Monday, 20 June 2016

ನಮ್ಮೂರು

ನಮ್ಮೂರು

ಬಸವನೊಮ್ಮೆ ಹೂಂಕರಿಸಿ ಗೂಳಿಟ್ಟಿಸಿ
ಆಶೕಿರ್ವದಿಸಿದ ಪುಣ್ಯಭೂಮಿಯೇ
ನಮ್ಮೂರು ಬಸವಾಪಟ್ಟಣ
ಪಟ್ಟಣವೆಂಬುದು ಅನ್ವರ್ಥನಾಮ ಅಷ್ಟೇ
ಗಗನಚುಂಬಿ ಕಟ್ಟಡಗಳೇನೂ ಇಲ್ಲ
ವಿಶಾಲ ಹೃದಯಗಳಿಗೇನೂ ಕೊರತೆ ಇಲ್ಲ

ಮೂರು ಕಡೆ ಸುತ್ತಲೂ ಬೆಟ್ಟಗಳು
ಬೆಟ್ಟಕ್ಕೆ ಮುತ್ತಿಕ್ಕಿ ಹರಿಯುವ ಭದ್ರಾನಾಲೆ
ವೈವಿದ್ಯದ ರಾಜಬೀದಿಯಲಿ ಕಾಲಿಟ್ಟರೆ
ಕೋಶ ಓದುವುದೇನೂ ಬೇಡ
ಅಲ್ಲಿಯ ತರಲೇ ಮಾತುಗಳು
ಸೋಮಾರಿ ಕಟ್ಟೆಯ ಚರ್ಚೆಗಳೇ ಸಾಕು...

ಹಾಲಸ್ವಾಮಿ ಬೆಟ್ಟದ ಹಿತನುಡಿಗಳು
ದುರ್ಗಮ್ಮ ಗುಡ್ಡದ ವೇದಾಂತಗಳು
ಜನರ ಐಲು ಬೈಲು ರಾಜಕೀಯ ನುಡಿಗಳು
ರಾಜಧಾನಿಯಲ್ಲೂ ಸಿಗಲಾರದ ಸಿದ್ಧಾಂತಗಳು
ಕುಡುಕರು ಅಭಿನಯದ ಸಂಜೆ ಬೀದಿಗಳು
ಬಿಳಿ ಲುಂಗಿ ಪರದೆಯಲ್ಲಿನ ಟೆಂಟ್ ಸಿನಿಮಾಗಳು

ದಿನದ ದುಡಿಮೆ ಇಲ್ಲದಿದ್ದರೂ ಚಿಂತೆಯಿಲ್ಲ
ಪಕ್ಕದ ಮನೆಯ ಕಡ ಇದ್ದೇ ಇದೇ
ಕೂಡಿ ಬದುಕುವ ಕಲ್ಚರ್ ಇದೆ
ಇಲ್ಲಿನಂತೆ ಮೋಸದ ಜಾಲವಿಲ್ಲ
ಕಳ್ಳ ಬಂದರೂ ಚಿಂತೆಯಿಲ್ಲ
ಅಲ್ಲೇ ಡ್ರಾ ಅಲ್ಲೇ ಬಹುಮಾನ...

ವೈಫೈ ಯುಗದಲ್ಲೂ ಹೈಫೈ ಆಗಲಿಲ್ಲ
ಸಂಸ್ಕೃತಿ ಸಂಸ್ಕಾರಕ್ಕೆ ಆಧುನಿಕತೆ ಸಿಗಲಿಲ್ಲ
ಇಂಗ್ಲಿಷಿನ ಭಾಷೆ ನಾಲಿಗೆಗೆ ಬರಲಿಲ್ಲ
ಅದೇ ಜನ, ಅದೇ ಮನ
ಪ್ರೀತಿ ವಿಶ್ವಾಸದ ಆರಾಧಕರು
ದೇವರ ಪ್ರತಿನಿಧಿಗಳು....
                      
