Friday 30 December 2016

ಕಣ್ಣುಗಳು (ಕವನ)

ಕಾಡುತಿಹವು ಅವಳ ಕಣ್ಣುಗಳು
ಏನೇನೋ ಭಾಷೆಗಳು ಅದೆಂಥವೋ ಸನ್ನೆಗಳು
ಏನೇನೋ ಹೇಳಲು ಹೊರಟಿಹವು
ಪ್ರಶ್ನಾರ್ಥಕ ಚಿಹ್ನೆಯು ಅತಿಯಾಗಿ ಸಂಚಯಿಸಿ
ಅರ್ಥವಾಗದ ಗಣಿತದಂತೆ
ಈಗಲೂ ನನ್ನನು ಪೆದ್ದನಾಗಿಪವು....

ಸೋತು ಹೋಗಿಹೆನು ಕಣ್ಣ ಸೊಬಗಿಗೆ
ಏನೋ ಆಕರ್ಷಣೆ ಅದೆಂಥದೋ ಮೋಡಿ
ನೂರಾರು ಭಾವಗಳು ಕಲಿಯದ ಮಾತುಗಳು
ಕಣ್ಣಲ್ಲೇ ತೋರಿಹಳು...
ನಲಿಯುವಳು ನುಲಿಯುವಳು
ಅರ್ಥವಾಗದ ಹಾಡಾಗಿ ನಿಂತಿಹಳು

ಯಾವ ಶಾಲೆಯೂ ಕಲಿಸಲಿಲ್ಲ
ಯಾವ ಗುರುವೂ ತಿಳಿಸಲಿಲ್ಲ
ಪುಸ್ತಕವೂ ಮೀರಿ ನಿಂತಿಹ ನೋಟವದು...
ನಾಲಿಗೆಯ ತಿರುಗಿಸಿ ನನ್ನನು ಶಪಿಸಿ
ಹುಂಬನೆಂಬ ಬಿರುದನು ಪಾಲಿಸಿ
ಸೊಂಟವ ಕೊಂಕಿಸಿ ಕೋಪದಿ ಮುಂದೆ ಸಾಗಿಹಳು.

ಪ್ರಕಾಶ್ ಎನ್ ಜಿಂಗಾಡೆ.

Thursday 15 December 2016

ಕಾಣಿಕೆ

ಕಾಣಿಕೆ



ಶ್ರೀ ಶ್ರೀ ಶ್ರೀ ಸಾನಂದ ಶಾಸ್ತ್ರಿಗಳು ಜ್ಯೋತಿಷ್ಯದಲ್ಲಿ ಪ್ರಖಂಡ ಪಂಡಿತರು. ಅವರ ಶಾಸ್ತ್ರ ವಾಕ್ ಪ್ರಖರತೆಗೆ ಭವಿಷ್ಯದ ಸಂಗತಿಗಳೆಲ್ಲವೂ ಹೆದರಿ ಬೆದರಿ ಸೋತು ಸುಣ್ಣವಾಗಿಬಿಡುತ್ತವೆಯೆಂದು ಜನ ಮಾತನಾಡಿಕೊಳ್ಳುವುದುಂಟು. ಹಲವು ಜನರು ತಮ್ಮ ಮನದ ನೋವಿಗೆ ಶಾಶ್ವತ ಪರಿಹಾರವನ್ನು ಸಾನಂದ ಶಾಸ್ತ್ರಿಗಳಲ್ಲಿ ಕಂಡುಕೊಂಡಿದ್ದುಂಟು. ಒಮ್ಮೆ ಶಾಸ್ತ್ರಿಗಳು ಭವಿಷ್ಯ ನುಡಿದರೆಂದರೆ ಮುಗೀತು ಅದು ಸುಳ್ಳಾಗುವ ಮಾತೇ ಇಲ್ಲ. ಶಾಸ್ತ್ರಿಗಳ ಪಾಂಡಿತ್ಯದ ಜನಪ್ರಿಯತೆಯನ್ನು ಕೇಳಿದ ನನಗೆ ಶಾಸ್ತ್ರಿಗಳ ಹತ್ತಿರ ಹೋಗಲೇಬೇಕಾದ ಪ್ರಸಂಗವೊಂದು ಒದಗಿ ಬಂತು...
ಬಡತನದ ಬೇಗೆಯಿಂದ ಬೆಂದ ನನಗೆ ಶ್ರೀಮಂತನಾಗಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣಬೇಕೆಂಬ ಅಪೇಕ್ಷೆ ಅತಿಯಾಗಿತ್ತು. ನಾನೂ ಸಹ  ಒಂದು ಕೈ ನೋಡಿಯೇ ಬಿಡೋಣವೆಂದು ಸಾನಂದ ಶಾಸ್ತ್ರಿಗಳ ಬಳಿ ಹೋದೆ. ಶಾಸ್ತ್ರಿಗಳು ಪಟ್ಟೆ ನಾಮದ ಗಂಧವನ್ನು ಹಚ್ಚಿಕೊಂಡು ಹುಲಿ ಚರ್ಮದ ಮೇಲೆ ಆಸೀನರಾಗಿ ಕುಳಿತ್ತಿದ್ದರು. ಶಾಸ್ತ್ರಿಗಳ ಮುಖವು ದೈವ ಸ್ವರೂಪದ ಗಂಭೀರತೆಯನ್ನು ಪಡೆದಿತ್ತು.

ನನ್ನ ಆಸೆಯನ್ನು ಅವರಿಗೆ ಮನ ಮುಟ್ಟುವಂತೆ ಹೇಳಿಕೊಂಡೆ. ಶಾಸ್ತ್ರಿಗಳು ಕವಡೆ ಹಾಕಿ ನನ್ನ ಸಮಸ್ಯೆಗೆ ಪರಿಹಾರ ಸೂಚಿಸಿದರು. ತಿಮ್ಮಪ್ಪನ ಹುಂಡಿಗೆ ಸಾಧ್ಯವಾದಷ್ಟು ಕಾಣಿಕೆ ಸಲ್ಲಿಸು ನಿನಗೆ ಒಳ್ಳೆ ಫಲ ಲಭಿಸುತ್ತದೆಯೆಂದರು. ಎಷ್ಟು ಉದಾರಿಯಾಗುತ್ತಿಯೋ ಅಷ್ಟು ಸಂಪತ್ತನ್ನು ನೀನು ಕಾಣುತ್ತೀಯ ಎಂದರು...
ಅವರು ಹೇಳಿದಂತೆ ನಡೆದು ಕೊಳ್ಳಲು ಮನಸ್ಸು ಹಾತೊರೆಯುತ್ತಿತ್ತು. ಇದ್ದ ಬದ್ದ ಹಣ ಕೂಡಿ ಹಾಕಿ ತಿಮ್ಮಪ್ಪನ ಹುಂಡಿಗೆ ಹಾಕಲು ಕಾಣಿಕೆಯನ್ನೆಲ್ಲಾ ಸಂಗ್ರಹಿಸಿದೆ. ಸಾವಿರಾರು ರೂಪಾಯಿಗಳಷ್ಟು ಹಣವನ್ನು  ಹುಂಡಿಗೆ ಹಾಕಿದ್ದಾಯಿತು. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಶ್ರೀಮಂತನಾಗಬೇಕೆಂಬ ಹಂಬಲ ನನ್ನಲ್ಲಿ ಹೆಚ್ಚಾಗಿತ್ತು.  ನಾನು ಬಹಳ ಉದಾರತೆಯನ್ನು ಪ್ರದರ್ಶಿಸಿ ಕೈಯಲ್ಲಿದ್ದ ಬಂಗಾರದ ಬ್ರಾಸ್ಲೆಟ್ಟನ್ನು ಸಹ ಹುಂಡಿಗೆ ಹಾಕಿಬಿಟ್ಟೆ.  ತುಂಬಾ ಉದಾರತೆ ತೋರಿದ ಹೆಮ್ಮೆಯು ಒಂದು ಕ್ಷಣ ನನ್ನ ಮನಸ್ಸನ್ನು ಸಂತೋಷವನ್ನಾಗಿರಿಸಿತು.

ದೇವರಿಗೆ ಹಣ ಹಾಕಿದ್ದೆನೆಂಬ ಕಾರಣಕ್ಕಾಗಿ ಮಾರನೆಯ ದಿನದಿಂದಲೇ ಪ್ರತಿಫಲವನ್ನು ನಿರೀಕ್ಷೆ ಮಾಡಲಾರಂಭಿಸಿದೆ. ವ್ಯಾಪಾರ ವ್ಯವಹಾರ ಪ್ರಗತಿಯಾಗುವ ಕನಸು ಕಂಡೆ. ಬೀದಿಯಲ್ಲಿ ಜನರ ಗುಂಪೇನಾದರೂ ಬರುತ್ತಿದ್ದರೆ ಅವರು ನಮ್ಮ ಅಂಗಡಿಗೇ ಬರಬಹುದು ಸಾವಿರಾರು ರೂಪಾಯಿಗಳ ವ್ಯಾಪಾರ ಮಾಡಬಹುದು ಎಂಬ ಆಸೆಯಿಂದ ಅವರತ್ತ ನೋಡುತ್ತಿದ್ದೆ. ಅಂತಹ ಹಲವಾರು ಜನರ  ಗುಂಪುಗಳು ನಮ್ಮ ಅಂಗಡಿಯ ಮುಂದೆ ಹಾದು ಹೋದರೇ ಹೊರತು ಯಾರೂ ಅಂಗಡಿಯನ್ನು ಮೂಸಿಯೂ ನೋಡಲಿಲ್ಲ. ಮೊದಲಿಗಿಂತಲೂ ವ್ಯವಹಾರ ಕಡಿಮೆಯಾಗಲಾರಂಭಿಸಿತು. ಪ್ರಖರ ಜ್ಯೋತಿಷ್ಯ ಶಿರೋಮಣಿ ಸಾನಂದ ಶಾಸ್ತ್ರಿಗಳು ಹೇಳಿದ ಯಾವ ಮಾತುಗಳೂ ನಿಜವಾಗಲಿಲ್ಲ. ಅದರಿಂದ ಯಾವ ಫಲವೂ ನನಗೆ ದಕ್ಕದಂತಾಯಿತು...

ಬೇಸರದಿಂದ ತಿಮ್ಮಪ್ಪನನ್ನು ಶಪಿಸುತ್ತಲೇ ಮನೆಯ ಕಡೆಗೆ ಹೆಜ್ಜೆ ಹಾಕಿದೆ.  ನಂಬಿದ ದೇವರು ತಿಮ್ಮಪ್ಪನು ನನ್ನ ಆಸೆ ಈಡೇರಿಸದಿದ್ದಕ್ಕೆ ತುಂಬಾ ಕೋಪ ಬಂದಿತು. ದಾರಿಯಲ್ಲಿ ಸಿಕ್ಕ ದೇವಸ್ಥಾನದ ಕಡೆಗೆ ಮುಖ ತಿರುಗಿಸಿಯೂ ನೋಡಲಿಲ್ಲ. ಮನೆಗೆ ಬರುವಷ್ಟರಲ್ಲಿ ಊಟದ ಸಮಯ ಆಗಲೇ ಮೀರಿತ್ತು. ಮನದಲ್ಲಿ ಅದೇ ನೋವು ಮತ್ತೆ ಮತ್ತೆ ಕಾಡುತ್ತಿತ್ತು. ಮನೆಗೆ ಬಂದಾಗ ಮಕ್ಕಳು ಹಾಲ್ ನಲ್ಲಿ ಟಿ.ವಿ. ನೋಡುತ್ತಾ ಕುಳಿತ್ತಿದ್ದರು. ಊಟ ಮಾಡಿ ಹಾಗೇ ಮೆತ್ತನೆಯ ಸೋಫಾದ ಮೇಲೆ ಒರಗಿದೆ. ನಿದ್ದೆಯ ಮಂಪರು ಆವರಿಸಿತು. ಕಣ್ಣಿಗೆ ಮಬ್ಬು ಆವರಿಸಿದಂತಾಯಿತು....ಕಣ್ಣುಗಳು ಮಂಜಾದವು.  ಬೆಳ್ಳನೆಯ ಮೋಡಗಳ ರಾಶಿ ಕಣ್ಣ ಮುಂದೆ ಕಂಡಂತಾಯಿತು. ಬಿಳಿಯ ಬಣ್ಣದ ಹೊಗೆ ಅಲೆಯಂತೆ ತೇಲುತ್ತಿದ್ದವು. ಕಣ್ಣು ತೆರದು ನೋಡಿದೆ. ಬಿಳಿ ಮೋಡದ ಮದ್ಯೆ ವೈಭವೋ ಪೇರಿತವಾದ ಸ್ವರ್ಗವೊಂದು ಗೋಚರಿಸಿತು. ಅಲ್ಲಿದ್ದ ಆಸ್ಥಾನ ಸಂಪೂರ್ಣವಾಗಿ ಚಿನ್ನದಿಂದ ತಯಾರಾಗಿತ್ತು. ಅದರ ಪ್ರತಿಬಿಂಬದ ಹೊಂಗಿರಣಗಳು ಕಣ್ಣುಗಳನ್ನು ಕೋರೈಸಿದವು. ಚಿನ್ನದ ಆಸ್ಥಾನದ ಮಧ್ಯೆ
ಎಲ್ಲಾ ದೇವಾನುದೇವತೆಗಳು ಸಭೆ ಸೇರಿದ್ದರು.

ಅರೆ......!!!! ಅಲ್ಲಿ ನಾನೂ ನಿಂತಿದ್ದೆ.

ತಿಮ್ಮಪ್ಪ ವೆಂಕಟೇಶ್ವರ ಸ್ವಾಮಿಯ ಮುಂದೆ ನಾನು ತಲೆ ತಗ್ಗಿಸಿ ಕೊಂಡಿದ್ದೆ. ನಾನು ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿದ್ದರೂ ನನ್ನ ಸಮಸ್ಯೆ ಪರಿಹಾರವಾಗದಿದ್ದರ ಬಗ್ಗೆ ಆ ಸಭೆಯಲ್ಲಿ  ಚರ್ಚೆ ನಡೆಯುತ್ತಿತ್ತು.

"ನೀನು ತಿಮ್ಮಪ್ಪ ಸ್ವಾಮಿಗೆ ಕಾಣಿಕೆಯನ್ನು ಸಲ್ಲಿಸಿ, ನಿನ್ನ ಮನದಾಸೆ ಈಡೇರದಿದ್ದಕ್ಕೆ ನೀನು ತಿಮ್ಮಪ್ಪನನ್ನೇ ಶಪಿಸಿದೆಯಾ...? ಮೂರ್ಖ ಮಾನವ"

ಶಶಿಭೂಷಣ ಶಂಕರನು ಕೋಪದಿಂದ ನೋಡುತ್ತಾ  ನನ್ನನ್ನು ಪ್ರಶ್ನಿಸಿದರು.

"ಹೌದು... ಸ್ವಾಮಿ ತಿಮ್ಮಪ್ಪನನ್ನು ಶಪಿಸಿದ್ದು ನಿಜ, ನನ್ನ ಬಡತನದ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲಿ.  ನಾನು ಬೆವರು ಸುರಿಸಿ ದುಡಿದ ಸಾವಿರಾರು ರೂಪಾಯಿ ಹಣವನ್ನು ತಿಮ್ಮಪ್ಪನ ಹುಂಡಿಗೆ  ಅರ್ಪಿಸಿದ್ದೇನೆ. ಮನೆತನದ ನಿರ್ವಹಣೆಯ ಸಮಸ್ಯೆ ಎಷ್ಟೇ ಇದ್ದರೂ ಸಹ ನಾನು ತಿಮ್ಮಪ್ಪನಿಗೆ ಕಡಿಮೆಯೇನೂ ಮಾಡಲಿಲ್ಲ. ನಾನು ನಂಬಿದ ದೇವರು ನನಗೆ ವರ ನೀಡಲಿಲ್ಲವೆಂದರೆ ಶಪಿಸುವುದರಲ್ಲಿ ತಪ್ಪೇನಿದೆ"

ನಾನು ಶಂಕರನಿಗೆ ಧೈರ್ಯದಿಂದಲೇ ಉತ್ತರಿಸಿದೆ.
ನನ್ನ ಬಳಿಯಲ್ಲಿ ನಿಂತಿದ್ದ ತಿಮ್ಮಪ್ಪ ನನ್ನನ್ನು ನೋಡಿ ಕುಪಿತರಾದರು...

"ಏನು....!!!  ಆ ನಿನ್ನ ಮಾನವ ನಿರ್ಮಿತ ಹಣವನ್ನು ತೆಗೆದುಕೊಂಡು ನಾನೇನು ಮಾಡಲಿ. ನಿನ್ನ  ವಿನಿಮಯದ ಆ ಹಣವು ಒಂದು ಯಕಶ್ಚಿತ್ ವಸ್ತು. ಅದನ್ನು ನಿನ್ನ ಬಳಿಯೇ ಇಟ್ಟುಕೋ. ನಿನಗೇ ಉಪಯೋಗವಾದೀತು.... ಅದು ನಿನ್ನ ಬೆವರಿನ ಹನಿ ಎಂದ ಮಾತ್ರಕ್ಕೆ ನೀನು ಆಸೆಪಟ್ಟಂತೆ ನೆರವೇರಿಸಲು ಸಾಧ್ಯವೇ..? "

ತಿಮ್ಮಪ್ಪನ ಮಾತು ನನ್ನ ಪರವಾಗಿಲ್ಲದುದಕ್ಕೆ  ನನಗೆ ಮತ್ತೆ ಬೇಜಾರಾಯಿತು.

"ಏನು....!!??  ನಮ್ಮ ಹಣ ಯಕಶ್ಚಿತ್ ವಿನಿಮಯದ ವಸ್ತುವೇ...? "

ನಾನು ಆಶ್ಚರ್ಯದಿಂದ ಕೇಳಿದೆ

ಆಗ ಶಂಕರನು ಮಧ್ಯೆ ಪ್ರವೇಶಿಸಿ 

"ಹೌದು ಮಗು... ಮಾನವ ನಿರ್ಮಿತ ಹಣಕ್ಕೆ ನಮ್ಮಲ್ಲಿ ಯಾವ ಬೆಲೆಯೂ ಇಲ್ಲ. ಅದು ನೀವು ವಿನಿಮಯಕ್ಕಾಗಿ ಮಾಡಿಕೊಂಡ ವಸ್ತು ಅಷ್ಟೆ. ಇಂತಹ ಉಪಯೋಗಕ್ಕೆ ಬಾರದ  ವಸ್ತುವನ್ನು ದೇವರಿಗೆ ಅರ್ಪಿಸಿದ್ದೇನೆ ಎಂಬ ನಿನ್ನ ಮಾತು ಮೂರ್ಖತನದ್ದು. ಲಂಚ ಕೊಟ್ಟು ಕಾರ್ಯ ಸಾಧನೆಯ ಮಾತು ನಿಮ್ಮ ಮಾನವರಿಗಷ್ಟೇ ಸೀಮಿತವಾಗಿರಲಿ. ಹಣ ಆಮಿಷದ ವಿಷಯಗಳು ನಮ್ಮ ಪರಿಧಿಯಿಂದ ದೂರವಾಗಿಯೇ ಇವೆ. ನಿಮ್ಮ ಬದುಕಿಗೆ ರೂಪಿಸಿಕೊಂಡ ವಿನಿಮಯದ ವಸ್ತುಗಳು ಇಲ್ಲಿ ಮೌಲ್ಯವನ್ನು ಕಳೆದುಕೊಂಡು ಕೇವಲ ಒಂದು ವಸ್ತುವಿನಂತೆ ಕಾಣುತ್ತವೆಯಷ್ಟೆ. ಪಾಪ ಪುಣ್ಯಗಳ ಲೆಕ್ಕಾಚಾರ ಮಾಡುವ ಈ ಸ್ಥಳದಲ್ಲಿ ನೀವು ಹಣವೆಂದು ಕರೆಯುವ ಆ ವಸ್ತುವನ್ನು ನಾವು ಎಂದಿಗೂ ಲೆಕ್ಕಾಚಾರ ಮಾಡುವುದಿಲ್ಲ. ನೀವು ಸಲ್ಲಿಸಿದ ಆ ಕಾಣಿಕೆಗೆ ಅನುಗುಣವಾಗಿ ಪ್ರತಿಫಲವನ್ನು ಆಶಿರ್ವದಿಸುವ ಯಾವ ಮಾನದಂಡಗಳೂ ನಮ್ಮಲ್ಲಿ ಇಲ್ಲ. ಇನ್ನು ಹೆಚ್ಚಾಗಿ ಹೇಳಬೇಕೆಂದರೆ ಅಂತಹ ವಸ್ತುವಿಗೆ ನಮ್ಮಲ್ಲಿ ಜಾಗವೇ ಇಲ್ಲ".

