರೆ. ಆದರೆ ಕನಸುಗಳು ಭಗವಂತನಿಂದ ಬಂದ ಸತ್ಯ ದರ್ಶನಗಳಾಗಿರುತ್ತವೆ. ಇವು ಮನದೊಳಗೆ ಅಂತರ್ಗತವಾಗಿರುವ ಅಜ್ಞಾತ ಆಸೆಗಳ ಪ್ರತಿಬಿಂಬವಾಗಿದೆ. ಇಲ್ಲಿ ಭಗವಂತ ಬಿಂಬವಾದರೆ ಕನಸಿಗಳು ಪ್ರತಿಬಿಂಬವಾಗಿದೆ. ಭಗವಂತ ಕನಸಿನಲ್ಲಿ ಸತ್ಯದ ದರ್ಶನ ಮಾಡಿಸಿದರೆ ಕನಸುಗಳು ಆ ಸತ್ಯದ ಪ್ರತೀಕವಾಗಿರುತ್ತವೆ. ಹಾಗೆಂದ ಮಾತ್ರಕೆ ಬಿದ್ದ ಕನಸುಗಳು ಸತ್ಯವೆಂದರ್ಥವಲ್ಲ. ಅದು ಸತ್ಯ ಕಂಡುಕೊಳ್ಳುವ ಒಂದು ಮಾರ್ಗ ಅಷ್ಟೆ. ದಶರಥನಿಗೆ ತನ್ನ ಮಗ ರಾಮ ದೂರವಾಗುತ್ತಾನೆಂದೂ, ಗಾಂಧಾರಿಗೆ ತನ್ನ ಮಕ್ಕಳು ಯುದ್ಧದಲ್ಲಿ ಮಡಿದಂತೆಯೂ, ರಾಜ್ಯನೊಬ್ಬನಿಗೆ ಸಾಮ್ರಾಜ್ಯವನ್ನು ಸ್ಥಾಪಿಸುವಂತೆಯೂ ಕನಸುಗಳು ಬಿದ್ದಿರುವುದನ್ನು ನಾವು ಪುರಾಣದಲ್ಲಿ ಓದಿದ್ದೇವೆ. ಇವುಗಳನ್ನು ನಾವು ಒಂದು ಕಥಾ ಚೌಕಟ್ಟಿನೊಳಗೆ ನೋಡಬೇಕೇ ವಿನಃ ನೈಜತೆಯ ಚೌಕಟ್ಟಿನೊಳಗೆ ನೋಡುವಂತಿಲ್ಲ. ನೈಜತೆಯ ಚೌಕಟ್ಟಿನಲ್ಲಿ ಗ್ರಹಿಸುವುದಾದರೆ ಅವು ಮನಸಿನಲ್ಲಿ ಅಂತರ್ಗತವಾದ ವಿಷಯಗಳು ಅವು ನೈಜ ಘಟನೆಗಳಿಗೆ ಹತ್ತಿರವಾದವು. ಹೀಗೆ ನಡೆಯಬಹುದು ಎಂಬುದನ್ನು ಮನಸ್ಸು ಪ್ರಮಾಣೀಕೃತವಾಗಿ ಯೋಚಿಸಿದಾಗ ಇಂತಹ ಕನಸುಗಳು ಬೀಳಲು ಸಾಧ್ಯ. ಅಂದರೆ ಇವು ಮನಸಿನೊಳಗೆ ಅವಿರ್ಭವಿಸಿಕೊಂಡಿರುವ ಘಟನೆಗಳು. ಇವುಗಳನ್ನೇ ವಿಜ್ಞಾನಿಗಳು ಥೀಟಾ ಮಟ್ಟದ ಕನಸುಗಳೆಂದು ಗುರುತಿಸುತ್ತಾರೆ. ಇಂತಹ ಕನಸುಗಳು ಸಾಮಾನ್ಯವಾಗಿ ನಸುಕಿನಲ್ಲಿ ಹೆಚ್ಚಾಗಿರುವುದರಿಂದ ಬೆಳಗಿನ ಕನಸುಗಳು ನಿಜವಾಗುತ್ತವೆ ಎಂಬ ಭಾವನೆಯಿದೆ. ಆದರೆ ಆ ಕನಸುಗಳು ನಿಮ್ಮ ಮನಸ್ಸಿನ ಅಜಾಗೃತ ವ್ಯವಸ್ಥೆಯಲ್ಲಿ ಘಟನೆಗಳಾಗಿ ದಾಖಲಾಗಿದ್ದರೆ. ಮನಸ್ಸು ಆ ವಿಷಯದ ಬಗ್ಗೆ ಕುರಿತು ಪದೇ ಪದೇ ಯೋಚಿಸುತ್ತಿದ್ದರೆ  ಕನಸಿನಲ್ಲಿ ಅವು ಮರುಕಳಿಸಿ ಆ ಘಟನೆಗಳಿಗೆ ನಮ್ಮ ಉತ್ತರವಾಗಿ ಚಿತ್ರಣವಾಗಿ ಮೂಡಬಹುದು ಅಷ್ಟೇ. ಆದರೆ ಕೆಟ್ಟ ಕನಸುಗಳಿಗೋ ಅಥವಾ ನಂಬಲರ್ಹವಾದ ಕೆಟ್ಟ ಕನಸುಗಳಿಗೋ ಉತ್ತರ ಹುಡುಕುವುದು ತಪ್ಪೆಂದೇ ನನ್ನ ಭಾವನೆ..

*ಪ್ರಕಾಶ್ ಎನ್ ಜಿಂಗಾಡೆ*

1 comment:

  1. Beautiful write up..the flow is really amazing..nice one sir

    ReplyDelete