                     - ಪ್ರಕಾಶ್.ಎನ್.ಜಿಂಗಾಡೆ

Wednesday, 15 June 2016

ಕನಸುಗಳು

ಕನಸುಗಳು

ನಮಗೆ ಕನಸು ಬಿತ್ತು ಎನ್ನಿ ಆ ಕನಸಿಗೆ ಅರ್ಥ ಕೊಡುವವರು ಸಾಕಷ್ಟು ಜನರಿದ್ದಾರೆ. ಅದರಲ್ಲೂ ಮುಂಜಾನೆ ಬಿದ್ದ ಕನಸುಗಳು ನಿಜವೆಂದೇ ಭಾವಿಸುತ್ತೇವೆ. ಭಯಂಕರ ಕನಸುಗಳೇನಾದರೂ ಬಿದ್ದರೆ ಅದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುತ್ತೇವೆ... ಕೆಲವರು ಕನಸನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವರು ಕನಸನ್ನು ನಿಜ ಜೀವನದಂತೆ ಗಣನೆಗೆ ತೆಗೆದು ಕೊಳ್ಳುತ್ತಾರೆ.
ಮೊನ್ನೆ ನನ್ನ ಸ್ನೇಹಿತನ ಕನಸಿನಲ್ಲಿ ಅವನ ಅಣ್ಣನ ಒಬ್ಬಳು ಬಂದಿದ್ದಳಂತೆ. "ಚಿಕ್ಕಪ್ಪ ಪ್ಲೀಸ್ ನನ್ನನ್ನು ಕಾಪಾಡು.... ನನ್ನನ್ನು ಕಾಪಾಡು ನಾನು ತಂಬಾ ಕಷ್ಟದಲ್ಲಿದ್ದೇನೆ"
ಅಂತ ಗೋಗರೆಯುತ್ತಿದ್ದಳಂತೆ. ಆ ಕನಸು ಅಷ್ಟೇ. ಅದನ್ನು ಕನಸು ಅಂತಾನೆ ಪರಿಗಣಿಸಿದ ನನ್ನ ಸ್ನೇಹಿತ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟನು. ಒಂದೆರಡು ದಿನಗಳ ನಂತರ ಕನಸಿನಲ್ಲಿ ಕಂಡ ಆ ಹುಡುಗಿಯನ್ನು ಯಾರೋ ಸಾಯಿಸಿ ಬಿಟ್ಟಿದ್ದರು. ಆಕೆ ಕನಸಿನಲ್ಲಿ ಹೇಳಿಕೊಂಡಂತೆ ತುಂಬಾ ತೊಂದರೆಯಲ್ಲಿ ಸಿಲುಕಿದ್ದಳು. ನನ್ನ ಸ್ನೇಹಿತ ಈ ಘಟನೆ ಹೇಳಿದ ಮೇಲೆ ಕನಸನ್ನು ಕನಸಿನಂತೆಯೇ ಕಾಣುತ್ತಿದ್ದ ನನಗೆ ಕನಸಿನ ಬಗ್ಗೆ ಸ್ವಲ್ಪ ವಿಶೇಷ ಆಸಕ್ತಿ ಮೂಡಲಾರಂಭಿಸಿತು....
ಜರ್ಮನಿಯ ವಿಜ್ಞಾನಿಯಾದ ಕೊಕುಲೆಗೆ ಒಂದು ಸಮಸ್ಯೆಗೆ ಉತ್ತರ ಸಿಗಲಾರದೇ ಪರದಾಡುತ್ತಿದ್ದನು. ಬೆಂಜಿನ್ ಪರಮಾಣುವಿನಲ್ಲಿ ಏನಿರುತ್ತದ ಎಂದು ಕಂಡು ಹಿಡಿಯುವುದೇ ಅವನ ಸಮಸ್ಯೆಯಾಗಿತ್ತು. ಹೇಗೆ ಯೋಚಿಸಿ ಅಧ್ಯಯನ ನಡೆಸಿದರೂ ತನ್ನ ಸಮಸ್ಯೆಗೆ ಉತ್ತರ ಕಂಡು ಕೊಳ್ಳಲಾಗಲಿಲ್ಲ. ಆ ದಿನ ರಾತ್ರಿ ಕೊಕುಲೆಯ ಕನಸಿನಲ್ಲಿ ಒಂದು ಹಾವು ತನ್ನ ಬಾಲವನ್ನೇ ಕಚ್ಚಿಕೊಂಡಂತಹ ಕನಸು ಕಂಡನಂತೆ. ಈ ಕನಸನ್ನು ಅರ್ಥೈಸಿಕೊಂಡಾಗ ಕೊಕುಲೆಗೆ ತನ್ನ ಸಮಸ್ಯೆಯ ಉತ್ತರ ದೊರೆಯಿತಂತೆ. ಮುಚ್ಚಿದ ಸರಪಳಿಯ ಕಾರ್ಬನ್ನಿನ ರಚನೆಯೇ ಬೆಂಜಮಿನ್ ಪರಮಾಣುವಿನ ಸಂರಚನೆಯಾಗಿತ್ತು. ಅಧ್ಯಯನದಿಂದ, ಸಂಶೋದನೆಯಿಂದ ತಿಳಿಯದ ವಿಷಯ ಕೊಕುಲೆಗೆ ಕನಸಿನಿಂದ ಉತ್ತರ ಸಿಕ್ಕಿತ್ತು. ಈ ತರಹ ಕನಸಿನಲ್ಲಿ ಉತ್ತರ ಕಂಡು ಕೊಂಡವರು ಇನ್ನೂ ಹಲವರಿದಿದ್ದಾರೆ. 1869 ರಲ್ಲಿ ಡಿಮೆಟ್ರಿ ಮೆಂಡಲೀವ್ ಎಂಬ ವಿಜ್ಞಾನಿ ಮೂಲವಸ್ತುವಿನ ಆಧುನಿಕ ಆವರ್ತಕ ಕೋಷ್ಠಕವನ್ನು ರಚಿಸಲು ಸಾಕಷ್ಟು ಪರದಾಡಿದ್ದನಂತೆ. ಆವರ್ತಕ ಕೊಷ್ಠಕದ ಯೋಚನೆಯಲ್ಲೇ ತೊಡಗಿದ ಮೆಂಡಲೀವ್ಗೆ ಉತ್ತರ ಸಿಗಲಿಲ್ಲ. ಆ ದಿನ ರಾತ್ರಿ ಕನಸಿನಲ್ಲಿ ಕಂಡ ಆವರ್ತಕ ಕೋಷ್ಠಕವನ್ನೇ ಕಾಗದದಲ್ಲಿ ಬರೆದು ನೋಡಿದನಂತೆ. ಅದನ್ನೇ ಪ್ರಸ್ತುತ ಪಡಿಸಿ ಆಧುನಿಕ ಆವರ್ತಕ ಕೋಷ್ಠಕ ರಚಿಸಿದ್ದನಂತೆ. ಇನ್ನು ಪ್ರಸಿದ್ಧ ವಿಜ್ಞಾನಿಗಳಾದ ಥಾಮಸ್ ಆಲ್ವ ಎಡಿಸನ್ನು ಬಲ್ಪ್ ಕಂಡುಹಿಡಿಯುವಾಗಲೂ, ಐನ್ ಸ್ಟಿನ್ ರವರು ಸಾಫೇಕ್ಷ ಸಿದ್ಧಂತ ಕಂಡು ಹಿಡಿಯುವಾಗಲೂ ಅವರಿಗೆ ಕನಸೇ ಸಹಕಾರಿಯಾಗಿತ್ತು. ಹಾಗೆಂದ ಮಾತ್ರಕ್ಕೆ ಅವರು ಪ್ರಯತ್ನ ಪಡಲಿಲ್ಲ ಎಂಬ ಅರ್ಥವಲ್ಲ. ನಮ್ಮ ನಿದ್ರಾ ಚಕ್ರವು ನಮ್ಮ ಅಂತರ್ಗತದ ಭಾಗವೇ ಆಗಿರುವುದರಿಂದ ಅವರು ಪಡುತ್ತಿರುವ ಪ್ರಯತ್ನಗಳು ಕನಸಿನಲ್ಲಿ ಆವರಿಸಿಕೊಂಡು ಉತ್ತರ ಪಡೆದುಕೊಂಡರು. ಅವರು ಕಂಡ ಆ ಕನಸುಗಳು ನಮ್ಮಂತ ಸಾಮಾನ್ಯರು ಕಾಣುವುದು ಸಾದ್ಯವಿಲ್ಲ....
ನಮ್ಮ ಜೀವನದ ಎಲ್ಲಾ ಅಂತರ್ಗತ ವಿಷಯಗಳೇ ಕನಸುಗಳು. ಎಷ್ಟೋ ವಿಷಯಗಳಿಗೆ ಕನಸುಗಳೇ ಉತ್ರವಾಗಿರುತ್ತದೆ. ಮೊನ್ನೆ ನನ್ನ ವಿಧ್ಯಾರ್ಥಿಯೊಬ್ಬ ನೋಟ್ಸ್ ಬರೆಯಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಒಂದೆರಡು ಏಟು ಹಾಕಿ ಶಿಕ್ಷೆ ಕೊಟ್ಟಿದ್ದೆ. ಆತನಿಗೆ ಎಷ್ಟು ಕೋಪ ಬಂದಿತ್ತೆಂದರೆ ನನ್ನನ್ನು ಸಿಟ್ಟಿನಿಂದ ನೋಡಿದ. ಮಾರನೆಯ ದಿನ ಆತ ಕನಸಿನಲ್ಲಿ ಕಂಡ ವಿಷಯವನ್ನು ತನ್ನ ಸ್ನೇಹಿತನ ಬಳಿ ಹೇಳಿಕೊಳ್ಳುತ್ತಿದ್ದ. "ಲೋ ಹರ್ಷ... ನಿನ್ನೆ ಕನಸಿನಲ್ಲಿ ಪ್ರಕಾಶ್ ಸರ್ ರನ್ನು ನಾನು ಸಿಕ್ಕಾ ಪಟ್ಟೆ ಹೊಡೆಯುತ್ತಿದ್ದೆ ಕಣೊ"
ಆ ವಿಷಯ ನನ್ನ ಕಿವಿಗೂ ಬಿತ್ತು ನಾನು ನಕ್ಕು ಸುಮ್ಮನಾದೆ.