ಶಂಕರನು ಸಮಾಧಾನದಿಂದಲೇ ಹೇಳಿದರು

"ಹಾಗದರೆ ದೇವರಿಗೆ ಸಂಪತ್ತನ್ನು ಅರ್ಪಿಸುವುದು ತಪ್ಪೇ..?"
ನಾನು ಗೊಂದಲದಿಂದ ಶಂಕರನನ್ನು ಪ್ರಶ್ನಿಸಿದೆ
"ದೇವರಿಗೆ ಸಂಪತ್ತನ್ನು ಅರ್ಪಿಸುವುದು ತಪ್ಪಲ್ಲ.. ಆದರೆ ನೀನು ಯಾವುದನ್ನು ಸಂಪತ್ತು ಎಂದು ತಿಳಿದುಕೊಂಡಿದ್ದೆಯೋ ಅದು ಸಂಪತ್ತೇ ಅಲ್ಲ. ಸಂಪತ್ತು ಎಂದರೆ ದೇವರಿಂದ ನಿರ್ಮಿತವಾದ ಬೆಟ್ಟ ಗುಡ್ಡ, ಮರ, ಗಿಡ ಗಾಳಿ, ನೀರು,ನದಿ, ಸಮುದ್ರ ಭೂಮಿ, ಗ್ರಹ, ತಾರೆ ಆಕಾಶಕಾಯಗಳು, ಸಮಸ್ತ ಭ್ರಹ್ಮಾಂಡ ಎಲ್ಲವೂ..... ಇವೇ ನಿಜವಾದ ಸಂಪತ್ತುಗಳು. ಭ್ರಹ್ಮಾಂಡದಲ್ಲಿ ವಾಸಿಸುವ ಸಕಲ ಜೀವರಾಶಿಗಳಿಗೆ ಆಹಾರ ಸಿಗಲೆಂದು ಕಡಿಮೆಯಾಗದಂತೆ ಎಲ್ಲವನ್ನೂ ಅಳೆದು ತೂಗಿ ಸೃಷ್ಟಿಸಲಾಗಿದೆ. ನೀನೂ ಒಂದು ಕಾಳನ್ನು ಭೂಮಿಯಲ್ಲಿ ಬಿತ್ತಿದರೆ ನೂರಾರು ಕಾಳುಗಳನ್ನು ಪಡೆಯುವ ವರವನ್ನು ಕರುಣಿಸಿದ್ದೇವೆ..... ಇವುಗಳನ್ನು ಉಪಯೋಗಿಸಿಕೊಂಡ ನೀನು ಕೆಲವು ಕರ್ತವ್ಯವನ್ನು ನಿಭಾಯಿಸಲೇ ಬೇಕು. 

ನೀನು ಮರದಿಂದ ಒಂದು ಹಣ್ಣನ್ನು ಕಿತ್ತರೆ, ನೀನು ಅದಕ್ಕೆ ಪ್ರತಿಫಲವಾಗಿ ಆ ಮರಕ್ಕೆ  ನೀರೆರೆದು ಪೋಷಿಸಬೇಕು. ಒಂದು ಮರ ಉರುಳಿಸಿದರೆ ಮತ್ತೊಂದು ಮರ ಬೆಳೆಸುವ ಹೊಣೆ ನಿನ್ನದು. ಗಾಳಿ, ನೀರು, ಭೂಮಿಯ ವಿಷಯದಲ್ಲೂ ಅಷ್ಟೆ ನೀನು ಅವುಗಳನ್ನು ಉಪಯೋಗಿಸಿದ ಹಾಗೆಯೇ ಅದರ ಋಣವನ್ನು ತೀರಿಸಬೇಕು. ನಾವು ಸೃಷ್ಟಿಸಿದ ಸಮಗ್ರ  ಸಂಪತ್ತನ್ನು ಮತ್ತೆ ಯಥಾಸ್ಥಿತಿಯಲ್ಲಿರುವಂತೆ ಮಾಡುವುದು ನಿನ್ನ ಹೊಣೆ. ಅಂತಹ ಸಂಪತ್ತನ್ನು ನಮಗೆ ಮರಳಿ ಸಮರ್ಪಿಸುವ ಸತ್ಕಾರ್ಯವನ್ನು ಮಾಡು. ನಾವೇ ಸೃಷ್ಠಿಸಿದ ಪ್ರಕೃತಿಯ ಒಂದು ವಸ್ತುವಿನಿಂದಲೇ ತಯಾರಿಸಿದ ಆ ಮಾನವ ನಿರ್ಮಿತ  ಹಣವನ್ನು ನೀಡುವುದರ ಮೂಲಕ ಅಲ್ಲ. ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ."

ಶಂಕರನ ಮಾತಿನಲ್ಲಿ ದೃಢ ನಿಶ್ಚಯವಿತ್ತು.

"ಹಾಗಾದರೆ ನಾವು ಬೆವರು ಸುರಿಸಿದ ಶ್ರಮವಾದರೂ ನೀವು ಪರಿಗಣಿಸಬಹುದಲ್ಲ. ಎಲ್ಲಾ ಕಡೆ ದೇವರಿಗೆ ಹಣ ಸಮರ್ಪಿಸುವ ಸಂಪ್ರದಾಯವಿದೆ. ಅದರಂತೆ ನಾವು ನಡೆದುಕೊಳ್ಳುವುದು ತಪ್ಪೇ"

ಶಂಕರನಲ್ಲಿ ನಾನು ಮತ್ತೆ ಪ್ರಶ್ನಿಸಿದೆ.

"ಮೂರ್ಖ ಮಾನವ.... ನೀವು ಸಮರ್ಪಿಸಿದ ಯಾವುದೇ ಹಣವನ್ನು ಪರಿಗಣಿಸಿ ನಾವು ನಿಮಗೆ ಯಾವುದೇ ಫಲಾಫಲಗಳನ್ನು ಆಶಿರ್ವದಿಸಲಾರೆವು. ಆಯಾ ದೇಶದ ಜನರು ಆಯಾ ದೇಶದ ಹಣವನ್ನು ನಮಗೆ ಸಮರ್ಪಿಸುತ್ತಾರೆ. ರೂಪಾಯಿ, ಡಾಲರ್, ಯೆನ್, ಯೂರೋ, ಇತ್ಯಾದಿ ಇತ್ಯಾದಿ ... ಇವೆಲ್ಲವೂ ನಮ್ಮ ದೃಷ್ಠಿಯಲ್ಲಿ ಸಂಪತ್ತೇ ಅಲ್ಲ.. ಯಾವತ್ತಾದರೂ ನಾವು ಅದನ್ನು ಪಡೆದುಕೊಂಡ ಉದಾಹರಣೆಯನ್ನು ಹೇಳಿಬಿಡು ನೋಡೋಣ. ನಾವು ಪರಿಗಣಿಸುವುದು ಪಾಪ ಪುಣ್ಯಗಳನ್ನು ಮಾತ್ರ. ನೀವು ನಿಮ್ಮ ಪುಣ್ಯದ ಕೆಲಸಗಳನ್ನು ದೇವರಿಗೆ ಸಮರ್ಪಿಸರಿ. ಆಗ ನೀವು ನಿಜವಾದ ಪ್ರತಿಫಲವನ್ನು ಪಡೆಯುತ್ತೀರಿ.... ನೀನು ಎಂದಾದರೂ ನಿನ್ನ ಪುಣ್ಯದ ಕೆಲಸವನ್ನು ತಿಮ್ಮಪ್ಪನ ಹುಂಡಿಗೆ ಹಾಕಿರುವೆಯಾ...? ಭಗವಂತನ ಹೆಸರಿನಲ್ಲಿ ಮಾಡಿದ ಸತ್ಕಾರ್ಯ ಯಾವುದಾದರು ಇದೆಯಾ...? ನೀನು ಎಂದಾದರೂ ಧರ್ಮ ಕರ್ಮದಂತೆ ನಡೆದುಕೊಂಡಿರುವೆಯಾ...? .."

ಶಂಕರನ ಮಾತು ಕೇಳಿ ನಾನು ನಾಚಿಕೆಯಿಂದ ತಲೆತಗ್ಗಿಸಿ ಹೇಳಿದೆ.

ಈಗ ನನ್ನ ಮಾತು ತೊದಲಲಾರಂಭಿಸಿತು

"ಪುಣ್ಯದ ಕೆಲಸವನ್ನು ಮಾತ್ರ ದೇವರಿಗೆ ಸಮರ್ಪಿಸ ಬೇಕೆಂಬ ನಿನ್ನ ಮಾತಿನಲ್ಲಿ ನ್ಯಾಯವಿದೆ ಶಿವಶಂಕರ. ಆದರೆ ಹಣ ಬೇಡವೆಂದರೆ ನೀವು ಹಣದ ದೇವತೆ ಲಕ್ಷ್ಮೀಗೆ ಅವಮಾನ ಮಾಡಿದಂತಾಗುವುದಿಲ್ಲವೇ..?"

ಮತ್ತೆ ನನ್ನ ಮನಸಿನ ಗೊಂದಲವನ್ನು ಶಂಕರನ ಬಳಿ ಹೇಳಿಕೊಂಡೆ

ಶಂಕರನು ನನ್ನ ಮಾತನ್ನು ಕೇಳಿ ನಗಲಾರಂಬಿಸಿದ.

"ಮೂರ್ಖ ಮಾನವ.... ಲಕ್ಷ್ಮಿಯ ಹೊಣೆ ನಿಜವಾದ ಸಂಪತ್ತನ್ನು ಸಕಲ ಜೀವರಾಶಿಗಳಿಗೂ ಕರುಣಿಸುವುದು. ನೀನು ನಿರ್ಮಿಸಿಕೊಂಡ ಆ ಹಣವನ್ನಲ್ಲ.  ನೀನು ಸೃಷ್ಟಿಸಿಕೊಂಡ ಆ ನಿನ್ನ ಹಣವನ್ನು ಇತರ ಯಾವ ಪ್ರಾಣಿಯೂ ಸಹ ಮೂಸಿ ನೋಡದು.. ಬೇಕಾದರೆ ಭೂಲೋಕದಲ್ಲಿಯೇ  ನಿನ್ನ ಆ ಹಣವನ್ನು ಪಶುಗಳ ಮುಂದೆ ಇಟ್ಟು ಪರೀಕ್ಷಿಸಿ ನೋಡು. ಆಗ ನಿನ್ನ ಹಣಕ್ಕಿರುವ ಬೆಲೆ ನಿನಗೆ ತಿಳಿದೀತು. ಇನ್ನು ಸಕಲ ಗ್ರಹ ತಾರೆ ಆಕಾಶಕಾಯಗಳ ಹೊಣೆ ಹೊತ್ತಿರುವ ದೇವರಿಗೆ ನಿನ್ನ ಆ ವಸ್ತು ಹೇಗೆ ಉಪಯೋಗವಾದೀತು. ಇಡೀ ಭ್ರಹ್ಮಾಂಡಕ್ಕೆ ಹೋಲಿಸಿದಾಗ ನೀನು ವಾಸಿಸುವ ಭೂಮಿ ಒಂದು ಚುಕ್ಕೆಯ ಗಾತ್ರದಲ್ಲಿ ಇದೆ. ಆ ಚುಕ್ಕಿಯ ಗಾತ್ರದ ಭೂಮಿಯ ಮೇಲೆ ಕೋಟ್ಯಾಂತರ ಜೀವರಾಶಿಗಳು. ಅವುಗಳ ನಡುವೆ ನೀವು ಊಹಿಸಿಕೊಳ್ಳಲಾರದಷ್ಟು ಅಲ್ಪರು. ನೀವೇ ಇಷ್ಟು ಅಲ್ಪರಾಗಿರುವಾಗ ನಿಮ್ಮಿಂದ ನಿರ್ಮಿತವಾದ ಆ ಯಕಶ್ಚಿತ್ ಹಣ ಇನ್ನೆಷ್ಟು ಅಲ್ಪವಾಗಿರಬಹುದೆಂದು ಯೋಚಿಸಿ ನೋಡು..."

ಶಂಕರನ ಮಾತಿನಿಂದ ನನಗೆ ಭಯವಾಗಲಾರಂಬಿಸಿತು. ಕೊನೆಯದಾಗಿ ಒಂದು ಕೋರಿಕೆ ಎನ್ನುತ್ತಲೇ ನನ್ನ ಮಾತು ಆರಂಭಿಸಿದೆ...

"ಮಾನವ ನಿರ್ಮಿತ ಹಣ ಅಷ್ಟೊಂದು ಅಲ್ಪವೇ ಶಂಕರ.... ನಮ್ಮ ಹಣವನ್ನು ಸ್ವೀಕರಿಸಿ, ಇಂದಿನಿಂದ ಅದಕ್ಕೂ ಗೌರವವನ್ನು ನೀಡಿ ನಮ್ಮ ಹಣಕ್ಕೂ ನೀವು ಮಾನ್ಯತೆಯನ್ನು  ಕರುಣಿಸಬಹುದಲ್ಲವೇ.......... "

ನಾನು ಇನ್ನು ಮಾತು ಮುಗಿಸಿರಲಿಲ್ಲ.
ನನ್ನ ಮಾತಿನಿಂದ ದೇವತೆಗಳ ಕೋಪ ನೆತ್ತಿಗೇರಿತು. ಅಲ್ಲಿರುವ ದೇವತೆಗಳೆಲ್ಲಾ ಒಕ್ಕೊರಲಿನಿಂದ ನನ್ನನ್ನು...

"ಮೂರ್ಖ ಮಾನವ..."

ಎಂದು ಜೋರಾಗಿ ಕೂಗಿಕೊಂಡರು
ಅವರ ಆ ಶಬ್ಧಕ್ಕೆ ಆಸ್ಥಾನವೇ ಕಂಪಿಸಿದ ಅನುಭವವಾಯಿತು.

ಶಂಕರನು ಸಹ ನನ್ನ ಕಡೆ ಕೋಪದ ಕೆಂಗಣ್ಣನ್ನು ಬೀರಿ
"ಈ ಅಲ್ಪ ಬುದ್ಧಿಯ ಮಾನವನಿಗೆ ಎಷ್ಟು ಉಪದೇಶ ಮಾಡಿದರು ಕಡಿಮೆಯೇ"

ಎಂದು ಬಯ್ಯುತ್ತಾ  ಕೋಪದಿಂದ ತನ್ನ ತ್ರಿಶೂಲದಿಂದ ನನ್ನ ಎದೆಗೆ ತಿವಿದನು. 

ನೋವು ತಾಳಲಾರದೇ 

'ಅಮ್ಮಾ' ...

ಎಂದು ಜೋರಾಗಿ ಕಿರುಚಿಕೊಂಡೆ.
ಕಣ್ಣು ಬಿಟ್ಟು ನೋಡಿದೆ ಸ್ವರ್ಗದಲ್ಲಿರುವಂತೆ ಯಾವ ಚಿನ್ನದ ಆಸ್ಥಾನವೂ ಕಾಣಿಸಲಿಲ್ಲ. ಅದೇ ಮನೆ, ಅದೇ ಸೋಫಾ, ಮಲಗಿದ್ದವನು ಹಾಗೆಯೇ ಎದ್ದು ಕುಳಿತೆ.  ಮಕ್ಕಳು ಇನ್ನು ಟಿ,ವಿ, ನೋಡುತ್ತಲೇ ಕುಳಿತ್ತಿದ್ದರು. ಶಂಕರನ ಮಾತು ಇನ್ನೂ ಮನದೊಳಗೆ ಗುಂಯ್ ಗುಡುತ್ತಿರುವಾಗಲೇ. ಟಿ,ವಿ, ಯಲ್ಲಿ ಬಿತ್ತರವಾಗುತ್ತಿದ್ದ ಸುದ್ಧಿಯೊಂದು ಗಮನ ಸೆಳೆಯಿತು. ದೇವರ ಹುಂಡಿಯ ಹಣವನ್ನು ಕದ್ದ ದೇವಾಲಯದ ಸಿಬ್ಬಂದಿ  ಪೂಜಾರಿಯೊಬ್ಬನಿಗೆ ಕೋಳ ತೊಡಿಸಿದ್ದರು. ಟಿ,ವಿ,ಯಲ್ಲಿ ಆತನ ಮುಖವನ್ನು ಪದೇ ಪದೇ ಝೂಮ್ ಮಾಡಿ ಮಾಡಿ ತೋರಿಸುತ್ತಿದ್ದರು. ಜನರು ದೇವರಿಗಾಗಿ ಹಾಕಿದ್ದ ಹಣವನ್ನು ಆತ ಲೂಟಿ ಮಾಡಿದ್ದನು. ಒಂಬೈನೂರು ಕೋಟಿ ರೂಪಾಯಿಗಳು. ನೂರು ಕೆ,ಜಿ, ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಟಿ,ವಿ,ಯವರು ಒಮ್ಮೆ ಆ ಕಳ್ಳ ಕಪಟಿಯ ಮುಖವನ್ನು ತೋರಿಸಿದರೆ, ಮತ್ತೊಂದು ಸಾರಿ ಅವನು ಲಪಟಾಯಿಸಿದ ಹಣ ಮತ್ತು ಚಿನ್ನದ ರಾಶಿಯತ್ತ ಝೂಮ್ ಮಾಡಿ ತೋರಿಸುತ್ತಲೇ ಇದ್ದರು. 

ಆ ಕ್ಯಾಮರಾದ ಬೆಳಕಲ್ಲಿ ಅವನು ಕದ್ದ ಚಿನ್ನವು ಫಳ ಫಳನೆ ಹೊಳೆಯುತ್ತಿತ್ತು. ನೆಕ್ಲೆಸ್. ಬಳೆ, ಹಾರ,ಉಂಗುರಗಳು ರಾಶಿ ರಾಶಿಯಾಗಿ ಬಿದ್ದಿದ್ದವು.

ಅರೆ.....!!!!

ನನಗೊಂದು ಆಶ್ಚರ್ಯ ಕಾದಿತ್ತು.
ಅವುಗಳ ಮಧ್ಯೆ ನನ್ನ ಚಿನ್ನದ ಬ್ರಾಸ್ಲೆಟ್.
ಅಂದು ನನ್ನ ಕೈಯಾರೆ ನಾನೇ ಹುಂಡಿಗೆ ಹಾಕಿದ್ದು .
ನನ್ನ ಚಿನ್ನದ ಬ್ರಾಸ್ಲೆಟನ್ನು ಆ ಪಾಪಿ ತನ್ನ ವಶ ಮಾಡಿಕೊಂಡಿದ್ದನ್ನು ಕಂಡು ಮನಸ್ಸು ದುಃಖದಲ್ಲಿ ಮುಳುಗಿತು. ಕದ್ದ ಚಿನ್ನದ ರಾಶಿಯ ಮದ್ಯೆ ನನ್ನ ಬ್ರಾಸ್ಲೆಟ್ ಫಳ ಫಳಾನೆ ಮಿಂಚುತ್ತಿರುವುದನ್ನು ನೋಡಲು ನನ್ನ ಎರಡು ದುಃಖದ ಕಣ್ಣುಗಳು ಸಾಲದಾದವು....

    ಪ್ರಕಾಶ್ ಎನ್ ಜಿಂಗಾಡೆ

Saturday 3 December 2016

ಪಟ್ಟಣ

ನಮ್ಮೂರು ಬಸವಾಪಟ್ಟಣ ದಾವಣಗೆರೆ ಜಿಲ್ಲೆಯ ಚಿಕ್ಕ ಹಳ್ಳಿ. ಹುಟ್ಟಿದಂದಿನಿಂದ ಊರನ್ನು  ನೋಡುತ್ತಲೇ ಬೆಳೆದೆ. ನಾನು ಉದ್ದ ಬೆಳೆದೆನೆ ಹೊರತು ಊರು ಮಾತ್ರ ಒಂದಿಂಚು ಸಹ ಬೆಳೆಯಲಿಲ್ಲ.. ನಮ್ಮೂರು ಯಾವಾಗ ಪಟ್ಟಣದ ರೂಪ ಪಡೆಯುತ್ತದೆಯೋ ಎಂದು ಕಾದು ಕಾದು ನನಗೂ ಸಾಕಾಯಿತು. ನಮ್ಮೂರಿನ ಹೆಸರಿನಲ್ಲಿ 'ಪಟ್ಟಣ' ಎಂಬ ಹೆಸರು ಇದೆಯಾದರೂ ಅದು ಇವತ್ತಿನವರೆಗೂ ವಾಸ್ತವವಾದ ಪಟ್ಟಣದ ಸ್ವರೂಪವನ್ನು ಪಡೆಯಲೇ ಇಲ್ಲ. ಹೆಸರಲ್ಲಿ ಮಾತ್ರ ಬಸವಾ'ಪಟ್ಟಣ' ಎಂದು ಚಿರ ನೂತನವಾಗಿ ಉಳಿದಿದೆ.