ವಾಸ್ತವವಾಗಿ ಸಾಧ್ಯವಾಗದ ಎಷ್ಟೋ ವಿಷಯಗಳನ್ನು ನಾವು ನಮ್ಮ ಕನಸಿನಿಂದ ಈಡೇರಿಸಿಕೊಳ್ಳುತ್ತೇವೆ. ನನ್ನ ಮೇಲಿನ ಕೋಪವನ್ನು ಆ ವಿಧ್ಯಾರ್ಥಿ ಕನಸಿನ ಮೂಲಕ ಈಡೇರಿಸಿಕೊಂಡು ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳುತ್ತಾನೆ. ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳಲು ಕನಸುಗಳು ಎಷ್ಟೋ ಸಹಾಯ ಮಾಡುತ್ತವೆ. ಕನಸು ಕಾಣದ ವ್ಯಕ್ತಿ ಮಾನಸಿಕ ಅಸಮತೋಲನದಿಂದ ಇದ್ದಾನೆ ಎಂದಾರ್ಥವಲ್ಲ. ಪ್ರತಿಯೊಬ್ಬರೂ ಕನಸನ್ನು ಕಂಡೇ ಕಾಣುತ್ತಾರೆ. ಕನಸು ಕಾಣಲಿಲ್ಲವೆಂದರೆ ಮನುಷ್ಯ ಹುಚ್ಚನಾಗುತ್ತಾನೆ. ಆದರೆ ನಾವು ಕಂಡ ಎಷ್ಟೋ ಕನಸುಗಳು ನಮ್ಮ ನೆನಪಿಗೆ ಬರುವುದೇ ಇಲ್ಲ. ಶೇಕಡ ತೊಂಬತ್ತರಷ್ಟು ಕನಸುಗಳು ನೆನಪಿಗೆ ಬಾರದೇ ಹಾಗೆಯೇ ಜಾರಿ ಹೋಗಿ ಬಿಡುತ್ತವೆ. ಒಬ್ಬ ಮನುಷ್ಯ ತಮ್ಮ ಜೀವಿತವಧಿಯಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಅವಧಿಯಷ್ಟು ಕನಸು ಕಾಣುತ್ತಾನಂತೆ. ಕನಸುಗಳು ನಮ್ಮ ಮನಸ್ಸನ್ನು ಸ್ವಾಸ್ಥ್ಯವಾಗಿಡುತ್ತವೆ. ನಾವು ಕಾಣುವ ಕನಸುಗಳು ಭಯಂಕರವೋ ಅಥವಾ ವಿಚಿತ್ರವೋ ಆಗಿದ್ದರೆ. ಅದಕ್ಕೆ ಕೆಲವು ಘಟನೆಗಳು ಕಾರಣವಾಗಿರಬಹುದು. ಕನಸುಗಳು ನಮ್ಮ ಜೀವನದಲ್ಲಿ ನಡೆದ ಘಟನೆಗಳ ಪ್ರತಿಬಿಂಬಗಳು. ಮೆದುಳಿನ ಮೂಲೆಯಲ್ಲಿ ಸ್ತಪ್ತವಾಗಿರುವ ಇಂತಹ ಘಟನಾವಳಿಗಳು ಆಗಾಗ ಕನಸಿನ ರೂಪದಲ್ಲಿ ಮರುಕಳಿಸಬಹುದು.....
ಇನ್ನು ಕೆಲವರು ಕನಸಿನ ಕೆಲವು ಘಟನೆಗಳು ವಾಸ್ತವದಂತೆ ಫೀಲ್ ಆಗುತ್ತವೆ. ಮೊನ್ನೆ ನನ್ನ ಸ್ನೇಹಿತ ತನ್ನ ಅಣ್ಣನ ಮನೆಗೆ ಹೋದಾಗ ಅವರ ಮಗಳು ಮತ್ತೆ ಕನಸಿನಲ್ಲಿ ಬಂದಿದ್ದಳಂತೆ. ಸತ್ತು ಹೋದ ಆಕೆ ಮತ್ತೆ ಬಂದು ತಾನು ಮಲಗಿದ ಕಡೆ ಬಂದು ತಲೆ ಸವರುತ್ತಿದ್ದಳಂತೆ. ತಲೆಯನ್ನು ಸವರಿದಂತಹ ಸ್ಪರ್ಶ ಜ್ಞಾನದ ಅನುಭವಗಿದ್ದರಿಂದ ನನ್ನ ಸ್ನೇಹಿತ ಬೆಚ್ಚಿ ಕೂಗಿಕೊಂಡು ಎದ್ದನಂತೆ, ಸುತ್ತಲೂ ಯಾರೂ ಕಾಣಿಸಲಿಲ್ಲ. ಪ್ರೀತಿಗೆ ಪಾತ್ರರಾಗಿರುವವರು ಕನಸಿನಲ್ಲಿ ಬರುವುದು ಮಾತ್ರವಲ್ಲ ಆತ್ಮವೂ ಸುತ್ತಮುತ್ತಲು ಸಂಚರಿಸುತ್ತಿತ್ತಂತೆ. ಆತ್ಮ ಮತ್ತು ಕನಸಿಗೆ ಏನಾದರು ಸಂಬಂಧ ಇರಬಹುದೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತಿರುತ್ತದೆ. ಕನಸು ನಿಜವೆಂದು ನಂಬುವ ನಾವು ಕನಸಿನಂತೆಯೇ ಆತ್ಮಗಳು ಸಹ ನಮ್ಮ ಸುತ್ತಮುತ್ತ ಸಂಚರಿಸುವುದನ್ನು ಅನುಭವಿಸುತ್ತೇವೆ...
ನನಗೆ ಆಗ ಇಪ್ಪತ್ತೊಂದು ವರ್ಷ ನನ್ನ ವಿಧ್ಯಾಭ್ಯಾಸವೆಲ್ಲಾ ಮುಗಿದಿತ್ತು. ಸರ್ಕಾರಿ ಕೆಲಸ ಸಿಗುವ ವರೆಗೂ ಊರಲ್ಲೇ ಇದ್ದು ಏನಾದರೂ ಕೆಲಸ ಮಾಡಬೇಕು ಎಂದು ಮನೆಯಲ್ಲಿ ತಾಕೀತು. ನಾನು ಮಾಡಿದ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಹೋಗಿ ಯಾವುದಾದರೂ ಖಾಸಗಿ ಕಂಪನಿಲ್ಲಿ ಕೆಲಸಕ್ಕೆ ಸೇರಿ ಸಂಪಾದನೆ ಮಾಡಬಹುದಿತ್ತು. ಆದರೆ ಮನೆಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಇರುವ ಟೈಲರ್ ಅಂಗಡಿಯಲ್ಲಿ ನಾನು ಎರಡು ವರ್ಷದ ವರೆಗೆ ಟೈಲರಿಂಗ್ ವೃತ್ತಿ ಮಾಡಿದೆ. ಒಂದೇ ಅಂಗಡಿಯಲ್ಲಿ ನಾನು ಮತ್ತು ಇಬ್ಬರು ಅಣ್ಣಂದಿರ ಅವಲಂಬನೆ.. ಸಂಸಾರ ದೊಡ್ಡದಾದಂತೆ ಒಂದೇ ಅಂಗಡಿಯಲ್ಲಿ ಎಲ್ಲರೂ ಅವಲಂಬಿತವಾಗಿರುವುದು ಸಾಧ್ಯವಿರಲಿಲ್ಲ. ನಾನು ಅಂಗಡಿಯಿಂದ ಹೊರಬಂದು ಬೇರೆ ವೃತ್ತಿಯಲ್ಲಿ ತೊಡಗುವುದು ಅನಿವಾರ್ಯವಾಗಿತ್ತು. ನನ್ನ ಜೊತೆ ಓದಿದ ಒಂದಿಬ್ಬರು ಲೇವಾದೇವಿ ವ್ಯೆವಹಾರ ಮಾಡೋಣ ಎಂಬ ಸಲಹೆ ನೀಡಿದರು. ಇದರ ಪ್ರತಿಫಲವಾಗಿ ಫೈನಾನ್ಸ್ ಕಂಪನಿಯೊಂದು ಪಾರ್ಟ್ನರ್ ಶಿಪ್ ನಲ್ಲಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಇಂತಿಷ್ಟು ಹಣ ಹೂಡುವುದಾಗಿ ಹೇಳಿದ ಗೆಳೆಯರು ಅಲ್ಪ ಸ್ವಲ್ಪ ಹಣಹೂಡಿ ಸುಮ್ಮನಾಗಿ ಬಿಟ್ಟರು.
ಇರುವ ಅಲ್ಪ ಸ್ವಲ್ಪ ಹಣದಿದಂಲೇ ಫೈನಾನ್ಸ ಆರಂಭಿಸಿದೆವು. ಅದರೆ ನನ್ನ ಈ ಗೆಳೆಯರು ಬಂಡವಾಳ ಹಾಕಿ ವ್ಯವಹಾರ ಬೆಳೆಸುವ ಬದಲು. ತಮ್ಮ ತಮ್ಮ ಸಂಬಂದಿಕರನ್ನು ಕರೆದುಕೊಂಡು ಬಂದು ತಾವು ಮಾಡಿದ ವೈಯುಕ್ತಿಕ ಸಾಲಗಳಿಗೆ ಕಂಪನಿಯಿಂದ ಸಾಲ ಪಡೆದ ಹಾಗೆ ಪತ್ರಗಳನ್ನು ತಯಾರಿಸಿ ಅವರಿಗೆ ಹಣ ನೀಡುತ್ತಿದ್ದರು. ಫೈನಾನ್ಸ್ ವ್ಯವಹಾರವನ್ನು ನೋಡಿಕೊಳ್ಳುವ ಜವಬ್ದಾರಿ ಸಂಪೂರ್ಣ ನನಗೆ ವಹಿಸಲಾಗಿತ್ತು. ಫೈನಾನ್ಸ್ ನಲ್ಲಿ ಕೂರುವುದು ಲೆಕ್ಕಾಚಾರವನ್ನೆಲ್ಲಾ ಬರೆಯುವುದು ನಾನೇ ನಿರಿವಹಿಸುತ್ತಿದುದರಿಂದ ಸಾರ್ವಜನಿಕರೆಲ್ಲಾ ಫೈನಾನ್ಸ್ ನನ್ನದೇ ಎಂದು ನಂಬಿದ್ದರು. ಇಂತವರ ಸಹಭಾಗಿತ್ವದಿಂದ ಫೈನಾನ್ಸ್ ಮುಳುಗುವ ಹಂತಕ್ಕೆ ಬಂದಿತ್ತು. ಜನರ ಷೇರ್ ಹಣ ಬೇರೆ ನಮ್ಮ ಮೇಲಿತ್ತು. ನಾನು ಒಂದು ರೀತಿಯಲ್ಲಿ ಯಾರಿಗೂ ಹೇಳಲಾರದಂತಹ ಸಂಕಷ್ಟಕ್ಕೆ ಸಿಲುಕಿದ್ದೆ. ಫೈನಾನ್ಸ್ ನ ಈ ಸ್ಥಿತಿ ಹೇಳಿಕೊಂಡಿದ್ದರೆ ಜನ ತಾವು ಹಾಕಿರುವ ಷೇರು ಹಣಕ್ಕೆ ತಕ್ಷಣವೇ ನನ್ನನ್ನು ಪೀಡಿಸುತ್ತಿದ್ದರು. ಪಾರ್ಟ್ನರ್ ಗಳ ಈ ಅವ್ಯೆವಹಾರಕ್ಕೆ ಕಡಿವಾಣ ಹಾಕಿ. ಜನರ ಷೇರು ಹಣವನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತಹ ಒಂದು ದೊಡ್ಡ ಜವಬ್ದಾರಿ ನನ್ನ ಮೇಲಿತ್ತು. ಆದರೆ ಇದು ಕಷ್ಟದ ಕೆಲಸವಾಗಿತ್ತು. ಸಾರ್ವಜನಿಕರಿಂದ ಪಡೆದ ಷೇರು ಹಣ ಸಾರ್ವಜನಿಕರಿಗೆ ಸಾಲವಾಗಿ ನೀಡಲಾಗಿತ್ತು. ಫೈನಾನ್ಸ್ ನಲ್ಲಿ ಪಾರ್ಟ್ನರ್ ಗಳ ಈ ರೀತಿ ಅವ್ಯವಹಾರ ಯಾರಲ್ಲಿಯೂ ಹೇಳಿಕೊಳ್ಳುವಂತಿರಲಿಲ್ಲ. ನಾನು ಒಂದು ರೀತಿ ಭೇಧಿಸಲಾಗದ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿದ್ದೆ.. ಒಂದು ಅದನ್ನು ಭೇದಿಸಿ ಹೊರಬರಬೇಕಿತ್ತು... ಇಲ್ಲವೇ ಅದೇ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಿತ್ತು. ನನಗೆ ಪ್ರಾಣ ಕಳೆದುಕೊಳ್ಳಲು ಮನಸ್ಸಾಗಲಿಲ್ಲ. ಏಕೆಂದರೆ ನಾನು ಓದಿದ ವಿದ್ಯಾಭ್ಯಾಸವೇ ನನ್ನಲ್ಲಿ ಅತಿಯಾದ ಆತ್ಮ ವಿಶ್ವಾಸವನ್ನು ತುಂಬಿತ್ತು. ಗೆಳೆಯರನ್ನು ನಂಬಿದ ತಪ್ಪಿಗೆ ಒಂದೆರಡು ವಾರ ಭದ್ರಾನಾಲೆಯ ಕಟ್ಟೆಯ ಮೇಲೆ ಕುಳಿತು ಒಬ್ಬನೇ ಅತ್ತು ಅತ್ತು ಮನಸನ್ನು ಹಗುರ ಮಾಡಿಕೊಳ್ಳುತ್ತಿದ್ದೆ. ಮನಸು ಸಂಪೂರ್ಣ ಹಗುರವಾದ ಮೇಲೆ ನನ್ನ ಫೈನಾನ್ಸ್ ನಲ್ಲಿ ಸಹಭಾಗಿಯಾದ ಗೆಳೆಯರನ್ನೂ ಯಾವ ಮೀನ ಮೇಷವೂ ಏಣಿಸದೇ ಕಿತ್ತೆಸೆದೆ. ಅಲ್ಲಿಂದ ಮತ್ತೊಂದು ಕಷ್ಟದ ಅಧ್ಯಾಯ ಪ್ರಾರಂಭವಾಯಿತು ಒಬ್ಬನೇ ಇರುವುದರಿಂದ ಹಣದ ಕೊರತೆಯುಂಟಾಯಿತು. ಫೈನಾನ್ಸ್ ಗೆ ಮತ್ತಿಬ್ಬರು ಒಳ್ಳೆಯ ಗೆಳೆಯರನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿತ್ತು. ನನ್ನ ಸಂಭಂದಿಕರೇ ಒಂದಿಬ್ಬರು ಸಿಕ್ಕರು. ಫೈನಾನ್ಸ್ ಗೆ ಬಂಡವಾಳವನ್ನೂ ಹಾಕಿದರು. ಅಲ್ಲಿ ಅವರಲ್ಲಿ ಬೇಗನೇ ಹಣ ಮಾಡಬೇಕೆಂಬ ದುರಾಸೆಯೇ ಹೆಚ್ಚಾಗಿತ್ತು. ಅಲ್ಲಿ ಮತ್ತೊಂದು ರೀತಿಯ ಸಮಸ್ಯೆಗೆ ಸಿಲುಕಿದೆ. ನಮ್ಮವರೇ ನನಗೆ ಮುಳ್ಳಾದರು. ಅಲ್ಲಿಯೂ ವ್ಯವಹಾರ ಬೆಳೆಯಲಿಲ್ಲ. ಅವರಿಗೂ ಬಂಡವಾಳ ವಾಪಸ್ ಕೊಟ್ಟೆ. ನಾನು ಫೈನಾನ್ಸ್ ಮುಚ್ಚುವಂತೆಯೂ ಇರಲಿಲ್ಲ ನಡೆಸಲೂ ಸಾಧ್ಯವಿರಲಿಲ್ಲ. ನಾನು ಚಕ್ರವ್ಯೂಹದಲ್ಲಿ ಸಿಲುಕಿದ್ದೆ. ಆ ಚಕ್ರವ್ಯೂಹದಲ್ಲಿ ಸೈನಿಕರ ಬದಲಾಗಿ ಕತ್ತಿ ಹಿಡಿದು ನಿಂತಿರುವ ನನ್ನ ಗ್ರಾಹಕರೇ ಕಾಣುತ್ತಿದ್ದರು.. ಬೇರೆ ದಾರಿನೇ ಇಲ್ಲ ಬೇಧಿಸಿ ಹೊರಬರಬೇಕು...ಈ ವ್ಯೂಹವನ್ನು ಬೇಧಿಸುವ ದಾರಿಯಲ್ಲಿ ಅನೇಕ ಜಗಳಗಳು ನಡೆದವು... ಚಿಕ್ಕ ಬಾಲಕ ಅಭಿಮನ್ಯೂವಿನಂತೆ ಒಬ್ಬನದೇ ಹೋರಾಟ. ಯಾರೂ ಇಲ್ಲ ಶಕ್ತಿ ಇದ್ದಷ್ಟು ಸೆಣಸಿದೆ. ಗೆದ್ದೆ. ಆದರೆ ಶರೀರಕ್ಕಾದ ಗಾಯಕ್ಕಿಂತ ಮಾನಸಿಕ ಆಘಾತ ಅತಿಯಾಗಿತ್ತು. ನಾನು ಈ ಜಾಲಕ್ಕೆ ಸಿಲುಕ್ಕಿದ್ದರಿಂದ ಮನೆಯಲ್ಲಿ ನನ್ನನ್ನು ನೋಡುತ್ತಿದ್ದ ವಿಧಾನವೇ ಬೇರೆ ರೀತಿಯಲ್ಲಿತ್ತು. ನನಗೆ ಬಂದ ಒಂದೆರಡು ಮದುವೆಯ ಸಂಬಂಧಗಳು ಮುರಿದು ಬಿದ್ದವು. ಮತ್ತೆ ಕೆಲವನ್ನು ನಾನೇ ಮುರಿದು ಹಾಕಿದೆ. ನನಗೆ ಮದುವೆಗಿಂತ ಹೆಚ್ಚಾಗಿ ಸುತ್ತಲೂ ನನಗರಿವಿಲ್ಲದಂತೆ ಕಟ್ಟಿಕೊಂಡಿದ್ದ ಮೋಸದ ವ್ಯೂಹದಿಂದ ಹೊರಬರಬೇಕಿತ್ತು. ನಾನು ಯಾರಿಗೂ ನನ್ನ ಮನಃಸ್ಥಿತಿಯನ್ನು ಹೇಳಿಕೊಳ್ಳದೇ ನನಗೆ ಬಂದ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾ ಹೋದೆ. ಹೋರಾಟ ಮಾಡಿ ಗೆದ್ದೆ. ಸಾರ್ವಜನಿಕರ ಷೇರು ಹಣವೆಲ್ಲಾ ಹಿಂದಿರುಗಿಸಿದೆ. ಇನ್ನು ಅಲ್ಪ ಸ್ವಲ್ಪ ಉಳಿದವರು ಗಲಾಟೆ ಮಾಡಿದರು. ಮನೆಯ ಹೊರಗೆ ಬಂದರೆ ಜನಗಳಿಂದ ಜಗಳ. ಮನೆಗೆ ಹೋದರೆ ಒಳಗಿನವರ ಜಗಳ... ನನ್ನ ಮೆದುಳು ತಡೆದುಕೊಳ್ಳಲು ಸಾಧ್ಯವಿಲ್ಲದಂತಹ ನೋವುಗಳು ಸಹಿಸುತ್ತಾ ಬಂದವು. ಇವು ಎಲ್ಲೋ ನನ್ನ ಮೆದುಳಿನ ಸುಪ್ತಾವಸ್ತೆಯಲ್ಲಿ ಸೇರಿಕೊಂಡು ಕನಸಿನ ರೂಪದಲ್ಲಿ ಕಾಡಿದ್ದೂ ಉಂಟು. ಹತ್ತಿರದ ಸಂಬಂಧಿಗಳಿಂದ ಕುಹಕ ಮಾತುಗಳನ್ನು ಕೇಳಿದೆ ಈ ಎಲ್ಲಾ ಆಘಾತಗಳು ಈಗಲೂ ನನ್ನ ಮನಸಿನಲ್ಲಿ ಸುಪ್ತ ಪ್ರಜ್ಞಾವಸ್ತೆಯಲ್ಲಿ ಸೇರಿಕೊಂಡವು. ಈ ತರಹದ ಯಾವುದಾದರೊಂದು ಆಹಿತಕರವಾದ ಘಟನೆಗಳು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ...
ಈ ಮೇಲಿನ ನನ್ನ ಉದಾಹರಣೆಯನ್ನು ನೋಡಿದಾಗ ಪ್ರೌಢಾವಸ್ತೆಯಲ್ಲಿದ್ದ ನನ್ನ ಮೆದುಳು ಈ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿತ್ತು. ಇನ್ನು ಕೆಲವರ ಜೀವನದಲ್ಲಿ ಬಾಲ್ಯದ ಹಂತದಲ್ಲಿಯೇ ಅಹಿತಕರವಾದ ನೋವಿನ ಘಟನೆಗಳು ನಡೆದು ಬಿಡುತ್ತವೆ. ಅಚಾತುರ್ಯವಾದ ರಕ್ತಪಾತ, ತಂದೆ ತಾಯಿಯರ ಅಗಲುವಿಕೆ, ಅವಮಾನದಿಂದ ಕೂಡಿದ ಬಡತನದ ಜೀವನ, ಹೀಗೆ ಇತ್ಯಾದಿ ನೋವುಗಳನ್ನು ಬಾಲ್ಯದಿಂದಲೇ ಸಹಿಸಿಕೊಂಡು ಬಂದವರು ಭಾರತದಲ್ಲಿ ಸಾಕಷ್ಟು ಜನರಿದ್ದಾರೆ. ಚಿಕ್ಕ ಮಕ್ಕಳಲ್ಲಿಯ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಅಲ್ಪ ಪ್ರಮಾಣದ ನೋವನ್ನು ಸಹಿಸುವ ಶಕ್ತಿಯನ್ನು ಮಾತ್ರ ಹೊಂದಿರುತ್ತದೆ. ಮೆದುಳು ತಡೆದುಕೊಳ್ಳುವ ಶಕ್ತಿಗಿಂತ ನೋವಿನ ಪ್ರಮಾಣ ಅತಿಯಾದಾಗ ಮನಸು ಅನಾರೋಗ್ಯವಾಗಿ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದ ಈ ನೋವುಗಳು ಸುಪ್ತಾವಸ್ತೆಯಲ್ಲಿ ಹಾಗೆಯೇ ಉಳಿದು ಬಿಡುತ್ತವೆ. ಮುಂದೆ ದೊಡ್ಡವರಾದಾಗಲೂ ಸುಪ್ತಾವಸ್ತೆಯಲ್ಲಿ ಉಳಿದಿರುವ ಈ ಘಟನೆಗಳು ಕೆಟ್ಟ ಕನಸುಗಳ ಮೂಲಕ ಹೊರ ಬರುತ್ತವೆ. ಯಾರಾದರು ಸತ್ತಾಗ ಆತ್ಮಗಳು ರಾತ್ರಿಯ ವೇಳೆ ತಮ್ಮ ಹತ್ತಿರವೇ ಬಂದಂತೆ. ದೆವ್ವಗಳನ್ನು ನೋಡಿದ ಅನುಭವ ಹೀಗೆ ಇತ್ಯಾದಿ ಭಯಾನಕ ಘಟನೆಗಳಂತೆ ಕಾಣುತ್ತವೆ...
ನನಗೂ ಆಗಾಗ ನನ್ನ ಜೀವನದ ಈ ಕೆಟ್ಟ ಅನುಭವವು ಆಗಾಗ ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವಷ್ಟು ಭಯಾನಕವಾಗಿರುವುದಿಲ್ಲ. ಏಕೆಂದರೆ ಈ ಘಟನೆ ನಡೆದಾಗ ಮೆದುಳು ಸಂಪೂರ್ಣವಾಗಿ ಬೆಳೆದಿತ್ತು. ನೋವು ಸಹಿಸಿಕೊಳ್ಳುವ ಶಕ್ತಿ ಪಡೆದುಕೊಂಡಿತ್ತು. ಅದೇ ಘಟನೆ ಜೀವನದ ಪಾಠವಾಗಿ ನನ್ನನ್ನು ಎತ್ತರಕ್ಕೆ ಬೆಳೆಸಿದೆ. ಆದರೆ ಚಿಕ್ಕ ಮಕ್ಕಳಲ್ಲಿ ಅಂದರೆ ಐದು ವರ್ಷದಿಂದ ಹದಿನೆಂಟು ವರ್ಷದವರೆಗೆ ನಮ್ಮ ಮೆದುಳು ಸಿಮಿತ ಪ್ರಮಾಣದಷ್ಟು ಮಾತ್ರ ನೋವನ್ನು ಸಹಿಸಿಕೊಳ್ಳುತ್ತದೆ. ಅತಿಯಾದ ಭಯಾನಕ ಕೃತ್ಯ ಮತ್ತು ನೋವುಗಳನ್ನು ಸಹಿಸಿಕೊಳ್ಳಲು ಶಕ್ತವಾಗಿರುವುದಿಲ್ಲ. ಒಂದನೇ ತರಗತಿಯಲ್ಲಿ ಓದುವ ಮಗು ಅದರ ಬುದ್ಧಿ ಸಾಮರ್ಥಕ್ಕನುಗುಣವಾಗಿ ಪಠ್ಯಕ್ರಮವನ್ನು ಮಾತ್ರ ರಚಿಸಲಾಗುತ್ತದೆ. ಆ ಮಗುವಿಗೆ ಐದನೇ ತರಗತಿಯ ಬುದ್ಧಿ ಸಾಮರ್ಥ್ಯದ ಪಠ್ಯಕ್ರಮವನ್ನು ಒದಗಿಸಲು ಸಾಧ್ಯವಿಲ್ಲ. ಹಾಗೆಯೇ ಐದನೇ ತರಗತಿಯ ಮಗುವಿಗೆ ಹತ್ತನೇ ತರಗತಿಯ ಪಠ್ಯ ಕೊಡಲು ಸಾಧ್ಯವಿಲ್ಲ. ಹಾಗೆಯೇ ನೋವಿನ ವಿಷಯದಲ್ಲಿಯೂ ಅಷ್ಟೆ ಆಯಾ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ನಮ್ಮ ಮೆದುಳು ನೋವನ್ನು ಪಡೆದುಕೊಳ್ಳುವ ಶಕ್ತಿ ಇರುತ್ತದೆ. ಅದಕ್ಕಿಂತ ನೋವು ಬವಣೆಗಳು ಹೆಚ್ಚಾದಾಗ ಮನಸ್ಸು ಬಳಲಿ ಹೋಗುತ್ತದೆ. ಭಯ, ಹಠ, ಉಧ್ವೇಗ, ಹತಾಷೆ, ಮುಂತಾದ ಅನಾರೋಗ್ಯಕರವಾದಂತಹ ಅಂಶಗಳು ನಮ್ಮ ಮೆದುಳಿನ ಸುಪ್ತಾವಸ್ತೆಯಲ್ಲಿ ಸಂಗ್ರಹವಾಗಿ ಆಗಾಗ ಕೆಟ್ಟ ಕನಸಾಗಿಯೂ ಕಾಡಬಹುದು.
ಪ್ರತಿಯೊಬ್ಬ ಮನುಷ್ಯನ ಆಲೋಚನೆಗಳು ಎರಡು ಸ್ತರಗಳಲ್ಲಿ ನಡೆಯುತ್ತದೆ. ಒಂದು ಸುಪ್ತಾವಸ್ತೆ ಮತ್ತೂಂದು
ಜಾಗೃತಾವಸ್ತೆ. ಪ್ರಾಯ್ಡ ಮತ್ತು ಯಂಗ್ ಎಂಬ ಮನೋ ವಿಜ್ಞಾನಿಗಳು ಈ ರೀತಿ ಮನೋರೋಗದಿಂದ ಬಳಲುತ್ತಿದ್ದರ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿದರು. ಅವರು ಕಂಡ ಕನಸುಗಳನ್ನು ಬರೆದುಕೊಂಡರು. ಅನೇಕರಲ್ಲಿ ತಾವು ಬಾಲ್ಯದಲ್ಲಿ ಅನುಭವಿಸಿದ ನೋವಿನ ಘಟನೆಗಳಿಗೂ ತಾವು ಕಂಡ ಕನಸುಗಳಿಗೂ ಸ್ವಾಮ್ಯತೆಯನ್ನು ಗಮನಿಸಿದರು. ಸುಪ್ತಾವಸ್ತೆಯಲ್ಲಿರುವ ದಮನಿತ ಆಕಾಂಕ್ಷೆಗಳು ಈ ರೀತಿ ಕನಸಿನ ರೂಪದಲ್ಲಿ ಮೂಡುತ್ತವೆ. ಈ ದಮನಿತ ಘಟನೆಗಳು ಜಾಗೃತಾವಸ್ತೆಗೆ ಬರುವುದೇ ಇಲ್ಲ. ವಿವೇಚನಾ ಶಕ್ತಿ ತುಂಬಾ ಬಲಶಾಲಿಯಾದಾಗ ಕೆಲವು ದಮನಿತ ಘಟನೆ ಆಕಾಂಕ್ಷೆಗಳು ಕೆಟ್ಟ ಕನಸಿನ ರೂಪದಲ್ಲೋ ಅಥವಾ ದೆವ್ವ ಪ್ರೇತವನ್ನು ಕಂಡಂತಲೋ ಬೆಚ್ಚಿ ಹೆದರುತ್ತೇವೆ....
ಎಷ್ಟೋ ಸಲ ಕೆಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಕೆಲವು ವಿಚಿತ್ರ ಘಟನೆಗಳನ್ನು ನನ್ನ ಬಳಿ ಹೇಳಿಕೊಂಡದ್ದೂ ಉಂಟು. ಅಥವಾ ತರಗತಿಯಲ್ಲಿ ನಾನು ಪಾಠ ಮಾಡುತ್ತಿರುವಾಗ ಅತೀ ಕಡಿಮೆ ಆತ್ಮ ವಿಶ್ವಾಸ ಹೊಂದಿದ ಮಕ್ಕಳನ್ನೂ ಗಮನಿಸಿದ್ದೇನೆ. ಕೆಲವು ಮಕ್ಕಳು ಅನಾರೋಗ್ಯಕರವಾದ ಮನೆಯ ವಾತಾವರಣದಲ್ಲಿ ಬೆಳೆಯುತ್ತಿರುವುದನ್ನೂ ಕಂಡಿದ್ದೇನೆ.. ಇಂತವರಿಗೆಲ್ಲಾ ನನ್ನ ಸಲಹೆ ಏನೆಂದರೆ ನಿನ್ನ ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಭಯ, ನೋವು, ಹೆದರಿಕೆ, ಮುಂತಾದ ಋಣಾತ್ಮಕ ಮತ್ತು ನಿಷೇದಾತ್ಮಕ ಭಾವನೆಗಳನ್ನು ಅತಿಯಾಗಿ ಹೇರಬೇಡಿ. ಅಂತಹ ಘಟನೆಗಳು ಮನೆಲ್ಲಿ ನಡೆದರೂ ಮಕ್ಕಳ ಮುಂದೆ ಬುದ್ಧಿವಂತಿಕೆಯಿಂದ ವರ್ತಿಸಿ. ಆದಷ್ಟು ಹದಿನೆಂಟು ವರ್ಷಗಳ ವರೆಗೆ ನಿಮ್ಮ ಮಕ್ಕಳ ಮನಸ್ಸನ್ನು ಸಂತೋಷಕರವಾಗಿರುವಂತೆ ನೋಡಿಕೊಳ್ಳಿ. ಆಟ ಪಾಠ, ಹೊಗಳಿಗೆ, ಶಿಕ್ಷೆ, ನೋವುಗಳನ್ನು ಸಹ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಪರಿಚಯಿಸಿರಿ. ಇಷ್ಟು ಮಾಡಿದರೆ ಸಾಕು ನಿಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಲ್ಲರು....