ಇಪ್ಪತ್ತೆರಡು ವರ್ಷದ ಹಿಂದೆ ನಮ್ಮ ಭಾವನವರು ನಮ್ಮಕ್ಕನನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದರು ನಮ್ಮೂರಿನ ಹೆಸರನ್ನು ಕೇಳಿ ಕೂಡಲೇ ಇದು ಯಾವುದೋ ದೊಡ್ಡ ಪಟ್ಟಣವಿರಬೇಕೆಂದು ಊಹಿಸಿಕೊಂಡು ಬಂದಿದ್ದರಂತೆ. ನಮ್ಮೂರಿಗೆ ಕಾಲಿಟ್ಟಾಲೇ ಅವರಿಗೆ ಗೊತ್ತಾಗಿದ್ದು ನಮ್ಮೂರಿನ ಉದ್ದ ಅಗಲ ವಿಸ್ತೀರ್ಣ ಎಷ್ಟು ಎಂದು. ಆದರೂ ಪ್ರಕೃತಿ ಮಾತೆ ತನ್ನ ಸೌಂದರ್ಯವನ್ನು ನಮ್ಮೂರಿನಲ್ಲಿ ಸ್ವಲ್ಪ ಹೆಚ್ಚಾಗಿಯೇ ಹರಡಿ ಅಚ್ಚ ಹಸಿರಿನಿಂದ ಕಂಗೊಳಿತ್ತಿದ್ದಾಳೆ ಎನ್ನಿ.....

ನಮ್ಮೂರಿನಲ್ಲಿರುವ ಚಿರಡೋಣಿ ಎಂಬ ರೋಡಿನ ಬಲಭಾಗದ ಪ್ರದೇಶವು ತುಂಬಾ ಅಭಿವೃದ್ಧಿ ಕಂಡಿದೆ. ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡ ಹೊಂದಿದ ಹೆಗ್ಗಳಿಕೆ ನಮ್ಮೂರಿಗಿದೆ. ಶಾಂಘೈ ಟವರ್ ಗಿಂತಲೂ ಸುಂದರವಾದ ಮಿನಾರ್ ನಿರ್ಮಾಣವಾಗಿದೆ. ನಮ್ಮೂರಿನ ದುರ್ಗಾಂಬಿಕಾ ಬೆಟ್ಟದ ಮೇಲಿಂದ ಊರನ್ನು  ನೋಡಿದರೆ ಹೊಸದಾಗಿ ನಿರ್ಮಿತವಾದ ಆ ಊರಿನ ಸೌಂದರ್ಯ ವರ್ಣಿಸಲಾಗದು. ಎಲ್ಲಾ ಹೈ ಟೆಕ್ ಸಿಟಿಗಳನ್ನ ಹಿಂದೆ ಹಾಕಿದೆ. ಗೌಡನಕಟ್ಟೆ ಎಂಬ ನಾಲೆಯ ಪಕ್ಕದಲ್ಲೇ ಬೃಹತ್ ಬೌದ್ಧ ದೇವಾಲಯವೊಂದು ನಿರ್ಮಾಣವಾಗುತ್ತಿದೆ. ಹೊನ್ನಿನಂತೆ ಹೊಳೆಯುತ್ತಿರುವ ಸಂಪೂರ್ಣವಾದ ಸುವರ್ಣಮಂದಿರವದು. ಇದನ್ನೆಲ್ಲಾ ನೋಡಿದ ಮೇಲೆ ನನ್ನ ಜೀವ ತಡೆಯಲಿಲ್ಲ. ಹೊಸ ಊರಿನ ಸೌಂದರ್ಯ ಸವಿಯಬೇಕು ಎಂಬ ಆಸೆ ಮೂಡಿತು.  ಅಲ್ಲಿರುವ ಬುದ್ದನ ಸುವರ್ಣ ಮಂದಿರ ಹತ್ತಿರದಿಂದಲೇ ಕಣ್ಣು ತುಂಬಿಕೊಳ್ಳುವ ಬಯಕೆ ಅತಿಯಾಯಿತು. ಇನ್ನೇನು ಹೊಸ ಊರಿನೊಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಅಲ್ಲೇ ನಾಲೆಯಲ್ಲಿ ಎಮ್ಮೆಯ ಮೈ ತೊಳೆಯುತ್ತಿದ್ದ ಹುಡುಗನೊಬ್ಬ

"ಸರ್.... ಆಕಡೆ ಹೋಗ ಬೇಡಿ. ಅದು ನಮ್ಮ ದೇಶವಲ್ಲ. ಕೌಲಲಂಪುರ ಅನ್ನೋ ದೇಶ ನಿರ್ಮಾಣವಾಗುತ್ತಿದೆ. ವೀಸಾ ಪಾಸ್ ಪೋರ್ಟ್ ಇಲ್ದೇ ಹೋದರೆ ಅರೆಸ್ಟ್ ಆಗಿ ಹೋಗ್ತೀರಾ"

ಎಂದನು.

ಅರೆ.... ನಾನು ಎಷ್ಟೋ ಸಲ ಇದೇ ಮಾರ್ಗವಾಗಿ ಸಂಗಾಹಳ್ಳಿಗೆ ಹೋಗಿದ್ದನ್ನು ನೆನಪಿಸಿಕೊಂಡೆ. ಆಗ ಇದ್ದ ಸ್ವಾತಂತ್ರ ಈಗ ಇಲ್ಲದ್ದನ್ನು ಕಂಡು ಮನಸು ಬೇಸರವಾಯಿತು. ಇದ್ಯಾವ ದೇಶ ನಮ್ಮೂರಿಗೆ ಅಂಟಿಕೊಂಡೇ ನಿರ್ಮಾಣವಾಗುತ್ತಿದೆಯಲ್ಲಾ ಎಂದು ಯೋಚಿಸಿ ಗೂಗಲ್ ಸರ್ಚ್ ಮಾಡಿದೆ. which another country is situated inside of south India ಎಂದು ಟೈಪ್ ಮಾಡಿ ನೋಡಿದೆ. ಗೂಗಲ್ ಸಂಪೂರ್ಣ ಮಾಹಿತಿಯೊದಗಿಸಿತು. ಊರಿನ ಜನ ಮಾತನಾಡಿಕೊಳ್ಳುವಂತೆ ಅದು ಕೌಲಲಂಪುರ ಅನ್ನೋ ದೇಶವಾಗಿರಲಿಲ್ಲ. ಗೂಗಲ್ ಮಾಹಿತಿಯ ಪ್ರಕಾರ  "ಘಯಾನಾ" ಅನ್ನೋ ದೇಶವದು. ನಮ್ಮೂರಿನ ಪಕ್ಕದಲ್ಲೇ ನಿರ್ಮಾಣವಾಗುತ್ತಿದೆ.  ಹಿಂದೆ ಹದಿನಾರನೇ ಶತಮಾನದಲ್ಲಿ ಬಸವಾಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನಾದ ಕೆಂಗಣ್ಣನಾಯಕನು ಫ್ರೆಂಚರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದನಂತೆ. ಬಸವಾಪಟ್ಟಣವನ್ನು ಸ್ವತಂತ್ರವಾಗಿ ಬಿಟ್ಟರೆ ಬಲಭಾಗದ ಹತ್ತು ಮೈಲು ಗಳಷ್ಟು ಭೂಮಿಯನ್ನು ಫ್ರೆಂಚರಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದನಂತೆ. ಅದೇ ಪ್ರಕಾರ ಫ್ರೆಂಚರು ಕೆಂಗಣ್ಣನಾಯಕನಿಂದ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಂಡು ಆ ಭೂಮಿಯನ್ನು ಪಡೆದುಕೊಂಡರಂತೆ. ಹದಿನೇಳನೇ ಶತಮಾನದಲ್ಲಿ ಇಂಗ್ಲಿಷರ ಪ್ರಭಾವ ಹೆಚ್ಚಾಗಿದ್ದರಿಂದ ಫ್ರೆಂಚರು ತಮ್ಮ ದೇಶಕ್ಕೆ ಮರಳಿದರು...

ಮತ್ತೆ 2016 ರಲ್ಲಿ ಮತ್ತೆ ಕ್ಯಾತೆ ತೆಗೆದ ಫ್ರೆಂಚರು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಮತ್ತೆ ನಮ್ಮೂರಿನ ಪಕ್ಕದ ಹತ್ತು ಮೈಲಿ ಭೂ ಪ್ರದೇಶವನ್ನು ಮರಳಿ ಪಡೆದರು. ಈಗ ಅದೇ ಭೂ ಪ್ರದೇಶದಲ್ಲಿ ವೈಭವಯುತವಾದ 'ಘಯಾನಾ" ದೇಶ ನಿರ್ಮಾಣವಾಗುತ್ತಿದೆ. ಅದರ ಸೌಂದರ್ಯ ಕಣ್ಣು ಕುಕ್ಕುತ್ತಿದೆ. ಆದರೆ ಒಳಗೆ ಹೋಗಲಾರದೇ ಮನಸು ವಿಲ ವಿಲನೆ ಒದ್ದಾಡುತ್ತಿದೆ...

ಇಂದು ಬೆಳ್ಳಂಬೆಳಗ್ಗೆ ಬಿದ್ದ ಈ ವಿಚಿತ್ರ ಕನಸು ಹೇಗೆ ಅರ್ಥೈಸಿಕೊಳ್ಳಬೇಕೋ.....!!  ಕನಸನ್ನು ವ್ಯಾಖ್ಯಾನಿಸುವವರು, ಜ್ಯೋತಿಷ್ಯ ತಿಳಿದವರು ಯಾರಾದರೂ ಇದ್ದರೆ ಅರ್ಥೈಸಿರಿ.... ಮುಂಜಾನೆಯ ಕನಸುಗಳು ನಿಜ ಆಗುತ್ತೆ ಅಂತಾನೆ ಎಲ್ಲರೂ ಹೇಳ್ತಾರೆ. ಆದರೆ ನಮ್ಮೂರಿನ ಪಕ್ಕದಲ್ಲಿ ಮತ್ತೊಂದು ದೇಶ ನಿರ್ಮಾಣವಾಗೋ ಮಾತು  ತಿಪ್ಪರ್ ಲಾಗ ಹಾಕಿದರೂ ನಿಜವಾಗಲಾರದು. ಆದರೆ ಹಿಂದಿನ ಜನ್ಮದಲ್ಲಿ ನಾನೇನಾದರೂ ಪಾಳೆಯಗಾರ ಕೆಂಗಣ್ಣನಾಯಕ ಆಗಿದ್ದೆನೋ ಅಥವಾ ಫ್ರೆಂಚ್ ವೈಸ್ ರಾಯ್ ಏನಾದರೂ ಆಗಿರಬಹುದೆಂಬ ಒಂದು ಸಣ್ಣ ಶಂಕೆ ಮೂಡುತ್ತಿದೆ......

                              ಪ್ರಕಾಶ್ ಎನ್ ಜಿಂಗಾಡೆ

ರಾಜ್ಯೋತ್ಸವದ ನೆನಪು...

ತ್ರಿಕೆ ಬಳಗದ ರಾಜ್ಯೋತ್ಸವ ಸಮಾರಂಭವಿತ್ತು. ಕವಿಗೋಷ್ಠಿಗೆ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಆಹ್ವಾನವೂ ಬಂದಿತು. ಶಿಕ್ಷಕನಾಗಿ  ಕವಿಗಳ ಕಾವ್ಯವನ್ನು ಭೋದಿಸುತ್ತಿದ್ದ ನನಗೆ ನನ್ನದೇ ಕವನಕ್ಕೆ ಕವಿಗೋಷ್ಠಿಯ ಭಾಗ್ಯ ಸಿಕ್ಕಿದ್ದು ಸಂತೋಷವಾಯಿತು.
ಹೋಗ್ಲಿ ಏನೋ ಒಂದ್ ದಬಾಕಿ ಬರೋಣ ಅಂತೆ ಹೊರಟೆ, ಪರಿಚಯದವರಾರೂ ಇರಲಿಲ್ಲ. ಎಲ್ಲಿ ಮೂಕ ಬಸವಣ್ಣನಂತೆ ಮೂಲೆಯಲ್ಲಿ ಕೂತು ಬರಬೇಕೆನೋ ಅಂದ್ಕಂಡಿದ್ದೆ. ಹಂಗಾಗ್ಲಿಲ್ಲ ಅನ್ನಿ....ತ್ರಿಕೆ ತೋರಿಸಿದ ಆತ್ಮೀಯತೆಗೆ ನಾನೇ ಮೂಕನಾಗಿ ಹೋದೆ.
ಆಹ್ವಾನಿಸಿದ್ದು ಮದ್ಯಾಹ್ನ ಮೂರು ಗಂಟೆಗೆ. ತಲುಪಿದ್ದೂ ಸರಿಯಾಗಿ ಮೂರು ಗಂಟೆಗೆ.  ಏನೋ ಬಾರಿ ಟೈಮ್ ಸೆನ್ಸ್ ಇರೋನ್ ತರ ಕರೆಕ್ಟಾಗಿ ಮೂರು ಗಂಟೆಗೆ ಬ್ಲಾಸುಮ್ ಶಾಲೆಗೆ ಎಂಟ್ರಿ ಕೊಟ್ಟೆ. ಸಮಯ ಪ್ರಜ್ಞೆ ಇರೋನು ಅಂದ್ಕೊಬೇಡಿ, ಬೆಂಗಳೂರಿನ ಟ್ರಾಫಿಕ್  ಸಹಕರಿಸಿದರೆ ಅದು ಸಾಧ್ಯವಾದೀತು ಅಷ್ಟೆ....

ಇನ್ನೂ ಬೈಕ್ ನಿಲ್ಸಿಸರಲಿಲ್ಲ ತ್ರಿಕೆಯ ಸದಸ್ಯರು ನಗು ಮುಖದಿಂದ ಸ್ವಾಗತಿಸಿದರು. ಫೇಸ್ ಬುಕ್ನಲ್ಲಿ ಆಧುನಿಕ ಟಚ್ ಅಪ್ ಕೊಟ್ಟ ಫೋಟೋ ನೋಡಿ ನನ್ನನ್ನಾರೂ ಗುರುತಿಸರು ಅಂದ್ಕಂಡಿದ್ದು ನನ್ನ ಮೂರ್ಖತನವಾಗಿತ್ತು. ಮೊದಲ ಎಂಟ್ರಿಯಲ್ಲೇ ನಗುಮುಖದ ಸ್ವಾಗತ ಖುಷಿಕೊಟ್ಟಿತು. ತ್ರಿಕೆಯ ಅಧ್ಯೆಕ್ಷೆ ರೂಪಕ್ಕನವರಿಂದ ಸ್ವಾಗತ. ಅಲ್ಲಿ ಕೂತ್ಕಂಡಾಗ ಉದಯೋನ್ಮುಖ ಕವಿ ವಿನಾಯಕ ಭಟ್ ರವರ ಪರಿಚಯ ಮಾಡಿಕೊಂಡೆ. ಕಾರ್ಯಕ್ರಮ ಇನ್ನೂ ಪ್ರಾರಂಭವಾಗಿರಲಿಲ್ಲ. ಅಲ್ಲಿ ಕೂತಾಗ ಕನ್ನಡದ ಹಾಡುಗಳು ಪ್ರಸಾರವಾಗುತ್ತಿದ್ದವು. ಕನ್ನಡ ಕಂಪಿನ ಹಾಡುಗಳಿಂದ ಮನಸ್ಸು ಪ್ರಫುಲ್ಲವಾಯಿತು.

"ಕನ್ನಡಮ್ಮನ ದೇವಾಲಯ ಕಂಡೆ ಆ ಹೆಣ್ಣಿನ ಕಂಗಳಲಿ"

ಎಂಬ ಹಾಡು ಬರೊ ಟೈಮಲ್ಲಿ ತ್ರಿಕೆ ಅಧ್ಯಕ್ಷೆ ರೂಪಕ್ಕ ಕನ್ನಡದ ಕಾರ್ಯಕ್ರಮಕ್ಕೆ ಆಸಕ್ತಿಯಿಂದ ಓಡಾಡುತ್ತಿದುದು ಕಾಣಿಸಿತು. ಈಗ ಈ ಹಾಡು ಸೂಕ್ತ ಎಂದೆನಿಸಿತು.
ಕನ್ನಡ ನಾಡು ನುಡಿಯ ಸೇವೆ ಮಾಡುವವರಿಗೆ ಹಾಡೊಂದು ಪ್ರಾಸಂಗಿಕವಾಗಿ ಬಿತ್ತರವಾದಾಗ ಮನಸ್ಸಿಗೆ ಮುದ ನೀಡಿತು. ಉತ್ತಮ ಕಾರ್ಯವೊಂದನ್ನು ಹೊಗಳಿ ಬರೆಯುವುದಕ್ಕಿಂತ ಈ ಹಾಡೇ ಸಮರ್ಪಿಸಬೇಕು ಎಂದು ಮನಸ್ಸು ಯೋಚಿಸಿದ್ದು ಸುಳ್ಳಲ್ಲ   ಅಲ್ಲಿ ಪ್ರಸಾರವಾದ ಆ ಹಾಡೇ ತ್ರಿಕೆ ಸದಸ್ಯರ ಕನ್ನಡ ಪ್ರೇಮ ಹೇಳಿ ಮುಗಿಸಿತ್ತು. ರೀಲ್ ನಲ್ಲಿ ಪ್ರಸಾರವಾದ ಆ ಗೀತೆಯ ಸಾರವನ್ನು ರಿಯಲ್ಲಾಗಿ ಕಂಡಂತಾಯಿತು.
"ಕನ್ನಡ ನಾಡಿನ ಚರಿತೆಯನೇ ಕಂಡೇ ಆ ಹೆಣ್ಣಿನ ಹೃದಯದಲಿ"
ಇಂಗ್ಲಿಷಿನ ವ್ಯಾಮೋಹದ ದಿನಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಚರಿತ್ರೆ ಅಲ್ಲಿ ಮೇಳೈಸಿತ್ತು. ಯಾವ ಲಾಭದ ಆಸೆಗೂ ಒಳಪಡದೇ ಕನ್ನಡದ ಕಂಕೈರ್ಯ ಮಾಡುತ್ತಿರುವುದೇನು ಸಾಮಾನ್ಯವೇ...? ಏನೋ ನಾಲ್ಕಕ್ಷರದ ಸಾಲನ್ನು  ಗೀಚುವ ನನ್ನಂತಹ ಸಾಮಾನ್ಯ ಶಿಕ್ಷಕನಿಗೆ ಮತ್ತು ಹಲವು ಯುವಕರಿಗೆ ಕವಿಯ ಸ್ಥಾನ ಕೊಟ್ಟು ಆ ವೇದಿಕೆಯಲ್ಲಿ ಅವಕಾಶ ಕೊಟ್ಟಿದ್ದರಿಂದ ಆ ವೇದಿಕೆಯು ನನ್ನ ಕಣ್ಣಿಗೆ ಸಾಮಾನ್ಯ ವೇದಿಕೆಯಂತೆ ಕಾಣಲಿಲ್ಲ. ಉದಯೋನ್ಮುಕ ಕವಿಗಳು ಎಂದು ಯಾರೋ ವೇದಿಕೆಯಲ್ಲಿ ಹೇಳಿದಾಗ ಮನದಲ್ಲೇನೋ ಪುಳಕ. ನಾನು ಅದಕ್ಕೆ ಅರ್ಹನೇ ಎಂದು ಮನಸ್ಸನ್ನೇ ಹತ್ತಾರು ಬಾರಿ ಕೇಳಿಕೊಂಡಿದ್ದುಂಟು. ಸಾಗ ಬೇಕಾದ ದಾರಿ ಇನ್ನೂ ತುಂಬಾ ದೂರವಿದೆ ಎನಿಸಿತು.