ಪ್ರಕಾಶ್ ಎನ್ ಜಿಂಗಾಡೆ..

Friday, 10 June 2016

Suma Vasanth Bantwal- Thatt Anta Heli Episodeಇದು ಥಟ್ ಅಂತ ಹೇಳಿ ಅನ್ನೋ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ನಾನು ಬರೆದ " ನಮ್ಮ ದಿನಾಚರಣೆಗಳು " ಅನ್ನೋ ಪುಸ್ತಕವನ್ನು ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ನೀಡುತ್ತಿರುವುದು. 

Saturday, 4 June 2016

Selfee

ಸೆಲ್ಫಿ

ಬೆಳಗ್ಗೆಯಿಂದ ನನ್ನ ಸುಕೋಮಲವಾದ ವದನವನ್ನು ಬಹು ಬಗೆಯಲ್ಲಿ ಸೆರೆಹಿಡಿಯಬೇಕೆಂದು ಮೋಬೈಲನ್ನು ತೆಗೆದುಕೊಂಡು ಎಲ್ಲಾ ಕೋನದಿಂದ ತಿರುಗಿಸಿ ತಿರುಗಿಸಿ ನನ್ನ ನಾ ಸೆರೆ ಹಿಡಿದುಕೊಳ್ಳಲು ನೋಡಿದೆ. ಯಾವ ಯ್ಯಾಂಗಲ್ ನಿಂದಲೂ ನಾನು ಚನ್ನಾಗಿ ಕಾಣಲಿಲ್ಲ. ನಾನು ರಾಜ್ ಕುಮಾರ್ ನಂತೆಯೋ, ದೇವಲೋಕದ ಇಂದ್ರನಂತೆಯೋ ಕಾಣಬೇಕೆಂದು ಹಂಬಲಿಸಿದ್ದು ತಪ್ಪಾಯಿತೋ ಏನೋ.....? ಆದರೂ ನನ್ನ ಪ್ರಯತ್ನ ಬಿಡಲಿಲ್ಲ . ಮುಂದುವರೆಸಿದೆ. ನಾನೇ ಹಲವು ರೀತಿಯಲ್ಲಿ ಭಿನ್ನ ಭಿನ್ನ ಭಂಗಿಯಲ್ಲಿ ಕುಳಿತು ನೋಡಿದೆ. ಹಿಂದೆ, ಮುಂದೆ, ಅಕ್ಕ-ಪಕ್ಕ, ಮೇಲೆ, ಕೆಳಗೆ ಎಲ್ಲಾ ರೀತಿಯಲ್ಲೂ ಕುಳಿತೆ. ಹೀಗೆ ಮಗ್ಗುಲನ್ನು ಬದಲಿಸಿ, ಬದಲಿಸಿ ನೋಡಿದೆ. ಎಷ್ಟೇ ಹೊಸ ಹೊಸ ಭಂಗಿಯಲ್ಲಿ ಪ್ರಯತ್ನಿಸಿ ನೋಡಿದರೂ ಹಳೆಯ ಬ್ಲ್ಯಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಂತೆಯೇ ಕಾಣುತ್ತಿದ್ದೆ. ನನ್ನ ಈ ಸೆಲ್ಫಿ ತೆಗೆಯುವ ಮಂಗನಾಟವನ್ನು ಯಾರಾದರೂ ನೋಡಿದರೆ ಎಷ್ಟು ನಗುತ್ತಿದ್ದರೋ ಏನೋ..ನಗುವುದು ಹಾಗಿರಲಿ ನನ್ನನ್ನೇ ಹುಚ್ಚನೆಂದು ಅಂದು ಕೊಂಡರೇ..? ಅಂದು ಕೊಂಡರೂ ತಪ್ಪೇನಿಲ್ಲ ಬಿಡಿ ನನ್ನ ಸೆಲ್ಫಿಯ ಗೀಳು ಹೆಚ್ಚು ಕಡಿಮೆ ಹಾಗೇ ಇತ್ತು. ನಾನು ಎಲ್ಲಾ ರೀತಿಯ ಹಾವ ಭಾವವನ್ನು ನನ್ನ ಮೊಬೈಲ್ ಕ್ಯಾಮರಾದ ಮುಂದೆ ಪ್ರದರ್ಶಿಸುತ್ತಿದ್ದೆ. ಅಂದರೆ ವಕ್ರ ವಕ್ರವಾಗಿಯೂ ಅಂಕುಡೊಂಕಾಗಿಯೂ... ಮುಖದಲ್ಲಿ ನವರಸಗಳೆಲ್ಲವನ್ನು ಕಿತ್ತು ಬರುವ ಹಾಗೆ ತೋರಿಸಿಕೊಂಡೆ. ಯಾವ ರಸವೂ ನನ್ನ ಮುಖಕ್ಕೆ ಚಂದವಾಗಿ ಕಾಣಿಸಲೇ ಇಲ್ಲ. ಒಂದೊಂದು ಮುಖದ ರಸಭಾವಗಳೂ ಸಹ ಒಬ್ಬೊಬ್ಬ ವಿಲನ್ ಗಿಂತಲೂ ಕಡಿಮೆಯೇನೂ ಇರಲಿಲ್ಲ. ಹೀಗೆ ಕಾಣುತ್ತಿದ್ದ ವಿಲನ್ ಗಳಿಗೆ ಇನ್ನಷ್ಟು ವಕ್ರತನ, ಕುರೂಪವನ್ನು ಮಿಕ್ಸ್ ಮಾಡಿ ನೋಡಿದರೆ ಹೇಗಿರುತ್ತಿದ್ದರೋ ಅದಕ್ಕಿಂತ ಕೆಟ್ಟದಾಗಿಯೇ ನನ್ನ ಮುಖ ಕಾಣುತ್ತಿತ್ತು. ಕೊನೆಗೆ ಮೊಬೈಲ್ ಸರಿಯಿಲ್ಲವೇನೋ ಎಂದು ಅನುಮಾನಿಸಿದೆ. ಎಕ್ಟ್ರ ಫೋಟೋ ಎಡಿಟರ್ ಅಪ್ಲಿಕೇಷನ್ ನಲ್ಲಿ ನಾನು ತೆಗೆದ ಪೋಟೋವನ್ನು ಮಿಕ್ಸಿಂಗ್ ಮಾಡಿ, ಸ್ವಲ್ಪ ಆಧುನಿಕತೆಯ ಟಚ್ ಕೊಟ್ಟು ನೋಡಿದೆ. ಆದರೆ ಅದರಲ್ಲಿ ಅತಿಯಾದ ಮೇಕಪ್ ನಿಂದಾಗಿ ಯಕ್ಷಗಾನ ಕಲಾವಿದನಂತೆಯೂ. ಬೂದಿ ಬಳಿದುಕೊಂಡ ಅಘೋರಿಯಂತೆ ಕಂಡೆನೇ ಹೊರತು ನಾನಂದು ಕೊಂಡಂತೆ ರಾಜಕುಮಾರನ ರೂಪ ನನ್ನಲ್ಲಿ ಬರಲೇ ಇಲ್ಲ.

ನಾನು ನನ್ನ ಪೋಟೋ ಶೂಟ್ ಮಾಡಿಕೊಂಡ ಸ್ಥಳಗಳನ್ನು ಹೇಳಿಕೊಂಡರೆ ನಕ್ಕು ಬಿಡುತ್ತೀರಿ. ಬೆಡ್ ರೂಮಲ್ಲಿ ಮಂಚದ ಮೇಲೆ... ಮನೆಯ ಮುಂಬಾಗ ಯಾರೋ ನಿಲ್ಲಿಸಿದ ಕಾರಿನ ಮುಂದೆ ನಿಂತು... ಅಡುಗೆ ಮನೆಯಲ್ಲಿ ಸೌಡನ್ನು ಹಿಡಿದು... ಅಡುಗೆಯವನ ರೂಪದಲ್ಲಾದರೂ ಚನ್ನಾಗಿ ಕಾಣುವೆನೇನೋ ಎಂಬ ಪ್ರಯತ್ನವೂ ಸಹ ನಡೆದು ಹೋಯಿತು... ಹಾಲ್ ನಲ್ಲಿ ತಲೆಗೆ ಟವಲ್ ಸುತ್ತಿಕೊಂಡು ನೋಡಿದೆ... ಇವೆಲ್ಲಾ ಪ್ರಯತ್ನದ ನಂತರ ಬಾತ್ ರೂಮ್ ನಲ್ಲಿ ಸೇವಿಂಗ್ ಮಾಡುವಾಗಲೂ ಒಂದೆರೆಡು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡೆ.. ಯಾರಾದರೂ ಇಂತಹ ಫೋಟೋಗಳನ್ನು ನೋಡಿದರೆ ನಗದೇ ಇರುತ್ತಾರೆಯೇ...? ಖಂಡಿತ ನೋಡಿ ನಗುವರು ಎಂದು ಅನುಮಾನಿಸಿ ಆ ಪೋಟೋಗಳನ್ನು ಅಲ್ಲೇ ಡಿಲೀಟ್ ಮಾಡಿಬಿಟ್ಟೆ. ಸ್ಥಳ ಯಾವುದಾದರೇನು.. ರೂಪ ಅದೆಯಲ್ಲವೇ..? ಆದರೂ ಸಹ ಚನ್ನಾಗಿ ಕಾಣಲೇ ಬೇಕು ಎನ್ನುವ ಛಲ ಇದೆಯಲ್ಲ ಅದು ನನ್ನಲ್ಲಿ ಶತಾಯು ಗತಾಯುವಾಗಿ ನಡೆಯುತ್ತಲೇ ಇತ್ತು...

ಇವತ್ತು ಇಷ್ಟೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಕ್ಕೆ ಒಂದು ಕಾರಣವೂ ಇದೆ. ಅಮ್ಮ ಒಂದು ವಾರದ ಹಿಂದೆ ನನಗೆ ಗೊತ್ತಿಲ್ಲದೆ ನನಗೆ ಹೆಣ್ಣು ನೋಡುತ್ತಿದ್ದರು. ನನಗೆ ಈ ವಿಷಯ ಗೊತ್ತಾಗುವ ವೇಳೆಗಾಗಲೇ ನನ್ನ ಅತಿ ಕೆಟ್ಟದಾದ ಫೋಟೋವೊಂದನ್ನು ಹುಡುಗಿಯ ಕಡೆಯವರಿಗೆ ಕಳುಹಿಸಿಕೊಟ್ಟಿದ್ದಳು. ಅಂತಹ ಕೆಟ್ಟ ಪೋಟೋ ಕಳುಹಿಸಿದ ವಿಷಯ ಗೊತ್ತಾದ ಕೂಡಲೇ ನಾನು ಕೆಂಡಮಂಡಲವಾದೆ. ಅಂತಹ ಪೋಟೋ ಯಾವ್ ಹುಡುಗಿ ತಾನೆ ಒಪ್ಕೋತಾಳೆ ಹೇಳಿ... ಒಂದು ಆಂಗಲ್ ನಲ್ಲಿ ಹಳೆಯ ಬ್ಲಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಾಗಪ್ಪನಂತೆ ಕ್ರೂರ ದೃಷ್ಠಿ ತೋರಿಸಿದ್ದೆ. ಇನ್ನೊಂದು ಕಡೆಯಿಂದ ನೋಡಿದರೆ ಥೇಟ್ ವಜ್ರುಮುನಿಯ ಖಳ ನೋಟ.. ಹುಡುಗ ಚಾಕೊಲೇಟ್ ಹೀರೋ ತರಹ ಇರಬೇಕು ಎಂದು ಬಯಸುವ ಹುಡುಗಿಯರು ಯಾರು ತಾನೆ ಇಂತಹ ಫೋಟೋ ಒಪ್ಕೋತಾರೆ ಹೇಳಿ... ಅಮ್ಮ ಆರಿಸಿ ಕಳುಹಿಸಿ ಈ ಫೋಟೋದಿಂದಲೇ ಈ ಸಂಬಂದ ಮುರಿದು ಬೀಳುವುದು ಗ್ಯಾರಂಟಿಯಾಗಿತ್ತು.. ಹುಡುಗಿ ಕಡೆಯವರನ್ನು ನೋಡಿ ಎಂತಹ ಫೋಟೋ ಕಳುಹಿಸಿದ್ದರು ಗೊತ್ತಾ...? ಹುಡುಗಿ ಅಪ್ಸರೆ. ಕೈ ತೊಳೆದುಕೊಂಡು ಮುಟ್ಟುವ ಹಾಗಿದ್ದಳು.. ಅವಳ ಜೊತೆ ನನ್ನನ್ನು ಹೋಲಿಸಿಕೊಂಡರೆ ಅವರು ನನ್ನನ್ನು ಮುಟ್ಟಿ ಕೈ ತೊಳೆದುಕೊಳ್ಳಬೇಕು ಬಿಡಿ.

ಅವಳ ಆ ಸುಂದರ ರೂಪ ನೋಡಿ ನಾನು ಕನಸಿನ ಲೋಕದಲ್ಲಿ ವಿಹರಿಸಲಾರಂಭಿಸಿದೆ. ಗುಲಾಬಿ ಕೆನ್ನೆಗಳು, ಸಾಫ್ಟ್ ಆಗಿ ಕಾಣುತ್ತಿದ್ದ ಆ ನಾಸಿಕ, ಗಾಳಿಗೆ ಉಯ್ಯಾಲೆಯಾಡುತ್ತಿರುವ ಆ ಮುಂಗುರುಳುಗಳು, ಜೇನಿನ ಅಧರಗಳು, ಅಬ್ಬಾ....!! ರವಿವರ್ಮನ ಕಲಾ ಪ್ರಪಂಚವೇ ಅದರಲ್ಲಿ ಅಡಗಿತ್ತು. ಮೊನಾಲಿಸಾಳ ನಗು ಸಹ ಈ ಪೋಟೋ ಮುಂದೆ ಕಳಪೆಯಂತೆ ಕಂಡಿತು. ಅಂತಹ ಗಂಧರ್ವ ಕನ್ಯೆಗೆ ನನ್ನ ಕೆಟ್ಟ ಚಿತ್ರ ಪಟ ಕಳುಹಿಸಿದರೆ ನನಗೆ ಹೇಗಾಗುವುದಿಲ್ಲ ಹೇಳಿ...

ಒಂದು ವಾರದ ನಂತರ ಹುಡುಗಿ ನೋಡುವ ಶಾಸ್ತ್ರ ನಡೆಯಿತು. ಹುಡುಗಿ ಘಮ ಘಮಿಸುವ ಉಪ್ಪಿಟ್ಟಿನೊಂದಿಗೆ ಬಂದಳು. ಫೋಟೋದಲ್ಲಿ ನೋಡಿದ ಹಾಗೆಯೇ ಹುಡುಗಿಯು ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಅವಳನ್ನು ನೋಡುತ್ತಿದ್ದ ಹಾಗೆ ಅಮ್ಮ ಇವರಿಗೆ ಕಳುಹಿಸಿದ್ದ ನನ್ನ ಕೆಟ್ಟ ಫೋಟೋ ನೆನಪಿಗೆ ಬಂತು. ಇಂತಹ ಅಪ್ಸರೆ ನನ್ನನ್ನು ಒಪ್ಪಲು ಸಾಧ್ಯವೇ..ಸಿಟ್ಟಿನಿಂದ ಅಮ್ಮನ ಕಡೆಯೊಮ್ಮೆ ನೋಡಿದೆ. ಅಮ್ಮ ಆ ತರಹದ ಪೋಟೋ ಕಳುಹಿಸಿದ್ದರಿಂದ ನನ್ನ ಪಾಲಿಗೆ ವಿಲನ್ ನಂತೆ ಕಾಣುತ್ತಿದ್ದಳು. ಒಂದು ರೀತಿ ಹಳೆ ಸಿನಿಮಾದ ಘಟವಾಣಿ ಪಾತ್ರಧಾರಿ ಉಮಾ ಶಿವಕುಮಾರಿಯಂತೆ ಹೊಸ ಸೀರೆ ಧರಿಸಿ ಕುಳಿತ್ತಿದ್ದಳು. ಮತ್ತೊಮ್ಮೆ ಹುಡುಗಿಯನ್ನು ನೋಡಿದೆ ಅದೇನು ನಯ... ಅದೇನು ನಾಜೂಕು... ನಾಚಿಕೆಯ ಆಭರಣವನ್ನು ಧರಿಸಿ, ರೇಷ್ಮೆಯಂತೆ ಹೊಳೆಯುವ ಮೈ ಬಣ್ಣದಿಂದ ಕಣ್ಣು ಕುಕ್ಕುವಂತೆ ಕುಳಿತ್ತಿದ್ದಳು.