ತ್ರಿಕೆಯ ಸದಸ್ಯರು  ತೆಂಗಿನ ಎಳನೀರು ಕಾಯಿಗಳ ಗೊಂಚಲನ್ನು ಶಾಲೆಯ ಒಳ ಕೊಠಡಿಯಿಂದ ಹೊರ ತರಲಾರಂಭಿಸಿದರು. ರಾಸಾಯನಿಕ ಮಿಶ್ರಿತ ಹಾಳು ವಿದೇಶಿಯ ಪಾನೀಯಗಳಿಗಿಂತ ಆರೋಗ್ಯದಾಯಕ ಶುದ್ಧ ಎಳನೀರನ್ನು ಎಲ್ಲಾ ಅತಿಥಿಗಳಿಗೂ ಲೋಟದಲ್ಲಿ ಹಾಕಿ ಕೊಟ್ಟು ಜೀವ ತಂಪಾಗಿಸಿದರು. ಮೊನ್ನೆ ಸ್ನೇಹಿತರೊಬ್ಬರ ಮದುವೆಗೆ ಹೋದಾಗ ವೆಲ್ ಕಮ್ ಜ್ಯೂಸ್ ಅಂತ ಕಬ್ಬಿನ ಹಾಲನ್ನು ನೀಡಿದ್ದರು. ದೇಶಿಯ ಪಾನಿಯಗಳಿಗೆ ಮಹತ್ವ ನೀಡುತ್ತಿರುವ ನಮ್ಮವರ ಮನಃಸ್ಥಿತಿ ಬದಲಾದಂತೆ ಕಂಡಿತು. ಮದುವೆಯ ಆ ಕಬ್ಬಿನ ಹಾಲಿನ ನೆನಪು ಇನ್ನೂ ಮನಸ್ಸಿನಲ್ಲಿರುವಾಗಲೇ ತ್ರಿಕೆಯ ಸದಸ್ಯರು ಎಳನೀರು ಕೊಟ್ಟಿದ್ದು ವಿಶೇಷ ಎನಿಸಿತು. ಪ್ರಶಂಸನೀಯ ಎನಿಸಿತು. ಎಲ್ಲರಿಗೂ ಮಾದರಿಯಾಗುವಂತಹ ವಿಶೇಷತೆಯನ್ನು  ಪಾನೀಯದಲ್ಲಿಯೂ ತೋರಿಸಿದ್ದಕ್ಕೆ ಧನ್ಯತೆ ಮೂಡಿತು....

ಕಾರ್ಯಕ್ರಮದ ಉದ್ದಕ್ಕೂ ಹರಿದದ್ದು ಹಾಸ್ಯದ ಹೊನಲು. ಮಂಜುನಾಥ ಕೊಳ್ಳೆಗಾಲ ರವರು ಟಿಪಿ ಕೈಲಾಸಂ ರವರ ಕೆಲವು ಹಾಸ್ಯ ಪ್ರಸಂಗಗಳನ್ನು ಹೇಳಿದ್ದು ಕೇಳಿ ಮುಖ ನಗುವಿನಲ್ಲಿ ಅರಳಿತು. ಟಿ,ಪಿ, ಕೈಲಾಸಂ ರವರು ತಮ್ಮನ್ನು ತಾವು "ಪ್ರಹಸನ ಪಿತಾಮಹಾ" ಎಂದು ಕರೆದುಕೊಂಡಿದ್ದು ಕೇಳಿ ವಿಶಿಷ್ಟ ಎನಿಸಿತು. ಅಷ್ಟೊಂದು ಹಾಸ್ಯ ಪ್ರಹಸನ ರಚಿಸಿದ ಕೈಲಾಸಂ ರವರಿಗೆ ಆ ಬಿರುದನ್ನು ನೀಡುವ ಯೋಗ್ಯತೆ ನಿಜಕ್ಕೂ ಯಾರಲ್ಲೂ ಇರಲಿಲ್ಲ ಬಿಡಿ... ಅಂತಹ ಮಹಾನ್ ಕವಿಯ ಪರಿಚಯ ಮತ್ತು ಅವರ ಹಾಸ್ಯ ಪ್ರಜ್ಞೆ ಪರಿಚಯವಾದದ್ದು ಖುಷಿ ನೀಡಿತು. ನಂತರ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಣಿಕಾಂತ್ ರವರಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮದ ನಿರೂಪಕರು ಮಧ್ಯೆ ಮಧ್ಯೆ ಹಾಸ್ಯದ ಧಾಟಿಯಲ್ಲಿ ಮಾಡಿದ ನಿರೂಪಣೆ ಗಮನ ಸೆಳೆಯಿತು. ಕವನ ವಾಚಿಸಿದ ಕವಿಗಳಿಗೆ ಪ್ರಶಸ್ತಿ ನೀಡಲಾಯಿತು. ನಾನು ಸಹ ಕ್ಯಾಮರಾ ಕಣ್ಣಿಗೆ ಫೋಸು ಕೊಟ್ಟು ಪ್ರಶಸ್ತಿಯನ್ನು ಸ್ವಿಕರಿಸಿದೆ.

ನನ್ನ ನಂತರ ಸುಂದರವಾಗಿ ಕವನ ವಾಚಿಸಿದ ಪ್ರಶಸ್ತಿ ಅನ್ನೋ ಕವಿಗೆ ಪ್ರಶಸ್ತಿ ಕೊಡಲು ವೇದಿಕೆಗೆ ಆಹ್ವಾನಿಸಿದರು. ಪ್ರಶಸ್ತಿಯ ಹೆಸರು ಕೇಳಿದ ಕೂಡಲೇ ಸಭಿಕರೆಲ್ಲಾ ಘೊಳ್ಳೆಂದು ನಕ್ಕರು. ಸೂರ್ಯನಿಗೆ ಟಾರ್ಚಾ...? ಸರಸ್ವತಿಗೇ ಟ್ಯೂಷನ್ನ...? ಪ್ರಶಸ್ತಿಗೆಯೇ ಪ್ರಶಸ್ತಿನಾ....? ಎಂಬ ಯೋಚನೆ ಅವರ ಮೆದುಳಿನಲ್ಲಿ ಆವರಿಸಿರೊಂಡಿದ್ದು ಸುಳ್ಳಲ್ಲ ಆ ಯೋಚನಯೇ ಅವರ ನಗುವಿಗೆ ಕಾರಣವಾಯಿತಷ್ಟೆ....

ನಂತರ ಶಶಿ ಗೋಪಿನಾಥ್ ಎಂಬುವರು ವೇದಿಕೆಗೆ ಆಗಮಿಸಿ ನಾನು ಕೊಡೊ ಟಾರ್ಚರನ್ನು ಸಭಿಕರು ಸ್ವಲ್ಪ ಹೊತ್ತು ಸಹಿಸಿಕೊಂಡರೆ ಸಾಕು ಎಂದು ಹೇಳುತ್ತಲೇ ತಮ್ಮ ಹಾಸ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಹಲವು ಹಾಸ್ಯ ನಟರ ಮಿಮೆಕ್ರಿ ನಡೆಯಿತು. ಸಾದು ಕೋಕಿಲಾ ಮಿಮೇಕ್ರಿ ಮಾಡುವಾಗ ಹಿಂದಿನಿಂದ ಯಾರೋ ಇದು ಟೆನ್ನಿಸ್ ಕೃಷ್ಣನ ತರ ಇದೆ ಎಂದು ಕಾಮೆಂಟ್ಸ್ ಕೊಟ್ಟರು ಸಭಿಕರು ಮತ್ತೆ ನಕ್ಕರು. ಶಶಿ ಗೋಪಿನಾಥ್ ರವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೇಗೆ ಬರೆಯುತ್ತಾರೆ ಎಂದು ಮೂಕಾಭಿನಯದ ಮೂಲಕ ತೋರಿಸಿದರು.
 
" ಹಿಂಗೆಲ್ಲಾ ಎಕ್ಸಾಮ್ ಬರೀತಾರಾ... ನಾನು ನೋಡೇ ಇಲ್ಲ ಬುಡಪ್ಪ....!!!"

ಹಿಂದಿನಿಂದ ಮತ್ತೊಬ್ಬ ಡೈಲಾಗ್ ಬಿಟ್ಟ. ಮತ್ತೆ ಜನ ನಕ್ಕುರು. ಸ್ಟೇಜ್ ಮೇಲಿನ ಹಾಸ್ಯದ ಜೊತೆಗೆ ಸಭಿಕರ ಹಾಸ್ಯದ ಕಮೇಂಟ್ಸ್ ಗಳು ಮತ್ತಷ್ಟು ಸಭಿಕರನ್ನು ನಗೆ ಕಡಲಿನತ್ತ ಕೊಂಡೊಯ್ಯಿತು. ಆತನ ಅಭಿನಯ ನಿಜಕ್ಕೂ ಅದ್ಭುತವಾಗಿತ್ತು. ಡ್ಯಾನ್ಸ್ ಅಭಿನಯಕ್ಕೆ ಹಾಡನ್ನು ಸಿದ್ಧಪಡಿಸಿಕೊಳ್ಳುವ ಸ್ವಲ್ಪ ಗ್ಯಾಪ್ ನಲ್ಲಿ ನಿರೂಪಕರಾದ ಅರುಣ್ ಶೃಂಗೇರಿಯವರು ತಾವೇ ಮೈಕ್ ಹಿಡಿದು ಹಾಸ್ಯ ಕಾರ್ಯಕ್ರಮ ನಡೆಸಿದರು. ನಿಜಕ್ಕೂ ಅಧ್ಬುತವಾಗಿತು. ಬಹುಮುಖ ಪ್ರತಿಭೆ ಅನಿಸ್ತು.....

ಅಂತಿಮವಾಗಿ ಅಧ್ಯಕ್ಷರ ಭಾಷಣ. ಅಧ್ಯಕ್ಷತೆ ವಹಿಸಿದ್ದ ಅಶೋಕ್ ಶೆಟ್ಟಿಯವರು ಹಾಸ್ಯದ ಧಾಟಿಯಲ್ಲೇ ಮಾತು ಪ್ರಾರಂಭಿಸಿದರು.
"ಎಲ್ಲಿ ನಾನು ಹೆಚ್ಚು ಸಮಯ ಮಾತಾಡಬೇಕಾಗುತ್ತೋ  ಅಂದ್ಕಂಡಿದ್ದೆ. ಮಂಜುನಾಥ್ ಕೊಳ್ಳೆಗಾಲ ರವರು ಜಾಸ್ತಿ ಮಾತಾಡಿ ನನ್ನ ಜವಬ್ದಾರಿ ಕಡಿಮೆ ಮಾಡಿದ್ರು ಅವರಿಗೆ ನನ್ನ ಧನ್ಯವಾದಗಳು.. ಈಗಾಗಲೇ ಸಮಯ ಮೀರಿ ಹೋಗಿದೆ. ನಾನು ಜಾಸ್ತಿ ಮಾತಾಡಲ್ಲ...." ಎಂದರು
ಹಿಂದಿನಿಂದ

"ಪರವಾಗಿಲ್ಲ ಜಾಸ್ತಿ ಮಾತಾಡಿ ನಾವ್ ಎಷ್ಟ್ಹೋತ್ತಾದರೂ ಕಾಯ್ತೀವಿ"

ಯಾರೋ ಕಿಚಾಯಿಸಿದರು
ಆದರೂ ಅಧ್ಯಕ್ಷರು ಜಾಸ್ತಿ ಮಾತಾಡೊಲ್ಲ ಅಂತ ಮನದಲ್ಲೇ ಶಪಥ ಮಾಡಿಯಾಗಿತ್ತು..
ಮತ್ತೆ ಮಾತು ಮುಂದು ವರೆಸಿದರು...

"ತ್ರಿಕೆಯ ಕಳೆದ ವರ್ಷದ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ನಾನೇ ಅಧ್ಯಕ್ಷನಾಗಿದ್ದೆ. ಆಗ ನಾನು ಗಡ್ಡ ಬಿಟ್ಟಿದ್ದೆ. ಇವನು ಬುದ್ಧಿಜೀವಿಯಿರಬೇಕು ಅಂತ ತಿಳ್ಕೊಂಡು ಅಧ್ಯಕ್ಷ ಮಾಡಿದ್ರು. ಈಗ ನುಣ್ಣಗೆ ಶೇವ್ ಮಾಡಿಕೊಂಡಿದ್ದೇನೆ. ತಲೆಯ ಮೇಲೆ ಕೂದಲು ಉದುರಿದೆ. ಮತ್ತೆ ಬುದ್ಧಿವಂತ ಅಂತ ತಿಳ್ಕೊಂಡು ನನ್ನ ಅಧ್ಯಕ್ಷರನ್ನಾಗಿ ಮಾಡಿರಬಹುದು"

ಹಾಸ್ಯಾತ್ಮಕವಾದ ಅವರ ಮಾತುಗಳು ಎಲ್ಲರ ಮೊಗದಲ್ಲೂ ನಗು ತರಿಸಿತು. ಅಧ್ಯಕ್ಷರ ಕೊನೆಯ ಪಂಚ್ ಡೈಲಾಗಗಳು ನಗು ನಗುತ್ತಲೇ ಕಾರ್ಯಕ್ರಮ ಮುಗಿಯಲು ಸಹಕಾರ ನೀಡಿದಂತಾಯಿತು. ತ್ರಿಕೆ ನೀಡಿದ ಲಘು ಉಪಹಾರ, ಅಲ್ಲಿ ನಡೆದ ಹರಟೆ ಖುಷಿ ನೀಡಿತು...
ಇಲ್ಲಿ ಬರೆದದ್ದಕ್ಕಿಂತ ಬರೆಯದೇ ಉಳಿದ ಎಷ್ಟೋ ವಿಷಯಗಳಿವೆ. ತ್ರಿಕೆಯ ಸುಂದರವಾದ ಸಂಪೂರ್ಣವಾದ ಕಾರ್ಯಕ್ರಮ ಹೊಗಳಾಗದೇ ಪದಗಳು ಮೌನ ವಹಿಸಿವೆಯಷ್ಟೆ.
ಕಾರ್ಯಕ್ರಮ ಆಯೋಜಿಸಿದ ತ್ರಿಕೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.

ಪ್ರಕಾಶ್ ಎನ್. ಜಿಂಗಾಡೆ

Friday 25 November 2016

ಬರಿಯ ಜಲವಲ್ಲ (ಕವನ)

ಬರಿಯ ಜಲವಲ್ಲ

ಚರಾಚರಗಳಿಗೆ ಜೀವಾಮೃತವಿದು
ನಿತ್ಯ ಬಯಕೆಗೆ ಜೀವ ಹನಿಯಿದು
ಹಸಿರು ಗಿಡ ನೆಲ ಉಸಿರು ಜೀವಜಾಲ
ಗಿರಿ ವನ ನಭ ಶಿಖರ ಮುಕುಟ ಮಾಲ
ಭೂ ಮಂಡಲ ಸುತ್ತಿ ಹರಿವ ನಾಗಿನಿ
ಸಲಿಲ ಜಲ ಹಾಲ ಜೀವ ಸಂಜೀವಿನಿ
ಬರಿಯ ಜಲವಿದಲ್ಲ....

ಅಗಸ್ತ್ಯ ಕಮಂಡಲವಾರಿ ಕಾವೇರಿ
ಶಿವನ ಜಟಧಾರಿ ಗಂಗೇಯಿ
ಬ್ರಹ್ಮಪುತ್ರ ಸಿಂಧು ಸರಸ್ವತಿ ತಾಯಿ
ಕೃಷ್ಣ ಗೋಧಾವರಿ ಭೀಮಾರತಿ ಮಾಯಿ
ಹೊಳೆಯಾಗಿ ಹೊಳೆದೊಳೆದು
ಜೀವ ರಸ ತಣಿ ತಣಿದು
ಬರಿಯ ಜಲವಿದಲ್ಲ...

ಬೆಳೆ ನೆಲೆ ನಾಗರೀಕತೆಗೆ ನಾಡಿಯು
ಖಗ ಮಿಕ ನರ ನಾಡಿಗೆ ನಾಂದಿಯು
ಹರಪ್ಪ ಮೆಹೆಂಜೋದಾರೊ ಸಂಸ್ಕೃತಿ
ಗ್ರೀಕ್ ಈಜಿಫ್ಟ್ ರೋಮನ್ನರ ಉನ್ನತಿ
ಬೆಳಸಿ ಹರಸಿ ತೋರಿಸಿದವೋ
ನಶಿಸಿ ಕೆಡಿಸಿ ಕಲಿಸಿದವೋ
ಬರಿಯ ಜಲವಿದಲ್ಲ...

ಮಾತೆಯಾಗಿ ಸಲುಹಿದಳೋ
ಬೆಳೆಸಿ ನಲಿಸಿ ತುತ್ತ ಅನ್ನ ನೀಡಿ
ಮೃತ್ಯುವಾಗಿ ಹರಿದಳೋ
ನರನ ಅಟ್ಟಹಾಸ ದಮನ ಮಾಡಿ
ಆರಿಯಬೇಕು ಜಲ ಸಂಸ್ಕೃತಿ ಇತಿಹಾಸವ
ಮಾಡಬೇಕು ನಾವು ಜಲ ರಕ್ಷಣೆ ಕಾರ್ಯವ
ಬರಿಯ ಜಲವಿದಲ್ಲ...

                           - ಪ್ರಕಾಶ್ ಎನ್ ಜಿಂಗಾಡೆ

Monday 19 September 2016

ಬೆಂಕಿ ಪಟ್ಟಣ

 ಈಗಿನ ಊರು ಚೆಂದವೋ ಎಂದು. ಒಂದು ನನಗೆ  ಬದುಕನ್ನು ಕಲಿಸಿದ ಊರು.  ಇನ್ನೊಂದು ಬದುಕನ್ನು ಕಟ್ಟಿಕೊಟ್ಟ ಊರು. ಯಾವ ಊರು ಚೆಂದ ಎಂದು ಹೇಳುವುದೇ ಒಂದು ತರಹದ ಜಿಜ್ಞಾಸೆ. ಕಷ್ಟ, ಮತ್ತು ಯಕ್ಷಪ್ರಶ್ನೆ....

ಸಾಮಾನ್ಯವಾಗಿ ಎಲ್ಲರಿಗೂ ಅವರು ಹುಟ್ಟಿದ ಊರೇ ಅವರಿಗೆ ಚೆಂದ ಎನಿಸುತ್ತದೆ. ತಾವು ಎಲ್ಲೇ ಇದ್ದರೂ ಹುಟ್ಟಿದ ಊರಿನ ನೆನಪುಗಳು... ಬಾಲ್ಯದ ಆಟಗಳನ್ನೂ ಯಾರೂ ಮರೆಯಲಾರರು.... ಕಲಿತ ವಿದ್ಯೆ., ಶಾಲೆ,  ಶಿಕ್ಷಕರು, ಗಳಿಸಿದ ಸ್ನೇಹಿತರು, ಹುಟ್ಟಿ ಬೆಳೆದ ಮನೆ, ತಂದೆ,ತಾಯಿ, ಬಂಧುಗಳ ಪ್ರೀತಿ ಎಲ್ಲಾವನ್ನು ಪಡೆದುಕೊಂಡಿದ್ದು ಹುಟ್ಟೂರಿನಲ್ಲಿ.  ಹೀಗೆ ಎಲ್ಲವನ್ನೂ ಪಡೆದುಕೊಂಡ ಹುಟ್ಟಿದ ಊರಿನ ಜೊತೆಗೆ... ಎಲ್ಲಾವನ್ನು ಗಳಿಸಿಕೊಂಡ ನೆಲಸಿದ ಊರಿಗೆ ಹೋಲಿಸಿಕೊಂಡಾಗ, ಒಂದು ಗುಲಗಂಜಿಯಷ್ಟು ಹೆಚ್ಚಿನ ತೂಕವನ್ನು ನಾನು ಹುಟ್ಟಿ ಬೆಳೆದ ನಮ್ಮೂರಿಗೆ ನೀಡಿದೆ..

 ಹೀಗೆ ನಮ್ಮೂರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ... ನಮ್ಮೂರು ಒಂದು ಸುಂದರವಾದ ಊರು ಎಂಬ ಕಲ್ಪನೆಯಲ್ಲಿ ಇರುವಾಗಲೇ ನನ್ನ ಹತ್ತಿರದ ಸಂಬಂಧಿಕರೊಬ್ಬರು ನಮ್ಮೂರಿನ ಬಗ್ಗೆ ಋಣಾತ್ಮಕವಾದ ಅಭಿಪ್ರಾಯವನ್ನು ಮಂಡಿಸಿದರು.