ಅಷ್ಟರಲ್ಲಿ ಹುಡುಗಿಯ ತಂದೆ ಮೌನ ಮುರಿದರು

"ನಮ್ ಹುಡುಗಿ ಮಾನಸಗೆ ನೀವು ಕಳುಹಿಸಿದ ಫೋಟೋ ತುಂಬಾ ಹಿಡಿಸಿದೆ. ಸಿನಿಮಾ ಹೀರೋ ತರ ಇದ್ದಾರೆ ಅಂತ ಅವಳು ತನ್ನ ಗೆಳತಿಯರ ಹತ್ತಿರ ಹೇಳ್ಕೊಳ್ತಾ ಇದ್ಳು. ಇಷ್ಟು ದಿನ ಎಷ್ಟೊಂದು ಹುಡುಗರನ್ನು ನೋಡಿದ್ವಿ ಯಾವ್ ಹುಡುಗನೂ ಅವಳಿಗೆ ಇಷ್ಟ ಆಗಿರ್ಲಿಲ್ಲ. ನಮ್ ಹುಡುಗಿಗೆ ಹಣ ಆಸ್ತಿ ಮುಖ್ಯವಲ್ಲ ಹುಡುಗ ಚನ್ನಾಗಿದ್ದರೆ ಸಾಕು. ನೀವು ಕಳುಹಿಸಿದ ಫೋಟೋನೇ ನಮ್ಮ ಹುಡುಗಿಗೆ ಮೋಡಿ ಮಾಡಿಬಿಡ್ತು ನೋಡಿ.... ಅದರಂತೆ ಹುಡುಗನು ಸಹ ಹ್ಯಾಂಡ್ ಸಮ್ ಆಗಿದಾನೆ ಬಿಡಿ"

ಅವರು ನಮ್ಮಮ್ಮನ ಕಡೆ ನೋಡಿ ಹೇಳಿದರು. ನನಗೆ ಸಂತೋಷವಾಯಿತು ಅಮ್ಮನ ಕಡೆಗೆ ನೋಡಿದೆ. ಅಮ್ಮ ಪಂಡರಿಬಾಯಿಯಂತೆ ಶಾಂತ ರೂಪವನ್ನು ಧರಿಸಿ ಮುಗುಳ್ನಗೆ ಬೀರಿ ಕುಳಿತ್ತಿದ್ದಳು. ಅಮ್ಮ ಈಗ ನನ್ನ ಕಣ್ಣಿಗೆ ಬದಲಾದ ರೂಪದಲ್ಲಿ ಕಂಡಳು. ಈ ಮನಸ್ಸೇ ಹಾಗೆ ನಾವು ಸಂತೋಷವಾಗಿದ್ದಾಗ ಎಲ್ರೂ ಚೆನ್ನಾಗಿಯೇ ಕಾಣಿಸ್ತಾರೆ. ಇಲ್ಲದಿದ್ದರೆ ವಿಲನ್ ಗಳು. ಅಮ್ಮ ಕಳುಹಿಸಿದ ಈ ನನ್ನ ಕೆಟ್ಟ ಫೋಟೋ ಇನ್ನೊಬ್ಬರ ಮನಸ್ಸು ಕದಿಯುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನಮಗೆ ನಾವು ಯಾವತ್ತೂ ಸುಂದರವಾಗಿ ಕಾಣುವುದಿಲ್ಲ. ಕನ್ನಡಿಯ ಮುಂದೆ ಎಷ್ಟು ಸರಿ ನೋಡಿಕೊಂಡರು ನಾವು ಸುಂದರರು ಅಂತ ಅನ್ನಿಸುವುದಿಲ್ಲ. ಈ ಕಾರಣದಿಂಗಲೇ ಈ ಸೆಲ್ಫಿ ತೆಗೆಯುವ ಹುಚ್ಚು ಎಲ್ಲರಲ್ಲಿಯೂ ಅಂಟಿಕೊಂಡಿರುತ್ತೋ ಏನೋ...ಕ್ಲಿಕ್ಕಿಸುವುದು, ಅಪ್ ಲೋಡ್ ಮಾಡುವುದು, ಗೆಳೆಯರ ಕಮೆಂಟ್ಸ್ ಓದಿ ಖುಷಿ ಪಡುವುದು. ನಾವು ಇನ್ನೊಬ್ಬರನ್ನು ಹೊಗಳಿ ಕಾಮೆಂಟ್ಸ್ ಮಾಡುವುದಕ್ಕಿಂತ ಇನ್ನೊಬ್ಬರಿಂದ ಹೊಗಳಿಸಿಕೊಂಡರೆ ಮಾತ್ರ ನಮಗೆ ತೃಪ್ತಿ ಸಿಗುತ್ತದೆ. ನಾವು ಸುಂದರ ವಾಗಿರುವುದನ್ನು ಸುಂದರ ಎನ್ನುವುದರಲ್ಲಿ ತಪ್ಪೇನಿದೆ ಹೇಳಿ...

ಹೀಗೆ ಯೋಚಿಸುತ್ತಾ ಕುಳಿತ್ತಿರುವಾಗಲೇ ಅಮ್ಮ ಅಪ್ಪ ಎಲ್ಲರೂ ಎದ್ದು ಹುಡುಗಿಯ ಹೊಸ ಮನೆಯನ್ನು ನೋಡಲು ಹೊರಟರು. ಹುಡುಗಿ ಮಾತ್ರ ಇನ್ನೂ ತಲೆತಗ್ಗಿಸಿ ನಾಚಿಕೆಯಿಂದ ಕುಳಿತ್ತಿದ್ದಳು. ಯಾರೂ ಇರಲಿಲ್ಲ. ತಕ್ಷಣ ಅವಳ ಪಕ್ಕ ಹೋಗಿ ಕುಳಿತೆ. ಇನ್ನಷ್ಟು ನಾಚಿಕೊಂಡಳು.
"ನೀವು ಅಪ್ಸರೆಯಂತೆ ಸುಂದರವಾಗಿದ್ದೀರಿ"
ಎನ್ನುತ್ತಾ ಅವಳ ಕೆನ್ನೆಯನ್ನು ಹಿಂಡಿದೆ. ಅವಳು ನಾಚಿ ಇನ್ನೊಂದು ಕೆನ್ನೆ ಕೆಂಪಾಗಿಸಿಕೊಂಡಳು...

" ನಿಮ್ಮಷ್ಟು ಸುಂದರವಿಲ್ಲ ಬಿಡಿ.."

ಎಂದು ಹೇಳುತ್ತಾ ಅವಳು ಇನ್ನೇನು ನನ್ನ ಎದೆಯ ಗೂಡಿನಲ್ಲಿ ಗುಬ್ಬಚ್ಚಿಯಂತೆ ಅವಿತುಕೊಳ್ಳಲು ಮುಂದಾದಳು. ಕೂಡಲೇ ಅವಳ ತಂಗಿ ನಮ್ಮ ಮೊದಲ ಪ್ರೇಮ ಸ್ಪರ್ಶಕ್ಕೆ ಅಡ್ಡಲಾಗಿ ಬಂದಳು...
"ಏನ್ ಭಾವ... ನಿಮ್ ಫೋಟೋ ಅಕ್ಕನಿಗೆ ಎಷ್ಟು ಮೋಡಿ ಮಾಡಿದೆ ಗೊತ್ತಾ... ನಿಮ್ ಫೋಟೋ ನನ್ಹತ್ರ ಇಟ್ಕೊಂಡು ಅಕ್ಕನಿಗೆ ಎಷ್ಟು ಆಟ ಆಡಿಸಿದ್ದೀನಿ ಗೊತ್ತಾ.?
ಎನ್ನುತ್ತಾ ನನ್ನ ಫೋಟೋ ಕೈಯಲ್ಲಿ ಹಿಡಿದು ಮತ್ತೆ ತನ್ನಕ್ಕನಿಗೆ ಸತಾಯಿಸಲು ಮುಂದಾದಳು.
ಮಾನಸ ಮಾತ್ರ ತಂಗಿಯ ಮಾತಿಗೆ ಉತ್ತರಿಸದೇ ನಾಚಿಕೆಯಿಂದ ಮೌನವಾಗಿ ಕುಳಿತ್ತಿದ್ದಳು. ನಾನು ಅಂದುಕೊಂಡಿದ್ದ ಆ ಕೆಟ್ಟ ಫೋಟೋ ಈ ತರಹದ ಮೋಡಿ ಮಾಡಿದ್ದು ನೋಡಿ ನಾನು ತುಟಿಯಂಚಿನಲ್ಲೇ ನಕ್ಕು ಸುಮ್ಮನಾದೆ. ಅವತ್ತೇ ನನಗೂ ಗೊತ್ತಾಗಿದ್ದು. ನಾವು ಸಹ ರೂಪ ಲಾವಣ್ಯದಲ್ಲಿ ಒಂದು ಕೈ ಮೇಲೆನೇ ಇದ್ದೕವಿ ಅಂತ. ನನಗೆ ಮಾತ್ರ ನನಗಿಂತ ಸುಂದರ ಹುಡುಗಿ ಸಿಕ್ಕಳೆಂಬ ಸಂತಸ ಇತ್ತು. ಅವಳು ನನ್ನ ಕಡೆ ನೋಡುತ್ತಿದ್ದ ಆ ಕಳ್ಳ ನೋಟ ಎದೆಯೊಳಗೆ ಇನ್ನಷ್ಟು ಕಚಗುಳಿಯನ್ನು ಇಟ್ಟಿತ್ತು.....
- ಪ್ರಕಾಶ್ ಎನ್ ಜಿಂಗಾಡೆ