"ನಿಮ್ಮೂರು ಬಿಡಪ್ಪ... ಬೆಂಕಿ ಪಟ್ಟಣ ಇದ್ದಹಾಗೆ....ಕಿಚ್ಚು ಹತ್ತಿಸಿಕೊಂಡು ಯಾವಾಗಲೂ ಕಚ್ಚಾಡಿಕೊಂಡು ಇರುತ್ತೀರಿ,  ಕಡ್ಡಿ ಹಚ್ಚಿ ಬಿಟ್ಟು ಬಿಡುತ್ತೀರಿ ಅದರ ಕಿಚ್ಚು ಎಲ್ಲಾ ಕಡೆ ಹಬ್ಬುತ್ತೆ ಎಂದರು"

ನಮ್ಮೂರಿನ ಬಗ್ಗೆ ಹಾಗೆ ಅಭಿಪ್ರಾಯ ವ್ಯಕ್ತವಾಗುತ್ತಿರುವುದಕ್ಕೆ ನನಗೆ ಸ್ವಲ್ಪ ಬೇಸರವಾಯಿತು. ಬಸವಾಪಟ್ಟಣ ಎಂಬ ಹೆಸರಿಗೆ ಯಾರೋ ಕುಚೇಷ್ಟೆಯ ಬುದ್ದಿ ಇರುವವರು ಹೀಗೆ "ಬೆಂಕಿ ಪಟ್ಟಣ" ಎಂಬ ಪ್ರಾಸ ಪದವನ್ನು ಸೇರಿಸಿರಬಹುದೇ..? ಎಂದು ಯೋಚಿಸಿದೆ.
ಪರ ಊರಿನವರು ಹೀಗೆ ನಮ್ಮೂರಿಗೆ ಬೆಂಕಿಪಟ್ಣ ಕರೆಯುವುದಕ್ಕೆ ಕೆಲವು ಕಾರಣಗಳಿವೆ.  ನಮ್ಮೂರಿನಲ್ಲಿ ಸಾಕಷ್ಟು ಒಳ ಜಗಳಗಳಿವೆ, ಗಾಸಿಪ್ ಗಳಿವೆ, ಜನರು ಸುಖಾ ಸುಮ್ಮನೆ ಒಬ್ಬರನ್ನೊಬ್ಬರು ಕಾಲ್ಕೆರೆದುಕೊಂಡು ಜಗಳ ಮಾಡುತ್ತಾರೆ.  ಹೀಗೆ ಕಿಚ್ಚು ಹಚ್ಚುವಂತಹ ಹಲವು ಸಂಗತಿಗಳು ನಿಮ್ಮೂರಲ್ಲಿ ಸ್ವಲ್ಪ ಹೆಚ್ಚಾಗಿಯೇ ಇರುತ್ತವೆಯೆಂದು ನಮ್ಮೂರಿನ ಬಗ್ಗೆ ಪರ ಊರಿನ ಜನ ಏನೇನೋ ಹೇಳಿಕೊಳ್ಳುವುದುಂಟು....

ಒಂದು ಸಲ ಯೋಚಿಸಿದಾಗ ಪರ ಊರಿನವರು ಹೀಗೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎನಿಸಿತು. ಅಂತಹ ಕೆಲವೂಂದು ಘಟನೆಗಳು ನಮ್ಮೂರಿನಲ್ಲಿ ಅದರಲ್ಲೂ ನಮ್ಮ ಸಮುದಾಯದಲ್ಲಿ ನಡೆದಿರಬಹುದು. ನಮ್ಮ ಸಮಾಜದ ಬಾಂದವರು ಸ್ವಲ್ಪ ಕಲಹ ಪ್ರಿಯರು ಎಂದು ಹೇಳಬಹುದೆನೋ....!!! ನಮ್ಮ ಸಮುದಾಯದಲ್ಲಿ ನಡೆಯುವಂತಹ  ದಿಂಡಿ ಉತ್ಸವ, ಹೊರಬೀಡಿನ ಹಬ್ಬ, ಮತ್ತು ವಿಶೇಷ ಸಂದರ್ಭಗಳಲ್ಲಿ ಸಭೆ ಸೇರುತ್ತಾರೆ. ಹೀಗೆ ಸೇರಿದ ಸಭೆಯಲ್ಲಿ ಸದಸ್ಯರಲ್ಲಿ ಚರ್ಚೆಗಳು ಶಾಂತ ರೀತಿಯಲ್ಲಿ ನಡೆದಿರುವುದೇ ಅಪರೂಪ. ಅಲ್ಲಿ ಒಂದು ಅತಿ ಸಾಮಾನ್ಯವಾದ ವಿಷಯವನ್ನು ದೊಡ್ಡದು ಮಾಡಿಕೊಂಡು ಭಯಂಕರವಾದ ಚರ್ಚೆಯಲ್ಲಿ ತೊಡಗುತ್ತಾರೆ. ಹೀಗೆ ನಡೆಯುವ ಚರ್ಚೆಗಳು ಬರುಬರುತ್ತಾ ತೀಕ್ಣ ರೂಪವನ್ನು ಪಡೆದುಕೊಂಡು ಶಿವನ ತಾಂಡವದಂತೆ ರುದ್ರ ನೃತ್ಯವೇ ನಡೆದು ಬಿಡುತ್ತದೆ. ಬಹುದಿನಗಳಿಂದಲೂ ಮನಸ್ಸಿನಲ್ಲಿ ಇಟ್ಟುಕೊಂಡಿರುವಂತಹ ಸೇಡಿನ ಜ್ವಾಲೆಯು ಇಲ್ಲಿ ಜಗಳದ ರೂಪವನ್ನು ಪಡೆದುಕೊಂಡು ಬಿಡುತ್ತದೆ...

ನನಗೆ ತಿಳಿದಿರುವಂತೆ   ಎರಡು ಸಾವಿರ ಇಸ್ವಿಯ ಆಸುಪಾಸಿನಲ್ಲಿ ನಮ್ಮೂರಿನಲ್ಲಿ ಒಂದು ಸಲ ಭಯಂಕರವಾದ ಸಭೆ ನಡೆಯಿತು. ಆ ಸಭೆಯಲ್ಲಿ ಸಮುದಾಯದ ಭಾಂದವರೆಲ್ಲಾ ಸೇರಿದ್ದರು. ಸಂತೋಷದಿಂದ ಪ್ರಾರಂಭವಾದ ಚರ್ಚೆ ಬರು ಬರುತ್ತಾ ಉಗ್ರ ರೂಪ ಪಡೆಯಿತು. ಸಮಾಜದ ಮುಖಂಡರು ತಮ್ಮ ತಮ್ಮ ವಯಕ್ತಿಕವಾದ ಸೇಡಿಗಾಗಿ ಜಗಳ ಮಾಡಿಕೊಂಡು ಸಮಾಜವನ್ನು ಇಬ್ಬಾಗವನ್ನಾಗಿ ಹೊಡೆದರು. ಒಂದು ಗುಂಪಿಗೆ ಸೇರಿದವರು ಮತ್ತೊಂದು ಗುಂಪಿಗೆ ಸೇರಿದ ಮನೆಯ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಮದುವೆ ಮುಂಜಿಯಂತಹ ಸಮಾರಂಭಗಳಿಗೆ ಕಾಲಿಡುವಂತಿಲ್ಲ ಎಂಬ ಸುಗ್ಗಿವಾಜ್ಞೆಯನ್ನು ಆಯಾ ಪಂಗಡಕ್ಕೆ ಸೇರಿದ ಮುಖಂಡರು ಜಾರಿಗೊಳಿಸಿದರು. ಮೊದ ಮೊದಲು ಈ ಕಾನೂನು ಬಹು ಶಿಸ್ತುಬದ್ಧವಾಗಿ ಪಾಲಿನೆಯಾಯಿತು. ಆದರೆ ಕೆಲವು ವಿದ್ಯಾವಂತರು ಯುವಕರು ಸುಮ್ಮನಿರಲಿಲ್ಲ.  ಬಹುದಿನಗಳಿಂದ ನಡೆದು ಬಂದ ಗೆಳೆತನವನ್ನು ಯಾರೋ ಮಾಡಿದ ಪೂರ್ವಗ್ರಹ ಪೀಡಿತವಾದ ಇಂತಹ ಕಾನೂನುಗಳಿಗೆ ಬಲಿಯಾಗಲು ಬಿಡಲಿಲ್ಲ. ಅವರ ಕಾನೂನುಗಳನ್ನು ಧಿಕ್ಕರಿಸಿ. ಅವರ ಮನೆಗಳಿಗೆ ಹೋದರು. ಮದುವೆಗಳಿಗೆ ಹಾಜರಾದರು. ಹಿರಿಯರ ಈ ಕಾನೂನುಗಳನ್ನು ಧಿಕ್ಕರಿಸಿ ಮತ್ತೆ ಎಂದಿನಂತೆಯೇ ಇರಲಾರಂಭಿಸಿದರು. ಮೂರ್ನಾಲ್ಕು ವರ್ಷಗಳಲ್ಲಿಯೇ ಬೇರ್ಪಡೆಯಾದ ಸಮಾಜಗಳು ಒಗ್ಗೂಡಿದವು..... 

ಇಷ್ಟೇ ಅಲ್ಲ ..ಇಂತಹ ಘಟನೆಗಳು ನಮ್ಮೂರಿನಲ್ಲಿ ಇನ್ನೂ ಹಲವಾರಿವೆ. ಕೆಲವೊಂದು ಘಟನೆಗಳು ಕೇಳಲು ನಗುವನ್ನು ಉಕ್ಕಿಸುತ್ತವೆ. ಯಾರೋ ಒಬ್ಬ  ಮುಂದಾಳತ್ವ ವಹಿಸಿ ಒಳ್ಳೆ ಬನ್ನೂರು ಕುರಿ ಕಡಿಸಿ ಹಬ್ಬ ಚನ್ನಾಗಿ ನಡೆಯಲು ಸಹಕರಿಸಿದ ಎನ್ನಿ. ಮಟನ್ ಸರಿಯಾಗಿ ಬೆಂದಿಲ್ಲವೆಂದು ಜಗಳ ತೆಗೆಯುತ್ತಾರೆ. ದಿಂಡಿ ಉತ್ಸವದ ಲೆಕ್ಕ ಸರಿಯಾಗಿಲ್ಲ ಎಂದು ಕ್ಯಾತೆ ತೆಗೆಯುತ್ತಾರೆ.  ಉತ್ಸವದಲ್ಲಿ ಸರಿಯಾಗಿ ಊಟಬಡಿಸಿಲ್ಲವೆಂದೋ...... ಉತ್ಸವದಲ್ಲಿ ಉಳಿದ ಸಿಹಿಯನ್ನು ಸರಿಯಾಗಿ ವಿತರಣೆ ಆಗಿಲ್ಲವೆಂದೋ.... ಸಮಾಜದ ಅಧ್ಯಕ್ಷ  ಅತಿಯಾಗಿ ಮುಂದಾಳತ್ವ ವಹಿಸಿಕೊಂಡು ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾನೆ ಎಂದೋ..... ಹಿರಿಯರೇನಾದರು ಇದ್ದರೆ ತನಗೆ ಸಿಗಬೇಕಾದ ಗೌರವಗಳು ಸಿಗುತ್ತಿಲ್ಲವೆಂದೋ.....ಹೀಗೆ ಜಗಳಕ್ಕೆ ಹಲವಾರು ಕಾರಣಗಳು.. ಈ ಎಲ್ಲವನ್ನೂ ಹತ್ತಿರದಿಂದಲೇ ವೀಕ್ಷಿಸಿಕೊಂಡು ಬಂದ ಪರವೂರಿನ ಬಾಂಧವರು ನಮ್ಮೂರಿಗೆ ಬೆಂಕಿಪಟ್ಣ ಎಂದು ಅನ್ವರ್ಥನಾಮವನ್ನು ಕೊಟ್ಟಿರಬಹುದು....

ಆದರೆ ಈ ಮಾತನ್ನು ನಾನು ಒಪ್ಪುವುದಿಲ್ಲ. ಯಾವ ಊರಿನಲ್ಲಿ ಜಗಳವಿಲ್ಲ ಹೇಳಿ. ಹಳ್ಳಿ ಎಂದ ಮೇಲೆ ಇಂತಹ ನೂರಾರು ಘಟನೆಗಳು ನಡೆದೇ ನಡೆಯುತ್ತವೆ. ನಿಮ್ಮೂರಲ್ಲಿ ನಡೆಯುವುದಿಲ್ಲವೇ...? ನಮ್ಮೂರಿನ ಬೇರಿನಿಂದ ಪಸರಿಸಿದ ರಂಭೆ ಕೊಂಬೆಗಳು ಸುತ್ತಲೂ ನೂರು ಕಿ. ಮೀ. ವರೆಗೂ ಹಬ್ಬಿವೆ. ಹೀಗಿರುವಾಗ ನಮ್ಮ ಊರಿನ ಬಗ್ಗೆ ಇತರರು ಆಡಿಕೊಳ್ಳುವುದು ಸಹಜವೇ..

ಸುಂದರವಾಗಿರುವ ನಮ್ಮೂರನ್ನು ಯಾರೋ ಬೆಂಕಿಪಟ್ಟಣ ವೆಂದು ಕರೆದ ಮಾತ್ರಕ್ಕೆ ನಮ್ಮೂರು ಚೆನ್ನಾಗಿಲ್ಲ ಎಂದು ಹೇಳಲಾಗದು. ಸ್ವಲ್ಪ ಜನಕ್ಕೆ ನಮ್ಮೂರು ಬೇಸರ ತರಿಸಿರಬಹುದು. ಆದರೆ ಅದಕ್ಕಿಂತಲೂ ಹೆಚ್ಚು ಜನರು ನಮ್ಮೂರನ್ನು ಮತ್ತು ನಮ್ಮೂರಿನ ಪರಿಸರವನ್ನು ಮೆಚ್ಚಿಕೊಂಡಿದ್ದಾರೆ. ಆಧುನಿಕ ನಗರವಾಸಿಗಳೆಂದು ಕರೆಸಿಕೊಂಡ ಜನ ನಮ್ಮೂರಿಗೆ ಬಂದಾಗ ಬೆಟ್ಟದ ಮೇಲೆ ನಿಂತು ಸುತ್ತಲೂ ಹಸಿರಾದ ಪ್ರಕೃತಿ ಸೌಂದರ್ಯವನ್ನು ಸವಿದು....
 'ವಾವ್ ವಾಟ್ ಎ ಬ್ಯೂಟಿಫುಲ್'.....
  ಎಂದು ಉದ್ಘರಿಸಿದ್ದನ್ನು ನಾನು ನನ್ನ ಕವಿಯಾರೆ ಕೇಳಿಸಿಕೊಂಡು ಸಂತೋಷ ಪಟ್ಟಿದ್ದೇನೆ. ಸೌಂದರ್ಯವನ್ನು ಸವಿಯಲೂ ಸಹ ಸುಂದರ ಮನಸ್ಸಿರಬೇಕು. ನಾವು ನೋಡುವ ದೃಷ್ಟಿಕೋನ ಸುಂದರವಾಗಿರಬೇಕು. ನಮ್ಮ ದೃಷ್ಟಿಕೋನ ಮತ್ತು ಯೋಚನೆಗಳು ಒಳ್ಳೆಯದಾಗಿದ್ದರೆ ನಾವು ನೋಡುವ ವಸ್ತುವೂ ಸಹ ಸುಂದರವಾಗಿ ಕಾಣುತ್ತದೆ. ನಮ್ಮ ದೃಷ್ಟಿಕೋನವೇ ಕಳಪೆಯಾಗಿದ್ದರೆ ನಾವು ನೋಡುವ ಎಲ್ಲಾ ವಿಷಗಳು ನಮಗೆ ಕೆಟ್ಟದ್ದಾಗಿಯೇ ಕಾಣುತ್ತದೆ.  

ನೀವು ಗಾಜಿನ ಮನೆಯನ್ನು ಹೊಕ್ಕ ನಾಯಿಯ ಕತೆಯನ್ನು ಕೇಳಿರಬೇಕು. ಗಾಜಿನ ಮನೆಯನ್ನು ಹೊಕ್ಕ ನಾಯಿಗೆ ಗಾಜಿನ ಗೊಡೆಯ ಸುತ್ತಲೂ ತನ್ನದೇ ಪ್ರತಿಬಿಂಬ...!!! ಹಿಂದೆ ಮುಂದೆ ಎಲ್ಲಿ ನೋಡಿದರೂ ನಾಯಿಗಳೇ ಕಾಣುತ್ತಿದ್ದವು. ನಾಯಿಯು ಸಿಟ್ಟಿನಿಂದ ಬೊಗಳಲು ಪ್ರಾರಂಭಿಸಿತು. ಆದರೆ ಈ ನಾಯಿಗೆ ಗಾಜಿನ ಗೋಡೆಯ ನಾಯಿಯೇ ತನಗಿಂತಲೂ ಜೋರಾಗಿ ಬೊಗಳಿದಂತೆ ಕಂಡಿತು. ಸಿಟ್ಟಿನಿಂದ ಚಂಗನೆ ಜಿಗಿದು ಎದುರು ಗೋಡೆಯ ನಾಯಿಯನ್ನು ಕಚ್ಚಿತು. ಪರಚಲು ಪ್ರಯತ್ನಿಸಿತು. ಗಾಜಿನ ಗೊಡೆಗೆ ಡಿಕ್ಕಿ ಹೊಡೆದು ಹೊಡೆದ ಕಾರಣ ನೋವಿನಿಂದ ನೆಲಕ್ಕುರುಳಿತು. ಕೊನೆಗೆ ಸತ್ತು ಹೋಯಿತು... ಆನಂತರ ಇನ್ನೊಂದು ನಾಯಿ ಗಾಜಿನ ಮನೆಯನ್ನು ಪ್ರವೇಶಿಸಿತು. ಗಾಜಿನ ಗೋಡೆಯಲ್ಲಿ ಕಂಡ ತನ್ನದೇ ಪ್ರತಿಬಿಂಬದ ನಾಯಿಗೆ ಪ್ರೀತಿಯಿಂದ ಬಾಲ ಅಲ್ಲಾಡಿಸಿತು. ಪ್ರೀತಿಯಿಂದಲೇ ಸ್ವಲ್ಪ ಸಮಯವನ್ನು ಕಳೆದು ಗಾಜಿನ ಮನೆಯಿಂದ ಹೊರಬಂದಿತು...ಪ್ರೀತಿ ತೋರಿದ ನಾಯಿ ಬದುಕುಳಿಯಿತು. ದ್ವೇಷ ಅಸೂಯೆಯಿಂದ ಒಳ ಹೊಕ್ಕ ನಾಯಿ ಕೊನೆ ಉಸಿರೆಳೆಯಿತು. 

ನಮ್ಮೂರು ಸಹ ಒಂದು ರೀತಿಯಲ್ಲಿ ಗಾಜಿನ ಮನೆಯಂತೆಯೇ ಪ್ರೀತಿ ಅಸೂಯೆಯಿಂದ ಒಳಬಂದ ಜನರಿಗೆ ಬೊಗಸೆ ತುಂಬಾ ಪ್ರೀತಿ ಸಿಗುತ್ತದೆ. ದ್ವೇಷ ಮತ್ಸರದಿಂದ ಬಂದರೆ ನಿಮ್ಮದೇ ಪ್ರತಿರೂಪ ಕಾಣುತ್ತದೆ. ನಿಮ್ಮ ನಿಮ್ಮ ಪ್ರತಿಬಿಂಬಗಳಿಗೆ ಈ ಗಾಜಿನಮನೆ ಏನು ಮಾಡಲು ಸಾಧ್ಯ ಹೇಳಿ...?

 ಯಾರು ಏನಾದರೂ ಹೇಳಿಕೊಳ್ಳಲ್ಲಿ ನನ್ನ ದೃಷ್ಷಿಯಲ್ಲಿ ನಮ್ಮೂರಿನಲ್ಲಿ ನಡೆಯುವ ಈ ಜಗಳಗಳೆಲ್ಲಾ ಪ್ರೀತಿಯ ಜಗಳಗಳೇ. ಎಲ್ಲಿ ಪ್ರೀತಿ ಅತಿಯಾಗಿ ನೆಲಸಿರುತ್ತದೆಯೋ ಅಲ್ಲಿ ಕಲಹಗಳು ಇದ್ದೇ ಇರುತ್ತವೆ. ಸುಖ ದುಃಖಗಳು ಜೀವನದಲ್ಲಿ ಎಷ್ಟು ಮುಖ್ಯವೋ ಕಲಹ ಪ್ರೀತಿಗಳು ಅಷ್ಟೇ ಮುಖ್ಯ...

ನಮ್ಮೂರಿನ ಜನ ತೋರುವ ಪ್ರೀತಿ ವಿಶಿಷ್ಟವಾದುದು. ಮೊನ್ನೆ ಊರಿಗೆ ಹೋಗಲೇಬೇಕಾದ ಪ್ರಸಂಗ ಬಂದಿತು. ತಂದೆ ಬೆಂಗಳೂರಿನಲ್ಲಿ ಮರಣ ಹೊಂದಿದರೂ ಸಹ ದಹನ ಕ್ರಿಯೆಗೆ ಹುಟ್ಟಿ ಬೆಳೆದ ನಮ್ಮೂರನ್ನೇ ಆಯ್ಕೆ ಮಾಡಿಕೊಂಡೆವು. ನಮ್ಮೂರು ತಲುಪಿದ ಕೂಡಲೇ ಅಂತಿಮ ದರ್ಶನಕ್ಕಾಗಿ ಮನೆಯ ಪಡಸಾಲೆಯಲ್ಲಿರುವ ಮಂಚದ ಮೇಲೆ ಮಲಗಿಸಿದೆವು. ಸಂಸಾರದ ಎಲ್ಲಾ ಜಂಜಾಟಗಳನ್ನು ತೊರೆದು ಮಲಗಿದ್ದ ತಂದೆಯ ತಲೆಯ ಬಳಿ ದೀಪವೊಂದು ಮಂದವಾಗಿ ಉರಿಯುತ್ತಿತ್ತು. ಅಲ್ಲಿ ಹಿರಿಯರೊಬ್ಬರು ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ "ಇಂದಿನಿಂದ ಮನೆಯ  ಜವಬ್ದಾರಿಗಳು ನಿಮ್ಮದು. ನೀವು ಕರ್ತೃಗಳಾಗಿ ಬಿಟ್ಟಿರಿ. ನಿಮ್ಮ ತಂದೆ ತಾಯಿ ನಡೆಸಿಕೊಂಡು ಬಂದ ಸಂಪ್ರದಾಯಗಳೆಲ್ಲೂ ನಿರ್ವಹಿಸುವ ಹೊಣೆ ನಿಮ್ಮೆಲ್ಲರ ಮೇಲಿದೆ.  ಎಂದು ಹೇಳಿದರು. ಸಾಮಾನ್ಯವಾಗಿ ಅನುಕಂಪ ವ್ಯಕ್ತ ಪಡಿಸುವ ಸನ್ನಿವೇಶವದು. ಆದರೆ ಅವರ ದನಿಯಲ್ಲಿ ಎಚ್ಚರಿಕೆಯೇ ಹೆಚ್ಚಾಗಿ ಕಂಡು ಬಂತು. ಆ ಸಂದರ್ಭದಲ್ಲಿಯೂ ಅವರು ನಮ್ಮ ಬಾಧ್ಯತೆಯನ್ನು ಒತ್ತಿ ಹೇಳಿದರು. ಅವರ ಪರಿಪಕ್ವವಾದ ದೃಷ್ಟಿ ಸಂದ ಜೀವದ ಕಡೆಗಿಂತ ಹೆಚ್ಚಾಗಿ ಬದುಕಿ ದುಡಿಯಬೇಕಾದ ಜೀವದ ಕಡೆಗೆ ಇತ್ತು. ಸಾವು ದೊಡ್ಡ ಸಮಸ್ಯೆಯಲ್ಲ, ದೊಡ್ಡ ಸಮಸ್ಯೆಯೆಂದರೆ ಜೀವನ. ತಂದೆ ಸತ್ತ ದುಃಖಕ್ಕಿಂತ ಹೆಚ್ಚಾಗಿ ಬಂಧುಗಳು ತೋರಿದ ಸಹಾನುಭೂತಿ, ಉತ್ತರ ಕ್ರಿಯೆಗಳು ನಡೆಯುವಾಗ ಅವರು ಹೆಜ್ಜೆ ಹೆಜ್ಜೆಗೂ ಕೊಟ್ಟ ಬೆಂಬಲ, ಅವರ ಹಿತ ನುಡಿಗಳು ... ಇವೆಲ್ಲಾ ಅಚ್ಚಳಿಯದೇ ನಿಂತಿವೆ...

ಹುಟ್ಟಿದ ಊರನ್ನು ಪ್ರೀತಿಸುವುದು ಸಹಜವೇ ಎಂದು ನೀವು ನನ್ನ ಮಾತನ್ನು ಜರೆಯಬಹುದು. ನಮ್ಮೂರು ನಮಗೆ ಕೆಲವೊಂದು ಸಲ ಬೇಸರ ತರಿಸುವುದೂ ಉಂಟು. ಹಲವು ವರ್ಷಗಳ ಹಿಂದೆ ನಾನು ನೆಲಸಿದಾಗ ಇದ್ದ ನಮ್ಮೂರಿನ ಚಿತ್ರಣಕ್ಕೂ .. ಈಗಿನ ವಾಸ್ತವ ಚಿತ್ರಣಕ್ಕೂ ಸಾಕಷ್ಟು ವ್ಯತ್ಯಾಸಗಳು ಕಂಡಾಗ ನಮ್ಮೂರು ನಮಗೆ ರುಚಿಸುವುದಿಲ್ಲ. ಅಂದು ನಮ್ಮೊಂದಿಗೆ ಕಳೆದ ಗೆಳೆಯರು ಸಿಗದಿರಬಹುದು. ಸಿಕ್ಕರೂ ಮೊದಲಿನ ಆತ್ಮಿಯತೆಯಾಗಲಿ, ಸಂತೋಷವಾಗಲಿ ಅವರಲ್ಲಿ ಕಾಣದೇ ಇರಬಹುದು.
ಮೊನ್ನೆ ಊರಿಗೆ ಹೋದಾಗ ನನ್ನ ಕಲ್ಪನೆಯ ನಮ್ಮೂರಿಗಿಂತಲೂ ವಾಸ್ತವದ ನಮ್ಮೂರು ಸಾಕಷ್ಟು ಬದಲಾದಂತೆ ಕಂಡಿತು. ನನ್ನ ಕಲ್ಪನೆಯ ಊರು ವಾಸ್ತವದಿಂದ ದೂರವಾಗಿದೆ ಎಂಬ ಭಾವನೆ ಮನಸ್ಸಿನಲ್ಲಿ ಮೂಡಿದೊಡನೆ ಊರು ಸಹ ನನ್ನ ಮನಸಿನಿಂದ ದೂರವಾಗುತ್ತಿದೆಯೇನೋ ಎಂದೆನಿಸಿತು.ನಮ್ಮೊಡನೆ ಅಂದು ಬೆರೆತ್ತಿದ್ದ ಕೆಲವು ಗೆಳೆಯರು ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗ ಮಾಡಿಕೊಂಡು ಬೇರೆ ಬೇರೆ ಊರುಗಳನ್ನು ಸೇರಿಕೊಂಡಿದ್ದರು. ಹಿಂದೆ ನನ್ನೊಟ್ಟಿಗೆ ಸೆಳೆದಿದ್ದ ಅನುಭವಗಳು ಕೆಲವು ಮಾಸಿ ಮಂಕಾಗಿ ಹೋಗಿದ್ದವು. ಮನಸ್ಸಿನ ಅಂತರಾಳದಲ್ಲಿ ಶಾಶ್ವತವಾಗಿ ನೆಲಸಿದ ಆ ನೆನಪುಗಳು ಆಗಾಗ ಮತ್ತೆ ಸ್ಮೃತಿ ಪಟಲದಲ್ಲಿ ಮೂಡಿದರೂ ವಾಸ್ತವವಾಗಿ ನಮ್ಮೂರಿನಲ್ಲಿ ಅವುಗಳನ್ನು ಹುಡುಕುವುದು ಕಷ್ಟವಾಗಿತ್ತು. ಹದಿನೈದು ವರ್ಷದ ಹಿಂದೆ ಇದ್ದ ಆ ಆತ್ಮಿಯತೆಗಳಾಗಲಿ, ಮಾತುಗಳಾಗಲಿ ಕಾಲವೆಂಬ ಪ್ರವಾಹದಲ್ಲಿ ಕೊಚ್ಚಿ ಹೋಗಿವೆಯೇನೋ ಎನ್ನಿಸಿತು...
ನಮ್ಮೂರಿನ ಬೆಟ್ಟದ ಮೇಲೆ ದುರ್ಗಾಂಬಿಕ ದೇವಾಲಯವಿದೆ. ನಾನು ಬಾಲ್ಯದಲ್ಲಿ ಕಂಡಂತಹ ಆ ದೇವಾಲಯವನ್ನು ಕೆಡವಿ ಹಾಕಿದ್ದರು. ಅದೇ ಜಾಗದಲ್ಲಿ ಹೊಸದಾದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿತ್ತು.

 ಆ ದೇವಾಲಯದ ಒಳಗೆ ಹೋಗುವಂತಿರಲಿಲ್ಲ. ಆ ಗುಡಿಯಲ್ಲಿ ನೆಲಸಿದ ನನ್ನ ಪ್ರಿಯವಾದ ದೇವತೆ ಸ್ಥಳಾಂತರಗೊಂಡಿದ್ದಳು. ಅಲ್ಲೇ ಸ್ವಲ್ಪ ದೂರದಲ್ಲಿ ನಾಲ್ಕೈದು ಕಂಬಗಳನ್ನು ನೆಟ್ಟು ತಾತ್ಕಾಲಿಕವಾಗಿ ಮಂಟಪವನ್ನು ನಿರ್ಮಿಸಿ ಅದರಲ್ಲಿ ದುರ್ಗಾಂಬಿಕೆಯ ವಿಗ್ರಹವನ್ನಿಟ್ಟಿದ್ದರು. ನನಗೆ ಗುಡಿಯಲ್ಲಿರುವ ವಿಗ್ರಹ ದೇವತೆಯಲ್ಲ. ಅಥವಾ ದೇವರೆಂದರೆ ವಿಗ್ರಹ ಮಾತ್ರವೇ ಅಲ್ಲ. ಅಲ್ಲಿಯ ಅರೆಗತ್ತಲಿನ ವಾತಾವರಣ, ಸೊಡರುಗಳಿಂದ ಎಣ್ಣೆ ಹರಿದು ಅಲ್ಲಲ್ಲಿ ಕಪ್ಪಾಗಿರುವ ಕಂಬಗಳು. ಅಲ್ಲೇ ಕಟ್ಟೆಯ ಮೇಲಿಟ್ಟಿರುವ ಅರಿಸಿಣ ಕುಂಕುಮದ ಗೊಂಡೆಗಳು, ಗರ್ಭಗುಡಿಯ ಹೊರಭಾಗದಲ್ಲಿ ಇಟ್ಟಿರುವ ಇತರ ದೇವತೆಗಳ ಪಟಗಳು, ನೇತು ಬಿದ್ದಿರುವ ಗಂಟೆಗಳು. ದೇವಿಯ ಅರ್ಚನೆಗೆ ಪರದೆಯನ್ನು ಎಳೆದು ಪೂಜಿಸುವ ಅರ್ಚಕರು. ಮಂಗಳಾರತಿಯ ಸಮಯದಲ್ಲಿ ಮೊಳಗುವ ಘಂಟನಾದ, ನಾಸಿಕಕ್ಕೆ ಬಡಿಯುತ್ತಿರುವ ಕರ್ಪೂರ ಊದು ಬತ್ತಿಯ ವಾಸನೆ, ಸರ್ವಾಲಂಕೃತವಾಗಿ ಪೂಜಾ ಸಾಮಾಗ್ರಿಯ ಬುಟ್ಟಿಯನ್ನು ಹಿಡಿದು ತರುವ ಮುತ್ತೈದೆಯರು... ಇವೆಲ್ಲವೂ ಕಣ್ಣಿಗೆ ಕಟ್ಟಿದಂತೆ  ಇರುವಾಗ ನನ್ನ ಪ್ರೇಮ ಮತ್ತು ಭಕ್ತಿಯು ಈ ಎಲ್ಲಾ ದೃಶ್ಯದೊಂದಿಗೆ ಬೆರೆತಂತೆ ಕಂಡಿತು. ಆ ಗರ್ಭ ಗುಡಿಯ ಕತ್ತಲೂ ಸಹ ನನಗೆ ಪ್ರಿಯವಾದದ್ದು. ಅದು ಪರಮಾತ್ಮನ ಸಂಬಂಧದ ಸಂಕೇತ. ನಾವು ಅಜ್ಞಾನದಲ್ಲಿ ಯಾವುದನ್ನು ಬೆಳಕೆಂದು ಬಾವಿಸುತ್ತೇವೆಯೋ ಅದರಿಂದ ವಿಮುಖವಾಗಿ ಕೆಲಕಾಲ ಅಸ್ಪಷ್ಟವಾದ ಪ್ರಪಂಚದಲ್ಲಿ ತೊಳಲಿದ ಮೇಲೆಯೇ ದೈವ ಸನ್ನಿಧಿಯ ಅರಿವಾಗುವುದು....
ನಮ್ಮೂರಿನ ದುರ್ಗಾಂಬಿಕೆಯು ಉಗ್ರ ರೂಪದ್ದಲ್ಲ. ರಾಕ್ಷಸರ ಸಂಹಾರವಾದ ನಂತರ ಶಾಂತಳಾಗಿ ಪ್ರಸನ್ನಮಯವಾದ ರೂಪ ಧರಿಸಿದಂತೆ ನಗುಮುಖದಿಂದ ನಿಂತಿರುವಳು. ದೇವಿಗೆ ಮಾಡಿಸಿದ ಬೆಳ್ಳಿಯ ಕಣ್ಣುಗಳು ಮತ್ತು ಧರಿಸಿರುವ ಇತರ ಆಭರಣಗಳು ಮಂದವಾದ ದೀಪದ ಬೆಳಕಿನಲ್ಲಿಯೂ ಹೊಳೆಯುತ್ತಿರುತ್ತದೆ. ಹಸಿರು ಸೀರೆಯನ್ನು ಧರಿಸಿ ಅಲಂಕಾರ ಮಾಡಿದರೆಂದರೆ ಸಾಕ್ಷಾತ್ ದೇವಿಯೇ ಕಣ್ಣಮುಂದೆಯೇ ಪ್ರತ್ಯೆಕ್ಷಳಾದಂತೆ ಕಾಣುತ್ತಿದ್ದಳು. ಊರಿಗೆ ಯಾವುದೇ ರೀತಿಯ ತೊಂದರೆ ಬಂದರೆ ದೇವಿಯು ಕಾಪಾಡಿದ ಉದಾಹರಣೆಗಳಿವೆ. ಊರಿನಲ್ಲಿ ಮಳೆ ಇಲ್ಲದೇ ಬರಗಾಲ ಬಿದ್ದಾಗ ದೇವಿ ಊರನ್ನು ಕಾಪಾಡಿದ ಉದಾಹರಣೆಗಳಿವೆ. ಮನೆಯಲ್ಲಿ ಯಾವ ಸಮಸ್ಯೆಗಳೇ ಇರಲಿ ಅದನ್ನು ದೇವಿಯ ಸಾನಿಧ್ಯಕ್ಕೆ ಒಪ್ಪಿಸಿ ನಿರುಮ್ಮಳವಾಗುವ ಜನ ಹಲವು ತೊಂದರೆಗಳನ್ನು ನಿವಾರಿಸಿಕೊಂಡದ್ದೂ ಉಂಟು. ನಾಸ್ತಿಕರು ಇವನ್ನೆಲ್ಲಾ ನಂಬದಿರಬಹುದು. ಆದರೆ ನಮ್ಮ ಎಲ್ಲಾ ಸಮಸ್ಯೆಗಳನ್ವು ನಿವಾರಿಸುವ ಶಕ್ತಿಯೊಂದಿದೆ. ನಾವು ತಪ್ಪು ಮಾಡಿದರೆ ನಾವು ಅಧೀನರಾದ ದೇವತೆಗೆ ಉತ್ತರ ಕೊಡಬೇಕಾಗುತ್ತದೆ ಎಂಬ ಭಯ ಅಥವಾ ಭಕ್ತಿಯೇ ನಮ್ಮನ್ನು ಉತ್ತಮ ಪಥದೆಡೆಗೆ ಕೊಂಡೊಯ್ಯುತ್ತದೆ. ಈ ಭಾವನೆಯನ್ನು ಅನುಸರಿಸುವರೆಲ್ಲರೂ ಅಸ್ತಿಕರೇ. ಈ ಭಯವನ್ನು ಮೀರಿ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ನಾಸ್ತಿಕನೂ ಸಹ ಒಂದಲ್ಲಾ ಒಂದು ನಿಯಮಗಳಿಗೆ ಬದ್ದನಾಗಿ ನಡೆಯುವುದುಂಟು. ಮನದಲ್ಲಿ ದೇವರ ಅಸ್ತಿತ್ವಕ್ಕೆ ಹಲವು ಪ್ರಶ್ನೆಗಳಿದ್ದರೂ ಸಹ ... ಅವನು ಬೆಳಸಿಕೊಂಡ ನೈತಿಕತೆಯ ಹಾದಿಯು ಅವನನ್ನು ಮತ್ತೆ ಆಸ್ತಿಕನನ್ನಾಗಿ ಮಾಡಿ ಬಿಡುತ್ತದೆ. ನಾಸ್ತಿಕ ಎನ್ನುವುದು ಬಾಹ್ಯ ತೋರಿಕೆಯಷ್ಟೆ. ಅಂತರಾಳದಲ್ಲಿ ಹುದುಗಿರುವ ಆತನ ಒಳ್ಳೆತನವೇ ದೇವರು. ಹಾಗಾಗಿ ಪ್ರಪಂಚದಲ್ಲಿ ನಾಸ್ತಿಕರು ಅಂತ ಯಾರೂ ಇಲ್ಲ. ಮಾನವೀಯತೆಯನ್ನು ಮರೆತು ಕ್ರೂರವಾಗಿ ನಡೆದುಕೊಳ್ಳುವವನು ಮಾತ್ರ ನಾಸ್ತಿಕ. ದೇವರ ಅಸ್ತಿತ್ವವನ್ನು ಪ್ರಶ್ನಿಸುವವನು ನಾಸ್ತಿಕನಲ್ಲ...

  ಮೊನ್ನೆ ಹೋದಾಗಲೂ ಜಾತ್ರೆಯು ನಾನು ಬಾಲ್ಯದಲ್ಲಿ ನೋಡಿದ ಜಾತ್ರೆಗಿಂತಲೂ ವಿಭಿನ್ನವಾಗಿ ಕಂಡಿತು. ಬರಿ ಜಾತ್ರೆ ಮಾತ್ರ ಅಲ್ಲ ನನ್ನ ಬಾಲ್ಯದ ಗೆಳೆಯರೂ ಸಹ ಬದಲಾಗಿದ್ದರು. ಜಾತ್ರೆಗೆ ಹೋದಾಗ ಪರಿಚಿತರಾದ ಹಲವು ಸ್ನೇಹಿತರು. ಕೆಲಸ ಎಲ್ಲಿ..? ಸಂಬಳ ಎಷ್ಟು ? ಬೆಂಗಳೂರಿನಲ್ಲಿ ವಾಸವಾಗಿರುವುದೆಲ್ಲಿ..? ಸಾಧ್ಯವಾದರೆ ನನ್ನ ತಮ್ಮನಿಗೊಂದು ಕೆಲಸ ನೋಡು..? ಇತ್ಯಾದಿ ಲೋಕಾರೂಢಿಯ ಮಾತುಗಳು ನಡೆದವೇ ವಿನಃ ಮೊದಲಿನಂತೆ ದಿನಾ ಬೆಳಗ್ಗೆ ಎದ್ದು ಬೆಟ್ಟವನ್ನು ಹತ್ತಿ ಪುಣ್ಯಸ್ಥಳ ಎಂಬ ಹಳ್ಳಿಯವರೆಗೆ ನನ್ನ ಜೊತೆ ಯಾರೂ ವಾಕಿಂಗ್ ಮಾಡುವುದು. ಭದ್ರಾ ನಾಲೆಯಲ್ಲಿ ಜೊತೆಯಾಗಿ ಈಜುವುದು. ಪ್ರತಿ ಸೋಮವಾರ ರಾತ್ರಿ ಸೆಕೆಂಡ್ ಷೋ ಸಿನಿಮಾಗೆ ಹೋಗವುದು. ಈ ಕೆಲಸಗಳಿಗೆ ಯಾವ ಗೆಳೆಯನಲ್ಲಿಯೂ ಉತ್ಸಾಹವಿರಲಿಲ್ಲ. ಹುಣ್ಣಿಮೆಯ ರಾತ್ರಿಯಲ್ಲಿ ಹಾಲಸ್ವಾಮಿ ಗಿರಿಯಲ್ಲಿ ನಡೆಯುತ್ತಿದ್ದ ಕೀರ್ತನೆ, ಉಪನ್ಯಾಸಗಳಿಗೆ ಬರುತ್ತೀಯಾ ಎಂದು ನನ್ನ ಕೇಳುತ್ತಿದ್ದ ಅಂದಿನ ಆ ದಿನಗಳೆಲ್ಲಿ ಹೋದವು...? ಆಗಿನ ಗೆಳೆಯರೆಲ್ಲಿ ? ಕಾಲ ಇಷ್ಟೊಂದು ಬದಾಲಾವಣೆ ತಂದೀತೆ ಎಂದೆನಿಸಿತು. ಗೆಳೆಯರೆಲ್ಲಾ ಜೀವನ ಎಂಬ ಕಾಲ ಪ್ರವಾಹದಲ್ಲಿ ಸಿಲುಕಿಕೊಂಡು ಮೊದಲಿನ ಆತ್ಮೀಯತೆ ಸಂತೋಷ ಎಲ್ಲವನ್ನು ಕಳೆದು ಕೊಂಡಿದ್ದಾರೆ ಎಂದೆನಿಸಿತು. ಕೆಲವು ಗೆಳೆಯರ ಮನೆಗೆ ಭೇಟಿ ನೀಡಿದೆ. ಸಂಸಾರ ಎಂಬ ಜಂಜಾಟದಲ್ಲಿ ಸಿಲುಕಿ ಕೆಲವರು ಕೃತಕ ಪ್ರೀತಿಯಲ್ಲಿ  ಬೆಳಸಿಕೊಂಡಿದ್ದಾರೆಯೇ...? ಎಂದೆನಿಸಿತು. ಆದರೆ ಆತಿಥ್ಯದಲ್ಲಿ ಕಡಿಮೆಯೇನೂ ಇರಲಿಲ್ಲ. ತಿಂಡಿ, ಕಾಫಿ, ಊಟಕ್ಕೇನೂ ಕೊರತೆ ಇರಲಿಲ್ಲ ಆದರೆ ಕೊರತೆ ಇದ್ದದ್ದು ಮಾತಿನಲ್ಲಿ... ಸಹಜತೆಯಲ್ಲಿ...

ಅಂದು ಗೆಳೆಯರೊಂದಿಗೆ ಮಾಡಿದ ಹಾಸ್ಯ, ಅಬ್ಬರ, ಕುಣಿತ, ನಲಿವು, ಈಜು ಈಗ ಬರಿಯ ಕನಸು ಎಂದೆನಿಸಿತು. ಸ್ನೇಹಿತರೆಲ್ಲರೂ ಯೌವ್ವನವನ್ನು ಕಳೆದುಕೊಂಡು ಮಧ್ಯವಯಸ್ಸನ್ನು ತಲುಪಿದಾಗ ಯೌವ್ವನದ ಆ ಉತ್ಸಾಹಗಳು ಏಕೆ ಕಳೆದುಕೊಳ್ಳುತ್ತಾರೋ ಎಂಬ ಪ್ರಶ್ನೆ ಚಿಂತನೆಗೀಡು ಮಾಡಿತು. ಮೊದಲಿನಂತೆ ಅವರಲ್ಲಿ ಜೀವನವನ್ನು ಲಘು ದೃಷ್ಠಿಕೋನದಿಂದ ನೋಡುವಂತಹ ಶಕ್ತಿ ಕುಗ್ಗಿ ಹೋಗಿತ್ತು. ಮುಖದಲ್ಲಿ ನಗೆಗಿಂತ ಹೆಚ್ಚಾಗಿ ಕೃತಕತೆಯೇ ತುಂಬಿತ್ತು. ಕಂಡೊಡನೆ ಅಪ್ಪಿಕೊಳ್ಳುವ ಪ್ರೀತಿ. ಮಾತಿನಲ್ಲೇ ಹಾಸ್ಯ ಚಟಾಕಿ ಹಾರಿಸುತ್ತಿದ್ದ ಆ ಸಹಜತೆ ಈಗ ಅವರಲ್ಲಿ ಹುಡುಕುವುದೂ  ಸಾಧ್ಯವಿರಲಿಲ್ಲ. ಯೌವ್ವನದಲ್ಲಿ, ಬಾಲ್ಯದಲ್ಲಿ ಅನುಭವಿಸಿದ ಆ ಸಂತೋಷದ ಕ್ಷಣಗಳನ್ನು ಸಂಸಾರ ನೌಕೆಯೊಂದಿಗೆ ಸಾಗುತ್ತಿದ್ದ ನನ್ನ ಸ್ನೇಹಿತರಲ್ಲಿ ಇವುಗಳನ್ನು ನಿರೀಕ್ಷಿಸುವುದು ಸಹ ಸಾಧ್ಯವಿರಲಿಲ್ಲ. ಎಂದೋ ಕಳೆದ ಸಂತಸದ ಕ್ಷಣಗಳು ನಮ್ಮ ಜೀವನದುದ್ದಕ್ಕೂ ಹಾಗೇ ಇರುತ್ತೆ ಅಂದು ಕೊಳ್ಳುವುದು  ತಪ್ಪು. ಜೀವನವೆಂಬುದು ನಾವು ಓದುವ ಪುಸ್ತಕದಂತಲ್ಲ. ಓದಿ ನಿಲ್ಲಿಸಿದ ಪುಸ್ತಕವನ್ನು ಮತ್ತೆ ನಿಲ್ಲಿಸಿದ ಕಡೆಯಿಂದಲೇ ಪ್ರಾರಂಭಿಸಬಹುದು. ಆದರೆ ಜೀವನ ಹಾಗಲ್ಲ ..ನಾವು ನಿಂತಕಡೆಯಿಂದ ಮತ್ತೆ ಆರಂಭಿಸುವುದು ಸಾಧ್ಯವಿಲ್ಲ. ಜೀವನ ಚಲಿಸುತ್ತಿರುತ್ತದೆ. ನಾನು ನಿಲ್ಲಿಸಿದ ಜೀವನವನ್ನು ಮತ್ತೆ ಅಲ್ಲಿಂದಲೇ ಪ್ರಾರಂಭಿಸಬೇಕು ಎಂದು ಬಯಸಿದ್ದು. ನನ್ನದೇ ತಪ್ಪು. ನನ್ನ ಬಾಲ್ಯದ ಗೆಳೆಯರು ಇದ್ದಂತೆಯೇ ಇರಬೇಕೆಂದು ಕೊಂಡರೆ ಹೇಗೆ ಸಾಧ್ಯ ಹೇಳಿ. ಕಾಲ ಬದಲಾದಂತೆ ಹೋದರೆ ಎಲ್ಲವೂ ಬದಲಾಗುತ್ತಿರುತ್ತದೆ..ಬಾಲ್ಯದಲ್ಲಿಯ ಚೇಷ್ಟೆಗಳು. ಯೌವ್ವನದಲ್ಲಿಯ ತರಲೆಗಳು, ಪ್ರೀತಿ ಪ್ರೇಮ ಹಾಸ್ಯ ಮುಂತಾದ ಮಾತುಗಳು ಆಯಾ ಹಂತಕ್ಕೆ ಸೀಮಿತವಾಗಿ ಬಿಡುತ್ತವೆ...


ಸಂಸಾರದಲ್ಲಿ ನೋವು ಅನುಭವಿಸುವವನು ಸುಖ ಸಂತೋಷಗಳಿಂದ ವಂಚಿತನಾಗಿ ಬಿಡುತ್ತಾನೆ. ಏನೇ ಕಷ್ಟಗಳು ಬರಲಿ ನಗು ನಗುತ್ತಾ ಕಾಲ ಕಳೆಯಲು ಬಯಸಿದರೆ ಬಂದ ಕಷ್ಟಗಳೂ ದೂರವಾಗುತ್ತವೆ.  ನೀವು ಮೊದಲಿನಂತೆ ನಗು ನಗುತ್ತಾ ಕಾಲ ಕಳೆದರೂ ಸಹ ನಿಮ್ಮ ಜೀವ, ನಿಮ್ಮ ಶರೀರ ಅಂತಿಮವಾಗಿ ಪ್ರಕೃತಿಯೊಡನೆ ಲೀನವಾಗುತ್ತದೆ. ಅಥವಾ ಸಂಸಾರದ ಜಂಜಾಟಗಳನ್ನು ತಲೆಯ ಮೇಲೆ ಹೊತ್ತು ಕಾಲ ಕಳೆದರೂ ಸಹ ನಿಮ್ಮ ಶರೀರ ಪ್ರಕೃತಿಯೊಂದಿಗೆ ಲೀನವಾಗಲೇ ಬೇಕು. ನೀವು ಜೀವನದಲ್ಲಿ ಅತಿಯಾಗಿ ಕಷ್ಟ ಅನುಭವಿಸಿದವರು ಸ್ವಲ್ಪಕಾಲ ಸುಖವನ್ನು ಅನುಭವಿಸಿಕೊಂಡು ಬರಲಿ ಎಂದು ದೇವರು ನಿಮ್ಮ ಆಯಸ್ಸನ್ನು ಹೆಚ್ಚಿಸುವುದಿಲ್ಲ. ದೇಹ ಪ್ರಕೃತಿಯಲ್ಲಿ ಲೀನ ವಾಗುವುದು ನಿಶ್ಚಿತವೇ ಆಗಿರುವಾಗ ಸತ್ಯದ ಮಾರ್ಗವನ್ನುಸರಿಸುವುದೋ... ಸುಳ್ಳಿನ ಮಾರ್ಗವನ್ನನುಸರಿಸುವುದೋ... ಈ ಹುಟ್ಟು ಸಾವಿನ ಮಧ್ಯ ನಮ್ಮ ನಡವಳಿಕೆಗಳು ಹೇಗಿರಬೇಕೆಂದು ಆಯ್ಕೆ ಮಾಡಿಕೊಳ್ಳುವುದು ಮಾತ್ರ ನಿಮಗೆ ಸೇರಿರುತ್ತದೆ. ನಗುವವನಿಗೆ ನೂರು ಗೆಳೆಯರು ಅಳುವವನಿಗೆ ನಾಲ್ಕೇ ಗೆಳೆಯರು ಎಂಬ ತತ್ವ ನಿಮಗೆ ತಿಳಿದುಕೊಂಡರೆ ಚೆನ್ನ..

ಊರಿನ ವಿಷಯ ಬಿಟ್ಟು ವಿಷಯಾಂತರ ಮಾಡಿದೆ ಕ್ಷಮಿಸಿ......ನಮ್ಮೂರು ಹಿಂದಿನ ಜನಪದ  ಸಂಸ್ಕೃತಿಯಿಂದಲೂ ದೂರವಾದಂತೆ ಕಂಡಿತು. ನಾನು ಬಾಲ್ಯದಲ್ಲಿ ನೋಡಿದ ಜಾತ್ರೆಯ ವೈಭವೇ ಬೇರೆ..... ಇಂದು ನೋಡುತ್ತಿರು ಜಾತ್ರೆಯ ವೈಭವವೇ ಬೇರೆ ಎಂದೆನಿಸಿತು. ಇಂದಿನ ಜಾತ್ರೆ ನನ್ನ ಮನಸಿಗೆ ರುಚಿಸಲಿಲ್ಲ. ದಂಡೆ ದಂಡೆಯಾಗಿ ಬರುತ್ತಿದ್ದ ಹಳ್ಳಿಯ ಜನರ ಸಂಖ್ಯೆ ಕಡಿಮೆಯಾದಂತೆ ಕಂಡಿತು. ಮೊಣಕಾಲಿನ ಮೇಲಕ್ಕೆ ಪಂಚೆಯನ್ನು ಕಟ್ಟಿಕೊಂಡು ಜಾತ್ರೆಗೆ ಲಗ್ಗೆ ಇಡುತ್ತಿದ್ದ ಹಳ್ಳಿಗರಲ್ಲಿ ಬದಲಾವಣೆ ಕಂಡಿತು. ಜನಪದ ಸಂಸ್ಕೃತಿಯನ್ನು ನೆನಪನ್ನು ತರುತ್ತಿದ್ದ ನಮ್ಮ ಹಳ್ಳಿಯ ತರುಣರಲ್ಲಿ  ಪಂಚೆಯ ಬದಾಲಾಗಿ ಪಾಶ್ಚ್ಯಾತ್ಯರ ಪ್ಯಾಂಟ್ ಅವರ ಸೊಂಟವನ್ನು ಏರಿ ಕುಳಿತ್ತಿದ್ದನ್ನು ನೋಡಿ ಹಳ್ಳಿಗಳು ಸಹ ನಮ್ಮ ಸಂಸ್ಕೃತಿಯಿಂದ
ದೂರವಾಗುತ್ತಿವೆಯೇನೋ ಎಂದೆನಿಸಿತು. ಘಲ್,ಘಲ್ ಸದ್ಧಿನೊಂದಿಗೆ ಹೇರಳವಾಗಿ ಬರುತ್ತಿದ್ದ ಎತ್ತಿನ ಗಾಡಿಯನ್ನು ನೋಡಿದೆ. ಕೆಲವು ಮಾತ್ರ ಇದ್ದವು. ಈ ಹಿಂದೆ ನಾನು ನೋಡಿದ ದುರ್ಗಾಂಬಿಕ ಜಾತ್ರೆಯ ಚಿತ್ರಣಕ್ಕೂ ವಾಸ್ತವ ಚಿತ್ರಣಕ್ಕೂ ಸಂಪೂರ್ಣ ಭಿನ್ನವಾದಂತೆ ಗೋಚರಿಸಿತು. ಅಂದಿನ ಆ ವೈಭವಗಳು, ಜಾತ್ರೆಯ ಗದ್ದಲಗಳು, ಡಳ್ಳು ಕುಣಿತ, ಛದ್ಮ ವೇಷ ಧರಿಸಿದ ವಿರಗಾಸೆಯ ಕಲಾವಿದರು, ತಮಟೆಯ ಸದ್ಧಿಗೆ ಹೆಜ್ಜೆ ಹಾಕುವ ಹುಲಿ ಕುಣಿತ, ಈ ಎಲ್ಲವೂ ಕಾಲದ ಮಹಿಮೆಯ ಪರಿಣಾಮವಾಗಿ ಕಣ್ಮರೆಯಾದಂತೆ ಕಂಡವು.  ನನ್ನ ನೆನಪಿನಲ್ಲಿ ಭದ್ರವಾಗಿದ್ದ ಆ ವೈಭವಗಳು ವಾಸ್ತವಕ್ಕೆ ದೂರವಾಗುತ್ತಲೇ ಹೋಗುತ್ತಿದ್ದವು. ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದ್ದ ಆ ವೈಭವಗಳು ಎಲ್ಲೋ ಕಳೆದು ಹೋಗಿವೆ ಎಂದೆನಿಸಿತು. ಆದರೆ ಬೌಗೊಳಿಕವಾಗಿ ನಮ್ಮೂರು ಹಾಗೇ ಇದ್ದಿದ್ದು ಸ್ವಲ್ಪ ಸಮಾಧಾನ ನೀಡಿತು. ಆ ಜಾತ್ರೆ, ಆ ಬೆಟ್ಟ,  ಬೆಟ್ಟವನ್ನು ಸುತ್ತುವರೆದು ಹರಿಯುತ್ತಿರುವ ಭದ್ರಾ ನಾಲೆ,  ಪವಾಡ ಪುರುಷರೆಂದು ಕರೆದು ಕೊಂಡಿರುವ ಹಾಲಸ್ವಾಮಿಯ ಗಿರಿ, ಗುಂಡಿ ಬಿದ್ದ ರಸ್ತೆಗಳು, ಎಲ್ಲವೂ ನೆನಪಿನ ಚಿತ್ರಣದಲ್ಲಿ ನೆಲೆಯೂರಿದಂತೆ ವಾಸ್ತವದಲ್ಲಿ ಅಲ್ಪ ಸ್ವಲ್ಪ ಬದಾಲಾವಣೆಯೊಂದಿಗೆ ಕಂಡವು. ಜಾತ್ರೆಗೆ ಮಾತ್ರ ಸ್ವಲ್ಪ ಆಧುನಿಕತೆಯ ಮೆರಗು ಬಂದಂತೆ ಇತ್ತು.....


  ನಾನು ಬಾಲ್ಯದಲ್ಲಿ ಕಂಡ ನಮ್ಮೂರಿನ ನೆನಪುಗಳು ನನ್ನ ಮನಸ್ಸಿನ ಸ್ಪೃತಿ ಪಟಲದಲ್ಲಿ ಚಿತ್ರದಂತೆ ಮೂಡಿತ್ತು, ಬೆಟ್ಟವನ್ನು ಸುತ್ತಿ ಹರಿವ ಭದ್ರಾ ನಾಲೆ, ದುರ್ಗಾಂಗಿಕ ಬೆಟ್ಟ, ಪವಾಡ ಪುರುಷರೆಂದು ಕರೆಸಿಕೊಂಡ ಹಾಲಸ್ವಾಮಿಯವರು ತಪಸ್ಸಿಗೆ ಕುಳಿತ ಗುಹೆ, ಮನಸ್ಸನ್ನು ರಂಜಿಸುತ್ತಿದ್ದ ಎರಡು ಸಿನಿಮಾ ಟೆಂಟುಗಳು, ಈ ಎಲ್ಲ ಚಿತ್ರಗಳು ಮನಸ್ಸಿನ ಮೂಲೆಯಲ್ಲಿ ಅಭಿಮಾನದ ಚಿತ್ತಾರವನ್ನು ಮೂಡಿಸಿದ್ದವು. ಮನಸು ಧ್ಯಾನಿಸುತ್ತಿದ್ದ ನಮ್ಮೂರಿನ ಚಿತ್ರ ಪಟಕ್ಕೆ ಕುಂಚ, ಬಣ್ಣ, ರೇಖೆ, ವಿನ್ಯಾಸಗಳನ್ನು ಗೀಚಿಕೊಂಡು ಅದನ್ನು ವರ್ಣಮಯವಾಗಿಸಿ ಕೊಂಡಿದ್ದು ನನ್ನ ಮನಸ್ಸು. ಅಂದು ಕಂಡ ಈ ವರ್ಣಮಯ ಚಿತ್ರವು ರಂಗು ಮಾಸದೇ ಹಾಗೇ ಇರಬೇಕೆಂದುಕೊಳ್ಳುವುದು ಸರಿಯಲ್ಲ. ಅಥವಾ ಊರು ಮೊದಲಿಗಿಂತಲೂ ಈಗ  ರಂಗು ಹೊಂದಿದ್ದರೂ ಸಹ ಬಾಲ್ಯದ ಚಿತ್ರಣಗಳು ಮನದಾಳಕ್ಕೆ ಅಚ್ಚೊತ್ತಿರುವುದರಿಂದಲೋ... ಅಥವಾ ಹಿಂದೆ ಕಂಡದ್ದನ್ನೇ ಕಾಣಲು ಮನಸ್ಸು ಹಾತೋರೆಯುತ್ತಿರುವುದರಿಂದಲೋ ಊರು ಸುಂದರವಾಗಿ ಕಾಣಿಸದಿರಬಹುದು. ಇದು ಒಂದು ರೀತಿಯ ಬಣ್ಣದ ಜಗತ್ತು ಇದ್ದಂತೆ. ಯೌವ್ವನದಲ್ಲಿ ಕಂಡದ್ದಲ್ಲ ನಮಗೆ ಹಿತವೆನಿಸುತ್ತದೆ. ಕನಸುಗಳು ಹುಟ್ಟುವ ಯೌವ್ವನದ  ಉತ್ಕರ್ಷದಲ್ಲಿ ಕಂಡದ್ದೆಲ್ಲಾ ಹಿತವೆನಿಸುತ್ತದೆ. ಯೌವ್ವನದಲ್ಲಿ ನೋಡಿದ ಸಿನಿಮಾ. ಅಥವಾ ಕೇಳಿದ ಹಾಡುಗಳು ನಮಗೆ ಹಿತವೆನಿಸುತ್ತವೆ.  ಆ ಸಿನಿಮಾ ಅಥವಾ ಸಿನಿಮಾದ ಹಾಡಿನೊಂದಿಗೆ ನಾವು ನಮ್ಮ ಕನಸಿನ ಕನ್ಯೆಯನ್ನು    ಕಾಣುತ್ತೇವೆ. ಅವಳೊಂದಿಗೆ ಮರ ಸುತ್ತುತ್ತಾ  ಡ್ಯೂಯೆಟ್ ಹಾಡಿಕೊಳ್ಳುತ್ತೇವೆ. ನಮ್ಮ ಮನಸ್ಸಿನಲ್ಲಿ ಅಮೂರ್ತ ಸ್ವರೂಪದಲ್ಲಿ ನೆಲಸಿದ್ದ ಕಾಲ್ಪನಿಕ ಕನ್ಯೆಯೊಬ್ಬಳು ಮೂರ್ತ ಸ್ವರೂಪವನ್ನು ಪಡೆಯುತ್ತಾಳೆ.  ಅಪ್ಸರೆಯಂತಹ ಆ ಹುಡುಗಿಗೆ ನಮ್ಮ ಹೃದಯದಲ್ಲೊಂದು ಸ್ಥಾನ ಕೊಟ್ಟು ಬಿಡುತ್ತೇವೆ. ಹಾಗಾಗಿ ಈ ಹಾಡು.. ಹಾಡಿನಲ್ಲಿ ಕಲ್ಪಿಸಿಕೊಂಡ ಹುಡುಗಿ ಎಲ್ಲವೂ ಮನದೊಳಗೆ ರಂಗು ರಂಗಿನ ಚಿತ್ತಾರವನ್ನು ಮೂಡಿಸಿ ಮನಸ್ಸಿನಲ್ಲಿ ಹಿತವಾದ ಭಾವನೆಯನ್ನು ಮೂಡಿಸುತ್ತವೆ. ಇದೇ ಕಾರಣಕ್ಕೆ ನಾವು ಯೌವ್ವನಗಳಲ್ಲಿ ಕೇಳಿದ ಹಾಡುಗಳೆ ನಮಗೆ ಜೀವನದುದ್ದಕ್ಕೂ ಮುದ ನೀಡುತ್ತವೆ. ಇಳಿ ವಯಸ್ಸಿನಲ್ಲಿಯೂ ಆ ಹಾಡು ನಮ್ಮನ್ನು ಕಾಡದೇ ಬಿಡದು. ಏಕೆಂದರೆ ಆ ಹಾಡಿನೊಂದಿಗೆ ಅಂದಿನ ನಮ್ಮ ಕನಸುಗಳು ಬೆರೆತಿರುತ್ತವೆ.  ಅಂದು ನಮ್ಮ ಮನಸ್ಸಿಗೆ ಹಿತ ನೀಡಿದ ಆ ಕನಸಿನ ರಾಜಕುಮಾರಿಯೂ ಅಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ. ಈ ಕಾರಣದಿಂದಲೇ ಯೌವ್ವನದಲ್ಲಿ ನಾವು ಕೇಳಿದ ಈ ಹಾಡುಗಳು ನಮಗೆ ಜೀವನದುದ್ದಕ್ಕೂ ಮುದ ನೀಡುತ್ತವೆ.  ಇದನ್ನು ನೆನಪಿಸಿಕೊಂಡಾಗಲೆಲ್ಲಾ ಮನಸು ಯಾವುದೋ ಲೋಕದಲ್ಲಿ ತೇಲಿ ಹೋಗುತ್ತದೆ. ಇಷ್ಟೊಂದು ಹಿತವನ್ನೂ, ಮುದವನ್ನೂ ಅನುಭವಿಸಿದ ನಾವು ಆ ಹಾಡುಗಳನ್ನೂ ಮತ್ತು ಆ ಕನಸುಗಳನ್ನೂ ಎಂದಿಗೂ ಮರೆಯುವುದಿಲ್ಲ. ವೃದ್ದಾಪ್ಯದ ಹಂತವನ್ನು ತಲುಪಿದರೂ ಸಹ ಅವರು ಯೌವ್ವನದಲ್ಲಿ ಕೇಳಿದ ಹಾಡುಗಳನ್ನೇ ನೆನಪಿಸಿ ಕೊಳ್ಳುತ್ತಾರೆ. ಅವರಿಗೆ ಈಗಿನ ಯಾವ ಹಾಡುಗಳು ಸಹ ರುಚಿಸುವುದಿಲ್ಲ. ಕಾರಣ ಕನಸುಗಳಿಲ್ಲದ, ಉತ್ಸಾಹಗಳಿಲ್ಲದ ವೃದ್ದಾಪ್ಯದ ಹಂತದಲ್ಲಿ ಈಗಿನ ಹಾಡುಗಳು ರುಚಿಸುವುದಾದರೂ ಹೇಗೆ...? ಜೊತೆಗೆ ಈಗಿನ ಹಾಡುಗಳನ್ನು ಕೇಳಿ ಅವರು ..


" ಆಗ ಬರುತ್ತಿದ್ದ ಹಾಡುಗಳು ಈಗೆಲ್ಲಿ ಸಿಕ್ಕಾವು. ಅವತ್ತಿನ ಹಾಡುಗಳೆಂದರೆ... ಅದೇನು ಅರ್ಥ. ಅದೇನು ಸ್ವರ..?

ಎಂದು ಗೊಣಗುತ್ತಾರೆ.

ಇದು ಇಲ್ಲಿಗೇ ನಿಲ್ಲುವುದಿಲ್ಲ. ಇಂದಿನ ಯುವಕರು ಸಹ ತಾವು ಕೇಳಿದ ಹಾಡುಗಳೊಂದಿಗೆ ಇಂದು  ಕಲ್ಪಿಸಿಕೊಂಡ ಚಿತ್ರಣಗಳನ್ನೇ ಮುಂದೆ ವೃದ್ದಾಪ್ಯದ ಹಂತದಲ್ಲಿ ನೆನಪಿಸಿಕೊಳ್ಳುವುದುಂಟು. ಅವರೂ ಸಹ ತಮ್ಮ ಯೌವ್ವನದ ನೆನಪುಗಳನ್ನು  ಹೊಗಳಲೇ ಬೇಕು ..ಇಳಿ ವಯಸ್ಸು ತಲುಪಿದಾಗ ಅವರಿಗೂ ಆ ಕಾಲದ ಹಾಡುಗಳು ಹಿತವೆನಿಸುವುದಿಲ್ಲ. ಏಕೆಂದರೆ ಉತ್ಸಾಹ ಮತ್ತು ಕನಸುಗಳು ಮೂಡದ ಹಂತವದು...


ಊರಿನ ವಿಷಯದಲ್ಲಿಯೂ ಸಹ  ಹೆಚ್ಚು ಕಡಿಮೆ ಇದೇ ರೀತಿಯ ಭಾವನೆಗಳಿರುತ್ತವೆ.  ಅತ್ಯುತ್ಸಾಹದಲ್ಲಿ ಕಳೆದ ಊರಿನ ನೆನಪುಗಳು ಮುಂದೆ ಹದಿನೈದು ಇಪ್ಪತ್ತು ವರ್ಷಗಳ ನಂತರ ಊರಿಗೆ ಹೋದಾಗ ನಿಮಗೆ ಆ ಚಿತ್ರಣಗಳು ಕಾಣದೇ ಹೋಗಬಹುದು. ಜನರೆಲ್ಲರೂ ಅಪರಿಚಿತರಂತೆ ಕಾಣಬಹುದು. ಊರು ನಿಮ್ಮದಾದರೂ ಅಲ್ಲಿಯ ಜನ ನಿಮ್ಮವರೆಂದಿಸುವುದಿಲ್ಲ. ಎಲ್ಲಾ ಹೊಸ ಮುಖಗಳೇ.  ಅಂದು ಚಿಕ್ಕವರಿದ್ದವರೆಲ್ಲಾ ಇಂದು ಯೌವ್ವನದ ಉತ್ತರಾಧಿಕಾರವನ್ನು ವಹಿಸಿಕೊಂಡಿರುತ್ತಾರೆ. ನಿಮ್ಮದೇ ಊರಿನಲ್ಲಿ ನೀವು ಅನಾಥರಾದ ಭಾವನೆ ಮೂಡಬಹುದು. ಆಗ ನಿಮಗೆ ಬಾಲ್ಯದಲ್ಲಿ ಕಳೆದ ನೆನಪುಗಳು ಮರುಕಳಿಸದೇ ಇರಲಾರದು. ನಿಮ್ಮ ಕಣ್ಣುಗಳು ಮತ್ತೆ ಆ ನೆನಪಿನ ಚಿತ್ರಣಗಳು ಮರುಕಳಿಸುತ್ತವೆಯೇನೋ ಎಂದು ಹುಡುಕದೇ ಇರಲಾರದು....


ಮೊನ್ನೆ ಊರಿಗೆ ಹೋದಾಗ ಭದ್ರಾ ನಾಲೆಯಲ್ಲಿ ಈಜಬೇಕೆನಿಸಿತು. 'ಗಂಡಸರ ಮೆಟ್ಟಿಲು' ಎಂದು ಕರೆಯಿಸಿಕೊಳ್ಳುವ ಜಾಗಕ್ಕೆ ಹೋಗಿ ಶಾಂತವಾಗಿ ಹರಿಯುತ್ತಿರುವ ಶೀತಲವಾದ ನೀರಿನಲ್ಲಿ ನಿಧಾನವಾಗಿ ನನ್ನ ದೇಹವನ್ನು ಮುಳುಗಿಸಿದೆ. ಮುಂಜಾನೆಯ ಆ ಚಳಿ ಮತ್ತು ಆ ಶೀತಲವಾದ ನೀರಿನಲ್ಲಿ ಮುಳುಗಿದ್ದರಿಂದಲೋ ಏನೋ ಆ ಶೀತಕ್ಕೆ ನಡುಗಿ ಮೈ 'ಜುಂ...' ಎಂದಿತು. ಆ ಮೆಟ್ಟಿಲಿನ ಪಕ್ಕದಲ್ಲಿರುವ ದಿಬ್ಬವೊಂದಿದೆ. ಬಾಲ್ಯದಲ್ಲಿ ಆ ದಿಬ್ಬದ ಮೇಲೆ ನಿಂತು ನಾಲೆಗೆ ಹಾರುತ್ತಿದ್ದವು. ಆದರೆ ಈಗ ಆ ದಿಬ್ಬದ ಮೇಲೆ ನಿಂತು ನಾಲೆಗೆ ಹಾರುವ ಉತ್ಸಾಹವಿರಲಿಲ್ಲ. ಈಗಲೂ ಹಲವು ಯುವಕರು ಓಡೋಡಿ ಬಂದು ದಿಬ್ಬದ ಮೇಲೆ ಕಾಲಿಟ್ಟು ಮೇಲಿಂದ ಲಾಗ ಹಾಕಿ ನಾಲೆಗೆ ಧುಮುಕುತ್ತಿದ್ದರು. ನಾನು ಮಾತ್ರ ಮೆಟ್ಟಿಲ ಮೇಲೆಯೇ ಕುಳಿತು ನೀರಿನೋಂದಿಗೆ ಚೆಲ್ಲಾಟವಾಡುತ್ತಾ ಸ್ನಾನ ಮಾಡುತ್ತಿದ್ದೆ. ಇದನ್ನೆಲ್ಲಾ ಗಮನಿಸುತ್ತಿದ್ದ ವ್ಯಕ್ತಿಯೊಬ್ಬ

"ಲೋ ಪಕ್ಕ.... ನಾನ್ ಯಾರು ಅಂತ ಗೊತ್ತಾಯ್ತೆನೋ...?"

ಆತನನ್ನೇ ದಿಟ್ಟಿಸಿ ನೋಡಿದೆ.....

"ದೊಡ್ಡ ರಂಗಯ್ಯನ ಮಗ ರಾಮಸ್ಸಾಮಿ ಅಲ್ವೆನೋ...? 

ಆತ ಕಾಲೇಜು ದಿನಗಳಲ್ಲಿ ನನ್ನ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದ. ನಾಲಿಗೆಗೆ ಬಾರದ ಇಂಗ್ಲಿಷನ್ನು ರಸ್ತೆಯುದ್ದಕ್ಕೂ ಕಷ್ಟಪಟ್ಟು ಮಾತನಾಡಿಕೊಂಡು ಹೋಗುತ್ತಿದ್ದೆವು. ದಿನಕ್ಕೆ ಒಂದು ಗಂಟೆಯಾದರೂ  ಇಂಗ್ಲಿಷ್ ಮಾತನಾಡಬೇಕೆನ್ನುವುದು ನಮ್ಮಿಬ್ಬರ ತೀರ್ಮಾನವಾಗಿತ್ತು. ಆಗ ನಾವು ಮಾತನಾಡುತ್ತಿದ್ದ ಬಟ್ಲರ್ ಇಂಗ್ಲಿಷನ್ನು ಕೇಳಿ ರಸ್ತೆಯಲ್ಲಿ ಹಲವರು ನಕ್ಕಿದ್ದೂ ಉಂಟು...

" ಯಾಕೋ ಬೆಂಗಳೂರು ಬಿಟ್ಟು ಬಂದೆಂತೆ...? ಹಳ್ಳೀಲಿ ಯಂತ ಕೆಲ್ಸ ಮಾಡ್ತಿಯೋ... ನಿಮ್ದು ಜಮೀನು ಬೇರೆ ಇಲ್ಲ.. ಜೀವನಕ್ಕೆ ಏನು ಮಾಡ್ಕೊಂಡಿದ್ದೀಯಾ...?

ನಾನು ಕುತೂಹಲದಿಂದ ಕೇಳಿದೆ

"ಬೆಂಗಳೂರಿನ ಜಂಜಾಟದ ಬದುಕು ಬೇಸರವಾಯ್ತು. ನನಗೆ ನಮ್ಮೂರಿನಲ್ಲಿ ಇದ್ದಷ್ಟು ಸಮಾಧಾನ ಬೆಂಗಳೂರಿನಲ್ಲಿ ಇದ್ದಾಗ ಸಿಗಲಿಲ್ಲ. ನಮ್ಮೂರಿನ ರಾಜ ಬೀದಿಯಲ್ಲಿ ಒಂದು ಸುತ್ತು ತಿರಿಗಿದರೆ ಸಾಕು ಅಲ್ಲಿ ಸಿಗುವ ತೃಪ್ತಿ ಲಕ್ಷ ರೂಪಾಯಿ ಕೊಟ್ಟರೂ ನನಗೆ ಸಿಗದು'

ಅಂದ

'ಜೀವನಕ್ಕೆ....?"

ಎಂದು ಕೇಳಿದೆ.. 

"ಏನಾದ್ರೂ ದುಡಿಯೋಣ ಅಂತ ಇದ್ದೀನಿ"
ಸ್ವಲ್ಪ ನಿರುತ್ಸಾಹ ದಿಂದ ಹೇಳಿದ
"ಮತ್ತೆ ಮದುವೆ......?"

ನಾನು ಹಾಗೆ ಕೇಳಿದಾಹ ಮುಖದಲ್ಲಿ ಮತ್ತಷ್ಟು ಬೇಸರ ಕಂಡಿತು..

"ರಾಂ ಪುರ ದಲ್ಲಿ ಹುಡುಗಿ ಫಿಕ್ಸ ಆಗಿತ್ತು... ನಿಶ್ಚಿತಾರ್ಥನೂ ಆಗಿತ್ತು. ಯಾರೋ ಊರಿನವರು ಹುಡುಗ ಓದಿದ್ರೂ ಕೆಲ್ಸ ಮಾಡದೇ ಊರಲ್ಲಿ ಗೂಳಿಯಂಗೆ ತಿರುಗ್ತಾನೆ ಅಂತ ಚಾಡಿ ಹೇಳಿ ನನ್ನ ಮದುವೆಗೆ ಬೆಂಕಿ ಇಟ್ಟು ಬಿಟ್ರು... ನಮ್ಮೂರು ಬೆಂಕಿಪಟ್ಣ ನೋಡು.. ಅವರು ಯಾರು ಅಂತ ಗೊತ್ತಾದ್ರೆ ನಾನೂ ಸುಮ್ನಿರಲ್ಲ.. ಬುಡಕ್ಕೆ ಬೆಂಕಿ ಇಡ್ತೀನಿ"
ಸ್ವಲ್ಪ ಸಿಟ್ಟಿನಿಂದ ಹೇಳಿದ 

"ಅಲ್ಲೋ ಊರ ಮೇಲಿನ ಮಮಕಾರದಿಂದ, ಬದುಕು ಕಟ್ಟಿಕೊಳ್ಳೋದನ್ನು ಮರೆತೆಯಲ್ಲೋ ದಡ್ಡ... ದುಡಿಯೋ ವಯಸ್ಸಲ್ಲಿ ನನಗೆ ಆ ಊರು ಇಷ್ಟವಿಲ್ಲ ಈ ಊರು ಇಷ್ಟವಿಲ್ಲ ಅಂದ್ರೆ ಜೀವನ ಹೆಂಗೋ ಸಾಗುತ್ತೆ.... ಎಲ್ಲರಿಗೂ ಅವರವರ ಊರಿನ ಮೋಲೆ ಗೌರವ ವಿಶ್ವಾಸಗಳಿರುತ್ತವೆ. ಹಾಗಂತ ನಮ್ಮ ನಮ್ಮ ಬದುಕು ಕಟ್ಟಿಕೊಳ್ಳೋದು ಬೇಡವೇ... ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿ ಕೊಳ್ಳೋಕೆ ಆಗುತ್ತೇನೋ.... ಸಿಕ್ಕ ಒಳ್ಳೆ ಕೆಲಸಾನೂ ಬಿಟ್ಟು ಬಂದೆ... ಕಷ್ಟ ಪಟ್ಟು ಓದಿಸಿದ ತಂದೆ ತಾಯಿಗೆ ಹೇಗೋ ಸಾಕ್ತೀಯಾ..."

 ಅಂದೆ

ನನ್ನ ಮಾತುಗಳು ಅವನಿಗೆ ಹಿಡಿಸಲಿಲ್ಲ. ಏನೋ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತ....

ಕಾಲಘಟ್ಟಗಳು ದಾಟಿದ ನಂತರವೂ ಊರಿನ ಬಗ್ಗೆ ನಮಗೂ ಪ್ರೀತಿ ವಿಶ್ವಾಸಗಳು ಇದ್ದೇ ಇರುತ್ತವೆ. ಆದರೆ ನಮಗೆ ಊರು  ಹಳೆಯದಾದಂತೆ ಜನ ಹೊಸಬರು ಅನ್ನಿಸಬಹುದು.. ನಮ್ಮೂರಿನ ಜನ ನಮಗೆ ಅಪರಿಚಿತರು ಎಂದು ಬಾಸವಾಗಬಹುದು ..ಆದರೆ ನಮ್ಮೂರಿನ ನೆನಪುಗಳು ಮಾತ್ರ ಅಮರ.  

ಬದುಕು ಯಾವಾಗ ತುಕ್ಕು ಹಿಡಿಯುವತ್ತ ಸಾಗುತ್ತದೆಯೋ... ಆಗ ನಾವು ಮತ್ತೊಂದು ಊರಿಗೆ ಹೋಗಲೇ ಬೇಕು. ಹೊಸ ಬದುಕನ್ನು ಕಟ್ಟಿಕೊಳ್ಳಲೇ ಬೇಕು. 

"ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ....?"

 ಎಂದು ನೀವೇನಾದರೂ ಕೇಳಿದರೆ
ನಾನೂ ಸಹ ಕೆ, ಎಸ್ ನರಸಿಂಹ ಸ್ವಾಮಿಯವರ ಈ ಸಾಲನ್ನೇ ಹೇಳಬೇಕಾಗುತ್ತದೆ.

"ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ ..? ಎನ್ನರಸ ಸುಮ್ಮನಿರಿ ಅಂದಳಾಕೆ"

                                                                 -ಪ್ರಕಾಶ್ ಎನ್ ಜಿಂಗಾಡೆ